ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ
ಹಾವುಗಳನ್ನು ಕೊಂದ ಮಾರಣಹೋಮದ ಕತೆ ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೆ. ಮತ್ತು ಮುಕ್ತಾಯ ಹೀಗೆ ಹಾಡಿದೆ…..
ಹಾವುಗಳನ್ನು ಸಾಯಿಸಿದ ಕತೆಗೆ ಒಂದು ಹೊಸ ಲಾಜಿಕಲ್ ತಿರುವು ಬಂದಿದ್ದು ಅದು ಈಗಲೂ ನಮ್ಮ ವ್ಯವಸ್ಥೆ ಬಗ್ಗೆ ಅಭಿಮಾನ ಮೂಡಿಸುತ್ತದೆ! ಸತ್ತ ಹಾವುಗಳ ಲೆಕ್ಕ ಹಾಕಿ ಅದಕ್ಕೆ ದುಡ್ಡು ಕೊಟ್ಟರು ತಾನೇ. ಇದನ್ನು ಒಂದು ದಫ್ತರದಲ್ಲಿ ನಮೂದಿಸಿ ವಾರ್ಷಿಕ ಆಡಿಟ್‌ಗೆ ಒಪ್ಪಿಸಿದರು. ಮಿಕ್ಕ ಎಲ್ಲಾ ಲೆಕ್ಕಗಳಿಗೆ ನೋಟ್ ಬಂದ ಹಾಗೆ ಇದಕ್ಕೂ ಆಗಿನ ಪರಿಶೋಧಕ ತಜ್ಞ ಒಂದು ಕಾಮೆಂಟ್ ಹಾಕಿದ್ದ..
ಒಂದು ಸತ್ತ ಹಾವಿಗೆ ಎರಡು ರುಪಾಯಿ ಎಂದು ನಿಷ್ಕರ್ಷೆ ಮಾಡಿ ಪಾವತಿ ಮಾಡಿರುವುದು ಭಾರತದ ಆರ್ಥಿಕ ಮಾನಗಳಿಂದ ಗಮನಿಸಿದರೆ ತುಂಬಾ ಹೆಚ್ಚು. ಸಂಬಂಧ ಪಟ್ಟವರು ತಮ್ಮ diligence ಉಪಯೋಗಿಸಬೇಕಿತ್ತು… ಅಂತ!
ಈಗ ಮುಂದಕ್ಕೆ…
ನಾಗಾಲ್ಯಾಂಡ್ ಸರ್ಕಲ್‌ನ ನೇರ ರಸ್ತೆಯಲ್ಲಿ ಎಲ್ಲೂ ತಿರುಗದೆ ಹೋದರೆ bel ನ ಉತ್ತರ ಗೇಟು, ನಂತರ ಜಲಗೇರಮ್ಮ ದೇವಿ ದೇವಸ್ಥಾನ. ಜಲಗೇರಮ್ಮ ಅಲ್ಲಿನ ಗ್ರಾಮ ದೇವತೆ. ಅದರ ನಂತರ ಕಬೀರ್ ಆಶ್ರಮ… ಹೀಗೆ ಇದು ಎಂಬತ್ತನೇ ದಶಕದ ಚಿತ್ರಣ. ಈಗ ಈ ಚಿತ್ರ ಸಂಪೂರ್ಣ ಬದಲಾಗಿದೆ. ಹಳ್ಳಿಯ ವಾತಾವರಣ ಮರೆಯಾಗಿದ್ದು ದೊಡ್ಡದೊಡ್ಡ ವಿಸ್ತಾರವಾದ ಮನೆಗಳು ಬಂದಿವೆ. ಬಹು ಮಹಡಿ ಮನೆಗಳ ಗುಂಪು ಗುಂಪೇ ಇವೆ ಮತ್ತು ಹೇರಳವಾಗಿ ಅಂಗಡಿ ಮುಂಗಟ್ಟುಗಳು ಇವೆ……..
ನಾಗಾಲ್ಯಾಂಡ್ ದಾಟುವ ಮುನ್ನ ಒಂದು ಪ್ರಸಂಗ ನಿಮಗೆ ಹೇಳಲೇಬೇಕು. ವಿಧಿ ಅಥವಾ ದೈವ (ನನಗೆ ಇದರಲ್ಲಿ ಅಷ್ಟು ನಂಬಿಕೆ ಊಹೂಂ ಖಂಡಿತ ಇಲ್ಲ!) ಒಬ್ಬನ ಜೀವನದಲ್ಲಿ ಎಂತೆಂತಹ ನಾಟಕ ಆಡಿಸುತ್ತೆ, ಹೇಗೆ ಬುಗುರಿ ಹಾಗೆ ಗಿರಗಿರ ತಿರುಗಿಸುತ್ತೆ ಎನ್ನಲು ಈ ಪ್ರಸಂಗ.
ಕಾರ್ಖಾನೆ ಸೇರಿದ ಎರಡನೇ ವರ್ಷ ಅಂತ ಕಾಣುತ್ತೆ. ಶ್ರೀಕಂಠ ನಾನು ಇಬ್ಬರೂ ಸೆಕೆಂಡ್ ಶಿಫ್ಟು. ಇಬ್ಬರಿಗೂ ಕೆಲಸದ ಹೊರೆ ಅಷ್ಟು ಇರಲಿಲ್ಲ. ಹಾಗೆ ನೋಡಿದರೆ ನಾನು ಕೆಲಸ ಮಾಡಿದ ಅಷ್ಟೂ ವರ್ಷಗಳಲ್ಲಿ ನನಗೆ ಕೆಲಸ ಜಾಸ್ತಿ ಅಂತ ಅನಿಸಲೇ ಇಲ್ಲ. ನನ್ನ ಸಾಹಿತ್ಯ ಮತ್ತಿತರ ಎಲ್ಲಾ ಹವ್ಯಾಸಗಳನ್ನು ಕಾರ್ಖಾನೆಯಿಂದ ನಡೆಸುತ್ತಿದ್ದೆ. ನನಗಿಂತ ಮೊದಲು ಅದೇ ಹುದ್ದೆಯಲ್ಲಿದ್ದವರು ಹೊರೆ ಜಾಸ್ತಿ ಎಂದು ಹೇಳುತ್ತಾ ಇದ್ದರು. ನನಗೆ ಸಮಯ ಬೇಕಾದಷ್ಟು ಸಿಕ್ಕಿದೆ ಅನಿಸೋದು. ಅದನ್ನು ಹೊರೆ ಅನ್ನುವವರೆಗೂ ಹೇಳುತ್ತಿದ್ದೆ. ಎಷ್ಟೋ ವರ್ಷದ ನಂತರ ಟೈಮ್ ಮ್ಯಾನೇಜ್ಮೆಂಟ್ ಎನ್ನುವ ಒಂದು ತರಗತಿಗೆ ಹೋಗಿದ್ದೆ. ತರಗತಿಯಲ್ಲಿ ಅವರು ಹೇಳಿದ್ದು ನಾನು ಆಗಲೇ ಇಂಪ್ಲಿಮೆಂಟ್ ಮಾಡಿಕೊಂಡಿದ್ದೆ ಅಂತ ಅನಿಸಿತು. ಅದರಿಂದ ನನಗೆ ಹೊರೆ ಅಂತ ಅನಿಸಿರಲಾರದು ಅಂತನಿಸಿತು..
ಒಂದು ಗುಟ್ಟು ನಿಮಗೆ ಹೇಳಲೇಬೇಕು… ನನ್ನ ಕನ್ನಡ ತಾಯಿ ಭುವನೇಶ್ವರಿ ಸೇವೆ ಅಂದರೆ ಸಾಹಿತ್ಯ ಬರವಣಿಗೆ ನಾನು ಉದ್ಯೋಗದಲ್ಲಿ ಇದ್ದಷ್ಟು ದಿವಸ ಕಾರ್ಖಾನೆ ಒಳಗೇ ನಡೆದದ್ದು! ಒಂದೇ ಒಂದು ಲೇಖನ ಮಾತ್ರ ಮನೆಯಲ್ಲಿ ಎಡಗೈನಲ್ಲಿ ಬರೆದೆ. ಸ್ಕೂಟರಿನಲ್ಲಿ ಹೋಗಬೇಕಾದರೆ ಪಕ್ಕದಲ್ಲಿ ಒಂದು ನಾಯಿ ನನಗೆ ಪೈಪೋಟಿ ಕೊಡ್ತು. ಸ್ಕೂಟರಿಗಿಂತ ವೇಗವಾಗಿ ಅದು ಓಡಿತು. ಅದನ್ನ ಸೋಲಿಸಬೇಕು ಅಂತ ನಾನೂ ಸ್ಕೂಟರನ್ನ ಜೋರಾಗಿ ಆಕ್ಸಿಲೇಟರ್ ತಿರುಗಿಸಿ ಓಡಿಸಿದೆ. ಎದುರು ಯಾವುದೋ ಗಾಡಿ ಬಂತು ಅಂತ ನಾಯಿ ಅದರ ಪಥ ಬದಲಾಯಿಸಿ ನನ್ನ ಸ್ಕೂಟರಿನ ಚಕ್ರದ ಅಡಿಗೆ ಬಂತು. ಬ್ಯಾಲೆನ್ಸ್ ತಪ್ಪಿ ನಾನು ಮೂರು ಪಲ್ಟಿ ಹೊಡೆದರೆ, ನಾಯಿ ರೇಸ್ ಗೆದ್ದ ಖುಷಿಯಲ್ಲಿ ಬಾಲ ನಿಗುರಿಸಿ ಕುಯ್ ಕುಯಗುಡುತ್ತಾ ಸಂತೋಷದಿಂದ ಓಡಿತು. ನನ್ನ ಬಲಗೈ ಮಣಿಕಟ್ಟಿನ ಮೂಳೆ ಎರಡು ಪೀಸ್ ಆಗಿತ್ತು. ಅದಕ್ಕೆ ಪ್ಲಾಸ್ಟರ್ ಹಾಕಿಕೊಂಡಿದ್ದೆ ತಾನೇ? ಬಲಗೈಲಿ ಮಾಡುವ ಕೆಲಸ ಎಡಗೈ ಮಾಡಬೇಕಿತ್ತು. ಬಲಚರು ಅಂದರೆ ರೈಟ್ ಹಾಂಡ್‌ನವರಿಗೆ ಇದು ಭಾರಿ ಸವಾಲು. ಈ ಬಲಚರು ಎನ್ನುವ ಪದ ನನ್ನ ಸೃಷ್ಟಿ ಮತ್ತು ಎಡಚರಿಗೆ ವಿರೋಧೀ ಪದ. ಎಡಚರು ಅಂದರೆ ಲೆಫ್ಟಿಸ್ಟ್ ಅಂತ ಅರ್ಥ ಕೊಟ್ಟಿದ್ದೀವಿ ತಾನೇ ಹಾಗೇನೇ ಬಲಚರು ಅಂದರೆ ರೈಟಿಸ್ಟುಗಳು. ಆಗ ಒಂದೇ ಒಂದು ಲೇಖನ ಮನೇಲಿ ಕೂತು ಬರೆದದ್ದು. ಪ್ರಜಾವಾಣಿ ಮಿಡಲ್ ಅದು. ವೇದಾನ ಮೆಚ್ಚಿದರು…… ಅಂತೇನೋ ಅದರ ಶೀರ್ಷಿಕೆ! ಮನೆಯಲ್ಲಿ ಕೂತು ಬರೆದ ಒಂದೇ ಒಂದು ಲೇಖನ, ಜತೆಗೆ ಎಡಗೈಯಲ್ಲಿ ಬರೆದದ್ದು, ಈ ಕಾರಣಕ್ಕೆ ಅದು ನನ್ನ ನೆನಪಿನಲ್ಲಿ ಗಾಢವಾಗಿ ಕೂತು ಬಿಟ್ಟಿದೆ! ಕೆದಕಿದರೆ ಪದಶಃ ಅದನ್ನು ಮತ್ತೆ ಪೇಪರಿಗೆ ಇಳಿಸುತ್ತೇನೋ ಏನೋ ತಿಳಿಯದು.
ಈಚೆಗೆ ಕೈನಲ್ಲಿ ಬರೆಯುತ್ತಿಲ್ಲ; ಬದಲಿಗೆ ಕೈಯಲ್ಲಿ ಮೊಬೈಲ್ ಹಿಡಿದು ಒಂದೊಂದೇ ಬೆರಳಿನಲ್ಲಿ ಅಕ್ಷರ ಮೂಡಿಸುತ್ತೇನೆ. ಯಾವಾಗಲೂ ಮೊಬೈಲ್ ಹಿಡಿದು ಕೂತಿರುತ್ತೆ ಅಂತ ನನ್ನಾಕೆ ಅವರ ನೆಂಟರ ಎದುರು ಡಂಗುರ ಬಾರಿಸುತ್ತಾಳೆ! ನನಗೆ ಅದರ ಬಗ್ಗೆ ಚಿಂತೆಯೇ ಇಲ್ಲ. ಕಸ್ತೂರಿ ಪರಿಮಳ ಯಾರಿಗೆ ಸೇರಬೇಕು ಅಂತ ವಿಧಿ ನಿರ್ಧರಿಸುತ್ತೋ ಅವರಿಗೆ ಸೇರುತ್ತೆ, ಸರಿ ತಾನೇ?
ಮತ್ತೆ ಕತೆಗೆ… ನನಗೂ ಶ್ರೀಕಂಠನಿಗೂ ಅಷ್ಟು ಕೆಲಸ ಇರಲಿಲ್ಲ ಅಂತ ಹೇಳಿದೆ. ಅದರಿಂದ ಸೆಕ್ಯೂರಿಟಿ ಕಣ್ಣಿಗೆ ಬೀಳದ ಹಾಗೆ ಹೊರಗೆ ಹೋಗಿ ಒಂದೆರೆಡು ಕೆಲವು ಸಲ ಮೂರು ನಾಲ್ಕು ಗಂಟೆ ಸುತ್ತು ಸುತ್ತಿ ಮತ್ತೆ ಊಟದ ಬಿಡುವಿನಲ್ಲಿ ಒಳ ಸೇರುತ್ತಿದ್ದೆವು. ಕೆಲವು ಸಲ ಕಾಫಿ ಟೀ ಆಚೆ ಕುಡಿತಾ ಇದ್ದೆವು. ಆದರೆ ಊಟಕ್ಕೆ ಮಾತ್ರ ನಮ್ಮ ಕ್ಯಾಂಟಿನ್. ನಮ್ಮ ಕ್ಯಾಂಟೀನು , ಅಲ್ಲಿನ ಊಟ ಅಲ್ಲಿನ ಪರಿಸರ…(ನಾನು ಮತ್ತು ನಮ್ಮ ಕ್ಯಾಂಟಿನ್) ನಾನು ಎಂತಹ ತಿಂಡೀಪೋತ ಅಂದರೂ ನನಗೆ ಬೇಜಾರು ಇಲ್ಲ, ಕ್ಯಾಂಟಿನ್ ಬಗ್ಗೆ ಮುಂದೆ ಹೇಳ್ತೀನಿ. ಅಲ್ಲಿ ಮಾಡಿದ್ದ ಮೈಸೂರ್ ಪಾಕ್ ಹೇಗಿತ್ತು ಅಂದರೆ ಇಟ್ಟಿಗೆಯನ್ನು ಅರ್ಧಕ್ಕೆ ಕಟ್ ಮಾಡಿದ ಹಾಗೆ…! ಇಂತಹ ನೆನಪುಗಳು ಕೋಟಿ ಕೋಟಿ ಲೆಕ್ಕದಲ್ಲಿ ನನ್ನಲ್ಲಿದೆ. ಇದು ಹಾಗಿರಲಿ….
ನಾವು ಹೊರಗೆ ಸುತ್ತಾಡುವುದು ಅದೂ ಕಾರ್ಖಾನೆ ಸಮಯದಲ್ಲಿ ಇದು ಯಾರಿಗೂ ಗೊತ್ತಾಗುತ್ತಾ ಇರಲಿಲ್ಲ. ಅಕಸ್ಮಾತ್ ಗೊತ್ತಾಗಿದ್ದರೆ ಕೂಡಲೇ ಫ್ಯಾಕ್ಟರಿ ಇಂದ ಡಿಸ್ಮಿಸ್ ಆಗ್ತಾ ಇದ್ದೆವು. ಕೂಲಿ ಮಾಡಿ ಅಥವಾ ಭಿಕ್ಷೆ ಬೇಡಿ ಇಲ್ಲಾಂದರೆ ಕಳ್ಳತನ ಮಾಡಿ ಜೀವನ ನಡೆಸಬೇಕಿತ್ತು. ಹುಡುಗು ಬುದ್ಧಿ ಮತ್ತು ಉಡಾಫೆ ಹೆಚ್ಚಿದ್ದ ವಯಸ್ಸು ಹಾಗೆ ಆಡಿಸುತ್ತಿತ್ತು. ಇದು ಸರ್ವೀಸ್‌ನಲ್ಲಿ ಇರುವ ತನಕ ಯಾರಿಗೂ ಹೇಳಿಲ್ಲ ಮತ್ತು ಈಗ ಮೊದಲನೇ ಬಾರಿ ನಿಮಗೆ ಮಾತ್ರ ಹೇಳುತ್ತಾ ಇರೋದು. ಖಂಡಿತ ಯಾರಿಗೂ ಹೇಳಬೇಡಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು ಎಂದು. ಈಗ ನಿವೃತ್ತಿ ಆಗಿ ಹದಿನೈದು ವರ್ಷದ ನಂತರ ಡಿಸಿಪ್ಲಿನರಿ ಆಕ್ಷನ್ ಅಂದರೆ ಶಿಸ್ತಿನ ಕ್ರಮವನ್ನು ಇಷ್ಟು ವರ್ಷ ಕಳೆದ ಮೇಲೆ ಹಳೇ ಕಡತ ಹುಡುಕಿ ತೆಗೆದುಕೊಳ್ಳಲಾರರು ಎನ್ನುವ ನಂಬಿಕೆ! ಈ ಕಾರಣಕ್ಕೆ ನಿವೃತ್ತರು ಸುಮಾರು ಜನ ಆಫೀಷಿಯಲ್ ಸೀಕ್ರೆಟ್ಸ್‌ನ(Official Secrets )ರಿಟೈರ್ ಆದ ಮೇಲೇನೆ ಬಿಡೋದು!
ಫ್ಯಾಕ್ಟರಿಯಲ್ಲಿ ಆಗ ನಾಲ್ಕು ಶಿಫ್ಟು. ಸೆಕ್ಯೂರಿಟಿ ಅವರಿಗೆ ಬೇರೆ ಶಿಫ್ಟ್ ವ್ಯವಸ್ಥೆ. ಮಾಮೂಲು ಕೆಲಸದವರಿಗೆ ನಾಲ್ಕು ಶಿಫ್ಟ್. ಮೊದಲನೆಯದು ಮತ್ತು ಮಧ್ಯಾಹ್ನದ ಶಿಫ್ಟ್ ಯಂತ್ರದ ಮುಂದೆ ಕೆಲಸ ಮಾಡುವ ಪ್ರೋಲೇಟೆರಿಯನ್ (ಮಾರ್ಕ್ಸ್ ಭಾಷೆಯಲ್ಲಿ ಹೀಗಂದರೆ ಕಾರ್ಮಿಕರು ಅಂತ) ಮತ್ತು ಅವರಿಗೆ ಸಪೋರ್ಟಿಂಗ್ ಸ್ಟಾಫ್‌ಗಳಿಗೆ ಅಂದರೆ ಪ್ಲಾನಿಂಗ್, ಸ್ಟೋರ್ಸ್.. ಈ ತರಹದವು. ಎರಡು ಜನರಲ್ ಶಿಫ್ಟುಗಳು ಆಫೀಸ್ ಕೆಲಸದವರಿಗೆ ಅಂದರೆ ಪರ್ಸನಲ್, ಅಕೌಂಟ್ಸು, ಸಿಬ್ಬಂದಿ ವರ್ಗ.. ಹೀಗೆ. ಇದು ಮೊದಲಿಂದಲೂ ಸುಮಾರು ಎಲ್ಲಾ ಕಾರ್ಖಾನೆಗಳಲ್ಲಿ ನಡೆದುಕೊಂಡು ಬಂದ ವ್ಯವಸ್ಥೆ. ಮೂಲಭೂತವಾಗಿ ಇದೇ ವ್ಯವಸ್ಥೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಈಗಲೂ ಚಾಲ್ತಿಯಲ್ಲಿದೆ.
ಒಮ್ಮೆ ಹೀಗೆ ಜನರಲ್ ಶಿಫ್ಟ್‌ನವರ ಜತೆ ಆಚೆ ಹೋದೆವು. ಹೊರಗಡೆ ಎರಡೂವರೆ ಗಂಟೆ ಸುತ್ತಾಡಿದೆವು. ನವಂಬರ್ ತಿಂಗಳು, ಬೇಗ ಕತ್ತಲು ಆವರಿಸಿಬಿಡುತ್ತದೆ. ಸುತ್ತಿದ ನಂತರ ಕತ್ತಲೆ ಅಂದರೆ ಕತ್ತಲೆ (ತೂತು ಕತ್ತಲೆ ಅಂತಾರಲ್ಲಾ ಅದು ತೂತು ಕತ್ತಲೆ ಬಗ್ಗೆ ನನ್ನ ಅರಿವು ಮತ್ತು ಜ್ಞಾನ ಮುಂದೆ ವಿವರಿಸುತ್ತೇನೆ) ತುಂಬಿದ ರಸ್ತೆಗೆ ಬಂದೆವು. ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ! ಕಾಡಿನಲ್ಲಿ ಭೂತ ಪಿಶಾಚಿಗಳ ಹಸಿವು ತಣಿಸಲು ಕೂತ ಒಬ್ಬ ನತದೃಷ್ಟ ನರಪ್ರಾಣಿಯ ಹೋಲಿಕೆ ತಲೆಯಲ್ಲಿ ಹುಟ್ಟಬೇಕೇ?
ಈ ಕಗ್ಗತ್ತಲಲ್ಲಿ ಸುತ್ತಲೂ ಒಂದೂ ಮನೆಯಿಲ್ಲದ ಕಡೆ, ಒಂದು ನರಪಿಳ್ಳೆಯೂ ಕಾಣದ ಈ ಕಗ್ಗತ್ತಲ ಆಫ್ರಿಕಾ ಖಂಡದಲ್ಲಿ ಇವನ ಬೋಂಡಾ ಯಾರು ಕೊಂಡುಕೊಳ್ಳುತ್ತಾರೆ.. ಅಂತ ಆಶ್ಚರ್ಯ ಆಗೋಯ್ತು. ನೇರ ತಡಿಕೆ ಹತ್ತಿರ ನಡೆದೆವು. ಅದೊಂದು ತಮಿಳಿನ ಮುದುಕ. ನವಂಬರ್ ಚಳಿಯಲ್ಲಿಯೂ ಅಲ್ಲಿ ಕೂತು ಬೋಂಡಾ ಕರೀತಾ ಇದಾನೆ ಅಂದರೆ….. ಅರೆಬರೆ ಕನ್ನಡದಲ್ಲಿ ನಾವು ಕೇಳಿದ್ದಕ್ಕೆ ಉತ್ತರ ಕೊಟ್ಟ. ಅವನು ಕೂತಿರೋ ಜಾಗದ ಹಿಂದೆ ಕ್ವಾರ್ಟರ್ಸ್ ಇದೆ. ಕಾರ್ಖಾನೆ ಕೆಲಸಗಾರರು ಮನೆಗೆ ಊಟಕ್ಕೆ ಹೋಗೋರು ಇನ್ನೇನು ಬರ್ತಾರೆ. ಹೋಗ್ತಾ ಅಲ್ಲೇ ನಿಂತು ಬೋಂಡಾ ವಡೆ ತಗೊಂಡು ಹೋಗ್ತಾರೆ. ಮನೇಲಿ ಹೆಂಡತಿ ಮಕ್ಕಳು ಈ ಬೋಂಡಾ ವಡೆಗೆ ಕಾದಿರ್ತಾರ. ಅವರಿಗೋಸ್ಕರ ತಾನು ಈಗ ಬೋಂಡಾ ಕರೆಯುತ್ತಾ ಇರುವುದು.. ಇದು ಅವನ ಮಾತಿನ ಜಿಸ್ಟ್. ದಿವಸಕ್ಕೆ ಎಷ್ಟು ವ್ಯಾಪಾರ ಆಗುತ್ತೆ ಬೆಳಿಗ್ಗೆ ಸಹ ಅಂಗಡಿ ಇರುತ್ತಾ ಇಲ್ಲಿ ಕಳ್ಳು ಎಲ್ಲಿ ಸಿಗುತ್ತೆ.. ಮೊದಲಾದ ವಿವರ ಕೇಳಿ ತಿಳಿದುಕೊಂಡ ಶ್ರೀಕಂಠ. ಕಳ್ಳು ಅಭ್ಯಾಸ ಇಬ್ಬರಿಗೂ ಇರಲಿಲ್ಲ. ಆದರೂ ವಿಷಯ ತಿಳಿದುಕೊಳ್ಳುವುದರಲ್ಲಿ ಏನು ತಪ್ಪು.. ಇದು ಶ್ರೀಕಂಠನ ವಿಚಾರಧಾರೆ! ತಮಿಳಿನವನ ಬಳಿ ವಡೆ ಬೋಂಡಾ ಕೊಂಡೆವು. ಬಿಸಿ ಬಿಸಿ ವಡೆ ಬೋಂಡಾ ತಮಿಳು ಪೇಪರಿನಲ್ಲಿ ಸುತ್ತಿ ಕೊಟ್ಟಿದ್ದ. ಉದ್ದಕ್ಕೂ ಅದನ್ನು ತಿನ್ನುತ್ತಾ ಮಾತೂ ಆಡುತ್ತಾ ಹೆಜ್ಜೆ ಹಾಕುತ್ತಾ ಇದ್ದೆವು. ಪಾಪ ಈ ಚಳಿಯಲ್ಲಿ ಕೂತು ಬೋಂಡಾ ಮಾಡ್ತಾ ಇದಾನೆ ಅಂತ ನಾನು ಅನುಕಂಪ ತೋರಿಸಿದೆ. ಅಲ್ವೋ ಹೀಗೆ ಗವೋ ಅನ್ನೋ ಕಾಡು, ಇಲ್ಲಿ ಹೇಗೋ ಜನ ಇರ್ತಾರೆ..? ಅಂದ. ಹೂಂ ಗವೊ ಅನ್ನುತ್ತೆ ಹೇಗಾರೂ ಇಲ್ಲಿ ಜೀವನ ಮಾಡ್ತಾರೋ ಅಂದೆ. ನನಗೆ ಲಕ್ಷ ಕೊಡ್ತೀನಿ ಅಂದ್ರೂ ನಾನು ಇಲ್ಲಿ ಬರೋಲ್ಲ… ಅಂದ ಶ್ರೀಕಂಠ. ಅವನು ಲಕ್ಷ ಅಂದನಾ? ಅವನಿಗಿಂತ ನಾನೇನು ಕಡಿಮೆ? ನಾನು ಕೋಟಿ ಕೊಟ್ಟರೂ ಇಲ್ಲಿ ಬರೋಲ್ಲ.. ಅಂದೆ. ಇದೇ ಸಮಯದಲ್ಲೇ ನನ್ನ ವಿಧಿ ನನ್ನ ಹಿಂದೆ ನಿಂತು ಹುಲು ಮಾನವ ಕತ್ತೆ ಮುಂಡೇದೆ, ಇರು ನಿನಗೆ ನನ್ನ ಆಟ ತೋರಿಸ್ತೀನಿ ಆಂತ ನಕ್ಕಿರಬೇಕು, ಗಹಗಹಿಸಿ ನಕ್ಕಿರಬೇಕು, ಗಹಗಹಿಸಿ ಬಿದ್ದು ಬಿದ್ದು ನಕ್ಕಿರಬೇಕು…
ಈ ಮೇಲಿನ ಮಾತು ಕತೆ ಆಗಿ ಹತ್ತು ಹನ್ನೆರೆಡು ವರ್ಷದಲ್ಲಿ “ಕೋಟಿ ಕೊಟ್ಟರೂ ಇಲ್ಲಿ ಬರೋಲ್ಲ” ಅಂತ ಹೇಳಿದ ಜಾಗದಿಂದ ಎರಡು ಕಿಮೀ ದೂರದಲ್ಲಿ ಮನೆ ಕಟ್ಟಿಕೊಂಡು ಬರೋ ಹಾಗೆ ವಿಧಿ ನನ್ನ ಜೀವನ ರೂಪಿಸಿತು ಮತ್ತು ಅವತ್ತು ಯಾವ ಬೇಸರದಲ್ಲಿ ಹೇಳಿದ್ದೆನೋ ಅಂತಹ ಬೇಸರ ಮತ್ತೆ ಬರಲೇ ಇಲ್ಲ. ನಲವತ್ತು ವರ್ಷ ಒಂದೇ ಕಡೆ ಬೇರು ಬಿಟ್ಟು ಅದೇ ಮನೇಲಿ ಇರೋದು ಅಂದರೆ ಅದರ ಸುಖವೇ ಬೇರೆ. ನನಗೆ ತಿಳಿದ ಕೆಲವು ಸ್ನೇಹಿತರು ಅರವತ್ತು ಎಪ್ಪತ್ತು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಮುಖದಲ್ಲಿನ ಸಂತೋಷ ಮತ್ತು ಸಂತೃಪ್ತಿ ಕಂಡರೆ ಹೊಟ್ಟೆ ಉರಿದು ಹೋಗುತ್ತೆ!
ನಾಗಾಲ್ಯಾಂಡ್ ಉದ್ದಕ್ಕೂ ಬಂದರೆ ಆಗ ಇದ್ದದ್ದು ಬಲಗಡೆಗೆ bel ನ ಉತ್ತರ ದ್ವಾರ. ಸುತ್ತಮುತ್ತ ಇದ್ದ ಕಾರ್ಖಾನೆ ಕಾರ್ಮಿಕರು ಸುತ್ತಿಕೊಂಡು ದಕ್ಷಿಣದ ಕಡೆಯ ಬಾಗಿಲಿಗೆ ಬರಬೇಕು ಅಂದರೆ ಸಮಯ ವ್ಯರ್ಥ ಅಂತ ಈ ಉತ್ತರ ದ್ವಾರ ಮಾಡಿದ್ದರು. ಮುಖ್ಯ ವ್ಯವಹಾರ, ರಿಸೆಪ್ಷನ್ ಕಚೇರಿ ಮುಂತಾದವು ದಕ್ಷಿಣ ದ್ವಾರದಲ್ಲಿ ಇತ್ತು, ಈಗಲೂ ಇದೆ. ಈ ದ್ವಾರದ ಎದುರಿಗೇ ಒಂದು ಓಪನ್ ಡೈನಿಂಗ್ ಹಾಲ್. ಆಕಾಶವೇ ಸೂರು. ಸುತ್ತಲೂ ತೆಂಗು ಮತ್ತು ನೀಲಗಿರಿ ಮರಗಳು. ನೆಲದ ಮೇಲೆ ಗ್ರಾನೈಟ್ ಕಲ್ಲಿನ ಮೇಜು, ಮೇಜಿನ ಅತ್ತ ಇತ್ತ ಬೆಂಚು, ಅದೂ ಸಹ ಗ್ರಾನೈಟ್ ಕಲ್ಲಿನದು. ಲಂಚ್ ಸಮಯದಲ್ಲಿ ಮನೆಯಿಂದ ಹೆಂಗಸರು ಊಟ ನೀರು ಎಲೆ ಅಡಿಕೆ ಹೊತ್ತು ತಂದು ಇಲ್ಲಿ ಗಂಡನಿಗೆ ಕಾಯುವರು. ಸೈರನ್ ಆದ ಕೂಡಲೇ ಗಂಡಸು ದಡ ದಡ ಓಡಿ ಬಂದು ಹೆಂಡತಿ ಕೊಟ್ಟ ಊಟ ಮಾಡುವನು. ನೀರು ಕುಡಿದು ಎಲೆ ಅಡಿಕೆ ಹಾಕಿಕೊಂಡು ಸಂತೃಪ್ತಿಯಿಂದ ಮತ್ತೆ ಕೆಲಸಕ್ಕೆ ಹಾಜರಾಗುವ. ಇದು ಸುಮಾರು ವರ್ಷ ಇತ್ತು. ನಂತರ ಕಾರ್ಖಾನೆಗೆ ISO certification ಸಮಯದಲ್ಲಿ ಅಲ್ಲಿನ ಒಂದು ನಿಯಮ ಪಾಲನೆಗೆ ಈ ಓಪನ್ ಡೈನಿಂಗ್ ಹಾಲ್ ಒಂದು ಕೆರೆಗೆ ಜಾಗ ಮಾಡಿಕೊಟ್ಟಿತು. ಈ ಮಧ್ಯೆ ನೀಲಗಿರಿ ಮರಗಳು ಸುತ್ತಲಿನ ಒಂದು ಕಿಮೀ ನಷ್ಟು ಅಂತರ್ಜಲ ಹೀರುತ್ತೆ ಎನ್ನುವ ವರದಿ ಬಂದಿತು. ನೀಲಗಿರಿ ಮರಗಳು ತಲಾ ಐದು ಸಾವಿರಕ್ಕೋ ಹತ್ತು ಸಾವಿರಕ್ಕೋ ಹರಾಜಿನಲ್ಲಿ ಹೋಯಿತು. ನಿಧಾನಕ್ಕೆ ನೀಲಗಿರಿ ಮರಗಳು ಒಂದೊಂದೇ ಕಣ್ಮರೆ ಆದವು.
ಈ ಉತ್ತರ ದ್ವಾರ ದಾಟಿ ಮುಂದೆ ಹೋದರೆ ಅಲ್ಲಿ ಜಲಗೇರಮ್ಮ ದೇವಸ್ಥಾನ ಮತ್ತು ಒಂದು ಆಶ್ರಮ. ಕಬೀರ್ ಆಶ್ರಮ ಅಂತ ಅದರ ಹೆಸರು. ಒಂದು ರೈಲ್ವೆ ಹಳಿ ಅದರ ಪಕ್ಕ ಎಡಕ್ಕೆ ತಿರುಗಿ ಹೋದರೆ ಕೊಡಿಗೆ ಹಳ್ಳಿ ಸೇರುತ್ತಿತ್ತು. ಕೊಡಿಗೆ ಹಳ್ಳಿಯಲ್ಲಿಯೇ ಕೆಂಪೇಗೌಡರು ಹುಟ್ಟಿದ್ದು ಎಂದು ಅಲ್ಲಿನವರು ಹೇಳುತ್ತಿದ್ದರು.
ಉತ್ತರ ದ್ವಾರದ ನೇರಕ್ಕೆ ದೊಡ್ಡ ಬೊಮ್ಮಸಂದ್ರಹಳ್ಳಿ. ಈ ಹಳ್ಳಿಗೆ ನನ್ನ ಪುರ ಪ್ರವೇಶ ಆಗಿದ್ದು ಮತ್ತೊಂದು ಕತೆ. ಈಗ ಅದಕ್ಕೆ ಬರಲೇ, ತಮ್ಮ ಅನುಮತಿಯೊಂದಿಗೆ… ಅದಕ್ಕೆ ಮೊದಲು ಈ ಹಳ್ಳಿ ಬಗ್ಗೆ ಒಂದು ಟಿಪ್ಪಣಿ. ಕೆಂಪೇಗೌಡರ ವಂಶಸ್ಥರು ಇಲ್ಲಿನ ಪಕ್ಕದ ಹಳ್ಳಿ ತಿಂಡ್ಲು ಎಂಬುವಲ್ಲಿ ಇದ್ದರು. ಪಶು ಸಂಗೋಪನೆ ಮತ್ತು ಬೇಸಾಯ ಪ್ರಮುಖ ವೃತ್ತಿ. ಇದಕ್ಕೆ ದೊಡ್ಡ ಬೊಮ್ಮಸಂದ್ರ ಎಂದು ಕರೆಯಲು ಕಾರಣ ಚಿಕ್ಕ ಬೊಮ್ಮಸಂದ್ರ ಹೆಸರಿನ ಮತ್ತೊಂದು ಹಳ್ಳಿ ಇದಕ್ಕೆ ಐದಾರು ಕಿಮೀ ದೂರದಲ್ಲಿ ಇದ್ದದ್ದು ದೊಡ್ಡ ಬೊಮ್ಮಸಂದ್ರ ಮತ್ತು ಚಿಕ್ಕ ಬೊಮ್ಮಸಂದ್ರ ನಡುವೆ ನರಸೀಪುರ ಅಟ್ಟುರು ಮುಂತಾದ ಹಳ್ಳಿಗಳು ಇದ್ದು ಅದು ನೇರ ಯಲಹಂಕ ದಾರಿಯ ಅಕ್ಕ ಪಕ್ಕದವು. ದೊಡ್ಡ ಬೊಮ್ಮ ಸಂದ್ರದ ಜನಸಂಖ್ಯೆ ಸುಮಾರು ಕೆಲವು ಸಾವಿರ ಅಷ್ಟೇ ಐವತ್ತು ದಶಕದ ಆರಂಭದಲ್ಲಿ. ಇದಕ್ಕೆ ಸೇರಿದ ಹಾಗೆ ಬೆಂಗಳೂರಿನ ಎರಡನೇ ದೊಡ್ಡ ಕೆರೆ ದೊಡ್ಡ ಬೊಮ್ಮಸಂದ್ರ ಕೆರೆ. ಈಗ ನನ್ನ ಪುರ ಪ್ರವೇಶದ ಮಹಾ ಪುರಾಣ. ಅದಕ್ಕೆ ಕೊಂಚ ರೆಕ್ಕೆ ಪುಕ್ಕ ಸೇರಿಸಬೇಕು, ಪುರಾಣಕ್ಕೆ ಒಂದು ರೂಪ ಬರಲು.
ಕತೆ ಹಿಂದಕ್ಕೆ ರೀಲು ಸುತ್ತುತೀನಿ ಈಗ. ರಾಜಾಜಿನಗರದ ಮನೆ ಬಗ್ಗೆ ಹೇಳಿದ್ದೆ ಅಲ್ಲವಾ.. ಇಲ್ಲೇ ನಮ್ಮ ನಾಲ್ಕೂ ಜನ ಅಣ್ಣ ತಮ್ಮಂದಿರ ಮದುವೆ ಆಗಿದ್ದು ಮತ್ತು ಒಬ್ಬ ಅಣ್ಣ ಬೆಂಗಳೂರಿನಿಂದ ಆಚೆ ಇದ್ದ. ಮನೆ ಮೇಲೆ ಒಂದು ಹಾಲು, ಬಚ್ಚಲು ಕಕ್ಕಸು ಇವನ್ನು ನಮ್ಮದೊಡ್ಡಣ್ಣ ಕಟ್ಟಿಸಿದ್ದ. ಅದರಲ್ಲೇ ನಾವು ನಮ್ಮ ಸಂಸಾರ ಮನೆಗೆ ಬಂದು ಹೋಗುವ ನಂಟರು.. ಹೀಗೆ ಮ್ಯಾನೇಜ್ ಮಾಡ್ತಾ ಇದ್ದೆವು. ಮಕ್ಕಳು ದೊಡ್ಡವರಾಗುತ್ತ ಬಂದ ಹಾಗೆ ಹೊರಗಡೆಯಿದ್ದ ಮತ್ತೊಬ್ಬ ಅಣ್ಣ ಬೆಂಗಳೂರಿಗೆ ವರ್ಗ ಆದ. ಸಹಜವಾಗಿಯೆ ಮನೆ ಕಿಷ್ಕಿಂಧೆ, ಇಷ್ಟು ಜನಕ್ಕೆ ಸಾಲದು ಅನ್ನುವ ಭಾವನೆ ಬರಲು ಶುರು. ನಾನು, ಮೂರನೇ ಅಣ್ಣ ಇಬ್ಬರೂ ಮನೆ ಹುಡುಕೋದು, ಯಾರಿಗೆ ಮೊದಲು ಸಿಗುತ್ತೋ ಅವರು ಹೊರಡೋದು ಅಂತ ತೀರ್ಮಾನಿಸಿದೆವು.
ಮನೆ ಹುಡುಕಲು ಶುರು ಮಾಡಿದೆನಾ? ಆಗಲೇ ನನಗೆ ಗೊತ್ತಾಗಿದ್ದು ನನ್ನ ತಿಳುವಳಿಕೆ ಬಿಗ್ ಝೀರೋ ಅಂತ, ಶೂನ್ಯ ಅಂತ. ನೂರು ರುಪಾಯಿಗೆ ಬಾಡಿಗೆ ಮನೆ ಸಿಗುತ್ತೆ ಅಂತ ನಾನು ಅಂದುಕೊಂಡಿದ್ದು. ಇದು ಎಂಬತ್ತರ ದಶಕದ ಆರಂಭದಲ್ಲಿ. ನೂರು ರುಪಾಯಿಗೆ ಒಂದು ರೂಮು ಸಹ ಸಿಗೋಲ್ಲ ಅಂತ ಗೊತ್ತಾಯಿತು. ಸರಿ ಇನ್ನೂರು ರುಪಾಯಿ ಮನೆ ಬಾಡಿಗೆ ಕೊಡಬಹುದು ಅಂತ ನಾನೇ ಡಿಸೈಡ್ ಮಾಡಿದೆ. ಆರ್ನೂರು ರುಪಾಯಿ ಸಂಬಳ ಕೈಗೆ ಬರ್ತಿತ್ತು. ಇದರಲ್ಲಿ ಎರಡು ನೂರು ಬಾಡಿಗೆ ಅಂದರೆ ನಾನೂರು ರುಪಾಯಿಯಲ್ಲಿ ಜೀವನ ಮಾಡಬಹುದು ಅಂತ ನನ್ನ ಅಂದಾಜು…! ಅಲ್ಲಿಯವರೆಗೆ ಅಂಗಡಿಗೆ ಹೋಗಿದ್ದವನಲ್ಲ ನಾನು ಮತ್ತು ಯಾವುದರ ಬೆಲೆಯೂ ತಿಳಿಯದು. ಒಂದು ಸಲ ಮನೇಲಿ ಸೊಪ್ಪು ತಗೊಂಬಾ ಅಂತ ಕಳಿಸಿದ್ದರು. ಸೊಪ್ಪಿನವಳ ಮುಂದೆ ನಿಂತು ಹೇಗೆ ಕೇಜಿ ಅಂತ ಕೇಳಿದೆ. ಅವಳು ಕಿಸಕ್ ಅಂತ ನಕ್ಕು ಸೋಮೇರು ಸೊಪ್ಪು ಎಂಗೆ ಕೇಜಿ ಅಂತ ಕೇಳ್ತಾ ಅವರೆ…. ಅಂತ ದೊಡ್ಡ ನಗೆ ಸಮುದ್ರ ಹುಟ್ಟು ಹಾಕಿದ್ದಳು. ಆಗಿನ್ನೂ ಸೊಪ್ಪು ತೂಕದ ಲೆಕ್ಕದಲ್ಲಿ ಇರಲಿಲ್ಲ…!
ಬಾಡಿಗೆ ಮನೆಗೆ ಇಡೀ ಬೆಂಗಳೂರು ಜಾಲಾಡಿಬಿಟ್ಟೆ. ನನ್ನ ಪಾಕೆಟ್‌ಗೆ ಸರಿ ಹೊಂದುವ ಮನೆ ಸಿಗಲೇ ಇಲ್ಲ. ಜತೆಗೆ ಸುಮಾರು ಮನೆಗಳು ಗರಾಜ್‌ನ ಕನ್ವರ್ಟ್ ಮಾಡಿರೋ ಮನೆಗಳು. ಗಾಳಿ ಇಲ್ಲ ಬೆಳಕು ಇಲ್ಲ ವೆಂಟಿಲೇಷನ್ ಹತ್ತು ಅಡಿ ಮೇಲೆ, ಬಾಗಿಲು ಅಂದರೆ ರೋಲಿಂಗ್ ಶಟರ್! ಗ್ಯಾರೇಜಿನಲ್ಲಿ ನಾಲ್ಕು ಅಡಿಗೆ ಒಂದು ಪಾರ್ಟಿಶನ್, ಅದರಲ್ಲಿ ಅಡುಗೆ, ಸ್ನಾನದ ಗೂಡು. ಲಾಟ್ರಿನ್ ಹೊರಗೆ ಓನರ್ ಅವರದ್ದೇ…. ಸುಮಾರು ಮನೆಗಳು ಈ ಪ್ಯಾಟರ್ನ್. ಸುಮಾರು ಒಂದು ತಿಂಗಳು ಹುಡುಕಿರಬಹುದು ಹೀಗೆ. ಇಂಡಿಪೆಂಡೆಂಟ್ ಮನೆಗಳು ಅಂದರೆ ನನ್ನ ಮೂರು ನಾಲ್ಕು ತಿಂಗಳ ಸಂಬಳ ತೆರಬೇಕಾದವು..! ಫ್ಯಾಕ್ಟರಿ ಕ್ವಾರ್ಟರ್ಸ್‌ಗೆ ಅಪ್ಲೈ ಮಾಡಲು ನನಗೆ ಅರ್ಹತೆ ಅಂದರೆ ಎಲಿಜಿಬಿಲಿಟಿ ಇಲ್ಲ..!
ಬಾಡಿಗೆ ಮನೆ ಹುಡುಕಿ ಹುಡುಕಿ ಬೇಜಾರಿಂದ ಸೆಕ್ಷನ್‌ನಲ್ಲಿ ಕೂತಿದ್ದೆ. ಕೇರಳದಿಂದ ಬಂದು ಇಲ್ಲಿ ಕೆಲಸಕ್ಕೆ ಸೇರಿದ್ದ ದಿವಾಕರ ಅಂತ ನನಗಿಂತ ಹಿರಿಯ ಮತ್ತು ನನ್ನ ಆಪ್ತ ಆಗಾಗ ಬಂದು ನನ್ನ ಆಫೀಸಿನಲ್ಲಿ ಕೂತು ಕಷ್ಟ ಸುಖ ಮಾತಾಡ್ತಾ ಇದ್ದ. ಅವತ್ತೂ ಬಂದ, ಅವನ ಜತೆ ಮಾತು ಆಡುತ್ತಾ ಮನೆ ಹುಡುಕುತ್ತಿರುವ ಸುದ್ದಿ, ನನ್ನ ಅನುಭವ ಕೊಂಚ ತೀವ್ರವಾಗಿ ಬಿಂಬಿಸಿದೆ ಅಂತ ಕಾಣುತ್ತೆ.
ನನ್ನ ಮನೆ ಮುಂದೆ ಒಂದು ಮನೆ ಇದೆ ಮಹಡಿ ಮೇಲೆ. ನಿನ್ನ ಸಂಸಾರಕ್ಕೆ ಸಾಕು. ಬೇಕಾದರೆ ಬಂದು ನೋಡು ಅಂದ. ಅವನ ಜತೆ ಅವತ್ತೇ ನಾನು ಮೊದಲು ಹೋಗಿ ಮನೆ ನೋಡಿದೆ. ಫ್ಯಾಕ್ಟರಿಯಿಂದ ನಡೆದು ಹೋಗಬಹುದು, ನಾಲ್ಕುವರೆ ನಿಮಿಷ. ಹಾಲು ಅದರ ಎಡಕ್ಕೆ ಅಡಿಗೆಮನೆ ಅದರ ಪಕ್ಕ ಬಚ್ಚಲು, ಹಾಲಿನ ಬಲಕ್ಕೆ ಒಂದು ರೂಮು. ಮಹಡಿ ಮೇಲೆ ಇದು, ಇದರ ಪಕ್ಕ ಇದೇ ತರಹದ ಮತ್ತೊಂದು ಮನೆ. ಎರಡು ಮನೆ ಕೆಳಗೆ ಎರಡು ಮೇಲೆ. ಮಹಡಿ ಮನೆಗಳಿಗೆ ಒಂದು ಕಾಮನ್ ಲೆಟ್ರಿನ್, ಕೆಳಗಿನವರೆಗೂ ಹಾಗೆ. ಬಾವಿ ಇದೆ ಮೋಟಾರು ಇದೆ ನೀರು ಮೇಲೆ ಬರುತ್ತೆ ಅಂತ ಓನರ್ ಅಮ್ಮ ಹೇಳಿತು. ಬಾಡಿಗೆ ನೂರಾ ಎಪ್ಪತ್ತು… ಕರೆಂಟ್ ಬೇರೆ ನೀವೇ ಕಟ್ಕೋಬೇಕು. ಎರಡೂ ಮನೆ ಅಕ್ಕಪಕ್ಕ ಜೋಡಿಸಿ ಇಟ್ಟ ಹಾಗೆ! ಅವಳಿ ಜವಳಿ ಮನೆ. ಮಾರನೇ ದಿವಸವೇ ಹೆಂಡತಿ ಬಂದು ನೋಡಿದಳು. ಮನೆ ಏನೋ ಓಕೆ ಆದರೂ ಅವರ ತಾಯಿ ಮನೆಗೂ ದೂರ, ನಮ್ಮನೆಗೂ ದೂರ! ಅವರ ಮನೆ ಜಯನಗರ, ನನ್ನದು ರಾಜಾಜಿನಗರ! ಇದು ಸಮಸ್ಯೆ..
ಈ ಬಾಡಿಗೆ ಮನೆ ನೋಡಿಕೊಂಡು ರಾಜಾಜಿನಗರದ ಮನೆಗೆ ಬರ್ತಾ ನನ್ನ ಲಾಜಿಕ್ ವಿವರಿಸಿದೆ ..
ಫ್ಯಾಕ್ಟರಿಗೆ ತುಂಬಾ ಹತ್ತಿರ ಇದೆ. ಮುಂದೆ ಮಗೂನ ಫ್ಯಾಕ್ಟರಿ ಸ್ಕೂಲಿಗೆ ಸೇರಿಸಬಹುದು (ಆಗ ನನ್ನ ಮಗನಿಗೆ ಇನ್ನೂ ಒಂದೂವರೆ ವರ್ಷ), ದಿನಾ ಊಟದ ಸಮಯದಲ್ಲಿ ಮನೆಗೆ ಬರಬಹುದು….. ಹೀಗೆ ಕೆಲವು ಪಾಸಿಟಿವ್ ಅಂಶಗಳನ್ನು ವಿವರಿಸಿದೆ. ಕನ್ವಿನ್ಸ್ ಆದ ಹಾಗೆ ಅನಿಸಿತು. ಒಂದು ವಾರದಲ್ಲಿ ಎರಡು ಸಾವಿರ ಅಡ್ವಾನ್ಸ್ ಕೊಟ್ಟೆ. ಒಂದು ಸಂಜೆ ರಾಜಾಜಿನಗರದ ಮನೆಯಿಂದ ದೊಡ್ಡ ಬೊಮ್ಮಸಂದ್ರದ ಬಾಡಿಗೆ ಮನೆಗೆ ಒಂದು ಲಗೇಜ್ ವಾಹನ ಆಟೋ ರಿಕ್ಷಾ ತರಹದ್ದು ಅದರಲ್ಲಿ ಮಗು ಹೆಂಡತಿ ನಮ್ಮ ಲಗೇಜು ಸಮೇತ ಬಂದೆವು.
ಮನೆ ಬಗ್ಗೆ ಪೂರ್ತಿ ಸಂಗತಿ ಇನ್ನೂ ನಿಮಗೆ ಹೇಳಿಲ್ಲ. ಮನೆ ಓನರ್ ಕ್ವಾರ್ಟರ್ಸ್‌ನಲ್ಲಿ ಇದ್ದದ್ದು ಅವರಿಗೆ ಇಬ್ಬರು ಹೆಂಡತಿಯರು. ನಾವು ಬಾಡಿಗೆಗೆ ಒಪ್ಪಿದ್ದ ಮನೆ ಮತ್ತು ಅದರ ಕೆಳಗಿನದು ಮೊದಲ ಹೆಂಡತಿ ಸುಪರ್ದು. ಇನ್ನೊಂದು ಜೋಡಿ ಮನೆ ಪಕ್ಕದ್ದು ಅದು ಎರಡನೇ ಹೆಂಡತಿಯದ್ದು. ಆಕೆ bel ಉದ್ಯೋಗಿ. ಅವರು ಕೆಳ ಮನೇಲಿ ಇದ್ದರು. ಅದರ ಮೇಲಿನ ಮನೆ ಬಾಡಿಗೆ ಅವರಿಗೆ ಸೇರಿದರೆ ನಾನಿದ್ದ ಕಡೆ ಕೆಳಗಡೆ ಓನರ್ ಹೆಂಡತಿ ತಮ್ಮ, ಮೇಲೆ ನಾವು. ಇದರ ಬಾಡಿಗೆ ಮೊದಲ ಹೆಂಡತಿಗೆ.
ರಾಜಾಜಿನಗರದ ಮನೆಯಿಂದ ಹೊರಡುವ ಮೊದಲು ಗ್ಯಾಸ್ ನನ್ನ ಹೆಸರಿಗೆ ಬಂದಿತ್ತು. ಆಗತಾನೇ indane ಶುರು ಆಗಿತ್ತು. ಕೂಗಿ ಕೂಗಿ ಕೊಡ್ತಾ ಇದ್ದರು. ಒಂದು ಕುಕ್ಕರು, ಅಕ್ಕಿ ಬೇಳೆ ಇರಿಸಲು ಬಿಸ್ಕತ್ ಟಿನ್.. ಹೀಗೆ ಕೆಲವನ್ನು ಮೊದಲೇ ತಂದು ಇರಿಸಿಕೊಂಡಿದ್ದೆವಾ.. ಅದೆಲ್ಲವನ್ನೂ ರಿಕ್ಷಾ ಒಳಗೆ ಹಾಕಿ, ನಾವೂ ಕೂತು ದೊಡ್ಡಬೊಮ್ಮಸಂದ್ರ ಪುರ ಪ್ರವೇಶ ಮಾಡಿದೆವು. ಸಂಜೆ ಆರುವರೆ ಏಳರ ಸಮಯ. ಕತ್ತಲು ಕತ್ತಲು. ಮನೆ ಮುಂದೆ ರಿಕ್ಷಾ ನಿಲ್ತು. ಓನರ್ ತಮ್ಮ(ಅವರ ಹೆಸರು ಷಣ್ಮುಗಂ ಅಂತ)ಕೆಳಗಿನ ಮನೆ ಅವರು ಆಚೆ ಬಂದರು. oh ಯು ಹ್ಯಾವ್ ಶಿಫ್ಟ್ಎಡ್..? ಅಂದರು. ಹೌದು ಎಸ್ ಅಂದೆ.
ವೇರ್ ಇಸ್ ಯುವರ್ ಕಾಟ್? ಅಂದರು. ರಿಕ್ಷಾನಲ್ಲಿ ಸಾಮಾನು ತಂದಿದ್ದಾನೆ, ಇವನ ಮಂಚ ಆಮೇಲೆ ಬರುತ್ತೇನೋ ಅಂತ ಅವರ ಯೋಚನೆ.
ಕಾಟ್? ನೋ ಕಾಟ್…. ಅಂದೆ.
ಅವನಿಗೆ ಆಶ್ಚರ್ಯ! ಮನುಷ್ಯ ಕಾಟ್ ಇಲ್ಲದೇ ಇರ್ಬಹುದೇ ಅಂತ. ನೋ ಕಾಟ್? ಅಂತ ಅವರು ಕೇಳಿದರಾ. ಥಟ್ ಅಂತ ನನ್ನ ಬುರುಡೆಗೆ ಒಂದು ಉತ್ತರ ಹೊಳೆಯಬೇಕೆ..?
ನೋ ಕಾಟ್ ಬಿಕಾಸ್ ಐ ಆಮ್ ಗಾಂಧಿ.. ಅಂದೆ.
ಷಣ್ಮುಗಂ ಬಿದ್ದು ಬಿದ್ದು ನಕ್ಕರು. ಮೊನ್ನೆ ಸಿಕ್ಕವರು “ಹಾಯ್ ಗಾಂಧಿ ಹೌ ಆರ್ ಯು….” ಅಂತ ಪ್ರೀತಿಯಿಂದ ವಿಚಾರಿಸಿದರು. ಹೀಗೆ ನಮ್ಮ ಅತ್ಯಂತ ಕಡಿಮೆ ಕಾಲಾವಧಿಯ ಬಾಡಿಗೆ ಮನೆ ವಾಸ ಶುರು ಆಯಿತು. ನನ್ನ ಜೀವಮಾನದಲ್ಲಿ ಬರೇ ಎರಡು ವರ್ಷಕ್ಕೂ ಕಡಿಮೆ ಬಾಡಿಗೆ ಕಟ್ಟಿದ್ದು ಅಂದರೆ ಇಲ್ಲಿ. ಮಿಕ್ಕಿದ ಮನೆಗಳಲ್ಲಿ ಬಾಡಿಗೆ ಕೊಡದೇ ನಾಮ ಹಾಕಿದೆಯಾ ಅಂತ ನೀವು ಕೇಳ್ತಿರಿ ಅಂತ ಗೊತ್ತು. ಸಾರಿ ಸರ್, ಸಾರಿ ಮೇಡಂ, ನೀವು ತಪ್ಪು ಗೆಸ್ ಮಾಡ್ತಾ ಇದೀರಿ, ನಾನು ನನ್ನ ಸ್ವಂತ ಐದು ಚದರದ ಅರಮನೆ ಕಟ್ಟಿಸಿಕೊಂಡು ಮನೆಗಳ ಓನರ್‌ಗಳ ಕಾಟ ತಪ್ಪಿಸಿಕೊಂಡೆ. ಸುಮಾರು ಇದೇ ಸಮಯಕ್ಕೆ ಮನೆ ಹುಡುಕುತ್ತಿದ್ದ ಇನ್ನೊಬ್ಬ ಅಣ್ಣ ಅವನ ಗೆಳೆಯನ ಮನೆಯನ್ನೇ ಕೊಂಡ ಮತ್ತು ಅಲ್ಲಿಗೆ ವಾಸ ಹೋದ.
ನನ್ನ ದೊಡ್ಡ ಬೊಮ್ಮಸಂದ್ರ ಪುರ ಪ್ರವೇಶ ಹೀಗೆ ಆಗಿದ್ದು.
ದೊಡ್ಡಬೊಮ್ಮಸಂದ್ರ ಮತ್ತು ಅಲ್ಲಿಂದ ಮುಂದೆ ಸೇರಿದ್ದು ವಿದ್ಯಾರಣ್ಯಪುರ. ಇವು ಮುಂದೆ ನನ್ನ ಜೀವನ ರೂಪಿಸಿತು….. ನನ್ನ ಮಗಂದು ಆ ವಿಧಿ ಈ ದಡ್ಡನನ್ನು ಅದ್ಹೇಗೆ ಸಿಕ್ಸಿ ಹಾಕ್ದೆ ಅಂತ ಅದೆಷ್ಟು ಬಿದ್ದು ಬಿದ್ದು ಹೊರಳಾಡಿ ನಗ್ತೋ ಅಂತ ನನಗೆ ಆಶ್ಚರ್ಯ. ಆರುನೂರರಲ್ಲಿ ಬಾಡಿಗೆ ತೆತ್ತು ಜೀವನ ಮಾಡೋದು ಹೇಗೆ ಅಂತ ಚಿಂತೆ ಹತ್ತಿಕೊಂಡು ಒದ್ದಾಡ್ತಾ ಇದ್ದೋನು ನಾನು..
ಅದು ಹೇಗೋ ಸಾಲ ಪಾಲ ಮಾಡಿಕೊಳ್ಳದೆ ಜೀವನ ನಡೆಯಿತು. ನಾನಿಲ್ಲ ಅಂದಿದ್ದರೆ ನಿನ್ನ ಪಾಡು ನಾಯಿ ಪಾಡು ಆಗ್ತಿತ್ತು ಅಂತ ನನ್ನಾಕೆ ಅದೆಷ್ಟೋ ಕೋಟಿ ಸಲ ಹೇಳಿದ್ದಾಳೆ, ನಿಜ ಇರಬೇಕು ಅಂತ ನಾನೂ ನಂಬಿದ್ದೇನೆ.
ಮುಂದೆ ದೊಡ್ಡಬೊಮ್ಮಸಂದ್ರ ಕೆರೆ ಸುತ್ತಾ ಎಷ್ಟು ಸುತ್ತು ಹಾಕಿದೀನಿ ಅಂತ ಲೆಕ್ಕ ಇಲ್ಲ. ಆಗ (1984)ನನ್ನ ಹತ್ತಿರ ಇದ್ದದ್ದು ಒಂದು ಕ್ಲಿಕ್ ತ್ರೀ ಅನ್ನುವ box camera. ಆಗಿನ್ನೂ ಡಿಜಿಟಲ್ ಕ್ಯಾಮೆರಾ ಹೆಸರೇ ಕೇಳಿರಲಿಲ್ಲ. box camera ದಲ್ಲಿ ತೆಗೆದ ಒಂದೆರೆಡು ಫೋಟೋಗಳು ಅಂದಿನ ಆಗಿನ ಕೆರೆಯ ನೆನಪನ್ನು ಆಗಾಗ ತೆರೆಯುತ್ತೆ.
ವಿದ್ಯಾರಣ್ಯಪುರ ಬೆಳೆದು ಬಂದದ್ದು ಒಂದು ರೋಚಕ ಕತೆ. ಕೆರೆಗಳ ಹಳ್ಳಿ ಎನ್ನುವ ಅನ್ವರ್ಥ ನಾಮ ಅದಕ್ಕೆ ಕೊಟ್ಟವರು ಅಲ್ಲಿನ ಹುಡುಗರು ಮತ್ತು ಪರಿಸರ ಕಾಳಜಿ ಉಳ್ಳ ನಾಗರಿಕರು. ಮೂರು ವಿಶಾಲವಾದ ಕೆರೆಗಳು ಅದರ ಒಡಲಲ್ಲಿ ಮತ್ತು ಮತ್ತೂ ಹಲವು ಅದರ ಸುತ್ತ…. ಇದರ ಬಗ್ಗೆ ಮುಂದೆ ವಿವರಿಸುತ್ತೇನೆ.
(ಮುಂದುವರೆಯುತ್ತದೆ…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.