ಅದೇ ರಸ್ತೆಯಲ್ಲಿ ಮುಂದೆ ಬಂದರೆ ಸಿಂಧೂರ್ ಮತ್ತು ಶಾಹಿನ್ಸ್ ಬಟ್ಟೆ ಅಂಗಡಿಗಳು… ಅವರು ಗೊಂಬೆಗಳಿಗೆ ಉಡಿಸುತ್ತಿದ್ದ ಸೀರೆಗಳನ್ನು ನೋಡಿದರೂ ನೋಡದ ಹಾಗೆ ಮುಂದೆ ಸಾಗುವ ಕಾರ್ಯಕ್ರಮ. ಅಲ್ಲಿಗೆ ನಗರದ ಹೃದಯ ಭಾಗ ಚೌಕಿಗೆ ಬಂದು ಬಿಡುತ್ತಿದ್ದೆವು. ನಾನು ತುಂಬಾ ಚಿಕ್ಕವಳಿರುವಾಗ ಸ್ವೆಟರ್ ಖರೀದಿಸಿ ಅಲ್ಲಿಯೇ ಹಾಕಿಕೊಂಡು ಮನೆಗೆ ನಡೆದುಕೊಂಡು ಹೋಗುವಾಗ ನನ್ನಪ್ಪ ಚಳಿ ಕಡಿಮೆ ಆಯಿತ ಎಂದು ಕೇಳಿದ್ದಕ್ಕೆ ನಾನು ಇಲ್ಲ, ಕಾಲಿಗೆ ಚಳಿ ಆಗುತ್ತಿದೆ ಎಂದಿದ್ದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

ನಾಡಹಬ್ಬ ದಸರಾದ ಸೊಬಗು ಅವರ್ಣನೀಯ. ಮೈಸೂರಿನದ್ದಾಗಿರಬಹುದು, ಮಡಿಕೇರಿಯದ್ದಾಗಿರಬಹುದು ಇಲ್ಲವೆ ಮಂಗಳೂರಿನದ್ದೇ ಆಗಿರಬಹುದು. ನೋಡಿ ಆ ಸಂಭ್ರಮವನ್ನು ಕಣ್ತುಂಬಿಕೊಂಡು ತಮ್ಮ ತಮ್ಮ ಊರಿಗೆ ತೆರಳುವ ಜನತೆ ನಿಜಕ್ಕೂ ನಿರಾಳರು. ಆದರೆ ದಸರಾ ಕಳೆದ ನಂತರ ಆ ಪರಿಸರದ ವಾಸ ನಿಜಕ್ಕೂ ಅಸಹನೀಯ ಅನ್ನಿಸುತ್ತದೆ. ಮನೆಯಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಆದರೆ ಅದಕ್ಕಾಗಿ ಮಾಡುವ ಪೂರ್ವ ತಯಾರಿಗಿಂತ ನಂತರದ ರಿಪೇರಿ ಕೆಲಸ ತಲೆ ಬಿಸಿಯಾಗುತ್ತದೆ. ಅಂತೆಯೇ ದಸರಾ ನಡೆದ ನಂತರ ನಮ್ಮ ಮಡಿಕೇರಿಯ ವಾತಾವರಣ.

ಮೊದಲೆ ಗುಡ್ಡ ಬೆಟ್ಟಗಳಿಂದ ಆವೃತವಾದ ಊರು ಎಲ್ಲಾ ಅಂಗಡಿ ಮುಂಗಟ್ಟುಗಳು ಸಜ್ಜುಗೊಂಡಿರುತ್ತವೆ. ನಗರದ ಪೇಟೆ ಬೀದಿ ಸ್ವಲ್ಪ ಕಿರಿದೇ. ಹಾಗಾಗಿ ಜನರ ನೂಕು ನುಗ್ಗಲು ಇದ್ದೇ ಇರುತ್ತದೆ. ಬೇರೆ ಊರುಗಳಿಂದ ಬರುವ ಜನರು ಈ ಬೀದಿಗಳನ್ನು ಇಲ್ಲಿನ ಪರಿಸರವನ್ನು ಬಳಸಿಕೊಳ್ಳುವುದು ನಿಜಕ್ಕೂ ಬೇಸರ ತರಿಸುತ್ತದೆ, ಅಂಗಡಿಮುಂಗಟ್ಟುಗಳ ಮುಂದಿನ ಡೆಕೋರೇಷನ್ ಕಂಬಿಗಳು ದಸರಾ ಬೆಳಗ್ಗೆ ಇರುವುದೇ ಇಲ್ಲ. ಜಖಂ ಆಗಿರುತ್ತವೆ. ಮದ್ಯ ಮಾರಾಟ ನಿಷೇಧವಾಗಿರುತ್ತದೆ, ಆದರೂ ಮದ್ಯದ ನಶೆಯಲ್ಲಿ ಅನೇಕರು ಇರುತ್ತಾರೆ. ಇಡೀ ರಾತ್ರಿ ನಡೆಯುವ ಉತ್ಸವವಾದ್ದರಿಂದ ಅಲ್ಲಲ್ಲಿ ಮಾರಾಟವಾಗುವ ತಿಂಡಿ ತಿನಿಸುಗಳಿಗೇನು ಕೊರತೆಯಿರುವುದಿಲ್ಲ. ಅದನ್ನು ಸೇವಿಸಿದ ಗ್ಲಾಸ್‌ಗಳು, ಪ್ಲೇಟ್‌ಗಳು ತಿನ್ನದೆ ಉಳಿಸಿ ಆಹಾರವನ್ನು ಬಿಸಾಡಿದವು ಎಲ್ಲ ಕಡೆಯೂ ಇರುತ್ತದೆ. ನಾನು ನೋಡಿದ ಮಟ್ಟಿಗೆ ನೂಕು ನುಗ್ಗಲಲ್ಲಿ ಕಳಚಿದ ರಾಶಿ ರಾಶಿ ಚಪ್ಪಲಿಗಳು ನಗರ ಪೋಲಿಸ್ ಠಾಣೆ ಬಳಿ ಮತ್ತಿತರ ಸ್ಥಳಗಳಲ್ಲಿ ಇರುತ್ತದೆ. ಕೋಟೆ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿರುತ್ತಾರೆ. ಅಲ್ಲಿಯೂ ಚಾಕಲೇಟ್, ಲೇಸ್, ಕುರ್ಕುರೆ ರ್ಯಾಪರ್‌ಗಳು ರಾಶಿ ರಾಶಿಯಾಗಿ ಬಿದ್ದಿರುತ್ತವೆ. ಎಲ್ಲೆಂದರಲ್ಲಿ ಹಾಕುವ ಬದಲು, ನಿಗದಿತ ಸ್ಥಳದಲ್ಲಿ ಹಾಕಿದರೇನು? ಎನ್ನುವ ಪ್ರಶ್ನೆ ಸ್ಥಳಿಯರದ್ದಾದರೆ ಇದೇನು ನಮ್ಮೂರ? ನಮಗೇನು ಆಗಬೇಕು? ಎನ್ನುವ ಬೇಜವಾಬ್ದಾರಿ ವರಸೆ ಪ್ರವಾಸಿಗರದ್ದು. ಇಂಥ ಮನಸ್ಥಿತಿ ಬದಲಾಗಲಿ ಎಂದು ನಾನು ಬಯಸುವೆ.

ಗಾಂಧಿ ಮಂಟಪದಿಂದ ಮೊದಲುಗೊಂಡು ಚೌಕಿಯವರೆಗೆ ಇಂಥದ್ದೆ ಕಸದ ರಾಶಿ ಬಿದ್ದಿರುತ್ತದೆ. ಗುಡ್ಡ ತಗ್ಗುಗಳಲ್ಲಿ ಅಲ್ಲಲ್ಲಿ ವಿಸರ್ಜಿಸಿದ ಮೂತ್ರದ ಗಬ್ಬುವಾಸನೆ ಗಾಳಿ ಬೀಸಿದಾಗೆಲ್ಲ ದಸರಾ ಮುಗಿದಿದೆ ಎನ್ನುವುದನ್ನೆ ಹೇಳುತ್ತಿರುತ್ತದೆ. ಜನಜಂಗುಳಿ ಎಷ್ಟು ಇರುತ್ತದೆ ಎಂದರೆ ಹೆಣ್ಣುಮಗಳು ತನ್ನ ನೀಳ ಜಡೆಯನ್ನು ಇಳಿ ಬಿಟ್ಟು ಹೋಗುತ್ತಿರುತ್ತಾಳೆ. ಆಕೆಯ ಜಡೆಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿದರೂ ತಿಳಿಯದ ಹಾಗೆ ಇರುತ್ತದೆ. ಇಂಥ ಘಟನೆ ಕಣ್ಣಾರೆ ನೋಡಿ ಎಚ್ಚರಿಕೆಯಿಂದ ದಸರಾ ನೋಡಿದವರಲ್ಲಿ ನಾನೂ ಒಬ್ಬಳು. ಯಾರೇ ಆಗಲಿ, ಸಾರ್ವಜನಿಕ ಜಾಗಗಳಿಗೆ ಹೋದಾಗ, ಬಂದಾಗ ಸೌಜನ್ಯದಿಂದ ವರ್ತಿಸಬೇಕು ಎನ್ನುವುದನ್ನು ಬಹುತೇಕರು ಮರೆತಿರುತ್ತಾರೆ. ಹೆಣ್ಣು ಮಕ್ಕಳನ್ನು ಸಭ್ಯತೆಯಿಲ್ಲದೆ ಮಾತನಾಡಿಸುವುದು, ಬೇರೆ ಸ್ಥಳದವರೂ ಎಂದಾಗಲೂ ಅವರನ್ನು ಛೇಡಿಸುವುದೆಲ್ಲ ಇರುತ್ತದೆ. ಡಿ.ಜೆ.ಯದ್ದೊಂದು ಕಿರಿಕಿರಿಯ ಅಬ್ಬರ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು. ಈ ಬಾರಿ ನಾಲ್ಕು ಪ್ರಕರಣಗಳು ಈ ಕುರಿತೇ ದಾಖಲಾಗಿವೆ. ಈ ಬಾರಿ ಜಿಲ್ಲಾಡಳಿತ ಲೇಸರ್ ಲೈಟ್‌ಗಳನ್ನು ಬಿಡದೆ ಇರುವಂತೆಯೂ ತಾಕೀತು ಮಾಡಿರುವುದು ಶ್ಲಾಘನೀಯವಾಗಿದೆ. ಹೃದಯ ಸಂಬಂಧಿ ತೊಂದರೆಯಿದ್ದವರಂತೂ ಈ ತೆರನಾದ ಅಬ್ಬರದ ಸದ್ದುಗಳಿಂದ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಎದೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗಿರುತ್ತಿರುತ್ತದೆ. ಇನ್ನೊಂದು ಖೇದದ ಸಂಗತಿ ಎಂದರೆ ದಸರಾ ಸಮಿತಿ ಮತ್ತು ತೀರ್ಪುಗಾರರು ಮಂಟಪಗಳನ್ನು ಪರಿಶೀಲನೆ ಮಾಡುವಾಗ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಮತ್ತೆ ಆ ಮಂಟಪಗಳು ಸಾಗಿ ಬರುವ ದಾರಿಯುದ್ದಕ್ಕೂ ಬರೆ ಕಲಾಕೃತಿಗಳನ್ನು ನೋಡಬೆಕೇ ವಿನಃ ಯಾವ ಕಥೆಯನ್ನು ಅಳವಡಿಸಿದ್ದಾರೆ ಎಂಬುದಂತೂ ತಿಳಿಯುವುದಿಲ್ಲ.

ನಾಡಹಬ್ಬ ನಾಡಿನ ಜನತೆಯದ್ದು. ಅದನ್ನು ಎಲ್ಲರೂ ಅನುಭವಿಸಬೇಕು. ಅದು ಮುಂದಿನ ದಿನಗಳಲ್ಲಿ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗದಿರಲಿ ಎಂಬ ಆಶಯವಿದೆ. ಬೇರೆ ಜಿಲ್ಲಾ ಕೇಂದ್ರಗಳಿಗೆ ಹೋಲಿಸಿಕೊಂಡರೆ ಮಡಿಕೇರಿಯ ಮುಖ್ಯ ರಸ್ತೆಗಳು ಕಿರಿಯವು ದಸರೆಯ ಸಂದರ್ಭದಲ್ಲಿ ಕಿಕ್ಕಿರಿದು ಸೇರುವ ಜನಸಂಖ್ಯೆಯನ್ನು ಹೊರಲಾರವೇನೋ ಅನ್ನಿಸುತ್ತದೆ. ಇದನ್ನು ಗಮನಿಸಿ ಹಿರಿಯ ನಾಗರಿಕರು ಮನೆ ಬಿಟ್ಟು ಆಚೆ ಬರುತ್ತಿಲ್ಲ. ಹಾಗಾಗಿ ಅವರೆಲ್ಲ ಮನೆಯಲ್ಲಿ ಕುಳಿತು ಖಾಸಗಿ ವಾಹಿನಿಗಳ ನೇರ ಪ್ರಸಾರ ಕಾರ್ಯಕ್ರಮವನ್ನು ನೋಡಿ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ ಅಷ್ಟೇ. ಮುಂದಿನ ದಿನಗಳಲ್ಲಿ ಏಕಮುಖಿ ಸಂಚಾರ ವ್ಯವಸ್ಥೆ ಕೈಗೊಳ್ಳುವಂತೆ ಒಂದು ರೂಟ್ ಮ್ಯಾಪನ್ನು ಜಿಲ್ಲಾಡಳಿತ ಮಾಡಿದರೆ ಸೂಕ್ತ ಅನ್ನಿಸುತ್ತದೆ. ಸರಕಾರ ಹಾಗು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಯುವ ನಾಡ ಹಬ್ಬದಲ್ಲಿ ಲೋಪಗಳು ನುಸುಳಬಾರದು ಎಂಬುದಷ್ಟೆ ನಮ್ಮ ಬಯಕೆ.

ನಮ್ಮ ಕಾಲದ ದಸರ ಕಳೆದ ಮರುದಿನದ ಬೀದಿಗಳು ಈಗಿನ ಹಾಗೆ ಜಾಗೃತವಾಗಿರುತ್ತಿರಲಿಲ್ಲ. ಅವೂ ನಿದ್ರೆಗೆ ಜಾರಿರುತ್ತಿದ್ದವು. ಪ್ರವಾಸಿಗರ ಆಕರ್ಷಣೆ ಹೆಚ್ಚಾದಂತೆ ವ್ಯಾಪಾರ ವಹಿವಾಟು ಅದರಲ್ಲೂ ಕಾಫಿ, ಹೋಂ ಮೇಡ್ ಚಾಕಲೇಟ್‌ಗಳು, ಜೇನು, ಕಾಚುಂಪುಳಿ ಸೇರಿದಂತೆ ಮಸಾಲಾ ಪದಾರ್ಥಗಳ ವ್ಯಾಪಾರ ವಹಿವಾಟು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹೋಂ ಸ್ಟೇಗಳಲ್ಲಿಯೂ ಕೊಡಗಿನ ವಿಶೇಷ ಖಾದ್ಯಗಳಿಗೆ ಆದ್ಯತೆ ಕೊಡುವುದರಿಂದ ಕೊಡಗಿನ ನೆನಪಿನ ಪರಿಮಳ ಅನೇಕ ದಿನಗಳವರೆಗೆ ಉಳಿಯಲು ಸಾಧ್ಯವಾಗುತ್ತಿದೆ.

ನಾನು ನೋಡಿದ ಮಟ್ಟಿಗೆ ನೂಕು ನುಗ್ಗಲಲ್ಲಿ ಕಳಚಿದ ರಾಶಿ ರಾಶಿ ಚಪ್ಪಲಿಗಳು ನಗರ ಪೋಲಿಸ್ ಠಾಣೆ ಬಳಿ ಮತ್ತಿತರ ಸ್ಥಳಗಳಲ್ಲಿ ಇರುತ್ತದೆ. ಕೋಟೆ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿರುತ್ತಾರೆ. ಅಲ್ಲಿಯೂ ಚಾಕಲೇಟ್, ಲೇಸ್, ಕುರ್ಕುರೆ ಪ್ಯಾಕೆಟ್‌ಗಳು ರಾಶಿ ರಾಶಿಯಾಗಿ ಬಿದ್ದಿರುತ್ತವೆ. ಎಲ್ಲೆಂದರಲ್ಲಿ ಹಾಕುವ ಬದಲು, ನಿಗದಿತ ಸ್ಥಳದಲ್ಲಿ ಹಾಕಿದರೇನು? ಎನ್ನುವ ಪ್ರಶ್ನೆ ಸ್ಥಳಿಯರದ್ದಾದರೆ ಇದೇನು ನಮ್ಮೂರ? ನಮಗೇನು ಆಗಬೇಕು? ಎನ್ನುವ ಬೇಜವಾಬ್ದಾರಿ ವರಸೆ ಪ್ರವಾಸಿಗರದ್ದು.

ಮಡಿಕೇರಿಯ ರಸ್ತೆಗಳು ಬೇರೆ ನಗರಗಳಿಗೆ ಹೋಲಿಸಿಕೊಂಡರೆ ಕಿರಿಯವೆ. ಅದರಲ್ಲೂ ಖಾಸಗಿ ಬಸ್ ಇಲ್ದಾಣ ಡೈರಿ ಫಾರಮ್ ಬಳಿ ಸ್ಥಳಾಂತರವಾಗಿರುವುದರಿಂದ ಆ ಜಾಗ ನಗರದ ಹೃದಯ ಭಾಗದಲ್ಲಿ ಸ್ವಲ್ಪ ವಿಸ್ತಾರ ಅನ್ನಿಸುತ್ತದೆ. ಅಲ್ಲಿದ್ದ ನೀಲಕಂಠೇಶ್ವರ ಬುಕ್ ಸ್ಟೋರನ್ನು ಇತ್ತೀಚೆಗೆ ಕಂಡಿಲ್ಲ. ಲಾಟರಿಗೆ ಅವಕಾಶವಿದ್ದಾಗ ಅಲ್ಲೆಲ್ಲ ಹರಿದ ಲಾಟರಿ ಟಿಕೇಟುಗಳ ಕಾರುಬಾರಿತ್ತು. ನಂತರ ಪ್ಲೇವಿನ್ ಬಂತು. ಅವುಗಳ ಔಟ್ಲೆಟ್‌ಗಳು ಬಂದವು. ಈಗ ಮೊಬೈಲ್‌ನಲ್ಲಿ ರಮ್ಮಿ ಆಡುತ್ತಾರೆ. ಅಲ್ಲಿಯೇ ಟೇಪ್ ರೆಕಾರ್ಡರ್, ಕ್ಯಾಸೆಟ್ ಅಂಗಡಿಗಳು ಇದ್ದವು. ನಂತರ ವಿಡಿಯೋ ಪ್ಲೇಯರ್, ಕ್ಯಾಸೆಟ್ ಅಂಗಡಿ ಬಳಿಕ, ಸಿ.ಡಿ. ಅಂಗಡಿಗಳಾಗಿ ಬದಲಾದವು. ಆನಂತರ ಮೊಬೈಲ್ ರೀಚಾರ್ಜ್ ಅಂಗಡಿಗಳು… ಅಂದರೆ ಕಾಲ ಕಳೆದಂತೆ ವ್ಯಾಪಾರ ವಹಿವಾಟಿನ ಸ್ವರೂಪವೂ ಜನರೊಂದಿಗೆ ಹೇಗೆ ಬದಲಾಗುತ್ತವೆ ಎಂಬುದಕ್ಕೆ ಉದಾಹರಣೆ ಕೊಟ್ಟೆ ಅಷ್ಟೇ.

ಮಡಿಕೇರಿಯ ದಸರೆಯಲ್ಲಿ ಶಾಪಿಂಗ್ ಅಂದಾಗ ದಸರೆಗೇ ಬರುವ ವಸ್ತುಗಳನ್ನು ಬಿಟ್ಟರೆ, ಬಟ್ಟೆ ಅಂಗಡಿಗೆ ಹೋಗಬೇಕೆಂದರೆ ಜವಹರ್ ಅಂಗಡಿಗೆ ಹೋಗಬಹುದು. ಹೊಸ ಸ್ಟಾಕ್ ಇರುತ್ತದೆ ಸೀಸನ್ ಅಲ್ಲದೆಯೂ ಉತ್ತಮ ಆಯ್ಕೆಯನ್ನು ನೋಡಬಹುದು. ನಾವು ಚಿಕ್ಕವರಿರುವಾಗ ಜವಹರ್ ಬಟ್ಟೆ ಅಂಗಡಿಯಲ್ಲಿ ಜಗಮಗಿಸುವ ಶಾಂಡೆಲಿಯರ್‌ಗಳನ್ನೆ ನೋಡ ಹೋಗುತ್ತಿದ್ದೆವು. ಅಂಗಡಿ ಹೊಕ್ಕುತ್ತಿದ್ದಂತೆ ರೇಮಂಡ್ಸ್ ಕಲೆಕ್ಷನ್… ಅದನ್ನು ಬಹು ಬೇಗ ದಾಟಿದರೆ ಚೂಡಿದಾರ್ ಕಲೆಕ್ಷನ್. ಮುಂದೆ ಸರಿದರೆ ಗಾರ್ಡನ್ ಸೀರೆಗಳ ಏರಿಯಾ ಅನ್ನು ಬಿಟ್ಟರೆ ವರ್ಕ್ ಸೀರಗಳು, ಪಾರ್ಟಿ ವೇರ್‌ಗಳು ಅದನ್ನು ಬಿಟ್ಟರೆ ಕಾಟನ್ ಬಟ್ಟೆಯಲ್ಲಿ ಸುತ್ತಿ ಇಟ್ಟಿರುತ್ತಿದ್ದ ರೇಷ್ಮೆ ಸೀರೆಗಳು ನಂತರ ಹಾಗೆ ಬಲಕ್ಕೆ ತಿರುಗಿದರೆ ಸ್ವೆಟರ್ ಕಲೆಕ್ಷನ್, ಬೇರೆ ಬೇರೆ ಶಾಲೆಗಳ ಯೂನಿಫಾರ್ಮ್‌ಗಳು, ಮುಂದೆ ಮ್ಯಾಚಿಂಗ್ ಬ್ಲೌಸ್ ಪೀಸ್‌ಗಳ ಏರಿಯಾ. ನಾವು ತೆಗದುಕೊಂಡ ಬಟ್ಟೆಗಳು ನಮ್ಮನ್ನು ಅದೇ ಮಾರ್ಗವಾಗಿ ಹಿಂಬಾಲಿಸುತ್ತಾ ಕ್ಯಾಶ್ ಕೌಂಟರ್ ಕಡೆಗೆ ಬರುವಾಗ ನಮ್ಮ ಕುತೂಹಲ ಸ್ವಲ್ಪ ಹೆಚ್ಚೇ… ಕಾರಣ ಹ್ಯಾಂಡ್ ಕರ್ಚಿಫ್ ಫ್ರೀಯಾಗಿ ಕೊಡುತ್ತಿದ್ದ ಕಾರಣಕ್ಕೆ. ಕೊಟ್ಟರೆ ಜೆಂಟ್ಸ್ ಕರ್ಚಿಫ್‌ ಇಲ್ಲ ಲೇಡಿಸ್ ಕರ್ಚಿಫ್‌ ಎಂಬ ಪರಿಶೀಲನೆ ಬೇರೆ. ಆದರೆ ಬಾಯ್ಬಿಟ್ಟು ಕೇಳುತ್ತಿರಲಿಲ್ಲ.

ತುಂಬಾ ಜನವಿಲ್ಲದೆ ಇದ್ದರೆ ಅಲ್ಲಿನ ಮಾಲಿಕ ವರ್ಗದಲ್ಲಿ ಯಾರೇ ಇದ್ದರು ಕಾಫಿ ಇಲ್ಲವೆ ಜ್ಯೂಸ್ ವ್ಯವಸ್ಥೆ ಮಾಡಿಸುತ್ತಿದ್ದರು. ನಮ್ಮ ವಯಸ್ಸಿಗೆ ಮೀರಿ ಗೌರವ ಅವರು ಕೊಡುತ್ತಿದ್ದರಿಂದ ನನಗೆ ಸಹಜವಾಗಿ ಮುಜುಗರವಾಗುತ್ತಿತ್ತು. ನಾವು ಕೊಂಡ ಬಟ್ಟೆಗಳಿಗೆ ಅವರು ಎಷ್ಟೇ ಕವರ್‌ಗಳನ್ನು ಕೊಟ್ಟರು ನಮ್ಮಪ್ಪ ಒಂದು ಹೆಚ್ಚಿಗೆ ಕವರ್ ಕೇಳಿ ಪಡೆಯುತ್ತಿದ್ದರು. ಅದೂ ಮುಜುಗರವಾಗುತ್ತಿತ್ತು ಆದರೆ ಅಂಗಡಿಯವರು ಹಾಗಂದುಕೊಳ್ಳುತ್ತಿರಲಿಲ್ಲ ಎನ್ನುವುದು ಅವರ ಮುಖಭಾವದಿಂದ ತಿಳಿಯುತ್ತಿತ್ತು. ತುಂಬಾ ವರ್ಷಗಳವರೆಗೆ ಅವರ ಅಂಗಡಿಯ ಕವರ್ ಪ್ಯಾಟರ್ನ್ ಬದಲಿಸಿರಲಿಲ್ಲ. ಇತ್ತೀಚೆಗೆ ಬದಲಿಸಿದ್ದಾರೆ. ಅಲ್ಲಿಂದ ಬಂದರೆ ಬಾಟ ಶೋರೂಮ್. ಅಲ್ಲಿ ನಾವು ಕಮಕ್- ಕಿಮಕ್ ಅನ್ನುವಂತಿರಲಿಲ್ಲ. ಅಪ್ಪ ಕೊಡಿಸಿದ್ದನ್ನು ತೆಗೆದುಕೊಳ್ಳಬೇಕಿತ್ತು. ಅದೇ ರಸ್ತೆಯಲ್ಲಿ ಮುಂದೆ ಬಂದರೆ ಸಿಂಧೂರ್ ಮತ್ತು ಶಾಹಿನ್ಸ್ ಬಟ್ಟೆ ಅಂಗಡಿಗಳು… ಅವರು ಗೊಂಬೆಗಳಿಗೆ ಉಡಿಸುತ್ತಿದ್ದ ಸೀರೆಗಳನ್ನು ನೋಡಿದರೂ ನೋಡದ ಹಾಗೆ ಮುಂದೆ ಸಾಗುವ ಕಾರ್ಯಕ್ರಮ. ಅಲ್ಲಿಗೆ ನಗರದ ಹೃದಯ ಭಾಗ ಚೌಕಿಗೆ ಬಂದು ಬಿಡುತ್ತಿದ್ದೆವು. ಅಲ್ಲಿ ಹಿತ್ತಾಳೆ ಪೂಜೆ ಸಾಮಾಗ್ರಿಗಳ ಅಂಗಡಿ ಮತ್ತು ಸ್ವೆಟರ್ ಅಂಗಡಿ. ಆದರೆ ಹೆಸರು ನೆನಪಿಗೆ ಬರುತ್ತಿಲ್ಲ. ನಾನು ತುಂಬಾ ಚಿಕ್ಕವಳಿರುವಾಗ ಸ್ವೆಟರ್ ಖರೀದಿಸಿ ಅಲ್ಲಿಯೇ ಹಾಕಿಕೊಂಡು ಮನೆಗೆ ನಡೆದುಕೊಂಡು ಹೋಗುವಾಗ ನನ್ನಪ್ಪ ಚಳಿ ಕಡಿಮೆ ಆಯಿತ ಎಂದು ಕೇಳಿದ್ದಕ್ಕೆ ನಾನು ಇಲ್ಲ, ಕಾಲಿಗೆ ಚಳಿ ಆಗುತ್ತಿದೆ ಎಂದಿದ್ದೆ.

ಇನ್ನು ಅಲಂಕಾರ್ ಎನ್ನುವ ಫ್ಯಾನ್ಸ್ ಸ್ಟೋರ್ ಒಂದಿತ್ತು. ಅಲ್ಲಿಗೆ ಏಕೆ ಹೋಗುತ್ತಿದ್ದೆವೋ ಗೊತ್ತಿಲ್ಲ. ಒಂದು ಶೃಂಗಾರ್ ಟ್ಯೂಬ್, ಹೇರ್ಬ್ಯಾಂಡ್ ಅಷ್ಟೇ ಅಲ್ಲಿನ ವ್ಯಾಪಾರ. ನನಗೋ ಆಸೆ ಅದನ್ನೂ ನೋಡಬೇಕು ಕೊಂಡುಕೊಳ್ಳಬೇಕು ಎಂದು. ಆದರೆ ಅಪ್ಪ ಬಿಡುತ್ತಿರಲಿಲ್ಲ. ಮುಂದಿನ ಸರದಿ ಅರುಣ ಸ್ಟೋರ್. ಅರುಣ ಅದರ ಮಾಲಿಕರು. ಒಂದೇ ಅಂಗಡಿಯಲ್ಲಿ ಎರಡು ಭಾಗ ಒಂದು ಸ್ಟೀಲ್ ಇನ್ನೊಂದು ಅಂಗಡಿ ನೋಟ್ ಪುಸ್ತಕದ ಅಂಗಡಿ. ನಮ್ಮಮ್ಮ ನೇರ ಪಾತ್ರೆ ಅಂಗಡಿಗೆ ಹೋಗುತ್ತಿದ್ದರು. ನಾವು ಸ್ಟೇಷನರಿ ಆಂಗಡಿಗೆ… ನಮ್ಮನ್ನು ನೋಡಿದ ಕೂಡಲೆ ಏನೇನು ಬೇಕು ಎನ್ನುತ್ತಾ ಕ್ಷಣಾರ್ಧದಲ್ಲಿ ಕೊಡುತ್ತಿದ್ದರು. ಅಲ್ಲಿ ವಿಶೇಷ ಚೇತನ ಹುಡುಗಿ ಒಬ್ಬಳಿದ್ದಳು. ಆಕೆಗೆ ಕೈಬೆರಳುಗಳನ್ನು ಅಲುಗಾಡಿಸಲು ಸಾಧ್ಯವಾಗದೆ ಇದ್ದರೂ ತನ್ನದೇ ಮಾರ್ಗದಲ್ಲಿ ಕಟ್ ಶೀಟ್‌ಗಳನ್ನು ಎಣಿಸಿಕೊಡುತ್ತಿದ್ದುದು ಆಗಲೂ ಬೇಸರ ತರಿಸುತ್ತಿತ್ತು, ಈಗಲೂ ಅದು ನೆನಪಾಗುತ್ತದೆ. ಅಲ್ಲಿ ನನಗಂತು ಸಂಪೂರ್ಣ ಸ್ವಾತಂತ್ರ್ಯ. ಏನನ್ನಾದರೂ ಎಷ್ಟಾದರು ತೆಗೆದುಕೊಳ್ಳಬಹುದಿತ್ತು. ತುಸು ಹೆಚ್ಚು ಎನ್ನುತ್ತಲೆ ಪೆನ್, ಇಂಕ್, ಸ್ಕೆಚ್ ಪೆನ್‌ಗಳನ್ನು ತೆಗೆದುಕೊಳ್ಳುತ್ತಿದ್ದೆವು. ಸಂಪೂರ್ಣ ಸೂರ್ಯಗ್ರಹಣ ಆದ ವರ್ಷ ಗಣಪತಿ ಹಾಲು ಕುಡಿಯುತ್ತದೆ ಎಂದಾಗ ಒಂದು ಗಣಪತಿ ಮೂರ್ತಿಯನ್ನು ಒಂದು ಬಟ್ಟಲು ಹಾಲು ಇಟ್ಟಿದ್ದರು. ಆಸಕ್ತರು ಐದು ರುಪಾಯಿ ನೀಡಿ ಅದಕ್ಕೆ ಹಾಲು ಕುಡಿಸಬಹುದಿತ್ತು. ಆಗ ಅಂಥ ವ್ಯವಸ್ಥೆಯನ್ನು ಮಾಡಿದ ಆ ಅಂಗಡಿಯವರ ಮೇಲೆ ಸ್ವಲ್ಪ ಬೇಸರವಾಗಿತ್ತು.

ಇನ್ನು ಬಳೆಗಳು ಬೇಕು ಎಂದರೆ ಶೃಂಗಾರ್ ಆಂಗಡಿಗೆ ಹೋಗಬೇಕಿತ್ತು. ಅಂಗಡಿಯವರು ಪರಿಚಯ ಎಂದು ಕರೆದುಕೊಂಡು ಹೋಗುತ್ತಿದ್ದರು. ಆದರಲ್ಲಿ ನನಗೆ ಏನೂ ಇಷ್ಟವಾಗುತ್ತಿರಲಿಲ್ಲ. ಬಾಯ್ತಪ್ಪಿ ಕೂಡ ಅಪ್ಪ-ಅಪ್ಪನ ಮುಂದೆ ಆ ಕುರಿತು ಹೇಳಿಕೊಂಡಿಲ್ಲ, ಇಲ್ಲಿಯೇ ಹೇಳುತ್ತಿರುವುದು. ಅಲ್ಲಿಂದ ಚಿನ್ನದ ಅಂಗಡಿಗೆ ಹೋಗಬೇಕೆಂದಿದ್ದರೆ ನಾವು ಯಾವುದೆ ಜ್ಯುವೆಲರಿ ಶಾಪ್‌ಗಳಿಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಆಭರಣ ತಯಾರಿಸಿಕೊಡುತ್ತಿದ್ದ ಪ್ರತಾಪ್ ಶೇಟ್ ಅವರ ಮನೆಗೆ ಹೋಗುತ್ತಿದ್ದೆವು. ಅವರ ಅಣ್ಣ ಸುಧಾಕರ್ ಅವರು 2000ರಲ್ಲಿ ತೀರಿಕೊಂಡರು. ಅದು ಬಹಳ ಬೇಸರದ ಸಂಗತಿ. ಯಾರೋ ಎಷ್ಟೋ ಚಿನ್ನ ಮಾಡಿಕೊಡಿ ಎಂದಾಗಲೂ ಸರಿಯಾಗಿ ಅಡ್ವಾನ್ಸ್ ತೆಗೆದಕೊಳ್ಳದೆ ನಂಬಿಕೆಯ ಮೇಲೆ ಆಭರಣ ಮಾಡಿಕೊಟ್ಟು ಹಣ ಕೇಳಹೋದಾಗ ಅವರಿಗೆ ಕೋವಿ ತೋರಿಸಿದ್ದರಂತೆ. ಅದೇ ಕೊರಗಿನಲ್ಲಿ ಅವರು ಹೃದಯಾಘಾತದಿಂದ ತೀರಿಕೊಂಡರು ಎನ್ನುವ ಸುದ್ದಿ ಬಹಳ ಬೇಸರ ತರಿಸುತ್ತದೆ. ಅವರ ಸಹೋದರ ಪ್ರತಾಪ್ ಅವರು ಈಗಲೂ ನಮ್ಮ ಒಡನಾಟದಲ್ಲಿದ್ದಾರೆ. ಎಲ್ಲವನ್ನು ಮೀರಿ ಮಾನವ ಸಂಬಂಧ ಎಂದರೇನು ಎನ್ನುವುದರ ಪ್ರತೀಕ ಅವರು ಮತ್ತು ಅವರ ಕುಟುಂಬ. ಅವರೂ ಅವರ ಕುಟುಂಬವೂ ಯಶಸ್ಸಿನ ಅಲೆಯಲ್ಲಿಯೇ ಇರಲಿ ಎಂಬುದು ನನ್ನ ಮನದಾಳದ ಬಯಕೆ. ಎಲೆಕ್ಟ್ರಿಕ್ ಐಟಮ್ಸ್, ದಿನಸಿ ಮೊದಲಾದವುಗಳ ಶಾಪಿಂಗ್ ಮುಂದಿನ ಸರಣಿಯಲ್ಲಿ ಮಾಡೋಣ.