“ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್‌ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್‌ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ……”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ವಾಟ್ಸಾಪ್ ಚಾಟ್” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
12-03-2021
ಸುರೇಶ: …………
ರಮೇಶ: ………..
ಸುರೇಶ: …………
ರಮೇಶ: …………
ಸುರೇಶ: …………
ರಮೇಶ: ಮತ್ತೇನು ವಿಷಯ?
ಸುರೇಶ: ನಿನ್ನ ಸರ್ಕಾರ ಸರಿಯಿಲ್ಲ.
ರಮೇಶ: ಯಾಕೆ ಏನಾಗಿದೆ?
ಸುರೇಶ: ಹೊಂದಾಣಿಕೆ ಇಲ್ಲವಲ್ಲ!
ರಮೇಶ: ಯಾರು ಹೇಳಿದ್ದು ನಿನಗೆ?
ಸುರೇಶ: ನಿನ್ನೆ ನೀನೇ ಹೇಳಿದ್ದೆಯಲ್ಲ, ನಿನ್ನ ಪಕ್ಷದವರಿಗೆ ನಿನ್ನ ಮೇಲೆ ನಂಬಿಕೆ ಇಲ್ಲ. ಸಂಶಯ ಇದೆ, ಅದೂ ಇದೂ ಅಂತ!
ರಮೇಶ: ಹಾಗೇನೂ ಇಲ್ಲ. ಎಲ್ಲಾ ಪಕ್ಷದಲ್ಲಿಯೂ ಇರುವ ಹಾಗೆ ನಮ್ಮಲ್ಲೂ ಸ್ವಲ್ಪ ಅಸಮಾಧಾನ ಇದೆ. ಅದು ಎಲ್ಲಾ ಕಡೆಯೂ ಇರುವಂಥದ್ದೇ. ಯಾಕೆ ನಿನ್ನ ಪಕ್ಷದಲ್ಲಿಯೂ ಅಂಥದ್ದೇ ಅಸಮಾಧಾನ, ಅತೃಪ್ತಿ ಇಲ್ಲವಾ?
ಸುರೇಶ: ಹೌದು! ಇದೆ. ಪಕ್ಷದವರಿಗೆ ನನ್ನ ಮೇಲೇನೂ ಅಸಮಾಧಾನ ಇಲ್ಲ. ನನಗೆ ಅವರ ಬಗ್ಗೆ ಇದೆ. ಅಂತಹ ಅತೃಪ್ತಿ ಇದ್ದದ್ದಕ್ಕೇ ತಾನೇ ನಾನು ನಿನಗೆ ನಿನ್ನೆ ಮೆಸೇಜ್ ಮಾಡಿದ್ದು!
ರಮೇಶ: ಅದೆಲ್ಲಾ ನನಗೆ ಬೇಕಿಲ್ಲ. ಅಷ್ಟಕ್ಕೂ ಇನ್ನೊಂದು ಪಕ್ಷದ ಬಗ್ಗೆ, ಸರ್ಕಾರದ ಬಗ್ಗೆ ನೀನ್ಯಾಕೆ ಮಾತನಾಡುವುದು? ಆ ಅಧಿಕಾರ ನಿನಗೆ ಕೊಟ್ಟದ್ದು ಯಾರು?
ಸುರೇಶ: ನನಗೆ ಮೊದಲಿನಿಂದಲೂ ಇಂತಹ ಆಸಕ್ತಿಯೆಲ್ಲಾ ಜಾಸ್ತಿ. ನಿನಗೆ ಗೊತ್ತಿದೆಯಲ್ಲಾ? ಕಾಲೇಜಿನಲ್ಲಿದ್ದಾಗಲೇ ನಾನು ಇಂತಹ ಆಟವೆಲ್ಲಾ ಆಡಿದ್ದೇನೆ. ಕಾಲೇಜು ಕ್ಯಾಂಟಿನ್ನಿನಲ್ಲಿ ಕೂತು ನಾವು ಎಷ್ಟು ಸಲ ಇಂತಹದ್ದೆಲ್ಲ ಮಾತಾಡಿಲ್ಲ! ನಿನಗೆ ಅದೆಲ್ಲಾ ಮರೆತುಹೋಗಿರಬಹುದು. ನನಗೆ ಚೆನ್ನಾಗಿ ನೆನಪಿದೆ. ನಾನು ಮರೆತಿಲ್ಲ.
ರಮೇಶ: ಮೊದಲಿನದ್ದನ್ನು ಈಗಲೂ ಮನಸ್ಸಲ್ಲಿಟ್ಟುಕೊಂಡರೆ ಆಗುವುದಿಲ್ಲ. ನಿನ್ನೆಯೇ ಹೇಳಿದ್ದೇನಲ್ಲ. ನೋಡು, ನೇರವಾಗಿ ಹೇಳಿಬಿಡುತ್ತೇನೆ, ಕಾಲೇಜಿನಲ್ಲಿ ನನ್ನ ಜೊತೆಗಿದ್ದೆ ಎಂಬ ಒಂದೇ ಕಾರಣಕ್ಕೆ ನಿನ್ನ ಕಾಂಟ್ಯಾಕ್ಟ್ ಉಳಿಸಿಕೊಂಡಿರುವುದು. ನನ್ನ ಪಕ್ಷ ಸರಿಯಿಲ್ಲ ಅಂತ ಏನೇನೋ ಮಾತನಾಡಿದರೆ ನಾನು ಮೆಸೇಜ್ ಮಾಡುವುದನ್ನೇ ನಿಲ್ಲಿಸಿಬಿಡುತ್ತೇನೆ.
ಸುರೇಶ: ಆಯ್ತು, ಇನ್ನು ಆ ವಿಷಯ ಮಾತನಾಡುವುದಿಲ್ಲ. ಆದರೆ ನೀನೊಮ್ಮೆ ಯೋಚಿಸಿ ನೋಡು, ಇಷ್ಟವಿಲ್ಲದ ಆ ಪಕ್ಷದಲ್ಲಿ ಇರುವುದಕ್ಕಿಂತ ನನ್ನ ಪಕ್ಷಕ್ಕೆ ಬರುವುದೇ ಒಳ್ಳೆಯದು.
ರಮೇಶ: ಇಲ್ಲ, ಪಕ್ಷಾಂತರ ಮಾಡುವುದೆಲ್ಲಾ ನನಗಿಷ್ಟ ಇಲ್ಲ. ಇದು ಚುನಾವಣೆಯ ಸಮಯ ಬೇರೆ. ಈಗ ಇಂಥದ್ದೆಲ್ಲ ನಡೆದರೆ ನನ್ನ ಹೆಸರೇ ಹಾಳಾಗುತ್ತದೆ.
ಸುರೇಶ: ಸರಿ, ಮತ್ತೇನು ವಿಶೇಷ?
ರಮೇಶ: ವಿಶೇಷ ಏನಿಲ್ಲ. ನನಗೀಗ ಸ್ವಲ್ಪ ಕೆಲಸ ಇದೆ. ಇನ್ಯಾವಾಗಲಾದರೂ ಮೆಸೇಜ್ ಮಾಡುತ್ತೇನೆ. ಗುಡ್ ನೈಟ್.
ಸುರೇಶ: ಸರಿ. ಅರ್ಥ ಆಯಿತು. ಗುಡ್ ನೈಟ್. ಸ್ವೀಟ್ ಡ್ರೀಮ್ಸ್.
***
13-03-2021
ಸುರೇಶ: ನಮಸ್ಕಾರ. ಹೇಗಿದ್ದೀಯಾ? ನಿನ್ನ ಪಕ್ಷದವರ ಅಸಮಾಧಾನ ಕಡಿಮೆ ಆಗಿದೆಯಾ?
ರಮೇಶ: ನಾನು ನಿನ್ನೆಯೇ ಹೇಳಿದ್ದೆನಲ್ಲ, ಇಂತಹ ವಿಷಯಗಳೆಲ್ಲಾ ನಿನಗೆ ಬೇಡವಾದದ್ದು ಅಂತ!
ಸುರೇಶ: ಅಲ್ಲ, ಅಂತಹ ಅಸಮಾಧಾನ ಇದ್ದರೆ ನನ್ನ ಪಕ್ಷಕ್ಕೆ ಬಂದುಬಿಡು ಅಂತ ಹೇಳುವುದಕ್ಕೆ ಮೆಸೇಜ್ ಮಾಡಿದ್ದು.
ರಮೇಶ: ಇಲ್ಲ, ಬರುವುದಿಲ್ಲ ಅಂತ ನಿನ್ನೆಯೇ ಹೇಳಿದ್ದೇನಲ್ಲ!
ಸುರೇಶ: ನೋಡು, ನನ್ನ ಪಕ್ಷಕ್ಕೆ ಬಂದರೆ ಒಳ್ಳೆಯ ಆಫರ್ ಇದೆ. ನನ್ನ ಹೆಸರಿನಲ್ಲಿ ಸಿಟಿ ಔಟ್‌ಸೈಡ್‌ನಲ್ಲಿ ಹತ್ತೆಕರೆ ಭೂಮಿ ಇದೆ. ಅಕೌಂಟಿಗೆ ಇಪ್ಪತ್ತೈದು ಲಕ್ಷ ಕ್ರೆಡಿಟ್ ಆಗುತ್ತದೆ. ಚಿನ್ನ ಕೆ.ಜಿ.ಗಟ್ಟಲೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪಕ್ಷದಲ್ಲಿ ಪ್ರೀತಿ ಇದೆ.
ರಮೇಶ: ಇಲ್ಲ. ನನಗಿದ್ಯಾವುದರ ಅಗತ್ಯವೂ ಇಲ್ಲ.
ಸುರೇಶ: ಒಮ್ಮೆ ಯೋಚಿಸಿ ನೋಡು. ಜಗಳ, ಸಂಶಯ ಇರುವವರ ಜೊತೆಗಿರುವುದಕ್ಕಿಂತ ಪ್ರೀತಿ ಕೊಡುವವರ ಪಕ್ಷದಲ್ಲಿರುವುದು ಒಳ್ಳೆಯದು.
ರಮೇಶ: ಇಲ್ಲ, ನನಗಿದೆಲ್ಲಾ ಇಷ್ಟ ಇಲ್ಲ. ಮೊದಲು ಬೇಕಾಬಿಟ್ಟಿಯಾಗಿ ಬದುಕಿದ್ದೇನೆ. ಈಗಲಾದರೂ ಮರ್ಯಾದೆ ಉಳಿಸಿಕೊಂಡು ಬದುಕಬೇಕು. ಹೀಗೆಲ್ಲಾ ಹೇಳುವುದೇ ಬೇಡ ನೀನು.
ಸುರೇಶ: ನೀನು ನನ್ನ ಪಕ್ಷಕ್ಕೆ ಬರುತ್ತೀಯಾದರೆ ನಾನು ಏನು ಮಾಡಲೂ ಸಿದ್ಧ. ನೀನು ಮೊದಲು ನನ್ನ ಪಕ್ಷದಲ್ಲೇ ಇದ್ದದ್ದನ್ನು ನೆನಪು ಮಾಡಿಕೋ.
ರಮೇಶ: ಏನೇನೋ ಹೇಳಿ, ಆಸೆ ಹುಟ್ಟಿಸಿ ನನ್ನ ಮನಸ್ಸು ಹಾಳು ಮಾಡುವುದು ಬೇಡ. ನನಗಿದರಲ್ಲೇ ನೆಮ್ಮದಿ ಇದೆ. ನನ್ನ ಪಕ್ಷ ಏನು ಕೊಡುತ್ತದೋ ಅದರಲ್ಲೇ ಸುಖ ಕಂಡುಕೊಳ್ಳುತ್ತೇನೆ.
ಸುರೇಶ: ಇರುವುದರಲ್ಲಿ ಸುಖ ಕಂಡುಕೊಳ್ಳುವುದಕ್ಕಿಂತ ಹೆಚ್ಚಿನ ನೆಮ್ಮದಿ ಎಲ್ಲಿ ಸಿಗುತ್ತದೋ ಅದನ್ನು ಆಯ್ಕೆ ಮಾಡುವುದೇ ಒಳ್ಳೆಯದು. ಇನ್ನೊಮ್ಮೆ ಯೋಚಿಸಿ ನೋಡು.
ರಮೇಶ: ಸರಿ. ನನ್ನ ಪಕ್ಷದವರು ಕಾಲ್ ಮಾಡುತ್ತಿದ್ದಾರೆ. ಆಮೇಲೆ ಮೆಸೇಜ್ ಮಾಡುತ್ತೇನೆ.
***
14-03-2021
ಸುರೇಶ: ಹಾಯ್ ಬಾಸ್. ನಾನು ನಿನ್ನೆ ಹೇಳಿದ್ದರ ಬಗ್ಗೆ ಏನು ಯೋಚನೆ ಮಾಡಿದೆ?
ರಮೇಶ: ನಾನೇನೂ ಯೋಚನೆ ಮಾಡಿಲ್ಲ. ನನಗಿದೆಲ್ಲ ಇಷ್ಟ ಇಲ್ಲ.
ಸುರೇಶ: ನೋಡು ಸಂನ್ಯಾಸಿಯ ಹಾಗೆ ಮಾತಾಡುವುದೆಲ್ಲ ಬೇಡ. ಕಾಲೇಜಿನಲ್ಲಿದ್ದಾಗ ನೀನು ಹೇಗಿದ್ದೆ? ಒಮ್ಮೆ ನೆನಪು ಮಾಡಿಕೋ. ಆಗ ಹಾಗಿದ್ದವನು ಈಗ ಏನೂ ಬೇಡ ಎನ್ನುವ ವಿರಾಗಿಯ ಹಾಗೆ ಆಡುವುದೆಂದರೆ ನನಗೆ ತಮಾಷೆ ಎನಿಸುತ್ತಿದೆ.
ರಮೇಶ: ನಾನೇನೂ ವಿರಾಗಿ ಅಲ್ಲ. ಏನೇನೋ ಹೇಳಿ ನನ್ನನ್ನು ಕೆಣಕುವುದು ಬೇಡ. ನನಗೂ ನಿನ್ನ ಪಕ್ಷ ಸೇರುವ ಆಸೆ ಇದೆ. ಆದರೆ ಈಗ ಅದೆಲ್ಲಾ ಆಗುವಂತಹದ್ದಲ್ಲ.
ಸುರೇಶ: ಯಾಕೆ ಆಗುವಂಥದ್ದಲ್ಲ? ನೀನು ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ. ಯಾವುದಕ್ಕೂ ನೀನು ನಾಳೆ ಸಂಜೆ ನಾವು ಮೊದಲು ಕಾಲೇಜಿನಲ್ಲಿದ್ದಾಗ ಹೋಗುತ್ತಿದ್ದೆವಲ್ಲ, ಆ ಹೋಟೆಲ್ಲಿಗೆ ಬಾ. ಮಾತಾಡೋಣ.
ರಮೇಶ: ………
ಸುರೇಶ: ಯಾಕೆ ಉತ್ತರವೇ ಇಲ್ಲ. ನಾನು ಹೇಳಿದ್ದು ಅರ್ಥವಾಯಿತಲ್ಲ. ಆ ಹೋಟೆಲ್ಲಿನಲ್ಲಿ ರೂಮ್ ಮಾಡಿರುತ್ತೇನೆ. ಬಾ. ಬೇರೆ ಯಾರೂ ಇರುವುದಿಲ್ಲ. ನಾವಿಬ್ಬರು ಮಾತ್ರ. ನನ್ನ ಪಕ್ಷ ಸೇರಿದರೆ ಏನೆಲ್ಲಾ ಲಾಭ ಇದೆ ಎಂದು ನಿನಗೇ ಅರ್ಥ ಆಗುತ್ತದೆ. ಬಾ.
ರಮೇಶ: ಸರಿ. ನಾಳೆ ಬರುತ್ತೇನೆ.
ಸುರೇಶ: ನನಗೆ ನಿಜವಾಗಿಯೂ ನೀನು ಹೀಗೆ ಹೇಳಿದ್ದು ಖುಷಿ ಇದೆ. ನನ್ನ ಪಕ್ಷವೇ ಬೇಡ ಎಂದು ಹೇಳುತ್ತಿದ್ದವ ಈಗ ನನ್ನ ಜೊತೆಗೆ ನೇರವಾಗಿ ಮಾತನಾಡುವುದಕ್ಕಾದರೂ ಸಿದ್ಧ ಇದ್ದೀಯಲ್ಲಾ? ನನಗದೇ ಸಂತೋಷ. ಸರಿ ನಾಳೆ ಮಾತಾಡೋಣ. ಗುಡ್ ಗುಡ್ ಗುಡ್ ನೈಟ್.
ರಮೇಶ: ಏನೇನೋ ಹೇಳಿ, ಆಸೆ ಹುಟ್ಟಿಸಿ ನನ್ನ ಮನಸ್ಸು ಹಾಳು ಮಾಡುವುದು ಬೇಡ. ನನಗಿದರಲ್ಲೇ ನೆಮ್ಮದಿ ಇದೆ. ನನ್ನ ಪಕ್ಷ ಏನು ಕೊಡುತ್ತದೋ ಅದರಲ್ಲೇ ಸುಖ ಕಂಡುಕೊಳ್ಳುತ್ತೇನೆ.
16-03-2021
ರಮೇಶ: ನನಗೇನೋ ನಾವು ತಪ್ಪು ಮಾಡಿದ್ದೇವೆ ಎಂದೆನಿಸುತ್ತಿದೆ.
ಸುರೇಶ: ಯಾಕೆ? ಏನಾಯಿತು?
ರಮೇಶ: ಅದೇ ನಿನ್ನೆ ಹೋಟೆಲ್‌ನಲ್ಲಿ…
ಸುರೇಶ: ಅದರಲ್ಲೇನೂ ತಪ್ಪಿಲ್ಲ. ನಿನಗೆ ನಿನ್ನ ಪಕ್ಷ ಇಷ್ಟ ಇಲ್ಲ. ಅದಕ್ಕೋಸ್ಕರ ನನ್ನ ಪಕ್ಷ ಸೇರಿಕೊಳ್ಳುವ ಮನಸ್ಸು ಮಾಡಿದ್ದೀಯ. ನಿನ್ನೆ ನಡೆದದ್ದು ಅದರ ಪೂರ್ವಭಾವಿ ಸಿದ್ಧತೆ ಅಷ್ಟೇ.
ರಮೇಶ: ಆದರೂ ನನಗಿದೆಲ್ಲಾ ತಪ್ಪು ಎನಿಸುತ್ತಿದೆ. ಎಲ್ಲೋ ನೀತಿ ತಪ್ಪಿ ನಡೆಯುತ್ತಿದ್ದೇನೆ, ನನ್ನನ್ನು ನಂಬಿದವರಿಗೆ ಮೋಸ ಮಾಡುತ್ತಿದ್ದೇನೆ ಎನ್ನುವ ಭಾವನೆ. ನನ್ನ ಪಕ್ಷದವರಿಗೇನಾದರೂ ತಿಳಿದರೆ ನನ್ನ ಕಥೆ ಅಷ್ಟೇ.
ಸುರೇಶ: ಪಕ್ಷವನ್ನೇ ಬಿಟ್ಟು ಬರುವುದಕ್ಕೆ ಹೊರಟ ನಿನಗೆ ಇನ್ನು ಆ ಪಕ್ಷದ ಮುಲಾಜೇನಿದೆ?
ರಮೇಶ: ಇಲ್ಲ, ನನಗಿದು ಸರಿ ಕಾಣುತ್ತಿಲ್ಲ. ನಿನ್ನೆ ನಡೆದದ್ದು ಅಲ್ಲಿಗೇ ಮುಗಿಯಿತು. ಇನ್ನು ನನ್ನನ್ನು ನನ್ನಷ್ಟಕ್ಕೇ ಬಿಟ್ಟುಬಿಡು. ಈ ಮೆಸೇಜ್ ಮಾಡುವುದೆಲ್ಲಾ ಬೇಡ.
ಸುರೇಶ: ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್‌ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್‌ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ.
ರಮೇಶ: ಇಲ್ಲ. ಇನ್ನು ನನ್ನ ಸುದ್ದಿಗೆ ಬಂದರೆ ಜಾಗ್ರತೆ. ನನ್ನ ಹೆಸರೇನಾದರೂ ಹಾಳಾದರೆ ನಿನ್ನನ್ನಂತೂ ಸುಮ್ಮನೆ ಬಿಡುವುದಿಲ್ಲ. ಇನ್ನುಮುಂದೆ ನನಗೆ ಮೆಸೇಜ್ ಮಾಡುವುದು ಬೇಡ.
ಸುರೇಶ: ಇಲ್ಲ, ಅದೆಲ್ಲಾ ನಡೆಯುವುದಿಲ್ಲ. ಮೆಸೇಜ್ ಮಾಡುತ್ತಲೇ ಇರುತ್ತೇನೆ…
###ನಂಬರ್ ಬ್ಲಾಕ್ಡ್###
***
11-03-2021
9449******: ನಮಸ್ಕಾರ. ನಾನು ಯಾರು ಅಂತ ಗೊತ್ತಾಯಿತಾ?
9449******: ನಮಸ್ಕಾರ ಸರ್. ನಾನು ಯಾರು ಅಂತ ಗೊತ್ತಾಯಿತಾ? ನನಗೆ ನಿಮ್ಮ ಪರಿಚಯ ಇದೆ.
9449******: ನಮಸ್ಕಾರ ಸರ್. ಏನಿದು ಮೆಸೇಜ್‌ಗೆ ಉತ್ತರವೇ ಇಲ್ಲ. ದಯವಿಟ್ಟು ಮೆಸೇಜ್ ಮಾಡಿ. ನಿಮಗೊಂದು ಮುಖ್ಯ ವಿಷಯ ಹೇಳುವುದಕ್ಕಿದೆ.
9900******: ನಮಸ್ಕಾರ. ಇದು ಯಾರು ಅಂತ ಗೊತ್ತಾಗಲಿಲ್ಲ. ಏನು ವಿಷಯ ಹೇಳುವುದಕ್ಕಿದೆ ಹೇಳಿ.
9449******: ನನ್ನ ಹೆಸರು ಸುಹಾಸಿನಿ ಅಂತ. ನಾನು ಓದಿದ್ದು ಸಣ್ಣಬಸವ ಕಾಲೇಜಿನಲ್ಲಿ.
9900******: *ನಗುವಿನ ಸಿಂಬಲ್*
9449******: ಗೊತ್ತಾಯಿತಾ ನಾನು ಯಾರು ಅಂತ?
9900******: ಗೊತ್ತಾಗದೇ ಇರುತ್ತದಾ? ಈ ಸರ್ ನೀವು ಅದೂ ಇದೂ ಎಲ್ಲಾ ಯಾಕೆ? ಮೊದಲಿನ ಹಾಗೆ ಏಕವಚನದಲ್ಲೇ ಮಾತಾಡಬಹುದಲ್ಲಾ?
ಹೆಸರು ಹಿಡಿದೇ ಕರೆಯಬಹುದು. ಏನೂ ತೊಂದರೆ ಇಲ್ಲ.
9449******: ಸರಿ ನೀನು ಹೇಳಿದ ಮೇಲೆ ಮುಗಿಯಿತು ರಮೇಶ.
9900******: ನನ್ನ ನಂಬರ್ ಕೊಟ್ಟದ್ದು ಯಾರು?
9449******: ಇವತ್ತು ಬೆಳಗ್ಗೆ ಮಾರ್ಕೆಟ್‌ನಲ್ಲಿ ನಿನ್ನನ್ನು ನೋಡಿದೆ. ನಿನ್ನ ಸುತ್ತ ಹತ್ತಿಪ್ಪತ್ತು ಮಂದಿ ಇದ್ದರು. ಮಾತನಾಡಿಸುವುದಕ್ಕೆ ಬಂದರೆ ನೀನು ಕಾರು ಹತ್ತಿ ಹೊರಟಾಗಿತ್ತು. ನಿನ್ನಲ್ಲೊಮ್ಮೆ ಮಾತನಾಡಲೇಬೇಕು ಅನಿಸಿತು. ನಮ್ಮ ಕ್ಲಾಸ್‌ಮೇಟ್ ಇದ್ದಾಳಲ್ಲ ಶಶಿಕಲಾ, ಅವಳಿಗೆ ಕಾಲ್ ಮಾಡಿ ನಿನ್ನ ನಂಬರ್ ತೆಗೆದುಕೊಂಡೆ. ರಾಜಕೀಯ ಅದೂ ಇದೂ ಅಂತೆಲ್ಲಾ ಓಡಾಡುತ್ತಿದ್ದೀಯಂತೆ, ಅವಳೇ ಹೇಳಿದಳು.
9900******: ಹೌದು! ರಾಜಕೀಯದಲ್ಲಿದ್ದೇನೆ. ನಾನು ಕಾಲೇಜಿನಲ್ಲಿದ್ದಾಗಲೂ ರಾಜಕೀಯದವರ ಸಂಪರ್ಕ ಇತ್ತಲ್ಲ!
9449******: ಕಾಲ್ ಮಾಡಲಾ?
9900******: ಅಯ್ಯಯ್ಯೋ, ಕಾಲ್ ಮಾಡುವುದು ಬೇಡ. ಮೆಸೇಜ್ ಮಾತ್ರ.
9449******: ಯಾಕೆ?
9900******: ಕಾರಣ ಇದೆ. ಅದೆಲ್ಲಾ ಈಗ ಬೇಡ. ಮತ್ತೆ ನೀನು ಹೇಗಿದ್ದಿ?
9449******: ಹ್ಞಾ. ಚೆನ್ನಾಗಿದ್ದೇನೆ. ಮೊದಲು ಕಾಲೇಜಿನಲ್ಲಿ ಇದ್ದ ಹಾಗೆಯೇ. ಆದರೆ ಒಂದೇ ವ್ಯತ್ಯಾಸ. ಆಗ ನೋಡುವುದಕ್ಕೂ ಚಂದ ಇದ್ದೆ. ಮನಸ್ಸೂ ಚಂದ ಇತ್ತು. ಈಗ ಮನಸ್ಸು ಸರಿಯಿಲ್ಲ.
9900*******: ಯಾಕೆ ಏನಾಗಿದೆ? ಏನಾದರೂ ಪ್ರಾಬ್ಲಂ?
9449*******: ಹೌದು, ಗಂಡನದ್ದು.
9900*******: ಗಂಡ ಸರಿಯಿಲ್ಲವಾ?
9449*******: ಇಪ್ಪತ್ನಾಲ್ಕು ಗಂಟೆಯೂ ಕೆಲಸ ಕೆಲಸ ಕೆಲಸ. ಹೆಂಡತಿ ಒಬ್ಬಳಿದ್ದಾಳೆ ಅನ್ನುವುದೇ ಗೊತ್ತಿಲ್ಲದ ಆಸಾಮಿ. ಹೊರಗೆ ಸುತ್ತಾಡಿಸುವುದು, ತಿನ್ನಿಸುವುದು ಯಾವುದೂ ಇಲ್ಲ. ಯಾವಾಗಲೂ ಆ ಲ್ಯಾಪ್‌ಟಾಪ್ ಹಿಡಿದುಕೊಂಡು ಕೂತಿರುತ್ತಾರೆ.
9900******: ಹ್ಞೂ.
9449******: ನಿನ್ನಲ್ಲಿ ಹೇಳುವುದಕ್ಕೆ ನನ್ನಗೇನೂ ಮುಜುಗರ ಇಲ್ಲ. ರಾತ್ರಿ ಊಟವಾದ ತಕ್ಷಣ ನಿದ್ದೆ ಅಷ್ಟೇ. ಬೇರೇನೂ ಇಲ್ಲ. ನಿಜ ಹೇಳಬೇಕಾದರೆ ಗಂಡ ಹೆಂಡತಿಯರಂತೆಯೇ ನಾವಿಲ್ಲ.
9900******: ಹ್ಞೂ.
9449******: ಮತ್ತೆ ನಿನ್ನ ಮದುವೆಯಾಯಿತಾ?
9900******: ಆಗಿದೆ. ಮೂರು ವರ್ಷ ಆಯಿತು.
9449******: ಹೇಗಿದ್ದಾಳೆ ನಿನ್ನ ಹೆಂಡತಿ? ನೀನಂತೂ ಚೆನ್ನಾಗಿಯೇ ನೋಡಿಕೊಳ್ಳುತ್ತೀಯ. ನನಗೆ ಗೊತ್ತಿದೆ.
9900******: ನಾನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇನೆ. ಆದರೆ ಅವಳಿಗೆ ಸಂಶಯ ಜಾಸ್ತಿ. ಯಾವ ಹುಡುಗಿಯರ ಜೊತೆಯೂ ಮಾತಾಡುವ ಹಾಗಿಲ್ಲ. ಮೊನ್ನೆ ನಮ್ಮ ಪಕ್ಷದ ಒಬ್ಬ ಹುಡುಗಿ ಚುನಾವಣೆಯ ಬಗ್ಗೆ ಮಾತನಾಡುವುದಕ್ಕೆ ಕಾಲ್ ಮಾಡಿದ್ದಳು. ಇವಳಿಗೆ ಒಂದೇ ಸಂಶಯ. ಅದೇ ವಿಷಯ ಹಿಡಿದು ಮೂರು ದಿನ ಜಗಳ ಮಾಡಿದಳು. ನೆಮ್ಮದಿಯೇ ಇಲ್ಲ.
9449******: ನಿನ್ನ ಜೊತೆಗೂ ಖುಷಿಪಡದ ಅವಳೆಂತಹ ಹೆಂಡತಿ! ನಿನಗೆ ಹೆಣ್ಣಿನ ಮನಸ್ಸನ್ನು ತಿಳಿದುಕೊಳ್ಳುವ ಶಕ್ತಿ ಇದೆ. ಹೆಣ್ಣಿಗೇನು ಬೇಕು ಏನು ಬೇಡ ಎನ್ನುವುದೆಲ್ಲಾ ಗೊತ್ತಿದೆ. ಕಾಲೇಜಿನಲ್ಲಿದ್ದಾಗಲೇ ನಾನು ಗಮನಿಸಿದ್ದೆ. ಅದೆಷ್ಟು ಸಲ ನಾವು ಸುತ್ತಾಡುವುದಕ್ಕೆ ಹೋಗಿಲ್ಲ! ಮಾತನಾಡಿಲ್ಲ! ಅದೊಂದು ದಿನ ಕಾಲೇಜಿಗೆ ಚಕ್ಕರ್ ಹೊಡೆದು ಪಾರ್ಕ್ಗೆ ಹೋಗಿ ಕೂತಿದ್ದೆವಲ್ಲ!
9900******: ಹೋ ಮಹರಾಯ್ತಿ. ನಿನಗೆ ಅದೆಲ್ಲಾ ಇನ್ನೂ ನೆನಪಿದೆಯಾ?
9449******: ಅದೂ ನೆನಪಿದೆ. ಅದರ ನಂತರದ್ದೂ ನೆನಪಿದೆ. ಅಲ್ಲಿಯೂ ಅಷ್ಟೇ, ನನಗೇನು ಬೇಕಿತ್ತೋ, ನಾನೇನನ್ನು ಬಯಸಿದ್ದೆನೋ ನೀನು ಅದನ್ನೇ ನನಗೆ ಕೊಟ್ಟದ್ದು.
9900******: ನಮ್ಮ ಜೀವನದ ಸಂತಸದ ದಿನಗಳು ಅದೆಲ್ಲ.
9449******: ಎಷ್ಟು ಚೆನ್ನಾಗಿತ್ತಲ್ಲ ಆ ದಿನಗಳು! ಸತ್ಯ ಹೇಳುತ್ತೇನೆ ರಮೇಶ, ನಾವೇ ಮದುವೆ ಆಗಬೇಕಿತ್ತು. ಗಂಡಹೆಂಡತಿ ಆಗಬೇಕಿತ್ತು.
9900******: ಆಗಲಿಲ್ಲವಲ್ಲ! ಇನ್ಯಾಕೆ ಆ ವಿಷಯ?
9449******: ಇಲ್ಲ, ಈಗ ನೆಮ್ಮದಿ ಇಲ್ಲದಿರುವಾಗಲೇ ಹಿಂದಿನ ನೆಮ್ಮದಿಯ ಕ್ಷಣಗಳು ನೆನಪಾಗುತ್ತಿರುವುದು. ಇಲ್ಲಿ ನನ್ನ ಗಂಡನಿಂದ ನನಗೆ ನೆಮ್ಮದಿ ಇಲ್ಲ. ಆದರೂ ಅವನ ಜೊತೆಗೆ ಬದುಕುತ್ತಿದ್ದೇನೆ. ಅಲ್ಲಿ ನಿನ್ನ ಹೆಂಡತಿ ಅನುಮಾನ ಪಡುವವಳು. ಆದರೂ ಅವಳ ಜೊತೆಗೆ ನೀನು ಬದುಕುತ್ತಿದ್ದೀಯ.
9900******: ಹೌದು.
9449******: ನಾವೀಗಲೂ ಒಂದಾಗಬಾರದೆಂದೇನೂ ಇಲ್ಲವಲ್ಲ!
9900******: ಅಯ್ಯಯ್ಯೋ ಈಗ ಅದೆಲ್ಲಾ ಸಾಧ್ಯ ಇಲ್ಲ.
9449******: ಸರಿ, ನಾನು ನಿನಗೆ ಮೆಸೇಜ್ ಮಾಡುತ್ತಿರುವುದಕ್ಕೆ ಏನೂ ತೊಂದರೆ ಇಲ್ಲವಲ್ಲ?
9900******: ತೊಂದರೆ ಇಲ್ಲ ಅಂತ ಹೇಳುವ ಹಾಗಿಲ್ಲ. ಮೊನ್ನೆ ಹುಡುಗಿ ಕಾಲ್ ಮಾಡಿದ್ದಕ್ಕೆ ಸಂಶಯಪಟ್ಟಿದ್ದಳು. ಈಗ ನೀನು ಪದೇ ಪದೇ ಮೆಸೇಜ್ ಮಾಡಿದರೂ ಅದೇ ಆಗುತ್ತದೆ.
9449******: ಹಾಗಾದರೆ ಒಮ್ಮೆ ನೇರವಾಗಿಯೇ ಭೇಟಿ ಮಾಡಬಹುದಲ್ಲ!
9900******: ಅಯ್ಯೋ! ಅದಂತೂ ಇನ್ನೂ ಕಷ್ಟ. ಯಾರಾದರೂ ನೋಡಿ ಇವಳಿಗೆ ಹೇಳಿದರೆ ನನ್ನ ಕಥೆ ಅಷ್ಟೇ.
9449******: ಸರಿ ಒಂದು ಕೆಲಸ ಮಾಡೋಣ. ನೀನು ನನ್ನ ಈ ನಂಬರನ್ನು ಸುರೇಶ ಎಂದು ಸೇವ್ ಮಾಡಿಟ್ಟುಕೋ. ನಾನು ಮೆಸೇಜ್ ಮಾಡುವಾಗ ರಾಜಕೀಯದ ವಿಷಯ ಹೇಳುವ ಹಾಗೆಯೇ ಮೆಸೇಜ್ ಮಾಡುತ್ತೇನೆ. ಅದು ನಿನಗೆ ಅರ್ಥವಾಗುವ ಹಾಗಿರುತ್ತದೆ. ಈಗ ನನ್ನ ಸಂಸಾರ ಎಂದು ಹೇಳಬೇಕಿದ್ದರೆ ನನ್ನ ಪಕ್ಷ ಎಂದು ಮೆಸೇಜ್ ಮಾಡುತ್ತೇನೆ. ಆಗ ನಿನ್ನ ಹೆಂಡತಿ ಮೊಬೈಲ್ ಚೆಕ್ ಮಾಡಿದರೂ ಅವಳಿಗೆ ಗೊತ್ತಾಗುವುದಿಲ್ಲ.
9900******: ಸರಿ.
9449******: ರಮೇಶ, ನಾನು ಆಗ ಹೇಳಿದ್ದರ ಬಗ್ಗೆ ಒಂದುಸಲ ಸೀರಿಯಸ್ಸಾಗಿ ಯೋಚನೆ ಮಾಡು. ಹಿಂದಿನಂತೆಯೇ ನಾವು ಒಟ್ಟಾಗಿ ನೆಮ್ಮದಿಯಿಂದಿರಬಹುದು.
9900******: ಅದೆಲ್ಲಾ ಹಿಂದಿನ ವಿಷಯ. ಅದರ ಬಗ್ಗೆ ಈಗ ಮಾತಾಡುವುದು ಬೇಡ. ಒಳ್ಳೆಯ ರೀತಿಯಲ್ಲಿ ನನಗೆ ಮೆಸೇಜ್ ಮಾಡುತ್ತಿರು. ನಾನು ರಿಪ್ಲೈ ಮಾಡುತ್ತೇನೆ. ಅದು ಬಿಟ್ಟು ಬೇರೆ ಮಾತನಾಡಿದರೆ ನನಗೆ ಕೋಪ ಬರುತ್ತದೆ. ಆಗೇನೋ ಕಾಲೇಜಿನಲ್ಲಿ ಓದುತ್ತಿದ್ದೆ. ಇನ್ನೂ ಹುಡುಗಾಟ. ಏನೇನೋ ಆಗಿದೆ. ಈಗ ನನಗೆ ನನ್ನ ಕೆರಿಯರ್ ಮುಖ್ಯ. ಸೋ, ಪ್ಲೀಸ್ ಅರ್ಥ ಮಾಡಿಕೋ.
9449******: ಸರಿ.
9900******: ಇವತ್ತಿನ ಈ ಚಾಟನ್ನು ನಾನೂ ಡಿಲಿಟ್ ಮಾಡುತ್ತೇನೆ. ನೀನೂ ಡಿಲಿಟ್ ಮಾಡಿಬಿಡು.
9449******: ನಾನು ಡಿಲಿಟ್ ಮಾಡಬೇಕಾದ ಅಗತ್ಯ ಇಲ್ಲ. ಈ ನನ್ನ ಪಕ್ಷದವರಿಗೆ ಅದೆಲ್ಲಾ ಗೊತ್ತಾಗುವುದೇ ಇಲ್ಲ (*ನಗುವಿನ ಸಿಂಬಲ್*)
9900******: ಸರಿ ಇನ್ನೊಮ್ಮೆ ಮೆಸೇಜ್ ಮಾಡೋಣ.
9449******: ಸರಿ. ಗುಡ್ ನೈಟ್.
9900******: ಗುಡ್ ನೈಟ್.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.