ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ. ಸ್ತ್ರೀವಾದದ ಕುರಿತು ಬರೆದಿದ್ದಾರೆ. ನಾಗರಹೊಳೆ ಬುಡಕಟ್ಟು ಜನರ ಪುನರ್ವಸತಿ ಕುರಿತು ಸಮಿತಿಯ ಮುಖ್ಯಸ್ಥರಾಗಿ ವರದಿ ಒಪ್ಪಿಸಿದ್ದಾರೆ. ಕರ್ನಾಟಕ ರೈತ ಚಳವಳಿ ಕುರಿತೂ ಬರೆದಿದ್ದಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 93ನೇ ಕಂತು ನಿಮ್ಮ ಓದಿಗೆ
ಪ್ರೊ. ಮುಜಫ್ಫರ್ ಅಸ್ಸಾದಿ ಅವರು 04.01.2025ರಂದು ನಮ್ಮನ್ನಗಲಿದರು. ವಿದ್ವತ್ ಲೋಕಕ್ಕೆ ಮತ್ತು ತುಳಿತಕ್ಕೊಳಗಾದ ಜನರಿಗೆ ಈ ಅಗಲಿಕೆ ಹೆಚ್ಚಿನ ಆಘಾತವನ್ನುಂಟು ಮಾಡಿದೆ.
ಪ್ರೊ. ಮುಜಫ್ಫರ್ ಅಸ್ಸಾದಿ ಅವರ ಸ್ವ ವಿವರದ ಮೇಲೆ ಕಣ್ಣಾಡಿಸಿದಾಗ, ಒಬ್ಬ ಮನುಷ್ಯ ತನ್ನ ಸೇವಾವಧಿಯಲ್ಲಿ ಇಷ್ಟೆಲ್ಲ ಸಾಧಿಸಲು ಸಾಧ್ಯವೆ? ಎಂಬ ಪ್ರಶ್ನೆ ಮೂಡದೆ ಇರದು. ನಾನು ವಯಸ್ಸಿನಲ್ಲಿ ಅಸ್ಸಾದಿ ಅವರಿಗಿಂತ ಹತ್ತು ವರ್ಷ ಹಿರಿಯ. ಆದರೆ ನನ್ನ ವಾರಿಗೆಯ ಗೆಳೆಯರಲ್ಲಿ ಅಸ್ಸಾದಿ ಅವರಷ್ಟು ಸಾಧನೆ ಮಾಡಿದ ಇನ್ನೊಬ್ಬರನ್ನು ಕಾಣೆ.
ನನ್ನ ದೃಷ್ಟಿಯಲ್ಲಿ ಇವರೊಬ್ಬರು ಸೌಮ್ಯ ಸ್ವಭಾವದ ಜ್ಞಾನ ತಪಸ್ವಿ ಆಗಿದ್ದರು. ಬಹುಶಿಸ್ತೀಯ ಅಧ್ಯಯನಗಳ ಪ್ರತಿಭಾವಂತ. ಜಾತ್ಯತೀತ ಚಿಂತನೆಯ ಜೊತೆಗೇ ಅಲ್ಪಸಂಖ್ಯಾತರ, ಅಸಹಾಯಕ ಸ್ಥಿತಿಗೆ ಕಾರಣಗಳನ್ನು ನಿಖರವಾಗಿ ದಾಖಲಿಸಿದ ಚಿಂತಕರಾಗಿದ್ದರು.
ಮುಜಫ್ಫರ್ ಅಸಾದಿ ಅವರ “ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ” ಕೃತಿಯಲ್ಲಿ “ಜಗತ್ತಿನ ಮುಸ್ಲಿಮರೆಲ್ಲ ಒಂದೇ” ಎಂಬ ಮಿಥ್ ಅನ್ನು ಅಲ್ಲಗಳೆದಿದ್ದಾರೆ. ಈ ಸತ್ಯವನ್ನು ಸೋದಾಹರಣವಾಗಿ ಎತ್ತಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಸತ್ಯವನ್ನು ಮುಸ್ಲಿಮರು ಸ್ವಾತಂತ್ರ್ಯ ಬಂದಕೂಡಲೆ ಅರ್ಥ ಮಾಡಿಕೊಂಡಿದ್ದರೆ ಮುಸ್ಲಿಮರ ಸ್ಥಿತಿಯಲ್ಲಿ ಭಾರಿ ಗುಣಾತ್ಮಕ ಬದಲಾವಣೆ ಕಂಡುಬರುತ್ತಿತ್ತು.
ಭಾರತದ ಬಹುಪಾಲು ಮುಸ್ಲಿಮರ ಪೂರ್ವಜರು ದೇಶದ ಮೂಲನಿವಾಸಿಗಳಾಗಿದ್ದಾರೆ. ಈ ಮೂಲನಿವಾಸಿಗಳ ರೀತಿನೀತಿಗಳು ಒಂದೇ ಆಗಿರಲು ಸಾಧ್ಯವಿಲ್ಲ. ಅವರೆಲ್ಲ ತಂತಮ್ಮ ಪ್ರದೇಶ, ಭಾಷೆ, ವಿವಿಧ ಆಹಾರ ಪದ್ಧತಿ, ಉಡುಗೆ ತೊಡುಗೆ, ಭಾಷೆ, ಬಣ್ಣ ನಡಾವಳಿ, ಪೂರ್ವಜರ ಸಂಪ್ರದಾಯ, ಪರಂಪರೆ, ಇತಿಹಾಸ ಮುಂತಾದವುಗಳಿಂದ ಪ್ರಭಾವಿತರಾಗಿರುತ್ತಾರೆ. ಜೊತೆಯಲ್ಲಿ ಬಡವ ಶ್ರೀಮಂತ ವರ್ಗಗಳು ಬೇರೆ.
ಇಷ್ಟೆಲ್ಲ ವೈವಿಧ್ಯಮಯವಾದ ಮೂಲನಿವಾಸಿಗಳು ಇಸ್ಲಾಂ ಧರ್ಮ ಸ್ವೀಕಾರ ಮಾಡಿದ ಮೇಲೆ ಒಂದಾಗಿ ಬಿಡುತ್ತಾರೆಯೆ? ಅವರು ತಮ್ಮ ಪೂರ್ವಿಕರ ಅನೇಕ ನಡಾವಳಿ ಜೊತೆಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುತ್ತಾರೆ. ಈ ಮಿಥ್ ಅನ್ನು ಸೈದ್ಧಾಂತಿಕವಾಗಿ ದಾಖಲಿಸಿದವರೇ ಮುಜಫ್ಫರ್ ಅಸ್ಸಾದಿ.
ಕರ್ನಾಟಕದಲ್ಲೇ ಅನೇಕ ವಿಧವಾದ ಮುಸ್ಲಿಮರಿದ್ದಾರೆ. ಪ್ರಾದೇಶಿಕವಾಗಿ ಹೇಳುವುದಾದರೆ, ಭಟ್ಕಳ ನವಾಯತ ಮುಸ್ಲಿಮರ ಜೀವನವಿಧಾನವೇ ಬೇರೆಯಾಗಿದೆ. ಅವರಿಗೆ ಅವರದೇ ಆದ ನವಾಯತಿ ಭಾಷೆ ಇದೆ. ಅದು ಅರೆಬಿಕ್ ಮತ್ತು ಸ್ಥಳೀಯ ಕೊಂಕಣಿ ಮುಂತಾದ ಭಾಷೆಗಳ ಮಿಶ್ರಣವಾಗಿದೆ. ಬಿಳಿ ಬಣ್ಣದ ಅವರು ಕಪ್ಪು ಮುಸ್ಲಿಮರನ್ನು “ಕಾಲೇ ಪಾಂವ್” ಎಂದು ಕರೆಯುತ್ತಾರೆ. ಅವರ ಕುಟುಂಬ ಪದ್ಧತಿ “ಅಳಿಯ ಕಟ್ಟು” ವ್ಯವಸ್ಥೆಯನ್ನು ಹೋಲುತ್ತದೆ. ನವಾಯತರು ತಮ್ಮ ಸಮುದಾಯದ ಮಧ್ಯೆಯೆ ರಕ್ತಸಂಬಂಧವನ್ನು ಬೆಳೆಸುತ್ತಾರೆ.

ಮಂಗಳೂರು ಮುಸ್ಲಿಮರು ಮೂಲ ಇಸ್ಲಾಮಿನ ನಡಾವಳಿಯ ಕಡೆಗೇ ಹೆಚ್ಚು ಗಮನ ಹರಿಸುತ್ತಾರೆ. ನನ್ನಂಥವರು ಉತ್ತರ ಕರ್ನಾಟಕದ ಹಳ್ಳಿಗಾಡಿನ ಮುಸ್ಲಿಮರು. “ಖಾದರಲಿಂಗನಿಗೆ ಸಾವಿರ ಸಲಾಂ” ಎನ್ನುವವರು. ನಮಗೆ ರಂಜಾನ್, ದೀಪಾವಳಿ, ದಸರಾ ಎಲ್ಲ ಅಷ್ಟೇ. ಮೋಹರಂ ನಮಗೆ ಬರಿ ದುಃಖದ ದಿನವಲ್ಲ; ಎಲ್ಲ ಧರ್ಮಗಳವರು ಒಂದಾಗಿ ಮಾನವ ಏಕತೆಯನ್ನು ಆನಂದಿಸುವ ಸಂದರ್ಭವಾಗಿದೆ. ಕರ್ಬಲಾ ಯುದ್ಧದಲ್ಲಿ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿ ಹುತಾತ್ಮರಾದ ಪೈಗಂಬರರ ಮೊಮ್ಮಗ ಹುಸೇನ್ ಮತ್ತಿತರ ನೆನಪಿಗಾಗಿ ಆಚರಿಸುವ ದುಃಖದ ದಿನಗಳವು. ಕೊನೆಯದಿನ ದೇವರುಗಳೆಂದು ಸ್ಥಳೀಯರಿಂದ ಕರೆಯಿಸಿಕೊಳ್ಳುವ ಪಂಜಾಗಳನ್ನು ಹೊಳೆಗೆ ಒಯ್ದು ಮರಳಿ ಬರುವಾಗ, ಅಂದರೆ ‘ಅಂತ್ಯಕ್ರಿಯೆ’ಯ ಸಂಪ್ರದಾಯ ಮುಗಿಸಿ ವಾಪಸಾಗುವಾಗ ಎಲ್ಲ ಜಾತಿ ಜನಾಂಗಗಳ ಜನರು ದುಃಖಭರಿತ ಹಾಡುಗಳನ್ನು ಹಾಡುತ್ತ ಕಣ್ಣಲ್ಲಿ ನೀರು ತುಂಬಿಕೊಂಡಿರುತ್ತಾರೆ. ಗ್ರಾಂಥಿಕ ಇಸ್ಲಾಮಿಗಳಿಗೆ ಇವೆಲ್ಲ ಅರ್ಥ ಆಗಲಿಕ್ಕಿಲ್ಲ.
ನಮ್ಮ ಜೀವನವಿಧಾನ ಇಸ್ಲಾಂ ಗ್ರಂಥಜ್ಞಾನಿಗಳಿಗೆ ವಿಚಿತ್ರವೆನಿಸಬಹುದು. ಇತ್ತೀಚಿನ ದಿನಗಳಲ್ಲಿ ಅಂಥ ಜ್ಞಾನಿಗಳ ಪ್ರಭಾವ ನಮ್ಮ ಹಳ್ಳಿಗಾಡಿನ ಮುಸ್ಲಿಮರ ಮೇಲೂ ಆಗುತ್ತಿದೆ. ಬಿಹಾರ, ಉತ್ತರ ಪ್ರದೇಶ ಮುಂತಾದ ಕಡೆಗಳ ಇಸ್ಲಾಂ ಧಾರ್ಮಿಕ ಶಿಕ್ಷಣ ಪಡೆದವರು ನಮ್ಮ ಕಡೆಯ ಹಳ್ಳಿ ಪಟ್ಟಣಗಳಲ್ಲಿನ ಮಸೀದಿಗಳಲ್ಲೂ ನಮಾಜ್ ಮಾಡಿಸಲು ಬರುತ್ತಾರೆ. ಈ ಧರ್ಮಗುರುಗಳು ಧಾರ್ಮಿಕ ಪ್ರವಚನ ಮಾಡುವುದಕ್ಕೂ ಸ್ಥಳೀಯರ ಜೀವನ ವಿಧಾನಕ್ಕೂ ಅಜಗಜಾಂತರವಿದೆ. ಹೀಗಾಗಿ ಸ್ಥಳೀಯ ಬದುಕಿನಲ್ಲಿ ಸಾಂಸ್ಕೃತಿಕ ಗೊಂದಲಗಳು ಶುರುವಾಗುತ್ತವೆ.
ಸಯ್ಯದ್, ಶೇಖ್, ಮೊಘಲ್, ಪಠಾಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಿದ್ದಾರೆ. ಷಿಯಾ ಸುನ್ನಿಗಳಿದ್ದು ಅವರಲ್ಲೂ ಅನೇಕ ಪಂಗಡಗಳಿವೆ. ಪಿಂಜಾರರು, ಪೆಂಡಾರಿಗಳು, ನಾಲಬಂದ, ಜಾತಕಾರ, ಚಪ್ಪರಬಂದ, ಬಾಗವಾನರು, ದರ್ವೇಶಿಗಳು, ಬ್ಯಾರಿಗಳು, ತಬ್ಲಿಕ್ ಜಮಾತನವರು, ಸೂಫಿ ಮುಸ್ಲಿಮರು ಹೀಗೆ ಅನೇಕ ಪ್ರಕಾರದವರು ಇದ್ದಾರೆ. ಇವರೆಲ್ಲರ ಜೀವನ ವಿಧಾನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.
ಈ ನಿಜದ ನಿಲವನ್ನು ಭಾರತದ ಯಾವೊಬ್ಬ ಮುಸ್ಲಿಂ ಚಿಂತಕರೂ ಸೂಕ್ಷ್ಮವಾಗಿ ಗಮನಿಸದ ಕಾರಣ ಕೆಳವರ್ಗದ ಮುಸ್ಲಿಮರ ಬದುಕು ಅಯೋಮಯವಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾದಿಯವರು ದೇಶದ ಮುಖ್ಯ ಚಿಂತಕರಲ್ಲಿ ಒಬ್ಬರಾಗಿ ಕಾಣುತ್ತಾರೆ. ದೇಶದ ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಹಿರಿದಾಗಿದೆ.
ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ. ಸ್ತ್ರೀವಾದದ ಕುರಿತು ಬರೆದಿದ್ದಾರೆ. ನಾಗರಹೊಳೆ ಬುಡಕಟ್ಟು ಜನರ ಪುನರ್ವಸತಿ ಕುರಿತು ಸಮಿತಿಯ ಮುಖ್ಯಸ್ಥರಾಗಿ ವರದಿ ಒಪ್ಪಿಸಿದ್ದಾರೆ. ಕರ್ನಾಟಕ ರೈತ ಚಳವಳಿ ಕುರಿತೂ ಬರೆದಿದ್ದಾರೆ.
ಶಿಷ್ಯಗಣದ ಪ್ರೀತಿಗೆ ಪಾತ್ರರಾಗಿದ್ದ ಅವರು ಸದಾ ಆ ಶಿಷ್ಯರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವಷ್ಟು ಪ್ರಭಾವ ಬೀರಿದ್ದಾರೆ. ಏತನ್ಮಧ್ಯೆ ಕರ್ನಾಟಕದ ಎಲ್ಲ ಚಳವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೂರು ದಶಕಗಳಿಗೂ ಹಿಂದೆ ಅವರ ತಾರುಣ್ಯದಲ್ಲೇ ಕರ್ನಾಟಕದ ಚಳವಳಿಗಳ ಬಗ್ಗೆ ಪ್ರಖ್ಯಾತ ಇಪಿಡಬ್ಲೂ ಇಂಗ್ಲಿಷ್ ಮಾಸಪತ್ರಿಕೆಯಲ್ಲಿ ಬರೆದಿದ್ದರು. ಅದನ್ನು ಆಕಸ್ಮಿಕವಾಗಿ ಒದಿ ಆಶ್ಚರ್ಯವೆನಿಸಿತ್ತು. ಆ ಲೇಖನದಲ್ಲಿ ನನ್ನ ಹೆಸರೂ ಇತ್ತು! ಹೀಗೆ ಅವರನ್ನು ನೋಡುವ ಮೊದಲೇ ಅವರ ಪ್ರತಿಭೆ ಮತ್ತು ಸಾಮಾಜಿಕ ಪ್ರಜ್ಞೆಯ ಪರಿಚಯವಾಯಿತು.
ಪ್ರಗತಿಪರ ಮುಸ್ಲಿಂ ಬರಹಗಾರರು ಸೇರಿ “ಚಿಂತಕರ ಚಾವಡಿ” ಪ್ರಾರಂಭಿಸಿದಾಗ ಸಭೆ ಸೇರುತ್ತಿದ್ದೆವು. ಅವರ ಚಿಂತನಾ ಕ್ರಮದಿಂದ ನಾವೆಲ್ಲ ಸಂತುಷ್ಟರಾಗುತ್ತಿದ್ದೆವು. ಆಳವಾದ ಚಿಂತನೆಗಳಿಂದ ಕೂಡಿದ ಅವರ ಗಂಭೀರ ಮಾತುಗಳು ನಮಗೆಲ್ಲ ದಾರಿದೀಪದಂತೆ ಖುಷಿಕೊಟ್ಟಿದ್ದುಂಟು.
ಮುಜಫ್ಫರ ಅಸಾದಿ ಅವರು ನಿವೃತ್ತರಾದ ಮೇಲೆ ಇನ್ನೂ ಹೆಚ್ಚು ಬಿಜಿ಼ ಆಗಿದ್ದರು. ಅವರು ದೇಶ ವಿದೇಶಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗುವಂಥ ಪ್ರತಿಭೆಯುಳ್ಳವರಾಗಿದ್ದರು. ಸರ್ಕಾರದ ಯೋಜನೆಗಳಲ್ಲಿ ಸಲಹೆಗಾರರಾಗಬಹುದಾಗಿತ್ತು. ಇವೆಲ್ಲ ಅವರ ವಿದ್ವತ್ತಿಗೆ ಸಹಜವಾಗಿ ಬರುವಂಥವುಗಳಾಗಿದ್ದವು. ಆದರೆ ಇವೆಲ್ಲವುಗಳಿಗಿಂತ ಮಿಗಿಲಾಗಿ ಅವರು ದೇಶದಲ್ಲಿ ಸಂಕಷ್ಟಕ್ಕೊಳಗಾದ ಅಮಾಯಕ ಮುಸ್ಲಿಮರ ಭವಿಷ್ಯಕ್ಕಾಗಿ ತಾವು ಕಂಡುಕೊಂಡ ಸತ್ಯವನ್ನು ಪ್ರತಿಪಾದಿಸುತ್ತ, ಮುಸ್ಲಿಂ ವಿದ್ವಾಂಸರ ಮತ್ತು ಧರ್ಮ ಪಂಡಿತರ ಕಣ್ಣು ತೆರೆಸುವ ಮಹಾಕಾರ್ಯದಲ್ಲಿ ತೊಡಗುವ ಆಕಾಂಕ್ಷೆಯುಳ್ಳವರಾಗಿದ್ದರು.

ಮೈನಾರಿಟಿ ಕುರಿತ ಅವರ ಚಿಂತನೆಗಳು ಹಿಂದಿ, ಉರ್ದು ಮುಂತಾದ ಭಾಷೆಗಳಲ್ಲಿ ಪ್ರಕಟವಾಗಬೇಕು ಎಂಬುದು ಕಾಲದ ಕರೆಯಾಗಿದೆ.

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.


ಸರ್ ಹಮೀದ್ ದಲವಾಯಿಯವರು ಮುಸ್ಲಿಂ ಸಮಾಜದ ಆಂತರಿಕ ವ್ಯೆವಿಧ್ಯ ಮತ್ತು ಮಹಿಳಾಲೋಕದ ಬಗ್ಗೆ ಬರೆದಿದ್ದಾರೆ.ಹೀಗೆ ಹೇಳುತ್ತಿರುವುದು ಮಾಹಿತಿಗಾಗಿ ಮಾತ್ರ.Muzafsr Assadi ಯವರ ಕಾಣಿಕೆ ಯನ್ನ ನಗಣ್ಯ ಮಾಡುವುದಕ್ಕಲ್ಲ. ತಪ್ಪು ತಿಳಿಯಬೇಡಿ.