Advertisement
ತಮ್ಮ ಬೆಂಗಳೂರಿಗೆ ಬಂದ..: ವಿನಾಯಕ ಅರಳಸುರಳಿ ಲಲಿತ ಪ್ರಬಂಧ

ತಮ್ಮ ಬೆಂಗಳೂರಿಗೆ ಬಂದ..: ವಿನಾಯಕ ಅರಳಸುರಳಿ ಲಲಿತ ಪ್ರಬಂಧ

ಕೊಂಚ ಸ್ಥಿತಿವಂತರಾಗಿದ್ದ ಪಕ್ಕದ ಮನೆಯ ಅಣ್ಣನ ಮಗನ ಬರ್ತಡೇ ಪಾರ್ಟಿಯಲ್ಲಿ ತಿನ್ನಲು ಸಿಕ್ಕ ಚಿಕ್ಕ ಕೇಕ್‌ನ ತುಣುಕನ್ನೇ ಸ್ವರ್ಗ ಲೋಕದ ತಿನಿಸೆಂಬಂತೆ ಅದೊಂದು ದಿನ ತಿಂದಿದ್ದೆವು. ಇನ್ನೊಂದು ಪೀಸ್ ಬೇಕು ಎಂಬ ಆಸೆಯನ್ನು ಬಾಯಲ್ಲೇ ಇಟ್ಟುಕೊಂಡು ಕೈ ತೊಳೆದಿದ್ದೆವು. ಯಾರೋ ತುಂಡೊಂದನ್ನು ಬೇಡವೆಂದು ತಟ್ಟೆಯಲ್ಲೇ ಬಿಟ್ಟಾಗ ಅದು ನಮಗೆ ಸಿಗುವುದೇನೋ ಎಂದು ಆಸೆಯಿಂದ ಕಾದಿದ್ದೆವು. ಇಂತಿಪ್ಪ ಅಪೂರ್ಣ ಬಯಕೆಗಳ ಬಾಲ್ಯವನ್ನೇ ಕಳೆದ ತಮ್ಮನಿಗೆ ಈಗಲೂ ಈ ಪಟ್ಟಣದ ವಿಶೇಷ ತಿಂಡಿಗಳ ಬಗ್ಗೆ ಆಸೆಯಿದ್ದರೆ ಅದರಲ್ಲಿ ಯಾವ ತಪ್ಪಾಗಲೀ, ಅತಿಯಾಸೆಯಾಗಲೀ ನನಗೆ ಕಾಣಲಿಲ್ಲ.
ವಿನಾಯಕ ಅರಳಸುರಳಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

ಅದು 2018ರ ಸಮಯ. ತಮ್ಮ ಬೆಂಗಳೂರಿಗೆ ಬಂದ. ಪರೀಕ್ಷೆ ಬರೆಯುವುದು ಒಂದು ನೆಪವಾಗಿತ್ತು. ಡಿಗ್ರಿ ಮುಗಿದೊಡನೆ ಕೆಲಸ ಪಡೆಯಲಿಕ್ಕೆ ಸರ್ಕಸ್ ಮಾಡುತ್ತಿದ್ದ ತನ್ನ ಓರಿಗೆಯ ಮತ್ತುಳಿದ ಕಪಿಗಳಂತೆಯೇ ತಾನೂ ಏನೋ ಒಂದು ಮಾಡುತ್ತಾ ಬೆಂಗಳೂರು ತಲುಪಿದ್ದ. ಪುಣ್ಯಕ್ಕೆ ಅವನ ಪರೀಕ್ಷೆ ನನ್ನ ರಜಾ ದಿನವಾದ ಶನಿವಾರದಂದೇ ಆಗಿದ್ದರಿಂದ ಹಾಗೂ ಪರೀಕ್ಷಾ ಕೇಂದ್ರ ನನ್ನ ರೂಮಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದುದರಿಂದ ಧೈರ್ಯವಾಗಿ ಬಾ ಎಂದ ನನ್ನನ್ನು ನಂಬಿ ಅವನು ಬೆಂಗಳೂರಿಗೆ ಬಂದ.

ಊರು ಬಿಟ್ಟು ಬೆಂಗಳೂರು ಸೇರಿದ ಭಾವುಕ ಜೀವಿಗಳ ಪಾಲಿಗೆ ಎರಡು ಜಗತ್ತಿರುತ್ತದೆ‌. ಒಂದು ಹೊರಗಿನ ಶಹರ. ಅದರಲ್ಲಿ ನಾವಿರುತ್ತೇವೆ. ಎರೆಡನೆಯದು ಬಿಟ್ಟು ಬಂದ ಹಳ್ಳಿ. ಅದು ನಮ್ಮೊಳಗಿರುತ್ತದೆ. ಯಾವಾಗಾದರೊಮ್ಮೆ ಅಲ್ಲಿನವರು ಇಲ್ಲಿಗೆ ಇಲ್ಲವೇ ಇಲ್ಲಿನವರು ಅಲ್ಲಿಗೆ ಬಂದಾಗ, ಅದರಲ್ಲೂ ಊರಿನ ಬಂಧು ಒಬ್ಬರು ಬೆಂಗಳೂರಿಗೆ ಬಂದಾಗ ನಾವು ಒಳ – ಹೊರಗಿನ ಪಾತ್ರಗಳೆರಡು ಎದುರು ಬದುರಾದಂತೆ, ಕನಸಿನ ತುಣುಕೊಂದು ವಾಸ್ತವಕ್ಕೆ ಬಿದ್ದಂತೆ ವಿಚಿತ್ರ ಸಂವೇದನೆಗೊಳಗಾಗುತ್ತೇವೆ. ಅಲ್ಲಿ, ಊರಿನಲ್ಲಿ ನಿರ್ಬಲನೂ, ಭಯಸ್ಥನೂ, ಯಾರಿಂದ ಅಷ್ಟಾಗಿ ಗುರುತಿಸಿಕೊಳ್ಳದವನೂ ಆದ ನಾನು ಇಲ್ಲಿ ಸ್ವೇಚ್ಛೆಯಲ್ಲಿ, ಸ್ವತಂತ್ರವಾಗಿ, ಕೆಲವರಿಂದ ಗುರುತಿಸಿಕೊಳ್ಳುತ್ತಾ, ಸ್ನೇಹ ಸಂಪಾದಿಸುತ್ತಾ ಬದುಕುತ್ತಿರುವುದನ್ನು ನನ್ನವರು ನೋಡುವಾಗ ಆಗುವ ಸಂತೋಷ ಒಂದೆಡೆಯಾದರೆ ಎಲ್ಲಿ ಅವರೆದುರಿಗೆ ನನ್ನ ಹಳೆಯ, ಹೊಸ ದೌರ್ಬಲ್ಯಗಳು ಅನಾರಣಗೊಳ್ಳುತ್ತವೆಯೋ ಎಂಬ ಆತಂಕ ಇನ್ನೊಂದೆಡೆ. ಹೀಗೆ ಮಿಶ್ರ ಭಾವಗಳ ಅನುಭವಿಸುತ್ತಲೇ ತಮ್ಮನನ್ನು ಎದುರ್ಗೊಳ್ಳಲು ಹೊರಟೆ.

ಆ ಶನಿವಾರದಂದು ಎಂದಿಗಿಂತ ತಂಪಾದ ಹಾಗೂ ಉಲ್ಲಾಸದಿಂದ ಕೂಡಿದ ಬೆಳಗಾಯಿತು. ತಮ್ಮನಾಗಲೇ ಮತ್ತೀಕೆರೆಯಲ್ಲಿದ್ದ ಚಿಕ್ಕಮ್ಮನ ಮನೆಗೆ ಬಂದಿದ್ದ. ಅಲ್ಲಿರುವ ಮಾವನಿಗೂ ಅವನಿಗೂ ಸೈದ್ಧಾಂತಿಕ ಹಾಗೂ ಇನ್ನಿತರ ಭಿನ್ನಾಭಿಪ್ರಾಯಗಳಿದ್ದರಿಂದ ಎಲ್ಲಿ ಅವರಿಂದ ಅವನಿಗೆ ಬೇಸರವಾದೀತೋ ಎಂಬ ಆತಂಕವೊಂದು ಕಾಡತೊಡಗಿತ್ತು. ಊರಿನಲ್ಲಿ ದೊಡ್ಡವನಂತೆ ಕಾಣುವ ಹುಡುಗ ಈಗ ನನ್ನ ನಿಗಾದಡಿಗೆ ಬಂದಾಗ ಇದ್ದಕ್ಕಿದ್ದಂತೆ ಚಿಕ್ಕ ಮಗುವಂತೆನಿಸತೊಡಗಿದ್ದ. ಬಸ್ಸಿನಲ್ಲಿ ಬರುವಾಗಲೋ, ಆಟೋ ಹತ್ತುವಾಗಲೋ, ಚಿಕ್ಕಮ್ಮನ ಮನೆಯಿಂದ ಅಂಗಡಿಗೆ ಓಡಾಡುವಾಗಲೋ ಅಥವಾ ಇನ್ನೆಲ್ಲೋ ಈ ರಾಕ್ಷಸ ಶಹರ ಎಲ್ಲಿ ಅವನಿಗೆ ನೋವುಂಟು ಮಾಡುವುದೋ ಎಂಬ ಭಯ ನನ್ನೊಳಗೆ ಉದ್ಭವಿಸಿತ್ತು. ಆದರೆ ಅದ್ಯಾವುದನ್ನೂ ತೋರಗೊಡದೆ ಸಾದಾ ಮುಖಭಾದಲ್ಲಿ ಚಿಕ್ಕಮ್ಮನ ಮನೆಯಲ್ಲಿದ್ದ ಅವನೆದುರು ನಿಂತೆ.

ಅಲ್ಲಿ ನಿಂತಿದ್ದ.. ನನ್ನ ತಮ್ಮ! ನನ್ನನ್ನು ನೋಡಿದವನೇ ಅಣ್ಣಾ ಎಂದ. ನಾನು ನಗಲಿಲ್ಲ. ಅವನೂ. ಅವನನ್ನು ನೋಡುತ್ತಿರುವ ಖುಷಿ ನನ್ನಲ್ಲೂ, ನನ್ನನ್ನು ಕಂಡ ಸಂತೋಷ ಅವನಲ್ಲೂ ಇತ್ತಾದರೂ ಇಬ್ಬರೂ ಅದನ್ನು ಪ್ರಕಟಿಸದೇ ಗಂಭೀರವಾಗಿಯೇ ಎದುರು ಬದುರಾದೆವು. ಪರೀಕ್ಷೆಯ ಕೇಂದ್ರ ಇಲ್ಲಿಂದ ಎಷ್ಟು ದೂರ? ಹೋಗುವುದು ಹೇಗೆ? ಎಂದೆಲ್ಲಾ ಪ್ರಶ್ನೆ ಕೇಳಿದ. ಚಿಕ್ಕಮ್ಮ ಅವನ ಕುರಿತಾಗಿ “ನಮ್ಮನೆಯ ಚಿಕ್ಕ ಜಾಗದಲ್ಲಿರೋದಕ್ಕೆ ಕಿರಿಕಿರಿ ಆಯ್ತೂಂತ ಕಾಣತ್ತೆ. ಆ ಕಡೆ ಗಾಯಿತ್ರಿ ಚಿಕ್ಕಿ ಮನೆಗೆ ಹೋದೋನು ಬರ್ಲೇ ಇಲ್ಲ” ಎಂದಾಗ ತಲೆ ಕೆರೆದುಕೊಂಡು ನಕ್ಕ. ತಿಂಡಿ ತಿಂದು, ‘ಹೊರಡೋಣ’ ಎಂದು ಎದ್ದ ನನ್ನ ಹಿಂದೆ ಆಚೀಚೆ ನೋಡುತ್ತಾ ಹೊರಟುನಿಂತ.

ನಾನು ಮುಂದೆ ನಡೆಯುತ್ತಿದ್ದೆ. ಅವನು ಹಿಂದೆ. “ಇಲ್ಲಿ ಎಲ್ಲಾ ರಸ್ತೆಗಳೂ ಒಂದೇ ಥರಾ ಇದಾವಲ್ಲಾ. ಕಳೆದು ಹೋದರೆ ಹೇಗೆ ವಾಪಾಸ್ ಬರೋದು?” ಎಂದ. “ಆರನೇ ಕ್ಲಾಸಿನಲ್ಲಿ ನಾನು ಮೊದಲ ಸಲ ಬೆಂಗಳೂರಿಗೆ ಬಂದಾಗ ಚಿಕ್ಕಿ ನನ್ನ ಜೇಬಿಗೊಂದು ಚೀಟಿ ಹಾಕಿದ್ದರು‌.‌ ಅದರಲ್ಲಿ ‘ಈ ಹುಡ್ಗ ಯಾರಿಗಾದರೂ ಸಿಕ್ಕರೆ ಅವರು ಈ ವಿಳಾಸಕ್ಕೆ ತಲುಪಿಸಿ’ ಅಂತ ಬರೆದಿದ್ದರು” ಎಂದು ನೆನಪಿಸಿಕೊಂಡೆ. ಹೆಹೇ.. ಅದೆಲ್ಲಾ ನಿನ್ನಂಥಾ ಫಾರಂ ಕೋಳಿಗಳಿಗೆ. ನಾನು ಹಳ್ಳೀ ಜನ. ಯಾವುದಕ್ಕೂ ಹೆದರಲ್ಲ” ಎಂದು ಜಂಭ ಕೊಚ್ಚಿದ. ಅದೇ ಸಮಯಕ್ಕೆ ಸಿಖ್ ಪೇಟ ತೊಟ್ಟ ಪಂಜಾಬೀ ಗುಂಪೊಂದು ನಮಗೆದುರಾಗಿ ನಡೆದು ಬಂತು. ಅಷ್ಟೊಂದು ಜನ ಅನ್ಯ ರಾಜ್ಯದವರನ್ನು ಅತ್ಯಾಶ್ಚರ್ಯದ ಕಣ್ಣಿಂದ ನೋಡುತ್ತಾ “ಇವರೆಲ್ಲಾ ಇಲ್ಲೇ ಇರ್ತಾರಾ? ತಮ್ಮ ಮನೆ, ಊರನ್ನ ಬಿಟ್ಟು ಇಷ್ಟು ದೂರ ಬಂದಿದ್ದಾರಾ?” ಎಂದು ಉದ್ಗರಿಸಿದ. ರಸ್ತೆಯಲ್ಲಿ ಧುಮ್ಮಿಕ್ಕಿ ಬರುತ್ತಿದ್ದ ಟ್ರಾಫಿಕ್‌ನಲ್ಲಿ ಮುಂದೆ ನಡೆದ ನನ್ನನ್ನು ಆಚೀಚೆ ನೋಡುತ್ತಾ ಹಿಂಬಾಲಿಸಿದ.‌

ಬಸ್ ಸ್ಟ್ಯಾಂಡಿನಲ್ಲಿ ಬಿಎಂಟಿಸಿಗಾಗಿ ಕಾಯುವಾಗ ಫಂಕೀಯಾಗಿ ಕಾಣುತ್ತಿದ್ದ, ಪಟ್ಟಣದ ಸೊಗಡಿನ ಯುವಕನೊಬ್ಬ ನಮ್ಮ ಪಕ್ಕ ಬಂದು ನಿಂತ. ಅವನ‌ ತಲೆ, ಕಿವಿಗೆ ಚುಚ್ಚಿಕೊಂಡ ಇಯರ್ ಫೋನಿನಲ್ಲಿ ಕೇಳುತ್ತಿದ್ದ ಹಾಡಿನ ಲಯಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಅವನ ಕೂದಲು, ಉಡುಗೆ, ನಡವಳಿಕೆಗಳೆಲ್ಲಲ್ಲಾ ಚಿಮ್ಮುತ್ತಿದ್ದ ಅತ್ಯಾಧುನಿಕತೆಯ ನೋಡಿ ಸಿಡಿಮಿಡಿಗೊಂಡ ತಮ್ಮ “ಒಳ್ಳೇ ಮಂಗನ ಹಾಗೆ ಮಾಡ್ತಿದ್ದಾನೆ.‌ ಒಂದು ಗುದ್ದಬೇಕು ಮೂತಿ ಮೇಲೆ” ಎಂದು ಸಿಡುಕಿದ. ನನಗೆ ನಗು ಬಂತು. ಅಷ್ಟರಲ್ಲೇ ಬಸ್ಸು ಬಂದು ನಿಂತಿತು. ಅದೆಲ್ಲಿದ್ದರೋ, ಹತ್ತು ಹನ್ನೆರೆಡು ಜನ ಒಮ್ಮೆಗೇ ಸುತ್ತಲಿಂದಲೂ ನುಗ್ಗಿ ಬಂದು ಬಸ್ಸಿನ ಬಾಗಿಲಿನ ಸುತ್ತ ಜಮಾಯಿಸಿಕೊಂಡರು. ನೋಡನೋಡುತ್ತಿದ್ದಂತೆಯೇ ಎರಗಿ ಬಂದ ಈ ಜಂಗುಳಿಯ ನಡುವೆ ನನ್ನ ತಮ್ಮ ಎಲ್ಲಿಯೋ ಮಾಯವಾಗಿಹೋದ. ನನ್ನ ನಂಬಿ ಬಂದ ತಮ್ಮ! ಎಲ್ಲಿ ಕಳೆದುಹೋದನೋ ಎಂದು ನಾನು ಮಧ್ಯ ಬಾಗಿಲಿನಲ್ಲಿ ನಿಂತು ಎಡಬಿಡಂಗಿಯಂತೆ ಸುತ್ತಲೂ ನೋಡತೊಡಗಿದೆ. ಹಿಂದಿನ ಪ್ರಯಾಣಿಕರಿಂದ ಗದರಿಕೆಯ ಸುರಿಮಳೆಯೇ ಆಯಿತು. ಆಗಲೇ ಏಕೋ ಒಳಗೆ ನೋಡಿದರೆ ಖಾಲಿ ಸೀಟೊಂದರ ಮೇಲೆ ಆಗಲೇ ಸ್ಥಾಪಿತನಾಗಿರುವ ಅವನು ಕಂಡ. ಅವನನ್ನು ಹುಡುಕುತ್ತಾ ನಾನಿಲ್ಲಿ ಬೈಸಿಕೊಳ್ಳುತ್ತಿದ್ದರೆ ಅವನು ಮಾತ್ರ ಯಾವ ಮಾಯೆಯಲ್ಲೋ ಎಲ್ಲರಿಗಿಂತ ಮೊದಲೇ ನುಸುಳಿ ಹೋಗಿ, ಕಿಟಕಿಯಾಚೆ ನಡೆದು ಹೋಗುತ್ತಿದ್ದವರನ್ನು ನೋಡುತ್ತಾ ಕುಳಿತಿದ್ದ!

ಬೆಂಗಳೂರಿನ ಒಂದೊಂದು ಹೊಸತನವೂ ಅವನನ್ನು ಅಚ್ಚರಿಗೀಡುಮಾಡುತ್ತಿತ್ತು. ದಿಗ್ಭ್ರಮೆಯ ನೋಟದಲ್ಲವನು ಶಹರದ ಚಿತ್ರಗಳ ದಾಖಲಿಸಿಕೊಳ್ಳುತ್ತಿದ್ದರೆ ಅವನ ಕಣ್ಣ ಮೂಲಕ ನಾನು ಕಂಡ ಮೊದಮೊದಲ ಬೆಂಗಳೂರಿನ ನೆನಪುಗಳ ಜೀವಂತಗೊಳಿಸಿಕೊಳ್ಳುತ್ತಿದ್ದೆ. ಮಲ್ಲೇಶ್ವರಂನ ಕ್ರೀಡಾಂಗಣವೊಂದರ ಹೊರಗೆ ಗೋಡೆಯ ಮೇಲೆ ಬರೆಯಲಾಗಿದ್ದ ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ ಮುಂತಾದವರ ಚಿತ್ರಗಳ ಕಂಡು ಇವರೆಲ್ಲಾ ಇಲ್ಲಿ ಆಡಲಿಕ್ಕೆ ಬರ್ತಾರಾ? ಎಂದು ಪ್ರಶ್ನಿಸಿದ. ಬಸ್ಸು ಸಿಗ್ನಲ್ಲಿನಲ್ಲಿ ನಿಂತಾಗ ಏನಾಯಿತು? ಎಂದು ಮುಂದೆ ಇಣುಕಿದ. ಇದ್ಯಾಕೆ ಇಷ್ಟೊಂದು ಸಿಗ್ನಲ್ ಇದೆ? ಹೀಗೆ ನಿಲ್ಲುತ್ತಾ ಹೋದರೆ ಹೋಗೋದ್ಯಾವಾಗ? ಎಲ್ಲಾ ಕಡೆಯೂ ಹೀಗೇನಾ? ಎಂದೆಲ್ಲಾ ಪ್ರಶ್ನಿಸಿದ. ನಾನು ಆಗಲೇ ಬೆಂಗಳೂರಿನ ಮೂಲೆ ಮೂಲೆಯನ್ನೂ ಅರಿತ ಪರಮ ಜ್ಞಾನಿಯಂತೆ ಅವನ ಪ್ರಶ್ನೆಗಳಿಗೆ ಗತ್ತಿನಲ್ಲಿ ಉತ್ತರಿಸಿದೆ.

ಅದೇಕೋ ಪ್ರತಿದಿನ ನಾನು ಇಳಿಯುವ ನಿಲ್ದಾಣ, ಓಡಾಡುವ ರಸ್ತೆ, ವಾಸಿಸುವ ರೂಮುಗಳನ್ನೆಲ್ಲಾ ಅವನಿಗೆ ತೋರಿಸುವ ಕಾತರ ನನ್ನೊಳಗೆ ಉಕ್ಕುತ್ತಿತ್ತು. ಮೇಲೆ ಹೇಳಿದಂತೆ ಅದು ಒಳಗಿನ ಹಾಗೂ ಹೊರಗಿನ ಜಗತ್ತುಗಳೆರಡರ ಮುಖಾಮುಖಿಯ ಕ್ಷಣವಾಗಿದ್ದರಿಂದಲೋ ಅಥವಾ ‘ನೋಡು, ಇಂಥಾ ನಗರದಲ್ಲಿ, ಇಂಥಾ ಪರಿಸ್ಥಿತಿಯಲ್ಲಿ ನಾನು ಬದುಕುತ್ತಿದ್ದೇನೆ’ ಎಂಬ ಜಂಭವನ್ನು ಪ್ರಕಟಿಸಲೋ ಗೊತ್ತಿಲ್ಲ, ಹಾಗೆನಿಸುತ್ತಿತ್ತು.

ರೂಮಿಗೆ ಬಂದೆವು. ಒಳಗಡಿಯಿಟ್ಟವನೇ “ಇದೆಂತ ಇದು? ಒಬ್ಬ ಮೈ ಮುರಿದರೆ ಇನ್ನೊಬ್ಬ ಹೊರಗೆ ಬೀಳ್ತಾನೆ. ಇಷ್ಟೊಂದು ಚಿಕ್ಕ!” ಎಂದು ಮುಖ ಸಿಂಡರಿಸಿದ. ವಾಶ್ ರೂಮಿನಲ್ಲಿನ ಕಮೋಡನ್ನು ನೋಡಿ ಗೊಂದಲಕ್ಕೊಳಗಾದ. ಆಗಷ್ಟೇ ಓಲಾ ಕ್ಯಾಬು ಬೆಂಗಳೂರಿಗೆ ಬಂದಿತ್ತು. ನಾನು ಆ್ಯಪ್‌ನಲ್ಲಿ ಕಾರು ಬುಕ್ ಮಾಡಿದೆ. ಅವನ ಚೀಲವನ್ನು ರೂಮಿನಲ್ಲೇ ಬಿಟ್ಟೆವು. ಕರೆ ಮಾಡಿದ ಕ್ಯಾಬಿನವನಿಗೆ ಸ್ವಾದಿಷ್ಟ ಹೋಟೆಲ್ ಹತ್ತಿರ ಎಂದು ಹೇಳಿ ಅವನನ್ನು ಹೊರಡಿಸಿಕೊಂಡು ಹೊರಟೆ. ಎರಡೇ ನಿಮಿಷಕ್ಕೆ ಪಕ್ಕ ಬಂದು ನಿಂತ ಓಲಾ ಕಾರನ್ನು ತೋರಿಸಿ ಹತ್ತು ಎನ್ನುತ್ತಾ ಹಿಂದೆ ತಿರುಗಿ ನೋಡಿದೆ.. ಮಹದಾಶ್ಚರ್ಯವೊಂದು ಅವನ ಕಣ್ಣಲ್ಲಿ ಬಾಯ್ಬಿಟ್ಟು ನಿಂತಿತ್ತು. “ಅಲ್ಲ, ನೀನು ಎಂತ ಮಾಡಿದ್ದು? ಓಲಾ ಎಂದರೆ ಇದೇನಾ? ಇವನು ಅಲ್ಲಿಯ ತನಕವೂ ಬಿಡ್ತಾನಾ? ಬುಕ್ ಮಾಡೋದು ಹೇಗೆ?” ಎಂದೆಲ್ಲಾ ಕೇಳಿದವನನ್ನು ಅವನ ಆಶ್ಚರ್ಯದ ಸಮೇತ ಕಾರು ಹತ್ತಿಸಿಕೊಂಡು ಕುಳಿತೆ. ಕಾರು ಕದಲಿತು. ಮೊಬೈಲು ತೆರೆದು ಬೆರಳ ತುದಿಯಲ್ಲಿ ಕಾರುಗಳ ಬುಕ್ ಮಾಡುವುದನ್ನೂ, ಮ್ಯಾಪಿನಲ್ಲಿ ನಾವೀಗ ಸಾಗುತ್ತಿರುವ, ಹೋಗಿ ತಲುಪುವ ಜಾಗಗಳನ್ನೂ ತೋರಿಸಿದೆ. ಅವನು ಮಾಂತ್ರಿಕನ ಟೋಪಿಯಿಂದ ಹೊರಬಂದ ಮೊಲವನ್ನು ನೋಡುತ್ತಿರುವ ಮುಗ್ಧ ಪೋರನಂತೆ ಬಾಯ್ಬಿಟ್ಟು ನೋಡತೊಡಗಿದ.

ಹೊರಗಡೆಯ ಎತ್ತೆತ್ತರದ ಬಹುಮಹಡಿ ಕಂಪನಿಗಳು, ಅದರೆದುರು ನಿಂತ ರಂಗ್ ಬಿರಂಗೀ ಉದ್ಯೋಗಿಗಳು, ಅವರ ಕೈಯಲ್ಲಿ ಸುಡುಸುಡುತ್ತಿರುವ ಸಿಗರೇಟುಗಳೆಲ್ಲಾ ತಮ್ಮನ ಕಣ್ಣಲ್ಲಿ ಅಚ್ಚರಿಯ ಬಿಂಬಗಳಾಗಿ ಹಾದುಹೋದವು. ಮಹಡಿಗಳಂತೆಯೇ ಅಲ್ಲಿನ ಉದ್ಯೋಗಿಗಳ ಸಂಬಳವೂ ಎತ್ತರವಾಗಿರುತ್ತದೆಂಬ ಅವನ ನಂಬಿಕೆಗೆ ನಾನು ಕಲ್ಲು ಹಾಕಿದೆ. ಇಡೀ ಬೆಂಗಳೂರನ್ನು ಪ್ರಶ್ನೆ ಪ್ರಶ್ನೆಗಳಾಗಿ ಅವನು ಅರ್ಥಮಾಡಿಕೊಳ್ಳುತ್ತಿದ್ದ. ಪರೀಕ್ಷಾ ಕೇಂದ್ರದ ನಿಖರವಾದ ಜಾಗ ತಿಳಿದಿರಲಿಲ್ಲವಾದ್ದರಿಂದ ಕೊಂಚ ದೂರದಲ್ಲಿ ಓಲಾದಿಂದಿಳಿದು ಗೂಗಲ್ ಮ್ಯಾಪಿನ ಮೊರೆಹೋದೆ. ಅದು ಬೆರಳು ತೋರಿದೆಡೆಗೆ ಅವನನ್ನು ನಡೆಸಿಕೊಂಡು ಹೋಗುತ್ತಾ “ಬೆಂಗಳೂರಿನಲ್ಲಿ ಮೊದಲು ಕಲಿಯಬೇಕಾದ ಸಾಹಸವೆಂದರೆ ಅಡ್ರೆಸ್ ಹುಡುಕುವುದು” ಎಂದೆ. ಅವನು ರಾಮನನ್ನು ಹಿಂಬಾಲಿಸುವ ಲಕ್ಷ್ಮಣನಂತೆ ಹಿಂದೆ ನಡೆದ.

ಪರೀಕ್ಷಾ ಕೇಂದ್ರ ಅಭ್ಯರ್ಥಿಗಳಿಂದ ತುಂಬಿ ಹೋಗಿತ್ತು. ಈಗಷ್ಟೇ ಡಿಗ್ರಿ ಮುಗಿಸಿದವರಿಂದ ಹಿಡಿದು ಆರ್ಮಿಯಲ್ಲಿದ್ದು ನಿವೃತ್ತರಾದವರ ತನಕ ಎಷ್ಟೊ ಜನ ಪರೀಕ್ಷೆ ಬರೆಯಲು ಬಂದಿದ್ದರು. ಕೆಲವರು ಪುಸ್ತಕದೊಳಗೇ ಅವಿತು ಕೂತು ಆಗಾಗ ತಲೆ ಮಾತ್ರ ಹೊರಗೆ ಹಾಕಿ, ಆಚೀಚೆ ನೋಡಿ, ಮತ್ತೆ ಒಳಹೊಗ್ಗುತ್ತಿದ್ದರು. ಬರಬಹುದಾದ ಪ್ರಶ್ನೆಗಳು, ಸಿಗಬಹುದಾದ ಸಮಯ ಮುಂತಾದ ವಾಕ್ಯಗಳು ಅವರ ಗುಂಪಿನಿಂದ ಕೇಳಿಬರುತ್ತಿದ್ದವು. ಇವನ್ನೆಲ್ಲಾ ಕಲಿತಿದ್ದೀಯಾ? ಎಂಬಂತೆ ತಮ್ಮನತ್ತ ನೋಡಿದೆ. ಅವನಾದರೂ ಇದ್ಯಾವುದರ ತಿಳಿವೂ ಇಲ್ಲದೆ ತನ್ನ ಇಷ್ಟುದಿನಗಳ ಜ್ಞಾನವನ್ನೇ ನಂಬಿಕೊಂಡು ಪರೀಕ್ಷೆಗೆ ಬಂದಂತಿದ್ದ. ಇದೇ.. ಬೆಂಗಳೂರು ಹಾಗೂ ಹಳ್ಳಿಗಳ ನಡುವಿನ ವ್ಯತ್ಯಾಸ. ಇಲ್ಲಿ ಮಾರು ಮಾರಿಗೂ ಕೋಚಿಂಗ್ ಸೆಂಟರುಗಳಿವೆ. ಸುಮ್ಮನೆ ಎಡವಿದರೂ ಯಾರೋ ಒಬ್ಬ ಟ್ಯೂಷನ್ ಹೇಳಿಕೊಡುವವನ ಮನೆಯೆದುರು ಬಿದ್ದಿರುತ್ತೇವೆ. ಕಾಲೇಜಿಂದ ಬಂದ ಮೇಲೆ ಉಳಿವ ಸಮಯವನ್ನೆಲ್ಲಾ ಅವರು ಕಿತ್ತುಕೊಂಡು ಒಂದಷ್ಟು ಪಾಠ ತಲೆಗೆ ತುಂಬುತ್ತಾರೆ. ಆದರೆ ಊರಿನಲ್ಲಿ? ಕಟ್ಟಿಗೆ ಬಿದ್ದಿದೆ ಒಡಿ, ಸೊಸೈಟಿಗೆ ಹೋಗಿ ಅಕ್ಕಿ ತಾ, ತೋಟಕ್ಕೆ ಹೋಗಿ ಹುಲ್ಲು ಕೊಯ್ಯಿ, ಬಯಲಲ್ಲಿ ಬ್ಯಾಟು-ಬಾಲು ಕಾದಿದೆ. ಅಲ್ಲಿಗೆ ಹೋಗು.. ಅಲ್ಲಿ ಬದುಕು ಬೇರೆಯದೇ ಸಂಗತಿಗಳ ನಡುವೆ ಹರಡಿಕೊಂಡಿದೆ. ಟ್ಯೂಷನ್ ಕೋಣೆಯಲ್ಲೇ ಹುಟ್ಟಿದಂತಿರುವ ಇಲ್ಲಿಯವರ ನಡುವೆ ನಮ್ಮವರು ಹೇಗೆ ತಾನೇ ಸೆಣೆಸಿಯಾರು ಅನ್ನಿಸಿತು.

ಪರೀಕ್ಷೆ ಆರಂಭವಾಯಿತು. ತಮ್ಮ ಒಳಗೆ ಹೋದ. ನಾನು ಅಲ್ಲೇ ಆಚೀಚೆ ಓಡಾಡುತ್ತಾ ಸಮಯ ದೂಡಿದೆ. ಎರೆಡು ಗಂಟೆಗಳ ಬಳಿಕ ಹೊರಗೆ ಬರುವಾಗ ತಮ್ಮ ಯಾರದೋ ಜೊತೆ ಹರಟುತ್ತಾ ನಡೆದು ಬರುತ್ತಿದ್ದ. ನನ್ನ ಸಮೀಪ ಬಂದದ್ದೇ ಸರಿ ಬರ್ತೇನಿ.. ಎಂದು ಇಬ್ಬರೂ ಯಾವುದೋ ಹಳೆಯ ಶಾಲೆಯ ಗೆಳೆಯರೆಂಬಂತೆ ಒಬ್ಬರಿಗೊಬ್ಬರು ಕೈ ಮಾಡಿಕೊಂಡರು. ಇದು, ಚುನಾವಣೆಯಲ್ಲಿ ಸರ್ಕಾರ ರಚಿಸಲಿಕ್ಕೆ ಎರೆಡು ಪ್ರತಿಸ್ಪರ್ಧಿಗಳು ಪರಸ್ಪರ ಮಾಡಿಕೊಂಡ ಕಳ್ಳ ಮೈತ್ರಿಯಂತೆ ನನಗೆ ಕಂಡಿತು. ಅಲ್ಲಿಂದ ಹೊರಟಾಗ ಯಾವುದೇ ಗಡಿಬಿಡಿಯಿರಲಿಲ್ಲವಾದ್ದರಿಂದ ಅವನನ್ನು ಬಸ್ ಸ್ಟ್ಯಾಂಡಿಗೆ ಕರೆತಂದೆ. ಬರುವಾಗ ರಾಜನಂತೆ ಸುಂಯ್ಯೆಂದು ಓಲಾ ಕಾರಿನಲ್ಲಿ ಬಂದಿದ್ದವನಿಗೆ ಈಗ ನೀರಸ ಬಸ್ಸಿನಲ್ಲಿ ಹೋಗುವುದಕ್ಕೆ ಮನಸ್ಸಿರಲಿಲ್ಲ. ಅದರಲ್ಲೂ ನಡುವೆ ಇಳಿದು ಇನ್ನೊಂದು ಬಸ್ಸು ಹತ್ತುವಾಗಂತೂ ಅವನ ಬೇಸರ ಮೇರೆ ಮೀರಿ ಓಲಾ ಓಲಾ ಎಂದು ಬಡಬಡಿಸಿದ.

‘ಸ್ವಾದಿಷ್ಟ’ ದಲ್ಲಿ ಊಟ ಮಾಡಿಸಿದೆ. ನನಗೆ ಕುಡಿಯಲಿಕ್ಕೆ ಏನಾದರೂ ಬೇಕು ಎಂದ. ಅಲ್ಲೇ ಸಮೀಪದಲ್ಲಿದ್ದ ಪರಿಚಯದ ಮಲೆಯಾಳಿ ಜ್ಯೂಸ್ ಹಾಗೂ ಚಾಟ್ಸ್ ಅಂಗಡಿಗೆ ಕರೆದೊಯ್ದೆ. ಪೈನಾಪಲ್, ಆರೆಂಜ್, ಮೂಸಂಬಿ, ಮಸ್ಕ್‌ ಮೆಲನ್, ಬಟರ್ ಫ್ರೂಟ್, ಮಸಾಲಾ ಪುರಿ, ಪಾನೀಪುರಿ, ದಹೀಪುರಿ, ಗೋಭೀಮಂಚೂರಿ ಎಂದು ಅಂಗಡಿಯವ ದೊಡ್ಡ ಪಟ್ಟಿ ಹೇಳಿದಾಗ ಬಟರ್ ಫ್ರೂಟ್ ಅಂದ್ರೆಂತ? ರುಚಿ ಇರತ್ತಾ? ಗೋಭಿ ತಿನ್ನಬೋದಿತ್ತು ಎಂದು ಗೊಂದಲಕ್ಕೆ ಬಿದ್ದ. ಗೋಭಿ ಸಂಜೆ ಅಕ್ಕನ ಮನೆ ಹತ್ರ ಕೊಡಿಸ್ತೀನಿ, ಈಗ ಬಟರ್ ಫ್ರೂಟ್ ತಗೋ ಎಂದೆ. ಸರಿ ಎಂದ. ಬಟರ್ ಫ್ರೂಟನ್ನು ಕತ್ತರಿಸಿ, ಅದರ ನಯವಾದ ತಿರುಳನ್ನು ಸೌಟಿಂದ ಕೊರೆದು ಮಿಕ್ಸಿಗೆ ಹಾಕುವ ಸ್ಟೈಲಿಗೆ, ಸಕ್ಕರೆ, ಹಾಲು ಹಾಗೂ ಫ್ಲೇವರ್ ಬೆರೆತ ಅದರ ಸ್ವಾದಭರಿತ ಸೀಕರಣೆಯ ಸವಿಗೆ ಮರುಳಾಗಿ ಇದೇನಿದು ಇಷ್ಟು ರುಚಿ ಇದೆ? ಎಂದು ಉದ್ಗರಿಸಿದ.

ಜಯನಗರ ನಾಲ್ಕನೇ‌ ಬ್ಲಾಕ್‌ನಲ್ಲಿದ್ದ ಸಪ್ನಾ ಬುಕ್ ಹೌಸ್‌ಗೆ ಹೋಗೋಣ ಎಂದೆ. ಗೆಳೆಯ ಆದರ್ಶ ಜಯಣ್ಣ ಸಹಾ ನಮಗೆ ಜೊತೆಯಾದರು. ಒಂದಿಡೀ ಹಾಲ್‌ನಲ್ಲಿ ರ್ಯಾಕು ರ್ಯಾಕುಗಳಾಗಿ ಹಬ್ಬಿ ನಿಂತಿದ್ದ ನೂರಾರು ಪುಸ್ತಕಗಳ ನೋಡಿದವನು ಅಚ್ಚರಿಗೆ ಬಿದ್ದ. ತರಾಸು ಅವರದ್ದು ಇದ್ಯಾ? ರವಿ ಬೆಳಗರೆ ಎಲ್ಲಿ? ನಮ್ಮೂರಿನವರೇ ಆಂಬ್ರಯ್ಯ ಮಠ ಅಂತ ಒಬ್ಬರು ನಗರದ ಇತಿಹಾಸದ ಬಗ್ಗೆ ಬರೆದಿದಾರೆ.. ಅದು ಇದ್ಯಾ? ಎಂದು ಪ್ರತೀ ಸಾಲು, ಪ್ರತೀ ರ್ಯಾಕುಗಳ ನಡುವೆ ನುಗ್ಗತೊಡಗಿದ. ಅದು ಬೇಕು, ಬೇಡ ಬೇಡ ಇದು ಇರಲಿ ಎಂದು ನುರಾರು ಪುಸ್ತಕಗಳ ನಡುವೆ ಗೊಂದಲಕ್ಕೆ ಬಿದ್ದವನನ್ನು ನೋಡುವಾಗ ಶಾಲೆಯ ದಿನಗಳಲ್ಲಿ ಚಾಕಲೇಟುಗಳ ನಡುವೆ ಎಲ್ಲವೂ ಬೇಕು ಎನ್ನುತ್ತಿದ್ದ ಪುಟ್ಟ ತಮ್ಮನ ಚಿತ್ರ ಕಣ್ಮುಂದೆ ಬಂತು. ಆದರ್ಶ್ ಜೊತೆ ಚರ್ಚಿಸಿ, ಸಪ್ನಾದ ಸಹಾಯಕನ ತಲೆ ತಿಂದು, ಕೊನೆಗೂ ಒಂದಷ್ಟು ಪುಸ್ತಕಗಳ ಆಯ್ಕೆಮಾಡಿಕೊಂಡ. ಜಯನಗರ ನಾಲ್ಕನೇ ಬ್ಲಾಕಿನ ತಂಪು ಮರಗಳಡಿಯಲ್ಲಿ ನಿಂತು ಮಸಲಾಪುರಿ-ಕಾಫಿ ಹೀರಿದೆವು. ಆದರ್ಶರಿಗೆ ವಿದಾಯ ಹೇಳಿ ಗಿರಿನಗರದ ಅಕ್ಕನ ಮನೆಯತ್ತ ಹೋಗುವ ಬಸ್ ಸ್ಟ್ಯಾಂಡಿನತ್ತ ತಿರುಗಿದೆ. ಮೆಲ್ಲಗೆ ‘ಓಲಾದಲ್ಲಿ ಹೋದರೆ ಎಷ್ಟಾಗತ್ತೆ?’ ಎಂದು ಕೇಳಿದ. ಗುಂಡಿ ಒತ್ತಿದೊಡನೆ ಬಂದು ನಿಲ್ಲುವ ಕಾರು, ಒಳಗಿನ ತಂಪು ಎಸಿ, ಅದರ ಕಿಟಕಿಯಿಂದ ಕಾಣುವ ಬೆಂಗಳೂರಿನ ಚಿತ್ರಗಳು.. ಇವೆಲ್ಲಾ ಅವನನ್ನು ಜಾತ್ರೆಯ ತೇರಂತೆ ಆಕರ್ಷಿಸಿವೆಯೇನೋ ಅನ್ನಿಸಿತು. ಸರಿ ಎಂದು ಓಲಾವನ್ನೆ ಬುಕ್ ಮಾಡಿದೆ. ಹುಡುಕಿಕೊಂಡು ಬಂದ ಕಾರಿನೊಳಗೆ ಉತ್ಸಾಹದಿಂದ ಹತ್ತಿ ಕುಳಿತು ಹೊರಗಿನ ಚಿತ್ರಗಳ ಕಣ್ತುಂಬಿಕೊಳ್ಳತೊಡಗಿದ.

ಅಕ್ಕನ ಮನೆಯಲ್ಲಿ ತನ್ನ ಭವಿಷ್ಯದ ಬಗ್ಗೆ, ಅದರ ಕುರಿತು ತನಗಿರುವ ಪ್ಲಾನುಗಳ ಬಗ್ಗೆ ಉದ್ದುದ್ದ ಮಾತನಾಡುತ್ತಿದ್ದವನ ಕಂಡಾಗ ನನಗೆ ನಾನು ಡಿಗ್ರಿ ಮುಗಿಸಿದ ದಿನಗಳು ನೆನಪಾದವು. ಏನೋ ಮಾಡಬೇಕು, ಏನನ್ನೋ ಸಾಧಿಸಬೇಕು, ಎಲ್ಲಿಗೋ ತಲುಪಬೇಕು, ಏನನ್ನೋ ಹೊಂದಬೇಕು ಎಂಬೆಲ್ಲ ಇಂಥದೇ ಕನಸುಗಳಿದ್ದವಲ್ಲಾ? ಅವೆಲ್ಲಾ ಏನಾದವು? ಸಾಧಿಸಿದೆನಾ ಆ ಗುರಿಯನ್ನು? ಸಿಕ್ಕಿತಾ ಆ ಖುಷಿ? ಓದು ಮುಗಿಯುತ್ತಿದ್ದಂತೆ ತಲೆ ಬಿಸಿಗಳೂ ಮುಗಿಯುತ್ತವೆ ಎಂದುಕೊಂಡಿದ್ದೆವಲ್ಲ… ಮುಗಿಯಿತಾ? ಊಹ್ಞೂಂ, ಬದುಕು ಹಾಗೇ ಇದೆ. ಅವತ್ತು ಬೆಂಚಿನ ಮೇಲೆ ಕುಳಿತಿದ್ದ ಸಮಸ್ಯೆಗಳು ಇಂದು ಸೋಫಾ ಮೇಲೆ ಕುಳಿತಿವೆ. ನಾನು ಮಾತ್ರ ನಿಂತೇ ಇದ್ದೇನೆ. ಅಂದು ನಾನು, ಇಂದು ನನ್ನ ತಮ್ಮ, ನಾಳೆ ಮತ್ಯಾರೋ.. ಹೀಗೆ ಲಕ್ಷ-ಕೋಟ್ಯಾಂತರ ಮಂದಿ ಕನಸುಗಳ ಹೊತ್ತು ಗುಳೆ ಬರುತ್ತಲೇ ಇರುತ್ತೇವೆ. ಮಹಲಿನ ಬ್ಲೂಪ್ರಿಂಟು ಕೈಯಲ್ಲಿಟ್ಟುಕೊಂಡು ಗುಡಿಸಲುಗಳ ಕಟ್ಟಿಕೊಳ್ಳುತ್ತೇವೆ.

ಅದೇಕೋ ನನ್ನ ಮುಗಿದುಹೋದ ನೆನ್ನೆಯೇ ತಮ್ಮನ ರೂಪದಲ್ಲಿ ಬಂದು ಕುಳಿತಿರುವಂತೆ ಭಾಸವಾಯಿತು.

*****

ಸಂಜೆಯಾಗುತ್ತಿದ್ದಂತೆಯೇ ತಮ್ಮ ‘ಅಣ್ಣ, ಗೋಭೀಮಂಚೂರಿ ಕೊಡಿಸ್ತೀನಿ ಅಂದಿದ್ಯಲ್ಲಾ’ ಎಂದು ನೆನಪಿಸಿದ. ಮುನೇಶ್ವರ ಬ್ಲಾಕಿನ ಅಂಗಡಿಯೊಂದರಲ್ಲಿ ಗೋಭೀ ಸಮಾರಾಧನೆ ಮಾಡಿಸಿದೆ. ಬೆಳಗ್ಗೆ ಕೊಡಿಸಿದ್ಯಲ್ಲಾ, ಆ ಜ್ಯೂಸು ಇಲ್ಲೂ ಸಿಗತ್ತಾ ಎಂದ. ಪಾಪ ಎನ್ನಿಸಿತಾದರೂ ಒಂದೇ ದಿನಕ್ಕೆ ತುಂಬಾ ತಿನ್ನೋದು ಬೇಡ. ಹೊಟ್ಟೆ ಕೆಡುತ್ತೆ. ನಾಳೆ ಕುಡಿದ್ರಾಯ್ತು ಎಂದು ಸಮಾಧಾನ ಹೇಳಿ ಮನೆಗೆ ಕರೆದೊಯ್ದೆ.

ರುಚಿಯಾದ ತಿಂಡಿಗಳ ವಿಷಯದಲ್ಲಿ ಅವನ ಕಾತರಿಕೆ ನನಗೆ ಅರ್ಥವಾಗುವಂಥದೇ. ಉಪ್ಪಿಟ್ಟು, ಕೇಸರೀಬಾತುಗಳನ್ನೇ ವಿಶೇಷ ತಿಂಡಿಗಳಂತೆ ತಿಂದ ಬಾಲ್ಯ ನಮ್ಮದು. ಯಾವಾಗಲೋ ಅಪರೂಪಕ್ಕೆ ತೀರ್ಥಹಳ್ಳಿಗೆ ಹೋದ ಅಮ್ಮ ದ್ರಾಕ್ಷಿ ಹಣ್ಣನ್ನೋ, ಬ್ರೆಡ್ಡನ್ನೋ ತಂದರೆ ಅದೇ ನಮ್ಮ ಪಾಲಿನ ಪಾನಿ ಪುರಿ, ಗೋಭೀಮಂಚೂರಿ! ಪಕ್ಕದ ಮನೆಯ ಅದಮ್ಯನ ಬರ್ತಡೇಯಲ್ಲಿ ತಿಂದ ಕೇಕಿನ ತುಣುಕು ನಮ್ಮ ಹದಿನೈದು ವರ್ಷಗಳ ಬಾಲ್ಯದಲ್ಲಿ ತಿಂದ ಏಕಮಾತ್ರ ಕೇಕು! ತೀರಾ ಬಡತನವಲ್ಲದಿದ್ದರೂ ಐಶಾರಾಮಿಯೂ ಅಲ್ಲದ ಕೆಳ ಮಧ್ಯಮ ವರ್ಗದ್ದಾಗಿದ್ದ ನಾವು ಆಗಿನ ಬಹುತೇಕ ಉಳಿದವರಂತೆಯೇ ಕಂಬಾರ್ಕಟ್ಟು, ಚಕ್ಕುಲಿ, ಹುರಿ ಹಿಟ್ಟುಗಳನ್ನೇ ವಿಶೇಷ ತಿಂಡಿಗಳಂತೆ ಆಚರಿಸುವವರಾಗಿದ್ದೆವು. ಇದಕ್ಕೆ ಆರ್ಥಿಕ ಸ್ಥಿತಿಯಷ್ಟೇ ಅಲ್ಲದೇ ಆಗಿನ ಅಂಗಡಿಗಳಲ್ಲಿನ ಲಭ್ಯತೆಯ ಕೊರತೆಯೂ ಇನ್ನೊಂದು ಕಾರಣವೇ. ಹೀಗಾಗಿ ಕೆಲ ಗೆಳೆಯರ ಬಾಯಲ್ಲಿ ಕೇಳುತ್ತಿದ್ದ ಕೇಕು, ಗೋಭೀ ಮಂಚೂರಿ, ಪಾನಿಪೂರಿ, ಐಸ್ ಕ್ರಿಮುಗಳು, ಅವರ ಕೈಯಲ್ಲಿ ಕಾಣಿಸುತ್ತಿದ್ದ ತರಹೇವಾರಿ ಆಧುನಿಕ ಆಡಿಕೆಗಳು ನಮ್ಮಲ್ಲಿ ‘ನಾಳೆ ನಾನೂ ಇವನ್ನೆಲ್ಲ ಕೊಳ್ಳುತ್ತೇನೆ’ ಎಂಬ ಹಗಲುಗನಸನ್ನು ಹುಟ್ಟುಹಾಕುತ್ತಿದ್ದವು. ಕೊಂಚ ಸ್ಥಿತಿವಂತರಾಗಿದ್ದ ಪಕ್ಕದ ಮನೆಯ ಅಣ್ಣನ ಮಗನ ಬರ್ತಡೇ ಪಾರ್ಟಿಯಲ್ಲಿ ತಿನ್ನಲು ಸಿಕ್ಕ ಚಿಕ್ಕ ಕೇಕ್‌ನ ತುಣುಕನ್ನೇ ಸ್ವರ್ಗ ಲೋಕದ ತಿನಿಸೆಂಬಂತೆ ಅದೊಂದು ದಿನ ತಿಂದಿದ್ದೆವು. ಇನ್ನೊಂದು ಪೀಸ್ ಬೇಕು ಎಂಬ ಆಸೆಯನ್ನು ಬಾಯಲ್ಲೇ ಇಟ್ಟುಕೊಂಡು ಕೈ ತೊಳೆದಿದ್ದೆವು. ಯಾರೋ ತುಂಡೊಂದನ್ನು ಬೇಡವೆಂದು ತಟ್ಟೆಯಲ್ಲೇ ಬಿಟ್ಟಾಗ ಅದು ನಮಗೆ ಸಿಗುವುದೇನೋ ಎಂದು ಆಸೆಯಿಂದ ಕಾದಿದ್ದೆವು. ಇಂತಿಪ್ಪ ಅಪೂರ್ಣ ಬಯಕೆಗಳ ಬಾಲ್ಯವನ್ನೇ ಕಳೆದ ತಮ್ಮನಿಗೆ ಈಗಲೂ ಈ ಪಟ್ಟಣದ ವಿಶೇಷ ತಿಂಡಿಗಳ ಬಗ್ಗೆ ಆಸೆಯಿದ್ದರೆ ಅದರಲ್ಲಿ ಯಾವ ತಪ್ಪಾಗಲೀ, ಅತಿಯಾಸೆಯಾಗಲೀ ನನಗೆ ಕಾಣಲಿಲ್ಲ.

ಅಂದು ನಾಳೆ ಕೊಳ್ಳುವೆ ಎಂದು ಸಮಾಧಾನ ಮಾಡಿಕೊಂಡಿದ್ದ ಆ ‘ನಾಳೆ’ ಈಗ ಬಂದಿರುವಾಗ ಅವನ್ನೆಲ್ಲ ತಿನ್ನಬೇಕೆಂಬ ಹಳೆಯ ಬಯಕೆ ಹೊಸತಾಗಿ ಗರಿಗೆದರುವ ಮಧ್ಯಮ ವರ್ಗದ ಮನಸ್ಥಿತಿಯನ್ನು ನಾನೂ ಅನುಭವಿಸಿದವನೇ. ಆಗ ಎಲ್ಲೋ ಒಮ್ಮೆ ಪಕ್ಕದ ಮನೆಯ ಕಿಟಕಿಯ ಮೂಲಕ ನೋಡಿ ಖುಷಿಪಟ್ಟಿದ್ದ ಗೊಂಬೆ ಆಟ (ಕಾರ್ಟೂನ್) ವನ್ನು ಈಗ ಟಿವಿಯೆದುರು ಮಕ್ಕಳಂತೆ ಕುಳಿತು ನೋಡುವಂಥಾ ಸಮಾನ ಹುಚ್ಚುತನಗಳು ಇಬ್ಬರಲ್ಲೂ ಇವೆ. ಹೀಗೆ ಎಷ್ಟೋ ಸ್ವಭಾವಗಳಲ್ಲಿ ತಮ್ಮ ನನ್ನದೇ ಪ್ರತಿರೂಪದಂತೆ ಕಾಣುತ್ತಿದ್ದ.

ಅವನ ವಿಷಯದಲ್ಲಿ ನನಗೆ ಹಳೆಯ ಬೇಸರವೊಂದಿದೆ. ಅದು ಶಾಲೆಗೆ ಹೋಗುತ್ತಿದ್ದ ಸಮಯ. ನಾನು ಏಳನೇ ತರಗತಿಯಲ್ಲಿದ್ದರೆ ಅವನು ಒಂದರಲ್ಲಿದ್ದ. ಶನಿವಾರವೊಂದರ ಮಧ್ಯಾಹ್ನ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಬೋಟಿ ಐಸಿನ ಗಾಡಿ ಎದುರಾಯಿತು. ಬ್ಯಾಗು ತೊಟ್ಟು ನಡೆಯುತ್ತಿದ್ದ ಮಕ್ಕಳೆಲ್ಲಾ ಒಬ್ಬೊಬ್ಬರಾಗಿ ಬೋಟಿ ಐಸು ಖರೀದಿಸಿ ತಿನ್ನತೊಡಗಿದರು. ಅವರ ನಡುವೆ ಇದ್ದ ತಮ್ಮನಿಗೂ ಐಸು ತಿನ್ನುವ ಆಸೆಯಾಗಿದೆ. ಆದರೆ ಹಣವಿಲ್ಲದ್ದರಿಂದ ಅಲ್ಲೇ ಮುಂದೆ ಓಡುತ್ತಿದ್ದ ನನ್ನ ಬಳಿ ಓಡಿ ಬಂದ. ಅಣ್ಣ ಬೋಟಿ ಐಸು ಕೊಡಿಸಾ ಎಂದು ಕೇಳಿದ. ಆಗೆಲ್ಲಾ ನನಗೆ ಶಾಲೆಗೆ ದುಡ್ಡು ಹಿಡಿದು ಹೋಗುವ ಅಭ್ಯಾಸವಿರಲಿಲ್ಲ. ಕೈಯಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ತಮ್ಮ ಮೊದಲು ಕೇಳಿದ. ನಂತರ ಬೇಡಿದ. ಬಳಿಕ ಜೋರಾಗಿ ಅತ್ತ‌. ನನ್ನ ಕೈ ಹಿಡಿದು ಎಳೆದ. ನಡುರಸ್ತೆಯಲ್ಲೇ ಜೋರಾಗಿ ಅಳುತ್ತಾ ಕುಳಿತುಬಿಟ್ಟ.

ಆ ದಿ‌ನ ಅವನು ಅತ್ತ ಅಳು ಅದೆಷ್ಟರ ಮಟ್ಟಿಗೆ ನನ್ನ ಎದೆಯಲ್ಲುಳಿದು ಹೋಯಿತೆಂದರೆ ಈಗ ಅದನ್ನು ನೆನೆದರೂ ಪಶ್ಚಾತ್ತಾಪವಾಗುತ್ತದೆ. ಅಂದು ನಾನು ಎರೆಡು ರೂಪಾಯಿ ತೆಗೆದುಕೊಂಡು ಹೋಗಬೇಕಿತ್ತು, ಅವನಿಗೆ ಬೋಟಿ ಐಸು ಕೊಡಿಸಬೇಕಿತ್ತು ಅಂತ ಇವತ್ತಿಗೂ ಅನಿಸುತ್ತದೆ. ಈಗ ಅವನನ್ನು ಕರೆದೊಯ್ದು ಕೇಳಿದ್ದನ್ನು ಕೊಡಿಸುವಾಗ ದಶಕಗಳಿಂದ ಉಳಿದೇ ಹೋಗಿದ್ದ ಆ ಪಶ್ಚತ್ತಾಪಕ್ಕೆ ಪ್ರಾಯಶ್ಚಿತ್ತ ದೊರಕಿದಂತೆ ಮನಸ್ಸು ಹಗುರವಾಯಿತು.

******

ಮಾರನೇ ದಿನ ಮತ್ತೆ ಮತ್ತೀಕೆರೆಯ ಚಿಕ್ಕಮ್ಮನ ಮನೆಗೆ ಹೊರಟು ಮೆಜಸ್ಟಿಕ್ಕಿನ ಬಸ್ಸು ಹತ್ತಿದೆವು. ಬೆಂಗಳೂರಿನ ಬೀದಿಗಳು ಭಾನುವಾರದ ರಜೆಯ ಪ್ರಶಾಂತತೆಯಲ್ಲಿದ್ದವು. ತೂಗಾಡುವ ಮೇ ಫ್ಲವರ್ ಮರಗಳನ್ನು ಹಾದು ಬರುತ್ತಿದ್ದ ಕಿಟಕಿಯ ಗಾಳಿ ತಂಪಾಗಿ ನಮ್ಮನ್ನು ಸೋಕುತ್ತಿತ್ತು. ಇಂದು ಅವನಿಗೆ ಮೆಟ್ರೋ ತೋರಿಸುವುದೆಂದು ನಿರ್ಧಾರವಾಗಿತ್ತು. ಅಂತೆಯೇ ಅವನನ್ನು ಮೆಜಸ್ಟಿಕ್ಕಿನಲ್ಲಿಳಿಸಿ ಮೆಟ್ರೋ ಸ್ಟೇಷನ್‌ನೊಳಗೆ ಕರೆದೊಯ್ಯುವವನಿದ್ದೆ. ನಿಲ್ದಾಣದಲ್ಲಿ ಇಳಿದು ಆಚೆ ತಿರುಗಿದರೆ ಅವನೇ ಮಾಯ! ಎಲ್ಲಿ ಹೋದ? ದಾರಿ ತಪ್ಪಿದನೇ? ಅವನ ಮೊಬೈಲು ಬೇರೆ ಸ್ವಿಚ್ಚಾಫಾಗಿದೆ. ಈಗೇನು ಮಾಡುವುದು? ಪಾಪದವನು. ಮರಳುವ ದಾರಿಯೂ ಗೊತ್ತಿಲ್ಲವಲ್ಲಾ ಎಂಬ ನೂರೊಂದು ಆತಂಕಗಳು ಕ್ಷಣಾರ್ಧದಲ್ಲಿ ಹುಟ್ಟಿ ಕಾಡತೊಡಗಿದವು. ಅಷ್ಟರಲ್ಲೇ ಬಸ್ಸಿನ ಆಚೆ ಬದಿಯಿಂದ ಅವನು ಸಾಗಿಬಂದ.‌ ಅಬ್ಬಾ ಎಂದು ನಿಟ್ಟುಸಿರಿಟ್ಟೆ.

ಮೆಟ್ರೋ ಸ್ಟೇಷನ್‌ನಲ್ಲಿ ತನಗೆ ಕೊಟ್ಟ ಉರೂಟದ ಕಾಯಿನ್ನನ್ನು ತಾಗಿಸಿದೊಡನೆ ಗೇಟು ತಾನಾಗಿಯೇ ತೆರೆದುಕೊಂಡಾಗ ಅಚ್ಚರಿಯೊಂದು ಅವನ ಮುಖದಲ್ಲಿ ಪ್ರತ್ಯಕ್ಷವಾಯಿತು. ನಾನು ಮಾತ್ರ ಆ ಕಾಯಿನ್ನನ್ನು ಬಳಸದೇ ಕಾರ್ಡನ್ನು ತಾಗಿಸಿದಾಗ ‘ನೀನೇನು ಮಾಡಿದೆ?’ ಎಂದು ಕಾರ್ಡನ್ನು ತೆಗೆದುಕೊಂಡು ಪರೀಕ್ಷಿಸಿದ. ಎಂಟು ನಿಮಿಷದ ಕಾಯುವಿಕೆಯ ಬಳಿಕ ಹಳಿಯ ಮೇಲೆ ತೇಲಿ ಬಂದ ಕಡುನೀಲಿ ಟ್ರೈನು ನೇರ ಅವನ ಕಣ್ಣಿನೊಳಕ್ಕೇ ಹಾದು ಬಂತು. ಆದರೆ ಹತ್ತುವಾಗ ಬಾಗಿಲಿನಲ್ಲುಂಟಾದ ಜಂಗುಳಿಯಲ್ಲಿ ಮತ್ತೆ ಅವನು ಕಾಣೆಯಾದ. ಬೇಗ ಬಾ ಬೇಗ ಬಾ ಎನ್ನುತ್ತಿರುವಂತೆಯೇ ನುಗ್ಗಿದ ಜನಕೋಟಿಯಲ್ಲಿ ಮಾಯವಾದ ಅವನಿಗೆ ಬಾ ಅಂದಕೂಡ್ಲೇ ಬರೋಕಾಗಲ್ವಾ ನಿಂಗೆ ಎಂದು ಮುಖ ಕಪ್ಪು ಮಾಡಿ ಬೈದೆ. ಮರುಕ್ಷಣವೇ ಅವನು ನನ್ನ ಎರೆಡುಪಟ್ಟು ಕೋಪದಲ್ಲಿ ಬಂದ್ನಲ್ಲೋ ಒಳಗೆ ಎಂದು ಭುಸುಗುಟ್ಟಿಬಿಟ್ಟ. ಆ ಒಂದು ಕ್ಷಣದಲ್ಲಿ ಅದೇಕೋ ನನ್ನ ಕಲ್ಪನೆಯಲ್ಲಿನ ಅವನ ಪುಟ್ಟ ಹುಡುಗನ ಚಿತ್ರ ಕಲಕಿದಂತಾಯಿತು. ತಿಂಡಿ ತಿನ್ನಿಸಿ ಜ್ಯೂಸು ಕೊಡಿಸಿದಂತೆಯೇ ಸಣ್ಣಗೆ ಗದರುವುದೂ ಅಣ್ಣನ ಹಕ್ಕು ಎಂಬ ನನ್ನ ನಂಬಿಕೆ ಅಲುಗಾಡಿ, ಒಳಗೆಲ್ಲೋ ಅವಮಾನವಾಯಿತು.

ಚಿಕ್ಕಮ್ಮನ ಮನೆಗೆ ಹೋಗಿ ಸ್ವಲ್ಪವೇ ಹೊತ್ತಿಗೆ ಅವನು ಮತ್ತೆ ನೆನ್ನೆ ಮಾಡಿದ್ರಲ್ಲಾ ಆ ಥರದ ಜ್ಯೂಸು ಇಲ್ಲಿ ಸಿಗುತ್ತಾ? ಎಂದು ಕೇಳತೊಡಗಿದ. ಮತ್ತೆ ಆರಂಭವಾಯಿತು ಜ್ಯೂಸಿನ ಬೇಟೆ. ಎರಡೆರಡು ಅಂಗಡಿಗಳಲ್ಲಿ ಕುಡಿದರೂ ನೆನ್ನೆ ಕುಡಿದಿದ್ದ ಆ ಸವಿ ಸಿಗಲೇ ಇಲ್ಲ. ಕೊನೆಗೂ ಬಯಸಿದ ಸವಿ ಸಿಗದ ಅವನು ನಿರಾಶನಾಗಿಯೇ ನನ್ನನ್ನು ಹಿಂಬಾಲಿಸಿದ. ನನಗೆ ‘ಯಾರೋ ಬಿಟ್ಟ ಕೇಕು ನಮಗೆ ಸಿಗಲಿ’ ಎಂದು ಕಾದಿದ್ದ ಬಾಲ್ಯ ಗಾಢವಾಗಿ ನೆನಪಾಯಿತು.

ಅವನನ್ನು ಎಲ್ಲೆಲ್ಲಿಗೋ ಕರೆದೊಯ್ಯಬೇಕೆಂಬ ಆಸೆಯಿತ್ತು. ವಿಧಾನಸೌಧಕ್ಕೆ, ಯೂಬಿ ಸಿಟಿಗೆ, ಲಾಲ್ ಬಾಗ್‌ಗೆ‌‌. ಗೋಪಾಲನ್ ಮಾಲ್‌ನಲ್ಲಿನ ನೈನ್ಟೀ ಚೇರಿನಲ್ಲಿ ಕುಳಿತು ಆಕಾಶಕ್ಕೆ ಹಾರಿದ ಅನುಭವವ ಅವನಿಗೆ ತೋರಿಸಬೇಕು, ಬನ್ನೇರುಘಟ್ಟದ ಸಫಾರಿಯಲ್ಲಿ ಸುತ್ತಾಡಿಸಬೇಕು ಎಂದೆಲ್ಲಾ ಆಸೆಯಿತ್ತು‌ ಆದರೆ ಅವನಾದರೂ ಇಂದೇ ಹೋಗಬೇಕೆಂದು ಹಠ ಹಿಡಿದ. ಅದೇಕೋ ಬೆಂಗಳೂರು ಅವನಿಗೆ ರುಚಿಸಿರಲಿಲ್ಲ. ಆ ರಾತ್ರೆ ಅವನು ಮರಳಿ ಊರಿನ ಬಸ್ಸು ಹತ್ತಿಯೇ ಬಿಟ್ಟ. ಮಾರನೇ ದಿನ ಆಫೀಸಿಗೆ ಹೋಗಬೇಕಿದ್ದ ನಾನು ರೂಮಿಗೆ ಮರಳಿದೆ. ಮರುದಿನ ಹೊರಗಿನ ಬೀದಿಗಳಲ್ಲಿ ನಡೆಯುವಾಗ ‘ಮೊನ್ನೆ ಇಲ್ಲಿ ನಡೆಯುವಾಗ ಜೊತೆಗೆ ತಮ್ಮ ಇದ್ದ’ ಎಂಬ ನೆನಪು ಇನ್ನಿಲ್ಲದಂತೆ ಕಾಡಿತು. ಕೊರೆಯುವ ನೆನಪಿನ ಜೊತೆಗೇ ಆಫೀಸಿಗೆ ಹೋದೆ. ಸಂಜೆ ಮರಳಿದವನು ದಾರಿಯಲ್ಲಿ ಮಲೆಯಾಳಿಯ ಅಂಗಡಿಗೆ ಹೋಗಿ ಜ್ಯೂಸಿಗೆ ಆರ್ಡರ್ ಮಾಡಿದೆ. ಅವನು ಬೆಣ್ಣೆ ಹಣ್ಣನ್ನು ಕತ್ತರಿಸಿ, ಸಕ್ಕರೆ, ಹಾಲು, ಫ್ಲೇವರ್ ಬೆರೆಸಿದ ಹಸಿರು ಜ್ಯೂಸನ್ನು ನನ್ನ ಕೈಗಿಟ್ಟ. ಅದರ ಸವಿ ಪೇಯದ ಮೊದಲ ಹನಿ ಒಳಗಿಳಿದಿತ್ತೋ ಇಲ್ಲವೋ, ಥಟ್ಟನೆ ಅದೇ ರೀತಿಯ ಜ್ಯೂಸು ಕೊಡಿಸು ಎಂದು ಕಿವಿಯಲ್ಲಿ ಗುಟ್ಟಾಗಿ ಕೇಳಿದ್ದ ತಮ್ಮನ ನೆನಪು ಒತ್ತರಿಸಿಕೊಂಡು ಬಂತು. ಪರಿಚಯದ ಮಲೆಯಾಳಿ “ತಮ್ಮ ಹೋದರಾ ಸರ್?” ಎಂದು ಕೇಳಿದ. ಮನಸಲ್ಲಿ ಮೂಡಿದ ಬೇಸರ ಅವನಿಗೆ ತಿಳಿಯದಂತೆ ಸುಳ್ಳು ನಗೆ ನಗುತ್ತಾ “ಹೋದ” ಎಂದು ಹೇಳಿ ಭಾರವಾದ ಹೆಜ್ಜೆಗಳನ್ನಿಡುತ್ತಾ ರೂಮಿನತ್ತ ನಡೆದೆ.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

3 Comments

  1. Niharika

    ಹೃದಯ ಮುಟ್ಟುವಂತೆ ಚೆನ್ನಾಗಿ ಬರೆದಿದ್ದೀರ. ಇದೇ ತರಹ ಬರೆಯುತ್ತೀರಿ.

    Reply
  2. ಎಸ್. ಪಿ. ಗದಗ.

    ವಿನಾಯಕ್, ನಿಮ್ಮ ಪ್ರಬಂಧದ ಮೂಲಕ ನಮಗೂ ಸಿಹಿಯಾದ ಬಟರ ಫ್ರೂಟ್ ಜ್ಯೂಸು ಕುಡಿಸಿದ್ದೀರಿ. ಹೆಚ್ಚೇನೂ ಹೇಳುವದಿಲ್ಲ. ತುಂಬಾ ಸಿಹಿಯಾಗಿದೆ. ಬೋಟಿ ಐಸು ಮನಸ್ಸನು ಬಹಳಷ್ಟು ಕಲುಕಿದೆ 🙏🙏

    Reply
  3. Satyanarayana Krishnamurthy

    lovely writing.Very fresh one

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ