ಕ್ರಿ.ಶ. ಹತ್ತನೆಯ ಶತಮಾನದ ಪ್ರಾರಂಭದಲ್ಲೇ ಈ ದೇವಾಲಯಕ್ಕೆ ರಾಣಿಯೊಬ್ಬಳು ದತ್ತಿನೀಡಿರುವ ಶಾಸನವಿದೆಯೆಂದಮೇಲೆ ಈ ದೇಗುಲದ ಪ್ರಾಚೀನತೆಯನ್ನು ನೀವು ಊಹಿಸಿಕೊಳ್ಳಬಹುದು. ಶಾಸನದ ವಿಷಯ ಆಮೇಲೆ ಹೇಳೋಣ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೇವಾಲಯದ ಸುತ್ತ ಕಟ್ಟಿರುವ ಹೊಸ ನಿರ್ಮಿತಿಗಳ ಹಿಂಬದಿಯಲ್ಲಿ ಗೋಚರಿಸುತ್ತದೆ – ಚಾಲುಕ್ಯಕಾಲದ ಸರಳಶೈಲಿಯ ಶಿಖರ. ಶುಕನಾಸಿಯತ್ತ ಮುಖಮಾಡಿರುವ ಶಿಖರದ ಭಾಗವನ್ನು ಹೊರತುಪಡಿಸಿ ಉಳಿದ ಮೂರು ದಿಕ್ಕುಗಳಲ್ಲಿ ಒಂದೊಂದು ಮೂರ್ತಿಯಿದೆ. ಒಂದೆಡೆ ಭೈರವ ನಿಂತಿದ್ದಾನೆ. ತ್ರಿಶೂಲಡಮರು ಖಡ್ಗಗಳನ್ನು ಧರಿಸಿದ ನಗ್ನಮೂರ್ತಿ. ಎಡಗೈಯಲ್ಲಿ ಹಿಡಿದ ರಕ್ಕಸನ ರುಂಡದತ್ತ ಮೂತಿಚಾಚಿದ ನಾಯಿ. ಇನ್ನೊಂದೆಡೆ ಮೃದಂಗ ಬಾರಿಸುತ್ತ ಕುಣಿವ ಗಣಧರ – ಎಲ್ಲವೂ ಸ್ಪಷ್ಟವಾಗಿ ಕಾಣುತ್ತವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಅರವತ್ತೆಂಟನೆಯ ಕಂತು

 

ರಾವಣನು ತನ್ನ ಕೈಗೆ ಕೊಟ್ಟ ಆತ್ಮಲಿಂಗವನ್ನು ವಟುವೇಷದ ಗಣಪತಿ ನೆಲದಲ್ಲಿರಿಸಿ ಮಾಯವಾದ ಕಥೆಯನ್ನು ಓದಿಯೇ ಇರುತ್ತೀರಿ. ನೆಲಕ್ಕಿಳಿದ ಲಿಂಗವನ್ನು ಹೊರಕ್ಕೆ ತೆಗೆಯಲು ರಾವಣ ಹರಸಾಹಸಪಟ್ಟನಂತೆ. ಆಗ ಲಿಂಗವು ಹಲವು ಚೂರುಗಳಾಗಿ ಕೈಗೆ ಬಂದವಂತೆ. ತನ್ನ ಪ್ರಯತ್ನ ವಿಫಲವಾದ ನಿರಾಶೆಯಿಂದ ರಾವಣ ಆ ಚೂರುಗಳನ್ನು ದಿಕ್ಕುದಿಕ್ಕಿಗೆ ಎಸೆದನಂತೆ. ಹಾಗೆ ನಾಗಶೃಂಗಪರ್ವತದ ಎಡೆಯಲ್ಲಿ ಬಿದ್ದ ಶಿಲಾಭಾಗವು ಧಾರೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತೆಂದು ಪುರಾಣಕಥೆ.

ಈ ಚೂರುಗಳೆಲ್ಲ ಕಥೆಯ ಮುಖ್ಯಕೇಂದ್ರವಾದ ಗೋಕರ್ಣದ ಆಸುಪಾಸಿನ ಮುರ್ಡೇಶ್ವರ, ಸಜ್ಜೇಶ್ವರ, ಗುಣವಂತೆ ಮತ್ತಿತರ ಸ್ಥಳಗಳಲ್ಲಿಯೇ ಬಿದ್ದಿರುವುದರಿಂದ ಆತ್ಮಲಿಂಗದರ್ಶನಕ್ಕೆ ಹೊರಟ ಭಕ್ತಾದಿಗಳಿಗೆ ರಾವಣನ ದುಸ್ಸಾಹಸದಿಂದ ಹೆಚ್ಚಿನ ಅನಾನುಕೂಲವಾದಂತಿಲ್ಲ. ಈಗ ನಾವು ಪರಿಚಯಮಾಡಿಕೊಳ್ಳುತ್ತಿರುವ ಧಾರೇಶ್ವರ ಕ್ಷೇತ್ರವೂ ಗೋಕರ್ಣದ ಸಮೀಪದಲ್ಲೇ ಇದೆ. ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ಕುಮಟಾದಿಂದ ಐದೇ ಕಿಲೋಮೀಟರುಗಳಷ್ಟು ದೂರ ಕ್ರಮಿಸಿದರೆ ಸಾಕು, ಈ ಜಿಲ್ಲೆಯ ಅತಿ ಪುರಾತನ ದೇವಾಲಯಗಳಲ್ಲೊಂದಾದ ಧಾರೇಶ್ವರದ ಧಾರಾನಾಥ ದೇಗುಲಕ್ಕೆ ನೀವು ತಲುಪಬಹುದು.

ಕ್ರಿ.ಶ. ಹತ್ತನೆಯ ಶತಮಾನದ ಪ್ರಾರಂಭದಲ್ಲೇ ಈ ದೇವಾಲಯಕ್ಕೆ ರಾಣಿಯೊಬ್ಬಳು ದತ್ತಿನೀಡಿರುವ ಶಾಸನವಿದೆಯೆಂದಮೇಲೆ ಈ ದೇಗುಲದ ಪ್ರಾಚೀನತೆಯನ್ನು ನೀವು ಊಹಿಸಿಕೊಳ್ಳಬಹುದು. ಶಾಸನದ ವಿಷಯ ಆಮೇಲೆ ಹೇಳೋಣ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೇವಾಲಯದ ಸುತ್ತ ಕಟ್ಟಿರುವ ಹೊಸ ನಿರ್ಮಿತಿಗಳ ಹಿಂಬದಿಯಲ್ಲಿ ಗೋಚರಿಸುತ್ತದೆ – ಚಾಲುಕ್ಯಕಾಲದ ಸರಳಶೈಲಿಯ ಶಿಖರ. ಶುಕನಾಸಿಯತ್ತ ಮುಖಮಾಡಿರುವ ಶಿಖರದ ಭಾಗವನ್ನು ಹೊರತುಪಡಿಸಿ ಉಳಿದ ಮೂರು ದಿಕ್ಕುಗಳಲ್ಲಿ ಒಂದೊಂದು ಮೂರ್ತಿಯಿದೆ. ಒಂದೆಡೆ ಭೈರವ ನಿಂತಿದ್ದಾನೆ. ತ್ರಿಶೂಲಡಮರು ಖಡ್ಗಗಳನ್ನು ಧರಿಸಿದ ನಗ್ನಮೂರ್ತಿ. ಎಡಗೈಯಲ್ಲಿ ಹಿಡಿದ ರಕ್ಕಸನ ರುಂಡದತ್ತ ಮೂತಿಚಾಚಿದ ನಾಯಿ. ಇನ್ನೊಂದೆಡೆ ಮೃದಂಗ ಬಾರಿಸುತ್ತ ಕುಣಿವ ಗಣಧರ – ಎಲ್ಲವೂ ಸ್ಪಷ್ಟವಾಗಿ ಕಾಣುತ್ತವೆ. ಇದಕ್ಕೆ ವಿರುದ್ಧವಾಗಿ ಶಿಖರದ ಹಿಮ್ಮುಖದಲ್ಲಿ ಕಾಣುವ ವಿಗ್ರಹ ಅತ್ಯಂತ ಶಾಂತಮೂರ್ತಿಯಾದ ಶಿವನದು. ಸುಖಾಸೀನನಾದ ಶಿವ ಕೈಯಲ್ಲಿ ಜಪಮಾಲೆಯನ್ನು ಹಿಡಿದು ತಪೋಮಗ್ನನಾಗಿದ್ದಾನೆ. ಶಿಖರದ ಇನ್ನೊಂದು ಬದಿಯಲ್ಲಿ ನೃತ್ಯಕಾಳಿಯ ಮೂರ್ತಿಯಿದೆ. ಇನ್ನುಳಿದಂತೆ ಶಿಖರದ ಸ್ತರಗಳ ಅಲಂಕರಣ ಸರಳವಾಗಿದ್ದರೂ ಆಕರ್ಷಕವಾಗಿದೆ.

ದೇಗುಲದ ನವರಂಗಕ್ಕೆ ಮೂರು ಕಡೆಯಿಂದಲೂ ಪ್ರವೇಶಿಸಲು ಅನುಕೂಲವಾಗುವಂತೆ ಬಾಗಿಲುಗಳಿವೆ. ಒರಗಿಕೊಳ್ಳಲು ಕಕ್ಷಾಸನ. ಅದನ್ನು ಆಧರಿಸಿದ ಕಿರುಕಂಬಗಳೂ ನವರಂಗವನ್ನು ಅಲಂಕರಿಸಿದ ದೊಡ್ಡಕಂಬಗಳೂ ಸೊಗಸಾದ ಕೆತ್ತನೆಯಿಂದ ಕೂಡಿವೆ. ಬುಡದಲ್ಲಿ ಚಚ್ಚೌಕವಾಗಿರುವ ಕಂಬಗಳನ್ನು ತಿರುಗಣೆಯ ಯಂತ್ರದಲ್ಲಿ ದುಂಡಗೆ ವಿನ್ಯಾಸಗೊಳಿಸಿ ಬಗೆಬಗೆಯ ಚಿತ್ತಾರಗಳನ್ನು ಕೆತ್ತಿರುವ ರೀತಿ ಮನಸೆಳೆಯುತ್ತದೆ. ಗರ್ಭಗುಡಿಯಲ್ಲಿ ಶಿವಲಿಂಗ. ಇದೇ ಧಾರೇಶ್ವರನೆಂಬ ಹೆಸರು ಪಡೆದ ರೂಪ. ಒಳಗುಡಿಯಲ್ಲಿ ಶಿವನಿಗೆ ಅಭಿಮುಖವಾಗಿರುವ ನಂದಿಯಿದೆ. ಇಲ್ಲಿಯೇ ಹಲವು ಪ್ರಾಚೀನ ವಿಗ್ರಹಗಳಿರುವುದನ್ನು ತಪ್ಪದೆ ಗಮನಿಸಿ. ಒಂದೆಡೆ ವೇಣುಗೋಪಾಲನ ವಿಗ್ರಹ. ಕೊಳಲು ನುಡಿಸುತ್ತಿರುವ ಕೃಷ್ಣನ ಸುತ್ತ ಗೋಪಿಕೆಯರೂ ದನಕರುಗಳೂ ಗೊಲ್ಲರೂ ಇದ್ದಾರೆ. ಇನ್ನೊಂದು ಪ್ರತಿಮೆ- ಶಂಖಚಕ್ರಗದಾಧಾರಿಯಾದ ವಿಷ್ಣುವಿನದು. ಪ್ರತ್ಯೇಕ ಗೂಡುಗಳಲ್ಲಿ ಗಣೇಶ, ಸರಸ್ವತಿಯರ ಪ್ರತಿಮೆಗಳಿವೆ. ಎಡತೊಡೆಯನ್ನೂ ಬಲಪಾದವನ್ನೂ ನೆಲಕ್ಕೂರಿ ಕುಳಿತ ಗಣಪತಿಯ ವಿಗ್ರಹ ಮೋಹಕವಾಗಿದೆ. ಗಣಪತಿ ತೊಟ್ಟ ಆಭರಣಗಳು, ಸೊಂಟಕ್ಕೆ ಸುತ್ತಿದ ಹಾವು, ಪಾದದೆಡೆಯ ಇಲಿ- ಎಲ್ಲವೂ ಸೊಗಸಾಗಿ ಚಿತ್ರಿತವಾಗಿವೆ. ಕೈಗಳಲ್ಲಿ ಜಪಮಾಲೆ, ಪುಸ್ತಕಗಳನ್ನು ಹಿಡಿದು ವರದಹಸ್ತೆಯಾಗಿರುವ ಸರಸ್ವತಿಯ ವಿಗ್ರಹವೂ ಸುಂದರವಾಗಿದೆ.

(ಫೋಟೋಗಳು: ಲೇಖಕರವು)

ಪ್ರಾಚೀನಕಾಲದ ಸಾಂಪ್ರದಾಯಕ ಶಿಲ್ಪದ ಮಾದರಿಗಳನ್ನು ಅಭ್ಯಾಸ ಮಾಡುವವರಿಗೆ ಈ ವಿಗ್ರಹಗಳ ರಚನೆ ಸ್ವಾರಸ್ಯಕರ ಮಾಹಿತಿಗಳನ್ನು ಒದಗಿಸಬಹುದು. ಆ ಕಾಲದ ಶಿಲ್ಪಗಳ ರೂಪರೇಖೆಗಳೇ ಮುಂದಿನ ಹೊಯ್ಸಳಶಿಲ್ಪಗಳಿಗೆ ಮಾದರಿಯಾಗಿದ್ದರೆ ಅಚ್ಚರಿಯಿಲ್ಲ. ಧಾರೇಶ್ವರ ದೇಗುಲದ ಆವರಣದಲ್ಲಿ ಒಂದು ಕೊಳವೂ ಇದೆ. ಇಲ್ಲೇ ಬದಿಯಲ್ಲಿ ಹಲವು ಶಾಸನಗಳನ್ನೂ ವೀರಗಲ್ಲುಗಳನ್ನೂ ಇರಿಸಿದ್ದು, ಇವು ಅಧ್ಯಯನಾಸಕ್ತರಿಗೆ ಉಪಯುಕ್ತ ಮಾದರಿಗಳಾಗಿವೆ.

ಇವುಗಳಲ್ಲೊಂದು ಶಾಸನದಲ್ಲಿ ರಾಣಿಯೊಬ್ಬಳು ಗೋದಾನ ನೀಡುತ್ತಿರುವುದರ ಸಚಿತ್ರ ವಿವರಣೆಯಿದೆ. ಬರೆಹವಲ್ಲದೆ ನಾಲ್ಕು ಸ್ತರದ ಚಿತ್ರಣವಿರುವ ಈ ಶಾಸನದಲ್ಲಿ ಅನುಕ್ರಮವಾಗಿ ರಾಜರಾಣಿಯರು ದೇಗುಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ದೃಶ್ಯ, ರಾಜರಾಣಿಯರು ಪರಿವಾರದೊಡನಿರುವ ಚಿತ್ರ, ಯೋಧರ ಸಾಲು ಹಾಗೂ ರಾಣಿಯು ದನಕರುಗಳನ್ನು ಯಾಚಕರಿಗೆ ದಾನವಾಗಿ ನೀಡುತ್ತಿರುವುದರ ಚಿತ್ರನಿರೂಪಣೆ ಸೊಗಸಾಗಿ ಮೂಡಿಬಂದಿದೆ. ಇಂತಹ ವಿಶಿಷ್ಟ ಶಾಸನ ಬೇರೆಲ್ಲೂ ಕಂಡುಬರುವುದಿಲ್ಲವೆಂಬುದು ವಿಶೇಷ. ಇದಲ್ಲದೆ ಹಲವು ವೀರಗಲ್ಲುಗಳನ್ನೂ ಇಲ್ಲಿ ಕಾಣಬಹುದು. ಧಾರೇಶ್ವರನ ವಾರ್ಷಿಕ ರಥೋತ್ಸವಕ್ಕಾಗಿ ಇತ್ತೀಚೆಗೆ ನಿರ್ಮಿಸಿರುವ ರಥದ ಮೇಲಿನ ಕಾಷ್ಠಶಿಲ್ಪಗಳು ಗಮನಸೆಳೆಯುವಂತಿವೆ.