ಮಲೆನಾಡಿಗೆ ಬಂದು ಬದುಕ ಕಟ್ಟಿಕೊಂಡ ಗಟ್ಟಿಗಿತ್ತಿ. ಇದೇ ಕಾರಣಕ್ಕೋ ಏನೋ ಕೆಲವೊಂದು ಭಾವ ಹೇಳದೆಯೂ ಅರ್ಥ ಮಾಡಿಕೊಂಡು ನಾನಿದ್ದೇನೆ ಎಂಬ ಗಟ್ಟಿ ಭಾವವನ್ನು ಬಿಗಿಯುತ್ತಿದ್ದಳು. ವಯಸ್ಸಿದ್ದಾಗ ಮನೆಗೆ ಬಂದವರನ್ನೆಲ್ಲಾ ಕೈಲಾದಷ್ಟು ಸತ್ಕರಿಸಿ, ಕೈಲಾಗದ ಇಳಿ ಮುಪ್ಪಲ್ಲಿಯೂ ಕಂಡವರನ್ನೆಲ್ಲ ಕರೆದು ಮಾತನಾಡಿಸಿ ಊರವರಿಗೆಲ್ಲರಿಗೂ ಹತ್ತಿರವಾಗಿದ್ದಳು. ಅಜ್ಜಿಯ ಈ ಅಂತಃಕರಣದ ಅಂತಃಶಕ್ತಿ ಅರಿವಾದದ್ದೇ ಅವಳು ಹೋದಾಗ. ಹಾಸಿಗೆ ಹಿಡಿದಾಗ ಅವಳನ್ನು ನೋಡಲು ಬಂದ ಜನ, ಸಂಸ್ಕಾರ ಮಾಡಲು ಕಟ್ಟಿಗೆ ಒಡೆಯಲು ಜನ, ಚಿತೆಯನ್ನು ಮಾಡಲು ಮತ್ತೊಂದಿಷ್ಟು ಜನ, ಅವಳನ್ನು ಕೊನೆಯದಾಗಿ ನೋಡಲು ಜನಸಾಗರವೇ ಬಂದಿತ್ತು.
ಹಿರಿಯರೊಟ್ಟಿಗಿನ ಮಾತುಗಳಲ್ಲಿ ಸಿಕ್ಕುವ ಜೀವನ ದರ್ಶನದ ಕುರಿತು ಬರೆದಿದ್ದಾರೆ ಶುಭಶ್ರೀ ಭಟ್ಟ

ನನಗೆ ಮೊದಲಿನಿಂದಲೂ ಬೊಚ್ಚು ಬಾಯ್ತುಂಬಾ ನಗುವನ್ನೇ ಹೊದ್ದು, ನೆರಿಗೆಬಿದ್ದ ನವಿಲುಗರಿಯಂತಾ ಕೈಯಲ್ಲಿ ತಲೆಸವರಿ ಅಪ್ಪಟ ಅಂತಃಕರಣ ತೋರುವ ಹಿರಿ ಜೀವಗಳೆಂದರೆ ಒಂದು ಹಿಡಿ ಪ್ರೀತಿ ಜಾಸ್ತಿಯೇ. ಸಂಜೆ ವಾಕಿಂಗ್ ಹೋದಾಗಲೋ, ತರಕಾರಿ ತರಲು ಹೋದಾಗಲೋ, ದೇವಸ್ಥಾನದಲ್ಲಿ ಪ್ರದಕ್ಷಿಣೆ ಹೋಗುವಾಗಲೋ, ಎಲ್ಲೋ ಪ್ರವಾಸ ಹೋದಾಗಲೋ ಇಂಥವರು ಸಿಕ್ಕುಬಿಟ್ಟರೆ ಮನವರಳುತ್ತದೆ. ಈ ಹಿರಿ ಜೀವಗಳು ಕಟ್ಟಿಕೊಡುವ ಬದುಕಿನೆಡೆಗಿನ ಪ್ರೀತಿ ಅನನ್ಯ. ಅಂತಹುದರಲ್ಲಿ ಮನಸಿಗೆ ತೀರಾ ಹತ್ತಿರವಾದ ಕೆಲವನ್ನು ಅಕ್ಷರದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.

ನೆನಪು-೧:
ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾವೇ ಅಡುಗೆ ಮಾಡಿಕೊಳ್ಳುವಂತಹ ಪಿಜಿಯಲ್ಲಿದ್ದೆ. ಅಲ್ಲಿ ಬೆಳ್ಳಂಬೆಳಗ್ಗೆ ‘ಸೊಪ್ಪ್ ಅಮಾ ಸೊಪ್ಪೂ’ ಅಂತ ಕೂಗುತ್ತಾ ವಯಸ್ಸಾದ ತಮಿಳು ಅಜ್ಜಿಯೊಬ್ಬರು ಬರುತ್ತಿದ್ದರು. ‘ಯಾನಾ ಬೇಕೂ’ ಎಂದು ಶುರುವಾದ ನಮ್ಮ ಸಂಭಾಷಣೆ ಅವರ ಸಂಸಾರ ತಾಪತ್ರಯ ಕೇಳುವಷ್ಟರ ಮಟ್ಟಿಗೆ ಬಂದು ನಿಂತಿತ್ತು. ಮದುವೆಯೇ ಆಗದೆ ಎಲ್ಲರನ್ನೂ ಸಾಕಿ ಕೊನೆಗೆ ಮುಪ್ಪಲ್ಲೂ ಕುಳಿತು ತಿನ್ನಬಾರದೆಂಬ ತತ್ವದಲ್ಲಿ ನಂಬಿಕೆಯಿಟ್ಟವಳು. ಕೊಟ್ಟ ಐದು ರೂಪಾಯಿಗೆ ಚಿಲ್ಲರೆಯಿಲ್ಲದಿದ್ದರೆ ನಾಳೆ ಕೊಡಿ ಅಂದರೂ ಕೇಳದೆ ಚಿಲ್ಲರೆ ಕೊಟ್ಟೇ ಮುಂದೆ ತೆರಳುವ ಸ್ವಾಭಿಮಾನಿ ಹಿರಿ ಜೀವವದು. ತಮಿಳು ಮಿಶ್ರಿತ ಕನ್ನಡದಲ್ಲಿ ಅವಳು ಹೇಳುವುದು ನನಗೆ ಪೂರ್ತಿ ಅರ್ಥವಾಗದಿದ್ದರೂ ಅದರ ಭಾವ ತಟ್ಟುತ್ತಿತ್ತು. ಹೇಳಿ ಹಗುರಾಗಲು ಕಿವಿಯೊಂದು ಬೇಕಿತ್ತು ಅದು ನಾನಾಗಿದ್ದೆ. ಒಂದು ದಿನ ಅವಳು ಬರದಿದ್ದರೂ ‘ತಮಿಳಮ್ಮ’ ಯಾಕೆ ಬರಲಿಲ್ಲ ಎಂಬ ದುಗುಡ ನನಗೆ. ನನ್ನ ಮದುವೆ ನಿಕ್ಕಿಯಾಗಿ ಪಿಜಿ ಬಿಡುವುದೆಂದಾಗ ಭಾವುಕಳಾದರೂ ನನ್ನ ತಲೆಸವರಿ ನೆಟಿಗೆ ಮುರಿದು ದೃಷ್ಟಿ ತೆಗೆದು ‘ಸೆಂದಾಕಿರ್ ತಾಯಿ’ ಎಂದು ಬಿರಬಿರನೆ ಹೊರಟವಳು ಮರುದಿನ ಬಂದಿದ್ದು ಒಂದು ಹಿಡಿ ಮಲ್ಲಿಗೆಮೊಳ, ಒಂದಿಷ್ಟು ಹಸಿರು ಬಳೆಯೊಂದಿಗೆ. ‘ನಿನ್ ತಮಿಳಮ್ಮನ್ ಮರಿಬೇಡಾ’ ಎಂದು ನನ್ನ ಕೈಯನ್ನು ತೆಗೆದುಕೊಂಡು ಬಳೆ ತೊಡಿಸಿದಳು, ಹೂಮುಡಿಸಿ ಕಣ್ತುಂಬಿಕೊಂಡಳು. ಒಂದು ದಿನ ರಾತ್ರಿ ಮಲಗಿದವಳು ಬೆಳಿಗ್ಗೆ ಏಳಲೇ ಇಲ್ಲವಂತೆ. ಬದುಕಿನುದ್ದಕ್ಕೂ ಇಂತಹುದೇ ಅಕ್ಕರೆಯನ್ನು ಬೊಗಸೆತುಂಬ ಉಣಿಬಡಿಸಿದ ಜೀವ ನನಗೆ ಕಲಿಸಿದ್ದು ಸ್ವಾಭಿಮಾನಿಯಾಗಿ ಬದುಕಲು.

ನೆನಪು-೨:
ಕೆಲಸದ ಜಂಜಾಟದಲ್ಲಿ ಕಳೆದು ಹೋದಂತಾದಾಗ ಸುಮ್ಮನೆ ಪೇಟೆಯನ್ನು ಧ್ಯಾನಿಸುವಂತೆ ಸುತ್ತಿ ಬಂದರೆ ಅರ್ಧದಷ್ಟು ಹಳವಂಡಗಳು ಎದೆಯಿಂದಿಳಿದಿರುತ್ತದೆ. ಒಮ್ಮೆ ಹೀಗೇ ಕುಮಟೆಗೆ ಹೋದಾಗ ಮೂರ್ಕಟ್ಟೆಯ ತುದಿಯಲ್ಲಿ ಹೆರವಟ್ಟೆಯ ಹಾಲಕ್ಕಿ ಗೌಡ್ತಿಯೊಬ್ಬಳು ಅಮಟೆಕಾಯಿ, ಬಸಳೆಸೊಪ್ಪು, ಕೆಂಪುಹರಿವೆ ಸೊಪ್ಪು ಇಟ್ಟುಕೊಂಡು ಉರಿಬಿಸಲಲ್ಲಿ ಕವಳ ಹಾಕುತ್ತಾ ಕುಳಿತಿದ್ದಳು. ಹಸಿರು ದೇಟಿ (ಹಾಲಕ್ಕಿ ಗೌಡ್ತಿಯರುಡುವ ಸೀರೆಯ ವಿಶಿಷ್ಟ ಶೈಲಿ), ಕುತ್ತಿಗೆ ತುಂಬ ಹಾಕಿದ ಮಣಿಸರ, ಹಣೆತುಂಬಾ ಎಣ್ಣೆಯಲ್ಲಿ ಕಲಸಿ ಹಚ್ಚಿದ ಕುಂಕುಮ, ಕವಳ ಮೆತ್ತಿದ್ದ ಕೆಂದುಟಿಗಳು, ತಲೆತುಂಬಾ ಕೂದಲೂ ಕಾಣದಂತೆ ಮುಡಿದ ಅಬ್ಬಲ್ಲಿಗೆ ಹೂಮಾಲೆಯ ಅಲಂಕಾರದಲ್ಲಿ ಸಾಕ್ಷಾತ್ ದುರ್ಗಿಯೇ ಕಂಡಂತಾಗಿ ರಸ್ತೆ ದಾಟಿದೆ. ಸೊಪ್ಪಿನ ರಾಶಿಯೇ ಇದೆ ತರಬೇಡ ಎಂಬ ಅಮ್ಮನ ಎಚ್ಚರಿಕೆಯನ್ನು ಮರೆತಂತೆ ನಟಿಸಿ ಅವಳ ಬಳಿ ಕೂತೆ. ‘ತಂಗಿ ಎಂತಾ ಕೊಡ್ಲಿ? ನಾಮೇ ಬೆಳುದು ಕೆಂಪರ್ಗಿ, ಬಸ್ಲೆ ತಗಳೆ ಹತ್ರೂಪಾಯ್ಗ್ ಐದ್ ಕಟ್, ನಿಂಗ್ ಯೋಲ್ ಕಟ್ ಕೊಡ್ವ’ ಎಂದು ಕವಳವನ್ನು ತುಪುಕ್ಕನೇ ತೂಪಿ ಕೆಂಪಾಗಿ ಮಾತಾಡುತ್ತಲೇ ಇದ್ದಳು. ಕುತ್ತಿಗೆಯಿಂದ ಎದೆಯತನಕ ಹಾಕಿದ್ದ ಮಣಭಾರದ ಮಣಿಸರಗಳನ್ನೇ ನೋಡುತ್ತಾ ‘ಅಲ್ವೆ ಅಜ್ಜಿ ನಂಗೆ ಸೊಪ್ಪ್ ಸಂತಿಗ್ ನಿಂದೊಂದ್ ಮಣಿಸರನೂ ಕೊಡುಕಾಗುದೆ’ ಎಂದೆ ಅವಳ ಕೈಹಿಡಿದು. ಅಷ್ಟು ಹೊತ್ತು ಕೊಂಕಣ ರೈಲಿನಂತೆ ಗಲಗಲವೆನ್ನುತ್ತಾ ಮಾತನಾಡುತ್ತಿದ್ದವಳು ಒಮ್ಮೇಲೆ ನಾಚಿಕೊಂಡಳು. ‘ಇಸ್ಸಿ ನಿಂಗಂತಾಗದ್ಯೇ. ಹಾಂಗೆಲಾ ಮಳ್ ಮಳ್ ಮಾತಾಡುಕಾಗ’ ಎಂದು ಕೆನ್ನೆ ತಿವಿದಳು. ಇದ್ದಕ್ಕಿದ್ದಂತೆ ಅಲ್ಲೊಂದು ಬಾಂಧವ್ಯದ ಸೆಲೆ ನಮ್ಮನ್ನು ಬಿಗಿದಿಟ್ಟಿತ್ತು. ಸುಮಾರು ಅರ್ಧತಾಸು ಹರಟಿದೆವು ಯಾವುದೋ ಬಾದರಾಯಣ ಸಂಬಂಧಿಗಳಂತೆ. ನಂತರ ಅವಳ ಬಳಿ ‘ಬೆಳ್ಳಕ್ಕಿದ್ದಾಂಗೀವೆ ಕೂಸೆ ಕರಿಕಾಕೆ ಆಗೋಗ್ವೆ ಈ ಮುದ್ಕಿ ಬೆನ್ನಿಗ್ ಕೂತ್ಕಂಡ್. ನೆಡಿ ಮನಿಗೆ’ ಎಂದು ಗದರಿಸಿಕೊಂಡು ಸೊಪ್ಪನ್ನು ಮಡಿಲು ತುಂಬಿಸಿಕೊಂಡು ಬಂದೆ. ಅದಾದ ಮೇಲೆ ಮತ್ಮತ್ತೆ ಅವಳನ್ನು ಹುಡುಕಿದ್ದೇನೆ ಅಲ್ಲೆಲ್ಲ. ಅವಳು ಸಿಗ್ದಿದ್ದರೂ ಅವಳಂತಹ ಅನೇಕ ದುರ್ಗಿಯರು ಸಿಕ್ಕಿದ್ದಾರೆ. ಆಗೆಲ್ಲ ತೂಕಕ್ಕೆ ಸಿಕ್ಕಿದ್ದು ಕೊಂಕಿಲ್ಲದ, ಕೊಳಕಿಲ್ಲದ, ವ್ಯಾಪಾರದ ಪೈಸಾವಸೂಲಿಯ ಹಂಗಿಲ್ಲದ ಶುದ್ಧ ಅಂತಃಕರಣ ಮಮತೆ.

ನೆನಪು-೩:
ಕರಾವಳಿಯ ಕಡು ಸೆಕೆಯಲ್ಲೂ ಸೊಂಪಾಗಿದ್ದವಳಿಗೆ ಮಲೆನಾಡಿನ ಸೊಸೆಯಾದ ಹೊಸತರಲ್ಲಿ ಎಲ್ಲವೂ ಸಲೀಸಿರಲಿಲ್ಲ. ಹೊಸ ಪರಿಸರ, ಹೊಸ ಸಂಪ್ರದಾಯ, ಆಚಾರ ವಿಚಾರಗಳನ್ನು ಇದ್ದಕ್ಕಿದ್ದಂತೇ ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆಗೆಲ್ಲ ವಿಹ್ವಲತೆಯಿಂದ ಕಂಗೆಟ್ಟಾಗ ಸಲಹಿ ಬೆಚ್ಚನೆಯ ಮಡಿಲಾಸರೆಯನ್ನಿತ್ತಿದ್ದು ಅಜ್ಜಿ (ಅಂದರೆ ನನ್ನತ್ತೆಯ ಅಮ್ಮ ವಿಶಾಲಾಕ್ಷಮ್ಮ). ಅಜ್ಜಿಮನೆಗೆ ಹೋದಾಗಲೆಲ್ಲ ಅವಳನ್ನು ಹುಡುಕಿಕೊಂಡು ಹಿತ್ತಲ ಬಾಗಿಲಿಗೆ ಹೋಗಿ ನಿಧಾನಕ್ಕೆ ತಬ್ಬುತ್ತಿದ್ದೆ. ಅಸ್ಪಷ್ಟ ಕಣ್ಣಲ್ಲೇ ನೋಡುತ್ತಾ ಮೈತಡವಿ ‘ಶುಭಾ ಗೊತ್ತಾತ್ ನಂಗೆ’ ಎನ್ನುತ್ತಾ ಬೊಚ್ಚು ಬಾಯಗಲಿಸುತ್ತಿದ್ದಳು. ‘ಅಜ್ಜಿ ಹೆಂಗಿದ್ರಿ’ ಅಂದರೆ ಸಾಕು ಮುಖ ಸಣ್ಣ ಮಾಡಿ ‘ಕೂಡ್ದೂ ಕಣೇ ಏನ್ ಸುಖಿಲ್ಲ’ ಅನ್ನುತ್ತಿದ್ದಳು. ಮತ್ತೊಂದು ಕ್ಷಣಕ್ಕೆ ಮತ್ತೇನೋ ಮಾತಿಗೆ ಪಿಕಪಿಕನೆಂದು ಮಗುವಂತೆ ನಕ್ಕು ಬಿಡುತ್ತಿದ್ದಳು. ಅವಳೂ ನನ್ನಂತೆಯೇ ಕರಾವಳಿಯಿಂದ ಮಲೆನಾಡಿಗೆ ಬಂದು ಬದುಕ ಕಟ್ಟಿಕೊಂಡ ಗಟ್ಟಿಗಿತ್ತಿ. ಇದೇ ಕಾರಣಕ್ಕೋ ಏನೋ ಕೆಲವೊಂದು ಭಾವ ಹೇಳದೆಯೂ ಅರ್ಥ ಮಾಡಿಕೊಂಡು ನಾನಿದ್ದೇನೆ ಎಂಬ ಗಟ್ಟಿ ಭಾವವನ್ನು ಬಿಗಿಯುತ್ತಿದ್ದಳು. ವಯಸ್ಸಿದ್ದಾಗ ಮನೆಗೆ ಬಂದವರನ್ನೆಲ್ಲಾ ಕೈಲಾದಷ್ಟು ಸತ್ಕರಿಸಿ, ಕೈಲಾಗದ ಇಳಿ ಮುಪ್ಪಲ್ಲಿಯೂ ಕಂಡವರನ್ನೆಲ್ಲ ಕರೆದು ಮಾತನಾಡಿಸಿ ಊರವರಿಗೆಲ್ಲರಿಗೂ ಹತ್ತಿರವಾಗಿದ್ದಳು. ಅಜ್ಜಿಯ ಈ ಅಂತಃಕರಣದ ಅಂತಃಶಕ್ತಿ ಅರಿವಾದದ್ದೇ ಅವಳು ಹೋದಾಗ. ಹಾಸಿಗೆ ಹಿಡಿದಾಗ ಅವಳನ್ನು ನೋಡಲು ಬಂದ ಜನ, ಸಂಸ್ಕಾರ ಮಾಡಲು ಕಟ್ಟಿಗೆ ಒಡೆಯಲು ಜನ, ಚಿತೆಯನ್ನು ಮಾಡಲು ಮತ್ತೊಂದಿಷ್ಟು ಜನ, ಅವಳನ್ನು ಕೊನೆಯದಾಗಿ ನೋಡಲು ಜನಸಾಗರವೇ ಬಂದಿತ್ತು. ‘ದುಡ್ಡು ಮುಖ್ಯವೇ ಅಲ್ಲ ಕಣೇ, ಜನ ಸಂಪಾದನೆ ಮುಖ್ಯ’ ಎಂಬ ಅಜ್ಜಿಯ ಮಾತಿನ ಸತ್ವದ ಅರಿವಾಗುವಾಗ ಅವಳ ಚಿತೆಯುರಿದಿತ್ತು. ಈಗಲೂ ಅಜ್ಜಿಮನೆಗೆ ಹೋದಾಗ ಅವಳು ಕುಳಿತುಕೊಳ್ಳುವ ಹಿತ್ತಿಲಬಾಗಿಲ ಚಿಟ್ಟೆಯ ಮೇಲೆ ಕುಳಿತೆದ್ದು ಬಂದರೆ, ಅವಳ ಹತ್ತಿಯ ಸೀರೆಯನ್ನು ತಬ್ಬಿಕೊಂಡರೆ ಅಜ್ಜಿಯೇ ಸಿಕ್ಕಷ್ಟು ಭಾವ.

ದಾರಿಯುದ್ದಕ್ಕೂ ಸಲುಹಿದ ಇಂತಹ ನೆರಿಗೆಬಿದ್ದ ನವಿಲುಗರಿಯಂತಹ ಜೀವಗಳು ಇನ್ನೂ ಅನೇಕ. ಕೆಲವೊಂದನ್ನಷ್ಟೇ ಇಲ್ಲಿ ಬರೆದು ಹಗುರಾಗಿದ್ದೇನೆ.

ಕೆಲವೊಮ್ಮೆ ಹೊತ್ತಲ್ಲದ ಹೊತ್ತಲ್ಲಿ ಅಸಹಾಯಕತೆಯೆಂಬ ಭೂತ ಮನದ ಹೊಸ್ತಿಲಲ್ಲಿ ಧಗ್ಗನೆ ಬಂದು ನಿಂತುಬಿಟ್ಟಾಗ ದಿಟ್ಟತನದಲ್ಲಿ ಎದೆಬಾಗಿಲನ್ನು ದೂಡುವ ಶಕ್ತಿಯೇ ಇರದೇ ಕುಸಿವಂತಾಗುತ್ತದೆ. ‘ಪದ ಕುಸಿಯೆ ನೆಲವಿಹುದು-ಮಂಕುತಿಮ್ಮ’ ಎಂಬ ಕಗ್ಗದ ಸಾಲು ಕೂಡ ಅಣಕಿಸತೊಡಗುತ್ತದೆ. ಹತ್ತಿರದವರಲ್ಲಿ ಹೇಳಿಕೊಂಡು ಬಿಕ್ಕಿ ನಿರುಮ್ಮಳವಾಗುವ ಅಥವಾ ಅನಿಸಿದ್ದೆಲ್ಲಾ ಬರೆದು ಹಗುರಾಗುವ ಅಂದುಕೊಂಡರೂ ಆಗದ ವಿಮನಸ್ಕತೆ. ಇಂತದ್ದೊಂದು ಸಮಯ ಬಂದಾಗಲೆಲ್ಲ ನನ್ನನ್ನು ದಿಕ್ಕೆಡದಂತೆ ಕಾದು ದಾರಿ ತೋರುವುದು ಇಂತಹ ಹಿರಿಜೀವಗಳು ಕೊಟ್ಟ, ಕೊಡುತ್ತಿರುವ ಅಕ್ಕರೆಯ ಬೆಳಕು. ಅದನ್ನೆಲ್ಲ ನಗುತ್ತಾ ನೆನಪಿಸಿಕೊಂಡು ಮುಂದಡಿಯಿಡುತ್ತೇನೆ, ಆ ಕ್ಷಣವೇ ಅಸಹಾಯಕತೆ, ವಿಹ್ವಲತೆ ಎಂಬೆಲ್ಲ ನಾಮಧೇಯದಿಂದ ಮನದಂಗಳದಿ ಲಗ್ಗೆಯಿಟ್ಟ ಕೊಳ್ಳಿದೆವ್ವಗಳು ಮಮತೆಯ ದಿವ್ಯಪ್ರಭೆಗೆ ಉರಿದು ಬೂದಿಯಾಗುವುದನ್ನು ಕಂಡಿದ್ದೇನೆ.

ಹುಡುಕಿಕೊಂಡು ಹೋದರೂ ಸಿಗದ ಇಂತಹ ನೆರಿಗೆಬಿದ್ದ ನವಿಲುಗರಿಯ ಅಕ್ಕರೆಯನ್ನು ಸಿಕ್ಕಾಗ ಎದೆಗೊತ್ತಿಕೊಳ್ಳಬೇಕು. ಮುಂದಿನದ್ದು ಯಾರಿಗೆ ಗೊತ್ತಿದೆ, ಇಂತಹ ಅಜ್ಞಾತ ನೆನಪೇ ನಮ್ಮನ್ನು ನೆಮ್ಮದಿಯ ಬೆಳದಿಂಗಳು ತಂದುಕೊಡಬಹುದು.