ತಪ್ಪು ತಿಳಿಯಬೇಡಿ! ನನಗೆ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಜೊತೆಗೇ ಇದ್ದುಬಿಡುವುದು, ಅವುಗಳ ಜೊತೆ ಹೋಗಿಬಿಡುವುದೇ ಇಷ್ಟ. ನಾಲ್ಕು ಜನರ ಮಧ್ಯೆ, ಜನಸಂದಣಿಯ ನಡುವೆ ಇದ್ದೂ ಕೂಡ ನಾನು ಪಾತ್ರಗಳ ಜೊತೆ ಇದ್ದುಬಿಡಬಲ್ಲೆ. ಕುಟುಂಬದ ಸದಸ್ಯರು ಆಗಾಗ್ಗೆ ಆಕ್ಷೇಪಣೆ ತೆಗೆಯುವುದುಂಟು. ನೀವು ಮನೆಯಲ್ಲಿದ್ದರೂ, ನಮ್ಮೊಡನೆಯೇ ಇರುವಂತೆ ಕಂಡರೂ, ಇನ್ನೊಂದು ಲೋಕದಲ್ಲಿರುತ್ತೀರಿ. ಯಾರ ಮಾತನ್ನೋ ಕೇಳಿಸಿಕೊಳ್ಳುತ್ತಿರುತ್ತೀರಿ. ಎಂಜಿನಿಯರ್ ಮಗನಿಂದ ಯಾವುದೇ ಗುಂಡಿ ಕೂಡ ಒತ್ತದೆ ನೀನು ಬೇರೊಂದು ಲೋಕಕ್ಕೆ ಎಷ್ಟು ಚೆನ್ನಾಗಿ, ಸಲೀಸಾಗಿ ಚಲಿಸಬಲ್ಲೆ ಎಂಬ ವ್ಯಂಗ್ಯಾತ್ಮಕ ಪ್ರಶಂಸೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೊಂದನೆಯ ಪ್ರಬಂಧ ನಿಮ್ಮ ಓದಿಗೆ
ಸುಮಾರು ಮೂರೂವರೆ ದಶಕಗಳಿಂದ ಕತೆ-ಕಾದಂಬರಿಗಳನ್ನು ಬರೆಯುತ್ತಿರುವ ನನಗೆ ಈಗ ಒಂದು ಸಂಗತಿ ಮನದಟ್ಟಾಗಿದೆ. ಓದುಗರಿಗೆ ಕಥನ ಸಂದರ್ಭ, ಕಥಾ ಮೀಮಾಂಸೆಗಳಿಗಿಂತ ಹೆಚ್ಚಾಗಿ ಕುತೂಹಲವಿರುವುದು ಪಾತ್ರಗಳ ಬಗ್ಗೆ; ಪಾತ್ರಗಳಿಗೆ ಏನಾಯಿತು, ಏನಾಗಬೇಕಾಗಿತ್ತು, ಏನಾಗಲಿಲ್ಲ, ಕತೆ ಬರೆದು ನಾನು ಅವರಿಗೆ ನ್ಯಾಯ ಒದಗಿಸಿದ್ದೇನೋ ಇಲ್ಲವೋ ಎಂಬುದು ಮಾತ್ರ ಅವರ ಗಮನದಲ್ಲಿರುತ್ತದೆ. ಒಂದರ್ಥದಲ್ಲಿ ಇದು ಸರಿಯೂ ಹೌದು. ಸಾಹಿತ್ಯ ಯಾವಾಗಲೂ ಜೀವಂತ ಅನುಭವಕ್ಕೆ (Live experience) ಹತ್ತಿರವಿರಬೇಕು ಎಂಬುದು ಕೂಡ ಎಲ್ಲ ಕಾಲಕ್ಕೂ ಸಲ್ಲುವ ಮಾತು. ಓದುಗರಷ್ಟೇ, ಓದುಗರಿಗಿಂತ ಹೆಚ್ಚಾಗಿ ನನ್ನ ಬಂಧುಮಿತ್ರರಲ್ಲಿ, ಕುಟುಂಬದ ಸದಸ್ಯರಲ್ಲಿ ಈ ಪಾತ್ರ ಕುತೂಹಲ ಹೆಚ್ಚು ಮತ್ತು ಹುಚ್ಚು. ನಾನು ಯಾರ ಬಗ್ಗೆ ಬರೆಯುತ್ತೇನೆ, ಹೇಗೆ ಬರೆಯುತ್ತೇನೆ, ಜನರು ಇರುವ ಹಾಗೆಯೇ ಪಾತ್ರಗಳು ಇವೆಯೇ? ಇಲ್ಲದಿದ್ದರೆ ನಾನು ಎಷ್ಟು ತಿರುಚಿದ್ದೇನೆ, ವಕ್ರೀಕರಿಸಿದ್ದೇನೆ, ಯಾಕೆ ಕೆಲವರ ಬಗ್ಗೆಯೇ ಬರೆಯುತ್ತೀನಿ, ಸುಮಾರಾಗಿ ಪರಿಚಯವಿರುವವರ ಬಗ್ಗೆ ಬರೆದು, ಆತ್ಮೀಯರ ಬಗ್ಗೆ ಮಾತ್ರ ಯಾಕೆ ಬರೆಯವುದಿಲ್ಲ? ಎಲ್ಲ ಸರಿ, ಊರಲ್ಲಿರುವವರ ಬಗ್ಗೆಯೆಲ್ಲ ಬರೆಯುತ್ತೀರಲ್ಲ, ನಿಮ್ಮನ್ನೇ ನೀವು ಏಕೆ ಇನ್ನೂ ಒಂದು ಪಾತ್ರ ಮಾಡಿಕೊಂಡಿಲ್ಲ ಎಂದು ಕೇಳುತ್ತಲೇ ಇರುತ್ತಾರೆ, ಕೆಣಕುತ್ತಲೇ ಇರುತ್ತಾರೆ. ಈ ಪ್ರಶ್ನೆಗಳ ಜೊತೆಗೆ ಇನ್ನೂ ಒಂದು ಒತ್ತಾಯವೂ ಇದೆ, ಹೆಂಡತಿ-ಮಕ್ಕಳಿಂದ. ನೀವು ಯಾರ ಬಗ್ಗೆ ಏನನ್ನಾದರೂ ಬರೆದುಕೊಳ್ಳಿ, ನಮ್ಮ ಬಗ್ಗೆ ಮಾತ್ರ ಏನೂ ಬರೆಯಬೇಡಿ. ಸಹೋದರು-ಸಹೋದರಿಯರು ಈ ಪ್ರಶ್ನೆಯನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತಾರೆ. ತಂದೆ-ತಾಯಿಗಳು, ಅಜ್ಜ-ಅಜ್ಜಿಯರ ಬಗ್ಗೆ ಬರೆಯುವ ಹಕ್ಕು ನಿನಗಿಲ್ಲ. ಏಕೆಂದರೆ, ಅವರು ನಿನಗೆ ಮಾತ್ರ ತಂದೆ-ತಾಯಿ, ಅಜ್ಜ-ಅಜ್ಜಿಯರಲ್ಲ. ನಮಗೂ ಕೂಡ. ನಿನಗೆ ಬರೆಯಲು ಬರುತ್ತದೆ ಎಂಬ ಕಾರಣಕ್ಕೆ ನೀನೊಬ್ಬ ಬರೆದದ್ದು ಮಾತ್ರ ನಿಜವಾಗಬೇಕೆ? ಅಷ್ಟು ಮಾತ್ರ ನಿಜವೆಂದು ಕಾಣಿಸಿಕೊಳ್ಳಬೇಕೆ?
ನಿಮ್ಮ ಪ್ರಶ್ನೆಗಳ ಭೂಮಿಕೆ ಸರಿಯಲ್ಲ. ಪಾತ್ರ ಸೃಷ್ಟಿ ಮಾತ್ರವೇ ಕತೆಗಳ, ಕಾದಂಬರಿಗಳ ಗುರಿಯಲ್ಲ. ಸನ್ನಿವೇಶ, ದೃಷ್ಟಿಕೋನ, ಹೋಲಿಕೆ ಎಲ್ಲವೂ ಸೇರಿ ಕತೆಯಾಗುತ್ತದೆ ಎಂದು ಬಿಡಿಸಿ ಹೇಳಿದರೆ, ಇಂತಹ ಟೋಪಿ ಹಾಕುವ ಮಾತುಗಳನ್ನು ಆಡಬೇಡ ಎಂದು ವ್ಯಂಗ್ಯವಾಡುತ್ತಾರೆ.
ಈ ಪ್ರಶ್ನೆಗಳು ಕೂಡ ಅಷ್ಟು ಮುಗ್ಧವೇನಲ್ಲ. ಸಂದರ್ಭಾನುಸಾರ, ದಿಕ್ಕು-ದೆಸೆ ಬದಲಾಯಿಸುತ್ತಲೇ ಹೋಗುತ್ತವೆ. ಇಷ್ಟೆಲ್ಲಾ ಪ್ರಶ್ನೆ ಕೇಳಿದ ಬಂಧುಮಿತ್ರರೇ ದಾಯಾದಿಗಳ ಪಾತ್ರ ಚಿತ್ರಣಕ್ಕೆ ಬಂದಾಗ, ನಾನು ಅವರೆಲ್ಲರಿಗೆ ಬೇಕಾದ ಹಾಗೆ ಪಾತ್ರ ರಚಿಸಿದ್ದರೆ ನನ್ನನ್ನು ಹೊಗಳುತ್ತಾರೆ. ಹಾಗೆ ಹೊಗಳಿದಾಗ ನನಗೂ ಖುಷಿಯಾಗುತ್ತದೆ. ಹೀಗೆ ಪಾತ್ರವಾದವರು ಇನ್ನೂ ಬದುಕಿದ್ದರಂತೂ ಅವರ ಬಳಿಯೇ ಹೋಗಿ ಕತೆ ಪ್ರಕಟವಾಗಿದೆಯೆಂದು ತಿಳಿಸಿ, ಪುಸ್ತಕ, ಪತ್ರಿಕೆ ಎಲ್ಲಿ ಸಿಗುತ್ತದೆ ಎಂಬ ವಿವರವನ್ನು ಕೊಡುತ್ತಾರೆ. ಇವರ ಬಗ್ಗೆ ಮಾತ್ರ ನೀನು ಇಷ್ಟು ಚೆನ್ನಾಗಿ ಬರೆದು ಉಳಿದವರ ಬಗ್ಗೆ ಮೌನದಿಂದಿರುವುದು ಎಷ್ಟು ಸರಿ ಎಂದು ವಾದಿಸುತ್ತಾರೆ. ಯಾರ ಬಗ್ಗೆ ಬರೆದಿಲ್ಲವೋ ಅವರೇ ನಿಮ್ಮ ನಿಜವಾದ ದಾಯಾದಿ ಶತ್ರುಗಳಲ್ಲವೇ ಎಂದು ಸವಾಲು ಹಾಕುತ್ತಾರೆ, ಪ್ರಚೋದಿಸುತ್ತಾರೆ.
ನಾನು ಕೂಡ ಹುಲುಮಾನವನೇ ಆಗಿರುವುದರಿಂದ ನನ್ನಲ್ಲೂ ಕೂಡ ಸ್ವಲ್ಪ ಕುಚೇಷ್ಟೆಯ ಸ್ವಭಾವವಿದೆ. ಕೆಲವು ಕತೆಗಳನ್ನು ಬರೆದಾಗ ನಾನೇ ಸುದ್ದಿಯನ್ನು ತೇಲಿಬಿಡುತ್ತೇನೆ. ಇಂಥವರ ಬಗ್ಗೆ ಬರೆದಿದ್ದೀನಿ, ಆದರೆ ಅವರಿಗೆ ಗೊತ್ತಾಗದ ರೀತಿಯಲ್ಲಿ ಕೆಲವು ಅಂಶಗಳನ್ನು ಕಾಲ್ಪನಿಕವಾಗಿ ಸೇರಿಸಿದ್ದೀನಿ ಎಂದು. ಬಂಧುಗಳು ಇನ್ನೂ ಜಾಣರು! ನೀನು ಬರೆದಿರುವುದೆಲ್ಲ ಕಾಲ್ಪನಿಕವಾದದ್ದೇನೂ ಅಲ್ಲ. ಎಲ್ಲವೂ ನಡೆದಿರುವಂತೆಯೇ ಇದೆ. ಪಾತ್ರ ಚಿತ್ರಣ ಚೆನ್ನಾಗಿದೆ ಎಂದು ಬೆನ್ನು ತಟ್ಟುತ್ತಾರೆ.
ಇನ್ನೊಂದು ಸಂಗತಿಯನ್ನು ಕೂಡ ನಾನು ಬಂಧುಗಳಿಗೆ ಬಿಡಿಸಿ ಹೇಳುತ್ತೇನೆ. ವೃತ್ತಿಯ ದೆಸೆಯಿಂದಾಗಿ ನನಗೆ ದೊರಕಿದ ಒಂದು ಅದೃಷ್ಟವೆಂದರೆ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ಜನಸಂಪರ್ಕ ಸಂಪಾದಿಸಿದ್ದೇನೆ. ಬೇರೆ ಬೇರೆ ದೇಶಭಾಷೆಗಳ ಪಾತ್ರಗಳಿಗೆ ಕನ್ನಡದ ಹೆಸರುಗಳನ್ನು ತೊಡಿಸಿದ್ದೇನೆ. ಯಾರಿಗೂ ನಾನು ಬರೆದದ್ದು ಗೊತ್ತಾಗುವುದಿಲ್ಲ. ತೆಲುಗು-ತಮಿಳು-ಮರಾಠಿ-ಹಿಂದಿ ಜನಗಳೆಲ್ಲ ಕನ್ನಡದಲ್ಲಿ ಉಸಿರಾಡುತ್ತಾ ಈಗ ಕರ್ನಾಟಕದ ಉದ್ದಗಲಕ್ಕೂ ಓಡಾಡಿಕೊಂಡಿದ್ದಾರೆ. ಅವರ‍್ಯಾರೂ ಬಂದು ನನ್ನನ್ನು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ಹಾಗೆಂದು ನಾನು ಇಲ್ಲದ ಸ್ವಾತಂತ್ರ್ಯವನ್ನು ಕೂಡ ತೆಗೆದುಕೊಂಡಿಲ್ಲ. ಜೀವಂತ ಮನುಷ್ಯರೇ ಬೇರೆ, ಪಾತ್ರಗಳೇ ಬೇರೆ.
ಸರಿ, ಸರಿ! ಇದೆಲ್ಲ ಎಲ್ಲ ಕತೆಗಾರರು ಹೇಳುವ ದೇಶಾವರಿ ಮಾತುಗಳು. ನಿನ್ನ ಬಗ್ಗೆಯೂ ಬರಿ. ನಿನ್ನ ಬಗ್ಗೆ ಯಾಕೆ ಬರೆಯುತ್ತಿಲ್ಲ ಎನ್ನುತ್ತಾರೆ. ನನ್ನ ಬಗ್ಗೆ ಬರೆಯುವಂಥದ್ದು ಏನೂ ಇಲ್ಲ. ನಾನೊಬ್ಬ ಸೀದಾಸಾದಾ ಮನುಷ್ಯ ಎಂದರೆ, ಪರವಾಗಿಲ್ಲ ನೀನಿರುವ ಹಾಗೆ ನಿನ್ನನ್ನು ಚಿತ್ರಿಸು ಎಂದು ಪೀಡಿಸುತ್ತಾರೆ.
ನೋಡಿ, ನೀವು ಹೇಳುವುದು ಪೂರ್ತಿ ನಿಜವಲ್ಲ. ಇಂತಿಂಥ ಕತೆಗಳಲ್ಲಿ ಇಂಥ ಸಂದರ್ಭಗಲ್ಲಿ ಚಿತ್ರಿಸಿರುವುದು ನನ್ನನ್ನು ಎಂದು ಉದಾಹರಣೆಗಳ ಸಮೇತ ವಿವರಿಸಿದರೂ ಯಾರೊಬ್ಬರೂ ಒಪ್ಪುವುದಿಲ್ಲ.
ಇಲ್ಲ, ಇಲ್ಲ, ಅದು ನೀನಲ್ಲ. ಸುಮ್ಮನೆ ಬೊಗಳೆ ಬಿಡಬೇಡ ಎಂದು ನೇರವಾಗಿಯೇ ಆಪಾದಿಸುತ್ತಾರೆ. ಈ ಆಪಾದನೆಗಳಿಂದ ತಪ್ಪಿಸಿಕೊಳ್ಳಲು ನಾನು ಆತ್ಮ ಚರಿತ್ರೆಯ ಭಾಗಗಳನ್ನು ಬರೆಯಬೇಕಾಯಿತು. ನಾಲ್ಕು ಸಂಪುಟಗಳನ್ನು ಬರೆದ ಮೇಲೂ ಬಂಧುಗಳದ್ದು ಅದೇ ಅಭಿಪ್ರಾಯ!
ಏನಿದು ನಿನ್ನ ಬಗ್ಗೆ ಬರಿ ಅಂದರೆ ಊರು, ಗ್ರಾಮ, ಜಾತಿ, ವೃತ್ತಿ, ಬಾಡಿಗೆ ಮನೆ ಎಂದು ಬೇರೆ ಬೇರೆ ಅವತಾರಗಳು. ನಿನ್ನನ್ನು ನಮ್ಮಿಂದ ಮತ್ತು ನಿನ್ನಿಂದಲೂ ಮುಚ್ಚಿಟ್ಟುಕೊಳ್ಳಲು ಏಕೆ ಇಷ್ಟೊಂದು ಅವತಾರಗಳು!
ಇಲ್ಲ, ಇಲ್ಲ, ಹಾಗಲ್ಲ. ಅದು ನಮ್ಮ ನಮ್ಮ ಕಾಲದ ಆತ್ಮಕತೆಯ ಒಂದು ಭಾಗ. ನಮ್ಮ ಕಾಲದಲ್ಲಿ ನೀವಿರುವಂತೆ ನಾನು ಕೂಡ ಇದ್ದೀನಿ. ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ನನ್ನ “ಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆ” ಓದಿ. ನಾನೆಷ್ಟು ಸಣ್ಣ ಮನುಷ್ಯ, ಸಾಮಾನ್ಯ ಮನುಷ್ಯ, ನನ್ನ ಆಸೆ, ಆಕಾಂಕ್ಷೆಗಳೆಲ್ಲ ಎಷ್ಟು ಸಾಧಾರಣವಾದವು ಎಂದು ಬರೆದಿದ್ದೇನೆ ಎಂದು ಹೇಳುತ್ತೇನೆ.
ಈ ಮಾತನ್ನು ಕೂಡ ಬಂಧುಗಳು ಒಪ್ಪಲಿಲ್ಲ. ಇಲ್ಲ, ಇಲ್ಲ, ಅಲ್ಲೂ ಕೂಡ ನೀನಿಲ್ಲ. ಇರುವುದು ನಿನ್ನ ಮುಖವಾಡ ಅಷ್ಟೇ! ನಗುವ, ಹಾಸ್ಯ ಮಾಡುವ ಲಘುಪ್ರವೃತ್ತಿಯ ಬರವಣಿಗೆ. ನೀನು ಅಷ್ಟೇ ಅಲ್ಲ ಮಾತ್ರವಲ್ಲ, ಒಂದು ಮಾತು ಸ್ಪಷ್ಟವಾಗಿ ತಿಳಿ, ಎಲ್ಲಿಯ ತನಕ ನಿನಗೆ ನಿನ್ನ ಬಗ್ಗೆ ಬರೆಯಲು ಸಾಧ್ಯವಿಲ್ಲವೋ, ನಿನಗೆ ನಿನ್ನ ಬಗ್ಗೆ ಪ್ರಶ್ನೆಗಳಿಲ್ಲವೋ, ಪ್ರಶ್ನೆಗಳಿದ್ದಲ್ಲಿ, ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಧೈರ್ಯವಿಲ್ಲವೋ, ಆ ಹುಡುಕಾಟದಲ್ಲಿ ಓದುಗರನ್ನು ಒಳಗು ಮಾಡಿಕೊಳ್ಳುವ ಒತ್ತಾಸೆಯಿಲ್ಲವೋ, ಅಲ್ಲಿಯ ತನಕ ಬರವಣಿಗೆಗೆ ಸಾರ್ಥಕತೆ ಬರುವುದಿಲ್ಲ. ಸಮಾಜದ ಬಗ್ಗೆ, ಸರ್ಕಾರದ ಬಗ್ಗೆ, ದೇವರ ಬಗ್ಗೆ, ಆಧ್ಯಾತ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಸುಲಭ. ಆದರೆ, ನಿನ್ನ ಬಗ್ಗೆ ನೀನೇ ಒಂದು ಸಣ್ಣ ಪ್ರಶ್ನೆ ಕೇಳಿಕೊಳ್ಳುವುದು ಕೂಡ ಕಷ್ಟ.
ದಿನ ಕಳೆದಂತೆ, ವರ್ಷ ಕಳೆದಂತೆ, ಎಲ್ಲ ಬಂಧುಮಿತ್ರರು ಇದೇ ಅಭಿಪ್ರಾಯ ಹೇಳಲು ಶುರು ಮಾಡಿದರು. ಆದ್ದರಿಂದ, ನಾನೇಕೆ ಪಾತ್ರವಾಗುವುದಿಲ್ಲ ಎಂಬ ಪ್ರಶ್ನೆಯನ್ನು ನಾನು ಹೇಗೆ ಪಾತ್ರವಾಗಿದ್ದೇನೆ ಎಂಬ ಪ್ರಶ್ನೆಯಾಗಿ ಮಾರ್ಪಡಿಸಿಕೊಂಡು ಬರೆಯುವುದೇ ಒಳ್ಳೆಯದೆಂದು ಈ ಬರಹ ಮಾಡಲು ಕೂತಿದ್ದೇನೆ.
ನೀನು ಅಷ್ಟೇ ಅಲ್ಲ ಮಾತ್ರವಲ್ಲ, ಒಂದು ಮಾತು ಸ್ಪಷ್ಟವಾಗಿ ತಿಳಿ, ಎಲ್ಲಿಯ ತನಕ ನಿನಗೆ ನಿನ್ನ ಬಗ್ಗೆ ಬರೆಯಲು ಸಾಧ್ಯವಿಲ್ಲವೋ, ನಿನಗೆ ನಿನ್ನ ಬಗ್ಗೆ ಪ್ರಶ್ನೆಗಳಿಲ್ಲವೋ, ಪ್ರಶ್ನೆಗಳಿದ್ದಲ್ಲಿ, ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಧೈರ್ಯವಿಲ್ಲವೋ, ಆ ಹುಡುಕಾಟದಲ್ಲಿ ಓದುಗರನ್ನು ಒಳಗು ಮಾಡಿಕೊಳ್ಳುವ ಒತ್ತಾಸೆಯಿಲ್ಲವೋ, ಅಲ್ಲಿಯ ತನಕ ಬರವಣಿಗೆಗೆ ಸಾರ್ಥಕತೆ ಬರುವುದಿಲ್ಲ. ಸಮಾಜದ ಬಗ್ಗೆ, ಸರ್ಕಾರದ ಬಗ್ಗೆ, ದೇವರ ಬಗ್ಗೆ, ಆಧ್ಯಾತ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಸುಲಭ.
ನಾನು ಬರೆದಿರುವ ಕತೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳಿಗೆ “ನನ್ನೊಡನೆ” ಇರುವ ಸಂಬಂಧವನ್ನು ಪರಿಶೀಲಿಸುವುದಕ್ಕಿಂತ, ನಾನು ಓದಿರುವ ಕತೆ, ಕಾದಂಬರಿಗಳಲ್ಲಿ ಎದುರಾದ, ನಂತರ ನನ್ನ ಬೆನ್ನ ಹತ್ತಿರ, ನನ್ನ ಮನಸ್ಸಿನೊಳಗೆ ಇಳಿದು ನನಗೆ ಆತ್ಮಸಖರಾದ ಪಾತ್ರಗಳ ಬಗ್ಗೆ ಬರೆಯುವುದೇ ಸರಿಯೇನೋ? ಯಾವುದೇ ಕತೆ, ಕಾದಂಬರಿಗಳಲ್ಲಿನ ಪಾತ್ರಗಳನ್ನು ಓದಿದರೂ, ಆ ಪಾತ್ರಗಳು ನನಗಿಂತ ಚೆನ್ನಾಗಿರುತ್ತಿದ್ದವು, ಜೀವ ತುಂಬಿಕೊಂಡಿರುತ್ತಿದ್ದವು. ತಕ್ಷಣವೇ ಪ್ರೀತಿ ಉಕ್ಕಿಬಿಡುತ್ತಿತ್ತು. ತುಂಬಾ ಸುಲಭವಾಗಿ ಅವುಗಳೊಡನೆ ಗುರುತಿಸಿಕೊಂಡುಬಿಡುತ್ತಿದ್ದೆ. ಹೀಗೆ ಗುರುತಿಸಿಕೊಳ್ಳುವುದಕ್ಕೆ ದೇಶ, ಭಾಷೆ, ಲಿಂಗ, ಜಾತಿ-ವರ್ಗದ ವ್ಯತ್ಯಾಸವಿರುತ್ತಿರಲಿಲ್ಲ. ಅವುಗಳ ಜೊತೆಯೇ ಇದ್ದುಬಿಡುತ್ತಿದ್ದೆ. ಅವುಗಳು ಹೋಗುವ ದೇಶ, ವಿದೇಶಗಳಿಗೆಲ್ಲ ನಾನೂ ಹೋಗುತ್ತಿದ್ದೆ. ಜಗತ್ತಿನ ಯಾವುದೋ ಒಂದು ಭಾಗದಲ್ಲಿ, ಯಾವುದೋ ಒಂದು ಕುಗ್ರಾಮದಲ್ಲಿ, ನಾಡ ಹೆಂಚಿನ ಮನೆಯಲ್ಲಿ ಹುಟ್ಟಿದ ನಾನು ವಿಶ್ವಪ್ರಜೆಯಾಗಿಬಿಡುತ್ತಿದ್ದೆ. ಆವಾಗೆಲ್ಲ ನಾನು ನಾನಾಗಿರುತ್ತಿರಲಿಲ್ಲ. ಇಲ್ಲ, ಇಲ್ಲ, ನಾನು ಎಂಬುದೇ ಇರುತ್ತಿರಲಿಲ್ಲ. ಅಂದರೆ, ನನ್ನ ಆಯಸ್ಸಿನಿಂದ ಒಂದಿಷ್ಟು ಪಾಲನ್ನು ಪಾತ್ರಗಳಿಗೆ ವರ್ಗಾಯಿಸುತ್ತಿದ್ದೆ. ಆಗ ಆ ಪಾತ್ರಗಳಿಗೆ ಜೀವ ಬಂದುಬಿಡುತ್ತಿತ್ತು. ಕಾಲದ ವ್ಯತ್ಯಾಸವು ಕೂಡ ಮರೆತುಹೋಗಿ ಅವುಗಳೊಡನೇ ಜೀವಿಸುತ್ತಿದ್ದೆ. ಹೀಗೆ ಗುರುತಿಸಿಕೊಂಡ, ತಳುಕು ಹಾಕಿಕೊಂಡ ಪಾತ್ರಗಳ ಎಷ್ಟೋ ಊರುಗಳಿಗೆ, ದೇಶಗಳಿಗೆ ಹೋಗುವ ಅವಕಾಶ ಈಚಿನ ವರ್ಷಗಳಲ್ಲಿ ಬಂತು. ನಾನು ಇದ್ದ, ಬದುಕಿದ್ದ ಊರುಗಳಲ್ಲಿ ಅಲ್ಲಿಯ ಜನ ಇನ್ನೂ ನನ್ನನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೋ ಇಲ್ಲವೋ ಎಂದೆಲ್ಲಾ ತಿಳಿಯುವ ಕುತೂಹಲ. ಎಲ್ಲ ಕಡೆಯೂ ನನ್ನನ್ನು ಮರೆತಿದ್ದರು ಅನ್ನುವುದು ನಿಜವಾದರೂ, ಕೆಲವು ಊರುಗಳಲ್ಲಾದರೂ ನಾನು ಪಾತ್ರಗಳ ಜೊತೆ ಇದ್ದ ದಿನಗಳನ್ನು, ವಿವರಗಳನ್ನು ನೆನಪಿನಲ್ಲಿಟ್ಟುಕೊಂಡು ನನ್ನನ್ನು ಭಾವನಂಟನಂತೆ ಚೆನ್ನಾಗಿ ಆದರಿಸಿದರು.
ಟಾಲ್‌ಸ್ಟಾಯ್ ಬಂಗಲೆಗೆ ಹೋಗಿ ಕೂಡ ನಾನು ತಿಂಗಳಾನುಗಟ್ಟಲೆ ಇದ್ದೆನಲ್ಲ. ಏಳನೆಯ ಮಗುವಾದಾಗ ಬಾಣಂತನದ ಅವಧಿಯುದ್ದಕ್ಕೂ ನಾನು ಅವರ ಬಂಗಲೆಯಲ್ಲೇ ಇದ್ದುಬಿಟ್ಟಿದ್ದೆ. ಗಂಡ-ಹೆಂಡತಿ ದಿನವೂ ಜಗಳ ಕಾಯುತ್ತಿದ್ದರು. ಸಂಜೆಯಾದರೆ, ರಾತ್ರಿಯಾದರೆ ಮೈ ತುಂಬಾ, ಮನ ತುಂಬಾ ಪ್ರೀತಿಸುವರು. ಈಗ ಹೋದರೆ, ನಾನಿದ್ದ ಆ ದಿನಗಳನ್ನು ಮಾತ್ರವಲ್ಲ, ಟಾಲ್‌ಸ್ಟಾಯ್ ಮತ್ತು ಆತನ ಪತ್ನಿಯನ್ನು ಕೂಡ ಮರೆತಿದ್ದರು. ನನಗೆ ಬೇಸರವಾದದ್ದು ನಿಜ. ಆದರೆ, ಅವನ ಕತೆ, ಕಾದಂಬರಿಗಳನ್ನು ಓದುವಾಗ ನಾನೂ ಕೂಡ ಅಲ್ಲಿಗೆ ಹೋಗಿ, ಅವರೊಡನೆಯೇ ಬದುಕಿದ್ದೆನಲ್ಲ. ಅದೂ ಕೂಡ ಮುಖ್ಯವಲ್ಲವೇ? ನಾನು ನೋಡಿದ, ಇಷ್ಟಪಟ್ಟ, ಸಿನೆಮಾ, ನಾಟಕದ ಪಾತ್ರಗಳ ಬಗ್ಗೆಯೂ ಹೀಗೇ ಆಗುತ್ತದೆ. ಸದ್ಯ, ಬಂಧುಮಿತ್ರರು ನಾನು ಸೃಷ್ಟಿಸಿದ ಪಾತ್ರಗಳ ಬಗ್ಗೆ ಮಾತ್ರ ಪ್ರಶ್ನೆ ಕೇಳುತ್ತಾರೆ. ನಾನು ಓದಿದ ಕತೆ, ಕಾದಂಬರಿಗಳ ಪಾತ್ರಗಳೊಡನೆ ಒಂದಾದ, ಬದುಕಿನ ರೀತಿಯ ಬಗ್ಗೆ ಪ್ರಶ್ನೆ ಕೇಳುವುದಿಲ್ಲವಲ್ಲ, ಅದೇ ನನ್ನ ಪೂರ್ವಜನ್ಮದ ಪುಣ್ಯ.
ನಾನು ಬರೆಯಲು ಹೊರಟ ಕತೆ, ಕಾದಂಬರಿಗಳ ಮೊದ ಮೊದಲ ಪ್ಯಾರಾಗಳಲ್ಲಿ, ಪುಟಗಳಲ್ಲಿ, ಪ್ರಾರಂಭಕ್ಕೆ ಒಂದೆರಡು ಪಾತ್ರಗಳು ಇರುತ್ತವೆ. ಅವು ನನ್ನನ್ನೇ ಹೋಲುತ್ತವೆ. ನನ್ನಂತೆಯೇ ಇರುತ್ತವೆ. ಗಂಡಸಾಗಲಿ, ಹೆಂಗಸಾಗಲಿ, ನನ್ನ ಜಾತಿಗೆ ಸೇರಿರಲಿ, ಇನ್ನೊಂದು ಜಾತಿಗೆ ಸೇರಿರಲಿ, ಎಲ್ಲದಕ್ಕೂ ನನ್ನ ಚಾಳಿಯೇ, ಸ್ವಭಾವವೇ. ಒಂದಿಷ್ಟು ಪುಟಗಳಾದ ನಂತರ ನನ್ನ ಬಗ್ಗೆ ಮತ್ತು ನನ್ನಂತೆಯೇ ಇರುವ ಪಾತ್ರಗಳ ಬಗ್ಗೆ ಬೇಸರವಾಗುತ್ತದೆ. ಬೇರೆ ಪಾತ್ರಗಳನ್ನು ಹುಡುಕಿಕೊಂಡು ಹೋಗುತ್ತೇನೆ. ಇಲ್ಲ ಬೇರೆ ಪಾತ್ರಗಳಿಂದ ಅವುಗಳ ಸ್ವಭಾವ, ಸೌಂದರ್ಯ, ಸಾಧ್ಯತೆಗಳನ್ನೆಲ್ಲ ಸಾಲ ಪಡೆದು ಸಪ್ಪೆಯಾಗಿ ಕಾಣುತ್ತಿರುವನನ್ನು ಪಾತ್ರದೊಡನೆ ಸೇರಿಸಿಬಿಡುತ್ತೇನೆ. ಆದರೆ ಬೇರೆ ಪಾತ್ರಗಳು ಇಲ್ಲಿ ಹೇಳುವಷ್ಟು ಸುಲಭವಾಗಿ ನನ್ನ ಬಳಿಗೆ ಬರುವುದಿಲ್ಲ. ತುಂಬಾ ಕೊಸರಾಡುತ್ತವೆ. ನಿನ್ನ ಸಹವಾಸವೇ ಬೇಡ, ನೀನು ಯಾವಾಗಲೂ ನಿನ್ನಂತೆಯೇ ಇರುವ ಪಾತ್ರಗಳ ಬಗ್ಗೆ ಮಮಕಾರದಿಂದ ಯೋಚಿಸುತ್ತಿ. ನಮ್ಮ ಬಗ್ಗೆ ಕ್ಯಾರೆ ಕೂಡ ಅನ್ನುವುದಿಲ್ಲ. ನಾವೇನು space fillers ಅಲ್ಲ.
ದಯವಿಟ್ಟು ಹಾಗೆ ಮಾಡಬೇಡಿ. ಬನ್ನಿ, ನನ್ನ ಮನಸ್ಸಿನ, ಬುದ್ಧಿಯ ಒಂದು ಭಾಗವನ್ನು ನಿಮಗೆ ಕೊಡುತ್ತೇನೆ, ನಿಮ್ಮನ್ನು ಮೈದುಂಬ ಸೃಷ್ಟಿಸುತ್ತೇನೆ ಎಂದು ಓಲೈಸಿ ನನ್ನ ಕತೆ, ಕಾದಂಬರಿಗಳ ಭಾಗವನ್ನಾಗಿ ಮಾಡಿಕೊಳ್ಳುತ್ತೇನೆ.
ಮೊದ ಮೊದಲು ನನಗೆ ಇದರಿಂದ ಭಯವಾಗುತ್ತಿತ್ತು. ಈಗ ಸಂತೋಷವಾಗುತ್ತದೆ. ಇಷ್ಟೊಂದು ಪಾತ್ರಗಳು ನನ್ನಂತೆಯೇ ಆಗುತ್ತಿವೆ, ನನ್ನ ಭಾಗವೇ ಆಗುತ್ತಿವೆ. ಇಷ್ಟೊಂದು ಪಾತ್ರಗಳಿಗೆ ಜೀವ ಕೊಡುವಂತದ್ದು ನನ್ನಲ್ಲೂ ಇದೆಯಲ್ಲ, ಇಷ್ಟೊಂದಿದೆಯೆಲ್ಲ ಎಂಬ ಭಾವನೆ ಬಲವಾಗಿ ಹೃದಯದಲ್ಲಿ ತುಂಬಿ ಬರುತ್ತದೆ.
ಈ ಕಾರಣಕ್ಕೇ ಇರಬೇಕು, ಬೇರೆ ಊರುಗಳಿಗೆ ಹೋದಾಗಲೂ ವಿಮಾನ ನಿಲ್ದಾಣದಲ್ಲಿ, ಹೋಟೆಲುಗಳಲ್ಲಿ, ಬಜಾರುಗಳಲ್ಲಿ ಕೆಲವರನ್ನು ನೋಡಿದ ತಕ್ಷಣ, ಓ! ಇವರು ನನ್ನನ್ನು, ನನ್ನ ಒಳಗನ್ನು, ನನ್ನ ಮನೋಧರ್ಮವನ್ನು ಬಯಸುತ್ತಾರೆ ಎಂಬ ಭಾವನೆ, ಪರಸ್ಪರ ನೋಡುತ್ತಲೇ ದೇಹದಲ್ಲಿ ಒಂದು ಪುಳಕ, ಅವರೆಡೆಗೆ ಚಲನೆ ಪ್ರಾರಂಭವಾಗುತ್ತಿತ್ತು. ಇವರು ಹೇಗೆ ದಿನ ಕಳೆಯುವರು? ಏನು ಉದ್ಯೋಗ ಮಾಡುವರು? ಇವರ ಮಕ್ಕಳು ಯಾವ ಶಾಲೆಗೆ ಹೋಗುತ್ತಾರೆ? ಇವರ ಹೆಂಡತಿ ಈಗ ಎಷ್ಟನೇ ಸಲ ಗರ್ಭಿಣಿ? ತಾಯಿ-ತಂದೆ ಜೊತೆಯಲ್ಲಿದ್ದಾರೋ ವೃದ್ಧಾಶ್ರಮದಲ್ಲಿದ್ದಾರೋ? ಅವರ ಕಾಯಿಲೆ ಕಸಾಲೆಗಳು, ಈ ಎಲ್ಲ ವಿವರಗಳನ್ನು ಸಂಗ್ರಹಿಸುತ್ತೇನೆ. ಪುಸ್ತಕಗಳನ್ನು ಓದುವುದರಿಂದಲ್ಲ, Data Centreನಿಂದಲೂ ಅಲ್ಲ, ಅವರನ್ನು ನೋಡು ನೋಡುತ್ತಲೇ, ನೋಡುತ್ತಿರುವಾಗಲೇ ಈ ವಿವರಗಳೆಲ್ಲ ಅವರ ಸುತ್ತ ಮುತ್ತಲೇ ಚಿತ್ರಗಳಲ್ಲಿ, ಅಕ್ಷರಗಳಲ್ಲಿ ಮೂಡುತ್ತವೆ. ನಾನು ಕನ್ನಡ ಲೇಖಕ ಎಂದು ಗೊತ್ತಾಗಿ, ಅಕ್ಷರಗಳು ಕನ್ನಡದಲ್ಲಿ ಸುಂದರವಾಗಿ ನರ್ತಿಸುತ್ತವೆ, ತಂಗಾಳಿ ಕರೆಯುತ್ತದೆ.
ತಪ್ಪು ತಿಳಿಯಬೇಡಿ! ನನಗೆ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಜೊತೆಗೇ ಇದ್ದುಬಿಡುವುದು, ಅವುಗಳ ಜೊತೆ ಹೋಗಿಬಿಡುವುದೇ ಇಷ್ಟ. ನಾಲ್ಕು ಜನರ ಮಧ್ಯೆ, ಜನಸಂದಣಿಯ ನಡುವೆ ಇದ್ದೂ ಕೂಡ ನಾನು ಪಾತ್ರಗಳ ಜೊತೆ ಇದ್ದುಬಿಡಬಲ್ಲೆ. ಕುಟುಂಬದ ಸದಸ್ಯರು ಆಗಾಗ್ಗೆ ಆಕ್ಷೇಪಣೆ ತೆಗೆಯುವುದುಂಟು. ನೀವು ಮನೆಯಲ್ಲಿದ್ದರೂ, ನಮ್ಮೊಡನೆಯೇ ಇರುವಂತೆ ಕಂಡರೂ, ಇನ್ನೊಂದು ಲೋಕದಲ್ಲಿರುತ್ತೀರಿ. ಯಾರ ಮಾತನ್ನೋ ಕೇಳಿಸಿಕೊಳ್ಳುತ್ತಿರುತ್ತೀರಿ. ಎಂಜಿನಿಯರ್ ಮಗನಿಂದ ಯಾವುದೇ ಗುಂಡಿ ಕೂಡ ಒತ್ತದೆ ನೀನು ಬೇರೊಂದು ಲೋಕಕ್ಕೆ ಎಷ್ಟು ಚೆನ್ನಾಗಿ, ಸಲೀಸಾಗಿ ಚಲಿಸಬಲ್ಲೆ ಎಂಬ ವ್ಯಂಗ್ಯಾತ್ಮಕ ಪ್ರಶಂಸೆ. ನಿಜ ಹೇಳಬೇಕೆಂದರೆ, ನನ್ನ ಸಾಮಾಜಿಕ, ಜೈವಿಕ ದೇಹವನ್ನು ಕುಟುಂಬದ ಸದಸ್ಯರ ಜೊತೆ ಇಟ್ಟು ದಿವ್ಯ ದೇಹವನ್ನು ಪಾತ್ರಗಳ ಜೊತೆ ಇರಲು ಒಯ್ಯುತ್ತೇನೆ. ಪಾತ್ರಗಳು ಇರುವ ಊರಿನಲ್ಲಿ ಹಗಲು ರಾತ್ರಿಗಳಿರುವುದಿಲ್ಲ. ನಕ್ಷತ್ರಗಳು ಯಾವಾಗಲೂ ಮಿನುಗುತ್ತವೆ. ರಸ್ತೆ ಉದ್ದವೇ ಇಲ್ಲ, ಅಗಲವಾಗಿರುತ್ತದೆ. ಪಾತ್ರಗಳ ನಗೆಯನ್ನು, ಬೀಸುವ ತಂಗಾಳಿಯನ್ನು ಕೈಯಲ್ಲಿ ಹಿಡಿದು ಜೇಬಿನಲ್ಲಿ ಇಟ್ಟುಕೊಳ್ಳಬಹುದು. ನೀರಿನ ಮೇಲೆ ನಡೆದೇ ನಾನು ನನ್ನ ಪಾತ್ರಗಳು ನದಿಗಳನ್ನು ದಾಟುತ್ತಾ ಬೇರೆ ಬೇರೆ ಖಂಡಗಳಿಗೆ, ದೇಶಗಳಿಗೆ ಹೋಗುತ್ತೇವೆ.
ಪಾತ್ರಗಳು ನನ್ನೊಡನೆ ಒಂದೆರಡು ಬೇಡಿಕೆಗಳನ್ನಿಡುತ್ತವೆ. ನೀನು ನಮ್ಮೊಡನೆ ಎಷ್ಟು ಸಂತೋಷವಾಗಿರುವೆ. ಇದರಲ್ಲಿ ಸ್ವಲ್ಪ ಭಾಗವನ್ನಾದರೂ ಓದುಗರೊಡನೆ ಹಂಚಿಕೊಳ್ಳಬಹುದಲ್ಲವೆ? ಹಾಗೆ ಓದುಗರೊಡನೆ ಹಂಚಿಕೊಂಡ ತಕ್ಷಣ, ಮತ್ತಷ್ಟು ಹೊಸ ಪಾತ್ರಗಳು ಇನ್ನೊಂದು ಲೋಕದಿಂದ ಬಂದು ನನಗೆ ಎದುರಾಗಿ ಮುಗುಳ್ನಕ್ಕು ನನ್ನೊಡನೆ ಇರುತ್ತವೆ. ಮತ್ತೆ ಅವುಗಳ ಜೊತೆ ಜೈತ್ರ ಯಾತ್ರೆ, ದಿವ್ಯ ಜೀವನ ಪ್ರಾರಂಭವಾಗುತ್ತದೆ.
ನನ್ನನ್ನು ಬಿಟ್ಟು ಓದುಗರೆಡೆಗೆ ಹೊರಟ ಪಾತ್ರಗಳು ಬಹು ಬೇಗ ಓದುಗರ ಪ್ರೀತಿ ಮತ್ತು ನಿಷ್ಠೆಯನ್ನು ಗಳಿಸಿಕೊಂಡು ಸಂತೋಷದಿಂದ ಇರುತ್ತವೆ. ಹೀಗೆ ಯಾವ ಲೋಕದ, ಯಾವುದೇ ಮನೆಯಲ್ಲಾದರೂ ಸಂತೋಷದಿಂದ ಇರುವುದೇ ಪಾತ್ರಗಳ ಲಕ್ಷಣ. ಮೊದಲು ಕೆಲವು ದಿನ ಓದುಗರ ಪುಸ್ತಕಗಳಲ್ಲಿ, ಗ್ರಂಥ ಭಂಡಾರದಲ್ಲಿ ಇದ್ದು ನಂತರ ಮನೆ, ತೋಟ, ಇಟ್ಟಿಗೆಗೂಡು, ದೇವಸ್ಥಾನ, ಸ್ಮಶಾನ ಎಲ್ಲ ಕಡೆಗೂ ನಲಿದಾಡಿಕೊಂಡು ಹೊರಟುಬಿಡುತ್ತವೆ. ಮತ್ತೆ ಪಾತ್ರಗಳನ್ನು ಕರೆಯಬೇಕು, ಓದುಗರೆಡೆಗೆ ಕಳಿಸಿಕೊಡಬೇಕು.
ಕತೆಗಾರರಾಗಿ ನಾವು ಸೃಷ್ಟಿಸಿದ ಪಾತ್ರಗಳಿಗಿಂತ, ಓದುಗರಾಗಿ ನಾವು ಎದುರಾದ ಪಾತ್ರಗಳಿಗಿಂತಲೂ, ಪಾತ್ರ ಪ್ರಪಂಚವನ್ನು ಮೀರಿ ಪಾತ್ರಗಳ ಸೃಷ್ಟಿಗೆ ಕಾರಣರಾದ ಮನುಷ್ಯರು, ಕಾಲ ದೇಶದ ಹಂಗನ್ನು ಮೀರಿ ಎಲ್ಲೆಲ್ಲೋ ಇರುತ್ತಾರೆ. ಸ್ವತಂತ್ರ ಜೀವನ ನಡೆಸುತ್ತಿರುತ್ತಾರೆ. ಇದು ನನಗೆ ಯಾವ ರೀತಿಯಲ್ಲೂ ಅರ್ಥವಾಗುವುದಿಲ್ಲ. ಟಾಲ್‌ಸ್ಟಾಯ್‌ನ ಅನ್ನಾ ನನ್ನ ಬದುಕಿನ ಪ್ರತಿದಿನದ ಅನುಭವದಲ್ಲೂ, ನಾನು ಓದುವ ಪ್ರತಿಯೊಂದು ಕೃತಿಯಲ್ಲೂ ನಿತ್ಯವೂ ಕಾಡುತ್ತಿರುತ್ತಾಳೆ. ಹೆಂಗಸರ ಪಾತ್ರಗಳನ್ನು ಸೃಷ್ಟಿಸುವಾಗ ಆಕೆಯ ಸೌಂದರ್ಯ, ಹಮ್ಮು-ಬಿಮ್ಮು, ತನ್ನನ್ನು ತಾನೇ ಕೊಂದುಕೊಳ್ಳುವ ರೀತಿ, ಇನ್ನಿಲ್ಲದ ತೀವ್ರತೆ, ಇನ್ನಿಲ್ಲದ ಹಂಬಲ ಎಲ್ಲವೂ ಕಣ್ಣೆದುರಿಗೇ ಬರುತ್ತವೆ. ಅನ್ನಾ ಕೂಡ ಬಂದು ಬಿಂಕಪೂರ್ಣವಾಗಿ ನಗುತ್ತಾ ಕತ್ತು ಕೊಂಕಿಸಿ ಎದುರಿಗೆ ನಿಂತುಬಿಡುತ್ತಾಳೆ, ಮುಂದೇನು ಎಂಬಂತೆ. ರೈಲಿನ ಕೆಳಗೆ ಸತ್ತಿದ್ದು ನಾನು ಅಲ್ಲವೇ ಅಲ್ಲ. ಅದು ಟಾಲ್‌ಸ್ಟಾಯ್‌ನ ಅನ್ನಾ ಎಂದು ಹೇಳುತ್ತಾಳೆ. ಅವಳ ದೇಹದ ಉಬ್ಬು ತಗ್ಗು, ಹೊಂಗೂದಲು, ಚೂಪು ಮೂಗು, ಎಲ್ಲವನ್ನೂ ಅವಳಿಗೆ ಹೇಳದೇ ನನ್ನ ಸ್ತ್ರೀ ಪಾತ್ರಗಳಿಗೆ ತುಂಬಿ ಹಂಚಿಬಿಡಲೇ ಎಂಬ ಆಸೆಯಾಗುತ್ತದೆ. ಹಾಗೆ ಮಾಡುವ ಮೂಲಕ ಅನ್ನಾಗೆ ಮೋಸ ಮಾಡಬಾರದು ಎಂಬುದು ಕೂಡ ತಕ್ಷಣವೇ ಹೊಳೆಯುತ್ತದೆ. ನನ್ನ ಬಳಿ ಇರು, ನಮ್ಮ ಮನೆಯಲ್ಲೇ ಇರು ಎಂದು ಕೇಳಿಕೊಳ್ಳುತ್ತೇನೆ. ಅಯ್ಯೋ! ನನಗೆ ಅಷ್ಟು ಬಿಡುವೆಲ್ಲಿದೆ. ಜಗತ್ತಿನ ಎಷ್ಟೊಂದು ಭಾಗಗಳಲ್ಲಿ, ಎಷ್ಟೊಂದು ಮನೆಗಳಲ್ಲಿ ನಾನು ಇರಬೇಕು. ಈಗ ನನ್ನ ಮರಿ ಮಗನಿಗೆ ಕೂಡ ಮಗುವಾಗಿದೆ. ಅದನ್ನು ಹೋಗಿ ನೋಡಬೇಕು. ನಾನೇನು ಕಾದಂಬರಿಯ ಪಾತ್ರವಲ್ಲ. ನಿಜವಾದ ಅನ್ನಾ. ನನಗೆ ನನ್ನದೇ ಆದ ಬದುಕು, ಜವಾಬ್ದಾರಿಗಳಿವೆ ಎನ್ನುತ್ತಾ ದಾಪುಗಾಲು ಹಾಕಿಕೊಂಡು ಹೊರಟುಬಿಡುತ್ತಾಳೆ. ಎಂತಹ ಆತ್ಮ ವಿಶ್ವಾಸದ ನಡಿಗೆ, ಏನು ಚಿಮ್ಮು. ಈ ಚಿಮ್ಮುವಿಕೆಯ ಬೆಡಗು, ಓರೆನೋಟಕ್ಕೇ ಅಲ್ಲವೇ ವ್ರಾಂಸ್ಕಿ ಮೊದಲ ನೋಟದಲ್ಲೇ ಮರುಳಾದದ್ದು. ಅನ್ನಾಗೆ ನಾನು ಇಷ್ಟೊಂದು ಪ್ರಾಮುಖ್ಯತೆ ಕೊಡುವುದರಿಂದ ನನ್ನ ಬಳಿ ಇರುವ ಇತರ ಪಾತ್ರಗಳು ಮುನಿಸಿಕೊಳ್ಳುತ್ತವೆ. ಕ್ಷಮಿಸಿ, ತಪ್ಪಾಯಿತು ಎನ್ನುತ್ತೇನೆ. ಅನ್ನಾಗೂ ನನ್ನದೇ ರೀತಿಯ ಮುನಿಸು, ಟಾಲ್‌ಸ್ಟಾಯ್ ಮೇಲೆ. ನಾನು ತೀರಿಹೋದ ಮೇಲೆ ಇಡೀ ಜಗತ್ತಿನಲ್ಲಿ ಮಂಕು ಕವಿದಂತೆ ಆತ ಬರೆಯುತ್ತಾನೆ. ನನಗದು ಇಷ್ಟವಾಗಲ್ಲ. ನಾನು ಕಾದಂಬರಿಯಲ್ಲಿ ಸತ್ತಿರಬಹುದು. ಪಂಚಭೂತಗಳಲ್ಲಿ ಬೆರೆತು, ವಿಶಾಲಸೃಷ್ಟಿಯಲ್ಲಿ ಬದುಕಿರುತ್ತೇನೆ. ಕಾದಂಬರಿಯ ಜಗತ್ತೇ ನಿಜವಾದ ಜಗತ್ತಲ್ಲ. ಕಾದಂಬರಿಯ ಪಾತ್ರಗಳೇ ನಿಜವಾದ ಮನುಷ್ಯರಲ್ಲ.
ಅನ್ನಾ ಮಾತ್ರವಲ್ಲ, ಹೀಗೆ ಇನ್ನೂ ಎಷ್ಟೋ ಜನ ನನ್ನ ಹತ್ತಿರ ಇದ್ದಾರೆ. ಇನ್ನೂ ಅವರೆಲ್ಲರನ್ನೂ ಮಾತನಾಡಿಸಿ ಪರಿಚಯ ಮಾಡಿಕೊಳ್ಳಬೇಕು. ಅವರ ಪ್ರವರ, ಪ್ರಕಾರಗಳನ್ನೆಲ್ಲ ತಿಳಿದುಕೊಳ್ಳಬೇಕು. ನನಗೆ ತಿಳಿದ ಮಟ್ಟಿಗೆ, ನನ್ನ ಬರವಣಿಗೆಗಿರುವ ಶಕ್ತಿಗನುಗುಣವಾಗಿ ಇವರೆಲ್ಲರನ್ನೂ ನನ್ನ ಪಾತ್ರಗಳಲ್ಲಿ ತುಂಬುತ್ತಾ ಹೋಗುತ್ತೇನೆ. ಇದು ಎಂದೆಂದೂ ಮುಗಿಯದ ಕೆಲಸ.
ಹೀಗೆ ನನ್ನೊಳಗೆ, ನನ್ನ ಬಳಿ ಇರುವ, ನನ್ನ ಬಳಿಗೆ ಬರಲು ಬಯಸುವ ಪಾತ್ರಗಳ ಮುಂದೆ ನಾನು ಯಾವ ಸೀಮೆಯ ಕೊಣಾಸು? ನನ್ನೊಳಗಿನ, ಆಳ-ಪಾತಾಳಕ್ಕಿಳಿದು, ಎಲ್ಲವನ್ನೂ ಸೋಸಿ ತೆಗೆದರೂ, ಅದನ್ನೆಲ್ಲ ಪ್ರಾಮಾಣಿಕವಾಗಿ ನಿವೇದಿಸಿಕೊಂಡು ಬರೆದರೂ, ನಾನು ಈ ಪಾತ್ರಗಳ ಶ್ರೀಮಂತಿಕೆ, ವೈವಿಧ್ಯದಲ್ಲಿ ಒಂದು ಕಿಂಚಿತ್ ಭಾಗ ಕೂಡ ಆಗುವುದಿಲ್ಲ. ಹಾಗಾಗಿ ನಾನು ನನ್ನನ್ನೇ ಪಾತ್ರ ಮಾಡಿಕೊಳ್ಳುವ ಅಗತ್ಯವಿಲ್ಲ.
ನನ್ನನ್ನು ಈ ಭುವಿಗೆ ತರಲು ಕಾರಣರಾದ ನಮ್ಮ ತಂದೆ-ತಾಯಿ ಕೂಡ ನಾನು ಅವರ ಮಗನಾಗಬೇಕೆಂದು ಬಯಸಿದ್ದರೇ ಹೊರತು ನಾನೇ ಒಂದು ಪಾತ್ರವಾಗಬೇಕೆಂದಾಗಲೀ ನನ್ನನ್ನೇ ಒಂದು ಪಾತ್ರವನ್ನಾಗಿ ನಾನು ಸೃಷ್ಟಿಸಬೇಕೆಂದಾಗಲೀ ಬಯಸಿರಲಿಲ್ಲ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ಬರಹಗಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ತನ್ನ ಕಥೆ ಕಾದಂಬರಿಗಳ ಪಾತ್ರವಾಗಿಬಿಡುತ್ತಾನೆ ಅವನು ಬರೆಯುವುದು ಅವನ ಅನುಭವ ಕಥನ. ಆದರೆ ತನ್ನ ವ್ಯಕ್ತಿತ್ವದ ಬದುಕಿನ ಅನುಭವದ ಗಾಢ ಒ್ರಭಾವವಗಳಿಂದ ಪಾರಾಗುವುದು ಕಷ್ಟ. ಹಾಗಾಗಿ It is an extinction of personality, an escape from the self. ಎಂದು ಟಿ. ಎಸ್ ಏಲ್ಯಟ್ ಹೇಳುತ್ತಾನೆ. ತನ್ನ ಅನುಭವದ ಬರಹಗಖ ಮೂಲಕ ಅಭಿವ್ಯಕ್ತಿಗೆ ಒಂದು Objective correlative ಅನ್ನು ಸೃಷ್ಟಿಸಿಕೊಳ್ಳುತ್ತಾನೆ. ಪರಕಾಯ ಪ್ರವೇಶವನ್ನು ಸಾಹಿತಿಯಾದವನು ಮಾಡಬೇಕಾಗುತ್ತದೆ ಬರಹಗಾರನ ತನ್ನ ವ್ಯಕ್ತಿತ್ವದಿಂದ ಪಾರಾಗುವುದರ ಕುರಿತು ಇಲ್ಲಿ ಬರಹಗಾರ ತಾನು ಚಿತ್ರಿಸುವ ಪಾತ್ರಗಳು ಇನ್ನಾರೋ ಆಗಿದ್ದರೂ ನನ್ನತನ ಎಲ್ಲೋ ಒಂದೆಡೆ ನುಸುಳಿಬಿಡಬಹುದೇನೊ ಸೃಷ್ಟಿಸಿದ ಪಾತ್ರಗಳಲ್ಲಿ ಚಿಂತನಾರ್ಹ ಪ್ರಬಂಧ
thanks sir