ಹೆಚ್ಚೇನಾದೀತು…..
ಬಹಳ ದಿನದಿಂದ ಕಾದು
ಒಮ್ಮೆ ಎದುರು ಬದುರಾದಾಗ
ಮೈಗೆ ಮೈತಾಗಿಸಿ ಕೂತು
ಚಹಾ ಕುಡಿಯುವುದು
ವೇಟರ ಎದುರಿಗಿಟ್ಟ ಇಡ್ಲಿ ತಿನ್ನುವುದು
ನಿನ್ನ ಕೈತುತ್ತು ನನಗೆ
ನನ್ನ ತುತ್ತು ನಿನಗೆ,
ಉಸಿರು, ಎಂಜಲೂ ಸಹ
ಅದಲು ಬದಲಾಗಿ ಒಡಲ ಸೇರುವುದು
ಸಿಕ್ಕ ಇಷ್ಟೇ ಇಷ್ಟು ಸಮಯದಲ್ಲಿ
ಭುಜಕ್ಕೆ ಭುಜತಾಗಿಸಿ
ಕುಳಿತು, ಕಣ್ಣಲ್ಲಿ ಪ್ರೀತಿಯ ಉಣ್ಣುವುದು;
ಇಷ್ಟವಾದ ಪುಸ್ತಕ ವಿನಿಮಯದ
ಸಹಿ ಮಾಡಿದ ನಡು ಹಾಳೆಯ
ಗೊತ್ತಿಲ್ಲದೆ ಮಡಚಿ
ಕೈಗಿಡುವುದು…
ಮತ್ತೆ ಹೊರಡುವ ಕ್ಷಣ ನೆನೆದು
ಕಂಗೆಡುವುದು
ಮರುಕ್ಷಣ ಎಡ ಅಂಗೈಯನ್ನು ನಿನ್ನ ಬಲಗೈ ಹೆಬ್ಬೆರಳು ಸಂತೈಸಲು,
ಕ್ಷಣ ಮಾತ್ರದಿ ಆವರಿಸುವ ಮಮತೆ;
ಮೊಗದೊಮ್ಮೆ ಎರಡೂ ಕೈ ಹಿಡಿದು
ಮಗುವನ್ನ ತಾಯಿ ಮುದ್ದಿಸಿ
ಸಾಂತ್ವಾನ ಹೇಳಿದಂತೆ
ಮಾತು ಮೌನ ಒಂದಾಗಿ
ಕಣ್ಣ ನೀರೂ ಜೊತೆಯಾಗಿ
ಭುವಿಗೆ ಪ್ರೀತಿ ಅವತರಿಸುವುದು;
ಇಷ್ಟೇ ಇಷ್ಟು ಸಮಯ ಮುಗಿದು
ನೀ ಹೊರಟು ನಿಂತಾಗ
ಒಂದು ಪ್ರೀತಿಯ ನೋಟ
ಮತ್ತದೇ ಮತ್ತದೆ ತೊಳಲಾಟ
ನೀ ಹೊರಟು ಸ್ವಲ್ಪವೇ ಸ್ವಲ್ಪ ದಾರಿ ಸವೆಸಿ
ಇದೇ ಕೊನೆಯ ಬಾರಿ ಎಂಬಂತೆ
ತಿರುಗಿ ನೋಡುವುದು
ನಾನು ನೀನು ನಡೆದು ಹೋದ
ಹೆಜ್ಜೆಗಳ ಮೇಲೆ ನಡೆದು
ಮತ್ತೆ ನೀ ಬರುವ ದಿನಕ್ಕೆ ಕಾಯುವುದು.
ಹರಪನಹಳ್ಳಿ ಹುಟ್ಟೂರು. ಓದು ಧಾರವಾಡ. ಬದುಕು ಕಾರವಾರ. ವೃತ್ತಿಯಿಂದ ಪತ್ರಕರ್ತ. ಪ್ರಕೃತಿ ಜೊತೆ ಒಡನಾಟ, ಜನ ಸಾಮಾನ್ಯರ ಜೊತೆ ಹೆಚ್ಚು ಬೆರೆಯುವುದು, ಓದು, ಬರಹ, ಹಾಡು ಕೇಳುವುದು ಉಸಿರು. ದಿನಕ್ಕೊಮ್ಮೆ ಪಿ.ಲಂಕೇಶರನ್ನು ನೆನಪಿಸಿಕೊಳ್ಳುವುದು, ಅವರ ಬರಹಗಳನ್ನು ಓದುವುದು…