ಧರ್ಮಗಳಲ್ಲಿ ಸಣ್ಣತನ ಮತ್ತು ಮನುಷ್ಯ ಧರ್ಮದೊಳಗಿನ ದೊಡ್ಡತನಗಳ ಸಣ್ಣ ಗೆರೆಯನ್ನು ಮುಗ್ಧ ಮಗುವಿನ ಹಾಗೆ ನೋಡುವಂತೆ ಮಾಡುವ ಇಮ್ರಾನ್ ಎಂಬ ಕೂಸು, ‘ಪ್ರೀತಿಯಿಂದ ಗೆಲ್ಲಬಹುದು’ ಎಂಬುದನ್ನು ಕಲಿಸಿಕೊಡುವ ಗೆಳತಿಯ ಸ್ಟೇಟಸ್ ಪಾಠವು, ‘ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ?’ ಎಂದು ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಕೇಳುವ ಅಜ್ಜಿಯೂ, ಸಂಬಂಧಗಳ ಸಂಕೋಲೆಯಲ್ಲಿ ಸತ್ತು ಬದುಕುವ ಮತ್ತು ಬದುಕಿಯೂ ಸಾಯುವ ‘ಕೊನೆಯ ಮಳೆ’ ಯ ಹನಿಯೂ ಮನುಷ್ಯನ ಒದ್ದಾಟಗಳ ಯಥಾವತ್ತಾಗಿ ಅನುವಾದ ಮಾಡಿದ ಹಾಗಿವೆ.
ದಾದಾಪೀರ್ ಜೈಮನ್ ಅವರ “ನೀಲಕುರಿಂಜಿ” ಕಥಾಸಂಕಲನದ ಕುರಿತು ಚಾಂದ್ ಪಾಷ ಎನ್. ಎಸ್. ಬರಹ
ಕಥೆಯಾಗುವ ಮತ್ತು ಕಥೆಯಾಗಿಸುವ ಎರಡೂ ಪ್ರಕ್ರಿಯೆಗಳು ಬಹಳ ಸುಲಭದ ಹಾಗೆ ಕಂಡರೂ ಕೂಡ ತುಂಬಾ ಕಷ್ಟದ ಕೆಲಸವೂ ಹೌದು! ಕಣ್ಣಾರೆ ಕಂಡದ್ದೋ, ಅಥವಾ ಕಿವಿಯಾರೆ ಕೇಳಿದ ವಿಷಯಗಳು ಕಥೆಗಾರನ ಕಲ್ಪನಾ ಮೂಸೆಯಲ್ಲಿ ರೂಪಾಂತರವಾಗುವುದು ವಿಶೇಷವೆನಿಸುತ್ತದೆ. ಅದರೊಂದಿಗೆ ಅನುಭವಕ್ಕೆ ದಕ್ಕಿದ ಮತ್ತು ದಕ್ಕದೇ ಉಳಿದ ಎಷ್ಟೋ ವಿಷಯವಸ್ತು ಕಥೆಯಾಗುವುದು ಮುಖ್ಯವೆನಿಸುತ್ತವೆ. ಇಂಥ ಹಲವು ವಿಶೇಷ ಕಾರಣಗಳಿಂದ “ನೀಲಕುರಿಂಜಿ” ಬಹುಮುಖ್ಯವಾದ ಕಥಾಸಂಕಲನ ಎನಿಸದೇ ಇರದು.
ಯುವ ಬರಹಗಾರನೊಬ್ಬನಿಗಿರುವ ವಿಶಾಲ ದೃಷ್ಟಿಕೋನ, ನಿರೂಪಣಾ ಶೈಲಿ ಮತ್ತು ಕಥೆ ಹೆಣೆಯುವ ತಂತ್ರ ಹೊಸ ಕಥಾಮೀಮಾಂಸೆಯನ್ನು ಕಟ್ಟುವ ಪ್ರಯತ್ನ ಮಾಡಿದೆ ಎಂದರೆ ತಪ್ಪಾಗಲಾರದು!
ದಾದಾಪೀರ್ ಜೈಮನ್ ಅವರ ಚೊಚ್ಚಲ ಕಥಾಸಂಕಲನವೆನಿಸಿಕೊಂಡ “ನೀಲಕುರಿಂಜಿ” ಯೂ ಹೊಸ ಅಸ್ಮಿತೆಗಳ ಆತ್ಮನಿವೇದನೆಯಂತೆಯೇ ಇದೆ. ಇಲ್ಲಿನ ಸಾಕಷ್ಟು ಕಥೆಗಳು ಎತ್ತುವ ಪ್ರಶ್ನೆಗೆ ಹೃದಯಶೂನ್ಯ ಸ್ಥಿತಿಯಲ್ಲಿರುವ ಸಮಾಜ ಉತ್ತರವಿಲ್ಲದೆ ತತ್ತರಿಸಿ ಹೋಗಬೇಕಾದ ಸ್ಥಿತಿ ಎದುರಾಗುತ್ತದೆ. ಒಂಟಿತನದ ಒದ್ದಾಟದಿಂದ ಹಿಡಿದು ಸಾವಿಗಾಗಿ ಕಾಯುವ ಸಂಯಮದವರೆಗೂ ಇರಬಹುದಾದ ಬದುಕಿನ ಎಲ್ಲ ಸ್ತರಗಳ ಚಿತ್ರಗಳು “ನೀಲಕುರಿಂಜಿ” ಯ ಕ್ಯಾನ್ವಾಸಿನ ಮೇಲೆ ಮೂಡಿರುವುದು ಸುಳ್ಳಲ್ಲ.
ಧರ್ಮಗಳಲ್ಲಿ ಸಣ್ಣತನ ಮತ್ತು ಮನುಷ್ಯ ಧರ್ಮದೊಳಗಿನ ದೊಡ್ಡತನಗಳ ಸಣ್ಣ ಗೆರೆಯನ್ನು ಮುಗ್ಧ ಮಗುವಿನ ಹಾಗೆ ನೋಡುವಂತೆ ಮಾಡುವ ಇಮ್ರಾನ್ ಎಂಬ ಕೂಸು, ‘ಪ್ರೀತಿಯಿಂದ ಗೆಲ್ಲಬಹುದು’ ಎಂಬುದನ್ನು ಕಲಿಸಿಕೊಡುವ ಗೆಳತಿಯ ಸ್ಟೇಟಸ್ ಪಾಠವು, ‘ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ?’ ಎಂದು ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಕೇಳುವ ಅಜ್ಜಿಯೂ, ಸಂಬಂಧಗಳ ಸಂಕೋಲೆಯಲ್ಲಿ ಸತ್ತು ಬದುಕುವ ಮತ್ತು ಬದುಕಿಯೂ ಸಾಯುವ ‘ಕೊನೆಯ ಮಳೆ’ ಯ ಹನಿಯೂ ಮನುಷ್ಯನ ಒದ್ದಾಟಗಳ ಯಥಾವತ್ತಾಗಿ ಅನುವಾದ ಮಾಡಿದ ಹಾಗಿವೆ.
ಮೇಲಿನಲ್ಲಿರುವ ಅಷ್ಟೇ ಅಂಶಗಳು ಈ ಸಂಕಲನದ ಇತರ ಕಥೆಗಳಲ್ಲೂ ಅಭಿವ್ಯಕ್ತವಾಗಿದ್ದರೆ ಇದು ಮುಖ್ಯವಾದ ಸಂಕಲನವೆನಿಸದೇ ಇರಬಹುದಿತ್ತೇನೋ? ಆದರೆ ಈ ಸಂಕಲನದ ವಿಶೇಷವೆಂದರೆ ಹೊಸ ಅಸ್ಮಿತೆಗಳನ್ನು ಆಲಂಗಿಸುವ ಮನಸ್ಥಿತಿಗಳ ರೂಪಿಸಿದ್ದೆ ಆಗಿದೆ. ಸಲಿಂಗ ಪ್ರೇಮದ ಸೆಳೆತಗಳು ಮತ್ತು ಅದರಿಂದಲೂ ಬಿಡಿಸಿಕೊಂಡು ಬದುಕಬೇಕು ಎನ್ನುವ ಹಪಹಪಿಸುವ ವಿಚಿತ್ರ ಬದುಕಿನ ರೀತಿಯನ್ನು ಕಥೆಗಾರ ಚಿತ್ರಿಸಿದ್ದಾನೆ. ಅನಂತು ಅನು ಆಗಿ ಬದಲಾವಣೆಯ ಆಗುವ ವ್ಯವಸ್ಥೆಯನ್ನು ಈ ಸಮಾಜ ಒಪ್ಪುವ ಮನೋವೈಶಿಷ್ಟತೆಯನ್ನು ‘ಆವರಣ’ ದಲ್ಲಿ ಕಾಣಬಹುದು. ಇನ್ನೂ ‘ಆಳದಾಕಾಶದ ಪ್ರತಿಬಿಂಬ’ ಎನ್ನುವ ಇಡೀ ಕಥೆಯೇ ಒಂದು ರೂಪಕವಾಗಿ ರೂಪಿಸಿದ್ದು ಮಾತ್ರ ನಿಜಕ್ಕೂ ಸೋಜಿಗ ಅನ್ನಿಸುತ್ತದೆ.
ತನ್ನೊಳಗಿನ ತನ್ನತನವನ್ನು ಹೊರಗೆಡವಿ ತನ್ನದೇ ಹೊಸ ಅಸ್ಮಿತೆಯಲ್ಲಿ ಬದುಕ ಹೊರಟವರ ಸಂವೇದನೆಗಳು ಈ ಕತೆಗಳ ನೀತಿಸಂಹಿತೆಯಂತೆ ಇದೆ. ಲಿಂಗ ಅಲ್ಪಸಂಖ್ಯಾತರನ್ನು ನೋಡುವ ನೋಟಕ್ರಮವನ್ನು ತಿದ್ದುವ ಮತ್ತು ತಿದ್ದಿಕೊಳ್ಳುವ ಬದುಕಿನ ವ್ಯಾಕರಣವನ್ನು ಹೊಸದಾಗಿ ವ್ಯಾಖ್ಯಾನಿಸುವ ರೀತಿ ನಿಜಕ್ಕೂ ಒಪ್ಪುವಂಥದ್ದು.
ಇದರಾಚೆಗೂ ಭಾಷೆಯನ್ನು ಸೂಕ್ಷ್ಮವಾಗಿ ಮತ್ತು ತೀಕ್ಷ್ಣವಾಗಿ ಬಳಸುವ ಕಥೆಗಾರನಿಗೆ ನಿರೂಪಣಾ ತಂತ್ರ ಚೆನ್ನಾಗಿ ಗೊತ್ತಿದೆ. ಆದರೆ ಕೆಲವು ಕಡೆಗೆ ತನಗೆ ಅರಿವಿಲ್ಲದೆಯೂ ಅನಗತ್ಯವೆನಿಸದರೂ ಕಥೆಯನ್ನು ವಿವರಿಸುವ ಆಸ್ಥೆ ತೋರಿದರೂ, ನಾಲ್ಕಾರು ಸಾಲುಗಳಲ್ಲಿ ಹೇಳಬಹುದಾದ ವಿಚಾರವನ್ನು ಒಂದೇ ರೂಪಕದ ಮೂಲಕವೂ ಹೇಳುವುದು ಕಥಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯ ಹಾಗಿದೆ. ಒಟ್ಟಿನಲ್ಲಿ ‘ನೀಲಕುರಿಂಜಿ’ ಕಥಾ ಸಂಕಲನವೂ ವಿನೂತನ ಪ್ರಯೋಗಗಳ ವಿಶಿಷ್ಟವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
(ಕೃತಿ: ನೀಲಕುರಿಂಜಿ (ಕಥಾ ಸಂಕಲನ), ಲೇಖಕರು: ದಾದಾಪೀರ್ ಜೈಮನ್, ಪ್ರಕಾಶನ: ವೈಷ್ಣವಿ ಪ್ರಕಾಶನ, ಬೆಲೆ: ರೂ. 120/-)
ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. “ಮೌನದ ಮಳೆ”, “ಚಿತ್ರ ಚಿಗುರುವ ಹೊತ್ತು” ಮತ್ತು “ಒದ್ದೆಗಣ್ಣಿನ ದೀಪ” ಇವರ ಪ್ರಕಟಿತ ಕವನ ಸಂಕಲನಗಳು