Advertisement
ನದಿ – ದಡ: ಸುಬ್ರಾಯ ಚೊಕ್ಕಾಡಿ ಕವಿತೆ

ನದಿ – ದಡ: ಸುಬ್ರಾಯ ಚೊಕ್ಕಾಡಿ ಕವಿತೆ

ನದಿ – ದಡ

ಕಣ್ಣು ಕುಕ್ಕುವ ತೆರದಿ ಹೊಳೆವ ಸೈಕತ ರಾಶಿ
ನಡುವೆ, ಈ ಎರಡೂ ಬದಿಯ
ಮುಟ್ಟಿಯೂ ಮುಟ್ಟದ ಹಾಗೆ
ನಿರಾತಂಕ ಹರಿವ
ಜೀವನದಿ.

ಎಡ ಬಲಗಳ ಈ ದಡಗಳ
ಹುಸಿ ಪ್ರತಿಬಿಂಬ
ನದಿಯಂತರಂಗದಲಿ
ಚೂರೇ ಚೂರು ಅಲ್ಲಾಡುತ್ತ.

ನದಿಯಿಂದಲೇ ಬದುಕು
ಕಟ್ಟಿಕೊಂಡಿರುವೀ ದಡಗಳು
ಬೆಳೆದಂತೆ, ಕೆಲವೊಮ್ಮೆ
ಹಮ್ಮಿನಲಿ ಒತ್ತುವರಿ ಮಾಡುತ್ತಾ
ಮರೆಯಾಗಿಸುತ್ತವೆ ನದಿಯ.

ಸೇಡು ತೀರಿಸಲೆಂದೇ ಆಗೀಗೊಮ್ಮೆ
ನದಿಯೂ ಉಕ್ಕಿ ಹರಿಯುತ್ತ
ಆವರಿಸಿಕೊಳ್ಳುತ್ತದೆ ದಡವೆರಡ
ಹರಿದು ಸಾಗರವಾಗಿ…

ಈಗ ದಡಗಳೇ ಮಾಯ.
ಉಳಿಯುವುದು ಕೇವಲ
ನೀರು,ಮತ್ತು
ಪ್ರತಿಫಲಿಸುವ ಆಕಾಶ.

ಚಲಿಸುತ್ತಲೇ ಇರುವ ನದಿಗೋ ಈಗ
ಹೊಸ ಹೊಸ ಪ್ರದೇಶಗಳ ದರ್ಶಿಸುತ್ತ
ಕಡಲ ಸಂಗಮದಲ್ಲಿ ಮುಕ್ತಿ.

ದಡಗಳಿಗೋ,
ಸ್ಥಗಿತ ಚಿತ್ತ
ಇದ್ದಲ್ಲೇ ಸದಾ ನಿಯುಕ್ತಿ!

About The Author

ಸುಬ್ರಾಯ ಚೊಕ್ಕಾಡಿ

ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯವರು. ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ(ಕವನ ಸಂಕಲನಗಳು) ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು (ವಿಮರ್ಶಾ ಕೃತಿಗಳು)  ಸಂತೆಮನೆ (ಕಾದಂಬರಿ) ಇವಲ್ಲದೇ ಹಲವು ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ