ಕವಿತೆ ಹುಟ್ಟಲಿಕ್ಕೆ ಕಾರಣ ಬೇಕಿಲ್ಲ

ಒಸಿ ತಾಳು
ಆ ಚೌಕಟ್ಟಿಲ್ಲದ ಚೌಕದಲಿ
ಎಷ್ಟೊಂದು ಅನಾಥ ಕವಿತೆಗಳಿವೆ
ಕಂಡಿಯಾ?

ಇಲ್ಲೊಂದು ಬೀದಿ ಇದೆ
ಅದರ ಬದಿ
ಸಾಲು ಸಾಲು ಗುಡಿಸಲ ಹಟ್ಟಿ
ಇಲ್ಲಿ ರೋಧಿಸುವ ರೊಟ್ಟಿಯ
ಆರ್ತತೆ ಕವಿತೆಯಲ್ಲವೇ

ಆ ದೇವಸ್ಥಾನ
ಈ ಮಸೀದಿಯ ಹೊರಗೆ
ಅಸ್ಪೃಶ್ಯತೆಯ ಸೋಂಕಲಿ
ಕಪ್ಪಗೆ ಕರಗಿ ಹೋಗುತ್ತಿರುವ ಕೈಗಳ
ಬೆವರ ಕಮಟು ಕವಿತೆಯಲ್ಲವೇ

ಆ ರಾಜಬೀದಿಯ ಇಕ್ಕೆಲ
ಹೂ ಮಾರುವ ಹೊನ್ನಮ್ಮ
ಕಲ್ಲಂಗಡಿ ಕಾಸೀಮಣ್ಣ
ಹರಿದ ಚಪ್ಪಲಿ ಹೊಲೆವ ಚೂರಿ
ಪಂಕ್ಚರ್ ಹಾಕುವ ಪಾಚಾ ಸಾಬಿ
ಸೊಪ್ಪು ಮಾರುವ ಸಾಂತವ್ವ
ಜಿಲೇಬಿ ಮಾರುವ ಜೀತೇಂದರ್
ಟೀ ಮಾರುವ ಖಲಂದರ್
ಇವರ ಈ ಫುಟಪಾತಿನ ಕೆಮ್ಮು-ದಮ್ಮುಗಳ
ದಗ್ಧತೆ ಕವಿತೆಯಲ್ಲವೇ

ಕವಿತೆ ಹುಟ್ಟಲಿಕ್ಕೆ ಕಾರಣವೂ… ? ಬೇಕಿಲ್ಲ
ಕವಿತೆ ಎಂದೂ ಕಾಗದದ ಮೇಲೆ ಮೂಡುವುದಿಲ್ಲ

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.