ಸುನಂದಕ್ಕಗೆ ಮದುವೆಯಾಗಿ ಒಂದು ವಾರವೂ ಆಗಿರಲಿಕ್ಕಿಲ್ಲ. ದಿವಾಕರ ಭಾವ ಅವಳಿಗೆ ಉದ್ದದ ಹೆರಳನ್ನು ಕತ್ತರಿಸಲು ಆಜ್ಞೆಮಾಡಿದ್ದು! ನಗುವನ್ನೆ ಕಳೆದುಕೊಂಡಂತಿದ್ದ ಸುನಂದಕ್ಕ ತನ್ನ ಹೆರಳನ್ನು ಮೋಟು ಜಡೆ ಮಾಡಿಸಿಕೊಂಡು ‘ಅನೂ ಪುಟ್ಟಾ’ ಎಂದು ಯಾವತ್ತೂ ಕರೆವಂತೆ ‘ಅಮ್ಮಗೆ ಹೇಳು ಇನ್ನು ಮುಂದೆ ನನಗೆ ಜಡೆಹಾಕುವಾಗ ಯಾವತ್ತೂ ಕೈ ಸೋಲು ಬರುವುದಿಲ್ಲ’ ಅಂದಿದ್ದಳು. ಸುನಂದಕ್ಕನ ಕಣ್ಣಂಚಿನ ನೀರು ತುಳುಕದೆ ಒಳಗೇ ಇಂಗಿ ಹೋದದ್ದು ಅನೂಪ ಕಂಡ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ “ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ”
ರೂಪ ರಸ ಗಂಧ ನಾದ ಸ್ಪರ್ಶಗಳ ಬೆನ್ನೇರಿ ಅನೂಪ ಕುಳಿತ. ಯಾಕೋ ಈ ನೆನಪುಗಳಿಂದ ಚೆನ್ನಾಗಿ ತುಳಿಸಿಕೊಳ್ಳಬೇಕು ಎನಿಸಿತು ಅವನಿಗೆ. ಮಳೆ ಬಿದ್ದ ನೆಲವು ನೇಗಿಲಿನಿಂದ ಮತ್ತೆ ಊಳಿಸಿಕೊಂಡು ಮತ್ತೆ ಹದಗೊಳ್ಳ ನಿಂತ ಹಾಗೆ. ಅದಾವ ಬಿತ್ತನೆಗೆ ಬಿದ್ದಿದ್ದನೋ ಗೊತ್ತಿಲ್ಲ. ಈ ಮೂವತ್ತು ವರ್ಷಗಳ ದೀರ್ಘ ನೆನಪಿನ ಬಟ್ಟಲಿಗೆ ಹಾರಿದ್ದ. ಯಾರಿಂದ ತಪ್ಪಿಸಿಕೊಂಡರೂ ಆ ಟೇಬಲ್ ಕೆಳಗಿನಿಂದ ಕಾಣುತಿದ್ದ ನಾಲ್ಕು ಪಾದಗಳಿಂದ ತಪ್ಪಿಸಿಕೊಳ್ಳಲು ಆಗಲೇ ಇಲ್ಲ.
ಹುಡುಗನಾಗಿದ್ದಾಗಿನಿಂದ ಕಣ್ಣೊಳಗೆ ಕೂತುಕೊಂಡ ಆ ನಾಲ್ಕು ಪಾದಗಳು ಮತ್ತೆ ಮತ್ತೆ ಕಾಡುತ್ತಿತ್ತು. ಅವು ಏನಾದರು ಮಾತಾಡಿಕೊಳ್ಳುತ್ತಿದ್ದವೋ ಅನಿಸುತಿತ್ತು. ಕೇವಲ ಒಂದು ಚಿತ್ರವಾಗಿ ಕಾಡಿದ್ದ ಆ ಪಾದಗಳು ಈಗ ಮೆಲ್ಲನೆ ಅರ್ಥವಾಗುತಿತ್ತು. ತಾನು ಟೇಬಲ್ ಹತ್ತಿರ ಕೂತಾಗ ಸುನಂದಕ್ಕಗೆ ಟ್ಯುಶನ್ ಮಾಡಲು ಆಗಾಗ ಬರುತಿದ್ದ ಪ್ರಸನ್ನ ಸರ್ ಪಾದಗಳು ಮತ್ತು ಅವಳ ಪಾದಗಳು ಕೆಳಗೆ ಅನೂಪನಿಗೆ ಕಾಣುತಿತ್ತು. ಆಗಾಗ ಪರಸ್ಪರ ಹತ್ತಿರ ಬಂದು ಹೋದಂತೆನಿಸುತಿತ್ತು. ಈ ಮಧ್ಯೆ ಕಟ್ಟೀಮನಿ ಮೇಷ್ಟ್ರು ಬರೆಯಲು ಹೇಳಿದ್ದ ಭಾರತ ನಕಾಶೆ ಸೊಟ್ಟ ಸೊಟ್ಟ ಆಗುವಂತಿತ್ತು. ಚಕ್ಕಂಬಕ್ಕಳ ಹಾಕಿ ಬರೆಯಲು ಕೂತವನಿಗೆ ದಾರಿತಪ್ಪಿಹೋದ ಅನುಭವ. ಆದರೆ ಆಚೆ ಹೋಗಲೂ ಆಗದ ಇಲ್ಲಿ ಇರಲೂ ಆಗದ ಇಬ್ಬಂದಿಗೆ ಕಾರಣ ಅಮ್ಮ ಹೇಳಿದ್ದ ಮಾತು. ‘ಅನೂ ಪ್ರಸನ್ನ ಸರ್ ಬರ್ತಿರ್ತಾರೆ ನೀನು ಜೊತೆಯಲ್ಲೇ ಇರು ಸುನೀನ ಬಿಟ್ಟು ಹೋಗಬೇಡ!ʼ
ತನ್ನನು ರೂಪಿಸಿದ್ದು ಸುನಂದಕ್ಕನ ಪ್ರೀತಿ ಮತ್ತು ಅವಳ ಕಣ್ಣು ಕೋರೈಸುವ ಸೌಂದರ್ಯ ಎಂದು ಅನೂಪ ಪದೇ ಪದೇ ಸಾಬೀತು ಪಡಿಸಿಕೊಳ್ಳಲು ಕೂತ ಕ್ಷಣಗಳು ಅನೇಕ. ಕಡುಚೆಲುವಿ ಅಕ್ಕನನ್ನು ಪಡೆದುಕೊಂಡದ್ದೇ ತನ್ನನ್ನು ಹೀಗೆ ಆಡಿಸಿತು. ಅಟ್ಟಾಡಿಸಿತು. ಎಂದೆಲ್ಲ ಚಿಂತನೆಗೆ ಶುರುವಿಟ್ಟುಕೊಂಡಿದ್ದ. ಅವಳ ಕಣ್ಗಾವಲಿಗಾಗೆ ಹುಟ್ಟಿಬಂದಂತಿದ್ದ ಅನೂಪನ ಪಾಲಿಗೆ ಸುನಂದಕ್ಕ ಬದುಕಿನ ಸುಧೆ ಚಿಮ್ಮುವ ಸೆಲೆ. ಆಗಾಗ ಜಗಳ ಕಾದು ಹಟಕ್ಕೆ ಬಿದ್ದು ಅವಳ ತೋಳ ಚಿವುಟಿದಾಗ ಒಂದು ವಾರವಾದರೂ ಕಪ್ಪಿಟ್ಟ ರಕ್ತದಕಲೆ ಮತ್ತೆ ಮೊದಲಿಂತೆ ಆಗದಾದಾಗ ಭಯಪಟ್ಟದ್ದಿದೆ! ಅವಳ ಸೂಕ್ಷ್ಮತೆ ಅವನನ್ನು ಬೇಗ ಮಾಗಿಸಿತೋ ಅನಿಸಿದೆ. ತುಸು ಬಿಸಿಲಿಗೂ ಬಾಡುವ ನೆರಳಿಗೆ ನಡುಗುವ ಸುನಂದಕ್ಕ ಅಂದರೆ ಅನೂಪನಿಗೆ ಜೀವನದ ಮತ್ತೊಂದು ಆಯ್ಕೆಯನ್ನೇ ನೆನಪಿಸದ ಗಹನತೆ!
ತನಗಿಂತಲು ನಾಲ್ಕು ವರ್ಷ ದೊಡ್ಡವರಾದರೂ ತನ್ನ ವಾರಗೆಯವರಂತೆ ದೋಸ್ತಿ ಬೆಳೆಸಿ, ತನ್ನನ್ನು ಬುಟ್ಟಿಗೆ ಹಾಕಿಕೊಳ್ಳುತಿದ್ದ ರಾಮೂರ್ತಿ, ಪ್ರಸನ್ನಸರ್, ಇಮಾಮ್ ಪಟೇಲ್ ನೆನಪಿಗೆ ಬರುವ ಬಗೆಗೆ ಅನೂಪ ನಗುತ್ತಾನೆ. ತಾನು ಅವರಿಗಿಂತಲೂ ಚಿಕ್ಕವನಾದರೂ ಕೂಡು ಎಂದರೆ ಕೂಡುವ, ನಿಲ್ಲು ಎಂದರೆ ನಿಲ್ಲುವ ಬೇಕು ಅಂದಿದ್ದನ್ನು ಹೇಗಾದರೂ ಮಾಡಿ ಕೊಡಿಸಿ ತಿನ್ನಿಸಿ ಕುಡಿಸುವ ಈ ಇಂಥವರ ಸಂಚು ಅಂದರೆ ಹೇಗಾದರೂ ಮಾಡಿ ಸುನಂದಕ್ಕನು ಜೊತೆ ಸ್ನೇಹ ಗಳಿಸಬೇಕು, ಮಾತನಾಡಿಸಬೇಕು ಎಂಬುದು. ಹೇಗಾದರೂ ತನ್ನನ್ನು ಬಲೆಗೆ ಹಾಕಿಕೊಂಡು ತೆಕ್ಕೆಗೆ ಬೀಳಿಸಿಕೊಂಡು ನನ್ನ ಮಾತಾಡಿಸುವ ನೆಪದಲ್ಲಿ ಸುನಂದಕ್ಕನನ್ನು ನೋಡಿಕೊಂಡು ಹೋಗಲೇ ಬೇಕೆನ್ನುವ ಅವರ ಪ್ಲಾನ್ ಅನೂಪನಿಗೆ ಮೆಲ್ಲನೆ ಅರ್ಥವಾಗತೊಡಗಿತು. ಸುನಂದಕ್ಕನ ಸ್ನೇಹದ ಸಲುವಾಗಿ ಆ ಮೂವರೂ ಕಿತ್ತಾಡಿದ್ದು ಇದೆ. ಇಮಾಮ್ ಪಟೇಲ್ ಅಂತೂ ಸುನಂದಕ್ಕ ತನ್ನಂತೆ ಪಿ ಯು ಮೊದಲ ವರ್ಷ ಎಂದು ಗೊತ್ತುಮಾಡಿಕೊಂಡು ತನ್ನ ನೀತಿ ನಿಲುವುಗಳನ್ನೇ ಬದಲಾಯಿಕೊಂಡು ಸಿಲ್ ಸಿಲಾದ ಅಮಿತಾಬ್ ಬಚ್ಚನ್ ಆಗಿಬಿಟ್ಟಿದ್ದ. ಬೇಕೆಂದೇ ಇಂಗ್ಲೀಷ್ ನೋಟ್ಸ್ ಕೇಳುವ ನೆಪದಲ್ಲಿ ಆಗಾಗ ಸುನಂದಕ್ಕನ ಮಾತಾಡಿಸುತ್ತಿದ್ದ. ತಿಂದ ಚಾಕಲೋಟ್ ಕವರ್‌ಗಳನ್ನು ಹಾಗೆ ನೇವರಿಸಿ ಪುಟಗಳ ಮಧ್ಯೆ ಇಟ್ಟುಕೊಳ್ಳುತಿದ್ದ ಸುನಂದಕ್ಕನ ಹಾಬಿಗೆ ಮನಸೋತು ತಾನೂ ಹಾಗೇ ಮಾಡಲು ಶುರುಮಾಡಿ ಹಲ್ಲು ಹಾಳು ಮಾಡಿಕೊಂಡು ಮನೇಲಿ ಉಗಿಸಿಕೊಂಡಿದ್ದನಂತೆ! ಮಿಂಚಂತೆ ಸರಸರ ಸಪ್ಪಳ ಮಾಡುತಿದ್ದ ಪುಟಗಳ ಮಧ್ಯೆ ಚಾಕೊಲೇಟ್ ಕವರ್‌ಗಳು ಅವನ ಪಾಲಿಗೆ ನವಿಲುಗರಿಗಳಾಗಿ ಕನಸ ಬಿತ್ತಿದ್ದು ಬೇರೆ ಮಾತು.
ಕಡುಚೆಲುವೆ ಮಗಳನ್ನು ಪಡೆದ ಅಪ್ಪ ಎಂದೂ ನಕ್ಕವನೇ ಆಲ್ಲ. ಗರಿಗೆದರಿಕೊಂಡು ಬೆಳೆಯುತ್ತಿದ್ದ ಸುನಂದಕ್ಕನನ್ನು ಕಂಡರೆ ಅಪ್ಪನಿಗೆ ಒಳಗೆಲ್ಲೋ ದಿಗಿಲು. ಅಪ್ಪ ಅಮ್ಮರ ಹಣೆಯಗೆರೆಗಳು ಹೀಗೆ ಆಳವಾಗುತ್ತ ಹೋಗುತ್ತಿರುವುದನ್ನು ಅನೂಪ ಗಮನಿಸುತಿದ್ದ. ವಾಸ ಮಾಡುತಿದ್ದ ಕಾಲೋನಿಯ ಹಿಂದೆ ಮುಂದಿನ ನಾಲ್ಕಾರು ಬೀದಿಗಳವರೆಗೂ ತನ್ನ ಸುನಂದಕ್ಕನ ಮಾತು ಹಬ್ಬಿಸಿದವರಾರು ಎಂಬ ಬಗ್ಗೆ ಅನೂಪನಿಗೆ ಗೆಳೆಯರ ಬಗ್ಗೆಯೆಲ್ಲ ಅನುಮಾನ. ಅವಳನ್ನು ಕಾಯುವುದೇ ದುಸ್ಸಾಹಸವಾಗಿತ್ತವನಿಗೆ. ಮೊದಲೆಲ್ಲ ಅಪ್ಪ ಮನೆಗೆ ಬಂದ ತನ್ನ ಗೆಳೆಯರಿಗೆ ಕಾಫಿ ಕುಡಿಸುವ ನೆಪದಲ್ಲಿ ‘ಪುಟ್ಟಿ ಕಾಫಿ ತಗೊಂಡು ಬಾ’ ಅನ್ನುತಿದ್ದ. ಆದರೆ ಈಗೀಗ ಯಾರಾದರೂ ಮನೆಗೆ ಬಂದರೆ ಸುನಂದಕ್ಕ ಹೊರಕ್ಕೆ ಇಣುಕಿಯೂ ನೋಡದಂತಾದದ್ದು ಅನೂಪನಲ್ಲಿ ತಳಮಳ ಹುಟ್ಟಿಸುತಿತ್ತು. ಈ ಮೊದಲು ನೋಡಿದವರೆಲ್ಲ ಮನೆ ಒಳಗೆ ಬಂದೊಡನೆ ಅವರ ಕಂಗಳು ಸುನಂದಕ್ಕನನ್ನು ಹುಡುಕುತಿದ್ದುದನ್ನು ಅಪ್ಪ ಗಮನಿಸಿ ಆದಷ್ಟು ಬೇಗ ಅವರನ್ನು ಹೊರಗೆ ಹಾಕಲು ಪ್ರಯತ್ನಿಸುತಿದ್ದ ಅಥವಾ ತಾನೂ ಅದು ಇದೂ ನೆಪ ಹೇಳಿ ಅವರ ಜೊತೆಗೆ ಹೊರಕ್ಕೆ ಹೋಗಿಬಿಡುತಿದ್ದ. ಇತ್ತೀಚೆಗೆ ಅವಳು ಹಗಲಿನಲ್ಲಿ ಹೊರಗೆ ಹೋಗುವುದು ಅಸಾಧ್ಯವಾದಾಗ ಅಪ್ಪ ಕಾಮರ್ಸ್ ಅಕೌಂಟೆನ್ಸಿ ಟ್ಯೂಶನ್‌ಗೆ ಅಂತ ಪ್ರಸನ್ನ ಸರ್ ನ್ನು ಗೊತ್ತುಮಾಡಿದ್ದ. ಅದೂ ಪ್ರಸನ್ನ ವಿವಾಹಿತ ಒಂದು ಮಗುವಿನ ತಂದೆ ಎಂದು ಖಾತರಿ ಪಡಿಸಿಕೊಂಡು! ಮನೆಗೆ ಬಂದು ಪಾಠ ಹೇಳಿಕೊಟ್ಟು ಹೊಗುತ್ತಿದ್ದ ಪ್ರಸನ್ನ ಸರ್ ಕೂಡಾ ತನ್ನನ್ನು ಇಷ್ಟಪಡುತಿದ್ದ ಕಾರಣವನ್ನು ನೆನೆಸಿಕೊಂಡು ಅನೂಪ ನಕ್ಕು ಬಿಟ್ಟ.
ಮಳೆ ಚಳಿ ಮಡದಿ ಮಗು ಏನನ್ನೂ ಲೆಕ್ಕಿಸದೇ ಬಂದು ಪಾಠ ಮಾಡಿ ಹೋಗುತಿದ್ದ ಪ್ರಸನ್ನ ಸರ್ ಕುರಿತ ಸುನಂದಕ್ಕನ ಪ್ರತಿಕ್ರಿಯೆ ಅವಳ ಕಣ್ಣುಗಳೆ ಹೇಳುತ್ತಿದ್ದವು. ಅದರಲ್ಲೂ ಪ್ರಸನ್ನ ಸರ್ ಬಗೆಗಿನ ಅವಳ ಅಭಿಮಾನ ಪ್ರೀತಿ ಮತ್ತು ಹೇಳಿ ಹೆಸರಿಸಲಾಗದ ವಿಶ್ವಾಸ ಸುನಂದಕ್ಕನ ಮನದೊಳಗೆ ಮಾಗಿದ್ದವು. ಅದಕೆ ಪ್ರತಿಯಾಗಿ ಅವಳು ಕೊಟ್ಟದ್ದು ಆ ವಿಷಯದಲ್ಲಿ ತೆಗೆದ ಗರಿಷ್ಟ ಅಂಕಗಳು! ಹೆಚ್ಚುಮಾತಾಡಲೊಲ್ಲದ ಸುನಂದಕ್ಕನ ಮೌನದೊಳಗೆ ಇರಬಹುದಾದ ತಿಳಿ ಕನಸುಗಳನ್ನು ಅನೂಪ ಲೆಕ್ಕ ಹಾಕಿ ಹೊರಡುವಲ್ಲಿ ಸೋತನು.
ರಾಮೂರ್ತಿ ತನಗೆ ಸೈಕಲ್ ಕಲಿಸಿಕೊಟ್ಟಿದ್ದೂ ಯಾಕೆಂದು ಅನೂಪನಿಗೆ ಈಗ ಅರ್ಥವಾಗುತ್ತಿದೆ. ಹಿಂದೆ ಕೂಡಲಿಕ್ಕೆ ಕ್ಯಾರಿಯರ್ ಇರದ ಬಾಡಿಗೆ ಸೈಕಲನ್ನು ತರುತಿದ್ದ ರಾಮೂರ್ತಿ ಸಂಜೆ ಐದು ಆಯಿತೆಂದರೆ ಮನೆ ಮುಂದೆ ಬಂದು ನಿಲ್ಲುತಿದ್ದ. ಮೊದಲೆಲ್ಲಾ ಸೈಕಲ್ ಕಲಿಸಲು ಹಿಂದೆ ಬರುತಿದ್ದ ರಾಮೂರ್ತಿ ಈಗ ಹಾಗಲ್ಲ ಬಂದ ಕೂಡಲೇ ‘ಅನೂ ಪುಟ್ಟ ಸೈಕಲ್ ತಗೋ ಎರಡು ರೌಂಡ್ ತುಳಿ ಪ್ರಾಕ್ಟೀಸ್ ಆಗುತ್ತೆʼ ಅಂತ ಆಸೆ ಹಚ್ಚಿ ತನ್ನನ್ನು ಕಳುಹಿಸಿ ಸುನಂದಕ್ಕನ ಜೊತೆ ಕಾಂಪೌಂಡ್ ಹತ್ತಿರವೇ ನಿಂತು ಹರಟೆ ಹೊಡೆಯೋದಕ್ಕೆ ಶುರುಮಾಡುತ್ತಿದ್ದುದೂ ಅನೂಪನಿಗೆ ನೆನಪಿದೆ. ಹೋಗೋ ಬರೋ ಜನಕೆ ಅನುಮಾನವೂ ಬರದಂತೆ ನಟಿಸುತಿದ್ದ ಅನಿಸುತ್ತದೆ. ಅಕಸ್ಮಾತ್ ತಾನು ಸೈಕಲ್ ತುಳಿದು ಬೇಗ ಬಂದು ಬಿಟ್ಟರೆ ಅವನ ಮುಖದಲ್ಲಿ ಯಾವುದೋ ನಿರಾಶೆ. ‘ಅಯ್ಯೋ ಅನೂ ಪುಟ್ಟ ಇಷ್ಟು ಬೇಗ ಯಾಕ್ ಬಂದಿ? ಇನ್ನೆರಡು ರೌಂಡ್ ಹೋಗ್ ಬಾ’ಎಂದು ಪುನಃ ತನ್ನನ್ನು ದಬ್ಬಿದಂತೆ ಯಾಕೆ ಕಳುಹಿಸುತ್ತಿದ್ದ ರಾಮೂರ್ತಿ? ಎಂಬುದೆಲ್ಲಾ ಈಗ ಅರ್ಥವಾಗುತಿದೆ. ಅದು ತನ್ನ ಬಗೆಗಿನ ಪ್ರೀತಿಗಲ್ಲ; ಬದಲಿಗೆ ಸುನಂದಕ್ಕನ ಮಾಯಕದ ನಗೆ, ಮಾತಿನ ಮೋಹ ಎಂಬುದು ಅರಿವಾಯಿತು. ಚೂರು ಒಳಗೆ ನೋವಾದರೂ, ಸುನಂದಕ್ಕನ ಮುಖದಲ್ಲಿ ಅದಾವುದೋ ನಗೆಯ ಕಂಡಂತಾಗಿ ಅನೂಪ ಮತ್ತೆ ಸೈಕಲ್ ಏರುತ್ತಿದ್ದ. ಅವಳ ಮುಖದಲಿ ಈ ನಗೆಯನ್ನು ಉಳಿಸಲು ತಾನು ಇಷ್ಟೂ ಮಾಡದಿದ್ದರೆ ಹೇಗೆ ಎಂಬ ಭಾವದಲಿ. ಈ ಹೊತ್ತು ಬದುಕು ಅವನಿಗೆ ಕಾರಿನಲ್ಲಿ ಓಡಾಡುವ ಚೈತನ್ಯ ತಂದು ಕೊಟ್ಟಿದ್ದರು ಪ್ರತಿ ಬಾರಿ ಕಾರನ್ನು ಆನ್ ಮಾಡುವಾಗಲೂ ರಾಮೂರ್ತಿಯ ಸೈಕಲ್ ನೆನಪಾಗುತ್ತದೆ!
ಆ ಹೊತ್ತಿನ ಟ್ರಿನ್ ಟ್ರಿನ್ ಸೈಕಲ್ ನ ಸದ್ದು ಮತ್ತೆ ಕಿವಿತುಂಬಾ ತುಂಬಿದಂತಾಗಿ ಸುನಂದಕ್ಕಳ ಬದುಕಿನ ಪಲ್ಲಟಗಳ ಹಾಳೆ ತಿರುವಿದ ಅನುಭವ ಅನೂಪ ತುಂಬಿಕೊಂಡು ಕೂರುತ್ತಾನೆ. ರಾಮೂರ್ತಿ ಮತ್ತೆ ಮನೆಗೆ ಹೊರಡುವ ಹೊತ್ತು ತನ್ನನು ರಮಿಸಲು ಸೈಕಲ್ ಮೇಲೆ ಕೂರಿಸಿಕೊಂಡು ಹೋಗಿ ಅಯ್ಯಂಗಾರ್ ಬೇಕರಿಯ ಖಾರ ಬನ್ನು, ಸೀನಪ್ಪನ ಹೋಟೆಲ್‌ನ ಮಂಡಕ್ಕಿ ಮೆಣಸಿನಕಾಯಿ ಬೋಂಡಾ ತಿನ್ನಿಸುತಿದ್ದ ನೆನಪು ಈ ಹೊತ್ತಿನ ಎಲ್ಲ ಜಂಕ್ ಫುಡ್‌ಗಳ ರುಚಿಯನ್ನು ನಿವಾಳಿಸಿ ಎಸೆವ ರೀತಿ ಮತ್ತೆ ಮತ್ತೆ ಕಾಡುತ್ತದೆ. ಸುನಂದಕ್ಕನ ಬಗೆಗೆ ರಾಮೂರ್ತಿಗೆ ಇದ್ದ ಯಾವುದೋ ಮೋಹ ಮತ್ತು ಅವಳ ಕಡುಚೆಲುವಿಕೆಯ ಮಹಾ ಮೌನ ಅನೂಪನನ್ನು ಹೇಗೆಲ್ಲಾ ಒಳಗೊಂಡಿತು ಎಂಬುದೇ ಅವನ ಎದುರಿಗಿರುವ ಜಿಜ್ಞಾಸೆ ಕೂಡಾ.
ಸುನಂದಕ್ಕನ ಬೆರಳನ್ನು ತಾನು ಹಿಡಿದುಕೊಳ್ಳದೇ ಆಕೆಯೇ ತನ್ನ ಬೆರಳನ್ನು ಬಿಗಿಯಾಗಿ ಹಿಡಿದುಕೊಂಡು ಬೆದರಿದ ಜಿಂಕೆಯಂತೆ ಬೆವರುತ್ತಾ ಪೇಟೆ ರಸ್ತೆಯಲ್ಲಿ ಸುತ್ತಾಡಿದ ಬಗೆ ಇನ್ನೂ ಅನೂಪನ ಕಣ್ಣಲ್ಲಿ ಹಸಿ ಹಸಿ. ಬೆವೆತ ಅವಳ ಬೆರಳುಗಳಲ್ಲಿ ಅಸುರಕ್ಷತೆಯ ಸ್ರೋತವೊಂದು ಹರಿಯುತ್ತಿದ್ದ ಸಂವೇದನೆ ಅವನಲ್ಲಿ. ಕಡುಚೆಲುವಿ ಅಕ್ಕನನ್ನು ಪೇಟೆ ಬೀದಿಯಲ್ಲಿ ಕರೆದುಕೊಂಡು ಹೋಗುವ ಅಂದಿನ ಸಂಭ್ರಮ ಈ ಹೊತ್ತು ಅದಾವುದೋ ತತ್ವಕ್ಕೆ ಅವನನ್ನು ಜೋತುಹಾಕಿದೆ. ಅಪ್ಪ ಅಮ್ಮ ಅನುಭವಿಸುತಿದ್ದ ಒಳ ಆತಂಕದ ಅರಿವದು. ಕಣ್ಣುಗಳಲ್ಲೇ ಅಕ್ಕನ ಇಡಿ ದೇಹವನ್ನು ಅಳೆಯುತ್ತಿದ್ದ, ಕಿಚಾಯಿಸುತಿದ್ದ, ಅಶ್ಲೀಲವಾದ ದ್ವಂದ್ವಾರ್ಥವನ್ನು ಎಸೆಯುತಿದ್ದ ಧೂರ್ತರ ದಂಡು ಕಣ್ಣೆದುರು ಮತ್ತೆ ಬಂದು ‘ಹಾಯ್ ಸುನಂದಕ್ಕೆ ಈಗ ಹೇಗಿದ್ದೀಯೆ?’ ಎಂದು ಫೋನ್ ಮಾಡಿ ವಿಚಾರಿಸುವ ಕಂಪನಕ್ಕೆ ಮನಸು ಮಿಡಿಯಿತು. ಲಿಸ್ಟ್ ಮಾಡಿಕೊಂಡು ಹೋದರೂ ಇಂತಹ ಜಂಗುಳಿಯಲ್ಲಿ ಕಕ್ಕಾಬಿಕ್ಕಿಯಾಗಿ ಅರ್ಧಂಬರ್ಧ ಸಾಮಾನುಗಳನ್ನು ತಂದು ಅಮ್ಮನ ರೇಗಾಟಕ್ಕೂ ಅವಳು ಬಲಿಯಾಗಿದ್ದಿದೆ. ಈ ಭಯದಲ್ಲಿ ತನಗೆ ಚಾಕೊಲೇಟ್ ಕೊಡಿಸುವುದನ್ನೂ ಮರೆತು ಬಿಡುತ್ತಿದ್ದ ಸುನಂದಕ್ಕಳ ವಿಹ್ವಲತೆ ಅಷ್ಟಿಷ್ಟು ಅರಿವಾಗುತಿತ್ತು. ತಮಾಶೆ ಎಂದರೆ ಕಾಲೋನಿಯ ಹಿಂದಿನ ಸಾಲಿನ ಮಂಜ ತಾವಿಬ್ಬರೂ ಪೇಟೆಗೆ ಹೋಗುತಿರುವುದನ್ನು ಕಂಡು ತಾನೂ ಮೆಲ್ಲಗೆ ಹಿಂಬಾಲಿಸಿ ಗೊತ್ತಾಗದಂತೆ ಮರೆಯಾಗುತಿದ್ದ ಬಗೆಯನ್ನು ಸುನಂದಕ್ಕೆ ಕಂಡು ಸುಮ್ಮನೆ ಮುಗುಳ್ನಕ್ಕು ಸಾಗಿದ್ದಳು!
ಆಗೆಲ್ಲ ಕಡುಚೆಲುವಿನ ಮೋಹದ ಕಿಚ್ಚನ್ನು, ಮಾಯಕದ ಕಂಪನ್ನು ಹರಡಿಸುತಿದ್ದ ಸುನಂದಕ್ಕ ಈಗ ಎರಡು ಮಕ್ಕಳ ತಾಯಿ. ಆಕೆಯ ಚೆಲುವಿಕೆಯನ್ನು ಕಾದಾಡಿ ಕಿತ್ತುಕೊಂಡವರಂತೆ ಹುಟ್ಟಿದವರು ಅವಳಿ ಜವಳಿ ಗಂಡುಮಕ್ಕಳು! ಒಳಗೆ ನಿಟ್ಟುಸಿರು ಬಿಟ್ಟಂತಿದ್ದ ಸುನಂದಕ್ಕನ ಮುಖದಲ್ಲಿ ಸಮಾಧಾನದ ಛಾಯೆಯನ್ನು ಅನೂಪ ಗಮನಿಸಿದ್ದ. ಹಾಗೆ ಮುಖದಲ್ಲಿನ ಸುಕ್ಕುಗಳು ಕ್ರೀಮಿನಲ್ಲಿ ಮುಳುಗಿಹೋದ ಬಗೆಯನ್ನೂ ಕೂಡಾ. ಮಾತು ಮಾತಿಗೆ ಎಲ್ಲವನ್ನೂ ನಗೆಯಲ್ಲೇ ಮೀಯಿಸುವ ಸುನಂದಕ್ಕ ತನ್ನೆಲ್ಲ ಭಾವನೆಗಳನ್ನು ಅದುಮಿಟ್ಟುಕೊಂಡು ಅಪ್ಪ ಹುಡುಕಿದ್ದ ಗಂಡಿನ ಕೈಗೆ ಕೊರಳನ್ನು ಕೊಟ್ಟದ್ದು ಮದುವೆ ಮಂಟಪದಲ್ಲಿ ಅನೂಪ ಗುರುತಿಸಿದ್ದ. ಅವಳ ಗೆಳತಿಯರು ‘ಯಾಕೆ ಸುನೀ ಯಾವ ಫೋಟೊದಲ್ಲಿಯೂ ಉಲ್ಲಾಸದ ಮುಖವಿಲ್ಲ’ ಎಂದು ಕೇಳಿದ ಪ್ರಶ್ನೆಗೆ ಸುನಂದಳ ಉತ್ತರ ಒಂದೆ! ಅದೇ ನಕ್ಕಂತಿರುವ ಅಳು ಅಥವಾ ಅತ್ತಂತಿರುವ ನಗು! ಮಾತು ಮಾತಿಗೆ ಅದೇ ನಗೆ ನಗೆ ನಗೆ. ಮಾಗಿದ ಮನಸಿನ ಆಳದಲ್ಲಿ ರೋಮಾಂಚನದ ಕ್ಷಣಗಳನ್ನು ಅವಿತಿಟ್ಟುಕೊಂದ ಹಾಗೆ. ಭವದ ಬಯಕೆಗಳೆಲ್ಲವೂ ನಕ್ಷತ್ರಗಳಾಗಿ ಹಾರಿ ಆಕಾಶದಲ್ಲಿ ಬೀಡು ಬಿಟ್ಟಹಾಗೆ. ಸೈಕಲ್ಲಿನ ಟ್ರಿನ್ ಟ್ರಿನ್ ಬೆಲ್, ಚಾಕಲೇಟಿನ ಕರಪರ ಕವರ್, ಅಕೌಂಟನ್ಸಿಯ ಪಟ್ಟಿಗಳ ಮಾತು ಬಂದಾಗ ಸುನಂದಕ್ಕನ ಕಣ್ಣುಗಳಲ್ಲಿ ಮೂಡುವ ಬೆಳಕು, ಒಳಗೆ ಹರಿವ ನದಿ, ಅವಳೇ ಬಲ್ಲಳು.

ರಾಮೂರ್ತಿ ಅಕ್ಕನ ಮೃದುಮಾತಿಗೆ ಸೋತು ಪೆಚ್ಚಾಗಿ ನಿಂತಲ್ಲೆ ನಿಂತುಬಿಡುತಿದ್ದರೆ, ಟ್ಯೂಶನ್ ಪ್ರಸನ್ನ ಸರ್ ಹೆಬ್ಬಾವಿನುದ್ದದ ದಪ್ಪ ಜಡೆಯ ಮಾಟವನ್ನು ಕಂಡು ಟ್ಯಾಲಿಯಾಗದ ಟೇಬಲ್‌ಗಳ ಮಧ್ಯೆ ಕಕ್ಕಾಬಿಕ್ಕಿಯಾಗುತಿದ್ದರು. ಅವಳಿಗೆ ಬೈತಲೆ ತೆಗೆ ಎರಡು ಜಡೆಯನ್ನು ಹೆಣೆಯುವಷ್ಟರಲ್ಲಿ, ರಟ್ಟೆ ಸೊತುಹೋಗಿ ಗೊಣಗಾಡುತಿದ್ದಳು. ‘ಅದಾವ ಪುಡಿಗೊಬ್ಬರ ಹಾಕಿ ಬೆಳೇಸಿದ್ದೀ ತಾಯಿ’ ಎಂದು ಪ್ರೀತಿಯಿಂದ ರೇಗುತಿದ್ದಳು. ಅಮ್ಮನ ಒಳಗೇ ಚಿಮ್ಮುತಿದ್ದ ಹೆಮ್ಮೆಯ ಭಾವವನ್ನು ಅನೂಪ ಸಹ ಗಮನಿಸುತಿದ್ದ. ಸುನಂದಕ್ಕಳದು ಮತ್ತೆ ಅದೇ ನಗು. ಊಟಕ್ಕೆ ಕೂತಾಗಲಂತು ತಟ್ಟೆಯಲ್ಲಿ ಕೂದಲೆಳೆ ಸಿಕ್ಕರೆ ಅಪ್ಪ ಅಳೆದಳೆದು ನೋಡಿ ಬೈಯುತಿದ್ದ. ಉದ್ದಕೂ ಮಣಿಗಳಂತೆ ಅನ್ನದ ಅಗುಳನ್ನು ಅಂಟಿಸಿಕೊಂಡು ಕೂದಲ ಎಳೆಯೊಂದನ್ನು ತಟ್ಟೆಯಿಂದ ಎಳೆಯುತ್ತ ಸುನಂದಕ್ಕನ ಕಡೆ ದುರುಗುಟ್ಟಿಕೊಂಡು ನೋಡಿದರೇ ಸಾಕು ಅಕ್ಕ ಅಲ್ಲಿಂದ ಪರಾರಿ!
‘ಸುನಿ ದಯವಿಟ್ಟು ಕೂದಲ ಹರಡಿಕೊಂಡು ಅಡುಗೆ ಮನೆಗೆ ಬರಬೇಡ್ವೇ’ಅಂತ ಅಮ್ಮ ವಿನಂತಿಸಿಕೊಳ್ಳುತ್ತಿದ್ದಳು. ಇನ್ನು ತಲೆ ಬಾಚಿಕೊಳ್ಳಲೆಂದು ಹೊರಗೆ ಬಂದು ನಿಂತರೆ. ಎದುರಿನ ಮನೆಯ ಕಿಟಕಿಯೊಂದು ರಪ್ಪನೆ ತೆರೆದುಕೊಳ್ಳುತಿತ್ತು..!
ಸುಮ್ಮನೆ ಕೂಡಲು ಬಿಡದ ನೆನಪುಗಳು ಅನೂಪನ ಒಳಗನ್ನು ಮತ್ತೆ ಮತ್ತೆ ಮತ್ತೆ ಬಗೆಯುತ್ತವೆ… ಟ್ಯೂಶನ್ ಮಾಡೊ ನೆಪದಲ್ಲಿ ಹೆಂಡತಿ ಕೊಟ್ಟಳು ಎಂದು ಕರ್ಚೀಫ್‌ನಲ್ಲಿ ದುಂಡು ಮಲ್ಲಿಗೆಯ ಮೊಗ್ಗುಗಳನ್ನು ತಂದಿಟ್ಟುಹೋಗುತಿದ್ದ ಪ್ರಸನ್ನ ಸರ್ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳುತಿದ್ದ ರೀತಿ ಅದೇನೆ ಅನಿಸುತ್ತಿದೆ. ಮುಡಿಯಲ್ಲಿ ಇಟ್ಟುಕೊಳ್ಳದ ಸುನಂದಕ್ಕ ಮತ್ತೆ ಅವುಗಳನ್ನು ಅಕೌಂಟೆನ್ಸಿ ನೋಟ್ಸ್‌ನಲ್ಲಿ ಮಡಿಚಿಟ್ಟು ಆಗಾಗ ಮೂಸಿನೋಡುತಿದ್ದದೂ ಅನೂಪನಿಗೆ ನೆನಪು. ಚಾಕೊಲೇಟ್ ಕವರ್‌ಗಳ ಸರದಿಯಲ್ಲಿ ಮತ್ತೆ ಒಣಗಿದರೂ ಕಂಪುಕಳೆದುಕೊಳ್ಳದ ಮಲ್ಲಿಗೆ! ಸುನಂದಕ್ಕನ ಸ್ನೇಹ ಸಾಮೀಪ್ಯ ಗಳಿಸಿಕೊಳ್ಳುವುದೇ ತಮ್ಮ ಜೀವನದ ಧ್ಯೇಯವೆಂದು ನಂಬಿ ಸರ್ಕಸ್ ಮಾಡುತಿದ್ದ ರಾಮೂರ್ತಿ, ಪಟೇಲ್, ಪ್ರಸನ್ನ ಸರ್… ಇವರೆಲ್ಲರೂ ತನ್ನನ್ನು ಈ ಸ್ವಾರ್ಥದಿಂದಲೇ ಬಳಸಿಕೊಳ್ಳೂತಿದ್ದರೆಂಬ ಸತ್ಯ ಮೆಲ್ಲನೆ ಮನದಟ್ಟಾಗಿ ಅನೂಪನೊಳಗೆ ಮಾಗುವದಾರಿಯನ್ನು ಕಲಿಸಿಕೊಡುತ್ತಿತ್ತು. ಒಂದು ಕ್ಷಣವು ತನ್ನನ್ನು ಬಿಡದ ಸುನಂದಕ್ಕ ಕೂಡ ತನ್ನನ್ನು ಭದ್ರತೆಯ ಕವಚವನ್ನಾಗಿ ಕಂಡಳೊ ಅಥವ ಜಗದ ಅನುಮಾನಗಳಿಗೆ ತನ್ನನ್ನು ಕೋಟೆಯಾಗಿ ಕಟ್ಟಿಕೊಂಡಳೋ ಅನೂಪ ಚಿಂತಿಸುತ್ತಾನೆ.
ಅನೂ ಅನೂ ಎಂದೇ ಪ್ರೀತಿಯಿಂದ ಮಾತಾಡಿಸುತಿದ್ದ ಆ ಕಾಲೋನಿಯ ಬಹುತೇಕ ಹುಡುಗರ, ಗಂಡಸರ ಒಳತಂತ್ರ ಈಗ ಅನೂಪನಿಗೆ ಅರ್ಥವಾಗಿ, ಮುಗ್ಧ ಪ್ರಪಂಚದ ಪೊರೆಯನ್ನು ಕಳಚಿಟ್ಟು ಬಹು ದೂರ ಬಂದಿದ್ದಾನೆ. ಬದುಕೂ ತುಂಬಾ ಬದಲಾಗಿದೆ. ಏನೆ ಬದಲಾದರೂ ಸುನಂದಕ್ಕ ಕೊಟ್ಟ ಬೆಚ್ಚಗಿನ ಆಪ್ತತೆ ಮತ್ತು ಕಹಿಸತ್ಯಗಳ ಅರಿವು ಅವನನ್ನು ಮತ್ತಷ್ಟು ಮಾಗಿಸಿದೆ. ಹಲವು ಬವಣೆಗಳನ್ನು ತಮ್ಮ ಅರಿವಿಗೆ ತಾಗಿಸದಂತೆ ಬಾಳುತಿದ್ದ ಅಪ್ಪ ಅಮ್ಮನ ಜೀವ ವೈಖರಿ ಇಲ್ಲಿವರೆಗೂ ಕರೆದು ತಂದಿದೆ. ಅಪ್ಪ ಅನಾರೋಗ್ಯದ ಕಾರಣ ಎರಡು ವರ್ಷ ಮುಂಚೆಯೇ ನಿವೃತ್ತಿ ಪಡೆದು ಕಾಲೊನಿಯನ್ನು ತೊರೆದು ಹಳ್ಳಿಯ ಸ್ವಂತ ಮನೆಗೆ ಬಂದು ನೆಲೆ ಒದಗಿಸಿಕೊಟ್ಟದ್ದು, ಕಾಲೋನಿ ಬಿಡುವ ದಿನ ಆಚೀಚೆಯ ಜನರೆಲ್ಲ ಕೈಬೀಸಿ ಬೀಳ್ಕೊಟ್ಟಿದ್ದು, ದೂರದಲ್ಲಿ ರಾಮೂರ್ತಿ ತನ್ನ ಸೈಕಲಿಗೆ ಒರಗಿ ನಿಂತದ್ದು, ಕರ್ಚೀಫ್ ಹಿಡಿದುಕೊಂಡು ಬೆವರು ಒರೆಸಿಕೊಂಡು ನಿಂತಿದ್ದ ಪ್ರಸನ್ನ ಸರ್, ಸಿಲ್ ಸಿಲಾದ ಅಮಿತಾಭ್ ಸ್ಟೈಲ್‌ನನಲ್ಲಿ ಉದಾಸ್ ಆಗಿದ್ದ ಇಮಾಮ್ ಪಟೆಲ್ ಎಲ್ಲರ ಮುಖ ಅನೂಪನ ಎದೆಯೊಳಗೆ ಒಮ್ಮೆ ಹಾದು ಹೋಯಿತು. ಎಲ್ಲರನ್ನು ಒಮ್ಮೆ ದಿಟ್ಟಿಸಿನೋಡುತ್ತಲೇ ಲಗೇಜಿನ ಲಾರಿ ಮುಂಭಾಗದಲ್ಲಿ ಹತ್ತಿ ಕೂತ ಸುನಂದಕ್ಕ ಬದುಕಿನ ಲವಲವಿಕೆಯನ್ನೆಲ್ಲಾ ಗಂಟು ಕಟ್ಟಿಕೊಂಡು ಹೋಗುವಂತೆ ಕೈ ಬೀಸಿದ್ದಳು. ಅದರೆ ಮತ್ತೆ ಅವಳು ಆ ಗಂಟನ್ನು ಬಿಚ್ಚಲೇ ಇಲ್ಲ ಅನಿಸಿತ್ತು ಅನೂಪನಿಗೆ.
ಕೈತಪ್ಪಿ ಹೋಗಿ ಬಿಡುವ ಕ್ಷಣಗಳ ಮಾದಕತೆಗಳನ್ನು ಕುರಿತು ಅನೂಪ ಮತ್ತೆ ಯೋಚಿಸುವುದುಂಟು. ಬದುಕು ಇಷ್ಟು ದೂರ ಕರೆತಂದು ಬಿಟ್ಟಾಗ ಸವೆದ ಹಾದಿಯನ್ನು ಮತ್ತೆ ನೋಡುವ ವ್ಯಸನಕ್ಕೆ ಕೂರಬೇಕೆನಿಸುವ ಹಂಬಲ ಹಟ. ಕಡುಚೆಲುವೆ ಸುನಂದಕ್ಕ ಜೊತೆಗೆ ಅಂಟಿಕೊಂಡಿದ್ದ ಬದುಕು ಅಕಾಲ ಪ್ರೌಢಿಮೆಯನ್ನೆ ಅವನಲ್ಲಿ ತಂದಿಟ್ಟಿತು. ತಮ್ಮ ಮಗಳು ಸೆರಗಿನ ಕೆಂಡ ಎಂದೇ ನಂಬಿದ್ದ ಅಪ್ಪ ಅಮ್ಮಂದಿರ ಆತಂಕವೆಲ್ಲ ಅನೂಪನಿಗೆ ಮತ್ತೆ ಎದುರಾದದ್ದು ಥೇಟ್ ಸೋದರತ್ತೆಯ ರೂಪದ ಚೆಲುವಿನ ಪಡಿಯನ್ನೇ ಉಟ್ಟುಕೊಂಡು ಹುಟ್ಟಿದ ತನ್ನ ಮಗಳನ್ನು ನೋಡಿ! ಪುಟ್ಟ ಮಗಳು ಪರಿಯನ್ನು ಕಂಡಾಗಲೆಲ್ಲಾ ಅದಾವ ಅಧ್ಯಾಯಗಳು ಮತ್ತೆ ತೆರೆದುಕೊಳ್ಳಲು ಕಾದಿವೆಯೋ ಎಂಬ ತವಕ ಅನೂಪನ ಪಾಲಿಗೆ.
ಅನೂಪನಿಗೆ ಇನ್ನೂ ಚೆನ್ನಾಗಿ ನೆನಪಿದೆ.
ಸುನಂದಕ್ಕಗೆ ಮದುವೆಯಾಗಿ ಒಂದು ವಾರವೂ ಆಗಿರಲಿಕ್ಕಿಲ್ಲ. ದಿವಾಕರ ಭಾವ ಅವಳಿಗೆ ಉದ್ದದ ಹೆರಳನ್ನು ಕತ್ತರಿಸಲು ಆಜ್ಞೆಮಾಡಿದ್ದು! ನಗುವನ್ನೆ ಕಳೆದುಕೊಂಡಂತಿದ್ದ ಸುನಂದಕ್ಕ ತನ್ನ ಹೆರಳನ್ನು ಮೋಟು ಜಡೆ ಮಾಡಿಸಿಕೊಂಡು ‘ಅನೂ ಪುಟ್ಟಾ’ ಎಂದು ಯಾವತ್ತೂ ಕರೆವಂತೆ ‘ಅಮ್ಮಗೆ ಹೇಳು ಇನ್ನು ಮುಂದೆ ನನಗೆ ಜಡೆಹಾಕುವಾಗ ಯಾವತ್ತೂ ಕೈ ಸೋಲು ಬರುವುದಿಲ್ಲ’ ಅಂದಿದ್ದಳು. ಸುನಂದಕ್ಕನ ಕಣ್ಣಂಚಿನ ನೀರು ತುಳುಕದೆ ಒಳಗೇ ಇಂಗಿ ಹೋದದ್ದು ಅನೂಪ ಕಂಡ. ನಿಂತ ಕೂತಲ್ಲಿ ನಡೆವಲ್ಲಿ ನುಡಿವಲ್ಲಿ ಅಪನಂಬಿಕೆಯ ಮುಳ್ಳುಗಳನ್ನು ಹಾಸುವ ದಿವಾಕರ ಭಾವನ ವ್ಯಂಗ್ಯಕ್ಕೆ ಸುನಂದಕ್ಕ ಕೊಟ್ಟದ್ದು ಮತ್ತದೇ ನಗೆ! ‘ಯಾಕೆ ಸುನೀ ಜಡೆ ಕತ್ತರಿಕೊಂಡೆ’? ಎಂಬ ಅಮ್ಮನ ಮಾತಿಗೆ ‘ಹೊಟ್ಟು ಹೇನು ಹುಳʼ ಅಂತೆಲ್ಲಾ ತೊದಲಿದ್ದಳು. ಹಳ್ಳಿ ಮನೆಯ ಅಂಗಳದ ಗೋರಂಟಿ ಗಿಡ ಸುನಂದಕ್ಕನ ಕೈಗೆ ಸಿಕ್ಕು ಪ್ರತಿಸಲ ಬೋಳಾಗುತಿದ್ದುದನ್ನು ಅನೂಪ ಮರೆಯುವಂತಿಲ್ಲ.

ಕನಸುಗಳನ್ನು ಕಲಿಸುತಿದ್ದ ಸುನಂದಕ್ಕ ಅಡುಗೆ ಮನೆ ಸೇರಿಹೋದಾಗ ಅಪಾರ ಚೆಲುವು, ಲವಲವಿಕೆ, ಜೀವನೋತ್ಸಾಹ, ಪ್ರತಿಭೆ, ಪ್ರಭೆ, ಮೆಲ್ಲನೆ ಒಗ್ಗರಣೆ ಗಂಧದಲ್ಲಿ ಕರಗಿಹೋಗಿದ್ದು ಅನೂಪನಿಗೆ ಪ್ರಶ್ನೆ. ನಿರ್ಭಾವುಕ ದಿವಾಕರ ಭಾವನನ್ನು ರಸ್ತೆಯಲ್ಲಿ ಭೇಟಿಯಾದಾಗ ಈ ಬಗ್ಗೆ ಕೇಳಬೇಕು ಎನಿಸುತ್ತದೆ. ಆದರೆ ಎಲ್ಲಕು ಸುನಂದಕ್ಕನ ಅದೇ ನಗೆ ಅಡ್ದ ಬಂದು, ಪುಸ್ತಕದ ಪುಟಗಳ ಮಧ್ಯೆ ಇಟ್ಟಿದ್ದ ದುಂಡು ಮಲ್ಲಿಗೆ ಹೂ ಇನ್ನೂ ಸುವಾಸನೆಯನ್ನು ಕಳೆದುಕೊಳ್ಳದಿರುವ ವಿಸ್ಮಯ ನೆನಪಾಗಿ ಸುಮ್ಮನಾಗುತ್ತಾನೆ. ಪರಿಯ ನಾಮಕರಣಕ್ಕೆಂದು ಬಂದು ಹೋಗಿದ್ದ ಸುನಂದಕ್ಕ ತಿಂಗಳಾದರೂ ಮನೆಗೆ ಬಾರದಿದ್ದುದಕೆ ಆತಂಕಗೊಂಡು ಅನೂಪ ಅಕ್ಕನನ್ನು ನೋಡಲು ಬಂದಾಗ ನಟಿ ಶಿರೋಮಣಿಯಂತೆ ಮತ್ತೆ ನಗು ನಗುತ್ತ ಬಂದ ಸುನಂದಕ್ಕನನ್ನು ಕಂಡು ಮೌನವಾಗುತ್ತಾನೆ. ಏನನ್ನೊ ವಿಚಾರಿಸಬೇಕು ಎಂದು ನಿರ್ಧರಿಸಿ ಬಂದವನಿಗೆ ಸುನಂದಕ್ಕ ಕಾಫಿ ಕಪ್ ಕೈಗಿಟ್ಟು ‘ಎಲ್ಲಾ ಅರಾಮಿದಾರ? ಅಪ್ಪನ ಬಿ.ಪಿ ಕಂಟ್ರೋಲಲ್ಲಿ ಇದೆಯ?ʼ ಅಂತೆಲಾ ಪ್ರಶ್ನಿಸುತ್ತಾ ಅಡುಗೆ ಮನೆ ಸೇರುತ್ತಾಳೆ. ಏನನ್ನು ವಿಚಾರಿಸಲಾಗದೆ ಅನೂಪ ಹೊರಡೋದಕ್ಕೆ ಅಣಿಯಾದಾಗ ಸುನಂದಕ್ಕ ಒಳಗಿನಿಂದಲೇ ಕೂಗಿ ಹೇಳಿದ;
‘ಅನೂ ಪರೀನ ಚೆನ್ನಾಗಿ ನೋಡ್ಕೋ’ ಎಂಬ ಮಾತು ಸಾವಿರ ಕಥೆಗಳನ್ನು ತೆರೆದಿಡುತ್ತದೆ!

ನನ್ನ ಕಥೆ, ನನ್ನ ಅಭಿಪ್ರಾಯ
ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ ಕತೆ ಗಾಢವಾದ ಒಂದು ನೆನಪಿನ ಪುಟವೇ ಎನಿಸುತ್ತದೆ. ಯಾವುದೇ ಬರಹಗಾರ ತನ್ನ ಸ್ವಂತ ಬದುಕಿಗೆ ‘ತುಸು’ ಹತ್ತಿರವಾದ ಸಂಗತಿಯನ್ನ ಮಾತ್ರ ಬಹಳ ಆಪ್ತವಾಗಿ ಮತ್ತು ಪ್ರಾಮಾಣಿಕವಾಗಿ ಪ್ರೀತಿಯಿಂದ ಬರೆಯಬಲ್ಲ. ಈ ಕತೆ ಕೂಡಾ ಹಾಗೆ ‘ಒಂದಿಷ್ಟು’ ನನ್ನ ಪ್ರೀತಿಯ ಅಕ್ಕನ ಜೊತೆಗಿನ ಕರುಳ ಬಾಂಧವ್ಯದ ಬಿಂಬವಾಗಿದೆ.
ಪುಟ್ಟ ಬಾಲಕನಾಗಿದ್ದಾಗ ಕಂಡ ಬದುಕಿನ ಅನುಭವಗಳನ್ನು ಈ ಹೊತ್ತಿಗೆ ಅವಲೋಕಿಸಿದಾಗ ಗಳಿಸುವ ಅರಿವು ಮತ್ತು ಬದಲಾದ ಮನಸ್ಥಿತಿಗಳ ಚಿತ್ರವೇ ಆಗಿದೆ. ಮುಗ್ಧತೆಯ ಅರಿವೊಂದು ಮಾಗುವ ಪಯಣದಲ್ಲಿ ಪೂರಕವಾದ ಕೆಲವು ಶಕ್ತಿಗಳನ್ನು ನೆನಪಿಸಿಕೊಳ್ಳುವ ಈ ಪ್ರಯತ್ನ ಇದು. ಒಂದು ಜೀವದ ಮಾನಸಿಕ ಮತ್ತು ದೈಹಿಕ ಚೆಲುವು ಸುತ್ತಲಿನ ಮನಸುಗಳ ಮೇಲೆ ಮೂಡಿಸಬಹುದಾದ ಪರಿಣಾಮಗಳನ್ನು ಅಚ್ಚರಿಯಿಂದ ಕಂಡ ಕಣ್ಣುಗಳ ನೋಟ ಒಂದು ಕತೆಯೇ ಆಗುವಾಗ ಬಹಳ ಆಪ್ತವಾಗಿ ಕಾಡುತ್ತದೆ. ಸುನಂದಕ್ಕ ಬದುಕಿನ ಬೀಸುಗಳಿಗೆ ಸಾಕ್ಷಿಯಾದ ಬಗೆ ನನಗೆ ಸದಾ ಪಾಠ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
