ಭೀಮಸೇನನೆಂಬ ಹೆಸರಿನ ನಾನು…

1
ಭೀಮಸೇನನೆಂಬ ಹೆಸರಿನ ನಾನು
ವ್ಯಾಸಭಾರತದಲ್ಲಿ
ನನ್ನವರಷ್ಟೂ ಮಂದಿಯನ್ನು
ಹೆಗಲ ಮೇಲೆ ಹೊತ್ತುಕೊಂಡೆ
ಅರಗಿನ ಮನೆಗೆ ಬೆಂಕಿ ಬಿದ್ದಾಗ
ಮಾತ್ರವಲ್ಲ;
ಬಂಧಗಳಿಗೆ ಕೊಳ್ಳಿ ಬಿದ್ದ
ಎಲ್ಲಾ ಗಳಿಗೆಯಲ್ಲೂ

ಬಡಪಾಯಿಗಳ ಬದುಕನ್ನು ಕಿತ್ತು ತಿನ್ನುವ
ಬಕಾಸುರನ ಹಸಿವಿಗೆ ಮದ್ದರೆದೆ
ವಸ್ತ್ರಾಪಹರಣದ ನೆಪದಲ್ಲಿ ಬೆತ್ತಲಾದ
ಧೂರ್ತರನ್ನು ಯಮಪುರಿಗಟ್ಟುವ
ಶಪಥ ಮಾಡಿದೆ
ದ್ರೌಪದಿಯ ಅಪಹರಣಕ್ಕೆಂದು ಬಂದ
ಸೈಂಧವನ ಮಂಡೆ ಬೋಳಿಸಿದೆ
ಸೌಗಂಧಿಕಾ ಪುಷ್ಪವನ್ನು ತಂದುಕೊಟ್ಟು
ಪಂಚವಲ್ಲಭೆಯ ಮನವನ್ನು ಅರಳಿಸಿದೆ
ಕೀಚಕನ ಕಾಮುಕತೆಯನ್ನು
ಇನ್ನಿಲ್ಲವಾಗಿಸಿದೆ

ರಣಾಂಗಣದಲ್ಲಿ ದುಶ್ಯಾಸನ ಎದುರಾದಾಗ
ಹಸಿದ ಖಡ್ಗವಾದೆ
ಅನಲಜಾತೆಗೆ ಮಾಡಿದ ಅವಮಾನ
ನೆನಪಾಗಿ ದೇಹ ಉರಿವಂತೆ
ಹೊಡೆದೆ; ಬಡಿದೆ
ರಕ್ತವನ್ನು ಮುಡಿಗೆ ಎರೆದೆ

ಆದರೂ ದಕ್ಕಿದ್ದು ಏನಿಲ್ಲ
ತತ್ಕಾಲದ ಸೊತ್ತಾಗಿ ಹೋಯಿತು
ನನ್ನ ದೇಹಬಲದ ಪ್ರದರ್ಶನ
ತಂತ್ರ- ಕುತಂತ್ರಗಳ ನಡುವೆ
ಬೌದ್ಧಿಕತೆ ದೈಹಿಕತೆಗಳ
ಸೆಣಸಾಟದಲ್ಲಿ ನಾನು
ಹತ್ತರಲ್ಲಿ ಒಂದಾಗದೆ
ಹತ್ತರೊಡನೆ ಇನ್ನೊಂದಾಗಿ
ಉಳಿದುಬಿಟ್ಟೆ

2
ರನ್ನನ ಗದಾಯುದ್ಧವಂತೂ
ನನಗೆ ಮೀಸಲಾಗಿಯೇ ಇತ್ತು
ಬೆಂಕಿಯಿಂದ ಜನಿಸಿಬಂದವಳು
ನನ್ನೆದೆಯಲ್ಲಿ ಅಗ್ನಿಯನ್ನು
ಅರಳಿಸುವ ಉತ್ಸಾಹ ತೋರಿದಳು
ಅವಳ ದ್ವೇಷದ ಬೆಂಕಿ
ಸೇರಿತು
ನನ್ನ ಸಾಮರ್ಥ್ಯವೆಂಬ ವಾಯುವಿನೊಡನೆ
ಸೇಡು ತೀರಿಸುವ ಜ್ವಾಲೆ
ಕೆರಳಿನಿಂತಿತ್ತು ನಮ್ಮಿಬ್ಬರ ಎದೆಯಲ್ಲಿ

ವೈಶಂಪಾಯನ ಸರೋವರದಲ್ಲಿ
ಅಡಗಿ ಕುಳಿತಿದ್ದ
ದುರ್ಯೋಧನನನ್ನು ಕರೆದೆ
ಬೆವರಿಳಿಸಿದೆ
ಹೊರಬಂದವನ ಜೊತೆಗೆ
ಗದೆಹಿಡಿದು ಯುದ್ಧಕ್ಕೆ ನಿಂತೆ
ತೊಡೆಯನ್ನು ಮುರಿದೆ
ಕುರುಕುಲಪತಿಯೆಂಬ ಗರ್ವವನ್ನು ಒಡೆದೆ

ದಕ್ಕಿದ ಸಿಂಹಾಸನ
ನೀನೇ ನಿಜ ಭೂಪತಿಯೆಂಬ
ಸತ್ಯ ನುಡಿದದ್ದು
ಕೇಳಿ ಸಂತಸಗೊಂಡೆ