ಹುಚ್ಚ ಮತ್ತು ಪ್ರಭಾವಿತ
ಸುತ್ತಲ ಜಗತ್ತು ಬದಲಾಗುತ್ತಿದೆ
ಅವನು ಹಾಗೇ ಇದ್ದಾನೆ
ಬರಸಿಡಿದ ಕೊರಡಿನ ಹಾಗೆ
ಇಲ್ಲಿಲ್ಲ
ಅವನೊಳಗೂ ಕೆಲವು ಕಿಡಿಗಳಿವೆ
ಚಿಮ್ಮಿ ಹಾರುತ್ತವೆ
ಕೆಲವೊಮ್ಮೆ
ಹೊರಜಗತ್ತಿಗೆ ಕಾಣದ ಹಾಗೆ
ಚೀರುತ್ತದೆ
ಅವನ ಹೃದಯವೂ ನನ್ನ ಹಾಗೆ
ಕನಲಿದಂತೆ
ವಿದ್ಯುತ್ ಬಡಿದಂತೆ
ಮಗದೊಮ್ಮೆ
ತೇಲಿ ಬಂದ ದೆವ್ವ ಮೆಟ್ಟಿದಂತೆ
ಅವನೂ ಬುದ್ದಿವಂತನೇ
ಒಮ್ಮೊಮ್ಮೆ, ಆದರೆ
ಕಳೆದುಕೊಂಡಿದ್ದಾನೆ
ಎಲ್ಲ ಆಸೆಗಳನು
ಬದುಕಿನ ಬಗ್ಗೆ
ಭರವಸೆಗಳನು, ಎಲ್ಲಿಯೋ
ಕಳೆದುಹೋದ ಸಮತೋಲನ
ಆಗೀಗ ಸಿಡಿದೇಳುವ ಕೋಪದ
ಅವನ ಕಂಪನ
ನೋಡುತ್ತಿದ್ದರೆ
ಒಡನೆ ಮುದುರುತ್ತವೆ
ಎಲ್ಲ ದೂರುಗಳು
ಮಾಯವಾಗುತ್ತವೆ
ಇಲ್ಲದ ಕೊರತೆಗಳು
ಮೂಡುತ್ತವೆ ಒಮ್ಮೆಲೆ
ಬದುಕಬೇಕೆನ್ನುವ
ತೀವ್ರ ಹಂಬಲವು
ಆಧ್ಯಾತ್ಮ ಪರಮಾತ್ಮ
ಎಲ್ಲ ಧನಾತ್ಮಕ ಚಿಂತನೆಗಳು ….
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.