“ಇಕಾ, ನೀನು ಇದನ್ನೊಂದು ಸಲ ಓದು. ಬರೀ ನಿನ್ನ ಶಾಲೆ ಪುಸ್ತಕ ಓದಿ ಹಾಳಾಗಬೇಡ. ಇದನ್ನು ಓದಿದ್ರೆ ನಿಂಗೂ ಮಾನ, ಮರ್ಯಾದೆ ಎಲ್ಲ ಮರೆತುಹೋಗ್ತದೆ.” ಎನ್ನುತ್ತಾ ಹೆಣ್ಣು ಗಂಡುಗಳೆರಡು ವಿಚಿತ್ರ ಭಂಗಿಯಲ್ಲಿರುವ ಪುಸ್ತಕವನ್ನು ಅವಳೆಡೆಗೆ ಹಿಡಿದ. ಅದನ್ನು ನೋಡಿದ್ದೇ ನೀಲಿಯ ಎದೆಯಲ್ಲಿ ನಡುಕ ಪ್ರಾರಂಭವಾಗಿ ಇದ್ದೆನೋ ಬಿದ್ದೆನೋ ಎಂದು ಮನೆಯೆಡೆಗೆ ಓಡತೊಡಗಿದಳು. ಆನಂದನ ಅಮ್ಮನಿಗೆ ಇವೆಲ್ಲವನ್ನೂ ಹೇಳಬೇಕೆಂದು ಎಷ್ಟೋ ಸಲ ಅಂದುಕೊಂಡಳಾದರೂ ಮಗನನ್ನು ದನಕ್ಕೆ ಬಡಿಯುವಂತೆ ಬಡಿಯುವ ಅವಳು ಇಂಥ ಸುದ್ದಿ ಕೇಳಿದರೆ ಅವನನ್ನು ಕೊಂದೇಬಿಟ್ಟಾಳೆಂದು ಸುಮ್ಮನಾದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ನೀಲಿ ಅಂದು ಶಾಲೆಯಿಂದ ಅನತಿ ದೂರದಲ್ಲಿರುವ ಯುವಕ ಮಂಡಲದವರು ಏರ್ಪಡಿಸಿದ ಸ್ಪರ್ಧೆಯಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸುತ್ತಿದ್ದಳು. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಹನ್ನೆರಡು ಜನರಲ್ಲಿ ತನ್ನ ಭಾಷಣಕ್ಕೇ ಜಾಸ್ತಿ ಚಪ್ಪಾಳೆಗಳು ಬಿದ್ದಿದ್ದರಿಂದ ಒಂದಾದರೂ ಬಹುಮಾನ ಬಂದೇಬರುವುದೆಂದು ಆಶಿಸಿದ್ದಳು. ಜತೆಯಲ್ಲಿ ತನಗೆ ಭಾಷಣ ಬರೆದುಕೊಟ್ಟುದಲ್ಲದೇ ಅದನ್ನು ಪರಿಣಾಮಕಾರಿಯಾಗಿ ಹೇಳುವುದು ಹೇಗೆಂದು ಕಲಿಸಿಕೊಟ್ಟ ಇತಿಹಾಸ ಅಧ್ಯಾಪಕರು ತನ್ನ ಭಾಷಣ ಮುಗಿದ ಕೂಡಲೇ ತನ್ನನ್ನು ನೋಡಿ ಗೆಲುವಿನ ಮುಖಭಾವ ಪ್ರದರ್ಶಿಸಿದ್ದರಿಂದ ಬಹುಮಾನ ಘೋಷಣೆ ಆದನಂತರವೇ ಮನೆಗೆ ಹೊರಡೋಣವೆಂದುಕೊಂಡಳು. ಚಿತ್ರಕಲೆಯಲ್ಲಿ ಭಾಗವಹಿಸಿದ ಹೊಳೆಸಾಲಿನ ಹುಡುಗಿ ಗೋಪಿ ಸ್ಪರ್ಧೆ ಮುಗಿದೊಡನೇ ಸಂಜೆಯ ಬಸ್ ಹಿಡಿಯುವ ಧಾವಂತದಲ್ಲಿದ್ದಳು. ನೀಲಿ ಅವಳಲ್ಲಿ ತಾನು ರಾತ್ರಿಯ ಹೊರ‍್ಟಿಂಗ್ ಬಸ್ಸಿಗೆ ಬರುವೆನೆಂದು ತನ್ನ ಮನೆಗೆ ಸುದ್ದಿ ಮುಟ್ಟಿಸಲು ಹೇಳಿ ಸಭಾಕಾರ್ಯಕ್ರಮವನ್ನು ಕೇಳುತ್ತ ಕುಳಿತಳು. ಸ್ಥಳೀಯ ರಾಜಕಾರಣಿಗಳು, ಯುವಕ ಸಂಘಕ್ಕೆ ಧನಸಹಾಯ ಮಾಡಿದವರು ಹೀಗೆ ವೇದಿಕೆಯಲ್ಲಿರುವ ಎಲ್ಲರ ಭಾಷಣ ಎಗ್ಗಿಲ್ಲದೇ ಸಾಗಿತ್ತು. ಅಂತೂ ಕೊನೆಯಲ್ಲಿ ಬಹುಮಾನ ಘೋಷಣೆಯಾದಾಗ ನೀಲಿಗೆ ಮೊದಲ ಬಹುಮಾನವೇ ಬಂದಿತ್ತು. ನೀಲಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಶಸ್ತಿ ಪತ್ರದೊಂದಿಗೆ ಬಣ್ಣದ ಬೇಗಡೆಯಲ್ಲಿ ಸುತ್ತಿಕೊಟ್ಟ ಬಹುಮಾನವನ್ನು ಹಿಡಿದುಕೊಂಡು ಸರಸರನೆ ಅಲ್ಲಿಂದ ಹೊರಗೆ ಬಂದಳು.

ಸಮುದ್ರದ ತಡಿಯಲ್ಲಿರುವ ಆ ಬಯಲಿನಲ್ಲಿ ಸೂರ್ಯ ಇನ್ನೇನು ಕಡಲಿಗೆ ಇಳಿಯುತ್ತಿದ್ದ. ತಮ್ಮೂರಿಗೆ ಹೋಗುವ ಜನರ‍್ಯಾರಾದರೂ ಬಸ್ ಕಾಯುತ್ತಿರಬಹುದೆಂದು ನಿರೀಕ್ಷಿಸಿದವಳಿಗೆ ನಿರಾಸೆಯೇ ಕಾದಿತ್ತು. ಹೇಗೂ ರಾತ್ರಿಯ ಬಸ್ ಬಂದೇ ಬರುವುದೆಂಬ ಭರವಸೆಯಿಂದ ಬಸ್ ನಿಲ್ದಾಣದಲ್ಲಿ ಕಾಯತೊಡಗಿದಳು. ತಾಲೂಕು ಕೇಂದ್ರದಿಂದ ಆರುವರೆಗೆ ಹೊರಡುವ ಬಸ್ ಇಲ್ಲಿಗೆ ಬರುವಾಗ ಏಳೂವರೆಯಂತೂ ಆಗುವುದು ಅಂದುಕೊಳ್ಳುತ್ತಲೇ ಧೈರ್ಯ ತಂದುಕೊಳ್ಳತೊಡಗಿದಳು. ಸಂಜೆಯಿಳಿಯುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಕುಳಿತ ಹೆಂಗಸರೆಲ್ಲರೂ ಖಾಲಿಯಾಗತೊಡಗಿ ಒಂಚೂರು ಧೈರ್ಯ ಕುಸಿಯತೊಡಗಿತು. ದಿನವೂ ರಸ್ತೆಯ ಬದಿಯಲ್ಲಿ ಒಂದು ಬಟ್ಟೆಯ ಮೂಟೆಯನ್ನು ಕಂಕುಳಲ್ಲಿ ಇಟ್ಟುಕೊಂಡು ಓಡಾಡುವ ಹುಚ್ಚು ಹೆಂಗಸು ತನ್ನಷ್ಟಕ್ಕೆ ಏನನ್ನೋ ಗೊಣಗುತ್ತಾ ಬಸ್ ನಿಲ್ದಾಣದೊಳಗೆ ಬಂದಳು. ಅವಳನ್ನು ನೋಡಿದ್ದೇ ನೀಲಿಯ ಭಯ ಇನ್ನಷ್ಟು ಹೆಚ್ಚಾಯಿತು. ಇವಳ ಶಾಲೆಯ ಕೆಲವು ತುಂಟ ಹುಡುಗರು ಅವಳಿಗೆ ಕಲ್ಲಿನಲ್ಲಿ ಹೊಡೆದಿದ್ದರಿಂದ ಅವಳು ಶಾಲೆಯ ಮಕ್ಕಳನ್ನು ಕಂಡಾಗಲೆಲ್ಲ ಹೊಡೆಯಲು ಬರುತ್ತಿದ್ದಳು. ಇಂದು ಸ್ಪರ್ಧೆಯ ನೆಪದಿಂದ ಬಣ್ಣದ ಅಂಗಿಯಲ್ಲಿರುವ ನನ್ನನ್ನು ಅವಳು ಗುರುತು ಹಿಡಿಯದಿದ್ದರೆ ಸಾಕು ಎಂದು ಪ್ರಾರ್ಥಿಸತೊಡಗಿದಳು. ಅಲ್ಲೇ ಠಳಾಯಿಸುತ್ತಿದ್ದ ಚಿಗುರು ಮೀಸೆಯ ಹುಡುಗರಿಬ್ಬರು ಸಿಗರೇಟು ಹಚ್ಚಿ ಹೊಗೆಬಿಡತೊಡಗಿದಾಗ ಹುಚ್ಚಿ ಅವರನ್ನು ಹಚಾ… ಹಚಾ… ಎಂದು ಓಡಿಸತೊಡಗಿದಳು. ನೀಲಿಗೆ ಇನ್ನಷ್ಟು ಭಯವಾಗಿ ನಿಲ್ದಾಣದಿಂದ ಹೊರಗೆ ಬಂದು ದೀಪದ ಕಂಬದಡಿಯಲ್ಲಿ ನಿಂತು ಬಸ್ ಕಾಯತೊಡಗಿದಳು.

ನೀಲಿ ಬಸ್ ಹತ್ತಿದಾಗ ಇದು ನಮ್ಮೂರಿನ ಬಸ್ ಎಂಬ ಭದ್ರತೆಯ ಭಾವ ಮೂಡಿ ನಿರಾಳವಾಗಿ ಸೀಟ್ ಹುಡುಕತೊಡಗಿದಳು. ಕಂಡಕ್ಟರ್ ಅವಳ ಪಾಸನ್ನು ಪರೀಕ್ಷಿಸುತ್ತಾ, “ಏನ್ ನೋಡ್ತೀರಿ ಅಕ್ಕೋರೆ? ಇಲ್ಲೇ ಸೀಟ್ ಖಾಲಿಯಿದೆಯಲ್ಲ, ಕುಂಡರ‍್ರೀ” ಎಂದು ತಮಾಷೆ ಮಾಡಿದ. ಇವಳು ಕಂಡಕ್ಟರ್ ಸೀಟಿನ ಪಕ್ಕವೇ ಕುಳಿತುಕೊಂಡಳು. ಬಸ್ಸಿನಲ್ಲಿ ಒಂದಿಷ್ಟು ಜನರಿದ್ದರಾದರೂ ತೀರ ಪರಿಚಿತ ಮುಖಗಳು ಕಾಣಿಸಲಿಲ್ಲವಾಗಿ ಒಂಚೂರು ಕಳವಳಗೊಂಡಳು. ಬಸ್ ಚಲಿಸುತ್ತಿದ್ದಂತೆ ತನ್ನ ಬೆನ್ನಿನಡಿಯಿಂದ ಯಾವುದೋ ಕೈ ತನ್ನನ್ನು ಬಳಸುತ್ತಿರುವಂತೆ ಅವಳಿಗೆ ಅನಿಸಿತು. ಮರುಕ್ಷಣದಲ್ಲಿ ಒಂದು ಅಂಗೈ ಅವಳ ಎದೆಯನ್ನು ಸವರತೊಡಗಿತು. ನೀಲಿ ಅವಾಕ್ಕಾಗಿ ಸರಕ್ಕನೆ ಎದ್ದುನಿಂತಳು. ಪಕ್ಕದಲ್ಲಿ ಕುಳಿತು ಏದುಸಿರು ಬಿಡುತ್ತಿದ್ದ ಕಂಡಕ್ಟರ್ ಒಂಥರಾ ಅಮಲಿನಲ್ಲಿ ಅವಳನ್ನೇ ನೋಡುತ್ತಿದ್ದ. ಅವಳ ಲಂಗವನ್ನೆಳೆದು ಅಲ್ಲಿಯೇ ಕುಳಿತುಕೊಳ್ಳುವಂತೆ ಒತ್ತಾಯಿಸುತ್ತಿದ್ದ. ನೀಲಿ ಅವನ ಮುಖವನ್ನೇ ನೋಡದೇ ಸರಕ್ಕನೆ ಮುಂದೆ ಹೋಗಿ ಖಾಲಿಯಿರುವ ಸೀಟಿನಲ್ಲಿ ಕುಳಿತಳು. ಬಸ್ ಇಳಿಯುತ್ತಿದ್ದಂತೆ ಅವಳನ್ನು ಕರೆದೊಯ್ಯಲು ಬಂದ ತಂದೆಯೊಡನೆ ಅದೇ ಕಂಡಕ್ಟರ್ ಆರಾಮವಾಗಿ ಮಾತನಾಡುತ್ತಿರುವುದನ್ನು ಕಂಡು ತನಗಾದ ಅನುಭವ ಭ್ರಮೆಯೋ, ನಿಜವೋ ಎಂಬುದು ತಿಳಿಯದೇ ಕಕ್ಕಾಬಿಕ್ಕಿಯಾದಳು. ಮನೆ ಸೇರಿದ ಮೇಲೂ ತನಗೆ ಬಂದ ಬಹುಮಾನವನ್ನು ತೋರಿಸುವ ಖುಶಿಯಾಗಲೀ, ಭಾಷಣವನ್ನು ಹೇಳಿತೋರಿಸುವ ಉತ್ಸಾಹವಾಗಲೀ ಅವಳಲ್ಲಿ ಉಳಿಯಲಿಲ್ಲ. ಸುಸ್ತಾಗಿದೆಯೆಂದು ಹೇಳಿ ಊಟಮಾಡಿ ಮಲಗಿಬಿಟ್ಟಳು.

ಅಂದು ರಾತ್ರಿ ಬೇಗ ಮಲಗಿದರೂ ನಿದ್ದೆ ಅವಳ ಬಳಿ ಸುಳಿಯಲಿಲ್ಲ. ಹಗಲಿನಲ್ಲೆಲ್ಲ ತನ್ನನ್ನು ಅಷ್ಟು ಚಂದಕ್ಕೆ ಮಾತನಾಡಿಸುವ ಆ ಬಸ್ ಕಂಡಕ್ಟರ್ ಈ ದಿನ ರಾತ್ರಿ ಹೀಗೇಕೆ ಮಾಡಿದ? ಎಂಬ ಪ್ರಶ್ನೆಯೇ ಕಾಡುತ್ತಿತ್ತು. ನಾಳೆಯಿಂದ ಇನ್ನು ಅವನನ್ನು ಕಂಡಾಗಲೆಲ್ಲ ಮುಖ ನೋಡುವುದು ಹೇಗೆ? ಎನಿಸತೊಡಗಿತು. ಜತೆಯಲ್ಲಿ ನಾಲ್ಕಾರು ವರ್ಷಗಳ ಹಿಂದೆ ನಡೆದ ಘಟನೆಯೊಂದು ನೆನಪಾಗಿ ಅದೂ ಇದೆಯೇ? ಎಂಬ ಪ್ರಶ್ನೆ ಕಾಡತೊಡಗಿತು. ಅಂದು ನೀಲಿ ಅವಳ ತೋಟದಲ್ಲಿರುವ ತೆರೆದ ಬಾವಿಯಂಚಿನಲ್ಲಿ ಬೆಳೆದ ಹುಳಿಚಿಗುರಿನ ಗಿಡವನ್ನು ಚಿವುಟಲೆಂದು ಹೋದವಳು ಆಯತಪ್ಪಿ ಬಾವಿಯಲ್ಲಿ ಬಿದ್ದಿದ್ದಳು. ಜತೆಗಿದ್ದ ಗೆಳತಿ ಕೂಗಿ ಹೇಳಿದ್ದರಿಂದ ಮನೆಯಲ್ಲಿರುವವರೆಲ್ಲರೂ ಓಡಿಬಂದಿದ್ದರು. ನೀಲಿಯ ಅಪ್ಪ ಬಾವಿಯೊಳಗೆ ಜಿಗಿದು ಮುಳುಗುತ್ತಿದ್ದ ಅವಳನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದರು. ನೀಲಿ ಮೇಲಕ್ಕೆ ಬಂದು ಕಣ್ಬಿಟ್ಟಾಗ ಅವಳ ಅಮ್ಮ ಜೋರಾಗಿ ಅಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಯೇ ನಿಂತಿದ್ದ ಪಕ್ಕದ ಮನೆಯ ಶಂಕರ ಹತ್ತಿರ ಬಂದು, “ನೀರು ಕುಡಿದ್ಯಾ ಮಗ?” ಎನ್ನುತ್ತಾ ಬೆನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಒದ್ದೆ ಅಂಗಿಯಲ್ಲಿದ್ದ ನೀಲಿಯ ಎದೆಯನ್ನು ಸವರಿದ್ದ. ಅದ್ಯಾಕೋ ಆ ಸವರುವಿಕೆ ಅವಳಿಗೆ ಇರಿಸುಮುರಿಸು ಮಾಡಿತ್ತು. ಆ ಇರಿಸುಮುರಿಸಿನ ಅರ್ಥ ಇಂದು ಅವಳಿಗಾಗಿತ್ತು.

ದಿನವೂ ನೀಲಿಯೊಂದಿಗೆ ಶಾಲೆಗೆ ಹೋಗುವ ಆನಂದ ಅಂದು ಅವಳೊಂದಿಗೆ ಮಾತಾಡುವುದಿದೆಯೆಂದು ದಾರಿಯಲ್ಲಿ ನಿಲ್ಲಿಸಿದ್ದ. ನೋಟ್ಸ ಬರೆಯಲು ತೀರ ಕಳ್ಳನಾದ ಅವನು ಅನೇಕ ಸಲ ಹೀಗೆ ನೀಲಿಯನ್ನು ನಿಲ್ಲಿಸಿ ತನ್ನ ತರಗತಿಯ ಹುಡುಗಿಯರ ನೋಟ್ಸ್ ತಂದುಕೊಟ್ಟು ಬರೆದುಕೊಡು ಎಂದು ಹೇಳಿದ್ದ. ಇವತ್ತೂ ಹಾಗೆಯೇ ಏನಾದರೂ ಇರಬಹುದೆಂದು ತಿಳಿದ ನೀಲಿ ಅವನೊಂದಿಗೆ ಮಾತನಾಡಲು ನಿಂತಳು. ಆಗೆಲ್ಲ ಸರಾಗ ಮಾತನಾಡುತ್ತಿದ್ದವನು ಇಂದೇಕೋ ಯೋಚನೆಯಲ್ಲಿ ಮುಳುಗಿದವನಂತೆ ಮಾತಿಗೆ ತಡಕಾಡುವುದನ್ನು ಕಂಡ ನೀಲಿ, “ಏಯ್ ಆನಂದ? ಇವತ್ತ್ಯಾವ ನೋಟ್ಸ್ ಬರೀಲಿಲ್ಲ? ಇಂಗ್ಲೀಷ ಸರು ಟಪಾ ಟಪಾ ಬಾರಿಸೋ ಸದ್ದು ನಮ್ಮ ಕ್ಲಾಸಿನವರೆಗೂ ಕೇಳ್ತಿತ್ತು. ನಿನ್ನ ಬೆನ್ನಿಗೆ ಬಿತ್ತೋ ಹ್ಯಾಂಗೆ?” ಎಂದಳು. ಅದಕ್ಕವನು, “ಅವ್ರು ಸಾಯ್ಲಿ. ಹೆಣ್ಮಕ್ಕಳು ನೋಟ್ಸ್ ಬರೆಯದಿದ್ರೆ ಪಿಟಿ ಪಿರಿಯಡ್ಡಲ್ಲಿ ತಮ್ಮ ಪಕ್ಕವೇ ಕೂರಸ್ಕಂಡು ಬರಿಸ್ತ್ರು. ಹುಡುಗರು ಬರಿದಿದ್ದರೆ ಬಾರಿಸ್ತ್ರು. ಅವ್ರದೇನ್ ನಂಗೆ ಗೊತ್ತಿಲ್ವಾ? ಮೊನ್ನೆ ಗೋಡೆಯಲ್ಲಿ ಆರ‍್ಕೆ ಸರ್ ಮತ್ತೆ ಶಾಂತಿ ಅಂತ ಬರೆದಿಟ್ಟಿದ್ರು ಗೊತ್ತಾ? ಸುಭಗರ‍್ಯಾರೂ ಇಲ್ಲ ಅಲ್ಲಿ, ಎಲ್ಲರೂ ಲಫಂಗರೆ” ಎಂದು ನೀಲಿಗೆ ಅರ್ಥವಾಗದ ಮಾತನಾಡತೊಡಗಿದ. “ಆಯ್ತು ಮಾರಾಯ, ಇದೇ ಮಾತಾಡೂದಾದ್ರೆ ನಂಗೆ ಮನೆಗೋಗಿ ಓದೂದಿದೆ. ನೀನೇನೋ ನೋಟ್ಸ್ ಗೀಟ್ಸ ಬರೆದುಕೊಡು ಹೇಳ್ತಿಯೇನೋ ಅಂತ ನಿಂತೆ.” ಎಂದು ಮನೆಯ ದಾರಿ ಹಿಡಿದಳು. ಚಂಗನೆ ನೆಗೆದು ಇವಳ ಮುಂದೆ ಬಂದು ನಿಂತ ಅವನು, “ಅದೂ… ಅದೂ … ನೀನು ನಿನ್ನೆ ನೀಲಿ ಚಡ್ಡಿ ಹಾಕಂಡಿದ್ದೆ ಅಲ್ವಾ?” ಎಂದುಬಿಟ್ಟ. ನೀಲಿ ತಟ್ಟನೆ ನಿಬ್ಬೆರಗಾಗಿ ನಿಂತುಬಿಟ್ಟಳು. ಅವಳು ಹೊಳೆಸಾಲಿನ ಶಾಲೆಗೆ ಹೋಗುವಾಗಲೆಲ್ಲ ಗಿಡ್ಡದಾದ ಫ್ರಾಕನ್ನು ಧರಿಸಿ ಹೋಗುತ್ತಿದ್ದಳು. ಆದರೆ ಹೊಸಶಾಲೆಗೆ ಹೋಗಲು ಶುರುಮಾಡಿದ ಮೇಲೆ ಅವಳಮ್ಮ ಅವಳ ಫ್ರಾಕಿಗೆಲ್ಲ ತುದಿಯಲ್ಲಿ ನೆರಿಗೆ ಕೊಡಿಸಿ ಉದ್ದ ಮಾಡಿದ್ದಷ್ಟೇ ಅಲ್ಲ, ಪಾದದವರೆಗೂ ಬರುವ ಉದ್ದಲಂಗವನ್ನೇ ಹೊಲಿಸಿದ್ದರು. ಶಾಲೆಯ ಯುನಿಫಾರಂ ಕೂಡ ಮೂರು ವರ್ಷ ಬರಬೇಕೆಂದು ಸ್ಕರ್ಟಿನ ಬದಲು ಉದ್ದಲಂಗದಂತೇ ಹೊಲಿಸಿದ್ದರು. ಕಾರಣ ಕೇಳಿದಾಗ, “ಇನ್ನೆಲ್ಲ ನೀನು ಅಂಗಿ ಆಚೆಈಚೆ ಮಾಡಿಕೊಂಡು ತೊಡೆ, ಚಡ್ಡಿ ಎಲ್ಲ ತೋರಿಸಬಾರದು. ದೊಡ್ಡೋಳಾಗಿರುವೆ, ಹುಷಾರಾಗಿರಬೇಕು.” ಎಂದು ಎಚ್ಚರಿಸಿದ್ದಳು. ಆದರೂ ಇವನು ನನ್ನ ಚಡ್ಡಿಯ ಬಣ್ಣವನ್ನು ಹೇಗೆ ನೋಡಿದ ಎಂದು ನೀಲಿ ಕಂಗಾಲಾದಳು.

ಅವರೆಲ್ಲ ಚಿಕ್ಕವರಿರುವಾಗ ಆಟದಲ್ಲಿ ಜಗಳವಾದಾಗ ಹುಡುಗರು ನಿನ್ನ ಚಡ್ಡಿ ಬಣ್ಣ ಹೇಳ್ತೇನೆ ಎಂದು ಚುಡಾಯಿಸುವುದು ಸಾಮಾನ್ಯವಾದ್ದರಿಂದ ಈಗಲೂ ಹಾಗೆಯೇ ಏನೋ ತಮಾಷೆ ಮಾಡುತ್ತಿರಬಹುದೆ? ಎಂದು ಒಂದು ಕ್ಷಣ ಅನಿಸಿತು. ನೀಲಿಯ ಅಚ್ಚರಿಯನ್ನು ಗುರುತಿಸಿದ ಆನಂದ, “ನೀ ಈಗಿತ್ಲಾಗಿ ರಾತ್ರಿ ಭಾರೀ ಓದ್ತೆ ಮಾರಾಯ್ತಿ. ನಿನ್ನಪ್ಪ ಗೊರಕೆ ಹೊಡಿತಿದ್ರೂ ನಿಮ್ಮನೆಯ ಚಾವಡಿಯ ದೀಪ ನಂದೂದಿಲ್ಲ. ರಾತ್ರಿ ನೀ ಮಲಗಿದ ಮೇಲೆ ನಿಮ್ಮನಿ ಹತ್ರ ಬರ್ತೆ. ಓದಿ ಮಲಗಿದ ನಿಂಗೆ ಹೊದಿಕೆಯ ಉಸಾಬರಿ ಇಲ್ಲ ಮಾರಾಯ್ತಿ. ರಾತ್ರಿ ತಿಂಗಳ ಬೆಳಕಲ್ಲಿ ನಿನ್ನ ಕಾಲು, ತೊಡೆ, ಚಡ್ಡಿ ಎಲ್ಲ ಕಾಣ್ತಾ ಇರ್ತದೆ. ನೋಡ್ತಿದ್ರೆ ಮುಟ್ಟಬೇಕು ಅನಿಸ್ತದೆ.” ಅವನ ಮಾತಗಳನ್ನು ಮುಂದುವರೆಸಲು ಬಿಡದೇ ನೀಲಿ, “ಥೂ ನಿನ್ನ ಮಕಕ್ಕೆ! ನಾಚಿಕೆ, ಮಾನ, ಮರ್ಯಾದೆ ಎಲ್ಲ ಬಿಟ್ಟಿದೆ ಕಾಣ್ತದೆ. ಮಾಡ್ತೆ ಇರು, ಎಲ್ಲ ನಿನ್ನ ಅಮ್ಮನ ಹತ್ರ ಹೇಳ್ತೆ.” ಎನ್ನುತ್ತಿರುವಂತೆ ಆನಂದ ತನ್ನ ಬ್ಯಾಗಿನಿಂದ ಪುಟ್ಟ ಪುಸ್ತಕವೊಂದನ್ನು ತೆಗೆದು, “ಇಕಾ, ನೀನು ಇದನ್ನೊಂದು ಸಲ ಓದು. ಬರೀ ನಿನ್ನ ಶಾಲೆ ಪುಸ್ತಕ ಓದಿ ಹಾಳಾಗಬೇಡ. ಇದನ್ನು ಓದಿದ್ರೆ ನಿಂಗೂ ಮಾನ, ಮರ್ಯಾದೆ ಎಲ್ಲ ಮರೆತುಹೋಗ್ತದೆ.” ಎನ್ನುತ್ತಾ ಹೆಣ್ಣು ಗಂಡುಗಳೆರಡು ವಿಚಿತ್ರ ಭಂಗಿಯಲ್ಲಿರುವ ಪುಸ್ತಕವನ್ನು ಅವಳೆಡೆಗೆ ಹಿಡಿದ. ಅದನ್ನು ನೋಡಿದ್ದೇ ನೀಲಿಯ ಎದೆಯಲ್ಲಿ ನಡುಕ ಪ್ರಾರಂಭವಾಗಿ ಇದ್ದೆನೋ ಬಿದ್ದೆನೋ ಎಂದು ಮನೆಯೆಡೆಗೆ ಓಡತೊಡಗಿದಳು. ಆನಂದನ ಅಮ್ಮನಿಗೆ ಇವೆಲ್ಲವನ್ನೂ ಹೇಳಬೇಕೆಂದು ಎಷ್ಟೋ ಸಲ ಅಂದುಕೊಂಡಳಾದರೂ ಮಗನನ್ನು ದನಕ್ಕೆ ಬಡಿಯುವಂತೆ ಬಡಿಯುವ ಅವಳು ಇಂಥ ಸುದ್ದಿ ಕೇಳಿದರೆ ಅವನನ್ನು ಕೊಂದೇಬಿಟ್ಟಾಳೆಂದು ಸುಮ್ಮನಾದಳು. ಸಣ್ಣವನಿರುವಾಗೊಮ್ಮೆ ಶಾಲೆಯಲ್ಲಿ ಯಾರದ್ದೋ ಪೆನ್ನು ಕದ್ದನೆಂದು ಮಾಸ್ಟ್ರು ಅವಳನ್ನು ಕರೆಸಿದ್ದಕ್ಕೆ ಮಗನ ಬೆನ್ನಿನ ಮೇಲೆ ದೋಸೆ ಸಟ್ಟುಗ ಕಾಸಿ ಬರೆ ಹಾಕಿದ ಗಟ್ಟಿಗಾತಿ ಅಮ್ಮ ಅವಳು. ಇನ್ನು ಮುಂದೆ ಆನಂದನ ಸಹವಾಸವೇ ಬೇಡವೆಂದು ನೀಲಿ ವಿಷಯವನ್ನು ತನ್ನಮ್ಮನಲ್ಲಿಯೂ ಹೇಳಲಾಗದೆ ತನ್ನೊಳಗೇ ಬಚ್ಚಿಟ್ಟುಕೊಂಡಳು.

ಹೊಸಶಾಲೆಯ ಲೆಕ್ಕದ ಮಾಸ್ಟ್ರಿಗೆ ನೀಲಿಯೆಂದರೆ ಪ್ರಾಣ. ಇಡಿಶಾಲೆಗೆ ಹಳಬರೆಂದು ಖ್ಯಾತಿಪಡೆದ ಅವರಿಗೆ ಕಲಿಯುವ ಮಕ್ಕಳನ್ನು ಕಂಡರೆ ಅತಿಯಾಸೆ. ಹೇಳಿದ್ದೆಲ್ಲವನ್ನು ಏಕಪಾಟಿಯಂತೆ ಕಲಿಯುವ ನೀಲಿಯನ್ನು ಅವರು ಸ್ಟಾಪಿನ ಎಲ್ಲರೆದುರು ಅನೇಕ ಸಲ ಹೊಗಳಿದ್ದರು. ಇತ್ತೀಚೆಗೆ ಅವರು ನೀಲಿಯನ್ನು ಕಂಡಾಗಲೆಲ್ಲ ಒಂದು ಮಾತನ್ನು ಹೇಳುತ್ತಿದ್ದರು, “ಈ ಸರಕಾರಿ ಶಾಲೆಯಲ್ಲಿ ಓದಿದ್ದು ಸಾಕು. ನಿನ್ನಂಥವರು ಒಳ್ಳೆಯ ಪ್ರೈವೇಟ್ ಶಾಲೆಯಲ್ಲಿ ಓದಬೇಕು. ನಮ್ಮನೆಯ ಹತ್ತಿರವೇ ಒಂದು ಒಳ್ಳೆಯ ಶಾಲೆಯಿದೆ. ಮುಂದಿನ ವರ್ಷ ನೀನು ಪಬ್ಲಿಕ್ ಪರೀಕ್ಷೆ ಬರೆಯುವವಳು. ಈ ಬಸ್ ಹಿಡಿದು, ಮತ್ತೆ ನಡೆದು ಮನೆಸೇರಿ ಓದಿದರೆಲ್ಲ ಸಾಕಾಗುವುದಿಲ್ಲ. ಅದಕ್ಕೇ ಮುಂದಿನ ವರ್ಷ ನಮ್ಮ ಮನೆಯಲ್ಲಿದ್ದು ಶಾಲೆಗೆ ಹೋಗು. ಒಳ್ಳೆಯ ಶಾಲೆಯನ್ನು ಸೇರಿದ ಹಾಗೂ ಆಯಿತು, ಮುಂದೆ ಅಲ್ಲಿಯೇ ಟೀಚರ್ ಟ್ರೈನಿಂಗ್ ಕೂಡ ಮಾಡಬಹುದು. ನೀನು ಹೆಚ್ಚೆಂದರೆ ಕನ್ನಡ ಶಾಲೆಯ ಅಕ್ಕೋರಾಗಬಹುದು. ಕಾಲೇಜಿನ ಮೇಡಂ ಆಗಲು ನಿನ್ನ ಎತ್ತರ, ದಾಡಸಿತನ ಸಾಲದು. ಅಂತೂ ನೀನು ಸರಕಾರಿ ಅನ್ನ ತಿನ್ನೋದಂತೂ ಗ್ಯಾರಂಟಿ.” ನೀಲಿಗೆ ಅವರು ಹೇಳಿದ ಮಾತಿನ ಅರ್ಥ ಪೂರ್ತಿಯಾಗಿ ಆಗದಿದ್ದರೂ ಅವರು ಕಲಿಸುವ ಲೆಕ್ಕಗಳ ಮೋಡಿಯಿಂದ ಅವರ ಮನೆಯಲ್ಲಿಯೇ ಇದ್ದರಾಗಬಹುದಾ? ಅಂತಲೂ ಒಮ್ಮೊಮ್ಮೆ ಅನಿಸುವುದು. ಆದರೆ ನೀಲಿಯ ಇತಿಹಾಸದ ಮಾಸ್ಟ್ರು ಮಾತ್ರ ಪ್ರತಿದಿನವೂ ತರಗತಿಯಲ್ಲಿ, “ಸರಕಾರಿ ಶಾಲೆಯ ಮಕ್ಕಳು ಯಾವುದರಲ್ಲಿ ಕಡಿಮೆ? ನಮ್ಮ ನೀಲಿಗೆ ಯಾರಾದರೂ ಕಾಂಪಿಟೇಶನ್ ಕೊಡಲಿ ನೋಡೋಣ. ಈ ಮಾತನ್ನು ನಾನು ಕಳೆದ ವರ್ಷ ಶಾಲೆಯ ತಪಾಸಣೆಗೆ ಬಂದ ಇನಿಸ್ಪೆಕ್ಟರ್ ಹತ್ತಿರವೇ ಹೇಳಿದ್ದೆ. ಅದಕ್ಕೆ ಸಾಕ್ಷಿಯೆಂಬಂತೆ ಅವಳು ಮಾಡಿದ ಬಾಲ್ಯವಿವಾಹದ ಬಗೆಗಿನ ಪ್ರಾಜೆಕ್ಟನ್ನೂ ತೋರಿಸಿದ್ದೆ. ಅವರೂ ಹೌದು ಎಂದರು.” ಎಂದು ಹೇಳಿ ಅವಳೊಂದಿಗೆ ಇನ್ನುಳಿದ ಮಕ್ಕಳನ್ನೂ ಹೊಗಳಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು.
ಹೊಸಶಾಲೆಗೆ ಬಂದಮೇಲೆ ನೀಲಿಗೆ ಅಪ್ಪನೊಂದಿಗೆ ಆಟ ನೋಡಲು ಹೋಗಲಾಗುತ್ತಿರಲಿಲ್ಲ. ಇವಳು ಮನೆಸೇರುವ ಹೊತ್ತಿಗಾಗಲೇ ಅಪ್ಪ ಆಟ ನೋಡಲು ಹೊರಟುಬಿಟ್ಟಿರುತ್ತಿದ್ದರು.

ಅಪ್ಪ, ಮಗಳು ಬಹಳ ಯೋಚನೆ ಮಾಡಿ ಈ ವರ್ಷ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು. ಅದರ ಪ್ರಕಾರ ಆಟವಿರುವ ದಿನ ಕೊನೆಯ ಅವಧಿಯಲ್ಲಿ ಅಪ್ಪ ಶಾಲೆಗೇ ಬಂದುಬಿಡುತ್ತಿದ್ದರು. ನೀಲಿಯ ತರಗತಿ ಕೋಣೆಯೆದುರು ನಿಂತು, “ಮಾಸ್ಟ್ರೇ, ಮಗಳಿಗೊಂದು ಆಟ ತೋರಿಸ್ವ ಅಂತ. ಒಂಚೂರ ಕರಕೊಂಡು ಹೋಗಲಾ?” ಎನ್ನುತ್ತಿದ್ದರು. ಆಗ ತರಗತಿಯ ಮಕ್ಕಳೆಲ್ಲರೂ ಒಳಗೊಳಗೆ ನಗುತ್ತಿದ್ದರೂ ಮಾಸ್ಟ್ರು ಮಾತ್ರ ಅವಳನ್ನು ಕಳಿಸಿಕೊಡುತ್ತಿದ್ದರು. ನಿದ್ದೆಗೆಟ್ಟು ಆಟ ನೋಡಿದರೂ ನೀಲಿ ಮರುದಿನ ತರಗತಿಯನ್ನು ತಪ್ಪಿಸುವವಳಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ ಅಪ್ಪ ಬಂದಾಗಲೊಮ್ಮೆ ಲೆಕ್ಕದ ಮಾಸ್ಟ್ರು ನೀಲಿಯನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳುವ ಬಗ್ಗೆ ವಿಚಾರಿಸಿದ್ದರು. ಆದರೆ ಮನೆಗುಬ್ಬಿಯಾದ ತಮ್ಮ ಮಗಳು ಬೇರೆಯವರ ಮನೆಯಲ್ಲಿ ಇರಲು ಒಪ್ಪುವಳೋ, ಇಲ್ಲವೋ ಎಂಬ ಗೊಂದಲದಲ್ಲಿದ್ದ ಅಪ್ಪ ಏನೊಂದನ್ನೂ ಹೇಳದೇ ಜಾರಿಕೊಂಡಿದ್ದರು. ಇನ್ನೊಮ್ಮೆ ಅಪ್ಪ ಶಾಲೆಗೆ ಬಂದಾಗ ಪಾಠ ಮಾಡುತ್ತಿದ್ದ ಇತಿಹಾಸ ಅಧ್ಯಾಪಕರು ಇದೇ ಅವಕಾಶಕ್ಕೆ ಕಾಯುತ್ತಿದ್ದವರಂತೆ ಅಪ್ಪನನ್ನು ತರಗತಿಯ ಹೊರಗೆ ಕರೆದುಕೊಂಡು ಹೋಗಿ ಏನನ್ನೋ ಗುಟ್ಟಾಗಿ ಹೇಳುತ್ತಿದ್ದರು. ಏನೆಂದು ಕೇಳಿದರೆ ಅಪ್ಪ ಅವಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ಮರುದಿನ ಅಮ್ಮನಲ್ಲಿ ಅಪ್ಪ ಹೇಳುತ್ತಿದುದನ್ನು ನೀಲಿ ಕೇಳಿಸಿಕೊಂಡಿದ್ದಳು. “ನೀಲಿಯ ಶಾಲೆಯ ಇತಿಹಾಸ ಮಾಸ್ಟ್ರು ಭಾಳ ಒಳ್ಳೆಯವರು ಮಾರಾಯ್ತಿ. ಅದೇ ಆ ಲೆಕ್ಕದ ಮಾಸ್ಟ್ರು ನಿಮ್ಮ ಮಗಳನ್ನು ನಮ್ಮ ಮನೆಯಿಂದ ಶಾಲೆಗೆ ಕಳಿಸಿ ಅಂತ ಹೇಳ್ತಿದ್ರಲ. ಇವರು ನಿನ್ನೆ ನನ್ನನ್ನು ಕರೆದು ಒಂದು ಅನುಭವ ಹೇಳಿದ್ರು. ಅವರ ಮನೆಯಲ್ಲಿ ದೊಡ್ಡ ತೋಟ, ಆಳು, ಕಾಳು ಎಲ್ಲ ಇದ್ದಾರಂತೆ. ಹಾಗಾಗಿ ಮನೆಗೆಲಸ ಮಾಡಿದಷ್ಟು ತೀರುವುದಿಲ್ಲವಂತೆ. ಈ ಮಾಸ್ಟ್ರು ಕಲಿಯಲು ಚುರುಕಿದ್ದ ಕೆಲವು ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರಂತೆ. ಅದಕ್ಕೇ ನಿಮ್ಮ ನೀಲಿಯನ್ನು ಕಳಿಸಬೇಡಿ ಎಂದರು. ನಾನು ಇಲ್ಲದಿದ್ರೂ ಮಕ್ಕಳನ್ನು ಬೇರೆಯವರ ಮನೆಯಲ್ಲಿ ಇಡುವ ಪೈಕಿ ಅಲ್ಲ ಅಂದೆ” ಅವರ ಮಾತುಗಳನ್ನು ಕೇಳಿದ ನೀಲಿಗೆ ಯಾವುದನ್ನು, ಯಾರನ್ನು ನಂಬುವುದು ಎಂಬ ಗೊಂದಲ ಕಾಡತೊಡಗಿತು.

ಇದ್ದಕ್ಕಿದ್ದಂತೆ ಒಂದು ದಿನ ನೀಲಿ, “ಅಪ್ಪಾ, ನಾನಿನ್ನು ನಿನ್ನ ಜತೆ ಆಟಕ್ಕೆಲ್ಲ ಬರುವುದಿಲ್ಲ. ನನ್ನನ್ನು ಕರೆಯಲು ಶಾಲೆಗೆ ಬರಬೇಡ.” ಎಂದಾಗ ಅಪ್ಪನಿಗಿಂತ ಹೆಚ್ಚು ಈ ಮಾತನ್ನು ಕೇಳಿಸಿಕೊಂಡ ಅಣ್ಣ ಮತ್ತು ಅಮ್ಮನಿಗೆ ಅಚ್ಚರಿಯಾಗಿತ್ತು. ಯಾಕೆಂದು ಕಾರಣ ಕೇಳಿದಾಗ ಮುಂದಿನ ವರ್ಷ ತಾನು ಪಬ್ಲಿಕ್ ಪರೀಕ್ಷೆ ಬರೆಯುವುದರಿಂದ ಅದಕ್ಕೆ ಈ ವರ್ಷದ ಕೆಲವು ಪ್ರಶ್ನೆಗಳು ಬರುತ್ತವೆ. ಆದ್ದರಿಂದ ಇನ್ನುಮುಂದೆ ಓದುವುದರ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ಹೇಳಿದ್ದಳು. ಆದರೆ ವರ್ಷದಲ್ಲಿ ಏನಿಲ್ಲವೆಂದರೂ ಇಪ್ಪತ್ತು, ಮೂವತ್ತು ಆಟಗಳನ್ನು ನೋಡುವ ಈ ಜೋಡಿಯಲ್ಲೊಬ್ಬರು ಆಟವೇ ಬೇಡ ಎನ್ನುವುದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿತ್ತು. ಇದಾಗಿ ವಾರ ಕಳೆದ ಒಂದು ಸಂಜೆ ನೀಲಿಯ ಅಣ್ಣ ಅವಳಿಗೆ ಸೈಕಲ್ ಕಲಿಸುವ ನೆಪದಲ್ಲಿ ದೂರದ ಗದ್ದೆಗೆ ಕರೆದುಕೊಂಡು ಹೋಗಿ, “ಏನಾಯ್ತೆ ನೀಲಿ? ಯಾಕೆ ಆಟ-ಗೀಟ ಎಲ್ಲ ನಿಲ್ಲಿಸ್ದೆ? ಶಾಲೆಯಲ್ಲೇನಾದರೂ ಭಾನಗಡಿಯೋ ಹೇಗೆ?” ಎಂದು ಆತ್ಮೀಯವಾಗಿ ವಿಚಾರಿಸಿದ. ನೀಲಿ ಅವನಲ್ಲಿ ಎಲ್ಲ ಕತೆಯನ್ನೂ ಬಾಯಿಬಿಟ್ಟಿದ್ದಳು. ತರಗತಿಯಲ್ಲಿ ಎಲ್ಲರೆದುರು ಮಗಳಿಗೆ ಇವತ್ತೊಂದು ಆಟ ತೋರಿಸ್ವಾ ಅಂತ ಎಂದು ಹೇಳಿ ನೀಲಿಯನ್ನು ಅಪ್ಪ ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದುದರಿಂದ ಎಲ್ಲರಿಗೂ ನೀಲಿ ಆಟಕ್ಕೆ ಹೋಗುವಳೆಂಬ ವಿಷಯ ಗೊತ್ತಾಗುತ್ತಿತ್ತು. ಹಾಗಿ ಇವಳು ಹೋದಾಗಲೆಲ್ಲ ಇವಳದೇ ತರಗತಿಯ ಪ್ರಸಾದನೂ ಆಟ ನೋಡಲು ಬರುತ್ತಿದ್ದ. ಇವಳನ್ನು ಹುಡುಕಿಕೊಂಡು ಬಂದು ಜತೆಯಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವತಿಕೆಯನ್ನು ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಅವನಿಗೆ ಆಟದ ಮೇಲಿದ್ದ ಆಸಕ್ತಿ ಎಲ್ಲರಿಗೂ ತಿಳಿದದ್ದೇ ಆದ್ದರಿಂದ ನೀಲಿಗೆ ಅವನ ಬರುವಿಕೆ ಅಚ್ಚರಿಯನ್ನೇನೂ ಉಂಟುಮಾಡಿರಲಿಲ್ಲ.

ಅವನೂ ಇವತ್ತು ಈ ಮೇಳದಲ್ಲಿ ಯಾವ ಪಾತ್ರವನ್ನು ಯಾರು ಮಾಡುತ್ತಾರೆ ಎಂಬೆಲ್ಲ ವಿವರವನ್ನು ಹೇಳಿ ಅಪ್ಪನೊಡನೆಯೂ ಸಲಿಗೆಯನ್ನು ಬೆಳೆಸಿಕೊಂಡಿದ್ದ. ಆಟದ ನಡುವಲ್ಲಿ ವಾದ, ವಿವಾದಗಳು ರಂಗದ ಮೇಲೆ ನಡೆಯುವಾಗಲೆಲ್ಲ ಇವರ ನಡುವೆಯೂ ಅನೇಕ ಮಾತುಕತೆಗಳು ನಡೆಯುತ್ತಿದ್ದವು. ಇವೆಲ್ಲವನ್ನು ಹೇಳಿದ ನೀಲಿ, “ಸಾಯಲಿ ಮಾರಾಯ, ನಾನು ಅವನನ್ನು ಒಂದು ಒಳ್ಳೆಯ ಗೆಳೆಯ ಅಂದುಕೊಂಡು ಮಾತಾಡುತ್ತಿದ್ದೆ. ಆದರೆ ಅವನು ಶಾಲೆಯಲ್ಲಿ ಹೋಗಿ ಹೇಳುತ್ತಿದ್ದುದೇ ಬೇರೆ. ನಾವಿಬ್ಬರೂ ಪ್ರೀತಿಸುತ್ತಿದ್ದೇವೆಂದೂ, ಹದಿನೆಂಟು ಕಳೆದೊಡನೆಯೇ ಮದುವೆಯಾಗುತ್ತೇವೆಂದೂ, ಅವನು ಬರುತ್ತಾನೆಂದೇ ನಾನು ಆಟ ನೋಡಲು ಹೋಗುವೆನೆಂದೂ ಏನೆಲ್ಲ ಸುದ್ದಿ ಹಬ್ಬಿಸಿದ್ದಾನೆ. ಈ ವಿಷಯ ಮಾಸ್ಟ್ರುಗಳವರೆಗೂ ಹೋಗಿ ನಿನ್ನೆ ಲೆಕ್ಕದ ಮಾಸ್ಟ್ಸ್ರು ನನ್ನನ್ನು ಕರೆದು ಏನೆಲ್ಲ ಬೈದರು.” ಎಂದು ಹನಿಗಣ್ಣಾದಳು. ನೀಲಿಯ ಅಣ್ಣ ದೊಡ್ಡ ಶಾಲೆಯಲ್ಲಿ ಓದುವಾಗ ಇವೆಲ್ಲ ಮಾಮೂಲಿಯೆಂದು, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದೆಂದು ಅವಳಿಗೆ ಧೈರ್ಯ ಹೇಳಿದ. ಅಣ್ಣ ಎಷ್ಟೇ ಹೇಳಿದರೂ ನೀಲಿ ಮಾತ್ರ ತನ್ನ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ಅದೇ ಅಂತಲ್ಲ, ಈ ಅಪ್ಪನಿಗೆ ಎಂಥದ್ದೂ ಗೊತ್ತಾಗುವುದಿಲ್ಲ. ತಾಸು, ಎರಡು ತಾಸಿಗೊಮ್ಮೆ ಚಾ ಕುಡಿಯಲು, ಮೂತ್ರ ಮಾಡಲು, ಪರಿಚಿತ ವೇಷಧಾರಿಗಳನ್ನು ಮಾತನಾಡಿಸಲೆಂದು ಎದ್ದು ಹೋಗುತ್ತಲೇ ಇರುತ್ತಾರೆ. ನನಗೆ ಒಬ್ಬಳೇ ಕುಳಿತಿರಲು ಕಂಫರ್ಟ್‌ ಅನಿಸುವುದಿಲ್ಲ.” ಎಂದಿದ್ದರಿಂದ ಅಣ್ಣನೂ ಒತ್ತಾಯಿಸಲು ಹೋಗಲಿಲ್ಲ. ಇನ್ನು ಮುಂದೆ ಅವಳಿಗೆ ರಜೆಯಿರುವಾಗ ಪೇಟೆಗೆ ಕರೆದುಕೊಂಡು ಹೋಗಿ ಸಿನೆಮಾ ತೋರಿಸುವುದಾಗಿ ಹೇಳಿದ. ಒಮ್ಮೆಯೂ ಸಿನೆಮಾ ನೋಡಿರದ ನೀಲಿಗೆ ಸಿನೆಮಾ ಎಂದರೆ ಹೇಗಿರುತ್ತದೆ ಎಂದೆಲ್ಲ ವಿವರಿಸಿದ. ನೀಲಿಯ ಪರದೆಯ ಮೇಲೆ ನೋಡುವ ಹೊಸಚಿತ್ರಗಳಿಗಾಗಿ ನೀಲಿ ಆಸೆಗಣ್ಣುಗಳಿಂದ ಕಾಯತೊಡಗಿದಳು.