ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ. ಅನುಭಾವಿಗಳು ಮುಖ್ಯವಾಗಿ ಮೋಕ್ಷವನ್ನು ಗುರಿಯಾಗಿಸಿಕೊಂಡು ಒಪ್ಪಿತ ಜಗತ್ತಿನಿಂದ ಬಿಡುಗಡೆ ಹೊಂದಲು ಬಯಸಿ ಇಹದಿಂದ ಪರಕ್ಕಾಗಿ ಕಾತರಿಸಿ ಇಲ್ಲಿಂದ ಬಿಡುಗಡೆ ಹೊಂದಿಯೂ ಹೊಂದದೆ ಬೇರೆ ಲೋಕವನ್ನು ಇಲ್ಲಿಂದಲೇ ಕಾಣುತ್ತಾರೆ.
ಕೃಷ್ಣ ದೇವಾಂಗಮಠ ಅಂಕಣ

 

ಕಾಲದ ಪ್ರಶಾಂತ ಪ್ರವಾಹದಲ್ಲಿ ಸದಾ ಝರಿಯುತ್ತಿರುವ ನದಿಯ ಚಂಚಲತೆಯಲ್ಲೂ ಅಡಗಿರುವ ಏಕತಾನತೆ ( ಧ್ಯಾನ ) ಸದಾ ಬದಲಾಗುತ್ತಿರುತ್ತದಾದರೂ ನೀರು ಮಾತ್ರ ಅದೇ ಆಗಿರುವ ಹಾಗೆ ಹರಿಯುವುದೊಂದೆ ಅದರ ಅನಿಯಮಿತ ಕರ್ಮ. ಇದೇ ಸ್ಥಿತಿಯಲ್ಲಿ ಇದ್ದು ಇರದಂತೆ ಇದ್ದು ಮುಂದುವರೆಯುತ್ತಾ ಒಂದು ಪರಿಪೂರ್ಣವಲ್ಲದ ಪೂರ್ಣ ವೃತ್ತವನ್ನು ಸಾಹಿತ್ಯ ಯಾವಾಗಲೂ ಸುತ್ತುತ್ತಲೇ ಕೂಡುತ್ತಿರುತ್ತದೆ. ಹೀಗೆ ಕೂಡುವಾಗ ಅದು ಪರಂಪರೆಗಳನ್ನು ಸಂಕಲಿಸುತ್ತಾ ಸಾಗುತ್ತದೆ.

ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ವಚನಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಮಧ್ಯಕಾಲೀನ ಸಾಹಿತ್ಯದಲ್ಲಿಯೇ ಅತ್ಯಂತ ಹೆಚ್ಚು ಎನ್ನುವಷ್ಟು ವಿಮರ್ಶೆಗಳು, ವ್ಯಾಖ್ಯಾನಗಳು, ಚಿಂತನೆಗಳು, ಅರ್ಥವಿವರಣೆಗಳೂ ವಚನ ಸಾಹಿತ್ಯವನ್ನು ಕುರಿತಂತೆಯೇ ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ನವೋದಯ ಕಾಲದಲ್ಲಿ ವಚನಗಳು ಕಾವ್ಯಗಳೋ ಅಲ್ಲವೋ ಎನ್ನುತ್ತಲೇ ಅವುಗಳಲ್ಲಿನ ಕಾವ್ಯಾಂಶಗಳನ್ನು ಗುರುತಿಸುವ ಕೆಲಸ ನಡೆಯಿತು. ನವ್ಯದ ಸಂದರ್ಭದಲ್ಲಿ ವಚನಗಳೂ ಕಾವ್ಯಗಳೆಂದು ಸಾರಿ ಅವುಗಳನ್ನು ವಿಶ್ಲೇಸಿಸಿ ಅರ್ಥವಿವರಣೆ ನೀಡುವ ಕಾರ್ಯ ಮೊದಲುಗೊಂಡಿತು.

(ಬಸವಣ್ಣ)

ಸಂಕೇತಗಳ ಮೂಲಕ ಮೂಡುವ ಭಾಷಾ ಜಗತ್ತನ್ನು ಸೃಷ್ಟಿಸಿದ ಬರವಣಿಗೆಯ ದೊಡ್ಡ ಹರಹನ್ನು ವಚನ ಸಾಹಿತ್ಯ ಒಳಗೊಂಡಿದೆ. ಈ ಸಂಕೇತಗಳ ಭಾಷೆ ಆವರೆಗೂ ನಮಗೆ ಒಪ್ಪಿತವಾಗಿದ್ದ ಸಂಕೇತದ ಭಾಷೆಯಿಂದ ಬಿಡಿಸಿಕೊಂಡುದಾಗಿ ಅಲ್ಲಿಯವರೆಗೂ ಇದ್ದ ಚೌಕಟ್ಟಿನಿಂದ ಜಿಗಿದು ವಿರುದ್ಧವಾದ ಹೊಸ ಸಂಕೇತಗಳನ್ನು ತನ್ನಲ್ಲಿ ಜೀವಂತವಾಗಿಸುತ್ತಾ ಸಾಗಿಬಂದುದಾಗಿದೆ. ಈ ನುಡಿಯ ಬಗೆ ಅನುಭಾವಿ ಪಂಥಗಳಲ್ಲಿ ಸೇರಿಕೊಂಡಿದೆ. ಈ ಅನುಭಾವವನ್ನು ಬಣ್ಣಿಸುವಂತೆ ವಚನಗಳಲ್ಲಿ ಹೆಚ್ಚಾಗಿ ಕಾಣುವ ರೂಪಕವೆಂದರೆ ಶಿಶು ಕಂಡ ಕನಸು ಎಂಬುದಾಗಿ. ಯಾಕೆಂದರೆ ಶಿಶು ನಾವು ಕಂಡ ಜಗತ್ತಿಗಿಂತ ಬೇರೆಯಾಗಿ ತನಗೆ ಬೇಕಾದಂತೆ ಹೊಸದಾಗಿಯೂ, ತನ್ನ ಮುಕ್ತ ಮತ್ತು ಮುಗ್ಧವಾದ ಧಾಟಿಗೆ ಒಗ್ಗಿಕೊಳ್ಳುವಂತೆ ಕಾಣುತ್ತದೆ. ಅನುಭಾವಕ್ಕೆ ಎಳೆಯ ಎಳೆ ಬೇಕು ಅನ್ನುವುದನ್ನೇ ಇದು ಖಚಿತಪಡಿಸುತ್ತದೆ. ವಚನ ಸಾಹಿತ್ಯದ ಕಾಲ ಘಟ್ಟವನ್ನು ಹಳತು ಮತ್ತು ಹೊಸತರ ಸಂವೇದನೆಯ ಕೊಂಡಿಯಾಗಿಯೂ ಪರಿಭಾವಿಸಬೇಕು ಅನ್ನಿಸುತ್ತದೆ. ನಮ್ಮ ಈ ಕಾಲದ ಸಾಹಿತ್ಯಕ್ಕೆ ಅಗಾಧವಾದ ಪ್ರೇರಣಾ ಶಕ್ತಿಯಾಗಿ ವಚನಸಾಹಿತ್ಯ ಕಾಣುತ್ತದೆ. ಹಾಗಾಗಿಯೇ ವಚನಗಳ ಮರುಓದು ಏರ್ಪಡುತ್ತಾ ಅವುಗಳ ಮರುವಿಶ್ಲೇಷಣೆ ಹೊಸ ಒಳನೋಟಗಳಿಂದ ಕಾಲಕಾಲಕ್ಕೆ ಆಗುವುದು ಅಗತ್ಯವೂ, ಮುಖ್ಯವೂ ಆಗಿದೆ.

ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ. ಅನುಭಾವಿಗಳು ಮುಖ್ಯವಾಗಿ ಮೋಕ್ಷವನ್ನು ಗುರಿಯಾಗಿಸಿಕೊಂಡು ಒಪ್ಪಿತ ಜಗತ್ತಿನಿಂದ ಬಿಡುಗಡೆ ಹೊಂದಲು ಬಯಸಿ ಇಹದಿಂದ ಪರಕ್ಕಾಗಿ ಕಾತರಿಸಿ ಇಲ್ಲಿಂದ ಬಿಡುಗಡೆ ಹೊಂದಿಯೂ ಹೊಂದದೆ ಬೇರೆ ಲೋಕವನ್ನು ಇಲ್ಲಿಂದಲೇ ಕಾಣುತ್ತಾರೆ.

ದಾಸ ಸಾಹಿತ್ಯವು ತನ್ನ ಹರವನ್ನು ದೈವ ಸ್ಮರಣೆಯ ಉದ್ದೇಶಕ್ಕಾಗಿಯೇ ಚಾಚಿಕೊಂಡಂತೆ ರೂಪುಗೊಂಡರೆ (ಜಗತ್ತು ಆಧುನಿಕತೆಯತ್ತ ಮುಖ ಮಾಡಿದ್ದು ಅದಕ್ಕೆ ಕಾರಣವಿರಬಹುದು) ವಚನ ಸಾಹಿತ್ಯವು ವಿಶಿಷ್ಟ ಸನ್ನಿವೇಶದಲ್ಲಿ ಹುಟ್ಟಿಕೊಂಡು, ತನ್ನ ವ್ಯಾಪ್ತಿಯನ್ನು ಸೀಮಾತೀತವಾಗಿ ಹರಡಿಕೊಂಡಿದೆ. ವಚನ ಸಾಹಿತ್ಯದ ಮುಖ್ಯ ಉದ್ದೇಶ ಬರಿಯ ಸಾಹಿತ್ಯ ರಚನೆಯಾಗಿರದೆ ಅದೊಂದು ಸಮಾಜ ಸುಧಾರಣೆಯ, ಅಕ್ಷರ ಜಾಗೃತಿಯ, ಆತ್ಮಾವಲೋಕನದ ಜೊತೆ ಆಧ್ಯಾತ್ಮ ಸಾಧನೆಯ ಮುಂತಾದ ಅನೇಕ ರೂಪುರೇಷೆಗಳ ಹಂಬಲದಿಂದ ಮೈದಳೆದ ಬಹುದ್ದೇಶ ಚಳುವಳಿಯಾಗಿದೆ. ಆದ್ದರಿಂದಲೇ ವಚನ ಸಾಹಿತ್ಯವನ್ನು ವಚನ ಚಳುವಳಿ ಎಂದೇ ಪ್ರಾಜ್ಞರು ಗುರುತಿಸಿದ್ದಾರೆ.

(ಅಕ್ಕ ಮಹಾದೇವಿ)

ಶ್ರಮ ಸಂಸ್ಕೃತಿಯ ಜನರಿಂದ ವಚನಗಳು ರಚನೆಯಾದದ್ದು ವಚನ ಚಳುವಳಿಯ ಉದ್ದೇಶಗಳ ಫಲಶೃತಿ ಎನ್ನಬಹುದು. ಭಾಷಾ ಕಟ್ಟಳೆಯನ್ನು ಮುರಿದು ಸರಳವಾಗಿ ಜನ ಸಾಮಾನ್ಯರು ಸಂವಾದಿಸುವ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದ್ದೇ ಅಂದು ನಡೆದ ಮಹತ್ತರವಾದ ಕ್ರಾಂತಿಯ ಸಂಕೇತ. ಎಲ್ಲದಕ್ಕಿಂತಲೂ ಬದುಕು ದೊಡ್ಡದು ಎನ್ನುವುದು ಎಲ್ಲ ಕಾಲದ ಪ್ರಜ್ಞೆಯೂ ಸತ್ಯವೂ ಹೌದು. ಆದರೆ ಆ ಸತ್ಯಕ್ಕೆ ಮುಖಾ-ಮುಖಿಯಾಗುವ ದೊಡ್ಡ ಎಚ್ಚರವೊಂದು ವಚನಸಾಹಿತ್ಯದ ಮೂಲಕ ತೆರೆದುಕೊಂಡಿತು.

ಬಹುಪಾಲು ವಚನಕಾರರು ತಮ್ಮ ಅನುಭವಗಳನ್ನು ಬದುಕು, ವೃತ್ತಿಗಳೊಂದಿಗೆ ಬೆಸೆದುಕೊಂಡು ವಚನಗಳಾಗಿಸುವ ಮೂಲಕ ವ್ಯಕ್ತಿಗತ ಬದ್ಧತೆಗಳನ್ನು ಕಾಯ್ದುಕೊಂಡರು. ಅನುಭವ ತಮಗೆ ಕೊಟ್ಟಿದ್ದು ನಿಜದ ದರ್ಶನವೆಂದು ಗಟ್ಟಿಯಾಗಿ ಹೇಳುವ ಧೈರ್ಯವೂ ಒಳಮೂಡಿ, ಅಂತರಂಗ ಶೋಧವು ಬಹಿರಂಗ ಶೋಷಣೆಗಳ ವಿರುದ್ಧದ ಧ್ವನಿಯಾಗಿ ಹೊರಹೊಮ್ಮಿತು.

ವಚನ ಅಂದರೇನೆ ಪ್ರತಿಜ್ಞೆ ಅದು ನುಡಿದಂತೆ ನಡೆಯುವ ಸತ್ಯದ ಹಾದಿ. ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಬೆಳೆದ ದೇಸಿ ಸಾಹಿತ್ಯ. ನಿರ್ಭಿಡೆ, ಸತ್ಯ – ನೇರ ನುಡಿ ವಚನಗಳ ಜೀವಾಳ.

ಬಸವಣ್ಣನವರ ವಚನ

ಆನೆ ಅಂಕುಶಕ್ಕೆ ಅಂಜುವುದೆ, ಅಯ್ಯಾ,
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ ?
ಆನೀ ಬಿಜ್ಜಳಂಗಂಜುವೆನೆ ಅಯ್ಯಾ, ಕೂಡಲಸಂಗಮದೇವಾ
ನೀನು ಸರ್ವಜೀವದಯಾಪಾರಿಯಾದ ಕಾರಣ ನೆನಗಂಜುವೆನಲ್ಲದೆ!
ವಚನಗಳು ಆತ್ಮಾವಲೋಕನದ ಪ್ರಬಲ ಅಸ್ತ್ರಗಳು, ವಚನಕಾರರಿಗೆ ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವ ಮಹಾಮಾರ್ಗವಾಗಿವೆ.

ಕನ್ನಡದ ವೈಚಾರಿಕತೆಯ ದಿಟ್ಟಹೆಜ್ಜೆಗಳು ವಚನಕಾರರಿಂದಲೇ ಮೊದಲುಗೊಂಡವೆಂದೇ ಹೇಳಬೇಕು. ಅಭಿವ್ಯಕ್ತಿಯ ಸಾಧ್ಯಾಸಾಧ್ಯತೆಯನ್ನು ತಳಮಟ್ಟ ಕೈವಶ ಮಾಡಿಕೊಂಡ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ, ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯ ಮಾಡಿಯೂ ತೋರಿಸಿದರು. ಅನ್ನಿಸಿದ್ದನ್ನು ಸರಳವಾಗಿ ತಿಳಿಯಾದ ಭಾಷೆಯಲ್ಲಿ, ತಮ್ಮ ಪರಿಸರ, ಸಮಾಜ, ಸಮುದಾಯದ, ಗಾದೆ, ನಾಣ್ಣುಡಿ, ದೃಷ್ಟಾಂತ, ನುಡಿಗಟ್ಟುಗಳ ಹಿನ್ನೆಲೆಯ ಮೂಲಕವೇ ವಚನಗಳಿಗೆ ಆಡುಭಾಷೆಯ ಜೀವಂತಿಕೆಯನ್ನು ತುಂಬಿದರು. ವಚನಗಳು ಮನುಕುಲದ ಒಳಿತನ್ನು ಅಪೇಕ್ಷಿಸುವ ಪರಿಕಲ್ಪನೆಯಿಂದ ರೂಪುಗೊಂಡು, ಈ ಮಾಧ್ಯಮ ಮಾತ್ರವೇ ತಮ್ಮ ಅಭಿವ್ಯಕ್ತಿಗೆ ಒಂದು ಅತ್ಯುತ್ತಮ ಸಂವಹನ ಸಾಧ್ಯತೆಯಾಗಬಹುದು ಎನ್ನುವ ಅರಿವು ದಕ್ಕಿದ್ದರಿಂದಲೇ ಅದನ್ನು ಮುಖ್ಯ ಪ್ರಕಾರವಾಗಿಸಿಕೊಂಡರು. ಮೇಲುನೋಟಕ್ಕೆ ವಚನ ಸಾಹಿತ್ಯ ತನ್ನ ಸರಳತೆಯಿಂದ ಖ್ಯಾತಿ ಪಡೆದಿದ್ದರೂ ಆಧ್ಯಾತ್ಮ ಸಾಧನೆಯ ಆಧಾರ ತತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳ ಅನುಭೂತಿಯನ್ನು ಸಾರುವ ಬಸವಣ್ಣನವರ ವಚನಗಳು ಮತ್ತು ಮನುಷ್ಯನ ದೇಹˌ ಮನಸ್ಸುಗಳ ಸಂಯೋಗದಿಂದ ಶಿವಯೋಗ ಸಾಧನೆಯನ್ನು ಸಾಧಿಸುವ ಬಗೆ, ನಿರಾಕಾರ ತತ್ವದ ಅರಿವಿನ ಕಠಿಣ ಹಾದಿಯ ಸಾಧನಾ ಕ್ರಮ ಅಲ್ಲಮನ ಬೆಡಗುಗಳಲ್ಲಿ ಬಹು ಮಾರ್ಮಿಕವಾಗಿ ವಿವರಿಸಲ್ಪಟ್ಟಿವೆ. ಈ ಸಂಕೀರ್ಣತೆ ಸಾಮಾನ್ಯ ಓದುಗನ ತಿಳುವಳಿಕೆಯ ಕ್ಷಿತಿಜವನ್ನು ಅಷ್ಟು ಸರಳವಾಗಿ ಮುಟ್ಟಲಾರವು.ಅಲ್ಲಮನ ವಚನಗಳು, ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳಷ್ಟು ಜನಪ್ರಿಯವಾಗಿರದಿದ್ದರೂ ತಮ್ಮ ಆಳವಾದ ತತ್ತ್ವಸಾರದಿಂದ, ಬೆಡಗಿನ ಶೈಲಿಯಿಂದ, ಕಾವ್ಯಕಾರಣದಿಂದ ತುಂಬಾ ಮುಖ್ಯವಾಗಿವೆ. ತಾನು ಕಂಡುಕೊಂಡ ಸತ್ಯವನ್ನು (ಸ್ವಯಂ ವಿಮರ್ಶೆಯೂ ಸೇರಿ) ಇತರರ ತಪ್ಪುಗಳನ್ನೂ ತನ್ನವರು ಪರರು ಎಂಬ ಹಂಗಿಲ್ಲದೇ ತೀಕ್ಷ್ಣವಾಗಿ ಪ್ರಸ್ತಾಪಿಸುತ್ತಾ ಕಟುವಾಗಿಯೇ ಟೀಕಿಸುತ್ತಾನೆ. ಮಿಕ್ಕ ವಚನಕಾರರಲ್ಲಿ ಕಾಣುವ ಚೂರುಪಾರು ಅತಿರೇಕಗಳಾವುವೂ ಅಲ್ಲಮನಲ್ಲಿ ಕಾಣವುದಿಲ್ಲ.

ವಚನ ಸಾಹಿತ್ಯದ ಮುಖ್ಯ ಉದ್ದೇಶ ಬರಿಯ ಸಾಹಿತ್ಯ ರಚನೆಯಾಗಿರದೆ ಅದೊಂದು ಸಮಾಜ ಸುಧಾರಣೆಯ, ಅಕ್ಷರ ಜಾಗೃತಿಯ, ಆತ್ಮಾವಲೋಕನದ ಜೊತೆ ಆಧ್ಯಾತ್ಮ ಸಾಧನೆಯ ಮುಂತಾದ ಅನೇಕ ರೂಪುರೇಷೆಗಳ ಹಂಬಲದಿಂದ ಮೈದಳೆದ ಬಹುದ್ದೇಶ ಚಳುವಳಿಯಾಗಿದೆ. ಆದ್ದರಿಂದಲೇ ವಚನ ಸಾಹಿತ್ಯವನ್ನು ವಚನ ಚಳುವಳಿ ಎಂದೇ ಪ್ರಾಜ್ಞರು ಗುರುತಿಸಿದ್ದಾರೆ.

ಅಲ್ಲಮನ ವಚನಗಳನ್ನು ಸರಳ, ಬೆಡಗು, ಮತ್ತು ಗೀತಗಳಾಗಿ ಮೂರು ವಿಧವಾಗಿ ಈಗಾಗಲೇ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಸರಳ ಮತ್ತು ಗೀತಗಳ ರಾಚನಿಕ ವಿನ್ಯಾಸ ಸಡಿಲ ವಾಕ್ಯದ ರೀತಿಯನ್ನು ಹೋಲುತ್ತವಾದರೆ ಬೆಡಗಿನ ರಾಚನಿಕ ವಿನ್ಯಾಸದಲ್ಲಿ ಬಿಗುವಾದ ವಾಕ್ಯ ರಚನೆ ಕಾಣುತ್ತೇವೆ. ಬೆಡಗು ಎಂದರೆ, ಸೌಂದರ್ಯ, ಆಕರ್ಷಕತೆ, ಶೈಲಿ ಮುಂತಾದ ಅರ್ಥಗಳಿವೆ. ಆದರೆ ಈ ಅರ್ಥಗಳು ಜನಪದ ಸಾಹಿತ್ಯದ ಅಧ್ಯಯನದಲ್ಲಿ ಹೆಚ್ಚು ಪ್ರಸ್ತುತವಾಗುತ್ತವೆ. ಇದೆ ಬೆಡಗಿಗೆ ನಿಗೂಢತೆ, ಒಗಟು ಮುಂತಾದ ಅರ್ಥಛಾಯೆಗಳೂ ಇವೆ. ಪ್ರಖಂಡ ಜ್ಞಾನದ ಅರಿವಿನಿಂದ ಕೂಡಿದ ಆಳವಾದ ಆಧ್ಯಾತ್ಮ ಸಾಧನೆಯ ಬೆಡಗಿನ ವಚನಗಳು, ವಚನ ಸಾಹಿತ್ಯವೆಂದರೆ ಸರಳ ಎನ್ನುವ ಸಾಮಾನ್ಯ ನಂಬಿಕೆಯನ್ನು ಸುಳ್ಳಾಗಿಸುತ್ತವೆ.
ಇಲ್ಲಿ ಅಲ್ಲಮನ ಮೂರು ವಚನಗಳನ್ನು ಗಮನಿಸಿ


ಸಂಸಾರವೆಂಬ ಹೆಣ ಬಿದ್ದಿದೆ
ತಿನಬಂದ ನಾಯ ಜಗಳವ ನೋಡಿರೇ
ನಾಯ ಜಗಳವ ಕಂಡು ಹೆಣನೆದ್ದು ನಗುತಿದೆ ಅಲ್ಲಿ
ಗುಹೇಶ್ವರಲಿಂಗ ತಾನಿಲ್ಲ ಕಾಣಿರೇ!

ಉತ್ತರಾವರ್ತದಲಿ ಮೇಘವರ್ಣ ಕರೆಯಲು
ಆದೇಶದಲ್ಲಿ ಬರನಾಯಿತ್ತು
ಆದೇಶದ ಪ್ರಾಣಿಗಳೆಲ್ಲರೂ ಮಡಿದರು
ಅವರ ಸುಟ್ಟ ರುದ್ರಭೂಮಿಯಲಿ ನಾ
ನಿಮ್ಮನರಸುವೆ ಗುಹೇಶ್ವರ!

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದೆನೆಂದರೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ

(ಫ.ಗು. ಹಳಕಟ್ಟಿ)

ಬೆಡಗಿನ ವಚನಗಳಲ್ಲಿ ಬಳಸಿದ ಇಂತ ಭಾಷೆಯನ್ನು ಸಂಧ್ಯಾ ಭಾಷಾ ಎಂದು ಕರೆಯಲಾಗಿದೆ. ಇದು ಯಾವುದೇ ಒಂದು ಭಾಷೆಯ ನಿರ್ದಿಷ್ಟ ಹೆಸರಲ್ಲ ಬದಲಾಗಿ ಇದು ಯಾವುದೇ ಭಾಷೆಯಲ್ಲಿ ( ಬರಹ ಮತ್ತು ಮಾತು) ಬಳಸಬಹುದಾದ ಸಂಕೇತಗಳ ವ್ಯವಸ್ಥೆ. ಓದುಗನಿಗೆ ಭಾಷೆ ಮಾತ್ರವಲ್ಲದೆ ಸಂಕೇತಗಳ ವ್ಯವಸ್ಥೆಯ ಮೇಲೂ ಹಿಡಿತವನ್ನು ಪಡೆದಿರಬೇಕಾಗುತ್ತದೆ. ಆಗ ಮಾತ್ರವೇ ಯಾವ ಓದುಗನೂ, ಕೇಳುಗನು ಇಂತಹ ರಚನೆಗಳ ಅರ್ಥವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ತಂತ್ರ ಮತ್ತು ಯೋಗಗಳಿಗೆ ಸಂಬಂಧಿಸಿದ ಅನೇಕ ಪಠ್ಯಗಳಲ್ಲಿ ಈ ರೀತಿಯ ಸಂಕೇತಗಳನ್ನು ವಿಪುಲವಾಗಿ ಬಳಸಿರುವುದನ್ನು ನಾವು ಕಾಣುತ್ತೇವೆ. ವಚನಕಾರರ ಅಂಕಿತನಾಮಗಳೂ ಹೀಗೆ ಸಂಕೇತಗಳಲ್ಲೇ ಮೂಡಿವೆ. ಬಸವಣ್ಣನವರ – ಕೂಡಲಸಂಗಮನೂ, ಅಕ್ಕಳ – ಚೆನ್ನಮಲ್ಲಿಕಾರ್ಜುನನೂ, ಅದೇರೀತಿ ಹರಿಹರನ ರಗಳೆಯ ಮೂಲಕ ತಿಳಿದುಬಂದಂತೆ ಮೂರ್ತವೂ ಅಮೂರ್ತವೂ ಆದ ಪ್ರಭುದೇವನ ಆರಾಧ್ಯ ದೈವ ಗೊಗ್ಗೇಶ್ವರನು – ಗುಹೇಶ್ವರ ನಾದದ್ದು ಹೀಗೆಯೇ. ಬೆಡಗಿನ ವಚನಗಳೆಲ್ಲವೂ ಒಂದು ಶಬ್ದಚಿತ್ರವನ್ನು ಕಟ್ಟಿಕೊಡುತ್ತವೆ. ಅವುಗಳಲ್ಲಿ, ಈ ಸಂಕೇತಗಳನ್ನು ನಿಗೂಢವೂ ಅನಿರೀಕ್ಷಿತವೂ ಆದ ರೀತಿಯಲ್ಲಿ ಸಂಯೋಜಿಸಿ ರಚಿತವಾಗಿವೆ. ಇವುಗಳನ್ನು ಓದುವಾಗ ಇವುಗಳ ಅರ್ಥ ಏನಿರಬಹುದೆಂದು ಓದುಗ ಊಹಿಸುವಾಗಲೇ ಲೌಕಿಕ ಜಗತ್ತಿನಿಂದ ಆಚೆಗೆ ಹಾರಿ ಅಲೌಕಿಕ ಜಗತ್ತಿನಲ್ಲಿ ಇವುಗಳನ್ನು ಅರ್ಥೈಸಿಕೊಳ್ಳಲು ತೊಡಗುತ್ತಾನೆ. ದಿನನಿತ್ಯದ ಪರಿಚಿತ ಸಂಗತಿಗಳನ್ನೇ ಬಳಸಿ ಅದನ್ನು ಮೀರಿದ ಅನುಭವ – ಅನುಭಾವವನ್ನು ಈ ಮೂಲಕ ಅಸಂಗತವೆನ್ನುವ ಸನ್ನಿವೇಶಗಳಾಗಿ ನಿರೂಪಿಸುವುದು ಅನುಭಾವವನ್ನು ದಾಟಿಸುವ ಒಂದು ಕ್ರಮವೂ ಹೌದು. ಇವು ಯಾವುದೇ ತರ್ಕಕ್ಕೆ ಬದ್ಧವಾಗಿರದೇ ರಚಿತವಾಗಿರುತ್ತವೆ.

ಬಸವಪೂರ್ವ ಯುಗದ ವಚನಕಾರರನ್ನೂ ಸೇರಿ ವಚನ ಸಾಹಿತ್ಯವನ್ನೂ ಈವರೆಗೂ ಬಿಡದೆ ಅವುಗಳ ಮೇಲೆ ಗಟ್ಟಿಯಾದ ಕೆಲಸ ಮಾಡುತ್ತಾ ಬಂದವರನ್ನು ನೆನೆಯುವುದು ನಮ್ಮ ಕರ್ತವ್ಯ. ಅಂಥವರಲ್ಲಿ ಮುಖ್ಯರಾದವರು ಇ.ಪಿ.ರೈಸ್, ಫ.ಗು.ಹಳಕಟ್ಟಿ, ಆಚಾರ್ಯ ಡಿ.ಎಲ್. ನರಸಿಂಹಾಚಾರ್, ರಂ.ರಾ.ದಿವಾಕರ, ಶಿ.ಶಿ.ಬಸವನಾಳ, ಭೂಸನೂರಮಠ, ಎಮ್.ಎಮ್.ಕಲ್ಬುರ್ಗಿ, ಎಲ್.ಬಸವರಾಜು, ಉತ್ತಂಗಿ ಚೆನ್ನಪ್ಪನವರು ಮತ್ತು ಇನ್ನೂ ಹಲವರಿದ್ದಾರೆ. ಇವರೆಲ್ಲರಿಗೂ ಓದುಗನಾದ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳು.

(ಡಾ.ಎಂ.ಎಂ ಕಲ್ಬುರ್ಗಿ)

ಅಲ್ಲಮಪ್ರಭುವಲ್ಲದೆ, ಚೆನ್ನಬಸವಣ್ಣ, ಮೋಳಿಗೆ ಮಾರಯ್ಯ, ಕೋಲ ಶಾಂತಯ್ಯ, ಅರಿವಿನ ಮಾರಿತಂದೆ, ಅಕ್ಕಮಹಾದೇವಿ, ಮುಂತಾದ ಶರಣ – ಶರಣೆಯರೂ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಮುಂದೆ ೧೩ – ೧೪ ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗಯತಿಗಳು, ಘನಲಿಂಗಿದೇವ, ಕಾಡಸಿದ್ದೇಶ್ವರ, ಷಣ್ಮುಖಸ್ವಾಮಿ ಮೊದಲಾದವರು ವಚನಗಳನ್ನು ರಚಿಸಿದ್ದಾರೆ. ೨೦ ನೇ ಶತಮಾನದಲ್ಲಿ ಮೂರೇ ಮೂರು ವಚನಗಳನ್ನು ಬರೆದ ತೀ. ನಂ. ಶ್ರೀಕಂಠಯ್ಯನವರೂ ಸೇರಿದಂತೆ ಬೇಂದ್ರೆಯವರು (ಕಾವ್ಯ ಮಾದರಿ ವಚನ) ದಿವಾಕರ, ಚಂದ್ರಶೇಖರ ಐತಾಳ, ಸಿಂಪಿ ಲಿಂಗಣ್ಣ, ಸದಾಶಿವ ಶಿವಾಚಾರ್ಯರು, ಗಂಗಾಧರ ಶಿವಾಚಾರ್ಯರು ಇನ್ನೂ ಅನೇಕರು ಈ ಪಟ್ಟಿಯಲ್ಲಿ ಬರುತ್ತಾರೆ.

ಈಗಲೂ ಆಧುನಿಕ ವಚನಗಳನ್ನು ಹಲವಾರು ಬರಹಗಾರರು ಬರೆಯುತ್ತಿದ್ದಾರಲ್ಲದೆ ವಚನಗಳನ್ನು ಕಟ್ಟುಪದಗಳು ಅಂತ ಕರೆದು ರಚನೆಯಲ್ಲಿ ತೊಡಗಿಕೊಂಡವರಿದ್ದಾರೆ. ವಚನಗಳನ್ನು ಅನುಕರಿಸಿದವರು, ಅನುಸರಿಸಿದವರು ಅನೇಕರು. ಆದರೆ ಮೀರಿದವರು ಮಾತ್ರ ಒಬ್ಬರೂ ಇಲ್ಲ. ರಚನೆಯ ವಿನ್ಯಾಸದ ದೃಷಿಯಿಂದಲೂ ವಸ್ತುವೈವಿಧ್ಯದ ದೃಷ್ಟಿಯಿಂದಲೂ ಈ ವಚನಗಳು ನಾನಾ ಬಗೆಯಾಗಿವೆ. ಇವುಗಳಲ್ಲಿ ಆಧುನಿಕ ವಿಚಾರಧಾರೆಯಿದೆ. ಆತ್ಮಶೋಧನೆಯಿದೆ, ಭಕ್ತಿ ಇದೆ, ರಾಜಕೀಯವಿದೆ, ಭಾವುಕತೆಯಿದೆ, ವೈಚಾರಿಕತೆಯಿದೆ, ಇಹದ ವಾಸ್ತವಿಕತೆಯಿದೆ. ಆದರೆ ಗಾತ್ರ, ಗುಣ, ಸತ್ವ ಎಲ್ಲವುಗಳ ದೃಷ್ಟಿಯಿಂದಲೂ ಈ ವಚನಗಳು ಬಸವಯುಗದ ವಚನಗಳ ಎತ್ತರಕ್ಕೆ ಹತ್ತಿರಕ್ಕೆ ಬಾರವು. ಆದರೆ ಪರಂಪರೆಗೆ ಜೊತೆಯಾದ ಈ ಕಾಲದ ವಚನಗಳಿಗೆ ತಮ್ಮದೇ ಆದ ಪ್ರಾಶಸ್ತ್ಯವಂತೂ ಇದ್ದೇ ಇದೆ.

ವಚನಗಳು ಕಾವ್ಯಗಳೇ? ಎನ್ನುವ ಜಿಜ್ಞಾಸೆಯೊಂದಿಗೆ ಮೊದಲುಗೊಂಡ ಮಹತ್ವವಾದ ಚರ್ಚೆಯೇ ವಚನಗಳನ್ನು ಬಗೆದು ನೋಡುವ ಸೃಜನಶೀಲ ಹಾದಿಯಾಗಿ ಬೆಳೆದು ನಿಂತಿದೆ.

ಹಾಗೆಯೇ ನಮ್ಮ ಈ ಕಾಲದ ಈ ಕ್ಷಣದ ಕಾವ್ಯವನ್ನು ಅದು ಕಾವ್ಯವಾಗಿದೆಯೇ ಅನ್ನುವ ಜಿಜ್ಞಾಸೆಯೊಂದಿಗೆ ಮತ್ತೆ ಮತ್ತೆ ಎದುರುಗೊಳ್ಳಬೇಕಿದೆ. ಈ ರೀತಿಯ ಕಾವ್ಯ ಸಂವಾದ ಮಾತ್ರವೇ ಜೀವಂತ ಕಾವ್ಯವನ್ನು ಮತ್ತಷ್ಟು ಚೇತೋಹಾರಿಯಾಗಿಸಬಲ್ಲದು.