ಹೀಗೆ ಬರಿಗೈ ಆದವನನ್ನು, ಅವನು ಕಾಪಾಡಿದ ಜ್ಯೂಗಳು 1974ರಲ್ಲಿ ಅವನು ಕಾಲವಾಗುವವರೆಗೂ ಪೊರೆಯುತ್ತಾರೆ! ಹೀಗೆ ಶಿಂಡ್ಲರ್ ಎನ್ನುವವನನ್ನು ಎಂದೂ ದೈವತ್ವಕ್ಕೇರಿಸದೇ, ಎಲ್ಲ ಕುಂದುಕೊರತೆಗಳು, ದೌರ್ಬಲ್ಯಗಳು, ಕಾರುಣ್ಯ, ಒಳ್ಳೆಯತನ, ಭೋಳೆತನ ಎಲ್ಲವನ್ನೂ ಹೊಂದಿದ ಅಪ್ಪಟ ಮನುಷ್ಯನಾಗಿದ್ದ ಎನ್ನುವ ಕಾರಣಕ್ಕೇ ಜ್ಯೂಗಳು ಅವನನ್ನು ತಮ್ಮವನಾಗಿಸಿಕೊಳ್ಳುತ್ತಾರೆ. ಅವನು ಸತ್ತ ನಂತರ ಇಸ್ರೇಲ್ ನ ಜೆರುಸಲೆಂನಲ್ಲಿ ಅವನು ಸಮಾಧಿಯಾಗುತ್ತಾನೆ.
ಇಂದಷ್ಟೇ ಬಿಡುಗಡೆಯಾದ ಬಿ.ವಿ. ಭಾರತಿ ಬರೆದ “ನಕ್ಷತ್ರಗಳ ಸುಟ್ಟ ನಾಡಿನಲ್ಲಿ” ಪ್ರವಾಸ ಕಥನದಿಂದ ಒಂದು ಅಧ್ಯಾಯ
ಶಿಂಡ್ಲರ್ ಎಂಬ ಅಪ್ಪಟ ಮನುಷ್ಯ!
ಅಂದು ಬೆಳಿಗ್ಗೆಯೇ ನಾವು ಶಿಂಡ್ಲರನ ಮ್ಯೂಸಿಯಂಗೆ ಹೋಗುವುದಿತ್ತು. ಹಾಗಾಗಿ ಬೆಳಿಗ್ಗೆ ಬೇಗ ಎದ್ದವಳು ಸರಸರ ಸ್ನಾನ ಮುಗಿಸೋಣವೆಂದು ನೋಡಿದರೆ ನಮ್ಮ ರೂಮ್ ನಲ್ಲಿ ಟವೆಲ್ ಇಟ್ಟಿರಲಿಲ್ಲ. ಬಾಗಿಲು ತೆರೆದು ಪಕ್ಕದಲ್ಲೇ ಇದ್ದ ರಿಸೆಪ್ಷನ್ ಗೆ ಹೋಗಿ ಅಲ್ಲಿದ್ದ ಆ ಪುಟ್ಟಮರಿಗೆ ಹೇಳಿಬಂದೆ. ಐದು ನಿಮಿಷದ ಮೇಲೆ ಬಾಗಿಲು ತಟ್ಟಿದ ಸದ್ದು. ತೆರೆದರೆ ಅದೇ ಆ ಪುಟ್ಟಮರಿ ತಾನೇ ಟವೆಲ್ ತಂದಿತ್ತು. ‘ಅಯ್ಯೋ ಪಾಪ ನಾವು ಆತುರಾತುರದಲ್ಲಿ ಮಾತನಾಡಿದ್ದಕ್ಕೆ ರೂಮ್ ಬಾಯ್ ಗೆ ಕಾಯಲು ಸಮಯವಿಲ್ಲ ಎಂದುಕೊಂಡು ಅವನೇ ಟವಲ್ ತಂದನೇನೋ’ ಎಂದುಕೊಂಡು ಸಂಕೋಚದಲ್ಲೇ ಥ್ಯಾಂಕ್ಸ್ ಹೇಳಿದೆ.
ಅಷ್ಟರಲ್ಲಿ ಅಪ್ಪ ಮತ್ತು ಗಂಡ ಇಳಿದುಕೊಂಡಿದ್ದ ರೂಮ್ ನಲ್ಲಿ ಬಿಸಿನೀರಿಲ್ಲ ಎಂದು ಮೆಸೇಜ್ ಮಾಡಿದರು. ಮತ್ತೆ ರಿಸೆಪ್ಷನ್ ಗೆ ಹೋಗಿ ಹೇಳಿದೆ. ಆ ಪುಟ್ಟಮರಿ ‘ಐದು ನಿಮಿಷ’ ಎಂದಿತು. ಅಪ್ಪನ ರೂಮ್ ಗೆ ಹೋಗಿ ಆ ವಿಷಯ ತಿಳಿಸುವುದರಲ್ಲೆ ಅದೇ ಪುಟ್ಟಮರಿ ಸ್ಪ್ಯಾನರ್ ಜೊತೆ ಹಾಜರ್! ತಾನೇ ಅದೇನೋ ತಿರುಗಿಸಿ ಬಡಿದಾಡಿ ಅಂತೂ ಬಿಸಿನೀರು ಬರುವ ಹಾಗೆ ಮಾಡಿತು. ಅಲ್ಲಿಂದ ನಮ್ಮ ರೂಮ್ ಗೆ ಮರಳುವಾಗ ನೋಡಿದರೆ ಅದೇ ಪುಟ್ಟಮರಿ ಒಂದು ಕೈನಲ್ಲಿ ಫೋನ್ ಹಿಡಿದು ಮಾತನಾಡುತ್ತಾ, ಮತ್ತೊಂದು ಕೈನಲ್ಲಿ ಅಲ್ಲಿಯೇ ಇದ್ದ ಸ್ಟೋವ್ ನಲ್ಲಿ ಟೀ ಕಾಯಿಸುತ್ತಿತ್ತು.
ಇದು ಮನುಷ್ಯನಲ್ಲ ಬಿಡು… ಥೇಟ್ ದೇವರ ಹಾಗೆ multiple ಕೈಗಳು ಎಂದುಕೊಳ್ಳುವಾಗಲೇ ಎರಡು ಕಪ್ ಗೆ ಟೀ ಸುರಿದುಕೊಂಡು ಅದೆಲ್ಲಿಗೋ ಓಡಿತು. ಆಗ ನಮಗೆ ಗೊತ್ತಾಯಿತು ಅಲ್ಲಿ ಒಬ್ಬ ರೂಮ್ ಬಾಯ್ ಕೂಡಾ ಇಲ್ಲ, ಆ ಪುಟ್ಟಮರಿಯೇ ಆಲ್ ಇನ್ ಒನ್ ಎಂದು. ಇಷ್ಟೂ ರೂಮ್ ಗಳ ಇಷ್ಟೆಲ್ಲ ಗಿರಾಕಿಗಳ ಬೇಡಿಕೆಗಳನ್ನು ಒಂದೇ ಹುಡುಗ ಪೂರೈಸುತ್ತದಲ್ಲ ಎಂದು ಪಾಪವೆನ್ನಿಸಿತು ಆ ಹುಡುಗನ ಮೇಲೆ. ಮತ್ತೆ ಕಾಲೇಜ್ ಗೆ ಬೇರೆ ಹೋಗಿ ಅದೇನು ಪಾಠ ಕೇಳುತ್ತದೋ, ಅದೇನು ಓದುತ್ತದೋ, ಮನೆಯಲ್ಲಿ ಏನು ಕಷ್ಟವೋ, ಅದೆಷ್ಟು ಜನರಿದ್ದಾರೋ, ಅಪ್ಪ-ಅಮ್ಮ ಇದ್ದಾರೋ ಇಲ್ಲವೋ… ನಾನು ಮತ್ತು ನನ್ನ ಮಗ ಒಂದೇ ಸಮನೆ ಮರುಗಿದೆವು.
ಆ ದಿನ ಹೊರಡುವಾಗ ಕೌಂಟರ್ ನಲ್ಲಿ ಕೀ ಕೊಡಲು ಹೋದಾಗಲೂ ಆ ಹುಡುಗನ ಶಿಫ಼್ಟ್ ಮುಗಿದಿರಲಿಲ್ಲ. ಇರುವ ಎರಡು ಕೈಗಳಲ್ಲಿ ಮೂರು ಕೆಲಸ ಮಾಡುತ್ತಲೇ, ನಮ್ಮೆಡೆಗೆ ಒಂದು ಮುಗುಳ್ನಗು ರವಾನಿಸಿ ಕೀ ತೆಗೆದು ಒಳಗಿಟ್ಟು, ಮತ್ತೆ ಯಾವುದೋ ರೂಮ್ ನಿಂದ ಕರೆ ಬಂದಾಗ ಬಂದೆ ಬಂದೆ ಎನ್ನುತ್ತ ಓಡಿತು. ಇಷ್ಟು ಕೆಲಸ ಮಾಡುವ ಆ ಹುಡುಗನ ಜೊತೆ ನಾನು ಬಂದ ದಿನ ರೂಮ್ ನ ವಿಷಯವಾಗಿ ಅಷ್ಟು ಕಿತ್ತಾಡಿದರೂ ಅವನು ಏನೂ ಆಗದಂತೆ ಕೆಲಸ ಮಾಡಿಕೊಳ್ಳುತ್ತಲೇ ಇದ್ದಿದ್ದು ಅವತ್ತಿನ ದಿನಕ್ಕೆ ಉದ್ದಟತನ ಎನ್ನಿಸಿದ್ದು, ಇವತ್ತು ತಾಳ್ಮೆಯ ಪ್ರತೀಕ ಎನ್ನಿಸಿತು!
ತಿಂಡಿ ತಿನ್ನಲು ಹೋದಾಗ ಹಿಂದಿನ ದಿನ ಕ್ರೊಸಾಂಟ್ ಮಾಡಿಲ್ಲದಾಗ ನನ್ನ ಗಂಡ ಜಗಳವಾಡಿದ ನಂತರ ನಾಳೆಗೆ ಮಾಡಿಕೊಡುತ್ತೇವೆ ಎಂದು ಒಪ್ಪಿದ್ದರಲ್ಲ? ಈಗ ಹೋದಾಗ ನಮ್ಮನ್ನು ನೋಡಿದ ಕೂಡಲೇ ತಟ್ಟೆಯ ತುಂಬ ಆರೆಂಟು ತಂದಿಟ್ಟಳು ಆ ಹುಡುಗಿ. ನನ್ನ ಗಂಡ ‘How we?’ ಎನ್ನುವಂತೆ ಹೆಮ್ಮೆಯಿಂದ ನೋಡಿ ನಕ್ಕು ತಿನ್ನಲಾರಂಭಿಸಿದ. ನಾವೂ ಖುಷಿಯಲ್ಲಿ ಅದನ್ನು ಬಾಯಿಗಿಟ್ಟ ನಂತರ ಗೊತ್ತಾಯಿತು ಹಿಂದಿನ ದಿನ ಬೇಕ್ ಮಾಡಿದ್ದ ಬನ್ ಹಿಟ್ಟನ್ನೇ ಇಂದು ಸ್ವಲ್ಪ ತಿರುಚಿ ಬಿಟ್ಟು, ಕ್ರೊಸಾಂಟ್ ನ ಆಕಾರ ಮಾಡಿ ಬೇಕ್ ಮಾಡಿಟ್ಟಿದ್ದಾರೆ, ಅಸಲಿಗೆ ಅದು ಕ್ರೊಸಾಂಟ್ ಅಲ್ಲವೇ ಅಲ್ಲ ಎಂದು!
ನನ್ನ ಗಂಡನಿಗೆ ಹಸಿವಾಗಿತ್ತು ಅನ್ನಿಸುತ್ತದೆ. ‘ಕ್ರೊಸಾಂಟ್’ ಅನ್ನು ಆನಂದದಿಂದ ತಿನ್ನುತ್ತಾ ಕೂತ. ನಾನು, ನನ್ನ ಮಗ ಆ ಕ್ರೊಸಾಂಟ್ ಅಲ್ಲದ ಕ್ರೊಸಾಂಟನ್ನು ನೋಡಿ ನಗುತ್ತಲೇ ಅದನ್ನೇ ತಿಂದೆವು. ಒಂದೇ ಮನುಷ್ಯ ನಾನಾ ಪಾತ್ರಗಳನ್ನು ನಿಭಾಯಿಸಿದ ಪರಿ, ಒಂದೇ ಹಿಟ್ಟು ನಾನಾ ಆಕಾರ ತಾಳಿ ನಮ್ಮಂಥ ಗಿರಾಕಿಗಳನ್ನು ನಿಭಾಯಿಸಿದ ಪರಿ! ಪ್ರಯಾಣ ಕಲಿಸುವ ಪಾಠಗಳು ಅಷ್ಟಿಷ್ಟಲ್ಲ. ನೋಡುವ ಸ್ಥಳಗಳು ಹಲವು ಬಗೆಯಲ್ಲಿ ಪಾಠ ಕಲಿಸಿದರೆ, ಎದುರಾಗುವ ಜನರು ಹಲವು ಪಾಠಗಳನ್ನು ಕಲಿಸುತ್ತಲೇ ಇರುತ್ತಾರೆ…
ಇಂದು ನಮ್ಮನ್ನು ಕರೆದೊಯ್ಯಲು ಯಾರೂ ಇರಲಿಲ್ಲ. ನಾವಾಗಿಯೇ ಶಿಂಡ್ಲರನ ಮ್ಯೂಸಿಯಂ ಹೋಗುವುದಿತ್ತು. ಹಾಗಾಗಿ ಸಮಯದ ಕಟ್ಟುನಿಟ್ಟು ಪರಿಪಾಲನೆ ಮಾಡುವ ಅಗತ್ಯವೇನೂ ಇರಲಿಲ್ಲ. ಕೈಯಲ್ಲಿ ಟಿಕೆಟ್ ಬೇರೆ ಇದ್ದಿದ್ದರಿಂದ ಆರಾಮವಾಗಿಯೇ ಹೋಗಬಹುದಿತ್ತು. ಆರಾಮವೆಂದರೆ ಜಗತ್ತಿನ ದೃಷ್ಟಿಯಲ್ಲಿನ ಆರಾಮವಲ್ಲ ಮತ್ತೆ! ನಮ್ಮ ಆರಾಮವೆಂದರೆ 10 ಘಂಟೆ ಅಂದರೆ 10.05ಕ್ಕೆ ಅಲ್ಲಿರುವುದು ಅಷ್ಟೇ! ಅತಿರೇಕದ ಸಮಯ ಪ್ರಜ್ಞೆಯ ನಮಗೆ ಲೇಟ್ ಅಂದರೆ ಅಬ್ಬಬ್ಬಾ ಎಂದರೆ ಐದು ನಿಮಿಷಗಳಷ್ಟೇ. ಹಾಗಾಗಿ ಹೋಟೆಲ್ ನವರಿಗೆ ಟ್ಯಾಕ್ಸಿ ಹೇಳದೇ ಮಗನೇ ಅಲ್ಲಿಯ ಊಬರ್ ಬುಕ್ ಮಾಡುವ ಮೊದಲ ಪ್ರಯೋಗ ಮಾಡುವೆನೆಂದಿದ್ದ.
ಅವನು ಬುಕ್ ಮಾಡುವಾಗ ನಾನು ಚಂದ್ರಲೋಕಕ್ಕೆ ರಾಕೆಟ್ ಹಾರಿಸುತ್ತಿದ್ದಾನೇನೋ ಎನ್ನುವಷ್ಟು ಉದ್ವಿಗ್ನತೆಯಿಂದ ಅವನ ಮೊಬೈಲನ್ನೇ ನೋಡುತ್ತ ಕುಳಿತಿದ್ದೆ! ಬುಕ್ಕಿಂಗ್ ಯಶಸ್ವಿಯಾಯಿತು! ವಾಹ್ ಅದ್ಭುತ ಸ್ವಾತಂತ್ರ್ಯದ ಘಳಿಗೆಯದು. ನಾವು ಈವರೆಗೆ ಹೋದ ಯಾವುದೇ ದೇಶದಲ್ಲೂ ಈ ಸ್ವಾತಂತ್ರ್ಯವನ್ನು ಅನುಭವಿಸಿರಲಿಲ್ಲ. ಅಲ್ಲಿಂದ ಮುಂದೆ ಪೋಲೆಂಡ್ ಬಿಡುವವರೆಗೆ ನಾವು ಎಲ್ಲಿಂದೆಲ್ಲಿಗೇ ಆದರೂ ಆರಾಮವಾಗಿ ಊಬರ್ ಬುಕ್ ಮಾಡಿಕೊಂಡು ಅಡ್ಡಾಡುವ ಸುಖ ಅನುಭವಿಸಿದೆವು, ಸಾಕಷ್ಟು ಕಡಿಮೆ ಖರ್ಚಿನಲ್ಲಿ. ಅಂತೂ ಸರಿಯಾಗಿ 10 ಘಂಟೆಗೆ ಬಾಗಿಲು ತೆರೆಯುವಷ್ಟರಲ್ಲಿ ನಾವು ಅಲ್ಲಿದ್ದೆವು!
ಸ್ಟೀವನ್ ಸ್ಪೀಲ್‌ಬರ್ಗ್ ನ ಶಿಂಡ್ಲರ್ಸ್ ಲಿಸ್ಟ್ ಸಿನೆಮಾ ನೋಡಿದಾಗಿನಿಂದ ನನಗೆ ಆಸ್ಥಳವನ್ನು ನೋಡಲೇಬೇಕೆನ್ನುವ ಹುಚ್ಚು ಹಿಡಿದಿತ್ತು. 1993ರಲ್ಲಿ ಬಿಡುಗಡೆಯಾದ ಈ ಚಿತ್ರ ಒಟ್ಟು ಏಳು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತ್ತು. ನಾಜ಼ಿಯಾದ ಶಿಂಡ್ಲರ್ ಸಾವಿರದ ನೂರು ಜ್ಯೂಗಳನ್ನು ರಕ್ಷಿಸಲು ಒದ್ದಾಡುವ, ಅದಕ್ಕಾಗಿ ನಾನಾ ರಿಸ್ಕ್ ಗಳನ್ನು
ತೆಗೆದುಕೊಳ್ಳುವ ಈ ಕಥೆ ನನ್ನಲ್ಲಿ ಕುತೂಹಲ, ಬೆರಗು, ಖುಷಿ, ಕೃತಕೃತ್ಯತೆ ಎಲ್ಲವನ್ನೂ ಹುಟ್ಟಿಸಿತ್ತು. ನಾಜ಼ಿಗಳು ಜ್ಯೂಗಳನ್ನು ಜೀತದಾಳುಗಳಾಗಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಾಗ ಅದರ ಸಂಪೂರ್ಣ ಉಪಯೋಗ ಪಡೆದ ಕಂಪನಿಗಳ ದೊಡ್ಡ ಪಟ್ಟಿಯೇ ಇದೆ.
ಬಾಷ್, ಕ್ರುಪ್, BMW, ಫೋರ್ಡ್, ಸೀಮೆನ್ಸ್ ಮುಂತಾದ ಕಂಪನಿಗಳು ಕಾನ್ಸನ್ಟ್ರೇಷನ್ ಕ್ಯಾಂಪ್ ಗಳ ಮುಂದೆ ಸಾಲುಗಟ್ಟಿ ನಿಂತಿರುತ್ತಾರೆ. ಅಲ್ಲಿನ ಜ್ಯೂಗಳನ್ನು ತಮ್ಮ ಫ಼್ಯಾಕ್ಟರಿಗೆ ಕೆಲಸಕ್ಕೆ ತೆಗೆದುಕೊಳ್ಳಲು. ಹಾಗೆಯೇ ಶಿಂಡ್ಲರ್ ಕಾರ್ಖಾನೆಗೆ ಕೂಡಾ ಒಂದಿಷ್ಟು ಜ್ಯೂ ಕೆಲಸಗಾರರು ಬರಲಾರಂಭಿಸುತ್ತಾರೆ. ಅವರು ಕ್ರಾಕೋವ್ ಗೆಟ್ಟೋದಿಂದ ದಿನವೂ ಇವನ ಫ಼್ಯಾಕ್ಟರಿಗೆ ನಡೆದುಕೊಂಡೇ ಬರುತ್ತಿರುತ್ತಾರೆ. ಕೆಲಕಾಲದ ನಂತರ ಗೆಟ್ಟೋ ಮುಚ್ಚಿ ಅಲ್ಲಿದ್ದ ಜನರನ್ನು ಪ್ಲಾಜ಼ೋವ್ ಕಾನ್ಸನ್ಟ್ರೇಷನ್ ಕ್ಯಾಂಪ್ ಗೆ ಸಾಗಿಸುತ್ತಾರೆ. ಆ ನಂತರವೂ ಅಲ್ಲಿಂದಲೇ ಕೆಲಸಕ್ಕೆ ಬರುತ್ತಿರುತ್ತಾರೆ ಜ್ಯೂಗಳು. ಆಗಲೇ ಶಿಂಡ್ಲರ್ ತನ್ನ ಫ಼್ಯಾಕ್ಟರಿಯ ಪಕ್ಕದಲ್ಲೆ ಇದ್ದ ಖಾಲಿ ಸ್ಥಳದಲ್ಲಿ ತನ್ನದೇ ಹಣದಲ್ಲಿ ಒಂದು ಲೇಬರ್ ಕ್ಯಾಂಪ್ ನಿರ್ಮಿಸಲು ಮುಂದಾಗುತ್ತಾನೆ.
ಆ ಎಲ್ಲ ಫ಼್ಯಾಕ್ಟರಿಗಳಲ್ಲೂ ಕೆಲಸಕ್ಕಿದ್ದ ಜ್ಯೂಗಳಿಂದ ಅತ್ಯಧಿಕ ಕೆಲಸ ತೆಗೆಯುವುದಲ್ಲದೇ, ಅವರನ್ನು ಹೊಡೆದು, ಬಡಿದು, ಹಿಂಸಿಸಿ ಸಾಯಿಸುತ್ತಿದ್ದರು. ಆದರೆ ಈ ಶಿಂಡ್ಲರ್ ಅವರನ್ನು ಮನುಷ್ಯರಂತೆ ಕಂಡ. ಅವನ ಈ ಕೆಲಸದಲ್ಲಿ ಒತ್ತಾಸೆಯಾಗಿ ನಿಲ್ಲುತ್ತಾಳೆ ಅವನ ಹೆಂಡತಿ ಎಮಿಲಿಯಾ. ಅವರ ಈ ಕಾರುಣ್ಯದ ಬಗ್ಗೆ, ಒಳ್ಳೆಯತನದ ಬಗ್ಗೆ
ಬದುಕುಳಿದ ಶಿಂಡ್ಲರ್ ಜ್ಯೂಗಳು ಪ್ರಮಾಣಿಸಿ ಹೇಳುತ್ತಾರೆ. ಅವರಿಗೆ ಊಟ ಹಾಕಲು ಶಿಂಡ್ಲರ್ ಮತ್ತು ಎಮಿಲಿಯಾ ತಿಂಗಳಿಗೆ ಸಾವಿರಾರು ಮಾರ್ಕ್ ಖರ್ಚು ಮಾಡುತ್ತಾರೆ. ಎಲ್ಲ ಫ಼್ಯಾಕ್ಟರಿಗಳಲ್ಲೂ ಅವರಿಗೆ 250-300 ಕ್ಯಾಲೊರಿಗಳಷ್ಟು ಆಹಾರ ಕೊಟ್ಟು ಅಪೌಷ್ಟಿಕತೆಯಿಂದ ನರಳಿಸುತ್ತಿದ್ದಾಗ ಇವರ ಕಾರ್ಖಾನೆಯಲ್ಲಿ ಎಮಿಲಿಯಾ ಖುದ್ದಾಗಿ ನಿಂತು ಪೌಷ್ಟಿಕವಾದ ಆಹಾರವನ್ನು ಕೊಡುತ್ತಾಳೆ.
ಆಹಾರ ಧಾನ್ಯಗಳು ಕಡಿಮೆಯಾದಾಗ ಅದನ್ನು ಒದಗಿಸಲು ಅವರಿವರಲ್ಲಿ ಬೇಡಿ, ಅಂತೂ ಎಲ್ಲರಿಗೂ ಹೊಟ್ಟೆತುಂಬ ಊಟ ಕೊಡುತ್ತಿರುತ್ತಾರೆ. ಅವರಿಗೆ ಎರಡು ಸಾವಿರ ಕ್ಯಾಲೊರಿಯಷ್ಟು ಆಹಾರವಷ್ಟೇ ಅಲ್ಲದೆ, ಆಗೀಗ ಒಂದು ಬಿಯರ್ ಅಥವಾ ಶಾಂಪೇನ್ ಕೂಡಾ ಕೊಡುತ್ತಿದ್ದರು ಎಂದು ಶಿಂಡ್ಲರ್ ಜ್ಯೂಗಳಲ್ಲಿ ಸಾಕಷ್ಟು ಜನ ನೆನಪಿಸಿಕೊಳ್ಳುತ್ತಾರೆ! ಈ ರೀತಿಯ ಅವರ ಅವಶ್ಯಕತೆಗೆ ಅವನು ತಿಂಗಳಿಗೆ ಸುಮಾರು 50 ಸಾವಿರ ಜ಼್ಲಾಟಿಗಳನ್ನು ಸ್ವತಃ ತನ್ನ ಜೇಬಿನಿಂದ ಖರ್ಚು ಮಾಡುತ್ತಿದ್ದ. ಯಾರಾದರೂ ಚಳಿಯಲ್ಲಿ ನಡುಗುತ್ತಿದ್ದರೆ ಕರೆದುಕೊಂಡು ಹೋಗಿ ಬೆಚ್ಚಗಿನ ಬಟ್ಟೆ ಕೊಡಿಸುತ್ತಿದ್ದ, ಫ಼್ಯಾಕ್ಟರಿಯನ್ನು ಬೆಚ್ಚಗಿಡಲು ಇದ್ದಿಲಿನ ಒಲೆಯೊಂದನ್ನು ಇರಿಸಿದ. ಬೇರೆ ಕಡೆ ಕೆಲಸ ಮಾಡುವ ಕೆಲಸಗಾರರಿಗೆ ಬದುಕೇ ದುಸ್ತರ ಅನ್ನಿಸುತ್ತಿರುವಾಗ, ಶಿಂಡ್ಲರ್ ಇಷ್ಟೆಲ್ಲ ಅನುಕೂಲತೆಗಳನ್ನು ಒದಗಿಸಿಕೊಡುವುದಲ್ಲದೇ, ಕಾನೂನಿನ ಕಣ್ಣಿಗೆ ಮಣ್ಣೆರಚಿ, ರಿಸ್ಕ್ ತೆಗೆದುಕೊಂಡು ಅವರನ್ನೆಲ್ಲ ಸಣ್ಣಪುಟ್ಟ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ, ಸ್ನಾನ ಮಾಡಲು ಶವರ್, ಬಟ್ಟೆಗಳನ್ನು ಒಗೆದುಕೊಳ್ಳಲು ಲಾಂಡ್ರಿ ಎಲ್ಲ ಅನುಕೂಲವನ್ನೂ ಮಾಡಿಕೊಟ್ಟಿದ್ದ. ಕ್ರಾಕೋವ್ ನ ಜ್ಯೂಗಳು ಶಿಂಡ್ಲರ್ ನ ಕಾರ್ಖಾನೆಯಲ್ಲಿ ಕೆಲಸ ಮಾಡಿದರೆ ಪ್ರಾಣಕ್ಕೆ ಅಪಾಯವಿಲ್ಲ ಎಂದು ಮಾತಾಡಿಕೊಳ್ಳುವಷ್ಟು ಆ ಜಾಗ ಸುರಕ್ಷತೆಗೆ ಹೆಸರಾಗಿತ್ತು.
ಅದೇ ಸಮಯಕ್ಕೆ ಶಿಂಡ್ಲರ್ ನಾಜ಼ಿಯಾಗಿದ್ದರಿಂದ ಅನೇಕ SS ಅಧಿಕಾರಿಗಳ ಜೊತೆ ಸಂಜೆಗಳನ್ನು ಸಂತೋಷದಿಂದ ಕಳೆಯುತ್ತಿದ್ದ! ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದ. ನಾಜ಼ಿಗಳ ನಡುವಿನಲ್ಲಿ ಅವನಿಗೆ ಒಳ್ಳೆಯ ಹೆಸರಿತ್ತು. ಇಷ್ಟೇ ಅಲ್ಲದೆ ಅವನ ಕಚೇರಿಗೆ ಕೂಡಾ SS ಅಧಿಕಾರಿಗಳು ಭೇಟಿ ನೀಡುತ್ತಿದ್ದರು. ಶಿಂಡ್ಲರ್ ಅವರೊಡನೆ ನಗುತ್ತ ಮಾತಾಡುತ್ತ, ವೋಡ್ಕಾ ಕುಡಿಯುತ್ತ ‘ಇನ್ನೊಂದಿಷ್ಟು ಜ್ಯೂಗಳನ್ನು ಕಳಿಸಿ. ಅವರಿಂದ ಚೆನ್ನಾಗಿ ಕೆಲಸ ತೆಗೆಯುತ್ತೇನೆ’ ಎಂದು ಹೇಳಿ ಅವರನ್ನು ತನ್ನಲ್ಲಿ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದ. ಹೀಗೆ ಕರೆಸಿಕೊಳ್ಳುತ್ತಿದ್ದ ಕೆಲಸಗಾರರು ಬದುಕುಳಿಯಲು ಸಾಧ್ಯವಾಗುವಂತೆ ಅವರ ವಯಸ್ಸನ್ನು ಬದಲಿಸಿ ದಾಖಲೆ ಸೃಷ್ಟಿಸುತ್ತಿದ್ದ. ಅವರು ಯುದ್ಧ ಸಂಬಂಧಿ ವಸ್ತುಗಳನ್ನು ತಯಾರಿಸುವುದರಲ್ಲಿ ಪರಿಣಿತರು ಎಂದು ಹೇಳಿ ಅವರು ತನ್ನ ಕಾರ್ಖಾನೆಗೆ ಅನಿವಾರ್ಯವೆನ್ನುವಂತೆ ದಾಖಲೆ ಸೃಷ್ಟಿಸುತ್ತಿದ್ದ.
ಇದನ್ನೆಲ್ಲ ಪರಿಶೀಲಿಸಲು ಬರುವ ಅಧಿಕಾರಿಗಳಿಗೆ ಸಾಕಷ್ಟು ಉಡುಗೊರೆಗಳನ್ನು ಕೊಟ್ಟು ಅವರ ಬಾಯಿ ಮುಚ್ಚಿಸುತ್ತಿದ್ದ. ಈ ರೀತಿ ಜ್ಯೂಗಳಿಗೆ ತೊಂದರೆಯಾಗದಂತೆ ಕಾಪಾಡಲು, ತನ್ನ ಆಸ್ತಿಪಾಸ್ತಿಯೆಲ್ಲ ಕರಗುವವರೆಗೆ ಲಂಚ ತಿನ್ನಿಸಿದ. ಹೀಗೆ ಅವನು ಜ್ಯೂಗಳಿಗಾಗಿ ಶಾಂತಿಯನ್ನು ಕೊಂಡುಕೊಳ್ಳುತ್ತಿದ್ದ. ಅವನು ಬದುಕಿಸಿದ ಜ್ಯೂಗಳು ಅವನನ್ನು ತಂದೆ, guardian angel, ಅಷ್ಟೇಕೆ ದೇವರು ಎನ್ನುತ್ತಾರೆ ಕೂಡಾ! ಹೊಡೆತ ಬಡಿತವಿಲ್ಲದೆ ಕಾಪಾಡುವುದೇನೋ ಸರಿ, ಆದರೆ ಯಾಕಾಗಿ ಇಷ್ಟೆಲ್ಲ ಮಾಡಿದನೋ ಗೊತ್ತಿಲ್ಲ! ನಾಜ಼ಿಗಳು ಯಾಕೆ ಕಾರಣವಿಲ್ಲದೇ ಜ್ಯೂಗಳನ್ನು ಕೊಂದರು ಅನ್ನುವಷ್ಟೇ ಕುತೂಹಲದ ವಿಷಯ, ಶಿಂಡ್ಲರ್ ಅವರನ್ನುಳಿಸಲು ಒದ್ದಾಡಿದ್ದು ಕೂಡಾ.
ಈ ರೀತಿಯ ಕರುಣಾರ್ದ್ರ ಹೃದಯವಿರುವ ವ್ಯಕ್ತಿ, ತನ್ನ ಜೀವನದ ವಿಷಯಕ್ಕೆ ಬಂದರೆ ದೊಡ್ಡ ಲೋಲುಪ, ವಿಷಯಾಸಕ್ತ, ಹೆಣ್ಣುಬಾಕ, ದುಂದುಗಾರಿಕೆಯವ, ಕುಡುಕ ಎಂದು ಕೂಡಾ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಹೇಳುತ್ತಾರೆ ‘ಯಾರಿಗೆ ಶಿಂಡ್ಲರ್ ಎಂಥವನೆಂದು ತೃಣಮಾತ್ರವೂ ಗೊತ್ತಿರಲಿಲ್ಲವೋ ಅವರೇ ಆ ಬಗ್ಗೆ ಹೆಚ್ಚು ಮಾತನಾಡುತ್ತಾರೆ’ ಎಂದು! ಆದರೆ ಅವನ ಹೆಂಡತಿ ಎಮಿಲಿಯಾಳನ್ನು ಈ ಬಗ್ಗೆ ಕೇಳಿದಾಗ ಆ ಬಗ್ಗೆ ಕೇವಲ ಸೂಚ್ಯವಾಗಿ ಒಂದೆರಡು ಮಾತನಾಡಿದವರು, ಆ ನಂತರ ತಾವು ಜ್ಯೂಗಳನ್ನು ಉಳಿಸಬೇಕಾದ ಆ ದಿನಗಳ ಬಗ್ಗೆಯೇ ಹೆಚ್ಚಿನ ಮಾತುಗಳನ್ನಾಡುತ್ತಾರೆ. ಅಂದರೆ ಅವನ ವೈಯುಕ್ತಿಕ ವಿಷಯ ಮತ್ತು ಜ್ಯೂಗಳ ವಿಷಯ
ಎರಡನ್ನೂ ಪ್ರತ್ಯೇಕವಾಗಿಸಿ ನೋಡಲು ಆತನ ಜೊತೆಗಾತಿಯಾದ ಎಮಿಲಿಗೆ ಸಾಧ್ಯವಾಗಿದೆ ಎಂದಾಯಿತು.
ಅವನು ಬಹಳ ವಿನಯದಿಂದ ಮಾತನಾಡುತ್ತಿದ್ದ, ಬಹಳ ಆಕರ್ಷಕವಾಗಿ ಮಾತನಾಡುತ್ತಿದ್ದ, ಜನರ ಜೊತೆ ಸ್ನೇಹ ಸಂಪಾದಿಸುವ, ಅದನ್ನು ಉಳಿಸಿಕೊಳ್ಳುವ ಕಲೆ ಗೊತ್ತಿತ್ತು. ಹಾಗಾಗಿಯೇ ಅವನು ಬಹಳಷ್ಟು ಪ್ರಭಾವಿ ವ್ಯಕ್ತಿಗಳೊಡನೆ ಸ್ನೇಹ ಬೆಳೆಸಿ, ಅವರಿಗೆ ಲಂಚ ಕೊಟ್ಟು, ನಾನಾ ಉಡುಗೊರೆಗಳನ್ನು ಕೊಟ್ಟು, ಅನೇಕ ಆಮಿಷಗಳನ್ನೊಡ್ಡಿ ಜ್ಯೂಗಳನ್ನು ಕಾಪಾಡಿದ ಎನ್ನುತ್ತಾರೆ ಎಮಿಲಿ.
ಆತನ ಬಗ್ಗೆ ಪುಸ್ತಕ ಬರೆದ ಅಲೆಕ್ಸಾಂಡರ್ ಕೋಟ್‌ನಿಸ್ಕಿ ಹೇಳುತ್ತಾರೆ ‘ಒಳ್ಳೆಯತನವೆಂದರೆ ಗಾಂಧಿಯಂತೆ, ಮದರ್ ತೆರೆಸಾರಂತೆ ಇರಬೇಕು. ಒಳ್ಳೆಯವರು ಕುಡಿಯುವುದಿಲ್ಲ, ಒಳ್ಳೆಯವರು ಹೆಣ್ಣುಬಾಕರಾಗಿರುವುದಿಲ್ಲ, ಒಳ್ಳೆಯವರು ನಾಜ಼ಿಗಳಾಗಿರುವುದಿಲ್ಲ, ನಿಜ. ಆದರೆ ಶಿಂಡ್ಲರ್ ಎಂದೂ ತಾನು ಒಳ್ಳೆಯವನೆಂದು ಹೇಳಿಕೊಳ್ಳಲಿಲ್ಲ ಕೂಡಾ’ ಎಂದು!
ಆತ ಹೇಳಿಕೊಳ್ಳಲಿಲ್ಲ ನಿಜ.
ಆದರೆ ಅವನ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡಿದ ಅನೇಕ ಜ್ಯೂಗಳು, ಅವರನ್ನು ಶಿಂಡ್ಲರ್ ಜ್ಯೂಗಳು ಎಂದೇ ಗುರುತಿಸುತ್ತಾರೆ, ಅವರೆಲ್ಲರೂ ಅವನ ಬಗ್ಗೆ ನೂರಾರು ಒಳ್ಳೆಯ ಮಾತುಗಳನ್ನಾಡುತ್ತಾರೆ.
ಎಷ್ಟೋ ಜನ ಕೆಲಸಗಾರರು ಜೊತೆಯಲ್ಲಿ ತಮ್ಮ ಮಕ್ಕಳನ್ನೂ ಇಟ್ಟುಕೊಂಡಿದ್ದರು. ಜ್ಯೂಗಳ ಮಕ್ಕಳು ಬದುಕುಳಿಯುವುದೇ ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ಈ ರೀತಿಯ ಔದಾರ್ಯವಿತ್ತು ಶಿಂಡ್ಲರ್ ನಲ್ಲಿ. ಅವನು ಆ ಮಕ್ಕಳಿಗೆಲ್ಲ ಹಾಲು ಕೊಡುವ ವ್ಯವಸ್ಥೆ ಮಾಡಿದ್ದ.
ಮಕ್ಕಳನ್ನು ನೇರವಾಗಿ ಗ್ಯಾಸ್ ಛೇಂಬರ್ ಗೆ ಕಳಿಸುತ್ತಿದ್ದ ನಾಜ಼ಿಗಳು ಫ಼್ಯಾಕ್ಟರಿ ಚೆಕಿಂಗ್ ಗೆ ಬರುತ್ತಾರೆ ಎಂದರೆ, ಆ ಬಗ್ಗೆ ಮೊದಲೇ ತಿಳಿದಿರುತ್ತಿದ್ದ ಶಿಂಡ್ಲರ್ ಮಕ್ಕಳನ್ನೆಲ್ಲ ಅಡಗಿಸಿ ಇಡುವಂತೆ ಮೊದಲೇ ತಾಕೀತು ಮಾಡುತ್ತಿದ್ದ ಎಂದೆಲ್ಲ ಹಾಡಿ ಹೊಗಳಿದರೆ, ಮಗದೊಬ್ಬರು ಎಲ್ಲರಿಗೂ ಹೊಟ್ಟೆ ತುಂಬ ಊಟ, ಮೈ ಬೆಚ್ಚಗಾಗಿಸುವ ಬಟ್ಟೆ ಕೊಡುವುದೇ ಅದ್ಭುತ ಅನ್ನಿಸುವ ಆ ಕಾಲದಲ್ಲಿ, ವರ್ಷಕ್ಕೊಂದು ಸಲ ತನ್ನ ಫ಼್ಯಾಕ್ಟರಿಯಲ್ಲಿ ತಯಾರಾಗುವ ಎನಾಮೆಲ್ ಪಾತ್ರೆಗಳನ್ನು ಅವರಿಗೆಲ್ಲ ಉಚಿತವಾಗಿ ಕೊಡುತ್ತಿದ್ದ ಎನ್ನುತ್ತಾರೆ. ಒಂದು ಬಾರಿ ಕಾನ್ಸನ್ಟ್ರೇಷನ್ ಕ್ಯಾಂಪ್‌ನಿಂದ ಹೊರಟ 300 ಹೆಂಗಸರಿದ್ದ ಟ್ರೈನ್ ಇವರಲ್ಲಿಗೆ ತಲುಪುವುದೇ ಇಲ್ಲ. ಇದ್ದಬದ್ದ ಕೆಲಸವನ್ನೆಲ್ಲ ಬಿಟ್ಟು ಶಿಂಡ್ಲರ್ ಅಲ್ಲಿಗೆ ಓಡಿ, ಗ್ಯಾಸ್ ಛೇಂಬರ್ ಸೇರಬೇಕಿದ್ದ ಅವರನ್ನು ಬಿಡಿಸಿಕೊಂಡು ಬಂದ ಎಂದು ಎಮಿಲಿ ನೆನಪಿಸಿಕೊಂಡರೆ, ಇನ್ನೊಂದು ಬಾರಿ ನಾಜ಼ಿಗಳು ನೂರು ಜನರನ್ನು ಗ್ಯಾಸ್ ಛೇಂಬರ್‌ಗೆ ಕರೆದೊಯ್ಯುತ್ತಾರೆ ಎನ್ನುವ ವಿಷಯ ತಿಳಿದಾಗ, ಅವರು ಬರುವ ಹಿಂದಿನ ದಿನವೇ ಕೆಲಸಗಾರರಿಗೆಲ್ಲ ಸಂಬಳದ ಹಣ ಕೊಟ್ಟು, ನಂತರ ಅಂದೇ ಅವರನ್ನೆಲ್ಲ ವಜಾಗೊಳಿಸಿ, ಮರುದಿನ ನಾಜ಼ಿಗಳ ಕೈಗೆ ಸಿಕ್ಕಿಬೀಳದಂತೆ ಮಾಡಿ ಅವರ ಜೀವವನ್ನು ಕಾಪಾಡಿದ್ದ ಎಂದು ಮತ್ತೆ ಹಲವರು ನೆನಪಿಸಿಕೊಳ್ಳುತ್ತಾರೆ. ಸಾಕಷ್ಟು ಶಿಂಡ್ಲರ್ ಜ್ಯೂಗಳು ಅವನು ಹುಟ್ಟಿದ ಹಬ್ಬದ ದಿನ ನಮ್ಮ ಜೊತೆಯಲ್ಲೇ ಅದನ್ನು ಆಚರಣೆ ಮಾಡಿಕೊಳ್ಳುತ್ತಿದ್ದ, ಎಷ್ಟೋ ದಿನ ನಮ್ಮ ಜೊತೆಯೇ ಊಟ ಮಾಡುತ್ತಿದ್ದ, ಅವನನ್ನು ಹೆಣ್ಣುಬಾಕ ಅಂದರೂ ನಮ್ಮೊಡನೆ ಯಾವತ್ತೂ ಅನುಚಿತವಾಗಿ ನಡೆದುಕೊಂಡಿಲ್ಲ ಎಂದೆಲ್ಲ
ಅವನನ್ನು ಕೊಂಡಾಡುತ್ತಾರೆ!
ಇಂಥ ವಿಚಿತ್ರ ವ್ಯಕ್ತಿತ್ವದ ಶಿಂಡ್ಲರ್ ಯುದ್ಧಾನಂತರ ಪಶ್ಚಿಮ ಜರ್ಮನಿಗೆ ಹೋಗುತ್ತಾನೆ. ಎಲ್ಲ ಹಣ ಕಳೆದುಕೊಂಡು ಬರಿಗೈ ಆಗಿದ್ದವನಿಗೆ ಜ್ಯೂಗಳು ಸಹಾಯ ಮಾಡುತ್ತಾರೆ. ಆ ನಂತರ ಅವನು ತನ್ನ ಪತ್ನಿ-ಉಪಪತ್ನಿ-ಒಂದಿಷ್ಟು ಜನ ಜ್ಯೂಗಳೊಡನೆ ಅರ್ಜೆಂಟೈನಾಗೆ ಹೋಗಿ ಅಲ್ಲಿ ಒಂದಿಷ್ಟು ಕಾಲ ಬೇಸಾಯ ಮಾಡುತ್ತಾನೆ.
1957ರಲ್ಲಿ ಯುದ್ಧದ ಸಮಯದಲ್ಲಿ ಆಸ್ತಿ ಕಳೆದುಕೊಂಡವರಿಗೆ ಸರಕಾರ ಪರಿಹಾರ ಕೊಡುತ್ತಿದೆ ಎಂದಾಗ, ಅದನ್ನು ಪಡೆಯಲು ಜರ್ಮನಿಗೆ ಒಂಟಿಯಾಗಿ ಹೊರಟವನು, ಅಲ್ಲಿಯೇ ಉಳಿದುಬಿಡುತ್ತಾನೆ. ಎಮಿಲಿ ಆ ನಂತರ ಎಂದಿಗೂ ಅವನನ್ನು ಮತ್ತೆ ನೋಡುವುದೇ ಇಲ್ಲ. ಅಲ್ಲಿ ನಾನಾ ವ್ಯವಹಾರಗಳಿಗೆ ಕೈ ಹಾಕುತ್ತಾನೆ, ಎಲ್ಲದರಲ್ಲಿಯೂ ಹಣ ಕಳೆದುಕೊಳ್ಳುತ್ತಾನೆ.
ಕೆಲಕಾಲದ ನಂತರ ಗೆಟ್ಟೋ ಮುಚ್ಚಿ ಅಲ್ಲಿದ್ದ ಜನರನ್ನು ಪ್ಲಾಜ಼ೋವ್ ಕಾನ್ಸನ್ಟ್ರೇಷನ್ ಕ್ಯಾಂಪ್ ಗೆ ಸಾಗಿಸುತ್ತಾರೆ. ಆ ನಂತರವೂ ಅಲ್ಲಿಂದಲೇ ಕೆಲಸಕ್ಕೆ ಬರುತ್ತಿರುತ್ತಾರೆ ಜ್ಯೂಗಳು. ಆಗಲೇ ಶಿಂಡ್ಲರ್ ತನ್ನ ಫ಼್ಯಾಕ್ಟರಿಯ ಪಕ್ಕದಲ್ಲೆ ಇದ್ದ ಖಾಲಿ ಸ್ಥಳದಲ್ಲಿ ತನ್ನದೇ ಹಣದಲ್ಲಿ ಒಂದು ಲೇಬರ್ ಕ್ಯಾಂಪ್ ನಿರ್ಮಿಸಲು ಮುಂದಾಗುತ್ತಾನೆ.
ಹೀಗೆ ಬರಿಗೈ ಆದವನನ್ನು, ಅವನು ಕಾಪಾಡಿದ ಜ್ಯೂಗಳು 1974ರಲ್ಲಿ ಅವನು ಕಾಲವಾಗುವವರೆಗೂ ಪೊರೆಯುತ್ತಾರೆ! ಹೀಗೆ ಶಿಂಡ್ಲರ್ ಎನ್ನುವವನನ್ನು ಎಂದೂ ದೈವತ್ವಕ್ಕೇರಿಸದೇ, ಎಲ್ಲ ಕುಂದುಕೊರತೆಗಳು, ದೌರ್ಬಲ್ಯಗಳು, ಕಾರುಣ್ಯ, ಒಳ್ಳೆಯತನ, ಭೋಳೆತನ ಎಲ್ಲವನ್ನೂ ಹೊಂದಿದ ಅಪ್ಪಟ ಮನುಷ್ಯನಾಗಿದ್ದ ಎನ್ನುವ ಕಾರಣಕ್ಕೇ ಜ್ಯೂಗಳು ಅವನನ್ನು ತಮ್ಮವನಾಗಿಸಿಕೊಳ್ಳುತ್ತಾರೆ. ಅವನು ಸತ್ತ ನಂತರ ಇಸ್ರೇಲ್‌ನ ಜೆರುಸಲೆಂನಲ್ಲಿ ಅವನು ಸಮಾಧಿಯಾಗುತ್ತಾನೆ. ಇಂದಿಗೂ ಅನೇಕ ಜ್ಯೂಗಳು ಅವನು ಸತ್ತ ದಿನ, ಹುಟ್ಟಿದ ದಿನ ಅಲ್ಲಿಗೆ ಬಂದು ಇಡೀ ಜ್ಯೂ ಜನಾಂಗದ ಪರವಾಗಿ ಕೃತಜ್ಞತೆ ಸಲ್ಲಿಸುತ್ತಾರೆ.
ಇಸ್ರೇಲ್ ಅವನಿಗೆ Righteous among Nations ಎಂಬ ಪುರಸ್ಕಾರ ನೀಡಿ ಗೌರವಿಸಿದೆ ಕೂಡಾ! ಇಷ್ಟೆಲ್ಲ ವಿಚಿತ್ರ ವ್ಯಕ್ತಿತ್ವದ ಶಿಂಡ್ಲರ್‌ನ ಎನಾಮೆಲ್ ಫ಼್ಯಾಕ್ಟರಿ ಕ್ರಾಕೋವ್‌ನಲ್ಲಿಯೇ ಇದೆ ಅನ್ನುವ ವಿಷಯ ಮಾತ್ರ ತಲೆಯಿಂದ ಸಂಪೂರ್ಣವಾಗಿ ಮರೆಯಾಗಿಬಿಟ್ಟಿತ್ತು. ಈಗ ಪೋಲೆಂಡ್ ಪ್ರವಾಸಕ್ಕೆ ಹೊರಟಾಗ ಅಲ್ಲಿನ ವಿಷಯಗಳನ್ನೆಲ್ಲ ಕೆದಕುತ್ತ ಹೊರಟಾಗಲೇ ನನಗೆ ಶಿಂಡ್ಲರ್ ಸಾವಿರ ಜ್ಯೂಗಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಆ ಎನಾಮೆಲ್ ಫ಼್ಯಾಕ್ಟರಿ ಕ್ರಾಕೋವ್‌ನಲ್ಲಿದೆ ಎಂದು ನೆನಪಾಗಿದ್ದು! ಹಾಗಾಗಿಯೇ ಅದನ್ನು ನೋಡಲೇಬೇಕೆಂದು ಟಿಕೆಟ್‌ಗಾಗಿ ಹೋರಾಟ ಮಾಡಿ, ಉಳಿದ ಕಾರ್ಯಕ್ರಮಗಳನ್ನು ಬದಲಿಸಿ ಅಂತೂ ಆ ಸಮಯ ಈಗ ಕೂಡಿಬಂದಿತ್ತು!
ಆಗಲೇ ಮುಖ್ಯದ್ವಾರದ ಬಳಿ ಸಾಕಷ್ಟು ಜನ ಸೇರಿದ್ದರು. ನಮ್ಮಲ್ಲಿ ಟಿಕೆಟ್ ಇದ್ದಿದ್ದರಿಂದ ಕೂಡಲೇ ಒಳಗೆ ಹೋಗಲು ಸಾಧ್ಯವಾಯಿತು. ಒಳಹೊಕ್ಕ ಕೂಡಲೇ ಎಡಬದಿಯಲ್ಲಿ ಒಂದು ಕೆಫೆ ಇತ್ತು. ಸ್ಪೀಲ್‌ಬರ್ಗ್‌ನ ಶಿಂಡ್ಲರ್ಸ್ ಲಿಸ್ಟ್ ಸಿನೆಮಾಗೆಂದೇ ಮೀಸಲಾಗಿಟ್ಟ ಕೆಫೆ ಅದಂತೆ! ಅಲ್ಲಿ ಸಿನೆಮಾದ ಶೂಟಿಂಗ್ ನಡೆಯುವಾಗಿನ ಕ್ಲಾಪ್ ಬೋರ್ಡ್, ಸಿನೆಮಾದ ಪೋಸ್ಟರ್‌ಗಳು, ಪ್ಲಾಜ಼ೋವ್ ಕಾನ್ಸನ್ಟ್ರೇಷನ್ ಕ್ಯಾಂಪ್‌ನ ಒಂದು ಮಾಡೆಲ್, ಜೊತೆಗೆ ಕಾಫಿ ಟೇಬಲ್‌ಗಳ ಗಾಜಿನಡಿಯಲ್ಲಿ ಸಿನೆಮಾದ ಸನ್ನಿವೇಶಗಳ ಕಾರ್ಡ್‌ಗಳು ಎಲ್ಲವನ್ನೂ ಜೋಡಿಸಿಟ್ಟಿದ್ದಾರೆ.
ಅದನ್ನು ನೋಡಿ ನನಗೆ ಅಲ್ಲಿ ಶಿಂಡ್ಲರ್‌ಗಿಂತ ಶಿಂಡ್ಲರ್ಸ್ ಲಿಸ್ಟ್ ಸಿನೆಮಾನೇ ಹೆಚ್ಚು ಮುಖ್ಯವಾಯಿತಾ ಎನ್ನಿಸಲಾರಂಭಿಸಿತು! ಆಗ ತಿಳಿದದ್ದೇನೆಂದರೆ ಶಿಂಡ್ಲರ್‌ನ ಈ ಕಾರ್ಖಾನೆ ಮುಖ್ಯ ಭೂಮಿಕೆಗೆ ಬಂದಿದ್ದೇ ಈ ಸಿನೆಮಾ ತೆಗೆದ ನಂತರವಂತೆ! ಎರಡನೆಯ ಮಹಾಯುದ್ಧದ ನಂತರ ಈ ಸ್ಥಳದಲ್ಲಿ 1948ರಿಂದ 2002ರವರೆಗೆ ದೂರಸಂಪರ್ಕ ಕಂಪನಿಯೊಂದರ ಕಚೇರಿ ಇತ್ತು. ಆ ಸ್ಥಳದ ಬಗ್ಗೆ ಯಾರಿಗೂ ಅಂಥ ಆಸಕ್ತಿಯೇನೂ ಇರಲಿಲ್ಲ. 1993ರಲ್ಲಿ ಸ್ಪೀಲ್‌ಬರ್ಗ್ ಶಿಂಡ್ಲರ್ ಬಗ್ಗೆ ಸಿನೆಮಾ ಮಾಡಿದ ನಂತರ ಮತ್ತು ಆ ತನ್ನ ಸಿನೆಮಾದ ಕೆಲವು ಭಾಗಗಳ ಶೂಟಿಂಗನ್ನು ಈ ಕಟ್ಟಡದಲ್ಲಿ ಚಿತ್ರೀಕರಿಸಿದ ನಂತರ ಆ ಸ್ಥಳ ಕ್ರಾಕೋವ್‌ನಲ್ಲಿ ಪ್ರಾಮುಖ್ಯತೆ ಪಡೆದು, ಕ್ರಾಕೋವ್‌ಗೆ ಬರುವ ಪ್ರವಾಸಿಗರು ಶಿಂಡ್ಲರ್ ಫ಼್ಯಾಕ್ಟರಿ ಶೂಟಿಂಗ್ ನಡೆದ ಸ್ಥಳ ಎಲ್ಲಿ ಎಂದು ಹುಡುಕಿ ಬರಲಾರಂಭಿಸಿದರು.
ಆ ನಂತರವೇ ಕ್ರಾಕೋವ್ ಪ್ರಾಧಿಕಾರವು ಆ ಸ್ಥಳವನ್ನು ತನ್ನ ವಶಕ್ಕೆ ತೆಗೆದುಕೊಂಡು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದು! ಹಾಗಾಗಿಯೇ ಇಲ್ಲಿ ಶಿಂಡ್ಲರ್ಸ್ ಲಿಸ್ಟ್ ಸಿನೆಮಾಗೆ ವಿಶೇಷ ಮಾನ್ಯತೆ! ಅಂದರೆ ಶಿಂಡ್ಲರ್‌ನ ಈ ಫ಼್ಯಾಕ್ಟರಿಯ ಪುನರುತ್ಥಾನ ಮಾಡಿದ್ದು ಸ್ಪೀಲ್‌ಬರ್ಗ್ ಎಂದೇ ಹೇಳಬೇಕು! ಯಾಕೋ ಅದನ್ನು ನೋಡಿದ ಮೇಲೆ ಒಂದು ರೀತಿಯ ವಿಚಿತ್ರ ಕಸಿವಿಸಿ ಶುರುವಾಯಿತು.
ತಮ್ಮದೇ ಊರಿನಲ್ಲಿ ಸಾವಿರದ ನೂರಕ್ಕೂ ಮೇಲ್ಪಟ್ಟು ಜ್ಯೂಗಳ ಪ್ರಾಣ ಉಳಿಸಿದ್ದು ಆ ಊರಿನವರಿಗೆ ದೊಡ್ಡದು ಅನ್ನಿಸಿರಲೇ ಇಲ್ಲವೇ? ಅಥವಾ ಲಕ್ಷಾಂತರ ಜನರ ಸಾವಿನೆದುರು ಈ ಸಾವಿರ ಜನರ ಪ್ರಾಣ ಉಳಿದದ್ದು ಅಷ್ಟು ಕ್ಷುಲ್ಲಕ ಘಟನೆ ಎನ್ನಿಸಿಬಿಟ್ಟಿತಾ? ಅಥವಾ ಅವನು ಮೂಲತಃ ನಾಜ಼ಿ ಅನ್ನುವುದು ಅವನ ವಿರುದ್ದದ ಅಂಶವಾಗಿ ಕೆಲಸ ಮಾಡಿತಾ? ಸಿನೆಮಾವೊಂದರ ಯಶಸ್ಸಿನ ನೆರಳಿನಲ್ಲಿ ಶುರುವಾದದ್ದಾ ಈ ಮ್ಯೂಸಿಯಂ? ಹೀಗೆ ಶುರುವಾದ ಮ್ಯೂಸಿಯಂ ನಿಜಕ್ಕೂ ಶಿಂಡ್ಲರ್‌ನ ಪ್ರಯತ್ನಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಮನಸ್ಸಿನಲ್ಲಿ ಏಳುತ್ತಿದ್ದ ನೂರಾರು ಪ್ರಶ್ನೆಗಳಿಗೆ ‘ಇರು ಒಳಗೆ ಹೋಗಿ ನೋಡುವವರೆಗೆ ನಿರಾಶಳಾಗಬೇಡ’ ಎಂದು ಸಮಾಧಾನ ಕೊಟ್ಟುಕೊಂಡು ಒಳಹೊಕ್ಕೆ…
ಆದರೆ ನನ್ನ ಮೊದಲಿನ ಅನಿಸಿಕೆಯೇ ಪ್ರಾಮಾಣಿಕ ಅನಿಸಿಕೆಯಾಗಿತ್ತು!
ಸಾಕಷ್ಟು ದೊಡ್ಡ ಮ್ಯೂಸಿಯಂ. ಮೂವತ್ತರ ದಶಕದಿಂದ ಮೊದಲುಗೊಂಡು ಎರಡನೆಯ ಮಹಾಯುದ್ಧ ಮುಗಿಯುವವರೆಗಿನ ಕ್ರಾಕೋವ್ ಅಲ್ಲಿತ್ತು. ಯುದ್ಧಕ್ಕೆ ಮೊದಲು ಜ್ಯೂಗಳ ಕಷ್ಟಕಾಲ ಪ್ರಾರಂಭವಾದ ದಿನಗಳಿಂದ ಶುರು ಮಾಡಿ, ಯುದ್ಧಕಾಲದಲ್ಲಿ ಕ್ರಾಕೋವ್ ತೊರೆದು ಹೋದ ಜ್ಯೂಗಳ ಪರಿಸ್ಥಿತಿ, ತೊರೆದು ಹೋಗದೇ ಉಳಿದವರು ಗೆಟ್ಟೋಗಳಲ್ಲಿ ಕಿಷ್ಕಿಂಧೆಯಂಥ ಮನೆಗಳಲ್ಲಿ 30-35 ಅಪರಿಚಿತ ಜನರು ಒಟ್ಟಾಗಿ ಬದುಕಿದ ಸ್ಥಿತಿ, ಬೀದಿಬೀದಿಗಳಲ್ಲಿ ನೇತಾಡುವ ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಹೆಣಗಳು, ಕಾನ್ಸನ್ಟ್ರೇಷನ್ ಕ್ಯಾಂಪ್‌ಗಳಲ್ಲಿಂದ ಜ್ಯೂಗಳು ಪ್ರೀತಿಪಾತ್ರರಿಗೆ ಬರೆದ ಪತ್ರಗಳು… ಹೀಗೆ ಒಂದಾದನಂತರ ಒಂದು ಎದುರಾಗುತ್ತಲೇ ಹೋಯಿತು.
‘ಅದೆಲ್ಲ ಸರಿ ಇದನ್ನು ಶಿಂಡ್ಲರ್ಸ್ ಮ್ಯೂಸಿಯಂ ಎಂದು ಯಾಕೆ ಕರೆದರು… ಇಲ್ಲೆಲ್ಲಿಯೂ ಅವನ ಸುಳಿವೇ ಇಲ್ಲವಲ್ಲ’ ಎಂದು ಮನಸ್ಸು ಕೇಳುತ್ತಲೇ ಹೋಯಿತು! ನನ್ನ ಮನಸ್ಸಿನ ಮಾತು ಕೇಳಿಸಿತೇನೋ ಎನ್ನುವಂತೆ ಶಿಂಡ್ಲರ್‌ನ ಆಫೀಸ್ ಎಂದು ಕರೆಸಿಕೊಳ್ಳುವ ಕೊಠಡಿ ಎದುರಾಯಿತು. ಅಲ್ಲಿ ಅವನು ಬಳಸುತ್ತಿದ್ದ ಟೇಬಲ್, ಕುರ್ಚಿ, ಫೋನ್, ಅವನ ಫ಼್ಯಾಕ್ಟರಿಯಲ್ಲಿ ತಯಾರಾದ ಎನಾಮೆಲ್ ಪಾತ್ರೆಗಳು, ಒಂದಿಷ್ಟು ಕಾಗದ ಪತ್ರಗಳು ಇವೆಲ್ಲವನ್ನೂ ಜೋಡಿಸಿ ಇಟ್ಟಿದ್ದರು. ಅದೊಂದು ಸಣ್ಣಕೊಠಡಿ ಅಷ್ಟೇ.
ಆ ನಂತರ ತಿಳಿದದ್ದೇನೆಂದರೆ ಶಿಂಡ್ಲರ್‌ನ ನಿಜದ ಆಫೀಸ್ ಕೊಠಡಿ ಅದಲ್ಲವೇ ಅಲ್ಲ… ಇದು ಸಿನೆಮಾಗೆ ಸ್ಪೀಲ್‌ಬರ್ಗ್ ಆರಿಸಿಕೊಂಡ ಕೊಠಡಿ ಅಷ್ಟೇ ಎಂದು.
ಅರೆ! ಇದೇನು ವಿಚಿತ್ರ? ಈ ಮ್ಯೂಸಿಯಂ ಚರಿತ್ರೆಗಿಂತ ಶಿಂಡ್ಲರ್ಸ್ ಲಿಸ್ಟ್ ಸಿನೆಮಾಗೇ ಹೆಚ್ಚು ನಿಷ್ಠವಾಗಿರುವಂತೆ ಕಾಣಿಸುತ್ತಿದೆಯಲ್ಲ ಅನ್ನಿಸಲಾರಂಭಿಸಿತು.
ಎಲ್ಲವನ್ನೂ ನೋಡಿ ಮುಗಿಸುವಾಗ ಕೊನೆಯಲ್ಲಿ ಅವನ ಕಾಲದಲ್ಲಿ ಬಳಸುತ್ತಿದ್ದ ಒಂದೆರಡು ತಳ್ಳುಗಾಡಿಗಳು, ಮೆಷಿನ್‌ಗಳು ಇದ್ದವು. ಅದು ಬಿಟ್ಟರೆ ಅವನಿಗೆ ಸಂಬಂಧ ಪಟ್ಟಿದ್ದು ಹೆಚ್ಚೇನೂ ಇರಲೇ ಇಲ್ಲ.
ಹಿಂದಿನ ದಿನ ತಾನೇ ಆಶ್ವಿಟ್ಜ಼್‌ನಲ್ಲಿ ಘಟನೆಗಳು ನಡೆದ ಜಾಗಗಳಿಗೇ ಭೇಟಿಕೊಟ್ಟ ನಂತರ ಈ ಮ್ಯೂಸಿಯಂ ಆಹಾ ಓಹೋ ಎಂದೇನೂ ಅನ್ನಿಸಲಿಲ್ಲ. ಹಾಲೋಕಾಸ್ಟ್‌ಗೆ ಸಂಬಂಧ ಪಟ್ಟ ಬೇರೆಯ ಇನ್ನೂ ಎಷ್ಟೋ ಮ್ಯೂಸಿಯಂಗಳು ಈಗಾಗಲೇ ಇರುವುದರಿಂದ, ಇಲ್ಲಿ ಕೇವಲ ಶಿಂಡ್ಲರನಿಗೆ ಸಂಬಂಧ ಪಟ್ಟಿದ್ದೆಲ್ಲವನ್ನೂ ಸೇರಿಸಿ ಅದ್ಭುತವಾದ ಒಂದು ಬೇರೆಯದೇ ರೀತಿಯ ಮ್ಯೂಸಿಯಂ ಮಾಡಬಹುದಾಗಿತ್ತು. ಅದೇನೂ ಇರದಿದ್ದರೂ ಆ ಫ್ಯಾಕ್ಟರಿಯ ಲೇಔಟನ್ನು ಇದ್ದ ಹಾಗೆಯೇ ಉಳಿಸಿಕೊಂಡು ಅವ ಇಲ್ಲಿ ಕುಳಿತುಕೊಳ್ಳುತ್ತಿದ್ದ, ಇಲ್ಲಿ ನಡೆಯುತ್ತಿದ್ದ, ಇಲ್ಲಿ ಊಟ ಮಾಡುತ್ತಿದ್ದ, SS ಅಧಿಕಾರಿಗಳು ಈ ಗೇಟಿನ ಮುಖಾಂತರ ಬರುತ್ತಿದ್ದರು… ಹೀಗೆ ತೋರಿಸಿದ್ದರೂ ಇದಕ್ಕಿಂತ ಆಸಕ್ತಿಕರವಾಗಿರುತ್ತಿತ್ತೇನೋ ಅನ್ನಿಸಲಾರಂಭಿಸಿತು.
ಒಟ್ಟಿನಲ್ಲಿ ನಾನು ಶಿಂಡ್ಲರ್‌ನ ಬಗ್ಗೆ ಹೆಚ್ಚಿನದೇನನ್ನೋ ನಿರೀಕ್ಷಿಸಿ ಬಂದಿದ್ದರಿಂದಲೋ, ಅಥವಾ ಹಿಂದಿನ ದಿನ ತಾನೇ ಆಶ್ವಿಟ್ಜ಼್‌ನಲ್ಲಿ ಇದೆಲ್ಲದರ ಬಗ್ಗೆ ಸಾಕಷ್ಟು ನೋಡಿದ್ದರಿಂದಲೋ ಒಟ್ಟಿನಲ್ಲಿ ನನಗಂತೂ ಈ ಮ್ಯೂಸಿಯಂ ನಿರಾಸೆಗೊಳಿಸಿತು. ಒಟ್ಟಿನಲ್ಲಿ ಬಂದಿದ್ದರಿಂದ ನೋಡಿದ್ದಾಯಿತು.
ಹೆಸರಿಗೆ ಮಾತ್ರ ಶಿಂಡ್ಲರ್ಸ್ ಮ್ಯೂಸಿಯಂ ಆಗಿ ಉಳಿದು, ಅವನ ಫ್ಯಾಕ್ಟರಿಯ ರೂಪರೇಷೆಯೇ ಸಂಪೂರ್ಣವಾಗಿ ಬದಲಾಗಿಹೋದ ಆ ಮ್ಯೂಸಿಯಂ… ಏನೋ ಒಟ್ಟಿನಲ್ಲಿ ಅದ್ಭುತ ನಿರೀಕ್ಷೆಯಿಟ್ಟು ಹೋದ ಸ್ಥಳ ಬಿಟ್ಟು ಹೊರಡುವಾಗ ಎದೆಯಲ್ಲಿ ಯಾವ ತಂತುವನ್ನೂ ಮೀಟದೇ ಸುಮ್ಮನೆ ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ ಎನ್ನುವಂತೆ ಮುಗಿದುಹೋಯಿತು.
ಹೆಚ್ಚು ಕಾಡುವಂಥದ್ದು ಅಲ್ಲಿ ಏನೂ ಇರಲಿಲ್ಲವಾದರೂ, ಈಗಲೂ ಶಿಂಡ್ಲರ್ ಮ್ಯೂಸಿಯಂನ ಒಂದು ಪೋಸ್ಟರ್ ನೆನಪಾಗುತ್ತದೆ. ಪುಟ್ಟ ಕಂದಮ್ಮನೊಂದು ಭಾರವಾದ ಹೆಜ್ಜೆಗಳನ್ನಿಡುತ್ತಾ ಗೆಟ್ಟೋದ ನಿರ್ಜನ ಬೀದಿಗಳಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಾ ಒಂಟಿಯಾಗಿ ಅದೆಲ್ಲಿಗೋ ಹೋಗುತ್ತಿರುವ ಒಂದು ಅಗಾಧ ಉದ್ದಗಲದ ಪೋಸ್ಟರ್‌ನ ಮುಂದೆ ಅಂದು ನಾನು ಅದೆಷ್ಟು ಹೊತ್ತು ನಿಂತಿದ್ದೆನೋ ನನಗೇ ಗೊತ್ತಿಲ್ಲ. ಪುಟ್ಟ ದೇಹ, ಸುಮಾರು ಐದು ವರ್ಷವಿರಬಹುದೋ ಏನೋ. ಅದರ ದೇಹಕ್ಕೆ ಹಾಕಿದ್ದ ಪುಟ್ಟನೆಯ ಪ್ಯಾಂಟ್, ಕೋಟ್… ಗುಂಡುಗುಂಡು ಮಗು ಥೇಟ್ ನನ್ನ ಮಗನಂತೆ… ಇಡೀ ರಸ್ತೆಯಲ್ಲಿ ಯಾರೆಂದರೆ ಯಾರಿಲ್ಲ! ಅದನ್ನು ನೋಡಿದಾಗ ನನಗೆ ನೆನಪಾದದ್ದು ನನ್ನ ಮಗನಿಗೆ ಸಂಬಂಧಿಸಿದ ಆ ಘಟನೆ…
ಆಗ ಅವನು ತುಂಬ ಸಣ್ಣವನು, ಬಹುಶಃ ಮೂರು ವರ್ಷವಿರಬೇಕು. ಇನ್ನೂ ಮಾತನಾಡಲೂ ಬರುತ್ತಿರಲಿಲ್ಲ. ನಾವು ಶಿವಮೊಗ್ಗಕ್ಕೆ ಹೋಗಲು ರಾತ್ರಿ ಬಸ್ ಹತ್ತಿದ್ದೆವು. ನಡುರಾತ್ರಿಯಲ್ಲೆಲ್ಲೋ ಚಾಲಕ ಕಾಫಿಗೆಂದು ಬಸ್ ನಿಲ್ಲಿಸಿದಾಗ ನನಗೆ ಗಾಢ ನಿದ್ರೆ. ನನ್ನ ಗಂಡ ಕೆಳಗಿಳಿದು ಕಾಲಾಡಿಸಿ ಬರುತ್ತೇನೆಂದು ಹೊರಟಾಗ ಮಗ ತಾನೂ ಅವನೊಡನೆ ಹೋಗುತ್ತೇನೆಂದು ದುಂಬಾಲು ಬಿದ್ದ. ಅಂದು ಊರಿನಲ್ಲಿ ಯಾವುದೋ ವಿಶೇಷ ಹಬ್ಬ ಇದ್ದಿದ್ದರಿಂದ ಬೇರೆ ಬೇರೆ ಬಸ್‌ಗಳಲ್ಲಿ ನಮ್ಮ ಕಡೆಯವರು ಸಾಕಷ್ಟು ಜನ ಹೊರಟಿದ್ದೆವು. ಅವರೆಲ್ಲರೂ ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ಮಾತುಕಥೆಯಲ್ಲಿ ಮುಳುಗಿರಬೇಕಾದರೆ, ಈ ನನ್ನ ಮಗ ಅದೇನೋ ರಾಜಕಾರ್ಯ ಇರುವವನಂತೆ ಅಪ್ಪನ ಕೈ ಬಿಡಿಸಿಕೊಂಡಿದ್ದು ನನ್ನ ಗಂಡನ ಅರಿವಿಗೇ ಬಂದಿಲ್ಲ.
ಒಂದಿಷ್ಟು ಅಡ್ಡಾಡಿದ ಮೇಲೆ ಮಗನಿಗೆ ಬೋರಾಗಿರಬೇಕು, ನಾನಿದ್ದ ಬಸ್ ಹುಡುಕಿ ಹೊರಟಿದ್ದಾನೆ. ಎಲ್ಲ ಬಸ್‌ಗಳೂ ಒಂದೇ ರೀತಿ ಇರುವುದರಿಂದ ಅವನಿಗೆ ಯಾವ ಬಸ್‌ನಲ್ಲಿ ನಾನಿದ್ದೇನೆ ಎಂಬುದು ಗೊತ್ತಾಗಿಲ್ಲ. ಹುಡುಕಿ ಹುಡುಕಿ ಆಯಾಸವಾಗಿ ಸಿಕ್ಕ ಯಾವುದೋ ಬಸ್ ಹತ್ತಿಬಿಟ್ಟಿದ್ದಾನೆ. ಹತ್ತಿದವ ನನ್ನನ್ನು ಹುಡುಕಲು ಪ್ರಯತ್ನಿಸಿದ್ದಾನೆ, ಕತ್ತಲಲ್ಲಿ ನಾನು ಹೇಗೆ ಸಿಗಬೇಕು ಪಾಪ. ಹಾಗಾಗಿ ದಿಕ್ಕು ತೋಚದೇ ಚಾಲಕನ ಸೀಟ್ ನ ಹಿಂಭಾಗದಲ್ಲಿ ಒರಗಿ ಕುಳಿತು ಒಬ್ಬನೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಗಾಢ ನಿದ್ರೆಯಲ್ಲಿದ್ದ ನನಗೆ ಎಲ್ಲೋ ಅವನ ದನಿ ಕೇಳಿಸಿದಂತಾಗಿ ಬೆಚ್ಚಿ ಎದ್ದವಳು ‘ಅಯ್ಯೋ ಭ್ರಮೆ. ಅಪ್ಪನ ಜೊತೆ ಹೋದವನು ಇಲ್ಲೆಲ್ಲಿ ಬರಲು ಸಾಧ್ಯ’ ಎಂದು ಮತ್ತೆ ಮಲಗಿದ್ದೆ. ಆ ನಂತರವೂ ಆ ದನಿ ಕೇಳಿಸುತ್ತಲೇ ಹೋದಾಗ ಅದು ಭ್ರಮೆಯಲ್ಲ ಎಂದರಿವಾಗಿ, ದನಿ ಬಂದತ್ತ ಧಾವಿಸಿದರೆ ಅಲ್ಲಿ ಅವನು ಮಂಡಿಯ ಮೇಲೆ ತಲೆಯೂರಿ ಅಳುತ್ತಾ ಕುಳಿತಿದ್ದ!
ಒಬ್ಬನೇ…
ಗುಬ್ಬಿಯಂತೆ…
ದೇಹ ಮುದುಡಿಸಿ…
ಪುಟ್ಟ ಕಾಲುಗಳನ್ನು ಮಡಿಸಿ…
ಅದಾಗಿ 25 ವರ್ಷಗಳೇ ಕಳೆದರೂ ಅದು ನೆನಪಾದಾಗಲೆಲ್ಲ ಅಂದು ಅವನು ನಾನಿದ್ದ ಬಸ್ ಬಿಟ್ಟು ಬೇರೆ ಯಾವುದಾದರೂ ಬಸ್ ಹತ್ತಿ, ಅದರಲ್ಲಿ ಹೊರಟು ಹೋಗಿದ್ದರೆ ಎಂದೆನ್ನಿಸಿದಾಗೆಲ್ಲ ಒಂದು ಚೀತ್ಕಾರ ಹೊರಡುತ್ತದೆ ನನಗೇ ಅರಿವಿಲ್ಲದಂತೆ.ಈ ಪೋಸ್ಟರ್ ಎದುರು ನಿಂತಾಗ ನನಗೆ ನೆನಪಾದದ್ದು ಅದೇ ಘಟನೆ.
ಆ ಪಾಪು ಯುದ್ಧದ ಸಮಯದಲ್ಲಿ ಹಾಗೆ ಒಬ್ಬೊಂಟಿ ಭಾರದ ಹೆಜ್ಜೆಗಳನ್ನಿಡುತ್ತಿರಬೇಕಾದರೆ ಬಹುಶಃ ಅಪ್ಪ-ಅಮ್ಮನಿಂದ ದೂರವಾಗಿರಬೇಕಾ ಬೆನ್ನು ಹಾಕಿ ನಡೆಯುತ್ತಿರುವುದರಿಂದ ಅದರ ಮುಖಭಾವ ಗೊತ್ತಾಗುವ ಸಾಧ್ಯತೆ ಇಲ್ಲದಾಗಲೂ ಅದರ ಹೆಜ್ಜೆಯಲ್ಲಿನ ಅಸಹಾಯಕತೆ, ಭಾರ ನನಗೆ ವೇದ್ಯವಾಗಿದ್ದು ಹೇಗೆ?
ಅಷ್ಟು ಸಣ್ಣ ಕೂಸು ಹೇಗೆ ಆ ದುರ್ಭರ ಸಮಯವನ್ನು ದಾಟಿತು?
ದಾಟಿತೋ?
ಅಥವಾ…
ಅಥವಾ…
ದಾಟಲಿಲ್ಲವೋ………
(ಕೃತಿ: ನಕ್ಷತ್ರಗಳ ಸುಟ್ಟ ನಾಡಿನಲ್ಲಿ, ಲೇಖಕರು: ಭಾರತಿ ಬಿ.ವಿ. ಪ್ರಕಾಶಕರು: ಬಹುರೂಪಿ ಪ್ರಕಾಶನ, ಬೆಲೆ:೩೦೦)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಥ್ಯಾಂಕ್ ಯೂ ಕೆಂಡಸಂಪಿಗೆ