ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್, ಚಂದ್ರತಾಲ್, ನಾಕೋ, ಟ್ರೆಕ್ಕಿಂಗ್ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು. ಅವನಿದ್ದರೆ ನೀಲಿಯ ನೂರೆಂಟು ಬೇರೆ ಬೇರೆ ಛಾಯೆಗಳಲ್ಲಿ ಮಿಂಚುವ ಸರೋವರಗಳು ಅವನಿಲ್ಲದಿದ್ದರೆ ವಿಷಾದದಿಂದ ತಣ್ಣಗೆ ಕೂತಂತಿರುತ್ತವೆ. ನಮ್ಮ ಅದೃಷ್ಟ ಚೆನ್ನಾಗಿರಬೇಕು ಎಲ್ಲಾ ಕೂಡಿ ಬರಲು.
‘ದೇವಸನ್ನಿಧಿ’ ಅಂಕಣದಲ್ಲಿ ತಾವು ಕಂಡ ಸರೋವರಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ
ಮಹಾಕವಿ ಕುವೆಂಪು ಅವರು ತಮ್ಮ ‘ಸರೋವರದ ಸಿರಿಗನ್ನಡಿಯಲ್ಲಿʼ ಎಂಬ ಮನೋಹರ ಪ್ರಬಂಧದಲ್ಲಿ ಕನ್ನಡದ ಮಹಾಕವಿ ನಾಗವರ್ಮನ ಅಚ್ಛೋದ ಸರೋವರದ ಬಗ್ಗೆ ಬರೆಯುತ್ತಾ ಹೀಗೆ ಹೇಳುತ್ತಾರೆ:
“ಕುದುರೆ ಏರಿ, ಪರ್ವತ ಶ್ರೇಣಿಯ ಕಂದರ ಶಿಖರಪ್ರದೇಶಗಳ ನಿಮ್ನೋನ್ನತಗಳನ್ನು ಇಳಿದೇರಿ, ಮುಂಬರಿಯುತ್ತಿದ್ದ ಚಂದ್ರಾಪೀಡನು ಅದೊಂದು ದಿಣ್ಣೆಯನ್ನೇರುತ್ತ ಅದರ ನೆತ್ತಿಯನ್ನು ಸೇರಿದೊಡನೆ ತಕ್ಕನೆ ಕಣ್ಗೊಳಿಸುತ್ತದೆ, ಅನಿರೀಕ್ಷಿತವಾಗಿ, ಆಶ್ಚರ್ಯೋದ್ದೀಪಕವಾಗಿ, ಅಚ್ಛೋದ ಸರೋವರ. ಅದಕ್ಕೆ ಕವಿ ‘ಎಲೆ!!ʼ ಎಂಬ ಶಬ್ದದಿಂದ ವರ್ಣನೆಗೆ ತೊಡಗುತ್ತಾನೆ”
ಥೇಟು ಹೀಗೇ ಇತ್ತು ನನ್ನ ಅನುಭವ ಕೂಡ. (ನನ್ನ ಅಭಿವ್ಯಕ್ತಿಯ ಕೊರತೆಗೆ ಮಹಾಕವಿಯ ಎರವಲು ಪಡೆಯುತ್ತಿದ್ದೇನೆ). ಒಂದೇ ವ್ಯತ್ಯಾಸ, ಕುದುರೆ ಬದಲು ನಾನೇರಿದ್ದದ್ದು ಕಾರು ಅಷ್ಟೇ. ವನರಾಶಿಯನ್ನು ದಾಟಿ, ಬರಡು ಹಿಮಪರ್ವತಗಳನ್ನು ಹಾದು, ರುದ್ರರಮಣೀಯವಾದ ಹಿಮೋಚ್ಛಾದಿತ ಪರ್ವತಗಳನ್ನು ಬಳಸಿ ದಾರಿ ಅಲ್ಲದ ದಾರಿಯಲ್ಲಿ ಸಾಗಿ, ಕ್ಷಣಕ್ಷಕ್ಕೂ ಬದಲಾಗುವ, ರೇಗುವ, ರಚ್ಚೆ ಹಿಡಿಯುವ ಪ್ರಕೃತಿಯನ್ನು ಬೆರಗಿನಿಂದ ನೋಡುತ್ತಾ, ಇನ್ನೆಲ್ಲಿ? ದಾರಿ ಮುಗಿಯಿತಲ್ಲ ಅಂತ ಕಳವಳಗೊಳ್ಳುವುದರ ಒಳಗೆ ಕಾರು ಗುಡ್ಡವನ್ನೇರಿ, ಇಳಿದು, ಒಂದೇ ಉಸಿರಿಗೆ ಏರಿ ಗಕ್ಕನೆ ನಿಂತಿತು. ನಮ್ಮ ಮುಂದಿತ್ತು ಗುರುಡಾಂಗ್ಮಾರ್ ಸರೋವರ. ನಾವು ಆಶ್ಚರ್ಯಕ್ಕೂ ಮೀರಿದ ಭಾವದಲ್ಲಿ ‘ಆಹಾ!!ʼ ಅಂದೆವು.
ಆಗ ತಾನೇ ಮೋಡದ ಒಳಗಿಂದ ಇಷ್ಟೇ ಇಣುಕಿ ನೋಡುತ್ತಿದ್ದ ಸೂರ್ಯರಶ್ಮಿಯ ಒಂದೆರಡು ಕಿರಣಗಳೂ ಸರೋವರವನ್ನು ದೃಶ್ಯ ಕಾವ್ಯದಂತೆ ತೆರೆದಿಟ್ಟಿದ್ದವು. ಸುತ್ತ ಬೃಹತ್ ಹಿಮಪರ್ವತಗಳು, ನಡುವೆ ಆಗ ತಾನೆ ಹಿಮಕರಗಿ ನೀರಾಗಿ ನಿಂತ ಸರೋವರ. ಇನ್ನೂ ಕರಗದ ಹಿಮ ನೀರ ಮೇಲೆ ತೇಲಾಡುತ್ತಲೇ ಇತ್ತು. ೧೬೯೦೦ ಮೀ ಎತ್ತರದಲ್ಲಿ ಇರುವ ಗುರುಡೋಂಗಮಾರ್ ಸರೋವರ ಹಿಮಾಲಯದ ಅತಿ ಎತ್ತರದ ಸರೋವರಗಳಲ್ಲಿ ಒಂದು. ಉತ್ತರ ಸಿಕ್ಕಿಂ ನ ದೇವರು ವಾಸಿಸುವ ಈ ಸರೋವರ ಏಪ್ರಿಲ್ ಮೇ ತಿಂಗಳಿನಲ್ಲಿ ಹಿಮಕರಗಿ ಸೂರ್ಯನ ಕಿರಣಗಳಲ್ಲಿ ಮಿಂದರೆ, ಚಳಿಗಾಲದಲ್ಲಿ ಹಿಮಗಟ್ಟುತ್ತದೆ. ಅಲ್ಲಿಗೆ ತಲುಪುವುದೂ ಅಷ್ಟು ಸುಲಭವಲ್ಲ. ಹಿಂದಿನ ದಿನವೇ ಬಂದು ಲಾಚೆನ್‌ನಲ್ಲಿ ತಂಗಿ, ಬೆಳಿಗ್ಗೆಯೇ ಎದ್ದು ಗುರುಡಾಂಗಮಾರ್‌ಗೆ ಹೋಗಬೇಕು. ಮಳೆ ಬಂದರೆ, ಹಿಮ ಸುರಿದರೆ ಅಷ್ಟು ದೂರ ಹೋಗಿ ಏನೂ ಕಾಣದೆ ಬರಬೇಕಾಗುತ್ತದೆ. ಹಾಗಾಗಿ ಇದು ಸಿಕ್ಕಿದವರಿಗೆ ಸೀರುಂಡೆ!!
ನೀಲನೀರಿಗೆ ಹಿಮಹೊದ್ದ ಪರ್ವತಗಳ ಬ್ಯಾಕ್ ಡ್ರಾಪ್ ನೋಡುತ್ತಿದ್ದರೆ, ಬದುಕಿದ್ದೂ ಸಾರ್ಥಕ ಅನ್ನೋ ಭಾವ ತರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ ಸರೋವರಗಳ ಸಾಲಿಗೆ ಇದನ್ನು ಸೇರಿಸುತ್ತೇನೆ. ಕಾರ್ ಪಾರ್ಕಿಂಗ್ ಮಾಡಿದ ಜಾಗದಿಂದ ಕಾಣುತ್ತದಾದರೂ ಅಲ್ಲಿಂದ ಕೆಳಗೆ ಹೋಗಲು ಮೆಟ್ಟಿಲುಗಳಿವೆ. ಅಲ್ಲಿ ಇಳಿದರೆ, ಸರೋವರದ ಸುತ್ತಲೂ ನಡೆಯಬಹುದು. ಸರೋವರ ತುಂಬಾ ದೊಡ್ಡದಾಗಿದ್ದರೂ ಕಾರು ನಿಲ್ಲುವ ಭಾಗದಿಂದ ಅದರ ಒಂದು ಭಾಗ ಮಾತ್ರ ಕಾಣುತ್ತದೆ. ಉಳಿದದ್ದು ಹಿಮಪರ್ವತಗಳ ಹಿಂದೆ ಬಚ್ಚಿಟ್ಟುಕೊಂಡಿದೆ. ಗುರುಡಾಂಗಮಾರ್ ಗೆ ಹೋಗುವ ದಾರಿಯಂತೂ ‘ನಾದಮಯ ಈ ಲೋಕವೆಲ್ಲಾʼ ಅನಿಸುತ್ತೆ. ಭಾವಗಳಲ್ಲಿ ವರ್ಣಿಸಲಾಗದ ಅನುಭೂತಿ.
ನಾಗವರ್ಮ ಅವನ ಕರ್ಣಾಟಕ ಕಾದಂಬರಿಯಲ್ಲಿ ಅಚ್ಛೋದ ಸರೋವರವನ್ನು ವರ್ಣಿಸುತ್ತಾ ಅದರ ಸುತ್ತಲೂ ವನರಾಶಿ ಇತ್ತು ಅಂತಾನೆ. ಇಲ್ಲಿ ಅದೊಂದು ಮಾತ್ರ ಇಲ್ಲ. ಇಂತಹ ಎತ್ತರದ ಭೂಭಾಗಗಳಲ್ಲಿ ಮರಗಿಡ ಬೆಳೆಯುವುದಿಲ್ಲ. ಅಲ್ಲೇನಿದ್ದರೂ ಬೋಳು ಗುಡ್ಡಗಳು, ಹಿಮ, ಹಾಗೂ ಗುರುಡಾಂಗ್ಮಾರ್‌ನಂತಹ ನೀಲ ಸರೋವರಗಳು. ಇದು, ಗುರುಡಾಂಗಮಾರ್ ಅಂದರೆ ಕೆಂಪು ಮುಖದ ಗುರು. ಗುರು ಪದ್ಮಸಂಭವರ ಒಂದು ರೂಪ ಅನ್ನುವುದು ಒಂದು ನಂಬಿಕೆ. ೮ನೇ ಶತಮಾನದ ಒಂದು ಕಥೆಯ ಪ್ರಕಾರ ಗುರು ಪದ್ಮಸಂಭವ, ಟಿಬೆಟ್ ನಿಂದ ಹಿಂದಿರುಗುತ್ತಿದ್ದಾಗ ಈ ಭಾಗದಲ್ಲಿ ಬರುತ್ತಾರೆ. ಸರೋವರ ಹಿಮದಲ್ಲಿ ಹೆಪ್ಪುಗಟ್ಟಿರುತ್ತದೆ. ಅಲ್ಲಿನ ಜನ ಇಡೀ ವರ್ಷ ಹೀಗೆ ನೀರು ಹಿಮಗಟ್ಟಿ ಕುಡಿಯಲು ಏನೂ ಸಿಗುವುದಿಲ್ಲ ಅಂತ ತಮ್ಮ ದುಃಖ ತೋಡಿಕೊಳ್ಳುತ್ತಾರೆ. ಆಗ ಗುರು ಪದ್ಮಸಂಭವರು ನೀರಿನ ಮೇಲೆ ತಮ್ಮ ಕೈ ಇಟ್ಟೊಡನೆ ಅದು ಕರಗಿ ನೀರಾಗುತ್ತದೆ. ಅಂದಿನಿಂದ ಆ ಒಂದು ಭಾಗ ಚಳಿಗಾಲದಲ್ಲೂ ಹೆಪ್ಪುಗಟ್ಟುವುದಿಲ್ಲ ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ, ಗುರು ನಾನಕ್ ಸಾಹೇಬರು ೧೫ ನೇ ಶತಮಾನದಲ್ಲಿ ಅಲ್ಲಿಗೆ ಹೋಗುತ್ತಾರೆ, ತಮ್ಮ ಕೋಲಿನಿಂದ ಹಿಮವನ್ನು ಮುಟ್ಟಿ ನೀರನ್ನಾಗಿ ಮಾಡುತ್ತಾರೆ. ಹಾಗಾಗಿ ಇದು ಹಿಂದೂಗಳಿಗೆ, ಬೌದ್ಧರಿಗೆ ಹಾಗೂ ಸಿಕ್ಖರಿಗೆ ಪವಿತ್ರ ಸರೋವರ. ಪ್ರವಾಸಿಗರಿಗೆ ಹಾಗೂ ತೀರ್ಥಾರ್ಥಿಗಳಿಗೆ ಇಬ್ಬರಿಗೂ ಬಹುಮುಖ್ಯವಾದ ಸ್ಥಳ. ಅಲ್ಲಿನ ನೀರು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಅನ್ನುವುದು ಒಂದು ನಂಬಿಕೆ.
ವನರಾಶಿಯನ್ನು ದಾಟಿ, ಬರಡು ಹಿಮಪರ್ವತಗಳನ್ನು ಹಾದು, ರುದ್ರರಮಣೀಯವಾದ ಹಿಮೋಚ್ಛಾದಿತ ಪರ್ವತಗಳನ್ನು ಬಳಸಿ ದಾರಿ ಅಲ್ಲದ ದಾರಿಯಲ್ಲಿ ಸಾಗಿ, ಕ್ಷಣಕ್ಷಕ್ಕೂ ಬದಲಾಗುವ, ರೇಗುವ, ರಚ್ಚೆ ಹಿಡಿಯುವ ಪ್ರಕೃತಿಯನ್ನು ಬೆರಗಿನಿಂದ ನೋಡುತ್ತಾ, ಇನ್ನೆಲ್ಲಿ? ದಾರಿ ಮುಗಿಯಿತಲ್ಲ ಅಂತ ಕಳವಳಗೊಳ್ಳುವುದರ ಒಳಗೆ ಕಾರು ಗುಡ್ಡವನ್ನೇರಿ, ಇಳಿದು, ಒಂದೇ ಉಸಿರಿಗೆ ಏರಿ ಗಕ್ಕನೆ ನಿಂತಿತು.
೧೭೦೦೦ ಅಡಿ ಎತ್ತರದಲ್ಲಿ ಗಾಳಿ ಕಡಿಮೆ ಇರುವುದರಿಂದ ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗುವುದಿಲ್ಲ. ಜೊತೆಗೆ, ಹವಾಮಾನ ದಿನ ಕಳೆದಂತೆ ಬಿಗಡಾಯಿಸುತ್ತಾ ಇತ್ತು. ಹಾಗಾಗಿ ಒಂದು ಗಂಟೆಯಲ್ಲಿ ನಾವು ವಾಪಸ್ ಹೊರಡಬೇಕಾಯಿತು. ದಾರಿಯುದ್ದಕ್ಕೂ ಮಿಲಿಟರಿ ಕ್ಯಾಂಪ್‌ಗಳಿವೆ. ಅನೇಕರು ಆಲ್ಟಿಟ್ಯುಡ್ ಸಿಕ್ನೆಸ್ ಇಂದ ಬಳಲುತ್ತಾರೆ. ತಂಗುವ ಜಾಗವಾದ ಲಾಚೆನ್‌ನಿಂದ ಗುರುಡಾಂಗ್ಮಾರ್‌ಗೆ ಸುಮಾರು ೭೦ ಕಿ. ಮೀ ಆದರೂ ಎತ್ತರದಲ್ಲಿ ೯೦೦೦ ಅಡಿ ಎತ್ತರ ಕ್ರಮಿಸೋದರಿಂದ ಎತ್ತರದ ಹವಾಮಾನಕ್ಕೆ ದೇಹ ಅಷ್ಟು ಬೇಗ ಸಿದ್ಧವಿರುವುದಿಲ್ಲ. ಹಾಗಾಗಿ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡೇ ಹೋಗುವುದು ಒಳಿತು.
ಹೀಗೆ ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್, ಚಂದ್ರತಾಲ್, ನಾಕೋ, ಟ್ರೆಕ್ಕಿಂಗ್ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು. ಅವನಿದ್ದರೆ ನೀಲಿಯ ನೂರೆಂಟು ಬೇರೆ ಬೇರೆ ಛಾಯೆಗಳಲ್ಲಿ ಮಿಂಚುವ ಸರೋವರಗಳು ಅವನಿಲ್ಲದಿದ್ದರೆ ವಿಷಾದದಿಂದ ತಣ್ಣಗೆ ಕೂತಂತಿರುತ್ತವೆ. ನಮ್ಮ ಅದೃಷ್ಟ ಚೆನ್ನಾಗಿರಬೇಕು ಎಲ್ಲಾ ಕೂಡಿ ಬರಲು.
ಹಿಮಾಚಲ ಪ್ರದೇಶದ ಸ್ಪಿಟಿಯ ಚಂದ್ರತಾಲ್ ನನ್ನ ಮತ್ತೊಂದು ಇಷ್ಟವಾದ ಸರೋವರ. ಗುರುಡಾಂಗ್ಮಾರ್ ದೇವಜಗತ್ತಾದರೆ, ಚಂದ್ರತಾಲ್ ಕಿನ್ನರ ಜಗತ್ತಿನ ಒಂದು ತುಣುಕು. ಈಗಲೂ ಚಂದ್ರತಾಲ್‍ಗೆ ರಾತ್ರಿಯ ಹೊತ್ತು ಅನೇಕ ಕಿನ್ನರ ಕಿನ್ನರಿಯರು ಬಂದು ಹೋಗುತ್ತಾರೆ ಎಂದು ಸ್ಪಿಟಿ ಭಾಗದ ಜನ ನಂಬುತ್ತಾರೆ. ಹಿಮಾಲಯದ ನೀಲಿ ಆಕಾಶ, ಹಿಮಾಚ್ಛಾದಿತ ಪರ್ವತ ಮಾಲೆ, ಪಕ್ಕದಲ್ಲಿರುವ ಕಂದೂ ಅಲ್ಲದ, ಕಿತ್ತಳೆಗೆ ಕಿತ್ತಳೆ ಬಣ್ಣವೂ ಅಲ್ಲದ ಸಾಲು ಸಾಲು ಬೋಳುಮಲೆಗಳ ನಡುವೆ ಬಚ್ಚಿಟ್ಟುಕೊಂಡಿದೆ ನೀಲ ಕೊಳ. ನೀಲಿ ಅಂದರೆ ಅಷ್ಟು ದಟ್ಟವಾಗಿರತ್ತಾ ಅಂತ ಆಶ್ಚರ್ಯ ಆಗೋ ಅಷ್ಟು ಕಡು ನೀಲಿ. ಅದೆಲ್ಲಾ ಈ ಕೊಳದ ನೀರಿನಲ್ಲಿ ತಲೆಕೆಳಗಾಗಿ ಬಿದ್ದಿರುವುದು. ಕಂದು-ಕಿತ್ತಳೆ ಬಣ್ಣಗಳ ಸ್ನೇಹದಿಂದ ಹುಟ್ಟಿಕೊಂಡಿರುವ ಬಣ್ಣ ಬಳಿದುಕೊಂಡಿರುವ ಸಾಲು ಸಾಲು ಮಲೆಗಳ ಪ್ರತಿಬಿಂಬವನ್ನು ಹೀರಿಕೊಂಡಿರುವ ಕೊಳದ ದೃಶ್ಯವೈಭವ. ಇದು ಚಂದ್ರತಾಲ್ ಎಂಬ ಕೊಳ. ಹಿಮಾಚಲ ಪ್ರದೇಶದ ಭಾರತ-ಟಿಬೆಟ್ ಗಡಿಯಲ್ಲಿರುವ ಬಾರತಕ್ಕೆ ಸೇರಿರುವ ಒಂದು ಜಿಲ್ಲೆ-ಲಾಹೊಲ್ ಸ್ಪಿಟಿ. ಅತ್ಯಂತ ಎತ್ತರದ ಪ್ರದೇಶದಲ್ಲಿ ಜನವಸತಿಯನ್ನು ಹೊಂದಿರುವ ಸ್ಪಿಟಿ ಕಣಿವೆಯಲ್ಲಿದೆ ಚಂದ್ರತಾಲ್. ಇದು ಸಮುದ್ರ ಮಟ್ಟದಿಂದ ೪೩೦೦ ಮೀಟರ್ ಎತ್ತರದಲ್ಲಿದೆ.
ಬಾಣಭಟ್ಟ, ನಾಗವರ್ಮರು ವರ್ಣಿಸಿರುವ ಅಚ್ಛೋದ ಸರೋವರದ ಸುಕೋಮಲ ವರ್ಣನೆ ಕೇವಲ ಕವಿಸಮಯ ಎನ್ನುವವರಿಗೆ ನಿಜ ಲೋಕದಲ್ಲೂ ಪುರಾಣದಿಂದೆದ್ದು ಬಂದಂತಹ ಅಲೌಕಿಕ ಸರೋವರವನ್ನು ನೋಡಬೇಕು ಅಂದರೆ ಚಂದ್ರತಾಲ್ ನೋಡಬೇಕು. ಪುರಾಣ ಪ್ರಪಂಚದಿಂದ ಕಿತ್ತಿಟ್ಟ ಕೊಳದಂತಿದೆ ಈ ಚಂದ್ರತಾಲ್. ರಾಮನೋ, ಅವನ ಮುಂಗೋಪಿ ತಮ್ಮ ಲಕ್ಷ್ಮಣನೋ ಇಲ್ಲವೇ ಸೌಗಂಧಿಕಾ ಪುಷ್ಪ ಹುಡುಕಿಕೊಂಡು ಹೊರಟ ಭೀಮನೋ ಇಲ್ಲಿ ಕ್ಷಣ ಕಾಲ ಇಣುಕಿ ಹೋಗಿರಬೇಕು, ದೇವಲೋಕದ ಭೋಗದಿಂದ ಬೇಸತ್ತ ದೇವಾಂಗನೆಯರು ಈ ಕೊಳದಲ್ಲಿ ಇಳಿದು ಜಲಕ್ರೀಡೆಯಾಡಿ ನೀರಮೇಲೆ ತಮ್ಮ ಅಮಾನುಷ ಸೌಂದರ್ಯದ ಗುರುತು ಉಳಿಸಿಹೋಗಿರುವುದು ಖಂಡಿತ ಎನ್ನುವಂತಿದೆ ಚಂದ್ರತಾಲ್.
ಸ್ಪಿಟಿ ಕಣಿವೆಯಲ್ಲಿದ್ದಾಗ ತಪ್ಪದೆ ನೋಡಬೇಕಾದ ಕೊಳ ಇದು. ತನ್ನ ಚಂದ್ರಾಕಾರದ ರೂಪದಿಂದ ಇದಕ್ಕೆ ಚಂದ್ರತಾಲ್ (ಚಂದ್ರನ ಕೊಳ) ಎನ್ನುತ್ತಾರೆ. ಚಂದ್ರಾ ನದಿಯ ಉಗಮಸ್ಥಾನ. ಇದೇ ಚಂದ್ರಾನದಿ ಭಾಗಾನದಿಯ ಜೊತೆ ಸೇರಿ, ಚಂದ್ರಭಾಗ ನದಿಯಾಗುತ್ತದೆ. ಮುಂದೆ ಪಂಜಾಬಿನ 5 ನದಿಗಳಲ್ಲಿ ಒಂದಾದ ಚೆನಾಬ್ ನದಿಯ ರೂಪ ಪಡೆಯುವುದು ಇದೇ ಚಂದ್ರಭಾಗ.
ಮನುಷ್ಯರಿಗೆ ದೈವ ಸ್ಪರ್ಶವನ್ನು, ದೇವತೆ, ಕಿನ್ನರ-ಕಿನ್ನರಿಯರಿಗೆ ಮನುಷ್ಯಲೋಕದ ಸ್ಪರ್ಶವನ್ನು ನೀಡುವ ಪ್ರಶಾಂತ ಸಂಗಮ ತಾಣಗಳಾಗಿ ಇಂದಿಗೂ ಇಂಥ ಅದೆಷ್ಟೊ ಸರೋವರಗಳು ನಮ್ಮಲ್ಲಿ ಕಂಗೊಳಿಸುತ್ತಿವೆ. ಭಾರತ ಕೇವಲ ದೇವಾಲಯಗಳ ನಾಡಲ್ಲ, ಸರೋವರ, ನದಿ-ನದ, ಕೆರೆ, ತಟಾಕಗಳು, ಗುಡ್ಡ, ಬೆಟ್ಟ, ಕಣಿವೆ, ಪರ್ವತಶಿಖರಗಳು ಸಹ ದಿವ್ಯತೆಯನ್ನು ತಮ್ಮಲ್ಲಿ ತುಂಬಿಕೊಂಡಿವೆ. ಅವುಗಳ ಸಮೀಪ ಹೋಗುವುದೆ ಒಂದು ದೈವಸನ್ನಿಧಿ.
ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.
NEEVU STALAGALANNU VARNISUVA PARIYE SOGASU GIRIJA. ODUTIIDARE EE KSHANAVE NAVU HOGABEKANNISUTTADE.
Thanks Poorvi
Madam, ಪ್ರಕೃತಿಯ ಸುಂದರ ವರ್ಣನೆ. ನಿಮ್ಮ ಬರಹಕ್ಕೆ ಕೋಟಿ ನಮಸ್ಕಾರಗಳು. ಈ ಪರ್ವತ ಶ್ರೇಣಿಯ ಹಾಗೂ ಸರೋವರಗಳ ವರ್ಣನೆ ಓದಿದ ಮೇಲೆ ನಾವು ಸಹ ಇಂತಹ ಅನುಭವ ಎಂದು ಪಡೆಯುವೆವು ಎಂಬ ಕುತೂಹಲ ಹೆಚ್ಚಾಗಿದೆ. ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ನಾದಮಯ ಈ ಲೋಕವೆಲ್ಲಾ…ಅರೇ ಅಣ್ಣಾವ್ರ ಹಾಡು…ಗಂದರ್ವ ಕಿನ್ನರ ಕಿಂಪುರಷರು ಅಡ್ಡಾಡಿರಬಹುದು ಎನ್ನುವ ಈ ಬರಹ..ದೃಶ್ಯ ಕಾವ್ಯವಾಗಿ ಮೂಡಿಬಂದಿದೆ..ನೋಡಿದ ನೋಟಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಸವೇ ಹೌದು.. ಆ ಸಾಹಸದಲ್ಲಿ ಯಶಸ್ವಿಯಾಗಿದ್ದೀರಾ..
ಕೂತಲ್ಲಿಯೇ ಕಣ್ಣ ಮುಂದೇ ಇಡೀ ಆ ಭೂಭಾಗದ ಸ್ವರ್ಗವನ್ನು ತೆರೆದಿಟ್ಟ ನಿಮಗೆ ಹಾಗೂ ನಿಮ್ಮ ಬರಹಕ್ಕೆ ಅಭಿನಂದನೆಗಳು..
ಬಹಳ ಇಷ್ಟವಾಯಿತು ನೀವು ಉಪಯೋಗಿಸಿರುವ ಕೆಲವು ಶಬ್ಧಗಳು…ತಟಾಕ, ರಚ್ಚೆ…ಜೊತೆಗೆ ಮಹಾನ್ ಕವಿಗಳ ಬರಹದ ಉಲ್ಲೇಖ…
ಸಲಾಮ್ ನಿಮ್ಮ ಬರಹಕ್ಕೆ