ನನ್ನ ಕೈ ಮತ್ತು ಆ ಹೂವು
ಆಗತಾನೇ ಅಂಗಳದಲ್ಲಿ
ಅರಳಿನಿಂತಿದ್ದ
ಸುಂದರವಾದ ಹೂವೊಂದನ್ನು
ಹಿಡಿದುಕೊಂಡಿದ್ದೆ
ನನ್ನ ಕೈಯಲ್ಲಿ
ದಳಗಳನ್ನು ಸ್ಪರ್ಶಿಸಿದೆ
ಮೃದುವಾಗಿ
ಬಣ್ಣವನ್ನು ಈಕ್ಷಿಸಿದೆ
ರೋಮಾಂಚನದಿಂದ
ಅದರ ದಳಗಳ ಮೃದುತ್ವ
ಬಣ್ಣದ ರೋಮಾಂಚಕತೆ
ಮೈ ಮನಸ್ಸನ್ನು
ಮುದಗೊಳಿಸುತ್ತಲೇ ಇತ್ತು
ಸೌಂದರ್ಯವನ್ನು ನೋಡಿ
ಆಶ್ಚರ್ಯಪಡುತ್ತಲೇ ಇದ್ದೆ
ಇದ್ದಕ್ಕಿದ್ದಂತೆಯೇ ಮೂಡಿಬಂತು
ಒಂದು ಯೋಚನೆ
ಈ ಹೂವು ನನ್ನದೇ ಆಗಿರಬಾರದೇಕೆ?
ಗಿಡದಲ್ಲಿ ಹೀಗೆಯೇ ಉಳಿಸಿದರೆ
ದುಂಬಿಗಳು ಚಿಟ್ಟೆಗಳು ಮುತ್ತುತ್ತವೆ
ಇನ್ಯಾರಾದರೂ ಕೊಯ್ಯುತ್ತಾರೆ
ನನ್ನದೇ ಆಗಿರಬೇಕು
ಇದು ಯಾವತ್ತಿಗೂ
ನನ್ನ ಹೊರತು ಸಿಗಬಾರದು
ಬೇರೆ ಯಾರಿಗೂ
ಹಾಗೆಯೇ ಹಿಸುಕತೊಡಗಿದೆ
ಅದನು ಬಲವಾಗಿ
ಪಕಳೆ ಪಕಳೆಗಳು ಮುದ್ದೆಯಾಗುವಂತೆ
ಕೈಗೆ ತಾಕಿದ ಮುಳ್ಳು
ಚಿಮ್ಮಿಸಿದ ರಕ್ತ
ಬರೆಯಿತೊಂದು ಹೊಸ ಷರಾ
ನಿನ್ನ ಕುತ್ತಿಗೆಯನ್ನೇ
ಹಿಸುಕುತ್ತಿದ್ದೀಯೇ ಜೋಕೆ!
ನಿಜಕ್ಕೂ ಬೆಚ್ಚಿಬಿದ್ದೆ!
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.