ಪಕ್ಕದ ಮನೆಯ ಹುಡುಗಿ ವಿಹಿತಾ ತರಗತಿಗೆ ಫಸ್ಟ್ ಬಂದಿದ್ದಳು. ಲಚ್ಚಿಗೆ ಎರಡನೇ ಸ್ಥಾನ. ಈ ವಿಷಯ ತಿಳಿದಾಗಲೇ ಸೀಮಾ ಅಪ್‌ಸೆಟ್ ಆಗಿದ್ದಳು. ವಿಹಿತಾಳ ತಾಯಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೂ ಆಗಿರಲಿಲ್ಲ ಅವಳಿಗೆ. ಅಕ್ಕನ ಮಗಳು ನಾಲ್ಕು ವರ್ಷಗಳಿಂದಲೂ ತರಗತಿಗೆ ಫಸ್ಟ್ ಬರುತ್ತಲೇ ಇದ್ದಾಳೆ. ಸ್ನೇಹಿತೆಯ ಮಗ ವಿಹಾನ್ ಕೀಬೋರ್ಡ್ ತರಗತಿಗೆ ಹೋಗುತ್ತಲೇ ಕಲಿಕೆಯಲ್ಲೂ ಎರಡನೇ ಸ್ಥಾನ ಪಡೆಯುತ್ತಿದ್ದಾನೆ. ಆದರೆ ತನ್ನ ಮಗಳು ಕಳೆದ ಸಲದ ಪರೀಕ್ಷೆಯಲ್ಲಿ ಹಿಂದೆ ಬಿದ್ದಿದ್ದಾಳೆ..
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ಲಚ್ಚಿಯ ಒಂದು ದಿನ” ನಿಮ್ಮ ಓದಿಗೆ
ಆ ದೊಡ್ಡ ಮನೆಯ ಅಡುಗೆ ಕೋಣೆಯಲ್ಲಿ ಒಲೆಯೆದುರು ನಿಂತಿದ್ದ ಸೀಮಾಳ ಅಂತರಂಗ ಬೇಯುತ್ತಲೇ ಇತ್ತು. ಈ ದಿನ ಮಗಳು ಲಚ್ಚಿಯ ವರ್ತನೆಯಲ್ಲಿ ಆಗಿರುವ ಬದಲಾವಣೆ ಅವಳಲ್ಲಿ ಬೇಸರ ಮೂಡಿಸಿದೆ. ಈ ದಿನ ಲಚ್ಚಿಯ ನಡೆ ನುಡಿ ಮಾಮೂಲಿನಂತಿಲ್ಲ ಎಂಬ ದುಗುಡ ಅವಳನ್ನು ಆವರಿಸಿಕೊಂಡಿದೆ. ಕೆಲಸದವಳು ಫೋನು ಮಾಡಿ ಇವತ್ತು ಬರಲಾಗುವುದಿಲ್ಲ ಎಂದು ಸ್ವಲ್ಪ ಸಮಯಕ್ಕೆ ಮೊದಲು ಹೇಳಿದ್ದರಿಂದಾಗಿ ಸೀಮಾಳ ಬೆನ್ನ ಮೇಲೆ ಮತ್ತೊಂದು ಹೊರೆ ಬಿದ್ದಂತಾಗಿದೆ.
ಅಷ್ಟರಲ್ಲಿ ಅಡುಗೆಕೋಣೆಗೆ ಬಂದ ಲಚ್ಚಿ ಅಮ್ಮ ಅಲ್ಲೇ ಇರುವುದನ್ನು ನೋಡಿ, ಕಳ್ಳ ನೋಟ ಹರಿಸುತ್ತಾ ಅಲ್ಲಿಂದ ಮತ್ತೆ ತನ್ನ ರೂಮಿನ ಕಡೆಗೆ ಹೋಗತೊಡಗಿದಳು. ಇದನ್ನು ನೋಡಿದ ಸೀಮಾ ಲಚ್ಚಿಯ ಹಿಂದೆಯೇ ಬಂದು “ಏನು ನಿನ್ನ ಸಮಸ್ಯೆ? ಏನನ್ನೋ ಕದ್ದವಳ ಹಾಗೆ ಮಾಡುತ್ತಿರುವುದು ಯಾಕೆ? ಬೆಳಗ್ಗೆ ಎದ್ದಾಗಿನಿಂದಲೂ ಹೀಗೇ ಮಾಡುತ್ತಿದ್ದೀಯ. ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಅಡುಗೆ ಕೋಣೆಗೆ ಬಂದವಳು ನನ್ನನ್ನು ನೋಡಿ ಹಾಗೆಯೇ ಹಿಂದೆ ಬಂದದ್ದಕ್ಕೆ ಕಾರಣ ಏನು?” ಎನ್ನುವುದಷ್ಟನ್ನೂ ಇಂಗ್ಲಿಷ್‌ನಲ್ಲಿ ಪ್ರಶ್ನಿಸಿ, ಉತ್ತರ ಕೊಡದ ಮಗಳಿಗೆ ಇಂಗ್ಲಿಷ್‌ನಲ್ಲೇ ಬೈಯ್ಯುತ್ತಾ, ವಾಶಿಂಗ್ ಮೆಶಿನ್ ಕಡೆಗೆ ಹೋದಳು. ಒಣಗಿರುವ ಬಟ್ಟೆಗಳನ್ನು ಒಂದೊಂದಾಗಿ ತೆಗೆಯುತ್ತಿರುವಾಗ ಅವಳಿಗೆ ಒಣಗಿಹೋದವಳಂತೆ ಕುಳಿತಿರುವ ಮಗಳದ್ದೇ ಕನವರಿಕೆ.
ಸೀಮಾಳಿಗೆ ಮೊದಲಿನಿಂದಲೂ ಮಗಳ ಬಗ್ಗೆ ವಿಪರೀತವಾದ ಕಾಳಜಿ. ತಾನು ಬದುಕಿನಲ್ಲಿ ಪಡೆಯಲಾಗದ್ದನ್ನು ಮಗಳ ಮೂಲಕ ದಕ್ಕಿಸಿಕೊಳ್ಳಬೇಕೆಂಬ ಆಕಾಂಕ್ಷೆ ಅವಳದ್ದು. ಅದಕ್ಕಾಗಿ ಸರ್ವ ರೀತಿಯಲ್ಲೂ ಪ್ರಯತ್ನಪಡುತ್ತಲೇ ಇದ್ದಾಳೆ. ಮಗಳು ಲಚ್ಚಿಗಿನ್ನೂ ಎಂಟು ವರ್ಷ. ಕಾನ್ವೆಂಟ್‌ನಲ್ಲಿ ಕಲಿಯುತ್ತಿರುವ ಅವಳ ಓದಿನ ಬಗ್ಗೆ ಸೀಮಾಳ ಚಿಂತೆ ಯಾವತ್ತೂ ಇದ್ದದ್ದೇ. ಇಷ್ಟರವರೆಗೂ ತರಗತಿಗೆ ಮೊದಲಿಗಳಾಗಿದ್ದ ಲಚ್ಚಿ ಕಳೆದ ಪರೀಕ್ಷೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾಳೆ. ಅದು ಸೀಮಾಳಲ್ಲಿ ಆತಂಕ ಮೂಡಿಸಿದೆ.
ಹೀಗಿರುವಾಗಲೇ ಈ ದಿನ ಬೆಳಗ್ಗೆ ಆರೂವರೆಗೆ ಎದ್ದ ತಕ್ಷಣ ಲಚ್ಚಿ ತನ್ನ ಹೊಟ್ಟೆಯನ್ನು ಹಿಡಿದುಕೊಂಡು ನೋವು ಎಂದು ಹೇಳತೊಡಗಿದ್ದು ಮತ್ತು ತಾನು ಈ ದಿನ ಶಾಲೆಗೆ ಹೋಗುವುದಿಲ್ಲ ಎಂದು ಅಳಲಾರಂಭಿಸಿದ್ದು. ಹಿಂದಿನ ರಾತ್ರಿಯ ಊಟ ಅಜೀರ್ಣ ಆಗಿದೆಯೋ ಏನೋ ಎಂದುಕೊಂಡ ಸೀಮಾ ಲಚ್ಚಿಯನ್ನು ಟಾಯ್ಲೆಟ್‌ಗೆ ಹೋಗಲು ಹೇಳಿದಳು. ಅಲ್ಲಿಂದ ಬಂದ ಬಳಿಕವೂ ಲಚ್ಚಿಯ ಹೊಟ್ಟೆನೋವು ಕಡಿಮೆಯಾಗಲಿಲ್ಲ. ಮನೆಯ ಸಮೀಪದಲ್ಲಿಯೇ ಇರುವ ಪರಿಚಯದ ಡಾಕ್ಟರ್‌ರ ಕ್ಲಿನಿಕ್‌ಗೆ ಕರೆದುಕೊಂಡು ಹೋದಳು. ಅವರು ಅದೇನೋ ಮಾತ್ರೆ ಕೊಟ್ಟರು. ಅದನ್ನು ತಿನ್ನಿಸಿದ ಮೇಲೂ ಹೊಟ್ಟೆನೋವು ಎಂದು ಮುಖ ಕಿವುಚಿಕೊಳ್ಳುವುದನ್ನು ನಿಲ್ಲಿಸಲಿಲ್ಲ ಲಚ್ಚಿ.
ಅವಳ ಹೊಟ್ಟೆನೋವನ್ನು ಕಡಿಮೆ ಮಾಡಿ ಅವಳನ್ನು ಶಾಲೆಗೆ ಕಳುಹಿಸಲೇಬೇಕು ಎಂಬ ಹಠ ಸೀಮಾಳದ್ದು. ಆದರೆ ಸಾಧ್ಯವಾಗಲಿಲ್ಲ. ಯಾವತ್ತಿನಂತೆ ಎಂಟು ಗಂಟೆಗೆ ಶಾಲೆಯ ಬಸ್ಸು ಬಂದು ಮನೆಯ ಗೇಟಿನೆದುರು ನಿಂತಾಗ ಅಲ್ಲಿಗೆ ಹೋದ ಸೀಮಾ “ಇವತ್ತು ಅವಳು ಶಾಲೆಗೆ ಬರುವುದಿಲ್ಲ. ಅವಳಿಗೆ ಹೊಟ್ಟೆನೋವು ಇದೆ” ಎಂದು ಹೇಳಿದಳು, ಹೇಳುವುದಕ್ಕೆ ಒಂದಿಷ್ಟೂ ಇಷ್ಟವಿಲ್ಲದೆ. ಮನೆಯೊಳಕ್ಕೆ ಬಂದು ಲಚ್ಚಿಯ ಚಲನವಲನವನ್ನೇ ಒಂದಷ್ಟು ಹೊತ್ತು ಹಾಗೆಯೇ ಗಮನಿಸುತ್ತಾ ಕುಳಿತಳು. ಇಷ್ಟರವರೆಗೂ ಹೊಟ್ಟೆನೋವು ಎಂದು ಹೇಳುತ್ತಾ ಮಲಗಿದ್ದವಳು ಈಗ ಶಾಲೆಗೆ ಹೋಗಲಿಕ್ಕಿಲ್ಲ ಎಂದು ದೃಢವಾದ ಮೇಲೆ ಹೊಟ್ಟೆನೋವು ಎನ್ನುವುದನ್ನೇ ಬಿಟ್ಟಿದ್ದಾಳೆ.
ಅವಳ ಬಳಿ ಹೋಗಿ ಕುಳಿತ ಸೀಮಾ “ನಿನ್ನ ಹೊಟ್ಟೆನೋವು ಕಡಿಮೆ ಆಗುವುದಕ್ಕೆ ಆಸ್ಪತ್ರೆಗೆ ಹೋಗಿ ಬರೋಣ” ಎಂದಳು ಇಂಗ್ಲಿಷ್‌ನಲ್ಲಿ. “ಇಲ್ಲ ಈಗ ಹೊಟ್ಟೆನೋವು ಕಡಿಮೆ ಇದೆ” ಎಂದು ಲಚ್ಚಿಯ ಉತ್ತರ, ಇಂಗ್ಲಿಷ್‌ನಲ್ಲೇ. ಸೀಮಾಳಿಗೆ ಸ್ಪಷ್ಟವಾಯಿತು, ಲಚ್ಚಿ ಸುಳ್ಳು ಹೇಳುತ್ತಿದ್ದಾಳೆ. ಅವಳಿಗೆ ಹೊಟ್ಟೆನೋವು ಇಲ್ಲ. ಅದು ಶಾಲೆಗೆ ಹೋಗದಿರುವುದಕ್ಕೆ ಅವಳಾಡುತ್ತಿರುವ ನಾಟಕ ಅಷ್ಟೇ.
*****
ಗಂಟೆ ಹತ್ತು ಕಳೆದಾಗ ಲಚ್ಚಿಯ ಕ್ಲಾಸ್ ಟೀಚರ್ ಅವರ ಕಾಲ್ ಬಂತು. “ಲಚ್ಚಿ ಇವತ್ತು ಯಾಕೆ ಶಾಲೆಗೆ ಬಂದಿಲ್ಲ?” ಎನ್ನುವ ಪ್ರಶ್ನೆಯಲ್ಲೇ ಅದೇನೋ ಆತಂಕ. “ಅವಳಿಗೆ ಹೊಟ್ಟೆನೋವಿದೆ” ಎಂದು ಸೀಮಾ ಹೇಳಿದ್ದೇ ತಡ ಅವರು ಮೊದಲಿಗಿಂತಲೂ ಆತಂಕದಲ್ಲಿ ಮಾತನಾಡತೊಡಗಿದರು.
“ನೋಡಿ, ಲಚ್ಚಿ ಇತ್ತೀಚೆಗೆ ಸ್ಟಡೀಸ್ ಮೇಲೆ ಅಷ್ಟೊಂದು ಫೋಕಸ್ ಮಾಡ್ತಿಲ್ಲ. ಮೊನ್ನೆ ಬುಧವಾರ ಹೋಮ್‌ವರ್ಕ್ ಮಾಡ್ಕೊಂಡು ಬಂದಿಲ್ಲ. ಲಾಸ್ಟ್ ಎಕ್ಸಾಮಲ್ಲಿ ಏನಾಗಿದೆ ಅನ್ನೋದು ನಿಮಗೇ ಗೊತ್ತಿದೆ. ಕ್ಲಾಸಿಗೆ ಫಸ್ಟ್ ಬರ್ತಿದ್ದೋಳು ಈಗ ಸೆಕೆಂಡ್. ಹೀಗೆ ಆದ್ರೆ ಸಮಸ್ಯೆ ಆಗುತ್ತೆ, ಖಂಡಿತ” ಅವರ ಮಾತಿಗೆ ಸಮಜಾಯಿಷಿ ಕೊಡುವ ಬಗ್ಗೆ ಸೀಮಾ ಯೋಚಿಸುತ್ತಿದ್ದಾಗಲೇ ಅವರು ಮಾತನ್ನು ಇನ್ನೊಂದು ದಿಕ್ಕಿನಾಚೆ ಹೊರಳಿಸಿದರು.
“ನಮ್ಮ ಸ್ಕೂಲ್‌ಗೆ ಎಷ್ಟು ರೆಪ್ಯುಟೇಶನ್ ಇದೆ ಅನ್ನೋದು ನಿಮಗೆ ತಿಳಿದಿದೆ ಅಂದ್ಕೊಳ್ತೇನೆ. ಎ++ ಪಡ್ಕೊಳ್ಳೋ ಸ್ಟೂಡೆಂಟ್ಸ್‌ನ ಕ್ರಿಯೇಟ್ ಮಾಡೋದು ನಮ್ಮ ಉದ್ದೇಶ. ಎ+ ಪಡೆಯೋ ಸ್ಟೂಡೆಂಟ್ಸ್‌ನ ಕ್ರಿಯೇಟ್ ಮಾಡೋದಲ್ಲ. ನೀವು ಅರ್ಥ ಮಾಡ್ಕೊಳ್ತೀರಿ ಅನ್ನೋ ನಂಬಿಕೆ ನನಗಿದೆ.
ಹೊಟ್ಟೆನೋವು, ತಲೆನೋವು ಅಂತೆಲ್ಲಾ ಕಾರಣ ಹೇಳಿ, ಆಬ್ಸೆಂಟ್ ಆದ್ರೆ ಅವಳಿಗೆ ಸಮಸ್ಯೆ ಆಗುತ್ತೆ. ಇನ್ನುಮುಂದೆ ಇದೇ ರೀತಿ ಆದ್ರೆ ನಾವು ಸ್ಟ್ರಿಕ್ಟ್ ಆಗಿ ಆ್ಯಕ್ಷನ್ ತಗೊಳ್ಬೇಕಾಗುತ್ತೆ. ನಾಳೆ ದಿನ ನಿಮ್ಮ ಮಗಳಿಗೆ ಕಮ್ಮಿ ಮಾರ್ಕ್ಸ್ ಬಂದ್ರೆ ಸ್ಕೂಲ್ ಸರಿ ಇಲ್ಲ ಅಂತ ನೀವು ನಮ್ಮ ಮೇಲೇನೇ ಹಾರಿಬೀಳ್ತೀರಿ. ಊರೆಲ್ಲಾ ಸುದ್ದಿ ಮಾಡ್ತೀರಿ. ನಮಗೆ ನಮ್ಮ ಸ್ಕೂಲ್‌ಗಿರೋ ಒಳ್ಳೆ ಹೆಸ್ರನ್ನು ಉಳಿಸ್ಕೊಳ್ಳೋದು ತುಂಬಾ ಇಂಪಾರ್ಟೆಂಟ್ ಆಗಿರುತ್ತೆ. ಇನ್ನುಮುಂದೆ ಇಂಥದ್ದು ರಿಪೀಟ್ ಆಗೋದಿಲ್ಲ ಅಂದ್ಕೊಳ್ತೇನೆ” ಎಂದವರು ಇನ್ನೇನೂ ಮಾತನಾಡುವುದಕ್ಕಿಲ್ಲ ಎನ್ನುವಂತೆ ಫೋನಿಟ್ಟರು.
ಸೀಮಾಗೆ ಅವಮಾನವಾಗಿತ್ತು. ಕಳೆದ ಸಲ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್‌ಗೆ ಹೋದಾಗಲೂ ಇದೇ ರೀತಿಯ ಅನುಭವ. ಪಕ್ಕದ ಮನೆಯ ಹುಡುಗಿ ವಿಹಿತಾ ತರಗತಿಗೆ ಫಸ್ಟ್ ಬಂದಿದ್ದಳು. ಲಚ್ಚಿಗೆ ಎರಡನೇ ಸ್ಥಾನ. ಈ ವಿಷಯ ತಿಳಿದಾಗಲೇ ಸೀಮಾ ಅಪ್‌ಸೆಟ್ ಆಗಿದ್ದಳು. ವಿಹಿತಾಳ ತಾಯಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೂ ಆಗಿರಲಿಲ್ಲ ಅವಳಿಗೆ. ಅಕ್ಕನ ಮಗಳು ನಾಲ್ಕು ವರ್ಷಗಳಿಂದಲೂ ತರಗತಿಗೆ ಫಸ್ಟ್ ಬರುತ್ತಲೇ ಇದ್ದಾಳೆ. ಸ್ನೇಹಿತೆಯ ಮಗ ವಿಹಾನ್ ಕೀಬೋರ್ಡ್ ತರಗತಿಗೆ ಹೋಗುತ್ತಲೇ ಕಲಿಕೆಯಲ್ಲೂ ಎರಡನೇ ಸ್ಥಾನ ಪಡೆಯುತ್ತಿದ್ದಾನೆ. ಆದರೆ ತನ್ನ ಮಗಳು ಕಳೆದ ಸಲದ ಪರೀಕ್ಷೆಯಲ್ಲಿ ಹಿಂದೆ ಬಿದ್ದಿದ್ದಾಳೆ. ಹೀಗೆಯೇ ಮುಂದುವರಿದರೆ ತಾನು ತನ್ನ ಸಂಬಂಧಿಕರಿಗೆ, ಸ್ನೇಹಿತೆಯರಿಗೆ ಮುಖ ತೋರಿಸುವುದಾದರೂ ಹೇಗೆ? ಯೋಚನೆ ಸೀಮಾಳ ತಲೆಯನ್ನು ತಿನ್ನತೊಡಗಿತು.
ಬಹುಶಃ ನಿನ್ನೆ ಯಾರೋ ಟೀಚರ್ ಇವಳನ್ನು ಬೈದಿರಬೇಕು. ಆ ಕಾರಣಕ್ಕೇ ಹೊಟ್ಟೆನೋವೆಂದು ನಾಟಕವಾಡಿ ಇವತ್ತು ಶಾಲೆಗೆ ಹೋಗಿಲ್ಲ. ಸೋಫಾದ ಮೇಲೆ ಕುಳಿತು ಯೋಚಿಸಿದ ಸೀಮಾಳ ಮನಸ್ಸಿನೊಳಗಡೆ ಅಸಮಾಧಾನ ತುಂಬಿಕೊಳ್ಳತೊಡಗಿತು.
ಅಷ್ಟರಲ್ಲಿ ಮೆಟ್ಟಿಲಿನ ಕಡೆಯಿಂದ ಏನೋ ಸದ್ದು. ಸೀಮಾ ಆ ಕಡೆಗೆ ತಿರುಗಿದರೆ ಅಲ್ಲೇ ನಿಂತಿದ್ದ ಲಚ್ಚಿ ಭಯಕ್ಕೆ ಒಳಗಾದವಳಂತೆ ಮೆಟ್ಟಿಲು ಹತ್ತಿ ತನ್ನ ರೂಮಿಗೆ ಹೋದಳು. ಹಿಡಿದು ಬಡಿಯಬೇಕೆನ್ನುವಷ್ಟು ಕೋಪ ಸೀಮಾಳಲ್ಲಿತ್ತು. ಆದರೂ ತಡೆದುಕೊಂಡು ಹಾಗೆಯೇ ಕುಳಿತಳು. ಹೊಡೆದು ಬಡಿದು ಲಚ್ಚಿಯನ್ನು ತಿದ್ದುವುದು ಸಾಧ್ಯವಿಲ್ಲ ಎನ್ನುವ ಪ್ರಜ್ಞೆ ಅವಳಲ್ಲಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೂ ಅದುಮಿಟ್ಟುಕೊಂಡಿದ್ದ ಸೀಮಾಳ ಕೋಪ ಒಮ್ಮೆಲೇ ಜ್ವಾಲಾಮುಖಿಯಾದದ್ದು ಗಂಡ ಮಹೇಶ್ ಆಫೀಸಿನಿಂದ ಮನೆಗೆ ಬಂದು, ಸೋಫಾದ ಮೇಲೆ ಕುಳಿತು, ಟೀಪಾಯಿಯ ಮೇಲೆ ಕಾಲಿಟ್ಟು, ಕಾಫಿ ತರುವುದಕ್ಕೆ ಹೇಳಿದಾಗ.
“ಇವತ್ತೇನಾಗಿದೆ ಗೊತ್ತಿದೆಯಾ ನಿಮಗೆ? ಲಚ್ಚಿ ಸ್ಕೂಲಿಗೆ ಹೋಗಿಲ್ಲ. ಅವಳ ಕ್ಲಾಸ್ ಟೀಚರ್ ಕಾಲ್ ಮಾಡಿ ನನಗೆ ಬೈದಿದ್ದಾರೆ” ಎಂದು ಅವಳಂದದ್ದಕ್ಕೆ “ಅದೆಲ್ಲಾ ಇರಲಿ. ಮತ್ತೆ ಮಾತನಾಡಿದರಾಯಿತು. ಮೊದಲು ಒಂದು ಲೋಟ ಕಾಫಿ ಕೊಡು” ಎಂದು ಮಹೇಶ್ ನುಡಿದಿದ್ದ. ತೂಕಡಿಸುತ್ತಿದ್ದವಳಿಗೆ ಹಾಸಿಗೆ ಹಾಸಿ ಕೊಟ್ಟಂತಾಯಿತು. ಒಳಗಿದ್ದ ಕುದಿಯನ್ನು ತೋರ್ಪಡಿಸುವುದಕ್ಕೆ ಕಾಯುತ್ತಿದ್ದ ಸೀಮಾ ಹೆಡೆ ತುಳಿಸಿಕೊಂಡ ಹಾವಿನಂತಾದಳು.
“ಮೊದಲಿನಿಂದಲೂ ಹೀಗೆಯೇ, ಮಗಳ ಓದಿನ ಬಗ್ಗೆ, ಅವಳ ಭವಿಷ್ಯದ ಬಗ್ಗೆ ಒಂದಿಷ್ಟೂ ಯೋಚನೆಯಿಲ್ಲ. ಅವಳನ್ನು ಲೆಕ್ಕಕ್ಕಿಂತ ಹೆಚ್ಚು ಮುದ್ದುಮಾಡಿ ಹಾಳುಮಾಡಿದ್ದೀರಿ. ನನಗಂತೂ ಬೆಳಗ್ಗೆಯಿಂದ ಅವಳ ಬಗ್ಗೆ ಯೋಚಿಸಿ ಯೋಚಿಸಿ ತಲೆ ಚಿಟ್ಟು ಹಿಡಿದ ಹಾಗಾಗಿದೆ. ನಿಮಗೆ ನೋಡಿದರೆ ಕಾಫಿಯ ಚಿಂತೆ. ಮಗಳು ಯಾಕೆ ಶಾಲೆಗೆ ಹೋಗಿಲ್ಲ ಅಂತಲಾದರೂ ಕೇಳಿದಿರಾ? ಹೊಟ್ಟೆನೋವು ಅಂತ ಸುಳ್ಳು ಹೇಳಿಕೊಂಡು ಕೂತಿದ್ದಾಳೆ. ಓದುವುದರ ಬಗ್ಗೆ ಈಗೀಗ ಆಸಕ್ತಿಯೇ ಇಲ್ಲ. ಇವತ್ತು ಏನು ಕೇಳಿದರೂ ಹೇಳುತ್ತಿಲ್ಲ. ಬಾಯಿ ಬರದವಳಂತೆ ಕುಳಿತಿದ್ದಾಳೆ. ಹೀಗಾದರೆ ಅವಳ ಕಥೆ ಏನು ಅಂತ ತಾಯಿಯಾಗಿ ನನಗೆ ಭಯ ಇದೆ. ಅಪ್ಪನಾಗಿ ನಿಮಗೆ ಅಂಥದ್ದೇನೂ ಇಲ್ಲ…” ಹೀಗೆ ಸೀಮಾ ಮಾತನಾಡುತ್ತಲೇ ಹೋದಳು.
ಕಡೆಗೊಮ್ಮೆ ಹೆಂಡತಿಯ ಮಾತಿನಿಂದ ರೋಸಿಹೋದ ಮಹೇಶ್ ಕಾಫಿ ಕುಡಿಯುವ ಇಚ್ಛೆಯನ್ನು ತತ್ಕಾಲಕ್ಕೆ ಬದಿಗಿರಿಸಿ, “ಸರಿ, ಈಗ ಲಚ್ಚಿ ಎಲ್ಲಿದ್ದಾಳೆ? ಅವಳನ್ನು ಕರೆದುಕೊಂಡು ಬಾ. ವಿಚಾರಿಸುತ್ತೇನೆ” ಎಂದ. ಸೀಮಾ ದೊಡ್ಡ ಸ್ವರದಲ್ಲಿ “ಲಚ್ಚಿ ಲಚ್ಚಿ” ಎಂದು ಕರೆದ ಸ್ವಲ್ಪ ಹೊತ್ತಿಗೆ ಲಚ್ಚಿ ಮೆಟ್ಟಿಲಿಳಿದು ಬಂದು, ಆತಂಕದ ಮೋರೆ ಹೊತ್ತು, ತಂದೆಯ ಮೈಗೆ ಮೈ ತಾಗಿಸಿ ಸೋಫಾದಲ್ಲಿ ಕುಳಿತಳು.
ಮಹೇಶ್ ಅವಳನ್ನು ವಿಚಾರಿಸುವಲ್ಲಿ ಆಸಕ್ತಿ ತೋರಿಸಿದ. ನಿಜವಾಗಿಯೂ ಹೊಟ್ಟೆನೋವು ಇದೆಯಾ ಎನ್ನುವಲ್ಲಿಂದ ಆರಂಭಿಸಿ ಯಾಕೆ ಶಾಲೆಗೆ ಹೋಗಿಲ್ಲ? ಯಾಕೆ ಸುಳ್ಳು ಹೇಳುತ್ತೀಯಾ? ಎಲ್ಲವನ್ನೂ ಕೇಳಿದ. ಆದರೆ ಲಚ್ಚಿ ಯಾವುದಕ್ಕೂ ಉತ್ತರ ಕೊಡಲಿಲ್ಲ. ಮಾತನಾಡುವುದಕ್ಕೆ ಇಷ್ಟ ಇಲ್ಲದವಳಂತೆ ಮೆಟ್ಟಿಲು ಹತ್ತಿ ತನ್ನ ಕೋಣೆಗೆ ಹೋದಳು. ಸೀಮಾಳ ಎಚ್ಚರಿಕೆಯ ಜೋರು ಮಾತಿಗೂ ಅವಳು ಕಿವಿಗೊಡಲಿಲ್ಲ.
“ಪಾಪ, ಏನೋ ಬೇಜಾರು ಮಾಡಿಕೊಂಡಿದ್ದಾಳೆ. ಒಂದು ದಿನ ತಾನೇ ಶಾಲೆಗೆ ಹೋಗದಿರುವುದು. ಏನೂ ಆಗುವುದಿಲ್ಲ. ನಾಳೆಯಿಂದ ಹೋಗುತ್ತಾಳೆ ಬಿಡು” ಎಂದ ಮಹೇಶ ಮತ್ತೆ ಮೊದಲಿನ ಹಾಗೆ ಚಿಂತೆ ಇಲ್ಲದವನಾಗಿ ಕುಳಿತ.
ಈಗ ಸೀಮಾ ಮೊದಲಿಗಿಂತಲೂ ಹೆಚ್ಚು ಕೋಪ ಮಾಡಿಕೊಂಡಳು. “ಒಂದು ದಿನ ಅಂದರೆ ಏನಂದುಕೊಂಡಿದ್ದೀರಿ! ಅದನ್ನು ರಿಕವರ್ ಮಾಡುವುದು ಅದೆಷ್ಟು ಕಷ್ಟ ಅಂತ ಗೊತ್ತಿದೆಯಾ ನಿಮಗೆ? ಇವಳು ಒಂದು ದಿನ ಹಿಂದೆ ಬಿದ್ದರೆ ಉಳಿದವರು ಹತ್ತು ದಿನ ಮುಂದೆ ಹೋಗುತ್ತಾರೆ…” ಹೀಗೆ ಅವಳು ಹೇಳುವಷ್ಟರಲ್ಲಿ ಮಹೇಶ್‌ಗೂ ಕೋಪ ಬಂದಿತ್ತು.
“ನಿನಗೊಬ್ಬಳಿಗೇ ಮಗಳ ಬಗ್ಗೆ ಕಾಳಜಿ ಇರುವ ಹಾಗೆ ಮಾಡಬೇಡ ಸೀಮಾ. ಸಣ್ಣ ಸಣ್ಣ ವಿಷಯಕ್ಕೆ ಜಗಳ ಮಾಡುವುದನ್ನು ನಿಲ್ಲಿಸು” ಎಂದವನು ಮತ್ತೇನೂ ಮಾತನಾಡುವುದಕ್ಕಿಲ್ಲ ಎನ್ನುವಂತೆ ಆಫೀಸ್ ಬ್ಯಾಗ್ ಹಿಡಿದುಕೊಂಡು ತನ್ನ ರೂಮಿಗೆ ಹೊರಟ. “ಓಹೋ! ಇದು ನಿಮಗೆ ಸಣ್ಣ ವಿಷಯ!” ಎಂಬ ಸೀಮಾಳ ಮಾತೂ ಸಹ ಅವನ ಕಿವಿಗೆ ಬೀಳಲಿಲ್ಲ.
*****
ಒಂದು ಮನೆಯೊಳಗಿದ್ದ ಸಮಸ್ಯೆ ಇನ್ನೊಂದು ಮನೆಯನ್ನೂ ಪ್ರವೇಶಿಸುವಂತಾದದ್ದು ಸೀಮಾ ತನ್ನ ತಂದೆಗೆ ಫೋನು ಮಾಡಿ, ವಿಷಯವನ್ನೆಲ್ಲಾ ತಿಳಿಸಿ, ಮಹೇಶ್ ಬಗ್ಗೆ ದೂರಿಕೊಂಡಾಗ. “ಅಪ್ಪಾ, ಅವರಿಗೆ ಮಗಳ ಭವಿಷ್ಯದ ಬಗ್ಗೆ ಸ್ವಲ್ಪವೂ ಯೋಚನೆ ಇಲ್ಲ. ಮಗಳಿರುವುದೇ ಮುದ್ದು ಮಾಡುವುದಕ್ಕೆ ಅನ್ನುವ ಹಾಗಿದ್ದಾರೆ. ಮಗಳು ಓದಿದಳಾ, ಹೋಮ್‌ವರ್ಕ್ ಮಾಡಿದಳಾ ಯಾವುದನ್ನೂ ನೋಡುವುದಿಲ್ಲ. ಒಂದು ಸಲವೂ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್‌ಗೆ ಬಂದಿಲ್ಲ. ಎಲ್ಲದಕ್ಕೂ ನಾನೇ ಆಗಬೇಕು. ಮಗಳ ಹತ್ತಿರ ಇಂಗ್ಲಿಷ್‌ನಲ್ಲೇ ಮಾತಾಡಬೇಕು, ಅವಳ ನಾಲೆಜ್ ಇಂಪ್ರೂವ್ ಆಗುತ್ತದೆ ಅನ್ನುವ ಕಾಮನ್‌ಸೆನ್ಸ್ ಕೂಡಾ ಇಲ್ಲ. ಆಫೀಸಿನಿಂದ ಬರುವುದು, ಮಗಳನ್ನು ಮುದ್ದುಮಾಡುತ್ತಾ ಕೂರುವುದು ಇಷ್ಟೇ. ಎಂಥಾ ಬೇಜವಾಬ್ದಾರಿ ಮನುಷ್ಯನಿಗೆ ನನ್ನನ್ನು ಕೊಟ್ಟಿದ್ದೀರಿ ನೀವು” ಎಂದವಳ ಮಾತಿನಲ್ಲಿ ಅತೀವ ಆಕ್ರೋಶ.
ಕೋಣೆಯಲ್ಲಿ ಕುಳಿತಿದ್ದ ಲಚ್ಚಿಯ ಮನದಲ್ಲಿ ಆತಂಕ ಮಡುಗಟ್ಟಿತ್ತು. ಶಾಲೆಯ ಶೌಚಾಲಯದ ಒಳಹೋದ ತಕ್ಷಣ ಹಿಂದಿನಿಂದ ಬಂದು ಒತ್ತರಿಸಿದ ಆ ದಪ್ಪ ದಪ್ಪ ಮೈ- ಅವಳ ಎದೆ, ಹೊಟ್ಟೆಯ ಮೇಲೆಲ್ಲಾ ಓಡಾಡಿದ ಆ ಕಟುಕ ಕೈ ಇವುಗಳೇ ಅವಳ ಮನಸ್ಸಿನಲ್ಲಿ ಮತ್ತೆ ಮತ್ತೆ ಸುಳಿದಾಡತೊಡಗಿದವು. ನಾಳೆಯ ಕರಾಳ ನೆರಳು ಅವಳೆದುರು ದೈತ್ಯಾಕಾರ ತಾಳಿ ಬೆದರಿಸತೊಡಗಿತು.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
ಕಥೆಯ ಅಂತ್ಯವನ್ನು ಊಹಿಸಿರಲಿಲ್ಲ…ಮಾರ್ಕ್ಸ್ ವಾದದ ಬಗ್ಗೆ ಮಾತ್ರ ಓದುತ್ತಾ ಹೋದೆ...ಮಗಳ ಆ ಹೆದರಿಕೆಯ ಬಗ್ಗೆ ನೋವೂ ಕೂಡ ಆಯ್ತು…