ಒಂಟಿಮರ, ಹಕ್ಕಿಗೂಡು ಮತ್ತು ಸಂವಾದ
ಇಲ್ಲಿ ನಾವಿಬ್ಬರೇ
ಕಾಡುವ ಕಣ್ಣುಗಳಿಲ್ಲ
ಹೊಲಸು ಸದ್ದೆಬ್ಬಿಸುವ ಬಾಯಿಗಳು
ಭಾರತ್ ಬಂದ್ ಘೋಷಿಸಿವೆ
ಆಗಾಗ ಇಣುಕುಹಾಕುತ್ತವೆ
ಹಾವುಗಳು ನಾಲಗೆಯಾಡಿಸುತ್ತಾ
‘ತಿನ್ನುವುದಕ್ಕೇನೂ’ ಇಲ್ಲ ಎಂದು
ತಿಳಿದ ಕೂಡಲೇ ಸರಿದುಹೋಗುತ್ತವೆ
ಮಾತಿಲ್ಲದೆಯೇ
ಕೆಸರಿನಲ್ಲಿ ಬಿದ್ದು ಉರುಳಾಡಿದ
ಹಂದಿಗಳು ಬಂದು ಮೈಯ್ಯುಜ್ಜುತ್ತವೆ
ಕ್ಷಣಕ್ಕೊಮ್ಮೆ ಊಳಿಡುವ ಗುಳ್ಳೆನರಿಗಳು
ಬಂದು ಯಾರ್ಯಾರದ್ದೋ ಕಿವಿ ಕಚ್ಚುತ್ತವೆ
ನಡುನಡುವೆ ಆನೆಯ ಗತ್ತು
ಸಿಂಹದ ಗರ್ಜನೆ
ಚಿರತೆಯ ಓಟ
ಮತ್ತು
ಜಿಂಕೆ, ಮೊಲಗಳ ಸಾವು
ಎಲ್ಲವನ್ನೂ ಕಂಡ
ನಾನು ಮತ್ತಷ್ಟು ಗಟ್ಟಿಯಾಗುತ್ತೇನೆ
ನೀನು ಮತ್ತಷ್ಟು ಇಂಪಾಗಿ
ಧ್ವನಿ ಹೊಮ್ಮಿಸುತ್ತೀಯ
ಹಾಗೆಯೇ ಕಾಲ ಕಳೆದುಹೋಗುತ್ತದೆ…
ಕಾಲ ಕಳೆದು-
ಹೋಗುತ್ತದೆ…

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
ಕವನ ಈಗಿನ ಕಾಲಕ್ಕೆ ಪ್ರಸ್ತುತ ವಾಗಿದೆ.