ಶಹೀದ್‌ನ ಹುಟ್ಟುಹಬ್ಬಕ್ಕೆ ಮೂರು ದಿನ ಮುಂಚಿತವಾಗಿ ಕಂಚಿನ ಪುತ್ಥಳಿಯನ್ನು ಪಟ್ಟಣದಿಂದ ಇಡೀ ಸಂಪಿಗೆಪುರಕ್ಕೆ ಸಂಪಿಗೆಪುರವೆ ಕಾಣುವಂತೆ ಮೆರವಣಿಗೆಯ ಮೂಲಕ ಟೆಂಪೋದ ಮೇಲಿರಿಸಿ, ಮುಂದೆ ಪುಟ್ಟ ಪುಟ್ಟ ಮಕ್ಕಳು ದಫ್ ಬಡಿಯುತ್ತಾ, ಬೈತ್ ಹಾಡುತ್ತಾ ವಿಜೃಂಭಣೆಯಿಂದ ಗುಡಿಯ ಸಮೀಪ ತರಲಾಯಿತು. ಇತ್ತ ಸೀನಪ್ಪನ ತಮ್ಮಂದಿರು ತಮ್ಮ ಯೋಜನೆಯಂತೆ ತಾವು ಸಹ ಒಂದು ಪುತ್ಥಳಿಯನ್ನು ತಂದಿದ್ದರು. ಮೈಕ್‌ಸೆಟ್‌ನಲ್ಲಿ ಜೋರಾಗಿ ಗಣಪತಿ ಸ್ತುತಿಯನ್ನು ಹಾಕಿ, ಮುಂದೆ ಪುತ್ಥಳಿಗೆ ಹೂವಿನ ಅಭಿಷೇಕವನ್ನು, ಮಹಿಳೆಯರಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಿಸಲಾಯಿತು. ಆ ಪುತ್ಥಳಿ ಸಾಮಾನ್ಯ ಪುತ್ಥಳಿಯಾಗಿರಲಿಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮುಸ್ತಾಫ ಕೆ.ಎಚ್. ಬರೆದ ಕತೆ “ಕಂಚಿನಪುತ್ಥಳಿ”

ಸಂಪಿಗೆಪುರದಲ್ಲಿ ಕೆಲವು ದಿನಗಳಿಂದ ಪೊಲೀಸ್ ಮೀಸಲುಪಡೆಗಳ ಜೊತೆಗೆ ಸುದ್ದಿಯನ್ನು ಬ್ರೇಕ್ ಮಾಡುವ ಬ್ರೇಕಿಂಗ್ ವೀರರು ಜಾಂಡಾ ಹೂಡಿದ್ದರು. ದೊಡ್ಡದೊಡ್ಡ ಕ್ಯಾಮರಾ, ಸ್ಯಾಟಲೈಟ್ ಒಬಿ ವ್ಯಾನ್‌ಗಳು ಗ್ರಾಮಸ್ಥರನ್ನು ಅಚ್ಚರಿಗೊಳಿಸಿದರೆ, ಸಾರ್ವಜನಿಕ ಶೌಚಾಲಯವಿಲ್ಲದ, ಲಾಡ್ಜ್, ಹೋಟೆಲ್‌ಗಳು ಕಾಣಸಿಗದ ಈ ಪುಟ್ಟ ಊರು ಬ್ರೇಕಿಂಗ್ ವೀರರನ್ನು ಮತ್ತಷ್ಟು ಬ್ರೇಕ್ ಮಾಡಿ ಹೈರಾಣಾಗಿಸಿತ್ತು. ಪೋಲಿಸರಂತು ಆದಂ ಕುಂಞಯವರ ಶಾಮಿಯಾನ ಅಂಗಡಿಯಿಂದ ದೊಡ್ಡ ಹಂಡೆಯನ್ನು, ಪಕ್ಕದಲ್ಲಿರುವ ಕಾಸೀಂ ಬ್ಯಾರಿಯ ಫಾತಿಮಾ ಸ್ಟೋರ್‌ನಿಂದ ಉಪ್ಪು ಹುಳಿ ಮೆಣಸಿನಿಂದ ಅಕ್ಕಿ ಸಕ್ಕರೆಯವರೆಗೂ ಎಲ್ಲವನ್ನೂ ಕಡವಾಗಿ ತಂದು ಪಾಕಶಾಲೆಯ ಪ್ರಯೋಗವನ್ನು ರಸ್ತೆಯ ಪಕ್ಕದಲ್ಲೆ ಮಾಡಿದ್ದರು. ಕರ್‌ಫ್ಯೂ ಜಾರಿಯಲ್ಲಿರೋದ್ರಿಂದ ಸಂಪಿಗೆ ಪುರದ ಶನಿವಾರದ ಸಂತೆಗೆ ಬರುತ್ತಿದ್ದ ಇಗ್ಲೋಡ್ಲು, ಜಂಬೂರು, ಹಟ್ಟಿಹೊಳೆ, ಕಾಂಡನಕೊಲ್ಲಿಯ ಜನ ನಾಪತ್ತೆಯಾಗಿದ್ರು. ಸತತವಾಗಿ ಸಂಪಿಗೆಪುರದ ಕುರಿತು ರಾಜ್ಯವ್ಯಾಪಿ ಸುದ್ದಿವಾಹಿನಿಗಳು ಊಹಾಪೋಹಗಳ ಜೊತೆಗೆ ಬ್ರೇಕಿಂಗ್ ನ್ಯೂಸ್‌ಗಳನ್ನು ಪ್ರಸಾರ ಮಾಡಿ ಮಾಡಿ ಕರ್ನಾಟಕದ ಭೂಪಟದಲ್ಲೆ ಹುಡುಕಿದರು ಸಿಗಲಾರದ ಸಾಸುವೆ ಕಾಳಿನಷ್ಟಿರುವ ಪುಟ್ಟ ಗ್ರಾಮವನ್ನು ಫೇಮಸ್ ಮಾಡಿದ್ರು.

*****

ಮೂರು ದಿನಗಳ ಹಿಂದಿನ ಕಥೆ, ಸಂಪಿಗೆಪುರದ ಮಂದಣ್ಣನ ಸೇಂದಿ ಅಂಗಡಿಯಲ್ಲಿ ಕಂಠಪೂರ್ತಿ ಕುಡಿದು ಐವತ್ತುರೂಪಾಯಿ ಸಾಲಕ್ಕಾಗಿ ಕುಚುಕುಗಳಾದ ಉಸ್ಮಾನ್ ಹಾಗೂ ಬೋಪಣ್ಣ ನಾಯಿಗಳಂತೆ ಕಿತ್ತಾಡ್ಕೊಳ್ಲಿಕೆ ಶುರುಮಾಡ್ದಾಗ್ಲೆ ಮಂದಣ್ಣ ಸೇಂದಿ ಅಂಗಡಿಯ ಮುಂದಿನಿಂದ ಅವರನ್ನು ಉಪಾಯವಾಗಿ ಸಾಗಹಾಕಿದ್ದ. ಮಂದಣ್ಣ ಮಹಾನ್ ಕಿಲಾಡಿ; ಅಬಕಾರಿ ಇಲಾಖೆಯಿಂದ ಸೇಂದಿ ಅಂಗಡಿ ನೆಡೆಸಲು ಲೈಸನ್ಸ್ ಪಡೆದು ಸೇಂದಿ ಜೊತೆ ಕಳ್ಳಬಟ್ಟಿಯನ್ನು ವ್ಯಾಪಾರಮಾಡ್ತಾ ಇದ್ದ. ಕೊಳೆತ ಸಪೋಟ, ಬ್ಯಾಟರಿ ಶೆಲ್, ರುಚಿಗೆ ಸ್ವಲ್ಪ ಕೋಳಿ ಹಿಕ್ಕೆ, ಪರಿಮಳಕ್ಕಾಗಿ ಒಂದಿಷ್ಟು ಭತ್ತಹಾಕಿ ಬಟ್ಟಿ ಇಳಿಸುವ ಕಲೆ ಮಂದಣ್ಣನಿಗೆ ವಂಶಪಾರಂಪರ್ಯವಾಗಿ ಬಂದದ್ದು. ಸರಕಾರ ಪ್ಯಾಕೇಟ್ ಸಾರಾಯಿ ತಂದಾಗ ಮಂದಣ್ಣ ತನ್ನ ಕಸಬೂ ಬಿಡುವ ಸ್ಥಿತಿಗೆ ಬಂದಿದ್ದ. ಅದೇ ಸರಕಾರ ಪ್ಯಾಕೇಟ್ ನಿಷೇಧ ಮಾಡ್ದಾಗ ಖುಷಿಯಿಂದ ಸೇಂದಿ ಅಂಗಡಿಗೆ ಅನುಮತಿ ಪಡೆದು ಅಲ್ಲಿ ತನ್ನ ಕಳ್ಳಭಟ್ಟಿ ದಂಧೆ ಶುರುಮಾಡಿಕೊಂಡು; ಪರಿಚಿತರಿಗೆ ಮಾತ್ರ ಹೈ ಪವರ್ ಕಳ್ಳಭಟ್ಟಿ ಕುಡಿಸುವ ಸೇವಾಕಾರ್ಯದಲ್ಲಿ ನಿರತನಾಗಿದ್ದ.

“ಲೋ.. ಉಸ್ಮಾನ್ ಮೊನ್ನೆ ನೀನು ತಗೊಂಡ ಐವತ್ತ್ರೂಪಾಯಿ ಕಡವನ್ನು ಮರ್ಯಾದೆಯಿಂದ ಕೊಟ್ರೆ ಸರಿ, ಇಲ್ಲಾಂದ್ರೆ ಹುಟ್ಲಿಲ್ಲಾಂತನ್ನಿಸಿಬಿಡ್ತೇನೆ” ಎಂದು ಬೋಪಣ್ಣ ಏರುಧ್ವನಿಯಲ್ಲಿ ಕೂಗಿಕೊಂಡ. “ಹೋಗೊ ಸೂಳೆಮಗ್ನೆ.. ಐವತ್ತು ಇಲ್ಲ ನೂರು ಇಲ್ಲ; ನಿಮ್ಮಪ್ಪ ಏನ್ ಕೊಟ್ಟಿಟ್ಟಿದ್ದಾನ ಐವತ್ತ್ ರೂಪಾಯನ್ನ? ಅದು ಅಲ್ದೆ ಸಾಲಕೊಟ್ಟಿದ್ದಕ್ಕೆ ಏನಿದೆ ಸಾಕ್ಷಿ” ಎಂದು ಉಸ್ಮಾನ್ ಏಕ್‌ದಂ ಬೋಪಣ್ಣನನ್ನು ದಬಾಯಿಸಿದ.

ಕುಡುಕ ಮಹಾಶಯರ ಪ್ರಹಸನವನ್ನು ಅಕ್ಕಪಕ್ಕದ ಅಂಗಡಿಯವರು, ಚಿಲ್ಲರೆ ವ್ಯಾಪಾರಸ್ಥರು, ಮಸೀದಿಗೆ ತೆರಳುವ ಮದ್ರಸಾ ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ಉಸ್ಮಾನ್ ಬೋಪಣ್ಣ ಬಳಸುತ್ತಿದ್ದ ಸೊಂಟದ ಕೆಳಗಿನ ಪೆದಂಬು ಬೈಗುಳಗಳು ಊರಿನ ಖ್ಯಾತವೆತ್ತ ಸಂಪಿಗೆಪುರದ ನಿರುದ್ಯೋಗಿ ಯುವಕರ ಸಂಘಕ್ಕೆ ಅತೀವ ಸಂತೋಷದ ಜೊತೆಗೆ ಖುಷಿಯ ರಸದೌತಣವನ್ನು ಉಣಬಡಿಸಿದ್ದು ಸುಳ್ಳಲ್ಲ. ಸಮೀರ, ಶಿವರಾಮ, ವಿನೋದ, ಜೋಸೆಫ, ಅಬೂಬಕ್ಕರ್ ಈ ಸಂಘದ ಸದಸ್ಯರೂ ಮತ್ತು ಅಧ್ಯಕ್ಷರು. ಒಂದೇ ಶಾಲೆಯಲ್ಲಿ ಒಂದರಿಂದ ಹತ್ತನೆಯ ತರಗತಿವರೆಗೆ ಓದಿ ಗಣಿತದಲ್ಲೂ, ಇಂಗ್ಲಿಶ್‌ನಲ್ಲೂ ಡುಮ್ಕಿ ಹೊಡೆದು ಯಾವ ಕೆಲಸಕ್ಕೂ ಹೋಗದೆ ಟೈಲರ್ ಸಿದ್ದೀಕ್ ಇಚ್ಚನ ಅಂಗಡಿಯಲ್ಲಿ ಸದಾ ಹರಟೆ ಹೊಡೆಯುತ್ತಾ, ಕಬಡ್ಡಿ ಆಡುತ್ತಾ, ಹೊಳೆಯಲ್ಲಿ ಈಜುತ್ತಾ, ಕಾಡು ಅಲೆಯುತ್ತಾ, ಕಂಡಕಂಡ ಹುಡುಗಿಯರನ್ನು ಚುಡಾಯಿಸುತ್ತಾ ಊರಿನವರ ಖ್ಯಾತಿಗೂ, ಮನೆಯವರ ಪೊರಕೆ, ಬೈಗುಳ, ಸೌಟಿನ ಪ್ರೀತಿಗೂ ಪಾತ್ರರಾಗಿದ್ದರು.

ಇತ್ತ ತೂರಾಡುತ್ತಾ ಒಬ್ಬರನ್ನೊಬ್ಬರು ತಳ್ಳುತ್ತಾ, ಕಾಸಿಂ ಬ್ಯಾರಿಯ ಅಂಗಡಿಯ ಮುಂದೆ ಬೈಗುಳದಲ್ಲೆ ತುರಿಸಿಕೊಳ್ಳುತ್ತಿದ್ದ ಉಸ್ಮಾನ್ ಮತ್ತು ಬೋಪಣ್ಣರ ಕ್ಯಾತೆ ತಳ್ಳಾಟ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬಂತು. ಬೋಪಣ್ಣ ಕೋಪದಲ್ಲಿ ಬಡಬಡಿಸುತ್ತಾ‘ನಿನ್ನವ್ವನ…’ ಎನ್ನುತ್ತಲೇ ಉಸ್ಮಾನ್‌ನ ಕಪಾಳಕ್ಕೆ ಬಾರಿಸಿದ. ಏಟಿನ ರಬಸಕ್ಕೆ ಕಳ್ಳಿನ ಅಮಲಿನಲ್ಲಿದ್ದ ಉಸ್ಮಾನ್ ಪಕ್ಕದಲ್ಲಿದ್ದ ರಾಘವಣ್ಣನ ಮುಳಿಹುಲ್ಲಿನ ಹೊಟೇಲಿನಿಂದ ಹರಿದ ಕೊಚ್ಚೆ ನೀರಿಗೆ ಬಿದ್ದೇಬಿಟ್ಟ.

ಉಸ್ಮಾನ್ ಬಿದ್ದದ್ದೇ ತಡ ಆಟೋಚಾಲಕ ರಹೀಂ ತನ್ನ ಧರ್ಮಿಯನಾದ ಉಸ್ಮಾನ್‌ನ ಸ್ಥಿತಿಕಂಡು ಹೌಹಾರುತ್ತಾ, “ಹರಾಮಿ ಸೂವ್ವರ್. ಕಳ್ಳು ಕುಡಿಬೇಡ ಅಂದ್ರೆ ಮೂತ್ರ ಕುಡಿಯೊತರ ಅದನ್ನೆ ಕುಡಿದು ಮುಸಲ್ಮಾನರಿಗೆ ಕೆಟ್ಟ ಹೆಸರು ತರ್ತೀಯ. ಇಸ್ಲಾಂ ಕಳ್ಳನ್ನು ಹರಾಮ್ ಅಂತ ಹೇಳಿದೆ. ನಿಮ್ಮಂತಹ ಧರ್ಮಭ್ರಷ್ಟರಿಂದ ಇಡೀ ಜಮಾಹತ್ ತಲೆತಗ್ಗಿಸುವಂತಾಯಿತು” ಎಂದು ಉಸ್ಮಾನ್‌ನನ್ನು ಕೊಚ್ಚೆ ನೀರಿನಿಂದ ಮೇಲೆತ್ತಿದ.

ಮೈ ತುಂಬಾ ಕೆಸರು ಮೆತ್ತಿಕೊಂಡ ಉಸ್ಮಾನ್‌ಗೆ ಎಲ್ಲಿತ್ತೋ ಕೋಪ, ಎದ್ದವನೇ ಪಕ್ಕದಲ್ಲಿ ತೂರಾಡುತ್ತಾ ನಿಂತಿದ್ದ ಬೋಪಣ್ಣನೆಡೆಗೆ ಕೋಪದಲಿ ಎರಗಿ ಮುಖಾಮೂತಿ ನೋಡದೆ ಬಡಿಯಲಾರಂಭಿಸಿದ. ನೆಲದ ಮೇಲೆ ಬಿದ್ದಿದ್ದ ಬೋಪಣ್ಣನ ತೊಡೆಯಸಂಧಿಯ ಮೇಲೆ ಕಾಲಿಟ್ಟು ಬೀಡಿಸೇದಿ ತುಂಡಿನ ಕಡೆಯ ಬೆಂಕಿಯನ್ನು ನಂದಿಸುವಂತೆ ಹೊಸಕಿ ಹಾಕಿದ. “ಯವ್ವಯ್ಯೊ ನಾ ಸತ್ತೇ’‘ಯವ್ವೊಯವ್ವೊ..” ಎಂದು ಅರಚುತ್ತಾ ವಿಲವಿಲ ಒದ್ದಾಡಿದ ಬೋಪಣ್ಣನ ಸ್ಥಿತಿ ಕಂಡು ರಹೀಂ ಭಯಭೀತನಾಗಿ ಕೆಸರಿನಲ್ಲಿ ಮುಳುಗಿ ಅಲ್ಲಲ್ಲಿ ಗಾಯಗಳಾಗಿ ತರಚಲ್ಪಟ್ಟಿದ್ದ ಉಸ್ಮಾನ್‌ನನ್ನು, ವಿಲವಿಲ ಒದ್ದಾಡುತ್ತಿದ್ದ ಬೋಪಣ್ಣನನ್ನು ಆಟೋದಲ್ಲಿ ಕುಳ್ಳಿರಿಸಿ ಪಕ್ಕದ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದ.

*****

ಬೋಪಣ್ಣ ಮತ್ತು ಉಸ್ಮಾನ್‌ನನ್ನು ಆಸ್ಪತ್ರಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಂಜೆ ಐದು ಗಂಟೆಗೆ ಬೋಪಣ್ಣನನ್ನು ಆತನ ಮನೆಗೆ ರಹೀಂ ಬಿಟ್ಟುಬಂದಿದ್ದ, ರಾತ್ರಿ ಏಳು ಗಂಟೆಯಾಗುತಿದ್ದಂತೆ ಬೋಪಣ್ಣ ಸಾವನ್ನಪ್ಪಿದ್ದಾನೆಂಬ ಸುದ್ದಿ ಇಡೀ ಸಂಪಿಗೆಪುರವನ್ನು ಬೆಂಕಿಯ ಕೆನ್ನಾಲಿಗೆಗೆ ದೂಡಿತು. ಹಕೀಮ್‌ನ ಮನೆಗೆ ಬೆಂಕಿ ಹಚ್ಚಲಾಯಿತು, ಕಾಸಿಂಬ್ಯಾರಿ, ಕೈಸರ್‌ಖಾನರ ಅಂಗಡಿಗಳ ವಸ್ತುಗಳನ್ನು ದೋಚಲಾಯಿತು. ಮಹಮ್ಮದ್ ಆಲಿಯ ಅಟೋರಿಕ್ಷಕ್ಕೆ ಬೆಂಕಿಹಚ್ಚುವ ಮೂಲಕ ಬೋಪಣ್ಣನ ಸಾವಿಗೆ ಪ್ರತೀಕಾರದ ಜ್ವಾಲೆಯನ್ನು ಮೊಳಗಿಸಲಾಯಿತು. ರಹೀಂ ಮತ್ತು ಉಸ್ಮಾನರ ಮನೆಯ ಮೇಲೆ ಕಲ್ಲುತೂರಾಟ ನಡೆಸಲಾಯಿತು. ಆರೋಪಿಗಳಾದ ಉಸ್ಮಾನ್, ರಹೀಂನನ್ನು ಬಂಧಿಸುವಂತೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಮುಂದೆ ಬೃಹತ್ ಪ್ರಮಾಣದ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು.

“ಬಲವಾಗಿ ಮರ್ಮಾಂಗಕ್ಕೆ ಹೊಡೆದ ಕಾರಣ ಮರಣ ಸಂಭವಿಸಿದೆ. ಮುಸಲ್ಮಾನರಿಬ್ಬರು ಸಂಚು ರೂಪಿಸಿ ತನ್ನ ಗಂಡನನ್ನು ಕೊಂದಿದ್ದು” ಎಂದು ಬೋಪಣ್ಣನ ಮಡದಿ ಚೋಂದಮ್ಮ ಪೊಲೀಸರಿಗೆ ದೂರನ್ನಿತ್ತಳು. ತಲೆಮರೆಸಿಕೊಂಡಿದ್ದ ಉಸ್ಮಾನ್ ಹಾಗೂ ಸ್ಥಳದಲ್ಲಿದ್ದ ರಹೀಂನನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳಬೇಕಾದರೆ ಎರಡುದಿನಗಳ ಬೃಹತ್ ಕಾರ್ಯಾಚರಣೆಯೇ ನಡೆಸಬೇಕಾಯಿತು.

“ಯಾ ರಬ್ಬೆ” ನನ್ನ ಮಗನನ್ನು ಪೊಲೀಸರು ಎಳೆದುಕೊಂಡು ಹೋದ್ರಲ್ಲ. ಅಲ್ಲಾಹುವೇ ಇನ್ಯಾರು ಗತಿ ನನಗೆ. ಅವನ ಅಪ್ಪ ಆಸ್ತಮಾ ಪೀಡಿತರಾಗಿ ಹಾಸಿಗೆಯಲ್ಲಿ ಮಲಗಿದ್ದಾರೆ, ನಾಲ್ಕುಮಂದಿ ತಂಗಿಯರನ್ನು ವಿವಾಹ ಮಾಡಿಸಬೇಕಾಗಿದೆ, ಒಂದು ಹೊತ್ತಿನ ಊಟಕ್ಕೆ ಮೂರುಚಕ್ರದ ಗಾಡಿಯನ್ನು ಓಡಿಸಿ ಬದುಕನ್ನು ಕಟ್ಟಿಕೊಂಡಿದ್ದ ನನ್ನ ಮಗ ರಹೀಂನನ್ನು ಇಲ್ಲಸಲ್ಲದ ಆರೋಪ ಹೊರೆಸಿ ಎಳೆದುಕೊಂಡು ಹೋದ್ರಲ್ಲ… ನಾನೇನ್ ಮಾಡ್ಲಿ, ಯಾರಿದ್ದಾರೆ ನನಗೆ, ದಾರಿಕಾಣ್ತಾ ಇಲ್ಲ” ಎಂದು ಮುಗಿಲುಮುಟ್ಟುವಂತೆ ರಹೀಂನ ತಾಯಿ ಅಮೀನುಮ್ಮ ರೋಧಿಸಿದಳು.

ಕುಡಿದ ಅಮಲಿನಲ್ಲಿ ಕುಡುಕರಿಬ್ಬರು ಐವತ್ತು ರೂಪಾಯಿ ಸಾಲದಬಾಬ್ತಿಗಾಗಿ ಕಿತ್ತಾಡಿ ಸತ್ತದ್ದು ಎರಡು ಸಮುದಾಯಗಳ ನಡುವೆ ಕೋಮುಸಂಘರ್ಷಕ್ಕೆ ಕಾರಣವಾಯಿತು. ಇಡೀ ಸಂಪಿಗೆಪುರ ಹೊತ್ತಿ ಉರಿಯಲಾರಂಭಿಸಿತು. ಉರಿಯುವ ಬೆಂಕಿಗೆ ತುಪ್ಪಸುರಿಯುವ ಕೆಲಸವನ್ನು ಧಾರ್ಮಿಕ ನೇತಾರರು, ರಾಜಕೀಯ ಧುರೀಣರು ಮಾಡಿದರು. ಇನ್ನೇನು ಕೆಲವೇ ತಿಂಗಳಲ್ಲಿ ಜರುಗಲಿರುವ ಗ್ರಾಮಪಂಚಾಯಿತಿ ಚುನಾವಣೆಗೆ ರಾಜಕೀಯ ಪಕ್ಷಗಳು ಕೋಮುಗಲಭೆಯನ್ನೆ ದಾಳವಾಗಿ ಬಳಸುವ ಅವಕಾಶವೊಂದು ಸೃಷ್ಟಿಯಾಗಿದ್ದು ಸುಳ್ಳಲ್ಲ.

ಅಮೀನುಮ್ಮ ಮಗ ರಹೀಂನ ಜಾಮೀನಿಗಾಗಿ ಕಂಡಕಂಡವರ ಕಾಲಿಗೆ ಎರಗಿ ಅವರಿಂದ ಇವರಿಂದ ಅಲ್ಪಸಲ್ಪ ಸಹಾಯ ಸಹಕಾರವನ್ನು ಗಳಿಸಿಕೊಂಡಳು. ಕೇಸ್ ಖುಲಾಸೆಯಾಗುವ ಮೂಲಕ ರಹೀಂ ಹೊರಬಂದ. ಮೂರು ತಿಂಗಳ ಕಾರಾಗೃಹವಾಸದ ನರಕಯಾತನೆಯೊಂದಿಗೆ ಹಿಂದಿರುಗಿದ್ದ ರಹೀಂಗೆ ಬರಸಿಡಿಲಿನಂತೆ ಸುದ್ದಿಯೊಂದು ಬಂದೆರಗಿತ್ತು, ಹಲವು ತಿಂಗಳು ಹಾಸಿಗೆಯಲ್ಲಿ ಅಸ್ತಮಾದಿಂದ ಸಾವುಬದುಕಿನ ನಡುವೆ ಹೋರಾಡುತಿದ್ದ ರಹೀಂನ ತಂದೆ ಮರಣಹೊಂದಿ ಅದಾಗಲೇ ಮೂರುವಾರಗಳು ಕಳೆದಿದ್ದವು. ಏನೂ ಅರಿಯದ ಅವನಮ್ಮ ಜೈಲಿನಲ್ಲಿದ್ದ ರಹೀಮನನ್ನು ಕರೆಸುವ ಪ್ರಯತ್ನವನ್ನೇ ಮಾಡಿರಲಿಲ್ಲ.

*****

“ಉಮ್ಮ…. ಬಾಪನ ಮೈಯತ್ (ದೇಹ-ಶವ) ನೋಡುವ ಭಾಗ್ಯವು ನನಗೆ ಸಿಗಲಿಲ್ಲ, ಎಂಥಹ ಕೆಟ್ಟ ಮಗ ನಾನು. ಒಂದು ಮುಷ್ಟಿ ಮಣ್ಣನ್ನು ಬಾಪನ ಕಬರಿಗೆ ಹಾಕಲು ಸಾಧ್ಯವಾಗಲಿಲ್ಲ. ಇದಕ್ಕೆಲ್ಲ ಕಾರಣ ಆ ಉಸ್ಮಾನ್. ಕುಡುಕ ಬೋಪಣ್ಣನ ಜೊತೆ ಕಿತ್ತಾಡುವಾಗ ನನ್ನ ಕರ್ಮಕ್ಕೆ ನಮ್ಮವನೆಂಬ ಕಾರಣಕ್ಕೆ ಸಹಾಯ ಮಾಡಲು ಹೋಗಿ ಈ ಎಲ್ಲಾ ಪಜೀತಿಗೆ ಸಿಕ್ಕಿಕೊಂಡೆ. ಜೈಲಿನ ವಾಸ ನರಕ ಯಾತನೆಯೇ ಸರಿ. ಉಮ್ಮ… ಬಾಪ ಎಷ್ಟು ನೊಂದಿರಬಹುದು, ಪಾಪ” ಎಂದು ರಹೀಂ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.

“ಇರಲಿ ಮೊನೆ (ಮಗನೆ) ಕರುಣಾಮಯನಾದ ಅಲ್ಲಾಹುವು ಎಲ್ಲರಿಗೂ ಕಷ್ಟಕೊಟ್ಟು ಪರೀಕ್ಷಿಸುತ್ತಾನೆ. ಅದರಲ್ಲಿ ಸತ್ಯವಿಶ್ವಾಸಿಗಳಾಗಿ ಜಯಗಳಿಸಬೇಕಷ್ಟೆ. ಮುಹ್ಮಿನ್‌ಗಳಿಗೆ ಈ ಭೂಮಿ ನರಕವಾಗಿಯು, ಪರಲೋಕ ಸ್ವರ್ಗವಾಗಿಯು ನೀಡಲ್ಪಡುತ್ತದೆ ಎಂಬ ಮಾತನ್ನು ಕುರ್‌ಆನ್ ಸಾಕ್ಷೀಕರಿಸುತ್ತದೆ ಅಲ್ವಾ” ಎಂದು ಅಮೀನುಮ್ಮ ಮಗನನ್ನು ಸಮಾಧಾನ ಪಡಿಸಿದಳು.

ರಹೀಂ ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಲೆ ಉಮ್ಮನ ಮಡಿಲನ್ನು ಒರಗಿದ. “ಎದ್ದೇಳು ಮೊನೆ ಮಗ್ಹ್ರೀಬ್ ನಮಾಝಿ಼ನ ಸಮಯ, ಅಝಾ಼ನ್ ಮೊಳಗುತ್ತಿದೆ. ಬಾಪನ ಹೆಸರಿನಲ್ಲಿ ಯಾಸೀನ್ ಓದಿ, ಪ್ರಾರ್ಥಿಸು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಾಮಯನು ಕರುಣಿಸಲಿ” ಎಂದು ನುಡಿದು ಕಣ್ಣಂಚಲಿ ಜಾರಿದ ಹನಿಗಳನ್ನು ಹಾಗೇ ಅಮೀನುಮ್ಮ ತನ್ನ ಬಿಳಿಯ ಕಮೀಸಿನ ತುದಿಯಿಂದ ಒರೆಸಿದರು.

ರಹೀಂ ಯಾಸೀನ್ ಸೂರತ್ ಓದಲು ಪ್ರಾರಂಭಿಸಿದ. ಸಂಜೆಯ ಕತ್ತಲಮೌನ ಮಾತುಗಳಲ್ಲಿನ ಲಯಬದ್ಧತೆ ಇಡೀ ಕೋಣೆಯನ್ನು ವ್ಯಾಪಿಸಿಕೊಂಡಿತು. ಬಾಪನ ಮೇಲಿನ ಪ್ರೀತಿ ರಹೀಂನ ಸ್ಮೃತಿ ಪಟಲದಿಂದ ಒಂದೊಂದಾಗಿ ಹೊರಹೊಮ್ಮುವ ಮೂಲಕ ದುಃಖ ಮತ್ತೆ ಮತ್ತೆ ಉಮ್ಮಳಿಸಿಬಂತು. ಕುರ್‌ಆನ್‌ನ ದೈವಸ್ತುತಿಯೊಂದಿಗೆ ಅಳುವ ಧ್ವನಿ ಸಣ್ಣಗೆ ಉರಿಯುತ್ತಿದ್ದ ದೀಪದ ಬೆಳಕು ಅಮೀನುಮ್ಮನ ಮನಸ್ಸನ್ನು ಕಲಕುತ್ತಿತ್ತು.

*****

ಸಂಪಿಗೆಪುರ ಮತ್ತೆ ಸಹಜ ಸ್ಥಿತಿಗೆ ಬರಲು ಸುಮಾರು ತಿಂಗಳುಗಳೆ ಬೇಕಾಯಿತು. ಎಲ್ಲರು ತಮ್ಮ ನಿಜವಾದ ವ್ಯಕ್ತಿತ್ವಕ್ಕೆ ತಮ್ಮ ತಮ್ಮ ಧರ್ಮದ ಮುಖವಾಡವನ್ನು ಧರಿಸಿಕೊಂಡಿದ್ದರು. ಖಾದರ್ ಬ್ಯಾರಿಯ ಅಂಗಡಿಯಿಂದ ಸೀನಣ್ಣ ದಿನಸಿವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಿದ. ಅಂತಪ್ಪನ ತರಕಾರಿ ಅಂಗಡಿಯ ಕಡೆ ಒಬ್ಬನೇ ಒಬ್ಬ ಟೋಪಿದಾರಿ ಮುಸಲ್ಮಾನನು ಸುಳಿಯುತ್ತಿರಲಿಲ್ಲ.

ರಹೀಂನನ್ನು ಕಂಡು ಕೆಲವರು ಮುಖ ತಿರುಗಿಸಿಕೊಂಡರೆ, ಮುಸ್ಲಿಂಮರಂತು ಅತ್ಯಂತ ಆತ್ಮೀಯತೆಯಿಂದ ಬಿಗಿದಪ್ಪಿದರು. ತಮ್ಮ ಧರ್ಮದ ಮೂಲ ತತ್ವವನ್ನು ಉಪದೇಶಿಸಿದ ಕಾರಣಕ್ಕಾಗಿ ಯಾವ ತಪ್ಪು ಮಾಡದೇ ಜೈಲು ಸೇರಿದ್ದ ರಹೀಂನನ್ನು ತಮ್ಮ ಧೀರೋದ್ಧಾರ ನಾಯಕನನ್ನಾಗಿ ಮಾಡಿಕೊಂಡರು.
“ರಹೀಂ ಮುಂಬರುವ ಗ್ರಾಮಪಂಚಾಯಿತಿ ಎಲೆಕ್ಸನ್‌ನಲ್ಲಿ ಮುಸ್ಲಿಂ ಐಕ್ಯರಂಗ ಪಕ್ಷದಿಂದ ನಿನಗೆ ಟಿಕೇಟ್ ಕೊಡಬೇಕೆಂದು ನಮ್ಮ ನಾಯಕರಾದ ಇಬ್ರಾಹಿಂ ಹಾಜಿ ನಿರ್ಧರಿಸಿದ್ದಾರೆ, ನೀನು ಏನ್ ಹೇಳ್ತೀಯ ಅಂತ ಕೇಳಿಕೊಂಡು ಬರಲು ಕಳುಹಿಸಿದ್ದಾರೆ” ಎಂದು ಹಸನ್‌ಬ್ಯಾರಿ ನುಡಿದ.

“ನೋಡಿ ಹಸನಣ್ಣ ನನಗೆ ರಾಜಕೀಯ ಗೀಜಕೀಯ ಒಗ್ಗಲ್ಲ. ಈಗಾಗ್ಲೆ ಜೈಲು ಸೇರಿ ಪಡಬಾರದ ಪಾಡು ಪಟ್ಟಾಗಿದೆ. ಚುನಾವಣೆಗೆ ಖರ್ಚುಮಾಡುವಷ್ಟು ಹಣವು ನನ್ನ ಬಳಿ ಇಲ್ಲ. ಕೇಸ್ ಅಂತು ಖುಲಾಸೆಯಾಗಿದೆ ನಿಜ. ಅದರೆ ಪಾಪ ಉಮ್ಮ ನನ್ನ ಜೈಲಿನಿಂದ ಬಿಡಿಸಲು ಹಲವರಿಂದ ಕೈಗಡವನ್ನು ಪಡೆದುಕೊಂಡಿದ್ದಾಳೆ. ಇಂತಹ ಸ್ಥಿತಿಯಲ್ಲಿ ಬರಿಗೈಯ ಬೈರಾಗಿಯಂತೆ, ಬೆತ್ತಲೆ ಫಕೀರನಂತೆ ಎಲ್ಲವನ್ನು ಕಳೆದುಕೊಂಡ ನನಗ್ಯಾಕೆ ಈ ಮನೆಹಾಳು ರಾಜಕೀಯ.”

“ಹಾಗಲ್ಲ ರಹೀಂ ನಿನಗೆ ಇಸ್ಲಾಂ ಧರ್ಮದ ಬಗ್ಗೆ ಅಭಿಮಾನವಿದೆ, ನಮ್ಮವರ ಬಗ್ಗೆ ಕನಿಕರವಿದೆ, ಪ್ರೀತಿ ಇದೆ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಇಸ್ಲಾಮಿನ ತತ್ವವಾದ ಮದ್ಯಪಾನ ಮಾಡಬಾರದು ಎಂಬ ವಿಚಾರವನ್ನು ಹೇಳಿ ಉಸ್ಮಾನ್, ಬೋಪಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೈಲುಪಾಲಾಗಿದ್ದೆ. ನೀನು ಜೈಲು ಸೇರಲು ಆ ಕೋಮಿನ ಜನರೇ ಕಾರಣ. ಇಲ್ಲಸಲ್ಲದ ದೂರನ್ನು ದಾಖಲಿಸಿ ಪೋಲಿಸರು ಎಳೆದುಕೊಂಡು ಹೋಗುವಂತೆ ಮಾಡಿ ನಿನ್ನ ಬಾಪ ಕೊರಗಿಕೊರಗಿ ಸಾಯುವಂತೆ ಮಾಡಿದ್ರು. ಅವರಿಗೆ ಸರಿಯಾದ ಪಾಠ ಕಲಿಸಬೇಕಾದ್ರೆ ನೀನು ನಮ್ಮ ಮುಸ್ಲಿಂ ಐಕ್ಯರಂಗ ಪಕ್ಷದ ಕ್ಯಾಂಡಿಡೇಟ್ ಆಗಬೇಕು. ಖಂಡಿತವಾಗಿಯು ನಮ್ಮವರ ಮತಗಳೆಲ್ಲ ನಿನಗೆ ಸಿಗುತ್ತೆ. ಜೈಲಿಗೆ ಹೋಗಿ ಬಂದ ವಿಚಾರವನ್ನಿಟ್ಟು ಹೆಚ್ಚು ಪ್ರಮಾಣದ ಕನಿಕರದ ಮತಗಳನ್ನೂ ಪಡೆಯಬಹುದು.”

“ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ಅವರೆ ಗೆದ್ದು ಬೀಗುತ್ತಿದ್ದಾರೆ, ಅವರಿಂದ ನಮ್ಮವರಿಗೆ ಏನಾದ್ರು ಪ್ರಯೋಜನವಾಗಿದ್ಯಾ, ನಮ್ಮವರ ಮತಗಳನ್ನು ಹಣಕೊಟ್ಟು ಸಲೀಸಾಗಿ ಖರೀದಿಸುತ್ತಾರೆ. ಈ ಬಾರಿ ನೀನೆ ನಮ್ಮ ಶಕ್ತಿ ನೀನೆ ನಮ್ಮ ನಾಯಕನಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು,” ಚುನಾವಣೆಗೆ ತಗುಲುವ ವೆಚ್ಚವನ್ನು ಪಾರ್ಟಿ ಫಂಡ್‌ನಿಂದ ನೀಡುವುದಾಗಿ ಭರವಸೆ ನೀಡಿ, ಒಂದೇ ಸಮನೆ ಹಸನ್ ಬ್ಯಾರಿ ರಹೀಂನ ಮನವೊಲಿಸಲು ಪ್ರಯತ್ನಿಸಿದ. ಒಲ್ಲದ ಮನಸ್ಸಿನಿಂದ ರಹೀಂ ಚುನಾವಣೆಗೆ ಸ್ಪರ್ಧಿಸುವುದಾಗಿ ಸಮ್ಮತಿಯನ್ನು ಸೂಚಿಸಿದ.

ಕುಡುಕ ಮಹಾಶಯರ ಪ್ರಹಸನವನ್ನು ಅಕ್ಕಪಕ್ಕದ ಅಂಗಡಿಯವರು, ಚಿಲ್ಲರೆ ವ್ಯಾಪಾರಸ್ಥರು, ಮಸೀದಿಗೆ ತೆರಳುವ ಮದ್ರಸಾ ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ಉಸ್ಮಾನ್ ಬೋಪಣ್ಣ ಬಳಸುತ್ತಿದ್ದ ಸೊಂಟದ ಕೆಳಗಿನ ಪೆದಂಬು ಬೈಗುಳಗಳು ಊರಿನ ಖ್ಯಾತವೆತ್ತ ಸಂಪಿಗೆಪುರದ ನಿರುದ್ಯೋಗಿ ಯುವಕರ ಸಂಘಕ್ಕೆ ಅತೀವ ಸಂತೋಷದ ಜೊತೆಗೆ ಖುಷಿಯ ರಸದೌತಣವನ್ನು ಉಣಬಡಿಸಿದ್ದು ಸುಳ್ಳಲ್ಲ

ಚುನಾವಣಾ ಆಯೋಗವು ಗ್ರಾಮಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸುವ ಒಂದು ವಾರಕ್ಕೆ ಮುಂಚಿತವಾಗಿ ರಾಜ್ಯ ಸರಕಾರ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಹುಟ್ಟುಹಬ್ಬವನ್ನು ಆಚರಿಸುವಂತೆ ರಾಜ್ಯಾದ್ಯಂತ ಕರೆನೀಡಿತು. ಸುದ್ದಿವಾಹಿನಿಗಳಲ್ಲಿನ ಹಗ್ಗಜಗ್ಗಾಟದ ಚರ್ಚೆಗಳು ಮತ್ತಷ್ಟು ಕೆಟ್ಟಮನಸ್ಸುಗಳನ್ನು ಸೃಷ್ಟಿಸಿತು.

“ನೋಡು ರಹೀಂ ಸರಕಾರವೇ ಹೇಳಿದೆ, ನಮ್ಮ ವಲಿಯ (ಪವಾಡಪುರುಷನ) ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಮಾಡಬೇಕು ಅಂತ. ಆತ ಒರ್ವ ಮಹಾನ್ ಸುಲ್ತಾನ್ ಆಗಿದ್ದವ. ತನ್ನ ಮಕ್ಕಳನ್ನೆ ಒತ್ತೆ ಇಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಶಹೀದ್ (ಹುತಾತ್ಮ) ಆದ ವ್ಯಕ್ತಿ, ಅಂತವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಮಾಡಬೇಕು. ಅದು ಅಲ್ಲದೇ ಸಂಪಿಗೆಪುರ ಈಬಾರಿ ಜಿದ್ದಾಜಿದ್ದಿನ ಚುನಾವಣೆಯನ್ನು ಎದುರಿಸುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುವ ಯೋಜನೆ ರೂಪಿಸಬೇಕು, ಎಂದು ಮುಸ್ಲಿಂ ಐಕ್ಯರಂಗ ಪಕ್ಷದ ಮುಖ್ಯಸ್ಥ ಇಬ್ರಾಹಿಂ ಹಾಜಿ ರಹೀಂಗೆ ಚುನಾವಣೆ ಯೋಜನೆ ವಿವರಿಸಿದರು.

ಸಂಪಿಗೆಪುರದ ಮುಸ್ಲಿಮರು ಆ ಸ್ವಾತಂತ್ರ್ಯ ಹೋರಾಟಗಾರನನ್ನು ಶಹೀದ್ ಎಂದು ವಲಿ ಎಂದು ತೀವ್ರವಾಗಿ ನಂಬುವ ಜನರಾಗಿದ್ದರು. ಈ ಕಾರಣದಿಂದಲೇ ಏನೋ ಆ ಶಹೀದ್‌ನ ಕಂಚಿನ ಪುತ್ಥಳಿಯನ್ನು ಮುಸ್ಲಿಂ ಐಕ್ಯರಂಗ ಪಕ್ಷದ ವತಿಯಿಂದ, ಮಸೀದಿ ರಸ್ತೆಯ ಕಾಸಿಂಬ್ಯಾರಿ ಅವರ ಅಂಗಡಿಯ ಮುಂಭಾಗವಿರುವ ಖಾಲಿ ಬಿದ್ದಿರುವ ಐದು ಸೆಂಟ್ಸ್ ಜಾಗದಲ್ಲಿ ಪ್ರತಿಷ್ಠಾಪಿಸಿ ಅಲ್ಲಿಯೇ ಸಣ್ಣದೊಂದು ದರ್ಗಾರೀತಿಯ ಶಿಫಾಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡರು.

“ಅಲ್ಲ ಇಬ್ರಾಹಿಂ ಹಾಜಿಯವರೆ ಆ ಐದು ಸೆಂಟ್ಸ್ ಜಾಗ ಯಾರದ್ದು? ಅಲ್ಲಿ ಒಂದು ಅರಳಿ ಮರ ಮತ್ತು ಒಂದು ಸಣ್ಣ ಗುಡಿ ಇದೆಯಲ್ಲ” ಎಂದು ರಹೀಂ ಗೊಂದಲದಿಂದ ಪ್ರಶ್ನಿಸಿದ.

“ಆ ಜಾಗ ಮೊದಲು ಸೀನಪ್ಪನದ್ದಾಗಿತ್ತು, ಈಗ ಅದನ್ನು ನಾನು ಸುಮಾರು ೧೦ ಲಕ್ಷಕೊಟ್ಟು ಖರೀದಿಸಿದ್ದೇನೆ. ಯಾವ ಕಷ್ಟಗಾಲಕ್ಕೆ ಆ ಜಾಗ ಖರೀದಿಸಿದೆನೊ ಅಲ್ಲಿಂದ ಶುರುವಾಯಿತು ನೋಡು ತಾಪತ್ರಯಗಳು ಒಂದೊಂದಾಗಿ ಬೆನ್ನಹಿಂದೆ. ಮರ ಕಡಿದು ಗುಡಿಯನ್ನು ನೆಲಸಮ ಮಾಡುವ ಎಂದು ಜೆಸಿಬಿಯನ್ನು ಪಟ್ಟಣದಿಂದ ಕರೆತಂದು ನೋಡಿದ್ರೆ ಸೀನಪ್ಪನ ಸಹೋದರರು ಮರಕಡಿಯಕೂಡದು, ಗುಡಿ ಕೆಡವಬಾರದು ಅಂತೇಳಿ ನನ್ನ ಮೇಲೆ ಹಲ್ಲೆ ಮಾಡ್ಲಿಕ್ಕೆ ನೋಡೊದಾ! ಸೀನಪ್ಪ ನೆಲ ಮಾರಿ ಹಣ ಕಿಸೆಗೆ ಹಾಕಿ ಪಟ್ಟಣ ಸೇರಿಕೊಂಡ. ನಾನು ಆ ನೆಲ ತೆಗೆದುಕೊಂಡು ಅತ್ತ ಮಾರಲು ಸಾಧ್ಯವಾಗದೆ, ಇತ್ತ ಕೆಡವಲು ಕಟ್ಟಲು ಸಾಧ್ಯವಾಗದೇ, ಬಿಸಿತುಪ್ಪ ನುಂಗಿದ ಪೆಂಗನಂತಾಗಿದ್ದೇನೆ”.

“ಅದಕ್ಕೆ ಅನ್ನಿ ನೀವು ಆ ಐದು ಸೆಂಟ್ಸ್ ಜಾಗವನ್ನು ಪುಕ್ಕಟೆಯಾಗಿ ದಾನಮಾಡ್ತಾ ಇರೋದಾ?”

“ಇಲ್ಲ ಇಲ್ಲ! ಹತ್ತು ಲಕ್ಷ ಕೊಟ್ಟಿದ್ದೀನಲ್ವ ಆ ಹಣವನ್ನು ನಮ್ಮ ಪಕ್ಷದ ಫಂಡ್‌ನಿಂದ ನೀಡ್ತಾರಂತೆ. ಜಾಗ ಪಕ್ಷಕ್ಕೆ ನೀಡೊದು. ಅಲ್ಲಿ ಶಹೀದನ ಪುತ್ಥಳಿ ನಿರ್ಮಿಸುವ ಪ್ಲಾನ್ ಜನರ ಕಿವಿಗೆ ಮುಟ್ಟಿದ್ರೆ ಸಾಕು ‘ನಮ್ಮ್ ಜನ’ ಆ ಗುಡಿ ಮತ್ತು ಅರಳಿ ಮರವನ್ನು ಕಿತ್ತು ಬಿಸಾಕ್ತಾರೆ ನೋಡು ಬೇಕಾದ್ರೆ” ಎಂದು ಇಬ್ರಾಹಿಂ ಕುಹಕದ ನಗು ಬೀರಿದ. ರಹೀಂಗೇಕೊ ಈ ವಿಚಾರ ಸರಿ ಕಾಣದಿದ್ದರು, ಪಕ್ಷದ ವಿಚಾರವಾದರಿಂದ ಸುಮ್ಮನೆ ಮೌನವಹಿಸಬೇಕಾಯಿತು.

*****

ಶಹೀದ್‌ನ ಕಂಚಿನ ಪುತ್ಥಳಿಯನ್ನು ಅರಳಿಮರದ ಗುಡಿಯ ಸಮೀಪ ಪ್ರತಿಷ್ಠಾಪಿಸುವ ವಿಚಾರ ಗಾಳಿಯಂತೆ ತೇಲಿ ಇಡೀ ಸಂಪಿಗೆಪುರವನ್ನು ವ್ಯಾಪಿಸಿಕೊಂಡಿತು.

“ಅವ್ರು ಅದೆಂಗೆ ಮರಕಡಿದು ಗುಡಿಕೆಡವುತ್ತಾರೆ ನೋಡೇ ಬಿಡ್ವಾ. ಆ ಬ್ಯಾರಿ, ಸಾಬ್ರು, ಮಾಪಿಳ್ಳೆಗಳಿಗೆ ಸರಿಯಾದ ಪಾಠವನ್ನು ಈ ಬಾರಿ ನಾವು ಕಲಿಸಲೇಬೇಕು. ಅವತ್ತು ಬೋಪಣ್ಣ ಸತ್ತಾಗ್ಲೆ ನಾವು ಸ್ವಲ್ಪ ಈಸ್ಟ್ರಾಂಗ್‌ ಆಗಬೇಕಿತ್ತು, ರಹೀಂನನ್ನು ಸುಮ್ಮನೆ ಬಿಟ್ವಿ. ಈಗ ನೋಡಿದ್ರೆ ನಮ್ಮವರ ವಿರುದ್ಧವೇ ಚುನಾವಣೆಗೆ ನಿಂತಿದ್ದಾನೆ. ಪುತ್ಥಳಿಯಂತೆ ಪುತ್ಥಳಿ” ಎಂದು ಸೀನಪ್ಪನ ತಮ್ಮ ಉಮೇಶ ಗುಡುಗಿದ.

“ಹೌದು ಮತ್ತೆ ಅವರನ್ನು ಹೀಗೆ ಬಿಟ್ರೆ ನಮ್ಮವರ ವಿರುದ್ಧವೇ ಮಸಲತ್ತು ಮಾಡ್ತಾರೆ. ಆ ಗುಡಿಯ ವ್ಯಾಜ್ಯ ಇನ್ನೂ ಮುಗಿದಿಲ್ಲ. ನಮ್ಮ ಅಣ್ಣನಂತು ನೆಲವನ್ನು ಆ ದನತಿನ್ನೂ ಜಾತಿಯವರಿಗೆ ಮಾರಿ ದೊಡ್ಡ ತಪ್ಪುಮಾಡಿದ. ಅಲ್ಲಿ ನಮ್ಮ ಮನೆದೇವರ ವಿಗ್ರಹವಿರುವ ಸಣ್ಣ ಗುಡಿಇದೆ. ಪಾಪಿಗಳು ಅದನ್ನು ಕೆಡವುತ್ತಾರೆ ಅನ್ನಬೇಕಾದ್ರೆ ಹೊಟ್ಟೆ ಉರಿಯುತ್ತೆ. ಏನಾದ್ರು ಮಾಡಿ ಅಲ್ಲಿ ಶಹೀದನ ಪುತ್ಥಳಿ ಬರದಂತೆ, ಗುಡಿಕೆಡವದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನನ್ನ ತಲೆಹೋದರು ಪರ್ವಾಗಿಲ್ಲ” ಎಂದು ಸೀನಪ್ಪನ ಮತ್ತೊಬ್ಬ ತಮ್ಮ ಗೋಪಾಲ ನುಡಿದ.

ಆ ದಿನ ಸಂಜೆ ಸಂಪಿಗೆ ಪುರದ ಗಣಪತಿ ದೇವಾಲಯದ ಸಮೀಪವಿರುವ ಶಾಖೆಯ ಕಬಡ್ಡಿ ಮೈದಾನದಲ್ಲಿ ಸೀನಪ್ಪನ ತಮ್ಮಂದಿರು ಹಾಗೂ ಸಮಾಜದ ಮುಖ್ಯ ಸೇವಕರು ಒಂದಾಗಿ ಗೌಪ್ಯ ಸಭೆಯೊಂದನ್ನು ನಡೆಸಿ, ತೀರ್ಮಾನವನ್ನು ಕೈಗೊಂಡರು.

ಸಂಜೆಗತ್ತಲು ಸೂರ್ಯ ಕೆಂಬಣ್ಣಕ್ಕೆ ತಿರುಗುತ್ತಿದ್ದ, ಮಸೀದಿಯ ಮಿನಾರದ ಮೈಕ್‌ನಿಂದ ಅಲ್ಲಾಹುವು ಅಕ್ಬರ್ ಅಲ್ಲಾಹುವು ಅಕ್ಬರ್ ಎಂಬ ದೈವ ಸ್ತುತಿ ಮೊಳಗಿತು. ಮತ್ತೆಮತ್ತೆ ಸಂಪಿಗೆಪುರ ಕತ್ತಲೆಯ ಜೊತೆಗೆ ಮೌನದ ಮಡುವಿನ ಭಯಾನಕತೆಯನ್ನು ತನ್ನೊಳಗೆ ಉದುಗಿಸುತ್ತಾ ಸಾಗಿತು.

*****

ಶಹೀದ್‌ನ ಹುಟ್ಟುಹಬ್ಬಕ್ಕೆ ಮೂರು ದಿನ ಮುಂಚಿತವಾಗಿ ಕಂಚಿನ ಪುತ್ಥಳಿಯನ್ನು ಪಟ್ಟಣದಿಂದ ಇಡೀ ಸಂಪಿಗೆಪುರಕ್ಕೆ ಸಂಪಿಗೆಪುರವೆ ಕಾಣುವಂತೆ ಮೆರವಣಿಗೆಯ ಮೂಲಕ ಟೆಂಪೋದ ಮೇಲಿರಿಸಿ, ಮುಂದೆ ಪುಟ್ಟ ಪುಟ್ಟ ಮಕ್ಕಳು ದಫ್ ಬಡಿಯುತ್ತಾ, ಬೈತ್ ಹಾಡುತ್ತಾ ವಿಜೃಂಭಣೆಯಿಂದ ಗುಡಿಯ ಸಮೀಪ ತರಲಾಯಿತು. ಇತ್ತ ಸೀನಪ್ಪನ ತಮ್ಮಂದಿರು ತಮ್ಮ ಯೋಜನೆಯಂತೆ ತಾವು ಸಹ ಒಂದು ಪುತ್ಥಳಿಯನ್ನು ತಂದಿದ್ದರು. ಮೈಕ್‌ಸೆಟ್‌ನಲ್ಲಿ ಜೋರಾಗಿ ಗಣಪತಿ ಸ್ತುತಿಯನ್ನು ಹಾಕಿ, ಮುಂದೆ ಪುತ್ಥಳಿಗೆ ಹೂವಿನ ಅಭಿಷೇಕವನ್ನು, ಮಹಿಳೆಯರಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಿಸಲಾಯಿತು. ಆ ಪುತ್ಥಳಿ ಸಾಮಾನ್ಯ ಪುತ್ಥಳಿಯಾಗಿರಲಿಲ್ಲ. ಅದು ಕಂಚಿನದ್ದೇ, ಮರಾಠರ ಧೀರನಾಯಕನದ್ದು! ಸಂಪಿಗೆಪುರದ ಮುಖ್ಯ ರಸ್ತೆಯಲ್ಲಿ ಜನಸ್ತೋಮವೊ ಜನಸ್ತೋಮ. ಊರುತುಂಬಾ ಕಣ್ಣುಕುಕ್ಕುವಂತೆ ಕೇಸರಿ ಹಸಿರಿನದ್ದೇ ಕಾರುಬಾರು. ಎರಡು ಕೋಮಿನ ನಡುವೆ ಅದಾಗಲೇ ಬಿಗಡಾಯಿಸಿದ ವಾತಾವರಣ ಸೃಷ್ಟಿಯಾಗಿತ್ತು. ಪೋಲಿಸರು ಮಾಧ್ಯಮದವರು ಇಡೀ ಸಂಪಿಗೆಪುರವನ್ನು ವ್ಯಾಪಿಸಿಕೊಂಡರು. ಜಿಲ್ಲಾಧಿಕಾರಿ ಮಧ್ಯೆಪ್ರವೇಶಿಸಿ ಸಂಧಾನಕಾರ್ಯಕ್ಕೆ ಮುಂದಾದರು.

“ಸರ್ ಹತ್ತು ಲಕ್ಷ ಕೊಟ್ಟು ಆ ಭೂಮಿಯನ್ನು ಅವರಣ್ಣ ಸೀನಪ್ಪನ ಕೈಯಿಂದ ಖರೀದಿಸಿದ್ದೇನೆ, ಈಗ ನೋಡಿದ್ರೆ ತಮ್ಮಂದಿರು ಗುಡಿ ಕೆಡವಬೇಡಿ ಅಂತ ನಮ್ಮ ಮೇಲೆ ಹಲ್ಲೆಮಾಡ್ತಿದ್ದಾರೆ, ಇದು ಯಾವ ಸೀಮೆಯ ನ್ಯಾಯ. ಅದು ಅಲ್ಲದೆ ನಮ್ಮ ಸಮುದಾಯದವರು ತೀಮಾನಿಸಿದಂತೆ ಈ ಜಾಗದಲ್ಲಿ ನಮ್ಮ ಶಹೀದ್‌ನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ನಿರ್ಧಾರ ಕೈಗೊಂಡಿದ್ದೇವೆ, ದಯಮಾಡಿ ಅವಕಾಶ ಮಾಡಿಕೊಡಿ ಇಲ್ಲವಾದರೆ ನಮ್ಮವರು ಕೈ ಕಟ್ಟಿ ಕುಳಿತುಕೊಳ್ಳಲಾರರು” ಎಂದು ಇಬ್ರಾಹಿಂ ಹಾಜಿ ಅಂದದ್ದೆ ತಡ ಅತ್ತಕಡೆಯಿಂದ ಗೋಪಾಲ, ಉಮೇಶ ಜೋರಾಗಿ “ಅದೆಂಗ್ ಗುಡಿಕೆಡವುತ್ತಾರೆ, ಅವರೆಲ್ಲಾದ್ರು ಗುಡಿಯನ್ನು ನೆಲಸಮಮಾಡಿ ಪುತ್ಥಳಿಯನ್ನು ಪ್ರತಿಷ್ಠಾಪಿಸಿದರೆ ರಕ್ತಪಾತವಾಗುತ್ತದೆ. ನಾವು ನಮ್ಮ ಮರಾಠ ನಾಯಕನ ಪುತ್ಥಳಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸುತ್ತೇವೆ” ಎಂದು ಕೋಲಾಹಲ ಎಬ್ಬಿಸಿದರು. ಸಂಧಾನ ಕಾರ್ಯವು ವಿಫಲವಾಯಿತು, ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗುವಷ್ಟರಲ್ಲಿ ಜಿಲ್ಲಾಧಿಕಾರಿಗಳು ಆ ಐದು ಸೆಂಟ್ಸ್ ಜಾಗಕ್ಕೆ ಬಿಗಿ ಪೋಲಿಸ್ ಬಂದೋಬಸ್ತು ಹಾಕಿ ಯಾರು ಕೂಡ ಅದರೊಳಗೆ ಪ್ರವೇಶಿಸದಂತೆ ಆದೇಶಿಸಿದರು.

*****

ಮಾರನೇ ದಿನದ ಮುಂಜಾವಿನ ಸೂರ್ಯನ ಕಿರಣವು ನೆಲ ತಾಕುವ ಮೊದಲೆ ಬಿಗಡಾಯಿಸಿದ ಸ್ಥಿತಿಯಲ್ಲಿದ್ದ ಸಂಪಿಗೆಪುರದ ಜನಕ್ಕೆ ಆಶ್ಚರ್ಯವೊಂದು ಕಾದಿತ್ತು.

ಹಸಿ ಬಾಣಂತಿಯಂತೆ ಸಿಮೆಂಟು ಇಟ್ಟಿಗೆಗಳಿಂದ ರಾತ್ರೋ ರಾತ್ರಿಕಟ್ಟೆ ಕಟ್ಟಿ ಧ್ವಜಸ್ತಂಭವೊಂದನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಹಸಿರಿರಲಿಲ್ಲ, ಕೇಸರಿಯೂ ಅಲ್ಲ. ಬದಲಿಗೆ ಕೇಸರಿ ಬಿಳಿ ಹಸಿರಿನಿಂದ ಕಂಗೊಳಿಸುವ ಭಾರತದದ ತ್ರಿವರ್ಣ ಧ್ವಜ; ಮಧ್ಯದಲ್ಲಿರುವ ಅಶೋಕ ಚಕ್ರವನ್ನು ತಿರುಗಿಸುವಂತೆ ಗಾಳಿಗೆ ಪಟಪಟನೆ ಶಬ್ಧಮಾಡುತ್ತಾ ಧ್ವಜ ಹಾರುತ್ತಿತ್ತು. ಎರಡು ಕಡೆಯವರ ಪುತ್ಥಳಿಗಳು ರಾತ್ರೋ ರಾತ್ರಿ ನಾಪತ್ತೆಯಾಗಿದ್ದವು. ಗ್ರಾಮಸ್ಥರು ಬೆಪ್ಪಾಗುವುದಕ್ಕಿಂತ ಕಾವಲಿಗಿದ್ದ ಇಬ್ಬರು ಪೊಲೀಸರು ಬೆಪ್ಪಾಗಿದ್ದು ಆಶ್ಚರ್ಯ. ಅವರಿಗೆ ಊಟದ ಜೊತೆ ಕೊಟ್ಟ ಶರಬತ್ತಿನ ಬಗ್ಗೆ ಗುಮಾನಿ ಬಂದಿದ್ದು ಆಮೇಲೆಯೇ. ಸಂಪಿಗೆಪುರದ ನಿರುದ್ಯೋಗಿ ಯುವಕರ ಸಂಘದ ಸಮೀರ, ಶಿವರಾಮ, ವಿನೋದ, ಜೋಸೆಫ, ಅಬೂಬಕ್ಕರ್ ಲಾರಿ ಡ್ರೈವರ್ ಅಬ್ದುಲಾ ಮತ್ತು ಕ್ಲಿನರ್ ಹರೀಶ ಮಂಗಳೂರು ಪಟ್ಟಣದ ದೊಡ್ಡ ಗುಜರಿ ಅಂಗಡಿಯನ್ನು ಹುಡುಕಿಕೊಂಡು ರಾತ್ರೋರಾತ್ರಿ ಸಂಪಿಗೆಪುರದಿಂದ ಕಾಲ್ಕಿತ್ತಿದ್ದರು. ಕಾಣೆಯಾದ ಪುತ್ಥಳಿಗಳು ಸಾಮಾನ್ಯ ಪುತ್ತಳಿಗಳಾಗಿರಲಿಲ್ಲ ಕಂಚಿನದ್ದು. ಒಂದಲ್ಲ ಎರಡು!

ವಿಸ್ಮಯ ನೋಡುತ್ತ ನಿಂತ ಗುಂಪಿನಲ್ಲಿದ್ದ ಮಗು ಪಕ್ಕದಲ್ಲೆ ನಿಂತಿದ್ದ ತನ್ನ ಚಾಚಾನಲ್ಲಿ ಕೇಳಿತು “ಇವತ್ತು ಸ್ವಾತಂತ್ರ್ಯ ದಿನಾಚರಣೆರೆಯೆ? ಬಾವುಟ ಹಾರಿಸಿದ್ದಾರೆ, ಚಾಕಲೇಟ್ ಎಲ್ಲಿ?”

*****

ಮುಸ್ತಾಫ ಕೆ.ಎಚ್.
ಕಂಚಿನಪುತ್ಥಳಿ ನನ್ನ ನೆಚ್ಚಿನ ಕಥೆಗಳಲ್ಲಿ ಒಂದು. ಈ ಹೊತ್ತಿನ ಆತಂಕ ಮತ್ತು ನನ್ನೊಳಗಿನ ತಲ್ಲಣಗಳಿಗೆ ಈ ಕಥೆಯು ನಿಲುವುಗನ್ನಡಿಯಾಗಿ ಒಡಮೂಡಿದೆ. ವಿಷಾದವೆಂದರೆ ಕಥೆಯ ಅಂತರಾಳದಲ್ಲಿ ಜಾಳುಜಾಳಾದ ಪ್ರಯೋಗಗಳು, ಭಾಷೆಯನ್ನು ಪ್ರಬಲ ಕಥನಕ್ರಿಯೆಯಾಗಿ ಸ್ಥಾಪಿಸಲು ಅಸಾಧ್ಯವಾದ ನಿರೂಪಣಾ ವಿನ್ಯಾಸವನ್ನು ಸ್ಪಷ್ಟವಾಗಿ ನಾನು ಗುರುತಿಸಿದ್ದೇನೆ. ಕಾರಣ ಕಥಾರಚನೆಯು ನನ್ನೊಳಗೆ ಚಿಗುರೊಡೆದದ್ದು ಇತ್ತೀಚಿಗೆ ಅಂದರೆ ಸುಮಾರು ಎರಡು ವರ್ಷಗಳಿಂದ. ಸಾಹಿತ್ಯದ ಓದು ಸದಾ ಸಾಮಾಜಿಕ ಪ್ರತಿಕ್ರಿಯೆಗಳನ್ನು ನನ್ನಂತಹ ವಿದ್ಯಾರ್ಥಿಯಲ್ಲಿ ರೂಪಿಸುತ್ತಾ ಸಾಗಿರುವುದರಿಂದಲೇ ಏನೋ ಈ ಬಗೆಯ ಕಥೆ ತನ್ಮೂಲಕ ಹುಟ್ಟಿಕೊಂಡಿತು.
ಕಥೆಯ ಕೆಲವು ಘಟನೆಗಳು ನನ್ನ ಪರಿಸರದ ನಗ್ನಸತ್ಯಗಳನ್ನು ಕಳಚಿಡುವ ಕೆಲಸವನ್ನು ನಿರ್ವಹಿಸುತ್ತಾ, ಇಡೀ ಸಾಮುದಾಯಿಕ ನಗ್ನತೆಯನ್ನು ಆಧುನಿಕ ಸಮಾಜದ ಧಾರ್ಮಿಕ ಕಪಟತೆಗಳನ್ನು, ಮತೀಯ ವಿದ್ರೋಹವನ್ನು, ದ್ವೇಷಕಾರುವ ಮಾನವ ಪ್ರೀತಿ ಇಲ್ಲದ ಮನಸ್ಸುಗಳನ್ನು ಸೂಷ್ಮವಾಗಿ ಅವಲೋಕಿಸುವ ಪ್ರಯತ್ನವನ್ನು ಮಾಡುತ್ತದೆ. ಮಾನವಪ್ರೀತಿ ಕೃತಕವಾಗಿರುವ ಈ ಹೊತ್ತಿನಲ್ಲಿ ಕಥೆಯ ಕ್ಲೈಮ್ಯಾಕ್ಸ್ ನಾಟಕೀಯ ತಿರುವು ಪಡೆದುಕೊಳ್ಳುತ್ತದೆ. ಇದು ಕಥೆಯಲ್ಲಿನ ಒಟ್ಟು ಮೌಲ್ಯಕ್ಕೆ ಕೃತಕ ವಿನ್ಯಾಸವನ್ನು ಜೋಡಿಸಿದಂತೆ ಅನ್ನಿಸಬಹುದಾದರೂ ಕತೆಗಾರನಾದ ನನಗೆ ಅದೇ ಮುಖ್ಯವಾಗುತ್ತದೆ. ಕಾರಣ ಕಥೆಯ ಕ್ಲೈಮ್ಯಾಕ್ಸ್ ಮೂಲಕವಾದರೂ ಜೀವಸೆಲೆಯ ನವಿರುಗಳನ್ನು ಮಾನವ ಪ್ರೀತಿಯಾಗಿ ಪರಿವರ್ತಿಸಿದೆ ಎಂಬ ತೃಪ್ತಿ ನನ್ನೊಳಗಿದೆ.