ಆಡುಕಳ ಅವರ ಕಥೆಗಳು ಬಹುಬಗೆಯಲ್ಲಿ ನಮ್ಮನ್ನು ಪ್ರಭಾವಿಸುತ್ತಾ ಹೋಗುತ್ತವೆ. ‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಅದು ಸಾಧುವೂ ಅಲ್ಲ! ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.
ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ.ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ
ನಮ್ಮ ನಡುವಿನ ಕ್ರಿಯಾಶೀಲ ಲೇಖಕಿಯರಲ್ಲಿ ಸುಧಾ ಆಡುಕಳ ಅತ್ಯಂತ ಪ್ರಮುಖರು. ನಾಟಕ, ಕವಿತೆ, ಅನುವಾದ, ವೈಚಾರಿಕ ಬರಹ ಮುಂತಾದವು ಇವರು ಕೃಷಿ ಮಾಡಿರುವ ಆಸಕ್ತಿಯ ಪ್ರಕಾರಗಳು. ಸೊಗಸಾದ ಪ್ರಬಂಧ, ಅಂಕಣ, ಸಣ್ಣಕಥೆ ಮುಂತಾದ ಪ್ರಕಾರಗಳಲ್ಲಿ ಇವರ ಗದ್ಯಶೈಲಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಓದುಗರ ಮನ ಗೆದ್ದಿದೆ. ಇವೆಲ್ಲದರ ಮುಂದುವರಿಕೆಯೆಂಬಂತೆ ಪ್ರಸ್ತುತ ಸಂಕಲನದ ಹನ್ನೆರಡು ಕಥೆಗಳು ನಮ್ಮ ಮುಂದಿವೆ. ವರ್ತಮಾನವನ್ನು ಅದರೆಲ್ಲ ಆಯಾಮಗಳಲ್ಲಿ ಕಾಣಿಸುವ ಸಶಕ್ತವಾದ ಕಥೆಗಳನ್ನು ಕೊಡುವ ಮೂಲಕ ಸಾಮಾಜಿಕ ಸ್ಥಿತ್ಯಂತರದ ಚಹರೆಗಳನ್ನು ದಾಖಲಿಸುವ ಕ್ರಮವೊಂದನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು.
‘ಅಪ್ಪತ್ತೆ’ ಕಥೆ ಈ ಸಂಕಲನದ ಗಟ್ಟಿ ಕಥೆಗಳಲ್ಲೊಂದು. ನಿರ್ಬಿಢೆ ವ್ಯಕ್ತಿತ್ವದ ಅಪ್ಪತ್ತೆಯ ಸ್ಮೃತಿ ಚಿತ್ರಗಳು ಕಥಾನಿರೂಪಕಿಯ ಮಗಳ ಮೂಲಕ ಅನಾವರಣಗೊಳ್ಳುವ ತಂತ್ರಗಾರಿಕೆ ಕನ್ನಡದ ಮಟ್ಟಿಗೆ ತೀರ ಹೊಸತು. ಕೇವಲ ಫೋಟೋ ಮೂಲಕ ಅಪ್ಪತ್ತೆಯನ್ನು ಪರಿಚಯಿಸಿಕೊಳ್ಳುವ ವಿದೇಶದಲ್ಲಿರುವ ಮಗಳಲ್ಲಿ ಅಪ್ಪತ್ತೆಯ ವ್ಯಕ್ತಿತ್ವದ ಹಲವು ಕೋನಗಳು ಬಯಲಾಗುವ ಪರಿಗೆ ಕಥಾ ನಿರೂಪಕಿಗೆ ಸೋಜಿಗ. ಇಲ್ಲಿ ಅಪ್ಪತ್ತೆಯಾಗಲೀ, ಮೇಲ್ ಮೂಲಕ ತನ್ನ ಲಿವಿಂಗ್ ಟುಗೆದರ್ ಬದುಕಿನ ನಿರ್ಧಾರ ಸೂಚಿಸುವ ಮಗಳಾಗಲೀ ಪ್ರತ್ಯಕ್ಷವಾಗಿ ಕಥೆಯ ಚೌಕಟ್ಟಿನೊಳಗೆ ಕಾಣಿಸಿಕೊಳ್ಳುವುದೇ ಇಲ್ಲ. ಈಗ ಬದುಕಿಲ್ಲದ ಅಪ್ಪತ್ತೆ ಮತ್ತು ಕಣ್ಣಿಗೆ ಕಾಣದ ನೆಲದಲ್ಲಿ ಬದುಕುತ್ತಿರುವ ಮಗಳು ನಿರೂಪಕಿಯ ಮನೋಲೋಕವನ್ನು ಗಾಢವಾಗಿ ಮತ್ತು ವಿಚಿತ್ರವಾಗಿ ಬೆಸೆದುಕೊಂಡಿರುವುದು ಗಮನಾರ್ಹ. ಆಲ್ಬಂನಲ್ಲಿ ನೋಡಿದ್ದ ಅಪ್ಪತ್ತೆ ತಾಯಿ ನೀಡುವ ವಿವರಗಳ ಮೂಲಕ ಮಗಳ ಮೆಚ್ಚುಗೆಯಲ್ಲಿ ಬೆಳೆಯುತ್ತಾಳೆ. ತಾನೆಂದೂ ನೋಡಿರದ ಅಪ್ಪತ್ತೆಯ ವ್ಯಕ್ತಿತ್ವದ ಬಗೆಗಿನ ಅಭಿಮಾನ ಮುಂದೆ ತನ್ನ ಬದುಕಿನ ಗಟ್ಟಿನೆಲೆಗೆ ನೀಡುವ ಪ್ರೇರಣೆಗಳೆಲ್ಲವೂ ಏಕಕಾಲಕ್ಕೆ ಅಪ್ಪತ್ತೆ, ತಾಯಿ ಮತ್ತು ಮಗಳೆಂಬ ಮೂರು ತಲೆಮಾರನ್ನು ಬೆಸೆಯುವ ತಂತುವಾಗುವುದು ವಂಶವಾಹಿನಿಯ ವೈಜ್ಞಾನಿಕ ಬೆರಗುಗಳ ಬಗ್ಗೆ ಬೆಳಕು ಚೆಲ್ಲುವಂತಿದೆ. ತನ್ನ ಬದುಕಿನ ಬಗ್ಗೆ ಮಗಳು ತಾಳುವ ದೃಢ ನಿಲುವು ಸಹಜವಾಗಿ ತೋರಲು ಆಕೆಯು ಅಕ್ಷರದ ಸಂಪರ್ಕದಿಂದ ಸಾಧಿಸಿಕೊಂಡ ದಿಟ್ಟತನ ಮತ್ತು ಧೀಮಂತಿಕೆಯ ಘನತೆಗಳು ಕಾರಣವೆನಿಸುವುದಾದರೂ ವಿಲಕ್ಷಣದ ಬದುಕನ್ನು ಸಾದಾಸೀದಾ ಎದುರಿಸುವ ಅನಕ್ಷರಸ್ಥಳಾದ, ಎಮ್ಮೆ ದನಗಳ ಹಿಂದೆ ಬೆಟ್ಟಗುಡ್ಡ ತಿರುಗುತ್ತ ಅವುಗಳಂತೆಯೇ ನಿಸರ್ಗದ ಮಡಿಲಿನಲ್ಲಿ ಸಹಜವಾಗಿ ಬದುಕುವ ಅಪ್ಪತ್ತೆಯ ಚಿತ್ರ ಮಾತ್ರ ಆಕೆಯನ್ನೆಂದೂ ನೋಡದೆಯೇ ಸ್ಪೂರ್ತಗೊಂಡ ಮಗಳಂತೆಯೇ ಓದುಗರೆದೆಯಲ್ಲೂ ಉಳಿದುಬಿಡುವಷ್ಟು ಸಶಕ್ತವಾಗಿ ಲೇಖಕಿ ಚಿತ್ರಿಸಿರುವುದು ನಮ್ಮ ಮೆಚ್ಚುಗೆಗೆ ಪಾತ್ರವಾಗುವ ಮೂಲಾಂಶವಾಗಿದೆ.
ಅಸ್ತಿತ್ವ ಕಥೆಯ ನಾಯಕಿ ಅಲಕಾ ಗಣಿತಶಾಸ್ತ್ರ ಬೋಧಿಸುವ ಉಪನ್ಯಾಸಕಿಯಾದರೂ ಅವಳಿಗೊಂದು ಸಮಾಜಶಾಸ್ತ್ರೀಯ ಕುತೂಹಲದ ಸಂವೇದನಾಶೀಲವಾದ ಆಸಕ್ತಿಯಿದೆ. ಈ ಆಸಕ್ತಿಯ ಪರಿಣಾಮವಾಗಿಯೇ ತನ್ನ ತರಗತಿಯಲ್ಲಿರುವ ವಿದ್ಯಾರ್ಥಿಗಳ ಮುಖಭಾವಗಳು ಕಾಣಿಸುವ ದುಗುಡ, ಕೀಟಲೆ, ಮುಗ್ಧತೆ, ಹತಾಶೆ, ನೋವುಗಳೆಲ್ಲವೂ ಹುಡುಗಾಟಿಕೆಯ ಮುಖವಾಡಗಳಲ್ಲಿ ಹುಗಿದುಹೋಗಿರುವುದನ್ನು ಆಕೆ ಚಿಕಿತ್ಸಕ ದೃಷ್ಟಿಕೋನದಲ್ಲಿ ಕಾಣಬಲ್ಲಳು. ಹಾಗೇ ಅವಳನ್ನು ಹಿಡಿದು ನಿಲ್ಲಿಸಿದ ಶಿಲ್ಪಾಳ ಬದುಕಿನ ಉಪದ್ಯಾಪಗಳನ್ನು ಸಹಾನುಭೂತಿಯಿಂದ ಪರಿಹರಿಸುವ ಅಲಕಾಳನ್ನು ಹಾಸ್ಟೆಲನ್ನು ಸ್ವಚ್ಛಗೊಳಿಸಲೆಂದು ಬರುವ ತಾಯಿಯೊಬ್ಬಳ ಚಡಪಡಿಕೆಯ ವ್ಯಕ್ತಿತ್ವ ಬಹುವಾಗಿ ಕಾಡುತ್ತದೆ. ಗಂಡನ ಕುಡಿತದ ಚಟಕ್ಕೆ ಹೆತ್ತ ಮಗುವನ್ನು ಕಳೆದುಕೊಂಡ ಆಕೆಯ ಸಂಕಟವನ್ನು ಆರ್ದ್ರ ಮನದಿಂದ ಪರಿಭಾವಿಸುವ, ಬದುಕಿರುವಾಗಲೇ ದಿನಪತ್ರಿಕೆಯಲ್ಲಿ ಫೋಟೋ ಹಾಕಿಸಿಕೊಂಡರೆ ಆಗಲಾದರೂ ಮಗ ಬಂದಾನೆಂದು ಯೋಚಿಸುವ ಆ ತಾಯಿಯ ಮನದ ಶೋಕತಪ್ತ ಮಡುವಿನಾಳದ ತೀವ್ರತೆಯನ್ನು ಆಕೆ ಅರ್ಥ ಮಾಡಿಕೊಳ್ಳುವ ಬಗೆ ಎಲ್ಲವೂ ಈ ಕಥೆಯ ವಿನ್ಯಾಸಕ್ಕೆ ಪುಷ್ಟಿಕೊಡುವಂತೆ ಜೊತೆಗೂಡುವುದರ ಜೊತೆಗೆ “ಮಗುವೇ, ನೀನು ನನ್ನ ಒಡಲಿನಲ್ಲಿ ಮೊಳಕೆಯೊಡೆದ ದಿನ, ಜಗದ ಯಾವ ಮಗುವೂ ಅನಾಥವಾಗದಿರಲಿ” ಎಂಬ ಅನಾಮಿಕ ಕವಯಿತ್ರಿಯ ಮಾತಿನೊಂದಿಗೆ ಕೊನೆಗಾಣುವುದು ಕೂಡ ಕತೆಯ ಅಂತ್ಯಕ್ಕೊಂದು ತಾರ್ಕಿಕತೆಯನ್ನು ದಯಪಾಲಿಸಿದೆ.
‘ರಾಮಾಯಣದ ಕಥಾ ಪ್ರಸಂಗದಲ್ಲಿ’ ಬರುವ ಹೆಗಡೆಯವರ ಆಣತಿಯಂತೆ ಭಟ್ಟಿ ಸಾರಾಯಿ ಇಳಿಸುವ ಕಾಯಕಯೋಗಿಯಂತೆ ಕಾಣುವ ರಾಮನ ಪಾತ್ರವೂ ಮನದಲ್ಲುಳಿಯುತ್ತದೆ. ಊರೆಲ್ಲ ರಾಮಾಯಣದ ಕಥೆ ಕೇಳಿ ಪಾವನರಾದರೆ, ತಾನು ಮಾತ್ರ ತನ್ನಪಾಡಿಗೆ ತನ್ನ ಕಾಯಕದಲ್ಲಿ ನಿರತನಾದ ಈತ ಕುವೆಂಪು ಚಿತ್ರಿಸಿರುವ ಜಲಗಾರನನ್ನು ನೆನಪಿಸುತ್ತಾನಾದರೂ ಜಲಗಾರನಂತೆ ತಾತ್ವಿಕ ಸಿದ್ಧಾಂತಮಂಡನೆಯ ಮಾಧ್ಯಮವಾಗಿ ಲೇಖಕಿಗೆ ಕಂಡಿಲ್ಲ. ತಾನು ಭಟ್ಟಿ ಇಳಿಸಲು ಉರಿಸುವ ಒಲೆಯನ್ನೇ ದಶರಥನ ಪುತ್ರಕಾಮೇಷ್ಟಿ ಯಾಗದ ಅಗ್ನಿಕುಂಡವಾಗಿ ದರ್ಶಿಸಬಲ್ಲ ರಾಮನನ್ನು ಹೆಂಡತಿ ಮಂಜಿಯ ಬಗೆಗೆ ಹೊಕ್ಕ ಶಂಕೆಯೊಂದು ತಾನುರಿಸುತ್ತಿದ್ದ ಬೆಂಕಿಯಂತೆಯೇ ದಹಿಸುತ್ತಿದೆ. ಈ ಶಂಕೆಯೆಂಬ ಬೆಂಕಿಗೆ ಹಲವರು ಕಟ್ಟಿಗೆ ಸುರಿದಿದ್ದಾರೆ. ಬಡತನದ ಸಂಸಾರಕ್ಕೆ ಅಂಟಿಕೊಂಡ ಈ ಬೆಂಕಿಯಲ್ಲಿ ರಾಮನ ಹೆಂಡತಿ ಮಂಜಿ ತನ್ನ ಪಾತಿವ್ರತ್ಯವನ್ನು ಸಾಬೀತು ಮಾಡಬೇಕಾಗಿರುವುದು ಸೀತೆ ರಾಮನ ಮತ್ತು ಲೋಕದ ಶಂಕೆಯ ಅಗ್ನಿದಿವ್ಯವನ್ನು ಹಾಯ್ದಂತೆಯೇ ತೋರುವುದು ಯಾವ ಕಾಲಕ್ಕೂ ಬದಲಾಗದ ಪುರುಷ ರಾಜಕಾರಣದ ಕ್ರೌರ್ಯದಂತೆಯೇ ಲೇಖಕಿಗೆ ಕಾಣಿಸಿರುವುದು ಮಹತ್ವದ ಸಂಗತಿಯೆನಿಸಿ, ಹೊಸ ಬಗೆಯ ಚರ್ಚೆಗೆ ಆಹ್ವಾನಿಸುವಂತಿರುವುದನ್ನು ಇಲ್ಲಿ ಗಮನಿಸಲೇ ಬೇಕು.
ಆಲ್ಬಂನಲ್ಲಿ ನೋಡಿದ್ದ ಅಪ್ಪತ್ತೆ ತಾಯಿ ನೀಡುವ ವಿವರಗಳ ಮೂಲಕ ಮಗಳ ಮೆಚ್ಚುಗೆಯಲ್ಲಿ ಬೆಳೆಯುತ್ತಾಳೆ. ತಾನೆಂದೂ ನೋಡಿರದ ಅಪ್ಪತ್ತೆಯ ವ್ಯಕ್ತಿತ್ವದ ಬಗೆಗಿನ ಅಭಿಮಾನ ಮುಂದೆ ತನ್ನ ಬದುಕಿನ ಗಟ್ಟಿನೆಲೆಗೆ ನೀಡುವ ಪ್ರೇರಣೆಗಳೆಲ್ಲವೂ ಏಕಕಾಲಕ್ಕೆ ಅಪ್ಪತ್ತೆ, ತಾಯಿ ಮತ್ತು ಮಗಳೆಂಬ ಮೂರು ತಲೆಮಾರನ್ನು ಬೆಸೆಯುವ ತಂತುವಾಗುವುದು ವಂಶವಾಹಿನಿಯ ವೈಜ್ಞಾನಿಕ ಬೆರಗುಗಳ ಬಗ್ಗೆ ಬೆಳಕು ಚೆಲ್ಲುವಂತಿದೆ.
‘ರೇಶನ್ ಸೀರೆ’ ಮತ್ತು ‘ನಾನೋಗ್ತೆ ಬಾಂಬೆಗೆ’ ಕಥೆಗಳಲ್ಲಿ ಬರುವ ದಿವ್ಯಾ ಮತ್ತು ಅಲಕಾರ ಸಮಸ್ಯೆಗಳು ಭಿನ್ನಸ್ಥರದವು. ತವರು ಮನೆಯ ಹೊಸಸೀರೆಯ ಕನಸನ್ನು ಕಮರಿಸಿಕೊಂಡು ಮರುಗುವ ತಾಯಿಯ ಕಣ್ಣೀರಿಗೆ ಓದಿ ದೊಡ್ಡವಳಾದ ಮೇಲೆ ಆಕೆಗೆ ಹೊಸ ಸೀರೆ ತರುವ ಕನಸುಗಣ್ಣಿನ ಭರವಸೆಯ ಹುಡುಗಿಯಾದ ದಿವ್ಯಾ ಹೆಣ್ಣುಮಕ್ಕಳೇ ತಾಯಿಗೆ ಆಸರೆಯಾಗುವ ಋತವನ್ನು ಒಡೆದು ಕಾಣಿಸುವ ಪಾತ್ರವಾದರೆ, ಅಲಕಾಳ ಸಮಸ್ಯೆ ಅದಕ್ಕಿಂತಲೂ ತೀವ್ರವಾದುದು. ಗಂಡನ ಹಾದರದ ನಡೆಗೆ ರೋಸಿ ಬದುಕನ್ನು ನೀಗಿಕೊಂಡ ಅಮ್ಮನ ನೆನಪುಗಳ ಛಾಯೆ ಅವಳ ವರ್ತಮಾನವನ್ನು ಕಸಿದುಕೊಂಡಿದೆ. ಅಗೋಚರವಾಗಿ ನಮ್ಮ ಬದುಕನ್ನು ಹಿಂಬಾಲಿಸುತ್ತಲೇ ನೆಮ್ಮದಿ ಕಸಿಯುವ ಕಹಿ ಸಂಗತಿಗಳಿಂದ ಅವಳ ಮನಕ್ಕಾದ ಆಘಾತದಿಂದ ತತ್ತರಿಸಿದ ಅಲಕಾ ಕೊನೆಗೆ ಮನಶಾಸ್ತ್ರಜ್ಞೆಯ ನೆರವಿನಿಂದ ಚೇತರಿಸಿಕೊಳ್ಳುವುದು ಮಾತ್ರವಲ್ಲ, ಸ್ವತಃ ತಾನೇ ಒಬ್ಬ ಕೌನ್ಸೆಲರ್ ಆಗಿ ಇಂತಹ ಸಮಸ್ಯೆಗಳಿಂದ ನರಳುವವರ ಪಾಲಿನ ಬೆಳಕಾಗುವುದು ಕತೆಗಾರ್ತಿಯ ಪಾಸಿಟಿವ್ ಆಲೋಚನೆಗಳಿಗೆ ಪುರಾವೆಯೊದಗಿಸುತ್ತವೆ. ಕಥೆಯೊಂದನ್ನು ಓದಿದ ಮೇಲೆ ನಮ್ಮ ಮನಸ್ಸಿನ ಮೇಲಾಗುವ ಈ ಬಗೆಯ ಪರಿಣಾಮ ನಮ್ಮ ಓದಿನ ಲಾಭವನ್ನು ವಿಸ್ತರಿಸಿದರೆ ಅದಕ್ಕಿಂತ ಸಂತೋಷದ ಸಂಗತಿ ಬೇರಾವುದಿದೆ?
‘ಸಂಪಿಗೆ ಮರದ ಕೆಂಪಮ್ಮ’ ಕಥೆಯ ವಸ್ತು ಗ್ರಾಮ್ಯ ಬದುಕಿನ ಬೇರೊಂದು ಬಗೆಯ ಸಂಕಟವನ್ನು ಓದುಗರೆದುರು ತೆರೆದಿಡುತ್ತದೆ. ಬಾಳಿ ಬದುಕಬೇಕಾಗಿದ್ದ ಯುವಕರಿಬ್ಬರ ದುರ್ಮರಣದಿಂದ ಊರು ತತ್ತರಿಸಿಹೋಗುವ ಸಂದರ್ಭದಿಂದ ಕಥೆ ಮೊದಲ್ಗೊಂಡರೂ ಸಂಪಿಗೆ ಮರದ ಕೆಂಪಮ್ಮನೆಂಬ ಮುದುಕಿ ಕಮಲಮ್ಮನ ಬಂಜೆತನ ನಿವಾರಿಸಿಲು ತೋರಿದ ದಾರಿಯ ಬೇರುಗಳ ಮೂಲವೇ ಆ ಯುವಕರ ಕೊಲೆಗೆ ಕಾರಣವಾದ ಸಂಕೀರ್ಣ ಸಂಗತಿಯನ್ನು ಕುತೂಹಲವನ್ನು ಕಾಯ್ದಿಟ್ಟುಕೊಂಡು ನಿರೂಪಿಸುತ್ತದೆ. ಮೇಲ್ನೋಟಕ್ಕೆ ವಿಕ್ಷಿಪ್ತ ಮನಸ್ಸಿನವಳಂತೆ ಕಾಣುವ ಕೆಂಪಮ್ಮ ಕಮಲಮ್ಮನವರಂತಹ ಅಸಹಾಯಕ ಜೀವಗಳಿಗೆ ಅವಧೂತೆಯಂತೆ ಕಾಣುವುದು ವಿಶೇಷ. ಹಳ್ಳಿಗಾಡಿನ ಅಗೋಚರ ರಾಜಕಾರಣದ ನೆಲೆಗಳನ್ನು ಅನನ್ಯವಾಗಿ ಬೆದಕುವ ಅವಕಾಶವನ್ನು ಲೇಖಕಿ ಇಲ್ಲಿ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಎನಿಸುತ್ತದೆ.
‘ಎಲವೋ ಸಂಜಯ ಕೇಳು’ ಕಥೆಯಲ್ಲಿ ರಂಗಸಂಪರ್ಕದಿಂದ ಸಾಧಿತವಾದ ಸಂಸ್ಕಾರದಿಂದ ತನ್ನ ಮನದೊಳಗೆ ಜಿಡ್ಡುಗಟ್ಟಿದ ದ್ವೇಷಾಸೂಯೆಯ ಕೊಳೆಯನ್ನು ತೊಡೆದುಕೊಳ್ಳಲಾಗದ ಗುರು ಸದಾನಂದ ಹೆಗಡೆಯವರಿಗೆ ಅವರ ಪುಟ್ಟ ಮಗಳು ಸಂಜಯನ ಪಾತ್ರದ ಮುಖೇನ ಹೇಳುವ ವಿವೇಕವು ಅವರ ಕಣ್ತೆರೆಸುವುದು ಹೆಣ್ಣಿಗಿರುವ ಶಕ್ತಿಯನ್ನೇ ಪ್ರತಿಫಲಿಸುವಂತಿದೆ. ‘ಸನ್ಮಾನ’ ಕಥೆ ಮನುಷ್ಯ ಸಂಬಂಧಗಳಲ್ಲಿ ಶಂಕೆಯ ಬಿರುಕನ್ನು ಬಲವಾಗಿ ತಂದೊಡ್ಡಿದ ಕೊರೋನಾ ಸೋಂಕು ಎಲ್ಲ ಬಗೆಯ ಸಂಬಂಧದಲ್ಲೂ ಕಾಯ್ದುಕೊಳ್ಳಬೇಕಾದ ಅಂತರವನ್ನು ವ್ಯವಸ್ಥೆಯ ತೋರುಗಾರಿಕೆ ಕರ್ತವ್ಯಪ್ರಜ್ಞೆಯ ಲೇವಡಿಯೊಂದಿಗೆ ಸೊಗಸಾಗಿ ಚಿತ್ರಿಸುವ ಪ್ರಯತ್ನ ಮಾಡಿದೆ. ಕುಟುಂಬದವರೊಂದಿಗೆ ಅಂತರ ಕಾಪಾಡಿಕೊಂಡು ಅವರಾರಿಗೂ ಸೋಂಕು ದಾಟಿಸದಿದ್ದ ಕಾರಣಕ್ಕಾಗಿ ನರಹರಿಗೆ ‘ಸನ್ಮಾನ’ ಮಾಡುವ ವ್ಯಂಗ್ಯವನ್ನು ಕಥೆಗಾರ್ತಿ ವಿಷಾದಭಾವದಿಂದ ಕಾಣಿಸುವುದು, ಸಂದರ್ಭಕ್ಕೆ ತಕ್ಕ ಮುಖವಾಡ ಧರಿಸುವ ಮನುಷ್ಯ ಸಂಬಂಧಾಂತರಗಳ ಬಗೆಗಿನ ಆತಂಕವೂ ಆಗಿರುವುದು ಆಕಸ್ಮಿಕವೇನಲ್ಲ. ತಾನೇ ಸೃಷ್ಟಿಸಿದ ಪಾತ್ರಗಳಿಗೊಂದು ನೆಲೆಮುಟ್ಟಿಸಲು ಹೆಣಗುವ ‘ಕೊನೆಯ ಕಂತು’ ಕಥೆಯ ಮಹಿಮಾ ಏಕಕಾಲಕ್ಕೆ ನಿಜ ಬದುಕು ಮತ್ತು ಬರವಣಿಗೆಯ ಮನೋಧರ್ಮದ ಮುಖಾಮುಖಿ ಸೃಷ್ಟಿಸುವ ಬಿಕ್ಕಟುಗಳಿಗೆ ಉದಾಹರಣೆಯಂತಿದ್ದಾಳೆ.
ಕಾದಂಬರಿ ರಚನೆಯ ಸವಾಲು ಅಸಾಮಾನ್ಯವೇ ಎಂಬುದನ್ನು ಹೇಳುತ್ತಲೇ ಕೆಲಸ, ಗಂಡ, ಸಂಸಾರ, ಬರಹ, ಚರ್ಚೆ, ನಾಟಕ ನೋಡುವ ಸದಭಿರುಚಿಯಲ್ಲಿ ತೊಡಗಿಕೊಂಡ ‘ಬೀಗ’ ಕಥೆಯ ನಿಹಾರಿಕಾ ಎದುರಿಸುವ ಸವಾಲುಗಳನ್ನೂ ಕಲಾತ್ಮಕವಾಗಿ ಹೇಳುವ ಪ್ರಯತ್ನದಲ್ಲಿ ಓದಿ-ಬೇಕಾದ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಹೆಣ್ಣು ಎದುರಿಸುವ ಸವಾಲುಗಳು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿರುವುದಿಲ್ಲವೆಂಬುದನ್ನು ಮನದಟ್ಟು ಮಾಡುತ್ತದೆ. ಅಚಿಂತ್ಯನ ಅಡುಗೆಕೋಣೆಯ ಕಾರುಬಾರುಗಳು ನಿಹಾರಿಕಾಳಿಗೆ ಅಡುಗೆಮನೆಯಿಂದ ಬಿಡುಗಡೆ ದೊರೆತ ಭಾವ ತುಂಬುವುದರ ಬದಲು, ತನ್ನನ್ನು ದೂರವಿಡುವ ಪ್ರಯತ್ನವಾಗಿ ತೋರುವುದು ಒಂದು ರೂಪಕವಾಗಿ ಕಾಣಿಸುತ್ತದೆ. ನೆರವು ಬೇಡಿ ಬಂದ ಅಸಹಾಯಕ ಹೆಣ್ಣಿನ ಕಷ್ಟಕ್ಕೆ ಮುಕ್ತವಾಗಿ ಸ್ಪಂದಿಸಲು ಬಿಡದೆ ಗೇಟಿಗೆ ಬೀಗ ಹಾಕುವ ಅಚಿಂತ್ಯನ ನಡೆ ಗಂಡು ಪ್ರಾಣಿಯ ಆಕ್ರಮಣಶೀಲ ಪ್ರವೃತ್ತಿ ಎಂದಿಗೂ ಬದಲಾಗದೆಂಬುದನ್ನು ಬಿಂಬಿಸಿದರೂ ಅದನ್ನು ದಾಟುವ ಪ್ರಕ್ರಿಯೆಯನ್ನು ನಿಹಾರಿಕಾ ತೋರುವುದರ ಕಡೆ ಲೇಖಕಿಯ ಗಮನಹರಿದಿರುವುದು ಮುಖ್ಯವಾದ ಸಂಗತಿ. ಆದರೆ ಬಾಳಸಂಗಾತಿಯ ಶೌಚಾಲಯ ಸಮಸ್ಯೆಯನ್ನು ಸಹಾನುಭೂತಿಯಿಂದ ಕಾಣುವ, ಅದಕ್ಕೊಂದು ಪರಿಹಾರ ಹೆಣಗಲು ಮನಸಾರೆ ಪ್ರಾಮಾಣಿಕ ಪ್ರಯತ್ನ ಮಾಡುವ ರಘುವಿನಂತಹ ವ್ಯಕ್ತಿತ್ವವನ್ನು ಲೇಖಕಿ ಓದುಗರೆದುರು ತೆರೆದಿಡುತ್ತಾರೆಂಬುದನ್ನು ನಾವು ಮರೆಯಬಾರದು. ತುಂಬಾ ಸೂಕ್ಷ್ಮವಾದ ನಮ್ಮ ಮನೋವ್ಯಾಪಾರಗಳನ್ನು ಯಾವೆಲ್ಲಾ ಸಂಗತಿಗಳು ನಿಯಂತ್ರಿಸುತ್ತಿರುತ್ತವೆಂಬುದನ್ನು ಹೇಳುವ ವಿಶಿಷ್ಟ ಕಥಾವಸ್ತುವನ್ನೊಳಗೊಂಡ ಕಥೆಯಾಗಿ ‘ಒಂದು ಶೌಚಾಲಯದ ಕಥೆ’ ನಮ್ಮ ನೆನಪಿನಲ್ಲಿ ಪಾಲು ಬೇಡುತ್ತದೆ.
ಈ ಸಂಕಲನದ ಶೀರ್ಷಿಕೆಯಾಗಿರುವ ‘ನೀಲಿ ಮತ್ತು ಸೇಬು’ ನೀಲಿಯೆಂಬ ಜೀವದ ಪುಟ್ಟ ಆಸೆಯೂ ಕೆಲವೊಮ್ಮೆ ದುಬಾರಿಯೆನಿಸಿಬಿಡುವ, ಮತ್ತು ಅದು ಕೈಗೂಡುವ ಸಂದರ್ಭದಲ್ಲಿ ಆಸೆಗಿಂತ ಹಸಿದವರ ಸಂಕಟ ದೊಡ್ಡದೆಂಬ ಮನುಷ್ಯತ್ವ ಮುನ್ನೆಲೆಗೆ ಬರುವ ವಿಸ್ಮಯವನ್ನು ಸೇಬುಹಣ್ಣನ್ನು ಇಡಿಯಾಗಿ ತಿನ್ನಬೇಕೆಂಬ ಸಣ್ಣ ಕನಸ್ಸನ್ನು ಮನದ ಕಣ್ಣಲ್ಲಿ ಹುದುಗಿಸಿ ಪರಿತಪಿಸುವ ನೀಲಿ ಎಂಬ ಹುಡುಗಿಯ ಮೂಲಕ ಹೇಳುತ್ತದೆ. ಇಡೀ ಹಣ್ಣು ತಿನ್ನುವ ಸಂದರ್ಭ ಕೈಗೆಟಕಿದಾಗ ಹಸಿದ ಅನಾಥ ಅಜ್ಜಿಯ ಸಂಕಟ ಅವಳನ್ನು ಬಾಧಿಸುತ್ತದೆ. ಎಷ್ಟೋ ದಿನದ ಕನಸನ್ನು ಪರರ ಹಸಿವಿಗಾಗಿ ಬಿಟ್ಟುಕೊಡುವ ನೀಲಿ ತುಂಬ ಇಷ್ಟವಾಗಿಬಿಡುವುದರ ಜೊತೆಗೆ ಮನುಷ್ಯರು ಇರಬೇಕಾದ್ದೇ ಹೀಗಲ್ಲವೇ ಎಂಬ ಆಲೋಚನೆಯನ್ನೂ ನಮ್ಮೊಳಗೆ ಹುಟ್ಟು ಹಾಕುತ್ತಾಳೆ.
ಹೀಗೆ ಸುಧಾ ಆಡುಕಳ ಅವರ ಕಥೆಗಳು ಬಹುಬಗೆಯಲ್ಲಿ ನಮ್ಮನ್ನು ಪ್ರಭಾವಿಸುತ್ತಾ ಹೋಗುತ್ತವೆ. ‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಅದು ಸಾಧುವೂ ಅಲ್ಲ! ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ. ತುಂಬ ಶಕ್ತಿಶಾಲಿಯಾದ ಬರವಣಿಗೆ, ವಸ್ತು ವೈವಿಧ್ಯತೆ, ತಮ್ಮದೇ ಆದ ಸ್ವೋಪಜ್ಞ ತಂತ್ರಗಾರಿಕೆ, ಕಥೆಯ ಬಿಗಿಯಾದ ಬಂಧ, ಸರಳ ನಿರೂಪಣೆಯ ಕೌಶಲ, ಅಲ್ಲಲ್ಲಿ ಮಿಂಚಿರುವ ಉತ್ತರಕನ್ನಡ ಜಿಲ್ಲೆಯ ಪ್ರಾದೇಶಿಕತೆ ಸೊಗಡು ಎಲ್ಲವೂ ಇಲ್ಲಿನ ಕಥೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿಯಬಲ್ಲ ಹೆಚ್ಚುಗಾರಿಕೆಯ ಸಂಗತಿಗಳು. ಕಥನಕಾರರಾಗಿ ಎತ್ತರಕ್ಕೆ ಬೆಳೆಯಬಲ್ಲ ಹುರುಪನ್ನು ಈ ಬರಹಗಳ ಮೂಲಕ ಸುಧಾ ಆಡುಕಳ ಅವರು ಸಮರ್ಥವಾಗಿ ತೋರಿದ್ದಾರೆ. ಕನ್ನಡದ ಕಥನಕ್ಕೆ ಇಂಥ ಬೆಟ್ಟತೊರೆಗಳು ಸದಾ ಚಲನಶೀಲ ಶಕ್ತಿಯನ್ನು ತುಂಬುತ್ತಿರಲೆಂದು ಆಶಿಸುತ್ತಾ ಈ ಕಥೆಗಳನ್ನು ಓದುಗರು ಪ್ರೀತಿಯಿಂದ ಬರಮಾಡಿಕೊಂಡು ಅನುಸಂಧಾನ ಮಾಡಲೆಂದು ಹಾರೈಸುವೆ.
(ಕೃತಿ: ನೀಲಿ ಮತ್ತು ಸೇಬು (ಕಥಾ ಸಂಕಲನ), ಲೇಖಕರು: ಸುಧಾ ಆಡುಕಳ, ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 180/-)
ಕನ್ನಡ ಪ್ರಾಧ್ಯಾಪಕರು ಮತ್ತು ಹೊಸ ತಲೆಮಾರಿನ ವಿಮರ್ಶಕರು