ಆಗ ನನಗೆ ಒಂಥರಾ ಅನಿಸಿಬಿಡ್ತು. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ವೇಸ್ಟಾ… ಹಾಗಾದ್ರೆ ಡಿಗ್ರಿ ಬಿಟ್ಟು ಟಿಸಿಎಚ್ ಆದ್ರೂ ಓದಬಹುದಾ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡೋಕೆ ಶುರುವಾಯ್ತು. ಇಷ್ಟೇ ಅಲ್ಲದೇ ಆಗ ಟಿವಿಯಲ್ಲಿ ‘ದಂಡಪಿಂಡ’ಗಳು ಧಾರವಾಹಿ ಬೇರೆ ಬರ್ತಾ ಇತ್ತು. “ದಂಡಪಿಂಡಗಳು ಇವರು ದಂಡಪಿಂಡಗಳು ಬಿಎ, ಬಿಎಸ್ಸಿ ,ಬಿಕಾಂ ಮಾಡಿ…. ಕೆಲಸವೇ ಸಿಗದೇ ದಿನ ಅಲೆದಾಡಿ…” ಎಂಬ ಹಾಡಿನೊಂದಿಗೆ ಅದು ಶುರುವಾಗ್ತಾ ಇತ್ತು!! ನನಗೆ ಮೊದಲೇ ಆ ಮೇಡಂ ಹೇಳಿದ ಮಾತು ಅದರ ಜೊತೆ ಇದೂ ಸೇರಿ ಡಿಗ್ರೀ ಬಗ್ಗೆಯೇ ಜಿಗುಪ್ಸೆ ಆಗೋಕೆ ಶುರುವಾಯ್ತ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆರಡನೆಯ ಕಂತು ನಿಮ್ಮ ಓದಿಗೆ
ಪಿಯುಸಿಯಲ್ಲಿ ಕಮ್ಮಿಯಾದ ಸ್ಕೋರನ್ನು ಡಿಗ್ರಿಯಲ್ಲಿ ಸರಿದೂಗಿಸಿಕೊಳ್ಳಬೇಕು ಎಂದು ತುಂಬಾ ಪ್ರಾಮಾಣಿಕವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದೆ. ಕಾಲೇಜಿಗೆ ಬಂಕ್ ಹಾಕ್ತಾ ಇರಲಿಲ್ಲ. ತರಗತಿಯ ಅವಧಿಗಳನ್ನು ಮಿಸ್ ಮಾಡಿಕೊಳ್ತಾ ಇರಲಿಲ್ಲ. ನಾನು ಪಿ.ಸಿ.ಎಂ. ಸೇರಿದ್ದೆ. ಆಗ ಡಿಗ್ರಿಯಲ್ಲಿ ಈ ಕೋರ್ಸ್ ಓದುವವರೂ ಸಹ ತುಂಬಾ ಕಮ್ಮಿ ಇದ್ದರು. ನನ್ನ ಜೊತೆ ಐದಾರು ಹುಡುಗರು, ಏಳೆಂಟು ಹುಡುಗಿಯರು ಓದುತ್ತಿದ್ದ ನೆನಪು. ಇದರಲ್ಲೂ ಕೆಲವರು ತರಗತಿಗಳಿಗೆ ಬಂಕ್ ಹಾಕ್ತಾ ಇದ್ರು. ನಮಗೆ ಆಗ ಕ್ಲಾಸ್‌ಗಳನ್ನು ಬೇರೆ ಕೋರ್ಸ್‌ನವರ ಜೊತೆ ಕಂಬೈನ್ಡ್ ಮಾಡಿ ಪಾಠ ಮಾಡ್ತಾ ಇದ್ರು. ನಾನು ಡಿಗ್ರಿಯಲ್ಲಾದ್ರೂ ರ್ಯಾಂಕ್ ಬರಬೇಕು ಅಂತಾ ತುಂಬಾ ಹಾರ್ಡ್ ವರ್ಕ್ ಮಾಡ್ತಿದ್ದೆ. ಆಗ ನಾನು ಶಿವಮೊಗ್ಗದಲ್ಲಿ ರೂಮನ್ನು ಮಾಡಿಕೊಂಡಿದ್ದೆ. ಅಡುಗೆಯನ್ನು ನಾನೇ ಮಾಡಿಕೊಳ್ಳಬೇಕಾಗಿತ್ತು. ಸಾಂಬಾರನ್ನು ಹೋಟೆಲ್ಲಿನಿಂದ ತಂದು ಬರೀ ಅನ್ನ ಮಾಡಿಕೊಳ್ತಾ ಇದ್ದೆ. ಬೆಳಿಗ್ಗೆ ತಿಂಡಿಯನ್ನು ಮಾಡಿಕೊಳ್ತಾ ಇದ್ದೆ. ಮಾಡಿಕೊಳ್ಳೋಕೆ ಬೇಸರವಾದ್ರೆ ಹೋಟೆಲ್ಲಿಗೆ ಹೋಗ್ತಾ ಇದ್ದೆ. ಗಣಿತಕ್ಕೆ ನಮ್ಮ ಸೀನಿಯರ್‌ಗಳು ಟ್ಯೂಷನ್ನಿಗೆ ಹೋಗ್ತಾ ಇದ್ರು. ನಾನೂ ಸಹ ಅವರ ಜೊತೆ ಟ್ಯೂಷನ್ನಿಗೆ ಸೇರಿದೆ. ಟ್ಯೂಷನ್ ಟೈಮಿಂಗ್ಸ್ ಬೆಳಿಗ್ಗೆ 6 ಗಂಟೆಗೆ ಇತ್ತು. ಮಂಜಪ್ಪ ಸರ್ ಅನ್ನೊ ಲೆಕ್ಚರರ್ ಪಾಠ ಮಾಡ್ತಾ ಇದ್ರು. ನಾನು ಇದ್ದ ರೂಮಿಂದ ಟ್ಯೂಷನ್ನಿಗೆ ಬಹಳ ದೂರ ಆಗ್ತಾ ಇತ್ತು. ಆದರೂ ನಾನು ನಡೆದುಕೊಂಡೇ ಹೋಗ್ತಾ ಇದ್ದೆ.
ಇದೇ ಸಮಯಕ್ಕೆ ನಾನು ಕಂಪ್ಯೂಟರ್ ಕಲಿಯಬೇಕೆಂದು ಕಂಪ್ಯೂಟರ್ ಬೇಸಿಕ್ ಕ್ಲಾಸಿಗೆ ಸೇರಿದ್ದೆ. ಅಲ್ಲಿಗೆ ಸೇರಿ ಬಹಳ ದಿನ ಆಗಿರಲಿಲ್ಲ. ಗಣಿತ ಕ್ಲಾಸಿಗೂ ಕಂಪ್ಯೂಟರ್ ಕ್ಲಾಸಿಗೂ ಸಮಯದ ಹೊಂದಾಣಿಕೆಯ ತೊಂದರೆ ಉಂಟಾಯ್ತು. ಆಗ ನಾನು ಕಂಪ್ಯೂಟರ್ ಕ್ಲಾಸನ್ನೇ ಬಿಟ್ಟೆ. ಗಣಿತವನ್ನು ತುಂಬಾ ಆಸಕ್ತಿಯಿಂದ ಕಲಿಯೋಕೆ ಶುರು ಮಾಡಿದೆ. ನಮ್ಮ ಕಾಲೇಜಲ್ಲಿ ಗಣಿತದಲ್ಲಿ ಬರುವ ಬೇರೆ ಬೇರೆ ಪಾಠವನ್ನು ಬೇರೆ ಬೇರೆ ಲೆಕ್ಚರರ್‌ಗಳು ಮಾಡ್ತಾ ಇದ್ರು. ಅದರಲ್ಲಿ ಕ್ಯಾಲ್ಕುಲಸ್ ಭಾಗ, ಗ್ರೂಪ್ಸ್ ಭಾಗ ,ಮ್ಯಾಟ್ರಿಕ್ಸ್ ಭಾಗ ಅಂತಾ ಬೇರೆ ಬೇರೆ ಪಾಠಗಳು ಇದ್ದವು. ಅದರಲ್ಲಿ ಕೆಲವೊಂದು ಭಾಗಗಳು ಹಲವರಿಗೆ ಅರ್ಥ ಆಗ್ತಾ ಇರಲಿಲ್ಲ ಅನ್ನೋದು ಅವರ ಅನಿಸಿಕೆಯಿಂದ ಗೊತ್ತಾಗ್ತಾ ಇತ್ತು. ಆದರೆ ನಾನು ಟ್ಯೂಷನ್ನಿಗೆ ಹೋಗ್ತಾ ಇದ್ದುದ್ದರಿಂದ ನನಗೆ ಆ ಸಮಸ್ಯೆ ಕಾಡಲಿಲ್ಲ. ಕಾಲೇಜಲ್ಲೂ ಸೆಮಿನಾರ್ ಮಾಡ್ತಾ ಇದ್ದೆ. ಇತ್ತ ಟ್ಯೂಷನ್ ಮೇಷ್ಟ್ರಿಗೂ ತುಂಬಾ ಫೇವರೇಟ್ ಸ್ಟೂಡೆಂಟ್ ಆಗಿದ್ದೆ. ಗ್ರೂಪ್ಸ್ ಬಗ್ಗೆ ಇರೋ ಥೇರಮ್ಸ್‌ಗಳನ್ನು ತುಂಬಾ ಚೆನ್ನಾಗಿ ಬಿಡಿಸುತ್ತಿದ್ದೆ. ಆಗ ನಮಗೆ ಮ್ಯಾಥ್ಸ್ 150 ಅಂಕಗಳಿಗೆ ಎರಡು ಪತ್ರಿಕೆಗಳು ಇದ್ದವು. ಪ್ರತೀ ಪತ್ರಿಕೆಗೂ 75 ಅಂಕಗಳ ಇರುತ್ತಿದ್ದವು. ಮ್ಯಾಥ್ಸ್ ಟಾಪರ್ ನಾನೇ ಎಂಬ ಹವಾ ಕ್ರಿಯೇಟ್ ಮಾಡಿದ್ದೆ.
ನನ್ನ ಪಕ್ಕದ ರೂಮಿನ ಡಿಗ್ರಿ ಸೀನಿಯರ್ ‘ಮಧು’ ಎಂಬ ಹೆಸರಿನವ ಇದ್ದ. ಅವನು ಕೊನೇ ವರ್ಷದ ಬಿ.ಎಸ್ಸಿ ಡಿಗ್ರಿ ಓದುತ್ತಾ ಇದ್ದ. ದ್ವಿತೀಯ ವರ್ಷದ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣನಾಗಿದ್ದರಿಂದ ಕಾಲೇಜಲ್ಲಿ ಅವನಿಗೆ ವಿಶೇಷ ಗೌರವ ಇತ್ತು. ಆಗ ಪದವಿಯಲ್ಲಿ ಎಲ್ಲಾ ವಿಷಯಗಳಲ್ಲೂ ಪಾಸ್ ಆದವರು ಒಂದ್ ಲೆವೆಲ್ ಮೈಂಟೈನ್ ಮಾಡ್ತಾ ಇದ್ರು. ಇದಕ್ಕೆ “ಫಲಿತಾಂಶದಲ್ಲಿ ಎಸಿ ಮಗಾ ಅವಂದು” ಅಂತಾ ಬೇರೆಯವರು ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡು ಹೇಳ್ತಾ ಇದ್ರು!! ‘ಎ.ಸಿ’ ಅಂದ್ರೆ ಆಲ್ ಕ್ಲಿಯರ್ ಅಂತಾ! ಅಂದ್ರೆ ಯಾವುದೇ ವಿಷಯಗಳಲ್ಲೂ ಹಿಂದಿನ ವರ್ಷ ಫೇಲ್ ಆಗಿಲ್ಲ, ಎಲ್ಲಾ ಪಾಸ್ ಆಗಿದ್ದಾವೆ ಎಂದರ್ಥ! ನಾನು ಅವರನ್ನು ಮಾತನ್ನಾಡಿಸುತ್ತಿದ್ದೆ. ನನಗೆ ರ್ಯಾಂಕ್ ಬಂದವರ, ಬರುವಂತವರ ಬಗ್ಗೆ ವಿಶೇಷ ಗೌರವ ಇದ್ದುದರಿಂದ ನಾನು ಅವರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ. ಮಧು ನನಗೆ “ನಾಳೆ ಕಾಲೇಜಲ್ಲಿ ರ್ಯಾಂಕ್ ಬರುವಂತವರನ್ನು ತೋರಿಸುತ್ತೇನೆ. ಅವರನ್ನು ಮಾತನಾಡಿಸಬೇಕು” ಎಂಬ ಚಾಲೆಂಜ್ ಹಾಕಿದ. ನಾನು ಅವನ ಚಾಲೆಂಜ್ ಒಪ್ಪಿ ಮಾರನೇ ದಿನ ಕಾಲೇಜಿಗೆ ಹೋದೆ. ಆಗ ಮಧು ತೋರಿಸಿದ ಇಬ್ಬರೂ ಟಾಪರ್ಸ್ ಹುಡುಗಿಯರೇ ಆಗಿದ್ದರು. ನಾನು ಚಾಲೆಂಜಿನಲ್ಲಿ ಸೋತ ಉದಾಹರಣೆಯೇ ಇಲ್ಲ. ಆದರೆ ಆ ಹುಡುಗಿಯರು ಯಾವ ಹುಡುಗರನ್ನೂ ಮಾತನಾಡಿಸುತ್ತಿರಲಿಲ್ಲವಂತೆ. ಅದಕ್ಕೆ ಸೀನಿಯರ್ ಹುಡುಗರು ನನಗೆ ‘ಸುಮ್ಮನೇ ಸೋಲನ್ನೊಪ್ಪಿಕೋ’ ಎಂದು ಹೇಳಿದರು. ನಾನು ಒಪ್ಪಲಿಲ್ಲ. ಆ ಹುಡುಗಿಯರು ಬರೋ ಹೊತ್ತಿನಲ್ಲಿ ಚಾಲೆಂಜ್ ಹಾಕಿದವರು ದೂರದಲ್ಲಿ ನಿಂತು ನೋಡುತ್ತಿದ್ದರು. ನಾನು ಕಾಲೇಜಿನ ಕಾರಿಡಾರಿನಲ್ಲಿ ಬರುತ್ತಿದ್ದ ಅವರ ಹಿಂದೆ ಹೋದೆ. ನನಗೆ ಏನಾಗುತ್ತೋ ಎಂಬ ಭಯವೂ ಇತ್ತು. ಸುಮ್ಮನೇ ವಾಪಾಸ್ ಹೋಗಬೇಕೇನೋ ಎಂದುಕೊಂಡೆ. ಆದರೆ ಧೈರ್ಯ ಮಾಡಿ ಅವರ ಹಿಂದೆ ಹೋಗಿ ‘ಎಕ್ಸ್ ಕ್ಯೂಸ್ ಮಿ’ ಎಂದು ಕರೆದೆ. ಆ ಇಬ್ಬರೂ ನನ್ನೆಡೆಗೆ ತಿರುಗಿದಾಗ ನಾನು ಅವರಿಗೆ ‘ನಿಮ್ಮ ಯಶಸ್ಸಿನ ರಹಸ್ಯ ಏನು?’ ಎಂದು ಕೇಳಿದೆ. ಆಗ ಅವರು ‘ಯಾವ ಯಶಸ್ಸು?’ ಎಂದು ಕೇಳಿದಾಗ ‘ಟಾಪರ್ಸ್ ಆಗಿರೋ ವಿಷಯ’ ಎಂದೆ. ಅವರು ‘ನಿನಗ್ಹೇಗೆ ಗೊತ್ತಾಯ್ತು?’ ಎಂದು ಕೇಳಿದ್ರು. ನಾನು ‘ನಿಮ್ಮ ಕ್ಲಾಸ್ ಮೇಟ್ ಮಧು ಹತ್ರ ತಿಳಿದುಕೊಂಡೆ’ ಎಂದೆ. ಅವರು ಎಲ್ರೂ ಸಾಮಾನ್ಯವಾಗಿ ಉತ್ತರ ಕೊಡುವಂತೆ ಅವರು ‘ಹಾರ್ಡ್ ವರ್ಕ್’ ಎಂದರು. ನಾನು ಅವರಿಗೆ ಥ್ಯಾಂಕ್ಸ್ ಹೇಳಿ ಬಂದೆ. ದೂರದಿಂದ ಇದನ್ನು ನೋಡುತ್ತಿದ್ದ ಮಧು ಮತ್ತವನ ಸಂಗಡಿಗರಿಗೆ ಆಶ್ಚರ್ಯವಾಗಿ ಹೋಯ್ತು. ಮತ್ತೆಂದೂ ಅವರು ನನ್ನ ಬಳಿ ಚಾಲೆಂಜ್ ಕಟ್ಟಲು ಬರಲಿಲ್ಲ!
ನಾನು ಮೊದಲನೇ ವರ್ಷದ ಪದವಿಯ ಅಂತಿಮ ಹಂತಕ್ಕೆ ಬಂದಿದ್ದೆ. ಎಕ್ಸಾಂ ಹತ್ತಿರವೂ ಬಂದಿತ್ತು. ಒಮ್ಮೆ ಪಾರ್ಟ್ ಟೈಮ್ ಲೆಕ್ಚರ್ ಆಗಿ ಬಂದವರೊಬ್ಬರು ಪಾಠ ಮಾಡೋ ಮಧ್ಯದಲ್ಲಿ “ನಾನು ಎಂ.ಎಸ್ಸಿ ರ್ಯಾಂಕ್ ಹೋಲ್ಡರ್ ನನಗೆ ಕಮ್ಮಿ ಸಂಬಳ ಸಿಗುತ್ತೆ. ನೀವು ಇನ್ನೇನು ಸಾಧನೆ ಮಾಡಬಹುದು ಮಹಾ? ಕಡೇ ಪಕ್ಷ ಟಿಸಿಹೆಚ್ ಆದ್ರೂ ಓದಿದ್ರೆ ನನಗೆ ಗವರ್ನಮೆಂಟ್ ಕೆಲಸನಾದ್ರೂ ಸಿಕ್ಕಿರೋದು! ಇದಕ್ಕಿಂತಲೂ ಒಳ್ಳೇ ಸಂಬಳವಾದ್ರೂ ಇರೋದು” ಅಂತಾ ಹೇಳಿಬಿಟ್ರು. ಆಗ ನನಗೆ ಒಂಥರಾ ಅನಿಸಿಬಿಡ್ತು. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ವೇಸ್ಟಾ… ಹಾಗಾದ್ರೆ ಡಿಗ್ರಿ ಬಿಟ್ಟು ಟಿಸಿಎಚ್ ಆದ್ರೂ ಓದಬಹುದಾ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡೋಕೆ ಶುರುವಾಯ್ತು. ಇಷ್ಟೇ ಅಲ್ಲದೇ ಆಗ ಟಿವಿಯಲ್ಲಿ ‘ದಂಡಪಿಂಡ’ಗಳು ಧಾರವಾಹಿ ಬೇರೆ ಬರ್ತಾ ಇತ್ತು. “ದಂಡಪಿಂಡಗಳು ಇವರು ದಂಡಪಿಂಡಗಳು ಬಿಎ, ಬಿಎಸ್ಸಿ ,ಬಿಕಾಂ ಮಾಡಿ…. ಕೆಲಸವೇ ಸಿಗದೇ ದಿನ ಅಲೆದಾಡಿ…” ಎಂಬ ಹಾಡಿನೊಂದಿಗೆ ಅದು ಶುರುವಾಗ್ತಾ ಇತ್ತು!! ನನಗೆ ಮೊದಲೇ ಆ ಮೇಡಂ ಹೇಳಿದ ಮಾತು ಅದರ ಜೊತೆ ಇದೂ ಸೇರಿ ಡಿಗ್ರೀ ಬಗ್ಗೆಯೇ ಜಿಗುಪ್ಸೆ ಆಗೋಕೆ ಶುರುವಾಯ್ತ!!
ಊರಿಗೆ ಹೋದಾಗ್ಲೂ ಅಕ್ಕ ಪಕ್ಕದ ಹುಡುಗ್ರು ಇದೇ ಹಾಡನ್ನು ಹೇಳಿಕೊಂಡು ಹೋಗ್ತಾ ಇದ್ದಾಗ ನನಗೆ ನನ್ನನ್ನೇ ಕುರಿತು ಹೇಳ್ತಾ ಇದ್ದಾರೇನೋ ಎಂದುಕೊಂಡು ಬೇಸರವಾಗ್ತಿದ್ದೆ. ಮನೆಯಲ್ಲಿ ಹೋಗಿ ‘ಮುಂದಿನ ವರ್ಷ ಟಿಸಿಎಚ್ ಸೇರ್ತೀನಿ’ ಎಂದೆ. ಅವರು ‘ಬೇಡ ಡಿಗ್ರೀಯನ್ನೇ ಮುಗಿಸು, ಬೇಕಾದ್ರೆ ಬಿಎಡ್ ಮಾಡುವೆಯಂತೆ’ ಎಂದರು. ಆದರೆ ನಮ್ಮೂರಲ್ಲಿ ಬಿಎಡ್ ಮಾಡಿ ಊರಲ್ಲಿ ಹಾಗೇ ಕೆಲಸವಿಲ್ಲದೇ ಅಲೆದಾಡಿಕೊಂಡಿದ್ದವರನ್ನು ನೋಡಿ ಇವರಂತೆ ನಾನೂ ಆಗಬೇಕಾಗಬಹುದೇನೋ ಎಂದುಕೊಂಡು ಮನದಲ್ಲಿ ಅವರು ಹೇಳೋದನ್ನು ಮಾಡಬಾರದು ಎಂದುಕೊಂಡೆ. ಎಕ್ಸಾಂ ಹತ್ತಿರ ಬೇರೆ ಬರ್ತಾ ಇತ್ತು. ಮತ್ತೆ ವಾಪಾಸ್ ಕಾಲೇಜಿಗೆ ಹೋದೆ. ಚೆನ್ನಾಗಿ ಓದುತ್ತಿದ್ದ ಒಂದಿಬ್ಬರು ಇಂಜಿನಿಯರಿಂಗ್ ಸೀಟು ಸಿಕ್ಕಿದೆ ಎಂದು ಡಿಗ್ರಿ ತೊರೆದು ಹೋದರು. ಅಲ್ಲದೇ ನನ್ನ ಜೊತೆ ಓದುತ್ತಿದ್ದವರು ಬಹುತೇಕರು ಪಿಯುಸಿಯಲ್ಲಿ ಕಮ್ಮಿ ಅಂಕ ಪಡೆದೋರು ಇದ್ದುದರಿಂದ ನನಗೆ ಈ ಕೋರ್ಸ್‌ನ ಬಗ್ಗೆ ಆಸಕ್ತಿ ಕುಂದುತ್ತಾ ಹೋಯಿತು. ಅಲ್ಲದೇ ನಾನು ರೂಮು ಮಾಡಿದ್ದ ಬಿಲ್ಡಿಂಗ್ ಎದುರು ಇದ್ದ ಟಿಸಿಹೆಚ್ ಕಾಲೇಜಿನವರು ಬಿಂದಾಸ್ ಆಗಿ ಖುಶ್ ಖುಷಿಯಾಗಿ ಕೋರ್ಸ್ ಮಾಡುತ್ತಿದ್ದುದನ್ನು ನೋಡಿ ನನಗೂ ಈ ಕೋರ್ಸನ್ನು ಸೇರಬೇಕು ಎಂಬ ಭಾವನೆಯನ್ನು ಚಿಗುರಿಸಿಕೊಂಡೆ.
ಮನೆಯವರು ಡಿಗ್ರಿ ಕೋರ್ಸ್ ಬಿಡೋಕೆ ಒಪ್ಪೊಲ್ಲ, ಇದನ್ನು ಓದಿದ್ರೆ ಲೈಫ್ ಇಲ್ಲ ಏನ್ಮಾಡೋದು ಅಂತಾ ನಾನೇ ಯೋಚನೆ ಮಾಡೋಕೆ ಶುರು ಮಾಡಿದೆ. ಇದರ ಜೊತೆ ಡಿಗ್ರಿ ಫೇಲ್ ಆಗಬಾರದು ಅಂತಾನೂ ಓದ್ತಿದ್ದೆ. ಕೆಮಿಸ್ಟ್ರಿ ನೋಟ್ಸನ್ನು ದಾವಣಗೆರೆಯ ಲೆಕ್ಚರರ್ಸ್‌ಗಳಿಂದ ಕಲೆಕ್ಟ್ ಮಾಡಿಕೊಂಡು ಓದೋಕೆ ಶುರು ಮಾಡಿದೆ. ಆದರೂ ಅದ್ಯಾಕೋ ಏನೋ? ಲ್ಯಾಬ್ ಅಂದ್ರೆ ಮನಸ್ಸು ಚೂರು ಹಿಂದೇಟು ಹಾಕ್ತಿತ್ತು. ಪಿಯುಸಿ ಪರಿಣಾಮದ ಫಲವೋ ಏನೋ ಅದ್ರಲ್ಲೂ ಕೆಮಿಸ್ಟ್ರಿ ಲ್ಯಾಬಿನಲ್ಲಿ ಚೂರು ಹಿಂದೆ ಬೀಳ್ತಿದ್ದೆ. ಹಾರ್ಡ್ ವರ್ಕ್ ಏನೋ ಮಾಡಿದೆ. ನನ್ನ ಜೊತೆಗೆ ಡಿಗ್ರಿ ಓದುತ್ತಿದ್ದ ಮನು ಎಂಬ ಹೆಸರಿನವನಿಗೆ ಗಣಿತವನ್ನು ಹೇಳಿಕೊಡ್ತಿದ್ದೆ. ಇಷ್ಟೆಲ್ಲಾ ಆದ್ಮೇಲೆ ಡಿಗ್ರಿ ಓದಿದ್ನಾ? ಅಥವಾ ಮಧ್ಯಕ್ಕೆ ಬಿಟ್ನಾ? ಎಂಬ ಪ್ರಶ್ನೆ ನಿಮಗೆ ಬರಬಹುದು. ಅದನ್ನು ಮುಂದೆ ತಿಳಿಯೋಣ.
ಹಿರಿಯರು ಒಂದು ಮಾತು ಹೇಳ್ತಾರೆ. “ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು” ಅಂತಾ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಇವೆರಡೂ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಸಾಧನೆ ಮಾಡೋಕೆ ಸಾಧ್ಯವಿಲ್ಲ. ಒಬ್ಬ ಗುರುವಾದವನು ಮಕ್ಕಳ ಮುಂದೆ ಜೀವನದ ಬಗ್ಗೆ ನೆಗಟೀವ್ ಅಂಶಗಳನ್ನು ಯಾವುದೇ ಕಾರಣಕ್ಕೂ ಹೇಳಬಾರದು. ಇದರಿಂದ ಮಕ್ಕಳಿಗೆ ತುಂಬಾ ತೊಂದರೆ ಆಗಬಹುದು. ಗುರುವಿಗೆ ಒಂದು ವಿಷಯದಲ್ಲಿ ಸಕ್ಸಸ್ ಸಿಕ್ಕಿಲ್ಲ ಅಂತಾ ಮಕ್ಕಳೂ ಸಹ ಅದೇ ವಿಷಯದಲ್ಲಿ ಸಾಧನೆ ಮಾಡೋಕೆ ಆಗೋಲ್ಲ ಎಂದುಕೊಳ್ಳಬಾರದು. ರನ್ನಿಂಗ್ ರೇಸ್ ಓಡೋಕೆ ನಿಂತವನಿಗೆ ‘ಓಡ್ತೀಯ ಓಡು’ ಅಂತಾ ಹೇಳಬೇಕೇ ಹೊರತು ‘ನಿನ್ನ ಕೈಲಿ ಏನಾಗುತ್ತೋ ಬಿಡೋ…’ ಅಂತಾ ಹೇಳಬಾರದು. ಇದರಿಂದ ಅವನ ಸಾಧನೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ನನ್ನ ವಿಷಯದಲ್ಲೂ ಇದೇ ಆಯ್ತು. ಮ್ಯಾಥ್ಸ್ ಎಂ.ಸ್ಸಿಯನ್ನಾದ್ರೂ ಮಾಡಬೇಕು ಅಂದುಕೊಂಡು ಓದುತ್ತಿದ್ದವನ ಬಳಿ ಅದರಿಂದ ಉಪಯೋಗವಿಲ್ಲ ಅಂತಾ ಹೇಳಿದ್ರೆ ನನ್ನ ಸ್ಥಿತಿ ಏನಾಗಬೇಡ??
ಜೀವನದಲ್ಲಿ ಸಾಧಿಸೋಕೆ ಇನ್ನೊಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಯಾರೇನೇ ಹೇಳಲಿ. ನಾವು ತಲೆಕೆಡಿಸಿಕೊಳ್ಳಬಾರದು. ನಾವು ಏನನ್ನು ಸಾಧಿಸಬೇಕೋ ಅಂದುಕೊಂಡಿದ್ದೇವೋ ಅದನ್ನು ಸಾಧಿಸಲು ಹೆಜ್ಜೆ ಇಡಬೇಕು. ಸಾಧನೆ ಉತ್ತರ ಆಗಬೇಕೇ ವಿನಃ ಅವರೊಂದಿಗೆ ಮಾಡುವ ವಾಗ್ಯುದ್ಧ ಉತ್ತರ ಆಗಬಾರದು. ನಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಮೊದಲೇ ಗುರುತಿಸಿಕೊಳ್ಳಬೇಕು. ಅದೇ ಕ್ಷೇತ್ರಕ್ಕೆ ಹೋಗಬೇಕು. ಯಾರ್ಯಾರದೋ ಮಾತು ಕೇಳಿ ನಮ್ಮ ಆಸಕ್ತಿಯ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಹೋಗಬಾರದು. ಇದರಿಂದ ನಮಗೆ ಮುಂದೆ ಕೆಲಸ ಸಿಕ್ಕರೂ ಮನಸ್‌ಪೂರಕವಾಗಿ ಕೆಲಸ ಮಾಡೋಕೆ ಆಗೋಲ್ಲ. ಮಕ್ಕಳಿಗೂ ಅಷ್ಟೇ. ಪೋಷಕರಾದವರು ಅವರಿಷ್ಟದ ಕೋರ್ಸ್ ಆಯ್ಕೆ ಮಾಡಲು ಮಕ್ಕಳಿಗೆ ಒತ್ತಡ ಹಾಕೋ ಬದಲು ಮಕ್ಕಳಿಗೆ ಅವರಿಷ್ಟದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಮಕ್ಕಳ ಭವಿಷ್ಯ… ಭವಿಷ್ಯ.. ಎಂದು ಅವರ ಬಾಲ್ಯದ ಖುಷಿಗಳನ್ನು ಕಳೆಯಲು ಹೋಗಬಾರದು. ಅವರಿಗೆ ತೀರಾ ಒತ್ತಡ ಹಾಕಬಾರದು. ಇದಕ್ಕೆ ಪೂರಕವಾಗಿ ಡಿವಿಜಿಯವರ ಕಗ್ಗವು ಈ ರೀತಿ ತಿಳಿಸುತ್ತದೆ. ಅದು ಇಂತಿದೆ:
ಮಕ್ಕಳ ಭವಿಷ್ಯಕ್ಕೆ ಕಕ್ಕುಲತೆಗೊಳ್ಳಬೇಡ|
ಪಕ್ಕಾಗುವುದು ಭಾಗ್ಯವೆಂತಂತೊ ಜಗದಿ||
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ?|
ದಿಕ್ಕವರಿಗವರವರೆ-ಮಂಕುತಿಮ್ಮ||

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ನಿಮ್ಮ ಬದುಕು ಕುಲುಮೆ ಎನ್ನುವ ಬರಹದ ಪ್ರತಿ ಅಂಕಣದ ಬರಹ ಚನ್ನಾಗಿದೆ. ಇದರಲ್ಲಿ ನಿಮ್ಮ ಅನುಭವ ಗಳನ್ನು ಹಂಚೋಕೊಂಡಿದ್ದೀರಿ. ಯಾವ ವ್ಯಕ್ತಿ ನೈಜ ಜೀವನದಲ್ಲಿ ನೊಂದು, ಬೆಂದು ಬೆಳೆದಿರುತ್ತಾನೋ ಆತನು ಜೀವದಲ್ಲಿ ಸೋಲುವದಿಲ್ಲ. ಮತ್ತು ಅವರಿಗೆ ಜೀವನದ ಪರಿಕಲ್ಪನೆ ಚನ್ನಾಗಿ ಗೊತ್ತಾಗಿರುತ್ತದೆ ಸರ್.