ಭಾಷೆ ಅರ್ಥ ಮಾಡಿಸುವುದಕ್ಕಿಂತ ಅಪಾರ್ಥಕ್ಕೆ ಹಾದಿಯನ್ನು ಬಿಚ್ಚುತ್ತದೆ ಎನ್ನುವುದು ನನಗೆ ಗೊತ್ತು. ಕಲೆಯ ಸೃಷ್ಟಿಗೆ ಗ್ರಾಮೀಣ ಮತ್ತು ಪ್ರಕೃತಿ ತೆರೆದುಕೊಂಡಷ್ಟು ನಗರ ಮತ್ತು ಆಧುನಿಕ ತೆರೆದುಕೊಳ್ಳುವುದಿಲ್ಲವೊ ಏನೊ ಅಂತಷ್ಟೇ ಹೇಳಬೇಕಿತ್ತು. ಯಾಕೆಂದರೆ ಗ್ರಾಮೀಣ ಮತ್ತು ಪ್ರಕೃತಿಗಳಲ್ಲಿ ಸೌಂದರ್ಯ ಇರುತ್ತದೆ. ನಾವು ಕ್ಲಿಕ್ಕಿಸಲು ಮಾಲ್‌ಗೆ ಹೇಗೆ ಹೋಗುವುದಿಲ್ಲವೋ ಹಾಗೆಯೇ ಸ್ಲಮ್ಮಿಗೂ ಹೋಗುವುದಿಲ್ಲ. ಅದು ಫೋಟೋಗ್ರಾಫಿಕ್ ಸೌಂದರ್ಯವನ್ನು ಶುದ್ಧನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪರಿಣಿತರಿಗೆ ಮಾತ್ರ ಸಾಧ್ಯವೋ ಏನೋ. ಯಾಕೆಂದರೆ ಫೋಟೋಗ್ರಫಿ ಕೇವಲ ಹವ್ಯಾಸವಾದಾಗ ಕಣ್ಣಿಗೆ ಹಿತವಾದದ್ದನ್ನು ಮಾತ್ರ ಆರಿಸಿಕೊಳ್ಳುತ್ತದೆ. ತೇಜಸ್ವಿಗೆ ಅದು ಕೇವಲ ಹವ್ಯಾಸವಾಗಿರಲಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ಮೂರನೆಯ ಬರಹ
ಫೋನಿಗೆ ಕ್ಯಾಮೆರಾ ಇರುವುದು ನನಗೆ ಅಪ್ಪರಾಣೆ ನೆನಪೇ ಇರುವುದಿಲ್ಲ. ತಿನ್ನುವುದನ್ನು ಸಹ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗೆ ಹಾಕುವ ರೋಗ ನನಗಿಲ್ಲ ಎನ್ನುವುದು ನನಗೆ ಮಹಾ ಸಮಾಧಾನ ಕೊಟ್ಟಿರುವ ಸತ್ಯ. ಎಲ್ಲಿದ್ದೇನೆ, ಯಾರೊಟ್ಟಿಗೆ ಇದ್ದೇನೆ, ಏನು ಮಾಡಿದೆ ಇತ್ಯಾದಿ ಎಲ್ಲವನ್ನೂ ಎಲ್ಲರೆದುರು ಹರಾಜು ಹಾಕುವುದು ಯಾಕೆ ಎಂಬ ಪ್ರಶ್ನೆ ಹಲವೊಮ್ಮೆ ಕಾಡಿದೆ. ನನಗೇನು ಎಂದು ತಲೆ ಕೊಡವಿಕೊಂಡಿದ್ದೇನೆ. ಕ್ಯಾಮೆರಾದ ನೆನಪಾಗುವುದು ರಸ್ತೆಯಲ್ಲಿ ಯಾರನ್ನಾದರೂ ದಬಾಯಿಸುವ ಅಗತ್ಯ ಒದಗಿದಾಗ ಮಾತ್ರ. ಲೇಡಿ ಡ್ರೈವರ್ ಕಂಡಾಗ ಕಪಿಗೆ ಹೆಂಡ ಕುಡಿಸಿದಂತೆ ಆಡುವ ಜಾತ್ರೆಮನ್ಮಥರ ಎದುರಿಗೆ, ಅಷ್ಟೇ.
ಆದರೆ ಗಂಭೀರವಾದ ಫೋಟೋಗ್ರಫಿ, ಅದರಲ್ಲೂ wild life photography ಒಂದು ಧ್ಯಾನವೇ ಅಂತ ಅನ್ನಿಸಿರುವುದು ನಿಜ. ಅದೊಂದು ಶಿಸ್ತು, ತನ್ಮಯತೆ, ತಾದಾತ್ಮ್ಯತೆ. ಆದರೆ ನನಗೆ ಸಾಧ್ಯವಾಗದ್ದು ಅಂತನ್ನಿಸಿ ದೂರವೇ ಇದ್ದೆ.
ಕಳೆದ ವಾರ ಕೊಟ್ಟಿಗೆಹಾರದಲ್ಲಿ ತೇಜಸ್ವಿ ಪ್ರತಿಷ್ಠಾನ ಆಯೋಜಿಸಿದ್ದ ಮೂರು ದಿನಗಳ ಫೋಟೋಗ್ರಫಿ ಶಿಬಿರದಲ್ಲಿ ಭಾಗವಹಿಸಿ ಎಂಬ ಆಮಂತ್ರಣ ಬಂತು. ಏಪ್ರಿಲ್ ೫ ತೇಜಸ್ವಿ ವರುಷಗಳ ಹಿಂದೆ ನಮ್ಮನ್ನಗಲಿದ ದಿನವಾಗಿತ್ತಲ್ಲ? ಆ ನೆನಪಿನಲ್ಲಿ ಅವರ ವೈಲ್ಡ್ ಲೈಫ್ ಫೋಟೋಗ್ರಫಿ ಹುಚ್ಚನ್ನು ಸಂಭ್ರಮಿಸುವ ಇರಾದೆ. ಆ ಆಮಂತ್ರಣವನ್ನು ಅಕಸ್ಮಾತ್ತಾಗಿ ನೋಡಿದ್ದರೆ ನನಗಲ್ಲ ಎಂದು ಅತ್ತ ಸರಿಸಿರುತ್ತಿದ್ದೆ. ಆದರೆ ಕಳಿಸಿದ್ದವರು ಇತ್ತೀಚಿಗಷ್ಟೇ ಭೇಟಿಯಾಗಿದ್ದವರು. ಈ ಶಿಬಿರವನ್ನು ನಡೆಸಿ ಕೊಡಲಿದ್ದ ಪ್ರಧಾನ ಸಂಪನ್ಮೂಲ ವ್ಯಕ್ತಿ.
ಆನಂದ್ ಮೂರು ತಿಂಗಳ ಹಿಂದೆ ನಾನು ಮಾಡಿದ ಕಾಸರವಳ್ಳಿಯವರ ದೀರ್ಘ ಸಂದರ್ಶನವನ್ನು ರೆಕಾರ್ಡ್ ಮಾಡಿದ್ದರು. ಮಾತಿನ ನಡುವೆ ಅವರು ಕೆಲವು ಮಾಹಿತಿಯನ್ನು ಒದಗಿಸಿದ್ದನ್ನು ನೋಡಿ ಸಾಕಷ್ಟು ಓದಿಕೊಂಡವರು ಅಂತನ್ನಿಸಿತ್ತು. ನಂತರದ ಹರಟೆಯಲ್ಲಿ ಅವರ ಕೆಲವು ಒಳನೋಟಗಳು ಇಷ್ಟವಾಗಿದ್ದವು. ಸಮಾನಮನಸ್ಕ ಸ್ನೇಹಿತರೊಬ್ಬರು ಸಿಕ್ಕ ಖುಷಿಯಾಗಿತ್ತು.

ಆಮಂತ್ರಣದ ಜೊತೆಗೆ ಕೊಟ್ಟಿಗೆಹಾರ, ಮಲೆನಾಡು, ದೇವರಮನೆ ಗುಡ್ಡ, ಮೂಡಿಗೆರೆ, ಇತ್ಯಾದಿಗಳು ಸಹ ನನ್ನಲ್ಲಿ ಹೋಗುವ ಇರಾದೆಯನ್ನು ಮೂಡಿಸಿದ್ದವು. ಸಮಾನಮನಸ್ಕ ಸ್ನೇಹಿತರ ಜೊತೆ ಮೂರು ದಿನ ಕಳೆಯುವ ಯೋಚನೆಯೇ ನನ್ನ ತಲೆಯನ್ನು ಸಾಕಷ್ಟು ಕೆರೆದು, ಹೋಗಬಾರದೆ? ಎಂದು ಒತ್ತಾಯಿಸಿತ್ತು.
ದೃಶ್ಯಸೌಂದರ್ಯ ಎಂದಾಗೆಲ್ಲ ನನಗೆ ಬಾಲ್ಕನಿಯಲ್ಲಿ ಕಾಲು ನೀಡಿ ಕೂತಾಗ ಬಾನಿನಲ್ಲಿ ಸೂರ್ಯ, ಮಳೆ, ಮೋಡಗಳು ಬಿಡಿಸುವ ಚಿತ್ತಾರ ಕಣ್ಣೆದುರು ಮೂಡುತ್ತದೆ. ನನ್ನ ಗಡವಾ ಟಿವಿ ಪರದೆಯ ಮೇಲೆ ಎಲ್ಲ ದೇಶಗಳನ್ನೂ ಸುತ್ತಿ ಬಂದಿದ್ದೇನೆ. ಹೋಗಿ ಕಣ್ಣಾರೆ ನೋಡಿದ್ದರೂ ಕಾಣಿಸದೇ ಹೋಗುವ ಸೂಕ್ಷ್ಮಗಳನ್ನೆಲ್ಲಾ ಕ್ಯಾಮೆರಾಗಳು ಕ್ಲಿಕ್ಕಿಸಿ ನೀಡಿವೆ. photographic reality ಹೆಚ್ಚು ಆಪ್ತವಾಗುವಂತೆ ಮಾಡಿವೆ.
ಆದರೂ ಫೋಟೋಗ್ರಫಿ ಆಸಕ್ತಿ ಅದೇನೋ ನನ್ನಲ್ಲಿ ಬೆಳೆದೇ ಇರಲಿಲ್ಲ. ಅದರ ಸೊಬಗನ್ನು ಗ್ರಹಿಸುವ ಕಣ್ಣಿತ್ತು. ಅದಕ್ಕೆ ಏನೋ, ಸಿನಿಮಾ ನನ್ನ ಮಟ್ಟಿಗೆ ಇವತ್ತಿಗೂ ಕೇವಲ ಮನರಂಜನೆ ಅಲ್ಲ. ಸುತ್ತಮುತ್ತಲನ್ನು ಮರೆತು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತೇನೆ. ಅದು ಕೇವಲ ಕಥಾನಕದ ಬಗ್ಗೆ ಇರುವ ಆಸಕ್ತಿಯಂತೂ ಅಲ್ಲ. ಯಾವ ರೀತಿಯ ಸಿನಿಮಾ ಎನ್ನುವ ಆಸಕ್ತಿ ಮಾತ್ರ ಬದಲಾಗಿರಬಹುದು, ಅಷ್ಟೇ. ಉಳಿದಂತೆ ದೃಶ್ಯ ಸೌಂದರ್ಯವನ್ನು ನನ್ನ ಕಣ್ಣೆಂಬ ಕ್ಯಾಮೆರಾ ಬೆರಗಿನಿಂದ ಹೀರಿಕೊಳ್ಳುತ್ತದೆ. ನಂತರದಲ್ಲಿ ನೋಡಲು, ತೋರಿಸಲು ದಾಖಲೆ ಇರಲಾರದು ಅಷ್ಟೆ. ದಾಖಲಿಸಬೇಕು ಅಂತ ನನಗೆ ಅನ್ನಿಸಿಯೂ ಇರಲಿಲ್ಲ.
*****
ಬಸ್ಸಿನಲ್ಲಿ ಆಧಾರ್ ತೋರಿಸಿ ಟಿಕೆಟ್ ಪಡೆದು ಜೈ ಸಿದ್ರಾಮಯ್ಯ! ಎಂದುಕೊಳ್ಳುತ್ತಾ ಅತ್ಯಂತ ಕೊನೆಯ ಸೀಟನ್ನು ಹಿಡಿದು ಕೂತೆ. ಅಕ್ಕಪಕ್ಕದಲ್ಲಿ ಹೆಂಗಸರೇ ಬಂದು ಕೂತಿದ್ದು ಖುಷಿಯಾಗಿದ್ದಾಗಲೇ ಒಬ್ಬ ಗಂಡಸು ಹತ್ತಿದ ತಕ್ಷಣ ನಡುವೆ ಬಂದು ಕೂರಲು ಹವಣಿಸಿದ.
‘ಯೋ, ನಾಲ್ಕು ಮಂದಿ ಹೆಂಗಸರು ಕೂತಿದ್ದು ನೋಡಿ ಬಾಣ ಬಿಟ್ಟಂತೆ ಕೊನೆಯ ಸೀಟಾದರೂ ಸಹ ಇತ್ತ ಕಡೆಯೇ ಬರೋದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವ?’ ಎಂದು ದಬಾಯಿಸುತ್ತಿರುವಾಗಲೇ ನನ್ನ ಪಕ್ಕ ಕೂತಿದ್ದಾಕೆ ತನ್ನ ಪರ್ಸನ್ನು ಪಕ್ಕದಲ್ಲಿಟ್ಟು ‘ಯಾರೋ ಬರ್ತಾರೆ’ ಎಂದು ಅವನಿಗೆ ತಣ್ಣಗೆ ಹೇಳಿದಾಗ ಖೊಳ್ಳನೆ ನಗು ಬಂದಿತ್ತು. ಈ ಜಾಣತನ ಬಿಟ್ಟು ನಾನ್ಯಾಕೆ ಮಾತನ್ನು ವ್ಯರ್ಥ ಮಾಡಿದೆನೊ!
ಹಾಸನದ ತನಕ ನಮ್ಮ ಮಾತು, ನಗು ಸುತ್ತಮುತ್ತ ಇದ್ದವರ, ಅದರಲ್ಲೂ ಗಂಡಸರ, ಹುಬ್ಬೇರಿಸಿದ್ದು ಮಾತ್ರ ನಿಜ. ಹೆಣ್ಮಕ್ಕಳ ಉದ್ದೇಶರಹಿತ ಸಂಭ್ರಮ! ಅಲ್ಲಿಯವರೆಗೆ ಪರಸ್ಪರ ಭೇಟಿಯಾಗಿರದಿದ್ದ ಹೆಂಗಸರು ಹೀಗೆ ನಗುವಿನಲ್ಲಿ ಕಳೆದು ಹೋಗುವುದು ಸಾಧ್ಯವೇ ಎಂಬ ವಿಸ್ಮಯದಲ್ಲಿ ಒಂದೆರಡು ಹರಳೆಣ್ಣೆ ಮುಖಗಳು ಗಂಟು ಹಾಕಿಕೊಂಡವು. ಹೆಂಗಸರು ಸುಲಭವಾಗಿ ಒಟ್ಟಿಗೆ ಸೇರಬಾರದು ಅಂತಲೇ ಕುಟುಂಬ-ವ್ಯವಸ್ಥೆಯ ನೆಪದಲ್ಲಿ ಅವರನ್ನು ಬೇರೆಯಾಗಿಸಲಾಗಿದೆ ಎಂದು ಗೊಣಗಿದೆ. ಪಕ್ಕದಲ್ಲಿ ಕೂತಿದ್ದ ಪಾಯಲ್ ಅರ್ಥವಾದಂತೆ ನಕ್ಕಳು. ಅವಳು ಓದಿದ್ದು ಕೇವಲ ಹತ್ತನೆಯ ತರಗತಿ. ಆದರೆ ಬದುಕು ಕಲಿಸುತ್ತಲ್ಲ?
ಬೇಸಿಗೆಯ ಮಟಮಟ ಬಿರುಸು ಸ್ವಲ್ಪವಾದರೂ ಕಮ್ಮಿಯಾದಂತಿತ್ತು. ಕಂಡಕ್ಟರಿಗೆ ಅದೇನನ್ನಿಸಿತೋ ಏನೋ, ಮುಂದೆಲ್ಲೋ ಒಂದು ಕಡೆ ಹತ್ತಿದ ಗಂಡಸರು ನಮ್ಮ ನಡುವೆ ಕೂರಲು ಬಂದಾಗ ಮುಲಾಜಿಲ್ಲದೆ ಮುಂದಕ್ಕೆ ಕಳಿಸಲಾಯಿತು. ನನಗೆ ಚಾಮುಂಡಿಬೆಟ್ಟದ ಘಟನೆ ನೆನಪಾಗಿತ್ತು.
***
ಒಮ್ಮೆ ಕಿವಿನಾಡಿನಿಂದ ಬಂದಿದ್ದಾಗ ಎಂದಿನಂತೆ ಚಾಮುಂಡಿಬೆಟ್ಟ ಹತ್ತಲು ಒಂದು ಬೆಳಿಗ್ಗೆ ಹೋದೆ. ‘ಹ್ಯಾಪಿ ವಿಮೆನ್ಸ್ ಡೇ’ ಎಂದು ಯಾರೋ ಒಬ್ಬ ಬಂದು ಕೈನೀಡಿ ಕುಲುಕಿದ.
ಕಿವಿನಾಡಿನಲ್ಲಿ ಕೈಕುಲುಕವ ಪದ್ಧತಿಗೆ ಒಗ್ಗಿ ಹೋಗಿದ್ದವಳಿಗೆ ಇದು ವಿಶೇಷವೆನ್ನಿಸದಿದ್ದರೂ ಸಹ ಆ ಸ್ಪರ್ಶ ಕಿರಿಕಿರಿಯುಂಟು ಮಾಡಿತ್ತು. ಬ್ಯಾಗಿನಲ್ಲಿದ್ದ ಕುಡಿಯುವ ನೀರಿನಿಂದ ಕೈತೊಳೆದುಕೊಂಡು ದಣಿವಾರಿಸಿಕೊಳ್ಳುವ ನೆಪದಲ್ಲಿ ಕೂತು ಸ್ವಲ್ಪ ಹೊತ್ತು ಅವನನ್ನೇ ಗಮನಿಸಿದೆ.
ಆತ ಸಾಂಪ್ರದಾಯಿಕರಂತೆ ಕಂಡುಬಂದ ಹೆಣ್ಣುಮಕ್ಕಳಿಗೆ ಕೈಕುಲುಕುವ ಗೋಜಿಗೆ ಹೋಗದೆ ಸ್ವಲ್ಪ ಭಿನ್ನವಾಗಿ ಕಾಣಬರುವ ಹೆಂಗಸರಿಗೆ ಮಾತ್ರ ಕೈ-ಕೊಡುತ್ತಿದ್ದ ಆಸಾಮಿ!
ಸ್ವಲ್ಪ ಹೊತ್ತಿನ ಮೇಲೆ ಎದ್ದು ಹೋಗಿ ತರಾಟೆಗೆ ತೆಗೆದುಕೊಂಡೆ. ನಾವು ಹೆಣ್ಣುಮಕ್ಕಳು ಹೋರಾಟ ಮಾಡಿ ಅಲ್ಪಸ್ವಲ್ಪ ಹಕ್ಕುಗಳನ್ನ ಪಡೆದುಕೊಂಡಿದೀವಿ. ಆ ನೆಪದಲ್ಲಿ ನಿನ್ನಂತವರು ಕಂಡಕಂಡ ಹೆಂಗಸರ ಕೈಸವರಲಿ ಅಂತಲ್ಲ ಎಂದಾಗ ಇದನ್ನು ನಿರೀಕ್ಷಿಸದಿದ್ದ ಆತ ಕಕ್ಕಾಬಿಕ್ಕಿಯಾದ. ಬೆಟ್ಟ ಹತ್ತುತ್ತಿದ್ದ ಕೆಲವರು ಅಲ್ಲೇ ನಿಂತರು. ಇನ್ನೇನು ಕಾದಿದೆಯೋ ಎಂದುಕೊಂಡು ಆತ ದಡಬಡನೆ ಮೆಟ್ಟಿಲನ್ನು ಹಾರುತ್ತಾ ಕೆಳಗೆ ಓಡಿಯೇ ಹೋದ.
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ I know to read palm ಎಂದು ಹೇಳುತ್ತಾ ಕೆಲವು ಜಾತ್ರೆಮನ್ಮಥರು ಹಸ್ತಸಾಮುದ್ರಿಕದ ನೆಪದಲ್ಲಿ ಹೆಣ್ಮಕ್ಕಳ ಅಂಗೈಯನ್ನು ಸವರುತ್ತಾ ಕೂರುವ ಆಟಗಳನ್ನ ಗಮನಿಸಿದ್ದೆ. ಒಬ್ಬ ಅದೇ ನೆಪದಲ್ಲಿ ನನ್ನ ಕೈ ಕೇಳಿದಾಗ, ‘ನನ್ನ ಮೂತಿ ನೋಡಿದ್ರೆ ಪಾಮಿಸ್ಟ್ರಿಯಲ್ಲಿ ನಂಬಿಕೆ ಇರೋ ತರ ಕಾಣಿಸ್ತೀನಾ?’ ಎಂದು ಗುರಾಯಿಸಬೇಕಾಯಿತು.
ನಿನ್ನ ಸ್ನೇಹಿತೆ ನಾರ್ಮಲ್ ಅಲ್ಲ ಎಂದು ಅವನ ಗೆಳತಿಯ ಹತ್ತಿರ ನನ್ನ ಬಗ್ಗೆ ದೂರಿದ್ದ ಭೂಪ!
ಸಹಜ ಲೈಂಗಿಕತೆಯನ್ನು ಸಹ ಅದುಮಿಡುವ ಸಮಾಜದ ಒಂದು ರೋಗವಿದು! ಹೋಳಿ ಆಡುವ ನೆಪದಲ್ಲಿ ಸಿಕ್ಕಸಿಕ್ಕವರನ್ನೆಲ್ಲ ಮುಟ್ಟಬಹುದು. ಇಲ್ಲಾ, ವಿರಾಗಿಗಳ ‘ಭಕ್ತೆ’ ಆಗಿದ್ದಲ್ಲಿ ಹಿಂಬಾಗಿಲಿನಿಂದ ಓಡಿಹೋಗಿ ಡಿಕ್ಕಿ ಹೊಡೆದು ಕಾಲಿಗೆ ಬೀಳುವ ನೆಪದಲ್ಲಿ ನುಲಿಯಬಹುದು! ಮೊದಲನೆಯದಕ್ಕೆ ಸಾಮಾಜಿಕ ಸಮ್ಮತಿ ಇದ್ದರೆ ಎರಡನೆಯದಕ್ಕೆ ಸಾಂಸ್ಥಿಕ ಮುದ್ರೆ ಬಿದ್ದಿರುತ್ತದೆ. ವಿದ್ರೋಹದ ರೀತಿಗಳು ಹಲವಾರು!
We are a nation of rank hypocrisy!
ಅಮೆರಿಕಾದಲ್ಲಿ ಒಮ್ಮೆ ಮಿನರ್ವಾದಲ್ಲಿ ಮಸಾಲೆದೋಸೆ ತಿನ್ನಲು ಹೋಗಿದ್ದೆವು. ಹರಿಯ ಪರಿಚಿತರು ಯಾರೋ ಹೊರಗೆ ಸಿಕ್ಕಿದ್ದರು. ನಾನು ಒಳಗೆ ಹೋಗಿ ಮೆನು ನೋಡುತ್ತಾ ಕೂತಿದ್ದೆ. ಅಲ್ಲಿಗೆ ಬಂದ ಒಬ್ಬ ಅಮೆರಿಕನ್ ತುಂಬ ಸಹಜವಾಗಿ ‘shall we go for a date?’ ಅಂದ. ಒಪ್ಪಿಗೆಯಿಲ್ಲವೆಂದು ನಗುತ್ತಾ ತಲೆಯಾಡಿಸಿದೆ. ಅವನು ಅಷ್ಟೇ ಸಹಜವಾಗಿ, have a good day ಎಂದಷ್ಟೇ ಹೇಳಿ ಹೊರಟು ಹೋದ.
ನಮ್ಮ ಸುತ್ತು-ಬಳಸುಗಳಿಗಿಂತ ಅವರ ಸೀದಾ ಹಾದಿ ಎಷ್ಟೋ ವಾಸಿ ಅಂತ ಹಲವು ಬಾರಿ ಅನ್ನಿಸಿದೆ.

ಕೊಟ್ಟಿಗೆಹಾರದ ಫೋಟೋಗ್ರಫಿ ಶಿಬಿರ ತಂಗಾಳಿಯಂಥ ಒಂದು ಅನುಭವವೇ. ನನಗೆ ಒಂದೋ ಪಾಠ ಮಾಡಬೇಕು, ಇಲ್ಲ ಪಾಠ ಕೇಳಿಸಿಕೊಳ್ಳುತ್ತಿರಬೇಕು. ಬದುಕಿನ ಗಂಧರ್ವ ಗಳಿಗೆಗಳು ನನ್ನ ಮಟ್ಟಿಗಂತೂ ಅವೇ.
ತೇಜಸ್ವಿ ಬದುಕಿದ್ದ ಮೂಡಿಗೆರೆ ಕೊಟ್ಟಿಗೆಹಾರ ಇತ್ಯಾದಿಗಳು ಹಸಿರನ್ನು ಹೊತ್ತು ಸೋನೆಯಲ್ಲಿ ಮಿಂದು ನಿಂತಿದ್ದವು. ಜೈ ಸಿದ್ರಾಮಯ್ಯ ಬಸ್ಸಿನ ಕೊನೆಯ ಸೀಟಿನ ಹರಟೆ ನಗುಗಳ ನಂತರ ಸಮಾನಮನಸ್ಕ ಸ್ನೇಹಿತರ ಗುಂಪಿಗೆ ಸರಾಗವಾಗಿ ಜಾರಿಕೊಂಡಿದ್ದೆ.
ಶಿಬಿರದ ಆಲಾಪವೇ ಹಿತವಾಗಿತ್ತು. ಫೋಟೋಗ್ರಫಿ ಎನ್ನುವುದು ತಂತ್ರಜ್ಞಾನದಷ್ಟೇ ಕಲೆಯೂ ಹೌದು ಎಂಬ ಅರಿವಿನ ಆಳಕ್ಕೆ ಆನಂದ್ ಬಂದಿದ್ದ ಇಪ್ಪತ್ತೈದು ಮಂದಿಯನ್ನೂ ನಿಧಾನವಾಗಿ ಜೊತೆಯಲ್ಲಿ ಒಯ್ಯುತ್ತಿದ್ದರು. ಅಲ್ಲಿ ಹತ್ತು ವರ್ಷದ ಅನ್ವಿತಾರಂತವರು ಒಂದು ಕಡೆ; ಜೊತೆಯಲ್ಲಿ ಅವಳ ಅಜ್ಜಯ್ಯ ಸಹ ಇದ್ದರು. ನಡುವಿನಲ್ಲಿ ಅವರು, ಇವರು, ನಾನು, ಎಲ್ಲರೂ!
ಇಂಥಾ ಪ್ರಚಂಡ ವೈವಿಧ್ಯವನ್ನು ಅಪ್ಪರಾಣೆ ನಾನು ಯಾವತ್ತೂ ನಿಭಾಯಿಸಿದ್ದಿಲ್ಲ. ಕುತೂಹಲದಿಂದ ಆನಂದರನ್ನೆ ಗಮನಿಸುತ್ತಿದ್ದೆ. ನಡುವೆ ಯಾರಿಗಾದರೂ ಹೊರಗುಳಿದಂತೆ ಅನ್ನಿಸಿರಬಹುದಾ ಎಂದು ಮಂದಿಯ ಕಡೆಗೆ ಕದ್ದು ಕಣ್ಣು ಹಾಯಿಸಿದ್ದೆ. ಎಲ್ಲರೂ ಕಣ್ಣು ಕಿವಿಗಳನ್ನು ಕೀಲಿಸಿ ಕೂತಿದ್ದಂತೆ ತೋರಿತು.
ಆನಂದ್ ಮಾತ್ರ ಹಾಯಾಗಿ ಒಂದು ಪರಿಕಲ್ಪನೆಯಿಂದ ಇನ್ನೊಂದಕ್ಕೆ ಜಾರಿಕೊಳ್ಳುತ್ತಾ, ಚಿಕ್ಕವರ ದೊಡ್ಡವರ ಪ್ರಶ್ನೆಗಳಿಗೆ ಅಷ್ಟೇ ಸಾವಧಾನದಿಂದ ಉತ್ತರಿಸುತ್ತಾ ಸಾಗಿದ್ದರು. ನಡುವಿನಲ್ಲಿ ಬಂದ ‘ಸರ್, ಆ ಚಿತ್ರ ನ್ಯಾಚುರಲ್ಲಾ? ಅಥವಾ ಎಡಿಟ್ ಮಾಡಿರೋದಾ?’ ಎಂಬ ಪ್ರಶ್ನೆ ಕಿತಾಪತಿ ಇರಬಹುದೇ ಎನ್ನುವ ಗುಮಾನಿ ಎಲ್ಲರಿಗೆ ಬಂದಿತ್ತು.
ತಂತ್ರ, ತಾಂತ್ರಿಕತೆ, ಸಾಧನ, ತಂತ್ರಜ್ಞಾನ ಇತ್ಯಾದಿಗಳೆಲ್ಲ ಎಷ್ಟರ ಮಟ್ಟಿಗೆ ‘ನ್ಯಾಚುರಲ್’ ಆಗಿರಲು ಸಾಧ್ಯ? ಬರಿಗಣ್ಣಿನಿಂದ ನೋಡಿದ್ದು ಸಹ ನಮ್ಮ ಬುದ್ಧಿ, ಭಾವ, ನೆನಪು, ಇತ್ಯಾದಿಗಳ ಚೌಕಟ್ಟಿನಲ್ಲಿ ಎಡಿಟ್ ಆಗಿರುವುದಿಲ್ಲವೇ? ಇದ್ದದ್ದು ಇದ್ದ ಹಾಗೆ ದಕ್ಕುವುದು ಎನ್ನುವ ಪರಿಕಲ್ಪನೆ ಬಂದಿದ್ದಾದರೂ ಎಲ್ಲಿಂದ? ಇದೊಂದು ಮೂಲದ ಮೋಹವೊ, ವ್ಯಸನವೊ ಇರಬೇಕು. ಭಾಷಾಂತರದ ನೆಲೆಯಲ್ಲಿ ಸಹ ಇಂಥದ್ದೇ ಪ್ರಶ್ನೆಯನ್ನು ಕೇಳಲಾಗುತ್ತದೆ.
ರೇಗಿದಂತೆ ಕಂಡರೂ ಆನಂದರ ಉತ್ತರದಲ್ಲಿ ಸಾಕಷ್ಟು ಸಹನೆಯಿತ್ತು ಅಂತನ್ನಿಸಿತ್ತು. ಅದೇ ಪ್ರಶ್ನೆ ಯಾವಾಗಲೋ ಪುನಃ ಬಂದಾಗ, ‘ಮನೆಯಿಂದ ಹೊರಗೆ ಬರುವಾಗ ಸಹ ಎಡಿಟ್ ಆಗಿಯೇ ಬರ್ತೀವಿ ತಾನೇ?’ ಎಂದು ಉತ್ತರ ಕೊಟ್ಟರು. ಖೊಳ್ಳನೆಯ ನಗು ಎದ್ದಿತ್ತು. ಹೊರಗೆ ಬರುವಾಗ ಯಾಕೆ, ಮನೆಯೊಳಗೂ ಎಡಿಟ್ ಆಗಿಯೇ ಇರ್ತೀವಿ. ನಿದ್ದೆಯಿಂದ ಎಚ್ಚರವಾದ ತಕ್ಷಣವೇ ನಮ್ಮ ಬುದ್ಧಿಭಾವಗಳ ಎಡಿಟಿಂಗ್ ಶುರುವಾಗುತ್ತೆ ಅಂತ ಸೇರಿಸಬೇಕೆನ್ನಿಸಿತ್ತು.
ಫೋಟೋಗ್ರಫಿಗೆ ಮಾತ್ರ ಯಾಕೆ ಈ ಪ್ರಶ್ನೆ? ಬರಹಕ್ಕೆ ಸಂಬಂಧಪಟ್ಟಂತೆ ಯಾಕೆ ಇಲ್ಲ? ನೀವು ಬರೆದಿದ್ದೆಲ್ಲ ನ್ಯಾಚುರಲ್ಲಾ ಅಥವಾ ಎಡಿಟ್ ಮಾಡ್ತೀರಾ ಅಂತ ನನ್ನ ಕೇಳಿದರೆ ಉತ್ತರ ಏನಾಗಿರುತ್ತೆ ಅಂತ ಅರೆಗಳಿಗೆ ಯೋಚಿಸುವ ಹಾಗಾಯಿತು. ‘ಹೋಗಯ್ಯೋ!’ ಎಂದಿರುತ್ತಿದ್ದೇನೋ ಏನೊ.
ಆನಂದ್ ಹಾಗೇನೂ ಹೇಳಲಿಲ್ಲ. ಸುಮಾರು ಎರಡು ಗಂಟೆಗಳ ಥಿಯರಿಯ ನಂತರ ಮೂಡಿಗೆರೆ ಸಂತೆಯಲ್ಲಿ ನಮ್ಮ ಪ್ರಾಕ್ಟಿಕಲ್ಸ್! ಬಂದು ನನ್ನ ಕುತ್ತಿಗೆಗೆ ಇಳಿಬಿದ್ದ ಕ್ಯಾಮೆರಾದ ಭಾರಕ್ಕೆ ಬೆಚ್ಚಿಬಿದ್ದು, ‘ಅಯ್ಯೋ, this feels heavier than marriage!’ ಎಂದು ಉದ್ಗರಿಸಿದಾಗ ಹಲವು ಮಂದಿ ನಕ್ಕ ರೀತಿಯಲ್ಲೆ ಬಾಂಧವ್ಯ ಬೆಸೆದುಕೊಂಡಂತೆ ಅನ್ನಿಸಿತ್ತು.
ಸಂತೆಯಲ್ಲಿ ಮಾರುತ್ತಿದ್ದ ಮಂದಿ ಅದೇನೋ ವಿಚಿತ್ರ ವಿಸ್ಮಯದಲ್ಲಿ ನಮ್ಮನ್ನೆಲ್ಲ ತಕ್ಷಣವೇ ತೆಕ್ಕೆಗೆ ತೆಗೆದುಕೊಂಡಿದ್ದರು. ನೀವು ಯಾರು ಯಾಕೆ ಏನು ಎಂದು ಕೇಳುತ್ತಲೇ ಪೋಸು ಕೊಡುವ ರೀತಿಗೆ ನಗು ಬಂದಿತ್ತು. ಬಣ್ಣಗಳ ಸಂಭ್ರಮವೋ ಸಂಭ್ರಮ. ಬ್ಯಾಡಗಿಯ ಕೆಂಪು ಗುಡ್ಡೆ, ಪುರಿಯ ರಾಶಿ, ಕಾರಾಸೇವಿನ ಮೂಟೆಗಳು, ಬಗೆಬಗೆಯ ಮೀನುಗಳು… ಅಯ್ಯಮ್ಮ!
ಮೀನಿನ ರಾಶಿಗಳತ್ತ ಯಾರು ಹೋಗುತ್ತಾರೆ ಎಂದು ಮತ್ತೊಮ್ಮೆ ಕದ್ದು ಕಣ್ಣು ಹಾಯಿಸಿದೆ. ಪುಳಿಚಾರ್ ಮಂದಿಯನ್ನು ಬಿಡಿ, ಮೀನು ತಿನ್ನುವವರು ಸಹ ಅತ್ತ ಅಷ್ಟಾಗಿ ಹೋಗಿಲ್ಲ ಅಂತನ್ನಿಸಿತು. ತಿನ್ನಲು ಮಾತ್ರ ರುಚಿ ಅಂತಲೇ? ಸಿಟಿಯ ಮಧ್ಯಮವರ್ಗದ ಮಂದಿಯ ಬಗ್ಗೆ ಇದು ಏನು ಹೇಳುತ್ತದೋ!
ನಿಜ ಹೇಳಬೇಕೆಂದರೆ ಹಾಗೆ ಮಂದಿಯ ಅನುಮತಿಯಿಲ್ಲದೆ ಪಟ ಹೊಡೆಯುವ ಬಗ್ಗೆ ನನಗೆ ಸಾಕಷ್ಟು ಹಿಂಜರಿಕೆಯಿತ್ತು. ನಾನಿದ್ದ ಪರದೇಶದಲ್ಲಿ ಹೀಗೆ ಮಾಡಿ ಬಚಾವಾಗಬಹುದಿತ್ತೆ? ಹಾಗಂತ ನಾವು ಭಾರತೀಯರು ಮುಗ್ಧರು, ಸಹನಾಶೀಲರು ಎಂಬ ಪುರಾಣವೇನೂ ಬೇಕಿಲ್ಲ. ಅದಕ್ಕಿರುವ ಸಾಮಾಜಿಕ ಕಾರಣಗಳೇ ಬೇರೆ ಎಂದುಕೊಳ್ಳುತ್ತಾ ಮುಂದೆ ಹೋದೆ.
ಆನಂದ್ ಎಲ್ಲರನ್ನೂ ಗಮನಿಸುತ್ತಾ, ನಡುನಡುವೆ ಕ್ಲಿಕ್ಕಿಸುತ್ತಾ ಬರುತ್ತಿದ್ದದ್ದು ಕಾಣಿಸಿತು. ತಕ್ಷಣವೇ, ‘ಎರ್ರಾಬಿರ್ರಿ ಕ್ಲಿಕ್ಕಿಸಿದ್ದೇನೆ ಗುರೂ, ನೋಡಿದಾಗ ನಗಬಾರದು ಮತ್ತೆ,’ ಅಂತ ಎಚ್ಚರಿಕೆಯನ್ನೂ ಕೊಟ್ಟೆ. ಅವರು ಬೆಳಿಗ್ಗೆ ಹೇಳಿದ್ದನ್ನು ಮತ್ತೊಮ್ಮೆ ಪ್ರಾಮಾಣಿಕವಾಗಿ ಉಚ್ಚರಿಸಿದರು. ‘ಹೀಗೇ ಕ್ಲಿಕ್ಕಿಸಬೇಕು ಅಂತ ನಿಯಮವೇನೂ ಇಲ್ಲ. ಹೇಗೆ ಬೇಕಾದರೂ ಹೊಡೀರಿ!’
‘ಮೀನಿನ ರಾಶಿಯ ಕಡೆಗೆ ಯಾಕೆ ಹೆಚ್ಚು ಮಂದಿ ಹೋಗಲಿಲ್ಲ?’ ಎಂಬ ಪ್ರಶ್ನೆ ನಾಲಿಗೆಯ ತುದಿಗೆ ಬಂದಿತ್ತು. ಅಧಿಕಪ್ರಸಂಗದಂತೆ ಕೇಳಿಸುತ್ತೇನೋ ಎಂದುಕೊಂಡು ತೆಪ್ಪಗಾದೆ. ಅಂದರೆ ನಾವು ನೋಡಿದ್ದೆಲ್ಲವನ್ನೂ ಕ್ಲಿಕ್ಕಿಸುವುದಿಲ್ಲ. ಕೆಲವನ್ನು ಆರಿಸಿಕೊಳ್ಳುತ್ತೇವೆ. Gaze ಎನ್ನುವುದು ವೈಯುಕ್ತಿಕವಾದ್ದಷ್ಟೇ ಸಾಮಾಜಿಕ ಮತ್ತು ಸಾಂಸ್ಕೃತಿಕವೂ ಆಗಿರುತ್ತದೆ ಅಂತ ಅಂದುಕೊಳ್ಳುತ್ತಾ ಇನ್ನೊಂದು ಕಡೆಗೆ ಹೋದೆ.

ಮರುದಿನ ಬೆಳಗಿನಲ್ಲೆ ದೇವರಮನೆ ಗುಡ್ಡಕ್ಕೆ ನಮ್ಮ ಸವಾರಿ! ಅದೊಂದು ಮಿಲಿಯನ್ ಡಾಲರ್ ಅನುಭವ ಅಂತ ಪ್ರಾಮಾಣಿಕವಾಗಿ ಅನ್ನಿಸಿತ್ತು. ಕಾಫಿ ಹೂಗಳು ಬಿರಿದು ಬೆಟ್ಟವೆಲ್ಲ ತೆಳುವಾದ ಬಿಳಿಯ ಪರದೆಯನ್ನು ಹೊದ್ದು ನಿಂತಿದ್ದಂತೆ ಕಂಡಿತು. ಮೇಲೆ ಹೋದರೆ ಕೆಳಗಿನ ಕಣಿವೆ, ಸುತ್ತಮುತ್ತಲ ಬೆಟ್ಟಸಾಲೆಲ್ಲ ಮಂಜಿನ ಪರದೆಯಿಂದ ಹೊರಬಂದು ನಿಧಾನವಾಗಿ ಏರುತ್ತಿದ್ದ ಸೂರ್ಯನಿಗೆ ಕಣ್ಣು ಹೊಡೆಯಹತ್ತಿದ್ದವು.
Landscape photography! ಬೆಟ್ಟಕಣಿವೆಗಳನ್ನು ತುಂಬಿ ಹರಿಯುತ್ತಿದ್ದ ಕಡುಜೇನು! ಸತ್ಯಂ ಶಿವಂ ಸುಂದರಂ!
‘ಹಳ್ಳಿಯ ಬದುಕಿನ ಒಂದು ದಿನ’ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಆನಂದ್ ಒಂದು ಉಪನ್ಯಾಸವನ್ನು ಪ್ರಾತ್ಯಕ್ಷಿಕೆಯ ಮೂಲಕ ಸಾದರಪಡಿಸಿದಾಗ ಪ್ರಶ್ನೆ ಕೇಳದೆ ಇರಲಾಗಲಿಲ್ಲ. ಕೊಟ್ಟಿಗೆಹಾರದ ಶಿಬಿರ ಯುನಿವರ್ಸಿಟಿ ಅಲ್ಲ ಎಂಬ ವಾಸ್ತವ ಪ್ರಜ್ಞೆಯೂ ನನ್ನನ್ನು ತಡೆಯಲಿಲ್ಲ.
‘ಯಾಕೆ ನಮ್ಮ ದೃಷ್ಟಿ ಕೆಲವನ್ನು ಮಾತ್ರ ಆರಿಸಿಕೊಳ್ಳುತ್ತದೆ? ವಸಾಹತುಶಾಹಿ ಪ್ರಭುಗಳು ನಮ್ಮ ದೇಶ-ಸಂಸ್ಕೃತಿಗಳನ್ನು ಆಕ್ರಮಿಸಿಕೊಳ್ಳಲು, ಮತ್ತದನ್ನು ಸಮರ್ಥಿಸಿಕೊಳ್ಳಲು ತಕ್ಕ ರೀತಿಯಲ್ಲಿ ಒದಗಿಬರುವಂತೆ ನಮ್ಮನ್ನು ಅವರ ದೃಷ್ಟಿಯ ವಸ್ತುವಾಗಿಸಿಕೊಂಡರು. ನಮ್ಮಂತಹ ಸಿಟಿ ಮಂದಿಯ ದೃಷ್ಟಿ ಸಹ ‘ಗ್ರಾಮೀಣ’ ಎನ್ನುವುದನ್ನು ವಿಲಕ್ಷಣವಾಗಿ ರಮ್ಯೀಕರಿಸುತ್ತಿದೆ ತಾನೆ? ಬಣ್ಣಬಣ್ಣದ ಫೋಟೋ ತೆಗೆಯಲು ಸಂತೆಗೆ ಹೋಗುತ್ತೇವೆ. ಮಾಲ್‌ಗೆ ಹೋಗುವುದಿಲ್ಲ. ಒಂದು ಕಡೆ ರಮ್ಯ ಗ್ರಾಮೀಣ, ಇನ್ನೊಂದು ಕಡೆ ಸುಂದರ ಪ್ರಕೃತಿ. ಇಷ್ಟರ ಮೇಲೂ ನಾವು ಸಂತೆಯ (ಗ್ರಾಮೀಣ) ಸಮುದಾಯಕ್ಕೆ ಸೇರಲು ಇಷ್ಟಪಡುವುದಿಲ್ಲ. ಇತ್ತ ದೇವರಗುಡ್ಡಕ್ಕೆ ಬಂದು ನೆಲೆಯೂರಬೇಕು ಅಂತ ಸಹ ಅನ್ನಿಸುವುದಿಲ್ಲ. ಅಂದರೆ ನಮ್ಮ ಸಿಟಿ ಮಧ್ಯಮವರ್ಗದ ಮಂದಿಗೆ ಅವು ದೂರದಿಂದ ಕ್ಲಿಕ್ಕಿಸುವ ರಜಾದಿನದ ಖುಷಿ ಅಷ್ಟೆ, ಅಲ್ಲವ?’
ಭಾಷೆ ಅರ್ಥ ಮಾಡಿಸುವುದಕ್ಕಿಂತ ಅಪಾರ್ಥಕ್ಕೆ ಹಾದಿಯನ್ನು ಬಿಚ್ಚುತ್ತದೆ ಎನ್ನುವುದು ನನಗೆ ಗೊತ್ತು. ಕಲೆಯ ಸೃಷ್ಟಿಗೆ ಗ್ರಾಮೀಣ ಮತ್ತು ಪ್ರಕೃತಿ ತೆರೆದುಕೊಂಡಷ್ಟು ನಗರ ಮತ್ತು ಆಧುನಿಕ ತೆರೆದುಕೊಳ್ಳುವುದಿಲ್ಲವೊ ಏನೊ ಅಂತಷ್ಟೇ ಹೇಳಬೇಕಿತ್ತು. ಯಾಕೆಂದರೆ ಗ್ರಾಮೀಣ ಮತ್ತು ಪ್ರಕೃತಿಗಳಲ್ಲಿ ಸೌಂದರ್ಯ ಇರುತ್ತದೆ. ನಾವು ಕ್ಲಿಕ್ಕಿಸಲು ಮಾಲ್‌ಗೆ ಹೇಗೆ ಹೋಗುವುದಿಲ್ಲವೋ ಹಾಗೆಯೇ ಸ್ಲಮ್ಮಿಗೂ ಹೋಗುವುದಿಲ್ಲ. ಅದು ಫೋಟೋಗ್ರಾಫಿಕ್ ಸೌಂದರ್ಯವನ್ನು ಶುದ್ಧನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪರಿಣಿತರಿಗೆ ಮಾತ್ರ ಸಾಧ್ಯವೋ ಏನೋ. ಯಾಕೆಂದರೆ ಫೋಟೋಗ್ರಫಿ ಕೇವಲ ಹವ್ಯಾಸವಾದಾಗ ಕಣ್ಣಿಗೆ ಹಿತವಾದದ್ದನ್ನು ಮಾತ್ರ ಆರಿಸಿಕೊಳ್ಳುತ್ತದೆ. ತೇಜಸ್ವಿಗೆ ಅದು ಕೇವಲ ಹವ್ಯಾಸವಾಗಿರಲಿಲ್ಲ.
ನನ್ನದು ಅಕಡೆಮಿಕ್ ಸಿನಿಕತನವಿರಬಹುದಾ ಅಂತ ನಂತರ ಪ್ರಶ್ನಿಸಿಕೊಂಡೆ. ಶಿಬಿರದ ಉದ್ದೇಶವಿದ್ದಿದ್ದು ನಮ್ಮ ಸುತ್ತಮುತ್ತಲನ್ನು ಧ್ಯಾನಸ್ಥ ಮನಸ್ಸಿನಲ್ಲಿ ಗಮನಿಸುವ ಅಭ್ಯಾಸವನ್ನು ಬೆಳೆಸುವುದಕ್ಕೆ. ಅದು ಪ್ರಾರಂಭಿಕ ಹಂತದ ಅಗತ್ಯಕ್ಕೆ ತಕ್ಕಂತೆ ಸೌಂದರ್ಯದ ನೆಲೆಗಳನ್ನೇ ಆರಿಸಿಕೊಂಡರೆ ಏನು ತಪ್ಪು?
ಮರುದಿನ ಬೆಳಿಗ್ಗೆ ಹಕ್ಕಿಗಳನ್ನು ಕ್ಲಿಕ್ಕಿಸಲು ಕಾಫಿ ತೋಟಗಳ ನಡೆಯುತ್ತಾ ಸಾಗಿದ್ದೆವು. ಒಂದು ಸತ್ಯವಂತೂ ನನ್ನ ಅರಿವಿಗೆ ಹೊಳೆದಿತ್ತು. ನಾನು ಹಕ್ಕಿಯವಳಲ್ಲ, ಚಿಟ್ಟೆಯವಳೂ ಅಲ್ಲ. ಬಹುಶಃ ಲ್ಯಾಂಡ್ ಸ್ಕೇಪ್; ಬಹುಶಃ ಮನುಷ್ಯರ ಮುಖದ ಮೇಲಿನ ಭಾವನೆಗಳನ್ನು ಹಿಡಿಯುವ ಆಸಕ್ತಿ ಇರಬಹುದು. ಆದರೆ ಹಕ್ಕಿಯನ್ನೊ ಚಿಟ್ಟೆಯನ್ನೊ ಕಂಡು ಇನ್ನೇನು ಕ್ಲಿಕ್ಕಿಸಬೇಕು ಎನ್ನುವ ಹೊತ್ತಿಗೆ ಅವು ಹಾರಿ ಹೋಗಿರುತ್ತವೆ. ‘ಹೋಗಲೇ!’ ಎಂದು ಹಾರಿ ಹೋಗುವುದು ಕೇವಲ ನನ್ನ ಸವಲತ್ತಲ್ಲವಲ್ಲ? ಆದರೂ ಹಕ್ಕಿ ಚಿಟ್ಟೆಗಳನ್ನು ಗಮನಿಸುವ ಆಸಕ್ತಿ ನನ್ನಲ್ಲಿ ಮೂಡಿದ್ದು ನಿಜ. ಮೈಸೂರಿಗೆ ಹಿಂತಿರುಗಿದ ಮೇಲೆ ಒಂದು ದುರ್ಬೀನು ಕೊಳ್ಳಲು ಅಮೇಜಾನಿನಲ್ಲಿ ಹುಡುಕಿದ್ದೇನೆ. ನನ್ನ ವಾಸದ ಕಡೆ ಚಿಟ್ಟೆ ಹಕ್ಕಿಗಳಿಗೆ ಕೊರತೆಯಂತೂ ಇಲ್ಲ.
ಅದೆಷ್ಟು ಬೇಗ ಆರಾಮಕ್ಕೆ ಮನಸ್ಸು ಒಗ್ಗಿಕೊಂಡುಬಿಡುತ್ತದೋ! ತೇಜಸ್ವಿ ಪ್ರತಿಷ್ಠಾನದ ಸುತ್ತಮುತ್ತಲಿದ್ದ ಹಸಿರು ಸೌಂದರ್ಯ, ಹಿತವಾದ ಗಾಳಿ, ಮಲೆನಾಡಿನ ರುಚಿರುಚಿಯಾದ ಊಟ, ಜೊತೆಗೆ ಆನಂದರ ಮಜಬೂತಾದ ಜೀಪಿನಲ್ಲಿ ಸಮಾನಮನಸ್ಕ ಸ್ನೇಹಿತರೊಂದಿಗೆ ಸುತ್ತಾಟ, ಎಲ್ಲವೂ ಹದವಾಗಿ ಹಿತವಾಗಿತ್ತು. ಆದರೂ ಮೂರನೆಯ ದಿನದ ಮಧ್ಯಾಹ್ನದ ಹೊತ್ತಿಗೆ ತಲೆ ಮನೆಗೆ ಮರಳಲು ತಹತಹಿಸುತ್ತಿತ್ತು ಎನ್ನುವುದು ಸಹ ಅಷ್ಟೇ ನಿಜ.

ಒಂದು ಅಭಿಪ್ರಾಯವನ್ನು ಹೇಳದೇ ಇರಲಾರೆ. ತೇಜಸ್ವಿಯವರ ಪ್ರತಿಕೃತಿ ಎಂದು ಹೇಳಲಾಗುವ ವಿಚಿತ್ರ ತರದ ಗೊಂಬೆಗಳು (ಅವು ಮಿಕ್ಕಿಮೌಸ್ ತರ ಇವೆ ಎಂದು ಆನಂದ್ ಸಮಾರೋಪದಲ್ಲಿ ಬಾಯಿ ಬಿಟ್ಟು ಹೇಳಿಯೇಬಿಟ್ಟರು!) ತೇಜಸ್ವಿಯವರನ್ನು ಸ್ವಲ್ಪವಾದರೂ ಬಲ್ಲ ಯಾರನ್ನೂ ಖಿನ್ನತೆಗೆ ದೂಡಬಲ್ಲವು ಅಂತನ್ನಿಸಿತು. ತೇಜಸ್ವಿ ತಂದೆಯ ಬಗ್ಗೆ ತಮಗಿದ್ದ ಆಳವಾದ ಪ್ರೀತಿ-ಗೌರವಗಳ ನಡುವೆಯೇ ಕುವೆಂಪುರ ಪ್ರಭಾವ-ವಲಯದಿಂದಾಚೆ ನಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಂಥ ಅದಮ್ಯ ಸೃಷ್ಟಿಶೀಲ ವ್ಯಕ್ತಿ. ಸ್ವಾತಂತ್ರ್ಯವನ್ನು ಅದರ ಗಹನವಾದ ಅರ್ಥದಲ್ಲಿ ಬದುಕಿದವರು. ಅಂತಹ ಪ್ರಚಂಡ ಸ್ವಾತಂತ್ರ್ಯಪ್ರಿಯನನ್ನು ಸಾಂಸ್ಥಿಕತೆ ತನ್ನ ಮಿತಿಗಳ ನೆಪದಲ್ಲಿ ಮಿಕ್ಕಿಮೌಸ್ ರೂಪಕ್ಕೆ ಇಳಿಸಿರುವುದು ಮಾತ್ರ ವಿಪರ್ಯಾಸದ ಪರಮಾವಧಿ ಅಂತನಿಸಿತು.

