ಗಂಡಗ ಹ್ಯಾಂಗ್ ಹೇಳ್ಳಿ ಅನ್ನ ಚಿಂತ್ಯಾತು. ಕೂಸು ಅತ್ತತ್ತ್ ತೊಡಿ ಮ್ಯಾಲೆಮಕ್ಕೊಂತು. ಅಕಿನೂ ಅತ್ತತ್ತ್ ಹೈರಾಣಾಗಿದ್ಲು. ಗಲ್ಲದ್ ಮ್ಯಾಲೆ ಕೈ ಇಟ್ಗೊಂಡು ಚಿಂತೀ ಮಾಡ್ಕೊಂತ ಕುಂತ್ಲು. ಹಂಗ ಕಣ್ಣ್ ಮುಚ್ಚಿದ್ವು. ಬಾಗ್ಲಾ ತಗದು ಪರಪ್ಪ ಒಳ್ಗ ಬಂದಾ. `ಯಾಕ್ ಮಕ್ಕೊಂಡಿಯಲೇ ಏನಾಗೇತಿ, ಗಲ್ಲಕ್ಕ್ ಕೈ ಹಚ್ಚೀದಿ ಗುಡ್ಡ್ ಬಂದು ತೆಲಿ ಮ್ಯಾಲೆ ಬಿದ್ದೈತೇನಂದ”. ಸುಮ್ನ ಇದ್ಲು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಬರೆದ ಕತೆ ‘ವರ್ತುಲ’ ನಿಮ್ಮ ಈ ಭಾನುವಾರದ ಓದಿಗೆ
ಮುಂಜೇಲಿ ಹೊತ್ತು ಪಾರೋತಿ ಮೈ ತೊಕ್ಕೊಳ್ಳಾಕಂತ ಹಂಡೆದಾಗ ಕೈ ಹಾಕಿ ನೋಡಿದ್ಲು. ನೀರು ಬಿಸಿ ಇತ್ತು. ಅಕಿ ಮಗ ಮೂರ್ ವರ್ಸದ್ ಶಂಕ್ರು ಆಡಿಕೊಂತ ಅಲ್ಲೆ ಕುಂತಿತ್ತು. ಯಪ್ಪಾ ಅಂದ್ಲು, ಉಂ ಅಂತು ಕೂಸು. ನಾ ಮೈ ತೊಕ್ಕೊಂತೀನಿ, ಇಲ್ಲೇ ಇರು ಯಪ್ಪಾ ಎಲ್ಲೀ ಹೋಗ್ಬಾಡಾ. `ಹುಂ’. ಮಗನ್ನೆತಿಗೊಂಡು ಲಟಾಲಟಾಂತ ಮುತ್ತ್ ಕೊಟ್ಲು, `ನಮ್ಮಪ್ಪ್ ಜಾಣಾ, ಬಂಗಾರಾ.’ ಕಯ್ಯಾಗೊಂದು ಬೆಲ್ಲದ್ ಕಣ್ಣಿ ಕೊಟ್ಲು, `ಎಲ್ಯೂ ಹೋಗ್ಬಾಡಾ ಯಪ್ಪಾ.’ ಬೆಳ್ಳಿ ಡಾಬಾ, ಬಂಗಾರದ್ ಪಟ್ಟಿಟೀಕಿ ಬಿಚ್ಚಿಟ್ಲು. ಬಚ್ಚಲದಾಗ ಇಳದ್ಲು. ಮೈಮ್ಯಾಗ ಒಂದ್ ಚೆರಿಗಿ ನೀರ್ ಹಾಕ್ಯೊಂಡ್ಲು. ಹಾಡಾಕ್ಹತ್ತಿದ್ಲು. ಬಾಳಾ ಚೆಂದ ಹಾಡಾಕಿ. ಗಂಡಗ ಅಕಿ ಹಾಡಿದ್ರ ಸಿಟ್ಟ ಬರ್ತಿತ್ತು. ಏನ್ ಕೊಯ್ ಕೊಯ್ ಮಾಡ್ತಿ ಚೆಂತೆನ್ಕ ಅನ್ನಾವಾ. ಈಗವಾ ಮನ್ಯಾಗ ಇರ್ಲಿಲ್ಲ. ಅದ್ಕ ಅಕಿಗೆ ಹಾಡಂಗಾಗಿತ್ತು.
ಆಡಿ ಬಾ ನನ ಕಂದ ಅಂಗಾಲ ತೊಳದೇನ
ತೆಂಗಿನ ಕಾಯ ತಿಳಿನೀರ ತಕ್ಕೊಂಡು
ನಿನ ಬಂಗಾರದ ಮಾರಿ ತೊಳದೇನ. . . .
ಹಾಡ್ಕೊಂತ ಮೈಮ್ಯಾಲೆ ಕೈಯಾಡ್ಸಿಕೊಂತ. . . . .
ಮೈ ತೊಕ್ಕೊಂಡು ಸೀರಿ ಸುತಿಗೊಂಡು ಹೊರ್ಗ್ ಬಂದ್ಲು. ಯಪ್ಪಾ ಶಂಕ್ರು ಅನ್ಕೊಂತ ಸೀರಿ ಕುಬ್ಸಾ ಉಟಗೊಂಡು, ಟೀಕಿ ಕಟಿಗೊಂಡು, ಬಾಳಿಪಟ್ಟಿ ಮ್ಯಾಲೆ ಡಾಬಾ ಕಟಿಗೊಂಡ್ರ ಚೆಂದ. ಡಾಬಾ ಇರಲಿಲ್ಲ, ಮಗನೂ ಇರ್ಲಿಲ್ಲ. ಯಪ್ಪಾ ಶಂಕ್ರ ಎಲ್ಯ್ ಹ್ವ್ಯಾದಿ ಡಾಬಾ ತೋಂಡು ಅನ್ಕಂತ್ ಹೊರ್ಗ ಬಂದ್ಲು. ಕಾಲಾ ಸುಮಾರಾಗ್ಯಾವ, ಡಾಬದ್ ಆಸೇಕ ಯಾರರ ಎತಿಗೊಂಡ್ ಹ್ವಾದ್ರೊ ಅಂತ ಹೊರ್ಗ್ ಬಂದ್ಲು. ಎಲ್ಲೂ ಕಾಣ್ಲಿಲ್ಲ. `ಶಂಕ್ರು.’ ಗಟ್ಯಾಗಿ ಒದರಿದ್ಲು, `ಶಂಕ್ರು ಯಪ್ಪಾ, ಎಲ್ಲ್ ಅಡಕ್ಕೊಂಡೀಯ ನನ ಬಂಗಾರಾ, ಬಾರ ಯಪ್ಪಾ..ʼ
ಮಗ್ಗ್ ಲ್ ಮನಿ ಸಾವಂತ್ರೆವ್ವ ಹೊರ್ಗ್ ಬಂದ್ಲು. `ಏಟ ಒದರ್ತೀಯ ಪಾರೋತಿ… ಮಗನ್ನ್, ಇಲ್ಲೆ ಎಲ್ಲೆರ ಆಡ್ಕೊಂತ ಕುಂತಿರಬಕಳ’ ಅಂದ್ಲು. `ಯತ್ತೀ ಡಾಬಾ ತೋಂಡ್ ಬಂದಾನ ಹೊರ್ಗ್ ಅದ್ಕ ಒದರಾಕ್ ಹತ್ತೀನಿ.’ ಅಕಿ ಕಣ್ಣಾಗ್ ನೀರ ಬಂದ್ವು. `ಅಯ್ಯ ಹಿಂಗ್ ತಡಕೊ ನಾ ನೋಡ್ಕಂಬರ್ತಿನಿ, ಇಲ್ಲೆ ನಿಂದರು’ ಮುಂದಕ್ ಹ್ವಾದ್ಲು. `ಇಲ್ಲದಾನ ನೋಡವಾ ನಿನ್ಮಗಾ,’ ಮಗಾ ಇದ್ರಿಗೆ ಬರ್ತಿದ್ದಾ. ಪಾರೋತಿ ಅಡ್ರಾಸ್ಹೋಗಿ ಮಗನ್ನ್ ಎತಿಗೊಂಡ್ಲು. `ಡಾಬಾ ಎಲ್ಲಿಟ್ಟೆ ಯಪ್ಪಾ’. ಕೇಳಿದ್ಲು. `ಚಿಗವ್ವ ತೋಂಡ್ಲುʼ. `ಯಾ ಚಿಗವ್ವ’ ಶಂಕ್ರು ತಾ ಬಂದ್ ದಿಕ್ಗೆ ಬಳ್ಳ್ ಮಾಡ್ದಾ. `ನೋಡಿ ಬರ್ತೀನಿ ಯತ್ತೀ’, ಅಂತ್ ಹೊಂಟ್ಲು. ಬಾಗ್ಲಾ ಮುಂದಕ್ ಮಾಡಿದ್ಲು. ಆಕಿನೂ ಹಿಂದಿಂದ ಹ್ವಾದ್ಲು. ನೀಲವ್ವನ್ ಮನಿ ಕಡೆ ಬಳ್ಳ್ ಮಾಡ್ದಾ, ಆ ಚಿಗವ್ವಂದ. `ಯತ್ತೀ, ಹ್ಯಾಂಗ್ ಮಾಡ್ಲೆ ನಿಮ್ಮಕ್ಕ ನನ್ನ್ ಕುತಗೀನ ಹಿಚಗ್ತಾಳ.’ ಕಣ್ಣಾಗ್ ಬಳಾಂತ ನೀರ್ಬಂದ್ವು.
ನೀಲವ್ವ ಸಲಪು ಹಂಗ. ಚೆಂದುಳ್ಳಿ ಹೆಣ್ಣು, ಆದ್ರ್ . . . ಅಕಿ ಕೈಯಾಂದು ಇಸ್ಗೊಳ್ಳದ್ಹ್ಯಾಂಗ್. ತಡೀ ಅಂದ್ಲು ಸಾವಂತ್ರವ್ವಾ. `ಏನ್ಮಾಡಾಕ್ ಹತ್ತೀಯೇ ನೀಲವ್ವ ತಟಗು ಹೊರ್ಗ್ ಬಾ’ ಅಂದ್ಲು ಸಾವಂತ್ರವ್ವಾ. ನೀಲವ್ವ ಹೊರ್ಗ ಬಂದ್ಲು. `ಯಾಕ್ ಚಿಗವ್ವಾ’ ಅಂದ್ಲು. `ಶಂಕ್ರನ್ ಕೈಯಾಂದ್ ಡಾಬಾ ತೋಂಡೆಂತಲ್ಲ ಹುಡ್ಗಾಟಾ ಮಾಡ್ಬಾಡಾ, ಈರವ್ವಕ್ಕ ಮನ್ಯಾಗಿಲ್ಲ ಕೊಟ್ಬುಡು’. `ಇಲ್ಲವಾ ಚಿಗವ್ವಾ ನಾ ತೋಂಡಿಲ್ಲ. ಹುಡ್ಗ್ ಬಾರ್ಗಿ ಏನರ ಹೇಳತ್ತ, ಅದರ್ ಮಾತ್ ಕೇಳಿ ಬಂದೀರೇನ್ ನಾ ಯಾಕ ತೋಳ್ಳಿ’ ಹಾರ್ಸೊಂಗ್ಬಿಟ್ಲು. ಪಾರೋತಿ ಮತೆ ಮಗನ್ನ್ ಕೇಳಿದ್ಲು. ನೀಲವ್ವನ್ ಕಡೆ ಬಳ್ಳ್ ಮಾಡ್ತಾ ಚಿಗವ್ವ ಅಂತು ಕೂಸು. ನೀಲವ್ವ ಬಾಗ್ಲಿಗೆ ಕೈ ಅಡ್ಡ್ ಇಟ್ಗೊಂಡು ನಿಂತಿದ್ಲು ತೆಲಿ ತುರ್ಸಿಗೊಂತ. ನೀಲವ್ವನ ಗಂಡಾ ದೇಶಾವರಿ ಹೋದವ ಏಸ್ ವರ್ಷಾದ್ರೂ ಬರ್ಲೆ ಇಲ್ಲ. ಅದ್ಕ್ ತೌರ್ಮನೀಗೆ ಬಂದ್ಲು. ಅಣ್ಣಾ, ತಮ್ಮದೇರ ಹೆಂಡ್ರು ಸೇರ್ಲಿಲ್ಲ. ಅವ್ವಾ ಮಗಳೂ ಇಬ್ರೂ ಬ್ಯಾರೆ ಇರ್ಬಕಾತು. `ಗಂಗವ್ವಕ್ಕ ಇಲ್ಲನೂʼ… `ಸೆಂತಿಗ್ಹೋಗ್ಯಾಳ.’
ಮಗನ್ನ್ ತಳ್ಗ್ ಇಳಿಸಿದ್ಲು ಪಾರೋತಿ. ನೀಲವ್ವನ್ ಕಾಲ್ ಹಿಡಿಯದು ಒಂದ ದಾರಿತ್ತೀಗ. ಪಾರೋತೆಂದ್ಲು, `ಯಕ್ಕಾ, ನಿಂಗ್ ಕಾಲ್ ಬೀಳತೀನಿ ಕೊಡ, ನಿನ್ನ ಕಡೆನ ಬಳ್ಳ್ ಮಾಡತ್ತ ಕೂಸು ಕೊಡ, ನಿನಗ್ ದೀಡ ನಮಸ್ಗರ ಹಾಕ್ತೀನಿ ಕೊಡ, ನನ್ನ ಅತ್ತೀ ಗಂಡ ಬೆಯ್ಯತಾರ ಕೊಡ, ಹುಡಗಾಟ್ಕ್ ತೋಂಡಿದ್ರ್ ನಾ ಏನೂ ಅನ್ನಂಗಿಲ್ಲ ಕೊಡ . . .
ನೀಲವ್ವ ತನ್ನ ತೆಲ್ಯಾನ್ ಹೇನ್ ಒರದಂಗ್ ಮಾಡಾಕ್ಹತ್ತಿದ್ಲು. `ಪಾರೋತಿ ಗಂಟ್ಲ ಬಿಗಿತು.ʼ `ನಿಂಗ್ ಸೀರಿ ಉಡಸ್ತೀನಿ, ಕೊಡ ಗೌರೀ ಹಬ್ಕ್ ಕಾಲುಂಗ್ರಾ ಕೊಡ್ಸತಿನಿ ಕೊಡ, ಎಳ್ಳ್ ಅಮಾಸಿಗೆ ಎಳ್ಳ್ ಹೋಳ್ಗೀ ಮಾಡ್ಕೊಡತಿನಿ, ಕೊಡ. ಉಗಾದ್ಗೆ ಬುಗುಡೀ ಮುತ್ತ್ ಕೊಡ್ಸತೀನಿ, ಕೊಡ. ನನ್ನ ಸಂಸಾರಾ ನರ್ಕ್ ಆಗತ್ತ್ ಕೊಡ. ನಿಂಗ್ ಹಾಡ್ ಕಲ್‍ಸ್ತೀನಿ ಕೊಡ. ಕೊಡದಿದ್ರ್ ಸೋಮನಾತ ಲಿಂಗದ ಆಣಿ ನಿಂಗ್,’
ಪಾರೋತಿ ಒಂದ್ ಮಾತ್ ಹೇಳಕಿ ಕಣ್ಣಾನ್ ನೀರ್ ಒರ್ಸಕಿ. ಸಾವಂತ್ರೆವ್ವಂದ್ಲು, `ಏಟ್ ದೈನಾಸ ಬಿಡಾಕ್ಹತ್ಯಾಳಾ ಪಾರೋತಿ, ಕೂಸೂ ನಿನ್ನ ಕಡೆನ ಕೈ ಮಾಡಾಕ್ಹತ್ತೇತಿ ಕೊಡ ಯಾಕ್ ಕಾಡಸ್ತಿ’ `ಅಯ್ಯ ಚಿಗವ್ವಾ ನಿ ಒಬ್ಬಕಿ ಹಂತಾಕಿನ ಅದೀಯಲ್ಲ. ನಾ ತೋಂಡಿಲ್ಲವಾ, ಕೆಲ್ಸಾ ಬಗ್ಸಿ ಏನಿಲ್ಲ ನಿಮ್ಗ್ ಹೋಗ್ಹೋಗ್ರಿ’ ಅನ್ಕೊಂತ್ ಒಳಗ್ಹೋಗಿ ಬಾಗ್ಲಾ ಹಾಕ್ಯೊಂಡ್ಲು. ಇಬ್ರೂ ಮನೀಗ್ಬಂದ್ರು. ಏನ್ಮಾಡಬಕಂತ ತಿಳೀಲಿಲ್ಲ. 45 ತೊಲಿ ಬೆಳ್ಳಿ ಡಾಬಾ, ಗಂಡಗ್ ಏನ್ಹೇಳ್ಳಿ, ಏನಂತಾನ ಏನ. ಮದಿವ್ಯಾಗಿ ಆರ್ ವರ್ಷ ಆಗಿತ್ತು, ಇನತಂಕ ಹೊಡ್ದಿದ್ದಿಲ್ಲ. ಇವತ್ತ್ ಹೊಡ್ಯದು ಖಾತ್ರೀ ಅನಿಸ್ತು. ಮಗನ್ನ್ ಕುಂದ್ರಿಸ್ಸಿಗೊಂಡು ಅತ್ಲು. ಹೊಡಿಬಕಂತ ಕೈ ಮ್ಯಾಲಮಾಡಿದ್ಲು. ಜೋರಾಗಿ ಚೀರ್ತು ಕೂಸು. ಸಾವಂತ್ರ್ಯವ್ವ ಮನೀ ಒಳಗ್ ಬಂದ್ಲು. `ಯಾಕ ಪಾರೋತಿ ಕೂಸಿಗ್ ಹೊಡಿತೀ’ `ಹೊಡ್ದಿಲ್ಲ್ ಯತ್ತೀ ಹ್ಯಾಂಗ್ ಚೀರಾಕ್ಹತ್ಯಾನ್ ನೋಡು ನಿನ್ನ ಮಗನ್ ಕಡಿಂದ ನಂಗ್ ಬೀಳತಾವ ಕಡಬು ಇವತ್ತ. ಗಂಡಗ್ ಏನ್ ಹೇಳ್ಳಿ, ಎಂಥಾ ಸಂಕಟದಾಗ ತಂತೋ ಕೂಸು ನನ್ನ, ಇದನ್ನ್ ಹಿಚಗ್ಲೊ ನಾ ಉರ್ಲ್ ಹಾಕ್ಯೊಳ್ಳೊ ತಿಳೀವಲ್ದಾಗೇತಿ.’ `ಅಂತಾದೆನ್ ಮಾಡಾಕ್ ಹೊಗ್ಬಾಡಾʼ ಅಂತ ಸಮಾಧಾನ ಮಾಡಿದ್ಲು. `ಅಡ್ಗಿ ಮಾಡೀಯೇನ್’ `ರೊಟ್ಟಿ ಮಾಡೀನಿ” `ಪಲ್ಲೆ ನಾ ತಂದ್ ಕೊಡ್ತೀನಿ ನೀ ಏನ್ ಮಾಡ್ಬಾಡ.” ಸಾವಂತ್ರವ್ವ, ಮನೀಗ್ಹೋಗಿ ಪುಂಡಿ ಪಲ್ಲೆ ಮತ್ತ ಸಪ್ಪನ್ ಬ್ಯಾಳಿ ತಂದ್ಲು, ಅಕಿಗ್ಗೊತ್ತಿತ್ತು. ಪರಪ್ಪ ಯಾವಾಗ್ಯಾವಾಗ ನೀಲವ್ವನ ಮನಿಕಡೆ ಹೊಕ್ಕಿದ್ದಾ, ಅವರವ್ವ ಎಲ್ಲೆರ ಹ್ವಾದಾಗ. ಅವ್ನ ಹೇಳ್ಯಾನನ ಅನಿಸ್ತು. ಇದು ಪಾರೋ ತಿಗೆ ಗೊತ್ತಿದ್ದಿಲ್ಲ.
`ನೀ ಏನ್ ಅಳಬಾಡಾ, ನನ್ನ ಮಗನ್ನ ಮುಂದ್ ಎಲ್ಲಾ ಹೇಳ್ಬುಡು, ಏನ್ ಮಾಡ್ತಾನನ ಮಾಡ್ಲಿ’ `ಹ್ಯಾಂಗ್ ಹೇಳ್ಳಿ ಯತ್ತೀ,’ `ನಿಮ್ಮಪ್ಪ ಗೌಡ ಅದಾನಾ ಅಂಜಬಾಡಾ. ಎಲ್ಲ್ ಹೋಗ್ಯಾನ, ಅಟೊತ್ತಾತು ಕಾಣ್ಲಿಲ್ಲ.” “ ಪ್ಯಾಟಿಗ್ಹೋಗ್ಯಾನಾ ಬರ ಹೊತ್ತಾತು.” `ಎದ್ದ್ ಮೋತಿ ತೊಕ್ಕೊ’. ಅಂದು ಸಾವಂತ್ರೆವ್ವ ಹೋದ್ಲು. ಕುಂತಕಿಗೆ ಏಳಬಕ ಅನ್ಸವಲ್ದು.
ಮಗನ್ನ್ ತಳ್ಗ್ ಇಳಿಸಿದ್ಲು ಪಾರೋತಿ. ನೀಲವ್ವನ್ ಕಾಲ್ ಹಿಡಿಯದು ಒಂದ ದಾರಿತ್ತೀಗ. ಪಾರೋತೆಂದ್ಲು, `ಯಕ್ಕಾ, ನಿಂಗ್ ಕಾಲ್ ಬೀಳತೀನಿ ಕೊಡ, ನಿನ್ನ ಕಡೆನ ಬಳ್ಳ್ ಮಾಡತ್ತ ಕೂಸು ಕೊಡ, ನಿನಗ್ ದೀಡ ನಮಸ್ಗರ ಹಾಕ್ತೀನಿ ಕೊಡ, ನನ್ನ ಅತ್ತೀ ಗಂಡ ಬೆಯ್ಯತಾರ ಕೊಡ, ಹುಡಗಾಟ್ಕ್ ತೋಂಡಿದ್ರ್ ನಾ ಏನೂ ಅನ್ನಂಗಿಲ್ಲ ಕೊಡ . . .
ಗಂಡಗ ಹ್ಯಾಂಗ್ ಹೇಳ್ಳಿ ಅನ್ನ ಚಿಂತ್ಯಾತು. ಕೂಸು ಅತ್ತತ್ತ್ ತೊಡಿ ಮ್ಯಾಲೆ ಮಕ್ಕೊಂತು. ಅಕಿನೂ ಅತ್ತತ್ತ್ ಹೈರಾಣಾಗಿದ್ಲು. ಗಲ್ಲದ್ ಮ್ಯಾಲೆ ಕೈ ಇಟ್ಗೊಂಡು ಚಿಂತೀ ಮಾಡ್ಕೊಂತ ಕುಂತ್ಲು. ಹಂಗ ಕಣ್ಣ್ ಮುಚ್ಚಿದ್ವು. ಬಾಗ್ಲಾ ತಗದು ಪರಪ್ಪ ಒಳ್ಗ ಬಂದಾ. `ಯಾಕ್ ಮಕ್ಕೊಂಡಿಯಲೇ ಏನಾಗೇತಿ, ಗಲ್ಲಕ್ಕ್ ಕೈ ಹಚ್ಚೀದಿ ಗುಡ್ಡ್ ಬಂದು ತೆಲಿ ಮ್ಯಾಲೆ ಬಿದ್ದೈತೇನಂದ”. ಸುಮ್ನ ಇದ್ಲು. ಉಣ್ಣಾಕ್ಕೊಡು ಅಂತ ಒಳ್ಗ್ ಹ್ವಾದಾ. ಒಳ್ಗ್ ಬಂದ್ಲು ಮೈಯೆಲ್ಲಾ ಒಜ್ಜ್ಯಾಗಿತ್ತು. ಮಣಿ ಹಾಕಿ ಅಡ್ಡುಣಿಗಿ ಮ್ಯಾಲೆ ಗಂಗಾಳಾ ಇಟ್ಲು. ರೊಟ್ಟಿ ಪುಂಡೀ ಪಲ್ಲೆ, ಬ್ಯಾಳಿ, ಕಲ್ಲನ್ ಹಿಂಡಿ ಹಚ್ಚಿದ್ಲು. ಪುಂಡಿ ಪಲ್ಲೆ ಎಲ್ಲಿಂದ್ ತಂದೀ ಕೇಳ್ದ. ಆಂ ಅಂದ್ಲು. ಗಂಡ ಯಾವಾಗ ತನ್ನ ಸೊಂಟಾ ನೋಡ್ತಾನೋ ಅನ್ನ ಅಂಜ್ಕೀಗೆ ಅಕಿಗೆ ಮಾತ ಬರ್ಲಿಲ್ಲ. `ಯಾಕಲೆ ಏನಾಗೇತಿವತ್ತ, ಶಂಕ್ರಗ್ ಉಣಿಸೀಯೇನ್, ಎಬಸು ಅವನ್ನ್ ‘
ಯಪ್ಪಾ, ಶಂಕ್ರು ಅಂದ್ಲು. ಕೂಸೆದ್ದು ಅಪ್ಪನ ಕಡೆ ಬಂತು. ರೊಟ್ಟೀ ಮುರ್ದು ಬ್ಯಾಳಿ ಹಚ್ಚಿ ಬಾಯ್ಗಿಟ್ಟ. ಇಬ್ರೂ ಉಂಡು ಪಡಸಾಲ್ಗೆ ಬಂದ್ರು. ಮಗ ಅಪ್ಪಗ ಏನ್ಹೇಳಬಾರ್ದಪ್ಪಾ ಶಿವನ ಅಂತ ಊರ ಹೊರ್ಗೀರೊ ಸ್ವಾಮನಾಥಲಿಂಗಗ ಬೇಡಿಕೊಂಡ್ಲು ಪಾರೋತಿ. ಉಣ್ಣಾಕುಂತ್ಲು, ಬಾಯ್ಗೇನೂ ಸೆವ್ವ್ ಹತ್ಲಿಲ್ಲ. ಬಿಟ್ಲು. ಗಂಗಾಳಾ ತೊಳ್ದು ಮೈಲಿಗಿ ಅರಿಬಿ ಕಟಿಗೊಂಡ್ ಹಳ್ಳಕ್ ಹೊಂಟ್ಲು. ಹೊರ್ಗ್ ಪರಪ್ಪ ಇದ್ದ. ಅಕಿನ್ನೋಡಂದ.- ಇವತ್ಯಾಕ ಮೋತಿ ದೆವ್ವ ಬಡದಂಗೈತಿ. ಏನಿಲ್ಲ ಅಂದ್ಲು. ದುಕ್ಕಾ ಒತ್ತರ್ಸಾಕ್ಹತ್ತಿತ್ತು. ತೆಲಿಮ್ಯಾಲಿಟ್ಗೊಳ್ಳ ಅರಿಬಿ ಗಂಟು ಬಗಲಾಗಿಟ್ಗೊಂಡಿದ್ಲು. ನಿಂದ್ರ್ ಒಂತಟುಗು ಅಂದ. ಡಾಬಾ ಒಜ್ಜ್ಯಾಗೆತೇನು ಕೇಳ್ದಾ. ತಡ್ಯದಾಗ್ಲಿಲ್ಲ. ಗಂಟ್ ತಳಗ ಇಟ್ಟು ಅಳಾಕ್ಹತ್ತಿದ್ಲು. ಏನಾತಂದ. ಎಲ್ಲಾ ಹೇಳಿದ್ಲು.
ಮೈಮ್ಯಾಲೆ ಎಚ್ರ್ ಇರ್ಲಿಲ್ಲನ. ಗೂಟಕ್ಹಾಬಕು. ತಳ್ಗ್ ಯಾಕಿಟ್ಟಿದ್ದಿ ಅಂದ. ಅಳಟ ಅತ್ತು ಹಳ್ಳಕ್ ಹ್ವಾದ್ಲು. ಗಂಡಾ ಬಾಳಾ ಬೆಯ್ಯಲಿಲ್ಲ. ಅಕಿ ದಂಗಾದ್ಲು. ಅವ್ವ ಮಗಾ ಕೂಡಿ ಏನ್ಮಾಡ್ತಾರೊ ಅಕಿಗೆ ಮತ್ತೀಟ್ ಅಂಜ್ಕಿ ಬಂತು. ಹಳದಾಗ್ ನೀಲವ್ವನ ನೋಡಿ ಬೇಸ್ಯಾತಂದ್ಲು. ಇಕಿನ್ ನೋಡಿದ ಗುಟ್ಲೆ ನೀಲವ್ವ ಬರ ಬರ ಸೀರಿ ಹಿಂಡಿಕೊಂಡು . . . . ಪಾರೋತಿ ತನ್ನ ಗಂಟ್ ಒಂದ್ ಕಡೆ ಒಗದ್ಲು, ನೀಲವ್ವನ ಕಡೆ ಬಂದ್ಲು. `ಯಕ್ಕಾ ಕಾಡ್ಸಬಾಡ ಕೊಡ. ನಿಂಗ್ ಕಾಲಿನ್ ಗೆಜ್ಜಿ ಕೊಡ್ತೀನಿ ಕೊಡ’. . . `ಏ ನೀಯೇನ್ ಹಚ್ಚೀಯ ಹಗಲಲ್ಲಾ ಕೊಡು ಕೊಡು ಅಂತ. ನಿಂಗೇನ ಹ್ವಾರೆ ಇಲ್ಲನ್. ತೋಂಡಿಲ್ಲ ಅಂತ ಏಸ್ ಸರೆ ಹೇಳ್ಳಿ’ ಹೊಂಟ್ಲು. `ಹಂಗರ ಸ್ವಾಮನಾತ ಲಿಂಗದ ಮುಂದ ಆಣೀ ಮಾಡು ನೀ ತೋಂಡಿಲ್ಲಂತ” ಅಂದ್ಲು. ‘ಮಾಡ್ತೀನಿ ಹೋಗು’ ಅಂದಾಕಿನ ಬರಾ ಬರಾ ಹೋಗ್ಬಿಟ್ಲು.
ಒಳೆ ಪೇಚೀಗ್ಬಿದ್ದಾಂಗಾತು. ಹಳದಾಗ ಸೀರಿ ಹಾಕಿ ಸೆಳಲ್ದು, ಒಗೀಲಿಲ್ಲ. ಹಂಗ. ಹಿಂಡಿಕೊಂಡು ಮನೀಗ್ ಬಂದ್ಲು. ಪರಪ್ಪ ಪಡಸಾಲ್ಯಾಗ್ ಕುಂತಿದ್ದ. ಅವನ್ಮುಂದ ಎಲ್ಲಾ ಹೇಳಿದ್ಲು. `ಆಂ ಅಕಿ ಬರ್ತೀನಂದ್ಲಾ ಅಂದ. ಹೂಂ ಅಂದ್ಲು.
ಈಸ್ ದಿನಾ ಎಲ್ಲಾರೂ ಅಂತಿದ್ರು, ಸ್ವಾಮನಾತನ ಗುಡ್ಯಾಗ್ ಹೋಗ ಧೈರ್ಯ ಯಾರೂ ಮಾಡಿದ್ದಿಲ್ಲ. ಅಲ್ನಿಂತು ಪ್ರಮಾಣಾ ಮಾಡಿದ್ರ ತಪ್ಪ್ ಮಾಡದವ್ರಿಗೆ ಏನರ ಆಗೇ ಆಗತ್ತಂತ ನಂಬ್ಕಿ ಇತ್ತು. ಈ ಮೋಜ್ ನೋಡಾಕ ಬಾಳ ಮಂದಿ ಗುಡೀಗ್ಬಂದ್ರು. ನೀಲವ್ವ ಅಂತಕಂತಿದ್ರು ಅದ್ಕ್ ಅಕಿ ಗಂಡಾ ದೇಶಾವರಿ ಹೋಗ್ಯಾನಂತಿದ್ರು. ಅಂತಕಿನ್ನ ನೋಡ ಸಲ್ವಾಗಿನ ಮಂದಿ ಬಂದ್ರು. ಪೂಜಾರಪ್ಪಾ ಬಾಳತ್ತನ ಲಿಂಗದ ಪೂಜಾ ಮಾಡಿ ಏನೇನ ಮಂತ್ರಾ ಹೇಳ್ದಾ. ಆಮ್ಯಾಕ ಯಾಡ್ ದಾಸ್ವಾಳದ್ ಹೂವಾ ಲಿಂಗದ್ ಮ್ಯಾಲಿಟ್ಟ. ಒಂದ್ಕಡೆ ಗಂಡಸ್ರು ಇನ್ನೊಂದ್ಕಡೆ ಹೆಂಗ್ಸ್ರು ಕುಂತಿದ್ರು. ಎಲ್ಲಾರೂ ಗುಸು ಗುಸು ಮಾತಾಡತಿದ್ರು
ಪೂಜಾರಪ್ಪ ಗಟ್ಯಾಗ್ಹೇಳ್ದ. “ಪಾರವ್ವಕ್ಕನ ಡಾಬಾ ನೀಲವ್ವಕ್ಕ ಕದ್ದಾಳಾ ಇದು ಖರೆ ಇದ್ರ ಲಿಂಗದ ಎಡಕಿಂದ ಹೂ ಬೀಳ್ಳಿ, ಸುಳ್ಳಿದ್ರ ಬಲ್ಕಿಂದ.” ಹೂವಾ ಬೀಳ್ಳೆ ಇಲ್ಲ, ನೀಲವ್ವ ಗಾಬರ್ಯಾದ್ಲು ಪೂಜಾರಪ್ಪನೂ ಗಾಬರ್ಯಾದ. ಏಟ್ ಹೊತ್ತಾದ್ರೂ ಹೂವಾ ತಳಗ ಬೀಳ್ಳೇ ಇಲ್ಲ. ಮಂದಿ ಗುಸು ಗುಸು ಮಾಡಾಕ್ಹತ್ತಿದ್ರು. ಪೂಜಾರಪ್ಪ ಬೆದರ್‍ದಾ. ಇವತ್ತಿನ ತಂಕ ಹಿಂಗ ಮಾಡಾಕ ಯಾರೂ ಹೋಗಿದ್ದಿಲ್ಲ. ಆದ್ರ ಎಲ್ಲಾರ್ಗೂ ಲಿಂಗದ ಮ್ಯಾಲ ನಂಬ್ಕಿ ಇತ್ತು. ಈಗ ನಂಬ್ಕಿ ಸುಳ್ಳಾಗೊ ಕಾಲ ಬಂತು. ಏನ್ ಮಾಡ್ಬಕು ಅಂತ ತಿಳಿಲಿಲ್ಲ. ಉಸರ್ ಹಾಕ್ದ್ಯಾ. ಕಾಯಪ್ಪ ಶಿವನೇ ಅಂದ. ಕಡಿಗೂ ಹೂವಾ ಬಿತ್ತು. ಬಲ್ಗಡೆ. ಎಲ್ಲಾರೂ ಆ ಕಡಿನ ನೋಡಾಕ್ಹತ್ತಿದ್ದ್ರು. ಬಲ್ಕ್ ಬಿತ್ತು ನೀಲವ್ವಕ್ಕ ಡಾಬಾ ಕದ್ದಿಲ್ಲ ಅಂದ ಆತ. ನೀಲವ್ವ ಚಟ್ಟಂತ್ ಮ್ಯಾಲೆದ್ಲು. ತಟಗು ಗಟ್ಯಾಗಿನ ಅಂದ್ಲು. `ಯಾ ಗೆಣ್ಯಾಗ್ ಕೊಟ್ಟಾಳೊ ಯಾ ಮಿಂಡಗಾರ್ಗ ಕೊಟ್ಟಾಳೊ’ ಅನಕೊಂತ ದುಡು ದುಡು ಹೋಗ್ಬಿಟ್ಲು. ಪಾರೋತಿ ನೋಡಿದ್ಲು ಕೇಳಿದ್ಲು, ಸಾಮಾನಾ ಮಾನಾ ಯಾಡ್ಯೂ ಹ್ವಾದ್ವು. ಮೈ ಭಗಾಭಗಾಂತ ಉರಿತು. ಔಡ್‍ಗಚ್ಚಿ ಎದ್ದ್ ನಿಂತು ಸೊಂಟಕ್ಕ್ ಸೆರ್ಗ ಬಿಗದ್ಲು.
ಎಲವೋ ಸೋಮಾ. . . . . ‘ ಲಿಂಗಕ್ಕಂದ್ಲೂ ಪೂಜಾರಪ್ಪಗ್ ಅಂದ್ಲೊ ತಿಳಿಲಿಲ್ಲ ಯಾರ್ಗೂ. ಸ್ವಾಮಪ್ಪ, ಪೂಜಾರಿ ಧಕ್ಕಂತ ತಳ್ಗ ಕುಂತ ತೆಲಿ ತೆಗ್ಗಿಸಿಗೊಂಡು. `ಯಾರವ್ರು ನಿಂಗ್ ದೇವ್ರ್ ಮಾಡಿ ಇಲ್ಲ್ ಕುಂದ್ರಿಸ್ಸಿದವ್ರು. . . . `ಖರೇ ಇದ್ದುದ್ದು ಸುಳ್ಳ್ ಮಾಡವಾ, ಸುಳ್ಳ್ ಇದ್ದದ್ದು ಖರೆ ಮಾಡವಾ ದೇವ್ರಾ ನೀನು. . . .’ ‘ಪರಪ್ಪ ಗಡಬಡಿಸಿ ಕುಂತಲ್ಲಿಂದ ಎದ್ದ ಬಂದವ್ನ ಅಕಿ ತುರುಬ ಹಿಡ್ದಾ ಎಳದಾ. ತುರಬ್ ಬಿಚ್ಚಿ ಬೆನ್ನ ಮ್ಯಾಲೆಲ್ಲ ಮಾಡದಂಗ್ ಕೂದ್ಲಾ. ದ್ರೌಪತಿ ಅಂದ್ರು ಕುಂತವ್ರೆಲ್ಲ.
ಒಂದ್ ಯಾಡ್ ವಾರ್ ಮದಲ ದ್ರೌಪತಿ ನಾಟ್ಕ ಆಗಿತ್ತು ಊರಾಗ. ಎಲ್ಲಾರೂ ನೋಡಿದ್ರು. `ಖಬರಗೇಡಿ ಹೆಂಗ್ಸ್ ನಡಿ ಮನಿಗೆʼ ಹೇಣ್ತೀಗಂದ ಅಕಿ ರಟ್ಟೀ ಹಿಡ್ದಾ ` . . . ನಾಳೀತಂಕಾ ನನ್ನ ಡಾಬ್ ಸಿಗಲಿಲ್ಲಂದ್ರ ನೋಡ್ ನಿಂಗ್, ನಮ್ಮಪ್ಪನ್ನ್ ಕರ್ಸಿ . . . .’ ಅಕಿ ರಟ್ಟಿಗ್ ಕೈಹಾಕಿ ದರ ದರಾ ಎಳ್ಯಾಕ್ಹತ್ತಿದವ . . ಆಕಿ ಬಾಯ್ಮುಚ್ಚಿ ಎಳ್ಕೊಂತ. . . , ಅಕಿಗೇನೂ ಮುಂದ ಮಾತಾಡದಾಗ್ಲಿಲ್ಲ. ಮಾನ್ಗೇಡೀ ನಿನ್ನ ಎಚ್ರದಾಗ ನೀ ಇದ್ದಿಲ್ಲ. ಪದಾ ಹಾಡ್ತಾಳಾ ಮೈ ತೊಕ್ಕೋಳ್ಳಾಗ. ಇನ್ನಮ್ಮಿ ಹಾಡು ನಿನ್ನ್ ಸೊಂಟಾನ ಮುರಿತಿನಿ . . . ಇನ್ನ ಏನೇನ ಅನ್ಕೊಂತ.. ಮನೀಗ್ ಎಳ್ಕೊಂತ ಹ್ವಾದಾ.
ಹೋಗಿ ಮನೀ ಒಳ್ಗ್ ಪಡಸಾಲೀ ಕಟ್ಟಿಗೆ ಕುಕ್ಕ್‍ರಿಸ್ದ. `ನಿಮ್ಮಪ್ಪಂದ್ ಧಿಮಾಕ್ ತೋರಸ್ತಿಯೇನಲೇ ಬೋ.. . . . ‘ ಅನ್ಕೊಂತ್ ಕಪಾಳ್ಗೊಂದ್. . . ಸಾವಂತ್ರವ್ವ ಒಳ್ಗ ಬಂದ್ಲು. `ತಮ್ಮಾ’ ಅಂದ್ಲು. `ಸಿಟ್ಟಿನ್ ಕೈಯಾಗ್ ಬುದ್ದೀ ಕೊಡ್ಬಾಡಪಾ’. ಅವ್ನ್ ಬಾಯ್ತುಂಬಾ. ಹವಳ, ಮುತ್ತು ಹಂಗ, ಉದರಾಕ್ಹತ್ತಿದ್ಬು. ಪಾರೋತಿಗೆ ಎಲ್ಯ್ ಹೋಗಿ ತೆಲಿ ಜಜ್ಜಿಕೊಳ್ಳಿ ಅನ್ಸಾಕ್ಹತ್ತಿತ್ತು. ಸಾವಂತ್ರೆವ್ವ ಚೆಂಜೀತನ ಅಲ್ಲೇ ಕುಂತ್ಲು. ಕೂಸಿನ್ನ, ಅಕಿನ್ ಸೊಸಿ ನಾಗವ್ವ್ ಬಂದು ತಮ್ಮನಿಗೆ ಕರ್ಕೊಂಡ್ಹೋದ್ಲು. ಪಾರೋತಿನ್ನ್ ಹ್ಯಾಂಗ್ ರಮಸಬಕನ್ನದ ತಿಳೀವಲ್ಲದಾಗಿತ್ತು. ಈಗ ಪಾರೋತಿಗೆ ಮುಳುಮುಳು ಅಳದ್ ಬಿಟ್ಟು ಬ್ಯಾರೆ ಏನೂ ತಿಳೀವಲ್ದು. ನೆಲ್ಕ್ ಬಿದ್ದ್ ಕೂದ್ಲಾ ಎತ್ತಿ ಕಟಿಗೊಂಡ್ಲು. ಪರಪ್ಪನ್ ಬಾಯಿ ಬಂದಾಗಿದ್ದಿಲ್ಲ.
ಚೆಂಜೀಕೆ ಮಗನ್ನ್ ತಂಬಂದ್ಲು ನಾಗವ್ವ. ಎಲ್ಲಾರ್ಗೂ ರೊಟ್ಟೀ ಪಲ್ಲೆ ತಂದ್ ಕೊಟ್ಲು, ಪಾರೋತ್ಗೆ ಕೈಕಾಲನ್ ರತಾನ. ಹೋದಂಗಾಗಿತ್ತು. ಅಡ್ಗೀ ಮಾಡದು ಹೋಗ್ಲಿ, ಎಲ್ಯ್ ಹೋಗಿ ಉರ್ಲ್ ಹಾಕ್ಕೊಳ್ಳಿ ಒಂದ ಚಿಂತಿ. ಗಂಡಾ ಹೇಣ್ತಿ ಇಬ್ರುಗೂ ಜಬರ್ ಮಾಡಿ ಉಣಿಸಿದ್ಲು ಸಾವಂತ್ರೆವ್ವಾ. ತನ್ನ್ ಮನೀಗ್ಹೋಗ ಮುಂದ ಅಂದ್ಲು ತಮ್ಮಾ ಅಕಿನ್ ಮ್ಯಾಲೆ ಕೈ ಮಾಡ್ದೆಂದ್ರ ನಿಮ್ಮವ್ವನ ಆಣಿ, ನಿನ್ನ ಮಗನ್ ಮ್ಯಾಲಾಣಿ. ಮಗಾ ಅಂದ್ರ ಅಂವಗ್ ಬಾಳ ಪಿರುತಿ. ಅಟೊತ್ತನ ಬೇದು ಸಾಕಾಗಿತ್ತವ್ಗ. ಯಾಕ್ ಹೆಣ್ಣಾಗಿ ಹುಟ್ಟಿಸ್ದಿ ಶಿವನ ಅಂತ ರಾತ್ರಿ ಎಲ್ಲಾ ಹಲಬಿದ್ಲು ಪಾರೋತಿ.
ಬೆಳಕಾತು. ಏಳಬಕಾತು. ಎದ್ದು ಕಸಾ ಹೊಡ್ದು ಬಾಗ್ಲಿಗೆ ನೀರ್ ಹಾಕಿದ್ಲು. ಪಡಸಾಲ್ಯಾಗ ಕುಂತ್ಗೊಂಡ್ಲು. ಸೂರ್ಯಾ ತನ್ನಟ್ಕ ತಾ ಹೊಂಟಿದ್ದಾ. ಇದರಾಗಿಂದ ಹ್ಯಾಂಗ್ ಪಾರಾಗ್ಲೆಪಾ ಅನ್ನದರಾಗ. ಕೂಸ್ ಎದ್ದ್ ಬಂದು ಅವ್ವನ್ ತೊಡಿಮ್ಯಾಲ ಕುಂತ್ಯು. ಇದು ಇರಲಿಕಂದ್ರ ಕೆರಿನರ ಬಾವಿನರ ನೊಡ್ಕೆಂತಿದ್ಯ್ದಾ ಅನ್ಕೊಂಡ್ಲು. ಅವ್ವನ್ ಮೋತಿ ಮ್ಯಾಲೆ ಕೈಯಾಡಿಸ್ತು. ಅಕಿ ಕಣ್ಣಿರ್ ಒರಿಸ್ತು ಕೂಸು. ನಿನ್ನೀಯಿಂದ ಕಣ್ಣಿರ ನಿಂತಿದ್ದಿಲ್ಲ. ಗಂಡ ಬೈಲ ಕಡಿ ಹೋಗಿದ್ದಾ, ಹಳ್ಳಕ್ ಹೋಗಿ ಮೈತೊಕ್ಕೊಂಡು ಬರದ್ರಾಗ ನಾ ಹೋಗ್ಬಕು ಇಲ್ಲಿಂದ ಅನ್ಕೊಂಡ್ರ ಮಗಾ ಹಿಡ್ಕೊಂಡ್ ಬಿಟ್ಟಿದ್ದಾ.
ಆಟೊತ್ಗೆ ನೀಲವ್ವನ್ ಅವ್ವ ಗಂಗವ್ವಾ ಬಾಗಲದಾಗ್ ಕಾಣಿಸಿದ್ಲು. ಬಾ ಯತ್ತೀ ಅನಾಕ ಪಾರೋತಿ ಬಾಯಿನ ಏಳ್ಳಿಲ್ಲ. ಒಳಗ ಬಂದಕಿನ ಕೂಸಿನ್ ಕೊಳ್ಳಾಗ್ ಡಾಬಾ ಹಾಕಿ ಹೇಳಿದ್ಲು. “ಹುಚಬಾರ್ಗಿ, ಏನರ ಮಾಡ್ಕೊಂತು ತಂಗಿ ತೋಳವಾ ನಿನ್ನ್ ಡಾಬಾನ” ಅಂದಕಿನ ಹೋಗ್ಬಿಟ್ಲು.
ಪಾರೋತಿ ಪಿಳಿ ಪಿಳಿ ಕಣ್ ಬಿಟ್ಲು ತನ್ನ ತಾ ಚೂಟ್ಗೊಂಡ್ಲು. ಕನಸಲ್ಲ ಖರೇ. ಕುಂತಲ್ಲೆ ಕುಂತ್ಲು. ಗಂಡ್ ಬಂದಾ. ಹ್ವಾರೆ ಏನಿಲ್ಲನ್ ಇವತ್ತ್, ಅನ್ಕೊಂತ್ ನೋಡ್ತಾನಾ, ಕೂಸು ತನ್ನ್ ಕೊಳ್ಳನ್ ಡಾಬಾ ತೋರಿಸ್ತು. ಎಲ್ಲಿತ್ತಲೇ ಅಂದ. ಸ್ವಾಮನಾಥ ಲಿಂಗಾ ತಂದ್ ಕೊಟ್ಟಾ ಅಂದ್ಲು. ಕಣ್ಮುಚಿದ್ಲು. ತನ್ನೊಳ್ಗ ಮುಳ್ಗಿ ಬಿಟ್ಲು. ಅವಗ್ ಏನ್ ತಿಳೀಲಿಲ್ಲ. ಏಟೊತ್ತು ಅಕಿನ್ನ ನೊಡ್ಕೊಂತ ನಿಂತ. ಆಮ್ಯಾಕ ಅದನೊಯ್ದು ದೇವ್ರ ಮನ್ಯಾನ್ ಜಗಲೀ ಹತ್ರ್ ಇದ್ದ್ ಗೂಟಕ್ಕ್ ಹಾಕ್ಯ್ದಾ.
ದಾಕ್ಷಾಯಣಿ ಯಡಹಳ್ಳಿ
ಈ ಕಥೆ ಗ್ರಾಮೀಣ ಭಾಷೆ ಹಾಗೂ ಪರಿಸರವನ್ನೊಳಗೊಂಡಿದೆ. ಈ ಕಥೆಯಲ್ಲಿ ಧ್ವನಿಯಾಗುವ ನಾಲ್ಕು ಜನ ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿ ಪಾರೋತಿಯ ಪಾತ್ರದ ಸುತ್ತ ಕಥೆ ಹೆಣೆದುಕೊಂಡಿದೆ. ಮುಖ್ಯಪಾತ್ರ ಪಾರೋತಿಯ ಡಾಬದ ಕಾರಣದಿಂದಾಗಿ ಅವಳು ಅನುಭವಿಸುವ ತಳಮಳ, ದುಃಖ, ಅಸಹಾಯಕತೆ, ನಿರಾಸೆ, ಆತ್ಮಹತ್ಯೆಗೆ ಮನಸು ಮಾಡುವದು ಎಲ್ಲಕ್ಕೂ ಮಿಗಿಲಾಗಿ ಆಕೆಯ ಪ್ರತಿಭಟನೆ, ಆಕ್ರೋಶ, ದಯನೀಯ ಸ್ಥಿತಿ ಇವು ಮನಸ್ಸನ್ನು ಹಿಡಿಯುತ್ತವೆ. ತುಂಬಿದ ಸಭೆಯಲ್ಲಿ ಪಾರೋತಿಯ ಶೀಲವನ್ನು ಹರಾಜು ಹಾಕಿದಂತೆ ಮಾತಾಡಿದ ನೀಲವ್ವ ಪಾರೋತಿಯ ಮಾನಸಿಕ ವಿಪ್ಲವಕ್ಕೆ ಕಾರಣಳಾಗುತ್ತಾಳೆ.
ನೀಲವ್ವನ ಮಾತು ಗಂಡಿನ ಅಸ್ತಿತ್ವವನ್ನು ಕೆಣಕುತ್ತದೆ. ಆದರೆ ಆತ ನೀಲವ್ವನೊಂದಿಗೆ ಸಂಬಂಧವನ್ನು ಇಟ್ಟುಕೊಂಡವನಾದ್ದರಿಂದ ಹೆಂಡತಿಯನ್ನು ಶಿಕ್ಷಿಸುವಲ್ಲಿ ತನ್ನ ದೌರ್ಜನ್ಯವನ್ನು ತೋರಿಸುತ್ತಾನೆ. ಪಾರೋತಿ ದೇವನ ಅಸ್ತಿತ್ವವನ್ನೆ ಪ್ರಶ್ನಿಸುವಷ್ಟು/ನಿರಾಕರಿಸುವಷ್ಟು ಧೈರ್ಯವನ್ನು ತೋರುವ ಹೆಣ್ಣು. ಇದು ಸತ್ಯವನ್ನು ಸಾಬೀತು ಮಾಡಲು ಅಕೆ ಬಳಸಿಕೊಂಡ ಅಸ್ತ್ರ. ತನ್ನ ನಿಯತ್ತನ್ನು ಪ್ರಸ್ತುತಪಡಿಸಲು ಆಕೆಗಿದ್ದುದು ಅದೊಂದೆ ದಾರಿ. ಹಳ್ಳಿಯ ಹೆಣ್ಣು ಮಗಳಾದರೂ ಆಕೆಯ ಪ್ರತಿಭಟನೆ ಮೆಚ್ಚುವಂತಹದು.
ನೀಲವ್ವ ಡಾಬವನ್ನು ತೆಗೆದುಕೊಂಡಿದ್ದರೂ ಅದನ್ನು ಹಿಂತಿರುಗಿಸುವ ಧೈರ್ಯವಿಲ್ಲದವಳು, ಆ ಕೆಲಸವನ್ನು ಆಕೆಯ ತಾಯಿ ಗಂಗವ್ವ ಮಾಡುತ್ತಾಳೆ. ಅದು ಅಕೆಗೆ ಅಷ್ಟು ಮಹತ್ವದ್ದು ಅನಿಸುವುದಿಲ್ಲ. ಸಾವಂತ್ರವ್ವ ಪಾರೋತಿಗೆ ನೈತಿಕ ಬಲವನ್ನು ನೀಡುವಾಕೆ. ಸಹೃಯದಯಿಯಾಗಿ ಆಪತ್ತಿಗೆ ಸಹಾಯಕಳಾಗುತ್ತಾಳೆ. ಪಾರೋತಿಗೆ ಆಕೆಯ ಗಂಡನ ಮತ್ತು ನೀಲವ್ವನ ಸಂಬಂಧದ ವಿಷಯ ಹೇಳದೆ ಪರಪ್ಪನಿಗೆ ಬುದ್ಧಿವಾದ ಹೇಳಿ ಹದಗೆಟ್ಟ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಾಳೆ. ಇದರಲ್ಲಿ ವರ್ತುಳದಲ್ಲಿ ಸಿಲುಕಿಕೊಂಡದ್ದು ಪಾರೋತಿ ಮಾತ್ರ. ಆಕೆಯ ಅಭಿಮಾನಕ್ಕೆ ಪೆಟ್ಟಾದರೂ ಆಕೆಗೆ ಇಲ್ಲಿ ಬದುಕಬೇಕಾಗಿದೆ ಮಗುವಿನ ಮಮತೆ ಅವಳನ್ನು ಹಿಡಿದುಕೊಂಡಿದೆ. ಅಪಮಾನವನ್ನು ಹೊತ್ತುಕೊಂಡು ಆ ಪರಿಸರದಲ್ಲಿ ಆಕೆ ಇರಬೇಕಾದುದು ಒಂದು ಹೆಣ್ಣಿನ ಬದುಕು ಯಾವತ್ತೂ ವರ್ತುಲದಲ್ಲಿ ಸಿಕ್ಕಿಕೊಂಡಂತಿರುತ್ತದೆ ಎನ್ನುವದನ್ನು ಪ್ರಸ್ತುತಪಡಿಸುತ್ತದೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ