ಕಲ್ಯಾಣ ಕ್ರಾಂತಿಯ ಹಾದಿಯೇನ್ ಇತ್ತಲರೀ ಅದೇನ್ ಸುಲುಭುದ್ ಇದ್ದಿಲ್ಲ. ಜಾತಿಭೇದವನ್ನ ಮೀರಿ ನಡೆದ ಅಂತರ್ಜಾತಿ ವಿವಾಹದ ಘಟನೆಯ ನಂತರ ಶರಣರ ಮೇಲೆ ಹಿಂಸಾಚಾರ ಆಗಿ ಎಲ್ಲ ಕಂಡಲ್ಲಿ ಶರಣರದ್ದು ಕೊಲೆ ನಡಿತು. ಆನಿ ಕಾಲಿಗಿ ಕಟ್ಟಿ ಎಳದು ತೊಲ ಬೆರೆಹಿಮಿದಿಂದ ಹೊಡದುರು ಅಂದ್ರ ದೊಡ್ಡ ಹತ್ಯಾಕಾಂಡನೆ ಆಗಿದ್ದು ನೆನಸ್ಕೊಲಾಕ ನಮಗ ಅಂಜಿಕಿ ಆಯತ್ತಾವ ನೋಡ್ರೀ. ಸತ್ಯ ಅಂಬದ ಹ್ಯಾಂಗ ಉಳಿತದ ಅಂದ್ರ ಎಲ್ಲಾ ಶರಣರು ಯಕಡೆಕಡೋ ಹೋದರೂ ಅವರ ವಿಚಾರಗಳು ಮಾತ್ರ ನಾಶ ಆಗಲಿಲ್ಲ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬೀದರ್ ನೆಲದ ಭಾಷೆ, ಸಂಸ್ಕೃತಿಯ ಕುರಿತು ಜಯಶ್ರೀ ಸುಕಾಲೆ ಬರಹ
ಬೀದರ ನೆಲದ ಭಾಷೆ, ಇತಿಹಾಸ ಮತ್ತು ಸಂಸ್ಕೃತಿಯ ಸೊಗಡು
ಕರ್ನಾಟಕದ ಮುಕುಟ ಅಂತಲೇ ಹೆಸರು ಪಡೆದಂಥ ನಮ್ಮ ಬೀದರ ಜಿಲ್ಯಾದಾಗ, ಕನ್ನಡ ಅಂದ್ರ ಬರೀ ಒಂದು ಭಾಷೆ ಅಲ್ಲರೀ, ಅದು ನಮ್ಮ ಜೀವದ ಉಸಿರು, ನಮ್ಮ ಬದುಕಿನ ಬುನಾದಿ, ನಮ್ಮ ಸಂಸ್ಕೃತಿಯ ಅಸ್ಮಿತೆ ಅಂತನೇ. ತಾಯಿ ಅಕಿಂದ ಕೂಸಿಗಿ (ತನ್ನ ಮಗುವಿಗೆ) ಮೊದಲು ಕಲಿಸೋ ಮಧುರ ಮಾತೇ ಕನ್ನಡ. ಆ ಮಾತಿನಾಗ (ಭಾಷೆ) ನಮ್ಮ ಮಣ್ಣಿನ ಕಂಪದಾ ನೋಡ್ರೀ ಮತ್ತ ನಮ್ಮ ಜನರ ಪ್ರೀತಿನೂ ಅಲ್ಲೆ ಕಾಣುಸ್ತುದ. ನಮ್ಮ ಪೂರ್ವಜರ ಬದುಕಿನ ಇತಿಹಾಸ ಸಹಿತ ಅದರೊಳಗೆ ಅದರಿ. ನಾನು ಬೀದರ ಜಿಲ್ಲೆಯವಳು ಅನ್ನೋ ಹೆಮ್ಮೆ ನನಗಂತೂ ಭಾಳೇ ಅದರೀ. ಯಾಕಂತಂದ್ರ ನಮ್ಮ ಬೀದರ ಬರೀ ಒಂದು ಜಿಲ್ಲೆಯಷ್ಟೇ ಅಲ್ಲ ಅದರೊಳೆಗೆ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಬಸವಾದಿ ಶರಣರ ಚಿಂತನೆ ಮತ್ತು ಸೌಹಾರ್ದತೆಯ ಸಂಗಮ ಭೂಮಿ ಅಂಬುದೆಲ್ಲ ನಮಗ ಖರೇನೇ (ಸತ್ಯ) ಸಿಗ್ತದ ನೋಡರಿ.
ನಮ್ಮ ಬೀದರ ಭಾಷೆ ಅಂದ್ರ ಸ್ವಲ್ಪ ಗಮ್ಮತ್ತು, ಸ್ವಲ್ಪ ಗತ್ತು, ತುಂಬಾ ಆತ್ಮೀಯತೆ! “ಏನ್ರಿ ಹೆಂಗಿದೀರಿ?”, “ಊಟ ಆಯ್ತೇನ್ರಿ?”, “ಎಲ್ಲಿಗ್ ನಡ್ದೀರಿ?” ನಾವಬೀ ಬರಲತಿದೆವು ರೀ ನಿಂದುರೀ, ಮತ್ತ ನಿಮ್ಮ ನೆಂಟ್ರು ಯಾವಾಗ ಹೊಂಟಾರೀ? (ಹೊಂಟಾರ ಅಂದ್ರೆ ಬರ್ತಾ ಇದ್ದಾರೆ) ಮಾತು ಮಾತಿಗೂ ಬೀ ಹಚ್ಚಿ ಮಾತಾಡೋದಂತೂ ನಮ್ಮ ಬೀದರ ಮಂದಿದು ರೂಢಿನೇ ನೋಡ್ರೀ. ಹಿಂಗೆಲ್ಲಾ ನಾವು ಮಾತಾಡಿದರ ಅದರಾಗ ಇರೋ ಪ್ರೀತಿ, ಕಾಳಜಿ, ಆತ್ಮೀಯತೆ ಬೇರೆ ಎಲ್ಲೂ ಸಿಗಂಗಿಲ್ಲ. ನಮ್ಮ ಮಾತಿನ ಶೈಲಿಯೇ ನಮಗ ಒಂದು ಗುರುತ್ ನೋಡ್ರಿ. ಕೆಲವರು ನಮ್ಮ ಆಡುಭಾಷೆ ಕೇಳಿ ನಗಬಹುದು. ಆದರ ನಮ್ಮ ಭಾಷೆಯ ಸೊಗಡನ್ನ ನಾವು ಯಾಕ ಮರೀಬೇಕು? ಅದು ನಮ್ಮ ನೆಲದ ನುಡಿ, ನಮ್ಮ ಅಸ್ಮಿತೆ ಅಂಬುದ ಅಲ್ವೇನ್ರಿ!
ನಮ್ಮ ಬೀದರ ಜಿಲ್ಲೆಯ ಒಂದು ವಿಶೇಷ ಅಂದ್ರ, ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿ ಹೊಂದಿರೋ ಪ್ರದೇಶ ಇದು. ಈ ರಾಜ್ಯಗಳ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಪ್ರಭಾವ ನಮ್ಮ ಜಿಲ್ಲೆಯ ಜನರ ಬದುಕಿನ ಮ್ಯಾಲೆ ಬಿದ್ದ ಬಿಟ್ಟುದ. ಕನ್ನಡ, ಮರಾಠಿ, ತೆಲುಗು, ಉರ್ದು ಭಾಷೆಗಳ ಸೊಗಡು ಇಲ್ಲಿ ಕೇಳಾಕ ಸಿಗತುದ. ಆಜು, ಬಾಜು, ಹಿಂದ, ಮುಂದ ಎಲ್ಲ ಬ್ಯಾರೆ ಬ್ಯಾರೆ ಭಾಷೆ ಮಾತಾಡೋ ಜನರು ಒಂದೇ ನೆಲದ ಮ್ಯಾಲ ಒಂದೆ ಊರಾಗ ಇದ್ದುರಾ ಮತ್ತ ಪ್ರೀತಿ, ವಿಶ್ವಾಸದಿಂದ ಬದುಕೋತ ಇರೋದೆ ಎಟ್ ಛಂದ ಅನುಸ್ತುದಲ್ಲ. ಅದ ಮತ್ತ ನಮ್ಮ ಬೀದರಿನ ವಿಶೇಷತೆ ಹೌದಲ್ಲ. ಭಾಷೆಗಳು ಎಷ್ಟಾರಾ ಬ್ಯಾರೆ ಇರಲಿ ಅದರೊಳಗೆನ್ ಅದಾಅಲ್ಲ ಭಾವ ಅಂಬೊದೊಂದು ಅದಂತೂ ಒಂದೇ ಅನ್ನೋದನ್ನ ನಮ್ಮ ಜನ ಪಕ್ಕಾ ತೋರಿಸಿಕೊಡತಾರ.
ನಮ್ಮ ಬೀದರ ನೆಲದ ಸಾಹಿತ್ಯಿಕ ಹಿರಿಮೆಯ ಬಗ್ಗೆ ಹೇಳಬೇಕಂದ್ರ, ಮೊದಲು ನೆನಪಾಗೋದು ಹನ್ನೆರಡನೇ ಶತಮಾನದ ಬಸವಾದಿ ಶರಣುರೀ. ಅಲ್ಲಿ ನಡೆದಿದ್ದು ಕಲ್ಯಾಣ ಕ್ರಾಂತಿ. ಇವತ್ತಿನ ಬಸವಕಲ್ಯಾಣ ಅಂಬೋದು ಅಗೋತ್ತಿಂದ ಕಲ್ಯಾಣ ನಗರ ಅಂತ ಇತ್ತು. ಅದು ಬಸವಣ್ಣೋರು ಬಂದ ಹೋದ ಮ್ಯಾಲ ಬಸವಕಲ್ಯಾಣ ಅಂಬ ಹೆಸರ್ ಬಿತ್ತು.
ಆ ಕಲ್ಯಾಣನಗರದ ಪುಣ್ಯಭೂಮಿಯೊಳಗ ಗುರು ಬಸವಣ್ಣನವರು, ಅಲ್ಲಮಪ್ರಭುದೇವರು, ಅಕ್ಕಮಹಾದೇವಿ ತಾಯಿಯವರು, ಚನ್ನಬಸವಣ್ಣನವರು, ಸಿದ್ಧರಾಮೇಶ್ವರರು ಮತ್ತೆ ಹಿಂಗೆ ಎಲ್ಲೇಲ್ಲಂದೆಲ್ಲ ನೂರಾರು ಮಂದಿ ಶರಣರು ಸೇರಿ ವಚನ ಸಾಹಿತ್ಯದ ಮೂಲಕ ಹೊಸದೊಂದು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ರಂತ ಅಪ್ಪ ಬಸವಣ್ಣನವರು.
ಅನುಭವಮಂಟಪ ಅಂಬದೊಂದು ಕಟ್ಟಿ ಅದರ ಮೂಲಕ ಎಲ್ಲ ಜಾತಿ, ವರ್ಗ, ಲಿಂಗದ ಜನರಿಗೆ ತಮ್ಮ ವಿಚಾರ ಹೇಳೋ ಅವಕಾಶ ಕಲ್ಪಿಸಿದ್ರು. ಅಲ್ಲಿ ಬರೀ ಧರ್ಮದ ಚರ್ಚೆ ಅಟೇ ನಡೀತಿದ್ದಿಲ್ಲ ಅಲ್ಲಿ ನಡೆದು ನೋಡುರ ನಮಗ್ ಹುಚ್ ಹುಚ್ ಹಿಡ್ಯಾಂಗ ಇತ್ತಂತ ನೋಡ್ರೀ ಯಾಕಂದುರ ಅವರುದ ವಚನಗೊಳ ಅವಾಅಲ್ಲರೀ ಅವು ಓದಾಗ ನಮಗ ಹುಚ್ಚ್ (ಆಶ್ಚರ್ಯ) ಆಯ್ತುದ್ ಜೀವಕ್ಕ ಯಾಕಂದುರ ಬಸವಣ್ಣಪ್ಪೋರು ಎಂಥ ದೇವ್ರರೀ ಅವರ ಕೊಟ್ಟದ್ದ್ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸ್ತ್ರೀ ಸ್ವಾತಂತ್ರ್ಯ, ಜಾತಿಭೇದ ನಿರ್ಮೂಲನೆ ಇವೆಲ್ಲಾ ಏನ್ ಸುಮ್ಮನೆಯೇನ್ ಅವತ್ತ ಅವರ ಅಷ್ಟ ಕಷ್ಟ ಪಟ್ಟಾರಂತೆ ನಮ್ಮುಗ ಇವತ್ತು ಮಾತ ಹೊಂಟಾವರೀ ಇಲ್ಲಾ ನಾಲಿಗಿ ಸತ್ತ ನಾಯಿಂಗ ಬೀಳಬೇಕಾಯಿತ್ತರಿ ನಾವು. ಮತ್ತ ಅನುಭವ ಮಂಟಪದೊಳಗ್ ಇವೆಲ್ಲದುರ ವಿಷಯಗಳ ಹಿಡಕ್ಕೊಂಡು ಅವೆಲ್ಲದುರ ಬಗ್ಗೆ ಚಿಂತನೆ ಮಾಡ್ತಾನೆ ಇರ್ತೀರಂತ.
ಮತ್ತ “ಕಾಯಕವೇ ಕೈಲಾಸ” ಅಂತ ಹೇಳಿದ ಬಸವಣ್ಣನವರು ದುಡಿಮೆಗೆ ಗೌರವ ಕೊಟ್ರು. “ದಯವೇ ಧರ್ಮದ ಮೂಲವಯ್ಯ” ಅನ್ನೋ ಶರಣರ ವಿಚಾರ ಮನುಷ್ಯತ್ವದ ದಾರಿಯನ್ನ ತೋರಿಸಿತು. ಅಕ್ಕಮಹಾದೇವಿಯವರ ವಚನಗಳು ಮಹಿಳೆಯ ಆತ್ಮಗೌರವ ಮತ್ತು ಸ್ವತಂತ್ರ ಚಿಂತನೆಗೆ ಸಾಕ್ಷಿಯಾದವು. ಆ ಕಾಲದ ವಚನಕಾರರು ಅರಮನೆಯ ಭಾಷೆಯ ಬದಲು ಜನಸಾಮಾನ್ಯರ ಆಡುಮಾತಿನಲ್ಲೇ ವಚನಗಳನ್ನ ಬರದ್ರು. ಅದಕ್ಕೇ ಆ ವಚನಗಳು ಇವತ್ತಿಗೂ ನಮ್ಮ ಮನಸ್ಸಿಗೆ ಹತ್ತಿರ ಆಗಿ ಬಿಟ್ಟವ. ಕನ್ನಡ ಭಾಷೆಯ ಶಕ್ತಿ ಮತ್ತು ಸರಳತೆಯನ್ನ ಜಗತ್ತಿಗೆ ಪರಿಚಯಿಸಿದಂಥವು. ಎಲ್ಲಕ್ಕಿಂಥ ದೊಡ್ಡ ಆಸ್ತಿ ಅಂಬದ್ ಏನಾರಾ ಇದ್ರ ಅದು ಬಸವಾದಿ ಶರಣ್ರು ಕೊಂಟಿಂದ ವಚನಗೋಳ ಅಂತ ಹೇಳ್ಯಾಕ ನನಂತೂ ಭಾಳ ಅಂದ್ರ ಭಾಳ ಖೂಷಿ ಆಯಿತುದ್ ನೋಡ್ರಿ, ನಮ್ಮಷ್ಟು ದೊಡ್ಡ ಸಾವುಕಾರ ಯಾರೆ ಇಲ್ಲ ಅನುಸ್ತುದ. ಆದುರ್ ನಮ್ಮಗ ಅದರ ಅರ್ಥ ಆಗಲತೀಲ್ಲ ಅಲ್ಲಾ ಅದಕ ನೋವು ಬೀ ಆಗಲತುದ. ಆದರುಬೀ ನಾವು ಕೋಷಿಷ್ (ಪ್ರಯತ್ನ) ಮಾಡಲತೀದೇವುರೀ. ವಚನಗೋಳ್ ಅರ್ಥ ಮಾಡಕೊಂಡ ಅವು ಹೇಳೀದಂಗ ಬದುಕಬೇಕಂತ.

ಕನ್ನಡ ಅಂದ್ರ ನಮ್ಮ ಜೀವದ ಭಾಷೆ, ನಮ್ಮ ಉಸಿರಿನ ಭಾಷೆ. ಈ ಭಾಷೆ ಅಂದ್ರ ಬರೀ ಮಾತಾಡೋ ಭಾಷೆ ಅಲ್ಲರೀ, ಇದು ನಮ್ಮ ಬದುಕಿನ ಬಂಡಿ, ನಮ್ಮ ಸಂಸ್ಕೃತಿಯ ಕನ್ನಡಿ, ನಮ್ಮ ತಾಯಿಯ ಮಮತೆಯ ಮಾತು. ನಾವು ಬೀದರ ಮಂದಿ ಮಾತಾಡೋ ಕನ್ನಡಕ್ಕ ಒಂದು ವಿಶೇಷ ಆಗಿದ ಚೆಲುವಿಕಿನೇ ಅದರೀ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದಿಂದ ಗೊತ್ತೇ ಅದಲ್ಲರೀ. ದೊಡದೊಡ ರಾಜಂದ ಆಸ್ಥಾನದಾಗ ಇದ್ದಿನಂತ ಕವಿಗಳು ಅಂದ್ರುರ ಪಂಪ, ರನ್ನ, ಇವರೆಲ್ಲ ಕನ್ನಡದಾಗೆ ಕಾವ್ಯಗಳೆಲ್ಲ ಬರದು ಮತ್ತ ಬಸವಣ್ಣನವರು ಅಕ್ಕಮಹಾದೇವಿಯವರು, ಅಲ್ಲಮಪ್ರಭುಗಳು ಇಂಥ ಮಹನೀಯರು ಕನ್ನಡದಾಗೆ ತಮ್ಮ ವಚನಗಳನ್ನೆಲ್ಲ ಬರೆದು ಇಡೀ ಕರ್ನಾಟಕದಲ್ಲೇ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರ ಅಂತ ಹೆಮ್ಮೆದಿಂದ ಹೇಳಬಹುದು. ಬಸವಣ್ಣನವರ ವಚನಗಳಲ್ಲಿನ ಸಮಾನತೆ, ಕಾಯಕ, ದಾಸೋಹದ ಸಂದೇಶ ಇವತ್ತಿಗೂ ನಮಗ ದಾರಿ ತೋರಸಲತಾವ.
ಅವರ ಸಾಹಿತ್ಯವನ್ನ ಓದೋದು, ಮುಂದಿನ ಪೀಳಿಗೆಗೆ ಪರಿಚಯಿಸೋದು ನಮ್ಮೆಲ್ಲರ ಜವಾಬ್ದಾರಿ. ಇವತ್ತಿನ ಕಾಲದಾಗ ಇಂಗ್ಲಿಷ್ ಕಲಿಯೋದು ಬೇಕಾಯಿತುದ. ಬ್ಯಾರೆ ಭಾಷೆ ಕಲಿಯೋದು ಕೂಡ ಏನ್ ತಪ್ಪಲ್ಲ. ಆದರ ನಮ್ಮ ತಾಯಿ ಭಾಷೆಯನ್ನ ಮರೆಯೋದು ಮಾತ್ರ ಛೋಲೋಕಾಣ್ಸಲ್ಲದ ನಮಗ. ನಮ್ಮ ಮಕ್ಕಳಿಗೆ ಕನ್ನಡ ಮಾತಾಡೋಕೆ ಕಲಿಸಬೇಕು, ಕನ್ನಡ ಪುಸ್ತಕ ಓದೋ ಅಭ್ಯಾಸ ಬೆಳೆಸಬೇಕು, ಕನ್ನಡದ ಇತಿಹಾಸ ಮತ್ತು ವಚನ ಸಾಹಿತ್ಯದ ಪರಿಚಯ ಮಾಡಿಸಬೇಕು. ನಮ್ಮ ಭಾಷೆ ಉಳಿಬೇಕಂದ್ರ ನಾವು ಮೊದಲು ಕನ್ನಡ ಮಾತಾಡಬೇಕು, ಕನ್ನಡ ಓದಬೇಕು, ಕನ್ನಡ ಬರೀಬೇಕು. ಮಕ್ಕಳಿಗೆ ಕನ್ನಡದ ಸಂಸ್ಕಾರ ಕೊಡಬೇಕು. ಬೇರೆ ಭಾಷೆ ಎಟಾರಾ ಕಲ್ಯಾಲರ್ಯಾಕ ಆದರ ನಮ್ಮ ತಾಯಿ ಭಾಷೆ ಮರೆಯೋದು ಮಾತ್ರ ಸರಿಯಲ್ಲ. ಬೇರೆ ಭಾಷೆ ಕಲಿಯೋಣ, ಆದರ ಕನ್ನಡದ ಬೇರ ಏನ್ ಆದಲ್ಲ ಅದಕ್ಕ ಮಜಬುತ್ ( ಗಟ್ಟಿಯಾಗಿ ಹಿಡಿಯೋಣ) ಹಿಡಕೊಂಡ ನಡೀಬೇಕ ನೋಡ್ರಪ್ಪ.
ಇಷ್ಟೇ ಅಲ್ಲ, ನಮ್ಮ ಬೀದರ ಐತಿಹಾಸಿಕವಾಗಿಯೂ ತೊಲ(ಬಹಳ) ಪ್ರಸಿದ್ಧಿ ಪಡೆದ್ದಿದರಿ. ಎಲ್ಲ ಇತಿಹಾಸ ಓದಿದವರಿಗ ಗೋತ್ತಿರುತುದ, ಐದುನೂರು ವರ್ಷಗಳಿಗೂ ಮೀರಿಂದ ನಮ್ಮ್ ಇತಿಹಾಸ ಹೊಂದಿರೋ ಬೀದರ ಕ್ವಾಟಿ (ಕೋಟೆ) ನಮ್ಮ ಗತವೈಭವದ ಸಾಕ್ಷಿಯಾಗಿ ನಿಂತುದ. ಇನಾನು ನೋಡಲಾಕ ಸಿಗುತುದರಿ. ಬಹಮನಿ ಸುಲ್ತಾನರ ಕಾಲದಾಗ ನಮ್ಮ ಬೀದರು ರಾಜಧಾನಿಯಾಗಿ ದುನೇದ್ ಮೆರೆದಿಂದ ಅದರೇನು ಏನ್ ಕೇಳ್ತೀರಿ ಕತಿ. ಖಿಲದೊಳಗ ಹೋದುರಾ ಎಟೊಂದ ನೋಡಲಾಕ ಅದ, ಕೋಟೆ, ರಂಗೀನ್ ಮಹಲ್, ಗಗನ್ ಮಹಲ್, ಒಂದಾ ಎರಡಾ ದುನೇದ್ ಅವಾ ನೋಡ್ತಾ ಹೋದುರ್ ದಿನ ಸಾಕಾಗಲ್ಲ. ಖೀಲಾ ಬಿಟ್ಟು ಹೊರಗ ಬಂದುರ್ ಕಾಂಜಿನ್ ಖಂಬಾ, (ಮಹಮದ್ ಗವಾನ್ ಮದರಸಾ,) ಚೌಬಾರಾ ಇವೆಲ್ಲವೂ ನಮ್ಮ ಜಿಲ್ಲೆಯ ಐತಿಹಾಸಿಕ ಸಂಪತ್ತು ಅಂತಲೇ ಹೇಳಬಹುದು.
ನಮ್ಮ ನಾಡಿನ ಇತಿಹಾಸದಾಗ ಅಂದ್ರ ೧೪೩೬ ರಿಂದ ೧೫೩೫ರ ಕಾಲದಾಗ ಕಟ್ಟಿಂದು ಚೌಖಂಡಿ, ಬಹಮನಿ, ಬರೀದ್ ಶಾಹಿ, ಮೊಘಲರು ಮತ್ತು ನಿಜಾಮರ ಕಾಲದ ಆಡಳಿತದ ಗುರುತುಗಳು ನೋಡಲಾಕ ಸಿಗತಾವ. ಇನ್ನ ಮತ್ತ ನಾನಕ್ ಝೀರಾ ಗುರುದ್ವಾರ ಅದ, ನರಸಿಂಹ ಝರಣಿ ನರಸಿಂಹ ದೇವ್ರಿಗ ನೋಡಲಾಕ ಭುಂಯ್ಯಾರದಾಗ (ಗುಹೆ) ನೀರಾಗ ಹೋಗಬೇಕು. ಪಾಪನಾಶ ದೇವ್ರ ಗುಡಿದೊಳಗ ಶಿವಲಿಂಗ ಅದರೀ ಹೀಂಗೆ ಹೇಳಕೋತ ಹೋದು ತೊಲ ಆಯಿತಾವ ಅದಕ್ಕ ಹೇಳ್ತೀನಿ, ದುನೇದ್ (ಮುಂತಾದ) ಧಾರ್ಮಿಕ ಸ್ಥಳಗಳು ನಮ್ಮ ಜಿಲ್ಯಾದಾಗ ಸೌಹಾರ್ದ ಪರಂಪರೆಯನ್ನ ಸಾರತಾವೆ. ಇಂಥ ಇತಿಹಾಸ, ಇಂಥ ಸಾಹಿತ್ಯ, ಇಂಥ ಸಂಸ್ಕೃತಿ ಇರೋ ನಮ್ಮ ಬೀದರ ಜಿಲ್ಲೆ ಕನ್ನಡ ನಾಡಿನ ಹೆಮ್ಮೆಯ ಭಾಗ ಅಂತ ಹೇಳಾಕ ಪಸಂದ (ಇಷ್ಟ) ಅನುಸ್ತದರಿ.
ನಮ್ಮ ಬೀದರ ಸೀಮೆಯ ಕನ್ನಡದ ಸೊಗಡನ್ನೂ ಉಳಿಸೋಣ. ನಮ್ಮ ಅಜ್ಜಿ, ತಾತಂದಿರು ಮಾತಾಡಿದ ಭಾಷೆ, ನಮ್ಮ ಜನಪದ ಹಾಡುಗಳು, ಗಾದೆಗಳು, ಒಗಟುಗಳು, ಹಳ್ಳಿಯ ಸೊಗಡಿನ ಮಾತುಗಳು ಮುಂದಿನ ಪೀಳಿಗೆಗೂ ತಲುಪಿಸೋಣ. ನನ್ನ ಮಾತಿನಾಗ ಕನ್ನಡ ಇರಲಿ, ನನ್ನ ಮನಸ್ಸಿನಾಗ ಕನ್ನಡದ ಅಭಿಮಾನ ಇರಲಿ, ನನ್ನ ಬರವಣಿಗೆಯೊಳಗ ಕನ್ನಡದ ಕಂಪು ಹರಡಲಿ. ನಾನು ಎಲ್ಲೇ ಹೋದ್ರೂ ಕನ್ನಡದವಳು ಅನ್ನೋ ಹೆಮ್ಮೆ ನನ್ನ ಜೊತಿಗಿರಲಿ.
ಆದರೆ ಕಲ್ಯಾಣ ಕ್ರಾಂತಿಯ ಹಾದಿಯೇನ್ ಇತ್ತಲರೀ ಅದೇನ್ ಸುಲುಭುದ್ ಇದ್ದಿಲ್ಲ. ಜಾತಿಭೇದವನ್ನ ಮೀರಿ ನಡೆದ ಅಂತರ್ಜಾತಿ ವಿವಾಹದ ಘಟನೆಯ ನಂತರ ಶರಣರ ಮೇಲೆ ಹಿಂಸಾಚಾರ ಆಗಿ ಎಲ್ಲ ಕಂಡಲ್ಲಿ ಶರಣರದ್ದು ಕೊಲೆ ನಡಿತು. ಆನಿ ಕಾಲಿಗಿ ಕಟ್ಟಿ ಎಳದು ತೊಲ ಬೆರೆಹಿಮಿದಿಂದ ಹೊಡದುರು ಅಂದ್ರ ದೊಡ್ಡ ಹತ್ಯಾಕಾಂಡನೆ ಆಗಿದ್ದು ನೆನಸ್ಕೊಲಾಕ ನಮಗ ಅಂಜಿಕಿ ಆಯತ್ತಾವ ನೋಡ್ರೀ. ಸತ್ಯ ಅಂಬದ ಹ್ಯಾಂಗ ಉಳಿತದ ಅಂದ್ರ ಎಲ್ಲಾ ಶರಣರು ಯಕಡೆಕಡೋ ಹೋದರೂ ಅವರ ವಿಚಾರಗಳು ಮಾತ್ರ ನಾಶ ಆಗಲಿಲ್ಲ. ವಚನಗಳ ರೂಪದಾಗ ಇವತ್ತಿಗೂ ನಮ್ಮ ನಡುವ ಜೀವಂತವಾಗಿ ನಮ್ಮ ಕೈ ಹಿಡದ್ ಛಂದ ಬದುಕಲಾಕ ಕಲಸಲತಾವ. ಇಂಥ ಇತಿಹಾಸದ ಇದ್ದಂತ ನೆಲದ ಮ್ಯಾಲ ನಾ ಹುಟ್ಟಿನ್ ಅಂದ್ರ ಎಟ್ ದೈವದಕಿ ಇದ್ದಿರಬೇಕ್ ಅಂತ ನಂದ ನನಗೆ ಧನ್ಯ ಧನ್ಯ ಅನುಸ್ತದರೀ. ಐ, ನಾನೇನಾರ ಪುಣ್ಯಮಾಡಿನೋ ಏನೋ ಅದಕೆ ಇಂಥ ನಾಡಿನಾಗ ಹುಟ್ಟಸ್ಯಾನ ದೇವ್ರು ಅನ್ನೋದು ನನಗ ಅತ್ಯಂತ ಹೆಮ್ಮೆಯ ಸಂಗತಿ ಅದರೀ.
ನಮ್ಮ ಬೀದರ ಭಾಷೆಯನ್ನ ಹೀಯಾಳಿಸಬೇಡಿ. ಅದನ್ನ ಪ್ರೀತಿಯಿಂದ ಉಳಿಸಿಕೊಳ್ಳಿ. ಯಾಕಂದ್ರ ಭಾಷೆಯ ಸೊಗಡು ಉಳಿದರ ಸಂಸ್ಕೃತಿ ಉಳೀತುದ; ಸಂಸ್ಕೃತಿ ಉಳುದರ ನಮ್ಮ ಅಸ್ಮಿತೆ ಉಳೀದುತ. ಕೊನೆಗೆ ಒಂದ ಮಾತು ಹೇಳ್ತೀನಿ ಕೇಳ್ರಿ. ನನ್ನ ತಾಯಿನುಡಿ ಕನ್ನಡ, ನನ್ನ ನೆಲ ಬೀದರ, ನನ್ನ ಹೆಮ್ಮೆ ಅಪ್ಪ ಬಸವಣ್ಣನವರ ಬಸವಕಲ್ಯಾಣ, ನನ್ನ ಆಸ್ತಿ ಶರಣರ ವಚನ ಸಾಹಿತ್ಯ. ನಾನು ಎಲ್ಲೇ ಇರಲಿ, ಯಾವ ಭಾಷೆ ಮಾತಾಡಲಿ, ನನ್ನ ಕನ್ನಡದ ಅಭಿಮಾನ ಮಾತ್ರ ನನ್ನ ಹೃದಯದಾಗ ಸದಾ ಜೀವಂತವಾಗಿ ಇರುತ್ತದ ಅಂತ ಹೇಳ್ತೀನಿ.

ಎದೆತಟ್ಟಿ ಹೇಳೋಣ, ಕನ್ನಡ ನಮ್ಮ ತಾಯಿ, ಕನ್ನಡ ನಮ್ಮ ಉಸಿರು, ಕನ್ನಡ ನಮ್ಮ ಬದುಕು.
ನನ್ನ ಕನ್ನಡ, ನನ್ನ ಹೆಮ್ಮೆ! ನಮ್ಮ ಬೀದರ ಭಾಷೆ, ನಮ್ಮ ಗತ್ತು! ಕನ್ನಡ ಮಾತಾಡೋದು ನಮ್ಮ ಹಕ್ಕು, ಕನ್ನಡ ಉಳಿಸೋದು ನಮ್ಮ ಕರ್ತವ್ಯ! ನಮ್ಮ ಬಸವಕಲ್ಯಾಣ ಶರಣರ ನೆಲೆ, ನಮ್ಮ ವಚನ ಸಾಹಿತ್ಯ ಜಗದ ಬೆಳಕು! ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ, ನಮ್ಮ ಬೀದರಿನ ಭಾಷಾ ಸೊಗಡನ್ನ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡೋಣ.
ಜೈ ಕನ್ನಡಾಂಬೆ! ಜೈ ಬೀದರ!

ಜಯಶ್ರೀ ಸುಕಾಲೆ ಬೀದರ್ನವರು. “ಜಯ ಬಸವ ಭಾರತಿ ” ಎಂಬ ಪ್ರಕಾಶನ ಹುಟ್ಟು ಹಾಕಿ ಈಗಾಗಲೇ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಮಾತೃ ಹೃದಯಿ ಡಾ. ಬಸವಲಿಂಗ ಪಟ್ಟದ್ದೇವರು. ಇಷ್ಟಲಿಂಗನಿಷ್ಠ ಅಮುಗಿದೇವಯ್ಯ. ಶಿವಜ್ಞಾನಿ ಶರಣ ಸೊಡ್ಡಳ ಬಾಚರಸರು. ವೀರಶರಣೆ ಗುಡ್ಡಾಪುರ ದಾನಮ್ಮ. ಭವರಹಿತ ಧೂಪದ ಗೊಗ್ಗವ್ವೆ. ಶರಣ ಸೌರಭ, ಶರಣು ಶರಣಾರ್ಥಿ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿ (ಕಿರುಚಿತ್ರ ಸಾಹಿತ್ಯ). ಮಹಾಮಹಿಮ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳು (ಸಾಕ್ಷ್ಯಚಿತ್ರ). ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.

