“ಚಳಿಗಾಲದ ಮರಗಳು” ಪದ್ಯದಲ್ಲಿ ಸಿಲ್ವಿಯಾ, ತನ್ನ ಕಾಲಘಟ್ಟದಲ್ಲಿ ಹೆಣ್ಣನ್ನು ನಡೆಸಿಕೊಂಡ ರೀತಿ, ಹೆಣ್ಣನ್ನು ತಾಯ್ತನ, ಕರ್ತವ್ಯಗಳಲ್ಲಿ ಬಂಧಿಸಲು ನೋಡುತ್ತಿದ್ದ ಸಮಾಜದ ಮನಸ್ಥಿತಿಯ ಚಿತ್ರಣ ಕಂಡರೆ, ಏಕಾಂಗಿಯ ಸ್ವಗತದಲ್ಲಿ ತನ್ನ ಏಕಾಂತ, ಒಂಟಿತನದ ಮಧುರ ಯಾತನೆ, ತನ್ನ ಪ್ರೇಮಿಯ ಹಠಾತ್ ನಿರ್ಗಮನದಿಂದ ಬಲಹೀನಳಾಗುವ ಸಿಲ್ವಿಯಾಳ ತೀವ್ರ ನೋವು ಕಾಣಿಸಿತು. ಕನ್ನಡಿ ಪದ್ಯವು, ತನ್ನೊಳಗೆ ಹಣಿಕುವ, ಈಜುವ ತನ್ನ ಮಾಲೀಕಳ ಬಾಲ್ಯದಿಂದ ಯೌವನದ ಪಯಣವನ್ನು ತನ್ನದೇ ಸ್ವಗತವೆಂಬಂತೆ ನುಡಿಯುತ್ತದೆ ಗುಲಾಬಿ ಬಣ್ಣದ ಗೋಡೆಗೆ ಎದುರಾಗಿ ಮತ್ತೊಂದು ಗೋಡೆಗೆ ತಬ್ಬಿದ ಕನ್ನಡಿ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಸಿಲ್ವಿಯಾ ಪ್ಲಾತ್ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

“ಓದಬೇಕೆಂದ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ. ಇಷ್ಟದ ವ್ಯಕ್ತಿಗಳಂತೆ ಬದುಕಲೂ ಆಗುವುದಿಲ್ಲ. ಎಲ್ಲಾ ಕಲೆಗಳಲ್ಲೂ ಪರಿಣಿತಿ ಹೊಂದಲಾಗುವುದಿಲ್ಲ. ಅಷ್ಟಕ್ಕೂ ಇದೆಲ್ಲ ಯಾಕೆ ಬೇಕು? ಬದುಕಿನಲ್ಲಿ ಸಾಧ್ಯವಿರುವ ಎಲ್ಲಾ ಬಣ್ಣ, ಭಾವಗಳನ್ನೂ ದೈಹಿಕವಾಗಿ, ಮಾನಸಿಕವಾಗಿ ಅನುಭವಿಸಬೇಕಿದೆ ನಾನು. ನನ್ನ ಜಗತ್ತು ತೀರಾ ಚಿಕ್ಕದು.”

ಹೀಗೆ ಧೈರ್ಯವಾಗಿ ತನ್ನ ಪರಿಮಿತಿಯನ್ನು ಹೇಳಿಕೊಂಡ ಅಮೆರಿಕಾದ ಪ್ರತಿಭಾವಂತ ಕವಯಿತ್ರಿ ಸಿಲ್ವಿಯಾ ಪ್ಲಾತ್. ಸಿಲ್ವಿಯಾ ಸಾವನ್ನಪ್ಪಿದ್ದು 11 ಫೆಬ್ರವರಿ 1963. ಈಗಿನಿಂದ 61 ವರ್ಷಗಳ ಹಿಂದೆ. ಈಕೆ ಸಾವಿನಿಂದಲೇ ಗುರುತಿಸಲ್ಪಟ್ಟ ಕವಿಯಾದರೂ, ದುರಂತನಾಯಕಿ ಎನ್ನುವುದಕ್ಕಿಂತಲೂ ಹೆಚ್ಚೇ ಇವಳನ್ನು, ಇವಳ ಕವಿತ್ವವನ್ನು ಗುರುತಿಸುವುದು ಒಳಿತು.

27 ಅಕ್ಟೋಬರ್ 1932 ಜನಿಸಿದ ಸಿಲ್ವಿಯಾ, ತನ್ನ ಎಂಟನೇ ವರ್ಷಕ್ಕೇ ಮೊದಲ ಕವಿತೆ ಬರೆದವಳು. ಬಾಲ್ಯದಲ್ಲಿ ತುಂಟಾಟವಾಡುತ್ತಾ ತರಲೆ ಮಾಡುತ್ತಾ, ಕಡಲೆಂದರೆ ಸಾಕು ಹುಚ್ಚೆದ್ದು ಕುಣಿಯುವ ಕುದುರೆ. ಒಮ್ಮೆಯಂತೂ ಅಲೆಯೊಂದಿಗೇ ಹರಿದು ಹೊರಟ ಆ ತರಲೆ ಸುಬ್ಬಿಯನ್ನು ಅವಳಮ್ಮ ಬಾಚಿ ಎಳೆದುಕೊಂಡು ಬಂದಿದ್ದಳು. ಒಂಬತ್ತನೆ ವಯಸ್ಸಿಗೇ ಅಪ್ಪ ಕ್ಯಾನ್ಸರಿಗೆ ಬಲಿಯಾಗಿ ತನ್ನಿಂದ ದೂರವಾದಾಗ, ತನಗೆ ಹೇಳದೆಯೇ ಅಪ್ಪ ಸತ್ತು ಹೋದನೆಂದು ಮುನಿದಳು. ದೇವರು ಅವನನ್ನು ಕರೆದುಕೊಂಡು ಹೋದನೆಂದು ದೇವರೊಂದಿಗೆ ಮಾತು ಬಿಟ್ಟಳು. ತನ್ನಮ್ಮ ಮತ್ತೆ ಇನ್ನೊಂದು ಮದುವೆ ಮಾಡಿಕೊಂಡರೆ ಅವಳೂ ಸಹ ತನ್ನಿಂದ ಶಾಶ್ವತವಾಗಿ ಕಳೆದೇ ಹೋದಾಳು ಎನ್ನುವ ಭಯ. ಹೀಗೇ ಕಳೆದುಕೊಳ್ಳುವ ಭೀತಿ, ದುಃಖ ದುಗುಡ, ಭ್ರಮೆಗಳೊಟ್ಟಿಗೆಯೇ ಬೆಳೆಯುವ ಸಿಲ್ವಿಯಾ ತಾಯಿಯ ಪೋಷಣೆಯೊಟ್ಟಿಗೆ ಹಠಮಾರಿ ಹುಡುಗಿಯಾಗಿ ದೊಡ್ಡವಳಾಗುತ್ತಾಳೆ. ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಿಲ್ವಿಯಾ ಬಹಳಷ್ಟು ಕಾವ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಹಾರುವ ಬಣ್ಣಗಳ ಹಿಡಿದು ಆಗಸಕ್ಕೆ ಜಿಗಿಯುತ್ತಾಳೆ. ತೀವ್ರ ಅಂತರ್ಗತ ಮನೋಸಂವೇದನೆಯ ಪದ್ಯಗಳನ್ನೇ ಬರೆದರೂ ಸಾವು, ಬದುಕು, ತೀವ್ರತೆ, ಸಮತೆ ಹೀಗೆ ಏನೆಲ್ಲಾ ಬರೆದರೂ ಸಾರ್ವತ್ರಿಕವೆನಿಸುವ ಪದ್ಯವನ್ನು ಆಗು ಮಾಡುವುದರಲ್ಲಿ ಅವಳ ಕವಿತ್ವ ಗೆಲುವು ಸಾಧಿಸಿತು.

ಹೀಗೆ ಧೈರ್ಯವಾಗಿ ತನ್ನ ಪರಿಮಿತಿಯನ್ನು ಹೇಳಿಕೊಂಡ ಅಮೆರಿಕಾದ ಪ್ರತಿಭಾವಂತ ಕವಯಿತ್ರಿ ಸಿಲ್ವಿಯಾ ಪ್ಲಾತ್. ಸಿಲ್ವಿಯಾ ಸಾವನ್ನಪ್ಪಿದ್ದು 11 ಫೆಬ್ರವರಿ 1963. ಈಗಿನಿಂದ 61 ವರ್ಷಗಳ ಹಿಂದೆ. ಈಕೆ ಸಾವಿನಿಂದಲೇ ಗುರುತಿಸಲ್ಪಟ್ಟ ಕವಿಯಾದರೂ, ದುರಂತನಾಯಕಿ ಎನ್ನುವುದಕ್ಕಿಂತಲೂ ಹೆಚ್ಚೇ ಇವಳನ್ನು, ಇವಳ ಕವಿತ್ವವನ್ನು ಗುರುತಿಸುವುದು ಒಳಿತು.

ಸ್ಮಿಥ್ ಕಾಲೇಜಿನಿಂದ ಪದವಿ ಪಡೆದು ನ್ಯೂನ್ಹ್ಯಾಮ್ ಕಾಲೇಜಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಸೇರಿದಾಗ ಅಲ್ಲಿಯೇ ತನ್ನ ಕವಿಜೋಡಿಯಾಗುವ ಟೆಡ್ ಹ್ಯೂಗ್ಸ್ ನನ್ನ ಭೇಟಿಯಾಗಿ ನಂತರ 1956 ರಲ್ಲಿ ಟೆಡ್ ಜೊತೆ ಮದುವೆಯಾಗುತ್ತಾಳೆ. ಮದುವೆಯ ನಂತರ ಬ್ರಿಟನ್ನಿನಲ್ಲಿ ವಾಸಿಸಲು ಟೆಡ್‌ನೊಂದಿಗೆ ತೆರಳುವಳು. ಟೆಡ್ ಹ್ಯೂಗ್ಸ್ ಮತ್ತು ಸಿಲ್ವಿಯಾ ಇಬ್ಬರೂ ಅಮೆರಿಕಾದ ಪ್ರತಿಭಾವಂತ ಕವಿಗಳು.

ಅತೀ ಸಣ್ಣ ವಯಸ್ಸಿನಲ್ಲೇ ಖಿನ್ನತೆಗೆ ಒಳಗಾಗುವ ಸಿಲ್ವಿಯಾ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದವಳು. ಮಾನಸಿಕ ಖಾಯಿಲೆಗೆ ಎಷ್ಟೇ ಇಲಾಜು ಮಾಡಿಸಿಕೊಂಡರೂ, ಕರೆಂಟು ಶಾಕಿನಂಥ ಚಿಕಿತ್ಸೆಗೊಳಗಾದರೂ, ಒಂದಷ್ಟು ಆರಾಮು ಅನ್ನಿಸುವುದರೊಳಗೆ ಮತ್ತೆ ಮತ್ತೆ ಮಾನಸಿಕ ಕ್ಷೋಭೆಗೆ ಒಳಗಾಗುತ್ತಲೇ ಇದ್ದಳು. ಅವಳ ಖಿನ್ನತೆ ಉಸಿರಾಟದಷ್ಟೇ ಸಹಜವಾಗಿ ಅವಳೊಂದಿಗೆ ಬೆರೆತು ಹೋದರೂ ಬರವಣಿಗೆ ಮಾತ್ರ ಅಷ್ಟೇ ಮೊನಚಾಗುತ್ತಲೇ ಹೋಯಿತು. ತನ್ನ ಛಾಯೆಯನ್ನೇ ಒಡೆದು ಚೂರು ಮಾಡಿ, ಆ ಚೂರುಗಳನ್ನೇ ಆಯ್ದು ಕಟ್ಟಿ ಪದ್ಯಗಳ ಸರಮಾಲೆ ಪೋಣಿಸಿದವಳು.

1960 ರಲ್ಲಿ “ಕೊಲೋಸಸ್(Colossus)” ಮೊದಲನೇ ಕವಿತಾ ಗುಚ್ಛ ಲೋಕಕ್ಕೆ ಅರ್ಪಿಸಿದರು, ಅಷ್ಟೊತ್ತಿಗೆ ಸಾಹಿತ್ಯ ಲೋಕಕ್ಕೆ ಚಿರಪರಿಚಿತಳೇ ಆದರೂ ಉಳಿದಂತೆ ಸಾರ್ವಜನಿಕ ಜೀವನದಲ್ಲಿ ಅಪರಿಚಿತಳಂತೆ ತನ್ನ ಕವಚದೊಳಗೆ ತನ್ನನ್ನು ತಾನು ಅಡಗಿಸಿಕೊಂಡಿದ್ದಳು.
ಚೊಚ್ಚಲು ಮಗುವನ್ನು ಹಡೆದಾಗ ತೀವ್ರ ಖಿನ್ನತೆಗೆ ಒಳಗಾದ ಸಿಲ್ವಿಯಾ ಅಷ್ಟೇ ತೀವ್ರವಾಗಿ ಬರೆದವಳು. 1962 ರ ಹೊತ್ತಿಗೆ ಟೆಡ್ ಮತ್ತೊಂದು ಹೆಣ್ಣಿನೊಡನೆಯ ಸಂಬಂಧದಿಂದಾಗಿ ಸಿಲ್ವಿಯಾಳನ್ನು ತೊರೆಯುತ್ತಾನೆ. ಅದೇ ಚಳಿಗಾಲಕ್ಕೆ ಸಿಲ್ವಿಯಾ ತನ್ನ ಉತ್ಕೃಷ್ಟ ಕವಿತೆಗಳನ್ನು ರಚಿಸಿದಳು. ಇದೇ ಪದ್ಯಗಳನ್ನು ಅವಳ ಮರಣಾನಂತರ ಟೆಡ್ ಹೂಗ್ಸ್, “ಏರಿಯಲ್” ಎನ್ನುವ ಶೀರ್ಷಿಕೆಯ ಕವಿತೆಗಳ ಕಟ್ಟನ್ನು ಪ್ರಕಟಿಸಿದ. ಬೆಲ್ ಜಾರ್ ಎನ್ನುವ ಆತ್ಮಕಥನದ ಕಾದಂಬರಿಯನ್ನು ವಿಕ್ಟೋರಿಯಾ ಲುಕಾಸ್ ಎನ್ನುವ ಕಾವ್ಯನಾಮದೊಂದಿಗೆ ಪ್ರಕಟಿಸುತ್ತಾಳೆ ಸಿಲ್ವಿಯಾ. ಇದಾದ ಎರಡೇ ವಾರಕ್ಕೆ ಸಿಲ್ವಿಯಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು. 1966ರಲ್ಲಿ ಮತ್ತೆ ಸಿಲ್ವಿಯಾಳ ಹೆಸರಲ್ಲಿ ಬ್ರಿಟನ್‌ನಲ್ಲಿ ಬೆಲ್ ಜಾರ್ ಪ್ರಕಟವಾಯಿತು.

ಕೇವಲ 3೦ ನೇ ವಯಸ್ಸಿಗೆ, ಅಡುಗೆ ಮನೆಯಲ್ಲಿ ಸ್ವತಃ ತಾನೇ ಗ್ಯಾಸ್ ಸಿಲಿಂಡರ್‌ನಿಂದ ಅಡುಗೆ ಅನಿಲವನ್ನು ಸ್ರವಿಸಿ ಸಾವಿಗೆ ಶರಣಾಗುತ್ತಾಳೆ. Crossing the Water (1971), Winter Trees (1972) , The Journals of Sylvia Plath (1982), Johnny Panic and the Bible of Dreams (1980), Letters Home by Sylvia Plath (1975). ಇವಿಷ್ಟು ಸಂಕಲನಗಳು ಸಿಲ್ವಿಯಾ ಸತ್ತ ಮೇಲೆ ಪ್ರಕಟವಾಗಿವೆ.

“ಚಳಿಗಾಲದ ಮರಗಳು” ಪದ್ಯದಲ್ಲಿ ಸಿಲ್ವಿಯಾ, ತನ್ನ ಕಾಲಘಟ್ಟದಲ್ಲಿ ಹೆಣ್ಣನ್ನು ನಡೆಸಿಕೊಂಡ ರೀತಿ, ಹೆಣ್ಣನ್ನು ತಾಯ್ತನ, ಕರ್ತವ್ಯಗಳಲ್ಲಿ ಬಂಧಿಸಲು ನೋಡುತ್ತಿದ್ದ ಸಮಾಜದ ಮನಸ್ಥಿತಿಯ ಚಿತ್ರಣ ಕಂಡರೆ, ಏಕಾಂಗಿಯ ಸ್ವಗತದಲ್ಲಿ ತನ್ನ ಏಕಾಂತ, ಒಂಟಿತನದ ಮಧುರ ಯಾತನೆ, ತನ್ನ ಪ್ರೇಮಿಯ ಹಠಾತ್ ನಿರ್ಗಮನದಿಂದ ಬಲಹೀನಳಾಗುವ ಸಿಲ್ವಿಯಾಳ ತೀವ್ರ ನೋವು ಕಾಣಿಸಿತು. ಕನ್ನಡಿ ಪದ್ಯವು, ತನ್ನೊಳಗೆ ಹಣಿಕುವ, ಈಜುವ ತನ್ನ ಮಾಲೀಕಳ ಬಾಲ್ಯದಿಂದ ಯೌವನದ ಪಯಣವನ್ನು ತನ್ನದೇ ಸ್ವಗತವೆಂಬಂತೆ ನುಡಿಯುತ್ತದೆ ಗುಲಾಬಿ ಬಣ್ಣದ ಗೋಡೆಗೆ ಎದುರಾಗಿ ಮತ್ತೊಂದು ಗೋಡೆಗೆ ತಬ್ಬಿದ ಕನ್ನಡಿ.

ಸಿಲ್ವಿಯಾಳ ಕನ್ನಡಿ ಪದ್ಯವನ್ನು ಮೊದಲೇ ಓದಿ ಸಿಲ್ವಿಯಾಳ ಕುರಿತು ಕುತೂಹಲ ಮೂಡಿದ್ದರೂ, ನಟರಾಜ್ ಹುಳಿಯಾರ್ ಅವರ ಕವಿಜೋಡಿಯ ಆತ್ಮಗೀತ (2021) ಕಥಾ ಕಾವ್ಯ ಓದಿದಾಗ ಸಿಲ್ವಿಯಾ ಇನ್ನಿಲ್ಲದಂತೆ ಸೆಳೆದಳು. ಸಿಲ್ವಿಯಾ ಟೆಡ್ಡಿಯ ಪ್ರೇಮ, ಸಿವ್ವಿಯ ಹೊಯ್ದಾಟ, ಎಲ್ಲಿ ತಾನು ಕೇವಲ ಕವಿಪತ್ನಿಯಾಗೇ ಉಳಿದುಬಿಡುವೆನೆಂಬ ಆತಂಕ, ಆಕೆಯ ತುಮುಲಗಳೆಲ್ಲಾ ನಮ್ಮವೇ ಎನಿಸುವಷ್ಟು ಗಾಢವಾಗಿ ಇಳಿಯುವಂಥ ಕಾವ್ಯ. ಆಗ ಶುರುವಾದ ಸಿಲ್ವಿಯಾಳ ಹುಡುಕಾಟ ಈಗ ಈ ಸರಣಿಯಲ್ಲಿ ಒಂದಿಷ್ಟು ಕಂಡುಕೊಳ್ಳಲು ಅನುವಾಯಿತು. ನಿಜವೆಂದರೆ, ಈ ಕಂತು 15 ದಿನ ತಡವಾಗಿ ಬಂತು, ಅದಕ್ಕೆ ಕಾರಣವೂ ಸಿಲ್ವಿಯಾ, ಅಷ್ಟು ಸುಲಭವಾಗಿ ತನ್ನ ಅಂತರಂಗಕ್ಕೆ ನನ್ನನ್ನು ಕರಗಿಸಿಕೊಳ್ಳಲಿಲ್ಲ ಎನ್ನುವುದು ಅಷ್ಟೇ ಸತ್ಯ.

ಇಲ್ಲಿ ಸಿಲ್ವಿಯಾ ಪ್ಲಾತ್‌ಳ ನಾಲ್ಕು ಪದ್ಯಗಳ ಕನ್ನಡ ಛಾಯೆಯನ್ನು ನನ್ನ ಗ್ರಹಿಕೆಯ ಮೂಲಕ ನಿಮ್ಮ ಮುಂದೆ ತಂದಿರುವೆ.

1. ಕನ್ನಡಿ (Mirror)

ನಾನು ಬೆಳ್ಳಿ ಮತ್ತು ನಿಖರ
ಪೂರ್ವಾಗ್ರಹಗಳಿಲ್ಲ ನನಗೆ
ಕಾಣುವ ಎಲ್ಲವನ್ನೂ
ಕಾಣುವ ಹಾಗೇ
ಗಬ್ಬಕ್ಕನೆ ನುಂಗಿಬಿಡುವೆ
ಪ್ರೀತಿ ದ್ವೇಷಗಳಿಂದ ಮಬ್ಬುಗೊಳ್ಳದೆ

ನಾನು ಕ್ರೂರಿಯಲ್ಲ
ಪ್ರಾಮಾಣಿಕ
ನಾಕು ಅಂಚಿನ
ದೇವರ ಪುಟ್ಟ ಕಣ್ಣು

ಎದುರಿಗಿರುವ
ಆ ಕಲೆ ತುಂಬಿದ ಗುಲಾಬಿ ಬಣ್ಣದ
ಗೊಡೆಗೆ ತಬ್ಬಿ ಸದಾ ಧ್ಯಾನಸ್ಥ
ಅದೀಗ ನನ್ನ ಹೃದಯದ ಒಂದು ಭಾಗ
ಆದರದು ಅಲುಗಾಡುವುದು
ಕತ್ತಲೆ, ಮುಖಗಳು ನಮ್ಮನ್ನು ಮತ್ತೆ ಮತ್ತೆ
ಅಗಲಿಸುತ್ತಲೇ ಇರುತ್ತವೆ

ಈಗ ನಾನೊಂದು ಸರೋವರ
ಹೆಣ್ಣೊಬ್ಬಳು ಬಾಗುವಳು,
ನಿಲುಕುವಷ್ಟು ತಡಕಾಡುವಳು
ನನ್ನೊಳಗೆ
ತನ್ನ ಅಸಲಿ ಮುಖವನ್ನು ಹುಡುಕಲು

ಮತ್ತೆ ತಿರುಗುತ್ತಾಳವಳು
ಆ ಮೋಂಬತ್ತಿ,
ಚಂದಿರರೆಂಬ ಸುಳ್ಳುಬುರುಕರ ಕಡೆಗೆ
ಪ್ರಾಮಾಣಿಕವಾಗಿ ಪ್ರತಿಫಲಿಸುವೆ
ನಾನು ಅವಳನ್ನೇ

ಕೈ ಕೈ ಹೊಸಕಿಕೊಳ್ಳುವ
ಅವಳು ನೀಡುವುದು
ಕಣ್ಣೀರಿನ
ಉಡುಗೊರೆಯನ್ನಷ್ಟೇ
ನಿಜವೆಂದರೆ ನಾನವಳಿಗೆ ಮುಖ್ಯ
ಪ್ರತಿ ಬೆಳಗು ನನ್ನ ಕತ್ತಲು ನೀಗುವುದು
ಅವಳ ಮುಖದ ಬೆಳಕಲ್ಲವೇ

ನನ್ನೊಳಗೆ ಪುಟ್ಟ ಹುಡುಗಿಯನ್ನು
ಮುಳುಗಿಸಿದ್ದಳವಳು
ದಿನ ದಿನವೂ ನನ್ನೊಳಗಿನ
ಹಣ್ಣು ಮುದುಕಿ
ಅವಳೆಡೆಗೆ ನಡೆಯುತ್ತಾಳೆ
ಭಯಂಕರ ಮೀನಿನಂತೆ

2. ನಾನೊಂದು ಶೃಂಗೀಯ (I am Vertical)

ನಿಜವೆಂದರೆ,
ಮಟ್ಟಸವಾಗಿರಲು ಬಯಸುವೆ
ನಾನೇನು ಮಣ್ಣೊಳಗೆ ಬೇರುಬಿಟ್ಟ ಮರವಲ್ಲ
ವಸಂತಕ್ಕೆ ಹಸಿರುಟ್ಟು ಕಂಗೊಳಿಸಲೆಂದೇ
ಮಣ್ಣೆದೆಯ ಮಮತೆ,
ತಾಯ ಪ್ರೀತಿ ಹೀರುತ್ತಾ ನಿಂತಿಲ್ಲ

ನನ್ನ ಪಾಲಿನ
ಆಹಾ ಓಹೋ -ಗಳ ಸೆಳೆಯುವ
ಸಲುವಾಗಿ ರಂಗ ಬಿ ರಂಗೇ
-ಯಾಗಿ ಬಣ್ಣ ಬಳಿದುಕೊಂಡು
ಇನ್ನೇನು ಹೂಗಳುದುರುವ
ಪರಿವೆಯಿಲ್ಲದೆ ನಿಂತ ಹೂದೋಟದ ಚೆಲುವಲ್ಲ

ಹಾಗೇ ಹೋಲಿಸಿದರೆ
ಮರವೇ ಅ-ಮರ
ಹೂ ಹಂಬು ಮುಗಿಲ ಚುಂಬಿಸದಿದ್ದರೂ
ಹುಟ್ಟಿಸುತ್ತದೆ ಬೆರಗು
ಒಂದರ ಅಮರತ್ವ
ಇನ್ನೊಂದರ ಎದೆಗಾರಿಕೆ ಬೇಕು ಬೇಕೆನಗೆ

ಈ ಇರುಳು ತಾರೆಗಳ
ಅಸೀಮ ಬೆಳಕಿನಲಿ
ಗಿಡಮರಹೂಬಳ್ಳಿಗಳು
ತಂಪಾದ ಗಾಳಿಗಂಧ ಚೆಲ್ಲಿವೆ
ಅವರೆಲ್ಲರ ನಡುವೆ ನಡೆದು ಬಂದೆ
ಯಾರೂ ಕ್ಯಾರೇ ಎನ್ನಲಿಲ್ಲ
ಕಣ್ಮುಚ್ಚಿದಾಗೊಮ್ಮೊಮ್ಮೆ ನನಗನ್ನಿಸುತ್ತೆ
ಥೇಟ್ ಇವರಂತೆಯೇ ಇರಬೇಕು –
ನಿರ್ಭಾವುಕವಾಗಿ

ಮಲಗೋದು –
ಬಿಡಿ ನನಗಿದು ತೀರಾ ಸಹಜ
ನಾನು ಆಕಾಶ
ಆಗ ಮಾತಿಗಿಳಿಯುತ್ತೇವೆ
ಕೊನೆಗೊಮ್ಮೆ ಶಾಶ್ವತವಾಗಿ
ಮಲಗಿದಾಗಲಾದರೂ
ನಾನು ಕೆಲಸಕ್ಕೆ ಬರುವೆ
ಆಗ ಮರಗಳು ನನ್ನ ತಾಗುವವು
ಹೂಗಳು ನನಗಾಗಿ ನಗುವವು

3. ಏಕಾಂಗಿಯ ಸ್ವಾಗತ (Soliloquy of the Solipsist)

ಏಕಾಂಗಿಯಾಗಿ ನಡೆಯುವೆ
ನಡು ರಾತ್ರಿಯ ರಸ್ತೆ ಕಾಲಡಿ
ತಿರುಗುವುದು ತನ್ನಷ್ಟಕ್ಕೆ
ನಾನು ಕಣ್ಮುಚ್ಚುವಾಗ
ಈ ಕನಸಿನರಮನೆ ಧೂಳೀಪಟವಾಗುವುದು
ನನ್ನ ಹುಚ್ಚು ಕಲ್ಪನೆಯಲ್ಲಿ
ಚಂದಿರನ ಬೆಳಕಿನುಂಗುರ
ಅಗೋ ದೂರದ
ಆ ಮಾಡಿನ ಮೇಲೆ ನೇತಾಡುವುದು

ಮನೆಗಳನ್ನು ಉಡುಗಿಸಬಲ್ಲೆ
ಗಿಡಮರಗಳ ತಗ್ಗಿಸಬಲ್ಲೆ
ದೂರ ಎಸೆದ ನನ್ನ ನೋಟದ ಸೂತ್ರ
ಜೋಲಾಡಿಸುವುದು ಅವರನ್ನು ಕೈಗೊಂಬೆಯಂತೆ
ಕಿರಿದಾಗುವ ಪರಿವೆಯೇ ಇರದ ಜನ
ನಗುತ್ತಾರೆ, ಮುದ್ದಾಡುತ್ತಾರೆ, ನಶೆಯೇರುತ್ತಾರೆ
ನಾನೇನಾದರೂ ಕಣ್ಮಿಟುಕಿಸಿದರೇ
ಸತ್ತೇ ಹೋಗುವ ಕಲ್ಪನೆಯೂ ಇಲ್ಲದವರು!

ಒಳ್ಳೆಯ ತಮಾಷೆಯ ಮೂಡಿನಲ್ಲಿರುವಾಗ
ಹುಲ್ಲಿಗೆ ಹಸುರು, ಚಾಚಿದಾಕಾಶಕ್ಕೆ ನೀಲಿ
ಬಾನಿಗೆ ಬಂಗಾರವನೇ ಧಾರೆ ಎರೆವೆ
ನನ್ನ ಶಿಶಿರದಲಿ ಮಾತ್ರ
ಯಾವುದೇ ಬಣ್ಣವನೂ ಬಹಿಷ್ಕರಿಸುವ
ಯಾವುದೇ ಹೂವನೂ ನಿಷೇಧಿಸುವ
ಅಪಾರ ಶಕ್ತಿ ನನ್ನಲ್ಲಿದೆ

ನಿಚ್ಚಳವಾಗಿ ಗೊತ್ತು ನನಗೆ
ನನ್ನ ಪಕ್ಕದಲ್ಲಿಯೇ ನಿಂತಿರುವೆಯೆಂದು
ನಿನ್ನಿರವು ಕಲ್ಪನೆಯಲ್ಲ ನಿಜವೆಂದು
ತೋರಿಸುವ ಸಲುವಾಗಿಯಾದರೂ
ತೀವ್ರವಾಗಿ ಪ್ರೀತಿಸು ನನ್ನನ್ನು

ಪ್ರಿಯ,
ನಿನ್ನ ಚಂದ, ಚಾಣಾಕ್ಷ
ಎಲ್ಲವೂ ನನ್ನ ಕೊಡುವಳಿಯೇ ಅಲ್ವೇ!

4. ಚಳಿಗಾಲದ ಮರ (Winter Trees)

ಮಬ್ಬು ಮುಂಜಾನೆ ಶಾಯಿ
ಕರಗಿಸಿದೆ ತನ್ನ ನೀಲಿಯನ್ನು
ಇಬ್ಬನಿ ಹೀರುವ ಈ ಮರಗಳು
ಹಸಿರು ಬರೆದ ಚಿತ್ರವೇನೋ
ನೆನಪ ಸರಮಾಲೆ
ಒಂದರ ಮೇಲೊಂದುಗರದ
ಸರಣಿ ಪರಿಣಯ

ಬಸಿರಿಳಿತವೋ,
ಕೆಟ್ಟ ಬೈಗುಳಗಳೊ ತಿಳಿದಿಲ್ಲ ಯಾವುದು
ಹೆಂಗಸಿರಿಗಿಂತಲೂ ಸಾಚಾ
ಸಲೀಸಾಗಿ ಬೀಜ ಊರಿ
ಪಾದ ಊರದ ಗಾಳಿ ರುಚಿ ನೋಡುವ
ಆಳವಾಗಿ ಸೊಂಟದವರೆಗೂ
ಮುಳುಗುವ ಚರಿತ್ರೆ

ತುಂಬು ರೆಕ್ಕೆಯ
ಬೇರೊಂದು ಮಾಯಾಲೋಕ
ಇವರು ಈ ಲೋಕದ *ಲೆಡಾ
ಓ ಸುಗಂಧ ಪತ್ರೆಗಳ ಮಾತೆ
ಯಾರಿವರು ದೇವಕನ್ಯೆಯರು
ಯಾವುದನ್ನೂ ಬೆನ್ನಟ್ಟದ
ನೋವಿನ ರಾಗ ಪಲುಕುವ ಹಂಸದ ನೆರಳು

*ಗ್ರೀಕ್ ಮತ್ತು ರೋಮನ್ ಪುರಾಣದಲ್ಲಿ ಸ್ಪಾರ್ಟಾದ ಟಿನ್ಡರ್ಯುಸ್‌ನ ಪತ್ನಿ, ಕ್ಲಿಟಮ್ನೆಸ್ಟ್ರಾ ತಾಯಿ. ಹಂಸ ರೂಪಿ Zeusನನ್ನು ಕೂಡಿ ಕಾಸ್ಟರ್, ಪಾಲಕ್ಸ್ ಮತ್ತು ಹೆಲೆನ್ ಆಫ್ ಟ್ರಾಯ್‌ರಿಗೆ ತಾಯಿಯಾದವಳು.