ಇಲ್ಲೇ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗುರುಗಳಿಂದ ಬೈಯಿಸಿಕೊಂಡ ನಂತರ ತನ್ನ ಗುರುಗಳಿಗಾಗಿ ತಾನು ಪ್ರಾಣಕೊಡಲು ಕೂಡ ಸಿದ್ಧ ಎನ್ನುವುದನ್ನು ತೋರಿಸಲು ಉದ್ಯಾನದಲ್ಲಿದ್ದ ಕೊಳದೊಳಕ್ಕೆ ಹಾರುತ್ತಾನೆ. ಇಡೀ ರಾತ್ರಿ ಅಲ್ಲೇ ದಿಮ್ಮಿಯೊಂದನ್ನು ಹಿಡಿದು ಕಳೆಯುತ್ತಾನೆ. ಅವನ ಹಠ ಮುರಿದು ವಿಧೇಯತೆ ಅವನಲ್ಲಿ ಮೂಡುತ್ತದೆ. ‘ತಾವರೆ ಹೂಗಳು ರಾತ್ರಿಯಲ್ಲಿ ಅರಳುವುದಿಲ್ಲ. ಅವು ಅರಳುವಾಗ ಸದ್ದು ಮಾಡುವುದಿಲ್ಲ…’ ಎಂದು ಈ ದೃಶ್ಯ ಕುರಿತು ಸಿನೆಮಾ ನಿರ್ದೇಶಕನೊಬ್ಬ ಹೇಳಿದ್ದನ್ನು ಇತ್ತೀಚೆಗೆ ಫುಜಿತನನ್ನು ಭೇಟಿಮಾಡಿದಾಗ ತಿಳಿಸಿದ. ಸಂಶಿರೋ ಕೊಳದೊಳಗೆ ಬೆಳಗಿನ ಹೊತ್ತಲ್ಲಿ ಹಾರಿ ಇಡೀ ರಾತ್ರಿಯನ್ನು ನೀರಿನಲ್ಲಿ ಕಳೆದು ಬೆಳಗಾಗುವವರೆಗೂ ಅಲ್ಲೇ ಇದ್ದ ಎನ್ನುವುದನ್ನು ತೋರಿಸಲು ನಾನು ಬಹಳ ಕಷ್ಟಪಟ್ಟಿದ್ದೆ.
ಹೇಮಾ ಎಸ್. ಅನುವಾದಿಸಿರುವ ಅಕಿರ ಕುರಸೋವಾನ ಆತ್ಮಕತೆಯ ಪುಟ
ಯೊಕೊಹಾಮದಲ್ಲಿ 1942ರಲ್ಲಿ ಸುಗತಾ ಸಂಶಿರೊ (Sugata Sanshiro)ದ ಚಿತ್ರೀಕರಣ ಆರಂಭವಾಯಿತು. ಸಂಶಿರೊ ಮತ್ತು ಅವನ ಗುರು ಯಾನೊ ಶೊಗೊರೊ (Yano Shogoro) ಶಿಂಟೊ ದೇಗುಲ (Shinto shrine)ದ ಕಲ್ಲಿನ ಮೆಟ್ಟಿಲುಗಳನ್ನು ಹತ್ತುತ್ತಾ ಬರುತ್ತಿರುವ ದೃಶ್ಯ ನಿರ್ದೇಶಕನಾಗಿ ನಾನು ಚಿತ್ರೀಕರಿಸಿದ ಮೊದಲ ದೃಶ್ಯ. ಸಿದ್ಧತೆಗಳೆಲ್ಲ ಮುಗಿದ ಮೇಲೆ ಚಿತ್ರೀಕರಿಸಲು ಸಿದ್ಧವಾಗಿದ್ದೆವು. ಕ್ಯಾಮೆರಾ ಸಿದ್ಧವಾಗಿತ್ತು “ಯೋಯಿ, ಸ್ಟಾಟೊ!” ((“Ready, start!”) ಎಂದು ಹೇಳಿದೆ. ಇಡೀ ಚಿತ್ರತಂಡ ನನ್ನತ್ತ ತಿರುಗಿ ನೋಡಿತು. ನನ್ನ ಧ್ವನಿ ಎಂದಿನಂತಿರಲಿಲ್ಲ. ಯಾಮಾ ಸಾನರಿಗಾಗಿ ಎರಡನೆಯ ಯೂನಿಟ್ ಶೂಟಿಂಗ್ ಸಾಕಷ್ಟು ಮಾಡಿದ್ದೆ. ಆದರೆ ಎಷ್ಟೇ ಅನುಭವವಿದ್ದರೂ ನಿಮ್ಮ ಮೊದಲ ಚಿತ್ರವನ್ನು ಚಿತ್ರೀಕರಿಸುವಾಗ ನಿಮ್ಮನ್ನು ತೀವ್ರ ಉದ್ವೇಗ ಕಾಡುತ್ತಿರುತ್ತದೆ.
ಎರಡನೆಯ ಶಾಟ್ ತೆಗೆಯುವ ವೇಳೆಗೆ ಉದ್ವೇಗ ಮಾಯವಾಗಿತ್ತು. ಪ್ರತಿಯೊಂದು ಕೆಲಸವೂ ರೋಮಾಂಚನ ಎನಿಸತೊಡಗಿತ್ತು. ಎಲ್ಲವನ್ನೂ ಬೇಗ ಬೇಗ ಮುಗಿಸಬೇಕೆಂಬ ಹಪಾಹಪಿ ಕಾಣಿಸಿಕೊಂಡಿತು. ಜುಡೊ ಪರಿಣಿತ ಮತ್ತವನ ಗುರುವಿಗೆ ಮೆಟ್ಟಿಲ ಮೇಲೆ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥಿಸುತ್ತಾ ಕೂತಿದ್ದ ಯುವತಿ ಕಾಣುತ್ತಾಳೆ. ಇದು ಎರಡನೆಯ ಶಾಟ್. ಆಕೆ ಮುರಾಯಿ ಹಾನ್ಶಿರೋ (Murai Hanshiro) ಮಗಳು. ಆತನೇ ಪಂದ್ಯದಲ್ಲಿ ಸಂಶಿರೊನ ಎದುರಾಳಿ. ಪೋಲಿಸ್ ಪ್ರಧಾನಕಛೇರಿಯವರು ಆ ಪಂದ್ಯದ ಪ್ರಾಯೋಜಕತ್ವ ವಹಿಸಿರುತ್ತಾರೆ. ಆಕೆ ತನ್ನ ತಂದೆಯ ಗೆಲುವಿಗೆ ಪ್ರಾರ್ಥಿಸುತ್ತಿರುತ್ತಾಳೆ. ಆದರೆ ಸಂಶಿರೋ ಮತ್ತವನ ಗುರುವಿಗೆ ಆಕೆ ಯಾರೆಂದು ತಿಳಿದಿರುವುದಿಲ್ಲ. ಅವರು ಆಕೆಯ ಪ್ರಾರ್ಥನೆಯಲ್ಲಿನ ಏಕಾಗ್ರತೆಯನ್ನು ಮೆಚ್ಚಿ ಅವಳಿಗೆ ತೊಂದರೆಯಾಗದಂತೆ ಹಿಂಭಾಗದಿಂದ ಹೋಗಿ ಪ್ರಾರ್ಥನೆ ಸಲ್ಲಿಸಿ ಬಂದುಬಿಡುತ್ತಾರೆ.
ಈ ಎರಡನೆಯ ದೃಶ್ಯದ ಸಿದ್ಧತೆ ಮಾಡುತ್ತಿದ್ದಾಗ ಮಗಳ ಪಾತ್ರ ವಹಿಸಿದ್ದ ನಟಿ (ತೊಡೊರೊಕಿ ಯುಕಿಕೊ (Todoroki Yukiko) “ಕುರೊಸಾವ ನಾನು ನನ್ನಪ್ಪನ ಜಯಕ್ಕಾಗಿ ಮಾತ್ರ ಪ್ರಾರ್ಥಿಸಬೇಕೆ?” ಎಂದು ಕೇಳಿದಳು. “ಹೌದು. ಆದರೆ ನೀನು ಪ್ರಾರ್ಥಿಸುವಾಗ ಈ ಚಿತ್ರದ ಯಶಸ್ಸಿಗಾಗಿ ಕೂಡ ಪ್ರಾರ್ಥಿಸಬಹುದು” ಎಂದು ಹೇಳಿದೆ.
ಯೊಕೊಹಾಮದಲ್ಲಿ ಒಂದು ದಿನ ಬೆಳಗ್ಗೆ ಎದ್ದು ಬಚ್ಚಲುಮನೆ ಕಡೆ ಹೊರಟೆ. ಬಾಗಿಲಲ್ಲಿ ಗಂಡಸರ ಶೂಗಳನ್ನು ಜೋಡಿಸಿದ್ದ ಸಾಲಿನಲ್ಲಿ ಒಂದು ಜೊತೆ ಹೈಹೀಲ್ಡ್ ಚಪ್ಪಲಿಗಳು ಕಾಣಿಸಿದವು. ನೋಡಲು ಬಹಳ ಸ್ಟೈಲಿಶ್ ಆಗಿದ್ದವು. ನಮ್ಮ ಚಿತ್ರಕಥಾ ತಂಡದೊಡನೆ ಕೆಲಸ ಮಾಡುತ್ತಿದ್ದ ಹುಡುಗಿಯ ಚಪ್ಪಲಿಗಳಂತಿರಲಿಲ್ಲ. ಟೊಡೊರೊಕಿ (Todoroki) ತನ್ನ ಮನೆಯಿಂದಲೇ ಬಂದು ಹೋಗುತ್ತಿದ್ದಳು. ಹಾಗಾಗಿ ಆ ಚಪ್ಪಲಿಗಳು ಅವಳದಾಗಿರಲು ಸಾಧ್ಯವಿರಲಿಲ್ಲ. ಆಕೆಯನ್ನು ಬಿಟ್ಟರೆ ತಂಡದಲ್ಲಿದ್ದವರೆಲ್ಲ ಗಂಡಸರು. ಆ ಚಪ್ಪಲಿಗಳನ್ನು ಅಲ್ಲಿ ನೋಡಿ ಆಶ್ಚರ್ಯವಾಯಿತು.
ಅಲ್ಲಿದ್ದ ಕೆಲಸದವನನ್ನು ಆ ಚಪ್ಪಲಿಗಳು ಯಾರದು ಎಂದು ಕೇಳಿದೆ. ಕಳ್ಳತನ ಸಿಕ್ಕಿಬಿದ್ದ ಭಾವದಲ್ಲಿ ನನ್ನತ್ತ ನೋಡಿದ. “ಫುಜಿತಾ (Fujita) (ಸಂಶಿರೋ ಪಾತ್ರ ವಹಿಸಿದ್ದ ನಟ) ನಿನ್ನೆ ರಾತ್ರಿ ಯೊಕೊಹಾಮದಲ್ಲಿ ಕುಡಿಯಲು ಹೊರಹೋಗಿದ್ದಾಗ ಬಾರಿನಿಂದ ಹುಡುಗಿಯನ್ನು ಕರೆದುಕೊಂಡು ಬಂದರು. ಆದರೆ ನಾನು ಆಕೆಯನ್ನು ಬೇರೆ ಕೋಣೆಯಲ್ಲಿ ಇಳಿಸಿದೆ”. ಎಂದು ಹೇಳಿದ.
ಆ ಕೆಲಸದವನು ಘಟನೆಯನ್ನು ಹೇಳಿದ ರೀತಿ ನನಗಿಷ್ಟವಾಯಿತು. ಅದು ಘಟನೆಗೆ ಸಾಕ್ಷಿಯಾದವನ ಹೇಳಿಕೆಗಿಂತ ಹೆಚ್ಚಾಗಿ ವಕೀಲನೊಬ್ಬ ತನ್ನ ಕಕ್ಷಿದಾರನ ಪರವಾಗಿ ರಕ್ಷಣಾತ್ಮಕವಾಗಿ ವಾದಿಸುವಂತೆ ಇತ್ತು. ಫುಜಿತಾನನ್ನು ನನ್ನ ಕೋಣೆಗೆ ಕಳಿಸುವಂತೆ ಹೇಳಿದೆ. ಕೋಣೆಯಲ್ಲಿ ಕಾಯುತ್ತಾ ಕೂತೆ. ಕಡೆಗೂ ಬಾಗಿಲು ಸರಿಸಿದ ಸದ್ದಾಯಿತು. ಬಾಗಿಲತ್ತ ನೋಡಿದೆ. ಫುಜಿತಾ ನಾನು ಯಾವ ಮೂಡಿನಲ್ಲಿದ್ದೀನಿ ಎಂದು ತಿಳಿಯಲು ಇಣುಕಿ ನೋಡುತ್ತಿದ್ದ.
ಎರಡನೆಯ ಶಾಟ್ ತೆಗೆಯುವ ವೇಳೆಗೆ ಉದ್ವೇಗ ಮಾಯವಾಗಿತ್ತು. ಪ್ರತಿಯೊಂದು ಕೆಲಸವೂ ರೋಮಾಂಚನ ಎನಿಸತೊಡಗಿತ್ತು. ಎಲ್ಲವನ್ನೂ ಬೇಗ ಬೇಗ ಮುಗಿಸಬೇಕೆಂಬ ಹಪಾಹಪಿ ಕಾಣಿಸಿಕೊಂಡಿತು. ಜುಡೊ ಪರಿಣಿತ ಮತ್ತವನ ಗುರುವಿಗೆ ಮೆಟ್ಟಿಲ ಮೇಲೆ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥಿಸುತ್ತಾ ಕೂತಿದ್ದ ಯುವತಿ ಕಾಣುತ್ತಾಳೆ. ಇದು ಎರಡನೆಯ ಶಾಟ್.
ಸಿನೆಮಾದಲ್ಲಿ ಸಂಶಿರೋ ನಗರದಲ್ಲಿ ಹೊರಹೋಗಿ ಕುಡಿದು ಹೊಡೆದಾಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನ ಗುರು ಯಾನೊ ಶೋಗೊರೊ (Yano Shogoro) ಅವನಿಗೆ ಹೇಳಿಕಳುಹಿಸುತ್ತಾನೆ. ಫುಜಿತಾಗೆ ನನ್ನನ್ನು ನೋಡಲು ಬಂದಾಗ ಹೇಗೆ ನಡೆದುಕೊಂಡನೋ ಯಥಾವತ್ತಾಗಿ ಅದೇ ರೀತಿ ಮಾಡಲು ಹೇಳಿದೆ. ಇಂತಹ ಶಿಕ್ಷೆ ನೀಡುತ್ತಿರುವ ನಾನೆಷ್ಟು ಕ್ರೂರಿ ಎಂದು ದೂರಿದ. ಆದರೆ ಆತ ತನ್ನನ್ನಲ್ಲದೆ ಈ ವಿಷಯದಲ್ಲಿ ಬೇರಾರನ್ನೂ ದೂರುವಂತಿರಲಿಲ್ಲ. ಆ ದೃಶ್ಯದಲ್ಲಿ ಬಹಳ ಚೆನ್ನಾಗಿ ನಟಿಸಿದ.
ಇಲ್ಲೇ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗುರುಗಳಿಂದ ಬೈಯಿಸಿಕೊಂಡ ನಂತರ ತನ್ನ ಗುರುಗಳಿಗಾಗಿ ತಾನು ಪ್ರಾಣಕೊಡಲು ಕೂಡ ಸಿದ್ಧ ಎನ್ನುವುದನ್ನು ತೋರಿಸಲು ಉದ್ಯಾನದಲ್ಲಿದ್ದ ಕೊಳದೊಳಕ್ಕೆ ಹಾರುತ್ತಾನೆ. ಇಡೀ ರಾತ್ರಿ ಅಲ್ಲೇ ದಿಮ್ಮಿಯೊಂದನ್ನು ಹಿಡಿದು ಕಳೆಯುತ್ತಾನೆ. ಅವನ ಹಠ ಮುರಿದು ವಿಧೇಯತೆ ಅವನಲ್ಲಿ ಮೂಡುತ್ತದೆ. ‘ತಾವರೆ ಹೂಗಳು ರಾತ್ರಿಯಲ್ಲಿ ಅರಳುವುದಿಲ್ಲ. ಅವು ಅರಳುವಾಗ ಸದ್ದು ಮಾಡುವುದಿಲ್ಲ…’ ಎಂದು ಈ ದೃಶ್ಯ ಕುರಿತು ಸಿನೆಮಾ ನಿರ್ದೇಶಕನೊಬ್ಬ ಹೇಳಿದ್ದನ್ನು ಇತ್ತೀಚೆಗೆ ಫುಜಿತನನ್ನು ಭೇಟಿಮಾಡಿದಾಗ ತಿಳಿಸಿದ.
ಸಂಶಿರೋ ಕೊಳದೊಳಗೆ ಬೆಳಗಿನ ಹೊತ್ತಲ್ಲಿ ಹಾರಿ ಇಡೀ ರಾತ್ರಿಯನ್ನು ನೀರಿನಲ್ಲಿ ಕಳೆದು ಬೆಳಗಾಗುವವರೆಗೂ ಅಲ್ಲೇ ಇದ್ದ ಎನ್ನುವುದನ್ನು ತೋರಿಸಲು ನಾನು ಬಹಳ ಕಷ್ಟಪಟ್ಟಿದ್ದೆ. ಸೂರ್ಯನ ಕಿರಣಗಳ ದಿಕ್ಕನ್ನು ಬದಲಿಸಿದ್ದೆ, ಚಂದ್ರನನ್ನು ಕದಲಿಸಿ ಮುಂಜಾವಿನ ಇಬ್ಬನಿಯನ್ನು ತೋರಿಸಿದ್ದೆ. ಇಷ್ಟೆಲ್ಲ ಮಾಡಿಯೂ ಹೂಗಳು ಅರಳಿದ್ದು ರಾತ್ರಿ ಹೊತ್ತಿನಲ್ಲಿ ಎನ್ನುವಂತೆ ಕಂಡಿದ್ದರೆ ಏನೋ ಸರಿಯಿರಲಿಲ್ಲ ಎಂದರ್ಥ. ಆದರೆ ನಾನು ಪ್ರಯತ್ನಿಸಿದ್ದೆ.
ತಾವರೆಗಳು ಅರಳುವಾಗುವಾಗ ಸದ್ದಾಗುವುದು ಮತ್ತೊಂದು ವಿಷಯ. ತಾವರೆ ಹೂಗಳು ಅರಳುವಾಗ ಅದ್ಭುತವಾದ ಪಟ್ ಎಂದು ದಳ ಒಡೆದುಕೊಳ್ಳುವ ಸದ್ದು ಮಾಡುವುದನ್ನು ಕೇಳಿದ್ದೇನೆ. ಒಂದು ದಿನ ಮುಂಜಾನೆ ಯುನೊದ(Ueno) ಶಿನೋಬಾಜು (Shinobazu) ಕೊಳಕ್ಕೆ ತಾವರೆಗಳು ಅರಳುವ ಸದ್ದನ್ನು ಕೇಳಲೆಂದೇ ಹೋಗಿದ್ದೆ. ಆ ಮಬ್ಬು ಮುಂಜಾನೆಯಲ್ಲಿ ಆ ಸದ್ದನ್ನು ಕೇಳಿದ್ದೆ.
ಆದರೆ ಸಂಶಿರೋ ರಾತ್ರಿಯಿಡೀ ಕೊಳದಲ್ಲಿ ಕಳೆದದ್ದಕ್ಕೂ ತಾವರೆ ಹೂಗಳ ಸದ್ದಿಗೂ ಏನೂ ಸಂಬಂಧವಿಲ್ಲ. ಅದು ಸೌಂದರ್ಯಪ್ರಜ್ಞೆಯ ವಿಷಯವೇ ಹೊರತು ಭೌತಶಾಸ್ತ್ರದ್ದಲ್ಲ. ಬಾಷೋನ ಸುಪ್ರಸಿದ್ಧ ಹಾಯ್ಕು ಹೀಗಿದೆ :
ಪುರಾತನ ಕೊಳ
ಕಪ್ಪೆ ಹಾರಿತು
ನೀರಿನ ಸದ್ದು.
ಇದನ್ನು ಓದಿದವರು “ಹೌದು ಕಪ್ಪೆ ನೀರಿಗೆ ಹಾರಿದರೆ ಸದ್ದಾಗುತ್ತದೆ” ಎಂದು ಹೇಳಿದರೆ ಅಂತಹವರಿಗೆ ಹಾಯ್ಕುವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರ್ಥ. ಅದೇ ರೀತಿ ಸಂಶಿರೋ ತಾವರೆ ಹೂಗಳು ಅರಳುವ ಸುಂದರ ಸದ್ದನ್ನು ಕೇಳಿದ್ದು ವಿಚಿತ್ರ ಎಂದರೆ ಅವರಿಗೆ ಸಿನೆಮಾ ಬಗ್ಗೆ ಏನೂ ತಿಳಿದಿಲ್ಲ ಎಂದರ್ಥ. ಸಿನೆಮಾ ವಿಮರ್ಶಕರ ನಡುವೆ ಕೂಡ ಇಂಥವರು ಇರುತ್ತಾರೆ. ಅವರಾಡುವ ಮಾತುಗಳು ಅವರಿಗೆ ಕಾಣಿಸುವುದು ಇವನ್ನೆಲ್ಲ ನೋಡಿದಾಗ ಅವರಿಗೆ ದೆವ್ವ ಮೆಟ್ಟಿಕೊಂಡಿದೆಯೇನೋ ಅನ್ನಿಸುತ್ತದೆ. ಇಂತಹ ಸಿನೆಮಾ ವಿಮರ್ಶಕರಿಗೆ ಏನೂ ಮಾಡಲಾಗುವುದಿಲ್ಲ. ಆದರೆ ಇಂತಹವರನ್ನು ಸಿನೆಮಾ ನಿರ್ದೇಶಕರಾಗಿ ಸಹಿಸುವುದು ಕಷ್ಟ.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..