Advertisement
ನೂತನ ಅಳೀಮಯ್ಯರ ಮುಂದೆ ಪ್ರೆಸ್ಟೀಜು ಪ್ರಶ್ನೆ

ನೂತನ ಅಳೀಮಯ್ಯರ ಮುಂದೆ ಪ್ರೆಸ್ಟೀಜು ಪ್ರಶ್ನೆ

ಆ ಮನೆಯ ಬೆಡ್‌ರೂಮು ದೊಡ್ಡದಾದ ಬಿರುಕಿನಿಂದ ಕೂಡಿತ್ತು. ಆ ಕೋಣೆಯಲ್ಲಿ ಮಲಗಿದಾಗ, ಕಿಟಕಿಯಲ್ಲಿ, ರಾತ್ರಿಯ ರಮಣೀಯ ಚಂದ್ರನನ್ನು, ಇರುಳಿನ ಹೊಳೆವ ತಾರೆಗಳನ್ನು ನೋಡಿ ಆನಂದಿಸಬಹುದಾಗಿತ್ತು! ಮಲಗಿದಲ್ಲಿಯೇ ಆಗಸವನ್ನು ನೋಡುತ್ತಾ ಕಾವ್ಯರಚಿಸಬಹುದಾಗಿತ್ತು! ಕಾಡಿನಲ್ಲಿದ್ದ ಆ ಕ್ವಾಟ್ರರ್ಸನಲ್ಲಿ ಕೋಗಿಲೆಯ ಹಾಡೋ, ನವಿಲುಗಳ ನರ್ತನವೋ ನಮ್ಮ ಭಾಗ್ಯಕ್ಕೆ ಸಿಗಲಿಲ್ಲ. ಆದರೆ, ನಾಯಿ-ನರಿಗಳ ಕೂಗು ಮಾತ್ರ ನಮ್ಮ ಪಕ್ಕದಲ್ಲಿ ಅವು ಮಲಗಿ ನಮ್ಮನ್ನು ಸದಾ ಕಾಲ ಎಚ್ಚರದಿಂದ ಇರುವಂತೆ ನೋಡಿಕೊಳ್ಳುತ್ತಿದ್ದವು! ಅದೆಲ್ಲ ಹಾಗಿರಲಿ, ನಿಜಕ್ಕೂ ಧೃತಿಗೆಟಿಸಿದ್ದ ಅಲ್ಲಿದ್ದ ಶೌಚಾಲಯ. 
ಮಂಡಲಗಿರಿ ಪ್ರಸನ್ನ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

 

ಬೇಸಗೆ ಕಾಲ ತನ್ನೆಲ್ಲ ಅಟ್ಟಹಾಸ ಮುಗಿಸಿ ಮುಂಗಾರಿನ ಮೊದಲ ಮಳೆಗೆ ನೆಲ ಕಾಯುತ್ತಿತ್ತು. ನಿಮಗೆಲ್ಲ ಗೊತ್ತಿರಬಹುದು, ಹೈದರಾಬಾದ ಕರ್ನಾಟಕ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಸಾರಿ ಜೂನ್ ತಿಂಗಳು ಕಳೆದರೂ ಮಳೆ ಆರಂಭವಾಗಿರುವುದಿಲ್ಲ. ಜೂನ್ ತಿಂಗಳ ಆರಂಭದಲ್ಲಿ ಒಂದಷ್ಟು ಉಗುಳು ಸಿಡಿದಂತೆ ಅಲ್ಲಲ್ಲಿ ನಾಕು ಹನಿ ಬಿದ್ದು `ಮಳೆಗಾಲ ಆರಂಭವಾಗಿದೆ’ ಎಂದು ಸೂಚನೆ ಕೊಟ್ಟಂತೆ ಮಳೆರಾಯ ಅಣಕಿಸಿ ಓಡಿರುತ್ತಾನೆ. ಜೂನ್ ಕೊನೆಗೆಲ್ಲೋ ಒಂದಿಷ್ಟು ಬೇಕೋ ಬೇಡವೋ ಅಂದುಕೊಂಡು ಮಳೆ ಸುರಿಯುತ್ತದೆ. ಕಲ್ಯಾಣ ಕರ್ನಾಟಕದ ಜನ ಏಪ್ರಿಲ್, ಮೇ ಮತ್ತು ಜೂನ್ ತಿಂಗಳವರೆಗೂ ಮನೆಗಳಲ್ಲಿ ಮದುವೆ, ಮುಂಜಿಗಳನ್ನು ಅತ್ಯಂತ ಭರವಸೆಯಿಂದ ಇಟ್ಟುಕೊಳ್ಳುವುದು ಬಹುಃಷ ಇದೆ ಕಾರಣಕ್ಕೆ ಇರಬೇಕು!

ಜೂನ್ ತಿಂಗಳ ಮಧ್ಯಭಾಗವಿತ್ತು, ಅದು ನನ್ನ ಮಗಳ ಮದುವೆ ಗೊತ್ತಾದ ಸಂದರ್ಭ. ಮೈಬೆವರಿಳಿಸಿಕೊಂಡು ಕಲ್ಯಾಣ ಮಂಟಪ, ಅಡುಗೆಯವರು, ಬ್ಯಾಂಡಿನವರು, ಪುರೋಹಿತರು ಎಂದೆಲ್ಲವನ್ನು ಬುಕ್ ಮಾಡಿ ಮದುಮಗಳ ಬಟ್ಟೆ, ಮನೆಯವರಿಗೆ ಬಟ್ಟೆ ಖರೀದಿಯೂ ಆಗಿ ಮದುವೆಯೂ ಸಾಂಗೋಪಾಂಗವಾಗಿ ನೆರವೇರಿತ್ತು. ಮಗಳ ಮದುವೆ ಮುಗಿದ ಆ ಕಡೆ ಮುಂದೆ ಐದಾರು ತಿಂಗಳಿಗೆ ಅಂದರೆ ನವೆಂಬರ್‌ನಲ್ಲಿ ದೀಪಾವಳಿಯ ಸಂದರ್ಭ. ಹೊಸತಾಗಿ ಮದುವೆಯಾದ ಮಗಳು-ಅಳಿಯ ಮೊದಲ ದೀಪಾವಳಿಗೆಂದು ಬರುವವರಿದ್ದರು. ಅವರ ಮೊದಲ ಬರುವಿಕೆಯ ನಿರೀಕ್ಷೆಯಲ್ಲಿ ಮತ್ತು ಹಬ್ಬದ ತಯಾರಿಗಾಗಿ ಏನೆಲ್ಲ ಸರ್ಕಸ್ ಶುರುವಾಗಿಬಿಟ್ಟಿತ್ತು. ಮಗಳಂತು ಸರಿಯೆ, ಆದರೆ ಅಳಿಯ ಬೇರೆ ಮೊದಲ ಸಾರಿ ನಮ್ಮ ಮನೆಗೆ ಹಬ್ಬಕ್ಕೆಂದು ಬರುವವರಿದ್ದರು. ಸಹಜವಾಗೆ ಮೊದಲ ದೀಪಾವಳಿ ಎಂದರೆ ಅಳಿಯಂದಿರ ತಂದೆ-ತಾಯಿ, ಅಣ್ಣ-ಅತ್ತಿಗೆ, ಇತರೆ ಬೀಗರು, ನೆಂಟರಿಷ್ಟರು… ಹೀಗೆ ಹತ್ತಿಪ್ಪತ್ತು ಜನ ಬರುವ ಕಾತರದಲ್ಲಿದ್ದೆವು.

ನಾವಿದ್ದ ಸ್ವಂತ ಮನೆ ಇಪ್ಪತ್ತೈದು ಮೂವತ್ತು ವರ್ಷದಷ್ಟು ಹಳೆಯದು. ಮನೆಯೇನೋ ಗಟ್ಟಿಮುಟ್ಟಾಗಿತ್ತು, ತಣ್ಣಗಿನ ಗಿಡಗಳು, ವಿಶಾಲವಾದ ಜಾಗ. ಆದರೆ ಬಾಗಿಲು, ಕಿಟಕಿಗಳು ತುಂಬಾ ಹಳೆಯದಾಗಿದ್ದವು. ಎಷ್ಟೇ ನಾವು ಆಧುನಿಕತೆಗೆ ತಕ್ಕಂತೆ ದುರಸ್ತಿ ಮಾಡಿಸಿಕೊಂಡಿದ್ದರೂ, ಕೆಲವು ಹಳೆಯ ಪಳೆಯುಳಿಕೆಯಂತೆ ಹಾಗೆ ಇದ್ದವು. ಅಡುಗೆ ಮನೆ ಬಾಗಿಲು ಕೊಂಡಿ ಹಾಕಲು ಬರುತ್ತಿರಲಿಲ್ಲ. ಬೆಡ್‌ರೂಮಿನ ಕಿಟಕಿ ಒಂದು ಭಾಗ ಕಿತ್ತುಹೋಗಿತ್ತು. ಇನ್ನೂ ಮುಖ್ಯವಾದ ಬಾತ್‌ರೂಮು ಹಾಗೂ ಟಾಯ್‌ಲೆಟ್ ಬಾಗಿಲುಗಳ ಬೋಲ್ಟುಗಳು ಹಾಕಲು ಬರುತ್ತಿರಲಿಲ್ಲ. ಯಾವುದನ್ನಾದರೂ ಸಂಭಾಳಿಸಬಹುದು, ಆದರೆ ಯೋಗ್ಯವಾಗಿ ಮುಚ್ಚಿ ಬೋಲ್ಟ್ ಹಾಕಲಾಗದ ಈ ಬಾತ್‌ರೂಮು ಹಾಗೂ ಟಾಯ್‌ಲೆಟ್‌ಗಳನ್ನು ನಿಭಾಯಿಸುವುದು ಮಾತ್ರ ಹರಸಾಹಸವೆ. ಈ ಸಂಗತಿಯನ್ನು ಹೇಳುವುದು ಮತ್ತು ಹಂಚಿಕೊಳ್ಳುವುದು ಕೂಡ ತುಂಬಾ ಸಂಕೋಚದ ವಿಷಯವೆ. ನಾವು ಮನೆಯವರು ಹೇಗೋ ಎಳೆದುಕೊಂಡು, ಅರೆಬರೆ ಮುಚ್ಚಿದ ಅವಸ್ಥೆಯಲ್ಲಿ ಈ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದೆವು ಎಂದಿಟ್ಟುಕೊಳ್ಳಿ. ಆದರೆ ಹೊರಗಿನಿಂದ ಬರಲಿರುವ ಬೀಗರ, ಅದರಲ್ಲೂ ಅಳಿಯಂದಿರ ಸ್ಥಿತಿ ಏನು? ಈ ಪ್ರಶ್ನೆಗೆ ಉತ್ತರ ಮಿಂಚಿನಂತೆ ಸಂಚರಿಸಿದ್ದೆ ನಮ್ಮ ಅರ್ಧಾಂಗಿಗೆ! ನನ್ನ ಹೆಂಡತಿಯ ಕ್ಷೀಪ್ರ ಯೋಚನೆಗೆ ಸಿಕ್ಕ ಈ ವಿಷಯವನ್ನು ಒಂದು ದಿನ ಸಂಜೆ ಹೀಗೆ ಚಹಾ ಸೇವಿಸುತ್ತಾ ಕುಳಿತಾಗ ಅರುಹಿದಳು: `ನೋಡಿ, ನಾಳೆಯೆ ಒಬ್ಬ ಕಾರ್ಪೆಂಟರ್‌ಗೆ ಹೇಳಿ ಅದಿಷ್ಟು ಬಾಗಿಲು, ಕಿಟಕಿಗಳನ್ನು ರಿಪೇರಿ ಮಾಡಿಸಿ… ಆಮೇಲೆ ಬಾತ್‌ರೂಮು ಮತ್ತು ಟಾಯ್‌ಲೆಟ್‌ಗೆ ಬೋಲ್ಟ್ ಹಾಕಿಸಿ… ಬಾತ್‌ರೂಮಲ್ಲಿ ಒಂದು ಹೊಸ ಗೀಜರ್ ಕೂಡಿಸಿ… ಈ ಇಮ್ಮರ್ಶನ್ ಹೀಟರ್‌ನ ಗೋಜು ಸಾಕು… ಮನೆಯ ಎಲ್ಲ ರೂಂಗಳಿಗೂ ಒಂದಷ್ಟು ಹೊಸ ಎಲ್‌ಇಡಿ ಬಲ್ಬ್‌ಗಳನ್ನು ಹಾಕಿಸಿ…. ಬೆಡ್ ರೂಮಿನ ಫ್ಯಾನು ಸದ್ದು ಮಾಡ್ತಿದೆ, ಅದನ್ನು ಬದಲಾಯಿಸಿ…. ಅಳಿಯಂದಿರು ಮೊದಲ ಬಾರಿಗೆ ಬರುತ್ತಿದ್ದಾರೆ…. ಏನಂದುಕೊಂಡಾರು….?’ ಎಂದು ಸುಗ್ರೀವಾಜ್ಞೆ ಹೊರಡಿಸಿಯೆ ಬಿಟ್ಟಳು.

ಇವೆಲ್ಲ ಮಾತುಗಳು ಸಂಜೆಗೆ ಯೋಗಕ್ಷೇಮ ವಿಚಾರಿಸಲು ಬಂದಿದ್ದ ನನ್ನ ಭಾವಮೈದುನನ ಕಿವಿಯನ್ನೂ ತೂರಿಬಿಟ್ಟಿತು. `ಭಾವ, ಇಷ್ಟೆಲ್ಲ ಮಾಡೋಬದಲು ಅಳಿಯಂದಿರು ಬಂದಾಗ ಒಂದೆರಡು ದಿನ ಒಂದೊಳ್ಳೆ ಹೋಟಲ್ ರೂಮಿನಲ್ಲಿ ಇರೋದಕ್ಕೆ ಹೇಳಿದರಾಯ್ತು…. ಇರದಿದ್ದಲ್ಲಿ ಒಂದು ಕೆಲಸ ಮಾಡಿ, ತಿಂಗಳೊಳಗೆ ಈ ಮನೆ ಮರಾಟ ಮಾಡಿಬಿಡಿ… ಹೊಸ ಮನೆ ಹುಡುಕೋಣ…ಇರದಿದ್ದಲ್ಲಿ ದೊಡ್ಡ ಬಾಡಿಗೆ ಮನೆಯೊಂದನ್ನು ಹಿಡಿದು ದೀಪಾವಳಿ ಮುಗಿಸಿಬಿಡಿ…. ನಂತರ ಈ ಮನೆ ಮಾರಾಟದ ವಿಷಯ ನೋಡೋಣ….’ ಎಂದೆಲ್ಲ ಸರ್ ವಿಶ್ವೇಶ್ವರಯ್ಯವರ ಅಪರಾವತಾರ ತಾನು ಎಂದು ಹೊಸ ಹೊಸ ಸಲಹೆ ನೀಡಿದ. ಸಲಹೆ ಕೊಡುವುದು ಸುಲಭ….. ಕಾರ್ಪೋರೇಶನಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ದೃಷ್ಟಿಕೋನಕ್ಕೆ ತಕ್ಕಂತೆ ಸೂಚಿಸಿದ್ದ. ಅವನ ಸಲಹೆಯೂ ಸೂಕ್ತವೆ ಆಗಿತ್ತು. ಆದರೆ ಅವಸರದ ಈ ವೇಳೆಯಲ್ಲಿ ಮನೆ ಮಾರಾಟ ಮಾಡುವುದಾಗಲಿ, ಬಾಡಿಗೆ ಮನೆಗೆ ಹೋಗಿ ವಾಸಿಸಿ, ದೀಪಾವಳಿ ಮಾಡುವುದಾಗಲಿ, ನಮಗಾರಿಗೂ ಬೇಕಿರಲಿಲ್ಲ. ಅದನ್ನು ಸಾರಾಸಗಟವಾಗಿ ನಿರಾಕರಿಸಿ ನಮ್ಮದೆ ರೀತಿಯಲ್ಲಿ ಯೋಚನೆಗೆ ಶುರುವಿಟ್ಟುಕೊಂಡೆವು.

ಕಾರ್ಪೋರೇಶನಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ದೃಷ್ಟಿಕೋನಕ್ಕೆ ತಕ್ಕಂತೆ ಸೂಚಿಸಿದ್ದ. ಅವನ ಸಲಹೆಯೂ ಸೂಕ್ತವೆ ಆಗಿತ್ತು. ಆದರೆ ಅವಸರದ ಈ ವೇಳೆಯಲ್ಲಿ ಮನೆ ಮಾರಾಟ ಮಾಡುವುದಾಗಲಿ, ಬಾಡಿಗೆ ಮನೆಗೆ ಹೋಗಿ ವಾಸಿಸಿ, ದೀಪಾವಳಿ ಮಾಡುವುದಾಗಲಿ, ನಮಗಾರಿಗೂ ಬೇಕಿರಲಿಲ್ಲ.

ಈ ಬಾತ್‌ರೂಮು ಹಾಗೂ ಟಾಯ್ಲೆಟ್‌ನ ಜಿಜ್ಞಾಸೆ ನಡೆದಾಗಲೆ ನನಗೆ ನನ್ನ ಮೂರು ದಶಕದ ಹಿಂದೆ ಹೊಸತಾಗಿ ಮದುವೆಯಾಗಿ ಅತ್ತೆಯ ಮನೆಗೆ ಹೋದಾಗಿನ ಪ್ರಕರಣ ನೆನಪಾಯಿತು. ನಮ್ಮ ಮದುವೆಯೇನೋ ಯಾವುದೋ ಛತ್ರದಲ್ಲಿ ನಡೆದಿತ್ತು. ಮದುವೆಯಾಗಿ ನಾಕೋ ಐದನೆ ದಿನಕ್ಕೆ ನಾವಿಬ್ಬರು ನವದಂಪತಿಗಳು ಸತ್ಯನಾರಾಯಣ ಪೂಜೆಗೆ ಅತ್ತೆ ಮನೆಗೆ, ಅಂದರೆ ನನ್ನಾಕೆಯ ತವರು ಮನೆಗೆ ಹೋಗಬೇಕಾದ ಪ್ರಸಂಗ ಬಂತು. ಸರಿ, ಅತ್ತೆಯ ಮನೆಗೆ ಹೊಸ ಅಳಿಯನ ಪ್ರವೇಶವೇನೋ ಆಯಿತು. ಆದರೆ ನನಗೆ ಅತ್ತೆ ಮನೆಯಲ್ಲೆ ಶೌಚದ `ಫೋಬಿಯಾ’ ಶುರುವಾಗಿ ಬಿಟ್ಟಿತ್ತು.

ನಮ್ಮತ್ತೆ ಹಾಗೂ ಅವರ ದೊಡ್ಡ ಮಗ-ಸೊಸೆ ಸರಕಾರಿ ಕ್ವಾಟ್ರರ್ಸ್‌ವೊಂದರಲ್ಲಿ ಆಗ ವಾಸವಾಗಿದ್ದರು. ಆ ಮನೆಯನ್ನು ಒಂದಷ್ಟು ಕಾವ್ಯಮಯವಾಗಿ ವರ್ಣಿಸದೆ ಹೋದರೆ, ಕವಿಯಾಗಿಯೂ ನನ್ನ ಜನ್ಮ ಸಾರ್ಥಕವಲ್ಲ…. ಆ ಮನೆಯ ಬೆಡ್‌ರೂಮು ದೊಡ್ಡದಾದ ಬಿರುಕಿನಿಂದ ಕೂಡಿತ್ತು. ಆ ಕೋಣೆಯಿಂದಲೆ ಮಲಗಿದಾಗ ರಾತ್ರಿಯ ರಮಣೀಯ ಚಂದ್ರನನ್ನು, ಇರುಳಿನ ಹೊಳೆವ ತಾರೆಗಳನ್ನು ನೋಡಿ ಆನಂದಿಸಬಹುದಾಗಿತ್ತು! ಮಲಗಿದಲ್ಲಿಯೆ ಆಗಸವನ್ನು ನೋಡುತ್ತಾ ಕಾವ್ಯರಚಿಸಬಹುದಾಗಿತ್ತು! ಕಾಡಿನಲ್ಲಿದ್ದ ಆ ಕ್ವಾಟ್ರರ್ಸನಲ್ಲಿ ಕೋಗಿಲೆಯ ಹಾಡೋ, ನವಿಲುಗಳ ನರ್ತನವೋ ನಮ್ಮ ಭಾಗ್ಯಕ್ಕೆ ಸಿಗಲಿಲ್ಲ. ಆದರೆ, ನಾಯಿ-ನರಿಗಳ ಕೂಗು ಮಾತ್ರ ನಮ್ಮ ಪಕ್ಕದಲ್ಲಿ ಅವು ಮಲಗಿ ನಮ್ಮನ್ನು ಸದಾ ಕಾಲ ಎಚ್ಚರದಿಂದ ಇರುವಂತೆ ನೋಡಿಕೊಳ್ಳುತ್ತಿದ್ದವು!

ಹಳೆಯ ಕಾಲದ ಆ ಕಬ್ಬಿಣದ ಮಂಚವೆ ನಮಗೆ ಹಂಸತೂಲಿಕಾ ತಲ್ಪದಂತೆ  ಕಂಡು ಬಂದಿತ್ತು…. ಆದರೆ ಎಷ್ಟೋ ದಶಕಗಳ ಕಥೆ ಹೇಳುತ್ತಿದ್ದ ಆ ಕಬ್ಬಿಣದ ಮಂಚ ಮಲಗಿ ಆಕಡೆ ಈಕಡೆ ಹೊರಳಾಡಿದರೂ ಸಾಕು ಪುಟ್ಟ ನಾಯಿ ಮರಿ ಕುಂಯ್ಗುಡುವಂತೆ ಸದ್ದು ಮಾಡುತ್ತಿತ್ತು.

ಇನ್ನೂ ಹಾಲಿನ ಫ್ಯಾನು, ಅಡುಗೆ ಮನೆಯ ದೀಪಗಳು ತಮ್ಮ ದುರಂತ ಕಥೆಯನ್ನು ಬಿಂಬಿಸುತ್ತಿದ್ದವು. ಈ ಫ್ಯಾನು, ದೀಪ ಇವ್ಯಾವವು ನನ್ನ ನಿದ್ದೆಗೆಡಿಸಲಿಲ್ಲ…., ಅವರ ಮನೆಯಲ್ಲಿನ ಶೌಚಾಲಯ ಮಾತ್ರ ನನ್ನನ್ನು ತೀರ ದಯನೀಯ ಸ್ಥಿತಿಗೆ ತೆಗೆದುಕೊಂಡು ಹೋಗಿತ್ತು. ಬಾತ್‌ರೂಮು ಹಾಗೂ ಟಾಯ್ಲೆಟ್‌ಗಳೇನೋ ದೊಡ್ಡವಾಗಿದ್ದವು. ನನಗೆ ಬಾತ್‌ರೂಮಿನ ಬಗ್ಗೆ ಚಿಂತೆ ಇರಲಿಲ್ಲ… ಅಡ್ಡಪಂಚೆ ಹಚ್ಚಿಕೊಂಡು ಸ್ನಾನ ಮಾಡಿ ಮುಗಿಸಬಹುದಾಗಿತ್ತು. ಆದರೆ ಟಾಯ್‌ಲೆಟ್‌ಗೆ ಮಾತ್ರ ಬೋಲ್ಟ್ ಇರಲಿಲ್ಲ…. ಒಂದು ಚಿಕ್ಕನೆ ತಂತಿ ಸುತ್ತಿ ಅದನ್ನು ಮನೆಮಂದಿಯೆಲ್ಲ, ಬಾಗಿಲಿಗೆ ಅಡ್ಡ ಒಂದು ನೀರು ತುಂಬಿದ ಬಕೇಟ್ ಇಟ್ಟು ತಮ್ಮ ಕೆಲಸ ಮುಗಿಸುತ್ತಿದ್ದರು.

ಆಗಿನ್ನು ಕಮಾಡಿನ ಕಾಲವಲ್ಲ. ಆ ದೊಡ್ಡ ಟಾಯ್‌ಲೆಟ್‌ನಲ್ಲಿ ಭಾರತೀಯ ಶೈಲಿಯ ನೆಲಕ್ಕೆ ಕಾಲು ಹಚ್ಚಿ ಕೂಡುವ ವ್ಯವಸ್ಥೆ ಇತ್ತು. ಬಾಗಿಲಿನಿಂದ ಕೊಂಚ ದೂರವೇ ಎನ್ನಬಹುದಾದ ದೂರದಲ್ಲಿದ್ದ ಟಾಯ್‌ಲೆಟ್‌ನಲ್ಲಿ ನಾನು ಧ್ಯಾನಸ್ಥ ಸ್ಥಿತಿಯಲ್ಲಿ ಕೂತಾಗ ಯಾರಾದರೂ ಬಾಗಿಲಲ್ಲಿ ತಳ್ಳಿಕೊಂಡು ಬಂದರೆ…. ಅಥವಾ ನನ್ನ ಭಾವಮೈದುನರಿಗೆ ಶೌಚಕ್ಕೆ ಹೋದಾಗಲೂ ಪತ್ರಿಕೆಯೋ, ನಿಯತಕಾಲಿಕವೋ ಓದುವ ಹುಚ್ಚು… ನಾನೆನೋ ಅಂತಹ ಓದುವ ಆಸೆಗೆ ಬಿದ್ದು ಪತ್ರಿಕೆ ಹಿಡಿದು ಕೂತಾಗ ಯಾರಾದರೂ ತಳ್ಳಿದರೆ ಆಗಬಹುದಾದ ವಿರಾಟರೂಪಕ್ಕೆ ಹೆದರಿ ಎರಡು ದಿನ ನನ್ನ ಶೌಚ ಇಣಿಕಿಯೂ ನೋಡದೆ ಸಂಕಟ ಪಟ್ಟಿದ್ದು ಈಗಲೂ ಮರೆಯಲು ಸಾಧ್ಯವಾಗುತ್ತಿಲ್ಲ.ಇರಲಿ. ನನಗೆ ಆಗ ಕಾಡಿದ್ದು ಒಂದೇ ಪ್ರಶ್ನೆ. ಇಂತಹ ಭಯಂಕರ ವಾತಾವರಣದಲ್ಲೂ `ನನ್ನ ಅತ್ತೆ ಮನೆಯವರು ಅದೆಷ್ಟು ಸಂತೋಷದಿಂದ ಶೌಚ ಮುಗಿಸಿ ನಗು ನಗುತ್ತಾ ದಿನಕಳೆಯುತ್ತಿದ್ದಾರಲ್ಲ?’ ಎಂಬ ಸಂಕಟ ನನಗೆ ಅರ್ಥವಾಗಿರಲಿಲ್ಲ. ಯಾಕೆಂದರೆ ಶೌಚವೆನ್ನುವ ಅಸಮಾಧಾನದ ಸಂಗತಿ ಯಾವ ಸಮಯ ಸಂದರ್ಭದಲ್ಲಿ ಹೇಗೆ ಸ್ಫೋಟಿಸುವುದೋ ಅರಿಯುವುದು ಕಷ್ಟ ಅಲ್ಲವೆ?

*****

ಇದು ನೆನಪಾದದ್ದರ ಕಾರಣವೆಂದರೆ, ನಮ್ಮ ಹೊಸ ಅಳಿಯಂದಿರಿಗಾಗಿ ಈಗ ಎಂಟು ಹತ್ತು ಸಾವಿರ ಖರ್ಚು ಮಾಡಿ ಗೀಸರ್ ಹಾಕಿಸುವುದರಿಂದ ಹಿಡಿದು ಮನೆಯ ಬಾಗಿಲು ಕಿಟಕಿಗಳನ್ನು ನವೀಕರಿಸುವುದು. ಏನಿಲ್ಲದಿದ್ದರೂ ಕೊನೆ ಪಕ್ಷ ಬಾತ್‌ರೂಮು ಹಾಗೂ ಟಾಯ್‌ಲೆಟ್‌ಗಳನ್ನು ಸುಭದ್ರಗೊಳಿಸಿ ಅಳಿಯಂದಿರ ಆಗಮನಕ್ಕೆ ಅಣಿಮಾಡಲು ಒಂದಷ್ಟು ದುಡ್ಡು ಹಾಕಬೇಕಲ್ಲ ಎಂದು ನೆನೆದು ನನ್ನ ಅಳಿಯತನದ ‘ದುರಂತ’ಮಯ ದಿನಗಳು ನೆನಪಾಗಿದ್ದವು ಅಷ್ಟೇ. ವಿಧಾನಸಭೆಯಲ್ಲಿ ನಡೆದ ವಾದ ವಿವಾದದಂತೆ ನಾಕಾರು ದಿನ ನನ್ನ ಮತ್ತು ಇವಳ ಮಧ್ಯೆ ನಡೆದ ವಾದ-ವಿವಾದ, ಕಾವೇರಿ ನದಿಯ ಬಿಸಿಯಂತೆ ತಾರಕಕ್ಕೇರಿದರೂ ಅದೇನು ಬಗೆಹರೆಯುವಂತೆ ಕಂಡುಬರಲಿಲ್ಲ. ಕಾವೇರಿ ವಿವಾದ, ಬೆಳಗಾವಿ ವಿವಾದ, ಹೈದರಾಬಾದ ಕರ್ನಾಟಕ ಪ್ರತ್ಯೇಕ ರಾಜ್ಯದ ವಿವಾದ, ಹೀಗೆ ಅನೇಕ ವಿವಾದಗಳ ಬಗ್ಗೆ ಅರ್ಥೈಸಿಕೊಂಡಿದ್ದ ನಾನು `ಸರಿ ವಾದಕ್ಕೆ ಕೊನೆ ಇಲ್ಲ…’ ಎಂಬ ಸತ್ಯ ಅರಿತು ಒಂದಷ್ಟು ದುಡ್ಡು ಖರ್ಚು ಮಾಡಿ ಬಾಗಿಲು, ಕಿಟಕಿ, ಕೊಂಡಿಗಳನ್ನು ರಿಪೇರಿಗೊಳಿಸುವುದು ಎಂದು ನಿರ್ಧರಿಸಿ, ಜೊತೆಗೆ ಹೊಸದೊಂದು ಗೀಜರ್ ಹಾಕುವ ಯೋಚನೆಗೆ ಅಂತಿಮ ರೂಪು ಕೊಟ್ಟೆವು.

ನೋಡನೋಡುತ್ತಲೆ ದೀಪಾವಳಿಯೂ ಬಂತು, ಮಗಳು-ಅಳಿಯ, ಬೀಗರು, ನೆಂಟರಿಷ್ಟರು, ದೀಪಾವಳಿ ಹಬ್ಬಕ್ಕಾಗಿ ಬಂದರು. ಬೀಗರಿಗೆ ನಮ್ಮ ಮನೆಯಲ್ಲಿ ಅದೆಷ್ಟು ದಿನ ದೀಪಾವಳಿ ಮಾಡುವ ಆಸೆಯಿತ್ತೋ ಗೊತ್ತಿಲ್ಲ. ಆದರೆ ಬರುತ್ತಲೆ ನಮ್ಮ ಅಳಿಯಂದಿರು `ನಾವು ದೀಪಾವಳಿಗಾಗಿ ಇರುವುದು ಒಂದೆ ದಿನ …..!’ ಎಂದು  ಆಟಂ ಬಾಂಬ್ ಸಿಡಿಸಿಬಿಟ್ಟರು. ಬಾಕಿ ಎರಡು ದಿನ ತಮ್ಮ ಮನೆಯಲ್ಲೆ ದೀಪಾವಳಿ ಆಚರಿಸುವ ಬಗ್ಗೆ ಮಾಹಿತಿ ನೀಡಿದ ಅಳಿಯಂದಿರು ನಮ್ಮ ಮನೆಯಲ್ಲಿ ಕಳೆದದ್ದು ಒಂದು ರಾತ್ರಿ ಮಾತ್ರ ! ಅಂತೂ ಒಂದು ದಿನಕ್ಕೆ ಹತ್ತು ಸಾವಿರ ಖರ್ಚು ಮಾಡಿಸಿ ಟಾಯ್‌ಲೆಟ್‌ ಮತ್ತು ಬಾತ್‌ರೂಮನ್ನು ಜೀರ್ಣೋದ್ಧಾರ ಮಾಡಿಸಿದ್ದ ನಮ್ಮ ಮನೆಗೆ ಈಗ ಫೈವ್ ಸ್ಟಾರ್ ಹೋಟಲಿನ ಕಳೆ ಬಂದಿತ್ತು. ಆದರೂ  ದೀಪಾವಳಿಗೆಂದು ಬಂದಿದ್ದ ನಮ್ಮ ಅಳಿಯಂದಿರ ಕಡೆಯವರೊಬ್ಬರೂ ನಂತರ ಹೋಗುವಾಗ ಮಗಳ ಎದುರು `ನಿಮ್ಮ ಮನೆಗಿಂತ ನಮ್ಮ ಮನೆಯೆ ಚೆನ್ನಾಗಿದೆ….’ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿ ಹೋಗಿದ್ದು ಮಾತ್ರ ದೀಪಾವಳಿಯಲ್ಲೂ ನಮಗೆ ಬೇವು-ಬೆಲ್ಲ ತಿಂದ ಅನುಭವವಾಗಿತ್ತು.

About The Author

ಮಂಡಲಗಿರಿ ಪ್ರಸನ್ನ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ