ಪುತಿನ ಸಾಹಿತ್ಯ ಓದಿದ ಕೆಲವರಿಗಾದರೂ ಮೇಲುಕೋಟೆ ನೋಡಬೇಕೆನಿಸಿದರೆ, ಅದು ಸಹಜ. ಅದರಂತೆ ನಾನೂ ಹೋಗಬಯಸಿದೆ. ಈ ಮೇಲುಕೋಟೆ ಮಾತ್ರ ಅವಸರಕ್ಕೆ ಸಿಗುವ ಊರಲ್ಲ. ಎಲ್ಲೊ ಹೊರಟವರು, ದಾರಿಯಲ್ಲಿ ಹಾಗೆಯೇ ಇಳಿದು ನೋಡಿಕೊಂಡು ಹೋಗುವಂತಿಲ್ಲ. ಅದನ್ನು ನೋಡಬಯಸುವವರು ಅಲ್ಲಿಗೆಂದೇ ಹೋಗಬೇಕು. ಅದೊಂದು ಡೆಡೆಂಡ್. ಕಳೆದ ಬೇಸಿಗೆಯಲ್ಲಿ ಅಲ್ಲಿಗೆ ಹೋಗಲು ನನಗೆ ಸಾಧ್ಯವಾಯಿತು.

ಪ್ರತಿ ಊರಿಗೂ ತನ್ನದೇ ಆದ ವ್ಯಕ್ತಿತ್ವವಿರುತ್ತದೆ. ಕೆಲವು ಲೇಖಕರು ತಮ್ಮೂರ ವ್ಯಕ್ತಿತ್ವವನ್ನು ಅಲ್ಲಿನ ಬದುಕನ್ನು ಕಟ್ಟಿಕೊಡುವ ಮೂಲಕ ಓದುಗರ ಮನಸ್ಸಲ್ಲಿ ಸ್ಥಾಪಿಸುತ್ತಾರೆ. ಉದಾಹರಣೆಗೆ ಗೊರೂರು, ಪುತಿನ ಮುಂತಾದವರು; ಮತ್ತೆ ಕೆಲವರು ತಾವಿದ್ದ ಊರುಗಳಿಗೆ ಹೊಸ ವ್ಯಕ್ತಿತ್ವವನ್ನೇ ಕೊಟ್ಟುಬಿಡುತ್ತಾರೆ. ಉದಾಹರಣೆಗೆ, ಕಾರಂತ (ಪುತ್ತೂರು) ಮಧುರಚನ್ನ (ಹಲಸಂಗಿ) ಸಿಂಪಿಲಿಂಗಣ್ಣ (ಚಡಚಣ) ಕೆ.ವಿ.ಸುಬ್ಬಣ್ಣ (ಹೆಗ್ಗೋಡು) ಮುಂತಾದವರು ತಾವಿದ್ದ ಊರುಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿಯೂ ರೂಪಿಸಿದವರು. ಪುತಿನ ಮೊದಲನೇ ಮಾದರಿಯವರು. ತಮ್ಮ ಬರಹದಲ್ಲಿ ಮೇಲುಕೋಟೆಯ ಇಡೀ ಗುಡಿಸಂಸ್ಕೃತಿ ತನ್ನೆಲ್ಲ ವ್ಯಕ್ತಿತ್ವದೊಡನೆ ಆಪ್ತವಾಗಿ ಮೂಡುವಂತೆ ಅದನ್ನು ಅವರು ಕಂಡರಿಸಿದವರು. ಅವರ ಮೇಲುಕೋಟೆ ವ್ಯಕ್ತಿತ್ವದಲ್ಲಿ ಮುಖ್ಯವಾಗಿರುವುದು, ಗುಡಿಯಲ್ಲಿ ಸರ್ವಾಲಂಕಾರ ಭೂಷಿತನಾಗಿ ಮೇಲುಕೋಟೆಯ ಪಂಚೆಯುಟ್ಟು ನಿಂತ ಚೆಲುವ ನಾರಾಯಣ ಮಾತ್ರವಲ್ಲ; ಯದುಗಿರಿ ಬೆಟ್ಟದ ಮೇಲಿನ ಸೂರ್ಯೋದಯ, ಅಲ್ಲಿ ರಂಗವಲ್ಲಿ ಬಿಡುವ ಮುದುಕಿ, ವೈರಮುಡಿಯ ಉತ್ಸವದಲ್ಲಿ ಕಹಳೆ ಓದುವ ಚೆನ್ನ, ಅವನ ಊದುವಿಕೆಯನ್ನು ತನ್ಮಯವಾಗಿ ನೋಡುವ ಮಗು, ಗುಡಿಯ ಅಡಿಗೆಮನೆ ಸಹಾಯಕನಾದ ಪುಟ್ಟಹುಡುಗ ಕೊಳಂದೆ, ಅಲ್ಲಿನ ಕಲ್ಯಾಣಿಗಳು, ಅದರ ಹಾವಸೆ, ಅದರೊಳಗಿನ ಕಪ್ಪೆಗಳು, ದಡದ ಈಚಲುಮರ ಇತ್ಯಾದಿ ಕೂಡ. ನೂರು ಪುಟ್ಟಚಿತ್ರಗಳು ಒಂದು ದೊಡ್ಡಚೌಕಟ್ಟಿನೊಳಗೆ ಅಡಗಿದಂತೆ ಅವರ ಬರಹವಿದೆ.

ಮೇಲುಕೋಟೆ ಕರ್ನಾಟಕದ ಬೆಟ್ಟದ ಮೇಲಿನ ಊರುಗಳಲ್ಲಿ ಒಂದು. ಇದು ಮಾದೇಶ್ವರ ಅಥವಾ ಬಿಳಿಗಿರಿ ರಂಗನಂತೆ ದೊಡ್ಡಬೆಟ್ಟವೇನಲ್ಲ. ಸಣ್ಣದು. ಅದಕ್ಕೆ ಶಿಖೆಯಂತೆ ಒಂದು ಕೋಡು. ಹೆಸರೇ ಸೂಚಿಸುವಂತೆ ಒಂದು ಕಾಲಕ್ಕೆ ಇಲ್ಲಿ ಕೋಟೆಯಿತ್ತು. ಈಗದು ಕಾಣದಷ್ಟು ಬಿದ್ದುಹೋಗಿದೆ. ಈಗ ಕಾಣುವುದೆಲ್ಲ ಗುಡಿ ಗೋಪುರ, ಕೆಂಪುಮಾಡಿನ ಮನೆ, ಕಲ್ಯಾಣಿಗಳು. ಅತಿಹೆಚ್ಚು ಮಂಟಪಗಳಿರುವ ಊರು ಹಂಪಿಯಾದರೆ, ಅತಿಹೆಚ್ಚು ಕಲ್ಯಾಣಿಗಳಿರುವ ಊರು ಮೇಲುಕೋಟೆ ಇರಬೇಕು. ಈಗ ದೊಡ್ಡಕಲ್ಯಾಣಿಯಲ್ಲಿ ತೆಪ್ಪೋತ್ಸವದಂತಹ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಉಳಿದಂತೆ ಬಹುತೇಕ ಕಲ್ಯಾಣಿಗಳು ಅನಾಥಾಶ್ರಮದ ವೃದ್ಧರಂತೆ ದುರವಸ್ಥೆಯಲ್ಲಿ ಹೊತ್ತು ದೂಡುತ್ತಿವೆ. ದಡದ ಕಲ್ಲುಗಳು ಜಾರಿಬಿದ್ದಿವೆ. ಕೆಲವೆಡೆ ಜಲವು ಬತ್ತಿದೆ. ಮತ್ತೆ ಕೆಲವೆಡೆ ಊರಕಸವೆಲ್ಲ ಬಿದ್ದು ಕೊಳೆಯುತ್ತ ನೀರಬಣ್ಣ ಗಿಣಿಹಸುರಿಗೆ ತಿರುಗಿದೆ. ಅದರೊಳಗೆ ಮಿಣುಕನೆ ಆಡುವ ಮೀನುಗಳನ್ನು ತಿನ್ನಲು ಕೊಕ್ಕರೆಗಳು ಕಾಯುತ್ತ ದಡದಲ್ಲಿವೆ. ಅದರಲ್ಲೇ ಹೆಂಗಸರು ಬಟ್ಟೆ ಒಗೆಯಲು ಬರುವುದುಂಟು. ಶೌಚದಿಂದ ಅಚಮನದ ತನಕ ಎಲ್ಲ ಬಗೆಯ ಬಳಕೆಗೆ ನೀರು ಒದಗಿಸಿರಬಹುದಾದ ಈ ಕಲ್ಯಾಣಿಗಳು, ಈಗ ನೀವೇನಾದರೂ ಮಾಡಿಕೊಳ್ಳಿ ಎಂಬ ನಿರ್ಲಿಪ್ತ ಮುಖಭಾವದಲ್ಲಿದೆ.

ಪುತಿನ ಪ್ರಕಾರ, ಒಮ್ಮೆ ಭೀಕರವಾದ ಬರಗಾಲ ಬಂದು ಕಲ್ಯಾಣಿಗಳೆಲ್ಲ ಬತ್ತಿ ನೀರಿಗಾಗಿ ಹಾಹಾಕಾರ ಎದ್ದಿತ್ತು. ‘ಬೆಟ್ಟದಾ ಮೇಲೊಂದು ಮನೆಯ ಮಾಡಿದ’ ಎಲ್ಲ ಊರುಗಳೂ ಜಲಕ್ಷಾಮದ ರುಚಿಯನ್ನು ಒಮ್ಮೆ ಅನುಭವಿಸಲೇಬೇಕಷ್ಟೆ. ಎಂತಲೇ ಗಿರಿದುರ್ಗಗಳು ಸೈನ್ಯಕ್ಕೆ ಅರಮನೆಗೆ ಜನರಿಗೆ ಬೇಕಾದ ನೀರನ್ನು ಮಳೆ ಬಂದಾಗ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದವು. ಚಿತ್ರದುರ್ಗ ಮತ್ತು ಗಜೇಂದ್ರಗಢಗಳ ಕೋಟೆಹೊಂಡಗಳು ಇದಕ್ಕೆ ಸಾಕ್ಷಿ. ಮೇಲುಕೋಟೆಯಲ್ಲೂ ಬೆಟ್ಟದ ಬೆನ್ನಮೇಲೆ ಬಿದ್ದ ಒಂದು ಹನಿಯೂ ವ್ಯರ್ಥ ಕೆಳಗಿಳಿದು ಕಣಿವೆಗೆ ಹೋಗದಂತೆ, ನಾನಾ ಕೊಳಗಳಲ್ಲಿ ಹಿಡಿದಿಡುವ ಕೆಲಸವನ್ನು ಊರು ಕಟ್ಟಿದವರು ಮಾಡಿದ್ದಾರೆ. ಅದರಲ್ಲೂ ಯೋಗಾನರಸಿಂಹ ಬೆಟ್ಟದಿಂದ ನೀರು ದೊಡ್ಡ ಕಲ್ಯಾಣಿಗೆ ಬರುವುದಕ್ಕೂ ಹೆಚ್ಚುವರಿ ನೀರು ಹೊರಹೋಗುವುದಕ್ಕೂ ವ್ಯವಸ್ಥೆಯಿದೆ. ಮೇಲುಕೋಟೆ ಕರ್ನಾಟಕದ ಮಳೆಕೊಯಿಲಿನ ಅದ್ಭುತ ಪ್ರಯೋಗಶಾಲೆಯಂತಿದೆ. ಸದ್ಯಕ್ಕೆ ಅಕ್ಕತಂಗಿಯರ ಕಲ್ಯಾಣಿಗಳಲ್ಲಿ ಒಂದು ಮಾತ್ರ ಈಗಲೂ ಕುಡಿಯುವುದಕ್ಕೆ ಬಳಕೆಯಾಗುತ್ತಿದೆ.

ಮೇಲುಕೋಟೆಯ ಭೂಭಾಗ ಸಮುದ್ರ ಮಟ್ಟದಿಂದ ಬಹಳ ಎತ್ತರವಿದೆ. ಇಲ್ಲಿ ಯಾವ ನದಿಗಳೂ ಹುಟ್ಟುವುದಿಲ್ಲ. ಕೆಳಗೆ ಹರಿವ ನದಿನೀರನ್ನು ಮೇಲೆ ತರುವುದಾಗಿಲ್ಲ. ಯೋಗಾನರಸಿಂಹ ಗುಡಿಯ ಶಿಖರದಲ್ಲಿ ನಿಂತು ಒಂದು ಸುತ್ತು  ನೋಡಿದರೆ, ಇಡೀ ಸೀಮೆ ಕಲ್ಲುಬೆಟ್ಟ ಮತ್ತು ಕುರುಚಲು ಕಾಡಿನ ‘ಬರಡು ಭೂಮಿ’ ಅನಿಸುತ್ತದೆ. ಕಾವೇರಿ ಹೇಮಾವತಿಗಳ ನೀರು ಸುತ್ತಮುತ್ತ ಊರುಗಳಿಗೆ ಹರಿದು ಹಸಿರು ಹಬ್ಬಿಸಿವೆ. ಮೇಲುಕೋಟೆಯ ಹೊಟ್ಟೆ ಉರಿಸುವಂತೆ, ದೂರದಲ್ಲಿ, ಕರ್ನಾಟಕದ ಅತಿದೊಡ್ಡ ಮತ್ತು ಸುಂದರ ಕೆರೆಗಳಲ್ಲಿ ಒಂದಾದ ತೊಣ್ಣೂರುಕೆರೆ ನೆಲಕ್ಕೆ ಜೋಡಿಸಿದ ಕನ್ನಡಿಯಂತೆ ಕಾಣುತ್ತದೆ. ಆದರೆ ಮೇಲುಕೋಟೆ ಭಾಗ ಮಾತ್ರ ಮಳೆನೀರ ಹಂಗಲ್ಲೇ ಉಳಿಯಿತು. ಮಳೆನೀರನ್ನು ಬಿಡದಂತೆ ಹಿಡಿದಿಟ್ಟ ಈ ಸೀಮೆಗೆ, ತನ್ನಲ್ಲಿ ಹುಟ್ಟಿದ ಜನರನ್ನು ಹಿಡಿದಿಡುವುದು ಆಗಲಿಲ್ಲ. ಬೇಸಾಯ ನಂಬಿ ಬದುಕಲಾಗದೆ ಜನ ನಾನಾಕಡೆ ವಲಸೆಹೋದರು. ನಾಗಮಂಗಲ ಭಾಗದಿಂದ ಬಹಳ ಹುಡುಗರು ಮುಂಬೈಗೆ ಹೋದರು. ಆದರೂ ಮೇಲುಕೋಟೆಯ ಹೊಟ್ಟೆಯಲ್ಲಿ ಸಾಕಷ್ಟು ಜಲ ಇಂಗಿರಬೇಕು. ಕಾರಣ, ಅಲ್ಲಿ ಮುಗಿಲೆತ್ತರಕ್ಕೆ ಬೆಳೆದ ತೆಂಗಿನಗಿಡಗಳಿವೆ. ಮನೆಗೊಂದಂತೆ ಬಾವಿಗಳಿವೆ. ಅವುಗಳಲ್ಲಿ ನೀರೂ ಇದೆ. ನಾನು ಕೆಲವು ಬಾವಿಗಳನ್ನು ಬಗ್ಗಿ ನೋಡಿದೆ. ತಳವೇ ಕಾಣದ ಗಾಢಕತ್ತಲೆಯ ಕೂಪಗಳು. ಸಣ್ಣಹರಳನ್ನು ಹಾಕಿದರೆ, ಎಷ್ಟೋ ಹೊತ್ತಿನ ಬಳಿಕ ಡುಬುಕ್ ಎಂಬ ದನಿ ಹೊರಡುತ್ತದೆ. ನದಿಯಿಲ್ಲದ ಊರಲ್ಲಿ ವೈದಿಕರು ಹೇಗೆ ನೆಲೆಸಿದರೊ ಎಂದುಕೊಳ್ಳುತ್ತಿದ್ದೆ. ಜಲಮೂಲವನ್ನು ಖಚಿತ ಮಾಡಿಕೊಂಡೇ ಅವರು ನೆಲೆಸಿದಂತಿದೆ.

ರಾಮಾನುಜರು ತಮಿಳುನಾಡಿನಲ್ಲಿ ಶೈವರ ಕಿರುಕುಳ ತಾಳಲಾರದೆ ಕರ್ನಾಟಕಕ್ಕೆ ವಲಸೆ ಬಂದರಷ್ಟೆ. ಶೈವ-ವೈಷ್ಣವ ಸಂಘರ್ಷವು ತಾರಕಕ್ಕೆ ಮುಟ್ಟಿದ್ದ ಕಾಲವದು. ಕುಲೋತ್ತಂಗ ಚೋಳನು ವೈಷ್ಣವರಿಗೆ ಕೊಟ್ಟ ಹಿಂಸೆಯ ಬಗ್ಗೆ ಅನೇಕ ದಂತಕತೆಗಳಿವೆ. ಅದರಲ್ಲಿ ಕೂರತ್ತಾಳ್ವಾರರನ್ನು ರಾಮಾನುಜನೇ ಎಂದು ಭಾವಿಸಿ ಕಣ್ಣುಕೀಳಿಸಿದ್ದು ಒಂದು. ರಾಮಾನುಜರು (೧೦೧೭-೧೧೩೭) ನೀರಿಲ್ಲದ ಈ ಬೆಟ್ಟದೂರಲ್ಲಿ ೧೪ ವರ್ಷವಿದ್ದರು. ಬೆಟ್ಟದ ದೇವರು ವಿಷ್ಣುವಿರೋಧಿಯಾದ ಉಗ್ರಶಿವಭಕ್ತನನ್ನು ಕೊಂದವನು ನರಸಿಂಹನು ಎಂಬುದು ಕೂಡ ಗಮನಾರ್ಹ. ಇದು ಮೂಲತಃ ಜೈನರಬೆಟ್ಟ ಇದ್ದೀತು. ಜೈನರು ಉಪವಾಸವಿದ್ದು ಪ್ರಾಣಬಿಡುವ ಸಲ್ಲೇಖನ ವ್ರತಕ್ಕೆ ಅನುವಾಗುವಂತೆ, ನೀರಿಲ್ಲದ ಬೆಟ್ಟಗಳನ್ನೇ ಆರಿಸಿಕೊಳ್ಳುತ್ತಾರೆ. ಅವರು ಜೈನರ ಬಿಟ್ಟಿದೇವನನ್ನು ವಿಷ್ಣುವರ್ಧನನ್ನಾಗಿ ಮತಾಂತರ ಮಾಡಿದ ಬಳಿಕ, ಈ ಸೀಮೆಯಲ್ಲಿ ಬಹಳ ಪಲ್ಲಟಗಳಾದವು. ಇದರ ಪರಿಣಾಮವು ಬಹುಕಾಲ ಕಾಡಿಸಿತು. ಮುಂದೆ  ಮೈಸೂರು ಒಡೆಯರ ಕಾಲದಲ್ಲಿ ವೈಷ್ಣವ ಗುಡಿಯ ದತ್ತಿಯನ್ನು ರದ್ದುಮಾಡಿದ ಜೈನಮಂತ್ರಿ ವಿಶಾಲಾಕ್ಷ ಪಂಡಿತನ ಕೊಲೆಯು ಇದರಲ್ಲಿ ಒಂದು. ಮತಧರ್ಮಗಳ ಕಲಹದ ಪರಿಣಾಮ ಬಿಟ್ಟೇನೆಂದರೂ ಬಿಡದಂತೆ ಶತಮಾನಗಳ ತನಕ ಮುಂದುವರೆಯುತ್ತದೆ. ಸಂಬಂಧ ಪಡದವರ ಬಲಿಬೇಡುತ್ತದೆ. ಆಚಾರ್ಯರಿಗೆ ಪ್ರಭುತ್ವದ ಬೆಂಬಲವಿದ್ದ ಕಾರಣ, ಜೈನರನ್ನೂ ಶೈವರನ್ನೂ ಸಮರ್ಥವಾಗಿ ಎದುರಿಸಿದರೆನ್ನಬಹುದು.

ಕೋಟೆಯ ಗುಡ್ಡದಿಂದ ಕಾಣುವ ಊರು

ವ್ಯಂಗ್ಯವೆಂದರೆ, ಹೊರಗಿನ ಕಲಹ ಮುಗಿದರೂ ವೈಷ್ಣವರ ಒಳಗಿನ ಕಲಹ ಮುಗಿಯಲಿಲ್ಲ. ದೇವರ ಹಣೆಯ ಮೇಲೆ ಮೂರುನಾಮವನ್ನು ಯಾವ ವಿನ್ಯಾಸದಲ್ಲಿ ಹಾಕಬೇಕು ಎಂಬ ಬಗ್ಗೆ ಇರುವ ತೆಂಕಲೆ ಬಡಗಲೆ ಜಗಳ ಶತಮಾನಗಳ ಕಾಲ ನಡೆಯಿತು. ಪ್ರಭುತ್ವಗಳು ಕೊಡುವ ಆಶ್ರಯ, ನೀಡುವ ದತ್ತಿದಾನ ಚಿನ್ನ ಸಂಪತ್ತು ಈ ಕಲಹ ಹುಟ್ಟಿಸುತ್ತದೆ. ಅನೇಕ ಸೂಫಿಗಳ ವಿಷಯದಲ್ಲೂ ಇದು ಸಂಭವಿಸಿತು. ಮೈಸೂರು ಒಡೆಯರು ಸ್ಪರ್ಧೆಯ ಮೇಲೆ ರಾಜಮುಡಿ ಕೃಷ್ಣಮುಡಿ ಎಂಬ ಕಿರೀಟಗಳನ್ನು ಮಾಡಿಸಿಕೊಟ್ಟರು. ಟಿಪ್ಪು ಕೂಡ ಯೋಗಾನರಸಿಂಹ ಗುಡಿಗೆ ಬೆಳ್ಳಿಬಟ್ಟಲು ಕೊಡಿಸಿದನೆಂದೂ ಅವುಗಳ ಮೇಲೆ ಫಾರಸಿಯಲ್ಲಿ ಹೆಸರು ಬರೆದಿದೆಯೆಂದೂ ಅರ್ಚಕರು ಹೇಳಿದರು. ಈಚೆಗೆ ನಮ್ಮ ಬಳ್ಳಾರಿಯ ಗಣಿದೊರೆಗಳು ತಿರುಪತಿಗೆ ಕಿರೀಟ ಮಾಡಿಸಿಕೊಟ್ಟರಷ್ಟೆ. ಸಮಸ್ಯೆಯೆಂದರೆ,ಈ ಆಳುವವರು ಸಮರ್ಪಿಸುವ ಈ ಚಿನ್ನವಜ್ರಗಳು ಮೂಲದೇವರ ಕೀರ್ತಿಯನ್ನೇ ಕುಂದಿಸುವಷ್ಟು ಮೇರೆಮೀರುವುದು. ದಾಳಿಕೋರರನ್ನು ಪ್ರಚೋದಿಸುವುದು. ಒಮ್ಮೆ (೧೪ನೇ ಶತ.) ದೆಹಲಿಯ ಸೇನೆ ಮೇಲುಕೋಟೆಗೆ ದಾಳಿಯಿಟ್ಟಿತ್ತು. ಆಗ ವಿಜಯನಗರದವರು ಆಸರೆಗೆ ಬಂದಿದ್ದರು. ಮತ್ತೊಮ್ಮೆ ಪುಣೆಯ ಪೇಶ್ವೆಗಳು (೧೮ನೇ ಶತ.) ಗುಡಿಗೆ ಮುತ್ತಿಗೆ ಹಾಕಿದ್ದರು. ಪೇಶ್ವೆಗಳು ತೇರನ್ನು ಸಹ ಸುಟ್ಟು ಅದರ ಕಬ್ಬಿಣವನ್ನು ಹೊತ್ತುಕೊಂಡು ಹೋದರೆಂದು ಪುತಿನ ದಾಖಲಿಸುತ್ತಾರೆ. ಆಗ ಹೈದರ್ ಗುಡಿಯ ನೆರವಿಗೆ ಬಂದಿದ್ದ. ಮತ್ತೂ ಮುಂದೆ ನವರಾತ್ರಿ ಉತ್ಸವಕ್ಕೆ ಕುದುರೆ ಸಾರೋಟಿನಲ್ಲಿ ಬಿಜಮಾಡಿಸುತ್ತಿದ್ದ ಬ್ರಿಟಿಶ್ ರೆಸಿಡೆಂಟರು ಬರುತ್ತಿದ್ದರು. ಆಗ ಜನ ಬಿಳಿಯ ದೊರೆಯನ್ನು ದೈನ್ಯಬಟ್ಟು ನೋಡುವುದನ್ನು ಪುತಿನ ದುಗುಡದಿಂದ ಹೇಳುತ್ತಾರೆ. ಭಕ್ತಿಕವಿಯಾದ ಪುತಿನ ಅವರಿಗೆ ಪ್ರಭುತ್ವಗಳು ಕೊಡಮಾಡುವ ದಾನ ಮತ್ತು ದಾಳಿ ಎರಡರ ಮುಖವೂ ಗೊತ್ತು. ಅದಕ್ಕೆಂದೇ ಅವರು ತನ್ನಪಾಡಿಗೆ ತಾನು ಗುಡಿಯ ಮುಂದೆ ರಂಗವಲ್ಲಿ ಬಿಡುವ ಮುದುಕಿಯ ಸರಳ ಭಕ್ತಿ ಎಲ್ಲರಿಗಿಂತ ದೊಡ್ಡದು ಎಂದು ಹೇಳತೊಡಗಿದರು; ವೈಷ್ಣವ ಜನತೋ ಹಾಡಿಸುತ್ತಿದ್ದ ಗಾಂಧಿಯವರನ್ನು ಗರುಡನಿಗೆ ಹೋಲಿಸಿ ಪದ್ಯ ಬರೆದರು ಅನಿಸುತ್ತದೆ.

ಮೇಲುಕೋಟೆಯಲ್ಲಿ ಕಾಣುವ ಸಾಮಾನ್ಯ ದೃಶ್ಯವೆಂದರೆ, ದೂರದಿಂದಲೇ ಕಾಣುವಂತೆ ತೆಂಕಲೆ ನಾಮವನ್ನು ಧರಿಸಿ ಬೀದಿಯಲ್ಲಿ ತಿರುಗಾಡುವ ಪುರೋಹಿತರು. ಪುತಿನ ಕೂಡ ಪುರೋಹಿತ ಮನೆಯವರೇ. ಮೇಲುಕೋಟೆ ಕರ್ನಾಟಕದಲ್ಲಿರುವ ತಮಿಳು ವೈಷ್ಣವ ಸಂಸ್ಕೃತಿಯ ವಿಶಿಷ್ಟ ದ್ವೀಪ. ಇಲ್ಲಿನ ವಾನಮಾವಲೈ ಮಠ, ಮೊದಲಿಯಾಂಡಾನ್ ತಿರುಮಾಳಿಗೈ ಭವನ, ಆಂಡವನ್ ಆಶ್ರಮ, ಅಯ್ಯಂಗಾರರ ತಮಿಳು, ರಾಮಾನುಜರು ಹಾಕಿದ ಕಟ್ಟುಗಳ ಪ್ರಕಾರ ನಡೆಯುವ ಚೆಲುವನಾರಾಯಣನ ಪೂಜೆ, ಈಗಲೂ ಇರುವ ಐಂಬತ್ತಿರುವಲ್ ಎಂಬ ರಾಮಾನುಜರು ನೇಮಿಸಿದ ಅಧಿಕಾರಿಗಳ ಪರಂಪರೆ- ಇವೆಲ್ಲವೂ ತಮಿಳು ಸಂಸ್ಕೃತಿಯನ್ನು ಸೂಚಿಸುತ್ತವೆ. ನಾನು ಹೋದದಿನ ಸಂಜೆ ಚೆಲುವನಾರಾಯಣನ ಗುಡಿಯಲ್ಲಿ ಶೆಲ್ವಪಿಳ್ಳೆಯ ಮೆರವಣಿಗೆ ನಡೆದಿತ್ತು. ಮೇಲುಕೋಟೆ ಪಂಚೆಯುಟ್ಟು, ಸೊಂಟವಸ್ತ್ರ ಬಿಗಿದು, ಬರಿಮೈಯಲ್ಲಿ ನಿಂತ ಪುರೋಹಿತರು, ತಮಿಳಿನಲ್ಲಿ ಶಾತ್ತುಮೊರೆ ಗೋಷ್ಠಿ ನಡೆಸುತ್ತಿದ್ದರು. ಸಂಸ್ಕೃತ ಮಂತ್ರಗಳ ಬದಲು ಆಳ್ವಾರರು ದ್ರಾವಿಡ ಭಾಷೆಯೊಂದರಲ್ಲಿ ರಚಿಸಿದ ಪಾಶುರಗಳ ಗಾಯನ ಕೇಳುವುದಕ್ಕೆ ಸಂತೋಷವಾಗುತ್ತಿತ್ತು. ಇನ್ನೂ ಸಂತೋಷವಾಗಿದ್ದು ಪುರೋಹಿತರು ಸೇರಿ ಮಾಡುತ್ತಿದ್ದ ಚರ್ಚೆ ಕೇಳಿ. ಆಗ ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾಗಿದ್ದು, ಅರ್ಚಕರು ಕಲೆತು ಜಯಲಲಿತಾ ಯಾವ ನಿಲುವು ತೆಗೆದುಕೊಳ್ಳಬಹುದೆಂದು ಬಿಸಿಬಿಸಿಯಾಗಿ ವಾದಿಸುತ್ತಿದ್ದರು. ಜಯಲಲಿತಾ ಮೇಲುಕೋಟೆಯ ಮಗಳು.

ಈ ತಮಿಳು ಶ್ರೀವೈಷ್ಣವ ಸಂಸ್ಕೃತಿಗೆ ವಿಚಿತ್ರವಾದ ಇತರೆ ಆಯಾಮಗಳೂ ಇವೆ. ಅವನ್ನು ಮುಸ್ಲಿಂ, ಒಕ್ಕಲಿಗ ಮತ್ತು ದಲಿತ ಆಯಾಮ ಎನ್ನಬಹುದೊ ಏನೋ?

ಬೀಬಿ ನಾಚ್ಚಿಯಾರ್೧. ಮೇಲುಕೋಟೆಗೆ ಮುಸ್ಲಿಂ ಆಯಾಮವು ಬೀಬಿನಾಚ್ಚಿಯಾರಳಿಂದ ಬಂದುದು. ವರನಂದಿ ಎಂದು ಕರೆಯಲಾಗುವ ನಾಚ್ಚಿಯಾರ್, ಮೂಲತಃ ದೆಹಲಿ ಸುಲ್ತಾನರ ರಾಜಕುವರಿಯಂತೆ. ಅವಳ ಬಳಿಯಿದ್ದ ಶೆಲ್ವಪಿಳ್ಳೆಯ ಮೂರ್ತಿಯನ್ನು ಆಚಾರ್ಯರು ಸುಲ್ತಾನನಿಗೆ ಹೇಳಿ, ದೆಹಲಿಯಿಂದ ಮೇಲುಕೋಟೆಗೆ ತಂದರು. ಅದನ್ನು ಬಹಳ ಪ್ರೀತಿಸುತ್ತಿದ್ದ ನಾಚ್ಚಿಯಾರ್, ಅಗಲಿಕೆ ಸಹಿಸಲಾರದೆ ಹಿಂದೆಯೇ ಮೇಲುಕೋಟೆಗೆ ಬಂದಳಂತೆ. ಅವಳನ್ನು ಪುರೋಹಿತರು ಊರಹೊರಗೇ ತಡೆದ ಕಾರಣ, ಅಲ್ಲೇ ನೆಲೆಸಿ ಆಕೆ ಹೊರಗಮ್ಮ ಆದಳು. ಈಗಲೂ ಊರಹೊರಗೆ ಅವಳ ನೆನಪಿನಲ್ಲಿ ಹೊರಗಮ್ಮನ ಗೋಪುರವಿದೆ. ಆದರೆ ಆಕೆ ಛಲದಿಂದ ಬೆಟ್ಟದ ಅಡಿಯಿಂದ ದಾರಿಮಾಡಿಕೊಂಡು ಗುಡಿಯನ್ನು ಹೊಕ್ಕು ಚೆಲುವರಾಯನಲ್ಲಿ ಐಕ್ಯಳಾದಳಂತೆ. ಅದಕ್ಕಾಗಿ ಅವಳಿಗೆ ಹೊಕ್ಕಮ್ಮ ಎಂದೂ ಕರೆಯುತ್ತಾರೆ. ಈಗಲೂ ಚೆಲುವರಾಯನ ಕಾಲುಗಳಡಿ ವರನಂದಿಯ ಮೂರುತಿಯಿದೆ. ರಾಮಾನುಜರು ವಿಗ್ರಹವನ್ನು ತಂದ ದಿನವನ್ನು ಈಗಲೂ ಡೆಲ್ಲಿ ಉತ್ಸವವೆಂದು ಆಚರಿಸಲಾಗುತ್ತದೆ. ಕುಲೋತ್ತಂಗ, ದೆಹಲಿ ಸುಲ್ತಾನ, ವಿಷ್ಣುವರ್ಧನ, ಮೈಸೂರು ಒಡೆಯರು, ಟಿಪ್ಪುಸುಲ್ತಾನ್, ಪೇಶ್ವೆಗಳು, ಬ್ರಿಟಿಷರು-ಒಟ್ಟಿನಲ್ಲಿ ಶ್ರೀವೈಷ್ಣವ ಮತಕ್ಕೆ ಶಕ್ತಿರಾಜಕೀಯದಿಂದ ಬಿಡುಗಡೆಯೇ ಇಲ್ಲ.

೨. ಸ್ಥಳೀಯ ಆಯಾಮವು ಅದು ಒಕ್ಕಲಿಗರ ನಡುವೆ ಇರುವ ಕಾರಣದಿಂದಲೇ ಬಂದುದು. ಮೇಲುಕೋಟೆಯಲ್ಲಿರುವ ವೈಷ್ಣವತನವು ಅಗ್ರಹಾರಗಳಲ್ಲಿರುವ ವೈದಿಕತೆಯಂತೆ  ಅತಿ ಮಡಿವಂತಿಕೆಯದ್ದಲ್ಲದ್ದು ಅನಿಸಿತು. ಬೆಳಗ್ಗೆ ಸಂಜೆ ಚೆಲುವ ನಾರಾಯಣನ ಗುಡಿಯ ರಾಜಬೀದಿಯಲ್ಲಿ ಗೌಡುಗಳ ದನ ಎಮ್ಮೆ ಕುರಿಗಳು ಮೇಯಲು ಮೆರವಣಿಗೆ ಹೊರಟಾಗ, ಅವು ಬೀದಿಯಲ್ಲಿ ನಿಂತು ಹರಟುತ್ತಿದ್ದ ಪುರೋಹಿತರನ್ನು ಸವರಿಕೊಂಡೇ ಹೋಗುತ್ತಿದ್ದವು. ಅಡ್ಡಪಂಚೆಯಟ್ಟು ಶರಟು ತೆಗೆಯದೆ ಹೆಗಲಮೇಲೆ ಟವಲನ್ನು ಹಾಕಿಕೊಂಡು ಉತ್ಸವಮೂರ್ತಿಯನ್ನು ಹೊರುವ ಬಂಡಿಕಾರರರನ್ನು (ದೇವಪಾದಗಳನ್ನು) ನೋಡಿದರೇ ಗೊತ್ತಾಗುತ್ತದೆ ಅವರು ಶೂದ್ರರು ಎಂದು. ನಾನು ಸಂಜೆಗತ್ತಲಿನಲ್ಲಿ ಮೇಲುಕೋಟೆಯ ಒಕ್ಕಲಿಗರ ಬೀದಿಯಲ್ಲಿ, ಕುರಿಮೇಕೆಗಳ ಸಿನುಗು ವಾಸನೆಯನ್ನೂ, ಮುದ್ದೆ ಬೇಯುತ್ತ ಹೊರಡುತ್ತಿದ್ದ ಕಂಪಾದ ಆವಿಯನ್ನೂ ಆಘ್ರಾಣಿಸುತ್ತ, ನಾಯಿಗಳ ಬೊಗಳನ್ನು ಆಲಿಸುತ್ತ ಅಲೆದಾಡಿದೆ. ಜಗಲಿಯಲ್ಲಿ ಕುಳಿತು ಅಡುಗೆಮನೆಯಿಂದ ಕರೆಬರುವ ತನಕ ಬೆಟ್ಟದ ಮೇಲಿನ ಯೋಗಾನರಸಿಂಹನ ಗುಡಿಯ ಕಡೇಪೂಜೆಯ ಹೊತ್ತಿಗೆ ಆಗುವ ಗಂಟೆಯ ಸದ್ದನ್ನೂ ಟಿಪ್ಪುನಗಾರಿಯ ನಾದವನ್ನೂ ಕೇಳಿಸಿಕೊಳ್ಳುತ್ತ, ಬೀಡಿ ಸೇದುತ್ತ, ಮೂಡುಮೊಗವಾಗಿ ಕುಳಿತು ಚಂದ್ರೋದಯವನ್ನು ನೋಡುತ್ತ ಕುಳಿತ ಗೌಡುಗಳನ್ನು ನೋಡಿ ಮಾತಾಡಿಸಿದೆ. ಮೇಲುಕೋಟೆಯಲ್ಲಿ ಗುಡಿಸಂಸ್ಕೃತಿಯಲ್ಲದ ಇನ್ನೊಂದೇ ಜಗತ್ತಿದೆ ಎಂದು ತಿಳಿಯಿತು. ಇದು ಗುಡಿಸಂಸ್ಕೃತಿಯನ್ನು ಪೋಷಿಸಿರುವ ದುಡಿಮೆಗಾರ ಜಗತ್ತುಕೂಡ. ಹ್ಞಾಂ. ಹೇಳುವುದು ಮರೆತೆ. ಒಂದು ಕಾಲಕ್ಕೆ ಮೇಲುಕೋಟೆ ನೇಕಾರಿಕೆಗೆ ಖ್ಯಾತವಾದ ಊರು. ಇಲ್ಲಿನ ಮಗ್ಗದ ಶೆಟ್ಟರು ಸುಂದರವಾದ ಕಲಾಬತ್ತಿನ ಪಂಚೆಗಳನ್ನು ನೇಯುತ್ತಿದ್ದರು. ಮೇಲುಕೋಟೆಯಲ್ಲಿರುವ ಗಾಂಧಿವಾದಿ ಶ್ರೀ ಸುರೇಂದ್ರ ಕೌಲಗಿಯವರ ಪ್ರಕಾರ, ಊರುತುಂಬ ಗುಡಿಯ ಗಂಟೆಗಿಂತಲೂ ಹೆಚ್ಚಾಗಿ ಖಟಾಕಟ್ ಎಂಬ ಮಗ್ಗದ ಶಬ್ದ ಅನುರಣಿಸುತ್ತಿತ್ತು. ಈಗಲೂ ಇಲ್ಲಿ ನೇಕಾರ ಬೀದಿಯಿದೆ. ಆದರೆ ಮಗ್ಗದ ಶಬ್ದವಿಲ್ಲ. ಹೀಗಾಗಿ ಚೆಲುವನಾರಾಯಣನಿಗೆ ಪೂಜೆಗೆ ಪಂಚೆಗಳು ಈಗ ತಮಿಳುನಾಡಿನಿಂದ ಬರುತ್ತಿವೆ. ಖಾದಿಯ ಮಾರಾಟ ಮಾಡುವ ಅವರಿಗೆ ಮಗ್ಗಗಳು ನಿಂತಿದ್ದು ತುಂಬ ವಿಷಾದವೆನಿಸಿದೆ.

ಕೋಟೆಯಲ್ಲಿ ಕಂಡ ದಾಸಪ್ಪ೩. ವೈಷ್ಣವ ಗುಡಿಸಂಸ್ಕೃತಿಯಲ್ಲಿ ಸಂಸ್ಕೃತದ ಬದಲು ತಮಿಳು ಪಾಶುರ ಗಾನಕ್ಕೆ ಕಾರಣರಾದವರು ನಮ್ಮಾಳ್ವಾರ್. ನಮ್ಮಾಳ್ವಾರ್, ತಿರುಮಳಿ ಶೆಪ್ಪಿರಾನ್,  ತಿರುಪ್ಪಾಣಿ ಮುಂತಾಗಿ ರಾಮಾನುಜ ಪಂಥದ ಆಳ್ವಾರರೆಲ್ಲ ದಲಿತರು ಮತ್ತು ಶೂದ್ರರು. ಮೇಲುಕೋಟೆಯ ಉತ್ಸವಮೂರ್ತಿ ಶೆಲ್ವಪಿಳ್ಳೆಯನ್ನು ದೆಹಲಿಯಿಂದ ತರುವಲ್ಲಿ ಇಲ್ಲಿನ ದಲಿತರು ರಾಮಾನುಜರಿಗೆ ಬಹಳ ಸಹಕರಿಸಿದರಂತೆ. ಇದಕ್ಕಾಗಿ ಆಚಾರ್ಯರು ಅವರಿಗೆ ‘ತಿರುಕ್ಕುಲ’ ಎಂದು ನಾಮಕರಣ ಮಾಡಿ ವೈರಮುಡಿಯಂದು ೩ ದಿನ ಕಲ್ಯಾಣಿತೀರ್ಥದಲ್ಲಿ ಸ್ನಾನಕ್ಕೆ ಮತ್ತು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರಂತೆ. ಮಂಡ್ಯ ಜಿಲ್ಲೆಯಲ್ಲಿರುವ ಸಾವಿರಾರು ಸಂಖ್ಯೆಯ ದಾಸಪ್ಪಗಳು ದಲಿತರು ಮತ್ತು ವೈಷ್ಣವ ಮತಪ್ರಚಾರಕ್ಕೆ ದೀಕ್ಷೆ ಪಡೆದವರು. ಇವರ ಚಿತ್ರವನ್ನು ಗೊರೂರರ ‘ಗರುಡಗಂಬದ ದಾಸಯ್ಯ’ ಪ್ರಬಂಧದಲ್ಲಿ ನೋಡಬಹುದು. ಗಾಂಧಿಯ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮವನ್ನು ತಾತ್ವಿಕವಾಗಿ ಒಪ್ಪಿದ್ದ ಪುತಿನ ಅವರಿಗೆ ದಲಿತರ ಬಗೆಗಿನ ಸೆಳೆತ ಕೊಂಚ ಇತ್ತು. ಇಲ್ಲದಿದ್ದರೆ ಅವರು ರಥಸಪ್ತಮಿ ಉತ್ಸವದಲ್ಲಿ “ಜನಜಾತ್ರೆಯಿಂದ ಹೊರಗಾಗಿ ಒಂಟಿಯಾಗಿ ಕೊಂಬಿನ ಚೆಲುವನು ಬಿಳಿಯ ದುಪ್ಪಟಿಯನ್ನು ಹೊದೆದು, ಮುಖಕ್ಕೆ ನಾಮವಿಟ್ಟು, ಕಿವಿಗೆ ಜವನ ಸೆಕ್ಕಿ, ಕೊಂಬಿಗೆ ಹೂವನ್ನು ಸುತ್ತಿ ನಿಂತಿರುವ” ಕೊಂಬಿನ ಚೆಲುವನನ್ನು ತನ್ಮಯವಾಗಿ ಬಣ್ಣಿಸುತ್ತಿರಲಿಲ್ಲ; ಅಥವಾ ಧೇನುಕ ಪುರಾಣವನ್ನೂ ಈಚಲುಮರದ ಕೆಳಗೆ ಪ್ರಬಂಧವನ್ನೂ ಬರೆಯುತ್ತಿರಲಿಲ್ಲ. ತರತಮವಿಲ್ಲದೆ ಎಲ್ಲ ವಸ್ತುಗಳ ಮೇಲೆ ಹಾಯುವ ಗರುಡನ ನೆರಳಿಗೆ ಹೋಲಿಸಿ, ಗಾಂಧಿಯನ್ನು ಚಿತ್ರಿಸುತ್ತಿರಲಿಲ್ಲ. ಇಷ್ಟಾಗಿಯೂ ಇಲ್ಲಿ ಅಸ್ಪೃಶ್ಯತೆಯು ಬೇರೆಬೇರೆ ಬಗೆಯಲ್ಲಿ ಉಳಿದುಬಿಟ್ಟಿತು. ಇದಕ್ಕೆ ಸಾಕ್ಷಿ ಜಾತ್ರೆಯಾದ ಬಳಿಕ ನಡೆಯುವ ಪ್ರಾಯಶ್ಚಿತ್ತ ಶುದ್ಧೀಕರಣ ಆಚರಣೆ.

ಆದ್ದರಿಂದಲೇ ಮೇಲುಕೋಟೆಯ ಗುಡಿಸಂಸ್ಕೃತಿಯನ್ನು ಇಲ್ಲಿನ ಒಕ್ಕಲಿಗರು, ನೇಕಾರರು, ದಲಿತರು ಚಿತ್ರಿಸಿದರೆ ಹೇಗಿರಬಹುದು ಎಂಬ ಕುತೂಹಲ ಕೊನೆಗೂ ಉಳಿಯುತ್ತದೆ. ಆದರೇನಂತೆ ಜನಪದ ಟ್ರಸ್ಟಿನ ಶ್ರೀ ಕೌಲಗಿಯವರು, ಎಲ್ಲ ಜಾತಿಯ ಜನರನ್ನು ಇಟ್ಟುಕೊಂಡು, ಅವರಿಗೆ ಹೊಸಬದುಕನ್ನು ಕೊಡಲು ಯತ್ನಿಸಿದಂತೆ ಕಾಣುತ್ತದೆ. ಬೀದರ್ ಕಡೆಯ ಕಾಲಿಲ್ಲದ ತರುಣನೊಬ್ಬ ಅಲ್ಲಿ ತರಬೇತಿ ಪಡೆದು, ತನ್ನಕಾಲಮೇಲೆ ನಿಂತಿರುವುದನ್ನು ಅಲ್ಲಿ ನೋಡಿದೆ.

ನಾನು ಮೇಲುಕೋಟೆಯಲ್ಲಿ ಪುಳಿಯೋಗರೆ ತಿನ್ನುವ ಗುಪ್ತ ಆಸೆಯಿಟ್ಟುಕೊಂಡು ಹೋದವನು. ಭೋಜನದ ಪರಿಭಾಷೆಯನ್ನು ಬಳಸುವ ಪುತಿನ ಸಾಹಿತ್ಯದಲ್ಲಿ ರಸದ ಚರ್ಚೆ ಬಹಳ ಬರುತ್ತದೆ. ಪುತಿನ ಕೂಡ ‘ಮೇಲುಕೋಟೆಯ ಪ್ರಾಚೀನ ಬಾಣಸಿಗರಿಗೆ ವಯಸ್ಸಾಗಿದೆ. ಅವರು ವೈಕುಂಠವಾಸಿಗಳಾಗುವ ಮುನ್ನವೇ ಅವರ ಕೈಯ ರುಚಿಯನ್ನು ಸವಿಯೋಣ ಬನ್ನಿ’ ಎಂದು ತಮ್ಮ ಗೆಳೆಯರನ್ನು ಕರೆದುಕೊಂಡು ಹೋಗಿದ್ದನ್ನು ಮೂರ್ತಿರಾಯರಲ್ಲಿ ಓದಿದ್ದೆನಷ್ಟೆ. ಸರಿ, ಸಂಜೆ ತಿರುಗಾಡುತ್ತ ಬೀದಿಬದಿ ತಯಾರಾಗುವ ಆಂಬೊಡೆ ಸವಿಯುತ್ತ ಹೋದೆ. ಯಾರನ್ನು ಕೇಳಿದರೂ ನಿಜವಾದ ಪುಳಿಯೋಗರೆ ತಿನ್ನಬೇಕಾದರೆ, ಸುಖಭೋಜನಕ್ಕೆ ಹೋಗಿ ಎಂದೇ ಹೇಳುತ್ತಿದ್ದರು. ‘ಸುಖಭೋಜನ’ ಒಂದು ಸಣ್ಣ ಹೋಟೆಲಿನ ಹೆಸರು. ಅಲ್ಲಿ ಮಾಡುವುದು ಒಂದೇ ಅಡುಗೆ-ಅದು ಪುಳಿಯೋಗರೆ. ಆದರೆ ಅಲ್ಲಿ ರಾತ್ರಿ ಸರ್ವೀಸ್ ಇರಲಿಲ್ಲ. ಹೀಗಾಗಿ ನಾನೂ ನನ್ನ ಮಿತ್ರನೂ ಅಲ್ಲಿನ ಒಬ್ಬ ಅಯ್ಯಂಗಾರರ ಮನೆಯಲ್ಲಿ ರಾತ್ರಿ ಊಟಕ್ಕೆ ಬರುತ್ತೇವೆಂದು ಹೇಳಿ ಒಪ್ಪಿಸಿದೆವು. ಚೆನ್ನಾಗಿ ದಣಿದು ಹಸಿದು ಹೋದರೆ ನಿರಾಶೆಯಾಯಿತು. ತಣ್ಣಗಿನ ಅನ್ನಕ್ಕೆ ಪುಳಿಯನ್ನು ಕಲಸಿ, ಅದು ಒಣಗಿಹೋಗಿತ್ತು. ಸೀಪೊಂಗಲೊಂದು ಚೆನ್ನಾಗಿತ್ತು.

ಮೇಲುಕೋಟೆಯ ಪುರೋಹಿತ ದಂಪತಿ

ಹೀಗಾಗಿ ಬೆಳಕು ಹರಿಯುತ್ತಿದ್ದಂತೆ, ಸುಖಭೋಜನಕ್ಕೆ ಹಾಜರಿಕೊಟ್ಟೆವು. ಹೋಟೆಲಿಗೆ ಹಾಕಿದ ಬೋರ್ಡೇ ಆಕರ್ಷಕವಾಗಿತ್ತು. ಒಬ್ಬ ಹಿರಿಯ ಬಾಳೆಲೆ ತುಂಬ ಅಡುಗೆ ಬಡಿಸಿಕೊಂಡಿದ್ದಲ್ಲದೆ ಮತ್ತಷ್ಟು ಬಡಿಸಲು ಭಟ್ಟರಿಗೆ ಹೇಳುತ್ತಿದ್ದಾನೆ. ಅಷ್ಟರಲ್ಲಿ ಒಂದು ಮಗು ಅವನ ಎಲೆಗೆ ಕೈಹಾಕಿದ್ದು, ಅದನ್ನು ಆತ ತುಡುಕಿ ಹಿಡಿದಿದ್ದಾನೆ. ಧಾರ್ಮಿಕ ಆಚರಣೆಯ ಊರುಗಳಲ್ಲಿ ಜನ ಎಷ್ಟೊಂದು ಹಾಸ್ಯಪ್ರಜ್ಞೆ ಪ್ರಕಟಿಸುತ್ತಾರೆ! ಹೋಟೆಲೊಳಗೆ ಹೋದರೆ, ಐದಾರು ಪಡ್ಡೆಗಳು ಮುಂಗಾರು ಮಳೆ ಹಾಡುಹೇಳಿಕೊಂಡು ಅಲ್ಲಲ್ಲಿ ಕುಳಿತಿದ್ದವು. ಹೋದ ಎಷ್ಟೊ ಹೊತ್ತಿನ ಬಳಿಕ ಬಂದು ಏನು ಬೇಕೆಂದು ಕೇಳಿದವು. ಆತಿಥ್ಯದ ಲಕ್ಷಣವೇ ಇರಲಿಲ್ಲ. ಬಡಿಸುವವರೇ ಹೀಗಿದ್ದರೆ ಇನ್ನು ಇವರ ಕೈಯಡಿಗೆ ಹೇಗಿದ್ದೀತು ಎಂದು ಅನುಮಾನದಿಂದ ಒಂದೇ ಪ್ಲೇಟು ಆರ್ಡರ್ ಮಾಡಿದೆವು. ಬಂದ ಪುಳಿಯೋಗರೆ ಮಾತ್ರ ಅದ್ಭುತವಾಗಿತ್ತು. ರಾತ್ರಿ ನಿರಾಶೆಯ ಸೇಡನ್ನು ತೀರಿಸಿಕೊಂಡೆವು. ಉಂಡು ಬಿಲ್ಲುಕೊಡುವಾಗ ಅನುಮಾನ ಬಂದು ‘ನೀವು ಅಯ್ಯಂಗಾರರೇ’ ಎಂದಾಗ ‘ಇಲ್ಲ ಸಾ, ಮಂಡ್ಯ ಕಡ್ಯೋರು. ಈಗ ಅಯ್ಯಂಗಾರರಿಗಿಂತ ನಮ್ಮ ಗೌಡುಗಳೇ ಒಳ್ಳೇ ಪುಳಿಯೋಗರೆ ಮಾಡೋದು’ ಎಂದು ಶರಾ ಹೇಳಿದವು.

ನನಗೆ ಸಾಧ್ಯವಾದರೆ, ಪುತಿನರ ‘ಯದುಗಿರಿಯ ಮೌನವಿಕಾಸ’ ಕವಿತೆಗೆ ಕಾರಣವಾದ ಜಾಗವನ್ನು ನೋಡುವ ಹಂಬಲವಿತ್ತು. ನನ್ನ  ಪ್ರಿಯವಾದ ಪದ್ಯವದು. “ಮೂಡಣ ಕಣಿವೆಯ ಹಿಮದವಕುಂಠನ ರವಿಕರಸ್ಪರ್ಶಕೆ ಜಾರುತಿದೆ; ನಾಡದೊ ಹಿಗ್ಗುತ ನಾಚುತ ಮೆಲ್ಲನೆ ಮೈಸಿರಿಯನು ತಾ ತೋರುತಿದೆ; ಹಿಮತುಂಬಿದ ಕಣಿವೆಯು  ಭೂಹೆಣ್ಣಿನ ಮುಖಪರದೆಯಂತಿದೆಯಂತೆ.” ಅದು ರವಿಕರ ಸ್ಪರ್ಶ ಮಾಡತೊಡಗುತ್ತಿದ್ದಂತೆ, ನಿಧಾನಕ್ಕೆ ಜಾರತೊಡಗಿದೆ. ‘ಕರ’ ಎಂಬುದಕ್ಕೆ ಇರುವ ಕಿರಣ ಮತ್ತು ಕೈ ಎಂಬ ಎರಡರ್ಥಗಳನ್ನು ಪದ್ಯ ಅದ್ಭುತವಾಗಿ ಬಳಸಿಕೊಂಡಿದೆ.  ಪೋಲಿರವಿ ಭೂಮಿಯ ಮುಖಪರದೆಯ ಎತ್ತತೊಡಗಿದೊಡನೆ, ಆಕೆ ನಾಚುತ ತನ್ನ ಮೈಯನ್ನು ತೋರತೊಡಗುತ್ತಾಳೆ-ಸುಖಪೂರ್ವದ ತನ್ಮಯತೆಯಲ್ಲಿ. ಕೃಷ್ಣನ ಕಥೆ ಬರೆದ ಮತ್ತು  ಸಂಸ್ಕೃತಸಾಹಿತ್ಯವನ್ನು ಆಳವಾದ ಓದಿದ್ದ ಪುತಿನ ರಸಿಕರು. ನನಗೆ ಈ ಪದ್ಯವು-ಕೊಡಚಾದ್ರಿಯೊಂದನ್ನು ಬಿಟ್ಟು-ಯಾವುದೇ ಬೆಟ್ಟದ ಮೇಲೆ ಹತ್ತಿ ಸೂರ್ಯೋದಯ ನೋಡುವ ಹೊತ್ತಿಗೆ ನೆನಪಾಗುತ್ತದೆ. ಕೊಡಚಾದ್ರಿಯಲ್ಲಿ ರವಿಯು ಕರಸ್ಪರ್ಶ ಮಾಡಿದರೆ ಏನೂ ಆಗುವುದಿಲ್ಲ. ಸ್ವತಃ ಅವನೇ ಹಿಮದ ಬಲೆಯಲ್ಲಿ ಸಿಲುಕಿ ಒದ್ದಾಡುವ ಗಂಡುಜೇಡನಂತೆ ಅಸಹಾಯಕನಾಗಿ ತೋರುತ್ತಾನೆ.

ನನಗೆ ಪದ್ಯದ ಮೊದಲನೇ ಭಾಗವು ಎಷ್ಟು ಆಪ್ತವಾಗಿ ಮನಸ್ಸಿನೊಳಗೆ ಕೂತಿದೆಯೆಂದರೆ, ನಂತರ ಯದುಗಿರಿಯ ಮೌನದಲ್ಲಿ ಆಗುವ ವಿಕಾಸದ ಬಗೆಗಿನ ಭಾಗವು ಮಸುಕಾಗಿ ಹೋಗಿದೆ. ಈ ಅನುಭವ ನನಗೂ ಆದರಾಗಲಿ ಎಂದು ನಾನು ಬೆಳಗಿನ ಜಾವವೇ ಎದ್ದು, ಕತ್ತಲಿರುವಾಗಲೇ ಯದುಗಿರಿಯ ತುದಿಗೆ ಬಂದು ಕೂತಿದ್ದೆ. ಕಣಿವೆಯಾಚೆ ಇನ್ನೂ ಮಲಗಿರುವ ಊರುಗಳು, ಆರ್ತಸ್ವರದಲ್ಲಿ ಕೂಗುವ ನವಿಲುಗಳು, ಇನ್ನೂ ಕತ್ತಲೆಯಲ್ಲಿ ಮುಳುಗಿ ಮೇಲೇಳಲು ಹೆಣಗುತ್ತಿರುವ ಊರದೀಪಗಳು, ಆಗಸದಲ್ಲಿ ಇನ್ನೂ ತೊಲಗಿರದ ತಾರೆಗಳು, ಕೆಂಪಡರುತ್ತಿರುವ ಸೂರ್ಯದಿಕ್ಕು. ನನಗೆ ಅದೃಷ್ಟವಿರಲಿಲ್ಲ. ಮೂಡಣದಲ್ಲಿ ಆದಿನ ಬಹಳ ಮೋಡಗಳು. ಸೂರ್ಯನನ್ನು ಹುಲ್ಲಿನಲ್ಲಿ ಸೂಜಿಹುಡುಕಿದಂತೆ ಹುಡುಕಬೇಕಿತ್ತು. ಮೈದೋರಲು ಭೂಮಿಯಲ್ಲ, ಸ್ವತಃ ಸೂರ್ಯನೆ ನಾಚುತ್ತಿದ್ದ. ಹಿಮದ ಅವಕುಂಠನವಂತೂ ಮೊದಲೆ ಇರಲಿಲ್ಲ. ಬಹುಶಃ ಪುತಿನ ಚಳಿಗಾಲದಲ್ಲಿ ಈ ದೃಶ್ಯ ಕಂಡಿರಬಹುದು. ಈಗ ಮೂಡಣದ ಬಯಲಲ್ಲಿ ಹೊಲಗಳೂ ಅವುಗಳ ಬದುವಿನ ಮೇಲಿದ್ದ ಗೋಣಿಮರಗಳೂ ಕಾಣುತ್ತಿದ್ದವು ಪಡುವಣಕ್ಕೆ ನೋಡಿದರೆ, ಕೆಂಪುಹಂಚಿನ ಮನೆಗಳ ಊರು ಸುಂದರವಾಗಿ ಕಂಡಿತು.

ಮೇಲುಕೋಟೆ ನಮ್ಮ ಎಲ್ಲ ಹಳ್ಳಿಗಳಂತೆಯೇ ಸಂಜೆ ಮತ್ತು ಬೆಳಗಿನ ಮಸುಕಿನಲ್ಲಿ ಸುಂದರವಾಗಿ ಕಂಡು, ಹಗಲು ತನ್ನೆಲ್ಲ ಕೊಳಕು ಗಲೀಜುಗಳ ಸಮೇತ ಪ್ರತ್ಯಕ್ಷವಾಗುತ್ತದೆ. ಅಕ್ಕತಂಗಿಯರ ಕೊಳದಿಂದ ಬರುವಾಗ ಪಡುವಣ ದಿಕ್ಕಿನ ಕಣಿವೆ ಬಹಳ ಸುಂದರವಾಗಿದೆ ಎಂದು ಇಳಿಯಲು ಹೋದೆ. ಇಳಿಯದಂತೆ ದಂಡೆಯುದ್ದಕ್ಕೂ ಕಸದ ಕುಪ್ಪೆಗಳು. ಅದರಲ್ಲಿಯೂ ಪುಣ್ಯಕ್ಷೇತ್ರಗಳಲ್ಲಿ ನಾನಾ ಕಾರಣಕ್ಕೆ ಕಸ ಹೆಚ್ಚು ಹುಟ್ಟುತ್ತದೆ. ಪುತಿನ ಹೇಳುವುದು ನೋಡಿದರೆ, ಮೇಲುಕೋಟೆ ೩೬೫ ದಿನಗಳೂ ಪೂಜೆ ಉತ್ಸವ ನಡೆಯುವ ಗುಡಿಯೂರು. ಆದರೆ ಒಂದೇ ರೀತಿಯ ಎಲ್ಲ ಆಚರಣೆಗಳು ಒಂದು ಘಟ್ಟಕ್ಕೆ ಯಾಂತ್ರಿಕವಾಗುತ್ತವೆ. ಈ ಯಾಂತ್ರಿಕತೆ ಅಲ್ಲಿಯೇ ಹುಟ್ಟಿಬೆಳೆದವರಲ್ಲಿ ಒಂದು ಬಗೆಯ ಜಡತೆಯನ್ನು ಬೆಳೆಸುತ್ತದೆ. ನಾನು ಅಜ್ಮೀರ್, ಹರಿದ್ವಾರ, ಗೋಕರ್ಣಗಳಲ್ಲಿ ಇದನ್ನು ಕಂಡಿರುವೆ. ಈ ಜಡತೆ ಮುರಿಯಲು ಅಲ್ಲಿ ಕೆಲವು ವಿಚಿತ್ರ ದುಡುಕುಗಳೂ ನಡೆಯುತ್ತವೆ. ಪುತಿನ ಮನೆಗೆ ಹೋದಾಗ ಕರೆಂಟು ಹೋಗಿ ಕತ್ತಲಾಗಿತ್ತು. ಮನೆಕಟ್ಟೆಯ ಮೇಲೆ ಊರಿನ ಪಡ್ಡೆ ಹುಡುಗರು ಸೇರಿಕೊಂಡು ಹೊಗೆ ಸೇದುವ ರಿಹರ್ಸಲ್ ನಡೆಸುತ್ತಿದ್ದರು. ಕಲ್ಯಾಣಿಯ ನೀರಿಗೆ ಕಟ್ಟಿರುವ ಹಾವಸೆಯ ಮೇಲೆ ಬರೆಯಬಲ್ಲ ಪುತಿನ ಅವರಿಗೆ ಊರುಗಳಲ್ಲಾಗುವ ಪರಿವರ್ತನೆಯ ಕಠೋರ ಸತ್ಯ ಗೊತ್ತಿದ್ದಿರಬಹುದು. ಎಂತಲೇ ಅವರು ಒಂದುಕಡೆ ನಿಡುಸುಯ್ಯುತ್ತ ಬರೆಯುತ್ತಾರೆ: “ಇಂಥ ಗುಡಿಯೂರುಗಳು ಈಗ ಕಷ್ಟದಿಂದಲೇ ಬಾಳಬೇಕಾಗಿದೆ-ಬಂಡೆಗೆ ಅಂಟಿಕೊಂಡಿರುವ ಕಲ್ಲುಹೂವಿನ ಜೀವದಂತೆ” ಎಂದು.

ಪುತಿನ ದೇವರ ಸೇವೆಯಲ್ಲಿ ಜನರು ಹಿಂದಿನ ಶ್ರದ್ಧೆಭಕ್ತಿ ಕಳೆದುಕೊಳ್ಳುತ್ತಿರುವುದನ್ನು ಮತ್ತೆಮತ್ತೆ ಹೇಳುತ್ತಾರೆ. ಆದರೆ ಯಾಕೆ ಭಕ್ತಿಯ ಇಳಿಮುಖವಾಗುತ್ತಿದೆ ಎಂಬುದರ ಕಾರಣಾನ್ವೇಷಣೆ ಮಾಡುವುದಿಲ್ಲವಾಗಿ, ಅವರ ವೇದನೆ ಮುದುಕರ ಗೊಣಗಾಟದಂತೆ ತೋರುತ್ತದೆ.  ಭಕ್ತರಾಗಿಯೊ ಪ್ರವಾಸಿಗರಾಗಿಯೋ ಬಂದವರಿಗೆ ಪುಣ್ಯಕ್ಷೇತ್ರಗಳಲ್ಲಿ ಸಿಗುವ ಹೊಸ ಅನುಭವ ಮತ್ತು ರೋಮಾಂಚನವೇ ಬೇರೆ. ಯಾವುದೊ ದೂರದ ನಗರದಿಂದ, ಅತ್ಯಾಧುನಿಕ ಬದುಕನ್ನು ಬದುಕುತ್ತಿರುವ ಅಯ್ಯಂಗಾರ್ ದಂಪತಿಗಳು, ಇಂಗ್ಲಿಷಿನಲ್ಲಿ ಮಾತಾಡುತ್ತ, ಸಾಂಪ್ರದಾಯಕ ವೇಷಧರಿಸಿ, ಪೂಜೆ ಮಾಡಲೆಂದು ಉತ್ಸಾಹದಿಂದ ಕಾರಿಳಿದು ಗುಡಿಯೊಳಗೆ ಹೋಗುತ್ತಿದ್ದರು. ಮಾತಾಡಿಸಿದೆ. ಅವರಲ್ಲಿ ಭಕ್ತಿಯ ಸಂಭ್ರಮ ತುಳುಕುತ್ತಿತ್ತು. ಇದೇ ಊರಲ್ಲಿ ಆಧುನಿಕ ವಿದ್ಯಾಭ್ಯಾಸ ಪಡೆದೂ ನಾನಾ ಕಾರಣದಿಂದ ಹೊರಗೆ ಹೋಗಲಾಗದೆ ಇರುವ ಕೆಲವು ತರುಣರ ಜತೆಗೂ ಮಾತಾಡಿದೆ. ಅವರಿಗೆ ಊರು ತಮ್ಮ ಚೈತನ್ಯವನ್ನು ಬಂಧಿಸಿರುವ ಕೋಟೆ ಎಂಬ ಸಿಟ್ಟು ಇದ್ದಂತಿತ್ತು. ಇಲ್ಲಿ ಹೊಸಬದುಕು ಕಷ್ಟ ಎಂಬ ಖಿನ್ನತೆಯಿದ್ದಂತ್ತಿತ್ತು. ಯದುಗಿರಿಯ ಮೇಲಿಂದ ಕಂಡ ಸೂರ್ಯೊದಯ ನನಗೂ ಪುತಿನ ಅವರಿಗೂ ಭಿನ್ನವಾಗಿ ಕಾಣಲು ಕಾರಣ, ನಾವು ನೋಡಿದ ಸಮಯವೊ ಅಥವಾ ದೃಷ್ಟಿಕೋನವೊ ತಿಳಿಯದೆ ಹೋಯಿತು. ಆದರೆ ಎಲ್ಲ ಡೆಡ್‌ಎಂಡ್ ಊರುಗಳಲ್ಲೂ ಜಡತೆಯೊಳಗೇ ಜೀವಂತಿಕೆ ಪುಟಿಸುವ ಯಾವ್ಯಾವುದೋ ಸ್ರೋತಗಳಿರಬಹುದು. ಎರಡು ದಿನದ ಪ್ರವಾಸಿಗನಾದ ನಾನು ಹೇಗೆತಾನೇ ಹೇಳಬಲ್ಲೆ?

[ಚಿತ್ರಗಳು-ಲೇಖಕರದು]