ಆಧುನಿಕ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇರುವುದಿಲ್ಲ. ಒಂದುವೇಳೆ ಹಿಂಬಾಗಿಲು ಇದ್ದರೂ, ಅದರ ವಿನ್ಯಾಸದಲ್ಲಿ ಎಷ್ಟೊಂದು ಒಪ್ಪ ಓರಣ ಇರುತ್ತದೆ. ಕಾಲ ಬದಲಾದಂತೆ ಹಿಂಬಾಗಿಲ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಹಿಂದಿನ ಕಾಲದ ಮನೆಗಳಲ್ಲಿ ಒಪ್ಪ ಓರಣಕ್ಕೆ ಆದ್ಯತೆಯಿಲ್ಲದ ಹಿಂಬಾಗಿಲುಗಳ ಬಳಿಯೇ ಹೃದಯ ಬಿಚ್ಚಿ ಮಾತನಾಡುವ ‘ತಾವು’ ಇರುತ್ತಿತ್ತು. ಹಿಂಬಾಗಿಲುಗಳ ಈ ಲೋಕವು ಮನೆಗಷ್ಟೇ ಸೀಮಿತವೇ? ಅಲ್ಲ, ಹಿಂಬಾಗಿಲಿಗಿಷ್ಟು ಜಾಗ ಕೊಟ್ಟರೆ ಅಲ್ಲೊಂದು ವಿಶಾಲ ಜಗತ್ತೇ ಕಾಣುವುದು.
ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ‘ಹಿಂಬಾಗಿಲ’ ಲಹರಿಯೊಂದು ಇಲ್ಲಿದೆ.
ಇತ್ತೀಚೆಗಷ್ಟೇ ಆಸ್ಪತ್ರೆಯೊಂದರ ಪ್ರಧಾನ ಬಾಗಿಲಿನಲ್ಲಿ ಅಂದರೆ ಗಾಜಿನ ಬಾಗಿಲಿನ ಮೇಲೆ ಅಂಟಿಸಿದ ಸೂಚನೆಯೊಂದು ಗಮನ ಸೆಳೆಯಿತು. ‘ಸೀಮಿತ ಜನರಿಗೆ ಮಾತ್ರ ಒಳಗೆ ಪ್ರವೇಶ. ಸುರಕ್ಷತೆಯ ತಪಾಸಣೆಗಳು ಮುಗಿದ ನಂತರವಷ್ಟೇ ರೋಗಿಯ ಸಹಾಯಕರು ಒಳಗೆ ಪ್ರವೇಶಿಸಬಹುದು’ ಎಂಬ ಸೂಚನೆಯದು. ಹಾಗಿದ್ದರೆ ಆಸ್ಪತ್ರೆಯಿಂದ ದಾಖಲೆ ಪತ್ರವನ್ನು ಪಡೆಯಲು ಬರುವವರು, ಸಾಮಾನ್ಯ ಚೆಕ್ ಅಪ್ ಗೆಂದು ಬರುವವರು, ರಕ್ತದಾನಕ್ಕೆ, ಹಣ್ಣುಹಂಪಲು ನೀಡಲು ಬರುವವರು ಹೇಗೆ ಒಳಕ್ಕೆ ಪ್ರವೇಶಿಸುವುದು ಎಂದು ತಬ್ಬಿಬ್ಬಾಗಿ ನಿಂತವರಿಗೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಹೇಳಿದರು: ‘ಹಿಂಬಾಗಿಲಿನಿಂದ ಹೋಗಿ, ಅಲ್ಲಿ ಒಳಕ್ಕೆ ಪ್ರವೇಶವಿದೆ’
ಹೆಲ್ತ್ ಇನ್ಶ್ಯೂರೆನ್ಸ್ ರಿಜೆಕ್ಟ್ ಆಗಿರುವುದರಿಂದ, ಅಲ್ಲಿ ಇಲ್ಲಿ ಸಾಲ ಮಾಡಿ, ಸಂಪೂರ್ಣ ದುಡ್ಡು ಪಾವತಿಸಿ ಮಗಳನ್ನು ಬಿಡುಗಡೆ ಮಾಡಿಕೊಂಡು ಹೋದವರು ಸುಶೀಲ ಮಾಯಿ. ಈಗ ಮತ್ತೆ ಇನ್ಶೂರ್ ಹಣ ಕೊಡುವಂತೆ ಮನವಿ ಮಾಡಲು ಅಲ್ಲಿಗೆ ಬಂದವರು, ಸೆಕ್ಯುರಿಟಿ ಹೇಳಿದ ಸೂಚನೆಯಂತೆ ಹಿಂಬಾಗಿಲು ಹುಡುಕುತ್ತ ಹೋದರು.
‘ಅರರೆ ಆಸ್ಪತ್ರೆಯಲ್ಲಿಯೂ ಹಿಂಬಾಗಿಲು ಎಂಬ ಪರಿಕಲ್ಪನೆಯಿದೆಯೇ’ ಎಂದು ಅವರಿಗೆ ಅಚ್ಚರಿಯಾಯಿತು. ಅನೇಕ ಆಸ್ಪತ್ರೆಗಳನ್ನು ಅವರು ಜೀವನದಲ್ಲಿ ಕಂಡಿದ್ದರು. ಭಾರೀ ಐಶಾರಾಮಿ ವಿಶೇಷ ಆಸ್ಪತ್ರೆಗಳಲ್ಲಿ, ಅನಾರೋಗ್ಯಗಳ ಕುರಿತ ತಪಾಸಣೆಗೆಂದು ಹೋದಾಗ, ವೆಸ್ಟ್ ಗೇಟ್, ನಾರ್ತ್ ಗೇಟ್ ಎಂದೆಲ್ಲ ದಿಕ್ಕಿಗೊಂದು ಬಾಗಿಲು ಇದ್ದು, ಎಲ್ಲವೂ ಪ್ರಧಾನ ಬಾಗಿಲುಗಳಷ್ಟೇ ಮಹತ್ವ ಪಡೆದಿರುತ್ತವೆ. ಆದರೆ ಹೀಗೆ ಹಿಂಬಾಗಿಲು ಎಂದು ಗುರುತಿಸಿಕೊಂಡಿದ್ದು ಕೋವಿಡ್ ಕಾಲದ ಪರಿಣಾಮವಿರಬೇಕು ಎಂದು ಎನಿಸಿತು.
ಇದು ಆಸ್ಪತ್ರೆಯದ್ದಷ್ಟೇ ಕತೆಯಲ್ಲ, ಕೋವಿಡ್ ತಡೆಯಲು ಲಾಕ್ ಡೌನ್ ಹೇರಿದ್ದ ಸಂದರ್ಭದಲ್ಲಿ ‘ಹಿಂಬಾಗಿಲು’ ಎಂಬೊಂದು ನಿರ್ಲಕ್ಷಿತ, ಆದರೆ ಬಹು ಬಳಕೆಯ ಈ ಬಾಗಿಲಿಗೆ ಹೆಚ್ಚು ಮರ್ಯಾದೆ ಸಿಕ್ಕಿಬಿಟ್ಟಿತು. ಆಗೆಲ್ಲ ಮಧ್ಯಾಹ್ನ 12 ಗಂಟೆಗೇ ಸಾಮಾನ್ಯವಾಗಿ ಅಂಗಡಿಗಳನ್ನು ಮುಚ್ಚಿರುತ್ತಿದ್ದರು. ಆದರೆ ಅಂಗಡಿಯ ಹಿಂಬಾಗಿಲಿನಲ್ಲಿ ಬೇಕು ಬೇಕಾದ್ದೆಲ್ಲವೂ ಸಿಗುತ್ತಿತ್ತಲ್ಲ. ಅದಕ್ಕೇ ಶೇಖರ್ ಪೂಜಾರಿ ಅಂಗಡಿಯ ಹಿಂಬಾಗಿಲಿಗೆ ಒಂದು ಟೇಬಲ್ ಅಡ್ಡ ಇಟ್ಟು, ಅಲ್ಲಿಯೇ ಒಂದು ಕಪಾಟು ಮಾಡಿಸಿ, ಅಗತ್ಯ ವಸ್ತುಗಳನ್ನು ಪೇರಿಸಿಕೊಂಡಿದ್ದರು. ತಮ್ಮ ಅಂಗಡಿಯ ಹಿಂಬಾಗಿಲಿನಲ್ಲಿ ಯಾವ ಲಾಕ್ ಡೌನ್ ಗೂ ಜಗ್ಗದೇ, ದಿನವಿಡೀ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದೆ ಎಂಬ ಸೂಚನೆಯನ್ನು ಗ್ರಾಹಕರಿಗೆ ನೀಡುವುದಕ್ಕಾಗಿ ಮುಂಬಾಗಿಲಿನ ಶಟರ್ ಅನ್ನು ತುಸುವೇ ಎತ್ತಿ ಇಡುತ್ತಿದ್ದರು. ಒಮ್ಮೆ ಶಟರ್ ಹತ್ತಿರ ಬಾಗಿ, ‘ಶೇಖರಣ್ಣಾ.. ಕೊತ್ತಂಬರಿ ಸಿಗಬಹುದಾ..’ ಎಂದು ಗ್ರಾಹಕರೊಬ್ಬರು ಕೂಗಿದ್ದು ಕೇಳಿ, ‘ಆಚೆಯಿಂದ ಬನ್ನಿ. ಕೊಡುವ’ ಎಂದು ಉತ್ತರಿಸಿದ್ದರು. ಆಚೆಯಿಂದ ಬಂದವರು ಪೊಲೀಸಪ್ಪನವರಾಗಿದ್ದರು.
ಮುಂಬಾಗಿಲು ಮುಚ್ಚಿದ್ದರೇನಂತೆ, ಹಿಂಬಾಗಿಲು ತೆರೆದೇ ಇರುತ್ತದೆ ಎಂಬ ಭದ್ರ ಭರವಸೆ ಇರುವುದು ಬಾರುಗಳ ಗ್ರಾಹಕರಿಗೆ. ಹಳ್ಳಿಯಾಗಲೀ, ಪೇಟೆಯಾಗಲೀ, ವೈನ್ ಬಾರ್ ಗಳ ಕುರಿತು ಅಲಿಖಿತ ಜ್ಞಾನವೊಂದು ಗ್ರಾಹಕರಲ್ಲಿ ಇರುತ್ತಿತ್ತು. ‘ಇಷ್ಟೊತ್ತಿಗೆ ಅಂಗಡಿ ತೆರೆದೇ ಇರುತ್ತಾರೆ’ ಎಂಬ ಆ ಭರವಸೆಯನ್ನು ಯಾವ ಕಾಯಿದೆ ಕಟ್ಟಳೆಗಳೂ ಪುಡಿ ಮಾಡುವುದು ಸಾಧ್ಯವಾಗಿಲ್ಲ. ಎಷ್ಟರಮಟ್ಟಿಗೆಯೆಂದರೆ, ಈ ಎರಡು ವರ್ಷಗಳಲ್ಲಿ ಕಂಡ ಲಾಕ್ ಡೌನ್ ನ ದೆಸೆಯಿಂದಾಗಿ ‘ಅಲೋಕ್ ವೈನ್ ಸ್ಟೋರ್’ ಎಂಬ ಅಂಗಡಿಯ ಬದಿಯಲ್ಲಿಯೇ ಒಂದು ಕಾಲುದಾರಿ ನಿರ್ಮಾಣವಾಗಿಬಿಟ್ಟಿತ್ತು. ಈಗ ಲಾಕ್ ಡೌನ್ ನ ಅಡಚಣೆಗಳು ಇಲ್ಲದ ಸಂದರ್ಭದಲ್ಲಿ ಅಲೋಕ್ ವೈನ್ ಸ್ಟೋರ್ ನ ಹಿಂಬಾಗಿಲಿನಲ್ಲಿ ಹೊಸ ಔಟ್ ಲೆಟ್ ತೆರೆಯಲಾಗಿದೆ. ಅದು ಪಾರ್ಸೆಲ್ ಗೆಂದು ಇರುವ ಪ್ರತ್ಯೇಕ ಮಳಿಗೆ.
ಕೋವಿಡೋತ್ತರ ಕಾಲದಲ್ಲಿ ಅಂದರೆ ಕಳೆದೊಂದು ವರ್ಷದಲ್ಲಿ ಮೊಬೈಲ್ ಎಂಬುದು ಜೀವನಾವಶ್ಯಕ ವಸ್ತು ಎಂಬ ಕಿರೀಟ ಧರಿಸಿಕೊಂಡಿದೆ. ಮಕ್ಕಳ ಪಾಠಕ್ಕೋಸ್ಕರ ಮೊಬೈಲ್ ಅನ್ನು ಸರಿಪಡಿಸುವ, ಖರೀದಿಸುವ ಧಾವಂತದಲ್ಲಿ ಪೋಷಕರು, ಮೊಬೈಲ್ ರಿಪೇರಿ ಅಂಗಡಿಗಳ ಮೊಬೈಲ್ ನಂಬರನ್ನೆಲ್ಲ ಸೇವ್ ಮಾಡಿಕೊಂಡಿದ್ದಾರೆ. ಹಾಗೆ, ಕಳೆದ ಜುಲೈ ತಿಂಗಳಲ್ಲಿ ಸುಮತಿ ಮೊಬೈಲ್ ರಿಪೇರಿಗೆಂದು ಕಂಪೆನಿಯ ಅಧಿಕೃತ ಸೇವಾಕೇಂದ್ರಕ್ಕೆ ಹೋದಾಗ, ಸೇವಾಕೇಂದ್ರದ ಬಾಗಿಲಿಗೆ ಬೀಗ ಜಡಿದಿತ್ತು. ಆ ಅಂಗಡಿಯ ಬಾಗಿಲಲ್ಲಿ ಏನಾದರೂ ಚೀಟಿ, ಮಾಹಿತಿ ಇರಬಹುದೇ ಎಂದು ಅವಳು ಪರಿಶೀಲಿಸುತ್ತಿದ್ದಾಗ, ಒಬ್ಬ ವ್ಯಕ್ತಿ ಬಳಿ ಬಂದು, ‘ಮೊಬೈಲ್ ರಿಪೇರಿಗುಂಟಾ?’ ಎಂದು ಕೇಳಿದ. ಹೌದೆಂದಳು ಸುಮತಿ. ‘ಹಾಗಿದ್ದರೆ ನೀವು ಇಲ್ಲಿಂದ ಒಂದೆರಡು ಕಟ್ಟಡಗಳನ್ನು ದಾಟಿ, ಯಾವುದಾದರೂ ಅಂಗಡಿಯ ಮುಂದೆ ನಿಂತಿರಿ. ನಾನು ನಿಮಗೆ ಫೋನ್ ಮಾಡಿದಾಗ ಇಲ್ಲಿಗೆ ಬನ್ನಿ. ನಿಮ್ಮ ಹಾಗೆಯೇ ಮೊಬೈಲ್ ರಿಪೇರಿಗೆ ಬಂದವರು ಆಸುಪಾಸಿನ ಅಂಗಡಿ, ಬಸ್ ಸ್ಟಾಂಡ್ ಗಳಲ್ಲಿ ಮರೆಯಾಗಿ ನಿಂತಿದ್ದಾರೆ. ಸೇವಾಕೇಂದ್ರ ತೆರೆಯಲು ಸರ್ಕಾರ ಅನುಮತಿ ಕೊಟ್ಟಿಲ್ಲ. ಹಾಗಾಗಿ ಇಲ್ಲಿಯೇ ಜನರ ಸಂದಣಿಯಾದರೆ, ಪೊಲೀಸಿನವರಿಗೆ ಗೊತ್ತಾಗುತ್ತದಲ್ಲ. ಅದಕ್ಕಾಗಿ ನಾವು ಈ ಉಪಾಯ ಮಾಡಿದ್ದೇವೆ. ಈ ಮೆಟ್ಟಿಲುಗಳನ್ನು ಇಳಿದು ಬಂದರೆ, ಪಾರ್ಕಿಂಗ್ ನಲ್ಲಿ ನಿಮಗೆ ಸರ್ವಿಸ್ ಸೆಂಟರ್ ಗೆ ಹೋಗುವ ಮೆಟ್ಟಿಲುಗಳು ಸಿಗುತ್ತವೆ’ ಎಂದು ಹೇಳಿದ.
ಒಮ್ಮೆ ಶಟರ್ ಹತ್ತಿರ ಬಾಗಿ, ‘ಶೇಖರಣ್ಣಾ.. ಕೊತ್ತಂಬರಿ ಸಿಗಬಹುದಾ..’ ಎಂದು ಗ್ರಾಹಕರೊಬ್ಬರು ಕೂಗಿದ್ದು ಕೇಳಿ, ‘ಆಚೆಯಿಂದ ಬನ್ನಿ. ಕೊಡುವ’ ಎಂದು ಉತ್ತರಿಸಿದ್ದರು. ಆಚೆಯಿಂದ ಬಂದವರು ಪೊಲೀಸಪ್ಪನವರಾಗಿದ್ದರು.
ತಮ್ಮ ಅಗತ್ಯಗಳಿಗಾಗಿ ಜನರೂ ಅಂಗಡಿಯವರೂ ಸೃಷ್ಟಿಸಿಕೊಂಡ ಈ ವ್ಯವಸ್ಥೆಯನ್ನು ಕಂಡು ಸುಮತಿ ಕಕ್ಕಾಬಿಕ್ಕಿಯಾಗಿದ್ದಳು. ಸೇವಾಕೇಂದ್ರದಿಂದ ತುಸು ದೂರದಲ್ಲೊಂದು ನೆರಳು ಹುಡುಕಿ ನಿಂತಳು. ಇದೊಂಥರ ಹಿಂಬಾಗಿಲಿನಲ್ಲಿ ನಿಂತಿರುವ ‘ವರ್ಚುವಲ್ ಸರತಿಯ ಸಾಲು’ ಎಂದುಕೊಂಡು, ಅವನ ಫೋನಿಗಾಗಿ ಕಾಯಲಾರಂಭಿಸಿದಳು.
ಮನೆಗಳಲ್ಲಿ ಹಿಂಬಾಗಿಲು ಎಂದರೆ ಅದು ಜೀವಂತಿಕೆಯು ತುಂಬಿತುಳುಕುವ ತಾಣ. ಅದೊಂದು ಸಿಂಗಾರಗಳಿಲ್ಲದ, ಒಪ್ಪ ಓರಣಗಳಿಗೆ ಆದ್ಯತೆ ಇಲ್ಲದ ಪ್ರಾಮಾಣಿಕವಾದ ಪ್ರಸ್ತುತಿ. ಹಳ್ಳಿಗಳಲ್ಲಿರುವ ಮನೆಗಳ ಹಿಂಬಾಗಿಲುಗಳಲ್ಲಿ ಜೀವನಾಸಕ್ತಿಯೇ ಸಿಂಗಾರಗೊಂಡು ಕುಳಿತಿರುತ್ತದೆ. ಮನೆಯ ಚಾವಡಿಯಲ್ಲಿ ಆಗಷ್ಟೇ ಒರಸಿಟ್ಟ ನೆಲದಿಂದ ನೀಲಗಿರಿ ದ್ರಾವಣದ ಪರಿಮಳವು ಹೊಮ್ಮುತ್ತಿದ್ದರೆ, ಹಿಂಬಾಗಿಲಿನ ಬಳಿ ಎಷ್ಟೇ ಒರಸಿ, ಒಪ್ಪ ಓರಣ ಮಾಡಿದರೂ, ಖಾಯಮ್ಮಾಗಿರುವ ಕಮಟು ಪರಿಮಳವೊಂದು ಸುರಕ್ಷೆಯ ಭಾವವೊಂದನ್ನು ಕೊಡುತ್ತಿರುತ್ತದೆ. ಆಗಷ್ಟೇ ಕುಕ್ಕರ್ ಸೀಟಿ ಹೊಡೆದ ಕುಚ್ಚಲಕ್ಕಿ ಗಂಜಿಯ ಕಂಪು, ಅಲ್ಲೇ ಅಕ್ಕಚ್ಚಿನ ಪಾತ್ರೆಗೆ ಸುರಿದ ನಿನ್ನೆಯ ಸಾಂಬಾರಿನ ಹಳಸು ವಾಸನೆಯ ಘಮಲು, ಮೀನು ಕೊಯ್ದು, ತೊಳೆದು ಚೆಲ್ಲಿದ ನೀರಿನ ಮೇಲೆ ಹಾರುವ ನೊಣಗಳು, ಅವುಗಳ ರೆಕ್ಕೆಗಳ ಮೇಲೆ ಬಿದ್ದು ಹೊಳೆಯುವ ಬಿಸಿಲು, ಕೈತೊಳೆಯುವ ನಲ್ಲಿ, ಮೂರ್ನಾಲ್ಕು ಬಾಲ್ದಿಗಳು, ಒಣಗಲಿಟ್ಟ ಪಾತ್ರೆಗಳು, ತಲೆಕೆದರಿಕೊಂಡು ಒಣಗುತ್ತಿರುವ ನೆಲ ಒರೆಸುವ ಕೋಲುಗಳು.
ಯಾವುದೇ ಮನೆಯ ಹಿಂಬಾಗಿಲಿನ ಚಿತ್ರಗಳಿಗೆ ಕಣ್ಣಲ್ಲೇ ಚೌಕಟ್ಟು ಬರೆಯುತ್ತಿರುವಾಗ ಕುವೆಂಪು ಬರೆದ ಕಾನೂರು ಹೆಗ್ಗಡಿತಿ ಕಾದಂಬರಿಯ ಸಾಲುಗಳು ನೆನಪಾಗುತ್ತದೆ. ಕಾನೂರು ಚಂದ್ರಯ್ಯ ಗೌಡರ ಮಂಗಳೂರು ಹಂಚಿನ ಮನೆಯ ವರ್ಣನೆಯಲ್ಲಿ ಹಿಂಬಾಗಿಲಿನ ‘ಲೋಕ’ವೇ ಅದ್ಭುತವಾದುದು. ಈ ವರ್ಣನೆ ಅರ್ಧಪುಟದಷ್ಟಿದೆ. ಅದು ನಮ್ಮದೇ ಹಳ್ಳಿಯ ದೊಡ್ಡಮನೆಯೊಂದರ ಹಿಂಬಾಗಿಲಿನ ವರ್ಣನೆಯಂತೆಯೇ ಭಾಸವಾಗುವಂತಿದೆ: ‘ಇಷ್ಟೆಲ್ಲವೂ ಆ ಮನೆಯ ಮುಂಚಿಕಡೆಯ ಚಿತ್ರ. ಹಿತ್ತಲುಕಡೆಯ ಚಿತ್ರವೇ ಬೇರೆ. ಅಲ್ಲಿ ಸಂದರ್ಭ ಸಿಕ್ಕಿದಾಗಲೆಲ್ಲ ಕ್ರಮಾಕ್ರಮಗಳನ್ನು ಒಂದಿನಿತೂ ಗಣನೆಗೆ ತಾರದೆ ತಮ್ಮ ಉದರ ಪೋಷಣೆ ಮಾಡಿಕೊಳ್ಳುತ್ತ ಡೊಳ್ಳೇರಿ ಕಾಲುಚಾಚಿಕೊಂಡು ಬಿದ್ದಿರುವ ಕುನ್ನಿ ಮರಿಗಳು! ತನ್ನ ಹೂ ಮರಿಗಳೊಡನೆ ನೆಲವನ್ನು ಕೆದರಿ ಗಲೀಜು ಮಾಡುತ್ತಿರುವ ಹೇಂಟೆ. ಮೂಲೆಯಲ್ಲಿ ಸಿಕ್ಕದ ಮೇಲೆ ದೊಡ್ಡ ಬುಟ್ಟಿಯಲ್ಲಿ ನೆಲ್ಲು ಹುಲ್ಲಿನ ಮೇಲಿರುವ ಮೊಟ್ಟೆಗಳನ್ನು ರೆಕ್ಕೆಗಳಲ್ಲಿ ಅಪ್ಪಿಕೊಂಡು ಕಾವು ಕೂತಿರುವ ಕುಕ್ಕುಟ ಗರ್ಭಿಣಿ! ಒಂದೆಡೆ ದೊಡ್ಡದಾದ ಮುರುವಿನ ಒಲೆ. ಅಲ್ಲಿಯೇ ಮೇಲುಗಡೆ ನೇತಾಡುತ್ತಿರುವ ತಟ್ಟೆಯಲ್ಲಿ ಸಂಡಿಗೆ ಮಾಡಲು ಒಣಗಲಿಟ್ಟಿರುವ ಮಾಂಸದ ದೊಡ್ಡ ದೊಡ್ಡ ತುಂಡುಗಳು. ಅಟ್ಟದ ಮೇಲೆ ಕರಿಹಿಡಿದ ಪೊರಕೆಗಳ ದೊಡ್ಡ ಕಟ್ಟು. ಒಂದು ಕಡೆ ಗೋಡೆಗೆ ಆನಿಸಿ ನಿಲ್ಲಿಸಿರುವ ಒಂದೆರಡು ಒನಕೆಗಳು. ಬಳಿಯಲ್ಲಿ ಕಲ್ಲಿನ ಒರಳು ಮತ್ತು ಕಡೆಗುಂಡು. ಒಂದು ಬೀಸುವ ಕಲ್ಲು ಮೆಟ್ಟುಗತ್ತಿ, ನೀರು ತುಂಬಿದ ತಾಮ್ರದ ಹಂಡೆ. ಸಂದುಗೊಂದುಗಳಲ್ಲಿ ಕಿಕ್ಕಿರಿದಿರುವ ಜೇಡರ ಬಲೆಗಳ ತುಮುಲ ಜಟಿಲ ವಿನ್ಯಾಸ. ಮುಡಿದು ಬಿಸಾಡಿರುವ ಒಣಗಿದ ಹೂಮಾಲೆ. ತಲೆಬಾಚಿ ಎಸೆದಿರುವ ಕೂದಲಿನ ಕರಿಯ ಮುದ್ದೆ. ತಾಂಬೂಲದ ಕೆಂಪಾದ ಉಗುಳು. ಇವುಗಳಿಗೆಲ್ಲ ಮುಕುಟಪ್ರಾಯವಾಗಿ ಮೂತ್ರದ ವಾಸನೆ. ಇತ್ಯಾದಿ ಇತ್ಯಾದಿ ಇತ್ಯಾದಿ’
ಮಾನವ ಜೀವಿಯ ಬದುಕೇ ಅಲ್ಲಿದೆ ಅಲ್ಲವೇ.
ಪೇಟೆಯ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇಲ್ಲ. ಇದ್ದರೂ ಅದು ಬೆಳಿಗ್ಗೆ ಒಂದಷ್ಟು ಹೊತ್ತು ಜೀವಂತಿಕೆಯನ್ನು ಬಾಡಿಗೆ ಪಡೆದು ಉಸಿರಾಡಿ, ಕೆಲಸ ಮುಗಿಸಿದ ಆಕೆ ಬಾಗಿಲ ಚಿಲಕ ಎಳೆದ ಕೂಡಲೇ ಸೋಂಬೇರಿ ಬೆಕ್ಕಿನಂತೆ ಮೌನವನ್ನು ತಬ್ಬಿ ಮಲಗಿಬಿಡುತ್ತದೆ. ಮತ್ತೇನಿದ್ದರೂ ಬಳಸಿದ ಬಟ್ಟೆಯನ್ನು ರಾಶಿಹಾಕಲು, ಒಣಗಿದ ಬಟ್ಟೆಗಳ ಉಸ್ತುವಾರಿಗಷ್ಟೇ ಆ ಬಾಗಿಲು ಚಲಿಸುವುದು. ಇಷ್ಟು ಸೌಭಾಗ್ಯವೂ ಇಲ್ಲದೆ, ಹಿಂಬಾಗಿಲ ಸುಖವನ್ನು ಪೂರಾ ಗಿರವಿಯಿಟ್ಟಂತೆ ಇರುವ ಮನೆಗಳೆಂದರೆ ಫ್ಲಾಟ್ ಗಳು.
ಪೇಟೆ ಮನೆಗಳಿಗೆ ಹಿಂಬಾಗಿಲಿಲ್ಲದ ಒಣ ಬೇಸರವನ್ನೂ, ಹಳ್ಳಿಮನೆಯ ಹಿಂಬಾಗಿಲಿನ ಕ್ರಿಯಾಶೀಲ ಚಿತ್ರವನ್ನೂ ಜಯಂತ ಕಾಯ್ಕಿಣಿಯವರು ‘ಹಿಂಬಾಗಿಲು’ ಎಂಬ ಪ್ರಬಂಧದಲ್ಲಿ ಸೆರೆ ಹಿಡಿದಿದ್ದಾರೆ. ಅವರ ಪ್ರಕಾರ, ಹಿಂಬಾಗಿಲು ಇಲ್ಲದ ಮನೆಯಲ್ಲಿ ‘ಬೆಳಕಿನ ಕಿರಣವೊಂದು ಗಾಳಿಯ ಕೈ ಹಿಡಿದು ಮನೆಯನ್ನು ಪೂರ್ತಿ ದಾಟಿ ಹೋಗುವಂತೆಯೇ ಇಲ್ಲ. ಹತ್ತು ಹದಿನೈದು ಚದರಡಿಯಲ್ಲಿಯೇ ಪರದೆ, ಕಪಾಟು, ಟ್ರಂಕು ಹೊದಿಕೆಗಳ ಜೊತೆ ಕಣ್ಣುಮುಚ್ಚಾಲೆಯಾಡಿ, ಕುಂಟುತ್ತ ಮರಳಿಬಿಡಬೇಕು’.
ಹಿಂದಿನ ಕಾಲದ ಮನೆಗಳಲ್ಲಿ ಹಿಂಬಾಗಿಲ ಬಳಿಯೇ ಕೆರೆಯೊಂದನ್ನು ಕಟ್ಟಿಸುವ ವಾಡಿಕೆಯಿತ್ತು. ಇಂದಿಗೂ ಹಿಂಬಾಗಿಲಿನ ಬಳಿ ಕೆರೆಗಳಿರುವ ಹಳೆಯ ಮನೆಗಳನ್ನು ಕಾಣಬಹುದು. ಅದೇನಿದ್ದರೂ ಮಹಿಳೆಯರ ಬಳಕೆಗೆ, ದೈನಂದಿನ ಕೆಲಸಬೊಗಸೆಗೆಂದು ಇದ್ದ ಕೆರೆ. ಪೂಜೆಗಾಗಿ ಮಡಿನೀರು ತೆಗೆಯಲು, ಶಾಸ್ತ್ರೋಕ್ತ ಪೂಜೆಗಳನ್ನು ಮಾಡಲು, ಸಂಜೆ ದೀಪದ ಬೆಳಕು ತೋರಿಸಿ ನಮಸ್ಕರಿಸಲು, ತೋರಣ ಕಟ್ಟಿ ಶೃಂಗಾರ ಮಾಡಲು, ಮನೆಯ ಮುಂದೆ ಈಶಾನ್ಯ ದಿಕ್ಕಿನಲ್ಲಿರುವ ಬಾವಿಯೇ ಬೇಕು. ಈ ಕೆರೆಯೋ, ಎಲ್ಲರ ಬಳಕೆಗಿರುವ ಮೆಟ್ಟಿಲಿನಂತೆ ಮನೆಯಾಕೆಯ ಸಖಿಯಂತೆ ಸೂರ್ಯನ ಕಿರಣಗಳಿಗಾಗಿ ಸದಾ ಕಾಯುತ್ತಿರುತ್ತದೆ.
ಇಷ್ಟೆಲ್ಲ ಜೀವಂತಿಕೆಯಿಂದ ಕೂಡಿದ ಹಿಂಬಾಗಿಲಿನ ಉಪಮೆ ಮಾತ್ರ ಯಾಕೆ ಸಕಾರಾತ್ಮಕವಾಗಿಲ್ಲ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. ‘ಹಿಂಬಾಗಿಲಿನಿಂದ ಒಳಹೊಕ್ಕವರು’ ಎಂಬುದು ತಾತ್ಸಾರದ ಧ್ವನಿಯುಳ್ಳ ಹೇಳಿಕೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿದವರು ಎಂಬುದು ಬೈಗುಳದ ಲೇಪ ಹೊತ್ತ ಸಾಲುಗಳು. ‘ಹಿಂಬಾಗಿಲಿನಿಂದ ಪ್ರವೇಶಿಸಿದ’ ಎಂದರೆ ಬಂದವರು ಮನೆ ಹಾಳು ಮಾಡುವ ಕಳ್ಳರೇನೋ ಎಂಬ ಸಂಶಯ. ಅಧಿಕೃತತೆ, ಅರ್ಹತೆ, ಔಪಚಾರಿಕ ಆಹ್ವಾನಗಳೆಲ್ಲವೂ ಯಾಕೋ, ಒಪ್ಪ ಓರಣವಾಗಿರುವ ಮುಂಬಾಗಿಲಿಗೇ ಸಲ್ಲುವುದು. ಅಲ್ಲಿಯೇ ಜಗದ ನಿರ್ಣಯಗಳು ಮಂಡನೆಯಾಗುವವು.
ಅದಕ್ಕೇ, ಆಪ್ತ ಗೆಳತಿ ಮನೆಗೆ ಬಂದರೆ ಅವಳು ಸೀದಾ ಅಡುಗೆ ಮನೆಗೆ ನುಗ್ಗುವಳು. ಚಹಾ ಕೈಲಿ ಹಿಡಿದುಕೊಂಡು ಹಿಂಬಾಗಿಲ ಮೆಟ್ಟಿಲ ಮೇಲೆಯೇ ಇಬ್ಬರೂ ಮಾತಿಗೆ ಕೂರುವರು. ಜಯಂತ ಕಾಯ್ಕಿಣಿ ಹೇಳುವಂತೆ ‘ತವರಿಗೂ ಒಂದು ತವರು ಹಿಂಬಾಗಿಲು’.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.