ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ ವಸ್ತುಗಳೆಲ್ಲ ಯಾಕಿಷ್ಟು ಯೋಜನೆಯಿಲ್ಲದೆ ಅಸ್ತವ್ಯಸ್ತವಾಗಿವೆ ಎಂದೂ ತಿಳಿಯುತ್ತದೆ. ಜೆಟ್ ಹತ್ತುಸಾವಿರ ಫೀಟ್ ಎತ್ತರಕ್ಕೆ ಹಾರಿದಾಗ, ಕವಿಗೆ ಯಾಕೆ ನಾಗರಿಕತೆಗಳು ನದಿದಡದಲ್ಲಿಯೇ ಬೆಳೆದುಬಂದಿವೆ ಮತ್ತು ಯಾಕೆ ಕಣಿವೆ ಪ್ರದೇಶಗಳು ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ ಎಂಬುದು ತಿಳಿಯುತ್ತದೆ. ಫಲವತ್ತಾದ ಭೂಮಿ ಮತ್ತು ನೀರು ಮನುಷ್ಯನನ್ನು ಆಕರ್ಷಿಸಿವೆ.
ಆಶಾ ಜಗದೀಶ್ ಅಂಕಣ

 

ಮನೆ ಎರೆಡು ಭಾಗವಾದಾಗ ‘ಹುಟ್ಟುತ್ತಾ ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು’ ಎನ್ನುವ ಮಾತು ಎಲ್ಲರಿಂದಲೂ ಕೇಳಿ ಬಂದಿತ್ತು. ಅದರ ಮರುದಿನ ಮನೆಯನ್ನು ಇಬ್ಭಾಗಿಸುಂತೆ ಗೋಡೆಯೊಂದು ನಿರ್ಮಾಣವಾಯಿತು. ಆದರೆ ಇಡೀ ಮನೆ ತುಂಬ ಆಡಿಕೊಂಡಿದ್ದ ಮಕ್ಕಳು, ಮನೆಯ ಮೂಕ ದನಕರುಗಳು ಮತ್ತು ಹೂಗಿಡಗಳಿಗೆ ದಿಕ್ಕು ತೋಚದಾಯಿತು. ಹೂವು ಇನ್ಮುಂದೆ ಯಾವ ಮನೆಯ ದೇವರ ಮುಡಿ ಏರಬೇಕು?! ದನಕರುಗಳು ಯಾರ ಪಾಲಾಗಬೇಕು? ಮನೆಯ ಮೂಲೆಮೂಲೆಯಲ್ಲೂ ಅಳಿಸದ ಹಚ್ಚೆಯಾಗಿ ಹರಡಿಕೊಂಡಿರುವ ಹಸಿ ನೆನಪುಗಳನ್ನು ಶಾಶ್ವತವಾಗಿ ಮರೆಯುವುದೆಂದರೆ… ಪೆಚ್ಚಾದ ಮಕ್ಕಳಿಗೆ ಇದನ್ನೆಲ್ಲಾ ದೊಡ್ಡವರ ತಲೆ ಹೊಕ್ಕುವಂತೆ ವಿವರಿಸಲು ಬರುವುದಿಲ್ಲ. ಪಡಸಾಲೆಯಲ್ಲಿ ನಕ್ಕಿದ್ದು, ಅಂಗಳದಲ್ಲಿ ಅತ್ತಿದ್ದು, ಹೊಸಿಲ ಬಳಿ ಮುಗ್ಗರಿಸಿ ಬಿದ್ದು ಮೊಣಕಾಲು ಗಾಯಮಾಡಿಕೊಂಡದ್ದು, ಅಜ್ಜನ ಬೈಗುಳ, ಅಜ್ಜಿಯ ಮುಚ್ಚಟೆ, ಅಣ್ಣ-ತಮ್ಮ ಅಕ್ಕ-ತಂಗಿಯರೆನ್ನುವ ಒಡನಾಡಿಗಳು…. ಯಾರು ಈ ದೊಡ್ಡವರೆನ್ನಿಸಿಕೊಂಡ ಈ ಇವರಿಗೆ ಎಲ್ಲವನ್ನು ಬೇರ್ಪಡಿಸಲು ಅನುಮತಿ ಕೊಟ್ಟಿದ್ದು ….? ಕಟ್ಟಿದ ಗೋಡೆಗಳು ಆಳ ಬೇರುಬಿಟ್ಟುಕೊಳ್ಳುತ್ತಿವೆ, ಒಂದೊಂದೇ ಮುಗುಳು ಹಾಕಿ ಚಿಗುರುತ್ತಿವೆ.. ಈಗ ಉಳಿದವರು ಪಾಲಿಸಬೇಕು ಅಷ್ಟೇ… ಅನುಕರಿಸುತ್ತವೆ ಮಕ್ಕಳು… ಅನುಸರಿಸಿಕೊಳ್ಳುತ್ತವೆ ಮೂಕ ಪ್ರಾಣಿಗಳು… ಯಾವ ಪಟವಾದರೂ ದೇವರೊಬ್ಬನೇ ಎನ್ನುವ ಜ್ಞಾನ ಪರಿಮಳ, ಅರಳಿದ ಹೂಗಳಿಗೆ…. ಆದರೆ ನಿರ್ದಯಿ ಗೋಡೆಗಳಿಗೆ ಇವೆಲ್ಲವನ್ನೂ ಮೀರಿ ಬೇರ್ಪಡಿಸುವ ಉದ್ದೇಶ. ದೈಹಿಕ ದೂರವಾಗುವಿಕೆಯಿಂದ ಅದಕ್ಕೆ ತೃಪ್ತಿ ಇಲ್ಲ. ಕನಸುಗಳನ್ನು ಒಡೆಯದೆ ಅದಕ್ಕೆ ಅಸ್ತಿತ್ವವಿಲ್ಲ… ಅಂಧಾನುಕರಣೆಗೆ ಕಾರಣ ಬೇಕಿಲ್ಲ… ದ್ವೇಷವೂ ಅನುವಂಶಿಕವಾಗಿಬಿಡುತ್ತದೆ…

Where the world has not been broken up into fragments
By narrow domestic walls
Into that heaven of freedom, my father let my country awake…

-Rabindranatha tagore

ಈ ಪ್ರಾರ್ಥನೆಯಾದರೂ ಮನುಷ್ಯನ ದುಷ್ಟ ಇಚ್ಛಾಶಕ್ತಿಯ ಮುಂದೆ ಎಷ್ಟು ನಿರರ್ಥಕ….

“ಕಂಚೆ” ಎನ್ನುವ ಈ ತೆಲುಗಿನ ಚಲನಚಿತ್ರವನ್ನು ನೋಡುವಾಗಲೆಲ್ಲ ನಾ ಕಣ್ತುಂಬಿಕೊಂಡೆ ಕೂತಿರುತ್ತೇನೆ. ಈ ಚಿತ್ರ ಯಾಕಿಷ್ಟು ನನ್ನನ್ನು ಡಿಸ್ಟರ್ಬ್ ಮಾಡುತ್ತದೆ… ಕಾರಣ ಹುಡುಕಲಿಕ್ಕಾಗಲೀ ಇದರಿಂದ ಹೊರಬರಲಿಕ್ಕಾಗಲೀ ನನಗಿಷ್ಟವಾಗುವುದಿಲ್ಲ. ಅದೊಂದು ಭಾವುಕತೆಯ ಅಟ್ಟವನ್ನು ಹತ್ತಿ ಕೂತು ಒಂದಷ್ಟು ಹೊತ್ತು ಅದೇ ಹ್ಯಾಂಗೋವರಿನಲ್ಲಿ ಜೀಕುತ್ತಾ ಉಳಿದುಬಿಡಲು ಸದಾ ಹಾತೊರೆಯುತ್ತಿರುತ್ತೇನೆ…. ಆ ನಶೆ ಇಳಿದ ಮೇಲೆ ಯೋಚಿಸುತ್ತಾ ಕೂರುತ್ತೇನೆ.

“ಕಂಚೆ” ಎಂದರೆ ಬೇಲಿ. ಯಾವುದು ಮನುಷ್ಯ ಮತ್ತು ಮನುಷ್ಯನನ್ನು, ಮನುಷ್ಯ ಮತ್ತು ಮನುಷ್ಯತ್ವನ್ನು ಬೇರ್ಪಡಿಸುತ್ತದೋ ಆ ಬೇಲಿ. ಭೌತಿಕ ಬೇಲಿಯನ್ನು ಕಿತ್ತಷ್ಟು ಸುಲಭವಲ್ಲ ಮನಸಿನಲ್ಲಿ ಬೇರು ಬಿಟ್ಟ ಆತ್ಯಂತಿಕ ಹಳೆಯ ಬೇಲಿಗಳನ್ನು ಕಿತ್ತು ಬಿಸುಟುವುದು. ಬೇಲಿ ಎನ್ನುವುದೇ ಎಷ್ಟೊಂದು ಅಸಂಬದ್ಧ…. ಅಲ್ಲವಾ…

ಈ ಚಿತ್ರ ಒಂದು ಸ್ನಿಗ್ಧ ಪ್ರೇಮಕಥೆ, ದೇಶಭಕ್ತಿ, ಎರಡನೇ ಮಹಾಯುದ್ಧ, ಹಿಟ್ಲರನ ಜನಾಂಗೀಯ ದ್ವೇಶ, ಹೆಣ್ಣಿನ ಅಸ್ಮಿತೆ, ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ, ದೇಶ ಭಾಷೆಯನ್ನು ಮೀರಿದ ಮಾನವ ಪ್ರೇಮ, ಕೊನೆಗೂ ಬೇಲಿಯೆನ್ನುವ ಅಸಂಬದ್ಧ ರಚನೆ ಮುನುಷ್ಯತ್ವದೆದುರು ಕುಸಿದು ಬೀಳುವುದು… ಇದೆಲ್ಲದರ ಸಮತೂಕದ ಪರಿಣಾಮಕಾರಿ ನಿರೂಪಣೆಯಿಂದ ಮನಸ್ಸನ್ನು ಆವರಿಸಿಬಿಡುತ್ತದೆ. ನಿಜಕ್ಕೂ ಇದೊಂದು ದೃಶ್ಯಕಾವ್ಯ…

ಒಂದು ದೃಶ್ಯ ಹೀಗಿದೆ ನೋಡಿ. ನಾಯಕಿಯ ಅಣ್ಣ ನಾಯಕಿಗೆ ತಾವು ಮಾಡಲು ಹೊರಟಿರುವ ಮದುವೆಗೆ ತಯಾರಾಗಲು ಹೇಳುತ್ತಾನೆ. ಅವಳು “ನೀನು ಸಿಗರೇಟ್ ಸೇದುತ್ತೀಯಾ?”ಎಂದು ಅಣ್ಣನನ್ನು ಕೇಳುತ್ತಾಳೆ. ಅವ “ಇಲ್ಲ” ಎನ್ನುತ್ತಾನೆ. “ಸೇದು ಏನಾಗುತ್ತೆ…” ಎನ್ನುತ್ತಾಳೆ. “ನನಗಿಷ್ಟವಿಲ್ಲ ಆಗಲ್ಲ, ನಾನ್ ಸೇದಲ್ಲ” ಎನ್ನುತ್ತಾನೆ ಅಣ್ಣ. ಇದೇ ವೇಳೆ ಅವಳ ಅಜ್ಜಿ ಅವಳ ತಾಯಿಯ ಮಾಂಗಲ್ಯವನ್ನು ತಂದು ತೆಗೆದುಕೊಳ್ಳಲು ಹೇಳುತ್ತಾಳೆ. ಆಗ ನಾಯಕಿ ಅಣ್ಣನಿಗೆ ಹೇಳುತ್ತಾಳೆ “ನೀನು ಇಷ್ಟವಾಗದ ಸಿಗರೇಟನ್ನೇ ಸೇದುವುದಿಲ್ಲ, ಅಂಥದ್ದರಲ್ಲಿ ನಾನು ಇಷ್ಟವಾಗದವನನ್ನು ಏಕೆ ಮದುವೆ ಆಗಬೇಕು” ಎಂದು. ಆಗ ಅಣ್ಣ “after all ಒಂದು ಹೆಣ್ಣು ನೀನು, ಎಷ್ಟೇ ಮಾತಾಡ್ತೀಯ… ಬಾಮ್ಕುಚ್ಕೊಂಡ್ ಬಿದ್ದಿರ್ಬೇಕು…” ಎನ್ನುತ್ತಾನೆ. ಆಗ ಅಜ್ಜಿ “after all ಅಂದ್ರೆ ಏನಪ್ಪ..” ಎಂದು ಕೇಳುತ್ತಾಳೆ. ಆಗ ಅಣ್ಣ “ಕೀಳು ಮಟ್ಟದವರು” ಎಂದು ಹೇಳುತ್ತಾನೆ. “ನಾನು, ನಾನ್ ಇಷ್ಟ ಪಟ್ಟವನನ್ನೇ ಮದುವೆಯಾಗುವುದು” ಎಂದು ಹೇಳಿ ನಾಯಕಿ ಹೊರಟು ಹೋಗುತ್ತಾಳೆ. ಆಗ ಅಣ್ಣ “ಅಜ್ಜಿ ನೀನಾದರೂ ಅವಳಿಗೆ ಬುದ್ದಿ ಹೇಳು…” ಎನ್ನುತ್ತಾನೆ. ಆಗ ಅಜ್ಜಿ “ನಾನೇನು ಹೇಳಲಪ್ಪ ‘after all ಹೆಣ್ಣು’, ಬಾಯ್ಮುಚ್ಕೊಂಡು ಬಿದ್ದಿರ್ಬೇಕು..” ಎಂದು ಹೇಳಿ ಹೊರಟು ಹೋಗುತ್ತಾಳೆ….

ವಾಹ್ ಎಂತಹ ದೃಶ್ಯ ಅದು…. ಇಂತಹ ಸಾಲು ಸಾಲು ದೃಶ್ಯಗಳು ಈ ಚಿತ್ರದಲ್ಲಿವೆ. ನಮ್ಮ ಗೋಸುಂಬೆತನದ ವೇಷ ಕಳಚಿ ಬೆತ್ತಲೆ ನಿಲ್ಲಿಸುತ್ತವೆ. ಯಾವಾಗ ಸತ್ಯಕ್ಕೆ, ನಿಜಕ್ಕೆ ಎದುರಾಗುತ್ತೇವೋ ಭಾವುಕತೆ ಕವಿದು ದ್ರವಿಸತೊಡಗುತ್ತದೆ. ಅದು ನಾವು ಅದನ್ನು ಒಪ್ಪಿಕೊಳ್ಳುತ್ತಾ, ಅಪ್ಪಿಕೊಳ್ಳುತ್ತಾ ಅದಕ್ಕೆ ಶರಣಾಗುವುದರ ಸೂಚಕ….

“ಸಾವಿಗೆ ಹೆದರಿ ಓಡಿಹೋಗುವುದಕ್ಕಿಂತ ಯಾರಾದರೊಬ್ಬರು ಪರಿಸ್ಥಿತಿಯನ್ನು ಎದುರಿಸಿ ನಿಂತಾಗ ಮಾತ್ರ ಮುಂದೆ ಆ ದಾರಿಯಲ್ಲಿ ನಡೆಯಬಹುದು ಎಂದು ಯಾರಿಗಾದರೂ ಅನಿಸಲಿಕ್ಕೆ ಸಾಧ್ಯ. ಮತ್ತು ಆ ದಾರಿಯಲ್ಲಿ ಸಾವೇ ಬಂದರೂ ಅದು ಯಃಕಶ್ಚಿತ್ ಸಾವೇ ಹೊರತು ಸೋಲಲ್ಲ. ಮನುಷ್ಯರಾದವರು ಕೂಡಿ ಬದುಕಬೇಕೆ ವಿನಃ ಬೇಲಿ ಕಟ್ಟಿಕೊಂಡು ಅಲ್ಲ… ಕಿತ್ತು ಹಾಕಿ ಆ ಬೇಲಿಯನ್ನು…” ಎನ್ನುವ ಕೊನೆಯ ಡೈಲಾಗ್ ಕಂಚೆಯನ್ನು ಹೊಡೆದುರುಳಿಸಲು ಕೊಡಲಿ ಪೆಟ್ಟು ಹಾಕುತ್ತದೆ.

ಕಟ್ಟಿದ ಬೇಲಿಗಿಂತಲೂ ಮನಸಿನ ಬೇಲಿಗಳು ಮುರಿದು ಬೀಳುವ ಮೂಲಕ ಒಂದು ಸುಖಾಂತ… (ನೂರಾರು ಜನರ ಸಮಾಧಿಯೇ ಸುಖಾಂತವೊಂದು ಹುಟ್ಟಲು ನೆಲವಾಗುವುದು ವಿಷಾದ ಹುಟ್ಟಿಸುತ್ತದೆ…)

ಬೇಲಿ ಮುಗಿಯುತ್ತದೆ… (ಕಂಚೆ ಚಿತ್ರ)

ಈ ಚಿತ್ರ ಅದೆಷ್ಟೊಂದು ದಿನಗಳಿಂದ ಮನಸಿನಲ್ಲಿಯೇ ಹೆಪ್ಪುಗಟ್ಟಿ ಕೂತಿತ್ತು. ಯು.ಆರ್.ಅನಂತಮೂರ್ತಿಯವರ “ಭಾರತೀ ಪುರ” ಸಹ ಇಷ್ಟೇ ಕಾಡಿತ್ತು. ಮಂಜುನಾಥನ ಸನ್ನಿಧಾನಕ್ಕೆ ದಲಿತರ ಪ್ರವೇಶ ಮಾಡಿಸುವ ಪ್ರಯತ್ನವನ್ನು (ಜಗನ್ನಾಥನ ಆ ಪ್ರಯತ್ನ ಅಲ್ಲಿ ಸಫಲವಾಗುವುದಿಲ್ಲ. ಬದಲಾಗಿ ಮತ್ತೊಂದು ಪ್ರಯತ್ನಕ್ಕೆ ಸಜ್ಜುಗೊಳ್ಳಲು ಆದಿಯಾಗುತ್ತದೆ.) ಮಾಡುವುದೇ ಒಂದು ಕ್ರಾಂತಿಕಾರಿ ಯೋಚನೆ… ಹದಗೊಂಡ ನೆಲಕ್ಕೆ ಬೀಜ ಬಿದ್ದಂತೆ.

ಅಚ್ಚರಿ ಪಡುವ ವಿಚಾರವೆಂದರೆ ನಾವು ಎಷ್ಟೆಲ್ಲ ಬಗೆಯ ಗೋಡೆಗಳನ್ನು ಜೋಪಾನ ಮಾಡಿದ್ದೇವೆ…. ಮೇಲು-ಕೀಳು, ಬಡವ-ಶ್ರೀಮಂತ, ಪಂಡಿತ-ಪಾಮರ, ಕರಿಯ-ಬಿಳಿಯ, ಹೆಣ್ಣು-ಗಂಡು…. ಎಲ್ಲ ಆಧಾರದಲ್ಲೂ ಬೇಲಿ ಕಟ್ಟಿ ಬೇರ್ಪಡಿಸಬಲ್ಲೆವು. ಆದರೆ ಸಾವು ಎನ್ನುವ ವಿಚಾರ ಬಂದಾಗ ಎಲ್ಲದರ ತಳವೂ ಖುಲಾಸೆಗೊಳ್ಳುತ್ತದೆ.

ಸಾವು ಅಂದರೆ ನಮ್ಮ ಅಸ್ತಿತ್ವ ಅಲ್ಲಾಡುತ್ತದೆ. ನಾವು ನಮ್ಮನ್ನು, ನಮ್ಮ ದೇಹವನ್ನು ಪ್ರೀತಿಸುವಷ್ಟು ಇನ್ನೇನನ್ನೂ ಪ್ರೀತಿಸಲಾರೆವು. ನಮ್ಮ ಅಸ್ತಿತ್ವದ ಪ್ರಶ್ನೆ ಎದ್ದಾಗ ಯಾವ ನಿಯಮಗಳೂ ನಮಗೆ ಮುಖ್ಯವಾಗುವುದಿಲ್ಲ. ಎಲ್ಲವನ್ನು ಬೇಕಾದರೆ ಪುಡಿಪುಡಿ ಮಾಡುತ್ತೇವೆ. ಆದರೆ ಹೊರಗೆ ನಿಂತು ಗಾಜಿನ ಮನೆಗೆ ಕಲ್ಲು ಹೊಡೆಯುವಾಗ ಮಾತ್ರ ಎಲ್ಲ ನಿಯಮಗಳೂ ನಮ್ಮ ಮೂಗಿನ ಸಮಕ್ಕೆ ಇರಲೇ ಬೇಕು.

ಚೈನಾ ವಾಲ್ ಕಟ್ಟುವಾಗ ಅದೆಷ್ಟೋ ಜನರನ್ನು ಕೊಂದು ಇಟ್ಟಿಗೆಗಳಂತೆ ಬಳಸಲಾಯಿತಂತೆ. ಅವೆಷ್ಟೋ ಅತ್ಯಮೂಲ್ಯ ಗ್ರಂಥಗಳನ್ನು ಗೋಡೆ ಕಟ್ಟಲು ಬಳಸಿದರಂತೆ… ಮನುಷ್ಯತ್ವಕ್ಕೆ, ಅಂತಿಮ ಸತ್ಯಕ್ಕೆ ಬೆಂಕಿ ಇಟ್ಟು ಅಮರವಾಗಿರುವ ಗ್ರೇಟ್ ಗೋಡೆ ಮನುಷ್ಯನ ಭ್ರಾಮಕ ಧೋರಣೆಯ ನಿರರ್ಥಕತೆಯನ್ನು ಸಾರುತ್ತಿದೆ ಅನಿಸುತ್ತದೆ. ಇಂತಹ “ಗ್ರೇಟ್ ವಾಲ್” ನಿಂದ ಜಗತ್ತಿಗಾದ ಲಾಭವೇನು… ಪ್ರಕೃತಿ ಯಾವತ್ತೂ ಗೋಡೆ ನಿರ್ಮಿಸಿಕೊಳ್ಳುವುದಿಲ್ಲ… ನಿರ್ಮಿಸುತ್ತಿದೆ ಎಂದಾದರೆ ಅದು ಜೀವಪರವಾಗಿರುತ್ತದೆ (ಹಿಮಾಲಯ ಪರ್ವತ ಶ್ರೇಣಿ ಭಾರತವನ್ನು ಕಾಯುತ್ತಿರುವ ಹಾಗೆ). ಹೀಗಿರುವಾಗ ನಾವು ಬುದ್ಧಿಬಲದಿಂದ ಭೌತಿಕ ಗೋಡೆ ಎನ್ನುವ ರಚನೆಯನ್ನು ಅದರ ಸೀಮಿತ ಪರಿಧಿಯಾಚೆ ತಂದು ಮನಸುಗಳಲ್ಲಿ ನೆಟ್ಟುಕೊಂಡುಬಿಟ್ಟಿದ್ದೇವೆ.

ಇಂತಹ ಸಾಲು ಸಾಲು ದೃಶ್ಯಗಳು ಈ ಚಿತ್ರದಲ್ಲಿವೆ. ನಮ್ಮ ಗೋಸುಂಬೆತನದ ವೇಷ ಕಳಚಿ ಬೆತ್ತಲೆ ನಿಲ್ಲಿಸುತ್ತವೆ. ಯಾವಾಗ ಸತ್ಯಕ್ಕೆ, ನಿಜಕ್ಕೆ ಎದುರಾಗುತ್ತೇವೋ ಭಾವುಕತೆ ಕವಿದು ದ್ರವಿಸತೊಡಗುತ್ತದೆ. ಅದು ನಾವು ಅದನ್ನು ಒಪ್ಪಿಕೊಳ್ಳುತ್ತಾ, ಅಪ್ಪಿಕೊಳ್ಳುತ್ತಾ ಅದಕ್ಕೆ ಶರಣಾಗುವುದರ ಸೂಚಕ…

(ರಾಬರ್ಟ್ ಫ್ರಾಸ್ಟ್ (Robert frost)

ಅಷ್ಟಕ್ಕೂ ಬೇಲಿ, ಗೋಡೆ… ಎನ್ನುವ ಬೇರ್ಪಡಿಸುವ ರಚನೆ ಹೃದಯವಿರುವ ಯಾರನ್ನಾದರೂ ಕಾಡುತ್ತಿರುವುದು ಇದೇ ಮೊದಲಲ್ಲ. Robert frost ರ mending wall ಸಹ ಇಂತಹದ್ದೇ ಒಂದು ಆಲೋಚನೆಗೆ ಹಚ್ಚುವ ಕವಿತೆ. ಮೊಟ್ಟ ಮೊದಲ ಬಾರಿಗೆ ಅದನ್ನು ಓದಿದಾಗಲೂ ನನ್ನ ಮನಸಿನ ತುಂಬ ದಟ್ಟ ಘನಕಪ್ಪು ಮೋಡ ಕವಿದ ವಾತಾವರಣ….

“Something there is that doesn’t love a wall” ಅಂತಲೇ Mending wall ಶುರುವಾಗುತ್ತದೆ. ಪ್ರಕೃತಿಯೇ ಗೋಡೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ನಾವು ಮತ್ತೆ ಮತ್ತೆ ಕಟ್ಟಿ ಭದ್ರ ಮಾಡಿಕೊಳ್ಳುವ ಗೋಡೆಗಳನ್ನು ಮತ್ತೆ ಮತ್ತೆ ಛಿದ್ರಗೊಳಿಸುತ್ತ ಹೋಗುತ್ತದೆ ಎನ್ನುತ್ತದೆ ಕವಿತೆ. ಆದರೆ ನಾವು ಮನುಷ್ಯರು ಪ್ರಕೃತಿಯ ವಿರುದ್ಧವಾಗಿ ನಮ್ಮ ವಿಕೃತಿಯನ್ನು ಹೇರತೊಡಗುತ್ತೇವೆ. ಮತ್ತು ಅದನ್ನು ಸಮರ್ಥಿಸುವ ನೀತಿ ನೇಮಗಳನ್ನೂ ಸಲೀಸಾಗಿ ಮಾಡಿಕೊಂಡುಬಿಡುತ್ತೇವೆ ಎನ್ನುವುದನ್ನು ಐರಾನಿಕ್ ಆಗಿ ಹೇಳುತ್ತದೆ ಕವಿತೆ.

ಇವನ ಬೆಳೆಯೇ ಬೇರೆ, ಅವನ ಬೆಳೆಯೇ ಬೇರೆ.. ಗೋಡೆಯಿಲ್ಲದೇ ಗುರುತು ಸಿಗುತ್ತವೆ. ಆದರೂ ಪ್ರತಿವರ್ಷ ಗೋಡೆಗಳು ತಪ್ಪದೇ ದುರಸ್ಥಿಗೊಳ್ಳುತ್ತವೆ. ನಂತರ ಮೊಲ ಬಿಲ ಮಾಡಿಕೊಳ್ಳುತ್ತದೆ. ಹಾವು, ಇಲಿ, ಹೆಗ್ಗಣಗಳು ನೆಲ ತೋಡುತ್ತವೆ. ಗೋಡೆಯ ಅಡಿಪಾಯವನ್ನೇ ಅಲುಗಾಡಿಸುತ್ತವೆ. ಗಾಳಿ, ಚಳಿ, ಮಳೆಗೆ ನೆಲ ಸಡಿಲಗೊಳ್ಳುತ್ತದೆ. ಚೂರೂಚೂರೇ ಗೋಡೆ ಕುಸಿಯತೊಡಗುತ್ತದೆ. ಮತ್ತೆ ಇವರು ಬರುತ್ತಾರೆ. ಅತ್ತಲಿಂದ ಅವ, ಇತ್ತಲಿಂದ ಇವ… ಬಂದೋಬಸ್ತ್ ಮಾಡುತ್ತಾರೆ. ಮತ್ತೆ ಗೋಡೆಯ ಮುಂದೆ ನಿಂತು ಗೋಡೆಯ ಕಲ್ಲುಗಳ ಕುರಿತು ಅದೇ ತಮ್ಮ ಹಳೆಯ ಜಾದು ಮಂತ್ರವನ್ನು ಫಟಿಸುತ್ತಾರೆ….

“Stay where you are until our backs are turned”

ಗೋಡೆಯ ಕಲ್ಲುಗಳೇ ಜರುಗದಿರಿ, ಬೀಳದಿರಿ, ಕೊನೆ ಪಕ್ಷ ನಾವು ಬೆನ್ನು ಮಾಡುವವರೆಗಾದರೂ… ಎನ್ನುವ ಹೇಳಿಕೆಯಲ್ಲಿ, ಜರುಗಿದರೆ ಸುಮ್ಮನಿರಲಂತೂ ಆಗುವುದಿಲ್ಲ… ಮತ್ತೆ ಮತ್ತೆ ಕಟ್ಟುತ್ತಲೇ ಹೋಗುತ್ತೇವೆ ಎನ್ನುವ ಭಾವ ಒಂದಾದರೆ ಗೋಡೆಯ ನಿರರ್ಥಕತೆ, ಇಂದಿಗೆ ಹೊಂದದ ಪುರಾತನ ಮೂಢ ನಂಬಿಕೆಯನ್ನು ತೊಲಗಿಸದೆ ಅದಕ್ಕೆ ಜೋತು ಬೀಳುವ ಮನಸ್ಥಿತಿಯನ್ನು ಸುಲಭವಾಗಿ ಕಳಚಿಕೊಳ್ಳಲಾಗದ ನಾವು ಮತ್ತೆ ಮತ್ತೆ ಗೋಡೆಯನ್ನು ದುರಸ್ತಿ ಮಾಡುತ್ತಲೇ ಹೋಗುತ್ತೇವೆ… ಗೋಡೆಯನ್ನು ನಿರ್ಮಿಸಬೇಕಾದ ಹಳೆಯ ನಂಬಿಕೆ, ಗೋಡೆಯಿಲ್ಲದೆ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಮುಂದಿನ ಪೀಳಿಗೆಯ ಮನಸಿನಲ್ಲೂ ನಾಟಿಕೊಂಡು ಬೇರುಬಿಟ್ಟದ್ದು ಯಾವಾಗ ಅನಿಸುವ ವೇಳೆಯೇ ವಿಷಾದವನ್ನೂ ಹುಟ್ಟಿಸುತ್ತದೆ.

He says again, “Good fences make good neighbors” ಎಂದು ಕವಿತೆ ಮುಗಿಯುವ ಹೊತ್ತಿಗೆ ಮನಸೆಲ್ಲ ಒಂದೇ ಕಹಿ ಕಹಿ… ಇವನ ತಲೆ ಅವನಿಗೆ ಕಾಣಬಾರದು, ಅವನ ಮುಖ ಇವನಿಗೆ ಕಾಣಿಸಬಾರದು. ಇವನ ಮರ ಬೀಸುವ ಗಾಳಿ ಅವನ ತೋಟಕ್ಕೆ ಹೋಗಕೂಡದು, ಅವನ ಹೊಲದ ಹನಿ ನೀರು ಇವನ ಕಡೆಗೆ ಹೋಗಕೂಡದು. ಆದರೆ ಇವನ ಹೊಲದಿಂದ ಆರಿದ ಆವಿ ಅವನ ಹೊಲದಲ್ಲಿ ತಂಪಾಗಿ ಸೋನೆ ಸುರಿಯುವುದನ್ನು ತಡೆಯಲು ಇವನಿಗೆ ಸಾಧ್ಯವಾ… ಅವನ ಹೊಲದಲ್ಲಿ ಇಂಗಿದ ನೀರನ್ನು ಇವನ ಗಿಡಗಳ ಬೇರು ಕುಡಿಯಬಾರದು ಎನ್ನುವ ಕಟ್ಟಳೆಯನ್ನು ಪ್ರಕೃತಿ ಪಾಲಿಸುವುದಿಲ್ಲ. ಅದಕ್ಕೆ ಗೋಡೆಗಳು ಬೇಕಿಲ್ಲ. ಅಂತರ್ಜಲದ ಹರಿವಿಗೆ ಅಣೆಕಟ್ಟು ಕಟ್ಟಲು ಸಾಧ್ಯವೇ… ಬೀಸುವ ಗಾಳಿಯನ್ನು ತಡೆಯಲು ಸಾಧ್ಯವೇ… ಸೂರ್ಯನ ಬೆಳಕಿನಲ್ಲಿ ಜೀವ ನಿರ್ಜೀವ, ಚರಾಚರ ವಸ್ತುಗಳೆಲ್ಲಕ್ಕೂ ಸಮ ಪಾಲು….

Mending Wall ನಮ್ಮ ಮೂಲಭೂತವಾದಿತನದ ಮೌಢ್ಯ ಚಿತ್ರಣವನ್ನಿಟ್ಟುಕೊಂಡು ಗೋಡೆಯ ಬಗ್ಗೆ ಹೇಳಿದರೆ, Zulfikar Ghose ರ Geography lesson ಎನ್ನುವ ಪದ್ಯ ಬೇರೊಂದೇ ಹಿನ್ನಲೆಯಲ್ಲಿ ಕಾಡುತ್ತದೆ…

ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಇಲ್ಲಿ ಕವಿಯೂ ಅದನ್ನೇ ಹೇಳುತ್ತಾ ಹೋಗುತ್ತಾರೆ.

ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ ವಸ್ತುಗಳೆಲ್ಲ ಯಾಕಿಷ್ಟು ಯೋಜನೆಯಿಲ್ಲದೆ ಅಸ್ತವ್ಯಸ್ತವಾಗಿವೆ ಎಂದೂ ತಿಳಿಯುತ್ತದೆ. ಜೆಟ್ ಹತ್ತುಸಾವಿರ ಫೀಟ್ ಎತ್ತರಕ್ಕೆ ಹಾರಿದಾಗ, ಕವಿಗೆ ಯಾಕೆ ನಾಗರಿಕತೆಗಳು ನದಿದಡದಲ್ಲಿಯೇ ಬೆಳೆದುಬಂದಿವೆ ಮತ್ತು ಯಾಕೆ ಕಣಿವೆ ಪ್ರದೇಶಗಳು ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ ಎಂಬುದು ತಿಳಿಯುತ್ತದೆ. ಫಲವತ್ತಾದ ಭೂಮಿ ಮತ್ತು ನೀರು ಮನುಷ್ಯನನ್ನು ಆಕರ್ಷಿಸಿವೆ. ಇದುವೆ ಭೂಗೋಳದ ಲಾಜಿಕ್ ಎಂದುಕೊಳ್ಳುತ್ತಾರೆ. ನಂತರ ಜೆಟ್ ಆರು ಮೈಲಿ ಎತ್ತರಕ್ಕೆ ಹಾರಿದಾಗ ಭೂಮಿ ಗುಂಡಗಿದೆ ಮತ್ತು ಭೂಮಿಯ ಮೇಲೆ ಅತೀ ಹೆಚ್ಚು ಸಮುದ್ರ ಮತ್ತು ಅತೀ ಕಡಿಮೆ ನೆಲ ಇದೆ ಎಂಬುದು ತಿಳಿಯುತ್ತದೆ. ಆದರೆ ಕವಿಗೆ ಒಂದು ವಿಚಾರ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ …

But it was difficult to understand
that the men on earth found
courses to hate each other to build
walls across cities to kill
From that height, it was not clear why

(ಝುಲ್ಫೀಕರ್ ಘೋಸ್ (Zulfikar Ghose)

ಅಲ್ಲವಾ.. ಆದರೆ ಗೋಡೆ ಎನ್ನುವುದು ಯಾವಾಗ ಸುರಕ್ಷತೆ ಎನ್ನುವ ತಳಹದಿಯನ್ನು ಮೀರಿತೋ ಅದು ದ್ವೀಪಗಳನ್ನು ನಿರ್ಮಿಸುತ್ತಾ ಹೊರಟಿತು. ಗೋಡೆ ಕಟ್ಟುತ್ತಾ ಕಟ್ಟುತ್ತಾ ನಾವು ಬಾಗಿಲು ಕಿಟಕಿಗಳಿರುವ (ಆದರೆ ತೆರೆಯುವ ಮನಸಿಲ್ಲ ನಮಗೆ) ಗೋರಿಗಳನ್ನು ನಿರ್ಮಿಸಿಕೊಂಡು ಯಾವ ಪ್ರೀತಿ, ಪ್ರೇಮ, ಸಹೋದರತ್ವ… ಎನ್ನುವ ಬಾಂಧವ್ಯದ ಸೋಂಕು ತಗುಲದಂತೆ ನಮಗೆ ನಾವೇ ಆ್ಯಂಟಿಸೆಪ್ಟಿಕ್ ಚುಚ್ಚಿಕೊಂಡು ಬಿಗುವಾಗಿ ಕೂತುಬಿಟ್ಟಿದ್ದೇವೆ.

ಮುಂದೊಂದು ದಿನ ಅದೇ ಪ್ರೀತಿಗಾಗಿ ಹಪಹಪಿಸುತ್ತಾ ಬಾಯಾರಿ ಬೇಡಬೇಕಾದ ಪರಿಸ್ಥಿತಿ ಬಂದಾಗ ಹನಿ ಪ್ರೀತಿಯೂ ಸಿಗದೆ ಉಸಿರ ಚೆಲ್ಲಬೇಕಾದ ಪರಿಸ್ಥಿತಿ ಬರುತ್ತದೆ. ಆಗ ನಾವು ಬರಿಗೈ ದಾಸರು. ಕೊಡುವುದಕ್ಕೆ ನಮ್ಮಲ್ಲೂ ಏನಿಲ್ಲ…. ಕೊಡಬೇಕಾದವರ ಕೈಯಲ್ಲೂ ಏನಿಲ್ಲ. ಇದಕ್ಕಿಂತಲೂ ದೈನೇಸಿ ಸ್ಥಿತಿ ಇನ್ನೇನು ತಾನೆ ಇರಲಿಕ್ಕೆ ಸಾಧ್ಯ…

ಇರುವ ಅತ್ಯಲ್ಪ ಭೂಮಿಯಲ್ಲಿ ವ್ಯೋಮದ ಮುಂದೆ ಸಣ್ಣ ಧೂಳಿನ ಕಣವಾಗಿರುವ ನಾವೆಲ್ಲ ಒಟ್ಟುಗೂಡಿ ಬದುಕುವ ಬದಲು ಗೋಡೆ ಕಟ್ಟಿಕೊಂಡು ಯಾಕೆ ದೂರಾಗುತ್ತಿದ್ದೇವೆ… ಬೈಜಿಕ ವಿದಳನಕ್ಕಿಂತಲೂ ಸಂಯೋಗದಿಂದಲೇ ಹೆಚ್ಚು ಶಕ್ತಿ ಸಿಗುವುದು. ಇದೇ ಬೇರೆಯಾಗುವುದಕ್ಕೂ ಒಂದಾಗುವುದಕ್ಕೂ ಇರುವ ವ್ಯತ್ಯಾಸ ಮತ್ತು ವಿಶ್ವದ ಸಂದೇಶ.

“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ
ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ”

-ಜಿ.ಎಸ್.ಶಿವರುದ್ರಪ್ಪ

ತೆರಣಿಯ ಹುಳುವಿನ ಪರಿಯಲ್ಲಿ ನಮ್ಮ ನೂಲ ಹುರಿ ಕುಣಿಕೆಯಲ್ಲಿ ನಾವೇ ಸಿಕ್ಕಿ ಸಾಯಬೇಕಾದ ಸನ್ನಿವೇಶ ಬರುವ ಮುನ್ನ ಪ್ರೀತಿಯ ಸಸಿ ನೆಟ್ಟು ಅದು ಹೆಮ್ಮರವಾದಾಗ ಅದರ ನೆರಳಲ್ಲಿ ನಾವೂ ನಿಂತು ಇತರರನ್ನೂ ಬರಸೆಳೆಯಬೇಕಿದೆ… ಗೋಡೆಗಳನ್ನು ಕೆಡವಿ ಒಂದಾಗುತ್ತಾ ನಿಸರ್ಗದ ಒಂದು ಸಹಜ ಭಾಗವಾಗಬೇಕಿದೆ…