ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ “ಅಣ್ಣನ ನೆನಪು” ಕೃತಿಯ ಕುರಿತು ಪಾಲಾಕ್ಷಪ್ಪ ಎಸ್.ಎನ್. ಬರಹ ನಿಮ್ಮ ಓದಿಗೆ
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ತಂದೆ ಕುವೆಂಪುರವರೊಂದಿಗಿನ ನೆನಪುಗಳೇ ‘ಅಣ್ಣನ ನೆನಪು’ ಕೃತಿ. ತಂದೆ ಕುವೆಂಪುರವರನ್ನು ಇವರ ನಾಲ್ಕು ಮಕ್ಕಳಾದ ತೇಜಸ್ವಿ, ಚೈತ್ರ (ತೇಜಸ್ವಿ ತಮ್ಮ), ಕಲಾ, ತಾರಿಣಿ ಇವರು ‘ಅಣ್ಣ’ ಎಂದೇ ಕರೆಯುತ್ತಿದ್ದರು. ಕುವೆಂಪುರವರು ತಂದೆಯಾಗಿ, ಕೌಟುಂಬಿಕ ವ್ಯಕ್ತಿಯಾಗಿ ಇವರ ನಡವಳಿಕೆಗಳು, ಇವರ ವೃತ್ತಿ- ಪ್ರವೃತ್ತಿ, ಓದು-ಬರಹ, ಆಚಾರ-ವಿಚಾರ, ತಾಯಿ ಹೇಮಾವತಿ ಬಗ್ಗೆ, ಕೌಟುಂಬಿಕ ವಿಚಾರಗಳ ಬಗ್ಗೆ, ತೇಜಸ್ವಿಯವರ ಬಗೆಗಿನ ವಿವರಗಳೂ ಇರುವುದರಿಂದ ಭಾಗಶಃ ತೇಜಸ್ವಿಯವರ ಆತ್ಮಕತೆಯಂತಾಗಿ, ಕನ್ನಡ ಸಂಸ್ಕೃತಿಯ ಚರಿತ್ರೆಯಾಗಿ ಈ ಎಲ್ಲಾ ವಿಷಯಗಳು ಮೇಳೈಸಿ ‘ಅಣ್ಣನ ನೆನಪು’ ವಿಶಿಷ್ಟ ಕೃತಿಯಾಗಿ ಮೂಡಿಬಂದಿದೆ. 1996 ರಲ್ಲಿ ಮೊದಲ ಅಚ್ಚಾದ ಈ ಕೃತಿ, 2024 ಇಸ್ವಿ ಹೊತ್ತಿಗೆ 26ನೇ ಮುದ್ರಣವನ್ನು ಕಂಡಿದೆ! ಮೈಸೂರಿನ ‘ಪುಸ್ತಕ ಪ್ರಕಾಶನ’ ಪ್ರಕಟಿಸಿದ ಈ ಪುಸ್ತಕದ ಬೆಲೆ ₹255. 41 ಅಧ್ಯಾಯಗಳೊಂದಿಗೆ, 234 ಪುಟಗಳ ನೆನಪುಗಳನ್ನು ಹೊಂದಿದೆ.

(ಕುವೆಂಪು)
ಕುವೆಂಪು ಕೆಲಸಕ್ಕೆ ಸೇರಿದಾಗ ಇವರಿಗೆ 90 ರೂಪಾಯಿ ಸಂಬಳ. ವೈಸ್ ಛಾನ್ಸಲರ್ ಆದಾಗಲೂ ಇವರ ಸಂಬಳ ಒಂದು ಸಾವಿರ ರೂಪಾಯಿ. ಕವನ ಸಂಕಲನಗಳು ಖರ್ಚಾಗುತ್ತಿದ್ದುದು ಕಡಿಮೆಯೇ. ಇವರ ‘ರಾಮಾಯಣ ದರ್ಶನಂ’ ಕೃತಿ ಪ್ರಕಟಿಸಲು ಪ್ರಕಾಶಕರು ಕುವೆಂಪುರವರೇ ದುಡ್ಡು ಕೊಡಬೇಕೆಂದು ಕೇಳಿದ್ದರಂತೆ! ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹಗುರವಾಗಿ ಪರಿಗಣಿಸಿ ವೆಚ್ಚಮಾಡಲು ಸಾಧ್ಯವೇ ಇರಲಿಲ್ಲ. ಕ್ಷೌರ ಮಾಡಿಕೊಳ್ಳುವ ಬ್ಲೇಡುಗಳ ಕಾಗದದ ಕವರಿನ ಮೇಲೆ ಸಹ ಅದರಲ್ಲಿ ಕ್ಷೌರ ಆರಂಭಿಸಿದ ದಿನಾಂಕವನ್ನು ಬರೆದಿಡುತ್ತಿದ್ದರು. ಒಂದೊಂದು ಬ್ಲೇಡನ್ನು ಇಂತಿಷ್ಟು ದಿನ ಉಪಯೋಗಿಸಲೇಬೇಕೆಂದು ತೀರ್ಮಾನಿಸಿದ್ದರು. ಹಣದ ಬೆಲೆ, ಕಾಲದ ಬೆಲೆ, ಮನುಷ್ಯನ ಆತ್ಮಗೌರವಕ್ಕೆ ಬೆಲೆ, ಇವೆಲ್ಲ ಕುವೆಂಪುರವರ ದೃಷ್ಟಿಕೋನದ ವಿವಿಧ ಅಭಿವ್ಯಕ್ತಿಗಳಾಗಿದ್ದವು. ನನ್ನ ಎಷ್ಟೋ ಖರ್ಚುಗಳಿಗೆ ಅಮ್ಮ “ಅಣ್ಣನ ಮುಂದಿನ ತಿಂಗಳ ಸಂಬಳ ಬರಲಿ ತಾಳು” ಎಂದು ಹೇಳಿದ್ದನ್ನು ತೇಜಸ್ವಿಯವರು ನೆನಪಿಸಿಕೊಳ್ಳುತ್ತಾರೆ.
‘ತಂದೆಗೂ ಮಗನಷ್ಟೇ ವಯಸ್ಸು’ ಎಂಬ ಮಾತಿದೆ. ಮಗ/ಮಗಳು ಹುಟ್ಟಿದ ದಿನವೇ ಗಂಡು ತಂದೆ ಅನ್ನಿಸಿಕೊಳ್ಳುವುದರಿಂದ, ತಂದೆಯೂ ಅಂದೇ ಹುಟ್ಟಿರುತ್ತಾನೆ. ಕುವೆಂಪುರವರನ್ನು ಅನೇಕರು ಅನೇಕ ರೀತಿಯಲ್ಲಿ ಪರಿಚಯ ಮಾಡಿಕೊಡಬಹುದು; ಆದರೆ ತೇಜಸ್ವಿ ಕಣ್ಣು ಬಿಟ್ಟಾಗ ಕಂಡಿದ್ದೇ ತಾಯಿ ಹಾಗೂ ತಂದೆ ಕುವೆಂಪುರವರನ್ನು. ಹಾಗಾಗಿ ತೇಜಸ್ವಿಯವರು ಕುವೆಂಪುರವರನ್ನು ಪರಿಚಯಿಸುವ ಪರಿ ವಿಭಿನ್ನ ವಿಶಿಷ್ಟ ಹಾಗು ಸಹಜ ಸುಂದರವಾಗಿದೆ.
ಕುವೆಂಪು ಒಬ್ಬ ತಂದೆಯಾಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಮಾಡಿದ ಪ್ರಯತ್ನಗಳು, ಸ್ನಾನ ದ್ವೇಷಿಗಳಾದ ತೇಜಸ್ವಿ ಮತ್ತು ಇವರ ತಮ್ಮ ಚೈತ್ರನನ್ನು ಅಮ್ಮ ಸ್ನಾನ ಮಾಡಿಸಿದ ಪರಿ, ಇವರ ತುಂಟಾಟದ ಗುಟ್ಟುಗಳು ಹೊರಬಂದ ರೀತಿ, ಶಿಕ್ಷಕರಿಗೆ ತಿಳಿಸದೆ ಮಕ್ಕಳು ಶಾಲೆಯಿಂದ ಪರಾರಿಯಾಗಿ ಮನೆಗೆ ಬಂದ ಸಂದರ್ಭದಲ್ಲಿ ಕುವೆಂಪುರವರಿಗಾದ ಅಚ್ಚರಿ, ಅಮ್ಮನ ಮನೆ ಪಾಠ, ಕುವೆಂಪುರವರು ‘ಇ’ ಅಕ್ಷರದಲ್ಲಿ ಇಲಿ ಚಿತ್ರ ಬಿಡಿಸಲು ಕಲಿಸಿದ್ದು, ಶಾಲೆ ಬದಲಿಸಿದ ಪ್ರಸಂಗಗಳನ್ನೆಲ್ಲ ತೇಜಸ್ವಿಯವರು ಹೃದಯಂಗಮವಾಗಿ ವರ್ಣಿಸಿದ್ದಾರೆ. ಹಾಗೆ ತಂದೆವರು “ಓದದೆ ತಿರುಗಿಕೊಂಡಿದ್ದರೆ ಯಾರು ನಿಮಗೆ ಮನೆಯಲ್ಲಿ ಕೂರಿಸಿ ಊಟ ಹಾಕುತ್ತಾರೆ? ಮನುಷ್ಯ ಊಟ ಸಂಪಾದಿಸಲು ಏನಾದರೂ ಕೆಲಸ ಮಾಡಲೇಬೇಕು ನೀವು ಸ್ಕೂಲಿಗೆ ಹೋಗದಿದ್ದರೆ ನಿಮ್ಮನ್ನು ದನ ಕಾಯಲು ಕಳಿಸಬೇಕಾಗುತ್ತದೆ” ಎಂದು ರೇಗಿದ್ದನ್ನು ತೇಜಸ್ವಿಯವರು ನೆನಪಿಸಿಕೊಳ್ಳುತ್ತಾರೆ.
ಅಣ್ಣ (ತಂದೆ ಕುವೆಂಪು) ದಾಸಿ ಹೆಸರಿನ ಕ್ಷೌರಿಕನಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದದ್ದು, ಮಕ್ಕಳಿಗೂ ಇವನಲ್ಲಿ ಕ್ಷೌರ ಮಾಡಿಸುತ್ತಿದ್ದದ್ದು, ಆ ಕಾಲದ ಕ್ಷೌರಿಕರ ಸ್ಥಿತಿಗತಿ, ಬೈತಲೆ ವಿಚಾರ, ಮತ್ತೊಬ್ಬರ ಬಗ್ಗೆ ಮಕ್ಕಳು ತಪ್ಪಾಗಿ ಮಾತನಾಡಿದಾಗ ಅವರಲ್ಲಿ ಕ್ಷಮೆ ಕೇಳಿಸಿದ್ದು, ಮಕ್ಕಳಿಗೆ ಸರ್ಕಸ್ ತೋರಿಸಿದ್ದು, ಮೈಸೂರಿನ ‘ಉದಯ ರವಿ’ ಮನೆಯಲ್ಲಿ ನಾಯಿ ಸಾಕಿದ್ದು, ಇದರಿಂದಾದ ಅವಾಂತರಗಳು, ತೇಜಸ್ವಿಯವರ ತಂಡ ಕಂತ್ರಿ ನಾಯಿಯನ್ನು ಜಾತಿ ನಾಯಿ ಮಾಡಲು ನಾಯಿ ಬಾಲ ತುಂಡರಿಸಿದ್ದು, ಹಾಲು ಕೊಡುವವರು ಹಾಲಿಗೆ ನೀರು ಹಾಕಿ ಕೊಡುತ್ತಾರೆಂದು, ಹಾಲಿನ ಡೈರಿ ಇಲ್ಲದ ಕಾಲದಲ್ಲಿ ಅಮ್ಮ, ಮನೆಯಲ್ಲಿ ಎಮ್ಮೆ ಸಾಕಿದ್ದು, ಕುವೆಂಪು ಸೆಗಣಿ ಬಾಚಿದ್ದು, ಎಮ್ಮೆ ಸಾಕಿದ್ದರಿಂದಾದ ತೊಂದರೆಗಳು ಈ ಎಲ್ಲ ಘಟನೆಗಳಿಗೆ ಕುವೆಂಪುರವರ ಪ್ರತಿಕ್ರಿಯೆಗಳನ್ನು ತೇಜಸ್ವಿಯವರು ಹಾಸ್ಯಮಿಶ್ರಿತ ದಾಟಿಯಲ್ಲಿ ತೆರೆದಿಟ್ಟಿದ್ದಾರೆ.

(ಅಣ್ಣನ ನೆನಪು ನಾಟಕದ ಒಂದು ದೃಶ್ಯ)
ಕುವೆಂಪುರವರನ್ನು ಸಾಹಿತ್ಯದ ಮೇರು ಶಿಖರವಾಗಿ ಮಾತ್ರ ನೋಡಿದ ನಮಗೆ “ಅಣ್ಣನಿಗೆ ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ತತ್ವಶಾಸ್ತ್ರ ಮನಃಶಾಸ್ತ್ರ ಮತ್ತು ಪರಮಾಣು ಭೌತಶಾಸ್ತ್ರ ಅದರಲ್ಲೂ ಕ್ವಾಂಟಮ್ ಮೆಕಾನಿಕ್ಸ್ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು” ಎಂಬ ತೇಜಸ್ವಿಯವರ ಮಾತನ್ನು ಕೇಳಿ ಅಚ್ಚರಿ ಎನಿಸಿತು. ಅಣ್ಣನನ್ನು ನೆನಪಿಸಿಕೊಳ್ಳುತ್ತಲೆ, ಅಣ್ಣನೊಂದಿಗಿನ ತಮ್ಮ ಬದುಕಿನ ಬಾಂಧವ್ಯವನ್ನು ಬರೆಯುತ್ತ “ಅಣ್ಣ ನಮಗೆ ಕೊಟ್ಟ ಶಿಕ್ಷಣವೆಲ್ಲ ಹೇಗೆ ಬದುಕಬೇಕು ಎಂಬುದರ ಬಗ್ಗೆಯೇ ಹೊರತು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಚಕಾರವಿತ್ತಿಲ್ಲ… ದೊಡ್ಡ ಬದುಕನ್ನು ಬದುಕದೆ ಶ್ರೇಷ್ಠ ಲೇಖಕನಾಗಲು ಅಸಾಧ್ಯ ಎಂದು ನಂಬಿದ್ದರು…. ನಾವು ಮಾನ ಮರ್ಯಾದೆಗಳಿಂದ ಬದುಕಿದರೆ ಸಾಕೆಂಬುದೇ ಅಣ್ಣನ ಧೋರಣೆಯಾಗಿತ್ತು.” ಈ ಮಾತುಗಳನ್ನು ಓದುತ್ತಿದ್ದರೆ ಕುವೆಂಪು ಮಾನವೀಯತೆಯ ಪ್ರತಿರೂಪ ಎಂದೆನಿಸುತ್ತದೆ.
ತೇಜಸ್ವಿಯವರು ಕುವೆಂಪುರವರ ಸಂಕೀರ್ಣ ವ್ಯಕ್ತಿತ್ವದ ಬಗ್ಗೆ ಹೀಗೆ ನೆನಪಿಸಿಕೊಳ್ಳುತ್ತಾರೆ. “ಒಂದು ಕಡೆ ಇಂಗ್ಲಿಷ್ ಜ್ಞಾನ ಅತಿ ಮುಖ್ಯವೆಂದು ಶೂದ್ರರನ್ನೆಲ್ಲ ಎಚ್ಚರಿಸುತ್ತಾರೆ. ಕನ್ನಡ ವಿಷಯಕ್ಕೆ ಬಂದಾಗ ಇಂಗ್ಲಿಷನ್ನು ಪೂತನಿ ಎಂದು ಕಟುವಾಗಿ ಟೀಕಿಸುತ್ತಾರೆ. ಭಾರತೀಯ ಸನಾತನ ಧರ್ಮದ ಅತ್ಯಂತ ಕಟು ವಿಮರ್ಶೆ ಕುವೆಂಪುರವರಲ್ಲಿ ಕಾಣಬಹುದು ಅಂತೆಯೇ ಉಪನಿಷತ್ ದರ್ಶನಗಳ ಆರಾಧನೆಯನ್ನು ಅವರಲ್ಲಿ ಕಾಣಬಹುದು. ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೇ ಗಾಢವಾಗಿ ಧ್ಯಾನ, ತಪಸ್ಸು, ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು…” ಮನೆಯಲ್ಲಿ ಆಚರಿಸುವ ಹಬ್ಬಗಳು, ದೇವರಮನೆಯ ವಿವರ, ಪ್ರಸಾದ, ಕುವೆಂಪುರವರು ಮನೆಯಲ್ಲಿ ಮಾಡುತ್ತಿದ್ದ ಪೂಜೆ, ಮಂಗಳಾರತಿ ಇತ್ಯಾದಿ ವಿವರ ನೀಡುತ್ತಲೆ… “ಅಣ್ಣನ ಈ ವಿಚಿತ್ರ ನಿಲುವಿನ ಅರ್ಥವೇನೆಂದು ಚಿಂತಿಸುತ್ತಾ ಚಿಂತಿಸುತ್ತಾ ಜೀವಮಾನದಲ್ಲಿ ನಾನೆಂದು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲಾರದ ವಿಶ್ವದ ಚಿದಂಬರ ರಹಸ್ಯಕ್ಕೆ ಅಭಿಮುಖವಾದೆ” ಎನ್ನುತ್ತಾರೆ ತೇಜಸ್ವಿ.
ಪದ್ಯ ಬರೆಯುವವರು ಪಥ್ಯದಲ್ಲಿರಬೇಕು ಎಂಬುದು ಕಂದಾಚಾರ… ಇಂತಹ “ಕಂದಾಚಾರಗಳನ್ನು ಎಲ್ಲೆಂದರಲ್ಲಿ ಯಾವಾಗೆಂದರೆ ಅವಾಗ ವಿರೋಧಿಸುತ್ತಾ ಬದುಕಿದರು ಆದರೆ ಅಣ್ಣನ ಬದುಕಿನ ದುರಂತವೆಂದರೆ ಅವರ ಬದುಕಿನ ಬಹುಬಾಗವನ್ನು ಏಕಾಂಗಿಯಾಗಿ ಹೋರಾಡಬೇಕಾಗಿ ಬಂದದ್ದು. ಅಣ್ಣನ ಸಮಕಾಲೀನರಂತೂ ಎಲ್ಲರೂ ಹೆಚ್ಚು ಕಡಿಮೆ ಮೂಲಭೂತವಾದಿಗಳೇ ಎನ್ನುವಷ್ಟು ಸಂಪ್ರದಾಯವಾಗಿಗಳು…” ಎಂದು ತೇಜಸ್ವಿ ಅಭಿಪ್ರಾಯಪಡುತ್ತಾರೆ.
ಕುವೆಂಪುರವರು ಮನೆಯ ಪಾತ್ರೆಗಳಿಗೆ ಕಲಾಯಿ ಹಾಕಿಸುತ್ತಿದ್ದುದು, ದಿನಪತ್ರಿಕೆಗಳನ್ನು ಅದರಲ್ಲಿ ಪ್ರಕಟವಾಗುವ ವಿಷಯಗಳಿಂದಾಗಿ ಆಗಾಗ ಬದಲಾಯಿಸಿದ್ದು, ಭಾರತ ವಿಭಜನೆಗೆ ಗಾಂಧಿ ನೆಹರು ಒಪ್ಪಿದ್ದರಿಂದ ಕೋಪ, ಕಾರು ಕೊಂಡಿದ್ದು ಇದರ ಬಗ್ಗೆ ಪೂರ್ಣಮಾಹಿತಿ ಇಲ್ಲದೆ ಆದ ಅವಾಂತರ, ಮನೆಯಲ್ಲಾದ ಕಳ್ಳತನ, ವೈಸ್ ಛಾನ್ಸಲರ್ ಆಗಿದ್ದಾಗ ಆಡಳಿತಾತ್ಮಕ ಕಾರಣದಿಂದ ಇವರ ಮನೆಯ ಮೇಲೆ ಹಲ್ಲೆ ನಡೆದ ಘಟನೆ, ಏನೇ ಆದರೂ ಮಾನವೀಯ ಮೌಲ್ಯಗಳ ಬಗ್ಗೆ ಇಟ್ಟಿದ್ದ ಗಾಢ ನಂಬಿಕೆ ಇವುಗಳನ್ನು ತೇಜಸ್ವಿಯವರು ಅರ್ಥವತ್ತಾಗಿ ನೆನಪಿಸಿಕೊಂಡಿದ್ದಾರೆ.
ತೇಜಸ್ವಿಯವರು “ಅಂಕಗಣಿತದಲ್ಲಿ ಏನು ಮಾಡಿದರು ಪಾಸ್ ಮಾಡಲು ಸಾಧ್ಯವಾಗದೆ ಎಸ್.ಎಸ್.ಎಲ್.ಸಿ.ಯಲ್ಲಿ ಎರಡುಸಾರಿ ಢುಮ್ಕಿ ಹೊಡೆದೆ. ಅಣ್ಣ ನನ್ನ ಗೋಳು ನೋಡಲಾರದೆ ತಾವೇ ತಮ್ಮ ಕೈಲಾದಷ್ಟು ಆಲ್ಜಿಬ್ರಾ ಮತ್ತು ಮ್ಯಾಥಮೆಟಿಕ್ಸ್ ಹೇಳಿಕೊಟ್ಟರು. ಆದರೂ ಇವುಗಳಲ್ಲಿ 35 ನಂಬರ್ ತಗೊಂಡು ಎಸ್.ಎಸ್.ಎಲ್. ಸಿ. ಕಂಟಕ ದಾಟಬೇಕಾದರೆ ನನಗೆ ಮೂರು ವರ್ಷ ಹಿಡಿಯಿತು…” ಎಂದು ಓದಿಗೆ ಅಣ್ಣನ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ. ಇಂಗ್ಲಿಷ್ ಕಾಟಕೊಟ್ಟ ಬಗ್ಗೆ, ಅದರ ಸ್ಪೆಲ್ಲಿಂಗ್ ಬಗ್ಗೆ, ಕನ್ನಡ ಆನರ್ಸ್ ಓದುತ್ತಿದ್ದಾಗಲೂ ಮತ್ತೆ ಇಂಗ್ಲಿಷ್ ಫೇಲಾದ ಬಗ್ಗೆ, He ಮತ್ತು She ಬರೆಯಬೇಕಾದ ಕಡೆಯಲೆಲ್ಲ Hi ಮತ್ತು Shi ಎಂದು ಬರೆದ ಬಗ್ಗೆ ಹೇಳಿಕೊಂಡಿದ್ದಾರೆ. “ನೀನು ಇಂಗ್ಲಿಷ್ ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗಿಯೇ ಹೊರತು ಇಂಗ್ಲೀಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲ ಬೇಕಾದರೆ ಈ ಸಬೂಬುಗಳನ್ನೆಲ್ಲ ಬಿಟ್ಟು ಕಷ್ಟಪಟ್ಟು ಕಲಿ. ಅದು ಬಿಟ್ಟು ಕನ್ನಡದಲ್ಲಿ ಎಲ್ಲಾ ಇದೆ ಎಂದು ತಿಳಿದು ಕೋಪ ಮಂಡೂಕ ಆಗಬೇಡ” ಎಂಬ ಅಣ್ಣನ ಮಾತನ್ನು ನೆನಪಿಸಿಕೊಳ್ಳುತ್ತಾರೆ.
‘ಭಾಷೆಯ ಬಗ್ಗೆ ಸಾಹಿತ್ಯದ ಬಗ್ಗೆ ಯಾವ ಸಂದರ್ಭದಲ್ಲೂ ಅಂಧಾಭಿಮಾನಕ್ಕೆ ಬಲಿಯಾಗದೆ ವಿವೇಚನೆ ಮಾಡುತ್ತಿದ್ದುದ್ದಕ್ಕೆ ಅಣ್ಣನ ಅವತ್ತಿನ ಮಾತುಗಳು ನನಗೆ ಸಾಕ್ಷಿಯಾಗಿವೆ.” ಎಂದು ತೇಜಸ್ವಿ ಅಣ್ಣನನ್ನು ಸ್ಮರಿಸಿಕೊಳ್ಳುತ್ತಾರೆ.
ಮಗ ತೇಜಸ್ವಿ ಮೇಲೆ ಯಾವ್ಯಾವುದೋ ಕಾರಣಕ್ಕೆ ಪೋಲೀಸ್ ವಾರೆಂಟ್ ಬಂದಾಗ ಕುವೆಂಪುರವರ ಪ್ರತಿಕ್ರಿಯೆ, ಕೋರ್ಟಿನಲ್ಲಿ 15 ರೂ. ದಂಡ ಕಟ್ಟಲು ದುಡ್ಡು ಕೊಟ್ಟಿದ್ದು, “ನೀನೇ ಸಂಪಾದನೆ ಮಾಡದ ಹೊರತು ನಿನಗೆ ದುಡ್ಡಿನ ಬೆಲೆ ತಿಳಿಯುವುದಿಲ್ಲ” ಎಂದು ಅನಗತ್ಯ ಖರ್ಚು ಮಾಡಿದಾಗಲೆಲ್ಲ ತಂದೆ ಹೇಳುತ್ತಿದ್ದದು, “ಒಳ್ಳೆ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ” ಅನ್ನುವ ವಿವೇಕದ ಅಣ್ಣನ ಮಾತುಗಳನ್ನು ತೇಜಸ್ವಿಯವರು ಮೆಲುಕುಹಾಕಿದ್ದಾರೆ.

(ತೇಜಸ್ವಿ)
ತೇಜಸ್ವಿಯವರು ಅಣ್ಣನನ್ನು ನೆನಪಿಸಿಕೊಳ್ಳುತ್ತಲೆ ತಾನು ತನ್ನ ಗೆಳೆಯ ಶಾಮಣ್ಣ ಸಂಗೀತಕಲಿಯಲು ಮಾಡಿದ ಪ್ರಯತ್ನಗಳು, ಫೋಟೋಗ್ರಫಿ, ಚಿತ್ರಕಲೆ ಕಲಿಯಲು ಮಾಡಿದ ಪ್ರಯತ್ನಗಳು, ಅಣ್ಣನ ಫೋಟೋ ತೆಗೆದಿದ್ದು, ಸ್ಕೂಟರ್ ಇತ್ಯಾದಿ ರಿಪೇರಿ, ಅವಾಂತರಗಳನ್ನೆಲ್ಲ ಮುಕ್ತವಾಗಿ ಬರೆದುಕೊಂಡಿದ್ದಾರೆ. ಆಯಾ ಸಂದರ್ಭದಲ್ಲಿ ಅಣ್ಣನ ಪ್ರತಿಸ್ಪಂದನ ಹೇಗಿತ್ತು ಎಂಬುದನ್ನು ಹೇಳಲು ಮರೆತಿಲ್ಲ. ‘ಪ್ರಜಾವಾಣಿ’ ಪತ್ರಿಕೆಗಾಗಿ ತಂದೆಯನ್ನು ಸಂದರ್ಶನ ಮಾಡಿದ ವಿಶೇಷ ಸಂದರ್ಭವನ್ನು ಅಂದು ತಾವು ಕೇಳಿದ ಪ್ರಶ್ನೆಗಳಾವವು? ಅಣ್ಣನ ಉತ್ತರವೇನಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ.
ಆ ಕಾಲದ ರಾಜಕಾರಣ, ರಾಜಕಾರಿಣಿ ಬಗೆಗೆ, ಸಾಂದರ್ಭಿಕ ವಿವರಗಳನ್ನು ನೀಡುತ್ತ, ಡಾ. ರಾಮಮನೋಹರ ಲೋಹಿಯಾ ಮತ್ತು ವಿನೋಬಾಭಾವೆ ತಮ್ಮ ಮನೆಗೆ ಬಂದದ್ದನ್ನು ನೆನಪಿಸಿಕೊಳ್ಳುತ್ತಾರೆ. ಆಗಿನ ಚಳುವಳಿ, ಹೋರಾಟ, ಶಿವಮೊಗ್ಗದೊಂದಿಗಿನ ಬಾಂಧವ್ಯವನ್ನು ಅಣ್ಣನ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುತ್ತಾರೆ. ಸಮಾಜವಾದಿ ಪಕ್ಷದ ಜೆ.ಹೆಚ್. ಪಟೇಲ್ ಪಾರ್ಲಿಮೆಂಟಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದರಿಂದ ಅಣ್ಣನ ದೃಷ್ಟಿಯಲ್ಲಿ “ಹೀರೋ”. ಭಾಷಾ ನೀತಿ, ಕನ್ನಡ ಭಾಷೆ ಬಗೆಗಿನ ಕುವೆಂಪುರವರ ಪ್ರೀತಿ, ನಿಲುವುಗಳನ್ನು ತೇಜಸ್ವಿಯವರು ಅನಾವರಣಗೊಳಿಸಿದ್ದಾರೆ.
ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕುವೆಂಪುರವರು ಬಸವಲಿಂಗಪ್ಪನವರ “ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬರೀ ಭೂಸಾ”ಎಂಬ ಹೇಳಿಕೆಯ ಬಗೆಗೆ ಪ್ರತಿಕ್ರಿಯಿಸುತ್ತ “ಇದು ತುಂಬಾ ಅಪಕ್ವ ಮತ್ತು ಅರೆ ಸತ್ಯದ ಹೇಳಿಕೆಯಾದರು ದಲಿತರ ಮತ್ತು ಶೂದ್ರ ಹಿನ್ನೆಲೆಯಲ್ಲಿ ಇದನ್ನು ಪರಿಭಾವಿಸಿದರೆ ಆಕ್ಷೇಪಣೀಯವಾದುದು ಏನು ಇಲ್ಲ. ಎಲ್ಲರ ಎಲ್ಲ ಸಾಹಿತ್ಯವು ಬದಲಾಗುತ್ತಿರುವ ಕಾಲಮಾನದಲ್ಲಿ ಒಮ್ಮೊಮ್ಮೆ ಭೂಸಾ ಆಗುತ್ತದೆ, ಒಮ್ಮೊಮ್ಮೆ ಅರ್ಥವತ್ತಾಗುತ್ತದೆ. ಸಮಕಾಲೀನ ಸಂವೇದನೆಗಳಿಗೆ ಅನುಗುಣವಾದ ಸ್ಪಂದನಗಳನ್ನು ಹುಡುಕುತ್ತಾ ಬಸವಲಿಂಗಪ್ಪನವರು ಈ ಹೇಳಿಕೆಗಳನ್ನು ಮಾಡಿದ್ದಲ್ಲಿ ಅನೌಚಿತ್ಯ ಏನೂ ಕಾಣುತ್ತಿಲ್ಲ” ಎಂದು ಅಭಿಪ್ರಾಯ ಪಡುತ್ತಾರೆ.
ತೇಜಸ್ವಿಯವರು ತಾವು ಕಣ್ಣುಬಿಟ್ಟಾಗಿನಿಂದ ನೋಡಿದ, ತಮ್ಮ ತಂದೆ (ಅಣ್ಣ) ಕುವೆಂಪು ಕಣ್ಣುಮುಚ್ಚುವವರೆಗಿನ ತಮ್ಮ ಬಾಂಧವ್ಯದ ನೆನಪುಗಳನ್ನು ತಮ್ಮದೇ ಚೌಕಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಟ್ಟ ವಿಶಿಷ್ಟ ಕೃತಿ “ಅಣ್ಣನ ನೆನಪು” ಈ ‘ಅಣ್ಣನ ನೆನಪು’ (ತಂದೆಯ ಸ್ಮರಣೆ) ಓದುಗರಿಗೂ ತಮ್ಮ ತಂದೆ ತಾಯಿ ಕುಟುಂಬದ ಬಗ್ಗೆ ಸ್ಮರಿಸುವಂತಾದರೆ ಅಚ್ಚರಿ ಇಲ್ಲ.

ಪಾಲಾಕ್ಷಪ್ಪ ಎಸ್.ಎನ್. ಪ್ರೌಢಶಾಲಾ ಶಿಕ್ಷಕರು. ಈಗ ಶಿಕ್ಷಣ ಸಂಯೋಜಕನಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾಗರದಲ್ಲಿ ಕರ್ತವ್ಯ ನಿರ್ವಹಣೆ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ‘ಮಾನವೀಯತೆಯ ಮಾತು'(ಕವನ ಸಂಕಲನ), ‘ಅಕ್ಷರ ಪಯಣ’, ‘ಅಂತರಂಗದ ಧ್ವನಿ’ ಇವರ ಪ್ರಕಟಿತ ಕೃತಿಗಳು. 2019 ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪುರಸ್ಕಾರ ದೊರೆತಿದೆ.