ರಾಕ್ಪೆಲ್ನಿಸ್‌ರ ಪ್ರಕಾರ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ, ಬೂದು ಬಣ್ಣದ ಗುಬ್ಬಚ್ಚಿ, ‘ರೊಮ್ಯಾಂಟಿಸಿಸಂ-ನ ನೀಲಿ ಹೂವು,’ ನಮ್ಮ ನಮ್ಮ ಸ್ವಂತ ಅಸ್ಮಿತೆಗಳು – ಇಂತಹವುಗಳನ್ನು ಮರುಪಡೆಯಲು ಯತ್ನಿಸುವ ಮುನ್ನ ಭಾಷೆಯ ಕುದುರೆ ಲಾಯಗಳನ್ನು ಮೊದಲು ಸ್ವಚ್ಛಗೊಳಿಸಬೇಕು. ವಿಷಯಗಳು ಎಷ್ಟೇ ಭಿನ್ನವಾಗಿರಲಿ, ರಾಕ್ಪೆಲ್ನಿಸ್ ಅವರು ಅವುಗಳನ್ನು ಗಮನಾರ್ಹವಾದ ಸ್ಥಿರತೆಯೊಂದಿಗೆ ನಿಭಾಯಿಸುತ್ತಾರೆ – ವಿನೋದವಾಗಿ, ಆದರೆ ಸೂಕ್ಷ್ಮತೆಯೊಂದಿಗೆ, ಮತ್ತು ಯಾವಾಗಲೂ ಅಸಂಬದ್ಧತೆಯ ಈಚೆ ಬದಿಯಲ್ಲಿ ಇರುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಯಾನಿಸ್ ರಾಕ್ಪೆಲ್ನಿಸ್-ರ (Janis Rokpelnis) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಯಾನಿಸ್ ರಾಕ್ಪೆಲ್ನಿಸ್-ರು ಆಧುನಿಕ ಲ್ಯಾಟ್ವಿಯನ್ ಸಾಹಿತ್ಯದಲ್ಲಿ ವಿವಿಧ ಭಾಷಾ ಸ್ತರಗಳ ಸಹ-ಇರುವು ಹಾಗೂ ವ್ಯಂಗ್ಯದ ಪ್ರವೃತ್ತಿಯನ್ನು ತಮ್ಮ ಕೃತಿಗಳಲ್ಲಿ ಪರಿಚಯಿಸಿದ ಮೊದಲ ಕವಿಗಳಲ್ಲಿ ಒಬ್ಬರು; ಮತ್ತು ಇವುಗಳನ್ನು ತಮ್ಮ ಅನನ್ಯವಾದ ಭಾವಗೀತಾತ್ಮಕತೆ ಮತ್ತು ಬರವಣಿಗೆಯ ಶೈಲಿಯೊಳಗೆ ಯಶಸ್ವಿಯಾಗಿ ಸಂಯೋಜಿಸಿದ್ದಾರೆ.

1945-ರಲ್ಲಿ ರೀಗಾ ನಗರದಲ್ಲಿ ಜನಿಸಿದ ಯಾನಿಸ್ ರಾಕ್ಪೆಲ್ನಿಸ್ ಆಧುನಿಕ ಲ್ಯಾಟ್ವಿಯನ್ ಕಾವ್ಯದ ಒಂದು ಪ್ರಮುಖ ಹಾಗೂ ಪ್ರಖ್ಯಾತ ಧ್ವನಿಯಾಗಿದ್ದಾರೆ. ರಾಕ್ಪೆಲ್ನಿಸ್-ರು ಪ್ರಬಂಧಕಾರ, ಅನುವಾದಕ ಮತ್ತು ವಿದ್ವಾಂಸರಾಗಿಯೂ ಹೆಸರು ಗಳಿಸಿದ್ದಾರೆ. 1963-ರಿಂದ 1969-ರವರೆಗೆ ಅವರು ಲೆನಿನ್‌ಗ್ರಾಡ್‌ ಸ್ಟೇಟ್ ಯೂನಿವರ್ಸಿಟಿ ಎಂದು ಹಿಂದೆ ಕರೆಯಲ್ಪಡುತ್ತಿದ್ದ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ಥಿಯಾಲಜಿ ಮತ್ತು ತತ್ತ್ವಶಾಸ್ತ್ರದಲ್ಲಿ ಪದವಿಗಳನ್ನು ಹೊಂದಿದ್ದಾರೆ ಮತ್ತು ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಅವರು ವೃತ್ತಿಪರ ಬರಹಗಾರರಾಗಿ, ಸಂಪಾದಕರಾಗಿ, ಬರಹಗಾರರ ಒಕ್ಕೂಟದಲ್ಲಿ ಸಾಹಿತ್ಯ ಸಲಹೆಗಾರರಾಗಿ, ಸಂಸ್ಕೃತಿ ಮತ್ತು ಲಲಿತಕಲೆಗಳ ಇತಿಹಾಸದ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ, ಜೊತೆಗೆ ಸಾಹಿತ್ಯ, ಸಂಸ್ಕೃತಿ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ರಾಕ್ಪೆಲ್ನಿಸ್‌ರವರು ಲಾಟ್ವಿಯನ್ ರೈಟರ್ಸ್ ಯೂನಿಯನ್ ಮತ್ತು ಇತರ ಸಾಹಿತ್ಯ ಸಂಘಗಳ ಸದಸ್ಯರಾಗಿದ್ದಾರೆ, ಲಾಟ್ವಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಗೌರವ ಸದಸ್ಯರಾಗಿದ್ದಾರೆ.

ರಾಕ್ಪೆಲ್ನಿಸ್‌ರು ಹಲವಾರು ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಇಲ್ಲಿಯವರೆಗೆ ಅವರು ಒಂಭತ್ತು ಕವನ ಸಂಕಲನಗಳು, ಒಂದು ಸಾಕ್ಷ್ಯಚಿತ್ರ ಕಾದಂಬರಿ, ಒಂದು ಕಾಲ್ಪನಿಕ ಕಾದಂಬರಿ, ಪ್ರಬಂಧ ಸಂಗ್ರಹಗಳು, ಕವಿ ನಟ್ಸ್ ಸ್ಕ್ಯೂಜೆನಿಯೆಕ್ಸ್ ಅವರ ಜೀವನಚರಿತ್ರೆಯ ಕೃತಿ, ಮಕ್ಕಳ ಪುಸ್ತಕ, ಜೊತೆಗೆ ಲಿಬ್ರೆಟ್ಟೊ, ಚಲನಚಿತ್ರ ಸ್ಕ್ರಿಪ್ಟ್‌ಗಳು, ಮತ್ತು ಹಲವಾರು ಇತರ ಲೇಖನಗಳನ್ನು ಬರೆದಿದ್ದಾರೆ. ರಷ್ಯನ್ ಕಾವ್ಯದಲ್ಲಿ ಪರಿಣಿತರಾದ ರಾಕ್ಪೆಲ್ನಿಸ್-ರು ಅಲೆಕ್ಸಾಂಡರ್ ಬ್ಲಾಕ್, ಇನೋಕೆಂಟಿ ಅನ್ನೆನ್ಸ್ಕಿ, ಮರೀನಾ ಟ್ವೆಟಾಯೆವಾ, ಸೆಮಿಯಾನ್ ಖನಿನ್ ಮತ್ತು ಇತರ ರಷ್ಯನ್ ಕವಿಗಳ ಕವನಗಳನ್ನು ಲ್ಯಾಟ್ವಿಯನ್ ಭಾಷೆಗೆ ಅನುವಾದಿಸಿದ್ದಾರೆ. ರಾಕ್ಪೆಲ್ನಿಸ್-ರ ಕವನಗಳನ್ನು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ವಿದೇಶಗಳಲ್ಲಿ ಅನೇಕ ಸಂಕಲನಗಳಲ್ಲಿ ಸೇರಿಸಲಾಗಿದೆ. ಅವರ ಪುಸ್ತಕಗಳನ್ನು ರಷ್ಯನ್, ಲಿಥುವೇನಿಯನ್, ಇಟಾಲಿಯನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಅವರು ಬಾಲ್ಟಿಕ್ ದೇಶಗಳ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ “ಬಾಲ್ಟಿಕ್ ಅಸೆಂಬ್ಲಿ ಪ್ರಶಸ್ತಿ”ಯನ್ನು 2000-ರಲ್ಲಿ ಪಡೆದರು, 2010-ರಲ್ಲಿ ಓಜರ್ಸ್ ವ್ಯಾಸಿಟಿಸ್ ಪ್ರಶಸ್ತಿ (Ojārs Vācietis Award) ಮತ್ತು ಅವರ ಕವನ ಸಂಕಲನಗಳಿಗಾಗಿ ಲಟ್ವ್ಜು ಟೆಕ್ಸ್ಟಿ (Latvju Teksti) ಪತ್ರಿಕೆಯ ಪ್ರಶಸ್ತಿಗಳನ್ನು, ಹಾಗೂ ಹಲವಾರು ಮಹತ್ವದ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ಪಡೆದಿದ್ದಾರೆ.

1975-ರಲ್ಲಿ ಪ್ರಕಟವಾದ ಯಾನಿಸ್ ರಾಕ್ಪೆಲ್ನಿಸ್ ಅವರ ಮೊದಲ ಸಂಕಲನದ (Zvaigzne, putna ēna un citi; A Star, A Bird’s Shadow and Others, 1975) ಕವನಗಳಲ್ಲಿ ಕಂಡು ಬರುವ ಕವಿಯ ಕಾವ್ಯಾತ್ಮಕ ಸೊಬಗು, “ಆಕ್ರಮಣಕಾರಿ ವಿಡಂಬನೆ ಮತ್ತು ನವಿರಾದ, ನಾಸ್ಟಾಲ್ಜಿಕ್ ಭಾವಗೀತಾತ್ಮತೆಯ ನಡುವಿನ ಮನರಂಜಕ ಬೆರಕೆಯಾಗಿದೆ,” ಎಂದೆನ್ನುತ್ತಾರೆ ಈ ಸಂಕಲನವನ್ನು ಸಮೀಕ್ಷೆ ಮಾಡಿದ ಗುನಾರ್ಸ್‌ ಸಾಲಿನ್ಸ್-ರವರು (Gunars Saliņš – World Literature Today 51, 4, 1977). ಇದಕ್ಕೆ ಒಂದು ಉತ್ತಮ ಉದಾಹರಣೆಯಂತೆ, “The Rose” ಎಂಬ ಕವಿತೆಯನ್ನು ಸೂಚಿಸುತ್ತಾರೆ:

ಓ ಗುಲಾಬಿಯೆ, ಕೊಡಲಿಯನ್ನು ಎತ್ತಿಕೊ
ತಿಪ್ಪೆಗುಡ್ಡೆಯನ್ನು ಒಡೆಯುತ್ತಾ ದಾರಿ ಮಾಡಿಕೊ.
ವಿಧಿಯನ್ನು ಒಡೆಯುತ್ತಾ, ನಿಷ್ಕರುಣ ವಿಧಿಯನ್ನು
ಒಡೆಯುತ್ತಾ, ಹೊತ್ತು ಮೀರುವ ಮುನ್ನ.

ಆ ಗುಲಾಬಿಯನ್ನು ಕಾಣುವೆಯಾ,
ಶೃತಿಕಡ್ಡಿ ಹಿಡಕೊಂಡು ಕುದುರೆಲಾಯವನ್ನು
ಸ್ವಚ್ಛಮಾಡುತ್ತಿರುವ ಆ ಸುಂದರ ಗುಲಾಬಿಯನ್ನು?

ಮತ್ತೊಂದು ಕವನದಲ್ಲಿ ಬೂದು ಬಣ್ಣದ ನಾರ್ಡಿಕ್ (ಸ್ಕ್ಯಾಂಡಿನೇವಿಯಾದ) ಗುಬ್ಬಚ್ಚಿಗೆ ಹಸಿರು ಅಥವಾ ಕಿತ್ತಳೆ ಬಣ್ಣ ಹಚ್ಚಿ ಮರು-ಚಿತ್ರಿಸುವ ಬದಲು ಬೂದು ಬಣ್ಣದ ಹಕ್ಕಿಯಾಗಿಯೇ ಉಳಿಯುವ ಅದರ ಹಕ್ಕನ್ನು ಸಮರ್ಥಿಸುತ್ತಾರೆ. ಇಂದು ನಮ್ಮನ್ನು ಸುತ್ತುವರೆದಿರುವ ಬಣ್ಣಗಳ ಗದ್ದಲದಲ್ಲಿ ಹೀಗೆ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದನ್ನುತ್ತಾರೆ ಕವಿ. ಇದೇ ಸಂಕಲನದಲ್ಲಿ “The Annual Report on Nation’s Economy” (“ದೇಶದ ಆರ್ಥಿಕ ಸ್ಥಿತಿಯ ವಾರ್ಷಿಕ ವರದಿ”) ಎಂಬ ಕವನದಲ್ಲಿ ರಾಕ್ಪೆಲ್ನಿಸ್ ಅವರು ಆಗ ಚಾಲ್ತಿಯಲ್ಲಿದ್ದ ಸೋವಿಯತ್ ಪ್ರಚಾರದ ಪರಿಭಾಷೆಯನ್ನು ವಿಡಂಬನೆ ಮಾಡುತ್ತಾರೆ:

ಬೆಕ್ಕುಗಳಿಗೆ ಹಾಡಲು ಕಲಿಸುವಲ್ಲಿ
ಉತ್ತಮ ಪ್ರಗತಿಯನ್ನು ಮಾಡಲಾಗಿದೆ,
ಮುಖ್ಯವಾಗಿ ಪರಿಮಾಣಾತ್ಮಕ ಅರ್ಥದಲ್ಲಿ, ಆದಾಗ್ಯೂ
ರಾತ್ರಿಯ ಹೊತ್ತು ಛಾವಣಿಯ ಮೇಲೆ ಹಿಮ
ತೆಗೆಯುವ ಕೆಲಸದಾಳುಗಳ ನಿಸ್ವಾರ್ಥ ಸೇವೆಯನ್ನು
ಅಂಗೀಕರಿಸದೆ ಇರಲಾಗದು.

ರಾಕ್ಪೆಲ್ನಿಸ್‌ರ ಪ್ರಕಾರ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ, ಬೂದು ಬಣ್ಣದ ಗುಬ್ಬಚ್ಚಿ, ‘ರೊಮ್ಯಾಂಟಿಸಿಸಂ-ನ ನೀಲಿ ಹೂವು,’ ನಮ್ಮ ನಮ್ಮ ಸ್ವಂತ ಅಸ್ಮಿತೆಗಳು – ಇಂತಹವುಗಳನ್ನು ಮರುಪಡೆಯಲು ಯತ್ನಿಸುವ ಮುನ್ನ ಭಾಷೆಯ ಕುದುರೆ ಲಾಯಗಳನ್ನು ಮೊದಲು ಸ್ವಚ್ಛಗೊಳಿಸಬೇಕು. ವಿಷಯಗಳು ಎಷ್ಟೇ ಭಿನ್ನವಾಗಿರಲಿ, ರಾಕ್ಪೆಲ್ನಿಸ್ ಅವರು ಅವುಗಳನ್ನು ಗಮನಾರ್ಹವಾದ ಸ್ಥಿರತೆಯೊಂದಿಗೆ ನಿಭಾಯಿಸುತ್ತಾರೆ – ವಿನೋದವಾಗಿ, ಆದರೆ ಸೂಕ್ಷ್ಮತೆಯೊಂದಿಗೆ, ಮತ್ತು ಯಾವಾಗಲೂ ಅಸಂಬದ್ಧತೆಯ ಈಚೆ ಬದಿಯಲ್ಲಿ ಇರುತ್ತಾರೆ.

“ಈ ಜಗತ್ತಿನಲ್ಲಿ ಯಾವುದೋ ಒಂದು ಪರಮ ಅರ್ಥವಿದೆ ಎಂದು ರಾಕ್ಪೆಲ್ನಿಸ್-ರಿಗೆ ಅನಿಸುವುದಿಲ್ಲ. ರಸ್ತೆ ಕೊನೆಯಾಗುತ್ತಾ ತಾವೇ “ರಸ್ತೆಯಾಗುವುದನ್ನು” ನೋಡುತ್ತಾರೆ; ಆದಾಗ್ಯೂ, ರಸ್ತೆಯಲ್ಲಿರುವವರೆಗೂ ಅವರು ತಮ್ಮ ಸುತ್ತಲಿನ ಮಾನವ ಮತ್ತು ಅಮಾನವೀಯ “ಅಸಂಬದ್ಧತೆಗಳಿಂದ” ಸಾಧ್ಯವಾದಷ್ಟು ಮಾನವ – ಮತ್ತು ಹಾಸ್ಯಮಯ – ಅರ್ಥವನ್ನು ಪಡೆಯಲು ದೃಢನಿಶ್ಚಯ ಮಾಡುತ್ತಾರೆ. ಮಾನವ ಜೀವನ ಮತ್ತು ಮಾನವ ಕಾಳಜಿಗಳ ಈ ದೃಢೀಕರಣದೊಂದಿಗೆ, ರಾಕ್ಪೆಲ್ನಿಸ್-ರು ‘ಲಿಟರೇಚರ್ ಆಫ಼್ ದಿ ಅಬ್ಸರ್ಡ್’-ನಿಂದ (literature of the absurd) ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ. ರಾಕ್ಪೆಲ್ನಿಸ್ ಅವರ ಕಾವ್ಯದಲ್ಲಿ ಕಂಡುಬರುವ ವಿರೋಧಾಭಾಸವು ಅಸಮಂಜಸ ಧ್ವನಿಗಳು, ಅಸಂಗತ ಪದ ಜೋಡಿಗಳು, ಅಪಹಾಸ್ಯದ ಪ್ರಾಸಗಳು ಮತ್ತು ಇತರ ಧ್ವನಿ ಪರಿಣಾಮಗಳನ್ನು ಕೂಡಿದ ನಿಜವಾದ ಪಾಲಿಫೋನಿಕ್ (polyphonic) ವಿನ್ಯಾಸದಿಂದ ತನ್ನನ್ನು ತಾಳಿಕೊಳ್ಳುತ್ತದೆ. ಸೂಕ್ಷ್ಮವಾದ ಸೊಬಗಿನೊಂದಿಗೆ ಕೂಡಿದ ರಾಕ್ಪೆಲ್ನಿಸ್ ಅವರ ವಿರೋಧಾಭಾಸದ ಕಲೆಯು ಲ್ಯಾಟ್ವಿಯನ್ ಕಾವ್ಯದಲ್ಲಿ ಸ್ವಾಗತಾರ್ಹ ನವೀನತೆಯನ್ನು ತಂದಿದೆ ಮತ್ತು ಪಶ್ಚಿಮದಲ್ಲಿ ಇದೇ ರೀತಿಯ ಕಾವ್ಯಾತ್ಮಕ ಬೆಳವಣಿಗೆಗಳೊಂದಿಗೆ ಸಾಮರಸ್ಯವಿದೆ,” ಎಂದು ಗುನಾರ್ಸ್‌ ಸಾಲಿನ್ಸ್‌ರವರು ತಮ್ಮ ಸಮೀಕ್ಷೆಯಲ್ಲಿ ಅಭಿಪ್ರಾಯ ಪಡುತ್ತಾರೆ.

1981-ರಲ್ಲಿ ಪ್ರಕಟವಾದ ರಾಕ್ಪೆಲ್ನಿಸ್‌ರ ಎರಡನೆಯ ಸಂಕಲನವನ್ನು (Rigas iedzimtais ; Native of Riga) ಕೂಡ ಸಮೀಕ್ಷೆ ಮಾಡಿದ ಗುನಾರ್ಸ್‌ ಸಾಲಿನ್ಸ್‌ರವರ ಅಭಿಪ್ರಾಯದ ಪ್ರಕಾರ, “ಮೊದಲ ಪುಸ್ತಕದಲ್ಲಿರುವಂತೆ, ರಾಕ್ಪೆಲ್ನಿಸ್-ರ ಕಾವ್ಯಸ್ವರವು ಸಂಪೂರ್ಣ ಭಾವೋದ್ರಿಕ್ತತೆ ಅಥವಾ ನಾಸ್ಟಾಲ್ಜಿಕ್‌ನಿಂದ ಕುಚೋದ್ಯದ ಹಾಸ್ಯ ಅಥವಾ ವಿಡಂಬನಾತ್ಮಕವಾಗಿ ಮತ್ತು ವಿಡಂಬನೆಯಿಂದ ಕೋಡಂಗಿತನದ ರುದ್ರವೈನೋದಿಕವಾಗಿ ಬದಲಾಗುತ್ತದೆ. ಈ ಸಂಕಲನದಲ್ಲೂ ಅವರು ಬಹು ವಿಸ್ತೃತ ರೂಪಕಗಳು ಮತ್ತು ಪಾಸ್ಟೀಶ್-ಗಳನ್ನು (pastiche) ಬಳಸುತ್ತಾರೆ; ಇಲ್ಲಿ ಕುತಂತ್ರದ ನಿಷ್ಕಪಟತೆಯನ್ನು ಅವರು ವಿದ್ವತ್‌ಪೂರ್ಣ ಪರಿಕಲ್ಪನೆಗಳು, ಶಬ್ದಾಡಂಬರದ ಪದಗಳು, ಸೈದ್ಧಾಂತಿಕ ಹೇಳಿಕೆಗಳು, ಜನಪ್ರಿಯ ಜಾನಪದ ಗೀತೆಗಳಿಂದ ಉಲ್ಲೇಖಗಳು, ಮುಂತಾದವುಗಳಿಂದ ಭೇದಿಸುತ್ತಾರೆ. ಆಡಂಬರವಿಲ್ಲದ ಮತ್ತು ಉದ್ದೇಶಪೂರ್ವಕವಾದ “ಕಾವ್ಯಗುಣವಿಲ್ಲದ” ಅರ್ಧ-ಪ್ರಾಸಗಳು, ಸಾಮ್ಯಧ್ವನಿಗಳು, ಮಂತ್ರಪಠನದಂತಹ ಅನುಪ್ರಾಸಗಳು, ಹೋಮೋನಿಮ್‌ಗಳು ಮತ್ತು ಇತರ ಯೋಗ್ಯ ಧ್ವನಿಸೃಷ್ಟಿಗಳೊಂದಿಗೆ ಸವಕಲಾದ ಪೂರ್ಣ-ಪ್ರಾಸಗಳನ್ನು ಬೆರೆಸುವ ಮೂಲಕ ರಾಕ್ಪೆಲ್ನಿಸ್‌ ಅವರು ಇವೆಲ್ಲದ್ದಕ್ಕೂ ತಮ್ಮ ಮೃದು ಸ್ಪರ್ಶವನ್ನು ನೀಡುತ್ತಾರೆ.”

ಯಾನಿಸ್ ರಾಕ್ಪೆಲ್ನಿಸ್ ಅವರ ಒಂಬತ್ತನೇ ಕವನ ಸಂಗ್ರಹದ (Tīmeklītis; Tiny Web 2019) ಕವನಗಳು ಭಾವಗೀತೆ, ವಿಕೃತಿ ಮತ್ತು ದುರಂತದ ಮಧ್ಯೆ ಕೌಶಲ್ಯಪೂರ್ಣ ಸಮತೋಲನವನ್ನು ತೋರಿಸುತ್ತವೆ, ಎಂದು ಲ್ಯಾಟ್ವಿಯಾದ ಖ್ಯಾತ ಕವಿ ಕಾರ್ಲಿಸ್ ವೆರ್ದಿನ್ಸ್ (Kārlis Vērdiņš) ಅಭಿಪ್ರಾಯಪಟ್ಟಿದ್ದಾರೆ. ವಿಷಯಾಧಾರಿತ ಚಕ್ರಗಳಲ್ಲಿ ಇವುಗಳ ಓರಣಿಕೆಯಲ್ಲಿ ಅವರ ವಿಷಯಗಳು ಮತ್ತು ಸ್ವರಗಳ ವೈವಿಧ್ಯತೆಯನ್ನು ಒತ್ತಿಹೇಳುತ್ತದೆ, ಜೊತೆಗೆ ಕವನ ಬರೆಯುವ ಪ್ರಕ್ರಿಯೆಯನ್ನು ಒಂದು ಕೊನೆಯಿಲ್ಲದ ಪಯಣದಂತೆ ನೋಡಲು ನಮಗೆ ಅನುವು ಮಾಡಿಕೊಡುತ್ತದೆ. ಇದರ ಅರ್ಥವು ಕೆಲವೊಮ್ಮೆ ಪ್ರಶ್ನಾರ್ಹವೆಂದು ತೋರುತ್ತದೆ, ಆದರೆ ಯಾವಾಗಲೂ ಅನಿರೀಕ್ಷಿತ ಅರಿವುಗಳಿಗೆ ಕಾರಣವಾಗುತ್ತದೆ. ತಮ್ಮ ವಿಶ್ಲೇಷಣೆಯನ್ನು ಮುಂದುವರೆಸುತ್ತಾ, “ರಾಕ್ಪೆಲ್ನಿಸ್ ಅವರ ಕಾವ್ಯದ ಪಾತ್ರಗಳನ್ನು ಬಳಸಿಕೊಂಡು ಹೇಳುವುದಾದರೆ, ಅವರು ತಮ್ಮ ಪಾಠವನ್ನು ಬೋಧಿಸಲು ಎಂದಿಗೂ ಘನವಾದ, ಎತ್ತರದ ಬಂಡೆಯ ಮೇಲೆ ಏರುವುದಿಲ್ಲ – ಅವರು ರಸ್ತೆಗಳು ಮತ್ತು ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ, ಕೆಲವೊಮ್ಮೆ ದಾರಿತಪ್ಪುತ್ತಾರೆ, ಮತ್ತೆ ಆ ಸಣ್ಣ ಜೇಡರಬಲೆಯನ್ನು ಪತ್ತೆಮಾಡುತ್ತಾರೆ; ಇದು ಅವರನ್ನು ಯಾವುದೋ ಒಂದು ಉನ್ನತವಾದ ವಾಸ್ತವದ ಜತೆ ಸಂಪರ್ಕ ಸಾಧಿಸುತ್ತದೆ, ಅವರಿಡುವ ಪ್ರತಿ ಹೆಜ್ಜೆಯನ್ನು ಅರ್ಥಪೂರ್ಣವಾಗಿಸುತ್ತದೆ,” ಎಂದು ಕಾರ್ಲಿಸ್ ವೆರ್ದಿನ್ಸ್ ಅವರು ಹೇಳುತ್ತಾರೆ.

ನಾನು ಕನ್ನಡಕ್ಕೆ ಅನುವಾದಿಸಿದ ಇಲ್ಲಿರುವ ಯಾನಿಸ್ ರಾಕ್ಪೆಲ್ನಿಸ್-ರ ಆರು ಕವನಗಳಲ್ಲಿ ಮೊದಲ ಕವನವನ್ನು ಮಾರ್ಜಿಟಾ ಗೇಯ್ಲಾಯ್ಟಿಸ್ (Margita Gailitis), ಎರಡನೆಯ ಕವನವನ್ನು ಇನಾರಾ ಸೆಡ್ರಿನ್ಸ್ (Inara Cedrins), ಹಾಗೂ ಉಳಿದ ನಾಲ್ಕು ಕವನಗಳನ್ನು ಇಯೆವಾ ಲೆಸಿನ್ಸ್ಕಾ (Ieva Lešinska) ಅವರುಗಳು ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

1
ಮೀನು ಒಂದು ಪಿಟೀಲಾಗಿದ್ದಿದ್ದರೆ
ಮೂಲ: If a fish were a violin

ಮೀನು ಒಂದು ಪಿಟೀಲಾಗಿದ್ದಿದ್ದರೆ,
ನೀನು ಆ ಪಿಟೀಲನ್ನು ನೀರಿನಿಂದ ಹೊರಸೆಳೆಯುವೆಯಾ,
ಆ ಪಿಟೀಲು ಸಾಯುವುದೆಂದು ಮೊದಲೇ ಗೊತ್ತಿದ್ದರೂ?
ಸತ್ತೇ ಸಾಯುತ್ತೆ ಅದು,
ಆದರೆ, ಏನೇ ಇರಲಿ, ಅದು ನಿನ್ನ ಕೈಯಲ್ಲಿರುವುದು
ಒಂದು ಕ್ಷಣವಾದರೂ, ಅದರ ಧ್ವನಿ ತಗ್ಗುವುದಿಲ್ಲ.
ಆದರೆ, ನಿಮಗೆಲ್ಲರಿಗೂ ಗೊತ್ತೇ ಇದೆ, ಪಿಟೀಲು ಮೀನಲ್ಲವೆಂದು.
ಆದರೂ, ಈ ವಿಷಯವನ್ನು ಯಾರು ಖಚಿತವಾಗಿ ತಿಳಿದಿದ್ದಾರೆ.

2
ನಮ್ಮ ಕಾವಲುನಾಯಿ
ಮೂಲ: When the watchdog had died a natural death

ನಮ್ಮ ಕಾವಲುನಾಯಿ ಸಹಜ ಕಾರಣಗಳಿಂದ ಸತ್ತಾಗ,
ಅದು ಹಸಿವೆಯಿಂದ ಸತ್ತಿತ್ತೊ ಏನೊ,

ಆ ನಾಯಿಮನೆ ಖಾಲಿಯಾಗಿರುವುದನ್ನು ನೋಡಲಿಕ್ಕಾಗದೆ –
ನಾಯಿಯ ಸರಪಣಿಗೆ ನಾನೊಂದು ಕೈಗಡಿಯಾರವ ಕಟ್ಟಿದೆ.
ಆದರೆ ಮೊದಲ ದಿನದ ನಂತರವೇ ನನ್ನಿಂದ ತಡೆಯಲಾಗಲಿಲ್ಲ –
ಆ ಕೈಗಡಿಯಾರ ತುಂಬಾ ಜೋರಾಗಿ ಬೊಗಳುತ್ತಿತ್ತು.

3
ವಸಂತಮಾಸದಲ್ಲಿ ಜನರೆಲ್ಲರೂ ತೂರಿಹೋಗುವ ದಾರಿಗಳಾಗುತ್ತಾರೆ
ಮೂಲ: in Spring people are walk-through passages

ವಸಂತಮಾಸದಲ್ಲಿ ಜನರೆಲ್ಲರೂ ತೂರಿಹೋಗುವ ದಾರಿಗಳಾಗುತ್ತಾರೆ.
ಬಿಳಿಬಣ್ಣದ ಹೂವೊಂದು ನಿನ್ನ ಮುಖದ ಮೇಲೆ ಕೆಲ ಹೊತ್ತು ಕಾಲಕಳೆಯುತ್ತೆ
ಆದರೆ ಕೂಡಲೆ ಮುಂದಕ್ಕೆ ಹೋಗುತ್ತೆ.
ಸ್ವಾಲೊ ಹಕ್ಕಿಗಳು ತಮ್ಮ ರೆಕ್ಕೆ ತುದಿಗಳನ್ನ ನಿನ್ನ ಕಣ್ಣುಗಳಲ್ಲಿ ಅದ್ದುತ್ತವೆ,
ಅನಿರೀಕ್ಷಿತವಾಗಿ,
ಸ್ವಭಾವದಿಂದ ಆತುರಾತುರವಾಗಿ.

ಆದರೆ, ಹುಷಾರು,
ನೀನು ಎಂದೆಂದಿಗೂ ತೂರಿಹೋಗುವ ದಾರಿಯಾಗಿರಲಾರೆಯಲ್ಲ,
ಆ ದಿನ ಬೇಗನೆ ಬರುತ್ತೆ,
ಮತ್ತೆ ಒಂದು ಇಡೀ ವರ್ಷ ನಿನ್ನೊಳಗೆ ಸೆರೆಯಾದ
ಒಂದು ಚಿಟ್ಟೆಯನ್ನೋ ಒಂದು ಹೂವನ್ನೋ
ನೀನು ಹೊತ್ತುಕೊಂಡು ತಿರುಗುವೆ.
ಮತ್ತೆ ಅವು ಒಡೆದು ಹೊರಗೆ ಬರಲು ಪ್ರಯತ್ನಿಸುತ್ತವೆ,
ತೀವ್ರವಾಗಿ, ಅತಿ ತೀವ್ರವಾಗಿ,
ಎಷ್ಟೆಂದರೆ, ಅವುಗಳ ಹತಾಶೆ ನಿನ್ನದೇ ಏನೋ ಎನ್ನುವಷ್ಟು
ನಿನಗೆ ಅನಿಸುತ್ತೆ.

4
ಪ್ರತಿಯೊಂದು ಮಳೆಹನಿಯಲ್ಲಿ
ಮೂಲ: In every raindrop

ಹೇಳಬೇಕೆಂದರೆ,
ಪ್ರತಿಯೊಂದು ಮಳೆಹನಿಯಲ್ಲಿ,
ಪ್ರತಿಯೊಂದು ಪಾರದೀಪಕ ಮೊಗ್ಗಿನಲ್ಲಿ,
ಒಂದು ಹಿಮಸುಮವಿರುತ್ತೆ,
ಬಿಳಿ ಅಥವಾ ನೀಲಿ ಬಣ್ಣದ್ದು,
ಸಾಧಾರಣ ಹೂವುಗಳು ಬಾಡಿಬಿದ್ದಾಗ ಮಾತ್ರ
ಆ ಮೊಗ್ಗು ಸಿಡಿದೊಡೆಯುತ್ತೆ.
ಲಾ ಕಾರ್ಬ್ಯೂಸಿಯೆ* ತನ್ನ ಇಳಿವಯಸಿನಲಿ
ವಿವೇಕಾತ್ಮಕ ವಾಸ್ತುಶೈಲಿಯಿಂದ
ಭಾವಾತ್ಮಕ ವಾಸ್ತುಶೈಲಿಯ ಕಡೆಗೆ ತಿರುಗಿದ.
ಒಂದು ಪಾರದೀಪಕ ನೀರಿನ ಹನಿ.
ಒಂದು ಅನೂಹ್ಯ ಹಿಮಸುಮ –
ಥಂಡಿಯಿಂದ ಸಾಧಾರಣವಾಗಿಬಿಟ್ಟಿದೆ
ಆಕಾಶದಲ್ಲಿ.

*ಲಾ ಕಾರ್ಬ್ಯೂಸಿಯೆ Le Corbusier ಎಂದೇ ಹೆಸರುವಾಸಿಯಾದ ಚಾರ್ಲ್ಸ್-ಎಡ್ವರ್ಡ್ ಜೀನ್ನರೆಟ್ Charles-Édouard Jeanneret (6 ಅಕ್ಟೋಬರ್ 1887 – 27 ಆಗಸ್ಟ್ 1965) ಒಬ್ಬ ಸ್ವಿಸ್-ಫ್ರೆಂಚ್ ವಾಸ್ತುಶಿಲ್ಪಿ, ವಿನ್ಯಾಸಕಾರ, ವರ್ಣಚಿತ್ರಕಾರ, ನಗರ ಯೋಜಕ, ಬರಹಗಾರ ಮತ್ತು ಆಧುನಿಕ ವಾಸ್ತುಶಿಲ್ಪದ ಪ್ರವರ್ತಕರಲ್ಲಿ ಒಬ್ಬರು. ಅವರು ಸ್ವಿಟ್ಜರ್ಲೆಂಡ್‌ನಲ್ಲಿ ಜನಿಸಿದರು ಮತ್ತು 1930 ರಲ್ಲಿ ಫ್ರಾನ್ಸ್ ದೇಶದ ಪ್ರಜೆಯಾದರು. ಐದು ದಶಕಗಳ ವೃತ್ತಿಜೀವನದಲ್ಲಿ ಅವರು ಯುರೋಪ್, ಜಪಾನ್, ಭಾರತ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಟ್ಟಡಗಳನ್ನು ವಿನ್ಯಾಸಗೊಳಿಸಿದರು. ಕಿಕ್ಕಿರಿದ ನಗರಗಳ ನಿವಾಸಿಗಳಿಗೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಒದಗಿಸಲು ಲಾ ಕಾರ್ಬ್ಯೂಸಿಯೆಯವರ ನಗರ ಯೋಜನೆಗಳು ಪ್ರಭಾವಶಾಲಿಯಾದವು. ಲಾ ಕಾರ್ಬ್ಯೂಸಿಯೆ ಭಾರತದಲ್ಲಿ ಚಂಡೀಗಢ ನಗರಕ್ಕೆ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದರು ಮತ್ತು ಅಲ್ಲಿನ ಹಲವಾರು ಕಟ್ಟಡಗಳಿಗೆ, ವಿಶೇಷವಾಗಿ ಸರ್ಕಾರಿ ಕಟ್ಟಡಗಳಿಗೆ ನಿರ್ದಿಷ್ಟ ವಿನ್ಯಾಸಗಳನ್ನು ನೀಡಿದರು.

5
ಕಾವಳದ ಶಿಲುಬೆಯ ಮೇಲೆ ಏರಿಸಲಾಗಿದೆ
ಮೂಲ: Nailed to the cross of fog

ಕಾವಳದ ಶಿಲುಬೆಯ ಮೇಲೆ ಏರಿಸಲಾಗಿದೆ
ಮಂಜಿನ ಮೊಳೆಗಳ ಹೊಡೆದು,
ಕೆಳಗೆ ಇಳಯಲಿಕ್ಕಿಲ್ಲ, ಓಡಿ ಹೋಗಲಿಕ್ಕಿಲ್ಲ,
ದಯವಿಟ್ಟು ಬಿಡಿಸು ನನ್ನನ್ನು ಇಲ್ಲಿಂದ.

ಬಿಡಿಸು ನನ್ನನ್ನು, ಸುತ್ತಿಗೆ ಹಿಡಕೊಂಡವನೆ –
ಮನುಷ್ಯನಾ, ಗಾಳಿಯಾ, ದೆವ್ವವಾ ನೀನು?
ಪ್ರತಿಯೊಂದು ಮೊಳೆಯ ಮಧುರ ಕುಟುಕು
ಈ ಮುಳ್ಳಿನ ಸುರುಳಿಗೆ ಮತ್ತೊಂದು ಕುಟುಕು.
ಹೇಗೆ ಇಳಿಯಲಿ ಕೆಳಗೆ ಈ ಶಿಲುಬೆಯಿಂದ?
ಮೊಳೆ ಹೊಡೆಯುವವನೇ, ಯಾರು ನೀನು,
ನನ್ನಿಂದ ಊಹಿಸಲಸಾಧ್ಯವಾದ ಹೆಸರಿನವನೆ…

6
ಹಡಗುಗಳು
ಮೂಲ: Ships

1
ನನ್ನ ಹತ್ತಿರ ಬಂದ ಆತ
ಕೈಯಲ್ಲಿ ಹಗ್ಗ ಹಿಡಕೊಂಡು.
ಹಗ್ಗದ ಕೊನೆಯಲ್ಲಿ ಹಡಗುಗಳು ಕಟ್ಟಿದ್ದವು.
ನನ್ನ ತೋಳುಗಳನ್ನು ಗುದ್ದಿದ ಆತ
ನನ್ನ ಚರ್ಮದಿಂದ ಸಮುದ್ರ ಸಿಡಿಯುವವರೆಗೂ.
ಚಿರಕಾಲದವರೆಗೂ ಹಡಗಿನಾಕಾರದ
ಕಲೆಗಳನ್ನ ಹಿಂಬಿಟ್ಟು ಹೋದ.

2
ನೀರಿನ ಮೇಲೆ ಶಾಯಿಯ ತೊಟ್ಟು
ಹರಿದಂತೆ ಹಡಗು ಹರಿಯುತ್ತದೆ.
ಅಸ್ಪಷ್ಟವಾಗಿ ಪ್ರತಿಫಲಿಸುತ್ತಾ.
ಕತೆಗಳು
ವದಂತಿಗಳು
ದಡಸೇರುತ್ತಲಿರುತ್ತವೆ ತರಂಗಗಳ ಹಾಗೆ,
ಆ ಹಡಗು ಮತ್ತೊಮ್ಮೆ
ಹಡಗಾಗಿ ಹೆಪ್ಪುಗಟ್ಟುವತನಕ.