ಲೈಟ್ಸ್…ಕ್ಯಾಮರಾ…ಆ್ಯಕ್ಷನ್ ಎಂದು ನಿರ್ದೇಶಕರು ಹೇಳಿದಾಗ ನಿರ್ಮಲಾಳ ಎದೆ ಧಸಕ್ಕೆಂದಿತು. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಬಂದ ಕೃಷ್ಣ ಕೈಯ್ಯನ್ನು ಚಾಚಿ ಬೆಣ್ಣೆ ಗಡಿಗೆ ತೆಗೆದುಕೊಂಡವನು ಪುಟುಪುಟು ಓಡಿದ. ಹೆಜ್ಜೆಯಿಡುತ್ತಾ ಬಂದದ್ದು… ಕೈಚಾಚಿದ್ದು… ಓಡಿದ್ದು… ಇದು ನಿರ್ಮಲಾಳ ಮನಸ್ಸಿನಲ್ಲಿ ಗಿರಕಿ ಹೊಡೆಯತೊಡಗಿತ್ತು. ಅವಳು ಈಗ ಬಾಗಿಲ ಮರೆಯಿಂದ ಬೆಣ್ಣೆ ಗಡಿಗೆಯಿದ್ದ ಕಂಬದಾಚೆಗೆ ಹೋಗಬೇಕಿತ್ತು. ಆದರೆ ಅವಳು ಚಲನೆಯಿಲ್ಲದೆ ನಿಂತಿದ್ದಳು. ಇವಳ ಪ್ರವೇಶಕ್ಕೆ ಕಾದಿದ್ದ ನಿರ್ದೇಶಕರು ಇವಳು ಪ್ರವೇಶಿಸದೇ ಇದ್ದದ್ದನ್ನು ನೋಡಿ “ಕಟ್ ಕಟ್” ಎಂದು ಕೂಗಿಕೊಂಡರು.
ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಲೈಟ್ಸ್… ಕ್ಯಾಮರಾ… ಆ್ಯಕ್ಷನ್” ನಿಮ್ಮ ಓದಿಗೆ
ಬಣ್ಣ ಬಳಿದಿದ್ದ ಮುಖವನ್ನು ಹೊತ್ತಿದ್ದ ನಿರ್ಮಲಾ ಇನ್ನೇನು ಸ್ವಲ್ಪ ಸಮಯದಲ್ಲಿ ಕಪ್ಪು ಕ್ಯಾಮರಾದೆದುರು ನಿಲ್ಲಬೇಕಾಗಿತ್ತು. ಮೇಕಪ್ ಸರಿಯಾಗಿದೆಯಾ ಎಂದು ಕನ್ನಡಿಯಲ್ಲಿ ನೋಡುತ್ತಿದ್ದವಳ ಮನಸ್ಸಿನ ತುಂಬೆಲ್ಲಾ ನಿರ್ದೇಶಕರ ಬೈಗುಳದ ಮಾತುಗಳು.
“ನೋಡಮ್ಮಾ ನಿರ್ಮಲಾ, ಈ ಧಾರಾವಾಹಿಯ ಈ ಪಾತ್ರಕ್ಕೆ ನಿನ್ನನ್ನೇ ಆಯ್ಕೆ ಮಾಡಿರುವುದಕ್ಕೆ ಸರಿಯಾದ ಕಾರಣ ಇದೆ. ನೀನು ನಾಟಕದಲ್ಲಿ ನಟಿಯಾಗಿದ್ದವಳು. ಈ ತರಹದ ಪಾತ್ರ ಮಾಡಿದ ಅನುಭವ ಇದೆ. ಅದಕ್ಕೋಸ್ಕರ ನಾನೇ ನಿನ್ನ ಹೆಸರನ್ನು ಚಾನಲ್ ಮುಖ್ಯಸ್ಥರಿಗೆ ತಿಳಿಸಿದ್ದೆ. ಅವರು ಬೇರೆ ಯಾವುದೋ ತೆಲುಗು ನಟಿಯೊಬ್ಬಳನ್ನು ಆಯ್ಕೆ ಮಾಡುವುದರಲ್ಲಿದ್ದರು. ನಾನು ನಿನ್ನ ಬಗ್ಗೆ ಹೆಚ್ಚು ಹೆಚ್ಚು ಹೊಗಳಿ ಮಾತನಾಡಿದ ಮೇಲೆಯೇ ಅವರು ಒಪ್ಪಿಕೊಂಡದ್ದು. ನೀನೇ ಯೋಚನೆ ಮಾಡು, ನಾಲ್ಕು ಸೀರಿಯಲ್‌ಗಳಲ್ಲಿ ನಟಿಸಿರುವ ಆ ತೆಲುಗಿನವಳನ್ನು ಬಿಟ್ಟು ಒಂದೂ ಸೀರಿಯಲ್ ಮಾಡದ ನಿನ್ನನ್ನು ಈ ಧಾರಾವಾಹಿಗೆ ಹಾಕಿಕೊಂಡಿದ್ದೇನೆಂದರೆ ನನಗೆ ನಿನ್ನ ಬಗ್ಗೆ ಅದೆಷ್ಟು ನಂಬಿಕೆ ಇರಬಹುದು! ಚೆನ್ನಾಗಿ ನಟಿಸುತ್ತೀಯ, ಸಮಯಕ್ಕೆ ಸರಿಯಾಗಿ ಶೂಟಿಂಗ್‌ಗೆ ಬರುತ್ತೀಯ, ನನಗೆ ಹೆಚ್ಚು ಟೆನ್ಶನ್ ಕೊಡುವುದಿಲ್ಲ ಎನ್ನುವ ನಂಬಿಕೆ ನನ್ನಲ್ಲಿತ್ತು. ಆದರೆ ನೀನು…” ನಿರ್ದೇಶಕರ ಮಾತಿನ ಬಿಡುವಿಗೆ ಕಾದಿದ್ದವಳಂತೆ ನಿರ್ಮಲಾ ಏನನ್ನೋ ಹೇಳುವುದಕ್ಕೆ ಹೊರಟಳು. ಆದರೆ ನಿರ್ದೇಶಕರು ಅವಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ.
“ಇವತ್ತು ಪ್ರೋಮೋ ಶೂಟಿಂಗ್. ಆ ಹುಡುಗ ನೋಡಿದರೆ ಮೂರು ಗಂಟೆ ಮೊದಲೇ ಬಂದು, ಮೇಕಪ್ ಮಾಡಿಸಿಕೊಂಡು, ರೆಡಿಯಾಗಿ ಕೂತಿದ್ದಾನೆ. ಅವನಿಗೆ ಬರೀ ಐದು ವರ್ಷ. ಅಷ್ಟು ಚಿಕ್ಕ ಹುಡುಗನಿಗೇ ಟೈಮ್ ಸೆನ್ಸ್ ಇದೆ. ನೀನು ನೋಡಿದರೆ ಈಗ ಬಂದಿದ್ದೀಯ. ಹನ್ನೊಂದು ಗಂಟೆಗೆ ಬರಬೇಕಾದವಳು ಹನ್ನೊಂದು ನಲುವತ್ತೈದಕ್ಕೆ ಬಂದಿದ್ದೀಯ. ಪ್ರೋಮೋ ಶೂಟಿಂಗ್‌ಗೇ ಹೀಗೆ ಮಾಡಿದರೆ ಇನ್ನು ಪ್ರತಿದಿನ ಧಾರಾವಾಹಿ ಶೂಟಿಂಗ್ ಇರುತ್ತದಲ್ಲಾ, ಅದರ ಕಥೆ ಏನು? ಶಿಸ್ತು ಇರದಿದ್ದರೆ ನೀನು ಧಾರಾವಾಹಿ ಅಲ್ಲ, ಬೇರೆ ಯಾವ ಕೆಲಸವನ್ನೂ ಮಾಡುವುದಕ್ಕೆ ಸಾಧ್ಯ ಇಲ್ಲ. ಸಕ್ಸಸ್ ಕಾಣುವುದಕ್ಕೆ ಆಗುವುದಿಲ್ಲ. ನಾಳೆ ನೀನೇನಾದರೂ ದೊಡ್ಡ ನಟಿಯಾದೆ ಎಂದಿಟ್ಟುಕೋ, ಆಗ ಈ ತರಹದ ದೌಲತ್ತು ತೋರಿಸಿದರೂ ನಡೆಯುತ್ತದೆ. ಈಗಲೇ ಇಷ್ಟು ಅಹಂಕಾರ ತೋರಿಸಿದರೆ ಇಲ್ಲಿ ನೀನು ಉಳಿಯುವುದು ಕಷ್ಟ. ಈ ತರಹದ ಮಾತನ್ನು ನಾನು ನಿನಗೆ ಹೇಳುತ್ತಿರುವುದು ನಿನ್ನ ಒಳ್ಳೆಯದಕ್ಕೆ. ಅದನ್ನು ಅರ್ಥ ಮಾಡಿಕೋ. ಸುಮ್ಮನೆ ಏನೋ ಬೈಯ್ಯುತ್ತಾರೆ ಎಂದುಕೊಳ್ಳುವುದಲ್ಲ. ನಾಳೆ ನೀನು ಒಳ್ಳೆಯ ನಟಿ ಎನಿಸಿಕೊಂಡರೆ ನನಗಿಂತ ಹೆಚ್ಚು ಖುಷಿಪಡುವವರು ಯಾರೂ ಇಲ್ಲ” ಎಂದವರು ಮೇಕಪ್‌ಮ್ಯಾನ್ ಕಡೆಗೆ ತಿರುಗಿ “ಆದಷ್ಟು ಬೇಗ ಮೇಕಪ್ ಮಾಡಿ. ಬೆಳಗ್ಗೆಯೇ ಹೀಗೆಲ್ಲಾ ಆದರೆ ಮೂಡ್ ಆಫ್ ಆಗಿಬಿಡುತ್ತದೆ” ಎಂದು ಹೇಳಿ ಎದ್ದುಹೋಗಿದ್ದರು.
ಅದಾದ ಮೇಲೆ ಕ್ಯಾಸ್ಟ್ಯೂಮ್ ಹಾಕಿಕೊಂಡು ಬಂದು ಮೇಕಪ್ ಮ್ಯಾನ್ ಎದುರು ಕುಳಿತು ತಯಾರಾಗುವುದಕ್ಕೆ ನಿರ್ಮಲಾಳಿಗೆ ಒಂದು ಗಂಟೆಯಷ್ಟು ಸಮಯ ಬೇಕಾಯಿತು. ಸುಮಾರು ಇಪ್ಪತ್ತೆರಡು ವರ್ಷದಿಂದ ನಾಟಕದ ನಟಿಯಾಗಿರುವವಳು ನಿರ್ಮಲಾ. ಅವಳ ತಂದೆ ತಾಯಿಯೂ ಸಹ ನಾಟಕದಲ್ಲೇ ಇದ್ದವರು. ಹದಿನೈದು ವರ್ಷದ ಹುಡುಗಿಯಾಗಿದ್ದಾಗಲೇ ನಾಟಕದಲ್ಲಿ ಪಾತ್ರ ಮಾಡಲಾರಂಭಿಸಿದ ನಿರ್ಮಲಾಳಿಗೆ ಹೆಸರು ತಂದುಕೊಟ್ಟದ್ದು ಸುಭದ್ರೆಯ ಪಾತ್ರ. ‘ಚಕ್ರವ್ಯೂಹ’ ಎನ್ನುವ ನಾಟಕವದು. ಚಕ್ರವ್ಯೂಹ ಭೇದಿಸಲು ಹೋಗುತ್ತೇನೆಂದು ಹಠ ಹಿಡಿದ ಮಗ ಅಭಿಮನ್ಯುವನ್ನು ಮೊದಲು ರಮಿಸಿ ಬೇಡವೆಂದು ಹೇಳಿ, ಆಮೇಲೆ ದುಃಖದಿಂದಲೇ ಕಳುಹಿಸಿಕೊಡುವ ತಾಯಿ ಸುಭದ್ರೆಯಾಗಿ ನಿರ್ಮಲಾ ಅದ್ಭುತವಾಗಿ ಅಭಿನಯಿಸುತ್ತಿದ್ದಳು. ಸುಭದ್ರೆಯ ಪಾತ್ರವನ್ನು ಮೊದಲ ಬಾರಿಗೆ ಮಾಡಿದಾಗ ನಿರ್ಮಲಾಳಿಗಿನ್ನೂ ವಯಸ್ಸು ಇಪ್ಪತ್ತಮೂರು.
ಮದುವೆಯಾಗಿರಲಿಲ್ಲ. ಮಕ್ಕಳು ಇರಲಿಲ್ಲ. ಆದರೂ ತನ್ನ ವಯಸ್ಸು, ಅನುಭವಕ್ಕೆ ಮಿಗಿಲಾಗಿ ಅಭಿನಯಿಸಿದ್ದಳು. ನಿರ್ಮಲಾಳ ಗಂಡನೂ ಸಹ ನಾಟಕದಲ್ಲಿ ಪಾತ್ರ ಮಾಡುವವನೇ. ಇದ್ದ ಸಮಾನ ಆಸಕ್ತಿ ಅವರಿಬ್ಬರನ್ನೂ ಒಂದಾಗಿಸಿತ್ತು. ಅವರಿಬ್ಬರ ಪ್ರೀತಿಯ ಸಂಕೇತವಾಗಿ ಜನಿಸಿದ ಮಗನಿಗೀಗ ಒಂಭತ್ತು ವರ್ಷ.
ಇಂತಹ ನಿರ್ಮಲಾಳಿಗೆ ಈ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅದಾಗಿಯೇ ಹುಡುಕಿಕೊಂಡು ಬಂದಿತ್ತು. ಮಾಮೂಲಿ ಧಾರಾವಾಹಿಗಳಿಗಿಂತ ಭಿನ್ನವಾದ ಪೌರಾಣಿಕ ಧಾರಾವಾಹಿಯೊಂದನ್ನು ನಿರ್ಮಿಸಲು ಕನಕ ಎನ್ನುವ ಚಾನಲ್‌ನವರು ಸಿದ್ಧತೆ ಮಾಡಿಕೊಂಡಿದ್ದರು. ಶ್ರೀಕೃಷ್ಣನ ಕುರಿತಾದ ಧಾರಾವಾಹಿ ಅದಾಗಿತ್ತು. ಅದರಲ್ಲಿ ಯಶೋಧೆಯ ಪಾತ್ರವನ್ನು ಮಾಡುವುದಕ್ಕೆ ನಟನೆಯಲ್ಲಿ ಪ್ರೌಢತೆಯಿದ್ದ ನಟಿಯೊಬ್ಬಳ ಅಗತ್ಯವಿತ್ತು. ಧಾರಾವಾಹಿಯ ಯಶೋಧೆಯನ್ನೇ ಹುಡುಕುತ್ತಿದ್ದ ನಿರ್ದೇಶಕರಿಗೆ ಕಂಡದ್ದು ನಿರ್ಮಲಾ. ಅಭಿಮನ್ಯುವಿನ ತಾಯಿಯಾಗಿ ಅವಳು ಅಭಿನಯಿಸುತ್ತಿದ್ದ ರೀತಿಯನ್ನು ಮೆಚ್ಚಿಕೊಂಡ ನಿರ್ದೇಶಕರಿಗೆ ಈಕೆ ಬಾಲಕೃಷ್ಣನ ತಾಯಿಯೂ ಆದಾಳು ಎನಿಸಿತು. ನಾಟಕ ಮುಗಿದ ತಕ್ಷಣ ನಿರ್ಮಲಾಳನ್ನು ಮಾತನಾಡಿಸಿದರು. ಆಕೆಗೂ ಕೂಡಾ ಧಾರಾವಾಹಿಯಲ್ಲಿ ನಟಿಸುವ ಇಚ್ಛೆಯಿತ್ತು. ಆದರೆ ಅವಕಾಶ ದೊರಕಿಸಿಕೊಳ್ಳುವುದು ಹೇಗೆ ಎಂದು ಗೊತ್ತಿರಲಿಲ್ಲ ಅಷ್ಟೇ. ಹಲವಾರು ಸಲ ಅವಕಾಶ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರೂ ಆಗಿರಲಿಲ್ಲ. ಈಗ ನಿರ್ದೇಶಕರೇ ಬಂದು ಕೇಳಿದಾಗ ಅವಳಿಗೆ ಹುಡುಕುತ್ತಿದ್ದ ಬಳ್ಳಿಯನ್ನೇ ಕಾಲು ಎಡವಿದ ಅನುಭವ. ಮರುಮಾತಿಲ್ಲದೆ ಒಪ್ಪಿಕೊಂಡಳು. ನೆಪಮಾತ್ರಕ್ಕೆ ಎಂಬಂತೆ ಆಡಿಷನ್, ಸ್ಟ್ರೀನ್‌ಟೆಸ್ಟ್ ನಡೆಯಿತು. ನಿರ್ಮಲಾ ಯಶೋಧೆಯ ಪಾತ್ರಕ್ಕೆ ಆಯ್ಕೆಯಾಗಿದ್ದಳು.
ನಿರ್ಮಲಾಳಿಗೆ ನಿರಾಳತೆ ಕೊಟ್ಟ ವಿಷಯವೆಂದರೆ, ಶೂಟಿಂಗ್ ನಡೆಯುತ್ತಿದ್ದದ್ದು ಅವಳ ಊರಿನಲ್ಲಿಯೇ. ಅವಳೇನೂ ಮನೆ ಬಿಟ್ಟು, ಹೊರಗೆಲ್ಲೋ ಉಳಿದುಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಭರ್ಜರಿಯಾದ ಸೆಟ್ ಒಂದನ್ನು ಹಾಕಲಾಗಿತ್ತು. ಅಲ್ಲಿಯೇ ಈಗ ಪ್ರೋಮೋ ಶೂಟಿಂಗ್ ನಡೆಯುತ್ತಿತ್ತು.
*****
ಜಾತ್ರೆಯಂಗಣದಲ್ಲಿ ಮಕ್ಕಳು ಓಡಾಡಿದಂತೆ ಸೆಟ್ ತುಂಬೆಲ್ಲಾ ಓಡಾಡುತ್ತಿದ್ದ ನಿರ್ದೇಶಕರು ಬಾಲಕೃಷ್ಣನ ಪಾತ್ರ ಮಾಡುತ್ತಿದ್ದ ಹುಡುಗನ ಹತ್ತಿರ ಹೋಗಿ ನಿಂತು ಅವನ ಮೇಕಪ್ ಎಲ್ಲಾ ಸರಿಯಾಗಿದೆಯಾ ಎಂದು ನೋಡಿದರು. ಅಷ್ಟರಲ್ಲಿ ಸಹಾಯಕ ನಿರ್ದೇಶಕ ಈಗ ಶೂಟ್ ಮಾಡಲಿರುವ ದೃಶ್ಯಕ್ಕೆ ಬೇಕಾದ ಪರಿಕರಗಳನ್ನು ಸಿದ್ಧ ಮಾಡಿಟ್ಟಿದ್ದ. ಅದೆಲ್ಲಾ ಸರಿಯಾಗಿದೆ ಎಂದು ದೃಢೀಕರಿಸಿಕೊಂಡ ನಿರ್ದೇಶಕರು ಅದು ಕ್ಯಾಮರಾದೆದುರು ಹೇಗೆ ಕಾಣಬೇಕೆಂಬುವುದನ್ನು ಒಮ್ಮೆ ಸಹಾಯಕ ನಿರ್ದೇಶಕರಿಗೆ ವಿವರಿಸಿದರು. ನಂತರ ಅವರು ಬಂದುನಿಂತದ್ದು ನಿರ್ಮಲಾಳ ಮುಂದೆ. ಬಾಲಕೃಷ್ಣನ ಪಾತ್ರ ಮಾಡುವ ಹುಡುಗನನ್ನು ಬಳಿಗೆ ಕರೆದ ನಿರ್ದೇಶಕರು ಇಬ್ಬರನ್ನೂ ಸೇರಿಸಿ ಹೇಳತೊಡಗಿದರು- “ಈಗ ನೀವು ನಟಿಸಬೇಕಾದದ್ದೇನು ಎನ್ನುವುದು ನಿಮಗೆ ಗೊತ್ತಿದೆ. ಆದರೂ ಎಗ್ಸ್ಯಾಕ್ಟ್ ಆಗಿ ಈ ದೃಶ್ಯ ಹೇಗೆ ಬರಬೇಕು ಹೇಳುತ್ತೇನೆ ಕೇಳಿಕೊಳ್ಳಿ” ಎಂದವರು ದೃಶ್ಯವನ್ನು ವಿವರಿಸತೊಡಗಿದರು.
“ನೋಡಿ, ಈ ಕಂಬದ ಹತ್ತಿರ ಬೆಣ್ಣೆಯಿರುವ ಗಡಿಗೆ ಇದೆ. ಈಗ ತಾನೇ ಯಶೋಧೆ ಮೊಸರನ್ನು ಕಡೆದಿಟ್ಟು ಒಳಹೋಗಿದ್ದಾಳೆ. ತಾಯಿ ಒಳಗಿದ್ದಾಳೆ ಎನ್ನುವುದು ಕೃಷ್ಣನಿಗೆ ಗೊತ್ತಿದೆ. ಆಚೀಚೆ ನೋಡುತ್ತಾ, ಮೆಲ್ಲಗೆ ಬೆಣ್ಣೆ ಗಡಿಗೆಯ ಹತ್ತಿರ ಬಂದವನು ಅದನ್ನು ತೆಗೆದುಕೊಂಡು ಓಡಿಹೋಗುತ್ತಾನೆ. ಒಳಗಿನಿಂದ ಬಂದ ಯಶೋಧೆ ಬೆಣ್ಣೆ ಗಡಿಗೆ ಇಲ್ಲದ್ದು ನೋಡಿ ದಂಗಾಗುತ್ತಾಳೆ. ಮಗನದ್ದೇ ಕಿತಾಪತಿ ಇದು ಎಂದುಕೊಂಡವಳು ಇನ್ನೊಂದು ಕಂಬದ ಮರೆಯಲ್ಲಿ ಕೂತು ಬೆಣ್ಣೆ ತಿನ್ನುತ್ತಿರುವ ಕೃಷ್ಣನನ್ನು ಹೋಗಿ ಹಿಡಿದುಕೊಳ್ಳುತ್ತಾಳೆ. ಇದು ದೃಶ್ಯ.” ಎಂದವರು ನಟಿಸುವ ರೀತಿ ಹೇಗೆ? ಎನ್ನುವುದನ್ನು ಅಲ್ಲಲ್ಲಿ ಹೋಗಿ ನಿಂತು ಮತ್ತೊಮ್ಮೆ ವಿವರಿಸಿದರು. ಅವರಿಗಿಬ್ಬರಿಗೂ ಅರ್ಥವಾಗಿದೆ, ಯಾವುದೇ ಗೊಂದಲ ಇಲ್ಲ ಎಂದು ದೃಢವಾದ ಮೇಲೆ ಮಾನಿಟರ್ ತೆಗೆದುಕೊಂಡವರು ಸರಿಯಿದೆ ಎಂದು ಹೇಳಿ ಶೂಟಿಂಗ್‌ಗೆ ಸಿದ್ಧರಾದರು.
ನಿರ್ದೇಶಕರು ಹೇಳಿದಂತೆಯೇ ಬಾಗಿಲ ಹಿಂದುಗಡೆ ನಿಂತಿದ್ದಳು ನಿರ್ಮಲಾ, ಕೃಷ್ಣನ ತಾಯಿ ಯಶೋಧೆಯಾಗಿ. ಇಡೀ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಅಭಿನಯಿಸಬೇಕಿತ್ತು. ಲೈಟ್ಸ್…ಕ್ಯಾಮರಾ…ಆ್ಯಕ್ಷನ್ ಎಂದು ನಿರ್ದೇಶಕರು ಹೇಳಿದಾಗ ನಿರ್ಮಲಾಳ ಎದೆ ಧಸಕ್ಕೆಂದಿತು. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಬಂದ ಕೃಷ್ಣ ಕೈಯ್ಯನ್ನು ಚಾಚಿ ಬೆಣ್ಣೆ ಗಡಿಗೆ ತೆಗೆದುಕೊಂಡವನು ಪುಟುಪುಟು ಓಡಿದ. ಹೆಜ್ಜೆಯಿಡುತ್ತಾ ಬಂದದ್ದು… ಕೈಚಾಚಿದ್ದು… ಓಡಿದ್ದು… ಇದು ನಿರ್ಮಲಾಳ ಮನಸ್ಸಿನಲ್ಲಿ ಗಿರಕಿ ಹೊಡೆಯತೊಡಗಿತ್ತು. ಅವಳು ಈಗ ಬಾಗಿಲ ಮರೆಯಿಂದ ಬೆಣ್ಣೆ ಗಡಿಗೆಯಿದ್ದ ಕಂಬದಾಚೆಗೆ ಹೋಗಬೇಕಿತ್ತು. ಆದರೆ ಅವಳು ಚಲನೆಯಿಲ್ಲದೆ ನಿಂತಿದ್ದಳು. ಇವಳ ಪ್ರವೇಶಕ್ಕೆ ಕಾದಿದ್ದ ನಿರ್ದೇಶಕರು ಇವಳು ಪ್ರವೇಶಿಸದೇ ಇದ್ದದ್ದನ್ನು ನೋಡಿ “ಕಟ್ ಕಟ್” ಎಂದು ಕೂಗಿಕೊಂಡರು. “ನಿರ್ಮಲಾ, ಏನಮ್ಮಾ, ಏನು ಮಾಡುತ್ತೀದ್ದೀರಿ. ಪ್ರಜ್ಞೆ ಇದೆಯಾ ನಿಮಗೆ? ಒಂದೇ ಶಾಟ್ ಅಂತ ಮೊದಲೇ ಹೇಳಿದ್ದೇನಲ್ಲಾ! ಅವನು ಬೆಣ್ಣೆ ಗಡಿಗೆ ತೆಗೆದುಕೊಂಡು ಹೋದಲ್ಲಿಗೇ ನೀವು ಬರಬೇಕಿತ್ತು. ಸರಿಯಾಗಿ ಗಮನ ಕೊಟ್ಟು ಮಾಡಿ” ಎಂದವರು ಇನ್ನೊಂದು ಟೇಕ್‌ಗೆ ಸಿದ್ಧರಾದರು. ಅದೂ ಸರಿ ಬರಲಿಲ್ಲ. “ನಿರ್ಮಲಾ, ಬೆಣ್ಣೆ ಕದ್ದ ಕೃಷ್ಣನನ್ನು ಹೋಗಿ ಹಿಡಿದುಕೊಂಡ ಮೇಲೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಮ್ಮ. ನೀನು ಎಲ್ಲೋ ನೋಡುತ್ತಿದ್ದರೆ ಸರಿ ಕಾಣುವುದಿಲ್ಲ” ಎಂದಿದ್ದರು ಈ ಸಲ. ಹೀಗೇ ಅದೆಷ್ಟೋ ಸಲ ನಿರ್ಮಲಾಳ ಏಕಾಗ್ರತೆ ಕಳೆದುಹೋಗಿ ಆ ದೃಶ್ಯ ಓಕೆ ಆಗುವಾಗ ಹದಿನಾರೋ ಹದಿನೇಳೋ ಟೇಕ್ ಮುಗಿದುಹೋಗಿತ್ತು…
ಬೆಳಗ್ಗೆ ಎಂಟು ಗಂಟೆಗೆ ಕೈ ಕಾಲು ಸ್ವಾಧೀನ ಇಲ್ಲದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಆ ತಾಯಿ ಗಂಟೆ ಹತ್ತು ಕಳೆದರೂ ಅಸಹಾಯಕಳಂತೆ ಮೆಡಿಕಲ್ ರಿಪೋರ್ಟ್‌ಗಳೆಲ್ಲವನ್ನೂ ಕೈಯ್ಯಲ್ಲಿ ಹಿಡಿದು ವೈದ್ಯರ ಕೋಣೆಯ ಹೊರಗೆ ಕೂತಿದ್ದಳು. ಅವಳ ಜೊತೆಗೆ ಮಗಳೂ ಸಹ ಇದ್ದಳು. ಆ ತಾಯಿ ಈಗಾಗಲೇ ನಾಲ್ಕೈದು ಸಲ ರಿಸೆಪ್ಶನಿಸ್ಟ್ ಹತ್ತಿರ ಹೋಗಿ, “ನನಗೆ ಸ್ವಲ್ಪ ಬೇಗ ಹೋಗಬೇಕಿತ್ತು. ಡಾಕ್ಟರ್ ಹತ್ತಿರ ಬೇಗ ಕಳಿಸುವುದಕ್ಕಾಗುತ್ತದಾ?” ಎಂದು ಕೇಳಿ, ಬೈಸಿಕೊಂಡಿದ್ದಳು. ಕೊನೆಗೂ ಅವಳ ಸರದಿ ಬಂತು. “ಚಿನ್ನು, ನೀನಿಲ್ಲೇ ಕೂತಿರು. ನಾನು ತಮ್ಮನನ್ನು ಒಳಗೆ ಕರೆದುಕೊಂಡು ಹೋಗಿ ಬರುತ್ತೇನೆ” ಎಂದವಳು ಗಡಿಬಿಡಿಯಿಂದ ಮಗನನ್ನು ವ್ಹೀಲ್‌ಚೇರಿನಲ್ಲಿ ಕೂರಿಸಿದವಳು ಅದನ್ನು ತಾನೇ ತಳ್ಳಿಕೊಂಡು ಡಾಕ್ಟರ್ ಹತ್ತಿರ ಹೋದಳು.
ತನ್ನ ಛೇಂಬರ್ ಒಳಬಂದ ತಾಯಿ ಮಗನ ಕಡೆಗೆ ನೋಡಿದ ಡಾಕ್ಟರ್ “ಅವನನ್ನು ಅಲ್ಲಿ ಮಲಗಿಸಿ” ಎಂದು ಬೆಡ್‌ವೊಂದರ ಕಡೆಗೆ ಕೈ ತೋರಿಸಿದರು. “ಈಗ ಒಳಬಂದ ಪೇಶೆಂಟ್‌ನ ಮೆಡಿಕಲ್ ರಿಪೋರ್ಟ್ ತಂದುಕೊಡಿ” ಎಂದು ಫೋನಿನಲ್ಲಿ ಹೇಳಿದವರು ಸ್ಕೆತಾಸ್ಕೋಪನ್ನು ಕೊರಳಿಗೆ ಹಾಕಿಕೊಂಡು ಎದ್ದುನಿಂತರು. ಅವಳು ವ್ಹೀಲ್‌ಚೇರ್‌ನಿಂದ ಮಗನನ್ನು ಎತ್ತಿಕೊಂಡಾಗ ಆ ಹುಡುಗ ತನ್ನ ತಾಯಿಯ ಮುಖವನ್ನು ನೋಡುತ್ತಾ ಮುಗ್ಧವಾಗಿ ನಗುತ್ತಿದ್ದ. ಹಾಸಿಗೆ ಮೇಲೆ ಮಲಗಿಸಿದ ಅವಳು ಹಾಗೆಯೇ ಮಗನನ್ನು ನೋಡುತ್ತಾ ನಿಂತಳು. ಪರೀಕ್ಷೆ ಮುಗಿಸಿದ ವೈದ್ಯರು “ಹ್ಞೂ ವ್ಹೀಲ್‌ಚೇರ್ ಮೇಲೆ ಕೂರಿಸಬಹುದು” ಎಂದರು. ಹಾಗೆಯೇ ಮಾಡಿದ ಅವಳು ಗಡಿಯಾರದ ಕಡೆಗೆ ನೋಡಿದಳು. ಕ್ಷಣವೊಂದು ಯುಗವಾದಂತೆ ಅವಳಿಗೆ ಅನಿಸುತ್ತಿತ್ತು.
ಅಷ್ಟರಲ್ಲಿ ವೈದ್ಯರು ಕೇಳಿದ್ದ ಮೆಡಿಕಲ್ ರಿಪೋರ್ಟ್ ಅವರ ಕೈಸೇರಿತ್ತು. ಅದರ ಕಡೆಗೊಮ್ಮೆ ದೃಷ್ಟಿ ಹರಿಸಿದ ಅವರು ಆ ಹುಡುಗನ ಬಲಗೈಯ್ಯನ್ನು ಎತ್ತಿ ಹಿಡಿದು ನಿಧಾನಕ್ಕೆ ಕೆಳಗೆ ಬಿಟ್ಟರು. ಅದು ಬಲವೇ ಇಲ್ಲದಂತೆ ಕೆಳಕ್ಕೆ ಚಲಿಸಿತು. ಎಡಗೈಯ್ಯನ್ನು ಹಿಡಿದು ಪರೀಕ್ಷಿಸಿದಾಗಲೂ ಹಾಗೆಯೇ ಆಯಿತು. ಕಾಲುಗಳನ್ನು ಮುಟ್ಟಿ ನೋಡತೊಡಗಿದರು. ಅವುಗಳಲ್ಲಿಯೂ ಶಕ್ತಿ ಇರಲಿಲ್ಲ. ಕೈಕಾಲುಗಳೆಲ್ಲಾ ಕುಕ್ಕರ್‌ನೊಳಗಿಟ್ಟು ಕುದಿಸಿದ ಬಸಳೆ ಬಳ್ಳಿಯಂತೆ ಆಗಿಹೋಗಿದ್ದವು.
*****
“ಬೆಣ್ಣೆ ಕದ್ದು ಸಿಕ್ಕಿಬಿದ್ದ ಕಳ್ಳ ಕೃಷ್ಣನನ್ನು ನೀನು ಹಿಡಿದುಕೊಂಡಾಗಿದೆ. ಬಾಯಿ ತೆರೆಯುವ ಹಾಗೆ ಅವನನ್ನು ಒತ್ತಾಯಿಸಬೇಕು. ಅವನು ಸುಲಭಕ್ಕೆ ಬಾಯಿ ತೆರೆಯುವುದಿಲ್ಲ. ನೀನು ಮೆದುವಾಗಿ ಕಿವಿ ಹಿಂಡಿದಾಗ ಅವನು ಬಾಯಿ ತೆರೆಯುತ್ತಾನೆ. ಆಗ ಅದರಲ್ಲಿ ಮೂರೂ ಲೋಕವನ್ನು ಕಂಡ ನಿನ್ನೊಳಗೆ ಅತ್ಯಂತ ಅಚ್ಚರಿಯ ಭಾವನೆ ಮೂಡುತ್ತದೆ. ನೀನು ಬಾಯಿಯ ಮೇಲೆ ಕೈಯ್ಯನ್ನಿಟ್ಟು ಆ ಆಶ್ಚರ್ಯವನ್ನು ತೋರಿಸಬೇಕು. ಆಮೇಲೆ ಅವನು ನಿನ್ನ ಮಗನಲ್ಲ; ದೇವರು ಎನಿಸಿ ಕೈಮುಗಿಯಬೇಕು. ಸರಿಯಾಗಿ ಕೇಳಿಸಿಕೋ, ಬಾಯಿ ತೆರೆಯುವುದಕ್ಕೆ ಹೇಳಿದಾಗ ನಿನ್ನ ಮನಸ್ಸಿನೊಳಗಡೆ ಇರಬೇಕಾದದ್ದು ವಾತ್ಸಲ್ಯ ಭಾವ. ಆದರೆ ಮುಖದಲ್ಲಿ ತೋರಿಸಬೇಕಾದದ್ದು ಕೋಪ. ಆಮೇಲೆ ಬಾಯಿಯಲ್ಲಿ ಬ್ರಹ್ಮಾಂಡ ಕಂಡಾಗ ಅದ್ಭುತದ ಭಾವ ಇರಬೇಕು. ಆ ಭಾವನೆ ಆಮೇಲೆ ಭಕ್ತಿಯ ಭಾವವಾಗಿ, ಧನ್ಯತೆಯ ಭಾವವಾಗಿ ಬದಲಾಗಬೇಕು. ದೇವರೇ ನಿನ್ನ ಮಗನಾಗಿ ಹುಟ್ಟಿದ್ದನ್ನು ತಿಳಿದುಕೊಂಡರೆ ಯಾವ ರೀತಿಯ ಭಾವನೆ ಮೂಡುತ್ತದೆಯೋ ಆ ಭಾವನೆ ನಿನ್ನದಾಗಿರಬೇಕು” ಮುಂದಿನ ದೃಶ್ಯವನ್ನು ನಿರ್ಮಲಾಳಿಗೆ ವಿವರಿಸಿದ ನಿರ್ದೇಶಕರು ಕೃಷ್ಣನ ಪಾತ್ರ ಮಾಡುತ್ತಿದ್ದ ಹುಡುಗನತ್ತ ನೋಡಿ “ನೋಡೋ ನೀನು ತುಂಟತನದ ಎಕ್ಸ್ಪ್ರೆಶನ್ ಕೊಟ್ಟರೆ ಸಾಕು” ಎಂದು ಹೇಳಿ, ಅದು ಹೇಗೆ ಎನ್ನುವುದನ್ನೂ ಮಾಡಿ ತೋರಿಸಿದರು. ಒಂದು ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದ ಅವರೀಗ ಮೊದಲಿಗಿಂತ ನಿರಾಳರಾಗಿದ್ದರು. “ಎಪಿಸೋಡ್ ಶೂಟ್ ಮಾಡುವಾಗ ಡೈಲಾಗ್ ಕೂಡಾ ಇರುತ್ತದೆ. ಆದರೆ ಈ ಪ್ರೋಮೋದಲ್ಲಿರುವುದು ಅಭಿನಯ ಮಾತ್ರ. ಆದಕಾರಣ ನೀವು ಸರಿಯಾಗಿ ಫೇಶಿಯಲ್ ಎಕ್ಸ್ಪ್ರೆಶನ್ ಕೊಡಲೇಬೇಕು. ಇಲ್ಲದಿದ್ದರೆ ಇಡೀ ದೃಶ್ಯ ಮಂಕಾಗಿಬಿಡುತ್ತದೆ” ಎಂದು ಇಬ್ಬರತ್ತಲೂ ನೋಡುತ್ತಾ ಹೇಳಿದ ಅವರು ಸೆಟಪ್ ಎಲ್ಲಾ ಸರಿಯಾಗಿದೆಯಾ ಎಂದು ಪರೀಕ್ಷಿಸತೊಡಗಿದರು.
“ಲೈಟ್ಸ್…ಕ್ಯಾಮರಾ…ಆ್ಯಕ್ಷನ್” ಎಂದು ನಿರ್ದೇಶಕರು ದೊಡ್ಡ ಧ್ವನಿಯಲ್ಲಿ ಹೇಳಿದಾಗ ನಿರ್ಮಲಾ ತನ್ನ ಮಗನ ಮುಂದೆಯೇ ಇದ್ದಳು. ನಿರ್ದೇಶಕರು ಹೇಳಿದಂತೆಯೇ ನಟಿಸುತ್ತಿದ್ದರು ಇಬ್ಬರೂ. ಈಗಾಗಲೇ ಒಂದು ದೃಶ್ಯ ಅಭಿನಯಿಸಿ ಕ್ಯಾಮರಾದೆದುರಿನ ನಟನೆಗೆ ಒಗ್ಗಿಹೋಗಿದ್ದ ನಿರ್ಮಲಾಳೊಳಗೆ ಅಳುಕು ಮೂಡಿದ್ದು ಕೃಷ್ಣ ತನ್ನ ಬಾಯನ್ನು ವಿಸ್ತರಿಸಿದಾಗ. ಅವಳ ಮುಖದಲ್ಲಿ ಅದ್ಭುತ ಭಾವದ ಬದಲಿಗೆ ಬೇಸರದ ಛಾಯೆ. ಕಟ್ ಹೇಳಿದ ನಿರ್ದೇಶಕರು ಬಳಿಬಂದು ಮತ್ತೊಮ್ಮೆ ವಿವರಣೆ ನೀಡಿದರು. ನಿರ್ಮಲಾಳ ಹಣೆಯಲ್ಲಿ ಬೆವರು ಮೂಡಿರುವುದನ್ನು ಕಂಡು “ಟಚಪ್” ಎಂದರು ದೊಡ್ಡದಾಗಿ. ಹುಡುಗನೊಬ್ಬ ಬಂದು, ಬೆವರಿನಿಂದ ಮಂಕಾಗಿದ್ದ ಅವಳ ಹಣೆಯ ಚರ್ಮಕ್ಕೊಂದಷ್ಟು ಬಣ್ಣ ಬಳಿದು ರಂಗಾಗಿಸಿದ.
“ಬಾಯಿ ಓಪನ್ ಮಾಡು” ಎಂದರು ವೈದ್ಯರು ಆ ಹುಡುಗನಿಗೆ. ಅವನಿಗೆ ಹೆಚ್ಚು ಅಗಲಕ್ಕೆ ಬಾಯಿ ತೆರೆಯಲು ಆಗಲೇ ಇಲ್ಲ.
ಮೆಡಿಕಲ್ ರಿಪೋರ್ಟ್‌ನತ್ತ ಮತ್ತೆ ನೋಡಿದ ವೈದ್ಯರು ಅಡ್ಡಡ್ಡ ತಲೆಯಾಡಿಸುತ್ತಾ, “ಇಲ್ಲಮ್ಮ, ನನ್ನ ಪ್ರಯತ್ನ ನಾನು ಮಾಡಿಯಾಗಿದೆ. ಇನ್ನಿವನು ಚೇತರಿಸುವ ಲಕ್ಷಣ ಇಲ್ಲ. ಇವನಿರುವ ಹಾಗೆಯೇ ನೀವು ಒಪ್ಪಿಕೊಳ್ಳಬೇಕಷ್ಟೇ. ಬೇರೇನೂ ದಾರಿಯಿಲ್ಲ” ಎಂದು ನಿರಾಶೆಯಿಂದ ಹೇಳಿದಾಗ ಆ ತಾಯಿಯ ಕಣ್ಣಲ್ಲಿ ನೀರು.
*****
ಯಾರೂ ಇಲ್ಲದ ದಿಕ್ಕನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಅವಳು “ಸಾರ್ ನಾನು ರೆಡಿ” ಅಂದಳು. ಮತ್ತೇನೂ ಸಮಸ್ಯೆಯೇ ಇಲ್ಲದೆ ಆ ದೃಶ್ಯ ಮುಂದಿನ ಟೇಕ್‌ನಲ್ಲೇ ಓಕೆ ಆಯಿತು. ಹಿಂದಿನ ದೃಶ್ಯಕ್ಕಿಂತ ಅದ್ಭುತವಾಗಿ ಬಂದಿತ್ತು ಈ ದೃಶ್ಯ. ಶೂಟಿಂಗ್ ಸೆಟ್‌ನಲ್ಲಿದ್ದವರೆಲ್ಲಾ ಅವಳ ಅಭಿನಯ ಕಂಡು ಖುಷಿಯಿಂದ ಚಪ್ಪಾಳೆ ತಟ್ಟಿದ್ದರು. “ಯಸ್, ಈ ರೀತಿ ಆ್ಯಕ್ಟಿಂಗ್ ಮಾಡುವ ನಿರ್ಮಲಾ ನಮ್ಮ ಧಾರಾವಾಹಿಗೆ ಬೇಕಾದದ್ದು” ಎಂದ ನಿರ್ದೇಶಕರ ಮುಖದಲ್ಲಿ ಸಂತಸದ ನಗು.
ಆತುರಾತುರವಾಗಿ ಬಣ್ಣ ಕಳಚಿದ ಅವಳು ಅಲ್ಲಿಂದ ಹೊರಡುತ್ತಲೇ ಫೋನು ಮಾಡತೊಡಗಿದಳು. “ಚಿನ್ನು, ಇನ್ನೊಂದರ್ಧ ಗಂಟೆಯಲ್ಲಿ ಮನೆಯಲ್ಲಿರುತ್ತೇನೆ. ತಮ್ಮ ಹೇಗಿದ್ದಾನೆ? ಅವನು ಊಟ ಮಾಡಿದನಾ? ಅಥವಾ ನಾನೇ ಬೇಕೆಂದು ಹಠ ಮಾಡಿದ್ದಾನಾ?…” ಎಂದು ಕೇಳುತ್ತಲೇ ರಿಕ್ಷಾವೊಂದಕ್ಕೆ ಕೈ ಅಡ್ಡಹಿಡಿದಳು.
ಆಸ್ಪತ್ರೆಯಿಂದ ಮಗನನ್ನೂ ಮಗಳನ್ನೂ ಕರೆದುಕೊಂಡು ರಿಕ್ಷಾದಲ್ಲಿ ಹೊರಟಿದ್ದ ಆ ತಾಯಿ ಒಂದುಕಡೆ ರಿಕ್ಷಾ ನಿಲ್ಲಿಸಿ, ಅದರಿಂದಿಳಿದಾಗ ಗಂಟೆ ಹನ್ನೊಂದು ನಲುವತ್ತೈದಾಗಿತ್ತು. ಆಟೋದವನಿಗೆ ಹಣ ಕೊಟ್ಟವಳು ಮಗಳಲ್ಲಿ “ಆದಷ್ಟು ಬೇಗ ಬರುತ್ತೇನೆ. ಅವನಿಗೆ ನೀನೇ ಊಟ ಮಾಡಿಸಬೇಕು. ಹಾಗೆ ಊಟ ಮಾಡದೆ ಹಠ ಹಿಡಿದರೆ ನನಗೆ ಫೋನ್ ಮಾಡು…” ಎಂದವಳು ಮಕ್ಕಳಿಬ್ಬರನ್ನೂ ಎಲ್ಲಿ ಬಿಡಬೇಕೆಂದು ಆಟೋದವನಿಗೆ ತಿಳಿಸಿದಳು. ರಿಕ್ಷಾ ಹೋಗುವುದನ್ನೇ ನೋಡುತ್ತಾ, ಹೃದಯ ಗಟ್ಟಿ ಮಾಡಿಕೊಂಡವಳು ಸೀದಾ ಬಂದು ಕೈಮುಗಿದದ್ದು ಕೋಪದ ಮುಖ ಹೊತ್ತಿದ್ದ ಧಾರಾವಾಹಿ ನಿರ್ದೇಶಕರಿಗೆ…

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.