Advertisement
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ

‘ಈ ಮಹಾರಾಯನ ಕೊರೆತದಿಂದ, ನಾನು ಬೇರೆಯವರಿಗೆ ಎಷ್ಟು ಕೊರೆಯುತ್ತಿದ್ದೆ ಎಂಬ ಅರಿವಾಗಿದೆ. ಪಾಪ! ನನ್ನ ಸೊಸೆ ಚಿನ್ನದಂಥಾ ಹುಡುಗಿ. ಎಲ್ಲವನ್ನೂ ಸಹಿಸಿದ್ದಾಳೆ. ಈತನ ಕೊರೆತ ತಪ್ಪಿಸಿಕೊಳ್ಳಲು ಸೊಸೆಯನ್ನೇ ಮೊರೆ ಹೋಗಬೇಕು’ ಎಂದು ಮನದಲ್ಲೇ ನಿರ್ಧರಿಸಿದರು. ಮರುದಿನ ಬೆಳಿಗ್ಗೆ ನಂದಿನಿ ನಿತಿನ್‌ನನ್ನು ಶಾಲೆಗೆ ಒಯ್ಯಲು ಸಿದ್ಧಳಾದಾಗ ರಾಯರು ಅವಳಲ್ಲಿಗೆ ಬಂದರು. ಶಾಸ್ತ್ರಿಗಳು ಎಲ್ಲೂ ಕಾಣಿಸಲಿಲ್ಲ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ “ಉಭಯ ಸಂಕಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಮಗನ ಷೂಲೇಸು ಕಟ್ಟುತ್ತಿದ್ದ ನಂದಿನಿ ಮಾವನವರ ಧ್ವನಿ ಕೇಳಿ ತಲೆ ಎತ್ತಿ ನಸುನಕ್ಕಳು.

“ನಾಗೂ, ಏ ನಾಗೂ ಬೇಗ ಬಾರೇ ಇಲ್ಲೀ” ಎಂದ ಮಾವನವರ ಕರೆಯನ್ನು “ಏನೂಂದ್ರೇ?” ಎಂಬ ಅತ್ತೆಯ ಧ್ವನಿ ಹಿಂಬಾಲಿಸಿತ್ತು. “ಆ ಹಕ್ಕಿನೋಡು ಎಷ್ಟು ಚೆನ್ನಾಗಿದೆ ಅಲ್ಲಾ? ನಮ್ಮೂರಲ್ಲಿ ಇಲ್ಲ” ಮಾವ ರಾಜಾರಾಯರ ಧ್ವನಿ, ತನ್ನ ಐದು ವರ್ಷದ ಮಗ ನಿತಿನ್‌ನ ತಲೆ ಬಾಚುತ್ತಿದ್ದ ನಂದಿನಿಗೆ ಕೇಳಿಸಿತ್ತು.

“ಹೂಂ ಅಂದ್ರೇ, ನಿಮ್ಮ ಕಣ್ಣು ಭಾಳಾ ಚುರುಕು. ಈ ವಯಸ್ಸಿನಲ್ಲೂ ಕನ್ನಡಕ ಇಲ್ಲದೇ ಅಷ್ಟು ಚೆನ್ನಾಗಿ ಕಾಣಿಸುತ್ತಲ್ಲಾ” ಎಂದಿದ್ದರು ಅತ್ತೆ ನಾಗಲಕ್ಷ್ಮಮ್ಮ.

ನಂದಿನಿ ಲೆಕ್ಕ ಹಾಕಿದಳು. ‘ಇದು ಐದನೇ ಸಲ ಈವತ್ತು ಬೆಳಿಗ್ಗೆಯಿಂದ ಮಾವ ಕೂಗುವುದು, ಅತ್ತೆ ಓಡುವುದು. ನೆನ್ನೆಯಿಂದ ತಾನೂ ನೋಡುತ್ತಲೇ ಇದ್ದೇನೆ. ಆ ಕರೆಯಲ್ಲಿನ ಆಪ್ಯಾಯತೆಗೋ ಏನೋ, ಅತ್ತೆ ಈ ಐವತ್ತನೇ ವಯಸ್ಸಿನಲ್ಲೂ ಜಿಂಕೆಮರಿಯಂತೆ ಓಡುತ್ತಾರೆ.’

ಮನಸ್ಸು ಯೋಚಿಸುತ್ತಿದ್ದರೂ ಕೈಗಳು ಯಾಂತ್ರಿಕವಾಗಿ ಮಗನ ತಿಂಡಿಯ ತಟ್ಟೆಯನ್ನು ಸಿದ್ಧಪಡಿಸಿ ಟೇಬಲ್ಲಿನ ಮೇಲಿಟ್ಟವು. ನಿತಿನ್‌ನನ್ನು ಶಾಲೆಗೆ ಬಿಟ್ಟು ಬಂದು, ಮುಂದಿನ ಅರ್ಧಗಂಟೆಯಲ್ಲಿ ಮೂರುವರ್ಷದ ಮಗಳು ನಿತ್ಯಾಳನ್ನು ಪ್ಲೇ ಹೋಂಗೆ ಬಿಟ್ಟುಬರಬೇಕು.

ಪುಣ್ಯಕ್ಕೆ ಶಾಲೆಗಳು ದೂರವಿರಲಿಲ್ಲ. ಇಬ್ಬರು ಮಕ್ಕಳ ಶಾಲಾರಂಭದ ಸಮಯದಲ್ಲಿ ಒಂದು ಗಂಟೆ ವ್ಯತ್ಯಾಸವಿದ್ದುದು ಅವಳ ಅದೃಷ್ಟ!

ಇಬ್ಬರನ್ನೂ ಶಾಲೆಗೆ ರವಾನಿಸಿ, ತಾನು ತನ್ನ ಅಡುಗೆ ಮುಗಿಸಿ, ಹತ್ತಿರದ ತರಕಾರಿ ಅಂಗಡಿಯಿಂದ ತರಕಾರಿ ತರುವ ಹೊತ್ತಿಗೆ ನಿತ್ಯಾಳ ಶಾಲೆ ಬಿಡುವ ಸಮಯ. ಅವಳ ಊಟ, ನಿದ್ರೆ ಆದಮೇಲೆ ತಾನು, ತನ್ನ ಅತ್ತೆ, ಮಾವನ ಊಟ. ಬೆಳಿಗ್ಗೆ ಆರಕ್ಕೆ ಹೋದರೆ ಪತಿ ನರೇಶ್ ಹಿಂದಿರುಗುತ್ತಿದ್ದುದು ರಾತ್ರಿ ಒಂಭತ್ತಕ್ಕೆ. ನಂದಿನಿ ತನ್ನ ದಿನಚರಿಯನ್ನು ನೆನೆದಳು.

ಮಾವ ಅತ್ತೆಯರೂ ನೆನ್ನೆ ಬಂದ ಅತಿಥಿಗಳು. ಮಾವನಿಗೆ ಗೊರೂರಿನಲ್ಲಿ ಕೆಲಸ. ಇನ್ನೇನು ರಿಟೈರ್ಮೆಂಟಿಗೆ ಮೂರು ತಿಂಗಳು ಬಾಕಿ ಇದೆ. ಅರ್ನ್ಡ್‌ ಲೀವ್ ಹಾಕಿ ಬಂದಿದ್ದರು ಮಗನ ಮನೆಗೆ. ನಂದಿನಿ ತರಕಾರಿ ಹೆಚ್ಚಲು ಕುಳಿತಳು. “ಬಿಡಮ್ಮಾ, ನಾನು ಹೆಚ್ತೀನಿ. ಬದನೇಕಾಯಿಯನ್ನ ಚಿಕ್ಕಚಿಕ್ಕದಾಗಿ ಹೆಚ್ಚಿ, ಹಸಿರು ಮೆಣಸಿನಕಾಯಿ ಖಾರ ಹಾಕಿದ್ರೆ ಗೊಜ್ಜು ಹೇಗಿರುತ್ತೆ ಅಂತೀ? ನಾನು ಅಡುಗೆ ಮಾಡ್ತೀನಿ. ನೀನು ಆರಾಮವಾಗಿರು” ಎಂದರು ಅತ್ತೆ ನಾಗಲಕ್ಷ್ಮಮ್ಮ. ಸಂಕೋಚದಿಂದ ಈಳಿಗೆ ಮಣೆ ಬಿಟ್ಟೇಳುತ್ತಾ, “ಅಯ್ಯೋ ಬಿಡೀ ಅತ್ತೇ. ಅಪರೂಪಕ್ಕೆ ಬಂದಿದ್ದೀರಿ ನೀವು. ನಿಮಗ್ಯಾಕೆ ಕೆಲಸ?”ಎಂದಳು ನಂದಿನಿ.

“ಅಪರೂಪ ಎಂಥದ್ದಮ್ಮಾ? ಇರೋನು ಒಬ್ನೇ ಮಗ ನಮ್ಗೆ. ಏನೋ, ಇವರು ಒಬ್ಬರಿಗೆ ಭಾರ ಆಗಕೂಡದು ಅಂತ ಹೇಳ್ತಾ ಇರೋದಕ್ಕೂ, ಗೊರೂರಿನಲ್ಲಿ ಕ್ವಾರ್ಟರ್ಸ್ ಇರೋದಕ್ಕೂ ಸರಿಹೋಯ್ತು. ಇನ್ನೇನು ರಿಟೈರ್ ಆಗ್ತಾರಲ್ಲಾ? ಆಮೇಲೆ ಇಲ್ಲೇ ತಾನೇ ನಮ್ಮ ವಾಸ” ಎಂದರು ನಗುತ್ತಾ ನಾಗಲಕ್ಷ್ಮಮ್ಮ. ಕೈಗಳು ಬದನೇಕಾಯಿಗಳನ್ನು ಚಕಚಕನೆ ಹೆಚ್ಚುತ್ತಿದ್ದವು.

“ನಾಗೂ…. ನಾಗೂ ಬೇಗ ಬಾ ಇಲ್ಲಿ” ಕೂಗಿಕೊಂಡರು ರಾಜಾರಾಯರು. ಬಂದೇಂದ್ರೇ…. ಹ್ಞಾಂ!” ಎಂದು ಚೀರಿದರು. ಅವಸರದಲ್ಲಿ ಏಳಲು ಹೋಗಿ ಬೆರಳಿಗೆ ಚಿಕ್ಕ ಗಾಯ ಮಾಡಿಕೊಂಡ ನಾಗಲಕ್ಷ್ಮಮ್ಮ, ಸೆರಗಿನ ತುದಿಯನ್ನು ಬೆರಳಿಗೆ ಸುತ್ತಿಕೊಂಡು ಓಡಿದರು. “ಇಲ್ಲಿ ನೋಡು. ಈ ಸ್ಟಾರ್ ಟೀವೀನಲ್ಲಿ ಅಡಿಗೆ ತೋರಿಸ್ತಿದ್ದಾನೆ. ಇವತ್ತು ಅಪರೂಪಕ್ಕೆ ವೆಜಿಟೇರಿಯನ್ನು. ನೀನೂ ಇದನ್ನ ನಂಗೆ ಮಾಡಿಕೊಡು ನಾಗೂ” ಎಂದರು ರಾಜಾರಾಯರು. “ಖಂಡಿತಾ ಮಾಡಿಕೊಡ್ತೀನಿ. ನೀವು ಹೇಗೆ ಮಾಡೋದೂಂತ ಜ್ಞಾಪಕ ಇಟ್ಕೊಳ್ಳಿ. ಗೊರೂರಿನಲ್ಲಿ ಮಾಡಿಕೊಡ್ತೀನಿ” ಎಂದು ನಕ್ಕಿದ್ದರು ನಾಗಲಕ್ಷ್ಮಮ್ಮ.

ಆದರೆ ಗೊರೂರಿಗೆ ಹಿಂದಿರುಗಿದ ನಂತರ ನಾಗಲಕ್ಷ್ಮಮ್ಮ ಆ ಅಡುಗೆ ಮಾಡಿಕೊಡಲಿಲ್ಲ. ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಮಡಿದರು. ನರೇಶ, ನಂದಿನಿಯರು ಮಕ್ಕಳ ಜೊತೆ ಗೊರೂರಿಗೆ ಧಾವಿಸಿದರು. ರಾಜಾರಾಯರು ಹಠಾತ್ತನೆ ಹೆಚ್ಚು ವಯಸ್ಸಾದವರಂತೆ ಕಂಡರು. ತಾಯಿಯ ಸಂಸ್ಕಾರ ನಡೆಸಿ, ನಿವೃತ್ತಿ ಹೊಂದಿದ್ದ ತಂದೆಯನ್ನು ಮನೆಗೆ ಕರೆತಂದ ನರೇಶ.

ಮಂಕಾಗಿ ಕುಳಿತಿರುತ್ತಿದ್ದ ರಾಜಾರಾಯರಿಗೆ ನಿತ್ಯಾ, ನಿತಿನ್‌ರೇ ಆಹ್ಲಾದ ತರುತ್ತಿದ್ದವರು. ಕ್ರಮೇಣ ಚೇತರಿಸಿಕೊಳ್ಳಲಾರಂಭಿಸಿದರು ರಾಯರು.

“ನಂದೂ, ನಿಂಗೊಂದು ಮಾತು ಹೇಳ್ತೀನಿ. ಅಪ್ಪ, ಅಮ್ಮ ಬಹಳ ಅನ್ಯೋನ್ಯವಾಗಿದ್ದವರು. ನಾವೀಗ ಅಪ್ಪನನ್ನ ಜೋಪಾನವಾಗಿ ನೋಡಿಕೊಳ್ಳಬೇಕು. ನಾನೋ ಬೆಳಿಗ್ಗೆ ಆರಕ್ಕೆ ಹೋದರೆ ರಾತ್ರಿ ಒಂಬತ್ತಕ್ಕೆ ಬರುವವನು. ನೀನು ಅಪ್ಪನಿಗೆ ಅಮ್ಮ ಬದುಕಿಲ್ಲ ಅನ್ನೋ ಸತ್ಯ ಗೊತ್ತಾಗದಷ್ಟು ಪ್ರೀತಿಯಿಂದ ನೋಡಿಕೋಬೇಕು, ಆಗುತ್ತೆ ತಾನೆ?” ಕಳಕಳಿಯಿಂದ ಕೇಳಿದ ನರೇಶ ನಂದಿನಿಯನ್ನು, ಒಂದು ರಾತ್ರಿ ರೂಮಿನಲ್ಲಿ.

“ಅದೇನು ಮಾತೂರೀ. ನಂಗೂ ಚಿಕ್ಕಂದಿನಿಂದ ತಂದೇ ಪ್ರೀತಿ ಅಂದ್ರೇನೇ ತಿಳೀದು. ಹಾಗಿರೋವಾಗ ದೇವರಂಥಾ ಮಾವನವರನ್ನ ಹೇಗೆ ನೋಡಿಕೊಳ್ತೀನೋ ಅಂತ ನೀವೇ ನೋಡ್ತೀರಂತೆ” ಎಂದಳು, ಪತಿಯ ಗಲ್ಲವನ್ನು ಹಿಡಿದ ನಂದಿನಿ.

ಆದರೆ ಅದಕ್ಕೆ ಅವಳು ಪಟ್ಟಪಾಡು! ಅದೇ ಮುಂದಿನ ಕತೆ.

* * *

ಎಂದಿನಂತೆ ಅಂದೂ ಬೆಳಗಾಗಿತ್ತು.

ಕಾಫಿಗೆಂದು ಡಿಕಾಕ್ಷನ್ ಪಾತ್ರೆಯಲ್ಲಿ ಸುರಿದು, ಒಲೆಯ ಮೇಲಿಟ್ಟು, ಪಕ್ಕದ ಒಲೆಯ ಮೇಲೆ ಹಾಲು ‘ಹೈ’ ನಲ್ಲಿ ಇಟ್ಟು, ಹಾಲು ಉಕ್ಕಿದೊಡನೆ ಬೆರೆಸಬೇಕು ಎನ್ನುವಷ್ಟರಲ್ಲಿ “ನಾಗೂ…. ಛೇ! ನಂದಿನೀ, ಅಮ್ಮಾ ನಂದಿನೀ ಇಲ್ಲಿ ಬೇಗ ಬಾಮ್ಮಾ” ಕೂಗಿಕೊಂಡರು ರಾಯರು.

“ಬಂದೇ ಮಾವಾ” ಎಂದು ಕೂಗಿ ಹೇಳಿ, ಹಾಲಿನ ಪಾತ್ರೆಯನ್ನು ಇಕ್ಕಳದಿಂದ ಹಿಡಿಯುವಷ್ಟರಲ್ಲಿ “ಬೇಗ ಬಾಮ್ಮಾ” ಮಾವನ ಧ್ವನಿಯಲ್ಲಿನ ಆತುರ, ಪತಿಯ ಮಾತಿನ ನೆನಪು, ಅವಳನ್ನು ಹಾಲ್ಗೆ ಓಡಿಸಿದವು.

ರಾಯರು ಪೇಪರ್ ಓದುತ್ತಿದ್ದವರು, “ನೋಡಮ್ಮಾ, ನಾಳೆ ನೀರು ಬರೋಲ್ಲವಂತೆ” ಎಂದರು ತಲೆ ಎತ್ತಿ.

“ಓ” ಎಂದು ಹೇಳಿ ಒಳಗೋಡಿದ ನಂದಿನಿಯನ್ನು ಸ್ವಾಗತಿಸಿದ್ದು, ಅಡುಗೆಮನೆಯ ಕಟ್ಟೆಯ ಮೇಲೆ ಹರಿದಿದ್ದ ಹಾಲಿನ ಹೊಳೆ. ಅದನ್ನು ಬಟ್ಟೆಯಲ್ಲಿ ಒತ್ತಿ, ಸಿಂಕ್‌ನಲ್ಲಿ ಹಿಂಡಿ ಶುದ್ಧಿ ಮಾಡಿ ‘ಉಷ್ಷಪ್ಪಾ’ ಎನ್ನುವ ವೇಳೆಗೆ, “ನಂದಿನೀ…. ನಂದಿನೀ…. ಬೇಗ ಬಾ” ಎಂದಿದ್ದರು ರಾಯರು.

“ಬಂದೇ” ಮತ್ತೆ ಓಡಿದಳು. “ಇಲ್ಲಿ ನೋಡಮ್ಮಾ, ಎಂಥಾ ಅನ್ಯಾಯ ಅಂತೀ. ಯಾವುದೋ ಚಿಕ್ಕಮಗೂನ ದುರಾತ್ಮರು ಯಾರೋ ಕರ್ಕೊಂಡು ಹೋಗಿದ್ದಾರಂತೆ. ನೀನು ಮಕ್ಕಳ ಬಗ್ಗೆ ಹುಷಾರಾಗಿರಮ್ಮಾ” ಎಂದರು ರಾಯರು ಬೇಸರದ ಮುಖಮಾಡಿ. “ಸರಿ ಮಾವಾ” ಎಂದವಳು ವಾಪಸ್ಸು ಹೋದಾಗ ಕಂಡಿದ್ದು ಸುಮ್ಮನೆ ಉರಿಯುತ್ತಿರುವ ಗ್ಯಾಸ್ ಸ್ಟವ್, ಹಾಲಿಳಿಸಿ, ಶುದ್ಧಿ ಮಾಡುವ ಹೊತ್ತಿಗೆ ಮಾವ ಕೂಗಿದ್ದರಿಂದ ಗ್ಯಾಸ್ ಸ್ಟವ್ ಬಗ್ಗೆ ಮರೆತಿದ್ದಳು. ಮೊದಲೇ ಎರಡನೇ ಸಿಲಿಂಡರ್ ಇಲ್ಲ. ತಾನೇ ಅದಕ್ಕೂ ಹೋಗಬೇಕು. ಏಕೆಂದರೆ ನರೇಶನಿಗೆ ಪುರುಸೊತ್ತಿರಲಿಲ್ಲ.

“ಅಮ್ಮಾ” ಎಂದಿದ್ದವು ಪುಟ್ಟ ಧ್ವನಿಗಳೆರಡು.

“ಓ ಎದ್ದು ಬಿಟ್ರಾ ಕಂದಗಳಾ? ಬನ್ನಿ…. ಬಾತ್ ರೂಂಗೆ. ನಿತಿನ್, ನಿಂಗೆ ಹಲ್ಲುಜ್ಜೋಕ್ಕೆ ಬರುತ್ತಲ್ವಾ ಮರೀ, ನಿತ್ಯಾಗೂ ತೋರಿಸಿಕೊಡು ಹೇಗೆ ಉಜ್ಜೋದೂಂತ” ಎಂದು ಮಕ್ಕಳನ್ನು ರಮಿಸುತ್ತಾ, ತಾನೇ ಅವರ ಹಲ್ಲುಜ್ಜಿ, ಮುಖ ತೊಳೆಸಿದಳು.

“ಅಮ್ಮಾ ಸ್ಕೂಲ್ಗೆ ಹೊತ್ತಾಯ್ತು. ನನ್ನ ಫ್ರೆಂಡು ಅನಿಲ್ ಆಗಲೇ ಅವನ ಮಮ್ಮೀ ಜೊತೆ ಹೋದ” ಕೂಗಿಕೊಂಡ ಸಾಕ್ಸನ್ನು ಸೊಟ್ಟ ಸೊಟ್ಟವಾಗಿ ಹಾಕಿಕೊಂಡಿದ್ದ ನಿತಿನ್. ನಂದಿನಿ ಅಲ್ಲಿರಲಿಲ್ಲ. ಏಕೆಂದರೆ ರಾಯರು, ಮಿಜೋರಾಂ ಜನರ ವಸ್ತ್ರವಿನ್ಯಾಸವನ್ನು ಟೀವಿಯಲ್ಲಿ ತೋರಿಸಲು ಸೊಸೆಯನ್ನು ಕರೆದಿದ್ದರು.

“ಒಂದ್ನಿಮಿಷ ಮಾವಾ” ಎಂದು ಮಗನತ್ತ ಓಡಿದ್ದಳು ನಂದಿನಿ. ರಾತ್ರಿ ನರೇಶನಿಗೆ ಬಡಿಸಿ, ತಾನೂ ತಟ್ಟೆ ಇಟ್ಟುಕೋಬೇಕು. ಮಾವನವರ ಕರೆ ಬಂದಿತ್ತು. ನರೇಶನೂ, “ನೋಡು, ಅಪ್ಪಂಗೆ ಏನಾದ್ರೂ ಬೇಕೇನೋ, ಕೂಗ್ತಾ ಇದ್ದಾರೆ” ಎಂದ.

ಅವನಿಗೆ ನಂದಿನಿ ಈ ಮೂರು ದಿನಗಳಿಂದ ಎಷ್ಟು ಸಲ ಇದ್ದ ಕೆಲಸವನ್ನು ಬಿಟ್ಟು ಓಡಿ ಮಾವನ ಮುಂದೆ ನಿಲ್ಲುತ್ತಿದ್ದಳೆಂಬುದು ತಿಳಿಯದು.

“ಯಾವುದೋ ಸುದ್ದೀನ ಬೆಳಿಗ್ಗೆ ಪೇಪರ್‌ನಲ್ಲಿ ನೋಡಿ, ನನಗೆ ಹೇಳಲು ಮರೆತಿದ್ದರಂತೆ ಅದಕ್ಕೇ ಕರೆದಿದ್ದು ಮಾವ” ಎಂದಳು ನಂದಿನಿ, ಮಾವನವರ ಜೊತೆ ಮಾತಾಡಿ ವಾಪಸ್ಸು ಬಂದು.

“ಓ ಅಷ್ಟೇನಾ?” ಎಂದು ನಕ್ಕಿದ್ದ ನರೇಶ.

ಆದರೆ ಮುಂದಿನ ಮೂರು ದಿನಗಳಲ್ಲಿ ಅತ್ತೆಯವರ ತಾಳ್ಮೆ ಸಹನೆಗಳ ಬಗ್ಗೆ ಅತ್ಯದ್ಭುತ ಗೌರವ ಮೂಡಿತ್ತು ನಂದಿನಿಗೆ. ಮಾವ ದೇವರಂಥವರು. ಊಟ, ತಿಂಡಿ ವಿಷಯಗಳಲ್ಲಿ ಒಂದು ಸಣ್ಣ ಆಕ್ಷೇಪಣೆಯನ್ನೂ ಎತ್ತುತ್ತಿರಲಿಲ್ಲ. ನಂದಿನಿಗೆ ನುಂಗಲಾರದ ತುತ್ತಾಗಿದ್ದುದು ಕಳೆದ ಆರೇಳು ದಿನಗಳಿಂದ ಮಾವನವರು ನೀಡುತ್ತಿದ್ದ ಅರ್ಜೆಂಟು ಕೂಗುಗಳು. ಇವಳು ಬರಬೇಕು ಅವರು ಕೂಗಿದೊಡನೆ. ಅವರು ಯಾವುದೋ ಸುದ್ದಿಯನ್ನೋ, ಚಿತ್ರವನ್ನೋ ತೋರಿಸಬೇಕು ಟೀವಿ ಯಾ ವೃತ್ತಪತ್ರಿಕೆಯಲ್ಲಿ. ನಂದಿನಿ ಈಗಿನ ಕಾಲ ಯುವತಿ. ನಾಗಲಕ್ಷ್ಮಮ್ಮನವರಷ್ಟು ಸೈರಣೆ, ತಾಳ್ಮೆ ಎಲ್ಲಿಂದ ಬರಬೇಕು? ಇನ್ನು ತಡೆಯಲಾಗದೇ ಒಂದು ರಾತ್ರಿ ಪಿಸುಮಾತಿನಲ್ಲಿ ಪತಿಗೆ ಹೇಳಿದಳು.

“ರೀ ಮಾವ. . .”  ಎಂದು ಆರಂದಭಿಸಿದೊಡನೆ, “ಏನು ಮಾಡಿದೆ ಅಪ್ಪನಿಗೆ?” ಎಂದ ಥಟ್ಟನೆ ನರೇಶ್.

“ನಾನೇನೂ ಮಾಡಲಿಲ್ಲಾರೀ. ನಾನು ಹೇಳೋದನ್ನ ಪೂರ್ತಿ ಕೇಳ್ತೀರೋ ಇಲ್ವೋ. . .” ಎಂದು ಮಾವನವರ ಕರೆಗಳ ಬಗ್ಗೆ ಅಲವತ್ತುಕೊಂಡಳು.

“ನಂಗೆ ಪುರುಸೊತ್ತೇ ಇರಲ್ಲಾರೀ. ತಿಂಡಿ, ಕಾಫಿ ಮಾಡ್ಬೇಕು. ನಿತಿನ್, ನಿತ್ಯರನ್ನ ರೆಡಿಮಾಡಿ, ಸ್ಕೂಲಲ್ಲಿ ಬಿಡಬೇಕು. ಅಂಗಡಿಗೆ ಹೋಗಬೇಕು. ರೇಷನ್ ಷಾಪ್‌ಗೆ ಬೇರೆ. . . ಓಹ್! ಪ್ರತೀ ಕೆಲಸ ಮಾಡಲಿಕ್ಕೆ ನಾನು ರೆಡಿ. ಆದರೆ ಮಾವನವರ ಈ ಕರೆಗೆ ಓಗೊಡುವಿಕೆ ನನ್ನ ಕೈಲಿ ಆಗೊಲ್ಲಾರೀ. ಅವರಿಗೆ ಅಲ್ಲಿಗೆ ನಾನು ತಕ್ಷಣ ಹೋಗಬೇಕು. ಇಲ್ಲದಿದ್ರೆ ಬೇಸರಪಟ್ಟುಕೋತಾರೇನ್ಸುತ್ತೆ. ದಯವಿಟ್ಟು ಏನಾದ್ರೂ ಸಹಾಯ ಮಾಡಿ. ನೀವಂತೂ ಬಿಸಿನೆಸ್ಸೂಂತ ಬೆಳಿಗ್ಗೆ ಹೋದ್ರೆ ಸಂಜೆ ಬರ್ತೀರಿ” ನರೇಶ್ ಯೋಚಿಸಿದ. ಪತ್ನಿಯ ಹೇಳಿಕೆಯಲ್ಲೂ ಸತ್ಯವಿದೆ. ಅವಳೊಬ್ಬಳೇ ಎಲ್ಲವನ್ನೂ ಮಾಡಬೇಕು. ಮಾಡುವುದಿಲ್ಲ ಎಂದೇನೂ ಹೇಳುತ್ತಿಲ್ಲ ಅವಳು ಆದರೂ. . . ಅಪ್ಪ. . .

“ನೋಡು ನಂದೂ. ಅಪ್ಪ ಇಷ್ಟು ವರ್ಷ ಕೆಲಸಾಂತ ಬಿಜಿಯಾಗಿ ಇದ್ದುಬಿಟ್ಟಿದ್ದು. ಜೊತೆಗೆ ಅಮ್ಮ ಅವರ ಜೊತೆಗಾತಿ, ಮೂವತ್ತು ವರ್ಷಕ್ಕೂ ಜಾಸ್ತಿ ಇದ್ದವರು ಸಡನ್ನಾಗಿ ಹೋಗಿಬಿಟ್ರು. ಮಹಾ ಸ್ವಾಭಿಮಾನಿ ಅಪ್ಪ. ಏನೂ ಹೇಳೋ ಹಾಗೇ ಇಲ್ಲ. ಮನೆಬಿಟ್ಟು ಹೊರಟರೂ ಹೊರಟರೇ” ಎಂದ. ಬಹಳ ಯೋಚಿಸಿ, ಪೆಚ್ಚಾದ ನಂದಿನಿಗೆ, “ನೋಡೋಣ. ಸಮಯನೋಡಿ ಅಪ್ಪನಿಗೆ ಹೇಳ್ತೀನಿ ನಾನೇ” ಎಂದ ನರೇಶ, ಅವಳನ್ನು ಸಂತೈಸುವಂತೆ.

* * *

ಒಂದು ವಾರ ಕಳೆದಿತ್ತು. ನಂದಿನಿಯ ಮಾವನ ಕೂಗುಗಳು ನಿರಂತರವಾಗಿ ಸಾಗಿದ್ದವು.

“ನಂದೂ” ಎಂದು ಕೂಗುತ್ತಲೇ ಬಂದ ಅಂದು ನರೇಶ. ಅಂದು ಅವನು ಅಪರೂಪಕ್ಕೆ ಬೇಗ ಬಂದಿದ್ದ ದಿನ.

“ಏನ್ರೀ?” ಎಂದಳು ನಂದಿನಿ, ನಿತ್ಯಾಳಿಗೆ ಬೇರೆ ಬಟ್ಟೆ ಹಾಕುತ್ತಿದ್ದವಳು.

“ನನ್ನ ಫ್ರೆಂಡು ಪ್ರಭಾಕರ ಬಾಂಬೆ ಟೀಸೀಎಸ್ ನಲ್ಲಿ ಕೆಲಸದಲ್ಲಿದ್ದಾನಲ್ಲಾ? ಅವನು ಗೊತ್ತಲ್ವಾ?” ಎಂದ ಅವಳ ನೆನಪನ್ನು ಕೆದಕುತ್ತಾ. ಅಲ್ಲಿಯೇ ಟಿ.ವಿ ನೋಡುತ್ತ ಕುಳಿತಿದ್ದ ರಾಯರೂ ಈಗ ಮಗನತ್ತ ತಿರುಗಿದರು.

“ಪ್ರಭಾಕರನನ್ನ ಆರುತಿಂಗಳು ಮೆಕ್ಸಿಕೋ ಸಿಟಿಗೆ ಡೆಪ್ಯೂಟ್ ಮಾಡಿದ್ದಾರಂತೆ. ನಿಂಗೊತ್ತಲ್ವಾ ಅವನ ಜೊತೆ ಅವನ ತಂದೆ ಮಾತ್ರಾ ಇರೋ ವಿಷಯ. ಅವ್ನಿಗೆ ಈಗೊಂದು ಸಮಸ್ಯೆ ಆಗಿದೆ. ತಂದೇನ ‘ಹೋಂ ಫಾರ್ ದಿ ಏಜ್ಡ್’ನಲ್ಲಿ ಬಿಡೋಕ್ಕೆ ಮನಸ್ಸಿಲ್ಲವಂತೆ. ಒಬ್ಬರನ್ನೇ ಬಾಂಬೇಲಿ ಬಿಡೋಕ್ಕೆ ಭಯ ಅಂತೆ. ನೀನು ಜಸ್ಟ್ ಆರ್‌ತಿಂಗ್ಳು ನೋಡ್ಕೋತೀಯ ಅಂತ ನನ್ನ ಆಫೀಸ್ ಅಡ್ರೆಸ್‌ಗೆ ಕಾಗದ ಬರೆದಿದ್ದಾನೆ. ಈ ಕಾಗದ ನೋಡಿದ್ರೆ ನನ್ನನ್ನೇ ನಂಬಿಕೊಂಡಿರೋ ಹಾಗಿದೆ ಅವನು” ಎಂದ ಗೆಳೆಯನ ಪತ್ರವನ್ನು ಗಾಳಿಗೆ ಆಡಿಸುತ್ತಾ.

“ಅಯ್ಯೋ, ಅವರು ಇಲ್ಲಿಗೆ ಬರಲೀರೀ. ಇನ್ನೊಬ್ಬರಿಗೆ ಅಡುಗೆ ಮಾಡಲಿಕ್ಕೆ ನಂಗೇನೂ ಕಷ್ಟ ಆಗೊಲ್ಲ.” ಎಂದಳು ನಂದಿನಿ ತಕ್ಷಣವೇ. ಪತ್ನಿಯ ಮೇಲೆ ಪ್ರೇಮ ಉಕ್ಕಿತು ನರೇಶನಿಗೆ.

“ಅವರ ವಯಸ್ಸೆಷ್ಟೋ?” ಕೇಳಿದರು ರಾಯರು.

“ಅರವತ್ತಿರಬಹುದು” ಎಂದ ನರೇಶ.

“ಹಾಗಾದ್ರೆ ನಂಗೂ ಜೊತೆ ಆಗುತ್ತೆ” ಎಂದು ಹೇಳಿದರು ರಾಯರು.

ಹತ್ತು ದಿನಗಳ ನಂತರ ಕುರ್ಲಾ ಎಕ್ಸ್‌ಪ್ರೆಸ್‌ನಲ್ಲಿ ಬಂದಿಳಿದರು ನರಹರಿ ಶಾಸ್ತ್ರಿಗಳು. ಪುಟ್ಟ ಆಕಾರದ, ಲಕ್ಷಣವಾದ ಮುಖದ, ಅರವತ್ತರ ಪ್ರಾಯದವರು.

“ಬನ್ನಿ ಬನ್ನಿ ಶಾಸ್ತ್ರಿಗಳೇ” ಆಹ್ವಾನಿಸಿದರು ರಾಯರು. ಉಭಯಕುಶಲೋಪರಿಯ ನಂತರ ಊಟವಾಯಿತು. ರಾತ್ರಿಯಾದ್ದರಿಂದ ಬೇಗನೇ ಮಲಗಿದರು ನರಹರಿ ಶಾಸ್ತ್ರಿಗಳು.

ಮರುದಿನ ಬೆಳಿಗ್ಗೆ ಎದ್ದ ರಾಯರು ಮುಖ ತೊಳೆದು, ಪೇಪರ್‌ಗಾಗಿ ಪ್ರತೀದಿನ ಸೊಸೆ ಇಟ್ಟಿರುತ್ತಿದ್ದ ಸ್ಥಳದಲ್ಲಿ ಹುಡುಕಿ ನಿರಾಶರಾದರು.

“ಅಮ್ಮಾ, ನಂದಿನೀ. . .” ಕೂಗಿದರು.

ನಂದಿನಿಯಲ್ಲ ಅವರಿಗೆ ಉತ್ತರ ನೀಡಿದ್ದು, ನರಹರಿ ಶಾಸ್ತ್ರಿಗಳು, ತೋಟದಲ್ಲಿ ಎರಡು ಕುರ್ಚಿ ಹಾಕಿಸಿ ಒಂದರ ಮೇಲೆ ಆಸೀನರಾಗಿದ್ದರು ಶಾಸ್ತ್ರಿಗಳು, ಸ್ನಾನವನ್ನೂ ಆಗಲೇ ಮುಗಿಸಿದಂತಿದ್ದುದಕ್ಕೆ ಕಾರಣ ಅವರ ಹಣೆಯಮೇಲಿನ ಕುಂಕುಮ.

“ಬನ್ನಿ ರಾಯರೇ, ನಂಗೆ ಕನ್ನಡ ಪೇಪರ್ ಸಿಗೋದೇ ಕಷ್ಟ ಅಲ್ಲಿ. ಆದ್ರೂ ಇಂಗ್ಲೀಷೋ, ಕನ್ನಡವೋ ಒಟ್ಟಿನಲ್ಲಿ ಮೊದಲನೇ ಅಕ್ಷರದಿಂದ ಕೊನೇ ಅಕ್ಷರದವರೆಗೆ ಓದದಿದ್ರೆ ಆ ದಿನವೆಲ್ಲಾ ಏನನ್ನೋ ಕಳಕೊಂಡ ಹಾಗನ್ಸುತ್ತೆ. ನೀವೆನಂತೀರಿ?” ಎಂದರು ಕೈಯಲ್ಲಿನ ವೃತ್ತಪತ್ರಿಕೆಯ ಪುಟ ತಿರುಗಿಸುತ್ತಾ. ‘ಹಾಗಾದರೆ ನನಗೀಗಲೇ ಪೇಪರ್ ಸಿಗೊಲ್ಲ’ ಎಂದುಕೊಂಡರು ರಾಯರು. ಏಕೆಂದರೆ ಶಾಸ್ತ್ರಿಗಳು ಇನ್ನೂ ಏಳನೇ ಪುಟದಿಂದ ಮುಂದಕ್ಕೆ ಓದಬೇಕಿತ್ತು. ಆದರೂ ಮರ್ಯಾದೆಗಾಗಿ, “ನಾನೂ ಅಷ್ಟೇ ರಿಟೈರಾಗೋವರೆಗೂ. . .” ರಾಯರ ಮಾತು ಮುಗಿದೇ ಇರಲಿಲ್ಲ. ಶಾಸ್ತ್ರಿಗಳು ಆರಂಭಿಸಿಬಿಟ್ಟಿದ್ದರು. “ರಿಟೈರ್ಮೆಂಟ್‌ ಅಂದ ತಕ್ಷಣ ಜ್ಞಾಪಕಕ್ಕೆ ಬಂತು ನೋಡೀ. ಮೂರು ವರ್ಷದ ಹಿಂದೆ ನಾನು ರಿಟೈರಾದಾಗ. . .” ನಿರರ್ಗಳವಾಗಿ ಧುಮುಕಿತ್ತು ಮಾತಿನ ಜಲಪಾತ.

ರಾಯರಿಗೆ ಪೇಪರ್ ಸಿಗಲಿಲ್ಲ. ಜೊತೆಗೆ ಶಾಸ್ತ್ರಿಗಳ ಭಾಷಣವೂ ಮುಗಿಯಲಿಲ್ಲ. ಸುಮ್ಮನೆ ತಲೆಯಾಡಿಸಬೇಕಾದ ಕಡೆ ಆಡಿಸಿ, ನಗಬೇಕಾದ ಕಡೆ ನಕ್ಕು, ಬೇಸರ ತೋರಿಸಬೇಕಾದ ಕ್ಷಣದಲ್ಲಿ ‘ತ್ಚು, ತ್ಚು’ ಎನ್ನುತ್ತಾ ಎದುರಿನ ಕುರ್ಚಿಯಲ್ಲಿ ಕುಳಿತೇ ಇದ್ದರು.

ಶಾಸ್ತ್ರಿಗಳಲ್ಲಿ ವಿಶಿಷ್ಟ ಗುಣವೊಂದಿತ್ತು. ಮಾತನಾಡುತ್ತಲೇ ಪೇಪರ್ ಓದಬಲ್ಲರಾಗಿದ್ದರು. ಕೊನೆಗೂ ಪೇಪರ್ ರಾಯರಿಗಿತ್ತು ಮೈಮುರಿದರು.

ತಕ್ಷಣ ಪೇಪರ್ ಕೈಗೆತ್ತಿಕೊಂಡು ಅದರಲ್ಲಿ ತಲೆತೂರಿಸಿದರು ರಾಯರು. ‘ಅಬ್ಬ! ಈಗ ಸುದ್ದಿ ಸಂಗ್ರಹಣೆ ಮಾಡಬಹುದು’ ಎಂದುಕೊಳ್ಳುತ್ತಾ ಇದ್ದಾಗ ಕಂಡಿತ್ತೊಂದು ಸುದ್ದಿ.

“ಅಮ್ಮಾ ನಂದಿನೀ….” ಕೂಗು ಹಾಕಿದರು.

“ಏನು ರಾಯರೇ?” ಕೇಳಿದರು ಎದುರಿಗಿದ್ದ ಶಾಸ್ತ್ರಿಗಳು. ಈಗ ಉತ್ತರಿಸದೇ ವಿಧಿಯಿಲ್ಲವಾಯಿತು ರಾಯರಿಗೆ.

ಮಾವನ ಕರೆಗೆ ಓಗೊಟ್ಟು ಬಂದಿದ್ದ ನಂದಿನಿಗೆ, ಅವರ ದೃಷ್ಟಿ ತನ್ನತ್ತ ಇಲ್ಲದಿದ್ದುದು ಕಂಡು ಮರಳಿ ಒಳಗೋಡಿದಳು. ಅಡುಗೆಮನೆಯಲ್ಲಿ ಒಗ್ಗರಣೆ ಸೀದ ವಾಸನೆ ಬರಲಾರಂಭಿಸಿತ್ತು.

“ಅಲ್ಲಾ ಈ ಪೇಪರ್‌ನಲ್ಲಿ ನಲ್ವತ್ತು ವರ್ಷದ ಮಹಿಳೆಗೆ ತ್ರಿವಳಿ ಅಂತ….” ರಾಯರ ಮಾತು ಮುಂದುವರಿದಿರಲಿಲ್ಲ. ತಟಕ್ಕನೆ ಶಾಸ್ತ್ರಿಗಳು ಬಾಯಿ ಹಾಕಿದ್ದರು.

“ಅಯ್ಯೋ, ನಮ್ಮೂರಿನಲ್ಲಿ, ಅದೇ ಗುಡೇಮಾರನಹಳ್ಳಿಯಲ್ಲಿ. . . . ಏನಾಯ್ತೂಂತೀರಿ? ನಮ್ಮ ಪಟೇಲರ ಮನೆ ಕೆಲಸದಾಳಿಗೆ ಆರು ಮಕ್ಕಳು! ಊರಿನವ್ರೆಲ್ಲಾ ಆವತ್ತು ಜಾತ್ರೆ ಅವಳ ಮನೇ ಮುಂದೆ ಆ ಮಕ್ಕಳನ್ನು ನೋಡೋದಿಕ್ಕೆ. . .” ಸುಮಾರು ಹತ್ತು ನಿಮಿಷ ನಡೆದಿತ್ತು ಭಾಷಣ. ರಾಯರು ಮತ್ತೆ ಬಾಯಿ ತೆರೆಯುವ ಸಾಹಸ ಮಾಡಲಿಲ್ಲ.

ಒಳಗೆ ಬಂದು, ತಿಂಡಿ ತಿನ್ನುತ್ತಾ ಟಿ.ವಿ. ಆನ್ ಮಾಡಿದರು ರಾಯರು ಅವರಿಗೆ ಪ್ರಿಯವಾದ ಟೆನಿಸ್ ಆಟದ ಮರು ಪ್ರಸಾರವಿತ್ತು.

“ನಂದಿನೀ…..” ಕೂಗಿದ್ದರು ರಾಯರು.

“ಏನು ಬೇಕು ರಾಯರೇ? ನಿಮ್ಗೆ ಗೊತ್ತಾ? ಸಾವಿರದ ಒಂಬೈನೂರಾ ನಲವತ್ತೈದರಲ್ಲಿ ನಮ್ಮೂರಿನಲ್ಲಿ ನಾನೇ ಛಾಂಪಿಯನ್…” ಶಾಸ್ತ್ರಿಗಳಿಗೆ ಸಕಲ ವಿದ್ಯೆಗಳೂ ತಿಳಿದಿರುವಂತೆ ಎನಿಸಿತು ರಾಯರಿಗೆ, ಹತ್ತು ನಿಮಿಷಗಳ ಮಾತು ಮುಗಿದಾಗ.

ಮುಂದಿನ ಒಂದು ವಾರದಲ್ಲಿ ಶಾಸ್ತ್ರಿಗಳಿಗೆ ಸಿನಿಮಾ, ಕ್ರೀಡೆ, ಕಲೆ ನಾಟಕ, ಸಾಹಿತ್ಯ, ಸಂಗೀತ ಇತ್ಯಾದಿ. ಎಲ್ಲ ವಿಷಯಗಳೂ ಕರತಲಾಮಲಕವಾಗಿರುವಂತೆ ತೋರಿತ್ತು. ಸೊಸೆಯನ್ನು ಕರೆಯಲಿಕ್ಕೇ ಹೆದರುತ್ತಿದ್ದರು ಈಗ. ಸೊಸೆಯನ್ನು ಕರೆದು ಏನಾದರೂ ತೋರಿಸಬೇಕೆಂದರೆ ಈ ಮಹಾರಾಯ ತನ್ನ ಚರಿತ್ರೆ ಆರಂಭಿಸುತ್ತಿದ್ದರು.

ನಂದಿನಿಯೂ ಈ ಬದಲಾವಣೆಯನ್ನು ಗಮನಿಸಲಿಲ್ಲ. ಸಮವಯಸ್ಕರು ಸೇರಿದಾಗ ಹರಟೆ, ಕತೆ ಇರುತ್ತದಲ್ಲಾ ಹಾಗೇ, ಎಂದುಕೊಂಡಳು.

ರಾಯರಿಗೆ ನಿಧಾನವಾಗಿ ಒಂದು ವಿಷಯ ಮನದಟ್ಟಾಯಿತು.

‘ಈ ಮಹಾರಾಯನ ಕೊರೆತದಿಂದ, ನಾನು ಬೇರೆಯವರಿಗೆ ಎಷ್ಟು ಕೊರೆಯುತ್ತಿದ್ದೆ ಎಂಬ ಅರಿವಾಗಿದೆ. ಪಾಪ! ನನ್ನ ಸೊಸೆ ಚಿನ್ನದಂಥಾ ಹುಡುಗಿ. ಎಲ್ಲವನ್ನೂ ಸಹಿಸಿದ್ದಾಳೆ. ಈತನ ಕೊರೆತ ತಪ್ಪಿಸಿಕೊಳ್ಳಲು ಸೊಸೆಯನ್ನೇ ಮೊರೆ ಹೋಗಬೇಕು’ ಎಂದು ಮನದಲ್ಲೇ ನಿರ್ಧರಿಸಿದರು. ಮರುದಿನ ಬೆಳಿಗ್ಗೆ ನಂದಿನಿ ನಿತಿನ್‌ನನ್ನು ಶಾಲೆಗೆ ಒಯ್ಯಲು ಸಿದ್ಧಳಾದಾಗ ರಾಯರು ಅವಳಲ್ಲಿಗೆ ಬಂದರು. ಶಾಸ್ತ್ರಿಗಳು ಎಲ್ಲೂ ಕಾಣಿಸಲಿಲ್ಲ.

“ಅಮ್ಮಾ ನಂದಿನೀ. ನಾನು ನಿನ್ನ ಜೊತೆ ಬರ್ತೀನಿ. ನಿತಿನ್ ಸ್ಕೂಲ್ ತೋರಿಸು, ಈವತ್ತು. ನಾಳೆಯಿಂದ ನಾನೇ ಅವನನ್ನು ಕರಕೊಂಡು ಹೋಗ್ತೀನಿ, ಕರಕೊಂಬರ್ತೀನಿ, ನಿಂಗೆ ಸ್ವಲ್ಪವಾದರೂ ಕೈ ಬಿಡುವಾಗುತ್ತೆ” ಎಂದರು ಬೇಡಿಕೆಯ ಧ್ವನಿಯಲ್ಲಿ.

ಸಂಕೋಚದಿಂದಲೇ ನಂದಿನಿ ಒಪ್ಪಿದಳು.

‘ಅಬ್ಬ! ಸ್ವಲ್ಪ ಹೊತ್ತಾದರೂ ಅ ಮನುಷ್ಯನ ಕೊರೆತ ತಪ್ಪಿತು. ಆ ಪ್ರಭಾಕರ ಹೇಗೆ ಸಹಿಸಿಕೊಳ್ಳುವನೋ’ ಎಂದೂ ಅನ್ನಿಸಹತ್ತಿತು ರಾಯರಿಗೆ.

ಮರುದಿನ ನಿತ್ಯಾಳನ್ನೂ ತಾನೇ ಕರೆದೊಯ್ದರು ರಾಯರು.

“ನಂಗೇ ಮೈಗೆ ಎಕ್ಸರ್‌ಸೈಜು ಕಣಮ್ಮಾ” ಎಂದರು ವಿವರಣೆ ನೀಡುವಂತೆ.

ಇನ್ನು ನಾಲ್ಕೈದು ದಿನಗಳಲ್ಲಿ ತರಕಾರಿ, ದಿನಸಿ, ರೇಷನ್ ಅಂಗಡಿಗಳ ಉಸ್ತುವಾರಿಯನ್ನೂ ತಾನೇ ವಹಿಸಿಕೊಂಡರು.

“ನೋಡಮ್ಮಾ, ನಂಗೂ ಮನೇಲೇ ಇದ್ದೂ ಇದ್ದೂ ಬೇಜಾರಾಗಿದೆ. ಅದೂ ಅಲ್ಲದೇ ಮೆದುಳೂ ಚುರುಕಾಗಿರುತ್ತೆ. ಈ ವ್ಯವಹಾರಾನೆಲ್ಲಾ ನೋಡಿಕೊಳ್ತಿದ್ರೆ. ಹ್ಞಾಂ! ಬ್ಯಾಂಕ್ ಡೀಟೈಲ್ಸ್ ಕೊಡು. ಅದನ್ನೂ ನಾನೇ ನೋಡಿಕೋತೇನೆ” ಎಂದು ಆಜ್ಞಾಪಿಸಿದರು ರಾಯರು.

ನಂದಿನಿಗೆ ಇದು ಕನಸೇನೋ ಎನ್ನಿಸಹತ್ತಿತು. ಇನ್ನು ಮೇಲೆ ತಾನು ಮಕ್ಕಳು ಹುಟ್ಟುವುದಕ್ಕೆ ಮುಂಚೆ ಮಾಡುತ್ತಿದ್ದ ಕರಕುಶಲ ವಸ್ತುಗಳನ್ನು ಮತ್ತೆ ಮಾಡಬಹುದು ಎಂಬ ಸಂತಸವೂ ಆಯಿತು.

ರಾಯರ ಪುಣ್ಯಕ್ಕೆ ಶಾಸ್ತ್ರಿಗಳಿಗೆ ಸಿನಿಮಾ ಹುಚ್ಚು ಇದ್ದುದರಿಂದ ಕೇಬಲ್ ಟೀವಿಯಲ್ಲಿ ದಿನಕ್ಕೆ ಎರಡು ಮೂರು ಸಿನಿಮಾ ನೋಡುತ್ತಿದ್ದರು. ಇವರ ಹಿಂದೆ ಬರುವೆನೆನ್ನುತ್ತಿರಲಿಲ್ಲ. ಆದರೆ ಕೈಗೆ ಸಿಕ್ಕಾಗಲೆಲ್ಲಾ ಇವರು ಸುಸ್ತಾಗುವಷ್ಟು ಕೊರೆಯುತ್ತಿದ್ದರು.

ಹೀಗೇ ಒಂದು ತಿಂಗಳು ಕಳೆದಿತ್ತು. ಅವರಿಗೆ ಇಷ್ಟವಾದ ಟೀವೀ ವೀಕ್ಷಣೆ, ಪೇಪರ್ ಪಠಣ, ಸೊಸೆಯನ್ನು ಕೂಗಿಕೊಳ್ಳುವುದು ಎಲ್ಲವೂ ಕಡಿಮೆಯಾಗಿಬಿಟ್ಟಿತ್ತು.

ಒಂದು ಸಂಜೆ ಕರೆಂಟು ಇರಲಿಲ್ಲ. ಶಾಸ್ತ್ರಿಗಳು, “ಯಾರೋ ಪರಿಚಯದವರು … ಕರೆಯುತ್ತಿರುತ್ತಾರೆ. ಇವತ್ತು ಸಿನಿಮಾ ಇಲ್ಲ. ಅವರ ಮನೆಗೆ ಹೋಗಿಬರ್ತೀನಿ” ಎಂದು ಹೊರಗೆ ಹೋಗಿದ್ದರು. ನರೇಶ್ ಬಂದಿದ್ದರೂ ಶಾಸ್ತ್ರಿಗಳು ಬಂದಿರಲಿಲ್ಲ. ಊಟಮಾಡಿ ಬರಬಹುದೆಂದುಕೊಂಡಳು ನಂದಿನಿ. ಮಗ ನರೇಶನನ್ನು ಏಕಾಂತದಲ್ಲಿ ಕರೆದು, “ಮಗೂ ನರೇಶಾ, ನಿನ್ನಿಂದ ಒಂದು ಸಹಾಯ ಆಗ್ಬೇಕು” ಎಂದು ಮಗನ ಗಮನ ಸೆಳೆದು ಮಾತು ಮುಂದುವರಿಸಿದರು.

“ನನಗೀಗ ತುಂಬಾ ನೆಮ್ಮದಿಯಾಗಿದೆ. ನಾಗೂನ ನೆನಪು ಇದೆ. ಆದರೆ ನೋವು ಇಲ್ಲ. ನಂದಿನಿಗೆ ನನ್ನಿಂದ ಸ್ವಲ್ಪ ಬಿಡುವು ಸಿಕ್ಕಿರೋದೇ ನಂಗೆ ಸಂತೋಷ ಪಾಪ! ಆ ಹುಡುಗಿ ನನ್ನ ಮಾತಿನ ಭರಾಟೆಯನ್ನು ಹೇಗೆ ಸಹಿಸುತ್ತಿದ್ದಳೋ ಏನೋ?… ಆದರೆ. . .” ಮಾತು ನಿಲ್ಲಿಸಿದರು. ತಂದೆಯ ಮನಸ್ಸಿಗೆ ಏನೋ ಬೇಸರವಾಗಿದೆಯೆಂದು ಗ್ರಹಿಸಿದ ನರೇಶ, ತಕ್ಷಣವೇ “ಏನಪ್ಪಾ ಆದರೆ?” ಎಂದ.

“ಏನಿಲ್ಲಾ, ಈ ಶಾಸ್ತ್ರಿಗಳು. . .” ಎಂದು ಮುಖ ಸಿಂಡರಿಸುತ್ತಿದ್ದಂತೆಯೇ, “ರಾಯರೇ. . . ರಾಯರೇ. . . ಈ ಕತ್ತಲಲ್ಲಿ ಎಲ್ಲಿದ್ದೀರಿ? ನಿಮಗೊಂದು ಮಜವಾದ ಸುದ್ದಿ ಹೇಳಬೇಕು” ಎನ್ನುತ್ತಾ ಶಾಸ್ತ್ರಿ ಗಳು ಬಂದೇಬಿಟ್ಟರು.

ಮಗನಿಗೆ ಹೇಳಬೇಕೆಂದಿದ್ದ ರಾಯರ ಮಾತು ಅವರ ಗಂಟಲಲ್ಲಿಯೇ ಅಡಗಿ ಕುಳಿತಿತು. ಉಗುಳುನುಂಗಿ ಶಾಸ್ತ್ರಿಗಳ ಕೊರೆತವನ್ನು ಆಲಿಸತೊಡಗಿದರು.

* * *

“ರೀ ನಿಮ್ಗೆ ಕಾಗದ ಬಂದಿದೆ” ಎಂದಳು ರಾತ್ರಿ ಮನೆಗೆ ಬಂದ ನರೇಶನಿಗೆ ಪತ್ರ ನೀಡಿದ ನಂದಿನಿ.

ಅಲ್ಲಿಯೇ ಶಾಸ್ತ್ರಿ ಗಳೂ, ರಾಯರೂ ಇದ್ದರು. ಮಕ್ಕಳು ಮಲಗಿಬಿಟ್ಟಿದ್ದರು. ಕಾಗದ ಒಡೆದು ಓದಿದ ನರೇಶ ಶಾಸ್ತ್ರಿಗಳನ್ನು ಉದ್ದೇಶಿಸಿ ಹೇಳಿದ.

“ಶಾಸ್ತ್ರಿಗಳೇ, ನಿಮ್ಮಿಂದ ಒಂದು ಉಪಕಾರವಾಗಬೇಕು. ನೀವಿಲ್ಲಾಂತಂದ್ರೆ ನನ್ನ ಫ್ರೆಂಡ್‌ಗೆ ನಿರಾಶೆಯಾಗುತ್ತೆ” ಎಂದ ಪೀಠಿಕೆ ಹಾಕುವಂತೆ.

“ಏನು ವಿಷಯ ಹೇಳಪ್ಪಾ?” ಎಂದರು ಶಾಸ್ತ್ರಿಗಳು.

‘ಏಕೆ ಕೊರೆಯಲಿಲ್ಲ!’ ಎಂದುಕೊಂಡರು ರಾಯರು.

“ನಿಮ್ಮ ಪ್ರಭಾಕರ, ನಾನು, ಗಂಗಾಧರ ಮೂವರೂ ಕ್ಲೋಸ್ ಫ್ರೆಂಡ್ಸು ಅಂತ ನಿಮ್ಗೇ ಗೊತ್ತು. ಪ್ರಭಾಕರ ಅವ್ನಿಗೆ ನೀವಿಲ್ಲಿ ಇರೋ ವಿಷಯ ತಿಳಿಸಿದ್ದನಂತೆ. ಈಗ ಗಂಗಾಧರ ಕಾಗದ ಬರೆದಿದ್ದಾನೆ. ಅವ್ನು ಸೀ. ಈ. ಏನಲ್ಲಿರೋ ವಿಷಯ ನಿಮ್ಗೂ ತಿಳ್ದಿದೆ. ಅವ್ನಿಗೆ ಶಿಲ್ಲಾಂಗ್‌ಗೆ ಟ್ರಾನ್ಸ್ಫರ್ ಆಗಿದೆ. ಅವ್ನಿಗೆ ಒಬ್ನೇ ಇರೋಕ್ಕೆ ಬೋರಂತೆ. ನಿಮ್ಮನೇಲಿರೋ ಬದ್ಲು ಪ್ರಭಾಕರ ಬರೋವರೆಗೆ ನನ್ಜೊತೆ ಇರಲಿ. ಬ್ರಹ್ಮಚಾರಿಗೆ ಬೇಸರ ಕಳೆಯುತ್ತೆ ಅಂತ ಬರ್ತಿದ್ದಾನೆ. ಏನಂತೀರಿ?” ಕೇಳಿದ ನರೇಶ್.

ರಾಯರ ಹೃದಯದ ವೇಗ ಹೆಚ್ಚಿತು. ‘ಈ ಮನುಷ್ಯ ಒಪ್ಪಿಕೊಂಡರೆ ಸಾಕು. ನನ್ನ ಪಾಡಿಗೆ ಇವನ ಕೊರೆತವಿಲ್ಲದೆ ಮೊಮ್ಮಕ್ಕಳು, ವ್ಯವಹಾರ ನೋಡಿಕೊಂಡಿರಬಹುದು’ ದೇವರನ್ನು ಪ್ರಾರ್ಥಿಸಿದರು ರಾಯರು.

ನಂದಿನಿಗೆ ಅಚ್ಚರಿ! ಶಾಸ್ತ್ರಿಗಳು ಅಷ್ಟು ಪಾಪ್ಯುಲರ್ ಎಂದು ಅವಳಿಗೆ ತಿಳಿದಿರಲಿಲ್ಲ.

ದೇವರು ರಾಯರಿಗೆ ಮೋಸ ಮಾಡಲಿಲ್ಲ. ಶಾಸ್ತ್ರಿಗಳು, “ನನಗೇನಪ್ಪಾ, ಯಾವುದೋ ಒಂದು ಜಾಗ. ಮಗ ಬರೋವರೆಗೆ ಎಲ್ಲಾದರೂ ಒಂದು ಕಡೆ ನೆಮ್ಮದಿಯಿಂದ ಸಮಯ ಕಳೆದರೆ ಸಾಕು” ಎಂದುಬಿಟ್ಟರು.

ಮರುದಿನವೇ ನರೇಶ ಸ್ಕೂಟರ್ ಮೇಲೆ ಶಾಸ್ತ್ರಿಗಳನ್ನು ಕೂರಿಸಿಕೊಂಡ. “ಸ್ಟೇಷನ್ನಿಗೆ ಬಿಟ್ಟು ಬರ್ತೀನಿ” ಎಂದ ನಂದಿನಿಗೆ.

“ರಾಯರೇ, ಮತ್ತೆ ನಿಮ್ಮನ್ನು ನೋಡ್ತೀನಿ” ಎಂದು ಹೆದರಿಸಿ, ಎಲ್ಲರಿಗೂ ಟಾಟಾ ಮಾಡಿ ಹೊರಟರು ಶಾಸ್ತ್ರಿಗಳು. ಆದರೆ ಅವರು ತಲುಪಿದ್ದು ಸ್ಟೇಷನ್ನಿಗಲ್ಲ. ಅದೇ ನಗರದ ಪ್ರಖ್ಯಾತ ನಾಟಕ ಕಂಪೆನಿಯ ಕಟ್ಟಡವನ್ನು.

“ಶಾಸ್ತ್ರಿಗಳ ಪಾತ್ರವನ್ನು ಬಹಳ ಚೆನ್ನಾಗಿ ಅಭಿನಯಿಸಿದಿರಿ, ಯಾವಾಗಲಾದರೂ ಬೇಕಾದಾಗ ಮತ್ತೆ ಬರಹೇಳ್ತೀನಿ. ಬರ್ತೀರಿ ತಾನೇ?” ಕೇಳಿದ ನರೇಶ್, ಅವರ ಕೈಗೆ ನೋಟಿನ ಕಟ್ಟೊಂದನ್ನು ನೀಡಿ.

“ಅದಕ್ಕೇನು ಸ್ವಾಮೀ ಕಷ್ಟ? ಹೊಟ್ಟೆಪಾಡಿಗೆ ಸ್ಟೇಜಿನ ಬದಲು ಮನೇಲಿ ಪಾರ್ಟು ಮಾಡಿದೆ ಅಷ್ಟೇ. ಹೋಗಿ ಬರ್ತೀರಾ?” ಎಂದು ಹೇಳಿ, ಸ್ಕೂಟರ್ ಸ್ಟಾರ್ಟ್ ಮಾಡಿದ ನರೇಶನಿಗೆ, ಕೈ ಮುಗಿದರು.

 

ನನ್ನ ಎಲ್ಲ ಕಥೆಗಳೂ ನನಗಿಷ್ಟವಾದ್ದರಿಂದ ಆಯ್ಕೆ ಮಾಡುವುದು ಕಷ್ಟವೇ ಆಯಿತು!
ಆದರೂ ನನ್ನ ಕಥೆಗಳಲ್ಲಿ ‘ಉಭಯ ಸಂಕಟ’ ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಇಷ್ಟವೆನ್ನಬಹುದೇನೋ…
ತಂದೆ ತಾಯಿಯರ ಒಬ್ಬನೇ ಮಗ; ತಂದೆ ತಾಯಿ ಬಲು ಅನುರೂಪವಾಗಿರುತ್ತಾರೆ; ತಾಯಿಯ ಗೈರು ತಂದೆಯನ್ನು ದುಃಖಕ್ಕೀಡು ಮಾಡುತ್ತದೆ.
ತಂದೆಯನ್ನು ಮನೆಯಲ್ಲಿ ಇಟ್ಟುಕೊಂಡ ನರೇಶನಿಗೆ ಅವನ ತಂದೆ ಮತ್ತು ಅವನ ಹೆಂಡತಿಯ ನಡುವಣ ಕೆಲವು ವಿಷಯಗಳು ತಿಳಿಯುವುದಿಲ್ಲ.
ಪತ್ನಿಯು ದುಃಖ ತೋಡಿಕೊಂಡಾಗ ಅತ್ತ ತಂದೆಗೂ ಹೇಳಲಾರ, ಇತ್ತ ಹೆಂಡತಿಗೂ ಏನೂ ಅನ್ನಲಾರ. ಈ ದ್ವಂದ್ವದಲ್ಲಿ ಯಾರಿಗೂ ನೋವಾಗಕೂಡದು, ಯಾರಿಗೂ ಅವಮಾನವಾಗಕೂಡದು, ಯಾರಿಗೂ ಯಾರ ಮೇಲೂ ಕೀಳು ಅಭಿಪ್ರಾಯ ಬರಕೂಡದು… ಅಂತಹ ಒಂದು ನಿರ್ಧಾರ ತೆಗೆದುಕೊಳ್ಳುತ್ತಾನೆ ನಾಯಕ.
ಹಿರಿಯರ ಮೇಲಿನ ಪ್ರೀತಿ, ಗೌರವಗಳ ಬಗ್ಗೆ ನವಿರಾಗಿ ತಿಳಿಸುವ ಈ ಕಥೆ ಈಗಿನ ಕಾಲಕ್ಕೆ ಕೂಡ ಅನ್ವಯವಾಗುವುದೇ? ಪ್ರೀತಿಯ ಓದುಗರೇ ತಿಳಿಸಬೇಕು.
ಕಥೆ ಬಂದು ಮೂರು ವರ್ಷಗಳ ನಂತರ ಖ್ಯಾತ ಕವಯಿತ್ರಿಯೊಬ್ಬರು ಬದಲಾಗಿದ್ದ ನನ್ನ ಮನೆ ಹುಡುಕಿಕೊಂಡು ಬಂದು ಈ ಕಥೆಯ ಹಕ್ಕುಗಳನ್ನು ನಿರ್ಮಾಪಕರೊಬ್ಬರಿಗೆ ಕೊಡಿಸಿದರು.
ಖ್ಯಾತ ಹಾಸ್ಯ ನಟ ಶ್ರೀ ಎಂ.ಎಸ್. ಉಮೇಶ್ ಅವರು ಈ ಕಥೆಯ ಶಾಸ್ತ್ರಿಗಳ ಪಾತ್ರ ವಹಿಸಿದ್ದರು. ಡಿಡಿ9ರಲ್ಲಿ ಎರಡು ಎಪಿಸೋಡುಗಳ ಕಿರುಚಿತ್ರವಾಗಿತ್ತು ಈ ಕಥೆ ಉಭಯ ಸಂಕಟ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ