ಆನೆಯನ್ನು ಕೇವಲ ಒಂದು ಪ್ರಾಣಿಯಾಗಿ ಪರಿಭಾವಿಸಿಕೊಳ್ಳದೆ ಅದನ್ನು ಪೂಜನೀಯ ರೀತಿಯಲ್ಲಿ ಕಂಡ ದೇಶ ಥೈಲ್ಯಾಂಡ್. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಆನೆಗೆ ವಿಶೇಷವಾದ ಮಹತ್ವವಿದೆ. ಆನೆ ಇಲ್ಲಿನ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿದೆ. ಆನೆಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿಯದ್ದು. ಆನೆಯ ಅನೇಕ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. 1917ನೇ ಇಸವಿಯವರೆಗೆ ಥೈಲ್ಯಾಂಡ್‌ನ ರಾಷ್ಟ್ರಧ್ವಜದಲ್ಲಿಯೂ ಸಹ ಆನೆಯ ಚಿತ್ರವನ್ನು ಕಾಣಬಹುದಾಗಿತ್ತು. ಉಳಿದೆಲ್ಲಾ ಆನೆಗಳಿಗಿಂತಲೂ ಶ್ವೇತವರ್ಣದ ಆನೆಗೆ ಇಲ್ಲಿ ಹೆಚ್ಚಿನ ಆದ್ಯತೆ. ಏಕೆಂದರೆ, ಬಿಳಿ ಆನೆಯು ಶಕ್ತಿಯ ಸಂಕೇತವಾಗಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಥೈಲ್ಯಾಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ
ಆಗ್ನೇಯ ಏಷ್ಯಾಕ್ಕೆ ಸೇರಿದ ದೇಶ ಥೈಲ್ಯಾಂಡ್. ಯಾವತ್ತಿಗೂ ವಸಾಹತುಶಾಹಿ ಆಡಳಿತಕ್ಕೆ ಒಳಗಾಗದ ಆಗ್ನೇಯ ಏಷ್ಯಾದ ಏಕೈಕ ದೇಶ ಎಂಬ ಹೆಗ್ಗಳಿಕೆ ಇದರದ್ದು. ಥಾಯ್ ಭಾಷೆಯಲ್ಲಿ ದೇಶದ ಹೆಸರು ‘ಪ್ರಥೆತ್ ಥಾಯ್’ ಎಂದಿದೆ. ಅಂದರೆ ‘ಮುಕ್ತ ದೇಶ’ ಎಂದರ್ಥ. ಥೈಲ್ಯಾಂಡ್ ಎಂದಿಗೂ ಸಹ ಫ್ರಾನ್ಸ್, ಇಂಗ್ಲೆಂಡ್ ಮೊದಲಾದ ಪ್ರಬಲ ದೇಶಗಳನ್ನು ಎದುರುಹಾಕಿಕೊಂಡಿಲ್ಲ. ಯಾವುದೇ ಒಂದು ದೇಶದ ಪರವಾಗಿ ಇಲ್ಲವೇ ವಿರುದ್ಧವಾಗಿ ನಿಲುವನ್ನು ಪ್ರದರ್ಶಿಸಿಲ್ಲ. ತಟಸ್ಥ ನೀತಿಯನ್ನು ಇಟ್ಟುಕೊಂಡಿದೆ. ಈ ಕಾರಣದಿಂದಲೇ ವಸಾಹತುಶಾಹಿತ್ವದ ತೊಂದರೆಗೆ ಇದು ಸಿಲುಕಿಕೊಂಡಿಲ್ಲ. ಥೈಲ್ಯಾಂಡ್‌ನ ಜನರು ನಗುವುದನ್ನು ಅತೀವವಾಗಿ ಇಷ್ಟಪಡುವ ಮಂದಿ. ಯಾರನ್ನು ಭೇಟಿ ಮಾಡುತ್ತಾರೋ ಅವರನ್ನು ಕಂಡ ಕೂಡಲೇ ಹೃದಯಪೂರ್ವಕವಾದ ನಗುವನ್ನು ಬೀರುವುದು ಇಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ನಗುಮುಖದ ಸ್ವಾಗತ ಥೈಲ್ಯಾಂಡ್ ಸಂಸ್ಕೃತಿಯ ಅವಿಭಾಜ್ಯ ಅಂಗವೆನಿಸಿದೆ.
ಕಡಿಮೆ ಎಂದರೂ ಹನ್ನೆರಡು ರೀತಿಯ ನಗು ಇಲ್ಲಿ ಕಂಡುಬರುತ್ತದೆ. ಉಲ್ಲಾಸದ ನಗು, ಕೀಟಲೆ ನಗು ಮೊದಲಾದವು ಇಲ್ಲಿ ಕಾಣಬಹುದಾದ ನಗುವಿನ ಬೇರೆ ಬೇರೆ ವಿಧಗಳಾಗಿವೆ. ಹೀಗೆ ನಗುವಿಗೆ ಪ್ರಾಮುಖ್ಯತೆ ಕೊಟ್ಟ ದೇಶವಾಗಿರುವ ಕಾರಣಕ್ಕೆ ಥೈಲ್ಯಾಂಡನ್ನು ‘ಸ್ಮೈಲ್ ಲ್ಯಾಂಡ್’ ಎಂದು ಕರೆಯುವ ಪದ್ಧತಿಯಿದೆ. ಥೈಲ್ಯಾಂಡ್ ದೇಶವು ಜ್ಯೋತಿಷ್ಯ, ಧಾರ್ಮಿಕ ನಂಬಿಕೆಗಳಿಗೆ ಹೆಚ್ಚು ಮಹತ್ವ ನೀಡಿದೆ. 2019ರಲ್ಲಿ ರಾಜ ಮಹಾ ವಜಿರಾಲಾಂಗ್‌ಕಾರ್ನ್ ಅವರಿಗೆ ಪಟ್ಟಾಭಿಷೇಕ ನಡೆದಾಗ ರಾಜನ ಜಾತಕ ಪಠನವೂ ಸಹ ಕಾರ್ಯಕ್ರಮದ ಒಂದು ಭಾಗವಾಗಿತ್ತು. ಆತ್ಮಗಳ ಬಗೆಗೆ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಥಾಯ್ ಜನರು. ಜಾನಪದೀಯರು ‘ಫೈ’ ಎಂಬ ಆತ್ಮದ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಫೈ ಆತ್ಮವು ಮರಗಳಲ್ಲಿ, ಪರ್ವತಗಳಲ್ಲಿ ವಾಸಿಸುತ್ತವೆ ಎನ್ನುವುದು ಇವರ ನಂಬಿಕೆ. ನಾಗಾ ಎಂಬ ಜೀವಿ ನೀರಿನ ಬೇರೆ ಬೇರೆ ಭಾಗಗಳಲ್ಲಿ ವಾಸಿಸುವ ರಕ್ಷಣಾತ್ಮಕ ಶಕ್ತಿ ಎಂಬ ನಂಬಿಕೆ ಕೆಲವರಲ್ಲಿದೆ.
ಆನೆಯನ್ನು ಕೇವಲ ಒಂದು ಪ್ರಾಣಿಯಾಗಿ ಪರಿಭಾವಿಸಿಕೊಳ್ಳದೆ ಅದನ್ನು ಪೂಜನೀಯ ರೀತಿಯಲ್ಲಿ ಕಂಡ ದೇಶ ಥೈಲ್ಯಾಂಡ್. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಆನೆಗೆ ವಿಶೇಷವಾದ ಮಹತ್ವವಿದೆ. ಆನೆ ಇಲ್ಲಿನ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿದೆ. ಆನೆಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿಯದ್ದು. ಆನೆಯ ಅನೇಕ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. 1917ನೇ ಇಸವಿಯವರೆಗೆ ಥೈಲ್ಯಾಂಡ್‌ನ ರಾಷ್ಟ್ರಧ್ವಜದಲ್ಲಿಯೂ ಸಹ ಆನೆಯ ಚಿತ್ರವನ್ನು ಕಾಣಬಹುದಾಗಿತ್ತು. ಉಳಿದೆಲ್ಲಾ ಆನೆಗಳಿಗಿಂತಲೂ ಶ್ವೇತವರ್ಣದ ಆನೆಗೆ ಇಲ್ಲಿ ಹೆಚ್ಚಿನ ಆದ್ಯತೆ. ಏಕೆಂದರೆ, ಬಿಳಿ ಆನೆಯು ಶಕ್ತಿಯ ಸಂಕೇತವಾಗಿದೆ. ಥೈಲ್ಯಾಂಡ್‌ನ ರಾಜಮನೆತನದ ಜೊತೆ ಈ ಆನೆಗಳಿಗೆ ವಿಶಿಷ್ಟ ಸಂಬಂಧವಿದೆ. ಇಪ್ಪತ್ತನೇ ಶತಮಾನದವರೆಗೂ ಸಹ ಇಲ್ಲಿ ಆನೆಗಳು ಅಧಿಕ ಸಂಖ್ಯೆಯಲ್ಲಿದ್ದವು. ಸುಮಾರು ನಾಲ್ಕು ಲಕ್ಷ ಆನೆಗಳು ಇಲ್ಲಿದ್ದವು. ಆದರೆ ಆ ಬಳಿಕದ ಕಾಲಘಟ್ಟದಲ್ಲಿ ವಿಧವಿಧದ ಉದ್ಯಮಗಳು ತಲೆಯೆತ್ತಿದವು. ಇದರ ಪರಿಣಾಮವಾಗಿ ಆನೆಗಳು ಸಾವನ್ನಪ್ಪುವಂತಾಯಿತು. ಒಮ್ಮಿಂದೊಮ್ಮೆಗೆ ಆನೆಗಳ ಸಂಖ್ಯೆ ಏಳೂವರೆ ಸಾವಿರಕ್ಕೆ ಇಳಿಕೆಯಾಯಿತು. ಮನುಷ್ಯನ ದುರಾಸೆ ಜೀವಿಗಳ ಅಸ್ತಿತ್ವಕ್ಕೆ ಹೇಗೆ ಸಂಚಕಾರ ಒಡ್ಡಬಲ್ಲದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಆನೆಗಳು ಅಧಿಕವಾಗಿದ್ದಾಗಲೂ ಇಲ್ಲಿನ ಕೆಲವು ವ್ಯಕ್ತಿಗಳು ಅವುಗಳನ್ನು ಬಳಸಿಕೊಂಡದ್ದು ಪರಿಸರದ ನಾಶಕ್ಕೆ. ಲೆಕ್ಕವೇ ಇಲ್ಲದೆ ಉರುಳಿಸಿದ ಮರದ ದಿಮ್ಮಿಗಳನ್ನು ಎಳೆಯುವುದಕ್ಕೆ, ಲಾರಿಗಳಿಗೆ ಲೋಡ್ ಮಾಡುವುದಕ್ಕೆ ಅವುಗಳನ್ನು ಬಳಸಲಾಗುತ್ತಿತ್ತು. ಹೀಗೆ ಮರದ ಉದ್ಯಮವು ಆನೆಗಳ ನಾಶಕ್ಕೆ, ದುರ್ಬಳಕೆಗೆ ಕಾರಣವಾಗುತ್ತಿರುವುದನ್ನು ಮನಗಂಡ ಥೈಲ್ಯಾಂಡ್ ಸರ್ಕಾರವು ಮರ ಕಡಿಯುವುದನ್ನು ನಿಷೇಧಿಸುವ ಕಾನೂನನ್ನು ತಂದಿದೆ. ಮರದ ಉದ್ಯಮದಲ್ಲಿ ಬಳಸಲಾಗುತ್ತಿದ್ದ ಆನೆಗಳನ್ನು ರಕ್ಷಿಸುವುದಕ್ಕಾಗಿ ಸಂರಕ್ಷಣಾ ಕೇಂದ್ರಗಳನ್ನು ನಿರ್ಮಿಸಿದೆ. ಈ ಮೂಲಕ ದೇಶದ ಸಂಸ್ಕೃತಿಯ ಸಂಕೇತವೆನಿಸಿಕೊಂಡಿರುವ ಆನೆಗಳನ್ನು ಉಳಿಸುವ ಪ್ರಯತ್ನ ನಡೆಸಿದೆ. ಆನೆಗಳ ಅಸ್ತಿತ್ವವನ್ನು ಕಾಯುವ ಸರ್ಕಾರದ ಪ್ರಯತ್ನಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳೂ ಸಹ ಬೆಂಬಲ ನೀಡುತ್ತಿವೆ. ರೂಸ್ಟಿಕ್ ಪಾಥ್‌ವೇಸ್ ಫೌಂಡೇಶನ್‌ನಂತಹ ಸಂಸ್ಥೆಗಳು ಯಾವುದೇ ಹಣಕಾಸಿನ ನಿರೀಕ್ಷೆಯಿಲ್ಲದೆ ಇಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ.
ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಮಧ್ಯಭಾಗದಲ್ಲಿ ಕಂಡುಬರುತ್ತದೆ. ಹಲವಾರು ವಿಶಿಷ್ಟತೆಗಳಿಂದ ಕೂಡಿದ ನಗರ ಇದಾಗಿದೆ. ಅತೀ ಉದ್ದದ ಹೆಸರನ್ನು ಇದು ಹೊಂದಿದೆ. ಈ ಕಾರಣಕ್ಕಾಗಿಯೇ ಈ ನಗರವು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ಬ್ಯಾಂಕಾಕ್ ನಗರವನ್ನು ಥೈಲ್ಯಾಂಡ್ ಜನರು ‘ಕ್ರುಂಗ್ ಥೆಪ್ ಮಹಾನಖೋನ್’ ಎಂದು ಕರೆಯುತ್ತಾರೆ. ಈ ಹೆಸರೂ ಸಹ ಬ್ಯಾಂಕಾಕ್‌ನ ಹೆಸರಿನ ಪೂರ್ಣರೂಪವಲ್ಲ. ‘ಕ್ರುಂಗ್ ಥೆಪ್ ಮಹಾನಖೋನ್ ಅಮೋನ್ ರತ್ತನಾಕೋಸಿನ್ ಮಹಿಂತರಾ ಯುಥಾಯ ಮಹಾದಿಲೋಕ್ ಫೋಪ್ ನೊಪ್ಪರತ್ ರಟ್ಚಥನಿ ಬುರಿರೋಮ್ ಉಡೋಮ್ರಾಟ್ಚನಿವೇಟ್ ಮಹಾಸಥಾನ್ ಅಮೋನ್ ಪಿಮಾನ್ ಅವತನ್ ಸತಿತ್ ಸಕ್ಕತಟ್ಟಿಯ ವಿತ್ಸಾನುಕಮ್ ಪ್ರಸಿತ್’ ಎನ್ನುವುದು ಈ ನಗರದ ಪೂರ್ಣ ಹೆಸರಾಗಿದೆ. ಕನ್ನಡ ಭಾಷೆಯಲ್ಲಿ ಈ ಹೆಸರನ್ನು ಬರೆದಾಗ ಸುಮಾರು ಎಂಭತ್ತೆರಡು ಅಕ್ಷರಗಳು ಈ ಹೆಸರಿನಲ್ಲಿವೆ. ಇದು ಥಾಯ್ ಭಾಷೆಯಲ್ಲಿದ್ದರೂ ಈ ಹೆಸರಿನ ಪದಗಳು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಮೂಲದಿಂದ ಬಂದಿವೆ. ‘ದೇವತೆಗಳ ನಗರ. ಅಮರರ ಮಹಾನಗರ. ಒಂಭತ್ತು ರತ್ನಗಳ ಭವ್ಯವಾದ ನಗರ. ರಾಜನ ಸ್ಥಾನ. ರಾಜಮನೆತನಗಳ ನಗರ. ಇಂದ್ರನ ಆಜ್ಞೆಯ ಮೇರೆಗೆ ವಿಶ್ವಕರ್ಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವತೆಗಳ ಮನೆ’ ಎನ್ನುವುದು ಬ್ಯಾಂಕಾಕ್ ನಗರದ ಪೂರ್ತಿ ಹೆಸರಿನ ಹಿನ್ನೆಲೆಯಲ್ಲಿರುವ ಅರ್ಥ. ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಗರವೆನಿಸಿಕೊಂಡಿದೆ ಬ್ಯಾಂಕಾಕ್. 2021ನೇ ವರ್ಷದಲ್ಲಿ ವಿಶ್ವದ ಅತೀ ಹೆಚ್ಚು ಜನರು ಭೇಟಿ ನೀಡಿದ್ದು ಬ್ಯಾಂಕಾಕ್ ಪಟ್ಟಣಕ್ಕೆ. ಜನರು ನೋಡಿ ಆನಂದಿಸಬಹುದಾದ ಹಲವು ಸ್ಥಳಗಳಿವೆ ಇಲ್ಲಿ. ಖ್ಲೋಂಗ್ಸ್ ಹೆಸರಿನ ಕಾಲುವೆಗಳ ಸರಣಿಯೇ ಈ ನಗರದಲ್ಲಿದೆ. ಸುಮಾರು ಸಾವಿರದ ಆರುನೂರ ಎಂಭತ್ತರೆರಡು ಕಾಲುವೆಗಳು ಇಲ್ಲಿವೆ. ಈ ಕಾರಣದಿಂದಾಗಿಯೇ ಬ್ಯಾಂಕಾಕ್ ನಗರಕ್ಕೆ ‘ಪೂರ್ವದ ವೆನಿಸ್’ ಎಂಬ ವಿಶೇಷಣ ಪ್ರಾಪ್ತವಾಗಿದೆ. ಈ ಸಾವಿರಾರು ಕಾಲುವೆಗಳನ್ನು ಸಾರಿಗೆ ಸೌಕರ್ಯಕ್ಕಾಗಿ ಬಳಸಲಾಗುತ್ತಿತ್ತು.
ಥೈಲ್ಯಾಂಡ್‌ನಲ್ಲಿ ಬೌದ್ಧಧರ್ಮ ಪ್ರಮುಖವಾಗಿದೆ. ಇಡೀ ದೇಶದಲ್ಲಿರುವ ಬೌದ್ಧ ದೇವಾಲಯಗಳ ಸಂಖ್ಯೆ ಸುಮಾರು ಮೂವತ್ತೈದು ಸಾವಿರ. ಇಲ್ಲಿರುವ ಎರಡು ಲಕ್ಷಗಳಿಗೂ ಹೆಚ್ಚಿನ ಸಂಖ್ಯೆಯ ಬೌದ್ಧ ಸಂನ್ಯಾಸಿಗಳು ಬುದ್ಧನ ಪ್ರಜ್ಞೆಯನ್ನು ಸಮಾಜದಲ್ಲಿ ಬೇರೂರಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ದೇಶದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ತೊಂಭತ್ತಮೂರು ಪ್ರತಿಶತ ಜನರು ಬೌದ್ಧ ಧರ್ಮದ ಅನುಯಾಯಿಗಳು. ಬೌದ್ಧ ಧರ್ಮವು ಥೈಲ್ಯಾಂಡ್ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಥೈಲ್ಯಾಂಡ್‌ನ ರಾಷ್ಟ್ರಧ್ವಜದಲ್ಲಿ ಕಂಡುಬರುವ ಬಿಳಿಯ ಬಣ್ಣವು ಬೌದ್ಧ ಧರ್ಮವನ್ನು ಸಂಕೇತಿಸುತ್ತದೆ. ದೇಶದ ಧ್ಯೇಯವಾಕ್ಯವಾದ ‘ರಾಷ್ಟ್ರ ಧರ್ಮ ರಾಜ’ ಇದರಲ್ಲಿಯೂ ಸಹ ಬೌದ್ಧ ಧರ್ಮಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಹೀಗೆ ಬೌದ್ಧ ಧರ್ಮಕ್ಕೆ ಪ್ರಾಮುಖ್ಯತೆ ನೀಡಲಾದ ಧ್ವಜವು 1917ರ ಸೆಪ್ಟೆಂಬರ್ 28ರಂದು ಅಂಗೀಕಾರಗೊಂಡಿದೆ. ದೇಶದ ಅನೇಕ ಕಲಾಕೃತಿಗಳು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿವೆ. ಹಲವು ಪ್ರದೇಶಗಳಲ್ಲಿ ಬುದ್ಧನ ಪ್ರತಿಮೆಗಳು ಕಂಡುಬರುತ್ತವೆ. ಅತೀ ದೊಡ್ಡ ಬುದ್ಧನ ವಿಗ್ರಹ ನಿರ್ಮಾಣಗೊಂಡಿರುವುದು ಬ್ಯಾಂಕಾಕ್ ನಗರದ ಉತ್ತರ ದಿಕ್ಕಿಗಿರುವ ಆಂಗ್ ಥಾಂಗ್ ಪ್ರಾಂತ್ಯದಲ್ಲಿ. ಸುಮಾರು ಹದಿನೆಂಟು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ನಿರ್ಮಿತವಾದ ಈ ಪ್ರತಿಮೆಯು ಮುನ್ನೂರು ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿದೆ. ಈ ಕಾರಣದಿಂದಾಗಿಯೇ ಇದನ್ನು ‘ಥೈಲ್ಯಾಂಡ್‌ನ ಮಹಾ ಬುದ್ಧ’ ಎಂದು ಕರೆಯಲಾಗಿದೆ. ಚಿನ್ನದ ಬಣ್ಣದಲ್ಲಿರುವ ಇದು ಪೂರ್ಣಗೊಂಡದ್ದು 2008ರಲ್ಲಿ. ಈ ಪ್ರತಿಮೆ ನಿರ್ಮಾಣ ಆಗುವುದಕ್ಕೂ ಮೊದಲು ಮಲಗಿರುವ ಭಂಗಿಯಲ್ಲಿರುವ ಬುದ್ಧನ ಪ್ರತಿಮೆ ಪ್ರಖ್ಯಾತವಾಗಿತ್ತು. ಬ್ಯಾಂಕಾಕ್‌ನ ಮಧ್ಯಭಾಗದಲ್ಲಿದ್ದ ವಾಟ್ ಫೋ ಬೌದ್ಧ ದೇವಾಲಯದಲ್ಲಿ ಇದನ್ನು ಕಾಣಬಹುದಾಗಿತ್ತು.
ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧದಲ್ಲಿಯೇ ರಚಿತವಾಗಿದ್ದ ಈ ವಿಗ್ರಹ ನೂರೈವತ್ತು ಅಡಿಗಳಷ್ಟು ಉದ್ದವಿದೆ. ಕನಕ ವರ್ಣದ ಎಲೆಗಳಿಂದ ಈ ಪ್ರತಿಮೆಯನ್ನು ಮುಚ್ಚಲಾಗಿದೆ. ಥೈಲ್ಯಾಂಡ್‌ನ ಬೇರೆ ಬೇರೆ ಪ್ರದೇಶಗಳಲ್ಲಿ ಕಾಣಸಿಗುವ ಬುದ್ಧನ ಪ್ರತಿಮೆಗಳಲ್ಲಿ ಹೆಚ್ಚಿನವು ಚಿನ್ನದಿಂದಲೇ ಮಾಡಲ್ಪಟ್ಟಿವೆ. ಕೆಲವು ಬಿಳಿಯ ಬಣ್ಣದಲ್ಲಿವೆ. ಥೈಲ್ಯಾಂಡ್‌ನ ಹಲವು ನಂಬಿಕೆಗಳಲ್ಲಿಯೂ ಸಹ ಬೌದ್ಧ ಧರ್ಮದ ಪಾತ್ರವನ್ನು ಗುರುತಿಸಬಹುದು. ಉದಾಹರಣೆಗೆ, ಥೈಲ್ಯಾಂಡ್‌ನಲ್ಲಿ ಯಾರ ತಲೆಯನ್ನೂ ಕೂಡಾ ಸ್ಪರ್ಶಿಸುವಂತಿಲ್ಲ. ಅದು ಅಗೌರವ ತೋರಿದಂತೆ. ತಲೆಯನ್ನು ಪವಿತ್ರ ಎಂದು ಪರಿಗಣಿಸುವ ಬೌದ್ಧ ಧರ್ಮದ ನಂಬಿಕೆಯೇ ಇದರ ಹಿನ್ನೆಲೆಯಲ್ಲಿರುವ ಕಾರಣವಾಗಿದೆ.
ಮೌಯಿ ಥಾಯ್ ಎನ್ನುವುದು ಥೈಲ್ಯಾಂಡ್‌ನ ಪ್ರಸಿದ್ಧ ಸಮರ ಕಲೆಯಾಗಿದೆ. ‘ಥಾಯ್ ಬಾಕ್ಸಿಂಗ್’ ಎನ್ನುವುದಾಗಿಯೂ ಈಗ ಇದನ್ನು ಗುರುತಿಸಲಾಗುತ್ತದೆ. ತೀರಾ ಪ್ರಾಚೀನ ಕಾಲಘಟ್ಟದಿಂದಲೂ ಇದು ಥೈಲ್ಯಾಂಡ್‌ನಲ್ಲಿ ರೂಢಿಯಲ್ಲಿತ್ತು. ಇದು ಹದಿಮೂರನೇ ಶತಮಾನದಲ್ಲಿ ಸುಖೋಥಾಯ್ ರಾಜವಂಶದ ಮೂಲಕ ಹುಟ್ಟಿಕೊಂಡಿತು. ಸೈನಿಕರು ಯಾವುದೇ ಆಯುಧ ಇಲ್ಲದೆಯೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ಕಲೆಯನ್ನು ಅಭ್ಯಾಸ ಮಾಡಿಸಲಾಯಿತು. ಇದು ಈಗ ಥೈಲ್ಯಾಂಡ್‌ನ ರಾಷ್ಟ್ರೀಯ ಕ್ರೀಡೆ ಎನಿಸಿಕೊಂಡಿದೆ. ‘ಎಂಟು ಅಂಗಗಳ ಕಲೆ’ ಎಂದು ಇದನ್ನು ಕರೆಯಲಾಗುತ್ತದೆ. ಎರಡು ಕೈಗಳು, ಎರಡು ಪಾದಗಳು, ಎರಡು ಮೊಣಕಾಲುಗಳು ಮತ್ತು ಎರಡು ಮೊಣಕೈಗಳನ್ನು ಇದರಲ್ಲಿ ಬಳಸುವುದರಿಂದಾಗಿ ಈ ಹೆಸರು ಬಂದಿದೆ. ಒಂದು ಕಾಲಕ್ಕೆ ಯುದ್ಧದಲ್ಲಿ ಭಾಗವಹಿಸುವವರು ಮಾತ್ರವೇ ಇದನ್ನು ಕಲಿತುಕೊಳ್ಳುತ್ತಿದ್ದರು. ಆದರೆ ಈಗ ಮಹಿಳೆಯರು, ಮಕ್ಕಳು, ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ಈ ಸಮರ ಕಲೆಯ ತಂತ್ರಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದೇಹ ಮತ್ತು ಮನಸ್ಸುಗಳೆರಡೂ ಗಟ್ಟಿತನಕ್ಕೆ ಒಳಗಾಗುತ್ತದೆ ಎಂಬ ಭಾವನೆ ಹೀಗೆ ಅಭ್ಯಾಸ ಮಾಡುವವರಲ್ಲಿದೆ.
ಥೈಲ್ಯಾಂಡ್‌ನಲ್ಲಿ ಪ್ರಮುಖವಾಗಿ ಮೂರು ಆಚರಣೆಗಳು ಕಂಡುಬರುತ್ತವೆ. ನವೆಂಬರ್ ತಿಂಗಳಿನ ಕೊನೆಯ ಭಾನುವಾರದಂದು ನಡೆಸಲಾಗುವ ‘ಮಂಕಿ ಬಫೆ ಫೆಸ್ಟಿವಲ್’ ಎನ್ನುವುದು ಇಂತಹದ್ದೊಂದು ವಿಶಿಷ್ಟ ಆಚರಣೆಯಾಗಿದೆ. ಇದು ನಡೆಯುವುದು ಲೋಪ್‌ಬುರಿ ಹೆಸರಿನ ಪ್ರಾಂತ್ಯದಲ್ಲಿ. ಥೈಲ್ಯಾಂಡ್‌ನ ಜನರು ಕೋತಿಗಳನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಈ ಕಾರಣದಿಂದಾಗಿ ಈ ಪ್ರಾಂತ್ಯದಲ್ಲಿರುವ ಮಂಗಗಳಿಗೆ ಭಾರೀ ಪ್ರಮಾಣದಲ್ಲಿ ಆಹಾರ ನೀಡುವ ಉತ್ಸವ ಇದಾಗಿದೆ. ಈ ಹಬ್ಬದ ದಿನದಂದು ಕೋತಿಗಳಿಗೆ ಇಷ್ಟವಾದ ಬಾಳೆಹಣ್ಣುಗಳನ್ನು, ಸಿಹಿತಿಂಡಿಗಳನ್ನು ಕೊಡಲಾಗುತ್ತದೆ. ಹೀಗೆ ಒಂದು ದಿನದಲ್ಲಿ ಖರ್ಚಾಗುವುದು ಸುಮಾರು ಎರಡು ಸಾವಿರ ಕಿಲೋಗ್ರಾಂ ತೂಕದಷ್ಟು ಆಹಾರ. ಹೊಸ ವರ್ಷವನ್ನು ಸ್ವಾಗತಿಸುವ ಆಚರಣೆಯನ್ನು ಥೈಲ್ಯಾಂಡ್‌ನಲ್ಲಿ ‘ಸಾಂಗ್ರ್ಕಾನ್ ಫೆಸ್ಟಿವಲ್’ ಎಂದು ಕರೆಯಲಾಗುತ್ತದೆ. ಇದು ಆರಂಭವಾಗುವುದು ಏಪ್ರಿಲ್ ಹದಿಮೂರರಂದು. ಇಲ್ಲಿ ಬೌದ್ಧ ಕ್ಯಾಲೆಂಡರ್‌ನ ಅನುಸರಣೆ ಇರುವುದರಿಂದ ಥೈಲ್ಯಾಂಡ್ ಜನರ ಪಾಲಿಗೆ ಏಪ್ರಿಲ್ ಮಾಸವು ವರ್ಷದ ಮೊದಲ ತಿಂಗಳಾಗಿದೆ. ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಉತ್ಸವವಿದು. ಮೊದಲ ದಿನ ಬುದ್ಧನ ಚಿತ್ರಗಳ ಮೇಲೆ ಸುಗಂಧಯುಕ್ತ ನೀರನ್ನು ಎರೆಯುವ ಸಂಪ್ರದಾಯವಿರುತ್ತದೆ. ಈ ಆಚರಣೆಯು ಶುದ್ಧೀಕರಣದ ಸಂಕೇತವಾಗಿದೆ. ಇದೇ ಸಂದರ್ಭದಲ್ಲಿ ಯುವಕ ಯುವತಿಯರು ತಮ್ಮ ಹಿರಿಯರ ಕೈಕಾಲುಗಳಿಗೂ ಪರಿಮಳದ ನೀರನ್ನು ಸುರಿಯುತ್ತಾರೆ. ಈಗ ಈ ಆಚರಣೆ ನೂತನ ರೂಪವನ್ನು ಪಡೆದುಕೊಂಡಿದೆ. ವಾಟರ್ ಗನ್‌ಗಳಲ್ಲಿ ಪರಿಮಳದ ನೀರನ್ನು ತುಂಬಿ, ಅದನ್ನು ಪರಸ್ಪರರ ಮೇಲೆ ಎರಚುತ್ತಾ ಸಂಭ್ರಮಿಸಲಾಗುತ್ತದೆ. ಹಲವು ರಸ್ತೆಗಳಲ್ಲಿ ಈ ಬಗೆಯ ಆಚರಣೆಗಳು ನಡೆಯುತ್ತವೆ. ‘ಸೂರಿನ್ ಎಲಿಫೆಂಟ್ ರೌಂಡ್ ಅಪ್’ ಎನ್ನುವುದು ಥೈಲ್ಯಾಂಡ್‌ನ ಇನ್ನೊಂದು ವಿಶಿಷ್ಟ ಮತ್ತು ಮೋಜಿನ ಆಚರಣೆಯಾಗಿದೆ. ನವೆಂಬರ್‌ನಲ್ಲಿ ನಡೆಯುವ ಎರಡು ದಿನಗಳ ಈ ಉತ್ಸವವು ಸೂರಿನ್ ಪ್ರದೇಶವನ್ನು ಕೇಂದ್ರೀಕರಿಸಿಕೊಂಡಿದೆ. ಆನೆಗಳ ವಿಶಿಷ್ಟ ಕೌಶಲ್ಯ ಪ್ರದರ್ಶನಕ್ಕೆ ಈ ಉತ್ಸವದಲ್ಲಿ ಅವಕಾಶವಿರುತ್ತದೆ. ಇಲ್ಲಿ ಆನೆಗಳು ಫುಟ್‌ಬಾಲ್ ಆಡುತ್ತವೆ. ಥೈಲ್ಯಾಂಡ್‌ನ ಸೈನಿಕರ ಜೊತೆಗೆ ಹಗ್ಗಜಗ್ಗಾಟದಲ್ಲಿ ಭಾಗವಹಿಸುತ್ತವೆ. ಚಿತ್ರಗಳನ್ನು ಬಿಡಿಸುತ್ತವೆ. ಬಳೆಗಳನ್ನು ತಿರುಗಿಸುತ್ತವೆ. ಆನೆಗಳ ಈ ಮೋಜಿನಾಟವನ್ನು ಕಾಣುವುದು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ.
ಆಹಾರಕ್ಕಾಗಿ ಅತ್ಯುತ್ತಮ ಎಂದು ಪರಿಗಣಿಸಲಾದ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ ಥೈಲ್ಯಾಂಡ್‌ಗೆ ಮೀಸಲಾಗಿದೆ. ಐದು ಸಾವಿರದಷ್ಟು ತಳಿಯ ಅಕ್ಕಿ ಇಲ್ಲಿವೆ. ಇವುಗಳಲ್ಲಿ ಜಾಸ್ಮಿನ್ ಅಕ್ಕಿ ಅತ್ಯಂತ ಪ್ರಸಿದ್ಧವಾದದ್ದು. ಪ್ಯಾಡ್ ಥಾಯ್ ಎನ್ನುವುದು ಇಲ್ಲಿನ ವಿಶಿಷ್ಟ ಖಾದ್ಯವಾಗಿದೆ. ಮೊಟ್ಟೆ, ತರಕಾರಿಗಳು ಮತ್ತು ಚಿಕನ್ ಜೊತೆಗೆ ಬೇಯಿಸಿದ ನೂಡಲ್ಸನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ನೂಡಲ್ಸ್‌ಗೆ ಸೋಯಾ ಸಾಸ್ ಸೇರಿಸಿ, ಮಾಂಸ, ಮೊಟ್ಟೆಗಳನ್ನು ಬೆರೆಸಿದರೆ ಪ್ಯಾಡ್ ಸೀ ಇವ್ ಎಂಬ ಭಕ್ಷ್ಯ ತಯಾರಾಗುತ್ತದೆ. ಈ ಎರಡೂ ಆಹಾರ ವಿಶಿಷ್ಟಗಳು ಥೈಲ್ಯಾಂಡ್ ಜನರ ಅಚ್ಚುಮೆಚ್ಚಿನ ಖಾದ್ಯಗಳೆನಿಸಿವೆ. ಕೀಟಗಳನ್ನು ಹುರಿದು ತಿನ್ನುವುದು ಇಲ್ಲಿನವರಿಗೆ ಬಲುಪ್ರಿಯ. ಸುಮಾರು ಇನ್ನೂರ ಮೂವತ್ತನಾಲ್ಕು ಬಗೆಯ ಹಣ್ಣುಗಳು ಥೈಲ್ಯಾಂಡ್‌ನಲ್ಲಿವೆ. ಇವುಗಳಲ್ಲಿ ದುರಿಯನ್ ಎನ್ನುವ ಹಳದಿ ಬಣ್ಣದ ಹಣ್ಣು ಹಲವರ ಇಷ್ಟದ ಹಣ್ಣು ಎನಿಸಿಕೊಂಡಿದೆ. ಆದರೆ ಇದು ಗಲೀಜು ವಾಸನೆಯ ಹಣ್ಣು ಎಂದು ಅದನ್ನು ತಿನ್ನದವರೂ ಇದ್ದಾರೆ. ಇದಕ್ಕಿರುವ ಬೇಡಿಕೆಯಿಂದಾಗಿ ಇದರ ಬೆಲೆ ದುಬಾರಿಯಾಗಿದೆ.
ಬ್ಯಾಂಕಾಕ್ ನಗರದಲ್ಲಿರುವ ವಿಮಾನ ನಿಲ್ದಾಣದ ಬಗ್ಗೆ ಅಲ್ಲಿನ ಜನರಲ್ಲಿ ವಿಚಿತ್ರವಾದ ನಂಬಿಕೆಯಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದಕ್ಕೂ ಮೊದಲು ಇಲ್ಲಿ ಸ್ಮಶಾನವಿತ್ತು. ಏರ್‌ಪೋರ್ಟ್ ಕಟ್ಟುವ ಸಮಯದಲ್ಲಿಯೂ ಅದೆಷ್ಟೋ ಹಾವುಗಳನ್ನು ಕೊಲ್ಲಲಾಗಿದೆ. ಹೀಗೆ ಪ್ರಾಣಬಿಟ್ಟ ಹಾವುಗಳು ವಿಮಾನ ನಿಲ್ದಾಣಕ್ಕೆ ಶಾಪ ಕೊಟ್ಟಿವೆ. ಸ್ಮಶಾನದಲ್ಲಿರುವ ದೆವ್ವಗಳು ಈಗಲೂ ತೊಂದರೆ ನೀಡುತ್ತಿವೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ದೆವ್ವಗಳು ಮತ್ತು ಹಾವುಗಳು ನಿಲ್ದಾಣದ ಕೆಲಸಗಾರರನ್ನು ಕಾಡುತ್ತಿವೆ ಎಂಬ ವಿಚಾರವನ್ನು ಇವರು ಸುದ್ದಿ ಮಾಡಿದ್ದಾರೆ. ಸಾವನ್ನಪ್ಪಿರುವ ಮಹಿಳಾ ಕೆಲಸಗಾರರೊಬ್ಬರ ದೆವ್ವವು ಇಲ್ಲಿರುವ ಒಂದು ಕಂಬದಲ್ಲಿ ನೆಲೆಸಿರುವ ಅನುಭವವೂ ಕೆಲವರಿಗಾಗಿದೆ. ದೆವ್ವಗಳನ್ನು ನೋಡಿರುವುದಾಗಿ ನಿಲ್ದಾಣದ ಕೆಲವು ಕೆಲಸಗಾರರೂ ಹೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡವರಿಗೂ ಇಂಥದ್ದೊಂದು ವಿಷಯದ ಬಗೆಗೆ ಅರಿವಿದ್ದಿರಬೇಕು. ಅದಕ್ಕಾಗಿಯೇ ನಿಲ್ದಾಣ ಉದ್ಘಾಟನೆಯ ಸಮಯದಲ್ಲಿ ತೊಂಬತ್ತೊಂಬತ್ತು ಜನ ಸಂನ್ಯಾಸಿಗಳನ್ನು ಕರೆಸಲಾಗಿತ್ತು. ಇವರು ನಿಲ್ದಾಣವನ್ನು ಶುದ್ಧೀಕರಿಸುವ ಆಚರಣೆ ನಡೆಸಿದ್ದರು. ಈ ಆಚರಣೆ ಒಂಭತ್ತು ವಾರಗಳವರೆಗೂ ನಡೆದಿತ್ತು.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.