ನಾನು ಸಾಹಿತ್ಯ ಸಮ್ಮೇಳನಗಳಿಗೆ ಸಾಮಾನ್ಯವಾಗಿ ಹೋಗುತ್ತೇನೆ. ಆದರೆ ಕೆಲವು ಸಮ್ಮೇಳನಗಳಿಗೆ ನಿರ್ದಿಷ್ಟ ತಾತ್ವಿಕ ಕಾರಣಗಳಿಂದ ಹೋಗದೇ ಇರುವುದೂ ಉಂಟು. ಸಮ್ಮೇಳನಗಳಿಗೆ ಹೋಗಲು ಕೆಲವು ಸೆಳೆತಗಳಿವೆ. ೧. ಅವು ನಾಡಿನ ಎಲ್ಲೆಲ್ಲೊ ಹರಡಿಕೊಂಡಿರುವ ಸಾಹಿತ್ಯ ಮತ್ತು ಚಳವಳಿಯ ಸಂಗಾತಿಗಳು ಭೇಟಿಯಾಗುವ ಜಾಗವಾಗಿರುವುದು.೨. ಕರ್ನಾಟಕದ ದೊಡ್ಡ ಪುಸ್ತಕ ಮೇಳವಾಗಿರುವುದರಿಂದ, ಪುಸ್ತಕ ನೋಡುವ ಮತ್ತು ಖರೀದಿಸುವ ಅಪೂರ್ವ ಅವಕಾಶ ಸಿಗುವುದು. ೩. ಬಹುಶಃ ಕಷ್ಟಪಟ್ಟು ಸಂಪಾದಿಸಿರುವ ಕೆಲವಾದರೂ ಓದುಗ ಅಭಿಮಾನಿಗಳು, ತಮ್ಮ ದರ್ಶನ ಕೊಟ್ಟು ನಮ್ಮೊಳಗಿನ ಅಹಮಿಕೆಯನ್ನು ಜೀವಂತಗೊಳಿಸುವ ಜಾಗವಾಗಿರುವುದು. ಆದ್ದರಿಂದಲೇ ಸಾಹಿತ್ಯ ಸಮ್ಮೇಳನವನ್ನು ಜಾತ್ರೆ ಸಂತೆ ಎಂದು ನಿಂದಾತ್ಮಕ ದನಿಯಲ್ಲಿ ಯಾರೇ ಕರೆಯಲಿ, ನಾನು ಅವುಗಳನ್ನು ವಿರೋಧಿಸಲಾರೆ.
ಕರ್ನಾಟಕದ ಬಹುತೇಕ ದೊಡ್ಡ ಜಾತ್ರೆ ಮತ್ತು ಉರುಸುಗಳನ್ನೂ ಭಾರತದ ಕುಂಭಮೇಳಗಳನ್ನೂ ನೋಡಿರುವ ನನಗೆ ಈ ಸಮ್ಮೇಳನಗಳೂ ಹಾಗೆಯೆ ಕಾಣುತ್ತವೆ. ಅಲ್ಲಿನ ಜನಜಂಗುಳಿ ನೂಕುನುಗ್ಗಲು ಕೊನೇ ಪಕ್ಷ ಮೊದಲೆರಡು ದಿನ ಬೇಸರ ತರುವುದಿಲ್ಲ. ದರ್ಗಾಕ್ಕೆ ಹೋಗಿ ಸಕ್ಕರೆ ಓದಿಸುವುದಕ್ಕಿಂತ ಇಲ್ಲವೇ ಗುಡಿಗೆ ಹೋಗಿ ಪೂಜೆ ಮಾಡಿಸುವುದಕ್ಕಿಂತ ಹೆಚ್ಚಿನ ಸಂತೋಷವನ್ನು ಅಲ್ಲಿಗೆ ಬಂದಿರುವ ನಾಟಕ ನೋಡುವುದು, ಬಳೆ ಲಟ್ಟಣಿಗೆ ಪಿಂಗಾಣಿ ಭಾಂಡೆ ವಸ್ತುಗಳನ್ನು ಖರೀದಿಸುವುದು, ನಂಟರಿಷ್ಟರ ಜತೆ ಕೂತು ಕಷ್ಟ ಸುಖ ಹೇಳಿಕೊಳ್ಳುವುದು ಇತ್ಯಾದಿಗಳು ಕೊಡುತ್ತವೆ. ಹಾಗೆಯೇ ಇಲ್ಲಿಯೂ ಭಾಷಣಗಳಿಗಿಂತ ಪಠ್ಯೇತರ ಚಟುವಟಿಕೆಗಳೇ ಪ್ರಧಾನವಾಗಿರುತ್ತವೆ. ಅವುಗಳಲ್ಲಿ ಗೆಳೆಯರೊಂದಿಗೆ ತಿರುಗುತ್ತ ಮಿರ್ಚಿ ಮಂಡಕ್ಕಿ ತಿನ್ನುವುದೂ ಒಂದು.
ಚಿತ್ರದುರ್ಗ ಸಮ್ಮೇಳನದಲ್ಲಿ ಕೆಲವು ಪುಸ್ತಕ ಮಾರಾಟಗಾರರು, ಮಿರ್ಚಿ ಮಾರುವ ಕಡೆ ಪುಸ್ತಕದ ಅಂಗಡಿ ಹಾಕಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತ ಮಾಡುತ್ತಿದ್ದರು. ಇದು ವ್ಯವಸ್ಥಾಪಕರ ಅಜಾಗರೂಕತೆ ಮತ್ತು ಅಸೂಕ್ಷ್ಮತೆಯಿಂದ ಆಗಿರುವ ಲೋಪ ನಿಜ. ಆದರೆ ಇದು ಜಾತ್ರೆಗಳ ವಿಚಿತ್ರ ಸಮಾನತಾವಾದಿ ಲಕ್ಷಣವೂ ಹೌದು. ಕೊಪ್ಪಳ ಸಮ್ಮೇಳನದಲ್ಲಿ (೧೯೯೪) ನಮ್ಮ ವಿಶ್ವವಿದ್ಯಾಲಯದ ಅಂಗಡಿಯ ಪಕ್ಕದ್ದು ಮಿರ್ಜಿ ವಗ್ಗಾಣಿ ಅಂಗಡಿಯಾಗಿತ್ತು. ಹೊಸವಿಶ್ವವಿದ್ಯಾಲಯವಾಗಿದ್ದು ಐದೋ ಆರೋ ಪುಸ್ತಕಗಳು ಮಾತ್ರ ಪ್ರಕಟವಾಗಿದ್ದು, ಈಗಿನಂತೆ ಜನರ ನುಗ್ಗು ಇರಲಿಲ್ಲ. ಎಲ್ಲ ಕವಿಗಳ ಹೆಸರಲ್ಲಿ ಮಳಿಗೆಗಳಿಗೆ ಹೆಸರು ಕೊಟ್ಟಿದ್ದರು. ಮಿರ್ಚಿ ಮಳಿಗೆಗೆ ಅಕ್ಕಮಹಾದೇವಿಯ ಹೆಸರೂ ನಮ್ಮ ಮಳಿಗೆಗೆ ಮಂಗರಸ ಎಂಬ ಹೆಸರೂ ಸಿಕ್ಕಿತ್ತು. ಇದು ಜನರ ನಗೆಚಾಟಿಗೆ ಕಾರಣವಾಗಿತ್ತು. ಆದರೆ ಪುಸ್ತಕ ಕೊಂಡ ಜನ ಮಿರ್ಚಿ ಕೊಳ್ಳಲು ಹೋಗುತ್ತಿದ್ದರು. ಮಿರ್ಚಿ ತಿಂದವರು ಪುಸ್ತಕ ನೋಡಲು ಬರುತ್ತಿದ್ದರು. ನಮ್ಮ ಹಂಪಿ ಉತ್ಸವದಲ್ಲಿಯೂ ಅತ್ಯಂತ ಹೆಚ್ಚು ಮಾರಾಟವಾಗುವುದು ಜುಬ್ಬಾ, ಕರದಂಟು, ಕುಂದಾ ಮಿರ್ಚಿಗಳೆ. ಹಾಗೆಂದು ಪುಸ್ತಕದಂಗಡಿಗಳಲ್ಲಿ ಅವರು ಬರಲಾರರು ಎಂದೇನಿಲ್ಲ.
ಇಂತಹ ತಿರುಗಾಟ ತಿನ್ನಾಟ ಮಾತುಕತೆ ಭೇಟಿಯಂತಹ ಮಿಸಾಳಭಾಜಿ ಚಟುವಟಿಕೆಗಳಿರುವ ಈ ಜಾತ್ರೆಗಳಲ್ಲಿ ಗಂಭೀರವಾದ ಭಾಷಣಗಳು ವಿಚಾರ ಪೂರಿತ ಚಿಂತನೆಗಳು ಕೆಲವೊಮ್ಮೆ ಅಮುಖ್ಯವಾಗುತ್ತವೆ. ಆದರೂ ಒಳ್ಳೆಯ ಉಪನ್ಯಾಸಗಳಿಗೆ ೨೦ರಿಂದ ೨೫ ಸಾವಿರ ಜನ ಕುಳಿತಿರುತ್ತಾರೆ. ಕುಳಿತಿರುವ ಎಲ್ಲರೂ ಭಾಷಣ ಕೇಳುತ್ತಾರೆ ಎಂದೇನಿಲ್ಲ. ಕೆಲವರು ಭಾಷಣದ ಅಂಶಗಳ ಬಗ್ಗೆ ಚರ್ಚಿಸುವುದೂ ಉಂಟು. ಹಗಲಿನ ಭಾಷಣಗಳಿಗಿಂತಲೂ ಸಂಜೆಯ ಭಾವಗೀತೆ ಯಕ್ಷಗಾನ ಕಾರ್ಯಕ್ರಮಕ್ಕೆ ಹೆಚ್ಚು ಸೇರುತ್ತಾರೆ. ಇವರು ಸಾಮಾನ್ಯವಾಗಿ ಆ ಊರಿನ ಜನ. ವೃದ್ಧರು ತಮ್ಮ ಸಂಜೆ ತಿರುಗಾಟದ ದಿಕ್ಕನ್ನು ಇತ್ತ ತಿರುಗಿಸಿದರೆ, ಮಹಿಳೆಯರು ಸೇಲ್ಸ್ ಎಕ್ಸಿಬಿಶನ್‌ಗೆ ಬರುವಂತೆ ಬರುತ್ತಾರೆ.
ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ನಿಸ್ಸಂಶಯವಾಗಿ ಬೋರ್ ಬರಿಸುವ ಕಾರ್ಯಕ್ರಮವೆಂದರೆ, ಸಮ್ಮೇಳನದ ಅಧ್ಯಕ್ಷರ ಭಾಷಣ. ಕಾರಣ ಅದು ಅನಗತ್ಯವಾಗಿ ದೀರ್ಘವಾಗಿರುತ್ತದೆ. ಜತೆಗೆ ಅಧ್ಯಕ್ಷರು ಅದನ್ನು ಯಾಂತ್ರಿಕವಾಗಿ ಓದುತ್ತಿರುತ್ತಾರೆ. ಅದರಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ, ಮಹಿಷಿ ವರದಿ ಜಾರಿಮಾಡುವ, ಮಹಾಜನ್ ವರದಿ ಅಂತಿಮವೆಂದು ಸಾರುವ ಸಂಗತಿಗಳು ಕಡ್ಡಾಯವಾಗಿರುತ್ತವೆ. ಹಾಗೆಯೇ ನಾಡಿನ ಬಗೆಹರಿಯದ ಸಮಸ್ಯೆಗಳನ್ನೆಲ್ಲ ಎತ್ತಿ ಅವಕ್ಕೆ ಸರಳ ಪರಿಹಾರ ಸೂಚಿಸುವಿಕೆಯೂ ಇರುತ್ತದೆ. ಸಮ್ಮೇಳನದ ಅಧ್ಯಕ್ಷರ ಭಾಷಣಗಳನ್ನು ನೋಡಿದರೆ, ಸಾಮೂಹಿಕ ಕಾಪಿ ನಡೆದ ಸೆಂಟರಿನ ಉತ್ತರ ಪತ್ರಿಕೆಗಳಂತೆ ಭಾಸವಾಗುತ್ತದೆ. ವಿಷಯವೂ ಹಳತು. ಭಾಷೆಯೂ ಕ್ಲೀಷೆ. ಇದಕ್ಕೆ ಈಚಿನ ಸಾಕ್ಷಿ, ಶಿವಮೊಗ್ಗ ಸಮ್ಮೇಳನದಲ್ಲಿ ಆದ ನಿಸಾರ್ ಅಹಮದರ ಭಾಷಣ. ಸಾಮಾನ್ಯವಾಗಿ ಸಮ್ಮೇಳನದ ಅಧ್ಯಕ್ಷತೆಯನ್ನು ಮುಪ್ಪುಹಿಡಿದ ಬಳಿಕವೇ ಕೊಡುವ ಪದ್ಧತಿಯಿದ್ದು ಅಧ್ಯಕ್ಷರು ಅನಾರೋಗ್ಯದಿಂದ ನರಳುತ್ತಿರುತ್ತಾರೆ. ಹಲ್ಲುದುರಿ ತುಟಿತೊದಲುತ್ತ ಉಚ್ಚಾರಣೆ ಕಷ್ಟವಾಗಿ ಭಾಷಣ ಸ್ಪಷ್ಟವಾಗಿ ಸಂವಹನವಾಗುವುದಿಲ್ಲ. ಇದನ್ನು ಕೊಪ್ಪಳದ ಸಮ್ಮೇಳನದಲ್ಲಿ ಸಿಂಪಿ ಲಿಂಗಣ್ಣನವರ ವಿಷಯದಲ್ಲಿ ನೋಡಿದ್ದೇನೆ.
ಹೀಗಾಗಿ ಬಹಳ ಸಲ, ಭಾಷಣ ಶುರುವಾಗುವ ಹೊತ್ತಿಗೆ ಜನ ಇದೇ ಪ್ರಶಸ್ತ ಸಮಯವೆಂದು ಊಟಕ್ಕೆ ಏಳುತ್ತಾರೆ. ಊಟದ ಪಾಳಿಯಲ್ಲಿ ನಿಂತರೂ ಭಾಷಣ ಕೇಳಿಸುತ್ತದೆ ಎಂದು ಕೆಲವರ ವಾದ. ಸಮ್ಮೇಳನಕ್ಕೆ ತೀರ್ಥಯಾತ್ರೆಯ ಶ್ರದ್ಧೆಯಿಂದ ಬರುವವರು ಕರ್ನಾಟಕದ ಶಾಲಾ ಶಿಕ್ಷಕರು. ಅವರಲ್ಲಿ ಹೆಚ್ಚಿನವರು ನಿಂತಲ್ಲಿ ನಿಲ್ಲದೆ ತಿರುಗಾಟ ಮಾಡುತ್ತಲೇ ಇರುತ್ತಾರೆ. ಪೆಂಡಾಲಿನಲ್ಲಿ ಕುಳಿತವರು ಹೊರಗೆ ಬಹಳ ಬಿಸಿಲಿರುವುದರಿಂದ ತಿರುಗಾಡಲಾರದೆ, ಭಾಷಣದ ಪ್ರತಿಯನ್ನೇ ಪಂಖಾ ಮಾಡಿಕೊಂಡು ಗಾಳಿ ಹಾಕಿಕೊಳ್ಳುತ್ತ, ಕಳ್ಳೆಕಾಯಿ ಮೆಲ್ಲುತ್ತ ಇರುತ್ತಾರೆ. ಹಿಂದೆ ಅಧ್ಯಕ್ಷರ ಭಾಷಣವೊಂದನ್ನು ಕುರಿತು, ‘ಇದು ಗಾಳಿ ಹಾಕಿಕೊಳ್ಳುವುದಕ್ಕೇ ಲಾಯಕ್ಕು’ ಎಂದು ಛೇಡಿಸಿ ಲೇಖಕರೊಬ್ಬರು ಬರೆದಿದ್ದರು. ಜನ ತಮ್ಮ ವಿಚಿತ್ರವಾದ ಹಾಸ್ಯಪ್ರಜ್ಞೆಯಿದೆಯಿಂದ ಹೀಗೆ ಮಾಡುತ್ತಾರೊ ಅಥವಾ ಭಾಷಣಗಳ ಮಹತ್ವ ಗೊತ್ತಿಲ್ಲದೆ ಹಾಗೆಮಾಡುತ್ತಾರೊ ತಿಳಿಯದು. ಅಕ್ಷರಶಃ ಅವರು ಅಧ್ಯಕ್ಷ ಭಾಷಣ ಮುಗಿಯುವುದಕ್ಕೇ ಕಾದಿರುತ್ತಾರೆ. ರಾಜಕಾರಣಿಗಳಿಗೆ ಅಧ್ಯಕ್ಷ ಭಾಷಣದ ಗುಟ್ಟು ಗೊತ್ತಿರುತ್ತದೆ. ಹೀಗಾಗಿ ಅವರು ಭಾಷಣಕ್ಕೆ ಏಳುವ ಮುಂಚೆ ಉಪಾಯವಾಗಿ ಸಭೆಯ ಮತ್ತು ಅಧ್ಯಕ್ಷರ ಕ್ಷಮೆ ಕೋರಿ ‘ಅನಿವಾರ್ಯ ಕಾರಣ’ದಿಂದಲೊ ‘ಕಾರ್ಯಭಾರದ ಒತ್ತಡ’ದಿಂದಲೊ ಹೊರಟುಬಿಡುತ್ತಾರೆ. ಹಾಸನ ಸಮ್ಮೇಳನದಲ್ಲಿ ಚನ್ನವೀರ ಕಣವಿಯವರು ಭಾಷಣಕ್ಕೆ ಎದ್ದಾಗ ಹೀಗೇ ಆಯಿತು. ಮಾಜಿ ಪ್ರಧಾನಿ ದೇವೇಗೌಡರು ತುರ್ತು ಕೆಲಸವಿದೆಯೆಂದು ಎದ್ದು ಹೊರಟರು. ಅವರಷ್ಟೇ ಹೋಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಅವರ ಹೆಲಿಕ್ಯಾಪ್ಟರು ಹಾರುವುದನ್ನು ನೋಡಲು ಪೆಂಡಾಲಿನಲ್ಲಿದ್ದ ಮುಕ್ಕಾಲು ಪಾಲು ಜನವೂ ಎದ್ದು ಹೊರಟಿತು. ಹೆಲಿಕ್ಯಾಪ್ಟರಿನ ಧೂಳೆಲ್ಲ ಸಮ್ಮೇಳನದ ಪೆಂಡಾಲಿನವರೆಗೂ ಬಂದು, ಅತಿಸೂಕ್ಷ್ಮ ಮನಸ್ಸಿನ ಕವಿಗಳಾದ ಕಣವಿಯವರು ಸಪ್ಪೆಮುಖದಿಂದ ತಮ್ಮ ಭಾಷಣ ಓದಿದರು. ಆದರೆ ಬೆಳಗಾವಿ ಸಮ್ಮೇಳನದಲ್ಲಿ ಪಾಟೀಲ ಪುಟ್ಟಪ್ಪನವರು ಮಾತ್ರ ಇದನ್ನು ಆಗಗೊಡಲಿಲ್ಲ. ‘ಸಭಾತ್ಯಾಗ’ ಮಾಡಲು ಎದ್ದ ಎಸ್.ಎಂ.ಕೃಷ್ಣ ಅವರನ್ನು ತಮ್ಮ ಭಾಷಣ ಕೇಳುವುದು ಮುಖ್ಯಮಂತ್ರಿಯ ಕರ್ತವ್ಯವೆಂದೂ ಇದರಲ್ಲಿ ನಾಡಿನ ಸಮಸ್ಯೆಗಳ ಚರ್ಚೆಯಿದೆಯೆಂದೂ ಹೇಳಿ ಬಲಾತ್ಕಾರದಿಂದ ಕೂರಿಸಿದ್ದರು. ಜನರಿಗೆ ಅಧ್ಯಕ್ಷರ ಶಕ್ತಿಕಂಡು ಬೆರಗು. ಬಸವರಾಜು ಭಾಷಣಕ್ಕೆ ಹಾಗೆ ಯಡಿಯೂರಪ್ಪನವರೇನೂ ನಡುವೆ ಎದ್ದು ಹೋಗಲಿಲ್ಲ. ಆದರೆ ಕೂತಲ್ಲೇ ಚಡಪಡಿಸುತ್ತಿದ್ದಂತೆ ಕಂಡಿತು. ಬಸವರಾಜು ತಮ್ಮ ಭಾಷಣಕ್ಕೆ ಮುನ್ನವೇ ರಾಜಕಾರಣಿಗಳು ಮತ್ತು ಮಠಾಧೀಶರು ಜನತೆಯ ಶತ್ರುಗಳೆಂದು ಕಟುವಾಗಿ ಟೀಕಿಸಿ ಸನ್ನಿವೇಶವನ್ನು ಗರಮ್ ಗೊಳಿಸಿದ್ದರು. ಅಕಸ್ಮಾತ್ತಾಗಿ ವೇದಿಕೆಯಲ್ಲಿದ್ದ ಪ್ರಮುಖ ಮಠಾಧೀಶರು ಲಿಂಗಾಯತರೇ ಆಗಿದ್ದರು. ಸಿರಿಗೆರೆ ಸ್ವಾಮಿಯವರು ತಾವು ರಣರಂಗಕ್ಕೆ ಹೋಗುತ್ತಿರುವುದಾಗಿ ಹೇಳಿಕೊಂಡೇ ಬಂದಿದ್ದರು. ಹೀಗಾಗಿ ಸಮ್ಮೇಳನದ ಉದ್ಘಾಟನ ಸಮಾರಂಭವು ಕಿಡಿ ಹಾರಿ ರಣರಂಗವಾಗಲು ಬೇಕಾದ ಎಲ್ಲ ಸನ್ನಿವೇಶವೂ ಸಿದ್ಧವಾಗಿತ್ತು. ರಾಜಕಾರಣಿ ಮತ್ತು ಮಠಾಧೀಶರ ನಡುವೆ ಆಸೀನರಾಗಿದ್ದ ಬಸವರಾಜು ಅವರು ನಿರೀಕ್ಷೆಗೆ ತಕ್ಕಂತೆ ಮಾತಾಡಿದರು. ಪ್ರಜಾವಾಣಿ ವರದಿಯ ಪ್ರಕಾರ ಅವರ ಭಾಷಣ ‘ಎಲ್ಲ ಗಣ್ಯರನ್ನು ಮುಜುಗರಕ್ಕೀಡು ಮಾಡಿತು’; ಆದರೆ ನೆರೆದ ಬಹುತೇಕ ಜನರ ಮೆಚ್ಚುಗೆ ಪಡೆಯಿತು.
ಚರಿತ್ರೆಯಲ್ಲಿ ಕೆಲವೇ ಅಧ್ಯಕ್ಷರ ಭಾಷಣಗಳು ತಮ್ಮ ವಿಶಿಷ್ಟತೆ ಮತ್ತು ಹೊಸತನಗಳಿಂದ ಚರ್ಚೆಯನ್ನು ಹುಟ್ಟಿಸಿವೆ. ಧಾರವಾಡ ಸಮ್ಮೇಳನದಲ್ಲಿ (೧೯೫೭) ಕುವೆಂಪು ಅವರು ಮಾಡಿರುವ ಭಾಷಣ (‘ಸಂಸ್ಕೃತಿ ಕರ್ನಾಟಕ’) ಅತಿದೀರ್ಘವಾಗಿದ್ದರೂ ಅನೇಕ ಚಿಂತನಶೀಲ ವಿಚಾರಗಳಿಂದ ಉಜ್ವಲವಾಗಿದೆ. ಶಿವರಾಮ ಕಾರಂತ ಹಾಗೂ ಬೇಂದ್ರೆಯವರ ಭಾಷಣಗಳೂ ವಿಶಿಷ್ಟವಾಗಿವೆ. ನನ್ನ ತಿಳುವಳಿಕೆಯಲ್ಲಿ ಮದರಾಸು ಸಮ್ಮೇಳನದ ಅಧ್ಯಕ್ಷರಾಗಿದ್ದ (೧೯೪೫) ಕೈಲಾಸಂ ಅವರ ಭಾಷಣವು ಅತ್ಯಂತ ಚಿಕ್ಕದು. ನಾಲ್ಕು ಪುಟದ್ದು. “ನನ್ನ ಲೋಕ, ಧೀರಕರ್ಮದ ಕರ್ಕಶ ಲೋಕವಲ್ಲ! ನನ್ನದು ಮೃದುಲೋಕ! ಹಾಸ್ಯದ ಮೃದುಲೋಕ! ಆದುದರಿಂದ ಕನ್ನಡ ನಾಡಿನ ಸಾಹಿತ್ಯ ಪ್ರಪಂಚದಲ್ಲಿ ದೊಡ್ಡ ಮೋಡಗಳಾಗಿ ಹರಡಿಕೊಂಡಿರುವ ಒಗಟೆಗಳನ್ನು ಬಿಡಿಸಲು ನನ್ನಿಂದ ಸಹಾಯವಾಗದಿದ್ದರೆ ಕ್ಷಮಿಸಬೇಕು” ಎಂದು ಅವರು ಪೀಠಿಕೆ ಹಾಕಿಕೊಂಡು, ಹಾಸ್ಯವನ್ನು ಇಟ್ಟಕೊಂಡು ನಾಟಕ ಬರೆಯುವುದರ ಮಹತ್ವವನ್ನು ಕುರಿತಷ್ಟೇ ಮಾತಾಡಿದರು.
ಉಳಿದಂತೆ ಹೆಚ್ಚಿನ ಅಧ್ಯಕ್ಷರು ಆಯಾ ಕಾಲದ ಜ್ವಲಂತ ಸಮಸ್ಯೆಗಳಿಗೆ ಬಾಯಾಗಲು ಯತ್ನಿಸಿದ್ದಾರೆ. ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಕಂಡರೆ ಅವರೆಲ್ಲ ಸಾಹಿತ್ಯದ ಬಗ್ಗೆ ಮಾತಾಡಿರುವುದಕ್ಕಿಂತ ನಾಡಿನ ಸಮಸ್ಯೆಗಳ ಬಗ್ಗೆ ಮಾತಾಡಿರುವುದೇ ಹೆಚ್ಚು. ತುಮಕೂರು ಸಮ್ಮೇಳನದಲ್ಲಿ ಅನಂತಮೂರ್ತಿಯವರು ಜಾಗತೀಕರಣದ ದುಷ್ಪರಿಣಾಮಗಳ ಮೇಲೆ ಮಾತಾಡಿದ್ದರು. ಮೂಡಬಿದಿರೆ ಸಮ್ಮೇಳನದಲ್ಲಿ ಕಮಲಾ ಹಂಪನಾ ಅವರ ಭಾಷಣದ ವರದಿಯನ್ನು ‘ಕೈಗೆ ಕೊಡಬೇಕಾಗದ್ದು ತ್ರಿಶೂಲವಲ್ಲ ಪೆನ್ನು ಪುಸ್ತಕ’ ಎಂದು ಪ್ರಜಾವಾಣಿ ವರದಿ ಮಾಡಿತ್ತು. ಈ ಸಲ ಅದು ಬಸವರಾಜು ಭಾಷಣವನ್ನು ‘ ಸಮ್ಮೇಳನಾಧ್ಯಕ್ಷರ ಬಂಡಾಯ ಬಾವುಟ’ ಎಂದು ವರದಿ ಮಾಡಿದೆ.
ಎಲ್. ಬಸವರಾಜು ಅವರದೂ ವಿಶಿಷ್ಟವಾದ ಅಧ್ಯಕ್ಷ ಭಾಷಣಗಳಲ್ಲಿ ಒಂದಾಗಿದೆ. ಇದಕ್ಕೆ ಅವರು ತೆಗೆದುಕೊಂಡ ಕಾಲ, ಮಾತಾಡಿದ ವಿಧಾನ ಹಾಗೂ ವಿಷಯಗಳು ಕಾರಣವಾಗಿವೆ. ಬಸವರಾಜು ಅವರು ತಾವು ಬರೆದು ತಂದ ಭಾಷಣವನ್ನು ಓದಲಿಲ್ಲ. ಮಾತಾಡಿದರು. ಇದಕ್ಕಾಗಿ ಅವರು ತೆಗೆದುಕೊಂಡ ಕಾಲ ಕೂಡ ಬಹಳ ಕಡಿಮೆ. ಅವರು ಪ್ರಸ್ತಾಪಿಸಿದ ವಿಷಯವು ಅತ್ಯಂತ ಜರೂರಿನದಾಗಿತ್ತು. ಅದರಲ್ಲೂ ಶಿಕ್ಷಣವನ್ನು ಹಣಮಾಡುವ ಧಂಧೆಯಾಗಿಸಿಕೊಂಡ ಬಂಡವಳಿಗರ ಹಾಗೂ ಮಠಾಧೀಶರ ಕೈಗೆ ಸರ್ಕಾರವು ಒಪ್ಪಿಸಿ ಕೂತಿರುವ ಸಮಯದಲ್ಲಿ ಬಸವರಾಜು ಅವರು ಶಿಕ್ಷಣವು ಕಳ್ಳಕಾಕರ ಕೈಯಲ್ಲಿದೆಯೆಂದು ಹೇಳಿದ್ದು ಕಟುವಾದ ನಿಜವಾಗಿದೆ. ಕೈಗಾರಿಕೆಗಳಿಗೂ ಬಹುರಾಷ್ಟ್ರೀಯ ಕಂಪನಿಗಳಿಗೂ ರೈತರ ಭೂಮಿಯನ್ನು ಕಿತ್ತುಕೊಡುವ, ಮತಕೊಟ್ಟ ಜನರಿಗೆ ರಸಗೊಬ್ಬರ, ಪಡಿತರ ಚೀಟಿ, ರೇಶನ್ನು, ಕುಡಿಯುವ ಶುದ್ಧನೀರು, ಶಾಲೆ, ಆರೋಗ್ಯ ಇತ್ಯಾದಿ ಪ್ರಾಥಮಿಕ ಮತ್ತು ಅಗತ್ಯ ಸೇವೆಗಳನ್ನು ಮಾಡುವುದಕ್ಕೂ ಹಿಂದೇಟು ಹಾಕುತ್ತಿರುವ ಸರ್ಕಾರಗಳು ಈ ಜಾಗತೀಕರಣದ ದಿನಗಳಲ್ಲಿ ಏರ್ಪಟ್ಟಿವೆ. ಕ್ರಾಂತಿಕಾರಿ ಕವಿಗಳೆನಿಸಿಕೊಂಡವರೂ ಪ್ರಭುತ್ವಕ್ಕೆ ಮಣಿದು ಊಳಿಗ ಮಾಡುತ್ತಿರುವ, ಭಿನ್ನಮತ ವಿಮರ್ಶೆ ವ್ಯಕ್ತಪಡಿಸುವರನ್ನು ಪ್ರಭುತ್ವವು ನಾನಾ ಕಾರಣಗಳಿಂದ ಹಿಡಿದು ಶಿಕ್ಷಿಸಲು ಯತ್ನಿಸುತ್ತಿರುವ ಸನ್ನಿವೇಶದಲ್ಲಿ, ನಾಡಿನ ಸಂಪತ್ತನ್ನು ಕಾನೂನು ಬದ್ಧವಾಗಿ ಸೂರೆಹೊಡೆಯುವ ಕಳ್ಳರು ಅಧಿಕಾರಸ್ಥರಾಗಿರುವ ಈ ಸಂದರ್ಭದಲ್ಲಿ, ಭ್ರಷ್ಟತೆಯು ನಮ್ಮ ಸಾರ್ವಜನಿಕ ಬದುಕಿನ ಸಹಜ ಮತ್ತು ಒಪ್ಪಿತಲಯವಾಗಿರುವ ಈ ಹೊತ್ತಲ್ಲಿ, ದಲಿತರಿಗೆ ವಸತಿ ಶಾಲೆಯ ಬೇಡಿಕೆ ಮಂಡಿಸುವುದು ಹಾಸ್ಯಾಸ್ಪದ ಅನಿಸಬಹುದು. ಆದರೆ ಅದಕ್ಕೊಂದು ಸಾಮಾಜಿಕ ಬದ್ಧತೆಯನ್ನು ನೆನಪಿಸುವ ವಿಚಿತ್ರ ಮಾರ್ಮಿಕತೆಯಿದೆ. ಸರ್ಕಾರವು ತೊಡಗಿಕೊಳ್ಳಬೇಕಾದ ಕ್ಷೇತ್ರಗಳು ಯಾವುವು ಎಂದು ಹೇಳಿದ ಬಸವರಾಜು ಅದು ಕೈಹಾಕಬಾರದ ಕ್ಷೇತ್ರಗಳು ಯಾವುವು ಎಂದೂ ಹೇಳಿದರು. ಅದರಲ್ಲಿ ಸಾಹಿತ್ಯ ಸಂಸ್ಕೃತಿಗಳು ಸೇರಿವೆ. ಆದರೆ ನಿರ್ದಿಷ್ಟ ಸಮುದಾಯವನ್ನು ಕುರಿತ ಬಸವರಾಜು ಅವರ ಸಾರಾಸಗಟು ಟೀಕೆ ಮಾತ್ರ ಒಪ್ಪುವಂತಹದ್ದಲ್ಲ. ಪ್ರತಿಗಾಮಿ ವಿಚಾರಧಾರೆಗಳು ಖಂಡನಾರ್ಹವೇ ಹೊರತು ನಿರ್ದಿಷ್ಟ ಸಾಮಾಜಿಕ ಸ್ತರದಲ್ಲಿ ಹುಟ್ಟಿದ ಜನರಲ್ಲ. ಇದು ಇನ್ನೊಂದು ಮೂಲಭೂತವಾದ ಆಗುತ್ತದೆ ಅಷ್ಟೆ.
ಅನೇಕ ಸಾಹಿತ್ಯಾಸಕ್ತರಿಗೆ ಬಸವರಾಜು ಭಾಷಣ ಸಹಜವಾಗಿಯೇ ಅತೃಪ್ತಿ ತಂದಿದೆ. ಇದಕ್ಕೆ ಕಾರಣ, ಸಾಹಿತ್ಯ ಸಮ್ಮೇಳನವು ಸಾಹಿತ್ಯದ ಬಗ್ಗೆ ಚರ್ಚಿಸಬೇಕು ಎಂಬ ಅವರ ಅಪೇಕ್ಷೆಯೂ ಇರಬಹುದು. ಆದರೆ ಕೆಲವರಲ್ಲಿ ಈ ಅಪೇಕ್ಷೆ, ಸಾಹಿತ್ಯವಲ್ಲದೆ ಇತರೆ ವಿಷಯಗಳಿಗೆ ಹೋಗುವುದು, ಅಸಾಹಿತ್ಯಕ ಎಂದು ತಿಳಿಯುವ ತರಹದಲ್ಲಿದೆ. ಹಿಂದೊಮ್ಮೆ ಹೊನ್ನಾಳಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ಬಿದರಹಳ್ಳಿ ನರಸಿಂಹಮೂರ್ತಿಯವರು, ಸಾಹಿತ್ಯಕ್ಕಿಂತ ಹೆಚ್ಚಾಗಿ ಹೊನ್ನಾಳಿ ತಾಲೂಕಿನ ಕೆರೆಗಳಲ್ಲಿ ಹೂಳು ತುಂಬಿರುವುದನ್ನು ದೊಡ್ಡ ಸಮಸ್ಯೆ ಎಂದು ಪ್ರಸ್ತಾಪಿಸಿ, ಜನರು ಹೂಳು ತೆಗೆಯಲು ಸಿದ್ಧರಾಗುವುದಕ್ಕೆ ಕರೆಗೊಟ್ಟಿದ್ದರು; ಮಾತ್ರವಲ್ಲ ತಮ್ಮ ಪಾಲಿನ ಒಂದು ಸಾವಿರ ರೂಪಾಯಿ ದೇಣಿಗೆಯನ್ನೂ ಅಲ್ಲಿಯೇ ಕೊಟ್ಟುಬಿಟ್ಟರು. ಆಗ ಅಧ್ಯಕ್ಷರು ಇದನ್ನೆಲ್ಲ ಮಾತಾಡಬೇಕಿತ್ತೇ ಎಂದು ದೊಡ್ಡ ಚರ್ಚೆ ನಡೆದಿತ್ತು.
ಚಿತ್ರದುರ್ಗದಲ್ಲಿ ಜನ ಬಸವರಾಜು ಅವರ ಭಾಷಣದ ಪ್ರತಿಗಳನ್ನು ಹೇಗೆ ಬಳಸಿದರೊ ಗೊತ್ತಿಲ್ಲ. ಆದರೆ ಅವರ ಭಾಷಣಕ್ಕಂತೂ ಚಪ್ಪಾಳೆ ಸಿಳ್ಳು ಹಾಕುವ ಮೂಲಕ ಪ್ರತಿಕ್ರಿಯಿಸಿದರು. ಇದಕ್ಕೆ ಕಾರಣ, ಬಸವರಾಜು ಅವರು ಸಾಹಿತ್ಯದ ಬಗ್ಗೆ ಮಾತಾಡದೆ ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ನೇರವಾಗಿ ಮಾತಾಡುತ್ತಿದ್ದುದು ಮಾತ್ರವಲ್ಲ. ಧರ್ಮ ಮತ್ತು ರಾಜಕೀಯ ಪ್ರಭುತ್ವದ ಸಂಕೇತವಾಗಿದ್ದ ಜನರನ್ನು ಅಕ್ಕಪಕ್ಕ ಕೂರಿಸಿಕೊಂಡು ಪರೋಕ್ಷವಾಗಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದುದು. ಜನ ಪ್ರಭುತ್ವದಿಂದ ಅನೇಕ ಬಗೆಯ ಅಪೇಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಜತೆಗೆ ಅವರು ಪ್ರಭುತ್ವದ ವಿರುದ್ಧದ ಟೀಕೆಗಳನ್ನು ಸಹ ಅಪೇಕ್ಷೆ ಪಡುತ್ತಾರೆ. ಆದ್ದರಿಂದಲೇ ನಲ್ಲೂರು ಪ್ರಸಾದರು ಅಲ್ಲಿದ್ದ ರಾಜಕಾರಣಿಗಳ ಬಗ್ಗೆ ಮೆಚ್ಚುಗೆಯ ಮಾತಾಡುವಾಗ ಸುಮ್ಮನಿದ್ದ ಅವರು, ಪ್ರಭುತ್ವದ ಸಂಕೇತಗಳಿಗೆ ಟೀಕಿಸುವಾಗ ಸಂತೋಷ ಉಕ್ಕಿದಂತೆ ವರ್ತಿಸುತ್ತಿದ್ದರು. ತಾವೇ ಆರಿಸಿತಂದ ಸರ್ಕಾರಗಳ ಭಂಜನವನ್ನೂ ಅವರು ಯಾಕಿಷ್ಟು ಬಯಸುತ್ತಾರೆ–ಹೀರೋ ವಿಲನನ್ನು ಬಡಿಯುವಾಗ ಸಿನಿಮಾ ಥಿಯೇಟರಿನಲ್ಲಿ ಜನ ಸಂಭ್ರಮಿಸುವಂತೆ? ಶಿವಮೊಗ್ಗೆಯ ಸಮ್ಮೇಳನದಲ್ಲಿ ಕೂಡ ಕುಮಾರಸ್ವಾಮಿಯವರನ್ನು ಟೀಕಿಸುತ್ತ ಚಂಪಾ ಮಾತಾಡುವಾಗ ಜನ ಹೀಗೇ ವರ್ತಿಸಿದ್ದರು. ಅವರು ವ್ಯವಸ್ಥೆಯ ವಿಮರ್ಶಕರೇ? ತಮ್ಮ ಅಪೇಕ್ಷೆಗಳನ್ನು ಈಡೇರಿಸದ ರಾಜಕಾರಣಿಗಳನ್ನು ಕುರಿತ ಅವರ ಸಿಟ್ಟು ಹೀಗೆ ಮಾಡುತ್ತದೆಯೇ? ಅಥವಾ ಇದು ಅವರ ಸಿನಿಕತೆ ಅಸಹಾಯಕತೆಗಳನ್ನು ತೋರಿಸುತ್ತದೆಯೋ?
ಆದರೆ, ಸಮ್ಮೇಳನ ಮುಗಿದ ಬಳಿಕ ಜನರು ತಮ್ಮ ನಿತ್ಯದ ಕಷ್ಟಸುಖಗಳಲ್ಲಿ ಮುಳುಗಿ ಬಿಡುತ್ತಾರೆ. ಭಾಷಣ ಮಾಡಿದ ಅಧ್ಯಕ್ಷರು ತಮ್ಮ ಮಹತ್ವವನ್ನು ಕಳೆದುಕೊಂಡವರಂತೆ ಉತ್ಸವದ ಮೂರ್ತಿಯಾಗಿ ಉಳಿಯುತ್ತಾರೆ. ರಾಜಕಾರಣಿಗಳು ತಮ್ಮ ರಾಜಕಾರಣವನ್ನು ಮುಂದುವರೆಸುತ್ತಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನಗಳು, ಲಂಡನ್ನಿನ ಹೈಡ್ ಪಾರ್ಕಿನಲ್ಲಿರುವಂತೆ, ತಮ್ಮ ದು:ಖ ದುಮ್ಮಾನಗಳನ್ನು ಕೇಳಿಸಿಕೊಳ್ಳಲು ಯಾರೂ ಇಲ್ಲದ ಜಾಗದಲ್ಲಿ ದಿಟ್ಟವಾಗಿ ಹೇಳಿಕೊಳ್ಳುವ ವೇದಿಕೆಗಳಂತೆಯೂ ತೋರುತ್ತವೆ. ಅವು ಕ್ವಚಿತ್ತಾಗಿ ಗಂಭೀರ ಚರ್ಚೆ ಮಾಡುವ ಜಾಗಗಳೂ ಆಗಿವೆ. ಹಾಗೆಯೇ ಮಾಡಿದ ಚರ್ಚೆಯನ್ನು ಕೈಗೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸುವ ಸಂಕಲ್ಪ ತೊಡದೆ ಮರೆತು ಬರುವ ಜಾಗಗಳೂ ಆಗಿವೆ. ಪ್ರಭುತ್ವಗಳು ಸಾರ್ವಜನಿಕರಿಗೆ ತಮ್ಮ ಕಾರ್ಯಕ್ರಮ ಘೋಷಿಸಿಕೊಳ್ಳುವ ಮತ್ತು ಬೊಕ್ಕಸದ ಹಣವನ್ನು ದಾನಕೊಟ್ಟಂತೆ ಕೊಟ್ಟು, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳುವ ವೇದಿಕೆಗಳೂ ಆಗಿವೆ. ಜಾತ್ರೆಗಳಲ್ಲೂ ಇದೇ ಲಕ್ಷಣಗಳಿವೆ. ಜಾತ್ರೆಗಳು ಮುಗಿಯುತ್ತಿದ್ದಂತೆ ಜನ ತಮ್ಮ ಹೊಲಗೆಲಸಗಳಲ್ಲಿ ತೊಡಗುತ್ತಾರೆ-ಮತ್ತೊಂದು ಜಾತ್ರೆಯ ತನಕ.
ಕರ್ನಾಟಕದ ಸಾಮಾಜಿಕ ವಿದ್ಯಮಾನಗಳ ಬಗ್ಗೆ ದೊಡ್ಡದನಿಯನ್ನು ತೆಗೆದು ಮಾತಾಡುತ್ತ ಬಂದಿರುವ ಕಾರಂತ, ಕುವೆಂಪು, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಚಂಪಾ ಮುಂತಾದವರಿಗೆ ಹೋಲಿಸಿದರೆ, ತಮ್ಮ ಪಾಂಡಿತ್ಯದ ಕೆಲಸದೊಂದಿಗೆ ಮುಳುಗಿ ಒಂದು ದ್ವೀಪದಂತಿದ್ದ ಎಲ್. ಬಸವರಾಜು ಅವರಿಗೆ ಯಾಕೆ ಹೀಗೆ ಒರಟಾಗಿ ಸಾಮಾಜಿಕ ಅಜೆಂಡಾಗಳನ್ನು ಮಂಡಿಸುವ ಉಮೇದು ಬಂತು? ಅವರು ಬಹುಕಾಲ ಸಂಪಾದಿಸಿಕೊಂಡು ಬಂದ ವಚನ ಪರಂಪರೆಯ ಸುಪ್ತ ಪ್ರೇರಣೆಯೇ? ಈ ಹೊತ್ತು ಕರ್ನಾಟಕದಲ್ಲಿ ನಡೆದಿರುವ ವಿದ್ಯಮಾನಗಳೇ? ತಮ್ಮ ಬಹುಕಾಲದ ಮೌನವನ್ನೊಡೆದಾಗ ಹುಟ್ಟುವ ಅನಿರೀಕ್ಷಿತ ಆಕ್ಟಿವಿಸಮ್ಮೇ? ಜನರ ಜಂಗುಳಿ ಅವರನ್ನು ಹಾಗೆ ಧಿಡೀರ್ ಕ್ರಾಂತಿಕಾರಿಯಾಗಿಸಿತೇ? ಮುಗ್ಧ ಮನಸ್ಸಿನ ಹಿರಿಯ ಪಂಡಿತರೊಬ್ಬರ ಅಚಾನಕ್ ಪ್ರಭುತ್ವವಿರೋಧಿ ನಿಲುವು ಹಾಗೂ ದಮನಿತ ಜನರ ಪರವಾದ ಕಾಳಜಿಯು ಸಹಜವಾಗಿಯೇ ಸಂಚಲನೆ ಹುಟ್ಟಿಸಿದೆ. ಇಂತಹ ಅನಿರೀಕ್ಷಿತ ಆಸ್ಫೋಟಗಳು ಸಂಭವಿಸುವ ಕಾರಣದಿಂದಲೂ ನಾನು ಸಾಹಿತ್ಯ ಜಾತ್ರೆಗಳಿಗೆ ಹೋಗುವುದನ್ನು ತಪ್ಪಿಸುವುದಿಲ್ಲ.
[ ಚಿತ್ರಗಳು:ಸಾಹಿತ್ಯ ಸಮ್ಮೇಳನದ ಬ್ಲಾಗಿನಿಂದ ]
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.