Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ಅಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ “ಒಂದು ಖಾಸಗಿ ಪತ್ರ” ನಿಮ್ಮ ಈ ಭಾನುವಾರದ ಓದಿಗೆ

ಮಹೇಶ,
ನಾನು ಪತ್ರ ಬರೆಯಲಿ ಎಂದು ನೀನು ಕಾದು ಕನವರಿಸಿ ಮುಗಿಸಿದ ಅಖಂಡ ಹದಿನೈದು ವರ್ಷಗಳ ನಂತರ ಈ ಮೊದಲ ಪತ್ರ ಬರೆಯುತ್ತಿದ್ದೇನೆ. ಸಂಭಾಳಿಸಿಕೊಂಡು ಓದು. ನೀನೀಗ ಗಜನೀಲಿ ಶಟ್ಲಿ ಮಾಡ್ತಾ ಓಂ ಬೀಚಲ್ಲಿ ಹೊಟೇಲು ಚಾಲೂ ಮಾಡಿದಾಗಿನಿಂದ ನಸೀಬ ತೆರೆದು ಊರ ಹಿರೀಕರಲ್ಲಿ ಒಬ್ಬನಾಗಿದ್ದಿ ಅಂತ ಗೊತ್ತು. ಇದು ನಾನಾಗಿ ವಿಚಾರಿಸಿ ತಿಳಿದದ್ದಲ್ಲ. ಊರು ಅಂದಮೇಲೆ ವರ್ಷಕ್ಕೊಮ್ಮೆ ಹೊಳೆ ದಾಟುತ್ತಿದ್ದಂತೆ ಬೇಕಾಗಿರಲಿ ಬೇಡವಾಗಿರಲಿ ಎಲ್ಲ ಕಿವಿ ಮೇಲೆ ಬೀಳುತ್ತಿರುತ್ತದೆ. ಮೊನ್ನೆ ತಿಮ್ಮಣ್ಣಪ್ಪನನ್ನು ಮಾತಾಡಿಸಿ ಬರಲು ಅಂತ ಹೊರಟಿದ್ದೆ. ಆಡುಕಟ್ಟಿ ಮುರ್ಕೀಲಿ ನೀ ಕಂಡೆ. ನಿನ್ನ ಗಾಡೀಲಿ ನಿನ್ನ ಹೆಂಡತಿ, ಮಗಳೊಂದಿಗೆ. ನಿನ್ನ ಮುಖ ಕಂಡ ಆ ಗಳಿಗೆಯಲ್ಲಿ ಇದುವರೆಗೂ ಅಸ್ಪಷ್ಟವಾಗಿ ಉಳಿದಿದ್ದ ನಿನ್ನ ವ್ಯಕ್ತಿತ್ವ ಅನಾಮತ್ತಾಗಿ ತೆರೆಯತೊಡಗಿತ್ತು. ನನ್ನ ಪ್ರಶ್ನೆಗಳಿಗೆ ನೀನು ಉತ್ತರಿಸಬೇಕೆಂಬ ಆಸೆಯಾಗಲಿ, ಭರವಸೆಯಾಗಲಿ ನನಗಿಲ್ಲ. ಆದರೆ ನಿನಗೆ ಹೇಳಲೇಬೇಕಾದ ಸಂಗತಿಗಳನ್ನು ಹತ್ತಿಕ್ಕಲಾಗದೆ ಬರೆಯುತ್ತಿದ್ದೇನೆ.

ನಿನ್ನ ಮಗಳಿಗೀಗ ಹನ್ನೊಂದೋ ಹನ್ನೆರಡೋ ಇದ್ದೀತು. ನಾನು ಅವಳಿಗಿಂತ ಒಂದು ವರ್ಷ ದೊಡ್ಡವಳಿರಬಹುದು. ಆಗ ನೀನು ಊರಿಡೀ ಟಾಂ ಟಾಂ ಮಾಡಿದ್ದಿ. ‘ನೀನು ನನ್ನನ್ನು ಪ್ರೀತಿಸುತ್ತಿ ಮತ್ತು ನಾನೂ ಕೂಡ’ ಪತ್ರ ಬರೆಯುತ್ತಿರುವ ಈ ಹೊತ್ತಲ್ಲೂ ನನ್ನಲ್ಲಿ ಹುಟ್ಟುತ್ತಿರುವ ಅದಮ್ಯ ಯಾತನೆಗೆ ಏನನ್ನಲಿ? ದೀಪಾವಳಿ ರಜೆಗೆ ಊರಿಗೆ ಬಂದ್ರೆ ಶಾಲು ಮೊದಲು ಮಾಡಿ ಎಲ್ಲ ಕೇಳೋರೆ. ‘ಹೌದೇನೆ?’ ಅಂತ. ಏನನ್ನಲಿ ನಾ? ‘ಕೊಡೆ ಹಿಡಿದದ್ದು ಖರೆ. ಬೇರೆಂಥ ಮಣ್ಣೂ ಇಲ್ಲ’ ಅಂದರೆ ಒಂದರಿಂದ ಒಂದನ್ನು ಬೇರ್ಪಡಿಸೋಕೆ ಯಾರೂ ಸಿದ್ಧರಿಲ್ಲ. ‘ಚಿಕ್ಕಪ್ಪನ ಮನೇಲಿ ಇರೋಕಾಗೊಲ್ಲ ದೊಡ್ಡ ಆಫೀಸರಾದ್ರೇನು. ಅಡಿಗೆ ಮಾಡೋ ಶ್ರೀಧರ ಗಂಜಿಗೆ ಒಣಮೆಣಸಿನಕಾಯಿ ಸುಟ್ಟು ಕೊಡ್ತಾನೆ. ‘ದಿನಾ ಬೆಳಿಗ್ಗೆ ಬ್ರೆಡ್ ತಿನ್ನೋಕೆ ಮನಸ್ಸು ಬರಲ್ಲ’, ‘ಕಾಮತ್ ಸರ್ ಕುರ್ಚಿ ಬಿಟ್ಟು ಏಳದೆ ಕಲಿಸುವ ಆಲ್‌ಜಿಬ್ರಾ ತಿಳಿಯೊಲ್ಲ’- ಇಂಥ ಯಾತನೆಯ ವರ್ತುಲದಲ್ಲಿ ನಾ ಹುಗಿದು ಹೋಗಿರ್ತಿದ್ದೆ. ಊರಿಗೆ ಬಂದರೆ ಅಲ್ಲೊಂದು ವಿಚಿತ್ರವೇ ಸೃಷ್ಟಿಯಾಗುತ್ತಿತ್ತು. ನಮ್ಮ ಅಜ್ಜ ಅಮ್ಮನ ಹೆಸರಿಗೆ ಹತ್ತುಗುಂಟೆ ಹಕ್ಕಲ ಕೊಟ್ಟಿದ್ದು. ನಮ್ಮನೆ ಪಾಯ ಹಾಕಿದ್ದು… ಗೇರು ಹಕ್ಕಲದಲ್ಲಿ ತೆಂಗಿನಮರ ಕಂಡ ಹಾಗೆಲ್ಲ ನಮ್ಮ ಮಾವಂದಿರ ತಲೆ ಕೆಡತೊಡಗಿದ್ದು… ‘ಹೆಣ್ಮಕ್ಕಳಿಗೆಂಥದೋ ಪಾಲು?’ ಅಂತ ಅಜ್ಜನ ಗುರಾಯಿಸಿದ್ದು… ಅಜ್ಜ ಹೆದರಿ ಐದು ಗುಂಟೆ ಅಂತ ಮತ್ತೊಂದು ವಿಲ್ ಬರೆಸಿದ್ದು… ಚಂದು ಮಾವ ಅಮ್ಮನಿಗೆ ಹೊಡೆದದ್ದು… ಜಗಳ ಜೂಟು… ಹೀಗೆ ಈ ಪರಿಸ್ಥಿತೀಲಿ ಊರಿಗೆ ಹೋದರೆ ಅರ್ಧಕ್ಕೆ ನಿಂತ ಮನೆಯ ಬಾಗಿಲಿಗೆ ಕೈಕೊಟ್ಟು ‘ಕಟ್ಟಿಗೆಯಿಲ್ಲ, ಸಿಮೆಂಟಿಲ್ಲ’ ಅಂತ ಅಪ್ಪಯ್ಯ ಹೇಳುವುದನ್ನೇ ತೆರೆದ ಬಾಯಿಗೆ ತುಂಬಿಕೊಂಡು ಬರುವುದೇ ಆಗಿಹೋಯ್ತು. ದಾರೀಲಿ ಸಿಗೋ ಮಾಮ-ಮಾಮಿ ಮಾಮನ ಮಕ್ಕಳ ಹತ್ತಿರ ನಗಬೇಕೋ ಬೇಡವೋ, ಮಾತಾಡಬೇಕೋ ಬೇಡವೋ ಅನ್ನೋ ದಿಗಿಲಿನ ಉಗುಳು ನುಂಗುವ ದಿನಗಳಲ್ಲಿ ನಿನ್ನ ಪುರಾಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಾಧ್ಯವಾಗಲಿಲ್ಲ.

ನಾನು ನಿನ್ನನ್ನು ಪ್ರೀತಿಸುತ್ತೀನಿ ಅಂತ ಊರೆಲ್ಲ ಗಬ್ಬು ಎಬ್ಬಿಸಿ ಎರಡು ಪ್ರಸಂಗ ಹೇಳುತ್ತಿದ್ದಿಯಂತೆ. ಅವೆರಡೂ ಖರೆನೂ ಆಗಿದ್ದವು. ನಾನು ಯಲ್ಲಾಪುರದ ಕಾಕನ ಮನೇಲಿದ್ದು ಎಂಟನೇತ್ತೆ ಕಲೀತಿದ್ದ ಒಂದು ಬೆಳಗು ತಾರೀಲಿ ಬಸ್ಸಿಗೆ ಕಾಯ್ತಾ ಇದ್ದಾಗ ನೀ ನನ್ನ ಬಳಿ ಬಂದೆ. ನಮ್ಮ ಶಾಮಣ್ಣನನ್ನು ಕೇಳಿದ್ದೇನೆಂದು ಹೇಳು ಎಂದೆ. ‘ಒಂದ್ನಿಮಿಷ ಪೆನ್ನು ತಾ ಮಾರಾಯ್ತಿ’ ಎಂದವನು ನಿನ್ನ ನೋಟಬುಕ್ಕಿನಲ್ಲಿ ಅದೇನೋ ಬರೆದು ಪೆನ್ನು ಹಿಂತಿರುಗಿಸಿದೆ ಕೂಡ. ಎರಡನೆಯದು ಅದೇ ವರ್ಷ ಚೌತಿ ಹಬ್ಬಕ್ಕೆಂದು ಊರಿಗೆ ಬರ್ತಿರೋವಾಗ ಮಬ್ಬಾಗಿತ್ತು. ದೋಣಿ ತಾಡಿದಾಗ ಮಳೆ ಹನಿಸ್ತಿತ್ತು. ಬೇಗ ಬೇಗ ಮನೆ ಕಡೆ ಹೊರಟ ನನ್ನನ್ನು ನೀ ‘ನಿಲ್ಲು’ ಎಂದೆ. ‘ಸೈಕಲ್ ಪಂಚರ್ ಆಗಿದೆ. ಮಹಮ್ಮದನ ಅಂಗಡಿಯವರೆಗೆ ಒಂಚೂರು ಕೊಡೆ ಹಿಡಿ’ ಅಂದೆ. ತಾರಿ ಬಾಗಿಲಿಂದ ಮಹಮ್ಮದನ ಸೈಕಲ್ ಅಂಗಡಿಯವರೆಗೆ ಸೈಕಲ್ಲಿನ ಆಚೆ ನೀನು, ಈಚೆ ನಾನು. ಮೂರು ನಿಮಿಷದ ದಾರಿ. ನಾ ಕೈಯೆತ್ತಿ ಕೊಡೆ ಹಿಡಿದದ್ದು ಖರೆ. ನನಗೆ ತಿಳಿಯಲಿಲ್ಲ. ಹದಿಮೂರು ವರ್ಷದ ಹುಡುಗಿಗೆ ಮಾತಾಡಿಸಿದವರೊಡನೆ ಮಾತಾಡೋದು, ಪೆನ್ನು ಕೊಡೋದು, ಹತ್ಹೆಜ್ಜೆ ಕೊಡೆ ಹಿಡಿಯೋದು ತಪ್ಪು ಅಂತ ಗೊತ್ತಾಗಲಿಲ್ಲ ಮಾರಾಯ! ನಿನ್ನ ತಮ್ಮ ಸುಧಾಕರ ನಾನೂ ಜೊತೆಯವರು. ಅವನನ್ನು ಶಾಲೆಗೆ ರೆಡಿಮಾಡಿ ಕೈ ಹಿಡ್ದು ದೋಣಿ ಹತ್ತಿಸಿ ಬಸ್ಸಲ್ಲಿ ಸೀಟು ಹಿಡ್ದುಕೊಟ್ಟು ಹೈಸ್ಕೂಲಿಗೆ ಕಳಿಸ್ತಿದ್ದೆ ಅಲ್ಲ? ಅವನದೇ ವಯಸ್ಸಿನ ಇನ್ನೂ ದೊಡ್ಡವಳೂ ಆಗಿರದ ನನ್ನನ್ನು ನಿನ್ನ ಪ್ರಣಯಿನಿಯನ್ನಾಗಿ ನಿರೂಪಿಸಿದೆಯಲ್ಲ. ಭೇಷ್ ಅನ್ನಬೇಕಯ್ಯ ನಿನಗೆ. ಆಗಾಗ ಅನಾಮಧೇಯ ಗ್ರೀಟಿಂಗ್ಸ್ ಕಳಿಸ್ತಿದ್ದೆ ಅನ್ನೋದು ಬಿಟ್ಟರೆ ಬೇರೆ ಉಪದ್ರ ಕೊಡದ ನೀನು ಹಿಂದಿನಿಂದ ಏನೇನೋ ಆಡಿಕೊಳ್ತಿದ್ದೆಯಂತೆ. ನಿನ್ನ ತಮ್ಮ ಸುಧಾಕರ ಎಸ್.ಎಸ್.ಎಲ್.ಸಿ.ಯಲ್ಲಿ ಒಂದು ರ‍್ಯಾಂಕು ಬರಲೇಬೇಕೆಂದು ಹಟತೊಟ್ಟು ಓದಿಸಿದ್ದಿಯಂತೆ. ಅಂವ ಪರೀಕ್ಷೆಗೆ ಕೂಡೋಕ್ಕೆ ಹೆದರಿ ಈಗ ಪೂರಾ ಅಂಗಡಿ ಶೆಟ್ಟಿಯಾಗಿ ತಕ್ಕಡೀಲಿ ದಾನಿ ತೂಗ್ತಿದಾನಂತೆ. ಆ ಮಾತು ಬೇರೆ. ಯಾಕೆ ಹೇಳಿದೆ ಅಂದ್ರೆ, ನನ್ನ ಪ್ರೀತಿಸ್ತೀನಿ ಅಂತ ಪುಂಗಿ ಬಿಡ್ತಿದ್ದ ನೀನು ನನ್ನ ಪರೀಕ್ಷೆಗೆ ಎರಡು ಮೂರು ತಿಂಗಳಿದ್ದಾಗ ಯಲ್ಲಾಪುರದ ಮನೆ ಮುಂದೆ ಸರ್ಕೀಟು ಹೊಡಿತೊಡಗಿದೆ. ಕಮಲಕ್ಕ ‘ಏನೇ?’ಎಂದಳು. ಶಾಮಣ್ಣ ಕೆಕ್ಕರಿಸಿ ನೋಡತೊಡಗಿದ್ದ. ಕಾಕಗೆ ಸುದ್ದಿ ತಿಳೀತು. ‘ತಿನ್ನೂಕೆ ಕೂಳಿಲ್ದೆ ಬಂದು ಬಿದ್ದಿರೋ ಭೋಸುಡಿ ದಂಧಿ ಮಾಡ್ತಿಯೇನೆ? ತಿಂಡಿಯಿದ್ದರೆ ಬಾರೆ ನನ್ನ ಕೂಡೆ…’ ಅಂತೆಲ್ಲ ಎಲ್ಲರೆದುರೇ ಕುಡಿದು ಮತ್ತನಾಗಿದ್ದ ಕಾಕ ಒದರಾಡಿದ. ಈ ಮಾತಿನ ಒಂದೊಂದು ಶಬ್ದದ ಅರ್ಥ ಮರೆಯಲು ಎಷ್ಟೆಲ್ಲ ವರ್ಷ ವಿಲಿವಿಲಿಗುಟ್ಟಿದೆ!

ಏನಿತ್ತೋ ನಿನ್ನ ಹಿಂದೆ! ನಿನಗೆ ಮಾತ್ರ ಗೊತ್ತು. ಏಳನೆತ್ತೆಯಲ್ಲಿ ಸುಧಾಕರಂಗೆ ಅಭಿಮನ್ಯು ಪಾರ್ಟು ಕೊಡಿ ಅಂದ್ರೂ ಹಿತ್ಲಮಕ್ಕಿಯ ಭಾಗ್ವತ ನಾರಾಣಣ್ಣ ನನ್ನ ಕೈಲಿ ಮಾಡಿಸ್ದ ಅಂತಾನಾ? ಲಾಗಾಯ್ತಿನಿಂದ ಬಂದ ನಿಮ್ಮ ಹಳಗನ ಗದ್ದೆಯ ಗೇಣೀ ಭೂಮಿ ಅಪ್ಪಯ್ಯನದಾಯ್ತು ಅಂತಾನಾ? ಹೆಣ್ಮಕ್ಕಳೆಲ್ಲ ಗೆಜ್ಜೆ ಕಟ್ಟಿ ಕುಣಿದು ಊರ ಮರ್ಯಾದೆ ತೆಗೆದ್ರು ಅಂತ ನಿಮ್ಮಪ್ಪ ತಾರಿಬಾಗ್ಲಲ್ಲಿ ತಾರೀಫು ತಗದಾಗ – ಅಬ್ದುಲ್ ಮಾಸ್ತರು, ಹೊನ್ನಯ್ಯಣ್ಣ, ಗಣಪ ಮಾಸ್ತರೆಲ್ಲ ‘ಯಾವ ಕಾಲದಾಗವ್ರಿ ಗಾಂವಕರ‍್ರೆ’ ಅಂತ ಬಾಯ್ಮುಚ್ಚಿಸಿದರು ಅಂತಾನಾ? ಖರೆ ಸಂಗ್ತಿ ನಿನಗೇ ಗೊತ್ತು.

ಯಲ್ಲಾಪುರ ಬೀದೀಲಿ ನೀ ರೌಂಡ್ ಸುತ್ತಿದ ಮಾತ್ರಕ್ಕೆ ನಾ ನಿನ್ನ ನಂಬ್ತೀನಿ ಅಂತ ನೀ ತಿಳಿದಿಯಲ್ಲ! ನಿನ್ನ ಮಾತು ಎಷ್ಟಿತ್ತೆಂದರೆ ನಾ ಖಂಡಿತ ಬಲೆ ಬೀಳ್ತೀನಿ ಅಂತ ನೀನೇ ನಂಬುವಷ್ಟು! ಕೇಳು ಮಾರಾಯ, ಹೆಣ್ಮಕ್ಕಳಿಗೆ ಲೋಕ ಬೇರೇನೇ ಕಾಣ್ತದೆ. ಯಲ್ಲಾಪುರದ ನಮ್ಮನೆ ಮುಂದಿನ ಬಯಲಲ್ಲೊಬ್ಬಳು ಹುಚ್ಚಿಯಿದ್ದಳಲ್ಲ- ಅವಳೇ ಸಂಭ್ರಮ ಹೊಟೇಲಿನಲ್ಲಿ ಬಿಸಾಕಿದ್ದನ್ನು ತಿಂದು ಪ್ಲಾಸ್ಟಿಕ್ ಮತ್ತು ಕಾಗದದ ಟೆಂಟ ಕಟ್ಟಿಕೊಂಡು ಮೈಗೆ ಅದನ್ನೇ ಮೆತ್ತಿಕೊಂಡು ಹಾಡುತ್ತ ಗುನುಗುತ್ತ ಕುಳಿತಿರುತ್ತಿದ್ದಳಲ್ಲ. ನೀ ಕಂಡಿರುತ್ತಿ ಅವಳನ್ನ. ಆದರೆ ಪೂರಾ ಕಾಣೋ ಕಸು ನಿಂಗಿಲ್ಲ ಅಂತ ವಿವರಿಸಿದೆ. ಅವಳು ಹಗಲಿಡೀ ತನ್ನನ್ನು ಅಲ್ಲಿಳಿಸಿ ಬಾರದೆ ಹೋದ ಪ್ರಿಯತಮನಿಗಾಗಿ ಉತ್ಸಾಹದಿಂದ ಕಾದಿರುತ್ತಿದ್ದಳು, ಎಂದೂ ಬರದವನಿಗಾಗಿ ಎಷ್ಟೋ ವಸಂತಗಳಿಂದ. ರಾತ್ರಿ ವಿಕಾರ ದನಿಯಿಂದ ಚೀರುತ್ತಿದ್ದಳು. ಆ ದನಿ ಕತ್ತಲನ್ನು ಸೀಳಿ ಸೀಳಿ ಒಗೆಯುತ್ತಿತ್ತು. ಕಿಟಕಿಯ ಸರಳುಗಳಲ್ಲಿ ಕಂಪೌಂಡಿನ ತುದಿ ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಬರೀ ಕವ್ವನೆ ಕತ್ತಲು. ಹೊಟ್ಟೆಯೊಳಗಿಂದ ಚಳ್ಳನೆ ನಡುಕ ಹುಟ್ಟಿಸುವ ಆ ದನಿಗೆ ನಾನೆಷ್ಟು ಕಾಯುತ್ತಿದ್ದೆನೆಂದರೆ, ಅಲ್ಲಿಯವರೆಗೂ ನನ್ನ ಹೋಂವರ್ಕ್ ಮುಗಿಯುತ್ತಿರಲಿಲ್ಲ. ಒಂದು ದಿನ ತಿಳೀತು. ರಾತ್ರಿ ಅವಳ ಪ್ರಿಯಕರನಂಥೋರು ಬಯಲಲ್ಲಿ ನಿಲ್ಲಿಸಿದ ಟ್ರಕ್ಕುಗಳಿಂದ ಇಳಿಯುತ್ತಾರೆ. ಅವಳು ‘ಛೋಡದೋ ಮುಝೆ’ ಎಂದು ಚೀರುತ್ತಾಳೆ. ಬೆಳ್ಳಂ ಬೆಳಿಗ್ಗೆ ಲೋಕ ಶಾಂತವಾಗಿ ಕಣ್ತೆರೆವ ಹೊತ್ತಲ್ಲಿ ನಿಲ್ಲಿಸಿದ ಟ್ರಕ್ಕುಗಳು ಚಲಿಸುತ್ತವೆ. ಅವುಗಳ ಕಾರ್ಬನ್ ಹುಚ್ಚಿಯ ಮುಖಕ್ಕೆ ಅಪ್ಪಳಿಸುವಾಗ ಬಯ್ದುಕೊಳ್ಳುತ್ತ ಕೆರೆಯಲ್ಲಿ, ಕೈ ಬೋರ್‌ನಲ್ಲಿ ಮೈ ತೊಳೆದು ಬರುತ್ತಾಳೆ. ಎಂಥದೋ ಬಣ್ಣದ ಹಾಳೆ ಚೂರನ್ನು ಹಣೆಗೆ ಅಂಟಿಸಿಕೊಂಡು ಗಂಧವತಿ ಪೃಥಿವಿಯಂತೆ ಮುಗುಳ್ನಗುತ್ತಾಳೆ. ದಿನವೂ ಅವಳ ಸ್ಥಿತಿಯನ್ನು ನೋಡುತ್ತಿದ್ದ ನಾನು ‘ಕೊಡೆ ಹಿಡಿ ಅಂದೊಡನೆ ಕೊಡೆ ಹಿಡಿವ’ ಆ ಮಳ್ಳಿಯಾಗಿ ಉಳಿದಿರಲಿಲ್ಲ. ಒಂದಂತೂ ಸತ್ಯ. ಈ ಚಕ್ರಬಂಧದಲ್ಲಿ ನೀ ಪೂರಾ ಸೋಲಲಿಲ್ಲ. ನಾನು ಎಲ್ಲೆಲ್ಲಿ ಪಾರ್ಟು ಮಾಡ್ತಿದ್ದೆನೋ ಅಲ್ಲೆಲ್ಲ ನೀ ಸ್ಟೇಜಿನ ಬಾಜೂ ಹಾಜರಾಗ್ತಿದ್ದೆ. ಒಂದೆರಡು ಸರ್ತಿ ಅದು ನಿನ್ನ ಪ್ರೀತಿಯ ರೀತಿ ಅಂದುಕೊಂಡಿದ್ದೆ. ಇನ್ನು ಕೆಲಸರ್ತಿ “ಇದೆಂಥ ಶನಿಯಪ್ಪಾ” ಎಂದು ಕಂಗಾಲಾಗಿದ್ದೆ. ಎರಡೂ ಹೊತ್ತಲ್ಲೂ ಪರಿಣಾಮ ಒಂದೇ ಆಗಿರ್ತಿತ್ತು. ಪಾತ್ರದೊಳಗೆ ಕರಗಿಬಿಡೋ ಮೇಣದಂತಿದ್ದ ನನ್ನ ಮನಸ್ಸು ನಿನ್ನ ಕಂಡೊಡನೆ ತಣ್ಣೀರು ಮುಟ್ಟಿದಂತೆ ಗಟ್ಟಿಯಾಗುತ್ತಿತ್ತು. ಮಂದಿಯೆಲ್ಲ ಹೊಗಳಿದರೂ ಮನಸ್ಸು ಮಾತ್ರ ಸಮಾಧಾನವಾಗುತ್ತಿರಲಿಲ್ಲ. ಅಪ್ಪಯ್ಯ ಬಹಳ ಅಸ್ವಸ್ಥನಂತೆ ಮುಖ ಸಿಂಡರಿಸಿಕೊಂಡಿರುತ್ತಿದ್ದ. ಎಣ್ಣೆ ಬಟ್ಟೆ ಮಾಡಿ ಮುಖದ ಬಣ್ಣ-ಬಿಂಗು ಒರೆಸುವ ಅಮ್ಮ ಸಣ್ಣಗೆ ಹಲ್ಲು ಕಡೀತಾ ಗಸಗಸ ತಿಕ್ಕಿಬಿಡುತ್ತಿದ್ದಳು. ಚರ್ಮ ಕಿತ್ತು ಬಂದಂತೆ ಉರಿ ಉರಿ. ಕಣ್ಣೀರು ಕಲ್ಲಾಗಿ ಮನಸ್ಸು ಬಿರೀತಿತ್ತು. ಐದಾರು ತಿಂಗಳು ‘ಆಟ’ ಕಲಿತು ಪಾರ್ಟು ಮಾಡಿದ ನನ್ನ ಶ್ರಮದ ಫಲ, ನೆಮ್ಮದಿಯ ಹುಡುಕಾಟವನ್ನು ಕಸಕ್ಕನೆ ಉಜ್ಜಿ ಹೊಸಕಿ ಹಾಕಿ ಬಿಡುತ್ತಿದ್ದಿಯಲ್ಲ! ಅದಕ್ಕೇ ಹೇಳಿದ್ದು. ನೀನು ಪೂರಾ ಸೋಲಲಿಲ್ಲ. ಆದರೆ ಗೆಲ್ಲಲೂ ಇಲ್ಲ.

ನಮ್ಮ ಚಿಕ್ಕಪ್ಪನ ಅವತಾರಗಳು ನಿಂಗೂ ಗೊತ್ತಿರಬಹುದು. ದೊಡ್ಡವರ ಬಗ್ಗೆ ಜನ ಹಾಗೆಲ್ಲ ಮಾತಾಡಿಕೊಳ್ಳುವುದಿಲ್ಲ. ಬೇಲೇಕೇರಿ ಅಂಬುಜಕ್ಕ ಗೊತ್ತಲ್ಲ (ಅವಳೀಗ ಬೆಂಗಳೂರಿನ ಕೆ.ಎಫ್.ಸಿ.ಯಲ್ಲಿ ದೊಡ್ಡ ಆಫೀಸರಳಂತೆ) ಕೆಲ ತಿಂಗಳು ಅಂಬುಜಕ್ಕ ಕಾಕನೊಟ್ಟಿಗೆ ಊರೂರು ಸುತ್ತಿದ್ದಳಂತೆ. ಮದ್ವೆಯಾಗ್ತೀನಿ ಅಂತ ಧರ್ಮಸ್ಥಳದ ಮಂಜುನಾಥನ ಮುಂದೆ ಪ್ರಮಾಣ ಮಾಡಿದರೆ ನಂಬದಿರ್ತಾಳೆಯೇ? ಇಷ್ಟು ಸಣ್ಣ ಅಪನಂಬಿಗೆ ಹಿಡಿದು ಪೊಲೀಸ್ ಆಫೀಸರ್ ಗಂಡನ್ನ ಕಳೆದುಕೊಳ್ಳಲಾಗ್ತದೆಯೇ? ಅಂಬುಜಕ್ಕ ಕಾಕನ್ನ ನಂಬಿ ಧರ್ಮಸ್ಥಳದಿಂದ ಬರುವಾಗ ಬಸಿರು ಹೊತ್ತೇ ಬಂದಳು. ಬಸಿರೊಟ್ಟೆ ಹಿಡಿದು ದಿನಾ ಮನೆ ಬಾಗ್ಲು ಎಡತಾಕಿ ‘ನನ್ನ ಕೈ ಬಿಡಬೇಡ್ವೋ’ ಅಂತ ಬೇಡುವಾಗ ನಾ ಅಲ್ಲೇ ಮೂಲೆಯಲ್ಲಿರುತ್ತಿದ್ದಡ. ಒಂದಿನ ‘ಭೋಸಡಿ, ಆಫೀಸರ್ ಹತ್ರ ಹೇಳ್ತಿಯೇನೇ’ ಅಂತ ಬೆಲ್ಟ್ ತಗೊಂಡು ಬಾಸುಂಡೆ ಬರೋ ಹಾಗೆ ಬಡಿದು ಕಳಿಸುವಾಗ ಶಾಲೆಯಿಂದ ಬಂದಿದ್ದ ನಾನು ಥರಗುಟ್ಟುತ್ತ ಅವಳ ಅಳುವಿಗೆ ಸಾಕ್ಷಿಯಾಗಿದ್ದೆ. ಒಂದು ಮಟಮಟ ಮಧ್ಯಾಹ್ನ ಕಾಕ ಇಲ್ಲದ್ದನ್ನು ನೋಡಿ ಬಂದ ಅಂಬುಜಕ್ಕ ಒಂದೊಂದು ರೂಪಾಯಿ ನಾಣ್ಯದ 303 ರೂಪಾಯಿಯ ಗಂಟನ್ನು ನನ್ನ ಕೈಲಿಟ್ಟಳು. “ಹಿಡಿ ಮಗಾ, ಇದ್ನ ಆ ಭೋಸಡಿ ಮಗ್ಗೇ ಕುಡ. ನಾ ಬತ್ತಿ. ಊರಲ್ಲಿ ಸತ್ರೂ ಮರ್ಯಾದಿಲ್ಲ. ಇದ್ರೂ ಮರ್ಯಾದಿಲ್ಲ. ಹೋತಿ. ಎಲ್ಲಾರೂ ಹೋತಿ. ಇವ್ನ ಹೆಸ್ರಲೆ ಸತ್ರೆ ನನ್ನ ಹೆಣಾನೂ ಬೇಯಾ” ಅಂತ ದರದರ ಹೋದಳು. ವಯಕ್ಕನೆ ಎಲ್ಲ ವಾಂತಿ ಮಾಡಿ ಊರಿಗೆ ಓಡಿ ಹೋಗಬೇಕೆಂದಿದ್ದೆ. ನೀನೆಬ್ಬಿಸಿದ ಪುಕಾರು ನೆನಪಾಗಿ ನಡುಗಿದೆ. ‘ಗದ್ದಿ ಗೆಯ್ಮಿ ಸೂತಕದನ್ನಕೂ ಆಗ’ ಅಂತ ಅಪ್ಪಯ್ಯ ಪಂಚೆ ಕೊಡವುತ್ತಿದ್ದುದು ನೆನಪಾಗಿ ಅಲ್ಲೇ ಉಳಿದೆ. ಮನೆ ಮುಂದೆ ಕಡಿದು ರಾಶಿ ಮಾಡಿದ ಮರದ ನಾಟುಗಳಿದ್ದವು. ಎಲ್ಲ ಮುಗೀತು ಅಂತನ್ನೂ ಹೊತ್ತಲ್ಲೂ ನಾಟಿನ ಮೇಲಿನ ಶ್ರಾವಣದ ಗಿಡ ಹುಟ್ಟಿ ಹೂ ಬಿಡುತ್ತಿತ್ತು. ಒಮ್ಮೊಮ್ಮೆ ಸೀತೆದಂಡೆನೂ ಅರಳ್ತಿತ್ತು. ಹಪ್ಪಳಿಕೆ ಕಿತ್ತು ಒಟ್ಟು ಮಾಡೋದಕ್ಕೆ ಮಕ್ಕಳು ನಾಟು ಹುಡುಕಿ ಬರ್ತಿದ್ದರು. ದಿನಾ ನೋಡ್ತಿದ್ದೆ. ಸತ್ತು ಒರಗಿದ ನಾಟಿಗೇ ಒಂದು ಬದುಕಿರುವಾಗ ನನ್ನಂಥ ಹಸಿ ಜೀವಕ್ಕೆ ಇರ್ಲಿಕ್ಕಿಲ್ಲವೇ ಎಂದು ಮನಸ್ಸು ಗಟ್ಟಿ ಮಾಡ್ತಿದ್ದೆ.

ಕಾಲೇಜಿಗೆ ಅಂತ ಊರು ಸೇರಿದರೂ ನಿನ್ನ ಆಧ್ವಾನಕ್ಕೆ ಮುಗಿತಾಯವಿರಲಿಲ್ಲ. ಒಂದೇ ಒಂದು ದಿನ ನಿನ್ನೊಂದಿಗೆ ಒಂದು ಮಾತೂ ಆಡದೆ ಒಂದು ನಗೆಯನ್ನೂ ಹಂಚಿಕೊಳ್ಳದೆ ನಾನು ನಿನ್ನ ಪ್ರೇಮಿಯಾಗಿದ್ದೆ. ಮಜಾ ಅಂದರೆ, ನಾನು ಕಾಲೇಜು ಮೆಟ್ಟಿಲು ಹತ್ತುವ ವೇಳೆಗೆ ನಿನ್ನಂಥ ಯೋಗ್ಯನ ಬದುಕನ್ನು ಹಾಳುಗೆಡವಿ ಈಗ ಗಾಂಭೀರ್ಯದ ಸೋಗು ಹಾಕುವ ‘ಯಾಸಗಾರ್ತಿ’ಯೂ ಆಗಿದ್ದೆ. ‘ಇಲ್ಲ ನಾನು ಹಾಗಲ್ಲ’ ಅಂತ ಯಾರಲ್ಲಿ ಹೇಳಲಿ? ಅದ್ಯಾವ ಮಾಯಕದಲ್ಲಿ ನಿನ್ನ ಮಾತುಗಳೆಲ್ಲ ಖರೆ ಅನ್ನಿಸುತ್ತಿದ್ದವು? ಮಹೇಶ, ಈಗ ಸುಳ್ಳುಗಳಿಂದ ನಿನಗೂ ಏನೂ ಆಗಬೇಕಾದ್ದಿಲ್ಲ. ನಾವು ಸತ್ತು ನಮ್ಮ ಹೆಣಗಳೊಟ್ಟಿಗೆ ಸತ್ಯವೂ ಸುಟ್ಟು ಬೂದಿಯಾಗುವ ಮುನ್ನ ಖರೆ ಹೇಳು. ‘ನಾನು ಎಂದಾದರೂ ನಿನ್ನನ್ನು ಪ್ರೀತಿಸ್ತೀನಿ ಅಂತ ಹೇಳಿದ್ದೆನಾ? ಹಾಗೆ ನಡೆದುಕೊಂಡಿದ್ದೇನಾ?’ ಈಗ ಏನನ್ನಿಸ್ತಿದೆ ಗೊತ್ತಾ? ಸೀದಾ ನಿನ್ನ ಬಳಿ ಬರಬೇಕು. ಗಲ್ಲಿಯ ಮೇಲೆ ಕುಂತು ಹಲ್ಲು ಕಿಸೀತಾ ‘ಅಪ್ಪಂತನ’ದ ಮುಖ ಹೊತ್ತ ನಿನ್ನ ಕಿವಿಚೊಟ್ಟಿ ಹಿಡ್ದು ದರದರ ಎಳೆದು ತರಬೇಕು. ಹೆದ್ದಾರಿಯ ಆಲದ ಕಟ್ಟೆ ಮೇಲೆ ನಿಲ್ಲಿಸಿ ಸಾವಿರದೊಂದು ಸಲ ಸತ್ಯ ಹೇಳಿಸಬೇಕು. ಆದರೆ… ಆದರೆ… ಏನು ಮಾಡಲಿ ಹೇಳು? ಆಗ ನಿನ್ನ ಸುತ್ತ ಕುಂತು ನೀನು ಹೇಳಿದ್ದ ಕೇಳಿ, ಮೀಸೆಯಂಚಲ್ಲಿ ಮೊನಚಾಗಿ ನಗುತ್ತಿದ್ದವರ್ಯಾರೂ ಈಗ ಸಿಗುವುದಿಲ್ಲವಲ್ಲ. ಯಾರೋ ಸತ್ತು, ಯಾರೋ ಪಟ್ಟಣ ಸೇರಿ, ಮತ್ಯಾರೋ ಊರ ಉಸಾಬರಿ ಮರೆತಿರುವಾಗ ಈಗ ನಾನು ಯಾವ ಲೆಕ್ಕಾ ಚುಕ್ತಾ ಮಾಡಲಿ? ನನ್ನೊಳಗೆ ಒತ್ತಿ ಬರುವ ಉಮ್ಮಳವನ್ನಾರಿಸಿಕೊಳ್ಳುತ್ತ ಎಷ್ಟೋ ಸಲ ಅಂದುಕೊಂಡಿದ್ದೇನೆ. ಏನಾಗಬೇಕಿದೆ ಈಗ? ಹುಟ್ಟಿದ ಊರು, ಮಾತು, ಊಟ, ಸಂಬಂಧ ಸರೀಕರನ್ನೆಲ್ಲ ಬಿಟ್ಟು ಬಂದು ಗೂಡು ಕಟ್ಟಿಯಾಗಿದೆ. ಉಸುಕಿನಲ್ಲಿ ಇಂಗಿಹೋದ ಕಣ್ಣೀರನ್ನ ಆಯಬೇಕೆಂದಿದ್ದೇನೆಯೇ? ಅಥವಾ ಅಭಿಮಾನದಿಂದ ಸಾಯುವ ಹಪಾಹಪಿಯೊಂದು ಮನಸ್ಸಿನೊಳಗೆ ಸತಾಯಿಸುತ್ತದೆಯೇ?

ಅಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?

ಎಷ್ಟೋ ಸಲ, ಯಾಕೆ ಇವನನ್ನು ನಾ ಪ್ರೀತಿಸಬಾರದು? ಅಂತ ಕೇಳಿಕೊಂಡಿದ್ದೆ. ಉತ್ತರ ಸಿಕ್ಕಿರಲಿಲ್ಲ. ಮೂವತ್ತು ಮುಗಿದ ಈ ದಿನಗಳಲ್ಲಿ ಮನಸ್ಸಿನಲ್ಲಿ ಚಿಂಚಿ ಚಿಂದಿಯಾಗಿ ಬಿದ್ದಿದ್ದ ನೆನಪುಗಳನ್ನು ಜೋಡಿಸತೊಡಗಿದ್ದೇನೆ. ಈ ಅಕ್ಷರಗಳೊಂದಿಗೇ ಕ್ರೂರ ನೆನಪುಗಳಿಗೆ ಅಂತಿಮ ಸಂಸ್ಕಾರ ಮಾಡುತ್ತಿರುವ ನಿರಾಳತೆಯೂ ಇದೆ. ಅಘನಾಶಿನಿ ತಡದ ಕಲ್ಲಬ್ಬೆಯಲ್ಲಿ ನಾನು ಮೂರನೆತ್ತಿ ಕಲಿತದ್ದು. ಅಲ್ಲಿ ಸಿರಗುಂಜಿಯ ಕುಚಿನಾಡ ಚಿಪ್ಪಿ ಫ್ಯಾಕ್ಟರಿಯಲ್ಲಿ ಅಪ್ಪಯ್ಯ ಕೆಲ್ಸಕ್ಕಿದ್ದ. ಒಂದ್ಸಲ ಮೂರೂರಿನ ಮದ್ವೆಯೊಂದಕ್ಕೆ ಅಪ್ಪಯ್ಯ-ಅಮ್ಮ ಹೋಗಿದ್ದರು. ಸಂಜೆ ಅಡ್ಡ ಮಳೆ ಬಂದು ಹೊಳೆ ನೆಗ್ಸ ಬಂತು. ಅಲ್ಲಿ ಮಹೇಶಪ್ಪ ಅಂತ ಒಬ್ಬನಿದ್ದ. ಅಪ್ಪಯ್ಯನ ದೋಸ್ತ. ನಲವತ್ತು ದಾಟಿದ್ದಿರಬಹುದಾಗ ಅವನಿಗೆ ಅವನ ಮಗಳೊಬ್ಬಳು ನನ್ನ ಕ್ಲಾಸಿನಲ್ಲಿದ್ದಳು. ಅವತ್ತು ರಾತ್ರಿ ಅಪ್ಪಯ್ಯ ಅಮ್ಮನಿಗೆ ಹೊಳೆ ದಾಟಲಾಗದೆ ಅಲ್ಲೇ ಉಳೀಬೇಕಾಯ್ತು. ಮಹೇಶಪ್ಪನ್ನ ಮಕ್ಕಳ ಜೊತೆಯಿರು ಅಂತ ಕಳಿಸಿದ್ದರು. ಕೆಲಸದ ‘ಓಮಿ’ ಅಡಿಗೆ ಮಾಡಿದ್ಲು. ನಾನು ಅಣ್ಣ, ಆ ತುದಿಗೆ ಮಹೇಶಪ್ಪ ಮಲಗಿದ ನೆನಪು. ರಾತ್ರಿ ಕಿವಿ ಹತ್ತಿರ ಮುಖ ತಂದು ಯಾರೋ ‘ಪಪ್ಪಿ, ಪಪ್ಪಿ’ ಅಂತ ಕರೆದ ಹಾಗಾಯ್ತು. ಎಚ್ಚರಾಯ್ತು. ಮಹೇಶಪ್ಪನ ಒರಟು ಕೈ ನನ್ನ ಮೈಮೇಲೆ ಓಡಾಡ್ತಿತ್ತು. ಏನೋ ತಿಳೀಲಿಲ್ಲ. ಹೋ ಅಂತ ಚೀರಿದೆ. ಅಣ್ಣ ‘ಬಾ ಪಪ್ಪಿ’ ಎಂದು ಎದ್ದ. ಓಮಿ ಎದ್ದಳು. ಬೆಳಗಿನವರೆಗೂ ಓಮಿಯ ಕೈಹಿಡಿದು ಲಾಟೀನು ಹಚ್ಚಿ ತೂಕಡಿಸುತ್ತ ಕುಳಿತೆ. ಹೊರಗೆ ಮಳೆ, ಗಡಗಡ ನಡುಗಿದೆ. ಮುಂದೆ ನಾಲ್ಕೈದು ದಿನ ಜ್ವರ ಬಂತು. ಅಮ್ಮ ‘ಹೆದರಿದೆಯೇನೆ?’ ಎಂದಳು. ಒಲೇಲಿ ಕತ್ತಿ ಬಿಸಿ ಮಾಡಿ ತಣ್ಣೀರಿಗೆ ಹಾಕಿ ಬೆನ್ನ ಹಿಂದೆ ಚೊಂಯ್ ಅನ್ನಿಸಿದಳು. ‘ಹೋಯ್ತಾ ಹೆದರಿಕೆ?’ ಅಂದಳು. ಹೂಂ ಅಂದೆ. ಅನ್ನದಿದ್ದರೆ ಅಮ್ಮ ಬೇಜಾರು ಮಾಡಿಕೋತಿದ್ದಳು. ನನ್ನ ಬಾಲ್ಯದಲ್ಲಿಯೇ ಭಯ ಬೆರೆಸಿದ ಘಟನೆಯ ನೆರಳನ್ನು, ನೆನಪನ್ನು ವರ್ತಮಾನದಲ್ಲಿ ಹೆಸರಿನ ಮೂಲಕ ಸಾಕ್ಷೀಕರಿಸಿಕೊಳ್ಳಲು ನಾ ತಯಾರಿರಲಿಲ್ಲ.

ಸತತ ಎಂಟ್ಹತ್ತು ವರ್ಷ ನಿನ್ನ ಕತೆಗಳಿಗೆ ನನ್ನ ಹಿರೋಯಿನ್ ಮಾಡಿಬಿಟ್ಟೆ. ನಾನು ಹಾಗಿಲ್ಲ ಎಂದು ಹೇಳುವ ಅವಕಾಶವೂ ಇರದ ಹಾಗೆ. ಕಾಲೇಜಿನ ಅನಂತಣ್ಣನ ಚಾದಂಗಡಿಯ ನಿನ್ನ ಟೀಮಿಗೆ ನಾ ನಾಲಿಗೆ ತೀಟೆಯ ವಸ್ತುವಾದೆ. ಲೈಬ್ರರಿಗೆ ಹೋಗುವಾಗ ಚಾದಂಗಡಿಯಲ್ಲಿ ನಿನ್ನ ಗುಂಪಿನವರಿದ್ದರೆ ‘ಮಹೇಶ’ ಅನ್ನೋ ಕೂಗು ಕಟಾಂಜನ ದಾಟಿ ಬರುತ್ತಿತ್ತು. ಹೇಗಾಗುತ್ತಿರಬೇಡ ನನಗಾಗ? ನೀನೋ ದೈಹಿಕವಾಗಿ ಹಲ್ಲೆ ಮಾಡಲಿಲ್ಲ. ಕಣ್ಣೆತ್ತಿ ಮುಖ ನೋಡಲೂ ಇಲ್ಲ. ಮನಸ್ಸನ್ನು ಮಾತ್ರ ಕಚಪಚ ತುಳಿದುಬಿಟ್ಟೆ. ಕಾಲೇಜಿನಲ್ಲಿ ನಡೆದ ಯಾವ ಕಾರ್ಯಕ್ರಮಕ್ಕೂ ನಿಲ್ಲದ ಹಾಗೆ, ಎಂದೂ ವೇದಿಕೆ ಹತ್ತದ ಹಾಗೆ, ನಗದ ಹಾಗೆ, ಹರಟೆ ಹೊಡೆಯದ ಹಾಗೆ, ಯಾವ ಯಾವುದೋ ಸಂಶಯದ ಕಣ್ಣಿಗೆ ಸದಾ ವಸ್ತುವಾಗಿರೋ ಹಾಗೆ ಮಾಡಿಟ್ಟೆ. ಏನಿತ್ತಯ್ಯ ನಿನ್ನ ಮನಸ್ಸಿನಲ್ಲಿ? ನಾನು ಕೊಳೆಯುವುದು ಬೇಕಿತ್ತಾ? ನಿನ್ನ ಮಗಳನ್ನೊಮ್ಮೆ ಒಂದೇ ಒಂದು ಸಲ ನನ್ನ ಜಾಗದಲ್ಲಿಟ್ಟು ನೋಡು.

ನಿನ್ನ ಮದ್ವೆಯಾಗೋದೊಂದೇ ಉಳಿದ ದಾರಿ- ಅಂತ ನಾ ಗಾಬರಿಬಿದ್ದ ರಾತ್ರಿಗಳು ಒಂದೆರಡಲ್ಲ. ರಾಕುಮನಿ ಶ್ಯಾಮಲಕ್ಕನ ಹತ್ರ ನೀ ಹೇಳ್ತಿದ್ದಿಯಂತೆ ‘ಅವಳಿಗೆ ನಂಟಸ್ತನ ಬಂದ್ರೆ ಫೋಟೋ ಮಾಡಿ ಹಂಚ್ತೀನಿ. ಈಗೆಲ್ಲ ಹುಬ್ಬಳ್ಳೀಲಿ ಯಾರ‍್ದೋ ಮೊಕ ಯರ‍್ದೋ ಮೈ ಹಚ್ಚಿ ಫೋಟೋ ಮಾಡ್ತಾರೆ’ ಅಂತ. ಎಂಥ ಭಯದಲ್ಲೂ ನಿನ್ನ ಗಿಮಿಕ್‌ಗಳಿಗೆ ಬೆರಗಾಗಿದ್ದೆ ನಾ. ಪಾಪ ಶ್ಯಾಮಲಕ್ಕ, ಅವಳ ಅವ್ವ ಸುಂದರಜ್ಜಿ ಮಕ್ಳು ಸಾಕು ಅಂತ ಗಾಂವಟಿ ಔಷ್ದಿ ಕುಡ್ದು ಹೊಟ್ಟೆ ಬೀಳದೆ ಮೆಳ್ಳಗಣ್ಣಿನ ಮುಖದ ಮೇಲೆ ಕರಿ ಪಸೆಯ ನಿಶ್ಯಕ್ತ ಕೂಸನ್ನು ಹಡ್ದು ‘ಶ್ಯಾಮಲಾ’ ಅಂತ ಕರೆದಳಂತೆ. ನಿಮ್ಮನೆ ಹತ್ತಿರ ಇದ್ದಿದ್ದಕ್ಕೆ ಸರೀ ದುಡ್ಸಿದೆ ಅವಳನ್ನು ಕಥಿ ಪುಸ್ತಕ ಓದುವಷ್ಟು ಬರ ಕಲಿತ ಶ್ಯಾಮಲಕ್ಕ ಅದೇ ನೆವದಲ್ಲಿ ಮನಿಗೆ ಬರ್ತಿದ್ದಳು. ನಿನ್ನ ತಾರೀಫು, ನಿನ್ನ ಚೀಟಿ ತಗೊಂಡು. ಒಂದೇ ಒಂದು ಸಲವೂ ಚೀಟಿ ಬಿಚ್ಚದೆ ಕಡ್ಡಿಗೀರುವಾಗ ಅವಳಿಗೆ ತಾರಾಮಾರಿ ಸಿಟ್ಟು ಬರ್ತಿತ್ತು. “ಹೆಣ್ಮಕ್ಕಳಿಗೆ ಈ ಸುಕ್ಕ ಗನಾದಕಲ್ವೇ. ಅಂವಗೇನಾಗೀದೆ ಮಳ್ಳಿ? ಚೆಂದಿಲ್ವಾ? ಮಾಸ್ತರಕಿ ಮಾಡ್ವಾ. ಹತ್ತ ಕುತ್ತರಿ ಗದ್ದಿ ಪಾಲ ಬತ್ತೀಽದ. ತಿಳ್ಕಾ” ಅಂತ ರಿಪಿರಿಪಿ ಮಾಡ್ತಿದ್ಲು. ಹುಟ್ಟಾ ದಮ್ಮಿನ ರೋಗದ ಶ್ಯಾಮಲಕ್ಕ ಒಂದು ಡಿಸೆಂಬರ ಚಳಿದಿನ ಕಫ ಕಟ್ಟಿ ಸತ್ತಳು. ಮಾರನೆ ಬೆಳಿಗ್ಗೆ ದೋಣೀಲಿ ಎಷ್ಟೋ ವರ್ಷಗಳ ನಂತರ ನಾ ನಿನ್ನ ಮುಖ ನೊಡಿದ್ದೆ. ವಿಷಾದದ ಸಣ್ಣ ಪಸೆಯೂ ಅಲ್ಲಿರಲಿಲ್ಲ. ನಿನ್ನನ್ನು ಬೆನ್ನಿಗೆ ಬಿದ್ದ ತಮ್ಮನೇನೋ ಅನ್ನೋ ಕಕ್ಕುಲಾತೀಲಿ ಎದೆಗೆ ಹಚ್ಚಿಕೊಂಡು ಮಾತಾಡ್ತಿದ್ದ. ನಿನ್ನ ಸಲುವಾಗಿ ಬಿಸಿಲಲ್ಲಿ ಹೊಯಿಗೆ ತುಳಿದ ಶ್ಯಾಮಲಕ್ಕ ಸತ್ತಿದ್ದಳು. ನೀ ಏನೂ ಆಗದವರಂತೆ ಇದ್ದಿ. ನಿನ್ನ ಎಂದಿನ ಢೋಂಗಿಯಲ್ಲಿ. ಮಹೇಶ, ನಿನ್ನ ಬಗ್ಗೆ ಹೇಳಲು ನೀ ಶ್ಯಾಮಲಕ್ಕನ ಬಳಸಿದ್ದಿ. ಬದುಕಿರುವಾಗ ನೀ ಎಂಥವನು ಎಂದು ಹೇಳಲು ಅವಳಿಗೆ ಸಾಧ್ಯವಾಗಲಿಲ್ಲ. ಆದರೆ ಸತ್ತು ನಿನ್ನ ಸರಿಯಾದ ಪರಿಚಯ ಮಾಡಿಕೊಟ್ಟಿದ್ದಳು! ಒಂದು ಕಣ್ಣಲ್ಲಿ ಹೂ ಬಿದ್ದ, ಕರಿ ಮಚ್ಚೆಯ, ಮುಖದ ಒಂದು ಗಲ್ಲ ಹೂತು ಹೋದ, ಊಬಿದರೆ ಹಾರಿ ಹೋಗುವಂತಿದ್ದ ಶ್ಯಾಮಲಕ್ಕ ನಿನಗಾಗಿ ಎಷ್ಟು ದೈನಾಸಪಟ್ಟಿದ್ದಳಲ್ಲ. ಎಷ್ಟೆಲ್ಲ ಕೆಟ್ಟದಾಗಿ ಬಯ್ದುಬಿಟ್ಟಿದ್ದೆ ಅವಳನ್ನು. ಆವತ್ತು ತುಂಬ ಅತ್ತುಬಿಟ್ಟಿದ್ದೆ.

ಹದಿನೈದು ವರ್ಷಗಳ ಹಿಂದೆ ನೀನು ರಾಧೆಯನ್ನು ಬಯ್ದು ಬರೆದದ್ದು ನಿನ್ನ ಕಡೆಯ ಪತ್ರ. ನಾ ಓದಿದ್ದು ನಿನ್ನ ಅದೊಂದೇ ಪತ್ರವನ್ನು. ನಗು ಬಂದಿತ್ತು. ಕಡೆಗೂ ನಿನ್ನ ಮುಖ ನೀನೆ ಕಳೆದುಕೊಂಡೆ. ಆವತ್ತು ಬಿ.ಎ. ಕಡೇ ವರ್ಷದ ‘ಸೆಂಡ್ ಆಫ್’ ಪಾರ್ಟಿ ಇದ್ದದಿನ. ನನ್ನ ಎಲ್ಲ ದಿಗಿಲಿಗೂ ಪೂರ್ಣವಿರಾಮ ಹಾಕಿದ ದಿನವೂ ಹೌದು. ಆ ವರ್ಷ ನಾನೊಂದಿಷ್ಟು ಖುಷಿಯಲ್ಲಿದ್ದೆ. ನನ್ನ ಚಿತ್ರಕ್ಕೆ ರಾಜ್ಯಮಟ್ಟದ ಬಹುಮಾನ ಸಿಕ್ಕಿತ್ತು. ನಾ ಚಿತ್ರ ಬರೆಯುವುದೂ ಗೊತ್ತಿಲ್ಲದ ಎಲ್ಲ ಸರ್‌ಗಳೂ ಕರೆದು ಮಮತೆಯಿಂದ ಮಾತಾಡಿದ್ದರು. ಹಿಚ್ಕಡದ ವೇದೂ, ಹಿಲ್ಲೂರಿನ ಮಮತಾ ಎಲ್ಲರೂ ‘ನಿನ್ನ ಕಥೆಯೇ ಖರೆ’ ಅಂತ ತಿಳಿದವರು ಐದು ವರ್ಷದ ಒಡನಾಟಕ್ಕೆ ವಿದಾಯ ಹೇಳುವಾಗ ಕಣ್ಣೀರು ತಂದಿದ್ದರು. “ನೀ ಏನು ಅಂತ ತಿಳೀದೆ ಏನೇನೋ ಅಂದ್ವಿ ಪಪ್ಪಿ. ಸಾರಿ ಕಣೆ” ಆ ಮಾತಿಗಾಗೇ ಕಾದವಳಂತೆ ಕುಸಿದು ಕೂತು ಗಂಟೆಗಟ್ಟಲೆ ಅತ್ತೆ. ಭಾವಿಕೇರಿಯ ಗಣಪತಿ ‘ಶಬ್ದಮಣಿದರ್ಪಣ ವಿಳಾಸ’ ಪುಸ್ತಕ ಕೊಟ್ಟ. “ತಕಾ ಓದು. ನಂಗಂತೂ ತಿಳೂದಲ. ನೀ ಓದು, ಕಾಲೇಜಿಗೆ… ಅಲ್ಲಲ್ಲ ಯುನಿವರ್ಸಿಟಿಗೆ ರ‍್ಯಾಂಕ್ ಬಾ. ನನ್ ತಂಗಿ ಅಂತ್ಹೇಳಿ ಹಬ್ಬ ಮಾಡ್ತಿ” ಅಂದ. “ನಿನ್ನ ಮೇಲೆ ನಾವಿಟ್ಟ ಭರವಸೆ ಹುಸಿ ಮಾಡ್ಬೇಡ. ಹೀಗೇ ಇರು. ಕಡಿತನಕಾ. ಏನಾದರೂ ಆಗು” ಅಂದರು ರೇವಣಕರ ಸರ್. ಆವತ್ತು ಎಲ್ಲ ಮುಗಿಸಿ ಬರುವಾಗ ರಾತ್ರಿ 8ರ ಬಸ್ಸು. ನಾನು-ಶಾಲು ಇಬ್ಬರಿದ್ವಿ. ರಾಧೆ ಮಾತ್ರ ಕಟ್ಟಿನ ಮೇಲೆ ಕೊಪ್ಪಕ್ಕೆ ಹೋಗಬೇಕಿತ್ತು. ದೋಣಿ ದಾಟಿದ ಕೂಡಲೆ ಕಿಣಿ ಅಂಗಡಿ ಕಟ್ಟೇಲಿ ನೀ ಕಂಡೆ. ‘ಮಹೇಶನ್ನ ಕರ್ಕೊಂಡು ಹೋಗೆʼ ಅಂದಳು ಶಾಲು ರಾಧೆಗೆ. ಉಸಿರೆತ್ತಿದರೆ ‘ಪಪ್ಪೀನೇ ಮದ್ವೆ ಆಗೋನು’ ಅಂತಿದ್ದವನು ಉಳಿದ ಹುಡುಗಿಯರ ವಿಷಯದಲ್ಲಿ ‘ಸೇಫ್’ ಅಂತ ಅವಳ ಲೆಕ್ಕ. ಗಂಗಿ ದೇವಸ್ಥಾನ ಇಳೀತಿದ್ದಂತೆ ನೀನು ರಾಧೆಯೊಡನೆ ಅಸಭ್ಯ ಮಾತಾಡಿದ್ದು, ಅವಳನ್ನು ತಬ್ಬಲು ಹೋಗಿದ್ದು, ಅಪರೂಪಕ್ಕೆ ಸೀರೆಯುಟ್ಟವಳ ಉಡಿಬಿಚ್ಚ ಹೊರಟಿದ್ದು, ಹಿಂದೆ ಗಾಡಿ ಹೊನ್ನಪ್ಪಣ್ಣ ಬರುತ್ತಿದ್ದುದನ್ನು ಕಂಡು ಬಚಾವಾಗಿ ಬೆವರಿ ಹಳ್ಳವಾಗಿ ಮನೆ ಕಂಡದ್ದು… ಅವಳ ಕಾಲು ತುಳಿದ ರಭಸಕ್ಕೆ ಒಡೆದ ಹೆಬ್ಬೆರಳು… ರಾಧೆಯ ಉಂಗುಷ್ಟ ಕಿತ್ತ ಚಪ್ಪಲಿ ಹಾಳೆ ಬದಿಗೆ ಬಿದ್ದಿತ್ತು. ಬೆಳಿಗ್ಗೆ ಓಡಿ ಬಂದ ರಾಧೆ ನಮ್ಮನೆ ಮಾಳಿಗೆ ಮೇಲೆ ಗಳಗಳ ಅತ್ತು ಮುಗಿಸಿದ ಮೇಲೆ ಮತ್ತೇನೂ ಉಳಿದಿರಲಿಲ್ಲ. ‘ರಾಧೆಗೆ ನಿನ್ನ ಮೇಲೆ ಮನಸ್ಸಿತ್ತು. ಅದಕ್ಕವಳು ಏನು ಹೇಳಿದರೂ ನಾ ನಂಬಬಾರದು’ ನಿನ್ನ ಉಪದೇಶದ ಧೈರ್ಯವೇ! ನಿನಗೆ ಗೊತ್ತಿತ್ತು. ಈ ವಿಷಯ ನಾನು-ಶಾಲು-ರಾಧೆ ಮೂವರಲ್ಲೇ ಗಿರಿಗಿಟ್ಲೆಯಾಡಿ ಒಂದು ದಿನ ಸತ್ತು ಹೋಗುತ್ತದೆಂದು. ನಾವು ಬಾಯಿಬಿಡಲಾರೆವು. ಮತ್ತೊಂದು ವರ್ಷ ನೀನು ನಿನ್ನ ನಾಟಕವನ್ನು ನಿರಾಳವಾಗಿ ಆಡಿದೆ. ರಾಧೆಯ ಬದುಕಿನ ಪ್ರಶ್ನೆಗೆ ನಿನ್ನ ಉದ್ಧಟತನವನ್ನು ಅವಡುಗಚ್ಚಿ ನುಂಗಬೇಕಾಯ್ತು.

ನಿಂಗೆ ಗೊತ್ತಿಲ್ಲದ ಸುದ್ದಿಯೊಂದಿದೆ. ಅದೇ ರಾತ್ರಿ ಮೊದಲ ಬಾರಿ ನಾ ನಿನ್ನ ಬಗ್ಗೆ ಒಳಿತಾಗಿ ಯೋಚಿಸಿದ್ದೆ. ‘ಯಾರನ್ನಾದರೂ ಆಗೋ ಬದಲು, ಮಹೇಶನನ್ನು ಆಗಬಹುದಲ್ಲವೇ?’ ಅಂದುಕೊಂಡೆ. ರಾತ್ರಿಯ ಯೋಚನೆಗೆ ಮುಂಜಾನೆ ತಣ್ಣೀರು ಮಿಂದು ಬಂದೆ. ಹಾಂ. ಈ ಪತ್ರ ಓದಿದ ಮೇಲೆ ನೀ ನಂಗೆ ಉತ್ತರಿಸೋ ಪ್ರಯತ್ನ ಮಾಡಬೇಡ. ಸಾಧ್ಯವಾದರೆ, ಒಂದು ನಿಶ್ಚಲ ರಾತ್ರಿ ನಿನ್ನ ಹೆಂಡತಿಯ ಕೈಹಿಡಿದು ನಿನ್ನ ಬಗ್ಗೆ ಎಲ್ಲ ಹೇಳಿಕೋ. ಅವಳ ನಿಟ್ಟುಸಿರನ್ನು ನೆತ್ತಿಯ ಮೇಲೆ ಧರಿಸು. ಬದುಕು ಬೇರೆಯೇ ಆಗಿರುತ್ತದೆ ನೋಡು. ಇನ್ನೊಂದೆರಡು ವರ್ಷದಲ್ಲಿ ನಿನ್ನ ಮಗಳು ನನ್ನ ಮಗಳು ಕಾಲೇಜಿನ ಮೆಟ್ಟಿಲು ಹತ್ತುತ್ತಾರೆ. ಇಂತಹ ಘಟನೆಗಳಾವವೂ ಅವರ ಬೆನ್ನು ಹತ್ತುವದು ಬೇಡಾ ಅಲ್ಲವಾ? ಇದರೊಂದಿಗೆ ಇನ್ವಿಟೇಷನ್ ಇಟ್ಟಿದ್ದೇನೆ. ಬರುವ ವಾರ ಕಲಾಭವನದಲ್ಲಿ ನನ್ನ ಚಿತ್ರಗಳ ಪ್ರದರ್ಶನವಿದೆ. ಬಾ. ಆಗೆಲ್ಲ ಪರದೆಯ ಹಿಂದೆ ಇದ್ದವ ನೀನು. ಈಗಲಾದರೂ ಎದುರಿಗೆ ಬಾ. ಆ ಚಿತ್ರಗಳ ಬಣ್ಣಕ್ಕೆ ಭಾವದ ಭಿತ್ತಿ ನೀನು. ಅಲ್ಲಿಯ ಭಯ-ದಿಗ್ಭ್ರಮೆ-ವಿಷಾದಗಳೆಲ್ಲ ನಿನ್ನ ಕೊಡುಗೆಗಳೇ. ಇಷ್ಟಕ್ಕೂ ಬದುಕನ್ನು ಗಂಭೀರವಾಗಿ ಕಾಣುವ ಗರಜನ್ನು ನಂಗೆ ತಂದವ ನೀನು. ಪ್ರತಿ ಗಳಿಗೆಯನ್ನೂ ಉತ್ಕಟವಾಗಿ ಬದುಕಲು ಹಚ್ಚಿದವ. ನಿನ್ನಲ್ಲಿಲ್ಲದ ಅಪ್ಪಟ ಮನುಷ್ಯತ್ವದ ನಿರಂತರ ಹುಡುಕಾಟಕ್ಕೆ ನಿನಗೇ ತಿಳಿಯದೇ ನನ್ನ ಸಿದ್ಧಗೊಳಿಸಿದ್ದೆ. ಅದಕ್ಕಾಗಿಯಾದರೂ ನಿನಗೊಂದು ಶುದ್ಧ ನಮಸ್ಕಾರ.
-ಪಪ್ಪಿ

*****

ಇಂಥದ್ದೊಂದು ಯೋಚನೆಯೇ ತಳಮಳ ಹುಟ್ಟಿಸಿತು. ‘ಆಗಲಾರದಪ್ಪ ಈ ಆಯ್ಕೆ’ ಅನ್ನಿಸುವಷ್ಟು. ಹೆತ್ತ ಕೂಸುಗಳಲ್ಲಿ ಯಾವುದನ್ನು ಆಯ್ದುಕೊಳ್ಳುವುದು? ನಿಧಾನ… ಎಲ್ಲ ಗಲಿಬಿಲಿಗಳನ್ನೂ ಅತ್ತತ್ತ ಸರಿಸಿ, ಸಾವರಿಸಿಕೊಂಡು ಯೋಚಿಸಿದೆ. ಆಯ್ಕೆ ಇದ್ದೇ ಇರುತ್ತದಲ್ಲ? ಹೆತ್ತ ಮಕ್ಕಳಲ್ಲೂ ಮನಕೆ ಹತ್ತಿರವಾದವರು, ಕಡೆಗಾಲದಲ್ಲಿ ಕಾಣದಿರಲಾರೆ ಎಂಬ ಚಡಪಡಿಕೆಗೆ ಹಚ್ಚುವವರು… ಲೋಕಕ್ಕೆ ಕಾಣದೆ ನಮಗೆ ಮಾತ್ರ ತಿಳಿದ ಆ ಆಪ್ತ ಚಹರೆಯಿರುತ್ತದಲ್ಲ ಅನ್ನಿಸತೊಡಗಿತು… ಮತ್ತೊಂದು ಕಥೆಗಾಗುವಷ್ಟು.
ಎರಡು ಕಥಾ ಸಂಕಲನಗಳ ಆಮೇಲಿನ 4-5 ಕಥೆಗಳ ‘ನನ್ನ ಕಥಾಲೋಕ’ ಸುತ್ತಿದೆ. ಸುಮಾರು ನಾಲ್ಕು ದಶಕಗಳ ಅನುಭವ ಲೋಕವನ್ನು ಹೊಕ್ಕು ಬಂದ ದಣಿವು. ‘ಒಂದು ಖಾಸಗಿ ಪತ್ರ’ ಎಂಬ ನನ್ನ ಮೊದಲ ಕಥೆ ಈಗಲೂ ಆ ಜಾಗೆ ಬಿಟ್ಟು ಕದಲಲಿಲ್ಲ. ಅದು 2004 ರ ಇಲೆಕ್ಷನ್-ನರಗುಂದ ಎಂಬ ಊರಲ್ಲೊಂದು ಪುಟ್ಟ ಬಾಡಿಗೆ ಮನೆ, ರಸ್ತೆಯಂಚಿನದು. ನಮ್ಮನೆ ದಾಟಿದರೆ ದುಡಿವ ಜನರಿದ್ದ ಕಾಲೊನಿ ಶುರು. ರಾತ್ರಿಯಿಡೀ ಹಣದ ವಹಿವಾಟು ರಸ್ತೆಯಲ್ಲೇ. ಬಾಟಲಿಗಳ ಸರಬರಾಜು. ರಸ್ತೆಯಿಂದ ಸೆರೆಯ ವಾಸನೆ. ಒಕ್ಕುಂದ ಇಲೆಕ್ಷನ್ ಡ್ಯೂಟಿಗೆ, ಮಕ್ಕಳು ಅಜ್ಜಿಯ ಮನೆಗೆ ಹೋಗಿದ್ದರು. ತುಂಬ ವರ್ಷಗಳ ಮೇಲೆ ಒಬ್ಬಳೇ ಇದ್ದೆ. ರಸ್ತೆಯ ಸದ್ದುಗದ್ದಲಕ್ಕೆ ಮನಸ್ಸಿಗೆ ಹೇವರಿಕೆ. ನಿದ್ದೆಯಿಲ್ಲ. ಎದ್ದು ಕಥೆ ಬರೆದೆ. ಇಲೆಕ್ಷನ್‌ಗೆ ಏನೂ ಸಂಬಂಧವಿಲ್ಲದ ‘ಖಾಸಗಿ ಪತ್ರ’ ಬರೆದೆ. ಬಿಕ್ಕಿ ಬಿಕ್ಕಿ ಅಳುತ್ತ ನನ್ನನ್ನು ನಾನೇ ಸಂಭಾಳಿಸಿಕೊಳ್ಳುತ್ತ… ಮೂರು ದಶಕಗಳಿಗೂ ಹೆಚ್ಚು ಕಾಲ ಮನಸ್ಸಿನಲ್ಲಿ ಜಪ್ಪಿಸಿ ಕೂತಿದ್ದ ಅಪಮಾನಿತ ಯಾತನೆಗಳ ಅಕ್ಷರವಾಗಿಸಿದ್ದೆ. ನನ್ನದೇ ಆತ್ಮವನ್ನು ಕತ್ತರಿಸಿಟ್ಟಂತೆ. ಅಮೃತಾ ಪ್ರೀತಂ, ತಮ್ಮ ಆತ್ಮಕಥೆ ‘ರೆವಿನ್ಯೂ ಸ್ಟಾಂಪ್’ಲ್ಲಿ ಹೇಳಿಕೊಂಡರು- ನನ್ನ ಬರಹಗಳಿಗೆ ಅಧಿಕೃತತೆಯ ರೆವಿನ್ಯೂ ಸ್ಟಾಂಪ್ ಅಂಟಿಸಲು ಆತ್ಮಕಥೆ ಬರೀತಿದೇನೆ. ಹೀಗನ್ನುವ ಮನಸ್ಸಿನಲ್ಲಿ ಅದೆಷ್ಟು ಮರುಭೂಮಿಗಳು ಉಸಿರಾಡುತ್ತವೆಯೋ.
ಈಗ ಬದುಕಿನ ದೂರವನ್ನು ಕಂಡು ಮಾಗಿದ ಪ್ರಬುದ್ಧ ಕಣ್ಣುಗಳಿಂದ ಪರಾಂಬರಿಸುತ್ತಿದ್ದೆ. ಗಂಡಾಳಿಕೆಯ ಸಮಾಜದಲ್ಲಿ ಹೆಣ್ಣುಮಗು ಅನುಭವಿಸುವ ಮುಜುಗರಗಳು, ನಗುವನ್ನು, ಆತ್ಮಸ್ಥೈರ್ಯವನ್ನು ಒತ್ತೆಯಿಡುವ ಸ್ಥಿತಿ, ಲೋಕದ ಕಾನೂನಿನ ಚೌಕಟ್ಟಿಗೆ ಕೂಡದ ಯಾತನೆ; ಹೆಣ್ಣು ಮನಸ್ಸಿಗೆ ಅವರವರ ಬಾಲ್ಯವನ್ನು ಎದುರಿಸುತ್ತದೆ ಅನ್ನಿಸಿತು. ಈ ಇಂಥ ಅನುಭವಗಳ ಉಳಿಪೆಟ್ಟು ಇಲ್ಲದೆ, ನಾವಾಗುತ್ತೇವೆಯೇ? ಹಾಗಿದ್ದರೆ ಬದುಕಿನ ಒಳಿತು-ಕೆಡಕುಗಳನ್ನು ಅಳೆವ ಬಗೆ ಯಾವುದು? ಕಥೆ ಯಾರದ್ದೋ ಅಂತ ಓದುವಾಗ, ಕಥೆಯ ನೇಯ್ಗೆಯೊಳಗೆ ಜತ್ತಾದ ಬೈನರಿ ಸಂಗತಿಗಳು ತುಂಬ ಮುಖ್ಯ ಅನ್ನಿಸಿತು. ಯಲ್ಲಾಪುರದ ಹುಚ್ಚಿ, ಅಂಬುಜಕ್ಕ ಒಂದೊಂದು ಪಾತ್ರಗಳು ಒಂದೊಂದು ಕಥನಗಳಾಗಬಲ್ಲವು. ಹೆಣ್ಣು ಬದುಕಿನ ಮೇಲೆ ಅತಿಕ್ರಮಣ ಮಾಡುವ ಗಂಡುತನ ಅದೆಷ್ಟು ಭಯಾನಕವೆಂಬ ನಿರೂಪವನ್ನು ಕಥೆ ಸಲ್ಲಿಸುತ್ತದೆ ಎನಿಸಿತು.
ನನ್ನನ್ನು ಕಥೆಯ ಲೋಕಕ್ಕೆ ಕರೆತಂದ ಕಥೆಯಿದು. ಈಗಲೂ ಈ ಕಥೆಯೆಂದರೆ ಮುದ್ದು ಗರ್ವದಿಂದ ಗಲ್ಲವುಬ್ಬಿಸಿ ನಿಂತ ಬಾಲ್ಯದ ಫೋಟೊ. ಆ ಬೆರಗುಗಣ್ಣಿನ ದಿಗಿಲ ಜೀವವನ್ನು ದಣೇ ಈಗ ಎದುರು ಕೂಡಿಸಿಕೊಂಡು ಕಣ್ಣೊರೆಸಿ ಮುತ್ತಿಟ್ಟು ಕಳುಹಬೇಕೆನಿಸಿ ಕಣ್ಣು ತೊಯ್ದಿತು. ಬಾಲ್ಯಕ್ಕೂ ಭವಿಷ್ಯಕ್ಕೂ ಇರುವ ಹಂಗುನೂಲಿನ ಎಳೆ ಛಕ್ಕನೆ ಸಿಕ್ಕಂತಾಯಿತು. ಕಥೆ ಇಷ್ಟವಾಯಿತು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ