(ನನ್ನನ್ನು ಚೆನ್ನಾಗಿ ಅರಿತ ನಿನ್ನ ಹೇಗಾದರೂ ಬೆಂಬತ್ತಿ ಸುತ್ತಿ ಉಡುಗೊರೆ ಪಡೆವೆ)
ಇಳಂ ಕುಮಣನ್‌ ತನ್ನ ಅಣ್ಣನ ಆಳ್ವಿಕೆಯನ್ನು ವಶಪಡಿಸಿಕೊಂಡಾಗ, ಕಾಡಿನಲ್ಲಿ ಬಾಳುತ್ತಿದ್ದ ಕುಮಣನ್‌ ಎಂಬ ಅರಸನ ಬಳಿ ಪೆರುಂದಲೈ ಸಾತ್ತನಾರ್‌ ಹಾಡುವ ಹಾಡೇ ಇದು! ಎಂದು ಓದುಗರಾದ ನಮ್ಮ ಮನ ಗಾಬರಿಗೊಳಗಾಗುತ್ತದೆ. ಆದರೆ ಹಾಡಿದ ಕವಿ ಎಂಥ ಇಕ್ಕಟ್ಟಿನಲ್ಲಿ ಇದ್ದಿದ್ದರೆ ಕುಮಣನ್‌ʼ ನ ಬಳಿ ಹೋಗಿರಬೇಕು ಎಂಬುದನ್ನು ಕವಿಯ ಹಾಡು ಸ್ಪಷ್ಟಪಡಿಸುತ್ತದೆ.

ಹಲವು ಜೋಡಿಸಿದ,
ಮೀಟುವಂತಹ ತಂತಿಯನ್ನುಳ್ಳ
ಚರ್ಮದಿಂದ ಹೊದಿಸಲ್ಪಟ್ಟ ಒಳ್ಳೆಯ ಯಾಳ್! (ಚಿಕ್ಕ ವೀಣೆ)
ಲೇಪ ಹಚ್ಚಿದ ಮದ್ದಳೆ ಆದಿಯಾಗಿ
ಇವುಗಳೆಲ್ಲ ಇರುವ
ನಾಟ್ಯತಂಡದವರ ಬಡತನವ ನೀಗಿಸುವ
ಮನೆತನದಲ್ಲಿ ಹುಟ್ಟಿದವನೇ!ʼ
ಶ್ರೇಷ್ಠ ಯುದ್ಧ ಮಾಡುವ ಕುಮಣನೇ!
ನನ್ನ ಮನೆಯಲ್ಲಿ
ಅಡುಗೆ ಮಾಡುವುದನ್ನೇ
ಹಲವು ದಿವಸ
ಮರೆತು ಹೋದುದರಿಂದ
ಒಲೆಯ ಬದಿಗಳು ಸವೆಯದೆ
ಎತ್ತರವಾಗಿವೆ.
ಆ ಒಲೆಯಲ್ಲಿ
ಅಣಬೆಗಳು ಅರಳಿವೆ
ದೇಹವ ಕೃಶವಾಗಿಸುವ ಹಸಿವಿನಿಂದ
ನನ್ನ ಹೆಂಡತಿ ಬಾಡಿ ಬಸವಳಿದಿದ್ದಾಳೆ;
ಅವಳ ಎದೆಯಲಿ ಹಾಲು ಉತ್ಪತ್ತಿಯಾಗದ ಕಾರಣ
ಸಣ್ಣಗಾಗಿ, ಬಾಡಿ, ರಂಧ್ರ ಮುಚ್ಚಿ
ಅವಳ ಮೊಲೆ ಬರಿದಾಗಿ ಹೋಯಿತು
ಅಳುವ ತನ್ನ ಮಗು ಆ ಮೊಲೆಯಲಿ
(ಹಾಲು) ಕುಡಿವಾಗಲೆಲ್ಲಾ ಕಂದನ ಮೊಗವ ನೋಡಿ
ಅವಳ ಎವೆಗಳು ಕಣ್ಣೀರಿನಿಂದ ನೆನೆಯುತ್ತಿವೆ
ಅವಳ ವ್ಯಥೆಯ ಕಂಡ ನಾನು,
ನಮ್ಮ ಬವಣೆಯ ನೀಗಿಸುವುದಕ್ಕೆ
ಅರ್ಹನು ನೀನೇ ಎಂದೆಣಿಸಿ
ನಿನ್ನ ಬಳಿ ಬಂದೆನು.

ನನ್ನ ಬಡತನದ ಸ್ಥಿತಿಯನ್ನು
ನಿನ್ನಿಂದ ಚೆನ್ನಾಗಿ ಅರಿಯಲು ಸಾಧ್ಯ ಎಂಬುದರಿಂದ
ನನ್ನ ಇಂಥ ಸ್ಥಿತಿಯಲ್ಲೂ
ನಿನ್ನ ಸುತ್ತಿ ಬಳಸಿಯಾದರೂ,
ಉಡುಗೊರೆ ಪಡೆಯದೆ ಇರಲಾರೆ.

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯ
ವಿಶೇಷಾಂಶ: ಕುಮಣನೆಂಬ ಅರಸನ ತಮ್ಮ ತನ್ನ ಅಣ್ಣನ ನಾಡನ್ನು ಅಪಹರಿಸಿಕೊಂಡಿದ್ದಾಗ ಕಾಡಿನಲ್ಲಿ ಬಾಳುತ್ತಿದ್ದ ಕುಮಣನ್‌ ಎಂಬ ಅರಸನ ಬಳಿ ಕವಿ ಪೆರುಂದಲೈಸಾತ್ತನಾರ್‌ ಹಾಡುವ ಹಾಡು ಇದು. ಎಂಥ ಕಿತ್ತು ತಿನ್ನುವ ಬಡತನವಿದ್ದರೆ ಹೀಗೆ ಹೋಗಿ ಹಾಡಿರಬೇಕು ಅನ್ನಿಸುತ್ತದೆ.