ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.
ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ ಬರೆದ ಮುನ್ನುಡಿ
ಲಿಂಗರಾಜ ಸೊಟ್ಟಪ್ಪನವರು ಮೂಲತಃ ವಿಜ್ಞಾನ ಶಿಕ್ಷಕರು. ಅವರ ಮೊದಲ ಸಂಕಲನವಿದು. ಇಂಥವರೆ ಕತೆಗಾರರಾಗಬೇಕೆಂಬ ಗಡಿಗಳೇನೂ ಇಲ್ಲ. ಈಗ ಎಲ್ಲ ಗಡಿಗಳೂ ಮುರಿದು ಬಿದ್ದಿವೆ. ಹಾಗೆಯೇ ಸಾಹಿತ್ಯವನ್ನು ನಿರ್ದೇಶಿಸುತ್ತಿದ್ದ ವಾದ ಪಂಥ ಚಳವಳಿಗಳೂ ಕೂಡ ಈಗ ಇಲ್ಲ. ಒಂದು ರೀತಿಯ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಈ ಮುಕ್ತತೆಯ ಕಾರಣದಿಂದಾಗಿಯೇ ಲಿಂಗರಾಜ ತಮ್ಮ ಕತೆಗಳಿಗೆ ವಸ್ತುಗಳನ್ನು ಮುಕ್ತವಾಗಿ ನಿರ್ಭಿಡೆಯಿಂದ, ತೀರಾ ಅಲಕ್ಷಿಸಬಹುದಾದದ್ದು ಎನ್ನುವಂತಹ ತಾಣಗಳಿಂದಲೂ ಎತ್ತಿಕೊಳ್ಳುತ್ತಾರೆ. ಅವರ ಬಹುಪಾಲು ಕತೆಗಳ ಜಗತ್ತು ಎದ್ದು ಬರುವದು ನಮ್ಮ ಊರು ಕೇರಿಗಳಿಂದ, ಲಂಬಾಣಿ ತಾಂಡಾಗಳಿಂದ. ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ. ಇಲ್ಲಿನ ಕತೆಗಳನ್ನು ಪ್ರವೇಶಿಸುತ್ತಿದ್ದಂತೆ ಲಿಂಗರಾಜ ಅವರಿಗೆ ಗ್ರಾಮ್ಯಾನುಭವ ಎಷ್ಟೊಂದು ಗಾಢವಾಗಿ ಪ್ರಭಾವಿಸಿದೆ ಎಂಬುದು ತಟ್ಟನೆ ನಮ್ಮ ಮನಸ್ಸಿಗೆ ತಾಗುತ್ತದೆ.
ಇಲ್ಲಿನ ಬಹುಪಾಲು ಕತೆಗಳು ಈಗಾಗಲೆ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಹಲವು ಬಹುಮಾನ ಗಳಿಸಿವೆ. ಓದುಗರ ಮೆಚ್ಚುಗೆ ಗಳಿಸಿವೆ. ಲಿಂಗರಾಜರ ಒಟ್ಟು ಕತೆಗಳ ತಾತ್ವಿಕ ವಿನ್ಯಾಸವನ್ನು ರೂಪಿಸಿರುವದು ದಲಿತ-ಬಂಡಾಯದ ಆಶಯಗಳಾಗಿವೆ. ದಲಿತ ಬಂಡಾಯದ ಆಶಯಗಳು ಈ ಹಿಂದೆ ಕತೆಗಳನ್ನು ನಿಯಂತ್ರಿಸುತ್ತಿದ್ದಂತೆ ಅಥವಾ ಅನುಭವವೊಂದನ್ನು ವಾದಗಳಿಗೆ ಒಗ್ಗಿಸಲು ಬಗ್ಗಿಸಲು ಒತ್ತಾಯಿಸುವಂತೆ ಇಲ್ಲಿ ಆಗಿಲ್ಲ. ಲಿಂಗರಾಜ ಈ ತಾತ್ವಿಕ ವಿನ್ಯಾಸಗಳನ್ನು ವಿಸ್ತರಿಸಿಕೊಂಡಿದ್ದಾರೆ ಹಾಗೂ ಇಲ್ಲಿನ ಕತೆಗಳಲ್ಲಿ ಕಾಣಬರುವ ಶೋಷಣೆ-ಅಸಹಾಯಕತೆ ಹಾಗೂ ಅವಮಾನಗಳನ್ನು ಮತ್ತು ಗಂಡು ಹೆಣ್ಣುಗಳ ನಡುವೆ ಹುಟ್ಟುವ ಸಂಬಂಧಗಳನ್ನು ವಿವರಿಸಲು ಒಂದು ನವಿರಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿ ಈ ಕತೆಗಳ ಪ್ರವೇಶ ಓದುಗನಿಗೆ ವಿವಂಚನೆಯನ್ನೋ ಕ್ಲಿಷ್ಟತೆಯನ್ನೊ ಸೃಷ್ಟಿಸುವುದಿಲ್ಲ. ಗಾಢವಾದ ಅನುಭವವನ್ನು ಒಂದು ಸುಭಗ ಪಾರದರ್ಶಕ ಶೈಲಿಯಲ್ಲಿ ಕಟ್ಟುವ ಕಲೆಯಲ್ಲಿ ಲಿಂಗರಾಜ ಯಶಸ್ವಿಯಾಗಿದ್ದಾರೆ. ಇದು ಅವ್ವ ಮತ್ತು ರೊಟ್ಟಿ, ಮಾರ್ಗೀ ಅಂಗಿ, ಮಠ, ಅಮ್ಮ ಸಿಕ್ಕಿದ್ದಳು, ದ್ಯಾಮಿ, ಕರ್ಮಣ್ಯೆ ವಾಧಿಕಾರಸ್ಥೆ ಕತೆಗಳಲ್ಲಿ ಕಂಡುಬರುತ್ತದೆ.
ಈ ಸಂಕಲನದಲ್ಲಿ ಎರಡು ಬಗೆಯ ಕತೆಗಳಿವೆ; ಒಂದು ಜನಪ್ರಿಯ ಪತ್ರಿಕೆಗಳಿಗಾಗಿ ಬರೆದ ಕತೆಗಳು. ಇವುಗಳ ವಸ್ತು ಗಾಢವೂ ಗಂಭೀರವೂ ಮತ್ತು ಸಾಕಷ್ಟು ಶೋಧನೆಗೆ ಅವಕಾಶವಿದ್ದರೂ ಸ್ಥಳ ಮಿತಿ, ಕಾಲ ಮಿತಿಗಳಿಂದ ಅವು ಧಿಡೀರನೆ ಮುಕ್ತಾಯವಾಗಿ ಬಿಡುತ್ತವೆ. ಅದು ಈ ಕಾಲದ ಸಂವಹನ ಮಾದ್ಯಮಗಳು ಹುಟ್ಟಿಸಿರುವ ಲಾಲಸೆ ಮತ್ತು ಸವಾಲು. ಹೊಸ ಕತೆಗಾರರಿಗೆ ತಮ್ಮನ್ನು ತಾವು ಓದುವ ವರ್ಗಕ್ಕೆ ಪರಿಚಯಿಸಿಕೊಳ್ಳಲು ಇರುವ ಏಕೈಕ ದಾರಿ. ಮತ್ತು ಅದು ಅವರಿಗೆ ಅನಿವಾರ್ಯವೂ ಹೌದು.
ಇಂಥ ಜನಪ್ರಿಯ ಮಾಧ್ಯಮಗಳ ಕರೆಗೆ ಓಗೊಟ್ಟು ಲಿಂಗರಾಜ ಸಾಕಷ್ಟು ಕತೆಗಳನ್ನು- ಒಂದು ರೀತಿಯಲ್ಲಿ ನಿರಂತರವಾಗಿ ಬರೆದಿದ್ದಾರೆ. ಷರತ್ತುಗಳು ಅನ್ವಯಿಸುತ್ತವೆ.. ಖಾಲಿ ಬಾಟ್ಲೀ. ಬೇಲಿ ಮತ್ತು ಹೂವು, ಮನೆ ಬೇಕಾಗಿದೆ ಇಂತಹ ಕತೆಗಳನ್ನು ಹೆಸರಿಸುತ್ತ ಹೋಗಬಹುದು. ಈ ಎಲ್ಲ ಕತೆಗಳು ಸಮಕಾಲೀನ ಜಗತ್ತಿನಲ್ಲಿ ನಾವು ದಿನನಿತ್ಯ ಕಾಣುತ್ತಿರುವ ಹಲವು ಸಮಸ್ಯೆಗಳನ್ನು ವೈರುಧ್ಯಗಳನ್ನು ವಸ್ತುವಾಗಿ ಸ್ವೀಕರಿಸಿವೆ, ಗ್ರಾಮಾಂತರ ಜಗತ್ತಿನಲ್ಲಿ ಕಾಣಬರುವ ದಾಂಪತ್ಯ ನಡುವಣ ಬಿಕ್ಕಟ್ಟುಗಳು, ವಿವಾಹೇತರ ಸಂಬಂಧಗಳು, ನಪುಂಸಕತೆ, ಜಾತಿಯತೆಗಳು ಮತ್ತು ಆಧುನಿಕತೆ ಹಳ್ಳಿಗಳನ್ನು ಪ್ರವೇಶಿಸಿ ಸೃಷ್ಟಿಸಿರುವ ಬಿಕ್ಕಟ್ಟುಗಳ ಕುರಿತು ಈ ಕತೆಗಳು ಪ್ರಶ್ನೆ ಎತ್ತುತ್ತವೆ.
ಗ್ರಾಮಾಂತರ ಜಗತ್ತಿನಲ್ಲಿ ವಲಸೆ ಉಂಟು ಮಾಡುವ ತಳಮಳಗಳನ್ನು ‘ದೂರ ತೀರದ ಮೋಹ’ ಕಲಾತ್ಮಕವಾಗಿ ಕಟ್ಟಿಕೊಟ್ಟಿದೆ. ‘ಖಾಲಿ ಬಾಟ್ಲೀ’ ಕತೆಯಲ್ಲಿ ಬರುವ ಬಿಲ್ಲಪ್ಪನ ವ್ಯಕ್ತಿ ಚಿತ್ರಣ, ಅವನ ಸ್ವಭಾವ, ಅವನ ಬೋಧನೆ-ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಅಡಗಿರಬಹುದಾದ ಅಸಾಮಾನ್ಯ ಗುಣವನ್ನು ಅನಾವರಣ ಮಾಡುತ್ತದೆ. ‘ಸುಡು ಬೇಸಿಗೆಯ ಹಗಲುಗನಸು’ ಕತೆಯಲ್ಲಿ ‘ನಪುಂಸಕತೆ’ ಎಂಬ ಹಳೆಯ ಕ್ಲೀಷೆಯ ವಿಷಯವನ್ನು ಒಂದು ಹೊಸ ಪರಿಸರದಲ್ಲಿ ಹೊಸ ಜನಾಂಗ (ಲಂಬಾಣಿ)ದ ನಡುವೆ ಇಟ್ಟು ಪರೀಕ್ಷಿಸುವ ಪ್ರಯತ್ನ ಶ್ಲಾಘನೀಯ ಎನ್ನಲೆಬೇಕು.
ಈ ಕತೆಗಳ ಪ್ರವೇಶ ಓದುಗನಿಗೆ ವಿವಂಚನೆಯನ್ನೋ ಕ್ಲಿಷ್ಟತೆಯನ್ನೊ ಸೃಷ್ಟಿಸುವುದಿಲ್ಲ. ಗಾಢವಾದ ಅನುಭವವನ್ನು ಒಂದು ಸುಭಗ ಪಾರದರ್ಶಕ ಶೈಲಿಯಲ್ಲಿ ಕಟ್ಟುವ ಕಲೆಯಲ್ಲಿ ಲಿಂಗರಾಜ ಯಶಸ್ವಿಯಾಗಿದ್ದಾರೆ. ಇದು ಅವ್ವ ಮತ್ತು ರೊಟ್ಟಿ, ಮಾರ್ಗೀ ಅಂಗಿ, ಮಠ, ಅಮ್ಮ ಸಿಕ್ಕಿದ್ದಳು, ದ್ಯಾಮಿ, ಕರ್ಮಣ್ಯೆ ವಾಧಿಕಾರಸ್ಥೆ ಕತೆಗಳಲ್ಲಿ ಕಂಡುಬರುತ್ತದೆ.
ಇವತ್ತು ಯಾವುದೆ ಹೊಸ ಕಾಲದ ಕತೆಗಾರ- ಮಠ, ಪೀಠ, ಸನ್ಯಾಸಿ-ಮತ್ತು ಆ ವ್ಯವಸ್ಥೆಯೊಳಗೆ ನಡೆಯುವ ಹಲವಾರು ಕರಾಳ ವಿದ್ಯಮಾನಗಳ ಕುರಿತು ಬರೆಯದೆ ಇರಲಾರ. ಇವತ್ತು ಮಠಗಳು ಹಿಂದಿನಂತಿಲ್ಲ. ಅವು ಅಧಿಕಾರದ ಕೇಂದ್ರಗಳಾಗಿವೆ. ಅಲ್ಲಿ ಹಲವು ಕಾಮ ಕಾಂಚನಗಳ ಅವ್ಯವಹಾರಗಳು ನಡೆಯುತ್ತವೆ. ಇಂತಹ ವಿಷಯಗಳು ಇಲ್ಲಿ ಪರೀಕ್ಷೆಗೆ ಒಡ್ಡಿಕೊಂಡಿವೆ. ‘ಮಠ’ ಅಂತದ್ದೊಂದು ಕತೆ.
ನಗರೀಕರಣ, ಔದ್ಯೋಗಿಕರಣ, ಆಧುನಿಕರಣಗಳು ಜಾತಿಯನ್ನು ದೂರಗೊಳಿಸಬಲ್ಲವು ಎಂಬ ನಮ್ಮ ಸಿದ್ಧ ನಂಬಿಕೆ ಇಂದು ಹುಸಿಯಾಗಿದೆ. ನಗರಗಳಲ್ಲಿ ಅಸ್ಪೃಶ್ಯನೊಬ್ಬ ಬಾಡಿಗೆ ಮನೆ ಹಿಡಿಯುವ ಕಷ್ಟವನ್ನು ‘ಮನೆ ಬೇಕಾಗಿದೆ’ ಕತೆ ಬಿಚ್ಚಿಡುತ್ತದೆ.
ಬಹಳ ನಿರಾಳವಾಗಿ, ಯಾವ ಆಯಾಸವೂ ಇಲ್ಲದೆ ಬರೆಯುವ ಲಿಂಗರಾಜ ಸಣ್ಣ ಅನುಭವ, ಘಟನೆಗಳ ಸುತ್ತ ಕತೆ ಹೆಣೆಯುತ್ತಾರೆ. ಅವರಿಗೆ ಭಾಷಾ ಹಿಡಿತ, ಮತ್ತು ಗ್ರಾಮಾನುಭವ ಕತೆ ಕಟ್ಟಲು ನೆರವಾಗಿವೆ. ಅವರು ಭಾಷೆಯನ್ನು ಕಾವ್ಯದಂತೆ ಮಣಿಸಬಲ್ಲರು.. ಅವರು ಬನಿ, ಲಯ, ಪ್ರಾಸಗಳನ್ನು ಚೆನ್ನಾಗಿ ಅರಿತಿದ್ದಾರೆ. ಸಣ್ಣ ಅನುಭವವನ್ನೂ ಅವರು ಕತೆ ಮಾಡಬಲ್ಲೆನೆಂಬ ಛಲದಿಂದ ಮುನ್ನುಗ್ಗುತ್ತಾರೆ. ಮತ್ತು ಹೀಗೆ ಬರೆಯುವಾಗ ಜನಪ್ರಿಯ ಪತ್ರಿಕೆಯೊಂದಕ್ಕೆ ಕಳಿಸಬೇಕೆಂಬ ನಿಯಂತ್ರಣವನ್ನು ತಮ್ಮ ಮೇಲೆ ತಾವೇ ಹೇರಿಕೊಳ್ಳುತ್ತಾರೆ. ಈ ಕಟ್ಟುಪಾಡುಗಳ ನಡುವೆಯೂ ಮನಸ್ಸನ್ನು ಹಿಡಿದಿಡುವ ಕಾರಣದಿಂದಾಗಿ ಇಲ್ಲಿನ ಕತೆಗಳು ಫ್ರೆಶ್ ಎನಿಸುತ್ತವೆ. ತಾಜಾ ಆಗಿವೆ. ಎಲ್ಲೂ ಬೋರ್ ಹೊಡೆಸುವದಿಲ್ಲ. ಕತೆಯೊಳಗೆ ಒಂದು ಜೀವಂತಿಕೆ ಲವಲವಿಕೆಯಿಂದ ಹರಿದಾಡುತ್ತದೆ. ಹಾಗಾಗಿ ಈ ಕತೆಗಾರನ ಕುರಿತು ಭರವಸೆ ಮೂಡಿಸುತ್ತದೆ.
ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ. ಈ ಎಳೆ ಇಲ್ಲದೆ ಹೋಗಿದ್ದರೆ ಈ ಕತೆ ಒಂದು ವರದಿಯಂತೆ ಭಾಸವಾಗುತ್ತಿತ್ತು. ‘ಅವ್ವ ಮತ್ತು ರೊಟ್ಟಿ’ ಸ್ವಾತಂತ್ರ್ಯೊತ್ತರ ಕಾಲಗಟ್ಟದಲ್ಲಿ ತೆರೆದುಕೊಳ್ಳುವ ಕತೆ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ. ಇಲ್ಲಿನ ಕಟ್ಟುವಿಕೆ ಮತ್ತು ಹೃದಯಸ್ಪರ್ಶಿ ಎಳೆಗಳು ಕಾಡುತ್ತವೆ. ಇನ್ನೂ ‘ದ್ಯಾಮಿ’ ಕತೆ ಸಂಬಂಧಗಳ ಹೆಚ್ಚುಗಾರಿಕೆ.. ಆಶಯದ ದೃಷ್ಟಿಯಿಂದ ಹಾಗೂ ಅದರ ಓಟ ಮತ್ತು ಲಯದ ಕಾರಣದಿಂದ ಗಮನ ಸೆಳೆಯುತ್ತದೆ. ಇಲ್ಲಿ ಸೈಕಲ್ ಒಂದು ಸಂಕೇತದಂತೆಯೂ ಪ್ರೇಮ ಸ್ಮಾರಕದಂತೆಯೂ ಬಳಕೆಯಾಗಿದೆ.
ಒಟ್ಟಾರೆ ಲಿಂಗರಾಜ ಅವರಿಗೆ ಕಥನ ಶಕ್ತಿ ಒಲಿದಿದೆ. ಕನ್ನಡದ ಕಥಾಲೋಕ ಇವೊತ್ತು ಬಹು ಸಮರ್ಥ-ಸೃಜನಶೀಲ ಕ್ಷೇತ್ರವಾಗಿ ಬೆಳೆದಿದೆ. ಹೊಸ ಕತೆಗಾರ ಇವುಗಳನ್ನೆಲ್ಲ ಜೀರ್ಣಿಸಿಕೊಂಡು ತನ್ನದೆ ಆದ ದನಿಯೊಂದನ್ನು ಸ್ಥಪಿಸುವುದು ಒಂದು ಸವಾಲಿನ ಕೆಲಸ. ಆರಂಭದಲ್ಲಿನ ಬರವಣಿಗೆ ಖುಷಿಯನ್ನು, ಬಿಡುಗಡೆಯನ್ನೊ ತಂದುಕೊಡುತ್ತದೆ. ಬಹಳ ಜನ ಹೊಸ ಹುಡುಗರು ಅಲ್ಲಿಗೆ ಬಂದು ನಿಂತುಬಿಡುತ್ತಾರೆ. ಲಿಂಗರಾಜ ತಮ್ಮ ಮುಂದಿರುವ ಸವಾಲನ್ನು ಸ್ವೀಕರಿಸಿ ಮುನ್ನಡೆಯಬೇಕಿದೆ.
ಸಣ್ಣ ಕತೆ ಕಾವ್ಯದಂತೆ. ಅತಿ ಚಿಕ್ಕ ಗಾತ್ರದಲ್ಲಿ ಅತಿ ಕ್ಷೀಪ್ರವಾಗಿ-ಹಲವು ರೂಪಕ-ಪ್ರತಿಮೆಗಳನ್ನು ಒಂದು ಕೇಂದ್ರಕ್ಕೆ ತಂದು ಅರ್ಥವನ್ನು ಆಸ್ಪೋಟಿಸಬೇಕಾಗುತ್ತದೆ. ‘ದ್ಯಾಮಿ’ ‘ಮಾರ್ಗೀ ಅಂಗಿ’ ‘ಕರ್ಮಣ್ಯೇ…’ ಹಾಗೂ ‘ಅವ್ವ ಮತ್ತು ರೊಟ್ಟಿ’ ಕತೆಗಳಲ್ಲಿ ಈ ಲಕ್ಷಣಗಳಿವೆಯೆಂದೆ ಲಿಂಗರಾಜ ಬಗ್ಗೆ ನನಗೆ ಭರವಸೆ. ಇವೊತ್ತು ಕತೆಗಾರರಿಗೆ ದಟ್ಟ ಅನುಭವ-ಜೀವನ ನಿಕಟ ಸಾಮೀಪ್ಯ-ಭಾಷೆಯ ಶ್ರೀಮಂತಿಕೆ-ಕಡಿಮೆಯಾಗುತ್ತಿದೆ. ಲಿಂಗರಾಜ ಅವರಿಗೆ ಇವೆಲ್ಲ ಸಮೃದ್ಧವಾಗಿ ದಕ್ಕಿವೆ. ಹೀಗಾಗಿ ಅವರು ಇವುಗಳನ್ನೆಲ್ಲ ಬಳಸಿಕೊಂಡು ಮುಂದುವರೆಯಲಿ.. ಕನ್ನಡ ಕಥಾಕ್ಷೇತ್ರವನ್ನು ತಮ್ಮ ಕತೆಗಳಿಂದ ವಿಸ್ತರಿಸಲಿ ಎಂದು ಆಶಿಸುತ್ತೇನೆ.
(ಕೃತಿ: ಮಾರ್ಗಿ (ಕಥಾ ಸಂಕಲನ), ಲೇಖಕರು: ಗರಾಜ ಸೊಟ್ಟಪ್ಪನವರ, ಪ್ರಕಾಶಕರು: ಪಲ್ಲವ ಪ್ರಕಾಶನ, ಬೆಲೆ: 120/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ