Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ

ನೀರು ಕುಡಿಯದಿದ್ದರೂ, ಆ ಅನಿರೀಕ್ಷಿತ ಘಟನೆಗೆ ಹೆದರಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಯಾರಾದರೂ ನೋಡಿಬಿಡುತ್ತಾರೆಂದು ಹೆದರಿದ ಆತ ತನ್ನ ತೋಳಲ್ಲಿ ನನ್ನನ್ನು ಎತ್ತಿಕೊಂಡು ಮರದ ಮೇಲಿನ ಆತನ ಅಟ್ಟಳಿಗೆಯ ಒಳಗೆ ಮಲಗಿಸಿದ. ತನ್ನ ಟವೆಲ್‌ನಿಂದ ನನಗೆ ಗಾಳಿ ಬೀಸಿ, ಮುಖಕ್ಕೆ ನೀರೆರಚಿದಾಗ ನಿಧಾನಕ್ಕೆ ಕಣ್ಣು ಬಿಟ್ಟೆ. ನಾನಿರುವ ಜಾಗವನ್ನು ನೋಡಿ ಒಮ್ಮೆಲೆ ಬೆಚ್ಚಿದೆ. ಎದ್ದೇಳಲು ಪ್ರಯತ್ನಿಸುತ್ತಿದ್ದಂತೆಯೇ ಹತ್ತಿರ ಬಂದ ಆತ ಕೈಮುಗಿದು “ತಪ್ಪಾಯಿತು, ಇನ್ನೊಮ್ಮೆಯೂ ಹೀಗೆ ಮಾಡಲ್ಲ ಕ್ಷಮಿಸಿಬಿಡಿ” ಎಂದು ಮುಜುಗರದಿಂದ ಹೇಳಿ ಹೊರ ನಡೆದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ “ತೂಗು ಸೇತುವೆ” ನಿಮ್ಮ ಓದಿಗೆ

“ನಿನ್ನ ಹೆಸರೇನು ಪುಟ್ಟಾ? ಈ ಅಂಗಿ ಚೆನ್ನಾಗಿದೆ. ಬೆಳಿಗ್ಗೆ ಏನು ತಿಂದೆ? ಹೌದಾ..! ಎಷ್ಟು ದೋಸೆ ತಿಂದೆ?” ಎಂದು ಕೇಳುತ್ತಲೇ 6 ವರ್ಷದ ಹೆಣ್ಮಗಳ ಕೈಯಿಂದ ಪರೀಕ್ಷೆಗೆಂದು ರಕ್ತ ತೆಗೆಯುವಷ್ಟರಲ್ಲಿ ಭಯದಲ್ಲೇ ಉತ್ತರಿಸುತ್ತಿದ್ದ ಅವಳ ಕಣ್ಣಿಂದ ನೋವಿನ ಕಣ್ಣೀರು ಹರಿದಾಗ ನನ್ನ ಎದೆ ಚುಳ್ಳೆಂದಿತು’. ಈ ವೃತ್ತಿಗೆ ಬರಲೇಬಾರದಿತ್ತು. ಸದಾ ನೋವಿನ ನರಳಾಟ. ಚುಚ್ಚಿ ನೋಯಿಸಿ ರಕ್ತ ತೆಗೆದು ತೆಗೆದೂ… ಮನಸ್ಸು ಮರಗಟ್ಟುತ್ತಿದೆ.’ ದೃಷ್ಟಿ ಕಿಟಿಕಿಯಿಂದಾಚೆ ಹರಿದು ಸುರಿಯುತ್ತಿರುವ ಮಳೆಗೆ ಕಣ್ಣ ನೆಟ್ಟಾಗ ಹಿಂದಿನಿಂದ “ಲಿಲ್ಲೀ.” ಎಂದು ಸೋತ ದನಿಯಲ್ಲಿ ಕರೆಯುತ್ತಾ ಅಪ್ಪಣೆಯಿಲ್ಲದೆ ಒಳ ಬಂದವನನ್ನು ನೋಡಿ ಒಮ್ಮೆಲೆ ಬೆಚ್ಚಿ ದಂಗಾಗಿ ಹೋದೆ.

“ರಾಮಕೃಷ್ಣ…” ಅದೇ ಲುಂಗಿ, ಚೆಕ್ಸಿನ ಶರ್ಟು, ಕುತ್ತಿಗೆಯನ್ನು ಬಳಸಿರುವ ಟವೆಲ್, ಹೌದು! ತೀರಾ ಅನಿರೀಕ್ಷಿತ! ಇನ್ನು ಯಾವತ್ತೂ ಈ ಧ್ವನಿ ಕೇಳುತ್ತೇನೆಂದು ನಿರೀಕ್ಷಿಸಿಯೇ ಇರಲಿಲ್ಲ. ನನ್ನೊಳಗೆ ಲೆಕ್ಕವಿಲ್ಲದಷ್ಟು ತರಂಗಗಳು ಬಂದು ಬಡಿಯತೊಡಗಿದವು. ಭಯ, ಆಶ್ಚರ್ಯದಿಂದ ಹೊರಬರಲಾರದೆ ಚಡಪಡಿಸಿದೆ.

“ಲಿಲ್ಲೀ… ನಿನ್ನ ಬಿಟ್ಟಿರಲು ನನ್ನಿಂದಾಗದು. ತುಂಬಾ ಮಾತನಾಡುವುದಿದೆ, ನೀನಿಲ್ಲದೆ ನಾ ಬದುಕಲಾರೆ. ಬಾ…ನನ್ನೊಡನೆ… ಈಗಲೇ ಹೋಗುವಾ. ನಾನು ಹುಚ್ಚ ಎಂದು ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದರು. ನನಗೇನೂ ಆಗಿಲ್ಲ ನೋಡು… ಬಾ… ಎಲ್ಲರಿಗೂ ನೀನೇ ಹೇಳು.”

ಅವನ ಹತಾಶೆಯ ಅಂತರಂಗ ಪುಂಖಾನುಪುಂಖವಾಗಿ ಹೊರಬಂದು ಬಡಿಯುತ್ತಲೇ ಇದ್ದವು. ನೆನಪಿನ ಕಿಡಿ ಹೊತ್ತಿ ಆ ಸುರಿಮಳೆಯಲ್ಲೂ ಬೆವರಿದೆ. ತುಸು ಸಾವರಿಸಲು ಪ್ರಯತ್ನಿಸಿ “ರಾಮಾ… ನಾನೀಗ ಬರಲು ಸಾಧ್ಯವಿಲ್ಲ. ಡ್ಯೂಟಿಯಲ್ಲಿರುವುದನ್ನು ಅರ್ಥಮಾಡಿಕೊ… ದಯಮಾಡಿ ಈಗ ಹೋಗು, ಖಂಡಿತವಾಗಿಯೂ ಸಂಜೆ ಸಿಗುತ್ತೇನೆ. ಪ್ಲೀಸ್…” ಎಂದು ಗೋಗರೆದೆ. “ಸರಿ, ನಿನಗೆ ಬೇಸರವಾದರೆ ಈಗಲೇ ಹೋಗುವೆ, ನೀನೆಂದೂ ಸಂಕಟ ಪಡಬಾರದು… ಅದನ್ನು ನಾನು ಸಹಿಸಲಾರೆ. ಆದರೆ ನನಗೆ ನೀನು ಬೇಕು. ಇಲ್ಲವಾದರೆ ಮತ್ತೆ ಮತ್ತೆ ಬರುವೆ” ಎನ್ನುತ್ತ ಮನಸಿಲ್ಲದ ಮನಸಿನಿಂದ ತನ್ನ ವಯಸ್ಸಾದ ಛತ್ರಿಯನ್ನು ನೆಲಕ್ಕೆ ಊರುತ್ತಾ ನನ್ನನ್ನು ಮತ್ತೊಮ್ಮೆ ದಯನೀಯವಾಗಿ ನೋಡಿ ಸೋತ ಹೆಜ್ಜೆಯಲ್ಲೆ ಮರೆಯಾದ.

ಆ ದಿನ ಸಂಜೆವರೆಗೂ ಜೇನ್ನೊಣಗಳು ಮುತ್ತುತ್ತಿರುವಂತೆ ಭಾಸವಾಗಿ ವಿಪರೀತ ತಲೆ ನೋವಿನಿಂದ ಬೆಂಡಾಗಿ ಹೇಗೋ ಡ್ಯೂಟಿ ವೇಳೆ ಮುಗಿದು ತುಂತುರು ಮಳೆಯಲಿ ಮನೆ ಸೇರಿಕೊಂಡೆ. ಉಡುಗೆಯನ್ನೂ ಬದಲಾಯಿಸದೆ ಹಾಸಿಗೆಯಲ್ಲಿ ಕುಸಿದೆ. ತಲೆಯ ಹಿಂಭಾಗದಿಂದ ಸಿಡಿಯುವಂತಹ ನೋವು ಕೊರೆಯುತ್ತಿದೆ. ಹೊಟ್ಟೆಯೊಳಗಿನಿಂದ ಭಯದ ಕಾವು ಏರಿ, ಉಸಿರು ಗಟ್ಟಿ, ಒಂದಿಷ್ಟು ಗಾಳಿಗಾಗಿ ತಡಕಾಡಿದೆ. ಮೆಲ್ಲನೆದ್ದು ಆ ಕತ್ತಲೆ ಕೋಣೆಯೊಳಗೆ ಬೀಗ ಹಾಕಿ ಬಚ್ಚಿಟ್ಟಿದ್ದ ಟ್ರಂಕ್ ತೆರೆದು ಅದರೊಳಗೆ ತುಂಬಿಟ್ಟಿದ್ದ ಕಾಗದದ ರಾಶಿಯನ್ನು ಎದೆಗವಚಿಕೊಂಡೆ. ತನ್ನ ಮತ್ತು ರಾಮನ ಹೃದಯ ನಿವೇದನೆಗಳೂ, ಕನಸಿನ ಕಥೆಗಳು ಎಗ್ಗಿಲ್ಲದೆ ಆವರಿಸಿದವು.

ಆಗ ನನಗಿನ್ನೂ ಹದಿನೆಂಟು. ಸುಂದರವಾದ ನಿಸರ್ಗಧಾಮದ ಬಿದಿರು ಮುಂಡಗಳ ನಡುವೆ ಹರಿವ ಕಾವೇರಿ ನೀರನ್ನು ಬೊಗಸೆಯಲ್ಲಿ ತುಂಬಿ ಚೆಲ್ಲಾಟವಾಡುತ್ತಿದ್ದ ವಯಸ್ಸು. ಅಪ್ಪ ಅದೇ ನಿಸರ್ಗಧಾಮಕ್ಕೆ ಕಾವಲುಗಾರ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಉದ್ದವಾದ ತೂಗುಸೇತುವೆಯನ್ನು ದಾಟಿ ನಾನು ಕಾಲೇಜಿಗೆ ಹೋಗಬೇಕಿತ್ತು. ತೂಗುಸೇತುವೆಯನ್ನು ದಾಟುವುದೆಂದರೆ ನನಗೆ ತುಂಬಾ ಭಯ! ಪ್ರತಿದಿನ ಹೆದರಿಕೊಂಡೇ ಹೇಗ್ಹೇಗೋ ದಾಟಿ ಬದುಕಿದೆ ಬಡಜೀವ ಎಂದು ಓಡುತ್ತಿದ್ದೆ.

ಹಾಗೊಂದು ದಿನ ಸೇತುವೆಯ ಮಧ್ಯೆ ತಲುಪುತ್ತಿದ್ದಂತೆಯೇ ಸೇತುವೆಯನ್ನು ಯಾರೋ ಜೋರಾಗಿ ಕುಲುಕಿದಂತಾಗಿ ಸೇತುವೆಯ ಎರಡು ಬದಿಗೆ ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಹಿಡಿದು ಹೆದರಿ ಜೋರಾಗಿ ಕಿರುಚಿದೆ. ಅಲುಗಾಡಲೂ ಆಗದೆ ನಡುಗುತ್ತಾ ನಿಂತುಬಿಟ್ಟೆ. ಸ್ವಲ್ಪ ಹೊತ್ತಿನ ಬಳಿಕ ನಿಧಾನವಾಗಿ ಸೇತುವೆ ಯಥಾಸ್ಥಿತಿಗೆ ಬಂದು ನಿಂತಿತು. ಆಗ ಹಿಂದಿನಿಂದ ನಾಲಗೆಯಲ್ಲಿ ಲೊಟ್ಟೆ ಹೊಡೆದ ಶಬ್ಧ ಕೇಳಿ ತಿರುಗಿ ನೋಡಿದರೆ… ಪ್ರತಿದಿನ ತನ್ನನ್ನು ತಿನ್ನುವಂತೆ ನೋಡುತ್ತಿದ್ದ ಚಿಗುರು ಮೀಸೆಯ ಅವನೆ! ನಾನು ನಾಲಗೆಯಿಂದ ಅಣಕಿಸಿ ಮುಖ ವಕ್ರ ಮಾಡಿ ಅವನನ್ನೊಮ್ಮೆ ದುರುಗುಟ್ಟಿ ನೋಡಿ ಸಿಟ್ಟಲ್ಲಿ ಅಲ್ಲಿಂದ ಓಡಿದೆ.

ಹೀಗೆ ಮುಂದಿನ ಎಲ್ಲಾ ದಿನಗಳೂ ಕೂಡಾ ಆತನ ಒಂದಲ್ಲಾ ಒಂದು ಚೇಷ್ಟೆ ಇದ್ದೇ ಇರುತಿತ್ತು. ಹತ್ತಿ ಹಣ್ಣನ್ನು ಕಾಲಿಗೆ ಎಸೆದು ಹೆದರಿಸುವುದು, ಮರದ ಮೇಲೆ ಕುಳಿತು ನಾನು ಮರದ ಕೆಳಗೆ ತಲುಪಿದೊಡನೆ ರೆಂಬೆಗಳನ್ನು ಕುಲುಕಿ ಬೆಚ್ಚಿ ಬೀಳಿಸುವುದು, ಒಮ್ಮೆಲೆ ಹಲಸಿನ ಕಾಯಿ ಕಡಿದು ನೆಲಕ್ಕೆ ಬೀಳಿಸುವುದು, ಮರಕ್ಕೆ ತನ್ನ ಒಂದು ಕಾಲನ್ನೊರಗಿ ನಿಂತು ಜೋರಾಗಿ ಲೊಟ್ಟೆ ಹೊಡೆಯುವುದು ಹೀಗೆ ದಿನಾ ನನ್ನನ್ನು ಒಂದಿಲ್ಲೊಂದು ರೀತಿಯಲ್ಲಿ ಹೆದರಿಸಿ ಮಜಾ ತೆಗೆದುಕೊಳ್ಳುವುದು ಆತನ ದಿನಚರಿಯಾಗಿ ಬದಲಾಯಿತು. ಪ್ರತಿದಿನ ನಾನು ಸೇತುವೆಯಷ್ಟೇ ಅವನಿಗೂ ಹೆದರಿಕೊಂಡೇ ಕಾಲೇಜಿಗೆ ಹೋಗುವ ಪರಿಸ್ಥಿತಿ ಬಂತು.

ರಾಮಕೃಷ್ಣನೂ ನಿಸರ್ಗಧಾಮದ ಮತ್ತೊಂದು ವಿಭಾಗದ ಕಾವಲುಗಾರ. ಲುಂಗಿ, ಚೆಕ್ಸ್ ಶರ್ಟ್ ಹಾಗು ಕುತ್ತಿಗೆಯಲಿ ಆಲಸ್ಯವಾಗಿ ಸುತ್ತಿದ ಟವೆಲ್ ಇವನ ಮಾಮೂಲಿ ವೇಷ. ಆತ ಒಳ್ಳೆಯ ಈಜುಗಾರನೆಂದು ಯಾರಿಂದಲೋ ಕೇಳಿದ್ದೆ. ಅದೊಂದು ಶನಿವಾರ ಮಧ್ಯಾಹ್ನಕ್ಕೆ ಕಾಲೇಜು ಮುಗಿಸಿ ನಾನು ಮನೆಗೆ ವಾಪಾಸಾಗುತ್ತಿದ್ದಾಗ ಸೇತುವೆ ಮಧ್ಯೆ ತಲುಪುತ್ತಿದ್ದಂತೆಯೇ ಸೇತುವೆಯನ್ನು ತುಂಬಾ ಜೋರಾಗಿ ಕುಲುಕಿ ಬಿಟ್ಟ. ಸೇತುವೆ ಅಡಿ ಮೇಲಾಗುವಷ್ಟು ಭೀಕರವಾಗಿ ಕಂಪಿಸಿತು. ದಿಗಿಲುಗೊಂಡು ಚೀರಿದ ನಾನು ಕ್ಷಣ ಮಾತ್ರದಲ್ಲಿ ಅದ್ಹೇಗೋ ಹೊಳೆಯೊಳಗೆ! ತಕ್ಷಣ ಆತನು ನನ್ನನ್ನು ರಕ್ಷಿಸಲೆಂದು ಹೊಳೆಯೊಳಗೆ ಜಿಗಿದ. ಗಾಬರಿಯಿಂದ ನನ್ನನ್ನು ಎತ್ತಿಕೊಂಡು ದಡದಲ್ಲಿ ಮಲಗಿಸಿದ.

ನೀರು ಕುಡಿಯದಿದ್ದರೂ, ಆ ಅನಿರೀಕ್ಷಿತ ಘಟನೆಗೆ ಹೆದರಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಯಾರಾದರೂ ನೋಡಿಬಿಡುತ್ತಾರೆಂದು ಹೆದರಿದ ಆತ ತನ್ನ ತೋಳಲ್ಲಿ ನನ್ನನ್ನು ಎತ್ತಿಕೊಂಡು ಮರದ ಮೇಲಿನ ಆತನ ಅಟ್ಟಳಿಗೆಯ ಒಳಗೆ ಮಲಗಿಸಿದ. ತನ್ನ ಟವೆಲ್‌ನಿಂದ ನನಗೆ ಗಾಳಿ ಬೀಸಿ, ಮುಖಕ್ಕೆ ನೀರೆರಚಿದಾಗ ನಿಧಾನಕ್ಕೆ ಕಣ್ಣು ಬಿಟ್ಟೆ. ನಾನಿರುವ ಜಾಗವನ್ನು ನೋಡಿ ಒಮ್ಮೆಲೆ ಬೆಚ್ಚಿದೆ. ಎದ್ದೇಳಲು ಪ್ರಯತ್ನಿಸುತ್ತಿದ್ದಂತೆಯೇ ಹತ್ತಿರ ಬಂದ ಆತ ಕೈಮುಗಿದು “ತಪ್ಪಾಯಿತು, ಇನ್ನೊಮ್ಮೆಯೂ ಹೀಗೆ ಮಾಡಲ್ಲ ಕ್ಷಮಿಸಿಬಿಡಿ” ಎಂದು ಮುಜುಗರದಿಂದ ಹೇಳಿ ಹೊರ ನಡೆದ. ನಾನು ಮೆಲ್ಲನೆ ಅಲ್ಲಿಂದ ಎದ್ದೆ. ಮೈಗೆ ಅಂಟಿದ್ದ ಚೂಡಿದಾರ ಧಾರಾಳವಾಗಿ ನೀರು ಕಕ್ಕಿ ಅಲ್ಲೆಲ್ಲಾ ಹರಿಯುತ್ತಿತ್ತು. ಆ ಅಟ್ಟಳಿಗೆಯ ಒಳಗೆ ಒಮ್ಮೆ ನನ್ನ ದೃಷ್ಟಿ ಹರಿಯಿತು. ಅಲ್ಲಿ ಆವರಿಸಿದ್ದ ಬೆವರಿನ ವಾಸನೆ, ಮೇಲೆ ಒಂದು ಮೂಲೆಗೆ ಹಗ್ಗ ಕಟ್ಟಿ ನೇತುಹಾಕಿರುವ ಬಟ್ಟೆಗಳಿಂದ ಬರುವ ಜಿಗುಟು ವಾಸನೆ. ಮತ್ತೊಂದು ಮೂಲೆಯಲ್ಲಿ ಪುಟ್ಟ ಸ್ಟವ್. ಅದರ ಮೇಲೊಂದು ಪುಟಾಣಿ ಪಾತ್ರೆಯಲ್ಲಿ ಯಾವಾಗಲೋ ಮಾಡಿ ತೆರೆದಿಟ್ಟ ಅನ್ನ. ನಾನು ಆತಂಕದಿಂದಲೇ ಕೆಳಗೆ ಇಳಿಯುವುದು ಹೇಗೆಂದು ಬಗ್ಗಿ ನೋಡಿದೆ. ಮರದ ಮತ್ತೊಂದು ಕೊಂಬೆಯಲ್ಲಿ ಚಿಂತಾಮಗ್ನನಾಗಿ ಕುಳಿತಿದ್ದ ಆತ ನನ್ನ ನೋಡಿದೊಡನೆ ಹತ್ತಿರ ಬಂದ. ಯಾವ ಹಿಂಜರಿಕೆಯು ಇಲ್ಲದೆ, ನನ್ನನ್ನು ಹೆಗಲ ಮೇಲೆ ಎತ್ತಿಕೊಂಡು ಮರದಿಂದ ಇಳಿಸಿದ. “ಅನಾಥನಾದ ನಾನು ಸುಮ್ನೆ ತಮಾಷೆಗೆ…” ಎಂದು ಮಾತು ಮುಂದುವರೆಸದೆ ಅಲ್ಲೆ ತುಂಡರಿಸಿ, ನನ್ನ ಕೀಟಲೆಗಳನ್ನೆಲ್ಲಾ ಕ್ಷಮಿಸಿ ಬಿಡು ಎನ್ನುತ್ತಲೇ ತಲೆ ತಗ್ಗಿಸಿ ತಿರುಗಿ ನಡೆದ…

*****

ಗಂಡ ಬಾಗಿಲು ಬಡಿದಾಗಲೇ ನನಗೆ ಪರಿಸರ ಪ್ರಜ್ಞೆ ಮೂಡಿದ್ದು. ದಡಬಡನೆ ಎದ್ದು ಬಾಗಿಲು ತೆರೆದೆ. ನನ್ನ ಜೋಮು ಹಿಡಿದಿದ್ದ ಮುಖ ನೋಡಿ ಏನಾಯ್ತು? ಕೇಳಿದ. ವಿಪರೀತ ತಲೆನೋವು ಎಂದು ಮುಗಿಸುವ ಮೊದಲೆ ಅದು ಮಾಮೂಲಿ ತಾನೆ? ಹೊಸದೇನಾದರೂ ಇದ್ದರೆ ಹೇಳು ಕೇಳುವೆ. ಯಾವಾಗಲೂ ನಿಂದು ಇದ್ದದ್ದೆ. ಈ ನೀರಸವೂ ನನಗೆ ಅಷ್ಟೇ ಮಾಮೂಲಿಯಾಗಿತ್ತು. ಇನ್ನೂ ಅಡುಗೆ ಏನೂ ಮಾಡಿಲ್ವಾ? ಕೇಳುತ್ತಲೇ ಅಡುಗೆಕೋಣೆಗೆ ಹೋದ. ತಾನೇ ಕಾಫಿ ಮಾಡಿ ನನಗೂ ಒಂದು ಲೋಟ ಕೊಟ್ಟ. ನನಗೆ ಹಸಿವಿಲ್ಲ ರಾತ್ರಿ ಊಟ ಬೇಡ. ಸ್ವಲ್ಪ ರೆಸ್ಟ್ ಬೇಕು ಎಂದು ಮರು ಉತ್ತರಕ್ಕೆ ಕಾಯದೆ ಬಂದು ಮಲಗಿದೆ. ಅದೆಷ್ಟೋ ಹೊತ್ತಿಗೆ ಗಂಡ ಹತ್ತಿರ ಬಂದು ಮಲಗಿದ. ತನ್ನ ಮನಸ್ಸು ಮಾತ್ರ ನಾಗಾಲೋಟದ ಅಲೆಯಲ್ಲಿ ಬೆವರ ಮೂಡಿಸುತ್ತಲೇ ಇತ್ತು. ಎದ್ದು ಮೆಲ್ಲನೆ ಹೊರ ನಡೆದು ಜಗುಲಿಯ ಕಟ್ಟೆಯ ಮೇಲೆ ಕುಳಿತು ಗೋಡೆಗೆ ಒರಗಿದೆ. ಮೋಡದೊಳಗೆ ಚಂದ್ರ ಮರೆಯಾಗುತ್ತಿದ್ದಂತೆ ಕತ್ತಲಾವರಿಸುವುದು, ಮರಗಳ ನೆರಳು ಗೋಡೆಯ ಮೇಲೆ ಬಿದ್ದು ನರ್ತಿಸುವುದೂ, ಮತ್ತೆ ಬೆಳದಿಂಗಳ ಬೆಳಕು ಹೀಗೆ ಛದ್ಮವೇಷ ಸಾದರಪಡಿಸತ್ತಲೇ ಇತ್ತು. ಅದೆಷ್ಟು ಹೊತ್ತು ನೋಡಿದರೂ ಬೆಳಕಿನೊಂದಿಗೆ ಕಣ್ಣುಗಳು ಅದ್ಯಾಕೋ ಪಳಗುತ್ತಿಲ್ಲ. ತಿಮಿರದ ಧೂಳಲಿ ಅವಿತಿರುವ ಜೀವ ಶೂನ್ಯತೆಯನ್ನೇ ಬಯಸುತ್ತಿದೆ. ಕತ್ತಲೆಗೆ ಕಾವಲು ಕೂರುವುದಕ್ಕಾಗಿಯೇ ಅಜೀವ ಸದಸ್ಯತ್ವ ಪಡೆದವಳು ತಾನು. ಕತ್ತಲು ಅನುಮತಿ ಪಡೆಯದೆ ಆವೇಶದಿಂದಲೇ ನೆನಪುಗಳ ಸುಲಭ ಪ್ರಸವಕ್ಕೆ ಸ್ಪರ್ಧಿಸುತ್ತಿವೆ.
 

ಆ ಘಟನೆಯ ನಂತರ ಕಾಲೇಜಿಗೆ ಹೋಗುವ ದಾರಿಯಲೆಲ್ಲೂ ರಾಮಕೃಷ್ಣ ಸಿಕ್ಕಿರಲಿಲ್ಲ. ಬೇಕೆಂದೇ ನನ್ನಿಂದ ಮರೆಯಾಗುತ್ತಿದ್ದಾನೆಂಬುದು ನೋವು ತರಿಸಿತು. ನಾನೇಕೆ ಪ್ರತಿದಿನಾ ಅವನ ಭೇಟಿಯನ್ನು ನಿರೀಕ್ಷಿಸುತ್ತಿದ್ದೇನೆ? ನನ್ನ ಕಣ್ಣುಗಳು ಅವನ ಚೇಷ್ಠೆಯ ಅಮಲಿನ ಅಫೀಮಿಗೆ ದಾಸಿಯಾಯಿತೇ?

ಆ ದಿನ ನಿಸರ್ಗಧಾಮಕ್ಕೆ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಬಾಲಕನೊಬ್ಬ ಹೊಳೆಯಲ್ಲಿ ಈಜಾಡುತ್ತಿದ್ದಂತೆಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಅಲ್ಲಿದ್ದವರು ಎಷ್ಟು ಹೆಣಗಾಡಿದರೂ ಪ್ರಯೋಜನವಾಗಲಿಲ್ಲ. ಕ್ಷಣ ಕ್ಷಣವೂ ಜನಸಾಗರದ ಆಕ್ರಂದನ ನದಿಯ ಹರಿಯುವಿಕೆಗಿಂತ ತೀವ್ರವಾಗತೊಡಗಿತು. ಏನು ಮಾಡುವುದೆಂದು ದಾರಿಕಾಣದೆ ಅಸಹಾಯಕರಾಗಿ ದಿಗಿಲುಗೊಂಡರು. ಅವೆಲ್ಲದಕ್ಕೂ ಸಾಕ್ಷಿಯಾಗಿದ್ದ ರಾಮಕೃಷ್ಣ ಹೊಳೆಯೊಳಗೆ ಧುಮುಕಿದ. ಈಜುತ್ತಾ ಒಮ್ಮೊಮ್ಮೆ ಕಾಣುವ ಹಾಗೆ, ಮತ್ತೆ ಕಾಣದೆ ಹೊಳೆಯೊಳಗೆ ಎಲ್ಲೋ! ಕೊನೆಗೂ ಆತನಿಗೆ ಬಹುದೂರದಲ್ಲಿ ಬಾಲಕನ ಶವ ಸಿಕ್ಕಿತು. ಶವವನ್ನು ಹೊತ್ತೊಯ್ಯುತ್ತಾ ದಡ ಸೇರಿದ. ಕಾತುರದಿಂದ ಅಲ್ಲಿ ಕಾಯುತ್ತಿದ್ದ ಬಂಧುಗಳ ಮುಗಿಲ ಮುಟ್ಟುವ ಆಕ್ರಂದನದ ಮಧ್ಯೆಯೂ ಅದೆಷ್ಟೋ ದಿನದ ಬಳಿಕ ಕಂಡ ಅವನು ಹೆಣದ ವಾಸನೆಯನ್ನು ಅಂಟಿಸಿಕೊಂಡಿದ್ದರೂ ಅವನ ದೇಹದ ರೋಮಕೂಪಗಳು ನನ್ನೊಳಗೆ ಏನೇನೋ ಕಥೆ ಹೇಳಿ ತೇವಗೊಳಿಸಿತು. ಸಾಕ್ಷಾತ್ ನಾಯಕನಾಗಿ ಆತ ನನ್ನ ಮನಸ್ಸಿನಲ್ಲಿ ಸ್ಥಾನವನ್ನು ಆಕ್ರಮಿಸಿಬಿಟ್ಟ. ಅಧಿಕಾರಿಗಳ ಪ್ರಶಂಸೆಗೂ ಗುರಿಯಾದ. ನಿಸರ್ಗಧಾಮದಲ್ಲಿ ಅಂದಿನಿಂದ ರಾಮಕೃಷ್ಣನಿಗೆ ವಿಶೇಷ ಸ್ಥಾನಮಾನ ದೊರಕಿತು. ಆಶ್ಚರ್ಯವೆಂದರೇ ಎಲ್ಲರೂ ಅವನನ್ನು ಆದರದಿಂದ ಕೊಂಡಾಡಿ ಪ್ರಶಂಸಿಸುತ್ತಿದ್ದರೂ ಅವನಲ್ಲಿ ನಗು ಜಿನುಗಲೇ ಇಲ್ಲ. ಅದೇ ಗಾಂಭೀರ್ಯ! ಇದರಿಂದಲೇ ತಾನೇ ಅವನನ್ನು ನಾನು ಆರಾಧಿಸಲು ಪ್ರಾರಂಭಿಸಿದ್ದು! ಮಾತನಾಡಿಸಲು ತವಕಿಸಿದ್ದು. ಪ್ರೀತಿಸಲು ಹವಣಿಸಿದ್ದು.

ಆ ದಿನ ಕಾಲೇಜಿನಿಂದ ಮರಳುತ್ತಾ ಅವನ ಅಟ್ಟಳಿಗೆಯಿರುವ ಮರದ ಕೆಳಗೆ ಹೋಗಿ ನಿಂತೆ. ಮರದ ಕವಲುಕೊಂಬೆಯಲ್ಲಿ ತಲೆಯಿಟ್ಟು ಆತ ಮಲಗಿದ್ದ. ಮೇಲೆ ನೋಡುತ್ತಿದ್ದಂತೆಯೇ ಚಿಟ್ಟನೆ ಚೀರಿಬಿಟ್ಟೆ. ತಕ್ಷಣ ಕೆಳಗೆ ನೋಡಿದ. ಅವನ ಕಾಲ ಬಳಿ ಪುಟಾಣಿ ಹಸಿರು ಹಾವೊಂದು ಹರಿದಾಡುತ್ತಿರುವುದನ್ನು ತೋರಿಸಿದೆ. ಅವನು ಎದ್ದು ಮರದ ಅರ್ಧದಷ್ಟು ಇಳಿದು ನಂತರ ಅಲ್ಲಿಂದಲೇ ಕೆಳಗೆ ಜಿಗಿದು ಹತ್ತಿರ ಬಂದು, ಬಂದಿರುವ ಉದ್ದೇಶವೇನೆಂದು ಕೇಳುವಂತೆ ನನ್ನನ್ನು ದಿಟ್ಟಿಸಿ ನೋಡಿದ. ನಾನು ಅನುಮತಿ ಪಡೆಯದೆ ಅವನ ತೋಳಿಗೊರಗಿದ್ದೆ ತಡ ಆತ ನನ್ನನ್ನು ಎತ್ತಿಕೊಂಡು ತನ್ನ ಅಟ್ಟಳಿಗೆಯೊಳಗೆ ಇಳಿಸಿದ. ಗಂಭೀರ ಮುಖ ಹಾಗೂ ಅವನ ಮೈ ವಾಸನೆಯನ್ನು ಆಸ್ವಾದಿಸುತ್ತಾ ಮುತ್ತಿನ ಮುದ್ರೆಯೊತ್ತಿದೆ. ಅವನೆದೆಗೆ ನನ್ನನ್ನು ಒತ್ತಿ ಹಿಡಿದು ದೀರ್ಘ ಉಸಿರೊಂದನ್ನು ಹೊರಚೆಲ್ಲಿದ. ಅಲ್ಲೆ ಸ್ಟವ್‌ನಲ್ಲಿ ಬೇಯುತ್ತಿದ್ದ ಗಂಜಿ ಇಳಿಸಿ, ಕಾದ ಬಾಣಲೆಗೆ ಕೊಬ್ಬರಿ ಎಣ್ಣೆ ಹುಯ್ದು ಸೀಳಿದ ಈರುಳ್ಳಿ, ಹಸಿಮೆಣಸನ್ನು ಹಾಕಿ ತಿರುಗಿಸಿ ಅದಕ್ಕೆ ಒಣಮೀನನ್ನು ಸೇರಿಸಿ ಗರಿ ಗರಿ ಆಗುವಂತೆ ತಿರುಗಿಸಿ ಹುರಿದು ಎರಡು ತಟ್ಟೆಗಳಲ್ಲಿ ಗಂಜಿ, ಹುರಿದ ಒಣಮೀನು ಬಡಿಸಿಕೊಂಡು ಹರಟುತ್ತಾ ಊಟ ಮಾಡಿದೆವು. ಹೀಗೆ ಅದೆಷ್ಟು ಹಗಲುಗಳು! ತನ್ನಿಷ್ಟದಂತೆಯೇ ಕಿವಿಯ ಕೆಳಗೆ ಧಾರಾಳವಾಗಿ ಅವನ ಮುತ್ತುಗಳು ಮುತ್ತಿಲ್ಲವೇ? ಒಬ್ಬರನ್ನೊಬ್ಬರು ತಿನ್ನುತ್ತಾ ನಮ್ಮದೇ ಲೋಕದಲ್ಲಿ ಹಾರಾಡಿದೆವು. ಆ ಅಟ್ಟಳಿಗೆಯ ಪ್ರತಿಯೊಂದು ಮರದ ತುಂಡುಗಳು ನಮ್ಮ ಪ್ರೇಮದ ಕಥೆ ಹೆಣೆಯಲು ಪ್ರಾರಂಭಿಸಿದವು!

ಅಂದು ನನ್ನ ಕುತ್ತಿಗೆಗೆ ತನ್ನರೆಡು ಕೈಗಳನ್ನು ಸುತ್ತಿಕೊಂಡು ಗಂಭೀರವಾಗೆ ಹೇಳಿದ್ದ “ನೀ ಓದಿದವಳು, ನಾನು, ನನ್ನ ಹಿನ್ನೆಲೆಗಳು ನಿನಗೆ ಸರಿಹೊಂದಲ್ಲ… ಆದರೂ… ಎನ್ನುತ್ತಿದ್ದಂತೆಯೇ ರಾಮನ ಕೆನ್ನೆ ಒದ್ದೆಯಾಗಿತ್ತು. ಹೌದು! ಆತನು ಸಶಬ್ಧವಾಗಿ ಅಳುತ್ತಿದ್ದ. ಶ್! ಈ ತಂಪಾದ ಮಧ್ಯಾಹ್ನದಲ್ಲಿ ಅಪಶಕುನ ನುಡಿಯಬೇಡ! ಅವನ ತುಟಿಗಳಿಗೆ ಬೆರಳಿಟ್ಟು ನಂತರ ಆ ಒಣ ತುಟಿಗಳಿಗೆ ಮುತ್ತಿಕ್ಕಿದೆ.

ಅದಾದ ಮೇಲೆ ಇದ್ದಕ್ಕಿದ್ದಂತೆ ರಾಮಕೃಷ್ಣ ನಿಸರ್ಗಧಾಮದಿಂದಲೇ ನಾಪತ್ತೆಯಾದ. ಆ ಅನಿರೀಕ್ಷಿತ ಸಂಭವಕ್ಕೆ ನಾನು ಕುಸಿದುಹೋದೆ. ಪ್ರತಿದಿನ ಮರದ ಕೆಳಗೆ ಬಂದು ನಿಂತು, ಕೂಗಿದರೂ, ಹುಡುಕಿದರೂ ನಿಸರ್ಗಧಾಮದ ಮರ ಮರಗಳೂ… ಬಿದಿರು ಮುಂಡಗಳೂ… ಏಕೆ ಕಾವೇರಿಯೂ ಕೂಡಾ ತುಟಿ ತೆರೆಯಲೇ ಇಲ್ಲ. ತೂಗು ಸೇತುವೆಯೂ ಸದ್ದಿಲ್ಲದೆ ತಟಸ್ಥವಾಗಿಬಿಟ್ಟಿತ್ತು. ದಾರಿ ಕಾಣದೆ ಆಕಾಶದೆಡೆ ಮುಖ ಎತ್ತಿದೆ.

ಇಡೀ ಆಕಾಶಕ್ಕೆ ಮುಗಿಲು ಮುತ್ತಿದವು. ಬೆಳದಿಂಗಳು ನಗುತ್ತಿದ್ದ ರಾತ್ರಿಯಲ್ಲಿ ಚಂದ್ರನ ಕುತ್ತಿಗೆಯನ್ನು ಯಾರಾದರೂ ಹಿಚುಕಿದರೆ? ಬೆಳದಿಂಗಳೇ ಕತ್ತಲೆಯಲ್ಲಿ ಅವಿತು ಕೂತಿದೆಯೇ? ಉಸಿರಾಡಲು ಧೈರ್ಯವಿಲ್ಲ. ಬೆಳದಿಂಗಳು ಮರೆಯಾದ ನಿಸರ್ಗಧಾಮದೊಳಗೆಲ್ಲಾ ಭಯದಿಂದ ಕಣ್ಣಾಡಿಸಿದೆ. ಕತ್ತಲೆಯಲ್ಲಿ ಕಾಣದ ದಾರಿಯಲ್ಲೆ ಓಡಿ ಬಿಡಲೇ ಎಂದು ಕಾಡತೊಡಗಿತು.

ಮತ್ತೆಲ್ಲವೂ ವಿಧಿಯ ಲೀಲೆಯಂತೆ! ನಿತ್ಯ ಹೆಂಡದ ಹೊಂಡದಲ್ಲಿ ಮೀಯುತ್ತಿದ್ದ ಅಪ್ಪ ಅದರಲ್ಲೇ ಜೀವ ಕಳೆದ. ಅಪ್ಪನ ಹೊಡೆತದಿಂದ ಜಜ್ಜಿಹೋದ ಅಮ್ಮನ ದೇಹ ಕ್ಷೀಣಿಸಿತು. ಅಮ್ಮನ ಒತ್ತಾಯದಂತೆ ಮನಸ್ಸಿಲ್ಲದ ಮನಸ್ಸಿನಿಂದ ವ್ಯವಸ್ಥೆ ನಿರ್ಮಿಸಿದ ಹುದುಲಲ್ಲಿ ಮದುವೆಗೆ ಒಪ್ಪಿಕೊಂಡೆ. ಮದುವೆಯ ನಂತರ ಅಮ್ಮನೂ ಈ ಲೋಕ ತ್ಯಜಿಸಿದಳು. ಗಂಡನಿಗೆ ನನ್ನನ್ನು ಅರ್ಪಿಸಲು ನನ್ನಿಂದ ಆಗಲೇ ಇಲ್ಲ. ನನ್ನೊಳಗೆ ಮರಗಟ್ಟಿದ್ದ ಭಾವನೆಗಳನ್ನು, ಪ್ರೇಮವನ್ನೂ ಮನಸ್ಸಿನ ಕುಕ್ಕೆಯಲ್ಲಿ ಭದ್ರವಾಗಿ ಮುಚ್ಚಿಟ್ಟೆ. ಗಂಡನ ಬಯಕೆಗಳು ಅಪರೂಪಕೊಮ್ಮೆ ಬಲವಂತವಾಗಿ ಈಡೇರುತಿತ್ತು. ಹಲವೊಮ್ಮೆ ನಿಂದನೆಗೆ ಗುರಿಯಾದೆ. “ಭಾವನೆಗಳೇ ಇಲ್ಲದ ಮರದ ದಿಮ್ಮಿ ನೀನು! ನಿನಗೇನು ಅನಿಸುತ್ತಿಲ್ಲವೇ? ಅಥವಾ ಬೇರೆಯೇನಾದರೂ ಸಮಸ್ಯೆ ಇದೆಯೇ?” ಉಮ್ಮಳಿಸಿದ ಸಂಕಟಗಳಿಗೆ ಮೌನಮುದ್ರೆಯೊತ್ತಿದೆ.

*****

ಮೋಡ ಕವಿದ ಆ ಮಧ್ಯಾಹ್ನ ಆಸ್ಪತ್ರೆಯಲ್ಲಿ ರೋಗಿಗಳು ಕಡಿಮೆಯಾದ್ದರಿಂದ ಸ್ಪಲ್ಪ ಆರಾಮ ಇತ್ತು. ಮಳೆ ಸಣ್ಣದಾಗಿ ಸುರಿಯುತ್ತಲೇ ಇದೆ. ಪ್ರಯೋಗಾಲಯದ ಕಿಟಕಿಯಿಂದ ಮಳೆ ನೋಡುವುದೊಂದೇ ಜೀವಕ್ಕೆ ತುಸು ನೆಮ್ಮದಿ! ರಾಮಕೃಷ್ಣ ಕೈಯಲ್ಲಿ ವಯಸ್ಸಾದ ಛತ್ರಿ ಹಿಡಿದು ದೂರದಿಂದ ಸೋಲುವ ಹೆಜ್ಜೆಯಲ್ಲಿ ನನ್ನಡೆಗೆ ಬರುವುದನ್ನು ಕಂಡೆ. ಒಳ ಬಂದ ಅವನು ಛತ್ರಿ ಹೊರಗಿಟ್ಟು “ಲಿಲ್ಲೀ… ನನಗೆ ಹಸಿವಾಗುತ್ತಿದೆ ಏನಾದರೂ ತಿನ್ನಲು ಕೊಡು” ಎಂದು ಗೋಗರೆದ. ಆ ತಕ್ಷಣವೇ ಅವನನ್ನು ಕೂರಲು ಹೇಳಿ ಆಸ್ಪತ್ರೆಯ ಕ್ಯಾಂಟೀನ್‌ನಿಂದ ತಿಂಡಿ ತರಿಸಿಕೊಟ್ಟೆ. ಒಂದೇ ಸಮನೆ ತಿಂದು ಮುಗಿಸಿದ. ಮತ್ತೆ ದಯನೀಯವಾಗಿ ನನ್ನನ್ನು ನೋಡಿದ. ಹೌದು! ಇವನು ವಯಸ್ಸಾದಂತೆ ಕಾಣುತ್ತಿದ್ದಾನೆ. ಐದು ವರ್ಷಗಳು ಎಲ್ಲಿ ಮರೆಯಾಗಿದ್ದೆ? ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದೆ? ನನ್ನ ನೆನಪೇ ಆಗಲಿಲ್ಲವೇ ನಿನಗೆ? ಎಂದು ಕೇಳಬೇಕೆನಿಸಿದರೂ ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಈಗ ತನ್ನ ಬದುಕೇ ಬೇರೆ… ಮನೆ, ಗಂಡ. ನನ್ನ ಗಂಡನಿಗೆ ಈ ಕಥೆ ಗೊತ್ತಾದರೆ? ಭಯ, ಆತಂಕಗಳು ಮೈಮನಸನ್ನು ಆವರಿಸಿ ನಡುಗಲಾರಂಭಿಸಿತು. “ರಾಮಾ”… ಇಲ್ಲಿಂದ ಹೋಗು… ಯಾರಾದರೂ ನೋಡುತ್ತಾರೆ. “ಇಲ್ಲ, ನಾನು ನಿನ್ನ ಜೊತೆ ಮಾತನಾಡಬೇಕು”. ಹಠವಿತ್ತು ಆ ಧ್ವನಿಯಲ್ಲಿ.

ಅವನ ಎದೆಗೊರಗಿ ಬಿಕ್ಕಿ ಬಿಕ್ಕಿ ಅಳಬೇಕಿನಿಸಿತು. “ನಿನ್ನ ಅಪ್ಪ ನನ್ನನ್ನು ನಿಸರ್ಗಧಾಮದ ಕೆಲಸದಿಂದ ತೆಗೆಸಿದರು. ನನ್ನ ಚಿಕ್ಕಪ್ಪ ಬಂದು ಬಲವಂತವಾಗಿ ಊರಿಗೆ ಕರೆದುಕೊಂಡು ಹೋದರು. ನಿನ್ನ ನೋಡಬೇಕು, ಎಲ್ಲವನ್ನು ಹೇಳಬೇಕೆನ್ನುವಷ್ಟರಲ್ಲಿ ಬಿಡದೆ ಅವಸರ ಮಾಡಿದರು. ನಮ್ಮಿಬ್ಬರ ಸಂಬಂಧ ನಮಗರಿವಿಲ್ಲದೆ ಅಲ್ಲಿ ಎಲ್ಲರಿಗೂ ಗೊತ್ತಾಗಿತ್ತು. “ಅವಳು ಓದಿದ ಹುಡುಗಿ… ನೀನು ಅವಳ ಜೀವನ ಹಾಳು ಮಾಡಬೇಡ ಇಲ್ಲಿಂದ ಹೋಗಿಬಿಡು” ಎಂದು ಅಧಿಕಾರಿಗಳು ಬುದ್ಧಿ ಹೇಳಿ ಒತ್ತಾಯ ಮಾಡಿದರು. ಮತ್ತೆ ನನಗೆ ಏನಾಯಿತೋ ಚಿಕ್ಕಪ್ಪ ಮಾತ್ರ ನನ್ನನ್ನು ಆಗಾಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುತ್ತಾರೆ. ಅವರಿಗೆ ಹೇಳದೆಯೇ ನಿನ್ನನ್ನು ಕಾಣಲೇಬೇಕೆಂದು ಇಲ್ಲಿಗೆ ಓಡಿ ಬಂದು ಬಿಟ್ಟೆ.

ಆಗ ಸದಾ ಗಂಭೀರವಾಗಿರುತ್ತಿದ್ದ ರಾಮ ಈಗ ಮುಗ್ಧ ಮಗುವಿನಂತೆ ಅದೆಷ್ಟು ಮಾತನಾಡುತ್ತಲೇ ಇದ್ದಾನೆ. ತಲೆ ತಿರುಗಿ ಕುಸಿಯದಿರಲು ಪ್ರಯತ್ನಿಸಿದೆ.

“ಲಿಲ್ಲೀ… ನಾನು ನಿನ್ನ ಜೊತೆ ಬರುವೆ. ನನ್ನ ಬಿಟ್ಟು ಹೋಗಬೇಡ.” ಗೋಗರೆಯುತ್ತಲೇ ಇದ್ದಾನೆ. ಮನಸ್ಸು ಬಿಕ್ಕಿದರೂ ಹೇಗೋ ಕಷ್ಟದಿಂದ ಪುಸಲಾಯಿಸಿ ಅವನನ್ನು ಕಳುಹಿಸಿದೆ.

ಹೀಗೆ ದಿನಗಳು ಮುಂದುವರೆದಂತೆ ಆಸ್ಪತ್ರೆಯ ಎಲ್ಲರೂ ಅನುಮಾನದಿಂದ ನೋಡಲಾರಂಭಿಸಿದರು. ಆಸ್ಪತ್ರೆಗೆ ಬರಬೇಡ ಎಂದು ತಾಕೀತು ಮಾಡಿ ನಾನೀಗ ಬೇರೆಯವರ ಹೆಂಡತಿ ಎಂದು ಮನವರಿಕೆ ಮಾಡಲು ಅದೆಷ್ಟೋ ಭಾರಿ ಪ್ರಯತ್ನಿಸಿದೆ. ಸರಿ! ನಿನ್ನೊಂದಿಗೆ ಒಂದೇ ಒಂದು ದಿನ ಕಳೆದು ಹೋಗಿ ಬಿಡುವೆ… ನೀನು ಬರದಿದ್ದರೆ ನಾನೇ ನಿನ್ನ ಮನೆಗೆ ಬಂದು ಬಿಡುತ್ತೇನೆ ಎಂದು ಹಠ ಹಿಡಿದ. ಅಂದು ಸಂಜೆ ಬಂದೇ ಬರುವೆ ಎಂದು ವಿಧಿಯಿಲ್ಲದೆ ಅವನಿಗೆ ಮಾತು ಕೊಟ್ಟು ಕಳುಹಿಸಿದೆ.

ಸಂಜೆ ಡ್ಯೂಟಿ ಮುಗಿಸಿ ನೇರವಾಗಿ ನಿಸರ್ಗಧಾಮಕ್ಕೆ ಹೊರಟೆ. ಹಿಂದೆ ಹೆದರುತ್ತಿದ್ದ ತೂಗುಸೇತುವೆಯನ್ನು ಈಗ ಧೈರ್ಯವಾಗಿ ದಾಟಿದೆ. ತೇಗದ ಮರಗಳೆಲ್ಲಾ ಈಗ ದೊಡ್ಡ ದೊಡ್ಡ ಹೂಗೊಂಚಲು ತುಂಬಿ ಹಿಂದಿಗಿಂತ ಸುಂದರವಾಗಿತ್ತು. ಮರದಡಿ ತಲುಪುತ್ತಿದ್ದಂತೆಯೇ ಹಿಂದಿನಂತೆ ರಾಮಕೃಷ್ಣ ಮರದಿಂದ ಜಿಗಿದುಬಂದು ನನ್ನನ್ನು ಅಟ್ಟಳಿಗೆಗೆ ಎತ್ತಿಕೊಂಡೇ ಹೋಗಿ ಇಳಿಸಿದ. “ಲಿಲ್ಲೀ… ನೀನು ನನ್ನವಳು. ನನ್ನ ಬಿಟ್ಟು ಹೋಗಬೇಡ” ಎನ್ನುತ್ತಾ ನನ್ನ ಕತ್ತು ಬಳಸಿ ಅತ್ತ. ಒಮ್ಮೆ ಜೋರಾಗಿ ಬಿಕ್ಕಳಿಸಿ ಅತ್ತನೇ? ಮನದ ಮೂಲೆಯಲ್ಲಿ ಮುಚ್ಚಿಟ್ಟಿದ್ದ ಪ್ರೇಮದ ಕುಕ್ಕೆಯನ್ನು ಅವನಿಗಾಗಿ ತೆರೆದೆ. ಅವನನ್ನು ಬಿಗಿದಪ್ಪಿದೆ. ಪುಟ್ಟ ಮಗುವಿನಂತೆ ನನ್ನ ಮಡಿಲಲಿ ಮಲಗಿದ. ಅವನ ಕಣ್ಣೀರಿಂದ ನನ್ನ ಸೀರೆ ಒದ್ದೆಯಾಗುತಿದೆಯೇ? “ಹೇಯ್! ರಾಮಾ… ನಾನೆಂದೂ ನಿನ್ನವಳೆ…” ಎಂದು ಉಸುರಿದಾಗ ನನ್ನ ಕಿವಿಯ ಕೆಳಗೆ ಚುಂಬಿಸಿದ. ನನ್ನೊಳಗೆ ಮರಗಟ್ಟಿದ್ದ ಆಸೆಗಳಿಗೆಲ್ಲಾ ಗರಿಮೂಡಿದವು. ಅವನ ಆಲಿಂಗನದಲಿ… ಚುಂಬನದಲಿ ಕಾಮನ ಬಿಲ್ಲಿನ ಬಣ್ಣ ಕಂಡೆ. ರಾಮಾ… ರಾಮಾ… ಎಂದು ಪ್ರತಿ ಕ್ಷಣವೂ ಪ್ರೇಮೋಧ್ಗಾರದ ಮಳೆ ಸುರಿಸಿದೆ. ವಾಸ್ತವ ಬದುಕನ್ನು ಮರೆತ ಆ ರಾತ್ರಿ ನಮ್ಮದು ಮಾತ್ರವಾಗಿತ್ತು. ಅಂಗಗಳು ಜಿಗಿತುಕೊಂಡು ಹಿಮನದಿಯೊಳಗೆ ಮಡುಗಟ್ಟಿದ್ದ ನೀರೆಲ್ಲವೂ ಬಿಡುಗಡೆ ದೊರೆತು ಹೊರಚೆಲ್ಲಿ ಹರಿಯಲಾರಂಭಿಸಿತು. ಅವನೆದೆಯೊಳಗೆ ಹುದುಗಿ ಅವನಾಡಿದ ಮಾತುಗಳಿಗೆಲ್ಲಾ ಹೂಂ ಗುಟ್ಟುತ್ತಾ ಅವನೊಳಗೊಂದಾಗಿ ತಡರಾತ್ರಿಯಲ್ಲಿ ನಿದ್ದೆ ಆವರಿಸಿಬಿಟ್ಟಿತು.

ಸೂರ್ಯ ಮೇಲೇರಿ ಕಣ್ಣು ಕುಕ್ಕುವಷ್ಟು ಬೆಳಕು ಅಟ್ಟಳಿಗೆಯನ್ನು ತೂರಿದಾಗಲೇ ನನಗೆ ಎಚ್ಚರವಾಗಿದ್ದು! ಪ್ರಣಯ ಮಳೆಯಲಿ ಮಿಂದ ನನ್ನ ಬೆತ್ತಲೆ ದೇಹ ಎಂದಿಗಿಂತ ಹಗುರಾಗಿತ್ತು. ಮನದೊಳಗೆ ಅದೆಷ್ಟೋ ಹೊಸ ಪ್ರಥಮ ಪಲ್ಲವಗಳು ಅರಳಿದ್ದವು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಯನ್ನು ಸರಿಯಾಗಿ ಉಟ್ಟುಕೊಂಡು ಎದ್ದು ನೋಡಿದರೆ ಅಟ್ಟಳಿಗೆಯೊಳಗೆ ರಾಮಾ ಇರಲಿಲ್ಲ. ಮೆಲ್ಲನೆ ಹೊರಗೆ ಇಣುಕಿದೆ. ಅಲ್ಲೆಲ್ಲೂ ರಾಮ ಕಾಣುತ್ತಿಲ್ಲ… “ರಾಮಾ… ರಾಮಾ” ಏರುಧ್ವನಿಯಲ್ಲಿ ಜೋರಾಗಿ ಹಲವಷ್ಟು ಬಾರಿ ಕರೆದೆ. ಮತ್ತೆ ಅಳುತ್ತಾ… ಹೆದರಿಕೆಯಿಂದ ಕೂಗಿದೆ. ಆದರೆ ಆ ಹೆಸರು ನಿಸರ್ಗಧಾಮದೊಳಗೆಲ್ಲಾ ಗಿರಕಿ ಹೊಡೆಯಿತಲ್ಲದೆ ರಾಮ ಅಲ್ಲಿ ಎಲ್ಲೂ ಇರಲಿಲ್ಲ. ಹೆದರಿಕೆಯಿಂದ ಕೆಳಗೆ ನೋಡಿದೆ. ಮರದ ಬುಡದಿಂದ ಇರುವೆಗಳ ದಟ್ಟವಾದ ಸಾಲುಗಳು ತುರ್ತು ಕೆಲಸವಿರುವಂತೆ ವೇಗವಾಗಿ ಮೇಲೇರುತ್ತಿವೆ. ಹೆಣ ತಿನ್ನುವ ಇರುವೆಗಳಿವು. ಕಾವೇರಿಯತ್ತ ಗುಮಾನಿಯಿಂದ ನೋಡಿದೆ. ಮಂಜು ಮುಸುಕಿದ ಬಂಡೆ ಸಾಲುಗಳೊಳಗೆ ತಣ್ಣನೆ ಚೀರುತ್ತಾ ಹರಿಯುತ್ತಿದ್ದಾಳೆ. ಅಚಾನಕ್ಕಾಗಿ ನಾನದನ್ನು ಕಂಡು ಒಮ್ಮೆಲೆ ಜೋರಾಗಿ ಚೀರಿದೆ. ರಾಮನ ವಯಸ್ಸಾದ ಛತ್ರಿ ಮತ್ತು ಟವೆಲ್ ದಡದಲ್ಲಿ ಜಾಗ ಹಿಡಿದಿದ್ದವು.


ಕಥೆಗಳಲ್ಲಿ ಪ್ರೀತಿ, ಪ್ರಣಯ ಹಿಂದಿನಿಂದಲೂ ತೀರಾ ಸಾಮಾನ್ಯ ವಸ್ತುವೇ ಆದರೂ ಕೂಡಾ ಅದೇ ವಸ್ತುವನ್ನೇ ಕಥೆಗಾಗಿ ಇಲ್ಲಿ ನಾನು ಆಯ್ದುಕೊಂಡಿದ್ದೇನೆ.
‘ತೂಗುಸೇತುವೆ’ ಎನ್ನುವ ಶೀರ್ಷಿಕೆಯೇ ಕೊಡಗಿನ ಕುಶಾಲನಗರದ ನಿಸರ್ಗಧಾಮದಲ್ಲಿರುವ ತೂಗುಸೇತುವೆಯ ಚಿತ್ರಣವನ್ನು ಮನದ ಮುಂದೆ ತಂದು ನಿಲ್ಲಿಸುತ್ತದೆ. ಜೊತೆಗೆ ನನ್ನ ಆಸುಪಾಸಿನ ಚಿತ್ರಣಗಳೊಂದಿಗೆ ಕಲ್ಪನೆಯೂ ಸೇರಿ ತೂಗುಸೇತುವೆಯೆಂಬ ಕಥೆಯಾಗಿ ರೂಪುಗೊಂಡಿದೆ. ಅದರಲ್ಲಿ ತಾರುಣ್ಯದ ಆಕರ್ಷಣೆ, ಚೇಷ್ಠೆಗಳು ಇವನ್ನೆಲ್ಲಾ ನಾವೆಲ್ಲರೂ ಅನುಭವಿಸಿ ಬಂದಿರುವುದೇ ಆಗಿದ್ದರೂ ನನ್ನನ್ನು ಕಾಡುತ್ತಿರುವುದರಿಂದ ಕೆಲವನ್ನಾದರೂ ದಾಖಲಿಸಬೇಕೆನಿಸುವ ತುಡಿತವನ್ನು ಕಥೆಯೊಳಗೆ ತಂದಿದ್ದೇನೆ.
ಕಾವಲುಗಾರನಾದರೂ ಹೆಣ ಎತ್ತುವುದರಲ್ಲಿ ನಿಸ್ಸೀಮನಾದ ಗಂಭೀರ ವ್ಯಕ್ತಿತ್ವದ ‘ರಾಮಕೃಷ್ಣ’ನನ್ನು ನಾಯಕನಾಗಿಸಿ, ತೂಗುಸೇತುವೆ, ತೇಗ, ಅಟ್ಟಣಿಗೆ ಒಟ್ಟಾರೆ ಕುಶಾಲನಗರ ನಿಸರ್ಗಧಾಮದ ಸುತ್ತ ಹೆಣೆದುಕೊಂಡ ಈ ಕಥೆಯೇಕೋ ನನ್ನೊಳಗೂ ಆವರಿಸಿದೆ.
ಬರೆಯುತ್ತಾ ಹೋದಂತೆ ಚೌಕಟ್ಟು ಮೀರಿದ್ದೇನೇನೋ ಎಂದೆನಿಸಿದ್ದು ಇದೆ. ಆದರೂ ಬದುಕಿನ ವ್ಯವಸ್ಥೆಯಲ್ಲಿ ಎದುರಿಸಬೇಕಾದ ಕ್ಷಣಗಳಿಗೆ ಎದೆಯೊಡ್ಡಲು ಅನಿಔಾರ್ಯವೆಂದು ಇದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೇನೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Kavitha

    Super love story

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ