ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ.
ಚಾಂದ್‌ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಚಾಂದ್‌ ಪಾಷಾ ಅವರು ತಮ್ಮ ಪದ್ಯಗಳ ಹೊಸ ಸಂಕಲನದ ಕರಡನ್ನು ನನಗೆ ಕಳಿಸಿದರು. ಅವುಗಳನ್ನು ನಾನು ಓದಿದ್ದು ಹೇಗೆಂದರೆ ಒಂದು ಮುಶಾಯಿರಾನಲ್ಲಿ ಉರಿಯುತ್ತಿರುವ ಮೇಣಬತ್ತಿಯನ್ನು ಕವಿಯ ಎದುರಿಗೆ ಹಿಡಿದು ‘ಇರ್ಷಾದ್’ ಎಂದ ಮೇಲೆ ಅವರು ಇಡೀ ಮಹಫಿಲ್‌ಗಾಗಿ ಓದಿದಂತೆ ಈ ಪದ್ಯಗಳನ್ನು ಕೇಳಿಸಿಕೊಂಡೆ. ಕಾರಣವೆಂದರೆ ಚಾಂದ್‌ ಪಾಷಾ ಅವರ ಪದ್ಯಗಳು ಕೇಳುಗಬ್ಬದ ಮಾದರಿಯವು. ಅವುಗಳಲ್ಲಿ ಕವಿಯ ದನಿ ಹಾಗೂ ವ್ಯಕ್ತಿತ್ವಗಳು (ಅಂದರೆ ಕಲ್ಪಿತ ವ್ಯಕ್ತಿತ್ವ) ಬಹುಮುಖ್ಯವಾದುದು. ಇಲ್ಲಿಯ ಅನೇಕ ಪದ್ಯಗಳು ಮುಶಾಯರಾಗಳಲ್ಲಿ ಓದಬೇಕಾದ ಗಜಲ್ ಶೈಲಿಯಲ್ಲಿವೆ. ದ್ವಿಪದಿ, ಛಂದಸ್ಸು ಇವುಗಳನ್ನು ಪಾಲಿಸುತ್ತವೆಯೆಂದಲ್ಲ. ಆದರೆ ಅವುಗಳ ಸತ್ವ ಇರುವುದು ನಿರೀಕ್ಷಿತ ಸ್ಥಾನದಲ್ಲಿ ಅನಿರೀಕ್ಷಿತ ಪದಪುಂಜಗಳು, ಪ್ರತಿಮೆಗಳು ಬಂದು ಅಚ್ಚರಿ, ಖುಷಿ ಹಾಗೂ ಮತ್ತೆ ಮತ್ತೆ ಮೆಲುಕುಹಾರುವಂತೆ ಮಾಡುವ ಲಯೆಗಳು ಹಾಗೂ wit ಎಂದು ಕರೆಯಬಹುದಾದ ಪದ ಮತ್ತು ಅರ್ಥಗಳ ಬಳಕೆಯ ಹಿಂದೆ ಇರುವ ಜಾಣ್ಮೆ ಇವೆಲ್ಲವುಗಳು ಉರ್ದು ಕಾವ್ಯದ ಮೂಲ ಸತ್ವವಾಗಿವೆ. ಇವನ್ನು ಮಹಫಿಲ್‌ನಲ್ಲಿ ಕುಳಿತು ‘ವಾಹ್ ವಾಹ್ʼ ಎಂದು ನಾವೂ ಪುನರುಚ್ಚಿಸಿ ಆಸ್ವಾದಿಸಬೇಕು.

(ಚಾಂದ್‌ ಪಾಷ ಎನ್.ಎಸ್.)

ದಖ್ಖಣದಿಂದ ಆರಂಭವಾಗಿ ಮೊಘಲರ ಉತ್ತರ ಭಾರತದಲ್ಲಿ ಹಬ್ಬಿ ಬೆಳೆದ ಈ ಅದ್ಭುತ ಕಾವ್ಯ ಸಂಸ್ಕೃತಿ ವಿಶ್ವ ಸಾಹಿತ್ಯದ ಅಪೂರ್ವ ಸಾಧನೆಗಳಲ್ಲಿ ಒಂದು. ನನ್ನ ದೃಷ್ಟಿಯಲ್ಲಿ ಚಾಂದ್‌ ಪಾಷಾ ಈ ಕಾವ್ಯ ಸಂಸ್ಕೃತಿಯ ವಾರಸುದಾರರಾಗಿರುವ, ಈಗಾಗಲೇ ಜನಪ್ರಿಯರಾಗಿರುವ ನಮ್ಮ ಶಾಯರ್, ವಿವಿಧ ಶೈಲಿಗಳಲ್ಲಿ ಅಷ್ಟೇ ಸಮರ್ಥವಾಗಿ ಬರೆದಾಗಲೂ ಅವರ ಕಾವ್ಯ ಕೇಳುಗರನ್ನು ಉದ್ದೇಶಿಸಿ ‘ಹೇಳುವ’ ಕಾವ್ಯವಾಗಿದೆ. ಹೈಸ್ಕೂಲ್‌ನಲ್ಲಿ ಹಿಂದಿ ಕಲಿತ ಮೇಲೆ ದೇವನಾಗರಿ ಲಿಪಿಯಲ್ಲಿ ಅಚ್ಚಾದ ಉರ್ದು ಕಾವ್ಯವನ್ನು ಹಿಂದ್ ಪಾಕೆಟ್ ಬುಕ್ಸ್‌ನಿಂದ ಪ್ರಕಟವಾದ, ಬಹುಪಾಲು ಪ್ರಕಾಶ್ ಪಂಡಿತರಿಂದ ಸಂಪಾದನೆಯಾದ ಪುಟ್ಟ ಪುಸ್ತಕಗಳಲ್ಲಿ ಓದತೊಡಗಿದೆ. ಅವುಗಳಲ್ಲಿ ಅಪರಿಚಿತ ಪದಗಳ ಅರ್ಥವನ್ನು ವಿವರಿಸುತ್ತಿದ್ದರಿಂದ ಅನುಕೂಲವಾಗುತ್ತಿತ್ತು. ಹೀಗೆ ಮೀರ್, ಝೌಕ್, ಗಾಲಿಬ್, ಜೋಶ್, ಸಾಹಿರ್ ಎಲ್ಲರನ್ನೂ ಓದಲು ಸಾಧ್ಯವಾಯಿತು. ಸಾಹಿರ್ ಈಗಲೂ ನನ್ನ ಆರಾಧ್ಯ ದೈವ. ಇದೆಲ್ಲ ಯಾಕೆ ನೆನಪು ಮಾಡಿಕೊಂಡೆಯೆಂದರೆ ಈ ಕಾವ್ಯವನ್ನು ಓದಿದ ಖುಷಿ, ಅಚ್ಚರಿ, ಮೆಚ್ಚುಗೆ ಇವೆಲ್ಲವೂ ಚಾಂದ್ ಪಾಷಾರ ಪದ್ಯಗಳನ್ನು ಓದಿದಾಗ ಅನ್ನಿಸಿದವು. ದುಂದುಗಾರಿಕೆಯ ಮಟ್ಟದ ಪ್ರತಿಮೆಗಳು ಅನಿರೀಕ್ಷಿತವಾದ ಅರೆಸಾಲುಗಳು ಮತ್ತು ನಾಟಕೀಯವಾದ ಮಾತಿನ ಗತ್ತು ಇವು ಹದಿಹರೆಯವನ್ನು ಮರುಕಳಿಸುವಷ್ಟು ಜೀವಂತವಾಗಿವೆ. ಉದಾಹರಣೆಗೆ ‘ಆಸ್ಮಾಳಿಗೆ’ ಎನ್ನುವ ಪದ್ಯದಲ್ಲಿನ ಈ ಸಾಲುಗಳು:
‘ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲ
ಬಹುಶಃ ನನ್ನೆದೆಯ ವಿಳಾಸ ಮರೆತಿರಬಹುದು’
ಅಥವಾ ‘ದಾವೆ ಹೂಡಿದಾನಂತೆ’ ಪದ್ಯದ ಈ ಸಾಲು:
‘ಈ ಗಂಧದ ಗೊಂಬೆಯ ಕಂಡು ಗಂಧರ್ವರೂ ಕೂಡ ಕಾಡುಗಳ್ಳರಾಗಿದ್ದಾರಂತೆ!’

ಇವುಗಳಲ್ಲಿ ಉದ್ದೇಶಪೂರ್ವಕವಾದ ಚಮತ್ಕಾರವಿದೆ. ಭಾಷೆಯೊಂದಿಗೆ ಆಟವಾಡುವ ಖುಷಿಯೂ ಇದೆ. ಆದರೆ ಬಹುಮುಖ್ಯವಾದ ಸೃಜನಶೀಲವಾದ ಒಂದು imagination ಇದೆ. ಇದು ಲೋಕವನ್ನು ಕಾಣುವ ದೃಷ್ಟಿಯೇ ಬಹು ವಿಶಿಷ್ಟವಾಗಿದೆ.

“ಕಂಬಳಿಯ ಹೊದ್ದು ಮಲಗಿದ ನಕ್ಷತ್ರಗಳಿಗೂ ನೆಗಡಿಯಾಗಿದೆ”
“ಚಳಿ ಹೆರುವ ಕಾರ್ಖಾನೆಯಾಯಿತೇ ಭೂಮಿ” (‘ಅವಳೆಂದರೆ ವಿಪರೀತ ಚಳಿಗಾಲ’)

ಇವು ಸಾಂಪ್ರದಾಯಿಕವಾದ ಉಕ್ತಿ ವೈಚಿತ್ರ್ಯಕ್ಕಿಂತ ಭಿನ್ನವಾಗಿವೆ. ಇಡೀ ಪದ್ಯವೇ ಪ್ರೀತಿ ಜೀವನೋತ್ಸಾಹಗಳ ವಿಜೃಂಭಣೆಯಾಗಿದೆ. ಆದ್ದರಿಂದ ‘ನೀ ಸಿಗುವ ಮೊದಲು ಚಳಿಗಿಷ್ಟು ಚರಿತ್ರೆ ಇರಲಿಲ್ಲ’ ಎನ್ನುವ ಸಾಲು ಕೇಳುವ ಮಹಫಿಲ್ ‘ವಾಹ್’ ಅನ್ನುತ್ತದೆ.

ಇದು ಕವಿ ವ್ಯಕ್ತಿತ್ವದ ಒಂದು ಮುಖವಾದರೆ ಇನ್ನೊಂದರಲ್ಲಿ ಧರ್ಮ, ಪ್ರಭುತ್ವ, ಗಂಡಾಳ್ವಿಕೆ, ಹಿಂಸೆಗಳಿಗೆ ತೀವ್ರವಾಗಿ ಮಿಡಿಯುವ ಪ್ರತಿಭಟಿಸುವ ಕೆಚ್ಚಿದೆ. ಹಾಗೆ ನೋಡಿದರೆ ಇದು ಉರ್ದು ಕಾವ್ಯಕ್ಕೆ ಹೊಸತಲ್ಲ, ಗಾಲಿಬ್, ಜಿಗರ್ ಮತ್ತು ಸಾಹಿರ್‍ರು ಸಮಕಾಲೀನ ಸಮಾಜದ ಬಗ್ಗೆ ವ್ಯಂಗ್ಯವಾಗಿ, ವ್ಯಗ್ರವಾಗಿ ಸ್ಪಂದಿಸಿದ್ದಾರೆ. ನನಗೆ ನೆನಪಿರುವಂತೆ ನಜ್ಮ ಎಂಬ ಪ್ರಕಾರವು ಇಂಥ ವಸ್ತುವಿಗೆ ಮೀಸಲಾಗಿದ್ದ ಪ್ರಕಾರವಾಗಿದೆ. ಆದರೆ ಚಾಂದ್ ಪಾಷಾರ ಈ ವಸ್ತುವಿನ ಪದ್ಯಗಳ ಹಿಂದೆ ಬಂಡಾಯ-ದಲಿತ ಕಾವ್ಯವಿದೆ. ಅಲ್ಲದೆ ಅವರಿಗೇ ವಿಶಿಷ್ಟವಾದ ವ್ಯಗ್ರತೆ ಇದೆ. ಸುತ್ತು ಬಳಸದೇ ನೇರವಾಗಿ ತಮ್ಮ ಕಾವ್ಯದ ಹತಾರವನ್ನು ಬಳಸುವ ಸ್ವಭಾವವೂ ಇದೆ.

“ದವಾಖಾನೆಗಳ ತೆರೆಯಲಾಗದ ಈ ಬಡದೇಶದಲ್ಲಿ
ಮುಗಿಲಿಗೆ ಮುತ್ತಿದಂಥ ಪುತ್ಥಳಿ ನಿಲ್ಲಿಸಿ
ಕಾವಲಿಗೆ ಬಡರೋಗಿಯನ್ನೇ ನೇಮಿಸಿದ್ದೇವೆ’.
“ಬೆಂಕಿ ಹಚ್ಚುವವರ ಕೈಗೆ ದೇಶ ಕೊಟ್ಟು,
ಸುಟ್ಟ ಗಾಯಕ್ಕೆ ಔಷಧಿ ಹುಡುಕುತ್ತಿದ್ದೇವೆ”
(‘ಅಲೆಮಾರಿಯ ಅಂಗಾಲು’)

ಇಂಥ ರಾಜಕೀಯ ಪದ್ಯಗಳು ವೇದಿಕೆಯಿಂದ ನೇರವಾಗಿ ಕೇಳುಗರಿಗೆ ತಲುಪುವಂಥ ಮಾದರಿಯ ಪದ್ಯಗಳು. ಆದರೆ ಇವು ಪ್ರಚಾರ ಪ್ರಿಯತೆಗಾಗಿ ಬರೆದ ಪದ್ಯಗಳಲ್ಲ. ಸದ್ಯದ ಸ್ಥಿತಿಯಲ್ಲಿ ಕಾವ್ಯಕ್ಕೆ ಇರಬೇಕಾದ ಸಮಾಜಮುಖಿ ಬದ್ಧತೆಯ ಎಚ್ಚರದಿಂದ ಬರೆದ ಪದ್ಯಗಳು. ಈ ಪದ್ಯಗಳಲ್ಲಿ ಕೂಡ ಚಾಂದ್‌ ಪಾಷಾ ಭಾಷೆಯನ್ನು ಪ್ರಯೋಗಶೀಲವಾಗಿ ಬಳಸುತ್ತಾರೆ. ಹರಿತವಾದ ವ್ಯಂಗ್ಯದೊಂದಿಗೆ ಪ್ರತಿಮೆಗಳು, ರೂಪಕಗಳು ನುಗ್ಗಿ ಬರುತ್ತವೆ.

“ನಿಮ್ಮ ಧರ್ಮದ ತಕ್ಕಡಿಯಲ್ಲಿ ತೂಗದೇ ಸತ್ತ ನಮ್ಮ
ಹಸಿವಿನ ಗುಜರಿ ಐಟಂಗಳೆಲ್ಲ
ನಿಮ್ಮದೇ, ಶಾಸ್ತ್ರ, ಪುರಾಣಗಳ ಸ್ಮಶಾನದಲ್ಲಿ ಗೋರಿಯಾಗಿವೆ”

***

“ನಾವು ನಿಮ್ಮ ಮುಕ್ಕೋಟಿ ದೇವತೆಗಳನ್ನು ತಿನ್ನುತ್ತಿಲ್ಲ
ನಮ್ಮ ಅನ್ನವನ್ನಷ್ಟೇ ತಿನ್ನುತ್ತಿದ್ದೇವೆ.
ಶತಮಾನದಿಂದಲೂ ಹಸಿದ ಬದುಕಿಗೆ ಆಹಾರವಾದ
ದನದ ಮಾಂಸವನ್ನಷ್ಟೇ ತಿನ್ನುತ್ತಿದ್ದೇವೆ.
ನಿಮ್ಮ ಕಾಮಧೇನುವನ್ನಲ್ಲ”
‘ಹಸಿವು’

ಈ ಸಾಲುಗಳನ್ನು ಓದಿದಾಗ ನನಗೆ ಎನ್.ಕೆ. ಹನುಮಂತಯ್ಯನವರ ‘ಗೋವನ್ನು ತಿಂದು’ ಪದ್ಯವು ನೆನಪಾಯಿತು. ಚಾಂದ್‌ ಪಾಷಾ ಅವರ ಕಾವ್ಯ ಸದ್ಯದ ಹಂಗಿನ ಕಾವ್ಯ. ಹೀಗಾಗಿ ಹಿಜಾಬ್, ಆಹಾರ ರಾಜಕೀಯ, ಕೋಮುವಾದ ಇವುಗಳಿಗೆ ಈ ಪದ್ಯಗಳು ತೀವ್ರವಾಗಿ ಸ್ಪಂದಿಸುತ್ತವೆ. ಎದುರಿಸಿ ನಿಲ್ಲುವ, ಸವಾಲು ಹಾಕುವ ದನಿಯ ಪದ್ಯಗಳು ಇವು. ಆದರೆ ಇನ್ನೂ ಅನೇಕ ಪದ್ಯಗಳಲ್ಲಿ ಗಾಢವಾದ ವಿಷಾದವಿದೆ. ಬದುಕಿನ ದುರಂತಗಳ ಗಾಢವಾದ ಅರಿವೂ ಇದೆ. ‘ಬೂದಿಯಾದವರು’ ಇಂಥ ಒಂದು ಪ್ರಭಾವಿಯಾದ ಪದ್ಯ. ಇದರಲ್ಲಿ ಚಂದ್ರಮತಿ, ಪಾಂಚಾಲಿ, ಗಾಂಧಾರಿ, ಅಕ್ಕ, ಅಹಲ್ಯೆ, ಸೀತೆ ಇವರೆಲ್ಲ ಇದ್ದಾರೆ.

“ತೇಪೆ ಹಚ್ಚಿಕೊಂಡ ಬದುಕಿಗೇನು ಗೊತ್ತು?
ಗಾಂಧಾರಿಯ ಕಣ್ಣರೆಪ್ಪೆಯ ಹೊಲಿಗೆ ಎಷ್ಟು ಮಜುಬೂತಾಗಿದೆ ಎಂದು!”

ಇಡೀ ಪದ್ಯದಲ್ಲಿ ಪ್ರಶ್ನಿಸಿ, ಕಟ್ಟಳೆಗಳನ್ನು ಮುರಿದ ಹೆಣ್ಣು ವ್ಯಕ್ತಿತ್ವಗಳು ಇನ್ನೂ ನೆಲೆಸಿಕ್ಕದೆ, ಚರಿತ್ರೆ, ಪುರಾಣಗಳ ನೆನಪುಗಳಲ್ಲಿ ಅನಾಥ, ಅಲೆಮಾರಿಗಳ ಹಾಗೆ ಅಲೆಯುತ್ತಿವೆ. ಹೆಣ್ಣು, ಬಟ್ಟೆ ತೊಟ್ಟಿದ್ದಕ್ಕಿಂತ ಗಂಡಸಿನ ಕಣ್ಣು ತೊಟ್ಟದ್ದೇ ಹೆಚ್ಚು’ ಆಗಿರುವುದರಿಂದ ಈಗ ಹಿಜಾಬು, ಧರಿಸಿದ್ದಕ್ಕಾಗಿ ಶಾಲೆಯೊಳಗೆ ಹೋಗದೆ ಹೊರಗಾಗಿ ಹೊರಗೆ ಇದ್ದಾಳೆ. ಜೀವ ಜಲ ಹುಡುಕಿ, ಅಗೆದು ಬಾವಿ ತೋಡುವವರಿಗೆ ಬಾಯಾರಿಕೆಗೂ ನೀರಿಲ್ಲ. ಮನುಷ್ಯರಿಗೆ ಸಿಕ್ಕದ ನೀರು ತುಳಸಿಕಟ್ಟೆಗೆ ಹೋಗುತ್ತದೆ. ನಾವೇ ಸೃಷ್ಟಿಸಿರುವ ಈ ನರಕಗಳ ನಡುವೆ ನೆನಪಾಗುವುದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಮತ್ತು ಬಾಬಾ ಸಾಹೇಬರು. ಒಂದು ಗುಂಡಿಗೆಗೆ ಗುಂಡಿಟ್ಟು ಕೊಂದರೇನಂತೆ ನೂರು ಗುಂಡಿಗೆಗಳು ಸನ್ನದ್ಧವಾಗಿವೆ ಎಂದು ಗೌರಿ ಲಂಕೇಶರ ನೆನಪಿನ ಪದ್ಯದಲ್ಲಿ ಹೇಳುವ ಎದೆಗಾರಿಕೆ ಕವಿಗೆ ಇದೆ.

ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ. ಒಂದು ಪದ್ಯದಲ್ಲಿ ಮಮತಾ ಸಾಗರ ಕಾವ್ಯದ ಬಗ್ಗೆ ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

(ಡಾ. ರಾಜೇಂದ್ರ ಚೆನ್ನಿ)

“ಕವಿತೆ ಹುಟ್ಟುವುದಲ್ಲ ಕಟ್ಟುವುದು, ನೀಲಾಕಾಶದ ನಿಹಾರಿಕೆಗಳ
ನೋವು ಗೊತ್ತಿರಬೇಕು ಅಂದಿದ್ದಿರಿ.
ನಾನೀಗ ನೂರು ನೋವಿನ ನೆನಪು ಹೆಣೆದು ಒಂದೇ ಪದ್ಯ ಬರೆಯುತ್ತಿದ್ದೇನೆ”

ಒಬ್ಬ ಪ್ರತಿಭಾವಂತ ಯುವ ಕವಿಗೆ ಮಮತಾ ಹೇಳಿದ ಮಾತಿಗಿಂತ ಉತ್ತಮ ಮಾರ್ಗದರ್ಶನ ಇರಲಾರದು. ಕವಿತೆ ಕಟ್ಟುವುದು ಅಪಾರವಾದ ತಾಳ್ಮೆ, ಚಿಂತನೆ ಹಾಗೂ ಜೀವನದ ಬಗ್ಗೆ ಗಂಭೀರವಾದ ಚಿಂತನೆಯನ್ನು ಬಯಸುತ್ತದೆ. ಇಂಥ ಪ್ರಯತ್ನವನ್ನು ‘ಒದ್ದೆಗಣ್ಣಿನ ರಾತ್ರಿ’ ಯಂಥ ಪದ್ಯದಲ್ಲಿ ಕಾಣಬಹುದಾಗಿದೆ. ಈ ಪ್ರಯತ್ನವು ಹೀಗೇ ನಡೆಯುತ್ತಿರಲಿ ಎಂದು ಹಾರೈಸುತ್ತೇನೆ.

“ಮಗ್ಗಲು ಬದಲಿಸಿದಂತೆಲ್ಲ ದುಃಖದ ದೋಣಿಗಳು ತೇಲುತ್ತಲೆ ಇವೆ, ಮುಳುಗುವ ಭಯವಿಲ್ಲದೆ” ಎನ್ನುವ ತಿಳುವಳಿಕೆ ಈ ಪದ್ಯದಲ್ಲಿದೆ. ಇದು ಕವಿಯ ಜೊತೆಗೆ ಸದಾ ಇರಲಿ. ಈ ಪದ್ಯಗಳಲ್ಲಿ ಮತ್ತೆ ಮತ್ತೆ ಅವರಿಗೆ ನೆನಪಾಗುವ ವಚನಕಾರರ ‘ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ’ ಪ್ರಜ್ಞೆಯ ವಿಸ್ತಾರವು ಅವರಿಗೆ ಲಭಿಸಲಿ ಎಂದೂ ಆಶಿಸುತ್ತೇನೆ. ಈ ಪದ್ಯಗಳು ನನಗೆ ನೀಡಿದ ಖುಷಿಗಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ.

(ಕೃತಿ: ಒದ್ದೆಗಣ್ಣಿನ ದೀಪ (ಕವನ ಸಂಕಲನ), ಲೇಖಕರು: ಚಾಂದ್‌ ಪಾಷ ಎನ್.ಎಸ್.‌, ಪ್ರಕಾಶಕರು: ಕಾವ್ಯಮನೆ ಪ್ರಕಾಶನ , ಬೆಲೆ:80/-)