ನಲವತ್ತರ ಕವಿತೆ
“ಬರೆಯಬಾರದು ಪ್ರೇಮ ಕವಿತೆ ನಲವತ್ತಾದ ಮೇಲೆ
ಹಾಗೊಂದು ನಿಯಮವಿದೆಯೇ?
ಗೊತ್ತಿಲ್ಲ
ಬಹುತೇಕ ಸುಸಂಸ್ಕೃತರು
ಮೂಗು ಮುರಿಯುವುದು ನನ್ನ ಗಮನದಲ್ಲಿದೆ.
“ಸ್ವಲ್ಪವೂ ನಾಚಿಕೆ ಬರುವುದಿಲ್ಲವೇ ನಿನಗೆ”
ಎನ್ನುವ ಹೇರ್ ಡೈ
ಗೆಳೆಯ ಗೆಳತಿಯರನ್ನೂ
ನಾನು ಕಂಡಿದ್ದೇನೆ
ಗೊತ್ತಿದ್ದವರೆಲ್ಲ
ವಾಕರಿಸಿಕೊಳ್ಳುತ್ತ ಹೇವರಿಸಿಕೊಳ್ಳುತ್ತ
ಕೇಳುತ್ತಾರೆ..
ಬರೆಯಬಾರದೆ
ಒಂದೆರಡು ದೇವರನಾಮ ಭಕ್ತಿಗೀತೆ..
ಬೆಳೆದ ಮಗ ಮೂರು ಹೊತ್ತು ವಾಟ್ಸಪ್ಪಿನ
ಆನ್‌ಲೈನ್‌ನಲ್ಲಿ ಕಾಣಿಸುವಾಗ
ನನಗೂ ಹಾಗೇ ಅನ್ನಿಸುತ್ತದೆ..
ಅವ ಯಾರೊಂದಿಗೋ ಚಾಟ್ ಮಾಡುತ್ತಿರುವಾಗ..
ಇನ್ಯಾರದೋ ಡೇಟಿಂಗ್‌ಗಳ ಬಗ್ಗೆ
ಖುದ್ದು ನನ್ನಲ್ಲೇ
ಹೇಳುವಾಗ…
ಬರೆದಿಟ್ಟ ಪ್ರೇಮಪದ್ಯಗಳ
ಮೆಲ್ಲಗೆ ಡಸ್ಟ್‌ಬಿನ್ನಿನೊಳಗೆ
ಹಾಕಿ ಸುಮ್ಮನಾಗುತ್ತೇನೆ..
ನರಳುತ್ತಾಳೆ ಎದೆಯೊಳಗೆ ಅವಿತ
ಪ್ರೇಯಸಿಯೊಬ್ಬಳು
“ಏನು ತಪ್ಪಿದೆ ನನ್ನದು ಮಹರಾಯತಿ” ಎನ್ನುತ್ತಾಳೆ..
ಬಿಡುಗಡೆಗೊಳಿಸದೆ ಇರುವುದರ
ತಕರಾರು ಅವಳದ್ದು,
ಹೇಗೆ ಹೇಳಲಿ ನಾನವಳಿಗೆ ಇಲ್ಲಿ ಪ್ರೇಮವೂ
ದೇಹದ ಸುಕ್ಕನ್ನು ಅವಲಂಬಿಸಿದೆ ಎಂದು
ಅವಯವಗಳಿಂದಾಚೆಗೆ ಬೆಳಕು ಕಾಣುವುದಕ್ಕೆ
ಇಲ್ಲಿ ವಿರೋಧವಿದೆಯೆಂದು
ಎದೆಯೊಳಗಿನ ಕಪ್ಪು ದಟ್ಟ ಹೊಗೆ, ನೆತ್ತರೊಳಗಿನ ಕುದಿವ
ಲಾವಾರಸ ಕಗ್ಗತ್ತಲ ನಡುವಲ್ಲಿ
ಉಸಿರು ಅರಸುವಾಗಲು ಇಲ್ಲಿ
ಸಾಯುವುದಕ್ಕೆ ಅನುಮತಿ ಇದೆ
ಪ್ರೀತಿಸುವುದಕ್ಕೆ ಅಲ್ಲ!
ಪದ್ಯ ಬರೆಯುವುದಕ್ಕಂತು ಅಲ್ಲವೇ ಅಲ್ಲ!
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ವಿಪಿನ್)
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ಈಗ ಭದ್ರಾವತಿಯಲ್ಲಿದ್ದಾರೆ. “ಅಹಲ್ಯೆಯ ಸ್ವಗತ” ಇವರ ಹೆಸರಾಂತ ಕವನ ಸಂಕಲನ.