ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟಬಾದಾಮಿ ಬಣ್ಣದ ಅದೇ ಶರ್ಟುತೊಟ್ಟು ಬರಲು ಅಪ್ಪಣೆ ಮಾಡಿ ಬದಿಯಿಂದ ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ. ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!! ʼಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು‘.
ನಂದಿನಿ ಹೆದ್ದುರ್ಗ ಬರೆದ ಈ ಭಾನುವಾರದ ಕತೆ “ಅಸ್ತು”

 

“ಮತ್ತೆ ಈ ಜಂಗಮನ ಎದೆಯೊಳಗೆ
ಅವಳ ಗೆಜ್ಜೆನಾದದ ಸದ್ದು ಹೊಮ್ಮುತಿದೆ.
ನಿಜದಲ್ಲಿ ಇದರರ್ಥವಿನ್ನೂ ತಿಳಿದಿಲ್ಲ ನನಗೆ!!”

ಪ್ರಕಟವಾಗಿದ್ದ ಒಂದು ಪುಟಾಣಿ ಲಹರಿಗೆ ಪ್ರತಿಕ್ರಿಯಿಸುತ್ತಾ ಅವನು ಹೀಗೆ ಹೇಳಿದಾಗ ಆದದ್ದು ಆನಂದವೋ, ಅಸೂಯೆಯೋ, ಆತಂಕವೋ, ಅವಮಾನವೋ, ನೋವೋ ತಿಳಿಯಲಿಲ್ಲ.

ಹೆಚ್ಚು ಯೋಚಿಸದೆ
“ಅಸ್ತು ಹೇಳಲಿ ದೇವತೆಗಳು.
ಕಾಯ್ದ ಸುಸ್ತು
ಇನ್ನಾದರೂ ಕಳೆಯಲಿ”
ಎಂದು ಟೈಪಿಸಿ ಸೆಂಡ್ ಒತ್ತಿ ತಣ್ಣಗೆ ನಕ್ಕಳು ಸುಹಾಸಿನಿ.

“ಮತ್ತೆ ಮೊದಲಿಂದ ಆರಂಭಿಸೋಣವೆ?”

ಕಡುಗೆಂಪು ಗುಲಾಬಿಯೊಂದಿಗೆ ಬಂದ ಮೆಸೇಜಿಗೆ
“ಆರಂಭಗಳೆಲ್ಲವೂ ಮೊದಲಿಂದಲೇ ಹುಡುಗಾ!”
ಎಂದವಳ ಮೊಗದಲ್ಲಿ ಗೆದ್ದ ಭಾವ.

ಆಗಿನ್ನೂ ಬೆಳಗು ಚಿಲಿಪಿಲಿಗುಟ್ಟುತ್ತಿತ್ತಷ್ಟೇ.
ಅವಳ ಮಾತಿಗೂ,ಆ ಬೆಳಗಿಗೂ
ಮತ್ತೆ ಸೋತ ಅವನು.!!

ಮರಳಿ ಸೋಲುವ ಈ ಸುಖದ ಘಳಿಗೆಗೂ
ಮೊದಲೇ…
ಬಹಳ ಬಹಳ ಮೊದಲೇ
ಒಂದು ಬಾರಿ ಸೋತು ಶರಣಾಗಿ ಪ್ರೇಮದ ಸುರೆಯಲ್ಲಿ, ಸೆರೆಯಲ್ಲಿ ಗಿರಗಿರ ತಿರುಗಿದ್ದು, ಮೊರೆದಿದ್ದು, ಪೊರೆದಿದ್ದು ನೆನಪಾಗಿ ಮುಗುಳ್ನಕ್ಕ ಗಿರೀಶ್.
ಅವಳ ಕರೆಯಲ್ಲಿ ಅವನು ‘ರೀ..’

ತಾನೂ ಈ ಒಲವ ಹರಿವಿನ ಸುಳಿಯಲ್ಲಿ ಏಳಲಾಗದಷ್ಟೂ ಆಳದಲ್ಲಿ ಸಿಲುಕಿ ಮುಳುಗಿ ತಳ ಸೇರಿದ್ದು‌ ನೆನಪಾಗಿ ಸುಮ್ಮನೆ ನಿಟ್ಟುಸಿರಿಟ್ಟಳು ಸುಹಾ..
ಹಾಗೇ ಕರೆಯುತ್ತಿದ್ದದ್ದು ಅವನು‌ ಅವಳನ್ನು.

ಕಾಲವೇನೂ ಕೋಲೆಬಸವನೇ..?
ಎಲ್ಲವನ್ನೂ ಅವರವರ ಪಾಡಿಗೆ ಸುಖವಾಗಿರಲು ಬಿಟ್ಟು ಸುಮ್ಮನಿದ್ದರೆ ಅದರ ಬೇಸರ ಕಳೆಯುವುದಾದರೂ ಹೇಗೆ.!

ಹೀಗಿದ್ದಾಗಲೇ ಅವನಿಗೆ ಸೋಲುವುದು ಸಾಕು, ಗೆಲ್ಲುವ ರುಚಿಯನ್ನೂ ನೋಡಬೇಕು ಎನಿಸಿದ್ದು.

ಅದಕ್ಕಾಗಿಯೇ ತನ್ನ ಮತ್ತು ಅವಳ ಪರಿಚಿತ ವಲಯದಲ್ಲೇ ಇದ್ದ ಆ ದಾಢಸೀ ಸ್ವಭಾವದ ಹೆಣ್ಣಿನ ಓರೆಕೋರೆಗಳನ್ನು ಯಾವುದೋ ಕೆಲಸದ ನೆಪವೊಡ್ಡಿ ಕರೆ ಮಾಡಿ ಪರೋಕ್ಷ ವರ್ಣಿಸ ಹತ್ತಿದ.

ಹೆಚ್ಚು ರಿಸ್ಕ್ …
ಹೆಚ್ಚು ಕಿಕ್ ….!!
ಪರಂಪರೆಯ ‘ಕದ್ದು ತಿನ್ನುವ ಹಣ್ಣಿನ’ ಮರಿಗಾದೆ ಇದು.

ಮೊದಲೇ ಹೇಳಿದಂತೆ ಹೊಸ ಹೆಣ್ಣಿನದು ಒರಟು ನಡೆ.
ಅಂತವಳನ್ನೇ ಗೆಲ್ಲಬೇಕೆಂದು ಹೊರಟವನು ಇವನು.
ಸೋತವನಿಗೆ, ಶರಣಾದವನಿಗೆ ಈ ಗೆಲ್ಲುವ ಹೊಸ ಆಟ ಥ್ರಿಲ್ ಅನಿಸಿದ್ದು ಸುಮ್ಮನೆ ಮಾತಿಗಲ್ಲ.

ಈ ನಡುವೆ ತನ್ನ
ಹಗಲು ರಾತ್ರಿಗಳನ್ನು,
ಹೃದಯ ಮೆದುಳುಗಳನ್ನು,
ಮಾತು ಮೌನಗಳನ್ನು
ಸೋತ ತನ್ನ ‘ಅವನ’
ಬಳಿ ಅಡ ಇಟ್ಟ ಮೃದು ಮನದ ಸುಹಾಸಿನಿ
ಹಿಂದಿನಂತೆಯೇ ಸಂಜೆಗಳ ಶೃಂಗರಿಸಿ, ತನ್ನ ಊಟ ನಿದ್ರೆಗಳನ್ನ ಅವನಿಗಾಗಿ‌ಯೇ ಮುಡುಪಿಟ್ಟು ಕಾಯುತ್ತಿದ್ದದ್ದು, ಬೇಯುತ್ತಿದ್ದದ್ದು ಹೆಚ್ಚೇನೂ ಹೊಸ ವಿಷಯವಾಗಿರಲಿಲ್ಲ ಗೆಲ್ಲಲು ಹೊರಟವನ ಪಾಲಿಗೆ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ತಪ್ಪಿದ ಅವನ ದಿನಚರಿಯನ್ನು ಸಹಜವೆನ್ನುತ್ತಾ ಸಮರ್ಥಿಸಿಕೊಂಡು,
ಬರುಬರುವ ದಿನಗಳಲ್ಲಿ
‘ಕಾಯ್ತಿದ್ದೀನಿ ಮುದ್ದು ಮರಿ’ ಎಂದು
ಮೂರ್ನಾಲ್ಕು ಬಾರಿ ಮೆಸೇಜಿಸಿದ ಮೇಲೆ ಬರುತ್ತಿದ್ದ ಅವನ ಕರೆ ಎಂದಿನಂತೆ ತಾಸಿನವರೆಗೂ ಹಿತವಾಗಿ ತ್ರಾಸ ಕೊಡದೆ ಹತ್ತು ನಿಮಿಷಕ್ಕೂ ಮೊದಲೇ ಮುಗಿದು ‘ಸರಿ… ಮತ್ತೆ’ ಎಂದಾಗ ಸಾವರಿಸಿಕೊಳ್ಳಲು ತಿಂಗಳುಗಳೇ ಹಿಡಿದವು.

ಮತ್ತಮೋಹಿಯಾದ ಹುಡುಗಿ ಹಾಗೆ ಸುಮ್ಮನೆ ಹೋಗಗೊಟ್ಟಳೇ ಒಲವನ್ನು..?
ನೋ…

‘ಹೀಗ್ಹೀಗೆ… ನಾಳೆ… ಸಮಯ… ಸ್ಥಳ..’
ಭೇಟಿ ನಿಗದಿ ಮಾಡಿದಳು.

ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟ ‘ಬಾದಾಮಿ ಬಣ್ಣದ ಅದೇ ಶರ್ಟು’ ತೊಟ್ಟು ಬರಲು ಅಪ್ಪಣೆ ಮಾಡಿ ಈ ಬದಿಯಿಂದ ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ.

ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!!

‘ಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು’

ಅವನಿಗೊಂದು ಫೋನ್ ಮಾಡಿ ಕೇಳೆಬಿಡೋಣಾ ಎಂದು ಕಾಲ್ ಮಾಡಿದ್ರೆ ಲೈನು ವಿಪರೀತ ಬ್ಯುಸಿ.
ಅವನ ಮೊಬೈಲ್ ಲಾಸ್ಟ್ ಸೀನ್ ಸಹ ಎರಡು ಗಂಟೆಯ ಹಿಂದೆ.
ಸಣ್ಣದೊಂದು ಸಂದೇಹ ಮೊದಲ ಬಾರಿಗೆ..
ಛೇ.. ಛೆ..
ಹಾಗಿರಲಾರದು ಖಂಡಿತ..
ಬರುವ ನಾಳೆಗಾಗಿ ಕಳೆದ ದಿನಗಳ ನೆನಪು ನೇವರಿಸುತ್ತಾ ಕಾದಳು ಸುಹಾ.

ಒಂಥರಾ ಇದು ಶಬರಿಯ ವರಿ..!

ಅದೇ ಬಾದಾಮಿ ಬಣ್ಣದ ಚೌಕುಳಿ ಶರ್ಟು ಧರಿಸಿ ಬಂದವನನ್ನು
ಕಂಡು ಇವಳೆದೆಯೊಳಗೆ
ಕೋಟಿ ಮಿಣುಕುಹುಳು ಹೊಕ್ಕಿ,
ಕೋಟಿ ಚುಕ್ಕಿ ಸೊಕ್ಕಿ
ಮೈಮನದ ತುಂಬೆಲ್ಲ ಒಲವು ಉಕ್ಕಿ…!!!
ಅಹಾ…

‘ಕಾಯುತ್ತಿದ್ದೆ’ ಪಿಸುಗುಟ್ಟಳು.
ಎಂದಿನಂತೆ ಅವನದ್ದು ಮೋಹಕ ನಗು..
ಮೇಲಿನ ಅ ತುಟಿ ಮುಚ್ಚುವ ಅವನ ಮೀಸೆಯಲ್ಲಿ ತುಸು ಹೆಚ್ಚೇ ನೆರೆ…

‘ಥೂ.. ಹಾಳಾದ ಕರಿಯ… ಯಾಕಿಷ್ಟು ಯಾಮಾರಿಸಿದ ನನ್ನ..!!’
ಎಂದು‌ಕೊಂಡವಳು ಸುತ್ತೆಲ್ಲಾ ನೋಡಿ‌ ಹೆಚ್ಚಿದ ಮುದ್ದು ಹತ್ತಿಕ್ಕಲಾಗದೇ ಎಂದಿನಂತೆ ಅವನ ಎಡಭುಜ ಮೆಲ್ಲ ಕಚ್ಚಿ…

‘ಆಯ್…ʼ
ಸಣ್ಣಗೆ ನೋವಿನಲಿ ನರಳಿ
‘ಜಗದ ನಡುವೆ ಇದ್ದೇವೆ ಹುಡುಗಿ’
ಎಂದವನ ಮಾತಿನಮಲಿಗೆ ಸೋತು ಅರೆಗಣ್ಣಾದಳು ಸುಹಾ.
ಮತ್ತೆ ಎಳೆಯ, ಹಳೆಯ ಪ್ರೇಮಿಯಾಗುವ ಸೊಗಸನ್ನು ಅನುಭವಿಸಿಯೇ ತೀರಬೇಕು.

ಅವನ ಚಿತ್ತದಿಂದ
‘ಗೆಲ್ಲುವ ‘
ಆಸೆ ಇವಳ ಶುದ್ಧ ಪ್ರೇಮದಲ್ಲಿ ನಿರ್ಗಮಿಸಿ ಮೊದಲ ಭೇಟಿಯಂದು ಹೇಳಿದ ಮಾತನ್ನೆ ಕೊರಳಿಗೆ ತುಟಿ ಸೋಕುವಷ್ಟು ಸನಿಹ ಬಂದು ಉಸುರಿದ.
‘ನೀ ಹಾಗೆ ನೋಡಿದರೆ ನಾ ಉಳಿಯಬಹುದೇ..?’

ನಿನ್ನನ್ನು ತನ್ನೊಳಗೆ ಐಕ್ಯವಾಗಿಸುವುದಕ್ಕೇ ಹುಟ್ಟಿಬಂದವಳು ಹುಡುಗ ನಾನು.
ನಿನ್ನ ‘ನಾ’ ಉಳಿಯಬಾರದು.
ನಿನ್ನೊಳಗೆ ನಾನೂ, ನನ್ನೊಳಗೆ ನೀನೂ ಸಾಯಬೇಕು..
ಇಲ್ಲಾ ಕಾಲಾಂತರದವರೆಗೂ ಬದುಕಬೇಕು..
ತನ್ನೊಳಗೆಂಬಂತೆ ಅಂದುಕೊಂಡು ಮತ್ತೆ ಅವನನ್ನೇ ಹೊಸದಾಗಿ ತುಂಬಿಕೊಂಡ ಪ್ರೇಮದಲ್ಲಿ ನೋಡಿದಳು ಸುಹಾ.

ಅದು
ಒಲುಮೆಯ ಒಸಗೆ…
ಭಾವದ ಬೆಸುಗೆ..

ಸುಖದ ಈ ಆಯಾಸಕ್ಕೆ ಬಳಲಿ ಸೋಲುವುದೇ ಹೆಚ್ಚು ಹಿತ ಎಂದುಕೊಂಡವನು ಈಗ ಬಂದೆ ಎನ್ನುತ್ತಾ ಎದ್ದು ಹೋಗುವ ಮೊದಲು ಅವನ ಜಾತಕ ಅಲ್ಲೇ ಉಳಿಯಿತು.

‘ನಿನ್ನೊಲುಮೆಯಿಂದಲೇ…ಬಾಳು…’
ರಿಂಗ್ ಟೋನು ಚಂದವಿದೆ.
ಸುತ್ತ ನೋಡಿದಳು ಸುಹಾ..
ಕಾಣಲಿಲ್ಲ ಅವನು…
ಇದೆಂಥಾ ಹುಡುಗ ..
ಫೋನು ಒಯ್ಯಬಾರದೇ ಎಂದುಕೊಂಡವಳು ಮಗುಚಿಟ್ಟ ಫೋನ್ ತಿರುಗಿಸಿದರೆ..
“ಹಾಟ್” ಕಾಲಿಂಗ್…!!
ತಕ್ಷಣಕ್ಕೆ ಕಣ್ಣಾಲಿಗಳಿಗೆ ಏನು ತಿಳಿಯಿತೋ,
ಹೇಗೆ ತಿಳಿಯಿತೋ… ತುಂಬಿಕೊಂಡವು.
ಸ್ವೈಪ್ ಮಾಡಿದ ಸುಹಾಗೆ ಕೇಳಿದ್ದು ಪರಿಚಿತ ಒರಟು ಹೆಣ್ಣು ಧ್ವನಿ.

‘ರಾತ್ರಿಯ ನಿನ್ನ ಮೆಸೇಜುಗಳನ್ನೆಲ್ಲಾ ನೋಡಿದೆ. ನೇರಾನೇರ ಮಾತು ನನ್ನದು. ನನಗೆ ಒಪ್ಪಿಗೆ ಇದೆ.
ಈ ಸಂಜೆ ನೀ ಹೇಳಿದ ಹಾಗೆ ಮುತ್ತುಗಳ ಅದಲುಬದಲಾಗಿಸುವ ಆಟದಲ್ಲಿ ಗೆಲುವು ನಿನ್ನದೋ ನನ್ನದೋ ನಿರ್ಧಾರವಾಗಲಿ.!’

ಈಕಡೆಯ ಮಾತುಗಳಿಗೆ ಆಸ್ಪದವೇ ಇಲ್ಲವೆಂಬಂತೆ ಮುಂದುವರೆಸಿದ್ದಾಳೆ ಅವಳು.
“ಮತ್ತೊಂದು ಮಾತು ನೆನಪಿಟ್ಟುಕೋ… ತವಕ‌ ಮುಗಿದ ಮೇಲೂ ತಬ್ಬಿ ಕೂರುವುದು ನನ್ನ ಜಾಯಮಾನಕ್ಕೆ ಒಪ್ಪುವುದಿಲ್ಲ.. ಆಸಕ್ತಿ ಉಳಿಯುವವರೆಗೆ ಆಟ ಮುಂದುವರೆಯಲಿ.. ಸರಿಯಾ..?”
ಹೊಸ ಜಗತ್ತು ಅರಸಿ ಹೊರಟವನಿಗೆ ಅಪ್ಪಣೆ ಕೊಡುತ್ತಿದ್ದಾಳೆ..

ಎದೆ ಕಟ್ಟಿ ಒಡೆದು, ಬಿಕ್ಕಳಿಸಿ…
ಮತ್ತೆ ದುಃಖ ಹತ್ತಿಕ್ಕಿ ಅವನೇ ಎಚ್ಚರಿಸಿದಂತೆ ಜಗದ ನಡುವೆ ಇರುವುದು ತಕ್ಷಣ ನೆನಪಾಗಿ..

ಮರಳಿ ಬಂದವನು ಹುಸಿನಕ್ಕು ಕಿರುಬೆರಳು ತೋರಿದ…
ಏನು ಹೇಳಲಿ…?

ಈಗ ಘಳಿಗೆ ಮೊದಲು ವಿಧಿ ಆತ್ಮವನ್ನೇ ವಧಿಸಿದೆ.
ಕಪ್ಪಿಟ್ಟ ಮುಖವನ್ನು ತಕ್ಷಣ ಗಮನಿಸಿ
“ಏನಾಯ್ತು ಸುಹಾ?”
ಹತ್ತಿರ ಬಂದು ಅಕ್ಕರೆಯಲ್ಲಿ ಕೇಳಿದವನಿಗೆ ಉತ್ತರಿಸಲು ಗೊತ್ತಾಗದೆ ಫೋನ್ ತೋರಿಸಿ
‘ಕಾಲ್ ರಿಸೀವ್ ಮಾಡ್ದೆ ಗಿರೀ…’
ಯಾವಾಗ ಅವನ ಹೆಸರು ಕರೆದಾಗಲೂ ‘ರೀ’ ಮಾತ್ರ ಕೇಳುತ್ತದೆ…
ಅವಳಿಗೂ…

“ಅವಳಿಗೆ ಒಪ್ಪಿಗೆಯಿದೆಯಂತೆ. ಆಸಕ್ತಿ ಉಳಿವಷ್ಟು ಕಾಲ ಮಾತ್ರವಂತೆ…”
ಕಕ್ಕಾಬಿಕ್ಕಿಯಾದವನ ಕೈಯಲ್ಲಿ ಫೋನಿಟ್ಟು ಹೊರಡುವ ಮೊದಲು ತುಂಬಿಕೊಂಡ ಕಂಗಳಿಂದ
ಅವನನ್ನು ಒಮ್ಮೆ ದೀರ್ಘವಾಗಿ ನೋಡಿದಳು ಸುಹಾ.

ಮತ್ತೆಮತ್ತೆ ಉಮ್ಮಳಿಸುವ ನೆನಪುಗಳ ಬಳಲಿಕೆಗೆ ವ್ಯರ್ಥವಾಗಿದ್ದು ಆಯಸ್ಸಿನ ಬರೋಬ್ಬರಿ ಮೂರು ವರ್ಷ.!

ಅವನ ದೂರುವುದು,
ಮೋಸ ಮಾಡಿದನೆಂದುಕೊಳ್ಳುವುದು ಈ ಅವಧಿಯಲ್ಲಿ ಎಂದಿಗೂ ಸಾಧ್ಯವಾಗದೆ
‘ಹೇಗಿದ್ದೀಯಾ… ಹೀಗಿದ್ದೇನೆ’
ಎನ್ನುವಷ್ಟು ಸಂಬಂಧ ಉಳಿಸಿಕೊಂಡವಳನ್ನು ಕ್ಷಮಿಸು ಎಂದಿದ್ದ.

ತನ್ನ ಬರಹಗಳನ್ನು ಮೆಚ್ಚಿ ಓದುವ ಅವನಿಗೆ ಹೇಗಾದರೂ ಅವಳ ಕಥೆಗಳಲ್ಲಿ ತನ್ನ ಛಾಯೆ ಕಾಣಿಸಿಕೊಳ್ಳುವುದು ಅಹಮ್ಮಿಗೆ ತೃಪ್ತಿ ಕೊಡುತ್ತಿತ್ತೋ ಏನೋ..
ಹಾಗೆಂದು ಅವನನ್ನು ಒಂದು ನಿರ್ಧರಿತ ಮನಸ್ಥಿತಿಯಲ್ಲಿ ಅಳೆಯುವುದೂ ಸಹ ಸುಹಾಗೆ ಒಲ್ಲದ ವಿಚಾರ.

ಕಳೆದ ತಿಂಗಳ ನಾಲ್ಕಕ್ಕೆ ಎಲ್ಲಾ ಮುಗಿದು ಐದು ವರ್ಷ.

ಮತ್ತೆ ಮೊನ್ನೆ
‘ಅವಳ ಅಕ್ಷರಗಳಿಗೆ ಅವನೆದೆಯಲ್ಲಿ ಗೆಜ್ಜೆ ಸದ್ದು ಹೊಮ್ಮಿದ ‘
ಉಪಮೆ ಕಳಿಸಿದ್ದಾನೆ…

ಸುಹಾ ಬದುಕಿನಲ್ಲಿ
‘ನಿನಗೆ ಸೋತು ನಾನು ಗೆದ್ದಿದ್ದೇನೆ…’ ಎನ್ನುವ
‘ಅವನು’
ಸಿಕ್ಕಿಯಾಗಿದೆ.!!

ನೀಡಿಯಷ್ಟೇ ಗೊತ್ತಿದ್ದ ಹುಡುಗಿಗೆ ಪಡೆವ ಪುಳಕ ಕೊಟ್ಟವ ಮಾತಿಗೂ ಮೊದಲೂ ‘ಸುನಿ’ ಎನ್ನುತ್ತಾನೆ..

ತನ್ನ ನಾಲ್ಕಕ್ಷರದ ಹೆಸರು ಎರಡಕ್ಷರಕ್ಕೆ ಇಳಿದರೆ ಇಷ್ಟೊಂದು ಸುಂದರವಾಗುತ್ತದೆಯೆಂಬುದರ ಅರಿವಾಗಿ ಸುಹಾಸಿನಿ ಮತ್ತೆ ಹೊಸದಾಗಿ ಪಲ್ಲವಿಸುತ್ತಿದ್ದಾಳೆ.

‘ನನ್ನ ದೇವತೆ ನೀನು’ ಎಂದಾಗ ಹೊಂದುವ ಸಂಭ್ರಮ ಸುಮಾರಿನದಲ್ಲ ಎಂಬುದು ಈಗಷ್ಟೇ ಸುನಿ ಗೆ ತಿಳಿಯುತ್ತಿದೆ‌.

ಹೀಗೊಂದು ಅಗಾಧ ಸುಖದ ಬಳಲಿಕೆಯಲ್ಲಿರುವಾಗಲೇ ಇವನು ಹೀಗೆ ಕಳಿಸಿದ್ದು…!

‘ಅಸ್ತು’
ಟೈಪಿಸಿದವಳ ಬೆರಳು ಕಂಪಿಸಿದವು…

‘ಹಾಟ್’ ಕಾಲಿಂಗ್…
ಈಗಷ್ಟೇ ಆದಂತಿದೆ ಎಲ್ಲವೂ.
ಮತ್ತೆ ಮತ್ತೆ ಅಂದಿನ ಅಸಹಾಯಕತೆ, ಅವಮಾನ, ನೋವು ನೆನಪಾಗುತ್ತಿದೆ.

ಎಸ್…
‘ಅಸ್ತು’
ಹೇಳಿದಳು.

‘ನೋವು… ಖಾಲಿ ಒಬ್ಬರೇ ಅನುಭವಿಸಬೇಕಾದ ಸ್ವತ್ತಲ್ಲ…!!’

ಅದು
ಬೀಡಾಡಿ ಮಧ್ಯಾಹ್ನವೊಂದು ಮುಗಿದು ನಿರಾಳ ಸಂಜೆಯಾಗುವ ಹೊತ್ತು…