ಈ ನಾಯಿ ಕಚ್ಚುವುದಿಲ್ಲ
ಕಾಲು ಕೆದರಿ ಬೊಗಳಲು ನಿಲ್ಲುವ
ಈ ನಾಯಿ ಕಚ್ಚುವುದಿಲ್ಲ
ಕಚ್ಚೇ ಬಿಡುವು ಹಾಗೆ ದೊಡ್ಡ ಪ್ರಮಾಣದಲ್ಲಿ
ರವ, ರಂಪಾಟ ಮಾಡುತ್ತದೆ
ಹಿಂದೆ ಸರಿಯುತ್ತಲೇ ಇರುತ್ತದೆ
ಕಲ್ಲು! ಗಿಡ-ಗಂಟಿ, ಇನ್ನೂ ಎಲ್ಲೆಲ್ಲೋ…!
ಮೂತ್ರ ವಿಸರ್ಜಿಸುತ್ತದೆ
ಬೈದರೆ, ಬಡೆದರೆ ಬಗ್ಗುವುದಿಲ್ಲ
ನೀರು ಎರಚಲು ಹೋದರೆ ಮಾತ್ರ
ಓಡಿ ಹೋಗುತ್ತದೆ
ಬಾಲ ಮಾತ್ರ ಡೊಂಕೇ ಆಗಿರುತ್ತದೆ
ಬಹುಶಃ ಇದಕ್ಕೆ
ಡಗ್ಗು ಹತ್ತಿದಂತಿದೆ
ಹಾದಿ, ಬೀದಿಯಲ್ಲಿ ಅಗ್ಗದ ಧ್ವನಿಯಲ್ಲಿ
ಗುಗ್ಗುತ್ತಲೇ ಇರುತ್ತದೆ
ಏನೇನೋ ಕಕ್ಕುತ್ತದೆ
ಅದನ್ನೇ ನೆಕ್ಕುತ್ತದೆ
ಬಹುಶಃ ಇದಕ್ಕೆ
ಮೈ, ಮನಕ್ಕೆಲ್ಲ ಕಜ್ಜಿಯೂ ಹತ್ತಿದಂತಿದೆ
ದುಖಾನ್, ಮಾರ್ಕೇಟ್, ಮನೆ, ನೆರೆಹೊರೆ,
ಅಂಗಳ, ಅಡವಿ ಎಲ್ಲೇ ಬಿದ್ದಿರಲಿ, ಓಡಾಡುತ್ತಿರಲಿ
ಪರಚಿಕೊಳ್ಳುತ್ತಲೇ ಇರುತ್ತದೆ
‘ಹಚಿ’ ಎಂದರೆ ಹತ್ತಿರ, ಹತ್ತಿರವೇ ಬರುತ್ತದೆ
ಎಲ್ಲಿಲ್ಲದ ಅತೀ ವಿನಯ ತೋರುತ್ತದೆ
ಎದೆಯಲ್ಲಿ ಜಂತಿ ಎಣೆಸುವ ಕುಟಿಲ ತಂತ್ರವನ್ನೇ ನೇಯುತ್ತಿರುತ್ತದೆ
ಈಗೀಗ ತಲೇ ಜಾಡಿಸುತ್ತಲೇ
ಒಮ್ಮೆ ಬೊಗಳುತ್ತದೆ
ಮೊಗದೊಮ್ಮೆ ಅಳುತ್ತದೆ
ನರನಾಡಿ ಸತ್ತಹಾಗೆ ತೆಪ್ಪಗೆ ಬಿದ್ದಿರುತ್ತದೆ
ಒಮ್ಮೆಲೇ ಬುದುಗ್ಗನ್ನೇ ಎದ್ದು ಏನೇನೋ ಬಡಬಡಿಸುತ್ತದೆ
ಎದೆ ನೋವೆಂದು ಹಲುಬುತ್ತದೆ
ಸಂಕಟ!
ಈ ಕಣ್ಣಿನಿಂದ ನೋಡಲಾಗದೆ
ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲು
ವೈದ್ಯರಲ್ಲಿ ಮನವಿ ಮಾಡಿಕೊಂಡಿರುವೆ!
ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, ‘ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.