ಬಿಡುವಿನ ನಿಮಿಷಗಳಲ್ಲಿ ನಾವು ಕೈಗೊಳ್ಳುವ ಚಿಕ್ಕ ಚಿಕ್ಕ ವ್ಯವಸ್ಥಿತ ಕಾರ್ಯಗಳು ನಮ್ಮ ಒಳಗನ್ನು ರೂಪಿಸುತ್ತವೆ. ಮಲಗಿ ಎದ್ದ ದಿಂಬನ್ನು ಹಾಸಿಗೆಯ ತುದಿಯಲ್ಲಿ ಒಪ್ಪವಾಗಿ ಇಡುವುದಕ್ಕೂ, ಕೊಂಚ ಕೆಳಗೆ ಹಾಗೇ ಬಿಡುವುದಕ್ಕೂ ನಡುವಿನ ಅಂತರ ಕೆಲವೇ ಸೆಂಟೀಮೀಟರುಗಳಷ್ಟಾದರೂ ಅದನ್ನು ಆ ಎರಡು ಬೇರೆ ಬೇರೆ ಜಾಗಗಳಲ್ಲಿಟ್ಟ ವ್ಯಕ್ತಿಯ ವ್ಯಕ್ತಿತ್ವದ ನಡುವಿನ ವ್ಯತ್ಯಾಸ ಮೈಲಿಗಳಷ್ಟು! ಇನ್ನು ನಮ್ಮ ಇನ್ನೊಂದು ಸಮಸ್ಯೆಯೆಂದರೆ ಹೆಚ್ಚಿನ ಸಲ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರೂ ಆದಾಯವಲ್ಲದ ಕಾರ್ಯಗಳ ಆಳಕ್ಕೆ ನಾವು ಇಳಿಯುವುದೇ ಇಲ್ಲ. ವಾರಕ್ಕೊಂದು ಸಿನಿಮಾ ನೋಡಿದರೂ ಅದರ ತಾಂತ್ರಿಕ ವಿಷಯಗಳಾಗಲೀ, ಸೃಜನಶೀಲ ಸೂಕ್ಷ್ಮಗಳಾಗಲೀ ಅರ್ಥವಾಗಿರುವುದೇ ಇಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಅವರೊಬ್ಬ ಚಿತ್ರ ಕಲಾವಿದ. ಹೊರ ರಾಜ್ಯವೊಂದರಲ್ಲಿ ನೆಲೆಸಿದ್ದಾರೆ. ಮಲೆನಾಡಿನ ಹಳ್ಳಿಯೊಂದರಲ್ಲಿ ವಿಶಾಲವಾದ ಕೇಂದ್ರವೊಂದನ್ನು ಕಟ್ಟಿಸಿದ್ದಾರೆ. ಹೊರಗಿನಿಂದ ನೋಡುವ ಅಸಡ್ಡೆಯ ಕಣ್ಣುಗಳಿಗವು ವಿಶ್ರಾಂತಿ ಗೃಹಗಳಂತೆ ಕಾಣುತ್ತವೇನೋ? ಆದರೆ ಅಲ್ಲಿ ಕೃಷಿಯ ಬಗ್ಗೆ, ವಿವಿಧ ಸಸಿ, ಬೀಜ, ಬಳ್ಳಿಗಳ ಬಗ್ಗೆ ಮಾಹಿತಿ ದೊರಕುತ್ತದೆ. ಯಾವ್ಯಾವುದೋ ಹೊಸ ತಳಿಗಳು ಹುಟ್ಟಿ ನಳನಳಿಸುತ್ತವೆ. ಕಾಡಿನ ಸಂರಕ್ಷಣೆಯ ಕುರಿತು, ಸಾವಯವ ಗೊಬ್ಬರ ತಯಾರಿಸುವ ಕುರಿತು ಉದಾಹರಣೆ ಸಹಿತ ವಿವರ ದೊರೆಯುತ್ತದೆ. ಅಲ್ಲಿ ಹಳ್ಳಿಯ ಬದುಕಿನ ನಿಜವಾದ ಪರಿಕಲ್ಪನೆಯಿದೆ. ಬೇಸಿಗೆ ಶಿಬಿರಗಳಿವೆ. ಅವರು ಎಷ್ಟೋ ಕೆರೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಒಟ್ಟಾರೆ ಅವವೇ ಬಿಲ್ಡಿಂಗು, ಕಂಪ್ಯೂಟರ್ರು, ಮಾಲು, ಆಫೀಸು, ಮಣ್ಣು ಮಸಿಗಳಾಚೆಗೆ ಜೀವಂತವಾದುದೇನನ್ನೋ ನೋಡಬೇಕು ಎಂದುಕೊಂಡವರೆಲ್ಲರಿಗೂ ಸಂತೃಪ್ತಿಯಾಗುವಂಥಾದ್ದೇನೋ ಅಲ್ಲಿದೆ.
ಆತ ಮೂರ್ನಾಲ್ಕು ತಿಂಗಳಿಗೊಮ್ಮೆ ಅಲ್ಲಿಗೆ ಬರುತ್ತಾರೆ. ಮೂರ್ನಾಲ್ಕು ದಿನ ಇರುತ್ತಾರೆ. ಹಾಗೆ ನೆಲೆಸಿದ ದಿನಗಳಲ್ಲಿ ಅವರು ಒಂದೊಂದು ನಿಮಿಷವನ್ನು ಕಳೆಯುವ ಬಗೆಯೂ ಅಚ್ಚರಿ ಮೂಡಿಸುತ್ತದೆ. ಶಿಬಿರಗಳು, ಕಾರ್ಯಾಗಾರಗಳು, ಕಾರ್ಯಕ್ರಮಗಳು ಇವೆಲ್ಲ ಹೇಗೂ ಆಯಿತು. ಎಲ್ಲರನ್ನೂ ವ್ಯಸ್ಥವಾಗಿಡುವ ಗಂಟೆಗಳವು. ಆದರೆ ಅವುಗಳಾಚೆಗೆ ವಿರಾಮದಂತೆ ಕಾಣುವ ಒಂದೊಂದು ನಿಮಿಷವನ್ನೂ ಅವರು ಕಳೆಯುವ ಬಗೆಯೇ ಅತ್ಯಂತ ಸ್ವಾರಸ್ಯಕರವಾದದ್ದು. ಎಲ್ಲರೂ ನಗುತ್ತ, ಹರಟುತ್ತ ನಿಧಾನವಾಗಿ ಉಣ್ಣುವಾಗ ಅವರು ಮಾತ್ರ ಪಟಪಟನೆ ಉಂಡು ತಮ್ಮದೇ ಕೇಂದ್ರ ಕಟ್ಟಡಕ್ಕೊಂದು ಸುತ್ತು ಬರುತ್ತಾರೆ. ಅಲ್ಲಿರುವ ಯಾವುದೋ ವ್ಯವಸ್ಥೆಯನ್ನು ಚಿಕ್ಕದಾಗಿ ಬದಲಾಯಿಸುತ್ತಾರೆ. ಆ ತಿಂಗಳ ಕಾರ್ಯ ಪಟ್ಟಿಯಲ್ಲಿ ಹೊಸದೊಂದು ಸಾಲು ಸೇರಿಸುತ್ತಾರೆ. ಮೊಬೈಲು ತೆರೆದು ಬಂದಿರುವ ಇಮೇಲುಗಳಿಗೆ ಉತ್ತರಿಸುತ್ತಾರೆ. ದಿನಚರಿಯಲ್ಲಿ ದಾಖಲಿಸಲಿಕ್ಕೇ ಆಗದ ಕ್ಷುಲ್ಲಕ ಎನಿಸುವ ಕೆಲಸವೊಂದನ್ನು ಕಾಳಜಿಯಿಂದ ಮಾಡಿ ಮುಂದಿನ ಕಾರ್ಯಕ್ಕೆ ನಡೆಯುತ್ತಾರೆ.
ಚಿತ್ರಕಲಾವಿದರಾದ ಅವರು ಬದುಕಿನ ಪ್ರತಿಯೊಂದು ನಿಮಿಷವನ್ನೂ ಒಂದೊಂದು ಕ್ಯಾನ್ವಾಸಿನಂತೆ, ಫ್ರೇಮಿನಂತೆ ನೋಡುತ್ತಾರೆ ಎಂದು ಆಗಾಗ ಅನ್ನಿಸುವುದಿದೆ. ಇಷ್ಟೇ ಇಷ್ಟಿರುವ ಕ್ಯಾನ್ವಾಸಿನ ಯಾವ ಮೂಲೆಯನ್ನೂ ಕಡೆಗಣಿಸದೇ ಎಲ್ಲ ತುದಿಗಳಲ್ಲೂ ಬಣ್ಣದ ರೇಖೆಗಳಿಂದ ಏನೋ ಒಂದನ್ನು ಅರ್ಥಪೂರ್ಣವಾಗಿ ಚಿತ್ರಿಸುವಂತೆ ಬದುಕಿನ ಒಂದೊಂದು ಕ್ಷಣವನ್ನೂ ಚಿಕ್ಕ ಚಿಕ್ಕ ಚಟುವಟಿಕೆಯಿಂದ ತುಂಬಿಸುವ ಈ ಲವಲವಿಕೆಯೇ ಅವರನ್ನು ಇಷ್ಟು ದೊಡ್ಡ ಕಲಾವಿದರನ್ನಾಗಿಸಿದೆ. ಇರಬಹುದು ಅವರೂ ನಮ್ಮಂತೆಯೇ. ಬಿಡುವಿನ ಸಮಯದಲ್ಲಿ ರೀಲ್ಸು ನೋಡುತ್ತ. ಯಾವುದೋ ರಾಜಕೀಯದ ಪೋಸ್ಟಿಗೆ ಯಾರೂ ಕೇಳದ ಕಮೆಂಟುಗಳನ್ನು ಅಂಟಿಸುತ್ತ. ಹೆಸರೂ ಗೊತ್ತಿಲ್ಲದ ಯಾವುದೋ ಅನಾಮಧೇಯನ ಜೊತೆ ಕೋಹ್ಲಿ ಗ್ರೇಟಾ ಧೋನಿ ಗ್ರೇಟಾ ಎಂದು ವಾದ ಹೂಡುತ್ತಾ. ಸ್ವೈಪ್ ಮಾಡಿದ ಮರುಕ್ಷಣ ಮರೆತೇ ಹೋಗುವ ಹಾಸ್ಯ, ಸಿನಿಮಾ, ರಾಜಕೀಯ, ಕ್ರಿಕೇಟು, ವಿಜ್ಞಾನದ ಶಾರ್ಟ್ ವೀಡಿಯೋಗಳಿಗೆ ದಿನದ ಹತ್ತಾರು ಗಂಟೆಗಳನ್ನು ಅಡವಿಡುತ್ತಾ.
ಅವರ ದೈನಿಕವನ್ನು ನೋಡಿದಾಗ ಒಪ್ಪವಾಗಿ ಜೋಡಿಸಿಟ್ಟ, ಅಗತ್ಯವಷ್ಟೇ ಆಗಿರುವ ವಸ್ತುಗಳಿರುವ, ವ್ಯವಸ್ಥಿತವಾದ ಕೋಣೆಯಂತೆ ಕಾಣುತ್ತದೆ. ಅಲ್ಲಿ ಹಿತಮಿತವಾದ ಊಟವಿದೆ. ವ್ಯಾಯಾಮವಿದೆ. ಓದು ಇದೆ. ಮನೋರಂಜನೆಯಿದೆ. ಆಪ್ತೇಷ್ಟರ ಜೊತೆ ಚರ್ಚೆಯಿದೆ. ಪ್ರವಾಸವಿದೆ. ಇವನ್ನೆಲ್ಲ ಅವರು ಹೇಗೆ ಸಾಧಿಸಿದರು ಎಂದು ನೋಡುವಾಗ ಅರ್ಥವಾಗುವ ಮೊದಲ ಅಂಶ ಅವರ ಒಂದು ದಿನದಲ್ಲಿ ನಮ್ಮಂತೆ ಇಪ್ತತ್ನಾಲ್ಕು ಗಂಟೆಗಳಿಲ್ಲ. ಬದಲಿಗೆ ಸಾವಿರದ ನಾನೂರ ನಲವತ್ತು ನಿಮಿಷಗಳಿವೆ! ದಿನವನ್ನು ಗಂಟೆಗಳಾಗಿ ವಿಭಾಗಿಸಿಕೊಂಡ ನಾವು ಅದೆಷ್ಟು ನಿಮಿಷಗಳನ್ನು ಚಿಲ್ಲರೆಗಳಂತೆ ಕಳೆಯುತ್ತೇವಲ್ಲವೇ? ಬೆಳಗ್ಗೆ ಆರೂ ಮೂವ್ವತ್ತಕ್ಕೆ ಎಚ್ಚರವಾದರೂ ಏಳಕ್ಕೆ ಏಳೋಣ ಎಂದು ಹೊದ್ದು ಮಲಗುತ್ತೇವೆ. ಮೂವತ್ತು ನಿಮಿಷಗಳನ್ನು ಕಳೆದುಕೊಳ್ಳುತ್ತೇವೆ. ಊಟ ಮಾಡುವ ಮಧ್ಯಾಹ್ನದ ಒಂದು ಗಂಟೆಗೆ ಇನ್ನೂ ಅರ್ಧ ಗಂಟೆಯಿದೆ. ಹಿತ್ತಲಲ್ಲೇನೋ ಕೆಲಸವಿದೆ. ಊಟವಾದ ಬಳಿಕ ಮಾಡೋಣವೆಂದು ಮೊಬೈಲು ಹಿಡಿದು ಆ ಅರ್ಧ ಗಂಟೆಯನ್ನು ವ್ಯಯಿಸುತ್ತೇವೆ. ಮನೆಯಿಂದ ಆಫೀಸಿಗೆ ಹೋಗುವ ಮೆಟ್ರೋ ಪ್ರಯಾಣದಲ್ಲಿ ಇಪ್ಪತ್ತು ನಿಮಿಷ ಬಿಡುವಿದೆ. ಅದೂ ಒಂದು ಸಮಯ, ಅವಕಾಶ, ಅವಧಿ ಎಂದು ನಾವು ಪರಿಗಣಿಸಿಯೇ ಇಲ್ಲ! ಅದಕ್ಕೆ ವ್ಯಯವಾಗುವ ಕಾಲವೂ ನಮ್ಮ ಆಯಸ್ಸಿನಿಂದಲೇ ಮೈನಸ್ ಆಗುತ್ತದೆ ಎನ್ನುವುದು ನಮಗೆ ಗೊತ್ತೇ ಇಲ್ಲ!

ನಿಮಿಷಗಳನ್ನು ಕಡೆಗಣಿಸಿದವರ ಬಾಳಿನಿಂದ ‘ನನಗೆ ಟೈಮೇ ಇಲ್ರೀ’ ಎನ್ನುವ ವರಾತ ಯಾವಾಗಲೂ ಎದ್ದು ಬರುತ್ತಲೇ ಇರುತ್ತದೆ. ನಮ್ಮ ಲೆಕ್ಕಾಚಾರದಲ್ಲಿ ಸಮಯ, ಕಾಲಾವಕಾಶ ಎಂದರೆ ಒಂದಿಡೀ ದಿನ. ಇಲ್ಲವೇ ಹತ್ತಾರು ಗಂಟೆಗಳ ಒಂದು ಹಗಲು. ಅಥವಾ ಕೆಲವಾದರೂ ಗಂಟೆಗಳು. ಕನಿಷ್ಠ ಒಂದು ಗಂಟೆ. ಅದಕ್ಕಿಂತ ಕಡಿಮೆಯಾದ ಸಮಯವನ್ನು ನಾವು ಕಾಲಾವಕಾಶ ಎಂದು ಪರಿಗಣಿಸುವುದೇ ಇಲ್ಲ! ಇನ್ನು ಇಪ್ಪತ್ತು ನಿಮಿಷ ಮಲಗಿ ಏಳಕ್ಕೆ ಏಳೋಣ ಎಂದು ಎಚ್ಚರಾದ ಮೇಲೂ ಮಲಗಿದ ಹೆಚ್ಚುವರಿ ನಿಮಿಷಗಳನ್ನೇ ಒಟ್ಟಾಗಿ ಸೇರಿಸಿದರೆ ವರ್ಷದಲ್ಲಿ ಐದಾರು ದಿನಗಳಷ್ಟಾಗುತ್ತದೆ. ಬಸ್ಸು, ಮೆಟ್ರೋಗಳಲ್ಲಿ ನಿತ್ಯ ಪ್ರಯಾಣಿಸುವ ಒಂದೆರಡು ಗಂಟೆಗಳಂತೂ ವರ್ಷಕ್ಕೆ ಬದಲಾಯಿಸಿದಾಗ ತಿಂಗಳುಗಳೇ ಆಗುತ್ತವೆ! ಹೀಗೆ ತುಣುಕು ತುಣುಕುಗಳಾಗಿ ಕಳೆದುಕೊಂಡ ಒಟ್ಟು ಸಮಯ ಹೆಚ್ಚೂ ಕಡಿಮೆ ವರ್ಷದ ಕಾಲು ಭಾಗಕ್ಕಿಂತ ಹೆಚ್ಚಿದೆ!
ಈ ಮನಸ್ಥಿತಿಗೆ ಮುಖ್ಯ ಕಾರಣ ಆದಾಯ ಸೃಜಿಸದ, ದೈನಿಕಕ್ಕೆ ಅತ್ಯವಶ್ಯಕವಲ್ಲದ ಎಲ್ಲವನ್ನೂ ನಾವು ವ್ಯರ್ಥ ಎಂದು ಪರಿಗಣಿಸಿರುವುದು. ಉದಾಹರಣೆಗೆ ಹೂ ಬಿಡದ ಗಿಡವೊಂದು ಪಾಟಿನಲ್ಲಿದ್ದರೆ ನಾವು ಕಿತ್ತು ಎಸೆಯುತ್ತೇವೆ. ತನ್ನಷ್ಟಕ್ಕೆ ತಾನೇ ಅಗೋಚರವಾಗಿ ಈ ಪರಿಸರಕ್ಕೆ ಅದು ಕೊಡುತ್ತಿರುವ ಕೊಡುಗೆಯನ್ನು ನೋಡುವಂಥ ಒಳಗಣ್ಣು ನಮಗೆ ಇಲ್ಲವೇ ಇಲ್ಲ. ನಮ್ಮ ದೃಷ್ಟಿಯಲ್ಲಿ ಕೊಡುಗೆ ಎಂದರೆ ಹೂವು, ಕಾಯಿ, ಹಣ್ಣು, ಹಣ ಮಾತ್ರ. ಓದುವುದು, ಕೆಟ್ಟು ನಿಂತ ಮಿಕ್ಸಿಯನ್ನು ನಾವೇ ರಿಪೇರಿ ಮಾಡಲೆತ್ನಿಸುವುದು, ಆವರಣದಲ್ಲೊಂದಷ್ಟು ಚಿಕ್ಕ ಗಿಡಗಳನ್ನು ನೆಡುವುದು, ಶೋಕೇಸಿನ ಧೂಳು ಕೊಡವುವುದು, ಹಿಂದುಗಡೆ ಬಾಗಿಲಿನ ಬಳಿ ತೆವಳುತ್ತ ಹೋಗುತ್ತಿರುವ ಒನಕೆ ಹುಳವನ್ನು ಹಿಂಬಾಲಿಸಿ ಅನೂಹ್ಯ ಪ್ರಪಂಚವನ್ನು ತಲುಪುವುದು… ಇವ್ಯಾವುದನ್ನೂ ಮಾಡಲೇಬೇಕಾದ ಅನಿವಾರ್ಯತೆಯಿಲ್ಲವಾದ್ದರಿಂದ, ಇದೆಲ್ಲದರಿಂದ ಹಣ ಸಿಗುವುದಿಲ್ಲವಾದ್ದರಿಂದ, ಮಾಡದಿದ್ದರೆ ಯಾವ ಬಾಸೂ ಎಸ್ಕಿಲೇಷನ್ ಇಮೇಲ್ ಬರೆಯುವುದಿಲ್ಲವಾದ್ದರಿಂದ ನಾವು ಇವ್ಯಾವುದೂ ಮಾಡುವುದಿಲ್ಲ. ಆದರೆ ಅದಕ್ಕಿಂತ ವ್ಯರ್ಥವಾದ ಗಾಸಿಪ್, ನ್ಯೂಸ್, ರೀಲ್ಸ್, ಕಮೆಂಟುಗಳಲ್ಲಿ ಸಮಯ ಕಳೆದು ಒಳಗೊಳಗೇ ಟೊಳ್ಳಾಗಿ ದಿನವನ್ನು ಸಮಾಪ್ತಿ ಮಾಡುತ್ತೇವೆ.
ಬಿಡುವಿನ ನಿಮಿಷಗಳಲ್ಲಿ ನಾವು ಕೈಗೊಳ್ಳುವ ಚಿಕ್ಕ ಚಿಕ್ಕ ವ್ಯವಸ್ಥಿತ ಕಾರ್ಯಗಳು ನಮ್ಮ ಒಳಗನ್ನು ರೂಪಿಸುತ್ತವೆ. ಮಲಗಿ ಎದ್ದ ದಿಂಬನ್ನು ಹಾಸಿಗೆಯ ತುದಿಯಲ್ಲಿ ಒಪ್ಪವಾಗಿ ಇಡುವುದಕ್ಕೂ, ಕೊಂಚ ಕೆಳಗೆ ಹಾಗೇ ಬಿಡುವುದಕ್ಕೂ ನಡುವಿನ ಅಂತರ ಕೆಲವೇ ಸೆಂಟೀಮೀಟರುಗಳಷ್ಟಾದರೂ ಅದನ್ನು ಆ ಎರಡು ಬೇರೆ ಬೇರೆ ಜಾಗಗಳಲ್ಲಿಟ್ಟ ವ್ಯಕ್ತಿಯ ವ್ಯಕ್ತಿತ್ವದ ನಡುವಿನ ವ್ಯತ್ಯಾಸ ಮೈಲಿಗಳಷ್ಟು! ಇನ್ನು ನಮ್ಮ ಇನ್ನೊಂದು ಸಮಸ್ಯೆಯೆಂದರೆ ಹೆಚ್ಚಿನ ಸಲ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರೂ ಆದಾಯವಲ್ಲದ ಕಾರ್ಯಗಳ ಆಳಕ್ಕೆ ನಾವು ಇಳಿಯುವುದೇ ಇಲ್ಲ. ವಾರಕ್ಕೊಂದು ಸಿನಿಮಾ ನೋಡಿದರೂ ಅದರ ತಾಂತ್ರಿಕ ವಿಷಯಗಳಾಗಲೀ, ಸೃಜನಶೀಲ ಸೂಕ್ಷ್ಮಗಳಾಗಲೀ ಅರ್ಥವಾಗಿರುವುದೇ ಇಲ್ಲ. ವರ್ಷಗಳಿಂದ ಕ್ರಿಕೇಟ್ ನೋಡುತ್ತಿದ್ದರೂ ಗುಡ್ ಲೆಂತ್, ಲೋ ಫಿಲ್ಟಾಸ್, ಹಿಟ್ಟಿಂಗ್ ದ ಡೆಕ್ ಹಾರ್ಡ್, ಪ್ಲೇಸ್ಮೆಂಟ್, ಎಕಾನಾಮಿಕಲ್ ಎನ್ನುವ ಮುಖ್ಯ ಅಂಶಗಳ ಅರಿವಿಲ್ಲದೆ ಬರಿದೆ ರನ್-ವಿಕೆಟ್ ಎಂದು ಅಂಕಿ-ಅಂಶಗಳ ಬೆನ್ನು ಹತ್ತಿ ವಾದಮಾಡಿಕೊಂಡಿರುತ್ತೇವೆ. ನಮ್ಮ ಅಭಿಮಾನ, ಆಸಕ್ತಿಗಳೆಲ್ಲ ಯಾರು ಶ್ರೇಷ್ಠ ಎಂಬ ವಾದಕ್ಕೆ ಅಥವಾ ಇನ್ಯಾರನ್ನೋ ಟೀಕಿಸುವ ಕಟುಕಿಗಳಿಗೇ ಸೀಮಿತವಾಗಿರುತ್ತದಲ್ಲದೇ ಆರೋಗ್ಯಕರವಾದ ವಿಶ್ಲೇಷಣಾತ್ಮಕ ದೃಷ್ಟಿಯೊಂದು ಬೆಳೆಯುವುದೇ ಇಲ್ಲ. ಗಾರ್ಡನ್ನಿನಲ್ಲಿ ಅಚಾನಕ್ಕಾಗಿ ಸತ್ತ ಗಿಡ ನಮ್ಮ ಕುತೂಹಲಕ್ಕೆ ಕೆಲಸ ಕೊಡುವುದೇ ಇಲ್ಲ.
ಹಾಗಂತ ಎಲ್ಲದರಲ್ಲೂ ವಿಜ್ಞಾನಿಗಳಾಗಬೇಕೆಂದಲ್ಲ. ಆದರೆ ನೂರಾರು ಮಾಯಮಂತ್ರಗಳ, ಯಕ್ಷಿಣಿಗಳ ಜಾದೂಗಾರಿ ವೇದಿಕೆಯಂತಿರುವ ನಮ್ಮ ಪ್ರಕೃತಿಯೆಡೆಗೆ ಸಣ್ಣ ಕುತೂಹಲವನ್ನೂ ಬೆಳೆಸಿಕೊಳ್ಳದಿದ್ದರೆ ನಮ್ಮ ವ್ಯಕ್ತಿತ್ವ ಒಳಗೊಳಗೇ ಟೊಳ್ಳಾಗುತ್ತ ಹೋಗುತ್ತದೆ. ಕಚೇರಿಯ ಕೆಲಸದಾಚೆಗಿನ ಬದುಕು ಬಹಳ ಬೇಗ ಬೋರಾಗುತ್ತದೆ. ಶನಿವಾರ, ಭಾನುವಾರಗಳಲ್ಲಿ ಸಮಯ ‘ಕಳೆಯುವ’ ಉಪಾಯಗಳಿಗಾಗಿ ತಡಕಾಡುತ್ತೇವೆಂದರೆ ಬದುಕಿನಲ್ಲಿ ಅಭಿರುಚಿಯನ್ನೇ ಕಳೆದುಕೊಂಡಿದ್ದೇವೆಂದರ್ಥ. ನಮ್ಮ ದಿನ ಕುತೂಹಲಕಾರಿಯಾಗಬೇಕೆಂದರೆ ಪ್ರತೀ ದಿನ ಐಪಿಎಲ್ಲೋ, ವರ್ಲ್ಡ್ ಕಪ್ಪೋ, ದೊಡ್ಡ ನಟರ ಸಿನಿಮಾ ಬಿಡುಗಡೆಯೋ, ಯಾವುದೋ ನಟ-ನಟಿಯ ವಿವಾದವೋ, ಇನ್ಯಾವುದೋ ಹುಚ್ಚು ನರ್ತನದ ವೈರಲ್ ರೀಲೋ ಬರುತ್ತಲೇ ಇರಬೇಕಾಗುತ್ತದೆ. ಇಂಥಾ ನಿರುಪಯುಕ್ತ ಸಂಗತಿಗಳಿಂದ ಉನ್ಮಾದಿತರಾಗಿ ಬದುಕುವ ವ್ಯಕ್ತಿತ್ವಗಳು ಸಮಾಜವನ್ನು ಮತ್ತಷ್ಟು ಅಸೂಕ್ಷ್ಮವಾದ, ಅಸಂವೇದನಾಶೀಲವಾದ ಯಾಂತ್ರಿಕ ಸಂದಣಿಯಾಗಿಸಿ ಹೋಗುತ್ತವೆ ಹಾಗೂ ಆ ಸಮಾಜದ ಅಂತಿಮ ಪರಿಣಾಮ ಶೋಚನೀಯವಾಗಿರುತ್ತದೆ.
ಬದುಕು ಚಿಕ್ಕ ಚಿಕ್ಕ ಆಸಕ್ತಿಗಳ ಸಣ್ಣ ಸಣ್ಣ ನಿಮಿಷಗಳಲ್ಲಿದೆ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
