ಒಮ್ಮೆ ನಾನು ನನ್ನ ಓರಗೆಯವ ಇದೇ ಕ್ರಿಕೆಟ್ ಕಾರಣಕ್ಕೆ ಜಗಳಕ್ಕೆ ಬಿದ್ದಿದ್ದೆವು. ನನಗೂ ಎಲ್ಲಿಲ್ಲದ ಕೋಪ ಬಂದು ಉಸಿರು ಕಟ್ಟುವಂತೆ ಅವನ ಕೊರಳಿಗೆ ಕೈ ಹಾಕಿ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿದುಕೊಂಡು ಹೊರಳಾಡುವಾಗ ಕರ್ಕೆಯ (ಹಸಿರು ಹುಲ್ಲು) ದಂಟು ನನ್ನ ಭುಜವನ್ನು ಗಾಯ ಮಾಡಿತ್ತು. ಅದರ ಮಾರ್ಕ್ ಈಗಲೂ ಇದೆ. ಇನ್ನೊಮ್ಮೆ ಎದುರು ಬದರು ಇಬ್ಬರೂ ಮುಖಾಮುಖಿ ಡಿಕ್ಕಿ ಹೊಡೆದು ಮೂಗಿನಿಂದ ಬಳಬಳನೆ ರಕ್ತ ಸುರಿದು ಮುಖವೆಲ್ಲ ಊತ ಬಂದಿತ್ತು. ಈಗ ಇಂತಹ ಪ್ರಸಂಗಗಳನ್ನು ನೆನಸಿಕೊಂಡರೆ ನಮಗೆ ನಾವೆ ಪಶ್ಚಾತ್ತಾಪ ಪಡುತ್ತೇವೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತನೆಯ ಕಂತು
ನನ್ನೂರು ಎಪ್ಪತ್ತರಿಂದ ಎಂಭತ್ತು ಮನೆಗಳಷ್ಟೆ ಇದ್ದ ಚಿಕ್ಕ ಊರದು. ತಕ್ಕಮಟ್ಟಿಗೆ ವಾಸಕ್ಕೆ ಯೋಗ್ಯವಾದ ಹಳೆಮನೆಗಳೆ ಇದ್ದದ್ದು ಈಗಿನಂತೆ ಕಾಂಕ್ರೀಟ್ ಮನೆಗಳು ಆಗ ಒಂದೂ ಇರಲಿಲ್ಲ. ಆದರೂ ಜನ ಸುಖಿಯಾಗಿದ್ದರು. ಒಂದೆರಡು ಮನೆಗಳಷ್ಟೆ ಮರಳು ಗಾಜಿನಿಂದ ಕಟ್ಟಿದ ಕಟ್ಟಡಗಳಿದ್ದವು. ಅವರು ಶ್ರೀಮಂತರೆಂದೆ ನಮ್ಮಂಥವರ ಭಾವನೆ. ಹಬ್ಬಹರಿದಿನಗಳಲ್ಲಿ ಇಡಿ ಊರೆ ಸೇರುತ್ತಿತ್ತು. ಯಾರಲ್ಲೂ ಕಲ್ಮಶವಿರಲಿಲ್ಲ ಆಗ. ಇಷ್ಟೊಂದು ಪ್ರಸಾರ ಮಾಧ್ಯಮಗಳ ಸೋಂಕಿಲ್ಲದ ಕಾಲ ಅದು. ಹಾಗಾಗಿ ಸಿನಿಮಾಗಳೆಂದರೆ ವರ್ಷಕ್ಕೆ ಒಂದು ನೋಡಿದರೆ ಅದೆ ನಮ್ಮ ದೊಡ್ಡ ಖುಷಿ. ಅದೂ ಪಕ್ಕದ ಊರಿನಲ್ಲಿ ಟೆಂಟ್ ಸಿನಿಮಾ ಇದ್ದಿದ್ದರಿಂದ ನೋಡುವ ಭಾಗ್ಯ ಹಬ್ಬದ ದಿನಗಳಲ್ಲಿ ಮಾತ್ರವೇ. ಆದರೂ ಎಷ್ಟು ಸುಖಿಗಳಾಗಿದ್ದೆವು ನಾವು ಅನಿಸುತ್ತದೆ.
ನನಗೆ ನೆನಪಿರುವಂತೆ ಒಂದೆರಡು ಮನೆಗಳಲ್ಲಿ ರೇಡಿಯೊ ಇದ್ದವು. ಅದರಲ್ಲಿ ಬರುವ ಹಾಡುಗಳನ್ನು ಕೇಳಿಯೆ ಅಭಿನಯಿಸಿದ ನಾಯಕರುಗಳ ಅಭಿಮಾನಿಯಾಗಿದ್ದವರು ನಾವು. ಎಂತಹ ಮುಗ್ಧತೆ ನಮ್ಮಲ್ಲಿತ್ತು! ನಾವೆಲ್ಲ ನಮ್ಮ ನಮ್ಮಲ್ಲಿ ಅಭಿಮಾನಿ ಗುಂಪುಗಳನ್ನು ಮಾಡಿಕೊಂಡಿದ್ದೆವು. ನಾನಂತು ಅಂಬರೀಶ್ ಅವರ ಅಪ್ಪಟ ಅಭಿಮಾನಿಯಾಗಿದ್ದೆ. ಅವರ ಫೈಟಿಂಗ್ ಅವರು ನಡೆಯುತ್ತಿದ್ದ ರೀತಿ ಇಷ್ಟವಾಗುತ್ತಿತ್ತು. ಅದನ್ನು ಅನುಕರಣೆ ಮಾಡುತ್ತಿದ್ದ ದಿನಗಳು ಇದ್ದವು. ನಾನಂತೂ ಸಣಕಲು ದೇಹದವನಾದ್ದರಿಂದ ನನ್ನ ಮೇಲೆ ಫೈಟಿಂಗ್ ಮಾಡುತ್ತಿದ್ದ ಸಹಪಾಠಿಗಳು ಇದ್ದರೂ. ಒಂದೆರಡು ಬಾರಿ ಅಂತಹ ಘಟನೆಗಳಿಂದ ನಾನು ಘಾಸಿಗೊಂಡಿದ್ದೂ ಹೌದು. ಈಗ ಅದನ್ನು ನೆನೆದರೆ ಅವಾಗೆಲ್ಲಾ ನಾವು ಎಷ್ಟು ಬಾಲಿಶವಾಗಿ ನಡೆದುಕೊಂಡೆವಲ್ಲ ಅನಿಸುತ್ತದೆ. ಬಾಲ್ಯವೆ ಹಾಗೆ ಸರಿ-ತಪ್ಪು ವ್ಯತ್ಯಾಸಗಳ ಗೊಡವೆಯೆ ಇಲ್ಲದಂಥದ್ದು. ದೇವರನ್ನು ನಂಬುವಂತೆ ಮನುಷ್ಯರನ್ನು ನಂಬುವಂಥ ಮನಸ್ಸು ಅಷ್ಟೆ.
ನಮ್ಮ ಮನೆಗೆ ಕೂಲಿ ಮಾಡಿಯೇ ಅಪ್ಪ ಪೆಟ್ಟಿಗೆಯಂಥ ರೇಡಿಯೊ ಒಂದನ್ನು ತಂದಿದ್ದ. ಅದೆ ನಮಗೊಂದು ಖುಷಿಯ ಸಂಗತಿಯಾಗಿತ್ತು. ಅದರಲ್ಲಿ ವಾರಕ್ಕೊಮ್ಮೆ ಸಿನಿಮಾದ ಆಡಿಯೋ ಸ್ಟೋರಿ ಬಿತ್ತರವಾಗುತ್ತಿತ್ತು. ಅದನ್ನು ಕೇಳಿಕೊಂಡೆ ಬೀಡಿ ಸುತ್ತುವ ಕೆಲಸ ಇನ್ನಷ್ಟು ಜಾಸ್ತಿಯಾಗುತ್ತಿತ್ತು. ಆಗಿನ ಕಾಲಕ್ಕೆ ಅದೆ ದೊಡ್ಡ ಮನೋರಂಜನೆಯಾಗಿತ್ತು ನಮಗೆಲ್ಲ. ಆ ರೇಡಿಯೋ ನಮ್ಮ ಮನೆಗೆ ಗೌರವದ ಸೂಚಕವೂ ಆಗಿತ್ತು. ಅದಕ್ಕೆ ಕಾರಣವೂ ಇದೆ. ದೂರದರ್ಶನಗಳಿನ್ನೂ ಆಗ ಹಳ್ಳಿಗಳಿಗೆ ಕಾಲಿಟ್ಟಿರಲಿಲ್ಲ. ಯಾವ ಮನೆಯಲ್ಲಿಯೂ ದೂರದರ್ಶನವಿರಲಿಲ್ಲ. ಮೊಟ್ಟ ಮೊದಲ ದೂರದರ್ಶನ ದರ್ಶನವಾದದ್ದೆ ಒಂದು ಎನ್ ಜಿ ಒ ಸಂಸ್ಥೆಯಿಂದ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂಬ ಕಾರಣಕ್ಕೆ ಶಾಲೆಗೆ ಅದನ್ನು ತಂದಿದ್ದರು. ಆಗ ಅದರಲ್ಲಿ ಬರುತ್ತಿದ್ದ ಸಿನಿಮಾಗಳನ್ನು, ಕ್ರಿಕೆಟ್‌ನಂತಹ ಕ್ರೀಡೆಯನ್ನು ಬಹಳ ಆಸಕ್ತಿಯಿಂದ ನೋಡುತ್ತಿದ್ದೆವು. ಕ್ರಿಕೆಟ್ ಗೀಳು ಹುಟ್ಟಿಕೊಂಡದ್ದೆ ಅದರ ದೆಸೆಯಿಂದ ಅನಿಸುತ್ತದೆ. ಪ್ರತಿ ಭಾನುವಾರ ಚಂದನದಲ್ಲಿ ಕನ್ನಡ ಸಿನಿಮಾ ಬರುತ್ತಿತ್ತು. ಇಡಿ ಊರಿಗೆ ಊರೆ ಅದನ್ನು ನೋಡುತ್ತಿತ್ತು. ಹೀಗೆ ಹುಟ್ಟಿಕೊಂಡ ಅಭಿಮಾನ ಜಗಳವಾಡುವುದರ ಮಟ್ಟಿಗೆ ಹೋಗುತ್ತಿತ್ತು.
ಒಮ್ಮೆ ನಾನು ನನ್ನ ಓರಗೆಯವ ಇದೇ ಕ್ರಿಕೆಟ್ ಕಾರಣಕ್ಕೆ ಜಗಳಕ್ಕೆ ಬಿದ್ದಿದ್ದೆವು. ನನಗೂ ಎಲ್ಲಿಲ್ಲದ ಕೋಪ ಬಂದು ಉಸಿರು ಕಟ್ಟುವಂತೆ ಅವನ ಕೊರಳಿಗೆ ಕೈ ಹಾಕಿ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿದುಕೊಂಡು ಹೊರಳಾಡುವಾಗ ಕರ್ಕೆಯ (ಹಸಿರು ಹುಲ್ಲು) ದಂಟು ನನ್ನ ಭುಜವನ್ನು ಗಾಯ ಮಾಡಿತ್ತು. ಅದರ ಮಾರ್ಕ್ ಈಗಲೂ ಇದೆ. ಇನ್ನೊಮ್ಮೆ ಎದುರು ಬದರು ಇಬ್ಬರೂ ಮುಖಾಮುಖಿ ಡಿಕ್ಕಿ ಹೊಡೆದು ಮೂಗಿನಿಂದ ಬಳಬಳನೆ ರಕ್ತ ಸುರಿದು ಮುಖವೆಲ್ಲ ಊತ ಬಂದಿತ್ತು. ಈಗ ಇಂತಹ ಪ್ರಸಂಗಗಳನ್ನು ನೆನಸಿಕೊಂಡರೆ ನಮಗೆ ನಾವೆ ಪಶ್ಚಾತ್ತಾಪ ಪಡುತ್ತೇವೆ. ನಮಗೆ ಇದ್ದದ್ದು ಅಭಿಮಾನವೊ ಅಥವಾ ಬಾಲ್ಯಕ್ಕೆ ಅರ್ಥವಾಗದ ದುರಭಿಮಾನವೊ ಎಂಬುದನ್ನು ನೆನೆದಾಗಲೆಲ್ಲಾ ಆ ದಿನಗಳು ಕೊಡುತ್ತಿದ್ದ ಖುಷಿಗಳೆ ಬೇರೆ ಅನಿಸುತ್ತದೆ.
ಕೆಲವು ದಿನಗಳಲ್ಲಿ ಊರಿನ ಅನುಕೂಲಸ್ಥರ ಮನೆಗೆ ದೂರದರ್ಶನ ಬಂತು. ಆದರೆ ಅದು ಕಪ್ಪು ಬಿಳುಪು. ಹಾಗಾಗಿ ಬಹುತೇಕರು ಶಾಲೆಯಲ್ಲಿದ್ದ ದೂರದರ್ಶನವನ್ನೆ ನೋಡುತ್ತಿದ್ದರು. ಇದು ಕೆಟ್ಟಾಗಷ್ಟೆ ಆ ಮನೆಯತ್ತ ಓಡಿಹೋಗುತ್ತಿದ್ದೆವು. ಅಲ್ಲಿ ಒಂದಿಷ್ಟು ಜನ ಹೊರಗೆ ನಿಲ್ಲುತ್ತಿದ್ದರು. ಒಂದಿಷ್ಟು ಜನ ಒಳಗಡೆ ಕುಳಿತುಕೊಳ್ಳುತ್ತಿದ್ದರು. ಇಂತಹವುಗಳನ್ನು ನೋಡಿದಾಗ ನಮಗೂ ಆಶ್ಚರ್ಯವಾಗುತ್ತಿತ್ತು. ಕೆಲವೊಮ್ಮೆ ಜನ ಜಾಸ್ತಿಯಾದಾಗ ಹೊರಗಡೆಯೆ ಅದನ್ನು ಪ್ರದರ್ಶನಕ್ಕೆ ಇಡುತ್ತಿದ್ದರು. ಆಗ ಎಲ್ಲರೂ ಒಟ್ಟಾಗಿಯೆ ಕುಳಿತುಕೊ ಟಿ.ವಿ. ನೋಡುತ್ತಿದ್ದರು. ಆದರೆ ಶಾಲೆಯಲ್ಲಿ ಇದ್ದ ದೂರದರ್ಶನಕ್ಕೆ ಈ ರೀತಿಯ ಯಾವ ತಾರತಮ್ಯವೂ ಇರಲಿಲ್ಲ. ಇದು ಸಾಮಾಜಿಕ ಸ್ತರದ ಪರಿಣಾಮವೆಂದು ನಂತರದ ದಿನಗಳಲ್ಲಿ ಗೊತ್ತಾದುದು. ನಂತರದ ದಿನಗಳಲ್ಲಿ ಊರು ಬೆಳೆಯುತ್ತಾ ಹೋಯಿತು. ಹಾಗೇ ಅದರ ಜೊತೆಗೆ ಎಲ್ಲರ ಜೀವನ ಪದ್ಧತಿಯೂ ಬದಲಾಗುತ್ತ ಹೋಯಿತು.
ಆಧುನಿಕತೆಯು ನಮ್ಮನ್ನು ಆವರಿಸಿಕೊಂಡಂತೆಲ್ಲ ನಾವೆಲ್ಲ ಎಷ್ಟೊಂದು ಸಂಕುಚಿತರಾದೆವು ಅನಿಸದಿರದು. ವರ್ಷಕ್ಕೊಮ್ಮೆ ಊರಿನ ದೇವರನ್ನು ಹೊರಡಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ನಮಗೆ ಇಂತಹ ಸಂಭ್ರಮಗಳೆಂದರೆ ಎಲ್ಲಿಲ್ಲದ ಖುಷಿ. ಯಾಕಂದರೆ ಇಡಿ ರಾತ್ರಿಯೆಲ್ಲ ನಾವು ಆಟವಾಡುತ್ತಿದ್ದೆವು. ಅದರಲ್ಲೂ ಕಳ್ಳ ಪೋಲಿಸ್ ಆಟವಾಡುವುದೆಂದರೆ ಇಡಿ ಊರನ್ನೆಲ್ಲ ಸುತ್ತುತ್ತಿದ್ದೆವು. ಈ ದೇವರ ಉತ್ಸವ ಎರಡು ದಿನಗಳ ಕಾಲ ನಡೆಯುತ್ತಿತ್ತು. ಮೊದಲನೆ ದಿನ ದೇವರನ್ನು ಅಲಂಕಾರ ಮಾಡಿಕೊಂಡು ಕುಣಿಯುತ್ತ ಕುಣಿಸುತ್ತ ಸಾಗಿ ಊರ ಹೊರಭಾಗದಿಂದ ಒಂದಷ್ಟು ದೂರ ಸಾಗಿ ಅಲ್ಲಿನ ಈರಣ್ಣ ದೇವರ ಮಂಟಪದ ಹತ್ತಿರ ಸಾಗಿ ಅಲ್ಲಿ ಪಟ್ಟವಾಗುತ್ತಿತ್ತು. ಆ ದಿನ ದೇವರ ಒಕ್ಕಲೆಲ್ಲ ಬಂದು ದವಸ ಧಾನ್ಯಗಳನ್ನು ಸಂಗ್ರಹಿಸಿ ಆ ದಿನ ಇಡಿ ರಾತ್ರಿ ಅಡುಗೆ ತಯಾರಿಸಿ ಬೆಳಿಗ್ಗೆ ಊಟ ಬಡಿಸುವ ಕಾರ್ಯ ನಡೆಯುತ್ತಿತ್ತು. ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದುದು ವಿಶೇಷವಾಗಿತ್ತು. ಅದೆ ರಾತ್ರಿ ವಾಪಸ್ಸು ಮೆರವಣಿಗೆಯಿಂದ ತನ್ನ ಮೂಲ ದೇವರಗುಡಿಗೆ ಬರುತ್ತಿತ್ತು. ನನಗೆ ಬಹಳ ವಿಶೇಷವಾಗಿ ಅನ್ನಿಸುತ್ತಿದ್ದದ್ದೆಂದರೆ, ದೇವರು ಗುಡಿ ಪ್ರವೇಶಿಸುವ ಮುನ್ನ ತನಗೆ ಅಲಂಕರಿಸಿದ್ದ ಹಾರಗಳನ್ನು ಕೆಲವರಿಗೆ ಪ್ರಸಾದವನ್ನಾಗಿ ಕೊಡುತ್ತಿತ್ತು. ಅದನ್ನು ನೋಡುವುದೇ ನಮಗೊಂದು ಖುಷಿ. ಕದಿರೆ ಹುಣ್ಣಿಮೆಯ ದಿನಗಳಲ್ಲಿ ನಡೆಯುವ ಈ ಉತ್ಸವ ಆ ದೂರದರ್ಶನದ ನೆನಪು ನೋಡಲು ಹೊರಗೆ ಕಾಯುತ್ತಿದ್ದ ದಿನಗಳು ಅಭಿಮಾನದ ಉತ್ಸಾಹ ಉದ್ವೇಗದಲ್ಲಿ ನಾವು ಮಾಡಿದ ಜಗಳ ಎಲ್ಲವೂ ಇಂದು ನೆನಪಾಗುತ್ತಲೆ ನನ್ನೊಳಗೆ ಅನೇಕ ಪ್ರಶ್ನೆಗಳಾಗಿ ಕಾಡಿದ್ದಂತೂ ನಿಜ. ಬದುಕೆಂದರೆ ಹೀಗೆ ಇರಬೇಕು ಅಲ್ವಾ…..